ಈ ಬರಹವು ಎರಡು ಮಂಡೆಯ ಹಾವು.

ಕನ್ನಡದಲ್ಲಿ ಈ ಮಾತು ನಂಬಿಕೆಗರ್ಹವಲ್ಲದ ಮನುಷ್ಯನನ್ನು ವರ್ಣಿಸಲು ಕುರಿತು ಉಪಯೋಗಿಸಲ್ಪಡುತ್ತದೆ. ಆದರೆ ಈ ಬರವಣಿಗೆಯ ಸಂದರ್ಭದಲ್ಲಿ ನಾನು ಇದನ್ನು ಕೊಂಚ ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತೇನೆ. ಏಕೆಂದರೆ ಈ ಬರಹಕ್ಕೆ ಎರಡು ತುದಿ ಮತ್ತು ಎರಡು ಮೊದಲುಗಳಿವೆ: ಎರಡು ಮಂಡೆಯ ಹಾವಿಗಿದ್ದಂತೆ.

ತಮಾಷೆ ಮತ್ತು ದುರಂತಗಳೆಂದರೆ ಈ ಎರಡು ಮಂಡೆಯ ಹಾವಿನ ಒಂದು ತುದಿ ದೊಡ್ಡ ಮಂಡೆ ಹಾವಿನದ್ದು ಮತ್ತಿನ್ನೊಂದು ತುದಿ ಹಸಿರು ಹಾವಿನದ್ದು. ದೊಡ್ಡ ಮಂಡೆ ಹಾವು, ಹಸಿರು ಹಾವನ್ನೇನು ಗಮನಿಸುವುದು ಎಂಬ ನಿರ್ಲಕ್ಷ್ಯದಲ್ಲಿದ್ದರೆ, ಹಸಿರು ಹಾವು ಊಟವಾದ ಕೂಡಲೇ ಮಾಡಲು ಬೇರೆ ಕೆಲಸವಿಲ್ಲದಾಗ ದೊಡ್ಡ ಮಂಡೆ ಹಾವನ್ನು ತನ್ನ ಅಲ್ಪತನದ ಅರಿವಿಲ್ಲದೇ ಕಚ್ಚುತ್ತ, ತಾನೇನೋ ದೊಡ್ಡ ಕೆಲಸ ಮಾಡಿದೆ ಎಂಬಂತೆ ಬೀಗಿಕೊಂಡಿದೆ.

ಈ ಎರಡೂ ತುದಿಗಳಿಗೂ ಗೊತ್ತಿರದ ಸತ್ಯವೆಂದರೆ ತಾವಿಬ್ಬರೂ ತಮ್ಮ ದೇಹವನ್ನೇ ಕಚ್ಚುತ್ತಿದ್ದೇವೆ ಮತ್ತು ನಿರ್ಲಕ್ಷಿಸುತ್ತಿದ್ದೇವೆ- ಎಂಬುದು.

(ಕೆಂಡ ಸಂಪಿಗೆಯಲ್ಲಿ ಈ ಬಗೆಯ ರೂಪಕಗಳನ್ನೂ, ಕತೆಗಳನ್ನೂ ಬಳಸಲೇ ಭಯವಾಗುತ್ತದೆ. ಅನೇಕ ಹಸಿರು ಹಾವುಗಳು ಎಗರೆಗರಿ ಲೇಖಕನನ್ನು ಕಚ್ಚುತ್ತವೆ.) ನನ್ನ ಗೊಂದಲವೆಂದರೆ ಯಾವ ತುದಿಯ ಬಾಯಿಂದ ಮೊದಲು ಮಾತು ಹೊರಡಿಸಲಿ ಎಂಬುದು. ಸಾಹಿತ್ಯದ ಪಾಪ್ಯುಲರ್ ತಂತ್ರದ ದೃಷ್ಟಿಯಿಂದ ಹಸಿರು ಹಾವಿನ ಬಾಯಿಂದ ಮೊದಲು ಮಾತು ಹೊರಡಿಸುವುದು ಒಳ್ಳೆಯದು. ಈ ಬರಹವನ್ನು ಕ್ಲಾಸಿಕಲ್ ಮಾಡಲೂ ಮತ್ತು ಸರ್ಪ ಸಮುದಾಯದ ಪ್ರೀತಿಗಳಿಸಲೂ ದೊಡ್ಡಮಂಡೆ ಹಾವಿನಿಂದ ತನ್ನ ವಾದ ಮಂಡಿಸುವಂತೆ ಮಾಡುವುದು ಉತ್ತಮ.

ಆದರೆ ಬರೆಯುವ ಈ ನಾನು ಎರಡೂ ಅಲ್ಲದ ಸದಾ ಬದುಕಿನ ಜುಗಾರಿಯಲ್ಲಿ ಮುಳುಗಿದ ಸಾದಾರಣ ಹಾವಾಡಿಗನಾದ್ದರಿಂದ ನಾಣ್ಯವನ್ನು ಆಕಾಶಮುಖಿ ಚಿಮ್ಮಿ ಹೆಡ್ ಬಿದ್ದರೆ ದೊಡ್ಡ ಮಂಡೆ ಹಾವಿನಿಂದಲೂ ಟೈಲ್ ಬಿದ್ದರೆ ಹಸಿರು ಹಾವಿನಿಂದಲೂ ಮಾತನಾಡಿಸುವವನಿದ್ದೇನೆ. ಸೋತ ಹಾವು ಬಳಿಕ ತನ್ನ ವಾದ ಮಂಡಿಸುತ್ತದೆ.

ಸಾಕು. ಈ ರೂಪಕದ ಮೂಲಕ ಇನ್ನು ಮುಂದುವರೆಯಲಾರೆ.

ಹೆಡ್:

ನಾನು ಬದುಕುತ್ತಿರುವುದು ದೂರ ದೇಶವೊಂದರಲ್ಲಿ. ಕನ್ನಡದ ಯಾವ ಬರಹವೂ ಇಲ್ಲಿ ಸಿಗುವುದಿಲ್ಲ. ಇಂಗ್ಲಿಶ್‌ನಲ್ಲಿ ಮತ್ತು ನಾನು ಬಲ್ಲ ಇನ್ನೊಂದು ಯೂರೋಪಿಯನ್ ಭಾಷೆಯಲ್ಲಿ ಓದಿ ಓದಿ ಸುಸ್ತಾಗುತ್ತದೆ. ಕೆಂಡಸಂಪಿಗೆಯ ಬಗ್ಗೆ ಗೊತ್ತಿತ್ತಾದರೂ ನಿರಂತರವಾಗಿ ನಾನು ಅದನ್ನು ಓದುತ್ತಿರಲಿಲ್ಲ. ಮೊನ್ನೆ ಯಾವುದೋ ಕಾರಣಕ್ಕೆ ನನ್ನ ಸ್ನೇಹಿತನೊಬ್ಬನೊಂದಿಗೆ ಚಾಟ್ ಮಾಡುತ್ತಿದ್ದಾಗ, ಕೆಂಡಸಂಪಿಗೆಗೆ ಅವನು ಕಳುಹಿಸಿದ ಬರಹವೊಂದರ ಬಗ್ಗೆ ಹೇಳಿದ. ಕೂಡಲೇ ಖುಷಿಯಾಗಿ ನಾನು ಅದರ ಎಲ್ಲ ಬರಹಗಳನ್ನು ಡೌನ್ ಲೋಡ್ ಮಾಡಿಕೊಂಡು ಬಂದು ಓದುತ್ತ ಕುಳಿತೆ.

ನಮ್ಮೆಲ್ಲ ಹಳೆಯ ಮತ್ತು ಯಾವತ್ತಿನ ಜೀವಂತ ಬರಹಗಾರರನ್ನು ಈ ಅನಂತ ದೂರದ ಮೌನ, ತಾದಾತ್ಮ್ಯಗಳೊಂದಿಗೆ ಹೊಸ ಅನುಭವಗಳ ನಿಕಷೆಯಲ್ಲಿ ಓದುವುದು ಮತ್ತು ಈಗಿನ ನಮ್ಮ ಬರಹಗಾರರನ್ನೂ ಓದುತ್ತ ಅವರೊಂದಿಗಿರುವುದು ಸುಖವಾಗಿ ಕಂಡಿತಾದರೂ, ಬರಹದ ತುದಿಗಳಲ್ಲಿ, ಅಭಿಪ್ರಾಯ-ಪ್ರತಿಕ್ರಿಯೆಯ ನೆಪಗಳಲ್ಲಿ ಕಂಡುಬರುವ ಥರ್ಡ್ ಕ್ಲಾಸ್ ಟೀಕೆ, ಉಡಾಫೆಯ ಅಹಂಕಾರಗಳನ್ನು ಕಂಡು ಹೇಸಿಕೆಯಾಯಿತು. ಮತ್ತೊಮ್ಮೆ ಹೇಳುತ್ತೇನೆ: ಹೇಸಿಗೆಯಾಯಿತು. 

ನಾನು ಈ “ಕಾಮೆಂಟಿಗರನ್ನು” ಒಬ್ಬಬ್ಬರನ್ನಾಗಿ ಎತ್ತಿಕೊಂಡು ಅವರಿಗೆ ಪ್ರತಿಕ್ರಿಯಿಸುತ್ತ ಹೋಗುವುದಿಲ್ಲ. ಅದು ನನ್ನಂಥ ಒಂಟಿ ಪ್ರಾಣಿಯಿಂದ ಸಾಧ್ಯವೂ ಇಲ್ಲ. ಏಕೆಂದರೆ ನೀವು ಅನೇಕರಿದ್ದೀರಿ. ರಾತ್ರಿ ಊಟವಾದ ಮೇಲೂ ಕಾಮೆಂಟಿಸಲು ಹಸಿದಿರುತ್ತೀರಿ. ಕಾಮದ ಹಸಿವಿನಷ್ಟೇ ತೀವ್ರದಲ್ಲಿ ನಂಜಿನ ಹಸಿವನ್ನೂ ಕಾಪಾಡಿಕೊಂಡು ಬಂದಿದ್ದೀರಿ. ಯಾವತ್ತೋ ಒಮ್ಮೆ ಭವಿಷ್ಯದಲ್ಲಿ ನಿಜವಾದ ಕತೆಗಳನ್ನೂ ಬರೆಯುವ ಮತ್ತು ಅದಕ್ಕೆ ಮೇಲ್ಪಂಕ್ತಿಯ ಬರಹಗಾರರ ಕಟಾಕ್ಷವನ್ನು ಪಡೆಯುವ ದೂರಾಲೋಚನೆಯಲ್ಲಿ ಹೆಸರಿಲ್ಲದೇ “ಗೆಸ್ಟ್”ಗಳಾಗಿ ಪ್ರತಿಕ್ರಿಯಿಸುತ್ತೀರಿ. ನಿಮ್ಮಲ್ಲಿ ಯಾರೂ ಕೆಟ್ಟ ಬರಹಗಾರರಿಲ್ಲ; ಮನುಷ್ಯತ್ವದಲ್ಲಿ ಮಾತ್ರವಷ್ಟೇ ಕೆಟ್ಟಿದ್ದೀರಿ.

ಈ ಮೇಲಿನ ಮಾತುಗಳನ್ನು ಕೂಲಾಗಿ ತೆಗೆದುಕೊಳ್ಳಿ. ನಾವು ನಿತ್ಯದಲ್ಲಿ “ಡೈಲಾಗ್ ಹೊಡೆಯುವವನಿಗೆ ಡೈಲಾಗ್ ಹೊಡೆಸಿಕೊಳ್ಳುವ ಛಾತಿಯೂ ಇರಬೇಕು” ಎನ್ನುತ್ತೇವಲ್ಲ? ಹಾಗೆ. ಕ್ವಿಟ್ಸ್.

ಒಂದೊಂದೇ ಬರಹವನ್ನು ಓದುತ್ತ ಹೋದಂತೆ ಮತ್ತು ಅದರ ಕೆಳಗಿನ ಕಾಮೆಂಟ್ಸ್ ಓದುತ್ತ ಹೋದಂತೆ ಅಚ್ಚರಿಯಾಯಿತು. ಮೊಗಳ್ಳಿ, ದೇವನೂರು, ದಿವಾಕರ್, ಅನಂತಮೂರ್ತಿ ಎಲ್ಲರಿಗೂ ಒಬ್ಬಬ್ಬರೂ ಬೇರೆಯಲ್ಲವೆಂಬಂತೆ ಒಂದೇ ಧಾಟಿಯಲ್ಲಿ “ಕಾಮೆಂಟಿಗರು” ಪ್ರತಿಕ್ರಿಯಿಸಿದ್ದಾರೆ. ದೇವನೂರು, ಮೊಗಳ್ಳಿ ಹುಟ್ಟಿನಿಂದ ಶೂದ್ರರು: ಅವರು ಬ್ರಾಹ್ಮಣರ ವಿರುದ್ಧ (ಈ ಪ್ರಯೋಗ ತಪ್ಪು: “ವಿರುದ್ಧ” ಎಂಬ ಪದ. ಆದರೆ ಇವರು ಮಾತಾನಾಡಿದ್ದು ಬ್ರಾಹ್ಮಣ್ಯದ ವಿರುದ್ಧ ಎಂದೋ, ಆನುಶಂಗಿಕವಾಗಿ ಮತ್ತು ಆರ್ಗ್ಯಾನಿಕಲ್ ಆಗಿ ನಮ್ಮ ಸಮಾಜದ ಸ್ಥಿತಿಯೊಳಗೆ ಹೂತುಹೋಗಿ ಸರ್ವರ ಸಮಾನ ಉದಯದ  ಗತಿಯನ್ನು ತಡೆಹಿಡಿಯುತ್ತಿರುವ ಭೂತವೊಂದರ ವಿರುದ್ಧ ಎಂದೋ ಎಷ್ಟೋ ಜನ ವಿವರಿಸಿದ್ದಾರೆ) ಮಾತನಾಡುವುದು ತಪ್ಪು. ಅನಂತಮೂರ್ತಿ ಹುಟ್ಟಿನಿಂದ ಬ್ರಾಹ್ಮಣ. ಅವರು ಕೂಡ ಬ್ರಾಹ್ಮಣರ ವಿರುದ್ಧ ಮಾತನಾಡುವುದು ತಪ್ಪು. ಒಟ್ಟಾರೆ ಬ್ರಾಹ್ಮಣರ ವಿರುದ್ಧ ಮಾತನಾಡುವುದು ತಪ್ಪು.

ಇಷ್ಟು ಓದಿದ ಮೇಲೆ ನೀವು ನನ್ನನ್ನು ಶೂದ್ರ ಎಂದು ಕಲ್ಪಿಸಿಕೊಂಡು ನಿಮ್ಮ ಕಾಮೆಂಟಿಗೆ ತಯ್ಯಾರಾಗಿಬಿಡಬೇಡಿ. ನಾನು ನಿಮ್ಮಲ್ಲಿನ ಶೇಕಡಾ ತೊಂಬತ್ತು ಪ್ರತಿಶತ ಕಾಮೆಂಟಿಗರಂತೆ ಬ್ರಾಹ್ಮಣ. ಈಗ ನಿಮ್ಮ ಮನಸ್ಸಿನಲ್ಲಿ ಹುಟ್ಟಿರಬಹುದಾದ ಕಾಮೆಂಟ್ ನಂತೆ ನಾನು ಸಾಬರಿಗೆ ಹುಟ್ಟಿದ ಬ್ರಾಹ್ಮಣನೇನಲ್ಲ.

ಇನ್ನು ಹೆಚ್ಚು ಎಳೆಯುವುದರಲ್ಲಿ ಅರ್ಥವಿಲ್ಲ. ನೇರವಾಗಿ ಹೇಳುತ್ತ ಹೋಗುತ್ತೇನೆ. ನಮ್ಮ ಕನ್ನಡದಲ್ಲಿ ಎಸ್.ಎಲ್ ಭೈರಪ್ಪನವರ ಮತ್ತು ಚಿದಾನಂದಮೂರ್ತಿಯವರ ಬರಹಗಳು ಪ್ರಕಟವಾಗಿ ಅವಕ್ಕೆ ಪ್ರತಿಕ್ರಿಯೆಗಳು ಇನ್ನಿತರ ಸಾಹಿತ್ಯ ವಲಯದಿಂದ ಪ್ರಕಟವಾದ ಕೂಡಲೇ ಗಲಾಟೆ ಶುರುವಾಗುತ್ತದೆ. ಭೈರಪ್ಪನವರ ಕಡೆಯ ಕಾದಂಬರಿ (ಈ ಕಡೇಯ ಎಂಬ ಪದ ನಿಜವಾಗಲೆಂದು ಸಾವಿರದೆಂಟು ಗಾಯತ್ರಿ ಮಾಡುತ್ತೇನೆ) ಆವರಣ ಪ್ರಕಟವಾದಾಗ ಅನಂತಮೂರ್ತಿಯವರ “ಭೈರಪ್ಪ ಕಾದಂಬರಿಕಾರನೇ ಅಲ್ಲ” ಎಂಬ ಮಾತಿನ ಮೇಲೆ ಎಸ್ಸೆಮ್ಮೆಸ್ಸುಗಳ, ಬೈಗುಳಗಳ ಮಳೆಯಾಯಿತು. (ಫ್ರೆಂಚರು- ಜೋರು ಮಳೆಯಾದಾಗ, ‘ದನ ಉಚ್ಚೆ ಹೊಯ್ದಂತೆ ಮಳೆಯಾಗುತ್ತಿದೆ’ ಎನ್ನುತ್ತಾರೆ. ಈ ಎಸ್ಸೆಮ್ಮೆಸ್ಸುಗಳ ಮಳೆ ದನಕಾಯುವವರ ಉಚ್ಚೆಯಂತೆ ಕಾಣುತ್ತಿದೆ, ನನಗೆ).

ಆದರೆ ಅವರ ಭಾಷಣದ ಪೂರ್ಣಪಾಠವನ್ನು ಓದುವ ತಾಳ್ಮೆಯನ್ನು ಯಾರಾದರೂ ಹೊಂದಿದ್ದಿದ್ದರೆ ಮತ್ತು ಅನಂತಮೂರ್ತಿಯವರು ಭೈರಪ್ಪನವರ “ವಂಶವೃಕ್ಷ”(ಇದು ನಿಜಕ್ಕೂ ಭೈರಪ್ಪನವರು ಬರೆದ ಒಳ್ಳೆಯ ಕಾದಂಬರಿಗಳ ಪೈಕಿ ಒಂದು) ಕಾದಂಬರಿಯ ಕುರಿತು ಬರೆದಿದ್ದನ್ನು ಓದಿದ್ದರೆ ಅಷ್ಟು ತರಾತುರಿಯಲ್ಲಿ ಆ ಮಾತನ್ನು ಖಂಡಿಸುವ ಆತುರ ತೋರಿಸುತ್ತಿರಲಿಲ್ಲ ಅನ್ನಿಸುತ್ತದೆ. ನನಗೆ ಆಗ ಆಶ್ಚರ್ಯವಾದುದೆಂದರೆ, ಈ ಭಾಷಣ ಮೊದಲು ಪ್ರಕಟವಾದ ಕನ್ನಡಪ್ರಭದ ಉಪಸಂಪಾದಕರಾಗಿದ್ದ ‘ಜೋಗಿ’ ಕೂಡ ತಮ್ಮ ಜಾನಕಿ ಕಾಲಂನಲ್ಲಿ ಈ ಮಾತಿನ ವಿರುದ್ಧ ಬರೆದದ್ದು. ಇರಲಿ.

ಈ ಸಮಸ್ಯೆಯನ್ನು ಕೆಲವು ಉದಾಹಾರಣೆಗಳ ಸಮೇತ ವಿವರಿಸಲು ಯತ್ನಿಸುತ್ತೇನೆ. ಹಿಂದೊಮ್ಮೆ ನಾನು ಟಾಲ್‌ಸ್ಟಾಯ್ ಬರೆದ “ಕಜಾಕರು” (ಕಜಾಕಸ್) ಪುಸ್ತಕವನ್ನು ಓದಲು ಎತ್ತಿಕೊಂಡಾಗ ಅದರ ಹೆಸರಿನಡಿಯಲ್ಲಿ ನೀಳ್ಗತೆ ಎಂದು ಇತ್ತು. ನೂರಾ ಐವತ್ತಕ್ಕಿಂತ ಹೆಚ್ಚಿನ ಪುಟವಿದ್ದ ಅದು ಹೇಗೆ ಕಥೆಯೆಂದೂ, ಕೇವಲ ನೂರಾ ಹತ್ತು ಪುಟ ಚಿಲ್ಲರೆ ಇರುವ ಅನಂತಮೂರ್ತಿಯವರ ಸಂಸ್ಕಾರ ಹೇಗೆ ಕಾದಂಬರಿಯೆಂದೂ ನನಗೆ ಪ್ರಶ್ನೆಯುಂಟಾಯಿತು. (ನಾನು ಓದಿದ ಆ ಪುಸ್ತಕವನ್ನು ಮುದ್ರಿಸಿದ್ದು ರಷ್ಯಾದ ಯಾವುದೋ ಮಾಸ್ಕೋ ಪ್ರಕಾಶನ ಎಂಬ ಸಂಸ್ಥೆ. ಅದು ಅದನ್ನು ನೀಳ್ಗತೆ ಎಂದು ಕರೆದಿತ್ತು. ಆದರೆ ಮೈಕ್ರೋಸಾಫ್ಟ್ ನವರ ಎನ್‌ಸೈಕ್ಲೋಪೀಡಿಯಾದ ಪ್ರಕಾರ ಅದು ಕಾದಂಬರಿ ಎಂದಿದೆ; ಇರಲಿ)

ಆದರೆ ಕಜಾಕಸ್ ಅನ್ನು ಓದುತ್ತ ಹೋದ ಹಾಗೆ ಅದು ಯಾಕೆ ಕತೆಯೆಂದೂ, ಸಂಸ್ಕಾರ ಏಕೆ ಕಾದಂಬರಿಯೆಂದೂ ಮನದಟ್ಟಾಗುತ್ತ ಹೋಯಿತು. ನನಗೆ ಈಗ ಕತೆ ನೆನಪಿಲ್ಲವಾದರೂ, ಆ ಕಥೆಯ ಮುಖ್ಯ ಪಾತ್ರ ತನ್ನ ಸುತ್ತನ್ನು ತನ್ನನ್ನೇ ಕೇಂದ್ರವಾಗಿಟ್ಟುಕೊಂಡು ಗಮನಿಸುತ್ತಾ ಹೋಗುತ್ತದೆ. ಅಥವಾ, ಆ ಕಥೆಯಲ್ಲಿ ಅದರ ಮುಖ್ಯ ಪಾತ್ರದಷ್ಟೇ ಮುಖ್ಯವಾದ ಇನ್ನೊಂದು ಪಾತ್ರವಾಗಲೀ, ಅಥವಾ ಆ ಪಾತ್ರದ ತಿಳುವಳಿಕೆ, ಅಭಿಪ್ರಾಯಗಳನ್ನು ಮಥನಕ್ಕೆ ಒಳಪಡಿಸುವ ಇನ್ನೊಂದು ಪಾತ್ರವಾಗಲೀ ಕಂಡುಬರುವುದಿಲ್ಲ. ಸಾಧಾರಣವಾಗಿ ಕತೆಗಳು ಹೀಗಿರುತ್ತವೆ. ತೀರಾ ಹೀಗೇ ಅಲ್ಲವಾದರೂ ಕತೆಯೆಂಬುದು ಸ್ವಲ್ಪಮಟ್ಟಿಗೆ ರಿಸ್ಟ್ರಿಕ್ಟೆಡ್ ಆದ ವ್ಯಾಪ್ತಿಯದ್ದು. ಅದರಲ್ಲಿನ ಪಾತ್ರಗಳ ಅಭಿಪ್ರಾಯವನ್ನು, ಬದುಕನ್ನೂ, ದೃಷ್ಟಿಯನ್ನೂ ತೀರಾ ಇನ್ನೊಂದು ಪಾತ್ರ ಪೂರ್ತಿ ಬದಲಿಸುವ, ಪ್ರಶ್ನಿಸುವ, ಚರ್ಚೆಗೊಳಪಡಿಸುವ ವ್ಯಾಪ್ತಿಯನ್ನು ಅವು ಹೊಂದುವುದಿಲ್ಲ. ಇದಕ್ಕೆ ವಿರುದ್ಧವಾಗಿ ಕಾದಂಬರಿ ತನ್ನ ಮುಖ್ಯ ಪಾತ್ರವನ್ನೇ ಇತರ ಪಾತ್ರಗಳಿಂದ ಕೆಡಹುತ್ತದೆ. ಬೆಳೆಸುತ್ತದೆ. ಪೋಷಿಸುತ್ತದೆ. ತಿದ್ದುತ್ತದೆ. ಕಾದಂಬರಿಯಲ್ಲಿ ಒಂದೇ ಗಟ್ಟಿ ಪಾತ್ರ ಎಂಬುದಿರುವುದಿಲ್ಲ. ಗಟ್ಟಿ ಪಾತ್ರವನ್ನಾಗಿ ಲೇಖಕ ಬೆಳೆಸಲು ಹೊರಟಿದ್ದನ್ನೇ ಕಾದಂಬರಿ ತನ್ನನ್ನು ಬರೆಸಿಕೊಳ್ಳುವ ಅವಸ್ಥೆಯಲ್ಲಿ ಬುಡಮೇಲಾಗಿಸಿ ಲೇಖಕನನ್ನೇ ಸೋಲಿಸುತ್ತದೆ. ಇದನ್ನು ಬರವಣಿಗೆಯ ಸುಖ, ಹಿಂಸೆ, ಅನನ್ಯತೆ, ತೀವ್ರತೆಗಳನ್ನು ಅನುಭವಿಸಿ ಗೊತ್ತಿರದ ಕೇವಲ “ಕಾಮೆಂಟಿಗ” ತನ್ನ ಚಟಕ್ಕೆ ಎಂಬಂತೆ “ಸೋ ಬೋರಿಂಗ್ ಯಾ” ಎಂಬ ತಿಕ ಸೊಕ್ಕಿನ ತಿಕ್ಕಲು ಮಾತಾಡಿ ಉರುಳಿಸಲು ಯತ್ನಿಸುತ್ತಾನೆ.

ಭೈರಪ್ಪ ಯಾಕೆ ಕೆಟ್ಟ ಕಾದಂಬರಿಕಾರ ಎಂದು ಹೇಳುವ ಮುಂಚೆ ಅವರ ಅವರ ಒಳ್ಳೆಯ ಕಾದಂಬರಿಗಳು ಯಾವುವು ಎಂದು ಹೇಳಿಬಿಡುತ್ತೇನೆ. ಉಳಿದವು ಯಾಕೆ ಕಾದಂಬರಿಗಳಲ್ಲ ಎಂದು ಹೇಳಿಯಾದ ಮೇಲೆ ಇವು ಯಾಕೆ ಒಳ್ಳೆಯವು ಎಂದು ಹೇಳಲೆತ್ನಿಸುತ್ತೇನೆ.

ಭೈರಪ್ಪನವರು ಬರೆದ ಒಳ್ಳೆಯ ಕಾದಂಬರಿಗಳು- ವಂಶವೃಕ್ಷ, ಗೃಹಭಂಗ; ಸ್ವಲ್ಪಮಟ್ಟಿಗೆ ಪರ್ವ ಮತ್ತು ನಿರಾಕರಣ. ಇವುಗಳಲ್ಲಿ ಗೃಹಭಂಗ ಭಾರತದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದಾಗಿ ನಿಲ್ಲಬಲ್ಲದ್ದು. ವಂಶವೃಕ್ಷ ಟ್ಯಾಗೂರರ ಗೋರಾವನ್ನೂ, ಅನಂತಮೂರ್ತಿಯವರ ಸಂಸ್ಕಾರವನ್ನೂ ಸ್ವಲ್ಪಮಟ್ಟಿಗೆ ಹೋಲುತ್ತದೆ. ಇವು ಮೂರು ಒಳ್ಳೆಯ ಕಾದಂಬರಿಗಳು. ಪರ್ವದ ಬಗ್ಗೆ ನಾನೇನೂ ಹೇಳುವುದಿಲ್ಲ. ನಿರಾಕರಣದ ನರಹರಿಯ ಪಾತ್ರ ಹೊರಗಿನ ಒತ್ತಡ, ಇತರ ಪಾತ್ರಗಳಿಂದ ಚೆರ್ನ್ ಆಗುವುದಿಲ್ಲವಾದರೂ ಆತನ ಒಳಗಿನ ತಿಕ್ಕಾಟಗಳು ಆ ಕಾದಂಬರಿಯನ್ನು ಬೆಳಗಿಸುತ್ತವೆ.

ಆದರೆ, ಉಳಿದ ಕಾದಂಬರಿಗಳನ್ನು ಸ್ವಲ್ಪ ವಿರಾಮದಲ್ಲಿ, ನಿರ್ಲಿಪ್ತತೆಯಲ್ಲಿ, ನೀವಾಗಿರದೇ ಓದಿನೋಡಿ. ಅವೆಲ್ಲವೂ ಡಿಬೇಟ್ ಗಳು. ಅವುಗಳಲ್ಲೆಲ್ಲ ಒಂದು ಗಟ್ಟಿ ಪಾತ್ರವಿದೆ; ಅದು ಲೇಖಕನ ಅಭಿಪ್ರಾಯಗಳನ್ನೇ ಹೊತ್ತಂತದ್ದು. ಅದರ ಸುತ್ತ ಅಸಂಖ್ಯ ಟೊಳ್ಳು ಪಾತ್ರಗಳು. ಆ ಮಧ್ಯದ ಪಾತ್ರ ತನ್ನ ಸುತ್ತಲಿನ ಇತರ ಪಾತ್ರಗಳನ್ನು ಚರ್ಚೆಯಲ್ಲಿ ಸೋಲಿಸುತ್ತ, ಕಾದಂಬರಿ ಪ್ರಕಟವಾದ ಮೇಲೆ ಬರಬಹುದಾದ ಪ್ರಶ್ನೆಗಳನ್ನು ಆ ಟೊಳ್ಳು ಪಾತ್ರಗಳ ಬಾಯಿಂದ ಕೇಳಿಸಿ ಅವಕ್ಕೆ ಲೇಖಕನ ಉತ್ತರಗಳನ್ನು ಮುಖ್ಯ ಪಾತ್ರದ ಬಾಯಿಯಿಂದ ಹೇಳಿಸಿ ಸೋಲಿಸುತ್ತ ಕಾದಂಬರಿ ಮುಗಿಯುತ್ತದೆ.

ನಿಮ್ಮಲ್ಲಿ ಅನೇಕರು “ಓದಿಸಿಕೊಂಡು ಹೋಗುತ್ತದೆ” ಎಂಬ ಕಾರಣಕ್ಕೆ ಭೈರಪ್ಪನವರನ್ನು ಇಷ್ಟಪಡುವಷ್ಟೇ ತೇಜಸ್ವಿಯವರನ್ನು ಮೆಚ್ಚುತ್ತೀರಿ. ಮೇಲೆ ಹೇಳಿದ ನಾಲ್ಕು ಕಾದಂಬರಿಗಳನ್ನು ಬಿಟ್ಟು ಉಳಿದ ಭೈರಪ್ಪನವರ ಕಾದಂಬರಿಗಳನ್ನು ತೇಜಸ್ವಿಯವರ “ಕರ್ವಾಲೋ”ದ ಜೊತೆ ಇಟ್ಟು ನೋಡಿ. ಕರ್ವಾಲೋದಲ್ಲಿ ಬರುವ “ನಿರೂಪಕ”ನೇ ಅಲ್ಲಿ ನಗಣ್ಯ: ಮಂದಣ್ಣನಿಗಿಂತಲೂ, ಕರ್ವಾಲೋಗಿಂತಲೂ. ನಿರೂಪಕ ತನ್ನ ಪ್ರಶ್ನೆಗಳನ್ನೂ, ದಡ್ಡತನವನ್ನೂ ಒಂದು ಪಾತ್ರದ ಎದುರಿಗೆ ಇಡುತ್ತ ತಾನು ಮರೆಯಲ್ಲಿ ನಿಲ್ಲುತ್ತ ಹೋಗುತ್ತಾನೆ. ಆತ ಯಾರು? ನಿರೂಪಕ. ಇಡೀ ಸುತ್ತಲನ್ನು ತಾನು “ನಿರೂಪಿಸುವ” ರೀತಿಯಲ್ಲಿಯೇ ಬದಲಾಯಿಸಬಲ್ಲಾತ. ತಾನೇ ನಡುರಂಗಕ್ಕೆ ಬರಬಲ್ಲಾತ. ಆದರೆ ಆತ ಬರುವುದಿಲ್ಲ. ತನಗೆ ಗೊತ್ತಿರುವುದಕ್ಕಿಂತ ಕರ್ವಾಲೋಗೇ ಹೆಚ್ಚು ಗೊತ್ತು ಎಂಬ ವಿನಯವನ್ನು ಹೊಂದಿದಾತ. ಮಂದಣ್ಣನನ್ನೂ ಅವನ ಗುರುವಾಗಿ ಪರಿಗಣಿಸಿ ಅವನಿಂದ ಕಲಿಯಬಲ್ಲಾತ.

(ಇದಕ್ಕೂ ನೀವು “ಮಂದಣ್ಣ ಮತ್ತು ಕರ್ವಾಲೋ ಗಳು ತೇಜಸ್ವಿ ಸೃಷ್ಟಿಸಿದ ಪಾತ್ರಗಳು. ಆದ್ದರಿಂದ ತೇಜಸ್ವಿಯೇ ಈ ಪಾತ್ರಗಳ ಮೂಲಕ ಮಾತನಾಡುತ್ತಿದ್ದಾರೆ” ಎಂದು ಪ್ರತಿಕ್ರಿಯಿಸಬಹುದು. ಹಾಗಲ್ಲ. ಒಬ್ಬ ಲೇಖಕ ತನಗೆ ಗೊತ್ತಿದ್ದುದನ್ನು ಬರೆಯುತ್ತಲೂ ತಾನು ಐಡಲ್ ಆಗಿರುವುದು ಮುಖ್ಯವಾದದ್ದು ಎಂಬುದು ನನ್ನ ತಿಳುವಳಿಕೆ. ಕಾದಂಬರಿ ಎಂದರೆ ಅಥವಾ ಬರವಣಿಗೆ ಎಂದರೆ ಗೊತ್ತಿದ್ದುದ್ದೆಲ್ಲವನ್ನೂ, ತನ್ನ ವೈಯಕ್ತಿಕ ಅಭಿಪ್ರಾಯವೆಲ್ಲವನ್ನೂ ಕಾಗದದ ಮೇಲೆ ಮೂತ್ರ ಮಾಡುವುದಲ್ಲವಲ್ಲ. ಬರಹಗಾರ ತನ್ನ ಜೀವನವನ್ನಿಡೀ ಅದಕ್ಕೆ ತೈದಿರುತ್ತಾನೆ. ಯಾವ ಬರಹಗಾರ ಕೂಡ ಬರೆಯಲೆಂದು ಅಂದುಕೊಂಡು ಕೂತದ್ದನ್ನೇ ಬರೆಯಲಾರ. ಅಂಥ ಕಾಳಿದಾಸನೇ ದೇವಿ ಕಾಳೀಗೆ “ತಾಯೀ, ನನ್ನ ಮನಸ್ಸಿನಲ್ಲಿ ಬಂದುದು ಕಾವ್ಯದಲ್ಲಿ ನಿಜವಾಗಲೀ” ಎಂದು ಬೇಡಿಕೊಂಡಿದ್ದನಂತೆ ಎಂಬ ಕತೆಯಿದೆಯಲ್ಲವೆ)

ಈಗ ನೋಡಿ. ಈ ಬರಹವನ್ನು ನೀವು ಓದಿದ ಮೇಲೆ ನಿಮ್ಮ ಕಾಮೆಂಟುಗಳೇನಿರಬಹುದು ಎಂದು ನಾನು ಊಹಿಸಿ ಅವಕ್ಕೆ ಊಹಾತ್ಮಕವಾಗಿ ಉತ್ತರಿಸುತ್ತ ಹೋದರೆ ಇದು, ನಾವೆಲ್ಲರೂ ಎಂಟನೇ ತರಗತಿಯಲ್ಲಿ ಚರ್ಚಾಸ್ಪರ್ಧೆಗೆ ಹೋಗುವಾಗ ನನ್ನ ಪ್ರತಿಸ್ಪರ್ಧಿ ಏನೇನು ಪಾಯಿಂಟ್ ಇಟ್ಟುಕೊಂಡೀರಬಹುದು, ಅದನ್ನೆಲ್ಲ ಉರುಳಿಸುವುದು ಹೇಗೆ ಎಂಬಂಥ ಚೈಲ್ಡಿಶ್ ನೆಸ್ ಆಗುತ್ತದೆ.

ಭೈರಪ್ಪನವರು ಮಾಡಿದ್ದು ಇದನ್ನ. ಇನ್ನೂ ಕೆಲವು ಉದಾಹಾರಣೆಗಳೊಂದಿಗೆ ಹೇಳಲು ಯತ್ನಿಸುತ್ತೇನೆ. ಜೋಸೆಫ್ ಕಾನ್ರಾಡ್ ನ ಹಾರ್ಟ್ ಆಫ್ ಡಾರ್ಕ್‌ನೆಸ್ ಅನ್ನು ಓದಿದರೆ, ನಿಮಗೆ “ಇದೇನಿದು” ಅನ್ನಿಸುತ್ತದೆ. ಒಂದೇ ಎಳೆಯಂಥ ಏಕಮುಖಿ ನಿರೂಪಣೆ; ಆದರೆ ಇದು ಹೇಗೆ ಒಳ್ಳೆಯ ಕಾಬಂಬರಿಯೂ ಹೌದು ಎಂದು ಅಚ್ಚರಿಯಾಗುತ್ತದೆ. ಭೈರಪ್ಪನವರ ಕಾದಂಬರಿಗಳು ತಮ್ಮ ನಿರೂಪಣೆಯಲ್ಲಿ ಒಂದು ಧೋರಣೆಯನ್ನು ಅನೇಕ ಉದಾಹಾರಣೆ, ಉತ್ತರಗಳ ಮೂಲಕ ಗಟ್ಟಿ ಮಾಡುತ್ತ ಹೋದರೆ, ಅಂಥದೇ ಕತ್ತೆ ಉಚ್ಚೆ ಹೊಯ್ದಂತ ನಿರೂಪಣೆಯಿರುವ ಕಾನ್ರಾಡ್ ನ ಕಾದಂಬರಿ ನಿಧಾನವಾಗಿ ಸಿಕ್ಕನ್ನು ಬಿಡಿಸುತ್ತ, ತಾನೂ ಸಿಕ್ಕಿನ ಭಾಗವಾಗುತ್ತ, ಅಚ್ಚರಿಗೊಳ್ಳುತ್ತ, ಮಾನವೀಯವಾಗುತ್ತ ಹೋಗುತ್ತದೆ. ನಿಮಗೆ ಮಾಡಿಕೊಳ್ಳುವ ಮನವಿಯೆಂದರೆ- ತಾಳ್ಮೆಯಿಡಿ. ಬರಹಗಾರರನ್ನು ಬಯ್ಯುವ ಮುಂಚೆ ನಮ್ಮ ಓದನ್ನು ಉತ್ತಮಪಡಿಸಿಕೊಳ್ಳೋಣ.

ಕೆಲವರು ಲಂಕೇಶರನ್ನು ಪದೇ ಪದೇ ನೆನಪಿಸಿಕೊಳ್ಳುತ್ತೀರಿ ಎಂದು ಮೈ ಪರಚಿಕೊಳ್ಳುತ್ತೀರಿ. ಅದೇ ನೀವು, ಶಂಕರ್ ನಾಗ್ ಇದ್ದಿದ್ದರೆ ಇವತ್ತು ರಾಜ್‌ಕುಮಾರ್ ಕಿಂತ ಬೆಳೆದಿರುತ್ತಿದ್ದ ಎಂದು ನೆನಪಿಸಿಕೊಳ್ಳುವುದಿಲ್ಲವೆ? ಲಂಕೇಶ್ ಎಂಬ ಪ್ರಜ್ಞೆ ನಮ್ಮ ಲೇಖಕರಲ್ಲಿ ಯಾಕೆ ಅಷ್ಟು ಮುಖ್ಯವಾಗಿ ಉಳಿದಿದೆ ಎಂದರೆ, ಲಂಕೇಶ್ ವರ್ತಮಾನಕ್ಕೆ ಪ್ರತಿಕ್ರಿಯಿಸುತ್ತಿದ್ದ ರೀತಿಗೆ. ನಾನು ಲಂಕೇಶರು ಹೋದಾಗ ಬಹುಷಃ ಎಂಟು ವರುಷದ ಹುಡುಗ. ಆದರೆ ಅವರ ಟೀಕೆ-ಟಿಪ್ಪಣಿ ಮತ್ತು ಇನ್ನಿತರ ಅಂಕಣಗಳ ಕಲೆಕ್ಷನ್ ಓದುವಾಗ ಇದು ಅರ್ಥವಾಗುತ್ತದೆ.

ಶಂಕರ್‌ನಾಗ್ ಮತ್ತು ಲಂಕೇಶರು ಇಬ್ಬರೂ ವರ್ತಮಾನದಲ್ಲಿ ಇದ್ದೂ “ಕಲ್ಲು ಕರಗುವ ಸಮಯ”, “ಒಂದು ಮುತ್ತಿನ ಕಥೆ”ಯನ್ನು ಸೃಷ್ಟಿಸಬಲ್ಲ ಚೈತನ್ಯಗಳಾಗಿದ್ದವರು. ನೀವು ಸಾವರ್ಕರ್ ಇದ್ದಿದ್ದರೆ ಸಾಬರಿಗೆ ಒಂದು ಗತಿಯಾಗುತ್ತಿತ್ತು ಎಂದು ನೆನಪಿಸಿಕೊಳ್ಳುತ್ತೀರಿ; ನಾವು ಲಂಕೇಶರಿದ್ದಿದ್ದರೆ ನಮ್ಮ ತಲ್ಲಣ, ಅನುಕಂಪ, ಮಾನವೀಯತೆಗಳು ಇನ್ನಷ್ಟು ಸೂಕ್ಷ್ಮವಾಗುತ್ತಿದ್ದವು ಎಂದು ನೆನಪಿಸಿಕೊಳ್ಳುತ್ತೇವೆ. ಪೂರ್ವದ ಸ್ಮೃತಿಗಳು ನಮ್ಮೊಳಗೆ ಸೇರುತ್ತ ಅವು ಮುಂದಿನ ಜನಾಂಗದ ನೆನಪುಗಳೂ ಆಗಿ ಮುಂದುವರೆಯುವುದನ್ನೇ ಎವಲ್ಯೂಶನ್ ಅನ್ನುತ್ತೇವಲ್ಲದೇ, ವಿಕಾಸವೆಂದರೆ ಕೇವಲ ಬಾಲ ಕಳೆದುಕೊಂಡು, ಈಗ ಅಪೆಂಡಿಕ್ಸ್ ಮಾಯವಾಗುವುದಕ್ಕೆ ಕಾಯುತ್ತ ಕೂತಿರುವುದಷ್ಟೇ ಅಲ್ಲ.

ಯಾವಾಗಲೂ ನನಗೆ ಅನ್ನಿಸುವುದಿದೆ. ದಲಿತ ಕವಿ ಸಿದ್ಧಲಿಂಗಯ್ಯನವರನ್ನೋ, ಮೊಗಳ್ಳಿಯವರನ್ನೋ ಬೈದಷ್ಟು ನಾವು ಬ್ರಾಹ್ಮಣರು ದೇವನೂರರ ಸುದ್ದಿಗೆ ಹೋಗುವುದಿಲ್ಲ, ಯಾಕೆ, ಎಂದು. ಯಾಕೆಂದರೆ ದೇವನೂರರು ಅತ್ಯಂತ ಸೂಕ್ಷ್ಮ ಕತೆಗಳನ್ನೂ, ಅರ್ಥ ಸಾಯಲಿ, ಪುಸ್ತಕವನ್ನು ಓದಲೇ ಅತ್ಯಂತ ಸಂಯಮ ಬೇಡುವ ಕುಸುಮಬಾಲೆಯನ್ನೂ, (ಯಾವ ಪದವನ್ನು ಬಳಸಲಿ?) ಅಂಥ ರೂಪಕಗಳಲ್ಲಿ ಬದುಕನ್ನೂ, ಕಷ್ಟವನ್ನೂ, ಮಾನವೀಯತೆಯನ್ನೂ ಕಟ್ಟಿಕೊಟ್ಟರು; ತೋರಿಸಿಕೊಟ್ಟರು. “ಇಕ್ರಲಾ ಒದೀರ್ಲಾ” ಎಂದಕೂಡಲೇ ಮುಂದೆ ಬರುವ ಅಪಾಯವನ್ನು ಮನಗಂಡು “ನಮಗೆ ಬೈತೀರಾ ಬ್ರಾಹ್ಮಣರಿಗೆ… ಊಊಊ” ಎಂದು ಪ್ರತಿಭಟನೆಗೆ ಮುಂದಾದೆವು. ನಿಜಕ್ಕೂ ಹೇಳುತ್ತೇನೆ. ನನಗೆ ದೇವನೂರರ ಮುಖದಲ್ಲಿ ಕಂಡಷ್ಟು ಮಡುಗಟ್ಟಿದ ದಲಿತನ ಸಂಕಟಗಳು ಇನ್ಯಾರಲ್ಲೂ ಕಂಡಿಲ್ಲ. ಆ ಮನುಷ್ಯನ ಮುಖವೇ ಕಾವ್ಯ ಎನ್ನಿಸುತ್ತದೆ. ಏಕೆಂದರೆ ಅದು ಗಾಯದ ಅರಿವಿಲ್ಲದ ದಲಿತನೊಬ್ಬನ ಮುಖವಲ್ಲ. ಬದಲು, ನಲವತ್ತೈದು ವರುಷದಿಂದ ಗಾಯದ ಅರಿವು ಹೊತ್ತಿರುವ, ಅದಕ್ಕೂ ಹಿಂದಿನಿಂದ ಮಾಯದೇ ಇರುವ ಗಾಯಕ್ಕೆ ಇಲಾಜು ಹುಡುಕುತ್ತಿರುವ ಸಂಕಟದ ಮುಖ.

ಹೀಗಿರುವಾಗ ಮೊನ್ನೆ ಅವರು ಸಂವಿಧಾನದ ಕುರಿತು ಆಡಿದ ಮಾತಿಗೆ ಮತ್ತೆ ಸಿಟ್ಟಿನ ಪ್ರತಿಭಟನೆಗಳು ಬಂದವು. ಇವತ್ತು ಯಾರೋ ಒಬ್ಬ ಎನ್ವಿರಾನ್‌ಮೆಂಟಿನ ಬಗ್ಗೆ ಬರೆದರೂ ಅದನ್ನು ಜಾತಿ ಚರ್ಚೆಗೆ ತಿರುಗಿಸಿಕೊಂಡು ನಾವು ಬ್ರಾಹ್ಮಣರು ಗಲಾಟೆ ಎಬ್ಬಿಸುತ್ತಿದ್ದೇವೆ. ಏನಾಗಿದೆ? ಯಾಕೆ ಈ ಭಯ? ಒಂದು ನೆನಪಿಡಿ. ಮುಂದೆ ನಮಗೆಲ್ಲ ಇರುವುದು ದಲಿತರು ರಿಸರ್ವೇಶನ್ನಿನಿಂದ ಮೇಲೆ ಬಂದು ನಮ್ಮ ಜಾಗಗಳನ್ನು ಕಬಳಿಸುವ ಅಪಾಯವಲ್ಲ. ನಮ್ಮ ಈ ಗೊಡ್ಡುತನ, ದುರಾಸೆ, ಅರಿವಿನ ಕಡೆ ಹೋಗದಂತೆ ತಡೆಹಿಡಿಯುತ್ತಿರುವ ಅರೆ-ಜ್ಞಾನ, ಮಕ್ಕಳೆಲ್ಲ ಇಂಜೀನೀಯರ್ ಗಳಾಗಿ, ಅವರ ಮಕ್ಕಳೆಲ್ಲ ನಮ್ಮ ವೃದ್ಧಾಪ್ಯದಲ್ಲಿ ಖಾಯಿಲೆ ಹಿಡಿದಾಗ ಉಪಚರಿಸುವ ವೈದ್ಯರಾಗಲಿ ಎಂಬ ಪಕ್ಕಾ ಲೌಕಿಕತೆ.

ಯಾಕೆ ದೇವನೂರರು ಹೇಳುವುದು ನಮಗೆ ಅರ್ಥವಾಗುತ್ತಿಲ್ಲ? ಅವರು ಹೇಳುತ್ತಿರುವ ಸಂಕಟಗಳು ನಮ್ಮವಲ್ಲ. ಏನು ಹೇಳಿದರೂ ಅದು ನಮಗೆ ಬೈದಂತೆ ಕಾಣುತ್ತದೆ. ನಾವಿಷ್ಟು ಕಠಿಣವಾದರೆ ನಮ್ಮನ್ನು ದೇವರಾದರೂ ಬ್ರಾಹ್ಮಣನೆಂದು ತಿಳಿದಾನೆಯೇ? ಯಾಕಿಷ್ಟು ತಿಳಿಯಾಗಿ ಮಾತನಾಡುತ್ತ ಮನದಟ್ಟು ಮಾಡಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಅಚ್ಚರಿಯಾಗುತ್ತದೆ. ನಮ್ಮ ಸಾಹಿತ್ಯ, ಸಾಹಿತಿಗಳು ರಾಜಕೀಯ-ಪ್ರತಿಮೆಗಳಲ್ಲಿ ಹೇಳೀ ಹೇಳೀ ಅದು ನಮಗೆ ತಾಗದೇ ಹೀಗಾದರೂ ಹೇಳಿದರೆ ನಡೆದೀತೇನೋ ಎಂಬ ಕ್ಷೀಣ ಪ್ರಯತ್ನ.

ದೇವನೂರರ, ಭಾರತದೊಳಗಿನ ಎರಡು ನ್ಯಾಯಗಳ ಪ್ರಶ್ನೆ, ಈ ಗುಟ್ಟಾಗಿ ಹೆಣೆದು ಕೂತ ಇನ್ನೊಂದು ಸಂವಿಧಾನದ ಪ್ರಶ್ನೆಗಳನ್ನು ನಾವು ಬ್ರಾಹ್ಮಣರು ಮನಸ್ಸು ಮಾಡಿದರೆ ಬಿಡಿಸಬಹುದು. ಸಾಮಾಜಿಕ ವಯಕ್ತಿಕತೆಗಳಲ್ಲಿ ಅಷ್ಟೇ ಅಲ್ಲ; ವಿಶಾಲಾರ್ಥದಲ್ಲಿ ರಾಜಕೀಯವಾಗಿಯೂ. ಇದು ನಮಗೆ ಬೇಡವಾಗಿದೆ ಎಂದರೆ ನಾವು ಭಾರತದ ವಿಕಾಸಕ್ಕೆ ಅಡ್ಡವಾಗಿ ನಿಂತಿದ್ದೇವೆ ಎಂದು ಮಾತ್ರ ಅರ್ಥ. ನನಗೆ ಸುಸ್ತಾಯಿತು.

ಮುಂದಿನ “ಕಾಮೆಂಟಿಗರ” ಪ್ರಶ್ನೆ ಕಾವ್ಯ, ಸಾಹಿತ್ಯದಲ್ಲಿನ ಅರ್ಥಗಳ ಕುರಿತಾದದ್ದು. ಬದುಕಿನಲ್ಲಿ ಸದಾ ಇನ್ನೊಂದು “ಅರ್ಥ”ದ ಹಿಂದೆ ಬಿದ್ದು ದುಡಿದು ದುಡಿದು ಹಣ್ಣಾಗಿ, ಊಟ ಮಾಡುವಾಗ ಎಡಗೈಯ್ಯಲ್ಲಿ ಪುಸ್ತಕ ಹಿಡಿದು ಕೂತು, ತರಂಗದ “ಪ್ರಿಯ ಓದುಗರೇ” ಅರ್ಥವಾದಷ್ಟೇ ಸುಲಭವಾಗಿ ಊಟ ಮುಗಿಯುವುದರೊಳಗೆ ಅರ್ಥವಾಗಿಬಿಡಬೇಕು ಎಂದರೆ ಅದೇನು ಹರಿಕಥೆಯೆ?

ಈ ವ್ಯಂಗ್ಯ ಬೇಡ. ಆರಾಮಾಗಿ ಮಾತನಾಡೋಣ. ನಾಳೆ ಬೆಳಿಗ್ಗೆ ಕಿ.ರಂ ನಾಗರಾಜರೂ, ಟಿ.ಪಿ ಅಶೋಕರೂ ಇನ್ಫೋಸಿಸ್ಸಿಗೆ ಬರುತ್ತಾರೆ. ಅವರು ಬಂದು ನೀವು ಬರೆಯುತ್ತಿರುವ ಜಾವಾ ಪ್ರೋಗ್ರಾಮ್ ನೋಡಿ ಇದರ ಅರ್ಥವೇನು ಅನ್ನುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇನ್ನು ಮುಂದೆ ಸಿ.ಪಿ.ಪಿ ಪ್ರೋಗ್ರಾಂ ಬರೆಯುವಾಗ ವಾಯ್ಡ್ ಮೈನ್ ಇಲ್ಲದೇ ಬರೆಯಬೇಕು ಎಂದೂ ಹೇಳುತ್ತಾರೆ. ಏನು ಹೇಳುತ್ತೀರಿ ಅವರಿಗೆ? ನೀವು ನಿಮ್ಮ ಇಂಜೀನೀರಿಂಗ್ ನ ನಾಲ್ಕು ವರ್ಷದಲ್ಲಿ ಕಲಿತ ಅನೇಕ ಪ್ರೋಗ್ರಾಂಗಳೂ ಮತ್ತು ಕೆಲಸಕ್ಕೆ ಸೇರಿದ ಅನುಭವದಲ್ಲಿ ಅದನ್ನು  ವಿಸ್ತರಿಸಿಕೊಳ್ಳುತ್ತ ಅದರ ಕಂಪೈಲರ್, ಇಂಟರ್‌ಪ್ರಿಟರ್ ವರೆಗೂ ವೃದ್ಧಿಸಿಕೊಂಡ ತಿಳುವಳಿಕೆಯನ್ನು ಯಾರೋ ಒಬ್ಬ ಬಂದು ಇದರ ಅರ್ಥವೇನು ಎಂದರೆ, ಎರಡು ನಿಮಿಷದಲ್ಲಿ ವಿವರಿಸಿಬಿಡುತ್ತೀರೋ?

ನಮ್ಮ ಈ ತಲೆಮಾರು ಒಂದು ವೈಚಿತ್ರ್ಯದಲ್ಲಿದೆ. ಹಿಂದೆ, ಹೊಸತು ಬಂದಹಾಗೆ ಅದರ ಕುರಿತು ಭೀತಿಗೊಳ್ಳುತ್ತ, ಅದನ್ನು ವಿರೋಧಿಸುತ್ತ ಇದ್ದ ಹಿರಿಯರಿದ್ದರು: ಬದುಕಿನಲ್ಲೂ, ಕಲಾಪ್ರಪಂಚದಲ್ಲೂ. ಈಗ ಹೊಸತು ತರುವ ಸುಖ, ಐಷರಾಮದತ್ತ ನಮ್ಮ ತಂದೆತಾಯಿಯರು ಹಸಿದಿದ್ದಾರೆ. ಮಗನೊಂದಿಗೆ ಅಮೇರಿಕಾ ನೋಡುವ ಆಶೆಯ ತಂದೆಯರೂ, “ಸಾಗರ ದಾಟಬಾರಬೆಂಬ ನಿಯಮವಿರುವುದು ಸ್ವಾಮೀಜಿಗಳಿಗೆ ಮಾತ್ರ, ಮರ್ತ್ಯರಾದ ನಮಗದು ಸಾಧ್ಯವೇ; ಹೊಟ್ಟೆ ಪಾಡು” ಎಂದು ನಾಚುವ ಮಾಧ್ವ ಹೆಂಗಸರೂ.

ನಾನು ನೇರ ಸಾಹಿತ್ಯದ ವಿದ್ಯಾರ್ಥಿಯಲ್ಲ. ಹಾಗಾಗಿ ಗುರುಮುಖೇನ ಬರದ ಸಾಹಿತ್ಯದ “ಥಿಯರಿ”ಗಳ ಕುರಿತು ನನಗೆ ಮಾತಾಡಲು ಭಯವಾಗುತ್ತದೆ. ಆದರೆ ಕೆಲವು ವಿಷಯ ಹೇಳಬೇಕಿದೆ. ಸಾಹಿತ್ಯವನ್ನು ಇವತ್ತು ಸುಲಭವಾಗಿ ಅರ್ಥವಾಗಬೇಕಾದ ವಸ್ತುವೆಂದು ನೋಡಲಿರುವ ಕಾರಣ, ನಮ್ಮ ತಂದೆತಾಯಿಯರ ಮನಸ್ಥಿತಿ. ಎಂಜಿನೀರಿಂಗ್ ಮತ್ತು ವೈದ್ಯಕೀಯವು ಅಥವಾ ವಿಶಾಲಾರ್ಥದಲ್ಲಿ ತಂತ್ರಜ್ಞಾನದ ತಿಳುವಳಿಕೆಯು- ನಮ್ಮ ಹಿರಿಯರಿಗೆ ಅಭೂತಪೂರ್ವವಾಗಿ ಕಾಣುತ್ತಿದೆ. ಇದರ ಹೊರತಾದ ಸಾಹಿತ್ಯ, ಸಂಗೀತ, ಚಿತ್ರಕಲೆಗಳು- ಕ್ರಮವಾಗಿ ಹುಚ್ಚು, ಚಟ, ಬಣ್ಣದೆರಚಾಟಗಳಾಗಿ ಮಾತ್ರ ಕಾಣುತ್ತಿವೆ.

ವಿಷೇಶಣ, ಕ್ರಿಯಾ, ಕರ್ತೃ ಪದಗಳನ್ನು ಜೋಡಿಸುವ ಕ್ರಮದಲ್ಲಿಯೇ ಬದುಕನ್ನು ಜೋಡಿಸಬಲ್ಲ ಸಾಹಿತ್ಯ, ಕಾವ್ಯಗಳ “ಸ್ಟಕ್ಚರ್”ಗಳು- ಯಾರು ಬೇಕಾದರೂ ಮಾಡಬಲ್ಲ, ಹಣಬರದ ದರಿದ್ರವಾಗಿವೆ. ಹಾಗಾಗಿ- ನಮಗೆಲ್ಲ ಸಾಹಿತ್ಯ “ಅರ್ಥ”ವಾಗಿಬಿಡಬೇಕು. ಏನಿದೆ ಅದರಲ್ಲಿ? ಪದಗಳ ಹೊರತು. ಐವತ್ತೈದು ವರುಷಗಳಿಂದ ಸಾಹಿತ್ಯವನ್ನು ಬದುಕೆಂಬಂತೆ ಅಭ್ಯಸಿಸಿದ ಅನಂತಮೂರ್ತಿ- ಇವತ್ತು ಬಿಡುವಿನಲ್ಲಿ ಯಂಡಮೂರಿಯ ಯಾವುದೋ ಎರಡು ಪುಸ್ತಕ ಓದಿಕೊಂಡ ನಮಗೆ ಅರ್ಥವಾಗಿಬಿಡಬೇಕು. ಇದರ ಮಧ್ಯ ನನಗೆ ಇನ್ನೊಂದು ವಿಷಯ ಅನ್ನಿಸುತ್ತಿದೆ. ಕೆಂಡಸಂಪಿಗೆಯಲ್ಲಿ ತೋಳ್ಪಾಡಿಯವರು ಭಾಗವತ ಬಗೆಯುತ್ತಾರೆ (ನಿಜಕ್ಕೂ ಇದು ಚೆನ್ನಾಗಿದೆ). ಯಾಕೆ, ಯಾರೊಬ್ಬರಿಂದಲೂ “ಇದು ನನಗೆ ಅರ್ಥವಾಗುತ್ತಿಲ್ಲ” ಎಂಬ ಪ್ರತಿಕ್ರಿಯೆ ಬರುತ್ತಿಲ್ಲ? ದೇವರಾಣೆ ಹೇಳುತ್ತೇನೆ: ಬ್ರಾಹ್ಮಣನಾದ ನನಗೇ ಇದು ಅಲ್ಲಲ್ಲಿ ಮಿಸ್ ಹೊಡೆಯುತ್ತಿದೆ. ಇನ್ನು ಭಾಗವತ ಎಂದರೆ ತಿನ್ನುವುದೋ ಕುಡಿಯುವುದೋ ಎಂದೂ ಹೇಳದೆ ನಾವು ದೂರವಿಟ್ಟಿರುವ ಶೂದ್ರರಿಗೆ ಹೇಗೆ ಅರ್ಥವಾಗುತ್ತದೆ. ಮುಸ್ಲಿಮರಿಗೆ? ಟಿಬೇಟಿಯನ್ನರಿಗೆ? ಸಿದ್ಧಿಗಳಿಗೆ? ಬ್ರಾಹ್ಮಣರಿಗೆ ಅರ್ಥವಾಗಿಬಿಟ್ಟರೆ ಮಾತ್ರ ಅದು ಅರ್ಥವತ್ತಾದದ್ದೆ? ಪರಿಶ್ರಮ ಬೇಕು ಭಾಗವತ, ಪುರಾಣ ಅರ್ಥವಾಗಬೇಕಾದರೆ ಎನ್ನುತ್ತೀರಿ ನೀವು. ಸಾಹಿತ್ಯ ಓದಲು, ವಿಮರ್ಷೆ ಓದಲು, ಬದುಕಿನ ಭಿನ್ನತೆಗಳನ್ನೂ, ಅನ್ಯ ಸಂಸ್ಕೃತಿಯನ್ನು ಓದಲೂ ಇದೇ ಪರಿಶ್ರಮ, ತಾಳ್ಮೆಗಳು ಬೇಕು ಅಲ್ಲವೆ.

ಮಲೆಗಳಲ್ಲಿ ಮದುಮಗಳು ಓದುವಾಗ, “ಈ ಪುಸ್ತಕ ಓದಿ ಮುಗಿಯುವುದರೊಳಗೆ ಸತ್ತುಹೋಗಿಬಿಡಬೇಕು” ಎನ್ನಿಸಿತ್ತು. ಯಾಕೆಂದರೆ, ಅದನ್ನು ಓದುವ ಸುಖವನ್ನು ಓದಿ ಕಳೆದುಕೊಂಡುಬಿಟ್ಟೆನಲ್ಲ, ಎಂಬ ಕಾರಣಕ್ಕೆ. ಈ ಹಸಿವು, ಮುಗ್ಧತೆಗಳಿಲ್ಲದೇ ಹೋದರೆ ಸಾಹಿತ್ಯ “ಅರ್ಥ”ವಾಗಿಬಿಡಬೇಕು ಎನ್ನುವ ಚಟಕ್ಕೆ ಬೀಳುತ್ತೇವೆ.

ಒಂದು ಮಾತಿನೊಂದಿಗೆ, ದೊಡ್ಡ ಮಂಡೆ ಹಾವಿನ ಮಾತನ್ನು ಮುಗಿಸುತ್ತೇನೆ: ಗಾಂಧಿ ಎಂಬ ಅನಂತಮೂರ್ತಿಯವರ ಪುಟ್ಟ ಪುಸ್ತಕವೊಂದು ಆರಂಭವಾಗುವುದು ಈ ಮಾತಿನಿಂದ: “ಗಾಂಧಿಗಿದ್ದದ್ದು ದೊಡ್ಡ ಕಿವಿಗಳು”. ಈ ರೂಪಕವನ್ನು ವಿಸ್ತರಿಸಿಕೊಂಡರೆ ಗಾಂಧಿ ಒಟ್ಟಾರೆ ಕಾಣುತ್ತಾರಲ್ಲವೆ. ಇದೇ ಅರ್ಥ. ಇದೇ ಸಾಹಿತ್ಯ. ಇದೇ ಬದುಕು, ಹುಡುಕಾಟ ಮತ್ತು ಸತ್ಯ.

ಹಸಿರು ಹಾವು ಹೀಗೆನ್ನುತ್ತದೆ:

ಸಾಮಾನ್ಯನಾಗಿ ಸಾಹಿತ್ಯವನ್ನು ನೋಡುವ ಹಕ್ಕನ್ನು ಅಡಿಗರ “ಸಾಮಾನ್ಯನೆಂಬ ಈ ನಾನು” ಪದ್ಯವೂ, ಅದರ ಕುರಿತು ಕೆ.ವಿ ಅಕ್ಷರ ಅವರು ಬರೆದ ಒಂದು ಬರಹವೂ ಕಸಿದುಕೊಂಡುಬಿಟ್ಟಿದೆ. ಇವರಿಬ್ಬರ ಪ್ರಕಾರ ಸಾಮಾನ್ಯನೆಂಬುವನೊಬ್ಬ ಇಲ್ಲ. ಇಷ್ಟರಮಟ್ಟಿಗೆ ಮಾತನಾಡಬಲ್ಲ ನಾನು ಸಾಮಾನ್ಯನಲ್ಲ. ಹೌದು; ಆದರೆ ಸಾಮಾನ್ಯನೆಂಬ ತನವು ಬಹುಷಃ ಬದಲಾಗುತ್ತಿರುವಂಥದ್ದು.

ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಮುನ್ನುಡಿಯಲ್ಲಿ ಬರೆದ ಮೆಣಸಿನ ಹೊಗೆಯ ಘಾಟು ಇವತ್ತಿಗಾದರೂ ತಗ್ಗಿದೆಯೇ? ಇಲ್ಲ. ಅನ್ಯಕ್ಷೇತ್ರದವರಾದವರಲ್ಲಿ, ವಸುಧೇಂದ್ರ ನೀನಾಸಮ್ಮಿಗೆ ಎಂಟ್ರಿ ಕೊಟ್ಟಷ್ಟು ಸುಲಭದಲ್ಲಿ, ಜೋಗಿಯೋ, ಕುಂವಿಯೋ ಯಾಕೆ ಬರಲಾಗಲಿಲ್ಲ. ಜೋಗಿ, ವಸುಧೇಂದ್ರರಿಗಿಂತ ಕೆಟ್ಟ ಬರಹಗಾರನೇ ಅಥವಾ, ಹಾಯ್ ಬೆಂಗಳೂರಿನಲ್ಲಿ ಬರೆಯುತ್ತಾರೆನ್ನುವ ಕಾರಣವೊಂದೇ- ಜೋಗಿಯ ಬಗ್ಗೆ ಯಾರೂ ಏನೂ ಬರೆಯದಿರುವುದಕ್ಕೆ ಕಾರಣವಾಯಿತೆ? ದೇಶಕಾಲದಲ್ಲಿ, ಜೋಗಿಯ ಕುರಿತು ಒಂದು ಬರಹ ಕಾಣಿಸಿಕೊಳ್ಳುತ್ತದೆ: ಅವರನ್ನು ತಿರಸ್ಕರಿಸಿ. ಅದರ ಹಿಂದಿನದೋ ಮುಂದಿನದೋ ಸಂಚಿಕೆಯಲ್ಲಿ ವಿವೇಕರ “ಇನ್ನೂ ಒಂದು”ನ ರಿಪಿಟೇಷನ್ನಿನಂಥ “ನಿರ್ವಾಣ”ವೆಂಬ ಕತೆಯೊಂದು ಪ್ರಕಟವಾಗುತ್ತದೆ, ಮತ್ತು ಅದರ ಕುರಿತು ಅಕ್ಷರ ಅವರು ಮಯೂರದ ತಮ್ಮ ಅಂಕಣದಲ್ಲಿ ಬರೆಯುತ್ತಾರೆ. ನನ್ನಂಥ ಸಾಮಾನ್ಯನಿಗೆ ಏನನ್ನಿಸಬೇಕು? ಪ್ರಸನ್ನರವರ “ಬಾಲಗೋಪಾಲ”ದ ಬಗ್ಗೆ ಒಂದು ಮಾತೂ ಸಾಹಿತ್ಯದ “ಮುಖ್ಯವಲಯ”ದಿಂದ ಬರುವುದಿಲ್ಲ. ಮಾಗಿಯ, ತದ್ರೂಪಿಯ ಪ್ರಸನ್ನ ಅಷ್ಟು ಅಮುಖ್ಯರಾಗಿ ಹೋದರೆ? ಸಾಹಿತ್ಯಕ್ಕೆ ರಾಜಕೀಯ ಬೇಕು ಸರಿ; ಸಾಹಿತ್ಯದಲ್ಲಿ ರಾಜಕೀಯ ಬೇಕೆ?

ನಮ್ಮ ಸಾಹಿತಿಗಳಿಗೆ ಒಂದು ವಿಷಯ ಅರ್ಥವಾಗುತ್ತಿಲ್ಲ. ನಮ್ಮಲ್ಲಿ ಅನೇಕರು, ಸಾಹಿತ್ಯವನ್ನು ನೇರ ವಿದ್ಯಾರ್ಥಿಗಳಾಗಿ ಓದಲಾಗದ ಕಾರಣ ಅನೇಕವಿವೆ. ಸಾಫ್ಟ್‌ವೇರ್ ಓದಿದ ನನ್ನಂತವರು ಅನೇಕರಿಗೆ- ಪ್ರೋಗ್ರಾಂ ಬರೆಯುವಾಗ ಅದು ಎಷ್ಟು ಬಾರಿ ಕಾವ್ಯದಂತೆ ಕಂಡಿದೆ ಗೊತ್ತೆ? ಒಂದು ಬ್ರಾಕೇಟ್ ತಪ್ಪಿ ಹೋದರೂ ಅರ್ಥ ತಪ್ಪುವ ಪ್ರೋಗ್ರಾಂನ ಗಣಿತವನ್ನು ನಾವು, ಸಾಹಿತ್ಯದ “ನೇರ ವಿಧ್ಯಾರ್ಥಿ”ಗಳಲ್ಲದವರು ಕಾವ್ಯವಾಗಿಸಿದರೆ, ಅದನ್ನು ವಿಮರ್ಷಿಸುವ ಪರಿಕರಗಳು ಎಷ್ಟು ಹಳೆಯದಾಗಿವೆ ಎಂಬುದರ ಅರಿವಿದೆಯೆ ನಿಮಗೆ. ಒಬ್ಬ ಗೆಳೆಯನಿದ್ದ ನನಗೆ. ರಾತ್ರಿ ನಿದ್ದೆ ಬರದಾಗೆಲ್ಲ, ಮನು ಚಕ್ರವರ್ತಿಯವರದ್ದೋ, ಡಿ.ಆರ್ ರದ್ದೋ ಪುಸ್ತಕ ತೆಗೆದು ಓದುತ್ತ ರಾತ್ರಿಯಿಡಿ ನಗಾಡುತ್ತಿದ್ದ. ಕೆಲವೊಮ್ಮೆ ಪುಸ್ತಕವನ್ನು ಉಲ್ಟಾ ಹಿಡಿದುಕೊಂಡು ಓದುತ್ತಿದ್ದ ಅವನನ್ನು ಯಾಕೆ ಎಂದು ಕೇಳಿದರೆ, “ಹೀಗೆ ಓದಿದರೆ, ಸುಲಭವಾಗಿ ಅರ್ಥವಾಗುತ್ತದೆ ಇದು” ಎಂದು ಮತ್ತಷ್ಟು ನಗಾಡುತ್ತಿದ್ದ.

ಮನು ಚಕ್ರವರ್ತಿಯವರು ಒಬ್ಬ ಬಡ ಹುಡುಗನಿಗೆ ಅಂಗಿ ಕೊಡಿಸಿದ್ದನ್ನು ನೋಡಿದ್ದೇನೆ ನಾನು. ಆದರೆ ಅದೇ ಹುಡುಗನಿಗೆ ಅರ್ಥವಾಗುವಂತೆ ಸಾಹಿತ್ಯವನ್ನು ವಿವರಿಸಬೇಕೆಂದು ಅವರಿಗೆ ಯಾಕೆ ಅರ್ಥವಾಗಲಿಲ್ಲವೋ- ನಾಕಾಣೆ. ರಶೀದ್ ಗೆಲ್ಲೆಬಾನಿಯ ಬಗ್ಗೆ ಬರೆಯುತ್ತ ತಮಾಶೆಯಾಗಿ ಬರೆದ ರಾಜಕೀಯವು ಇವತ್ತು ಎಲ್ಲ ಕಾರಣದಲ್ಲೂ ಜೀವಂತವಿದೆ. ಎಲ್ಲವನ್ನೂ “ಪ್ರಾಬ್ಲಮಟೈಸ್” ಮಾಡಿ ನೋಡುವ ವಿಮರ್ಷಕರ ನಡುವೆ, ಪತ್ರಕರ್ತನೊಬ್ಬನ ಒಳ್ಳೆಯ ಬರಹಗಳು ಕೂಡ ಅವಗಣನೆಗೆ ಒಳಗಾಗುತ್ತಿವೆ. ಆಕ್ಟಿವಿಸಂನಲ್ಲಿರುವನೊಬ್ಬ ಸಾಹಿತ್ಯ ಮತ್ತು ಸಂಕೀರ್ಣತೆಗಳನ್ನರಿಯದ ಮುಠ್ಠಾಳನಾಗಿ ಕಾಣುತ್ತಾನೆ ಮತ್ತು ಆಕ್ಟಿವಿಸಂ ಕುರಿತ ಗೋಷ್ಠಿಗಳು ನಡೆಯುತ್ತವೆ. ಹೊರಗಿನ ಕ್ಷೇತ್ರದ ದನಿಯೊಂದನ್ನು “ಇಂಗ್ಲೀಶ್ ಎಂ.ಎ” ಮಾಡಿಕೊಂಡ ಜನ ತಮ್ಮ ಜವಾಬ್ದಾರಿಯೋ, ಹಕ್ಕೋ ಎಂಬಂತೆ ವಿಮರ್ಶಿಸುತ್ತಾರೆ. ಕೇವಲ ಆರನೇ ಕ್ಲಾಸ್ ಓದಿಕೊಂಡು ಕನ್ನಡದ ಅದ್ಭುತ “ಕನ್ನಡಸಾಹಿತ್ಯ.ಕಾಂ” ಸೃಷ್ಟಿಸಿದ, ಚಾಮ್‌ಸ್ಕಿಯೊಂದಿಗೆ ನೇರ ಮಾತುಕತೆಯ ಸಂಪರ್ಕವಿದ್ದ, ಜಗತ್ತಿನ ಪ್ರಸಿದ್ಧ ಚಲನಚಿತ್ರ ನಿರ್ದೇಶಕರನೇಕರನ್ನು ಸಂದರ್ಶಿಸಿದ ಕನ್ನಡದ ಸಿಂಗ್ಯುಲರ್ ಎಂಬಂಥ ಮನುಷ್ಯ ಶೇಖರ್ ಪೂರ್ಣ ಮರೆಯಲ್ಲಿ ಉಳಿದು ಹೋಗುತ್ತಾರೆ.

ಸಾಹಿತ್ಯದ ಸಾಮಾಜಿಕ ಜವಾಬ್ದಾರಿಗಳ ಕುರಿತ ಮಾತನಾಡುವ ಸಾಹಿತಿಗಳು, ಸಮಾಜದ ಅಸಂಖ್ಯರಿಗೆ ತಿಳಿಹೇಳುವ ಸಾಮಾನ್ಯತೆಯನ್ನು ತಮ್ಮ ರೂಪಕಗಳ ಸೋಲೆಂದು ಬಗೆಯುತ್ತಾರೆ. ಸುತ್ತಲಿನ ಹಿಂಸೆಯನ್ನು ಕಂಡ ನನ್ನಂತ ಸಾಮಾನ್ಯರಿಗೆ, ದೊಡ್ಡ ದನಿಯಿರುವ ಸಾಹಿತಿಗಳು ನಮ್ಮ ಸರಳ ಸಮಸ್ಯೆಗಳನ್ನೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಹಿಂಸೆಯಾಗುತ್ತದೆ. ಗೆಳೆಯನೊಬ್ಬ ಬರೆಯುತ್ತಾನೆ “ಪ್ಯಾಪಿ, ಆಳಕ್ಕಿಳಿದಷ್ಟೂ ಬದುಕು ಹಿಂಸೆಯೆನ್ನಿಸುತ್ತದೆ. ನಿನಗೆ ಗೊತ್ತ ಪ್ಯಾಪಿ, ಲಂಚ ಬೇಡವೆನ್ನುವ ಒಬ್ಬನೇ ಒಬ್ಬ ಪೋಲಿಸ್ ಅಧಿಕಾರಿಯೂ ಬೆಂಗಳೂರಿನಲ್ಲಿ ಸಿಗುವುದಿಲ್ಲ. ಇಂಥದ್ದರಲ್ಲಿ, ನಾವಿನ್ನೂ ಭಯೋತ್ಪಾದಕರಿಗೆ, ವಿದೇಶೀ ಶಕ್ತಿಗಳಿಗೆ ಹೆದರಿ ಕೂತಿದ್ದೇವೆ. ಆತ್ಮಸಾಕ್ಷಿ ಕಳೆದುಕೊಂಡಿರುವ ಹೀನ ದೇಶ ನಮ್ಮದು. ಭಾರತದ ವಿನಾಶ ಭಾರತದೊಳಗೇ ಇದೆ. ಇದ್ಯಾಕೆ ಯಾರಿಗೂ ಅರ್ಥವಾಗುತ್ತಿಲ್ಲ. ಸುಮ್ಮನೆ ಸಿದ್ಧಾಂತ ಮಣ್ಣು ಮಸಿ ಎಂದು ಒದರಾಡುವ ನಮ್ಮ ಲೇಖಕರಿಗೆ, ಚಿಂತಕರಿಗೆ ಬದುಕಿನ ಬೇಸಿಕ್ಸ್ ಯಾಕೆ ಅರ್ಥವಾಗುತ್ತ ಇಲ್ಲ. ಎಡಪಂಥೀಯ, ಬಲಪಂಥೀಯ, ಡೆಮಾಕ್ರೇಟ್, ನಕ್ಸಲೈಟ್ ಅಂತೆಲ್ಲಾ ಜೋತುಬಿದ್ದವರನ್ನು ಕಂಡರೆ ಹಿಂಸೆಯಾಗುತ್ತದೆ. ಸಿಟ್ಟೂ ಕೂಡಾ ಬರುವುದಿಲ್ಲ. ಅಷ್ಟು ನಾಮರ್ದರಾಗಿದ್ದೇವೆ ನಾವು.”

ಸಾಮಾನ್ಯನೊಬ್ಬನ ಹಿಂಸೆಗಳು ಬದಲಾಗಿವೆ, ಸಾಹಿತಿಗಳೇ. ಇದರ ಕುರಿತು ಮಾತನಾಡುವ ಸಮಯವೂ ಇಲ್ಲದಷ್ಟು ನಾವು ನಮ್ಮ ಹೊಟ್ಟೆಪಾಡಿನಲ್ಲಿ ಮುಳುಗಿದ್ದೇವೆ. ಇಂಗ್ಲೆಂಡಿಗೆ ಸಾಹಿತ್ಯ ಓದಲು ಹೋಗಲೂ ಇವತ್ತು ಹತ್ತು ಲಕ್ಷ ರೂಪಾಯಿ ಬೇಕಾಗುತ್ತದೆ. ಮುಂಚೆ ನಿಮಗೆಲ್ಲ ಸಿಕ್ಕ ಫೆಲೋಶಿಪ್, ಸ್ಕಾಲರ್‌ಶಿಪ್ ಗಳು ಇವತ್ತು ಇಂಜಿನೀರಿಂಗ್ ವಿಧ್ಯಾರ್ಥಿಗಳಿಗೆ ಅಂಕಗಳ ಆಧಾರದ ಮೇಲಷ್ಟೇ ಸಿಗುತ್ತವೆ. ಸಾಹಿತ್ಯದ ಕಡೆ ನಿಮ್ಮನ್ನು ತಿರುಗಿಸಿದ ಚಳುವಳಿಗಳೋ, ಜನರೋ ಇವತ್ತು ಎಲ್ಲಿದ್ದಾರೆ. ನಮ್ಮ ಮುಗ್ಧತೆಯನ್ನೇ ನಾವು ಇವತ್ತು ಕಂಪ್ಯೂಟರಿಂದ ಕಳೆದುಕೊಳ್ಳುತ್ತೇವೆ ಮತ್ತು ಅದರಿಂದ ಹುಟ್ಟಿದ ಅಮೇರಿಕಾದ ಕನಸಿನಲ್ಲಿ ಬೆಳೆಯುತ್ತೇವೆ. ನಿಮ್ಮ ಹಳೇ ಪ್ರತಿಮೆಗಳನ್ನು ಬಿಟ್ಟು ನಮ್ಮನ್ನು ಸಮೀಪಕ್ಕೆ ಕೂರಿಸಿಕೊಂಡು ತಿಳಿಹೇಳಬೇಕಾದದ್ದೂ ನಿಮ್ಮ “ಇವತ್ತಿನ” ಸಾಮಾಜಿಕ ಜವಾಬ್ದಾರಿಯಲ್ಲವೇ. ಜಾತಿಯನ್ನು- ಹಣ ಮತ್ತು ತೃಪ್ತಿಗಳು ಪಲ್ಲಟಿಸುತ್ತಿರುವ ಈ ಕಾಲದಲ್ಲಿ, ಫ್ರಾಂಕೆನ್‌ಸ್ಟೈನ್ ನಿಂದಲೋ, ಲೇಡಿ ಚಾರ್ಟರ್ಲಿ’ಸ್ ಲವರ್ ನಿಂದಲೋ ತಂತ್ರಜ್ಞಾನ, ವಿಜ್ಞಾನಗಳ ಭೀಕರತೆಯ ಕುರಿತು ನಾವು ಇಂದು ಅರಿಯಬಲ್ಲೆವೆಂದು ನೀವು ಹೇಗೆ ಕಲ್ಪಿಸಿಕೊಳ್ಳುತ್ತೀರಿ. ಇವು ಯಾವತ್ತಿನ ಕ್ಲಾಸಿಕ್ ಗಳು ಸರಿ. ಆದರೆ…

ಒಬ್ಬ ಗೆಳೆಯ ಒಮ್ಮೆ ನೀನಾಸಂ ನಿಂದ ಹೊರಬರುವಾಗ ಅಂದ: ಇತ್ತೀಚೆಗೆ ನೀನಾಸಂ ಗೋಷ್ಠಿಗಳು ಬೋರ್ ಹೊಡೆಯುತ್ತಿವೆ ಮಾರಾಯ.
ಯಾಕೆ- ಅಂದೆ ನಾನು.
ಅವನೆಂದ: ಎಲ್ಲ ಅರ್ಥ ಆಗೋಕೆ ಶುರುವಾಗಿಬಿಟ್ಟಿದೆ.

ಎರಡೂ ಹಾವುಗಳಿಗೂ ಪುಂಗಿಯೂದಿ ಸುಸ್ತಾಯಿತು. ಈ ಬರಹವೇ ಎರಡು ಮಂಡೆಯ ಹಾವಾದ್ದರಿಂದ, ಇದು ತನ್ನನ್ನು ತಾನೇ ತಿಂದುಕೊಳ್ಳುವ ದುರಾಶೆಯಲ್ಲಿಯೂ ವರ್ತಿಸಬಹುದು. ಇವೆರಡರ ಕಚ್ಚಾಟ ತಡೆಯುವ ಪ್ರಯತ್ನವು ಕ್ರಿಯಾಶೀಲತೆಯ ಕೊನೆಯಾದೀತು ಎಂಬ ಸಾಹಿತ್ಯಿಕ ಗೊಂದಲದಲ್ಲಿಯೂ; ಎರಡರ ನಡುವೆ ಸಮನ್ವಯ ಬೆಸೆಯುವುದು ಸದ್ಯದ ತುರ್ತು ಎಂಬ ಸಾಮಾನ್ಯನ ಅರಿವಿನಲ್ಲಿಯೂ ಈ ಬರಹಕ್ಕೆ ಮಂಗಳ ಹಾಡುತ್ತೇನೆ.