ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ‘ಗೋಪಿ ಮತ್ತು ಗಾಂಡಲೀನ’ ಕವನ ಸಂಕಲನಕ್ಕೆ ಇದೀಗ 50 ವರ್ಷ. ಮೋಹವೂ, ನೀತಿಯೂ ಹದವಾಗಿ ಮೇಳೈಸಿರುವ ‘ಗೋಪಿ ಮತ್ತು ಗಾಂಡಲೀನ’ ಕೇವಲ ಕವಿತೆಯೆಂಬ ಚೌಕಟ್ಟಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಪಾಶ್ಚಾತ್ಯ ಸಂಸ್ಕೃತಿಯೊಂದಕ್ಕೆ ಅದು ಪ್ರತಿಕ್ರಿಯೆ ಎಂದು ಕೆಲವರಿಗೆ ಅನಿಸಿದರೆ, ಹರೆಯದ ಭಾವಗಳನ್ನು ಬಂಧಿಸಿದ ಸಾಲುಗಳೆಂದು ಮತ್ತೆ ಕೆಲವರಿಗೆ ಅನಿಸಿರಬಹುದು. ಅದು ಕವಿತೆಯಾಗಿ ಪ್ರಕಟವಾದದ್ದಷ್ಟೇ ಅಲ್ಲ, ದಿಗ್ಗಜ ಸಾಹಿತಿಗಳಿಬ್ಬರ ಸಂವಾದಕ್ಕೆ ಕಾರಣವಾಯಿತು. ಹಾಡಾಗಿ  ಮನ-ಮನೆಗಳ ಕದ ತಟ್ಟಿತು.ಬೆಳ್ಳಿ ತೆರೆಯ ಮೇಲೆ ರಂಗೇರಿ ಪಡಿಮೂಡಿತು.
ಈ ಕವನವನ್ನು ನೆಪವಾಗಿರಿಸಿಕೊಂಡು ಬಿ.ಆರ್.ಎಲ್. ಕಾವ್ಯಯಾನದ ಕುರಿತು ಬರೆದಿದ್ದಾರೆ ಪೂರ್ಣಿಮಾ ಸುರೇಶ್.  

 

‘ಗೋಪಿ ಮತ್ತು ಗಾಂಡಲೀನ’ ಕವನಸಂಕಲನಕ್ಕೆ ಐವತ್ತು ವರ್ಷ. ಜೊತೆಗೆ ಬಿ.ಆರ್.ಎಲ್ ರವರ ಕಾವ್ಯ ಪಯಣಕ್ಕೂ ಗೋಲ್ಡನ್ ಜ್ಯೂಬಿಲಿ!

ಚಿರಯೌವನಿಗ ಲಕ್ಷ್ಮಣರಾವ್ ಅವರಿಗೆ 75 ಸಂವತ್ಸರದ ಸಂಭ್ರಮದಲ್ಲಿ ‘ಗೋಪಿ ಮತ್ತು ಗಾಂಡಲೀನ’ ದ ಮುಗ್ಧ ಕಂಗಳ ಗೋಪಿಯ ಪಯಣದಲ್ಲಿ ಅದೆಷ್ಟು ಮೈಲುಗಲ್ಲುಗಳು. ಅದೆಷ್ಟು ಕಾಣ್ಕೆಗಳು!

1969ರಲ್ಲಿಗೋಪಿ ಮತ್ತು ಬೆಂಡಲೀನ ಎಂಬ ಶೀರ್ಷಿಕೆಯಲ್ಲಿ ಈ ಕವನ  ಮೊದಲು ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಯಿತು. ಅದಾಗಲಷ್ಟೇ ಬೆಂಗಳೂರಿನಲ್ಲಿ ಕ್ಯಾಬರೇ ಶೋಗಳು ಪ್ರವೇಶಿಸಿದ್ದು, ಜನರ ಮಾತುಗಳಲ್ಲಿ ಈ ವಿಷಯವೇ ಚರ್ಚೆಯಾಗುತ್ತಿತ್ತು. ಕವನದ ಕುರಿತು ಬಿ.ಆರ್. ಲಕ್ಷ್ಮಣರಾವ್ ಲೇಖನವೊಂದರಲ್ಲಿ ಬರೆದುಕೊಂಡಂತೆ, ‘ಕೆಂಪೇಗೌಡ ವೃತ್ತದ ಬಳಿ ಇದ್ದ ನೆಪೋಲಿ ಬಾರಿನಲ್ಲಿ ಗಾಂಡಲೀನ ಎಂಬ ಹೆಸರಿನ ಕ್ಯಾಬರೇ ನರ್ತಕಿ ಇದ್ದುದರಿಂದ ಈ ಕವನದ ಶೀರ್ಷಿಕೆಯನ್ನು ಪತ್ರಿಕೆಯವರು ಬದಲಾಯಿಸಿ ಹಾಕಿದ್ದರು. ಆದರೆ ಕವನ ಬರೆಯುವ ವೇಳೆಗೆ ಈ ಕ್ಯಾಬರೇ ಶೋಗಳು ಹೇಗಿರುತ್ತವೆ ಎಂಬುದೇ ಗೊತ್ತಿರಲಿಲ್ಲ. ಗೆಳೆಯನೊಬ್ಬನು ವರ್ಣಿಸಿದ್ದನ್ನು ಕಲ್ಪಿಸಿಕೊಂಡು ಬರೆದ ಕವನವಿದು’.

ಕಲ್ಪನೆಯ ವಿಲಾಸಕ್ಕೆ ಸರಳವಾದ ಪದಗಳನ್ನು ಪೋಣಿಸಿ ಬರೆದ ಕವನವಿದು. ಓದುಗರ ಮನದಲ್ಲಿ ಮಂದಹಾಸ ಮೂಡಿಸುತ್ತ ಓದುವಿಕೆಯಲ್ಲಿ ಉಲ್ಲಾಸವನ್ನು ತುಂಬುತ್ತವೆ. ಈ ಸಾಲುಗಳನ್ನೇನೋಡಿ, ವರ್ಣನೆಯ ವಿವರಗಳೂ, ನೀತಿ ಬೇರೂ ಇಲ್ಲಿದೆ ಎನಿಸುತ್ತದೆ:

ಗುಂಡು ಗುಂಡು ಗಾಂಡಲೀನ ಕ್ಯಾಬರಿಸುತ್ತ
ತನ್ನ ಅಂಗೋಪಾಂಗಗಳ ತಾನೇ ನೇವರಿಸುತ್ತಾ
ನಿಧ-ನಿಧಾನವಾಗಿ,
ವಿಧ-ವಿಧಾನವಾಗಿ,
ಬತ್ತಲಾಗುತಿರಲು ಗೋಪಿ ಕಲ್ಲಾದನು.
ರಂಭೆಯನ್ನು ಕಂಡ ಋಷಿಯ ಸ್ಟಿಲ್ಲಾದನು…

ಗಾಂಡಲೀನ ಗೋಪಿಯ ಬಳಿ ತೊನೆದು ಬಂದಳು
ಅವನ ಹಂಡೆ ಹೊಟ್ಟೆಯನ್ನು ಬಳಸಿ ನಿಂದಳು
ಚೊಂಬು ಕೆನ್ನೆ ಮೇಲೆ,
ತುಟಿ ಬಿಂಬಿಸಿದಳು ಬಾಲೆ
ಬುರ ಬುರ ಬುರ ಊದಿ ಗೋಪಿ ಬೋಂಡವಾದನು.
ಮಾದ್ರಿಯಪ್ಪಿದಾಗಿನಂಥ ಪಾಂಡುವಾದನು.

ಕಟ್ಟಕಡೆಯ ತುಟ್ಟತುದಿಯ ಶಿಖರ ನೋಟದಲ್ಲಿ
ನಡುವಿನ ಗಡಿ ಮೀರಿ ಮಾನ ಜಾರುವಷ್ಟರಲ್ಲಿ
ಹಾ, ವೆಂಕಟಸುಬ್ಬಿ!
ಹೆಂಡತಿ ನೆನಪು ದಬ್ಬಿ,
ಗಾಂಡಲೀನಳ ಪಾದಪದ್ಮಕಡ್ಡ ಬಿದ್ದನೋ.
ಪರನಾರಿ ಸಹೋದರನು ಕಾಮ ಗೆದ್ದನೋ…

ಲಂಕೇಶರು ಈ ಕವನವನ್ನು ಅನಂತಮೂರ್ತಿಯವರ ‘ಕ್ಲಿಪ್ ಜಾಯಿಂಟ್’ ಕಥೆಯ ಜೊತೆ ಹೋಲಿಸಿದ್ದರು. ಆದರೆ ಈ ಹೋಲಿಕೆಯ ಮೂಲಕ ಅನಂತಮೂರ್ತಿ ಮತ್ತು ಲಂಕೇಶರ ನಡುವೆ ಕನ್ನಡ ಪ್ರಭ ಪತ್ರಿಕೆಯಲ್ಲಿ ದೀರ್ಘಸಂವಾದ ನಡೆದಿತ್ತಂತೆ. ಕವನದ ನೆಪದಲ್ಲಿ ನಡೆದ ಸಂವಾದವು ಕವನಕ್ಕೆ ಮತ್ತಷ್ಟು ಸಕಾರಾತ್ಮಕ ಪ್ರಚಾರವನ್ನೇ ಕೊಟ್ಟಿತು.

ಈ ಕವನವನ್ನೋದಿದ ಬಳಿಕ, ಅನೇಕರು, ಬಿಆರ್ ಎಲ್ ಅವರ ಬಳಿ ಕ್ಯಾಬರೇ ನೃತ್ಯ ನೋಡುವ ಅವಕಾಶಗಳ ಮಾಹಿತಿ ಕೋರಿದ್ದುಂಟು. ಆ ಕುರಿತ ರಸಪ್ರಸಂಗಗಳನ್ನು ಬಿ.ಆರ್. ಎಲ್. ಅನೇಕ ಬಾರಿ ಹಂಚಿಕೊಂಡಿದ್ದಾರೆ. ಕವನವೊಂದು ಎಷ್ಟೆಲ್ಲ ಆಯಾಮಗಳಲ್ಲಿ ಪ್ರತಿಕ್ರಿಯೆಯ ಅಲೆಯನ್ನು ಹೊಮ್ಮಿಸಬಹುದು ಎನ್ನುವುದಕ್ಕೆ ಕೂಡ ‘ಗೋಪಿ ಮತ್ತು ಗಾಂಡಲೀನ’ ಕವಿತೆ ಸಾಕ್ಷಿ ಎನಿಸುತ್ತದೆ.

ಇನ್ನು ಕವನವು ವಿಶ್ವಾದ್ಯಂತ ಮಾರ್ದನಿಗೊಳ್ಳಲು ಅದಕ್ಕೆ ಸಂಗೀತ ಸಂಯೋಜಿಸಿದ ಸಿ. ಅಶ್ವತ್ ಅವರೂ ಕಾರಣರೇ. ಸುಲಲಿತವಾಗಿ ಹಾಡಿಸಿಕೊಂಡು ಹೋಗುವಂತೆ ಕವನಕ್ಕೆ ಬೇಕಾದ ಮಾರ್ಪಾಡನ್ನು ಬಿ.ಆರ್.ಎಲ್ ಅವರೇ ಮಾಡಿಕೊಟ್ಟಿದ್ದು ಸಂಗೀತ ದಿಗ್ಗಜರಾದ ಸಿ.ಅಶ್ವತ್ ಮತ್ತು ಮೈಸೂರು ಅನಂತ ಸ್ವಾಮಿ ಅದನ್ನು ಬಹಳ ಉತ್ಸಾಹದಿಂದ ಪ್ರಸ್ತುತಪಡಿಸಿದ ರೀತಿಯೂ ಆಕರ್ಷಕವಾದುದು. ‘ಸುಬ್ಬಾಭಟ್ಟರ ಮಗಳೇ’ ಎಂಬ ಧ್ವನಿಸುರುಳಿಯನ್ನುಲಹರಿ ಸಂಸ್ಥೆಯು 1987ರಲ್ಲಿ ಹೊರತಂದಿದ್ದು, ಅದರಲ್ಲಿ ಈ ಹಾಡೂ ಸೇರಿದೆ.

1969ರಲ್ಲಿ ಕವನ ಪ್ರಕಟವಾಗಿದ್ದರೂ, ಸಂಕಲನ ಪ್ರಕಟವಾಗಿದ್ದು ಮತ್ತೆರಡು ವರ್ಷಗಳ ನಂತರ.  “ಗೋಪಿ ಮತ್ತು ಗಾಂಡಲೀನ”- ಸಂಕಲನದ ಶೀರ್ಷಿಕೆಯ ಕಿರೀಟ ಧರಿಸಿದ ಕವಿತೆ. ಮುಗ್ಧ ಹರೆಯದ ಗೋಪಿ, ಅವನ ಮನಸ್ಸಿನ ಚಪಲ ತಲ್ಲಣ, ಅಂಜಿಕೆ. ಗಾಂಡಲೀನಳ ಯೌವನವು ಹಚ್ಚಿದ ಕಿಡಿಯನ್ನು ವಿಶಿಷ್ಟ ಬಗೆಯಲ್ಲಿ ಕಾಣಿಸುತ್ತದೆ. ಈ ಕವನ ಬೇರೆ ಯಾರು ಬರೆದರೂ ಈ ಮಾದಕ ಸೌಂದರ್ಯದ ಅಮಲು ಘಮಲು ಧರಿಸಿ ವಿಶಿಷ್ಟ ವೆನಿಸುತ್ತಿರಲಿಲ್ಲವೇನೋ.

ಬಿ.ಅರ್.ಎಲ್ ಕವಿತೆಗಳಿಗೆ ಮುಖವಾಡವಿಲ್ಲ. ಅದು ಗಾಂಡಲೀನಳ ಲಾವಣ್ಯದಂತೆ. ಬಹಳ ಸರಳ ಪದಗಳಲ್ಲಿ ಬಹಳಷ್ಟನ್ನು ಹರವಿ ಚಿತ್ತಾರ ಮೂಡಿಸುವ ಕವಿ ಕೌಶಲ್ಯ ಇವರದು. ಪರನಾರಿ ಸಹೋದರ ಗೋಪಿಯ ಬವಣೆ, ಹರೆಯದ ಗಂಡುಗಳಿಗೆ ಹಿತದ ನೋವನ್ನು ಹರಿಸಿ ಮುದ್ದಿಸುತ್ತದೆ.

ಇಲ್ಲಿನ ಕವಿತೆಗಳು ನೇರ ಮಾತಿನವು. ಕವಿಯನ್ನು ಅರಿತವರಿಗೆ ಈ ಕವಿತೆಗಳು ಅವರ ಅಂತಃದೃಷ್ಟಿಗೆ ಸಿಲುಕಿದ ವಿಷಯಗಳ ಪ್ರತಿಬಿಂಬ ಅನಿಸುತ್ತದೆ. ಈ ಕವನಗಳು ಪಾರದರ್ಶಕವಾಗಿ ಯಾವುದನ್ನೂ ಮೇಕಪ್ ನ‌ ಹಿಂದೆ ಅಡಗಿಸಿಕೊಳ್ಳದೆ ಕಲೆಯ ಸ್ಪರ್ಶ ನೀಡಿ ಕಾವ್ಯವಾಗಿಸಿದೆ. ಈ ಕಲೆಯನ್ನು ಕವಿ ಸಹಜವಾಗಿಯೇ ಒಲಿಸಿಕೊಂಡಿದ್ದಾರೆ.

‘ಕವನ ಬರೆಯುವ ವೇಳೆಗೆ ಈ ಕ್ಯಾಬರೇ ಶೋಗಳು ಹೇಗಿರುತ್ತವೆ ಎಂಬುದೇ ಗೊತ್ತಿರಲಿಲ್ಲ. ಗೆಳೆಯನೊಬ್ಬನು ವರ್ಣಿಸಿದ್ದನ್ನು ಕಲ್ಪಿಸಿಕೊಂಡು ಬರೆದ ಕವನವಿದು.’

ಭಾವನೆಗಳನ್ನು ಅಳೆದು ತೂಗಿ ಸೋಸಿ ನೋಡುವ ಗುಣಸೂತ್ರ ಕವಿಯನ್ನು -ಕವಿತೆಯನ್ನು ಕಾಡುವುದಿಲ್ಲ. ಮರ, ಭೂಮಿ, ಪ್ರಕೃತಿ ಎಲ್ಲವೂ ಗಂಡು-ಹೆಣ್ಣಿನ ಪ್ರತಿರೂಪವಾಗಿ ಪ್ರೇಮ-ಕಾಮದ ಪ್ರತಿಮೆಗಳಾಗಿ ವಯ್ಯಾರದಿಂದ ಗೋಚರಿಸುತ್ತವೆ.

ನನ್ನಂತಹ ಹೊಸ ಬರಹಗಾರರು, ಬಿ. ಆರ್. ಎಲ್. ಕವಿತೆ ಹೊಸೆಯುವ ಅದ್ಭುತವನ್ನು ನೋಡುತ್ತಾ ಕಾವ್ಯರಚನೆಗೆ ತೊಡಗಿಕೊಂಡವರು. ನನ್ನ ಬರಹದ ಆರಂಭದ ಕಾಲದಲ್ಲಿ, ಅಂದರೆ ಶಾಲಾದಿನಗಳಲ್ಲಿ ‘ಅಮ್ಮನ ಗಾಳಕ್ಕೆ ಸಿಲುಕಿದ ಮೀನು’ ಕವನದ ಪರಿಚಯ ಮಾಡಿಕೊಂಡು ನಂತರ ಆ ಪರಿಚಯದ ಮೆಲುಕು ಹಾಕುತ್ತಲೇ ಬಿ ಆರ್ ಎಲ್ ಕಾವ್ಯಲೋಕವನ್ನು ಪರಿಚಯಿಸಿಕೊಂಡೆ. ವೈಯಕ್ತಿಕ ಪರಿಚಯದ ಬಳಿಕ ಅವರ ವ್ಯಕ್ತಿತ್ವದ ‘ಕೊಲಾಜ್’ ಮನಗನ್ನಡಿಯಲ್ಲಿ ಪ್ರತಿಫಲಿಸಿ, ಮತ್ತಷ್ಟು ಕುತೂಹಲ ಆಸ್ಥೆಯಿಂದ ಅವರ ಕವನಗಳನ್ನು ಕೈಗೆತ್ತಿಕೊಂಡಿದ್ದೆ.

‘ಕವಿಯೊಬ್ಬನ ಬರಹದ ಆರಂಭ ಹಂತದ ಕವನಗಳು ಯಾವ ಶೈಲಿ, ಎಲ್ಲಿ, ಹೇಗೆ, ಬರಹದ ಓಘ, ಯಾವ ವಸ್ತುಗಳು ಯಾವ ಬಗೆಯಾಗಿ ಕವಿತೆಯ ಆತ್ಮವಾಗಿ ಸ್ಥಾಪಿತವಾಗಿದೆ ಎಂಬ ಕುತೂಹಲದಲ್ಲಿ ಓದಿದ್ದು. ಬರೇ ಓದಿದ್ದೇ? ಅವರ ಕವಿತೆಗಳು ಒಳಗೊಳಗೇ ಮಗುವಾಗಿ, ಬೆಳೆದು ಪ್ರಭೆಯಾಗಿ, ಕಲ್ಪವಾಗುವ ಕ್ರಿಯೆಗೆ ನಾನು ವೈಯಕ್ತಿಕವಾಗಿ ಮಾರುಹೋಗಿದ್ದೇನೆ.

ಇಲ್ಲಿ ಹೃದಯಕ್ಕೆ ಹತ್ತಿರದ ಪಾತ್ರಗಳಾದ ಅಪ್ಪ-ಅಮ್ಮ, ಪ್ರಿಯತಮೆ, ಪ್ರೀತಿ, ಗೆಳೆಯರು , ಯೌವ್ವನದ ಬಿಡಿಬಿಡಿ ಕಚಕುಳಿ ಕಾಮನೆಗಳು, ಕಾಡುವಿಕೆ ಪ್ರೇಮ-ಕಾಮಗಳೆಲ್ಲವೂ ವಿಸ್ತಾರವಾಗಿ ಮುಂಜಾನೆಯ ನೆಲದಲ್ಲಿ ಕುಸುಮವಾಗಿ ಹರವಿಕೊಂಡಿದೆ. ಆದರೆ ಇಲ್ಲಿ ಅದಾವುದೂ ಕ್ಲಿಷ್ಟಕರ ಪದಗಳ ಸರಪಳಿಯ ಬೇಡಿ ತೊಟ್ಟು ಕೊಂಡಿಲ್ಲ. ಕ್ಲೀಷೆಯೆನಿಸಿಲ್ಲ. ಅವರು ಸರಳ ಪದಗಳಲ್ಲಿ ವಿಶಿಷ್ಟವಾಗಿ ಪರಿಮಳಯುಕ್ತ ಕಲೆಯಾಗಿ ಕಾವ್ಯ ಅರಳಿರುವುದು ಸೋಜಿಗವೆನಿಸುತ್ತದೆ.

ಸಂಕಲನದ ಕವಿತೆಯಲ್ಲಿ ಅಪ್ಪನ ಹೊರ ಕಾಯದ ವರ್ಣನೆ ಮಾಡುತ್ತಲೇ ಕವಿ ತನ್ನ ವ್ಯಕ್ತಿತ್ವ ಪರಿಚಯ ಮಾಡಿಕೊಡುತ್ತಾರೆ. ಒಂದು ಪೀಳಿಗೆಯ ಭಾವ, ನಡವಳಿಕೆ, ಸಂಪ್ರದಾಯದ ಹೊಸ್ತಿಲನ್ನು ದಾಟಿಸುವ ಹಂಬಲದ ಜೊತೆಗೆ ಈ ಸಂಕೋಲೆ ಕಳಚಿಕೊಂಡು ತನ್ನದೇ ಆದ ಅಸ್ತಿತ್ವ ಕಟ್ಟಿಕೊಳ್ಳುವ ಹಟದ ಹುಡುಕಾಟ ಕಾಣುತ್ತದೆ.

“ಅಪ್ಪ ಮರೆಯುತ್ತಾನೆ ತನ್ನ
ಕನ್ನಡಕ, ಎಲ್ಲರ ಕಣ್ಣಿಗೆ ಹೊಂದಲಾರದು”

“ಅಪ್ಪನಾಗಿಯೂ ಅಪ್ಪನೆನೆಸಿದ ಅಪ್ಪನನ್ನು ಕಂಡಾಗ ಅಪ್ಪನನ್ನು ಹುಡುಕಬೇಕೆನಿಸಿದೆ”

ಈ ಸಾಲುಗಳನ್ನು ಓದುವಾಗ, ಹೇಳದೆ ಉಳಿದ ಅದೆಷ್ಟು ಸಾಲುಗಳು ಮನಸ್ಸಿಗೆ ಹೊಳೆದು ಹೊಳೆಸಿ ಅರ್ಥವಾಗಿಯೂ ಇನ್ನು ಬೇರೆ ಅರ್ಥವಿದೆ ಅನಿಸುತ್ತದೆ. ಕವನ ಸುಂದರ ರೂಪಕಗಳನ್ನು ನಿರ್ಮಿಸಿ ಆಪ್ತವಾಗಿ ಬಿಡುತ್ತದೆ.

ಅದೇ ಅಮ್ಮನಲ್ಲಿ ಈ ಪರಿಯ ಭಾವ ವ್ಯವಹಾರ ಕಾಣುವುದಿಲ್ಲ. ಅಲ್ಲಿ ಮಗು-ಕವಿ ಆಕೆಯ ಮಮತೆಯಲ್ಲಿ ಮುಳುಗಿ ‘ಗಾಳಕ್ಕೆ ಸಿಕ್ಕ ಮೀನಾ’ಗುತ್ತದೆ. ಕರಾವಳಿಯ ನಮಗೆ ಈ ಸಾಲು ಓದಿದಾಗೆಲ್ಲ ಕಡಲ ದಡದಲ್ಲಿ ಪಟಪಟ ಪಟ ಹೊಡೆದುಕೊಳ್ಳುವ ಚಡಪಡಿಸುವ ನೀರಿನಿಂದ ಹೊರಬಿದ್ದ ಮೀನಿನ ಆತ್ಮಸಂಕಟದ ಚಿತ್ರ ಮನಸ್ಸಿಗೆ ಬರುತ್ತದೆ.

ಅವಳ ಬೆಚ್ಚಗಿನ ಆರೈಕೆಯನ್ನು ಮನ ಬಯಸುತ್ತದೆ. ಜೊತೆಜೊತೆಗೆ ಆಕೆಯ ಅತಿಯಾದ ಕಾಳಜಿ ಕವಿಗೆ ಕಾಂಗರುವಿನ ಪ್ರೀತಿಯನ್ನು ನೆನಪಿಸುತ್ತದೆ. ಇದರಿಂದ ಮುಕ್ತನಾಗುವ ಹಂಬಲಿಕೆಯನ್ನು ಆಳದಲ್ಲಿ ಹುಟ್ಟುಹಾಕುತ್ತವೆ. ಬಾಲ್ಯದಲ್ಲಿ ಗುಮ್ಮನ ಕಥೆ ಹೇಳಿದ ಅಮ್ಮನೇ ಗುಮ್ಮನಂತೆ ಭಾಸವಾಗುವುದು ಕವಿಯ ಮನೋರಂಗದಲ್ಲಿ ಸ್ವಾತಂತ್ರ್ಯದ ಬುಗ್ಗೆಯಾಗುತ್ತದೆ.
ಅದರರ್ಥ ಅವಳನ್ನು ನಿರಾಕರಿಸುವುದಲ್ಲ.

ಅಮ್ಮ ಸತ್ತಂತೆ ಕನಸಾದಾಗ ಸೊನ್ನೆಯೊಂದು ಕತ್ತ ಸುತ್ತ ಸುತ್ತಿ ಜೀವ ಬತ್ತಿಸುತ್ತದೆ. ಅಮ್ಮ ಮಗನ ಭಾವ ಮಿಡಿತದ ಜೊತೆಗೆ ವೈರುಧ್ಯಗಳು ಸಾಗುತ್ತವೆ. ಅಮ್ಮನ ಬಗ್ಗೆ ಬಹಳಷ್ಟು ಕವಿತೆಗಳು ಬಂದಿವೆ. ಆದರೆ ಈ ಕವನ ವಿಭಿನ್ನವಾಗಿ ಏಕಾಂಗಿಯಾಗಿ ಹೊಸ ಅಲಂಕಾರದಿಂದ ಕಡಿದೂ ಕಡಿಯದ ಹೊಕ್ಕುಳ ಬಳ್ಳಿಯಂತೆ ಶೋಭಿಸುತ್ತ ನಿಲ್ಲುತ್ತದೆ.

ಬಿ ಆರ್ ಎಲ್ ಕವನಗಳಲ್ಲಿ ಬೆಚ್ಚಗೆ ಹಾಸಿಕೊಂಡು ವಿಸ್ತಾರವಾಗಿ ವ್ಯಾಪಿಸಿರುವ ಕಾಮನೆಗಳ ಝೇಂಕಾರಕ್ಕೆ ಅದೆಷ್ಟು ಬಗೆಯ ರೂಪಕ ಪ್ರತಿಮೆಗಳು! ಯೌವ್ವನದ ಸುಡು ಮದ್ದು ತುಂಬಿದ ಹೃದಯಗಳಿಗೆ ಬೆಂಕಿಕಡ್ಡಿ ತಗಲಿದಂತೆ.

“ಉರಿ” ಕವನದಲ್ಲಿ,

“ನನ್ನ ಸುಡುಸುಡು ಶಾಖದಲ್ಲಿ ನಿನ್ನ ಹುರಿದು ಅರಳಿಸುತ್ತೇನೆ”

“ನನ್ನ ಉಪ್ಪು, ಖಾರ, ಎಣ್ಣೆ ನಿಂಬೆಹಣ್ಣು ಮಸಾಲೆಯಿಂದ ರುಚಿ ಮರಳಿಸುತ್ತೇನೆ”

“ನನ್ನ ವಿಷದ ಕೊಂಡಿಯ ಕಂಡು ಹೆದರುವೆಯಾ… ಒಮ್ಮೆ ಚುಚ್ಚಿಸಿ ಕೊಳ್ಳೆ”

“ಉರಿ ಉರಿ ಎಂದು ಖುಷಿಗೆ ನೀನು ಚೀರಬೇಕು.. ನಿನ್ನ ತಬ್ಬಿ ಉರಿವ ಕೊಳ್ಳಿ ಮಾಡಿ ತೀರಬೇಕು”

ಇಂತಹ ಸಾಲುಗಳು ಅನುಭವದ ಕಾವಿಗೆ ಕಾಯುತ್ತಿರುವ ಮೊಟ್ಟೆಗಳು!

‘ಇಲಿಗಳ ಪರದಾಟ’ ,’ಕೇಳಿ’, ‘ಶಶಿಯ ಮೊರೆ’ ಇಂತಹ ಕವನಗಳು ಐವತ್ತರ ನಡುಹರೆಯ ತಲುಪುವುದಾದರೂ ಹೇಗೆ?
ಚಿರಯೌವನದ ಈ ಕವಿತೆಗಳು ಪಡ್ಡೆ ಹೃದಯಗಳಿಗೆ ಉರಿ ಹಚ್ಚುತ್ತಲೇ ಇರುತ್ತದೆ.

‘ಫೋಟೋಗ್ರಾಫರ್’ ಕವನದ ಆರಂಭ ಸಂಭ್ರಮದ ಸ್ತಬ್ಧಚಿತ್ರವೇ. ಮದುವೆ ಮನೆಯಲ್ಲಿ ಆಚೀಚೆ ಓಡಾಡುವ ಘಳೀರೆಂದು ನಗು ಸುರಿಸುವ, ವಾರೆ ಕಣ್ಣಲಿ ನೋಡುವ, ಹದಿಹರೆಯದ ಗಂಡು-ಹೆಣ್ಣುಗಳ ಓಡಾಟ ಸಂಭ್ರಮ ಕೀಟಲೆ ಆ ಸ್ಥಿತಿ ದಾಟಿ ಬಂದವರಿಗೆಲ್ಲ ಮತ್ತೆ ಮಧುರ ರೋಮಾಂಚನ ನೀಡುವುದಲ್ಲದೆ ಮದುವೆ ಮನೆಯಲ್ಲಿ ಏಕಾಂಗಿಯಾಗಿ ಉಳಿವ ಫೋಟೋಗ್ರಾಫರ್ ನ ಚರ್ಯೆ ನೆನಪಿಸುತ್ತದೆ.

“ರಾತ್ರಿ ನಿದ್ದೆಗೆ ಮುಂಚೆ
ಅವರೆಲ್ಲರ ಚಹರೆಗಳನ್ನು
ಒಂದೊಂದಾಗಿ ಮೆಲುಕಾಡಿಸಿ..
ಕೊನೆಗೆ ಅವರವರ ಊರುಗಳಿಗೆ
ಅವರೆಲ್ಲಾ ಹೊರಟುಬಿಟ್ಟ ಮೇಲೆ
ಉಳಿಯುವುದು ನೆಗೆಟಿವ್ ಗಳು ಮಾತ್ರ”

ದಾರ್ಶನಿಕ ನಂತೆ ಕಾಣುವ ಈ ‘ಫೋಟೋಗ್ರಾಫರ್’ ಬದುಕಿನ ದರ್ಶನವನ್ನು ನಮಗೆ ಕಾಣಿಸುತ್ತಾನೆ.  “ಕೇಳಿ” ಅಂತಹ ಕವನಗಳಲ್ಲಿ ಪದ ಪದಗಳ ಆಟ ಲಾಸ್ಯ ಹೊಸ ಹೊಸ ಅರ್ಥ ಸೃಷ್ಟಿಸಿ ಒಡೆದು ಕಟ್ಟುವ ಚಾತುರ್ಯ ಕಾಣುತ್ತೇವೆ.

“ತರಲೆ ಕೇಳಿ
ದಳು ಪ್ರಿಯ
ನನ್ನ ನಡು
V
ನಲ್ಲಿ

ಕೈ ಬಿಡು
ವೆಯ”

ಬದುಕು ಅದೆಷ್ಟು ಮೋಹಕ ಕೊಡುಗೆ!  ರೋಮಾಂಚನಗಳನ್ನುಸುರಿಸುತ್ತಲೇ ಹೋಗುತ್ತದೆ.  ಆದರೆ ಅದನ್ನು ಪದಗಳಲ್ಲಿ ತುಂಬಿ ರಸಮಯವಾಗಿಸುವ, ಕವಿತೆ ಹೆಣೆಯುವ ಜಾಣ್ಮೆ ಸಹಜ ಕವಿಗೆ ಮಾತ್ರ ಸಾಧ್ಯ.