ಕೆಲಸದಿಂದ ಬರುವಾಗಲೆ ತಡವಾದ್ದರಿಂದ ಹೋಟೆಲ್ಲಿನಲ್ಲಿ ಊಟ ಮುಗಿಸಿ ರೂಮು ತಲುಪಿದ ತಕ್ಶಣವೇ ಹಾಸಿಗೆ ಮೇಲೆ ಬಿದ್ದುಕೊಂಡ. ಇನ್ನೇನು ನಿದ್ದೆ ಬಿತ್ತು ಅನ್ನುವಾಗ ಮೊಬೈಲ್ಲಿನ ಮೆಸೇಜ್ ಟೋನ್ ಅಚ್ಯುತನನ್ನು ಅಲುಗಾಡಿಸಿತು. ಈ ನಡುರಾತ್ರಿ ಯಾರ ಎಸೆಂಮೆಸ್ಸು? ಕತ್ತಲಲ್ಲೇ ಮೊಬೈಲ್ ತಡಕಾಡಿ ನೋಡಿದ. ಯಾರದೋ ಅಪರಿಚಿತ ನಂಬರ್. ಓಪನ್ ಮಾಡಿ ಓದಿದ.
“ಹಲೋ ತುಚ್ಛ! ಹ್ಯಾಂಗಿದ್ದೀಯೊ?” ಎಂದಿತ್ತು.
ಅಚ್ಯುತನಿಗೆ ಪೂರ್ತಿ ಎಚ್ಚರಾಯ್ತು. ಅರೆ! ಜಾನಕಿಯಲ್ಲವೇ! ಹೌದು ಅವಳೇ. ಅವಳು ಮಾತ್ರ ತನ್ನನ್ನು ಹೀಗೆ ಕರೆಯೋದು. ಅಚ್ಯುತ ಉದ್ವಿಗ್ನಗೊಂಡು ಕತ್ತಲಲ್ಲೇ ಅಕ್ಷರಗಳಿಗಾಗಿ ತಡಕಾಡಿದ.
“ಯೇ ಜಾನ್ಕಿ.. ನೀನು! ನನ್ ಹೆಸ್ರನ್ ಸರಿಯಾಗಿ ಅನ್ನೋಕೆ ಏನೇ ದಾಡಿ ನಿಂಗೆ? ನೀನಿನ್ನೂ ಹಳೇ ಚಾಳಿ ಬಿಟ್ಟಿಲ್ವಾ?”
“ಏನ್ ಮಾಡಲಿ? ನೀ ನನ್ನ ಪ್ರೀತಿಯ ತುಚ್ಛ ಅಲ್ವಾ?”
“ಸಾಕ್ ಮಾಡು, ಈ ನಡು ರಾತ್ರಿ ಯಾಕೆ ಡಿಸ್ಟರ್ಬ್ ಮಾಡ್ದೆ ಹೇಳು.”
“ಏನ್ ತಪಸ್ ಮಾಡ್ತಿದ್ಯಾ? ಅಥವಾ ಸನ್ಯಾಸತ್ವ ಸ್ವೀಕರಿಸಿದೆಯಾ?”
“ತಪಸ್ಸು ಇಲ್ಲಾ ಮಣ್ಣೂ ಇಲ್ಲಾ… ನಿದ್ದೆ ಮಾಡ್ತಿದ್ದೆ.”
“ಮತ್ತೆ ಕನಸಲ್ಲಿ ಯಾರು ಬರ್ತಿದ್ರೊ?”
“ನೀನಂತೂ ಖಂಡಿತ ಅಲ್ಲಾ, ಗೂಬೆ”
” ನಿನ್ನ ಸಿಟ್ಟಿನ್ನೂ ಇಳ್ದಿಲ್ವಾ? ಟೆಂಪೊಕ್ಲೀನರ್ಕಿ ಮಾಡ್ತಿದ್ರೆ ನಿನ್ಯಾರು ಲವ್ ಮಾಡ್ತಾರೆ ಅಂದದಕ್ಕೆ ಊರ್ ಬಿಟ್ಟಿಯಲ್ಲ ಪುಣ್ಯಾತ್ಮ”
“ಅದೊಂದೇ ನಿನ್ನಿಂದ ನಂಗಾಗಿರೊ ಉಪಕಾರ. ನಿನ್ನ ಮಾತು ಮನಸಿಗೆ ತಾಗದಿದ್ರೆ ನಾನು ಊರ್ ಬಿಡ್ತಿರಲಿಲ್ಲಾ. ಇನ್ನೂ ಕುಮ್ಟಾ ಬಸ್ ಸ್ಟ್ಯಾಂಡಿನಲ್ಲಿ ‘ಗೋಕ್ರಣ್ ಗೋಕ್ರಣ್’ ಅಂತ ನಿನ್ನಂತ ಗೂಬೆ ಪ್ಯಾಸೆಂಜರ್ ಹುಡುಕ್ತಿರ್ತಿದ್ದೆ. ಇಲ್ಲೀಗ ತಿಂಗಳ ತಿಂಗಳ ಪಗಾರ ತಕ್ಕಂತಿ. (ಏನ್ ಕೆಲಸ ಅಂತಾ ಮಾತ್ರ ಕೇಳಬ್ಯಾಡ)”
” ಓ ಥ್ಯಾಂಕ್ಸ್ ಹೇಳ್ಬೇಕಲ್ವಾ ನಂಗೆ… ಇರ್ಲಿ ಬಿಡು. ನಿಂಜೊತೆ ಮಾತಾಡಬೇಕು ಅನಿಸ್ತು. ನಿನ್ನ ದೋಸ್ತ ರಮೇಶ ನಂಬರ್ ಕೊಟ್ಟ. ಮನೆಯವ್ರೆಲ್ಲಾ ಮಲಗಿದ್ದಾರೆ. ಅವ್ರಿಗೆ ಡಿಸ್ಟರ್ಬಾಗ್ತದೆ ಅಂತ ಎಸೆಂಮೆಸ್ ಮಾಡ್ತಿದ್ದೇನೆ. ಟೋನ್ ವೊಲ್ಯುಮ್ ಕಮ್ಮಿ ಮಾಡಿದ್ದೇನೆ. ಯಾಕೋ ಇಂದು ನಿನ್ನ ನೆನಪು ತುಂಬಾ ಆಗ್ತಿದೆ ಮಾರಾಯಾ. ನಿನ್ನ ಪಾಪದ ಮುಖ,ಗುಳಿಬೀಳುವ ಕೆನ್ನೆಗಳು ಕಣ್ಮುಂದೆ ಬರ್ತಿವೆ.”
“ಯೇ ಡಾಂಕಿ, ಇದೇನೆ ನಿನ್ನ ಹೊಸ ಅವತಾರ? ಈ ಥರದ ಮಾತಾಡ್ತಿದ್ದಿ. ನೀನು ಜಾನಕಿ ಹೌದೊ ಅಲ್ವೊ?”
“ಅಚ್ಯುತ ನನ್ನ ತಡಿಬೇಡ ಪ್ಲೀಸ್. ನಿನ್ನ ಬಗ್ಗೆ ಈವರೆಗೆ ಬರೀ ಕೀಟಲೆ ಮಾಡಿದೆ, ಕೆಟ್ಟದ್ದನ್ನೇ ಆಡಿದೆ…ನಿಂಗೊತ್ತಾ, ಆಗೆಲ್ಲಾ ನಿನ್ನ ಆ ನಿಶ್ಪಾಪ ಮುಖ ಎಷ್ಟು ಲವೇಬಲ್ ಆಗಿರ್ತಿತ್ತು ಅಂತಾ? ….ಈ ಎಸೆಂಮೆಸ್ ಎಂಥ ಚಂದ ಅಲ್ವಾ? ಎದುರಿಗಿದ್ರೆ ಮನಸಿನ ಮಾತುಗಳು ಭಿನ್ನಗೊಂಡು ಹೊರಬರುತ್ತವೆ. ಕಾಗದದಲ್ಲಿ ಬರೆಯೋಣ ಅಂದ್ರೆ ಕಾಯುವ ಕಾಲವಲ್ಲವಿದು. ಎಸೆಂಮೆಸ್ ಪರ್ಫೆಕ್ಟ್. ಈ ಕ್ಶಣಕ್ಕೇ ಜೀವ ಚಿಗುರಿಸುತ್ತದೆ…”
“ಅಂತೂ ನಿಂಗೂ ಹೃದಯ ಇದೆ ಅನ್ನು!!….ಮಜಕ್ಕಂದೆ, ನಂಗೊತ್ತಿತ್ತು ನಿನ್ನ ಮನಸೆಂಥದ್ದು ಅಂಥ….ನಾನು ಪಿಯುಸಿಯಲ್ಲಿ ಫೇಲ್ ಆದಾಗ ಅಪ್ಪ ‘ಗದ್ದೆ ಕೆಲಸಕ್ಕೆ ಬಾ’ ಅಂದ. ನೀವೆಲ್ಲಾ ಕುಮಟಾ ಬಾಳಿಗಾ ಕೊಲೇಜಿಗೆ ಸೇರ್ಕೊಂಡ್ರಿ. ಭೂಮಿಗೆಳದ ನೇಗಿಲ ಸಾಲುಗಳೂ ನಿನ್ನ ಗುಂಗುರು ಕೂದಲ ನೆನಪು ತಂದರೆ ನಾನೇನು ಮಾಡಲಿ…ಬಿಟ್ಟೆ. ಯಂಕ್ಟಣ್ಣನ ಟೆಂಪೊ ಕ್ಲೀನರ್ ಆದೆ….ಅಘನಾಶಿನಿ ದಾಟುವಾಗ ಬೀಸುವ ತಂಗಾಳಿಯಲ್ಲಿ ಚದುರಿದ ನಿನ್ನ ಕಪ್ಪು ಕೂದಲು ಕನಸಲ್ಲೂ ನನ್ನ ಮುಖಕ್ಕೆ ಕಚಗುಳಿಯಿಟ್ಟವು….”
“ಹಾಂ ಹಾಂ ಕವಿಪುಂಗವ ಸಾಕಮಾಡು. ಮಾದನಗೇರಿಯಲ್ಲಿ ಇಳಿವಾಗ ಕಾಸು ಕಾಸಿಗೂ ಕಿತ್ತಾಡ್ತಿದ್ದೆಯಲ್ಲೋ ಕತ್ತೆ… ಅದೆಲ್ಲಾ ಈಗ ಇರ್ಲಿ ನಿಂಗೊಂದು ವಿಷಯ ಹೇಳ್ತೇನೆ…. ಬೇಡ ಬೇಡ ನೀನೇ ಗೆಸ್ ಮಾಡು. ಊರು ಬಿಟ್ಟ ಮೇಲಾದರೂ ಜಾಣ ಆಗಿಯೊ ನೋಡೋಣ.”
“ಕುಶಾಲು ಮಾಡೊದು ಸಾಕು. ನಂಗೂ ನಿವೇದಿಸಿಕೊಳ್ಳೋದಿದೆ. ನಿನ್ನ ಎದುರಂತೂ ನನ್ನ ನಾಲಿಗೆ ಮರಗಟ್ಟುತ್ತದೆ…..ನೀ ನನ್ನ ಲೇವಡಿ ಮಾಡಿದೆ, ಫ್ರೆಂಡ್ಸ್ ಜೊತೆ ಸೇರಿ ನನ್ನನ್ನು ಹಳಿದು ಬಿದ್ದುಬಿದ್ದು ನಕ್ಕೆ. ಆದರೆ ನಿನ್ನ ನಗುವಿನ ಕೊನೆಯಲ್ಲಿ ನಿನ್ನ ಕಣ್ಣುಗಳಲ್ಲಿ ಜಿನುಗುವ ಆ ಪ್ರೀತಿಯ ತೇವಕ್ಕಾಗಿ ನಾನು ಕಾದೇ ಇರುತ್ತಿದ್ದೆ…. ನೀ ಅಂದದ್ದು ನಿಜ, ಈ ಎಸೆಂಮೆಸ್ ಗೆ ಅಂತರ್ಗಮಿಸುವ ಭಾವನದಿ ಹರಿಬಿಡುವ ಶಕ್ತಿಯಿದೆ… ಈಗ ನೋಡು ನಿನ್ನೆದುರು ಎಂದಾದರೂ ‘ಐ ಲವ್ ಯೂ’ ಅನ್ನೋ ಧೈರ್ಯ ಬರ್ತಿತ್ತಾ… ಐ ಲವ್ ಯು ಜಾನಕಿ..”
ಹೀಗೆ ಟಾಯ್ಪಿಸಿದನ್ನು ಇನ್ನೊಮ್ಮೆ ಓದಿದ. ಕೊನೆಯ ಅಕ್ಷರಗಳು ರೋಮಾಂಚನ ಉಂಟು ಮಾಡಿದವು. ಸೆಂಡ್ ಮಾಡುವಾಗ ಅಚ್ಯುತನ ಕೈಗಳು ಕಂಪಿಸಿದವು. ‘ಮೆಸೇಜ್ ನಾಟ್ ಸೆಂಟ್’ ಅಂತ ಬಂತು. ಬರೆದದ್ದನ್ನು ಇನ್ನೊಮ್ಮೆ ಓದಿ ಕೊನೆಯಲ್ಲಿ ‘ರಿಯಲೀ ಐ ಲವ್ ಯು’ ಎಂದು ಸೇರಿಸಿ ಮತ್ತೆ ಸೆಂಡ್ ಮಾಡಿದ. ‘ಚೆಕ್ ದಿ ಬ್ಯಾಲನ್ಸ್’ ಅಂತ ಬಂತು. ಅಯ್ಯೋ ಕರ್ಮವೆ! ಹತ್ತು ಪೈಸೆ ಮಾತ್ರ ಬ್ಯಾಲನ್ಸಿದೆ. ನೋ ಔಟ್ ಗೋಯಿಂಗ್, ಇನ್ ಕಮಿಂಗ್ ಮಾತ್ರ. ಅಚ್ಯುತ ಕತ್ತಲನ್ನೇ ಅಲುಗಾಡಿಸುವವನಂತೆ ಆಕಡೆ ಈಕಡೆ ತಿರುಗಿದ.
“ಅದೆಷ್ಟು ಹೊತ್ತೋ ಗೆಸ್ ಮಾಡೋಕೆ, ಬೆಳಗು ಮಾಡ್ತಿಯೇನೋ ಮಂಕಿ”
“……………………………………”
ಹೋಗ್ಲಿಬಿಡು ನಾನೇ ಹೇಳ್ತೀನಿ. ನಂಗೆ ಮದುವೆ ನಿಶ್ಚಯ ಆಯ್ತು ಮಾರಾಯ. ಹುಡ್ಗ ಐಟಿ ಇಂಜಿನಿಯರ್, ಬೆಂಗಳೂರಲ್ಲಿದ್ದಾನೆ. ಒಂಚೂರು ಕುಳ್ಳ ಅನ್ನೋದು ಬಿಟ್ರೆ ವೆರಿ ಹ್ಯಾಂಡ್ಸಮ್. ಮನೆಗೆ ಬಂದು ನಿಂಗೆ ಒಪ್ಗೆನಾ? ಅಂದ. ಅವನಿಗೆ ಮಾತು ಮಾತಿಗೆ
ಕಣ್ಣುಪಡ್ಚೋ ಅಭ್ಯಾಸ ಇದ್ದಂಗಿದೆ. ನಾನು ‘ಹೂಂ’ ಅಂತ ಕಣ್ಣುಪಡ್ಚಿದೆ. ಅವನ ಮುಖ ನೋಡಬೇಕಿತ್ತು ನೀನು….ಆಮೇಲೆ ಮನೆಯವರತ್ರ ಬೈಸಿಕೊಂಡೆ. ‘ಈ ತರಲೆತನ ಬಿಡದಿದ್ರೆ ನಿನ್ಯಾರು ಕಟ್ಕೊತಾರೆ?’ ಅಂದ್ರು….ಹುಡುಗ ಒಪ್ಪಿದಕ್ಕೆ ಮನೆಯವರೆಲ್ಲಾ ಖುಷಿ ಆಗಿದ್ದಾರೆ. ಮತ್ತೆ ನಾನೂ. ಈ ಗಳಿಗೆಯಲ್ಲಿ ನೀ ನೆನಪಾದೆ. ನಿನ್ನ ಪಾಪದ ಮುಖ ನೆನಪಾಯ್ತು. ನೀನೊಂಥರಾ ವಿಶಾದ ಇದ್ದಂಗೆ ಮಾರಾಯ. ಎಂಥ ಸಂತಸದ ಗಳಿಗೆಯಲ್ಲೂ ಜೊತೆಯಲ್ಲೇ ಇರುವೆ…..ಮೊಬೈಲ್ ಗಿಫ್ಟ್ ಕೊಟ್ಟು ‘ಮಾತಾಡ್ತಿರು’ ಅಂತ ಹೇಳಿ ಹೋಗಿದ್ದಾನೆ. ( ಮಾತಾಡು ಅಂದಿದ್ದು ಅವನ ಜೊತೆ. ನಾನು ನಿಂಜೊತೆ ಹರಟೆ ಹೊಡಿತಿದೀನಿ)”
“………………………………”
“ಅರೆ, ಏನ್ ನೆಗೆದು ಬಿದ್ದ್ ಹೊದ್ಯೇನೋ ಕೋತಿ?”
“……………………………….”
“ಅಚ್ಯತ ಸತಾಯಿಸಬೇಡವೋ. ಬೇಕಾದ್ರೆ ಬೈದುಬಿಡೋ.”
“…………………………………..”
” ಹೀಗೆ ಮೌನದಲ್ಲಿ ಕೊಲ್ಲಬೇಡವೋ ಕತ್ತೆ”
“………………………………………”
“ತುಚ್ಛ ನೀನು”
(sms- save my soul)
ಉತ್ತರ ಕನ್ನಡದ ಅಂಕೋಲಾ ತಾಲ್ಲೂಕಿನ ವಾಸರೆ ಗ್ರಾಮದವರು. ಸದ್ಯ ಮುಂಬೈನಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ.