ರಸಗಳ ಹುಟ್ಟಿಗೆ ಕಾರಣವಾದ ಸಂಗತಿಗಳು ನಾಲ್ಕು. ಅವು ಶೃಂಗಾರ, ರೌದ್ರ, ವೀರ ಮತ್ತು ಭೀಭತ್ಸಗಳು. ಇವುಗಳಲ್ಲಿ ಶೃಂಗಾರದಿಂದ ಹಾಸ್ಯವು, ರೌದ್ರದಿಂದ ಕರುಣವು, ವೀರದಿಂದ ಅದ್ಭುತವೂ, ಭೀಭತ್ಸದಿಂದ ಭಯಾನಕವು ಹುಟ್ಟುತ್ತದೆ. ಇಲ್ಲಿ ಪ್ರತಿಯೊಂದು ರಸಕ್ಕೂ ಒಂದೊಂದು ಬಣ್ಣವಿದೆ, ರಸಾಧಿಕಾರಿಗಳಾದ ದೇವತೆಗಳಿದ್ದಾರೆ. ಶೃಂಗಾರ ರಸದ ಬಣ್ಣ ಶ್ಯಾಮ, ಬಿಳಿ ಬಣ್ಣವು ಹಾಸ್ಯದ ವರ್ಣ, ಕರುಣಾ ರಸಕ್ಕೆ ಬೂದು ವರ್ಣ, ರೌದ್ರ ಕೆಂಪು, ವೀರ ರಸದ್ದು ಹೊಳೆಯುವ ಬಿಳುಪು..
ಭರತಮುನಿ ಹೇಳಿರುವ ‘ರಸನಿಷ್ಪತ್ತಿ’ಯ ಕುರಿತು ಮಂಜುಳಾ ಸುಬ್ರಹ್ಮಣ್ಯ ಬರಹ
ಭಾರತೀಯ ಕಲೆಗಳಲ್ಲಿ ಪಂಚಮವೇದವೆಂದು ಪ್ರಖ್ಯಾತವಾದದ್ದು ನಾಟ್ಯಕಲೆ. ಇದೊಂದು ಪರಿಪೂರ್ಣವಾದ ಕಲೆಯಾಗಿ ರಸಪ್ರಧಾನವಾಗಿರುವುದರಿಂದ ನಮ್ಮಲ್ಲಿ ಆನಂದವನ್ನುಂಟುಮಾಡುತ್ತದೆ. ನೃತ್ಯ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿದೆಯೇ ಎಂದರೆ ಅಲ್ಲ, ಇದು ಜೀವನದ ಹಲವು ಮುಖಗಳನ್ನು ಸುಂದರವಾಗಿ ನಿರೂಪಿಸುವ ಮೂಲಕ ಭಾವದ ಪ್ರಚೋದನೆಯನ್ನು ಮಾಡುತ್ತದೆ.
ಭಾರತೀಯ ನೃತ್ಯಕಲೆಯಲ್ಲಿ ಚಿತ್ರಕಲೆಯ ರೇಖೆಗಳು ಹಾಗೂ ಬಣ್ಣ, ಶಿಲ್ಪಕಲೆಯ ಭಂಗಿಗಳು, ಕಲಾವಿದರ ಭಾವಾಭಿವ್ಯಕ್ತಿ, ಕವಿಯ ಭಾವನಾವಿಲಾಸ, ಸಂಗೀತದ ರಾಗ ಲಯಗಳೆಲ್ಲವೂ ಸಮಸಮವಾಗಿ ಬೆರೆತು ಈ ನೃತ್ಯವು ಸರ್ವಹಿತವಾಗಿ, ಪರಿಪೂರ್ಣ ಕಲೆಯಾಗಿ ನಮ್ಮಮುಂದಿದೆ. ಆದ್ದರಿಂದಲೇ ಕಾಳಿದಾಸ “ನಾಟ್ಯಂ ಭಿನ್ನರುಚೇರ್ಜನಸ್ಯ ಬಹುದಾಪ್ಯೇಕಂ ಸಮಾರಾಧನಂ” ಎಂದು ನಾಟ್ಯ ಪ್ರಶಂಸೆ ಮಾಡಿದ್ದಾನೆ.
ನಾಟ್ಯ ಪರಂಪರೆಗೆ ವೇದಾದಿಗಳೇ ಮೂಲವಾದರೂ ಭರತನ ನಾಟ್ಯಶಾಸ್ತ್ರವೇ ಅಧಿಕಾರ ಗ್ರಂಥ. ಈ ನಾಟ್ಯ ಕಲಾಪ್ರಕಾರದಲ್ಲಿ ರಸಾನುಭವವು ಮುಖ್ಯವಾದುದು. ಒಂದು ಕಾವ್ಯವನ್ನು ಓದುವುದರಿಂದ ಅಥವಾ ಅದನ್ನು ದೃಶ್ಯ ರೂಪದಲ್ಲಿ ಪ್ರಸ್ತುತಪಡಿಸಿದಾಗ ಅದನ್ನು ನೋಡುವುದರಿಂದ ನಮ್ಮಲ್ಲಿ ಒಂದು ರೀತಿಯ ಭಾವನೆ ಅಥವಾ ಆನಂದ ಉಂಟಾಗುತ್ತದೆ. ಇದು ಮಾಡುವವರಲ್ಲೂ, ನೋಡುವವರಲ್ಲೂ ಆಗುವ ರಸಾನುಭವ.
ರಸ ಶಬ್ಧದ ಶಾಸ್ತ್ರೀಯ ಅರ್ಥ ವಿಕಾಸಗೊಂಡದ್ದು ರಾಮಾಯಣ, ಮಹಾಭಾರತ ಕಾಲಗಳ ಅನಂತರದಲ್ಲಿ. ಭರತನ ನಾಟ್ಯಶಾಸ್ತ್ರದಿಂದ ಬಹಳ ಹಿಂದೆ. ಆದರೆ ಈ ಭರತ ವಿರಚಿತ ನಾಟ್ಯ ಶಾಸ್ತ್ರವೇ ರಸ ಸಿದ್ಧಾಂತವನ್ನು ನಮಗೆ ಪ್ರತಿಪಾದಿಸುವಲ್ಲಿ ದೊರೆತಿರುವ ಮುಖ್ಯಗ್ರಂಥ. ಭರತಮುನಿ ನಾಟ್ಯಶಾಸ್ತ್ರದ ಆರನೇ ಅಧ್ಯಾಯದಲ್ಲಿ ”ವಿಭಾವಾನುಭಾವ ವ್ಯಭಿಚಾರ ಸಂಯೋಗಾತ್ ರಸನಿಷ್ಪತ್ತಿಃ” ಎಂದು ಜಗತ್ತೇ ವಿಸ್ಮಯಗೊಳ್ಳುವ ರೀತಿಯಲ್ಲಿ ರಸಸೂತ್ರವನ್ನು ನೀಡಿದ್ದಾನೆ. ಭಾವಗಳಿಲ್ಲದೆ ರಸ ಉತ್ಪತ್ತಿ ಅಸಾಧ್ಯ. ವಿಭಾವ, ಅನುಭಾವ, ವ್ಯಭಿಚಾರಿ ಈ ಮೂರರ ಸಂಯೋಗದಿಂದಲೇ ರಸನಿಷ್ಪತ್ತಿ. ರಸನಿಷ್ಪತ್ತಿ ಎಂದರೆ ರಸದ ಅಭಿವ್ಯಕ್ತಿ. ಇದನ್ನು ರಸಾಸ್ವಾದ, ರಸಚರ್ವಣಾ ಎಂದೂ ಕರೆಯಬಹುದು. ಇನ್ನು ರಸ ಮತ್ತು ಭಾವ ಇವೆರಡನ್ನು ನಾವು ಜತೆ ಜತೆಯಲ್ಲಿಯೇ ಉಲ್ಲೇಖಿಸಬೇಕಾಗುತ್ತದೆ. ಪ್ರತಿಯೊಂದು ರಸಕ್ಕೂ ಒಂದು ಸ್ಥಾಯಿ ಅಂದರೆ ಸ್ಥಿರ ಭಾವವಿದೆ. ವಿವಿಧ ಭಾವಗಳಿಂದ(ವಿಭಾವ, ಅನುಭಾವ, ವ್ಯಭಿಚಾರಿ) ಕೂಡಿದ ಹಾಗೂ ಮೂರು ಬಗೆಯ ಅಭಿನಯಗಳ ಮೂಲಕ ಒಟ್ಟಾದ ಸ್ಥಾಯೀಭಾವವೇ ರಸವಾಗಿ ಅಥವ ನಾಟ್ಯರಸವಾಗಿ ಪರಿಣಮಿಸುತ್ತದೆ.
ರಸೋತ್ಪತ್ತಿಗೆ ಪ್ರಾಜ್ಞರು ಉಲ್ಲೇಖಿಸುವ ಕತೆಯನ್ನೇ ನಾನೂ ಇಲ್ಲಿ ಉದಾಹರಿಸುತ್ತೇನೆ.
ಅಭಿಜ್ಞಾನ ಶಾಕುಂತಲ ನಾಟಕದಲ್ಲಿ ಗಿಡಗಳಿಗೆ ನೀರು ಎರೆಯುತ್ತಿರುವ ಅನಸೂಯಾ, ಪ್ರಿಯಂವದೆ ಯರೊಂದಿಗಿರುವ ಸನ್ನಿವೇಶ. ಬೇಟೆಗಾಗಿ ದುಷ್ಯಂತ ಬರುತ್ತಾನೆ. ಆಶ್ರಮದ ಜಿಂಕೆಯನ್ನು ಗುರಿಯಾಗಿರಿಸಿದಾಗ ಆಶ್ರಮವಾಸಿ ಬಂದು ಬೇಟೆಯನ್ನು ನಿಲ್ಲಿಸಿ ಕಣ್ವಾಶ್ರಮಕ್ಕೆ ಬಂದುಹೋಗು ಎನ್ನುತ್ತಾನೆ. ಆಶ್ರಮಯೋಗ್ಯ ವಸ್ತ್ರಧರಿಸಿ ಆಶ್ರಮ ಪ್ರವೇಶಿಸುವ ಕಾಲಕ್ಕೆ ಶಕುಂತಲೆಯೊಂದಿಗಿರುವ ಗೆಳತಿಯರು ಗಿಡಗಳಿಗೆ ನೀರುಣಿಸುವ ಸನ್ನಿವೇಶವನ್ನು ಗಮನಿಸಿ, ಗಿಡಗಳ ಎಡೆಯಲ್ಲಿ ಮರೆಯಾಗುತ್ತಾನೆ.
ಶಕುಂತಲೆಯಾದರೂ ಪ್ರೀತಿಯಿಂದ ತಾನೇ ಬೆಳೆಸಿದ ಗಿಡಗಳಿಗೆ ನೀರು ಪ್ರೋಕ್ಷಿಸುತ್ತಿರುವಾಗ ದುಂಬಿಯೊಂದು ಮೇಲೆದ್ದು ಬಂದು ಶಕುಂತಲೆಯ ಸುತ್ತ ಸುತ್ತತೊಡಗುತ್ತದೆ. ಶಕುಂತಲೆಗೆ ಇದನ್ನು ಸಹಿಸಲಾಗುವುದಿಲ್ಲ. ಗೆಳತಿಯರೋ ಇದನ್ನು ಹಸ್ತಿನಾವತಿಯ ರಾಜ ದುಷ್ಯಂತ ಮಾತ್ರ ಶಿಕ್ಷಿಸಬಲ್ಲ ಎನ್ನುತ್ತಾರೆ. ಆಕ್ಷಣದಲ್ಲಿ ದುಷ್ಯಂತ ಪ್ರವೇಶಿಸಿ, ‘ಆಶ್ರಮವಾಸಿಗಳನ್ನು ಹಿಂಸಿಸುವ ಅವನ್ಯಾರು’ ಎಂದು ಕೇಳುತ್ತಾನೆ. ಇಲ್ಲಿ ಈಗ ದುಷ್ಯಂತ ಶಕುಂತಲೆಯರಲ್ಲಿ ಉಂಟಾಗುವ ಭಾವಗಳನ್ನು ಗಮನಿಸಬೇಕಾಗಿರುವುದು. ಆ ಕ್ಷಣದಲ್ಲಿ ಅವರ ಮನದಲ್ಲಿ ಶಂಕೆ, ಆಶ್ಚರ್ಯ, ನಾಚಿಕೆ, ಕುತೂಹಲ, ವಿಷಾದಗಳು ಹುಟ್ಟುತ್ತವೆ. ಇವು ಶಾಶ್ವತವಾದವು ಅಲ್ಲ, ಮನಸ್ಸಲ್ಲಿ ಸ್ಥಿರವಾಗಿ ನಿಲ್ಲುವುದೂ ಇಲ್ಲ. ವಿಶೇಷ ಕಾರಣಕ್ಕಾಗಿ ಬಂದಿರುವುದು. ಇವರಿಬ್ಬರ ಮನದೊಳಗೆ ಇವು ನಡೆಯುತ್ತಿರುತ್ತವೆ. ಇಲ್ಲಿ ವಿಭಾವ ದುಷ್ಯಂತ, ಅನುಭಾವ ಶಕುಂತಲೆ, ಇವರಿಬ್ಬರ ಮನಸ್ಸಿನ ಒಳಗೆ ನಡೆಯುವ ಪ್ರಕ್ರಿಯೆ ಸಂಚಾರಿ ಭಾವ. ಈ ವಿಭಾವಾನುಭಾವಗಳನ್ನು ಅರಿಯುತ್ತಿದ್ದ ಹಾಗೇ ಪ್ರೇಕ್ಷಕರಿಗೆ ರಸಾನುಭವ ಉಂಟಾಗುತ್ತದೆ. ಪ್ರಸ್ತುತ ಇಲ್ಲಿ ಶೃಂಗಾರ ಮುಖ್ಯ ರಸ.
ಒಂದು ಕಾವ್ಯವನ್ನು ಓದುವುದರಿಂದ ಅಥವಾ ದೃಶ್ಯ ರೂಪದಲ್ಲಿ ಪ್ರಸ್ತುತಪಡಿಸಿದಾಗ ಅದನ್ನು ನೋಡುವುದರಿಂದ ನಮ್ಮಲ್ಲಿ ಒಂದು ರೀತಿಯ ಭಾವನೆ ಅಥವಾ ಆನಂದ ಉಂಟಾಗುತ್ತದೆ. ಇದು ಮಾಡುವವರಲ್ಲೂ, ನೋಡುವವರಲ್ಲೂ ಆಗುವ ರಸಾನುಭವ.
ಭರತನು ಮೂಲವಾಗಿ ಎಂಟು ರಸಗಳನ್ನು ಹೇಳುತ್ತಾನೆ. ಒಂಭತ್ತನೆಯ ರಸವಾಗಿ ಶಾಂತವನ್ನು ಸ್ವೀಕರಿಸಿದ್ದಾನೆ. ಶೃಂಗಾರಾಧಿ ಭವೇತ್ ಹಾಸ್ಯೋ ರೌದ್ರಾಚ ಕರುಣೋ ರಸಃ ವೀರಚ್ಚೈವಾದ್ಭುತೋತ್ಪತ್ತಿರ್ಭೀಭತ್ಸಾಚ್ಯ ಭಯಾನಕಃ.
ರಸಗಳ ಹುಟ್ಟಿಗೆ ಕಾರಣವಾದ ಸಂಗತಿಗಳು ನಾಲ್ಕು. ಅವು ಶೃಂಗಾರ, ರೌದ್ರ, ವೀರ ಮತ್ತು ಭೀಭತ್ಸಗಳು. ಇವುಗಳಲ್ಲಿ ಶೃಂಗಾರದಿಂದ ಹಾಸ್ಯವು, ರೌದ್ರದಿಂದ ಕರುಣವು, ವೀರದಿಂದ ಅದ್ಭುತವೂ, ಭೀಭತ್ಸದಿಂದ ಭಯಾನಕವು ಹುಟ್ಟುತ್ತದೆ. ಇಲ್ಲಿ ಪ್ರತಿಯೊಂದು ರಸಕ್ಕೂ ಒಂದೊಂದು ಬಣ್ಣವಿದೆ, ರಸಾಧಿಕಾರಿಗಳಾದ ದೇವತೆಗಳಿದ್ದಾರೆ. ಶೃಂಗಾರ ರಸದ ಬಣ್ಣ ಶ್ಯಾಮ, ಬಿಳಿ ಬಣ್ಣವು ಹಾಸ್ಯದ ವರ್ಣ, ಕರುಣಾ ರಸಕ್ಕೆ ಬೂದು ವರ್ಣ, ರೌದ್ರ ಕೆಂಪು, ವೀರ ರಸದ್ದು ಹೊಳೆಯುವ ಬಿಳುಪು, ಭಯಾನಕದ್ದು ಕಪ್ಪು, ಭೀಭತ್ಸದ್ದು ನೀಲಿ, ಅದ್ಭುತದ ಬಣ್ಣ ಹಳದಿ ಹೀಗೆ. ಶೃಂಗಾರ ರಸದೊಡೆಯನು ವಿಷ್ಣು, ಹಾಸ್ಯ ಪ್ರಮಥಗಣ, ರೌದ್ರ ರಸದೊಡೆಯ ರುದ್ರ, ಕರುಣಾ ರಸದೊಡೆಯ ಯಮ, ಭೀಭತ್ಸ ದೇಹಾಕಾಲ, ಭಯಾನಕದೊಡೆಯ ಕಾಲ, ವೀರ ಮಹೇಂದ್ರ, ಅದ್ಭುತದೊಡೆಯನು ಬ್ರಹ್ಮ.
ನವರಸಾದಿಯಲ್ಲಿ ಮೊದಲನೆಯದ್ದೇ ಶೃಂಗಾರ. ರಸಗಳ ನಾಯಕ ಈ ರಸ. ರತಿ ಸ್ಥಾಯೀ ಭಾವಹೊಂದಿರುವ ಈ ರಸವನ್ನು ಮಧುರವಾದ ಅಂಗವಿನ್ಯಾಸಗಳಿಂದ ಪ್ರಕಟಪಡಿಸಲಾಗುವುದು. ಶೃಂಗಾರವೆಂದರೆ ಒಂದರ್ಥದಲ್ಲಿ ಮನೋಹರವಾದುದು ಕೂಡಾ. ಮನೋಹರವಾದುದು ಸಂತಸವನ್ನೀಯುವುದು, ಸೌಂದರ್ಯ ಪ್ರಜ್ಞೆಯನ್ನು ಹೆಚ್ಚಿಸುವುದು.
ಸ್ವಾಭಾವಿಕ ಸ್ಥಿತಿಗಿಂತ ಭಿನ್ನವಾಗಿರುವುದು ಹಾಸ ಸ್ಥಾಯೀಭಾವವನ್ನು ಹೊಂದಿರುವ ಹಾಸ್ಯರಸ. ಇಲ್ಲಿ ನಗುವುದು ಹಾಗೂ ನಗಿಸುವುದು ಎರಡೂ ಒಳಗೊಂಡಿರುತ್ತದೆ.
ರೌದ್ರ: ಸಿಟ್ಟು ಕ್ರೋದ. ಇದೇ ರೌದ್ರ. ರಂಗದಲ್ಲಿ ಸ್ವಲ್ಪ ಹೆಚ್ಚು ಎನ್ನುವಂತಹ ಅಭಿನಯವನ್ನು ತೋರಿಸುವುದು ಸಾಮಾನ್ಯ. ಸಾಮಾನ್ಯ ಸ್ಥಿತಿಗಿಂತ ಆಂಗಿಕಾಭಿನಯದಲ್ಲಿ ವ್ಯತ್ಯಾಸವಿರುತ್ತದೆ. ಕಣ್ಣ ಕೆಂಪಾಗಿಸುದು, ಹುಬ್ಬುಗಂಟಿಕ್ಕಿವುದು.. ಈ ತರ ಅಂಗ ವಿನ್ಯಾಸಗಳನ್ನು ಮಾಡಿ ರೌದ್ರವನ್ನು ತೋರಿಸುವುದನ್ನು ನಾವು ಕಾಣಬಹುದು.
ಕರುಣಾರಸವೂ ಶೋಕ ಸ್ಥಾಯಿಭಾವದಿಂದ ಹುಟ್ಟುತ್ತದೆ. ರಸಾಸ್ವಾದನೆ ಆನಂದ ರೂಪವಾಗಿಯೇ ಇರಬೇಕು ಎಂಬುದು ಎಲ್ಲರ ಅಭಿಪ್ರಾಯ. ಹಾಗಾದರೆ ಕರುಣಾ ರಸದ ಆಸ್ವಾದನೆ ಹೇಗೆ ಸಾಧ್ಯ. ಇದಕ್ಕೇ ಹಿರಿಯ ಕವಿಗಳು ತಮ್ಮ ತರ್ಕವನ್ನು ಹೇಗೆ ಮಂಡಿಸುತ್ತಾರೆಂದರೆ ಕಾವ್ಯ ರಸ ಅಲೌಕಿಕವಾದುದು. ಅದಕ್ಕೆ ಲೌಕಿಕ ಸಂಬಂಧಗಳ ಅಗತ್ಯವಿಲ್ಲ. ದುಃಖ, ದುಃಖಕ್ಕೆ ಎಡೆ ಮಾಡಿಕೊಡುವುದು ಲೌಕಿಕ ಸಂಬಂಧ, ಆದರೆ ಕವಿಯ ಅಲೌಕಿಕ ಪ್ರತಿಭೆಯ ಸ್ಪರ್ಶದಿಂದ ಕಾವ್ಯದಲ್ಲಿ ದುಃಖದಿಂದ ಸುಖವೇ ಒದಗಿಬರಬಹುದು. ಕರುಣಾ ರಸದಲ್ಲಿ ವಿಭಾವ- ಶಾಪ, ಕ್ಲೇಷ, ಇಷ್ಟಜನರ ವಿಯೋಗ; ಅನುಭಾವಗಳಾದ. ಕಣ್ಣೀರು ಸುರಿಸುವುದು, ಕಳೆಗುಂದುವುದು, ಮರೆವು ಮತ್ತು ವ್ಯಭಿಚಾರಿ ಭಾವಗಳದ ಸಾವು, ತ್ರಾಸ ಆಲಸ್ಯ ಈ ಮೂರೂ ಭಾವಗಳು ಹುಟ್ಟುತ್ತವೆ. ಆದ್ದರಿಂದಲೇ ಭವಭೂತಿಯೂ “ಏಕೋ ರಸಃ ಕರುಣ ಏವ” ಎಂದಿದ್ದಾನೆ.
ವೀರರಸ ಉತ್ತಮ ಪ್ರಕೃತಿಯ ಪುರುಷರಲ್ಲಿದ್ದು, ಉತ್ಸಾಹ ಸ್ಥಾಯೀ ಭಾವವುಳ್ಳದ್ದಾಗಿರುತ್ತದೆ. ಮುಂದೆ ಅದ್ಭುತ ರಸವೆಂದರೆ ಆಶ್ಚರ್ಯ, ವಿಸ್ಮಯ. ಭೀಭತ್ಸ ರಸವೆಂದರೆ ಸಾಮಾನ್ಯವಾಗಿ ರೇಜಿಗೆ ಹುಟ್ಟಿಸುವುದು ಎನ್ನಬಹುದೇನೋ. ಅನಭಿಮತ ವಸ್ತುಗಳ ದರ್ಶನದಿಂದ, ಅನಿಷ್ಟವಾದ ಗಂಧ, ರಸ, ಸ್ಪರ್ಶ, ಶಬ್ಧ ಮತ್ತು ದೋಷಗಳಿಂದಲೂ ಭೀಭತ್ಸ ರಸ ಹುಟ್ಟಿಕೊಳ್ಳುತ್ತದೆ. ಭಯಾನಕ ರಸ ಭಯಗೊಳ್ಳುವುದೇ ಆಗಿದೆ.
ಕೊನೆಯದಾಗಿ ಉಲ್ಲೇಖಿಸಿರುವುದು ಶಾಂತ ರಸ. ಮೋಕ್ಷ ಉಪಯುಕ್ತವೆನಿಸಿದ ಆಧ್ಯಾತ್ಮಿಕ ಧ್ಯಾನದಿಂದ ಹುಟ್ಟತಕ್ಕದ್ದು, ತತ್ವಜ್ಞಾನಕ್ಕೆ ಕಾರಣವೆನಿಸಿದ ನಿರ್ವೇದದಿಂದ ಯುಕ್ತವಾದುದು, ಮೋಕ್ಷ ಜ್ಞಾನಕ್ಕಾಗಿಯೇ ಹೇಳಲ್ಪಟ್ಟಿರುವ ವಚನಗಳಿಂದ ಸಮನ್ವಿತವಾದುದೆಂದು ಶಾಂತರಸವನ್ನು ಶ್ಲೋಕದ ಮೂಲಕ ತಿಳಿಸಿದ್ದಾರೆ. ವೈರಾಗ್ಯ ಹೊಂದುವುದು ಮೋಕ್ಷಕ್ಕೆ ದಾರಿಯಾದರೆ, ಇದೇ ಅನುಭಾವಗಳ ಮೂಲಕ ಅಭಿನಯಿಸುವುದು ಶಾಂತ ರಸವೆನಿಸವುದು.
ಹೀಗೆ ನಮ್ಮ ಬದುಕಿನ ಪ್ರತಿಯೊಂದು ಭಾವನೆಗಳು ಕೂಡಾ ನವರಸಗಳಲ್ಲಿ ಒಂದಾಗಿದೆ. ದಿನನಿತ್ಯದ ಬದುಕಿನಲ್ಲಿ ಅದನ್ನು ಗುರುತಿಸದೇ ಇರುವ ನಾವು ರಂಗಕ್ಕೇ ತಂದಾಗ ಅದನ್ನು ಸ್ವಲ್ಪ ಹಾವಭಾವಗಳ ಮೂಲಕ ಅಭಿನಯಿಸುವುದನ್ನು ಕಾಣುತ್ತೇವೆ.. ಶ್ರವ್ಯ ಕಾವ್ಯದಲ್ಲಿ ಸಿಗುವ ಆನಂದವನ್ನು ದೃಶ್ಯಕಾವ್ಯದ ಮೂಲಕ ಅಭಿವ್ಯಕ್ತಿಸಿ ರಸ ಉತ್ಪತ್ತಿಗೆ ಇವು ಕಾರಣವಾಗುತ್ತವೆ.
ಮಂಜುಳಾ ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದವರು. ಸಾಂಪ್ರದಾಯಿಕ ನಾಟ್ಯ ಹಾಗೂ ಆಧುನಿಕ ಸಂವೇದನೆಯ ರಂಗಭೂಮಿ ಈ ಎರಡೂ ಕ್ಷೇತ್ರಗಳಲ್ಲಿ ಅನುಸಂಧಾನ ನಡೆಸಿದವರು. ದೂರದರ್ಶನದ ಬಿ ಗ್ರೇಡ್ ಕಲಾವಿದೆಯಾಗಿರುವ ಅವರು, ತುಳುನಾಡ ಜನಪದ ಕುಣಿತ ಹಾಗೂ ಅಭಿಜಾತ ನೃತ್ಯ ಪ್ರಕಾರದ ಆನ್ವಯಿಕ ಸಾಧ್ಯತೆ ಎಂಬ ವಿಷಯದ ಕುರಿತು ನಡೆಸಿದ ಅಧ್ಯಯನಕ್ಕಾಗಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಫೆಲೋಶಿಪ್ ಗೌರವ ಪಡೆದಿದ್ದಾರೆ.