ಈ ಸಂಶೋಧನೆಗಳನ್ನು ಸರಿಯಾಗಿ ಗ್ರಹಿಸಿದರೆ ವಸಾಹತುಪ್ರಜ್ಞೆಯು ಕಾದಂಬರಿ ಪ್ರಕಾರದಲ್ಲಿ ಪ್ರಬಲವಾಗಿ ಬರುವ ಯುರೋಪಿನ ಕಥಾಹಂದರದ (Plot) ಮೂಲಕ ಹೇಗೆ ಭಾರತೀಯರಿಗೆ ತಮ್ಮ ಅನುಭವವನ್ನು ಹೇಳಲು ಅಡ್ಡಿಯಾಗುತ್ತದೆ ಎಂಬುದು ಅರ್ಥವಾಗುತ್ತದೆ. ಅಂದರೆ ಇಲ್ಲಿಯ ಊರು, ಕೇರಿ, ಜನ, ಜೀವನದ ಬಗ್ಗೆ ಕಾದಂಬರಿಗಳು ಹೇಳಿದರೂ ಕೂಡ ಯುರೋಪಿನ ಕಥಾಹಂದರದ ಚೌಕಟ್ಟು ಅನುಭವಗಳನ್ನು ಮಸುಕಾಗಿಸುತ್ತದೆ. ಹೀಗಾಗಿ ಎಲ್ಲವೂ ಪರಿಚಿತವಾಗಿ ಇದ್ದರೂ ಕೂಡ, ಅಲ್ಲಿ ಒಂದು ರೀತಿಯ ಅಪರಿಚಿತತೆ ಮುನ್ನೆಲೆಗೆ ಬಂದು ಬಿಡುತ್ತದೆ.
ಕನ್ನಡದ ಹೊಸ ರೀತಿಯ ಕಾದಂಬರಿಗಳ ಕುರಿತ ತಮ್ಮ ಅವಲೋಕನವನ್ನು ಡಾ. ಅಶ್ವಿನಿ ಬಿ. ದೇಸಾಯಿ ಹಾಗೂ ಚೈತ್ರ ಎಂ.ಎಸ್ ಇಲ್ಲಿ ಪ್ರಸ್ತುತಪಡಿಸಿದ್ದಾರೆ.
ಕನ್ನಡದಲ್ಲಿ ಗದ್ಯರೂಪದ ಬರವಣಿಗೆಗೆ ವಿಸ್ತಾರವಾದ ಇತಿಹಾಸವಿದೆ. ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯಿಂದ ಹಿಡಿದು ಚಂಪೂಪ್ರಕಾರದ ಭಾಗವಾಗಿ ಗದ್ಯಬರಹಗಳು ಕನ್ನಡದ ಜಗತ್ತಿನಲ್ಲಿ ನಿರಂತರವಾಗಿ ಕಾಣಿಸುತ್ತವೆ. ಸುಮಾರು 18ನೇ ಶತಮಾನದ ಕಾಲಘಟ್ಟದಿಂದ ಸಂಪೂರ್ಣವಾಗಿ ಗದ್ಯವಾಗಿ ಪ್ರಕಟವಾದ ಕೃತಿಗಳ ಪಟ್ಟಿ ದೊಡ್ಡದಿದೆ. ಅವುಗಳಲ್ಲಿ ಮುದ್ರಾಮಂಜೂಷದಿಂದ ಹಿಡಿದು ಕೃಷ್ಣರಾಜ ವಿಲಾಸ, ಚಾಮರಾಜೋಕ್ತವಿಲಾಸ, ಬಾಣಭಟ್ಟನ ಕಾದಂಬರಿಯ ಅನುವಾದ, ಮುದ್ದಣನ ರಾಮಾಶ್ವಮೇಧದವರೆಗಿನ ವಿಸ್ತಾರವಾದ ಗದ್ಯದ ಜಗತ್ತೊಂದಿದೆ.
ಈ ಗದ್ಯ ಪ್ರಕಾರವು 20ನೇ ಶತಮಾನದಲ್ಲಿ ನಮ್ಮ ಮುಂದೆ ಹೆಚ್ಚು ಪ್ರಚಲಿತದಲ್ಲಿ ಇರುವ ಕಾದಂಬರಿ ಪ್ರಕಾರಕ್ಕಿಂತ ಭಿನ್ನವೆಂದು ಅನೇಕರಿಗೆ ಅನಿಸಿದೆ. ಕೀರ್ತಿನಾಥ ಕುರ್ತಕೋಟಿಯವರಂತೂ ಕಾದಂಬರಿ ಹಾಗೂ ಕಾದಂಬರೀಪೂರ್ವ ಗದ್ಯಗಳ ನಡುವಿನ ವ್ಯತ್ಯಾಸದ ಕುರಿತು ಈಗಾಗಲೇ ಬರೆದಿದ್ದಾರೆ. ಹಾಗಿದ್ದರೆ ನಿರ್ದಿಷ್ಟವಾಗಿ ವಿಸ್ತಾರವಾದ ಗದ್ಯರೂಪದಲ್ಲಿರುವ ಎರಡು ಪ್ರಕಾರಗಳ (ಕಾದಂಬರಿಪೂರ್ವ ಮತ್ತು ಕಾದಂಬರಿಗಳ) ನಡುವಿನ ವ್ಯತ್ಯಾಸ ತಿಳಿಯಲು ಸಾಧ್ಯವೇ ಮತ್ತು ಆ ಎರಡು ವ್ಯತ್ಯಾಸಗಳು ನಮಗೆ ಇಂದಿನ ಸಾಹಿತ್ಯವನ್ನು ತಿಳಿಯಲು ಏನಾದರೂ ಸಹಾಯ ಮಾಡಬಹುದೇ ಎನ್ನುವುದು ನಮಗಿರುವ ಪ್ರಶ್ನೆ. ಆದರೆ ಈ ಎರಡು ಗದ್ಯಪ್ರಕಾರಗಳ ನಡುವಿನ ವ್ಯತ್ಯಾಸವನ್ನು ತಿಳಿಯಲು ಸರಿಯಾದ ಮಾನದಂಡಗಳು ಇರದೇ ಇರುವ ಕಾರಣ ಕಾದಂಬರೀಪ್ರಕಾರವನ್ನು ಸ್ವಲ್ಪ ಗಂಭೀರವಾಗಿ ಪರಿಶೀಲಿಸಿ ನಮ್ಮ ಸಮಸ್ಯೆಯನ್ನು ಬಿಡಿಸಿಕೊಳ್ಳಲು ಸಾಧ್ಯವೇ ಎನ್ನುವುದನ್ನು ಸ್ವಲ್ಪ ಪರಿಶೀಲಿಸೋಣ.
ಕನ್ನಡದ ಮಟ್ಟಿಗೆ ಕಾದಂಬರಿಗಳ ಪ್ರವೇಶವಾದದ್ದು ಇಂಗ್ಲೀಷ್ ಪ್ರಭಾವದಿಂದ ಎಂಬುವುದು ಎಲ್ಲರಿಗೂ ತಿಳಿದಿದೆ. ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ’, ಎಂ.ಎಸ್. ಪುಟ್ಟಣ್ಣಯ್ಯನವರ ‘ಮಾಡಿದ್ದುಣ್ಣೋ ಮಹಾರಾಯ’ ಇಂತಹ ಕನ್ನಡದ ಪ್ರಾರಂಭಿಕ ಕೃತಿಗಳ ನಂತರ ಸಾಲುಸಾಲಾಗಿ ನಾವು ಸಾಕಷ್ಟು ಹೆಸರುವಾಸಿಯಾಗಿರುವ ಕಾದಂಬರಿಕಾರರನ್ನು ಗುರುತಿಸಬಹುದು: ಮಾಸ್ತಿ, ಕುವೆಂಪು, ಅನಂತಮೂರ್ತಿ, ಅನಕೃ, ಎಂ.ಕೆ. ಇಂದಿರಾ, ತಿರುಮಲಾಂಬಾ, ತ್ರಿವೇಣಿ, ಇತ್ಯಾದಿ ಕಾದಂಬರಿಕಾರರ ಒಂದು ದೊಡ್ಡ ಪಟ್ಟಿಯೇ ಇದೆ. ಬಹುಶಃ ಇದೇ ಕಾಲಘಟ್ಟದಲ್ಲಿ ಭಾರತದ ಇನ್ನಿತರ ಭಾಷೆಗಳಲ್ಲಿ ಈ ಕಾದಂಬರಿ ಪ್ರಕಾರದ ಪ್ರವೇಶವಾದುದನ್ನು ನಾವು ಕಾಣಬಹುದು.
ಭಾರತಕ್ಕೆ ಕಥನ ಪರಂಪರೆ ಹೊಸದೇನು ಅಲ್ಲ. ರಾತ್ರಿ-ಬೆಳಗು ಅಂತಿಲ್ಲದೆ ವಾರಗಟ್ಟಲೆ, ತಿಂಗಳುಗಟ್ಟಲೆ ಕಥೆ ಹೇಳುವ, ಕೇಳುವ ಸಾಮರ್ಥ್ಯವಿರುವವರು ನಾವು. ರಾಮಾಯಣ, ಮಹಾಭಾರತ, ಭಾಗವತ, ಮಂಟೇಸ್ವಾಮಿ, ಮೈಲಾರಲಿಂಗ, ಜುಂಜಪ್ಪ ಇತ್ಯಾದಿಗಳ ಬಹು ದೊಡ್ಡ ಕಥನ ಪರಂಪರೆ ಕನ್ನಡದಲ್ಲಿದೆ. ಯಕ್ಷಗಾನ, ತಾಳಮದ್ದಲೆ, ಬಯಲಾಟ, ಗಮಕ ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಕಥೆ ಹೇಳುವ ಸಂಪ್ರದಾಯಗಳು ಹಿಂದಿನಿಂದಲೂ ಒಂದು ತಲೆಮಾರಿನಿಂದ ಇನ್ನೊಂದಕ್ಕೆ ಹಸ್ತಾಂತರವಾಗಿವೆ. ಇಂದಿಗೂ ಜೀವಂತವಾಗಿವೆ ಈ ಪ್ರಕಾರಗಳು. ಇಷ್ಟೆಲ್ಲ ಕಥಾನಕಗಳನ್ನು ಸೃಷ್ಟಿಸಿರುವ ಕನ್ನಡಿಗರಿಗೆ ಈ ಕಾದಂಬರಿ ಪ್ರಕಾರವೂ ಬಂದು ಸೇರಿದರೆ, ಇದರಲ್ಲಿ ಅಂತಹ ವಿಶೇಷವೇನೂ ಇಲ್ಲವೆಂದು ಹೇಳಬಹುದು.
ಈ ಮೇಲೆ ತಿಳಿಸಿದಂತೆ ಕಥೆ ಹೇಳುವುದು ನಮಗೆ ಹೊಸ ವಿಷಯವಲ್ಲದಿದ್ದರೂ, ಈ ಕಾದಂಬರಿಗಳು ನಮಗೆ ತಿಳಿದಿರುವ ಕಥೆಗಳಿಗಿಂತ ಸ್ವಲ್ಪ ಭಿನ್ನ. ಇವು ಯುರೋಪಿಯನ್‌ರ ತರಹ ಬೇರೊಂದು ರೀತಿಯಲ್ಲಿ ಕಥೆಯನ್ನು ಹೇಳುವ ರೀತಿ ಎಂದು ನಾವು ಗುರುತಿಸಬಹುದಾಗಿದೆ. ಮತ್ತಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ ಈ ಕಾದಂಬರಿ ಪ್ರಕಾರಕ್ಕೆ ತನ್ನದೇ ಆದ ಒಂದು ಕಥಾಹಂದರವಿರುತ್ತದೆ (Plot). ಈ ಕಾದಂಬರಿಗಳು ತಮ್ಮ ಸುತ್ತಮುತ್ತಲಿನ ಪರಿಸರದ ಸಂಗತಿಗಳನ್ನು ತೆಗೆದುಕೊಂಡು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತವೆ. ಸಮಾಜದ ಓರೆ ಕೋರೆಗಳನ್ನು ತೋರಿಸುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ ಇವು ನಮ್ಮ ಸಮಾಜದ ಕನ್ನಡಿಯಾಗಿವೆ ಎಂದು ಹೇಳಲಾಗುತ್ತದೆ.
ಈ ಮೊದಲೇ ಹೇಳಿದಂತೆ ಕಥಾಹಂದರ ಈ ಸಾಮಾಜಿಕ ಸಮಸ್ಯೆಗಳನ್ನು, ನ್ಯೂನತೆಗಳನ್ನು, ಶೋಷಣೆಯನ್ನು ಮತ್ತು ಇವುಗಳನ್ನು ಅನುಭವಿಸುತ್ತಿರುವ, ಪರಿಸ್ಥಿತಿಯ ಕೈಗೂಸಾಗಿಂದ ಪಾತ್ರಗಳ ತೊಳಲಾಟವನ್ನು ತೋರಿಸಿಕೊಡುತ್ತವೆ. ಕಥಾಹಂದರವನ್ನು ಇದಕ್ಕಾಗಿಯೇ ಹೆಣೆಯಲಾಗಿರುತ್ತದೆ. ಉದಾಹರಣೆಗೆ ಎಂ.ಕೆ. ಇಂದಿರಾರವರ ‘ಫಣಿಯಮ್ಮ’ದಲ್ಲಿ ಬಾಲ ವಿಧವೆಯೊಬ್ಬಳ ಕಥೆ, ಯು.ಆರ್. ಅನಂತಮೂರ್ತಿಯವರ ‘ಸಂಸ್ಕಾರ’ದಲ್ಲಿ ಬ್ರಾಹ್ಮಣರ ಅಗ್ರಹಾರದಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಜಾತಿವ್ಯವಸ್ಥೆಯ ದುರವಸ್ಥೆ, ಭೈರಪ್ಪನವರ ‘ವಂಶವೃಕ್ಷ’ದಲ್ಲಿ ಹಿಂದೂ ಸಮಾಜ ಎದುರಿಸುತ್ತಿರುವ ‘moral dilemma’’ಗಳು ಹೀಗೆ ಕಥಾಹಂದರ ಮತ್ತು ಅದರ ವಸ್ತು ವಿಷಯ ಪೂರ್ವ ನಿರ್ಧರಿತವಾಗಿರುವುದನ್ನು ನಾವು ಕಾಣಬಹುದು. ಈ ರೀತಿಯ ಕಾದಂಬರಿಗಳು ಅಂದರೆ ಗಟ್ಟಿಯಾದ ಕಥಾಹಂದರದ ಮೂಲಕ ನಮ್ಮ ಮಾರುಕಟ್ಟೆಯಲ್ಲಿ ಪ್ರಚಲಿತವಾಗಿ ಚಲಾವಣೆಯಲ್ಲಿರುವ ಕಾಲದಲ್ಲೇ, ಕೆಲವು ಕಾದಂಬರಿಗಳು ಸ್ವಲ್ಪ ಭಿನ್ನವಾಗಿ ಕಂಡುಬರುತ್ತಿವೆ.
ಇತ್ತೀಚಿನ ದಶಕಗಳಲ್ಲಿ ಕೆಲವು ಕಾದಂಬರಿಗಳು ಈವರೆಗೆ ಬಂದಿರುವ ಅನೇಕ ಕಾದಂಬರಿಗಳಿಗಿಂತ ಭಿನ್ನ ಎಂದು ಅನೇಕ ವಿಮರ್ಶಕರು, ತಮ್ಮೊಳಗಿನ ಚರ್ಚೆಗಳಲ್ಲಿ ಮಾತನಾಡುವುದು ಕಂಡು ಬರುತ್ತದೆ. ಹೆಸರು ಹೇಳಲು ಇಚ್ಛಿಸದ ಖ್ಯಾತ ವಿಮರ್ಶಕರೊಬ್ಬರು, ಈ ಭಿನ್ನ ಕಾದಂಬರಿಗಳ ಬಗ್ಗೆ ಮಾತನಾಡುವಾಗ ಇವು ಕಾದಂಬರಿಗಳೇ ಅಲ್ಲ ಎಂದು ವೈಯಕ್ತಿಕ ಭೇಟಿಯಲ್ಲಿ ಪ್ರತಿಪಾದನೆ ಮಾಡಿದ್ದರು.
ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ಹೊರಬಂದ ‘ಸ್ವಪ್ನ ಸಾರಸ್ವತ’ (ಗೋಪಾಲಕೃಷ್ಣ ಪೈ), ‘ಹಳ್ಳ ಬಂತು ಹಳ್ಳ’ (ಶ್ರೀನಿವಾಸ ವೈದ್ಯ), ‘ತಲೆಗಳಿ’ (ವಿ.ತೀ. ಶೀಗೆಹಳ್ಳಿ), ‘ಸ್ವಾತಂತ್ರ್ಯದ ಓಟ’ (ಬೋಳುವಾರು ಮಹಮ್ಮದ್ ಕುಂಞಿ) ಇವುಗಳನ್ನು ತೆಗೆದುಕೊಳ್ಳಬಹುದು ( ಈ ಸಾಲಿಗೆ ವಸುಧೇಂದ್ರರ ‘ಹರಿಚಿತ್ತ ಸತ್ಯ’ ಹಾಗೂ ಶಿವಾನಂದ ಕಳವೆ ಅವರ ‘ಮಧ್ಯಘಟ್ಟʼ ಮುಂತಾದವು ಸೇರಿಕೊಳ್ಳುತ್ತವೆ). ಇವುಗಳು ಒಂದೇ ಕೇಂದ್ರವಿಲ್ಲದೆ ಇರುವ ಕಥಾನಕಗಳು. ಗಟ್ಟಿಯಾದ ಕಥಾಹಂದರವಿಲ್ಲದಿರುವ ‘ಕಾದಂಬರಿಗಳು’, ಅಂದರೆ ಕಾದಂಬರಿಯ ಮುಖ್ಯ ಅಂಶವಾದ ಕಥಾಹಂದರ ಇವುಗಳಲ್ಲಿ ಅತ್ಯಂತ ದುರ್ಬಲವಾಗಿದೆ ಎಂದು ಹೇಳಬಹುದು. ಈ ಕಥೆಗಳಲ್ಲಿ ನಾಯಕನಾಗಲಿ, ನಾಯಕಿಯಾಗಲಿ, ಅಥವಾ ಇನ್ನಿತರ ಮುಖ್ಯ ಪಾತ್ರಗಳಾಗಲಿ ಸುಧಾರಣೆ ಅಥವಾ ಬದಲಾವಣೆಯ ಅಜೆಂಡಾಗಳನ್ನು ಹಿಡಿದುಕೊಂಡಂತೆ ಅನಿಸುವುದಿಲ್ಲ. ಈ ರೀತಿಯ ವಿಷಯಗಳಿಗೆ ವ್ಯತಿರಿಕ್ತವಾದ ಚಲನೆಯೊಂದು ಈ ಕಾದಂಬರಿಗಳಲ್ಲಿ ಕಾಣಸಿಗುತ್ತದೆ ಮತ್ತು ಅಧ್ಯಯನದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ. ಇಲ್ಲಿ ನಾವು ನಮ್ಮ ಸಾಂಪ್ರದಾಯಿಕ ರೀತಿಯಲ್ಲಿ ಅವ್ಯಾಹತವಾಗಿ, ಬಹಳ ವಿವರಣಾತ್ಮಕವಾಗಿ, ಒಂದು ಕಥೆಯಿಂದ ಇನ್ನೊಂದು ಕಥೆಗೆ ಹೆಣೆದುಕೊಳ್ಳುಳ, ಅತ್ಯಂತ ನಿರುಮ್ಮಳವಾಗಿ ಕಥೆ ಹೇಳುವ ಶೈಲಿಯನ್ನು ನಾವು ಕಾಣಬಹುದು. ಈ ಕಾದಂಬರಿಗಳನ್ನು ತೀರಾ ವಾಚಾಳಿಯಾಗಿರುವ ಕಾದಂಬರಿಗಳೆಂದೇ ಹೇಳಬಹುದು.
ಅತ್ಯಂತ ವಾಚಾಳಿ ಹಾಗೂ ಬಹಳ ತೆಳುವಾದ ಕಥಾಹಂದರಗಳನ್ನು ಉಳ್ಳ ಈ ಕಾದಂಬರಿಗಳು ವಿಮರ್ಶೆಯ ಜಗತ್ತಿನಲ್ಲಿ, ಅಕೆಡೆಮಿಕ್ ಜಗತ್ತಿನಲ್ಲಿ ಅಷ್ಟೇನೂ ಪ್ರಸಿದ್ಧಿ ಪಡೆದಿಲ್ಲ. ಆದರೆ ಬಹಳಷ್ಟು ಜನರಿಗೆ ಇವುಗಳು ಆಪ್ತ ಎನಿಸಿವೆ ಹಾಗೂ ತಮ್ಮ ಸಾಮುದಾಯಿಕ ಅನುಭವಗಳಿಗೆ ತೀರಾ ಹತ್ತಿರವೆನಿಸಿವೆ. ಈ ಲೇಖನದಲ್ಲಿ ಈ ಹೊಸ ಬಗೆಯ ಕಾದಂಬರಿಯೊಂದನ್ನು ತೆಗೆದುಕೊಂಡು, ಇದಕ್ಕೂ ವಸಾಹತುಶಾಹಿಯ ಕಾಲಘಟ್ಟದಲ್ಲಿ ಮತ್ತು ಅದರಿಂದ ಪ್ರಭಾವಿತವಾಗಿ ಬಂದ ಕಾದಂಬರಿಗಳಿಗೂ ಇರುವ ವ್ಯತ್ಯಾಸವನ್ನು ಸಂಕ್ಷಿಪ್ತವಾಗಿ ತೋರಿಸಲು ಪ್ರಯತ್ನಿಸಲಾಗಿದೆ. ಈ ಮೂಲಕ ಕಾದಂಬರಿ ಮತ್ತು ಕಾದಂಬರಿ ಪೂರ್ವ ಗದ್ಯ ಪ್ರಕಾರಗಳ ನಡುವಿನ ವ್ಯತ್ಯಾಸ ತಿಳಿಯಲು ಸಾಧ್ಯವೇ ಎಂದು ಯೋಚಿಸಲು ಯತ್ನಿಸಬಹುದು.
ಮೇಲೆ ಹೇಳಿದ್ದನ್ನು ಸ್ಪಷ್ಟಪಡಿಸಲು ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ದ ಕೆಲವು ಘಟನೆಗಳನ್ನು ತೆಗೆದುಕೊಳ್ಳೋಣ-
ಅಂಬಕ್ಕ ಭೋಜನ ಸಾಲೆಯ ಕಿಡಕಿಯಿಂದ ಹಿತ್ತಲಿನ ಭಾವಿ ಕಟ್ಟೆಯ ಮೇಲಿನ ಈ ಸ್ನಾನ ದೃಶ್ಯವನ್ನು ನೋಡಿ “ಅಯ್ಯ ಮನೀಗಂತು ಬಂತಲ್ಲ ಇದು ಸುಡ್ಲಿ” ಎಂದು ತನ್ನಷ್ಟಕ್ಕೆ ತಾನೇ ಒಟಗುಡುತ್ತ ಒಳಗೆ ಪಡಸಾಲೆಗೆ ಬಂದಳು, ಬಂದು ಅದೇ ಹೊರಗಿನಿಂದ ಬರುತ್ತಿದ್ದ ವಾಸುದೇವಾಚಾರ್ಯರಿಗೆ “ನಾರಾಯಣ ಬಂದದ ಖೋಡಿ” ಎಂದು ಪಿಸುಗುಟ್ಟಿದಳು. ನಾರಾಯಣ ಬಂದದ್ದನ್ನು ಕೇಳಿ ವಾಸುದೇವಾಚಾರ್ಯರು ಹಿತ್ತಲಿಗೆ ನಡೆದರು. ಆಗ ತುಳಸಕ್ಕ ತುಳಸೀ ಕಟ್ಟಿಯ ಮೇಲೆ ನಿಂತು ಒಂದು ಒಣಗಿ ಒಣಗಿ ಚಕ್ಕಿ ಆದಂತಹ ಪಂಜಾ ತೊಗೊಂಡು ತಿಕ್ಕಿ ತಿಕ್ಕಿ ನಾರಾಯಣನ ತಲೆ ಮಾರಿ ಬೆನ್ನು ವರಸಲಿಕ್ಕೆ ಹತ್ತಿದ್ದಳು. ವಾಸುದೇವಾಚಾರ್ಯರು “ಆ ಲವಡೀ ಮಗನ ಬಾಯಾಗ ಒಂದಿಷ್ಟು ಪಂಚಗವ್ಯ ಹಾಕಿ ಒಳಗ ಕರಕೊಂಡು ಬರ್ರಿ” ಎಂದು ಕೃತಕ ಕೋಪವನ್ನು ಪ್ರಕಟಿಸುತ್ತ ತಾವು ಹಿಂದೆ ಬಂದರು.
ಅವತ್ತು ನಾರಾಯಣ ಬಂದದ್ದನ್ನು ನೋಡಿ ವಾಸುದೇವಾಚಾರಿಗೆ ನಿರುಂಬಳ ಅನಿಸಿತು, ಸಂತೋಷ ಆತು……… ಆ ಸಲ ಹೋಳಿ ಹುಣ್ಣಿವೆಯ ಮುಂದೆ ಮೂರು ನಾಲ್ಕು ದಿನ ನಾರಾಯಣ ಮನೆಯ ಹೊರಗೆ ಉಳಿದು ಬಿಟ್ಟಿದ್ದನ್ನು ನೋಡಿ ಅವರೆಲ್ಲ ಗಾಬರಿಯಾಗಿದ್ದರು….. ಇಂತಹ ತಪ್ತ ವಾತಾವರಣದಲ್ಲಿ, ಕಾಮದಹನದ ಸಂಜೆ ನಾರಾಯಣ ಮನೆಗೆ ಬಂದದ್ದೇ ಅವರಿಗೆಲ್ಲ ಒಂದು ನಿರಾಳವಾದ ನಿಶ್ಚಿಂತತೆಯನ್ನು ತಂದಿತ್ತು …. ವಾಸುದೇವಾಚಾರು “ಆ ಲವಡಿ ಮಗನ ಬಾಯಾಗ ಒಂದಿಷ್ಟು ಪಂಚಗವ್ಯ ಹಾಕಿ ಒಳಗ ಕರಕೊಂಡು ಬರ್ರಿ” ಎಂದು ಹೇಳಿದ್ದನ್ನು ಕೇಳಿ ಅಂಬಕ್ಕ ಸಿಡಿಮಿಡಿಗೊಂಡಳು. ಅವಳು ನಾರಾಯಣನ ಬೊಗಸೆಯೊಳಗ ದೊನ್ನಿಯಿಂದ ಪಂಚಗವ್ಯ ಸುರುವುತ್ತ “ಈ ಮನ್ಯಾಗಿನ್ನ ದೊಡ್ಡ ಹಂಡೇದ್ದ ತುಂಬ ಪಂಚಗವ್ಯ ಮಾಡಿ ಇಟಗೋಬೇಕಾಗತದ. ಅಷ್ಟೊಂದು ಗೋಮೂತ್ರ ಶಗಣಿ ಎಲ್ಲಿಂದ ತರಬೇಕೋ ಏನೋ?” ಎಂದು ಗೊಣಗದೇ ಬಿಡಲಿಲ್ಲ.
ಈ ಕಥೆಗಳಲ್ಲಿ ನಾಯಕನಾಗಲಿ, ನಾಯಕಿಯಾಗಲಿ, ಅಥವಾ ಇನ್ನಿತರ ಮುಖ್ಯ ಪಾತ್ರಗಳಾಗಲಿ ಸುಧಾರಣೆ ಅಥವಾ ಬದಲಾವಣೆಯ ಅಜೆಂಡಾಗಳನ್ನು ಹಿಡಿದುಕೊಂಡಂತೆ ಅನಿಸುವುದಿಲ್ಲ. ಈ ರೀತಿಯ ವಿಷಯಗಳಿಗೆ ವ್ಯತಿರಿಕ್ತವಾದ ಚಲನೆಯೊಂದು ಈ ಕಾದಂಬರಿಗಳಲ್ಲಿ ಕಾಣಸಿಗುತ್ತದೆ ಮತ್ತು ಅಧ್ಯಯನದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ.
ಪಂತರ ಮನೆಯ ಮದುವೆ ಎಂತಲೋ, ಅಥವಾ ನವಲಗುಂದದ ಸಣ್ಣ ಸಮಾಜದ ನಿಂತ ನೀರಿನ ಜನಜೀವನದಲ್ಲಿ ಕ್ವಚಿತ್ತಾಗಿ ಆಗೀಗ ಬರುವ ಸಂಭ್ರಮವೆಂತಲೋ, ಅಂತೂ ವಾಸುದೇವಾಚಾರ್ಯರ ಮನೆಯ ಮದುವೆಗಳಿಗೆ ಒಂದು ಅನುರಣಿತವಾಗಿರುತ್ತದೆ. (ಪುಟ ಸಂ. 73-74)
ಈ ಮೇಲೆ ವಿವರಿಸಲಾದ ಸಂಗತಿಗಳನ್ನು ನಾವೊಮ್ಮೆ ಗಂಭೀರವಾಗಿ ತೆಗೆದುಕೊಳ್ಳೋಣ. ಈ ವಿವರಣೆಗಳು ಹೋಳಿ ಹುಣ್ಣಿಮೆಯ ಆಚರಣೆಯ ಬಗ್ಗೆ ನಮ್ಮ ಗಮನ ಸೆಳೆಯುತ್ತವೆ. ಇದಕ್ಕಿಂತ ಮೊದಲು ನವಲಗುಂದ ಹಳ್ಳಿಯಲ್ಲಿ ನಡೆದ ಹೋಳಿ ಹುಣ್ಣಿಮೆಯ ವಿವರಣೆ ಮತ್ತು ನಾರಾಯಣ ಅನ್ನುವ ಪಾತ್ರ ಹೋಳಿಯ ಅಂಗವಾಗಿ ಓಕಳಿಯ ಬಣ್ಣಗಳಲ್ಲಿ ಮಿಂದೆದ್ದು ಅವನ ವಸ್ತ್ರಗಳು ಹೇಗೆ ವರ್ಣರಂಜಿತವಾಗಿದ್ದವು ಎನ್ನುವ ವಿವರಣೆಯೂ ಬರುತ್ತದೆ. ಬಹಳ ದಿನಗಳ ನಂತರ ಮನೆಗೆ ಮರಳಿದ ಸದಸ್ಯನನ್ನು ಪ್ರೀತಿಯಿಂದ ಬಯ್ದು ಹೇಗೆ ಸಂಭ್ರಮಿಸುತ್ತಾರೆ ಎನ್ನುವುದೂ ಈ ವಿವರಣೆಯಿಂದ ಗೊತ್ತಾಗುತ್ತದೆ. ನಾರಾಯಣ ಎಲ್ಲೆಲ್ಲಿ ಹೋಗಿದ್ದ, ಹಾಗಾಗಿ ಅವನನ್ನು ಹೇಗೆ ಶುಚಿಗೊಳಿಸಬೇಕು, ಸ್ನಾನ ಮಾಡಿಸುವರೊಬ್ಬರು, ಪಂಚಗವ್ಯ ನೀಡಿ ಎನ್ನುವವರೊಬ್ಬರು, ಹೀಗೆ ಅನೇಕ ಕಾರ್ಯಗಳಿಗೆ ವಾಸುದೇವಾಚಾರ್ಯರ ಇಡೀ ಕುಟುಂಬ ಸಾಕ್ಷಿಯಾಗುತ್ತದೆ. ದಿನವೂ ಕೂಡ ಹೀಗೆ ಏನೇನೋ ಕೆಲಸ ಕಾರ್ಯಗಳು ವಾಸುದೇವಾಚಾರ್ಯರ ಮನೆಯಲ್ಲಿ, ನವಲುಗುಂದ ಹಳ್ಳಿಯಲ್ಲಿ ನಡೆಯುತ್ತಲೇ ಇರುವುದನ್ನು, ಶ್ರೀನಿವಾಸ ವೈದ್ಯರ ವಾಚಾಳಿ ಎನ್ನಿಸುವ ವಿವರಣೆಗಳಲ್ಲಿ ನಾವು ನೋಡಬಹುದು. ಆದರೆ ಈ ವಿವರಗಳನ್ನು ಇಟ್ಟುಕೊಂಡು ಅವರೊಂದು ನಿರ್ಣಯ ಮಾಡುವ ರೀತಿಯಲ್ಲಿ ಒಂದು ವಾಕ್ಯವನ್ನು ಬರೆಯುತ್ತಾರೆ. ವೈದ್ಯರ ಪ್ರಕಾರ “ಪಂತರ ಮನೆಯ ಮದುವೆ ಎಂತಲೋ, ಅಥವ ನವಲಗುಂದದ ಸಣ್ಣ ಸಮಾಜದ ನಿಂತ ನೀರಿನ ಜನಜೀವನದಲ್ಲಿ ಕ್ವಚಿತ್ತಾಗಿ ಆಗೀಗ ಬರುವ ಸಂಭ್ರಮವೆಂತಲೋ…” ಎನ್ನುವಲ್ಲಿ ಈ ಅಕಾಲಿಕ ಸಂಭ್ರಮಗಳನ್ನು ಬಿಟ್ಟರೆ ನವಲಗುಂದದ ಜೀವನ ನಿಂತ ನೀರಿನಂತಿದೆ. ಬಹಳಷ್ಟು ಬಾರಿ ಓದುಗರಾಗಿ ನಾವು ಇದನ್ನು ಬಹಳ ಮಹತ್ವದೆಂದು ಪರಿಗಣಿಸುವುದಿಲ್ಲ. ಆದರೆ ಈ ತರಹದ ಪ್ರತಿಪಾದನೆಗಳು ಪದೇ ಪದೇ ಮರುಕಳಿಸುತ್ತವೆ.
ಇನ್ನೊಂದು ಉದಾಹರಣೆ-
ಸೋನಕ್ಕನ ಸಾವು ಪಂತರ ಮನೆತನದ ಏಕತಾನದ ನೀರಸ ಜೀವನ ಪ್ರವಾಹದ ದಿಕ್ಕನ್ನೇ ಬದಲಿಸಿದ ಒಂದು ಮಹತ್ವದ ಕಾಲಖಂಡವಾಯಿತು ಎನ್ನಬಹುದೇನೋ? ಮುಂದೆ ಎಷ್ಟೋ ವರ್ಷ ಪಂತರ ಮನೀ ಮಂದಿ ಏನಾರ ಸುದ್ದೀ ಸುಖ ದುಃಖ ಹೇಳಿಕೊಳ್ಳುವ ಮುಂದೆ ಸೋನೀ ಸಾವಿನಿಂದಲೇ ಕಾಲಗಣನೆ ಮಾಡತೊಡಗಿದರು. (ಪುಟ ಸಂ.92)
ಮತ್ತೆ
ಬೆಳ್ಳಿಗ್ಗೆಯಿಂದ ಮಧ್ಯಾಹ್ನ ಬಲಿಯುವವರೆಗೆ ಪಡಸಾಲೆಯಲ್ಲಿ ರೋಗಿಗಳನ್ನು ನೋಡಿ, ವಾಸುದೇವಾಚಾರ್ಯರು ಹಿತ್ತಲಿಗೆ ಬಂದು, ಬಾವಿಯಿಂದ ತಾವೇ ಏಳೆಂಟು ಕೊಡ ನೀರು ಸೇದಿ ದಬದಬನೇ ಸುರಿದುಕೊಂಡು ಸ್ನಾನ ಮುಗಿಸಿ, ದೇವರಕಟ್ಟೆಗೆ ಬಂದು ಪೂಜೆಗೆ ಕುಳಿತರೆ, ಎರಡು ಗಂಟೆಯವರೆಗೆ ನಿತ್ಯ ಅಖಂಡ ಪೂಜೆಯಾಗಬೇಕು. ಒಮ್ಮೊಮ್ಮೆ ಆಚಾರ್ಯರ ಪೂಜೆ ಮುಗೀಬೇಕಾದರೆ ಮುನಸೀಪಾಲಿಟೀದು ಮೂರರ ಗಂಟೆ ಬಾರಿಸಿರುತ್ತದೆ.
ಆಮೇಲೆ ಭೋಜನ ವಾಮಕುಕ್ಷಿ ಎಲ್ಲ ಮುಗಿಸಿ, ಇಳಿ ಮಧ್ಯಾಹ್ನಕ್ಕೆ ಬರೀ ಮೈಮೇಲೆ ಒಂದು ಉಪ್ಪರಣಿ ಹೊದ್ದು ಲಾಲಗಡಿ ಆಂಜನೇಯನ ದರ್ಶನಕ್ಕೆ ನಡೆಯುತ್ತಾರೆ. ಅಲ್ಲಿ ಆಗೊಮ್ಮೆ ಈಗೊಮ್ಮೆ ಪುರಾಣ ಪುಣ್ಯ ಕಥೆಗಳೋ ಹರಿಕೀರ್ತನೆಗಳೋ ನಡೆದಿದ್ದರೆ ಕೇಳಿ, ಇಲ್ಲವೇ ಮುಗಿಲಿಗೆ ತೆರೆದುಕೊಂಡಿದ್ದ ಹೊರಗಿನ ಕಲ್ಲುಬೆಂಚಿಗೆ ಆತು ಕುಳಿತು ಮಗದುಮನ ಚೌಘಡಾದ ಚೇತೋಹಾರಿ ಆಲಾಪಗಳೊಳಗ, ತಮ್ಮನ್ನು ತಾವೇ ತೇಲಿ ಬಿಟ್ಟು ತೃಪ್ತಿಪಟ್ಟು ಮನೆಯ ಕಡೆಗೆ ಹೆಜ್ಜೆ ಬೆಳೆಸುತ್ತಿದ್ದರು.
ಇಂತಹ ನಿಂತ ನೀರಿನ ಜೀವನದಾಗ ಸಹಿತ ಒಮ್ಮೊಮ್ಮೆ ಬುದ್ಬುದಗಳು ಏಳತಿದ್ದವು. (ಪು.ಸಂ.106)
ಎಷ್ಟೆಲ್ಲ ಘಟನೆಗಳು ನವಲಗುಂದದಲ್ಲಿ ಘಟಿಸುತ್ತವೆ! ನವಲಗುಂದವಷ್ಟೇ ಅಲ್ಲ ಯಾವುದೇ ಹಳ್ಳಿಯಲ್ಲೂ ನಡೆಯುತ್ತಿರುತ್ತವೆ. ಅವನ್ನೆಲ್ಲ ಅಷ್ಟೇ ಸಂಭ್ರಮದಿಂದ ವಿವರಿಸುವ ವೈದ್ಯರಿಗೆ, ಅದನ್ನೆಲ್ಲ ವಿವರಿಸಿಯಾದ ಮೇಲೆ ನವಲಗುಂದ ನಿಂತ ನೀರಾಗಿರುವ ಹಳ್ಳಿ ಎಂದೇಕೆ ಷರಾ ಬರೆಯುತ್ತಾರೆ ಎಂಬ ಪ್ರಶ್ನೆ ಧುತ್ತೆಂದು ಬಂದು ನಿಲ್ಲುತ್ತದೆ. ಎಲ್ಲಿಯೂ ಕೂಡ ದಿನವೂ ಮದುವೆ-ಮುಂಜಿಗಳು ನಡೆಯಲು ಸಾಧ್ಯವಿಲ್ಲ, ಹಾಗೆಯೇ ಮೇಲೆ ವಿವರಿಸಿದಂತೆ ಎಲ್ಲ ಸಾವುಗಳೂ ‘ಸೋನಕ್ಕ’ನ ಸಾವಿನಂತೆ ಜೀವನದ ದಿಕ್ಕನ್ನು ಬದಲಿಸಲೂ ಸಾಧ್ಯವಿಲ್ಲ. ಮುಂಜಾನೆಯಿಂದ ವಿವಿಧ ಆಚರಣೆಗಳಲ್ಲಿ, ಕಾರ್ಯಗಳಲ್ಲಿ, ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿರುವ ವಾಸುದೇವಾಚಾರ್ಯರ ಜೀವನ ನಿಂತ ನೀರೇಕೆ ಆಗುವುದು? ದಿನವೂ ಹಬ್ಬ ಹರಿದಿನಗಳು, ಮದುವೆ-ಮುಂಜಿಗಳು ಸಾವು-ನೋವುಗಳು ಆಗುವುದಿಲ್ಲ, ನವಲಗುಂದದಲ್ಲಿ ಅಷ್ಟೇ ಅಲ್ಲ, ಎಲ್ಲ ಭಾರತೀಯರು ಒಂದಲ್ಲಾ ಒಂದು ದಿನನಿತ್ಯದ ಆಚರಣೆಯಲ್ಲಿರುವುದು ಸರ್ವೇಸಾಮಾನ್ಯ. ಹಾಗಿದ್ದ ಮೇಲೆ ಇಷ್ಟೆಲ್ಲ ವಿವರಿಸಿದಾಗಲೂ ವೈದ್ಯರಿಗೆ ನವಲಗುಂದದ ಸಮಾಜ ನಿಂತ ನೀರು ಎಂದೇಕೆ ಅನ್ನಿಸುವುದು? ಆಗಿನ ನವಲಗುಂದದ ಚಿತ್ರಣವನ್ನು ಬಿಟ್ಟು, ಈಗಿನ ನಮ್ಮ ಜನಜೀವನವನ್ನು ಗಮನಿಸೋಣ.
ಒಬ್ಬ ಆಧುನಿಕ ವೈದ್ಯನ ಬದುಕನ್ನು ಉದಾಹರಣೆಯಾಗಿ ನೋಡಿದರೆ, ಅವನು ಬೆಳಗ್ಗೆದ್ದು, ನಿತ್ಯ ಕರ್ಮಗಳನ್ನು ಎಂದಿನಂತೆ ಮಾಡಿ, ಯಾವುದೋ ರೂಢಿಸಿಕೊಂಡ ಆಚರಣೆಗಳನ್ನು ಮಾಡಿ, ಕೆಲಸಕ್ಕೆ ಹೋಗಿ, ಮುಗಿಸಿಕೊಂಡು ಬಂದು ಮನೆಗೆ ಬಂದು ಮತ್ತೆ ತನ್ನ ರೂಢಿಗತವಾದ ಕೆಲಸಗಳನ್ನು ಮಾಡಿ ತನ್ನ ದಿನವನ್ನು ಮುಗಿಸುತ್ತಾನೆ. ಇದು ಜೀವನ ಜೀವಿಸುವುದಲ್ಲವೇ? ಇದನ್ನು ಬಿಟ್ಟು ಬೇರೇನು ಮಾಡಬಲ್ಲೆವು? ಇದು ಹೇಗೆ ನಿಂತ ನೀರಾಗುತ್ತದೆ? ಒಟ್ಟಿನಲ್ಲಿ ವೈದ್ಯರ ಪ್ರಕಾರ ನವಲಗುಂದದ ಸಮಾಜ, ಪಂತರ ವಾಸುದೇವಾಚಾರ್ಯರ ಜೀವನ ಇತ್ಯಾದಿಗಳು ನಿಂತ ನೀರಾಗಿರುವ ಸಮಾಜದ ಪ್ರತಿನಿಧಿಯಾಗುತ್ತದೆ. ಅವರೇ ವಿವರಿಸುವಂತೆ ಪಂತರ ಮನೆ ಇರಬಹುದು, ವಾಸುದೇವಾಚಾರ್ಯರ ಜೀವನ ಇರಬಹುದು, ನವಲಗುಂದದ ಸಮಾಜವಿರಬಹುದು, ಎಲ್ಲವೂ ಅತ್ಯಂತ ಚಟುವಟಿಕೆಗಳಿಂದ ಕೂಡಿ ಸಾಕಷ್ಟು ಸಂಭ್ರಮಿಸುವ ಸಮಾಜವಾಗಿ ಕಾಣುತ್ತದೆ. ಹಾಗಾದರೆ ಇಂತಹ ಚಲನಶೀಲ ಸಮಾಜವೊಂದು ನೀರಸವೂ, ನಿಂತ ನೀರೂ ಆಗಲು ಹೇಗೆ ಸಾಧ್ಯ? ಪಠ್ಯದೊಳಗಿನ ವಿವರಣೆಗಳು ಈ ಸಮಾಜವಾಗಲಿ, ಪಂತರ ಕುಟುಂಬ ಅಥವಾ ವಾಸುದೇವಾಚಾರ್ಯರ ಜೀವನ ಏಕೆ ನೀರಸ, ನಿಂತ ನೀರು ಎಂದು ವಿವರಿಸುವಂತೆ ಕಾಣುವುದಿಲ್ಲ. ಹಾಗಾದರೆ ಈ ನಿಂತ ನೀರಿನ ಸಮಾಜದ ಚಿತ್ರಣ ಎಲ್ಲಿಂದ ಬಂದಿರಬಹುದು? ಇದನ್ನು ಯಾಕೆ ಕಾದಂಬರಿಕಾರರು ಬಳಸಿರಬಹುದು ಎನ್ನುವ ಪ್ರಶ್ನೆ ಹಾಗೆಯೇ ಉಳಿದುಬಿಡುತ್ತದೆ. ಈ ರೀತಿ ಪದೇ ಪದೇ ಮರಳುವ ನಿಂತ ನೀರಿನ, ನೀರಸ ಬದುಕಿನ ಕುರಿತ ವಾಕ್ಯಗಳನ್ನು ಪರಿಶೀಲನೆ ಮಾಡಿದರೆ, ಈ ಅಭಿಪ್ರಾಯ ಎಲ್ಲಿಂದ ಬಂದಿರಬಹುದು ಎಂದು ಊಹಿಸಬಹುದಾಗಿದೆ.
ವಸಾಹತುಶಾಹಿಯ ಸಂದರ್ಭದಲ್ಲಿ ಭಾರತವನ್ನು ತಮ್ಮ ಸಾಂಸ್ಕೃತಿಕ ಅನುಭವದಿಂದ ಅರ್ಥಮಾಡಿಕೊಳ್ಳಲು ಯೂರೋಪಿಯನ್ನರು ಯತ್ನಿಸಿದರು. ಅವರು ತಮಗಿಂತ ಭಿನ್ನವಾಗಿರುವ ಸಂಸ್ಕೃತಿಯ ವಿವರಣೆಯನ್ನು ಕೊಟ್ಟರು. ಜೇಮ್ಸ್ ಮಿಲ್, ಹೆಗೆಲ್, ವೆಬರ್ ಮತ್ತು ಮುಖ್ಯವಾಗಿ ಕಾರ್ಲ್ ಮಾರ್ಕ್ಸ್ (Asiatic Mode of Production) ಭಾರತೀಯರನ್ನು, ಫ್ಯೂಡಲ್, ಟ್ರೈಬಲ್ ಹೀಗೆ ಅತ್ಯಂತ ಪ್ರಾಚೀನವಾದ ಸಮಾಜವೆಂದು ವಿವರಣೆ ನೀಡಿದರು. ಅವರ ಸಮಾಜದಲ್ಲಿ ಪರಿಚಿತವಾಗಿರುವ ಸಾಮಾಜಿಕ ಕ್ರಾಂತಿ, ಸುಧಾರಣೆ, ವರ್ಗ ಸಂಘರ್ಷಗಳು ಇತ್ಯಾದಿಗಳು ಅವರಿಗೆ ಕಾಣಿಸಲಿಲ್ಲ. ಹಾಗಾಗಿ ಅವರಿಗೆ ಭಾರತ stagnant society ಅಥವಾ ನಿಶ್ಚಲ, ನಿಂತ ನೀರಾಗಿರುವ ಸಮಾಜದಂತೆ ಕಂಡಿತು. ಅದು ಪಾಶ್ಚಾತ್ಯರ ಅನುಭವ. ಅಂದರೆ ಭಾರತೀಯ ಸಮಾಜ ನಿಂತ ನೀರು, ಅಥವಾ ಚಲನೆಯಿಲ್ಲದ್ದು ಎನ್ನುವ ಪಶ್ಚಿಮದ ಅನುಭವ ಇಂದು ನಮ್ಮ ಸಾಮಾನ್ಯ ಜ್ಞಾನವಾಗಿ ಬಿಟ್ಟಿದೆ. ಎಷ್ಟೆಂದರೆ ನಾವು ಅದನ್ನು ರೂಢಿಗತವಾಗಿ ಬಳಸುತ್ತಿದ್ದೇವೆ. ಅಂದರೆ ಯುರೋಪಿಯನ್ನರ ಭಾರತದ ಕುರಿತ ಅನುಭವಗಳೇನು ಮತ್ತು ಅದರಿಂದ ಹುಟ್ಟಿದ ಚಿತ್ರಗಳೇನು ಎಂದು ಅಧ್ಯಯನ ಮಾಡದೇ ಇದ್ದರೂ ಕೂಡ ನಾವು ಯುರೋಪಿಯನ್ನರ ಭಾರತೀಯ ಸಮಾಜದ ವಿವರಣೆಗಳನ್ನು ಅತ್ಯಂತ ಸಹಜವಾಗಿ ಸಾಮಾನ್ಯಜ್ಞಾನವಾಗಿ ಬಳಸುತ್ತಿದ್ದೇವೆ. ಇದರರ್ಥ ಶ್ರೀನಿವಾಸ ವೈದ್ಯರಿಗೆ ಇದು ಪ್ರಜ್ಞಾಪೂರ್ವಕವಾಗಿ ಬಂದ ಚಿಂತನೆಗಳಲ್ಲ. ವೈದ್ಯರನ್ನು ಸೇರಿದಂತೆ ಎಲ್ಲ ಭಾರತೀಯರಿಗೂ ಈ ರೀತಿಯ ಅನೇಕ ವಿವರಣೆಗಳು ಇಂದು ಭಾರತೀಯ ಸಮಾಜದ ಕುರಿತ ಸಾಮಾನ್ಯಜ್ಞಾನ ಹಾಗು ವೈಜ್ಞಾನಿಕ ವಿವರಣೆಗಳ ರೂಪ ಪಡೆದಿವೆ. ನವಲಗುಂದದ ಚಲನಶೀಲ ಬದುಕಿನ ಬಗ್ಗೆ ಎಷ್ಟೆಲ್ಲ ವಿವರಣೆ ಕೊಟ್ಟ ವೈದ್ಯರಿಗೆ ಈ ಸಮಾಜ ನಿಂತ ನೀರು ಎಂದು ಕಾಣಿಸಲು ಹೇಗೆ ಸಾಧ್ಯ? ಅಂದರೆ ಸದಾ ಚಲನಶೀಲವಾಗಿರುವ ಜಡವಲ್ಲದ ಸಾಮಾಜಿಕ ಬದುಕು ಶ್ರೀನಿವಾಸ ವೈದ್ಯರ ಅನುಭವದಲ್ಲಿದೆ. ಅದನ್ನು ಅವರು ಬಹಳ ಚೆನ್ನಾಗಿ, ನವಿರಾಗಿ ವಿವರಿಸಿದ್ದಾರೆ.
ಆದರೆ ಇವತ್ತು ಸಾಮಾನ್ಯ ಜ್ಞಾನವಾಗಿ ಬಿಟ್ಟಿರುವ ಭಾರತದ ಕುರಿತ ಯುರೋಪಿನ ಚಿತ್ರಣ ಅವರ ಅನುಭವವನ್ನು ಮಸುಕಾಗಿಸಿದಂತೆ ತೋರುತ್ತದೆ. ಹಾಗಾಗಿ ಅವರ ಅನುಭವಕ್ಕೂ ಮತ್ತು ಅದರ ವಿವರಣೆಗೂ ಏನೂ ಸಂಬಂಧ ಕಾಣಿಸುವುದಿಲ್ಲ. ಭಾರತದಲ್ಲಿ ಸಮಾಜ ನಿಂತ ನೀರಾಗಿದೆ ಎಂಬ ವಿವರಣೆ ಅಲ್ಲಲ್ಲಿ ನುಸುಳಿದರೂ ಕೂಡ ಅವರ ಅನುಭವವನ್ನು ಅತ್ಯಂತ ಸಹಜವಾಗಿ, ಸುಂದರವಾಗಿ, ತುಂಬಾ ವಿವರಗಳೊಂದಿಗೆ ನಮ್ಮ ಮುಂದೆ ನಿರೂಪಿಸುತ್ತಾರೆ. ಇದನ್ನೇ ನಾವು ಈ ಮೊದಲು ಬಂದ ಕಾದಂಬರಿಗಳಿಗಿಂತ ಈ ಕಾದಂಬರಿ ಭಿನ್ನವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದು.
ಒಂದು ಕಡೆ ಶ್ರೀನಿವಾಸ ವೈದ್ಯರಿಗೆ ತಮ್ಮ ಸುತ್ತಲಿನ ಪರಿಸರದ ಆಳವಾದ ಅನುಭವವಿದೆ; ಇನ್ನೊಂದೆಡೆ ಭಾರತದ ಸಮಾಜದ ಕುರಿತ ಯೂರೋಪಿನ ವಿವರಣೆಯಿದೆ. ಮೇಲೆ ಕೊಟ್ಟ ಉದಾಹರಣೆಗಳಲ್ಲಿ ಅವರ ಅನುಭವದ ಅಪಾರ ವಿವರಗಳೊಂದಿಗೆ ವಾಚಾಳಿ ಅನ್ನಿಸುವ ಮಟ್ಟಿಗೆ, ನಿರೂಪಣೆ ಮಾಡಿದ್ದಾರೆ. ಆದರೆ ಭಾರತದ ಕುರಿತ ಯೂರೋಪಿನವರ ಚಿತ್ರಣ ಇಲ್ಲಿ ನುಸುಳಿ ಅವರೇ ಕೊಟ್ಟ ಅನುಭವಗಳಿಗೆ ವಿರುದ್ಧವಾಗಿ ಬರುತ್ತವೆ ಎಂಬುದು ಅತ್ಯಂತ ಗಮನಾರ್ಹ ಸಂಗತಿಯಾಗಿದೆ. ಏಕೆಂದರೆ ವಸಾಹತುಶಾಹಿಯೊಂದಿಗೆ ಬಂದ ಕಾದಂಬರಿಗಳು ಭಾರತದ ಕುರಿತ ಯೂರೋಪಿಯನ್ನರ ನಿರೂಪಣೆಯನ್ನು ಪುನರುತ್ಪಾದನೆ ಮಾಡುವ ಪ್ರಕಾರ ಎಂದು ಹೇಳಬಹುದಾಗಿದೆ. ಪ್ರವೀಣ್ ಟಿ.ಎಲ್ ಅವರ ‘ಸಮಾಜದ ಪ್ರತಿನಿಧೀಕರಣ: ಸಮಾಜ ವಿಜ್ಞಾನಗಳು ಮತ್ತು ಸಾಮಾಜಿಕ ಕಾದಂಬರಿಗಳು’ ಹಾಗೂ ಮಂಜುಶ್ರೀ ಎಂ. ಇವರ ‘An Enquiry into the Impact of Orientalism on Indian Novels’ ಎಂಬ ಸಂಶೋಧನೆಗಳು, ಹೇಗೆ ಕಾದಂಬರಿಗಳು ಯುರೋಪಿನ ಭಾರತದ ಕುರಿತ ಚಿತ್ರಣಗಳ ಪುನರುತ್ಪಾದನೆಯನ್ನು ಮಾಡುತ್ತಿವೆ ಎಂಬುದನ್ನು ಅತ್ಯಂತ ವೈಜ್ಞಾನಿಕವಾಗಿ ತೋರಿಸಿಕೊಟ್ಟಿವೆ. ಕನ್ನಡದ ಹಾಗೂ ಇತರ ಭಾರತೀಯ ಭಾಷೆಗಳ ಪ್ರಮುಖ ಕಾದಂಬರಿಗಳನ್ನು ತೆಗೆದುಕೊಂಡು ಯುರೋಪಿನವರ ಭಾರತದ ಕುರಿತ ಅನುಭವವನ್ನು ಕಾದಂಬರಿಗಳು ಪುನರುತ್ಪಾದಿಸುವುದನ್ನು ಸಾಕ್ಷ್ಯಾಧಾರಗಳೊಂದಿಗೆ ತೋರಿಸಿವೆ.
ಈ ಸಂಶೋಧನೆಗಳನ್ನು ಸರಿಯಾಗಿ ಗ್ರಹಿಸಿದರೆ ವಸಾಹತುಪ್ರಜ್ಞೆಯು ಕಾದಂಬರಿ ಪ್ರಕಾರದಲ್ಲಿ ಪ್ರಬಲವಾಗಿ ಬರುವ ಯುರೋಪಿನ ಕಥಾಹಂದರದ (Plot) ಮೂಲಕ ಹೇಗೆ ಭಾರತೀಯರಿಗೆ ತಮ್ಮ ಅನುಭವವನ್ನು ಹೇಳಲು ಅಡ್ಡಿಯಾಗುತ್ತದೆ ಎಂದು ಅರ್ಥವಾಗುತ್ತದೆ. ಅಂದರೆ ಇಲ್ಲಿಯ ಊರು, ಕೇರಿ, ಜನ, ಜೀವನದ ಬಗ್ಗೆ ಕಾದಂಬರಿಗಳು ಹೇಳಿದರೂ ಕೂಡ ಯುರೋಪಿನ ಕಥಾಹಂದರದ ಚೌಕಟ್ಟು ಅನುಭವಗಳನ್ನು ಮಸುಕಾಗಿಸುತ್ತದೆ. ಹೀಗಾಗಿ ಎಲ್ಲವೂ ಪರಿಚಿತವಾಗಿ ಇದ್ದರೂ ಕೂಡ, ಅಲ್ಲಿ ಒಂದು ರೀತಿಯ ಅಪರಿಚಿತತೆ ಮುನ್ನೆಲೆಗೆ ಬಂದು ಬಿಡುತ್ತದೆ. ಹೀಗಾಗಿಯೇ ಈ ರೀತಿಯ ಕಾದಂಬರಿಗಳು ಜನ ಸಾಮಾನ್ಯರಿಗೆ ಆಪ್ತವಾದಂತೆ ಅನಿಸುವುದಿಲ್ಲ. ಶ್ರೀನಿವಾಸ ವೈದ್ಯರೂ ಕೂಡ ಇದಕ್ಕೆ ಹೊರತೇನಲ್ಲ; ಅದಕ್ಕೆ ಅವರು ತಮ್ಮ ಸುತ್ತಲಿನ ಸಮಾಜವನ್ನು ನಿಂತ ನೀರು ಎಂದು ಹೇಳುತ್ತಾರೆ. ಆದರೆ ಗಮನಾರ್ಹ ಸಂಗತಿ ಎಂದರೆ, ಅವರ ಅಧಿಕವಾದ ವಿವರಣೆಗಳು ಅದೇ ಪರಿಸರದ ಬಗ್ಗೆ ವ್ಯತಿರಿಕ್ತವಾಗಿ ಹೇಳುತ್ತವೆ. ಹಾಗಾಗಿ ವೈದ್ಯರು ತಮಗೆ ಗೊತ್ತಿಲ್ಲದೆಯೇ ಕಾದಂಬರಿಯೊಳಯೇ ಈ ಚೌಕಟ್ಟನ್ನು ಮೀರಲು ಪ್ರಯತ್ನಿಸುವುದನ್ನು ನಾವು ಗುರುತಿಸಬಹುದಾಗಿದೆ.
ಕಾದಂಬರಿ ಪ್ರಕಾರಕ್ಕೂ ಮತ್ತು ಭಾರತೀಯರು ತಮ್ಮ ಅನುಭವಗಳನ್ನು ಕಾದಂಬರಿಯಲ್ಲಿ ವ್ಯಕ್ತಪಡಿಸುವುದಕ್ಕೂ ಇರುವ ಸಂಬಂಧ, ಹಾಗೂ ಭಾರತೀಯರ ಅನುಭವಗಳು ಕಾದಂಬರಿಯಲ್ಲಿ ಮಸುಕಾಗುವ ಸಂಗತಿಯ ಹಿನ್ನೆಲೆಯಲ್ಲಿ ನಮ್ಮ ಮೂಲ ಪ್ರಶ್ನೆಗೆ ಮರಳೋಣ. ಇಲ್ಲಿ ಕೀರ್ತಿನಾಥ ಕುರ್ತಕೋಟಿಯವರು ಗುರುತಿಸಿರುವಂತೆ ಕಾದಂಬರಿ ಪೂರ್ವ ಗದ್ಯ ಬರಹಗಳಿಗೂ ಹಾಗು ಕಾದಂಬರಿಗಳಿಗೂ ಇರುವ ವ್ಯತ್ಯಾಸದ ಸ್ವರೂಪವೇನು ಎನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಕಾದಂಬರಿಪೂರ್ವ ಗದ್ಯಗಳು ಕಾದಂಬರಿಯಂತೆ ಯಾವುದೇ ಕಥಾಹಂದರವಿಲ್ಲದೇ ಇರುವ ಪ್ರಕಾರ. ಈ ಪ್ರಕಾರದ ಕಥಾನಕದಲ್ಲಿ ನಮ್ಮ ಅನುಭವವನು ವ್ಯಕ್ತಪಡಿಸುವುದು ಬಹುಶಃ ಸುಲಭ. ತನ್ನ ಅನುಭವಗಳ ಸ್ಪ ನಿರೂಪಣೆಗಾಗಿ ‘ಹಳ್ಳ ಬಂತು ಹಳ್ಳ’ ಅಧಿಕವಾದ, ಅತಿ ಎನಿಸುವ ನಿರೂಪಣೆಗಳಿಂದ ಕಾದಂಬರಿ ಪ್ರಕಾರದ ಚೌಕಟ್ಟನ್ನು ಮೀರಲು ಪ್ರಯತ್ನಿಸಿದೆ ಎಂದೇ ಹೇಳಬಹುದು. ಹಾಗಾಗಿ ಇದು ತೆಳು ಕಥಾಹಂದರದ, ಯಾವುದೇ ಪೂರ್ವ ನಿರ್ಧರಿತ ವಸ್ತುವಿಲ್ಲದೆ ಮುಂದುವರೆಯುತ್ತದೆ.
ಅನಂತಮೂರ್ತಿ, ಭೈರಪ್ಪ ಮತ್ತಿತರರ ಕಾದಂಬರಿಗಳ ಹಾಗೆ ಒಂದು ಗಟ್ಟಿಯಾದ ಕಥಾ ಹಂದರವಿರದಿರುವುದೇ ಈ ಹೊಸ ರೀತಿಯ ಬರವಣಿಗೆಗಳನ್ನು, ಇತರ ಕಾದಂಬರಿಗಳಿಗಿಂತ ವಿಭಿನ್ನವಾಗಿಸುವುದು. ನಾವು ಈಗಾಗಲೇ ವಿವರಿಸುವ ಪ್ರಯತ್ನಿಸುತ್ತಿರುವ ಕಾದಂಬರಿಗಳ ಪ್ರಯತ್ನವನ್ನು ಕೇಂದ್ರದಲ್ಲಿರಿಸಿ ನೋಡಿದರೆ, ಕಾದಂಬರಿ ಮತ್ತು ಕಾದಂಬರಿ ಪೂರ್ವ ಗದ್ಯಗಳು ಕಥಾಹಂದರ ಮತ್ತು ಅನುಭವವನ್ನು ಕಟ್ಟಿಕೊಡುವ ಕ್ರಮದಿಂದ ಭಿನ್ನವಾಗುತ್ತವೆ ಎಂದು ಹೇಳಬಹುದಾಗಿದೆ. ಆದರೆ ನಿರ್ದಿಷ್ಟವಾಗಿ ಈ ಎರಡು ಪ್ರಕಾರದ ಗದ್ಯಗಳ ವ್ಯತ್ಯಾಸಗಳೇನು ಎಂಬುದನ್ನು ಮುಂದಿನ ಅಧ್ಯಯನಗಳೇ ತಿಳಿಸಬೇಕಾಗುತ್ತದೆ. ಆ ಅಧ್ಯಯನಗಳ ಫಲಿತಗಳು ಏನೇ ಇರಲಿ ಈ ರೀತಿಯ ವಿಚಾರವು ಅನುಭವ ಮತ್ತು ಸಾಹಿತ್ಯದ ನಡುವಿನ ಸಂಬಂಧದ ಕುರಿತು ನಮ್ಮ ಅರಿವನ್ನು ವಿಸ್ತರಿಸುತ್ತದೆ.
*****
ಎಂ.ಎಸ್. ಚೈತ್ರ ಅವರು ಸಾಹಿತ್ಯ ಮತ್ತು ತತ್ವಶಾಸ್ತ್ರದ ಜಿಜ್ಞಾಸೆಗಳಲ್ಲಿ ಆಸಕ್ತಿ ಹೊಂದಿದವರು. ಪ್ರಸ್ತುತ ಬೆಂಗಳೂರಿನ ಸೆಂಟರ್ ಫಾರ್ ಎಜುಕೇಷನಲ್ ಅಂಡ್ ಸೋಷಿಯಲ್ ಸ್ಟಡೀಸ್ ನಲ್ಲಿ ಇಂಡಿಯಾ ಸ್ಟಡೀಸ್ ಯೂನಿಟ್ ನ ಸೀನಿಯರ್ ಫೆಲೋ.
***
ಡಾ. ಅಶ್ವಿನಿ ದೇಸಾಯಿ ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿದವರು. ಪ್ರಸ್ತುತ ಬೆಂಗಳೂರಿನ ಸೆಂಟರ್ ಫಾರ್ ಎಜುಕೇಷನಲ್ ಅಂಡ್ ಸೋಷಿಯಲ್ ಸ್ಟಡೀಸ್ ನಲ್ಲಿ ಇಂಡಿಯಾ ಸ್ಟಡೀಸ್ ಯೂನಿಟ್ ನ ಫೆಲೋ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಒಳ್ಳೆಯ ಸಂಗತಿಯನ್ನು ಗಮನಿಸಿ ಎತ್ತಿ ತೋರಿಸಿದ್ದಾರೆ ಲೇಖಕರು. ಯಾವ ವಿಷಯವನ್ನೇ ಆದರೂ ನಾವು ಹೇಳುವ ಮುನ್ನ ಅಥವಾ ಅದು ಹೀಗೆಯೇ ಎಂದು ಅರ್ಥಮಾಡಿಕೊಂಡು ತೀರ್ಪು ಕೊಟ್ಟುಕೊಳ್ಳುವ ಮುನ್ನ ಅದು ನಮ್ಮ ಅನುಭವದಲ್ಲಿದೆಯೇ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯ. ಇದು ಕಾದಂಬರಿ ಮಾತ್ರವಲ್ಲ, ನಾವು ಬಳಸುವ ಅನೇಕ ಪಾರಿಭಾಷಿಕ ಶಬ್ದಗಳಲ್ಲಿಯೂ ಇಂತಹ ಸಮಸ್ಯೆಯಿರುವುದು ಸತ್ಯ.
ನಿಮ್ಮ ಮಾತು ಸರಿ ನಿರ್ದಿಷ್ಟ ಸಿದ್ಧಾಂತದ ಚೌಕತ್ತು ಇಟ್ಟುಕೊಂಡು ಕಾದಂಬರಿ ಬರೆಯುವುದು ಕೃತಕ ಎಂಬುದನ್ನು ಮೊಗಸಾಲೆಯವರು ತಮ್ಮ ಮುಖಾಂತರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಲ್ಲದೇ ಕಾದಂಬರಿ ರಚಣನೆ ಯಾಗದು ಎಂಬ ಸ್ಥಿತಿ ಇದೆ
ನಾವು ನಮ್ಮ ಅರಿವಿಗೇ ಇಲ್ಲದಂತೆ ಯಾವುದಾದರೂ ಪದ ಬಳಸುತ್ತೀವೆ ಸಾಹಿತ್ಯದಲ್ಲಿ ಇದು ಹೆಚ್ಚು ಒಮ್ಮೆ ದಿ ಆರ್ ನಾಗರಾಜರು ಅ ಸಾಮಾಜಿಕ ಭವ್ಯತೆ ಎಂದು ಹೇಳಿದ್ದರು ನಾನು ಹಾಗೆಂದರೆ ಏನು ಎಂದು ಕೇಳಿದಾಗ ಅವರು ಏನೋ ಮಾತಿಗೆ ಹೇಳಿದೆ ಅಂದಿದ್ದರು
ಯೂರೋಪಿನ ಕಥಾಹಂದರ(plot)ದ ಮಾದರಿಯು ಕಾದಂಬರಿ ಪ್ರಕಾರದ ಹಲವು ಮಾದರಿಗಳಲ್ಲಿ ಒಂದು ಮಾತ್ರ. ಅದೊಂದೇ ಮಾದರಿಯೇನಲ್ಲ. ಕಾದಂಬರಿ ಎಂದರೇನೇ ಹೊಸ ಸಾಹಿತ್ಯಕ ಆಕೃತಿಗಳ ಹುಡುಕಾಟ. Novel ಅನ್ನುವುದರ ಅರ್ಥವೇ ‘ಹೊಸತು’ ಅಂತಲ್ಲವೇ.
‘ಹಳ್ಳ ಬಂತು ಹಳ್ಳ’, ‘ಸ್ವಪ್ನ ಸಾರಸ್ವತ’ ಇತ್ಯಾದಿ ಕಾದಂಬರಿಗಳನ್ನು ಉಲ್ಲೇಖಿಸಿ ಇವು ಒಂದೇ ಕೇಂದ್ರವಿಲ್ಲದೆ ಇರುವ ಕಾದಂಬರಿಗಳು, ಗಟ್ಟಿಯಾದ ಕಥಾಹಂದರವಿಲ್ಲದ ಕಾದಂಬರಿಗಳು, ನಮ್ಮ ಸಾಂಪ್ರದಾಯಿಕ ಕಥನಗಳ ರೀತಿ ಅವ್ಯಾಹತವಾಗಿ, ಬಹಳ ವಿವರಣಾತ್ಮಕ, ಒಂದು ಕಥೆಯಿಂದ ಇನ್ನೊಂದು ಕತೆಗೆ ಹೆಣೆದುಕೊಳ್ಳುವ ಶೈಲಿಯ ಕಾದಂಬರಿಗಳು. ಆ ಕಾರಣಕ್ಕೇ ಈ ಕಾದಂಬರಿಗಳು ವಿಮರ್ಶೆಯ ಜಗತ್ತಿನಲ್ಲಿ, ಅಕೆಡೆಮಿಕ್ ಜಗತ್ತಿನಲ್ಲಿ ಇವು ಪ್ರಸಿದ್ಧಿ ಪಡೆಯಲಿಲ್ಲ ಎಂದು ಬರೆದಿದ್ದೀರಿ.
ಇನ್ನು ಸಾಮಾನ್ಯ ಓದುಗರ ವಲಯದಲ್ಲಿ ಈ ಕೃತಿಗಳ ಜನಪ್ರಿಯತೆಯ ಬಗ್ಗೆ ನಿಮ್ಮ ಅಭಿಪ್ರಾಯ ಸ್ಪಷ್ಟವಾಗಿಲ್ಲ. ಲೇಖನದ ಎಂಟನೇ ಪ್ಯಾರಾದಲ್ಲಿ ‘ಬಹಳಷ್ಟು ಜನರಿಗೆ ಇವುಗಳು ಆಪ್ತ ಎನಿಸಿವೆ ಹಾಗೂ ತಮ್ಮ ಸಾಮುದಾಯಿಕ ಅನುಭವಗಳಿಗೆ ತೀರಾ ಹತ್ತಿರವೆನಿಸಿವೆ’ ಎಂದು ಬರೆದಿದ್ದೀರಿ. ಆದರೆ ಮತ್ತೆ ‘ಹಳ್ಳ ಬಂತು ಹಳ್ಳ’ ದ ಬಗ್ಗೆ ಬರೆಯುತ್ತ ಕಡೆಯಿಂದ ಮೂರನೇ ಪ್ಯಾರಾದಲ್ಲಿ ‘… ಯೂರೋಪಿನ ಕಥಾಹಂದರದ ಚೌಕಟ್ಟು ಅನುಭವಗಳನ್ನು ಮಸುಕಾಗಿಸುತ್ತದೆ. ಹೀಗಾಗಿ ಎಲ್ಲವೂ ಪರಿಚಿತವಾಗಿ ಇದ್ದರೂ ಕೂಡ, ಅಲ್ಲಿ ಒಂದು ರೀತಿಯ ಅಪರಿಚಿತತೆ ಮುನ್ನೆಲೆಗೆ ಬಂದು ಬಿಡುತ್ತದೆ. ಹೀಗಾಗಿಯೇ ಈ ರೀತಿಯ ಕಾದಂಬರಿಗಳು ಜನ ಸಾಮಾನ್ಯರಿಗೆ ಆಪ್ತವಾದಂತೆ ಅನಿಸುವುದಿಲ್ಲ’ ಎಂದು ಬರೆದಿದ್ದೀರಿ.
ಇರಲಿ. ಇವೆರಡೂ ಕಾದಂಬರಿಗಳನ್ನು ಓದುವಾಗ ನನಗಂತೂ plot ನ ದೃಷ್ಟಿಯಿಂದ ಕೊರತೆ ಅಂತೇನೂ ಅನಿಸಲಿಲ್ಲ. ವಸಾಹತು ಪೂರ್ವದ ಕನ್ನಡ ಗದ್ಯಪ್ರಕಾರ ಮತ್ತು ವಸಾಹತೋತ್ತರ ಕಾದಂಬರಿಪ್ರಕಾರ ಇವುಗಳ ವ್ಯತ್ಯಾಸದ ಸ್ವರೂಪ ಅಂತಾ ದೊಡ್ಡ ಪ್ರಶ್ನೆ ಅನಿಸುವುದಿಲ್ಲ. ಕನ್ನಡದಲ್ಲಿ ಅಷ್ಟೇ ಅಲ್ಲ, ಇಂಗ್ಲಿಷ್ ಸಾಹಿತ್ಯ ಪರಂಪರೆಯಲ್ಲೂ ಗದ್ಯ ಶೈಲಿ ಕಾಲಾಂತರದಲ್ಲಿ ಸಾಕಷ್ಟು ಬದಲಾವಣೆ ಹೊಂದಿದೆ. ಅದರಲ್ಲೂ ಕಾದಂಬರಿ ಪ್ರಕಾರವು ಸದಾ ಅನ್ವೇಷಣೆಗೆ ಒಳಗಾಗಿದೆ.
ತಮ್ಮ ‘ಕನ್ನಡ ಕಥನ ಸಾಹಿತ್ಯ:ಕಾದಂಬರಿ’ ಈ ಕೃತಿಯಲ್ಲಿ ಜಿ ಎಸ್ ಅಮೂರ ಅವರು ಕಾದಂಬರಿ ಪ್ರಕಾರದ ವೈವಿಧ್ಯತೆಯ ಕುರಿತು ವಿವರವಾಗಿ ಬರೆದಿದ್ದಾರೆ (ಭಾಗ ೧ – ಅಧ್ಯಾಯ ೧ : ಕಾದಂಬರಿಯ ಜಾತಕ). ಅವರು ಮಹಾನ್ ಕಾದಂಬರಿಕಾರ ಟಾಲ್ಸ್ಟಾಯ್ನನ್ನ ಹೇಳಿದ್ದನ್ನು ಉಲ್ಲೇಖಿಸುತ್ತಾರೆ – “ಯೂರೋಪಿನಲ್ಲಿ ಕಾದಂಬರಿಗೆ ಇರುವ ಅರ್ಥದಲ್ಲಿ ರಷ್ಯನ್ ರಾದ ನಮಗೆ ಕಾದಂಬರಿಗಳನ್ನು ಬರೆಯಲು ತಿಳಿಯದು… ನಮ್ಮ ಕಾದಂಬರಿಗಳಲ್ಲಿ ಒಂದೇ ಒಂದು ವಿಚಾರಧಾರೆ ಹರಿಯುವುದಿಲ್ಲ, ನಾವು ವಾದಗಳನ್ನು ಮಂಡಿಸುವುದಿಲ್ಲ. …ಸಂವಿಧಾನವನ್ನು ರಚಿಸುವುದಿಲ್ಲ”. ಹೀಗಿದ್ದರೂ ಟಾಲ್ಸ್ಟಾಯ್ ಹಾಗೂ ದಾಸ್ತೋವಸ್ಕಿಯ ಕಾದಂಬರಿಗಳು ಕಾದಂಬರಿಯ ಪ್ರಕಾರದಲ್ಲೇ ಶ್ರೇಷ್ಠ ಕೃತಿಗಳು ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.
ಹಾಗೆಯೇ ಕನ್ನಡದ ಶ್ರೇಷ್ಟ ಸಾಹಿತಿಗಳಾದ ಕುವೆಂಪು ಕಾರಂತರಂತವರೂ ಯೂರೋಪಿನ plot ನ್ನು ಮಾದರಿಯಾಗಿರಿಸಿಕೊಂಡು ತಮ್ಮ ಕಾದಂಬರಿಗಳನ್ನು ಬರೆಯಲಿಲ್ಲ. ಆದ್ದರಿಂದ ನೀವು ಲೇಖನದಲ್ಲಿ ಸುದೀರ್ಘವಾಗಿ ಉಲ್ಲೇಖಿಸಿರುವ ‘ಹಳ್ಳ ಬಂತು ಹಳ್ಳ’ ಸಹ ತನ್ನ ‘ವಾಚಾಳಿ’ತನದಿಂದ ಕ್ರಿಟಿಕಲ್ ಅಥವಾ ಪಾಪ್ಯುಲರ್ ಮನ್ನಣೆ ಗಳಿಸಲಿಲ್ಲ ಎನ್ನುವುದರ ಬಗ್ಗೆ ನನಗೆ ಅನುಮಾನ ಇದೆ. ನನಗನಿಸುವಂತೆ ಅದು ಸಾಕಷ್ಟು ಚರ್ಚೆಗೆ ಒಳಗಾದ ಜನಪ್ರಿಯ ಕೃತಿಯೇ ಆಗಿದೆ. ತ್ರೈಮಾಸಿಕ ಪತ್ರಿಕೆ ‘ದೇಶಕಾಲ’ದಲ್ಲಿ ಈ ಕಾದಂಬರಿಯ ಬಗ್ಗೆ ಮೆಚ್ಚುಗೆಯ ವಿಮರ್ಶೆ ಓದಿದ್ದು ನೆನಪಿದೆ. ಕುವೆಂಪು ಅವರ ಕಾದಂಬರಿಗಳ ಬಗ್ಗೆಯೂ ಅಡಿಗರ ‘ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಶೆಗಳಲ್ಲಿ ಕೃತಿಯ ಇನ್ನಿತರ ಗುಣಾತ್ಮಕ ಅಂಶಗಳಿಗಿಂತ ಕಾದಂಬರಿಯ ಶಿಲ್ಪ, ಬಂಧ ಇತ್ಯಾದಿಗಳ ಬಗ್ಗೆಯೇ ವಿಮರ್ಶಕರು ಹೆಚ್ಚಿಗೆ ಬರೆದಿದ್ದನ್ನುಅಂತರ್ಜಾಲದಲ್ಲಿ ಲಭ್ಯವಿರುವ ‘ಸಾಕ್ಷಿ’ಯ ಹಳೆಯ ಸಂಚಿಕೆಗಳಲ್ಲಿ ನೋಡಿದ್ದೇನೆ.
ನನಗನಿಸುವುದೆಂದರೆ ಕನ್ನಡದ ಕಾದಂಬರಿಯೇ ಇರಲಿ ಅಥವಾ ಬೇರೆ ಯಾವುದೇ ಕಾದಂಬರಿಯೇ ಆಗಲಿ ಅದು ಓದುಗನ ಮನಸ್ಸಿನ ಮೇಲೆ ಬೀರುವ ಪರಿಣಾಮದ ಮೇಲೆ ಅದರ ಮೌಲ್ಯ ನಿರ್ಧಾರ ಆಗಬೇಕು. ರಷ್ಯನ್ ಕಾದಂಬರಿಗಳನ್ನೇ ತೆಗೆದುಕೊಳ್ಳಿ. ಅಲ್ಲಿನ ಕೃತಿಕಾರರು ತಮ್ಮ ಕೃತಿಗಳಲ್ಲಿ ದೊಡ್ಡ ಪ್ರಶ್ನೆಗಳನ್ನೇ ಎತ್ತಿಕೊಂಡರು. ಜೀವನದಲ್ಲಿ ಯಾವುದು ಒಳ್ಳೆಯ ಮೌಲ್ಯ, ಯಾವುದು ಸತ್ಯ ಮತ್ತು ಅದನ್ನು ಗುರುತಿಸುವುದು ಹೇಗೆ, ಎಲ್ಲವನ್ನೂ ಹೊಂದಿರುವ ಕೆಲವರು ಮತ್ತು ಏನನ್ನೂ ಹೊಂದದೆ ಇರುವ ಇತರರು ಮತ್ತು ಹೀಗಿರುವಾಗ ಇವರ ನಡುವೆ ಶಾಂತಿಯಿಂದ ಇರುವ ಬಗೆ ಹೇಗೆ… ಇಂತಹವೇ ತೂಕದ ಪ್ರಶ್ನೆಗಳು. ಹಾಗಂತ ಅವರ ಕೃತಿಗಳು ಭಾಷಣದ ಧಾಟಿಯಲ್ಲೇನೂ ಇಲ್ಲ. ಕಲ್ಪನೆ ಮತ್ತು ವಿಚಾರವಂತಿಕೆ ಇವೆರಡರ ಸಮನ್ವಯತೆ ಅವರಿಗೆ ಸಾಧ್ಯವಾಯಿತು. ಇಲ್ಲದಿದ್ದರೆ ಅವರ ಕೃತಿಗಳನ್ನು ನೂರಾರು ವರ್ಷಗಳ ಮೇಲೆ ಇಂದಿಗೂ ಓದುತ್ತಿದ್ದೆವೆ?
ಕುವೆಂಪು ಅವರು ಮಲೆನಾಡಿನ ಜೀವನದ ಬಗ್ಗೆ ಮತ್ತು ಕಾರಂತರು ಕರಾವಳಿಯ ಜೀವನದ ಬಗ್ಗೆ ಬರೆದಂತೇ ಶ್ರೀನಿವಾಸ ವೈದ್ಯ ಅವರು ಬಯಲುಸೀಮೆಯ ನವಲುಗುಂದದ ಒಂದು ಕಾಲಘಟ್ಟದ ಜೀವನದ ಚಿತ್ರಣವನ್ನು ಕಟ್ಟಿ ಕೊಟ್ಟಿದ್ದಾರೆ. ಪ್ರಕೃತಿಯೊಡನೆಯ ಮಾನವ ಸಂಬಂಧ, ನಿಧಾನವಾಗಿ ಸಮಾಜದಲ್ಲಿ ಆಗುವ ಕೆಲವು ಬದಲಾವಣೆಗಳು, ಬದಲಾಗದ ಕೆಲವು ಜಾತಿ ವ್ಯವಸ್ಥೆಯ ಆಚರಣೆಗಳು ಹೀಗೆ ಈ ಕೃತಿಗಳು ಒಂದು ಸಮೂಹದ ಇತಿಹಾಸವನ್ನು ಬಿಂಬಿಸುತ್ತಲೇ ಸೂಕ್ಷ್ಮ ಓದುಗರಲ್ಲಿ ತಮ್ಮ ನಂಬಿಕೆಗಳು ತಮ್ಮ ಮೌಲ್ಯಗಳ ಬಗ್ಗೆ ಪ್ರಶ್ನೆಗಳನ್ನೂ ಹುಟ್ಟು ಹಾಕುತ್ತವೆ.
ಒಟ್ಟಾರೆಯಾಗಿ, ಕಳೆದ ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ, ಗುಲ್ವಾಡಿಯವರ ‘ಇಂದಿರಾಬಾಯಿ’ಯಿಂದ ಹಿಡಿದು ವೈದ್ಯರ ‘ಹಳ್ಳ ಬಂತು ಹಳ್ಳ’ ಮತ್ತಿತರ ಕೃತಿಗಳವರೆಗೆ ಕನ್ನಡ ಕಾದಂಬರಿ ಜಗತ್ತು ಸಾಕಷ್ಟು ವೈವಿಧ್ಯಮಯವಾದ ಕೃತಿಗಳನ್ನು ಕಂಡಿದೆ. ಕೆಲವು ಕೃತಿಗಳು ವಸಾಹತು ಪ್ರಜ್ಞೆಯಿಂದ ಪ್ರಭಾವಿತವಾಗಿರಬಹುದು, ಇನ್ನೂ ಕೆಲವು ಒಂದೇ ಕೇಂದ್ರವಿಲ್ಲದ ಕಥಾನಕಗಳಿರಬಹುದು, ಕೆಲವು ಯುರೋಪಿಯನ್ ಕಥಾಹಂದರದ ಮಾದರಿ ಹೊಂದಿರಬಹುದು, ಅದೇನೇ ಇರಲಿ ಅಂತಹ ಸಾರಾಸಗಟು ವರ್ಗಿಕರಣ ಮತ್ತು (ಅಪ)ಮೌಲ್ಯೀಕರಣ ನಮ್ಮ ಹಲವಾರು ಉತ್ಕೃಷ್ಟ ಕಾದಂಬರಿಗಳಿಗೆ ಮಾಡುವ ಅಪಚಾರವಾಗುತ್ತದೆ. ಸಂಬಂಧಗಳ ಸೂಕ್ಷ್ಮ ಶೋಧನೆ, ಇರವಿನ ಪ್ರಸ್ತುತತೆಯ ಹುಡುಕಾಟ, ವೈಯಕ್ತಿಕತೆ, ಖಾಸಗಿತನ, ಇತ್ಯಾದಿಗಳ ಅಧ್ಯಯನ ಎಲ್ಲವೂ ನಮ್ಮ ಕಾದಂಬರಿಗಳ (ಅದರಲ್ಲೂ ವಿಶೇಷವಾಗಿ ನವ್ಯ ಪರಂಪರೆಯ ಕಾದಂಬರಿಗಳ) ಸರಕಾಗಿವೆ. ಇದೆಲ್ಲ ಭಾರತದ ಕುರಿತ ಯುರೋಪಿಯನ್ನರ ನಿರೂಪಣೆಯ ಪುನರುತ್ಪಾದನೆ ಎಂದುಬಿಡುವುದು ವಿಷಯವನ್ನು ತುಂಬಾ ಸರಳೀಕರಿಸಿದಂತಾಗುತ್ತದೆ.
ಈ ಕಾದಂಬರಿಗಳಲ್ಲಿ plot ಏನಿದೆ ಎನ್ನುವುದನ್ನು ಲೇಖಕರು ಸ್ಪಷ್ಟವಾಗಿ ಗುರುತಿಸಿದ್ದಾರೆ. ಕಾದಂಬರಿಗಳ ಕಥಾಹಂದರಗಳಿಂದ ಬಿಡಿಸಿಕೊಂಡವು ಎನ್ನುವಂತಿರುವ ಕಾದಂಬರಿಗಳಲ್ಲಿಯೇ ಕಥಾಹಂದರವನ್ನು ಲೇಖಕರು ಗುರುತಿಸಿರುವಾಗ ಇನ್ಯಾವುದೊ ಕಥಾಹಂದರಗಳಲ್ಲಿಯೇ ಮುಳುಗೆದ್ದ ಸಾಹಿತ್ಯದ ಬಗ್ಗೆ ಚರ್ಚಿಸುವುದು ಎಷ್ಟು ಸರಿ? ಬೇಕಂದರೆ ಅವುಗಳನ್ನಿಟ್ಟು ಕೊಂಡು ಚರ್ಚೆ ಮಾಡಬಹುದು. ಆದರೆ ಈ ಲೇಖನದಲ್ಲಿ ಉಲ್ಲೇಖವಾಗಿರುವ ನಿರ್ಧಿಷ್ಟ ಕಾದಂಬರಿಗಳು ಕನ್ನಡ ಕಾದಂಬರಿ ಲೋಕದಲ್ಲಿ ಇದುವರೆಗೂ ಇದುವರೆಗೂ ಇದ್ದ ಸಿದ್ದ ಮಾದರಿಯ plot ನಿಂದ ಹೊರ ಬಂದಿದ್ದರೂ ಸಹ ಅದರಲ್ಲಿಯೂ plot ಎಲ್ಲಿದೆ ಎಂದು ತೋರಿಸಿದ್ದಾರಲ್ಲ?.
ನೀವು ಹೇಳಿದ ಮಾತುಗಳನ್ನು ನಾನು ಒಪ್ಪುತ್ತೇನೆ. P
ಮಾನ್ಯ ಶ್ರೀನಾಥ್ ಶಿರಗಳಲೆಯವರು ಕೆಲವು ಆಸಕ್ತಿದಾಯಕ ವಿಚಾರಗಳನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಅವರ ಪ್ರತಿಕ್ರಿಯೆಗಳು ಓದುಗರಿಗೆ ಹಾಗೂ ಸಂಶೋಧಕರಿಗೆ ಅನೇಕ ವಿಷಯಗಳನ್ನು ಸ್ಪಷ್ಟಪಡಿಸಿಕೊಳ್ಳಲು ಸಹಾಯಕವಾಗಿವೆ. ಹಾಗಾಗಿ ಅವರಿಗೆ ಧನ್ಯವಾದಗಳು.
1. “ಯೂರೋಪಿನ ಕಥಾಹಂದರ(plot)ದ ಮಾದರಿಯು ಕಾದಂಬರಿ ಪ್ರಕಾರದ ಹಲವು ಮಾದರಿಗಳಲ್ಲಿ ಒಂದು ಮಾತ್ರ. ಅದೊಂದೇ ಮಾದರಿಯೇನಲ್ಲ” ಎಂಬ ನಿಮ್ಮ ವಾಕ್ಯದಿಂದ ನಮ್ಮ ಪ್ರತಿಕ್ರಿಯೆಯನ್ನು ಪ್ರಾರಂಭಿಸುತ್ತೇವೆ. ಈ ನಿಮ್ಮ ಹೇಳಿಕೆಯಲ್ಲಿ ಯುರೋಪಿನ ಕಥಾಹಂದರ(plot)ದ ಮಾದರಿಯ ಕಾದಂಬರಿಗಳು ಮತ್ತು ಯುರೋಪೇತರ ಕಥಾಹಂದರದ ಮಾದರಿಯ ಕಾದಂಬರಿಗಳಿವೆ ಎಂದು ನೀವು ತೀರ್ಮಾನಿಸಿದಂತೆ ಕಾಣುತ್ತದೆ. ಆ ರೀತಿ ಹೇಳಲು ಸಾಧ್ಯವೇ? ಹಾಗೆ ಹೇಳಲು ಸಾಧ್ಯವಾಗಬೇಕಾದರೆ ಪ್ಲಾಟ ಎಂಬುದು ಭಿನ್ನ ಭಿನ್ನ ಸಂಸ್ಕೃತಿಯಲ್ಲಿ ಭಿನ್ನ ಭಿನ್ನ ರೀತಿಯಲ್ಲಿ ಇರುತ್ತದೆ ಎಂದು ವಾದಿಸಬೇಕಾಗುತ್ತದೆ. ಅರ್ಥಾತ್ ಭಾರತೀಯ ಪ್ಲಾಟಗಳು ಯುರೋಪಿನ ಪ್ಲಾಟ ಇತ್ಯಾದಿಗಳು ಕಾದಂಬರಿಗಳಲ್ಲಿವೆ ಎಂದು ಮಾತನಾಡಬೇಕಾಗುತ್ತದೆ. ನೀವು ಹೇಳುವುದನ್ನು ನೋಡಿದರೆ ಪ್ಲಾಟನ್ನು ಮುಖ್ಯವೆಂದು ಗಮನಿಸಬಾರದೆಂದು ಹೇಳಿದಂತೆ ಕಾಣುತ್ತದೆ, ಹಾಗಿದ್ದ ಪಕ್ಷದಲ್ಲಿ ಪ್ಲಾಟನ್ನು ಕುರಿತ ಜ್ಞಾನ ಬರುವುದು ಹೇಗೆ ಸಾಧ್ಯ? ಈ ಬಗ್ಗೆ ತಿಳಿವಳಿಕೆ ಬರದೇ ಇದ್ದರೆ ಭಾರತ ಅಥವಾ ಇತರ ಪ್ಲಾಟ್ಗಳು ಎಂದು ಮಾತನಾಡಲು ಸಾಧ್ಯವೇ?ಇತ್ಯಾದಿ ಪ್ರಶ್ನೆಗಳು ಹುಟ್ಟುತ್ತವೆ.ಇದಕ್ಕೆ ವ್ಯತಿರಿಕ್ತವಾಗಿ ಕಾದಂಬರಿಗಳಲ್ಲಿ ಒಟ್ಟು ಎಷ್ಟು ರೀತಿಯ ಪ್ಲಾಟ್ಗಳಿವೆ ಎಂಬುದರ ಕುರಿತಾಗಿ ಜಾಗತಿಕ ಅಧ್ಯಯನಗಳಿವೆ. ಇವುಗಳಲ್ಲಿ ಅನೇಕ ಚರ್ಚೆಗಳಿವೆ, ಇವುಗಳಲ್ಲಿ ಒಂದು ನಿದರ್ಶನವನ್ನು ತೆಗೆದುಕೊಳ್ಳೋಣ, ಉದಾಹರಣೆಗೆ ಕ್ರಿಸ್ಟೋಫರ್ ಬೂಕರ್ ಅವರು ೨೦೦೫ರಲ್ಲಿ ಪ್ರಕಟಿಸಿದ the seven basic plots – why we tell the stories ಎಂಬ ಸುಮಾರು ಏಳು ನೂರು ಪುಟಕ್ಕೂ ಹೆಚ್ಚು ವಿಸ್ತಾರವಾಗಿ ಚರ್ಚೆಮಾಡುವ ಪುಸ್ತಕದಲ್ಲಿ ಒಟ್ಟು ಏಳು ವಿವಿಧ ರೀತಿಯ ಪ್ಲಾಟ್ಗಳಿಂದ ಕಾದಂಬರಿಗಳನ್ನು ವಿವರಿಸಿಕೊಳ್ಳಬಹುದೆಂದು ಚರ್ಚಿಸುತ್ತಾರೆ. ಪ್ಲಾಟ್ಗಳ ಸಂಖ್ಯೆ ಎಷ್ಟಿರಬಹುದು ಎನ್ನುವ ಚರ್ಚೆಯನ್ನು ಬದಿಗಿಟ್ಟರೂ ಕೂಡ ಯುರೋಪಿಯನ್ ಮತ್ತು ಭಾರತೀಯ ಪ್ಲಾಟಗಳು ಎಂದು ಚರ್ಚಿಸುವುದು ಸಾಧ್ಯವಾಗುವ ವಿಷಯವೆಂದು ನಮಗೆ ಅನಿಸುವುದಿಲ್ಲ.
2. ಹಾಗಾಗಿ ನಿಮ್ಮ ಹೇಳಿಕೆಯನ್ನು ಪ್ಲಾಟ್ ರಹಿತ ಕಾದಂಬರಿಗಳು ಇವೆಯೇ ಎನ್ನುವ ಪ್ರಶ್ನೆಯನ್ನು ಇರಿಸಿಕೊಂಡು ಚರ್ಚಿಸಿದರೆ ಕಾದಂಬರಿಗಳನ್ನು ಭಾರತೀಯರೇ ಬರೆಯಲಿ ಅಥವಾ ಯುರೋಪಿಯನ್ನರೇ ಬರೆಯಲಿ, ಪ್ಲಾಟ್ ಇಲ್ಲದೇ ಕಾದಂಬರಿಗಳನ್ನು ರಚಿಸುವುದು ಸಾಧ್ಯವಿದೆ ಎಂದು ಹೇಳುವುದು ಅಸಾಧ್ಯ ಎಂದೇ ಹೇಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ಅಥವಾ ಯುರೋಪಿಯನ್ ಎಂದು ಮಾತನಾಡಲು ಸಾಧ್ಯವಿರುವುದು ಭಾಷೆ ಮತ್ತು ಕಥಾವಸ್ತುವಿನ ವಿಷಯಗಳಲ್ಲಿ ಮಾತ್ರ. ಆ ದೃಷ್ಟಿಯಿಂದ ಭಾರತೀಯ ಕಾದಂಬರಿಗಳ ಕಥಾವಸ್ತು ಬೇರೆ ಇದೆ, ಅದರ ನಿರೂಪಣಾ ಶೈಲಿಯಲ್ಲಿ ವ್ಯತ್ಯಾಸಗಳಿವೆ, ನಾವೀನ್ಯತೆ ಇದೆ ಇತ್ಯಾದಿ ಯಾವುದೇ ಹೇಳಿಕೆಗಳೊಡನೆ ನಮಗೆ ತಕರಾರಿಲ್ಲ.
3. ಕೃತಿಯ ಜನಪ್ರಿಯತೆಯ ಕುರಿತ ನಮ್ಮ ಹೇಳಿಕೆಗಳಲ್ಲಿ ವಿರೋಧವಿದೆ ಎಂಬ ನಿಮ್ಮ ಅಭಿಪ್ರಾಯವು ಗ್ರಹಿಕೆಯ ಸಮಸ್ಯೆ ಎಂದು ಭಾವಿಸುತ್ತೇವೆ. ಏಕೆಂದರೆ ‘ಹಳ್ಳ ಬಂತು ಹಳ್ಳ’ದಂತಹ ಕೃತಿಗಳು ಅಕೆಡೆಮಿಕ್ ವಿಮರ್ಶಾವಲಯದಲ್ಲಿ ಬಹಳವಾಗಿ ಚರ್ಚಿತವಾದವೇನಲ್ಲ. ಅಲ್ಲೊಂದು ಇಲ್ಲೊಂದು ಬಿಡಿ ಪ್ರತಿಕ್ರಿಯೆಗಳು ಬಂದಿರಬಹುದು. ಇನ್ನು ಈ ಕೃತಿ ಅಪಾರವಾದ ಓದುಗರನ್ನು ಹೊಂದಿರುವುದು ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಈಗಾಗಲೇ ತಿಳಿದಿರುವಂತೆ ಕೃತಿಯೊಂದು ಓದುಗರನ್ನು ಗಮನ ಸೆಳೆಯುವುದಕ್ಕೂ ವಿಮರ್ಶಕರನ್ನು ಗಮನ ಸೆಳೆಯುವುದಕ್ಕೂ ಬಹಳ ವ್ಯತ್ಯಾಸವಿದೆ. ಉದಾಹರಣೆಗೆ ಸಾಯಿಸುತೆಯವರ ಕಾದಂಬರಿಗಳು ಅಪಾರ ಓದುಗ ವಲಯವನ್ನು ಹೊಂದಿದ್ದರೂ, ವಿಮರ್ಶಕರ ದೃಷ್ಟಿಯಿಂದ ಚರ್ಚಿತವಾದ ಕಾದಂಬರಿಗಳೇನಲ್ಲ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಹೆಚ್ಚಿನದ್ದನ್ನು ಹೇಳುವ ಅಗತ್ಯವಿಲ್ಲ.
4. ನೀವು ಗಮನಕ್ಕೆ ತಂದಿರುವ ಮುಖ್ಯವಾದ ವಿಷಯ ಒಂದು ಕಡೆ ಜನಸಾಮಾನ್ಯರಿಗೆ ಹತ್ತಿರವಾಗಿವೆ ಎಂದು, ಇನ್ನೊಂದು ಕಡೆ ಇವು ಜನಸಾಮಾನ್ಯರಿಗೆ ಆಪ್ತವಾಗಿಲ್ಲ ಎಂದು ಹೇಳುವುದು ವಿರೋಧವಲ್ಲವೇ ಎನ್ನುವುದು ನಿಮ್ಮ ಪ್ರಶ್ನೆ. ಈ ಕುರಿತಂತೆ ನಮ್ಮ ಲೇಖನವನ್ನು ನೀವು ಪುನಃ ಪರಿಶೀಲಿಸಿದರೆ ನಾವು ಹೇಳಬೇಕಾದ ವಿಷಯಗಳು ಬಹಳ ಸರಳವಾಗಿವೆ. ಮೊದಲಿಗೆ ನವಲಗುಂದ, ವೈದ್ಯರು ಇತ್ಯಾದಿ ವಿವರಣೆಗಳು ಕನ್ನಡದ ಓದುಗರಿಗೆ, ಅಲ್ಲಿ ವಿವರಿಸುತ್ತಿರುವ ಸ್ಥಳ ಘಟನೆ ಇತ್ಯಾದಿಗಳೊಂದಿಗೆ ಸಂಬಂಧವೇರ್ಪಡಿಸುವ ಕಾರಣಕ್ಕೆ ಕಾದಂಬರಿಗಳು ಬಹಳ familiar ಎನಿಸುವ ಭಾವನೆಯನ್ನು ಸಹಜವಾಗಿ ಹುಟ್ಟಿಸುತ್ತವೆ. ಆದರೆ ಆ ವಿವರಣೆಗಳಲ್ಲಿ ಧುತ್ತೆಂದು ನೀರಸ, ನಿಂತ ನೀರು ಇತ್ಯಾದಿ ವಿವರಣೆಗಳು ಆ familiarity ಇಂದ ದೂರ ಕರೆದುಕೊಂಡು ಹೋಗುತ್ತವೆ. ಓದುಗನಲ್ಲಿ ಹುಟ್ಟಬಹುದಾದ ಈ ಸಂದಿಗ್ಧವನ್ನು ವಿವರಿಸಲೆಂದೇ ಆ ಉದಾಹರಣೆಗಳನ್ನು ಲೇಖನದಲ್ಲಿ ಬಳಸಲಾಗಿದೆ.
5. “ಇವೆರಡೂ ಕಾದಂಬರಿಗಳನ್ನು ಓದುವಾಗ ನನಗಂತೂ ಪ್ಲಾಟ್ನ ದೃಷ್ಟಿಯಿಂದ ಕೊರತೆ ಅಂತೇನೂ ಅನಿಸಲಿಲ್ಲ. ವಸಾಹತು ಪೂರ್ವದ ಕನ್ನಡ ಗದ್ಯಪ್ರಕಾರ ಮತ್ತು ವಸಾಹತೋತ್ತರ ಕಾದಂಬರಿಪ್ರಕಾರ ಇವುಗಳ ವ್ಯತ್ಯಾಸದ ಸ್ವರೂಪ ಅಂತಾ ದೊಡ್ಡ ಪ್ರಶ್ನೆ ಅನಿಸುವುದಿಲ್ಲ” ಎಂದು ನೀವು ಹೇಳುತ್ತೀರಿ. ನಾವು ನಮ್ಮ ಲೇಖನದಲ್ಲಿ ಕಥಾಹಂದರ ತೆಳುವಾಗಿದೆ ಎಂದು ಹೇಳಿದ್ದೇವೆಯೇ ಹೊರತು, ಅದು ಕೊರತೆ ಎಂದು ವಾದಿಸುವ ಪ್ರಯತ್ನವನ್ನು ಮಾಡಿಲ್ಲ ಮತ್ತು ನಮಗೆ ಆ ಉದ್ದೇಶವೂ ಇಲ್ಲ. ಕಾದಂಬರೀಪೂರ್ವ (ನಾವು ವಸಾಹತು ಪೂರ್ವ ಎಂದು ಬಳಸಿಲ್ಲ) ಗದ್ಯ ಮತ್ತು ಕಾದಂಬರಿಗದ್ಯದ ವ್ಯತ್ಯಾಸದ ಕುರಿತು ನೀವು ಅದೊಂದು ದೊಡ್ಡ ಪ್ರಶ್ನೆ ಅಲ್ಲ ಎಂದು ಹೇಳಿದ್ದೀರಿ. ಪ್ರಶ್ನೆ ದೊಡ್ದದೋ ಚಿಕ್ಕದೋ ನಮಗೆ ಮುಖ್ಯವೇ ಅಲ್ಲ. ಉದಾಹರಣೆಗೆ ಕುರ್ತಕೋಟಿಯವರು ಕಂಡುಕೊಂಡ ಈ ಒಳನೋಟವನ್ನು ಪರೀಕ್ಷಿಸಿ ವಿಸ್ತರಿಸಲು ಸಾಧ್ಯವೇ ಎನ್ನುವುದು ನಮ್ಮ ಪ್ರಶ್ನೆ. ಆದರೆ ಒಂದು ಪಕ್ಷ ಆ ರೀತಿ ವ್ಯತ್ಯಾಸಗಳು ಎರಡು ಗದ್ಯಪ್ರಕಾರಗಳಲ್ಲಿದ್ದರೆ ಆ ವ್ಯತ್ಯಾಸಗಳ ಸ್ವರೂಪವೇನು? ಅಥವಾ ಈ ವ್ಯತ್ಯಾಸಗಳಿಂದ ನಮ್ಮ ಬರಹ ಮತ್ತು ಅನುಭವಗಳನ್ನು ವ್ಯಕ್ತಪಡಿಸುವ ಕ್ರಮಗಳ ಮೇಲೆ ಆಗುವ ಪರಿಣಾಮವೇನು ಎಂಬುದನ್ನು ನಾವು ಗಂಭೀರವಾಗಿ ಯೋಚಿಸಲೇ ಬೇಕಾಗುತ್ತದೆ.
6. ಒಂದು ಕಾದಂಬರಿಯ ಮೌಲ್ಯಮಾಪನದ ಕುರಿತು ನೀವು ಕೆಲವು ಪ್ರಶ್ನೆಗಳನ್ನು ಎತ್ತಿದ್ದೀರಿ. ನಮ್ಮ ಲೇಖನ ಕಾದಂಬರಿಪ್ರಕಾರದಲ್ಲಿ ಅನುಭವವನ್ನು ವ್ಯಕ್ತಪಡಿಸಲು ಸಮಸ್ಯೆಗಳನ್ನು ಉಂಟುಮಾಡುತ್ತದೆಯೇ ಇಲ್ಲವೇ ಎನ್ನುವ ಪ್ರಶ್ನೆಯ ಹಿನ್ನೆಲೆಯಲ್ಲಿ ಕುರ್ತಕೋಟಿಯವರ ಕೆಲವು ಒಳನೋಟಗಳನ್ನು ಸರಿಯಾಗಿ ಪರೀಕ್ಷಿಸಲು ಸಾಧ್ಯವೇ ಎನ್ನುವ ಹುಡುಕಾಟವಾಗಿದೆ. ನಾವು ಹಳ್ಳ ಬಂತು ಹಳ್ಳದ ಮೌಲ್ಯಮಾಪನವನ್ನಾಗಲಿ ವಿಮರ್ಶೆಯನ್ನಾಗಲಿ ಮಾಡುತ್ತಿಲ್ಲ. ಹಾಗೂ ಮೌಲ್ಯಮಾಪನ ಮಾಡುವುದು ನಮ್ಮ ಉದ್ದೇಶವೂ ಅಲ್ಲ. ಅಲ್ಲದೇ ಕಾದಂಬರಿಯೊಂದರ ಮೌಲ್ಯ ಯಾವುದು ಎನ್ನುವುದರ ಕುರಿತು ವಿಮರ್ಶಕರು ಸಾಕಷ್ಟು ಚರ್ಚೆ ಮಾಡಿದ್ದಾರೆ. ಆ ಕುರಿತು ನಾವು ಯಾವುದೇ ಚರ್ಚೆಯನ್ನು ಈ ಲೇಖನದಲ್ಲಿ ತಂದಿಲ್ಲ. ಹಾಗಾಗಿ ಕಾದಂಬರಿಯ ಮೌಲ್ಯಮಾಪನದ ಪ್ರಶ್ನೆ ನಮ್ಮ ಲೇಖನದ ವ್ಯಾಪ್ತಿಯನ್ನು ಮೀರಿದ್ದು.
7. ಕಾದಂಬರಿ ಅಥವಾ ಯಾವುದೇ ಕೃತಿ ಓದುಗನ ಮನಸ್ಸಿನ ಮೇಲೆ ಬೀರುವ ಪರಿಣಾಮದ ಮೇಲೆ ಅದರ ಮೌಲ್ಯ ನಿರ್ಧಾರ ವಾಗಬೇಕು ಎನ್ನುವುದು ಸತ್ಯವೇ ಮಾತ್ರವಲ್ಲ, ಅದೇ ಈ ಲೇಖನದ/ಸಂಶೋಧನೆಯ ಕೇಂದ್ರ ವಿಚಾರ ಸಹ. ಈ ವಿಷಯದಲ್ಲಿ ಸಾಂಪ್ರದಾಯಿಕ ಗದ್ಯಮಾದರಿಗೆ ಇಲ್ಲದ ಒಂದು ಗುಣ ಕಾದಂಬರಿ ಪ್ರಕಾರದೊಳಗೆ ಅಡಗುವ ಪ್ಲಾಟ್ ಓದುಗನ ಮನಸ್ಸಿನ ಮೇಲೆ ನಿರ್ದಿಷ್ಟ ಬಗೆಯ ಪರಿಣಾಮ ಉಂಟುಮಾಡುತ್ತಾ ಬಂದಿದೆ. ಅದೇ ವಸಾಹತು ಪ್ರಜ್ಞೆಯ ಸೃಷ್ಟಿ ಮತ್ತು ಮುಂದುವರಿಕೆ ಎನ್ನುವುದು ಲೇಖನದ ವಾದ. ಕಾದಂಬರಿಗಳು ಜನರ ಜೀವನ, ಸಮೂಹದ ಇತಿಹಾಸ, ಸಾಮಾಜಿಕ ವ್ಯವಸ್ಥೆ ಅದರ ಬದಲಾವಣೆಯನ್ನು ಕಟ್ಟಿಕೊಡುತ್ತಿವೆ ಎಂದಾರೆ ಆ ಚಿತ್ರಣಗಳ ಸ್ವರೂಪ ಏನು? ಅವಕ್ಕೂ ವಸಾಹತು ಚಿತ್ರಣಗಳಿಗೂ ಏನಾದರೂ ವ್ಯತ್ಯಾಸಗಳಿವೆಯೇ ಎನ್ನುವುದೇ ನಮ್ಮ ಅಧ್ಯಯನದ ವಸ್ತುವು ಕೂಡ. ಓದುಗರಲ್ಲಿ ತಮ್ಮ ನಂಬಿಕೆ ಮೌಲ್ಯಗಳ ಬಗ್ಗೆ ಈ ಕಾದಂಬರಿಗಳು ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ ಎಂದಾದರೆ ಆ ಪ್ರಶ್ನೆಗಳನ್ನು ಹುಟ್ಟಿಸುವ ಚೌಕಟ್ಟು ಮತ್ತು ಮಾನದಂಡಗಳು ವಸಾಹತು ಜ್ಞಾನದೊಂದಿಗೆ ಸಂಬಂಧ ಇದೆಯೇ? ಈ ಸಂಬಂಧ ಏರ್ಪಡಿಸುವಲ್ಲಿ ‘ಪ್ಲಾಟ್’ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದೇ ಇಲ್ಲಿ ಮುಖ್ಯ ಪ್ರಶ್ನೆ.
8. ಇನ್ನು ಕೊನೆಯದಾಗಿ ಕಾದಂಬರಿಗಳಿಗೂ ವಸಾಹತುಪ್ರಜ್ಞೆಗೂ ಇರುವ ಸಂಬಂಧದ ಕುರಿತು ನಿಮ್ಮ ತಕರಾರುಗಳನ್ನು ವಿವರವಾಗಿ ವಿಸ್ತರಿಸುವ ಸಾಧ್ಯತೆ ಈ ಪ್ರತಿಕ್ರಿಯೆಯಲ್ಲಿ ಕಷ್ಟ. ಏಕೆಂದರೆ ಯುರೋಪಿನ ವಿವರಣೆಗಳು ಯಾವ ರೀತಿಯಲ್ಲಿ ವಸಾಹತುಪ್ರಜ್ಞೆಯಾಗಿ ನಮ್ಮಲ್ಲಿನ ಬೇರೆ ಬೇರೆ ಕ್ರಿಯೆಗಳನ್ನು ಬರಹಗಳನ್ನು ಮತ್ತು ನಮ್ಮ ರಾಜಕೀಯ ವ್ಯವಸ್ಥೆಯನ್ನು ಪ್ರಭಾವಿಸಿದೆ ಎನ್ನುವ ಕುರಿತು ಬಹಳ ವಿಸ್ತಾರವಾದ ಚರ್ಚೆಗಳಿವೆ. ಇವುಗಳ ಸರಳರೂಪವನ್ನು ರಾಜಾರಾಮ ಹೆಗಡೆಯವರ ಬೌದ್ಧಿಕ ದಾಸ್ಯದಲ್ಲಿ ಭಾರತ ಇತ್ಯಾದಿ ಪುಸ್ತಕಗಳಲ್ಲಿ ನೋಡಬಹುದು. ಇನ್ನೂ ಹೆಚ್ಚಿನ ವಿವರಣೆಗಳಿಗೆ ಎಸ್. ಎನ್. ಬಾಲಗಂಗಾಧರ ಮತ್ತು ಅವರ ಜೊತೆ ಅಧ್ಯಯನ ಮಾಡಿದವರ ಸಂಶೋಧನೆಯ ಲೇಖನಗಳು ನಮಗೆ ಸಿಗುತ್ತವೆ. ಈ ವಸಾಹತುಪ್ರಜ್ಞೆಯನ್ನು ಬಿಟ್ಟು ಬೇರೆ ಚೌಕಟ್ಟಿನಿಂದ ನೋಡಬೇಕೆಂದರೆ, ಲಿಸಾ ಲಾವ್ ಅವರ ಸಂಗಡಿಗರ re-orientalism ಎನ್ನುವ ವಸಾಹತೋತ್ತರವಾದಿಗಳ ದಕ್ಷಿಣ ಏಷ್ಯ ಕಾದಂಬರಿಗಳ ಕುರಿತ ಬರಹಗಳನ್ನು ಗಮನಿಸಬಹುದು. ನಮ್ಮ ಸಂಶೋಧನೆಯು ವಸಾಹತೋತ್ತರವಾದಿಗಳ ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಈ ವಾದದ ಮಿತಿಗಳನ್ನು ಗಮನಿಸಿ ನಾವು ವಸಾಹತು ಪ್ರಜ್ಞೆ ಭಾರತೀಯ ಕಾದಂಬರಿ ಪ್ರಕಾರದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಿದೆ ಎನ್ನುವುದರ ಕುರಿತು ಆಲೋಚಿಸುತ್ತಿದ್ದೇವೆ. ಆ ಸಂಬಂಧ ಯುರೋಪಿನಿಂದ ಹುಟ್ಟಿ ಬಂದ ಪ್ರಕಾರವಾದ ಕಾದಂಬರಿಗಳಲ್ಲಿ ವಸಾಹತುಪ್ರಜ್ಞೆ ಪುನರುತ್ಪಾದನೆಗೊಳ್ಳುತ್ತದೆ ನಾವು ಕಂಡುಕೊಂಡ ಸಂಶೋಧನೆಯ ಫಲಿತ. ಈ ಕುರಿತು ಸದ್ಯದಲ್ಲಿಯೇ ಕನ್ನಡದಲ್ಲಿ ಎರಡು ಬೇರೆ ಬೇರೆ ಪುಸ್ತಕಗಳು ಹೊರಬರಲಿವೆ. ಒಂದು ಪಕ್ಷ ಭಾರತೀಯ ಕಾದಂಬರಿಯೊಂದರಲ್ಲಿ ವಸಾಹತು ಪ್ರಜ್ಞೆ ಅಥವಾ ಭಾರತದ ಕುರಿತ ಯುರೋಪಿಯನ್ ವಿವರಣೆಗಳು ಪುನರುತ್ಪಾದನೆಯಾಗುವುದಿಲ್ಲ ಎಂದು ಯಾರಾದರೂ ಒಂದು ಭಾರತೀಯ ಕಾದಂಬರಿಯನ್ನು ಉದಾಹರಣೆಯಾಗಿ ತೋರಿಸಿದರೆ ನಮ್ಮ ಊಹಾಸಿದ್ಧಾಂತವನ್ನು ಬದಲಾಯಿಸುತ್ತೇವೆ. ಆ ರೀತಿಯ ಕಾದಂಬರಿಯೊಂದು ಸಿಗಲಿ ಎಂಬುದೇ ನಮ್ಮ ಆಶಯವೂ ಆಗಿದೆ.
ನಿಮ್ಮ ಪ್ರತಿಕ್ರಿಯೆಯ ಮೂಲಕ ಒಂದಷ್ಟು ವಿಷಯಗಳನ್ನು ನಮಗೆ ನಾವೇ ಸ್ಪಷ್ಟಗೊಳಿಸಿಕೊಳ್ಳಲು ಹಾಗೂ ಓದುಗರಿಗೆ ಇನ್ನೊಂದಷ್ಟು ವಿಷಯಗಳನ್ನು ಅವಕಾಶ ಮಾಡಿಕೊಟ್ಟ ಶ್ರೀನಾಥ್ ಶಿರಗಳಲೆಯವರಿಗೆ ನಾವು ಮತ್ತೊಮ್ಮೆ ಧನ್ಯವಾದಗಳನ್ನು ಹೇಳುತ್ತೇವೆ.
ಅಶ್ವಿನಿಯವರೆ, ಕನ್ನಡ ಕಾದಂಬರಿಗಳ ಕುರಿತು ಯೋಚಿಸಲು, ಚರ್ಚಿಸಲು ಅನುವು ಮಾಡಿಕೊಟ್ಟ ನಿಮ್ಮ ಲೇಖನಕ್ಕೆ ಮೊದಲಿಗೆ ಧನ್ಯವಾದಗಳು. ಮತ್ತು ನಾನು ಪ್ರಸ್ತಾಪಿಸಿದ ಕೆಲವು ಅಂಶಗಳ ಬಗ್ಗೆ ವಿವರಿಸಿದ್ದಕ್ಕೂ ಥ್ಯಾಂಕ್ಸ್.
ಆನ್ಲೈನ್ ಸಂವಾದದಲ್ಲಿ ನಮ್ಮ ವಿಚಾರಗಳ ಸ್ಪಷ್ಟ ಅಭಿವ್ಯಕ್ತಿ ಸ್ವಲ್ಪ ಕಷ್ಟವೇ. ಅದರಲ್ಲೂ ನಿತ್ಯ ಬಳಕೆಯ ಪದಗಳಲ್ಲದ ಟೆಕ್ನಿಕಲ್ ಪದಗಳ ಪ್ರಯೋಗ ಕೆಲವೊಮ್ಮೆ ನಾವು ಅಂದುಕೊಂಡ ಅರ್ಥವನ್ನು ದಾಟಿಸದೇ ಹೋಗಬಹುದು. ಅದಕ್ಕಾಗಿ ನಿಮ್ಮ ಟಿಪ್ಪಣಿಗಳ ಮೇಲೆ ಕೆಲವು ವಿವರಣೆ ಕೊಡಬಯಸುತ್ತೇನೆ.
೧. ಯೂರೋಪಿನ ಕಥಾ ಹಂದರ (plot) ದ ಮಾದರಿ ಎಂದು ನಾನು ಹೇಳಿದ್ದು ‘ಯುರೋಪಿನವರು ಪ್ಲಾಟ್ ನ್ನು ಪರಿಕಲ್ಪಸಿಕೊಂಡ ರೀತಿ’ ಎಂಬರ್ಥದಲ್ಲಿ. ರಷ್ಯನ್ ಕಾದಂಬರಿ ಇದಕ್ಕಿಂತ ಭಿನ್ನವಾಗಿ ಪ್ಲಾಟ್ ನ್ನು ಬಳಸಿದ್ದನ್ನು ಸಹ ಪ್ರಸ್ತಾಪಿಸಿದ್ದೇನೆ. ನಿಮ್ಮ ಲೇಖನದಲ್ಲಿ ‘ಯೂರೋಪಿನ Plot ಮೂಲಕ ಭಾರತೀಯರಿಗೆ ಅನುಭವವನ್ನು ಹೇಳಲು ಅಡ್ಡಿಯಾಗುತ್ತದೆ’ ಎಂದು ಬರೆದಿದ್ದರಿಂದ ನಾನು ಪ್ಲಾಟ್ ನ ಬಳಕೆಯಲ್ಲಿ ಈಗಾಗಲೇ ವೈವಿಧ್ಯತೆಗಳಿರುವುದನ್ನು ಪ್ರಸ್ತಾಪಿಸಿದ್ದು.
೨. ಪ್ಲಾಟ್ ನ್ನು ಮುಖ್ಯವಾಗಿ ಗಮನಿಸಬಾರದು ಎಂದು ನಾನು ಹೇಳಿಲ್ಲ. ಪ್ಲಾಟ್ ಗಳ ಬಗ್ಗೆ ಅನೇಕ ಚರ್ಚೆಗಳಿರುವುದು ನನಗೆ ಅರಿವಿದೆ. ಕ್ರಿಸ್ಟೋಫರ್ ಬೂಕರ್ ನ ‘The Seven Basic Plots’ ಬಗ್ಗೆ ಹೇಳಿದ್ದೀರಿ. ಹಾಗೆಯೇ ರಾಬರ್ಟ್ ಬೆಲ್ನ್ಯಾಪ್ ನ ‘Plots’ ಕೃತಿಯಲ್ಲೂ ಪ್ಲಾಟ್ಸ್ ಬಗ್ಗೆ (ಮುಖ್ಯವಾಗಿ War and Peace ಮತ್ತು King Lear ಕೃತಿಗಳ ಪ್ಲಾಟ್ಸ್ ಬಗ್ಗೆ) ವಿಶ್ಲೇಷಣೆ ಇದೆ.
ಓದುಗರ ಮಾಹಿತಿಗಾಗಿ- ಪ್ಲಾಟ್ ಬಗ್ಗೆ ಒಂದು ಇಂಟರೆಸ್ಟಿಂಗ್ ಲೇಖನ ಇಲ್ಲಿದೆ – https://tinyurl.com/7zvam56v
೩. ಕೃತಿಯೊಂದು ಸಾಮಾನ್ಯ ಓದುಗರಲ್ಲಿ ಜನಪ್ರಿಯವಾಗಿದ್ದೂ ಮತ್ತು ವಿಮರ್ಶಕ ವಲಯದಲ್ಲಿ ಮನ್ನಣೆ ಪಡೆಯದೇ ಹೋಗುವುದು ಅಸಾಮಾನ್ಯ ವಿಷಯವೇನಲ್ಲ ನಿಜ. ‘ಜನಪ್ರಿಯವಾದದ್ದು ಶ್ರೇಷ್ಟವಲ್ಲ’, ‘ಶ್ರೇಷ್ಟವಾದದ್ದು ಜನಪ್ರಿಯವಲ್ಲ’ ಇಂತಹ ನಂಬಿಕೆಗಳು ಸಾಮಾನ್ಯವೇ. ಆದರೆ ‘ಶ್ರೇಷ್ಟವಾದದ್ದನ್ನು’ ಅದು ಏಕೆ ಶ್ರೇಷ್ಟವೆಂದು ವಿವರಿಸುವ ಮುಖ್ಯ ಕೆಲಸ ಅಕೆಡೆಮಿಕ್ ವಿಮರ್ಶೆಯದ್ದು ಎನ್ನುವುದೂ ನೆನಪಿಡಬೇಕಾದ ವಿಷಯ.
ನಿಮ್ಮ ವಿವರಣೆಯಲ್ಲಿ ಹೀಗೆ ಬರೆದಿದ್ದೀರಿ- “ಮೊದಲಿಗೆ ನವಲಗುಂದ, ವೈದ್ಯರು ಇತ್ಯಾದಿ ವಿವರಣೆಗಳು ಕನ್ನಡದ ಓದುಗರಿಗೆ, ಅಲ್ಲಿ ವಿವರಿಸುತ್ತಿರುವ ಸ್ಥಳ ಘಟನೆ ಇತ್ಯಾದಿಗಳೊಂದಿಗೆ ಸಂಬಂಧವೇರ್ಪಡಿಸುವ ಕಾರಣಕ್ಕೆ ಕಾದಂಬರಿಗಳು ಬಹಳ familiar ಎನಿಸುವ ಭಾವನೆಯನ್ನು ಸಹಜವಾಗಿ ಹುಟ್ಟಿಸುತ್ತವೆ. ಆದರೆ ಆ ವಿವರಣೆಗಳಲ್ಲಿ ಧುತ್ತೆಂದು ನೀರಸ, ನಿಂತ ನೀರು ಇತ್ಯಾದಿ ವಿವರಣೆಗಳು ಆ familiarity ಇಂದ ದೂರ ಕರೆದುಕೊಂಡು ಹೋಗುತ್ತವೆ.”
ಇಲ್ಲಿ ನನಗೆ ಒಂದೆರಡು ಪ್ರಶ್ನೆಗಳಿವೆ. “ಭಾರತದಲ್ಲಿ ಸಮಾಜ ನಿಂತ ನೀರಾಗಿದೆ” ಎಂದು ಕಾದಂಬರಿಕಾರರು ಬರೆದಿರುವುದು ಓದುಗರನ್ನು ದೂರ ಕರೆದುಕೊಂಡು ಹೋಗುತ್ತವೆ ಎಂಬ ನಿಮ್ಮ ಹೇಳಿಕೆ ಕುತೂಹಲಕರವಾಗಿದೆ. “ಕಾದಂಬರಿಗಳು ಜನರ ಜೀವನ, ಸಮೂಹದ ಇತಿಹಾಸ, ಸಾಮಾಜಿಕ ವ್ಯವಸ್ಥೆ ಅದರ ಬದಲಾವಣೆಯನ್ನು ಕಟ್ಟಿಕೊಡುವುದರ” ಜೊತೆಗೆ ಆ ವ್ಯವಸ್ಥೆಯ ತುಲನೆಯನ್ನು ಆಧುನಿಕ ಚಿಂತನೆಯ ದೃಷ್ಟಿಯಿಂದ ಮಾಡುವುದೂ ಅಗತ್ಯ ಎಂದು ನನಗೆ ಅನಿಸುತ್ತದೆ. ಕೃತಿಯೊಂದು ‘ಜನಪ್ರಿಯತೆ’ಯ ಪರಿಧಿ ಮೀರಿ ” ಶ್ರೇಷ್ಟತೆ”ಯತ್ತ ಸಾಗುವುದು ಹಾಗೇ ಅಲ್ಲವೇ.
ಯುರೋಪಿನಲ್ಲಿ ಮೊದಲು ಪರಿಚಯವಾದ ಕಾರಣಕ್ಕೇ ಸಾಮಾಜಿಕ ಕ್ರಾಂತಿ, ಸುಧಾರಣೆ, ವರ್ಗ ಸಂಘರ್ಷಗಳು ಇತ್ಯಾದಿಗಳು ನಮ್ಮ ಪಾಲಿಗೆ ಅಪಥ್ಯವಾಗಬೇಕೆ? ಕಾದಂಬರಿಕಾರರು ಯಾವುದೇ ಸಾಮಾಜಿಕ ರಾಜಕೀಯ ಪ್ರಶ್ನೆಗಳನ್ನು ಎತ್ತಲೇಬಾರದೇ? ಕಾದಂಬರಿಗಳು ಕೇವಲ ಮನರಂಜನೆಯ, ಯಥಾಸ್ಥಿತಿವಾದದ ಸಾಧನಗಳಾದರೆ ಸಾಕೆ?
ಪ್ರತಿಕ್ರಿಯೆ ತುಂಬಾ ಉದ್ದವಾಯಿತೇನೋ. ಇಲ್ಲಿಗೇ ನಿಲ್ಲಿಸುತ್ತೇನೆ. ನಾನು ಸಾಹಿತ್ಯದ ವಿದ್ಯಾರ್ಥಿಯಲ್ಲ. ಒಬ್ಬ ಆಸಕ್ತ ಓದುಗನಾಗಿ ನನಗನಿಸಿದ್ದನ್ನು ಹಂಚಿಕೊಳ್ಳುತ್ತಿದ್ದೇನೆ. ಕಾದಂಬರಿಕಾರರ ಜಾಣತನ, ವಿವೇಚನೆ, ಪ್ರತಿಭೆಗಳು ಯಾವತ್ತೂ ನನ್ನನ್ನು ಚಕಿತಗೊಳಿಸಿವೆ. ಕನ್ನಡದಲ್ಲಷ್ಟೇ ಅಲ್ಲ.
ಕಾದಂಬರಿಗಳು ಯಥಾಸ್ಥಿತಿಯನ್ನು ಮಾತ್ರ ಹೇಳಬೇಕೆಂದು ಲೇಖಕರು ಹೇಳಿದ್ದಾರೆನಿಸುವುದಿಲ್ಲ.ಯೂರೊಪ್ ಪ್ರಭಾವದ ಕಾದಂಬರಿ ರಚನೆಗೂ ಅದರಿಂದ ಹೊರಬಂದ ಕಾದಂಬರಿಗಳ ಸ್ವರೂಪಕ್ಕೂ ಇರುವ ವ್ಯತ್ಯಾಸವನ್ನು ಲೇಖಕರು ಹೇಳುವ ಯತ್ನ ಮಾಡಿದ್ದಾರೆ
ಅಶ್ವಿನಿಯವರು ಈ ಲೇಖನದಲ್ಲಿ ಮುಖ್ಯವಾಗಿ ಗುರುತಿಸುವ ಅಂಶವೆಂದರೆ, ಕಾದಂಬರಿಯಲ್ಲಿ ಸಮಾಜ ಸಕ್ರಿಯವಾಗಿರುವ/ ಕ್ರಿಯಾಶೀಲವಾಗಿರುವ ಚಿತ್ರಣಗಳನ್ನು ವಿಫುಲವಾಗಿ ನೀಡುತ್ತಲೇ ಭಾರತೀಯ ಸಮಾಜ ಜಡವಾಗಿದೆ ಎಂಬಂತಹ ವಸಾಹತು ಸ್ಟಿರಿಯೋಟೈಪ್ಗಳನ್ನು ಲೇಖಕರು ತಂದು ಸೇರಿಸುವ ಕೆಲಸವನ್ನು ಮಾಡುತ್ತಾರೆ. ಪುನರಾವರ್ತಿತವಾಗುವ ಇಂತಹ ಸ್ಟಿರಿಟಿಪಕಲ್ ಚಿತ್ರಣಗಳು ಓದುಗರ ಅನುಭವಕ್ಕೆ ಪರಕೀಯವಾಗಿ, ಅರ್ಥವಾಗದ ಸಂಗತಿಯಾಗಿ ಉಳಿದುಕೊಳ್ಳುತ್ತದವೆ ಎಂಬುದು..
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ, ಕಾದಂಬರಿಕಾರರು ಸಾಮಾಜಿಕ, ರಾಜಕೀಯ ಪ್ರಶ್ನೆಗಳನ್ನು ಕೇಳಬಾರದೇ? ಖಂಡಿತ ಕೇಳಲರ್ಹರು.. ಆದರೆ ಅವರ ಪ್ರಶ್ನೆಗಳ ಸ್ವರೂಪ, ಮೂಲ ಮತ್ತು ವಿವರಣೆಗಳು ಐರೋಪ್ಯ ದೃಷ್ಟಿಕೋನದ್ದಾದರೆ/ ಪಾಶ್ಚಾತ್ಯ ಹಿನ್ನೆಲೆಯದ್ದಾದರೆ …? ಆಗ ಕಾದಂಬರಿಗಳು ಇಲ್ಲಿನ ವಾಸ್ತವ ಚಿತ್ರಣಗಳಾಗಿವೆ ಎಂಬ ವಾದವನ್ನು ಪರಿಶೀಲಿಸಬೇಕಾಗುತ್ತದೆ.
ನಿನ್ನೆ ಒಂದು ಕಾದಂಬರಿಯಲ್ಲಿ ಹೀಗೆ ಬರೆದಿದ್ದನ್ನು ಓದಿದೆ- “ಬಹುಶಃ ಪುಸ್ತಕಗಳು ಒಬ್ಬೊಬ್ಬರಿಗೂ ಬೇರೆ ಬೇರೆ ಸಂಗತಿಗಳನ್ನು ಹೇಳುತ್ತವೆ” (I guess books say different things to different people.” Sara Nisha Adams, The Reading List)
‘ಹಳ್ಳ ಬಂತು ಹಳ್ಳ’ ಕೃತಿಯ ಬಗ್ಗೆ ನಮ್ಮ ಪ್ರತಿಕ್ರಿಯೆಗಳು ಅದನ್ನೇ ಸೂಚಿಸುತ್ತವೆ.☺️ ನನಗೆ ಈಗಲೂ ವೈದ್ಯರು ಈ ಕೃತಿಯಲ್ಲಿ ಓದುಗರ ಅನುಭವಕ್ಕೆ ಪರಕೀಯವಾಗುವಂತಹ ಸ್ಟಿರಿಯೋಟಿಪಿಕಲ್ ಆದದ್ದೇನೂ ಹೇಳಿದ್ದಾರೆನಿಸುವುದಿಲ್ಲ. ಒಂದೆರಡು ಕಡೆ ‘ನಿಂತ ನೀರು’ ಎಂಬ ಶಬ್ದವನ್ನು ಬಳಸಿರುವುದೂ ಸಹ ಒಂದೋ ಪಂತರ ಮನೆಯ ಬಗ್ಗೆ(ಪು 92), ಇಲ್ಲವೇ ನವಲಗುಂದದ ಬಗ್ಗೆ (ಪು 106). ಉಳಿದಂತೆ ‘ಸಮಾಜದ ಜಡತ್ವ’ ಎಂದು ಎಲ್ಲಿಯೂ ಪ್ರಸ್ತಾಪಿಸಿದಂತೆ ಕಾಣಲಿಲ್ಲ.
ಕಾದಂಬರಿಯ ಕೊನೆಯ ಭಾಗದಲ್ಲಿ ವಾಸುದೇವಾಚಾರ್ಯರು ಧಾರವಾಡ ದಲ್ಲಿರುತ್ತ ಸ್ವಾತಂತ್ರ್ಯ ಹೋರಾಟದ ಉತ್ತುಂಗದ ಕಾಲವಾಗಿದ್ದ ಅಂದಿನ ದಿನಪತ್ರಿಕೆಯ ವರದಿಗಳ ಬಗ್ಗೆ ಧ್ಯಾನಿಸುತ್ತಿದ್ದುದನ್ನು ವೈದ್ಯರು ಹೀಗೆ ವಿವರಿಸುತ್ತಾರೆ – “ದೇಶದ ಉದ್ದಗಲಕ್ಕೂ ನಡೆದ ಸ್ವಾತಂತ್ರ್ಯೋತ್ಸವದ ಸಿದ್ಧತೆಗಳು, ನಾಳಿನ ಹೊಸ ಸಮಾಜದ ನಿರ್ಮಾಣಕ್ಕಾಗಿ ಅವಶ್ಯಕವಾದ ಹೊಂದಾಣಿಕೆಗಳು, ಕೃಷಿಕರು, ಕಾರ್ಮಿಕರು, ದಲಿತರು, ಇವರೆಲ್ಲರ ಸ್ಥಾನ ಮಾನಗಳ ಬಗ್ಗೆ ಕ್ರಾಂತಿಕಾರಿ ಬದಲಾವಣೆಗಳನ್ನು ರೂಪಿಸುತ್ತಿರುವ ಜನ ನಾಯಕರು; ಉಳುವವನೇ ಒಡೆಯ, ಕಾರ್ಮಿಕರ ಹಕ್ಕು, ಮಹಿಳಾ ವಿಮೋಚನೆ ಇಂತಹ, ಇವೆಲ್ಲ ಹೊಸ ಕಲ್ಪನೆಗಳು ಅವರನ್ನು ಗೊಂದಲಗೊಳಿಸುತ್ತಿದ್ದವು”(ಪು 266) ಎಂದು ಬರೆಯುತ್ತಾರೆ. ಇಂತಹ ವಿವರಣೆಗಳು ನಮ್ಮ ಅಂದಿನ ಸಮಾಜವನ್ನು ಜಡವೆಂದು ಅಂದಂತೆ ಅನಿಸಿದರೂ, ನನಗಂತೂ ಅವು ಪ್ರಾಮಾಣಿಕ ಮತ್ತು ಔಚಿತ್ಯಪೂರ್ಣ ಮಾತುಗಳೇ ಅನಿಸಿದವು ಮತ್ತು ಭಾರತೀಯ ದೃಷ್ಟಿಕೋನದಿಂದಲೂ.
ಇರಲಿ. ನಾನು ಮೊದಲೇ ವಿವರಿಸಿದಂತೆ ನಾವು ಪುಸ್ತಕಗಳಿಂದ ಪಡೆಯುವುದು ಬೇರೆ ಬೆರೆಯಾಗಿಯೇ ಇರುತ್ತದೇನೋ.