ನಮಗೆ ಒಂದು ಗೇಣು ಭೂಮಿಯೂ ಇರಲಿಲ್ಲ. ಆದರೆ ತಂದೆಗೆ ಕೃಷಿಕನಾಗುವ ಹುಚ್ಚು ಬಹಳವಿತ್ತು. ಬೆಳದಿಂಗಳ ರಾತ್ರಿಯಲ್ಲಿ ಕೂಡ ಅವರು ಆ ಭೂಮಿಯಲ್ಲಿ ದುಡಿಯುತ್ತಿದ್ದರು. ಅವರಿಗೆ ದುಡಿತದ ಆನಂದವೇ ಆನಂದ. ದುಡಿದು ದುಡಿದು ಕಲ್ಲುಗಳಿಂದ ತುಂಬಿದ ಆ ಹಾಳು ಭೂಮಿಯನ್ನು ಸಮನಾಗಿಸಿ, ಸಮೃದ್ಧಗೊಳಿಸಿದರು. ಅಗೆದು ಅಗೆದು ಬಾವಿ ತೋಡಿದರು. ಬಾಳೆಯ ಸಸಿ ನೆಟ್ಟರು. ಹಳೆಯ ಡೀಸಲ್ ಎಂಜಿನ್ ಕೊಂಡು ನೀರು ಉಣಿಸುತ್ತ ಚಿಕ್ಕ ಬಾಳೆಯ ಬನವನ್ನೇ ಸೃಷ್ಟಿಸಿದರು.
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ ಹದಿನೈದನೇ ಕಂತು ಇಲ್ಲಿದೆ.
ನಮ್ಮ ಕೂಲಿಕಾರ ತಂದೆ ಜೀವನದಲ್ಲಿ ಎಂದೂ ಸಾಲ ಮಾಡಲಿಲ್ಲ ಎಂಬುದು ನೆನಪಾದಾಗಲೆಲ್ಲ ಆಶ್ಚರ್ಯಚಕಿತನಾಗುತ್ತೇನೆ. ಯಾವ ಆಸ್ತಿಯೂ ಇಲ್ಲದೆ ಯಾವ ಸಾಲವೂ ಮಾಡದೆ ಮರ್ಯಾದೆಯಿಂದ ಸಮೃದ್ಧವಾಗಿ ಬದುಕುವ ಕಲೆಯನ್ನು ಅವರು ಸಹಜವಾಗಿಯೆ ಕಲಿತಿದ್ದರು. ನನ್ನ ತಾಯಿ ಮತ್ತು ಅಜ್ಜಿ ಕೂಡ ತಮ್ಮದೇ ಆದ ರೀತಿಯಲ್ಲಿ ಕಷ್ಟಪಟ್ಟು ಸಂಪಾದಿಸುತ್ತಿದ್ದರು. ನಮ್ಮ ಕೌಟುಂಬಿಕ ಅರ್ಥಶಾಸ್ತ್ರ ನನಗೆ ಇಂದಿಗೂ ಮಾದರಿ ಎನಿಸುತ್ತದೆ.
ನಮ್ಮ ಆದಾಯದ ಮೂಲಗಳೆಂದರೆ ತಂದೆ ಹಮಾಲಿ ಮಾಡುವುದು, ಆಕಳು, ಕುರಿ, ಕೋಳಿ ಸಾಕಣೆ, ಹಿರಿಯ ಮಗನಾದ ನಾನು ಬೆಳಿಗ್ಗೆ ಸಮಯ ಸಿಕ್ಕಾಗಲೆಲ್ಲ, ಗೌಳಿಗರು ಬೆಳಿಗ್ಗೆ ಎಮ್ಮೆ ಹೊಡೆದು ಕೊಂಡು ಮೇಯಿಸಲು ಹೋಗುವಾಗ ಮತ್ತು ಸಾಯಂಕಾಲ ವಾಪಸ್ ಬರುವಾಗ ಅವುಗಳ ಹಿಂದೆ ಸಾಗುತ್ತ ಅವುಗಳ ಹೆಂಡಿ ಬಳಿದುಕೊಂಡು ಬರುವುದು, ಆ ಹೆಂಡಿ ಮತ್ತು ಮನೆಯ ಆಕಳುಗಳ ಹೆಂಡಿಯನ್ನು ಸೇರಿಸಿ ಅವ್ವ ಕುಳ್ಳು (ಬೆರಣಿ) ಬಡಿದು ಒಣಗಿದ ಮೇಲೆ ಒಂದು ರೂಪಾಯಿಗೆ ನೂರು ಕುಳ್ಳಿನಂತೆ ಮಾರುವುದು, ಅಜ್ಜಿ ಬಾಳೆಹಣ್ಣು ಮಾರುವುದು, ಮಾವಿನ ಸೀಜನ್‍ನಲ್ಲಿ ಮಾವಿನಹಣ್ಣು ಮಾರುವುದು ಮುಂತಾದವು ನಮ್ಮ ಆದಾಯದ ಮೂಲಗಳಾಗಿದ್ದವು.
ಮನೆಯಲ್ಲಿ ಹಾಲಿಗಂತೂ ಕೊರತೆ ಇರಲಿಲ್ಲ. ಗಂಗಾ ಹಸು ಬೇಕಾದಾಗಲೆಲ್ಲ ಹಾಲು ಕೊಡುತ್ತಿತ್ತು. ಅದೇ ರೀತಿಯ ಆಡೊಂದು ಇತ್ತು. ಅದು ಕೂಡ ಬೇಕಾದಾಗಲೆಲ್ಲ ಹಾಲು ಕೊಡುತ್ತಿತ್ತು. ಅದರ ಗಟ್ಟಿ ಹಾಲಿನ ಮೇಲೆ ತುಪ್ಪ ಸಿಂಪಡಿಸಿದಂತೆ ಕಾಣುತ್ತಿತ್ತು. ಯಾರಾದರೂ ಮನೆಗೆ ಬಂದರೆ ಅದೇ ಆಡಿನ ಹಾಲು ಹಿಂಡಿ ಬೆಲ್ಲದ ಚಹಾ ಮಾಡಿ ಕೊಡುತ್ತಿದ್ದರು.
ತಾಯಿ ಬಡಿಯುವ ಕುಳ್ಳಿಗೆ ಬಹಳ ಬೇಡಿಕೆ ಇತ್ತು. ಕುಳ್ಳಿನಲ್ಲೂ ಗ್ರೇಡಿಂಗ್ ! ಮಾರಾಟ ಮಾಡುವ ಕುಳ್ಳುಗಳು ತೆಳ್ಳಗೆ ಇರುತ್ತಿದ್ದವು. ಆದರೆ ನಮ್ಮ ತಾಯಿ ಮಾರುವ ಕುಳ್ಳಗಳು ಮನೆಗೆ ಬಳಸುವ ಕುಳ್ಳುಗಳೇ ಆಗಿದ್ದವು. ಹೆಂಡಿ ಕಲಿಸಿ ಬೋಧರಾಚಾರಿ ದೊಡ್ಡಿಯಲ್ಲಿ ಕುಳ್ಳು ಬಡಿದು, ಒಣಗಿದ ಮೇಲೆ ಅವುಗಳನ್ನು ತಿರುಗಿ ಹಾಕಿ ಒಣಗಿಸಿದ ನಂತರ ಕುಳ್ಳುಗಳು ಗರಿಗರಿಯಾಗಿ ಕಾಣುತ್ತಿದ್ದವು. ಕುಳ್ಳುಗಳನ್ನು ತಿರುಗಿ ಹಾಕಿದಾಗ ಕುಳ್ಳಿನ ಸ್ವಲ್ಪ ಭಾಗ (ಬುಕುಣಿ) ನೆಲಕ್ಕೆ ಅಂಟಿಕೊಂಡಿರುತ್ತಿತ್ತು. ಆಮೇಲೆ ಕುಳ್ಳುಗಳನ್ನು ಬುಟ್ಟಿಯಲ್ಲಿ ತುಂಬಿ ಮನೆಗೆ ತರುತ್ತಿದ್ದೆವು. ನಂತರ ಕುಳ್ಳು ಕೇಳಿದವರ ಮನೆಗೆ ನೂರು ಕುಳ್ಳು ತುಂಬಿಕೊಂಡು ಹೋಗಿ ಕೊಟ್ಟನಂತರ ಅಮ್ಮ ಒಂದು ರೂಪಾಯಿ ತೆಗೆದುಕೊಂಡು ಬರುತ್ತಿದ್ದಳು. ಒಂದು ರೂಪಾಯಿ ಗಳಿಸಬೇಕಾದರೆ ಇಷ್ಟೆಲ್ಲ ಕಸರತ್ತು ಮಾಡಬೇಕಿತ್ತು. ಸಾಲಿ ಬಿಟ್ಟ ನಂತರ ನನಗೆ ಇನ್ನೊಂದು ಕೆಲಸವಿರುತ್ತಿತ್ತು. ಗೌಳಿಗ ಹೆಂಗಸರು ತಮ್ಮ ಕುಳ್ಳುಗಳನ್ನು ಒಯ್ದ ನಂತರ ಆ ಜಾಗದಲ್ಲಿದ್ದ ಬುಕುಣಿಯನ್ನು ಆಯ್ದುಕೊಂಡು ಬರುವುದು. ತಾಯಿಯ ಗಮನೆವೆಲ್ಲ ಕುಳ್ಳನ್ನು ಮಾರುವುದರ ಕಡೆಗೇ ಇತ್ತು. ಆಕೆ ಹೆಚ್ಚಾಗಿ ಬುಕುಣಿಯನ್ನು ಒಲೆಗೆ ಹಾಕುತ್ತ ಕುಳ್ಳುಗಳನ್ನು ಮಾರಾಟಕ್ಕೆಂದು ತೆಗೆದಿಡುತ್ತಿದ್ದಳು.
ಕೋಳಿ ಮತ್ತು ಆಡು ಸಾಕುವುದು ಅವಳ ಇತರ ಆರ್ಥಿಕ ಮೂಲಗಳು. ಜವಾರಿ ಕೋಳಿಗಳ ತತ್ತಿ(ಮೊಟ್ಟೆ)ಗಳನ್ನು ಜನ ಮನೆಗೇ ಬಂದು ಒಯ್ಯುತ್ತಿದ್ದರು. ಒಂದು ರೂಪಾಯಿಗೆ ಡಜನ್ ತತ್ತಿಗಳನ್ನು ಕೊಡುತ್ತಿದ್ದೆವು. 70 ಬಾತುಕೋಳಿಗಳನ್ನು ಸಾಕಿದ್ದೆವು. ಅವುಗಳ ತತ್ತಿಗಳು ಜವಾರಿ ಕೋಳಿಗಳ ತತ್ತಿಗಳಿಗಿಂತ ಡಬಲ್ ಗಾತ್ರದವುಗಳಾಗಿರುತ್ತವೆ. ಆದರೆ ಅಮ್ಲೆಟ್ ಮಾಡುವಾಗಿನ ವಾಸನೆ ಇಷ್ಟವಾಗುವುದಿಲ್ಲ. ಅವುಗಳನ್ನು ರವಿವಾರದಂದು ಕೋಳಿಬಜಾರ್‍ನಲ್ಲಿ ಮಾರಾಟಕ್ಕೆ ಒಯ್ಯುತ್ತಿದ್ದೆವು. ಕೋಳಿ ಬಜಾರ್‍ನಲ್ಲಿ ಜಾಗೀರದಾರ್ ಎಂಬವರು ಸಾವಿರಾರು ಮೊಟ್ಟೆಗಳನ್ನು ಖರೀದಿಸಿ ಮುಂಬೈಗೆ ಕಳಿಸುತ್ತಿದ್ದರು. ರೂಪಾಯಿಗೆ 20 ರಂತೆ ಅವರಿಗೆ ಬಾತುಕೋಳಿಯ ಮೊಟ್ಟೆಗಳನ್ನು ಮಾರುತ್ತಿದ್ದೆವು.
ಕುಡುಕು ಕುಳಿತ, ಅಂದರೆ ಮುಂದಿನ ಹಂತದ ಮೊಟ್ಟೆಗಳನ್ನು ಇಡುವ ಮೊದಲು ಒಂದೇ ಕಡೆ ಕೂಡುವ ಕೋಳಿಯನ್ನು ಮರಿ ಮಾಡಲು ಕೂಡಿಸುತ್ತಿದ್ದೆವು. ಹುಲ್ಲು ಹಾಸಿ ನೆಲ ಮೆತ್ತಗೆ ಮಾಡಿ 15-20 ತಾಜಾ ತತ್ತಿಗಳನ್ನಿಟ್ಟು ಅದರ ಮೇಲೆ ಕುಡುಕು ಕುಂತ ಕೋಳಿಯನ್ನು ಕೂಡಿಸುತ್ತಿದ್ದೆವು. ಮೇಲೆ ಈಚಲು ಬುಟ್ಟಿಯನ್ನು ಮುಚ್ಚುತ್ತಿದ್ದೆವು. ಆ ಕೋಳಿ ತತ್ತಿಗಳ ಮೇಲೆ ಕುಳಿತು ನಿರಂತರವಾಗಿ ರಾತ್ರಿ ಹಗಲೆನ್ನದೆ ಅವುಗಳನ್ನು ತಿರುಗಿಸುತ್ತಿತ್ತು. ಮುಂಜಾನೆ ಒಂದು ಸಲ ಮಾತ್ರ ಜೋಳ ಮತ್ತು ನೀರು ಇಟ್ಟು ಹೊರಗೆ ಬಿಡುತ್ತಿದ್ದೆವು. ಅದು ಜೋಳ ತಿಂದು ನೀರು ಕುಡಿದು ಹಿಕ್ಕಿ ಹಾಕಿದ ನಂತರ ಮತ್ತೆ ಬುಟ್ಟಿಯೊಳಗೆ ಬಿಡುತ್ತಿದ್ದೆವು. ರಾತ್ರಿಯಲ್ಲಿ ಆ ಕೋಳಿ ಗರಗರ ತತ್ತಿಗಳನ್ನು ತಿರುವುದರ ಸಪ್ಪಳ ಕೇಳಿಸುತ್ತಿತ್ತು. ಹೀಗೆ ಮರಿ ಮಾಡಲು ಕೋಳಿ ಕೂಡಿಸುವ ಸಮಸ್ಯೆ ಎಂದರೆ ಹೇನು. ಕೋಳಿಹೇನುಗಳು ಅದುಹೇಗೋ ಬಂದು ನಮ್ಮ ಮೈಮೇಲೆ ಹರಿದಾಡುತ್ತ ಕಿರಿಕಿರಿ ಮಾಡುತ್ತಿದ್ದವು.
21 ದಿನಗಳ ನಂತರ ಆ ತತ್ತಿಗಳಲ್ಲಿ ಮರಿಗಳ ಸೃಷ್ಟಿಯಾಗುತ್ತಿತ್ತು. ಮರಿಮಾಡಲು ಕೂಡಿಸಿದ ಕೋಳಿ ಮೂಗು ಮಾಡಿದ (ತತ್ತಿಗೆ ಅರ್ಧಚಂದ್ರಾಕೃತಿಯ ಹಾಗೆ ಚಿಕ್ಕದಾಗಿ ಸೀಳಿದ) ಮೊಟ್ಟೆಯ ಸಿಪ್ಪೆಯನ್ನು ನಾಜೂಕಾಗಿ ತೆಗೆದಾಗ ಹಳದಿ ಬಣ್ಣದ ಮರಿಗಳು ಹೊರಗೆ ಬರುತ್ತಿದ್ದವು. ಆ ಹೊಸ ಜೀವಿಗಳನ್ನು ನೋಡಲು ಬಹಳ ಖುಷಿ ಎನಿಸುತ್ತಿತ್ತು.
ತಾಯಿ ಕೋಳಿ ಜೀವದ ಹಂಗು ತೊರೆದು ಬೆಕ್ಕಿನ ಮೇಲೆ ಎರಗಿ ಹೋಗಿ ಅಂಜಿಸುತ್ತಿತ್ತು. ಇಷ್ಟಾದರೂ ಕೆಲವೊಂದು ಸಲ ಮರಿಗಳನ್ನು ಕಳೆದುಕೊಳ್ಳುವ ಪ್ರಸಂಗ ಬರುತ್ತಿತ್ತು. ಸ್ವಲ್ಪ ಬೆಳೆದ ಮೇಲೆ ಬೇನೆ ಬಂದರೆ ಅನೇಕ ಮರಿಗಳು ಗೋಣು ಚೆಲ್ಲಿ, ಜೊಲ್ಲು ಸುರಿಸಿ ಸಾಯುತ್ತಿದ್ದವು.
ಕೋಳಿ ಒಂದೇ ದಿನ ಹತ್ತಾರು ಮಕ್ಕಳ ತಾಯಿಯಾಗುತ್ತಿತ್ತು. ತನ್ನ ಮರಿಗಳನ್ನು ಹದ್ದು, ಬೆಕ್ಕು, ಹಾವು ಮುಂತಾದವುಗಳಿಂದ ರಕ್ಷಿಸುವಲ್ಲಿ ಅದು ತೋರಿಸುವ ಸಾಹಸ ಆಶ್ಚರ್ಯಕರವಾದುದು. ಹದ್ದು ಹಾರುವುದನ್ನು ನೋಡಿದ ಕೂಡಲೆ ಕೋಳಿ ವಿಚಿತ್ರ ಧ್ವನಿ ತೆಗೆದು ತನ್ನ ರೆಕ್ಕೆಗಳನ್ನು ಎತ್ತುತ್ತಿತ್ತು. ಆಗ ಮರಿಗಳು ಕೂಡಲೆ ರೆಕ್ಕೆಗಳೊಳಗೆ ಸೇರಿ ರಕ್ಷಣೆ ಪಡೆಯುತ್ತಿದ್ದವು. ತಾಯಿ ಕೋಳಿ ಜೀವದ ಹಂಗು ತೊರೆದು ಬೆಕ್ಕಿನ ಮೇಲೆ ಎರಗಿ ಹೋಗಿ ಅಂಜಿಸುತ್ತಿತ್ತು. ಇಷ್ಟಾದರೂ ಕೆಲವೊಂದು ಸಲ ಮರಿಗಳನ್ನು ಕಳೆದುಕೊಳ್ಳುವ ಪ್ರಸಂಗ ಬರುತ್ತಿತ್ತು. ಸ್ವಲ್ಪ ಬೆಳೆದ ಮೇಲೆ ಬೇನೆ ಬಂದರೆ ಅನೇಕ ಮರಿಗಳು ಗೋಣು ಚೆಲ್ಲಿ, ಜೊಲ್ಲು ಸುರಿಸಿ ಸಾಯುತ್ತಿದ್ದವು. ಬೇನೆ ಬಂದರೆ ಕೋಳಿ ಸಾಕಿದವರ ಮನೆಗಳಲ್ಲಿ ಅವುಗಳ ಸಾವಿನದೇ ಸುದ್ದಿ. ಹೀಗೆ ಕೋಳಿ ಬೇನೆ ಬಂದಾಗ ಒಬ್ಬ ಬಡ ವೃದ್ಧನ ಎಲ್ಲ ಮರಿಗಳು ಸತ್ತಿದ್ದವು. ಆತ ಬಹಳ ದುಃಖಿಯಾಗಿದ್ದ. ನಾನು ಆತನ ಮನೆಯ ಕಡೆ ಹೋದೆ. ಆತ ನಮ್ಮ ಕೋಳಿ ಮರಿಗಳ ಬಗ್ಗೆ ವಿಚಾರಿಸಿದ. ‘ಒಂದು ಮರಿ ಬಿಟ್ಟು ಎಲ್ಲ ಸತ್ತವು’ ಎಂದೆ. ‘ನೀ ಮನಿಗೆ ಹೋಗುತಕಾ ಅದೂ ಸಾಯ್ತದ’ ಎಂದು ಹತಾಶನಾಗಿ ಹೇಳಿದ. ನನಗೆ ಬಹಳ ಬೇಸರ ಎನಿಸಿತು. ಆತನ ಅಸಹ್ಯ ಮುಖವನ್ನು ನೋಡಲಿಕ್ಕಾಗಲಿಲ್ಲ. ಓಡುತ್ತ ಮನೆಗೆ ಬಂದೆ. ಕೋಳಿಯ ಜೊತೆ ಮರಿ ನಿಂತಿತ್ತು.
ಮರಿಗಳು ಬೆಳೆದ ಮೇಲೆ ಅವುಗಳಿಗೆ ‘ಪಡ್ಡಿ’ ಎನ್ನುತ್ತಿದ್ದೆವು. ಅದರ ಮೊದಲ ಸಲದ ತತ್ತಿಗಳು ಚಿಕ್ಕದಾಗಿರುತ್ತಿದ್ದವು. ನಂತರ ಸಹಜ ಸ್ಥಿತಿಗೆ ಬಂದ ತತ್ತಿಗಳನ್ನು ಪಡೆಯುತ್ತಿದ್ದೆವು. ಮರಿಗಳನ್ನು ಬೆಳೆಸಿದ ಮೇಲೆ ಅವುಗಳಲ್ಲಿನ ಹುಂಜಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೆವು. ಮೊಟ್ಟೆ ಹಾಕುವ ಕೋಳಿಗಳು ಮನೆಯಲ್ಲೇ ಉಳಿಯುತ್ತಿದ್ದವು.
ಎಂಟು ಜನ ಮಕ್ಕಳು, 70 ಬಾತುಕೋಳಿಗಳು, ಹತ್ತಾರು ಕೋಳಿಗಳು, ಏಳೆಂಟು ಆಡುಗಳು. ಐದಾರು ದನಗಳು, ಬೆಕ್ಕು, ಮೂರು ನಾಯಿಗಳು -ಹೀಗೆ ನಮ್ಮ ಸಂಸಾರ ಬಹಳ ದೊಡ್ಡದಿತ್ತು. ಮೂರಂಕಣದ ಮನೆಯಲ್ಲಿ ಇಷ್ಟೆಲ್ಲ ಕಟ್ಟಿಕೊಂಡು ಬದುಕುವುದೇ ದೊಡ್ಡ ಸಾಹಸವಾಗಿತ್ತು. ನಮ್ಮ ಮನೆಯ ಎದುರಿಗೆ ಕ್ಷೀರಸಾಗರ ಎಂಬ ನಾವಿ ಸಮಾಜದವರ ಮನೆತನವಿತ್ತು. ಅವರ ಎರಡು ಗುಂಟೆಯಷ್ಟು ಜಾಗದಲ್ಲಿ ಇಬ್ಬರು ಅಣ್ಣ-ತಮ್ಮಂದಿರ ಮನೆಗಳಿದ್ದು ಅಂಗಳದ ಪಕ್ಕದಲ್ಲೇ ಖಾಲಿ ಜಾಗವಿತ್ತು. ಅಲ್ಲಿಯೆ ನಾವು ನಮ್ಮ ದನಕರುಗಳನ್ನು ಕಟ್ಟುತ್ತಿದ್ದೆವು. ಅವರು ಆ ಜಾಗಕ್ಕೆ ಬಾಡಿಗೆ ತೆಗೆದುಕೊಳ್ಳುತ್ತಿರಲಿಲ್ಲ.
ಕಟ್ಟಿಗೆ ಮತ್ತು ಕಬ್ಬಿಣ ಸರಳುಗಳನ್ನು ಬಳಸಿ ತಯಾರಿಸಿದ ದೊಡ್ಡ ಗೂಡು ಮನೆಯ ಪಕ್ಕದಲ್ಲಿಟ್ಟು ಬಾತುಕೋಳಿಗಳಿಗೆ ವ್ಯವಸ್ಥೆ ಮಾಡಿದ್ದೆವು. (ಕೋಳಿಗಳಿಗೆ ಬೇನೆ ಬಂದ ಹಾಗೆ ಬಾತುಕೋಳಿಗಳಿಗೆ ಬೇನೆ ಬರುವುದಿಲ್ಲವಾದ್ದರಿಂದ ಅವುಗಳನ್ನು ಸಾಕುವುದು ಸುಲಭವಾಗಿತ್ತು.) ಮನೆಯೊಳಗೆ ದೊಡ್ಡ ಕೋಳಿಬುಟ್ಟಿಯಲ್ಲಿ ಕೋಳಿಗಳನ್ನು ಮುಚ್ಚುತ್ತಿದ್ದೆವು. ಆಡುಗಳನ್ನು ಮನೆಯೊಳಗೆ ಕಟ್ಟುತ್ತಿದ್ದೆವು. ಮನೆಯೊಳಗೆ ಕಬ್ಬಿಣ ಕಾಲುಗಳ ಮೇಲೆ ನಾಲ್ಕು ಹಲಗೆಗಳನ್ನು ಜೋಡಿಸಿದ ಪಲ್ಲಂಗದ ಮೇಲೆ ತಾಯಿ ಮತ್ತು ತಂಗಿ ಮಲಗುತ್ತಿದ್ದರು. ಎದುರುಗಡೆ ಇರುವ ಗುರಪ್ಪನವರ ಅಂಗಡಿಯ ಮುಂಗಟ್ಟಿನಲ್ಲಿ ಅಜ್ಜಿ ಮಲಗುತ್ತಿದ್ದಳು. ತಂದೆ ಕಟ್ಟೆಯ ಮೇಲೆ ಮಲಗುತ್ತಿದ್ದರು. ನಾವು ಹುಡುಗರು ಅಂಗಳದಲ್ಲಿ ಮಲಗುತ್ತಿದ್ದೆವು.
ರಾತ್ರಿಯ ಚಳಿಯಲ್ಲಿ ನಾಯಿಮರಿಗಳು ಕುಂಯಿಗುಡುತ್ತಿದ್ದವು. ನನಗೋ ಕರುಣೆ ಉಕ್ಕುತ್ತಿತ್ತು. ಅವುಗಳನ್ನು ತಂದು ನನ್ನ ಕೌದಿಯೊಳಗೆ ತುರುಕಿ ಮಲಗುತ್ತಿದ್ದೆ. ಬೆಳಿಗ್ಗೆ ತಂದೆ ಎಬ್ಬಿಸಲು ಬಂದಾಗ ನಾಯಿಮರಿಗಳನ್ನು ನೋಡಿ ಬೇಸರಗೊಂಡರೂ ಏನೂ ಹೇಳುತ್ತಿರಲಿಲ್ಲ. ಅವರಿಗೆ ಬೇಸರವಾದುದು ನನಗೆ ಗೊತ್ತಾಗುತ್ತಿತ್ತು. ಶುಚಿತ್ವ ಅವರ ಬದುಕಿನಲ್ಲಿ ಮಹತ್ವದ ಸ್ಥಾನ ಪಡೆದಿತ್ತು. ಬೀದಿನಾಯಿಮರಿಗಳಿಂದ ನನಗೆಲ್ಲಿ ರೋಗ ಬರುವುದೋ ಎಂಬ ಕಾಳಜಿ ಅವರಿಗೆ. ಆದರೆ ನಾನು ಹಾಗೆ ಮಾಡಿದ್ದನ್ನು ಅಲ್ಲಗಳೆವ ಹಾಗಿಲ್ಲ. ಇಂಥ ಪ್ರಸಂಗಗಳಲ್ಲಿ ಅವರು ಮೌನವಾಗುತ್ತಿದ್ದರು.
ಬಾತುಕೋಳಿಗಳನ್ನು ಸಮೀಪದಲ್ಲೇ ಇರುವ ಬೋಧರಾಚಾರಿ ದೊಡ್ಡಿಯಲ್ಲಿನ ಹಾಳುಬಾವಿಯಲ್ಲಿ ಬಿಡುತ್ತಿದ್ದೆವು. ಅದು ಸಣ್ಣ ಕೆರೆಯ ಹಾಗೆ ಇತ್ತು. ಹಸಿರುಗಟ್ಟಿದ ಆ ಬಾವಿಯ ನೀರಿನ ದಂಡೆಯ ಮೇಲೆ ಸ್ವಲ್ಪ ನೆಲ ಇತ್ತು. ಗೂಡಿನಲ್ಲಿ ತತ್ತಿ ಹಾಕದ ಕೆಲ ಬಾತುಕೋಳಿಗಳು ಬಾವಿಯ ದಂಡೆಗೆ ಬಂದು ಮೊಟ್ಟೆ ಇಡುತ್ತಿದ್ದವು. ಬಾತುಕೋಳಿಗಳ ರಕ್ಷಣೆಗಾಗಿ ಮತ್ತು ಮೊಟ್ಟೆಗಳನ್ನು ಸಂಗ್ರಹಿಸುವುದಕ್ಕಾಗಿ ಯಾರಾದರೊಬ್ಬರು ಅವುಗಳ ಜೊತೆ ಇರಬೇಕಾಗಿತ್ತು. ಅವು ಬಾವಿಕಡೆಗೆ ಶಿಸ್ತಿನ ಸಿಪಾಯಿಗಳ ಹಾಗೆ ಹೋಗುತ್ತಿದ್ದವು. ಕರೆದಾಗ ಬಾವಿಯಿಂದ ಹೊರಬಂದು ಮನೆಯ ದಾರಿ ಹಿಡಿಯುತ್ತಿದ್ದವು. ಹಿಟ್ಟಿನ ಗಿರಣಿಯಲ್ಲಿ ಕೆಳಗೆ ಬಿದ್ದ ಹಿಟ್ಟು ಬಹಳ ಕಡಿಮೆ ದರದಲ್ಲಿ ಸಿಗುತ್ತಿತ್ತು. ಅದನ್ನು ತಂದು ನೀರಲ್ಲಿ ಕಲಿಸಿ ಬಾತುಕೋಳಿಗಳಿಗೆ ತಿನಿಸುತ್ತಿದ್ದೆವು.
ಈ ಬಾತುಕೋಳಿಗಳ ಮೊಟ್ಟೆಗಳನ್ನು ಮರಿ ಮಾಡಲು ಕೋಳಿಗಳನ್ನೇ ಬಳಸುತ್ತಿದ್ದೆವು. ಮೊಟ್ಟೆಗಳು ದೊಡ್ಡದಾಗಿರುವ ಕಾರಣ ಮರಿ ಮಾಡಲು ಹೆಚ್ಚಿನ ಮೊಟ್ಟೆಗಳನ್ನು ಇಡುತ್ತಿದ್ದಿಲ್ಲ. ಬಾತುಕೋಳಿಗಳ ಮರಿಗಳು ಕೂಡ ಹಳದಿ ಬಣ್ಣದವುಗಳಾಗಿದ್ದು ಮನಸ್ಸಿಗೆ ಖುಷಿ ಕೊಡುತ್ತಿದ್ದವು. ಕೆಲವೊಂದು ಮರಿಗಳು ಕಲಿಸಿದ ಹಿಟ್ಟನ್ನು ಬಹಳಷ್ಟು ತಿಂದು ಮುಂಭಾರದಿಂದ ನಡೆಯಲಿಕ್ಕಾಗದೆ ಬೀಳುತ್ತಿದ್ದವು. ಹೀಗಾಗಿ ಅವುಗಳಿಗೆ ಆಹಾರ ನೀಡುವಾಗ ಜಾಗರೂಕಾಗಿ ಇರಬೇಕಾಗುತ್ತಿತ್ತು.
ಬೋಧರಾಚಾರಿ ದೊಡ್ಡಿಯ ಹಾಳುಬಾವಿಯಲ್ಲಿ ಬಾತುಕೋಳಿಗಳನ್ನು ಬಿಟ್ಟು ನಾನು ಮತ್ತು ನನ್ನ ತಂದೆ ನಿಂತಿದ್ದೆವು. ಆ ವೇಳೆಯಲ್ಲಿ ಒಬ್ಬ ಹುಡುಗ ಕಾಲುಜಾರಿ ಬಾವಿಯಲ್ಲಿ ಬಿದ್ದ. ನನ್ನ ತಂದೆ ಒಂದು ಕ್ಷಣವೂ ಯೋಚಿಸದೆ ಆ ಹೊಲಸು ನೀರಲ್ಲಿ ಜಿಗಿದು ಆ ಹುಡುಗನನ್ನು ರಕ್ಷಿಸಿದರು. ಕೂಡಲೆ ಮನೆಗೆ ಹೋಗಿ ಸ್ನಾನ ಮಾಡಿದರು.
ಹುಂಜ, ಜೋಡಿ ಬಾತುಕೋಳಿ, ಆಕಳ ಹಾಲು, ಹೋತ, ಕುಳ್ಳು ಮುಂತಾದವುಗಳನ್ನು ಮಾರುವುದರ ಮೂಲಕ ಒಂದಿಷ್ಟು ಹಣ ಕೂಡುತ್ತಿತ್ತು. ನನ್ನ ತಂದೆಯ ಹಮಾಲಿ ಕೆಲಸದಿಂದ ಬಂದ ಹಣವನ್ನು ಒಂದು ಮುಚ್ಚಳವಿಲ್ಲದ ಡಬ್ಬದಲ್ಲಿ ಹಾಕಿ ನಾಗಂದಿಗೆಯ ಮೇಲೆ ಇಡುತ್ತಿದ್ದರು. ಹೀಗೆ ಎಲ್ಲ ಹಣ ಒಂದೇ ಕಡೆ ಇರುತ್ತಿತ್ತು. ಹಣ ಹೆಚ್ಚಾಗಿ ನಾಣ್ಯಗಳ ರೂಪದಲ್ಲೇ ಇರುತ್ತಿತ್ತು. ಒಂದೊಂದು ಸಲ ನೋಟುಗಳೂ ಇರುತ್ತಿದ್ದವು. ಒಂದು ಸಲ ಹತ್ತು ರೂಪಾಯಿ ನೋಟು ಇಡುವಾಗ ಜಾರಿ ಕೆಳಗೆ ಬಿದ್ದದ್ದು ಗೊತ್ತಾಗಲಿಲ್ಲ. ಹೀಗಾಗಿ ಆ ಹತ್ತು ರೂಪಾಯಿ ಡಬ್ಬದಲ್ಲಿರಲಿಲ್ಲ. ಆ ಕಾಲದ ಬಡವರ ದೃಷ್ಟಿಯಲ್ಲಿ ಅದು ದೊಡ್ಡ ಮೊತ್ತವೇ ಆಗಿತ್ತು. ಆಗ ನಾನು ಮನೆಯಲ್ಲಿದ್ದೆ. ‘ನೀನು ತೊಗೊಂಡಿಯೇನು’ ಎಂದು ತಂದೆ ಪ್ರಶ್ನಿಸಿದರು. ನನಗೆ ಬಹಳ ಅಪಮಾನವೆನಿಸಿ ಮೌನವಾಗೇ ಕಣ್ಣೀರು ಸುರಿಸಿದೆ. ಅಷ್ಟೊರಳಗೆ ನನ್ನ ತಾಯಿ ಕೆಳಗೆ ಸಂದಿಯಲ್ಲಿ ಬಿದ್ದ ನೋಟನ್ನು ಹುಡುಕಿ ತಂದು ಕೊಟ್ಟಳು. ನನ್ನ ತಂದೆ ನನ್ನನ್ನು ಹಾಗೆ ಪ್ರಶ್ನಿಸಿದ್ದಕ್ಕೆ ಬೇಸರಪಟ್ಟು ಅತ್ತುಬಿಟ್ಟರು! ನನ್ನ ತಾಯಿ ನನ್ನನ್ನು ಅಪ್ಪಿಕೊಂಡು ಅತ್ತಳು.
ಪ್ರತಿದಿನ ಬಾಳೆಹಣ್ಣು ಮಾರುತ್ತಿದ್ದ ನನ್ನ ಅಜ್ಜಿ ಮಾವಿನ ಹಂಗಾಮಿನಲ್ಲಿ (ಸೀಜನ್‍ನಲ್ಲಿ) ಮಾವಿನ ಹಣ್ಣು ಮಾರುತ್ತಿದ್ದಳು. ಹಣ್ಣು ಮಾರಿ ಬಂದ ಲಾಭವನ್ನು ತನ್ನ ಚೀಲದಲ್ಲೇ ಇಟ್ಟುಕೊಳ್ಳುತ್ತಿದ್ದಳು. ಅದು ವ್ಯವಹಾರಕ್ಕೆ ಬೇಕಾದುದರಿಂದ ಹಾಗೆ ಮಾಡುತ್ತಿರಬಹುದು. ಅಲ್ಲದೆ ಅವಳು ಬಹಳ ಮುಂದಾಲೋಚನೆ ಮಾಡುವವಳಾಗಿದ್ದಳು. ರಂಜಾನ್ ಮತ್ತು ಬಕ್ರೀದ್ ಹಬ್ಬಗಳಿಗೆ ಬೇಕಾಗುವಷ್ಟು ಹಣವನ್ನು ಸಾಧ್ಯವಾದಷ್ಟು ಕೂಡಿಡುತ್ತಿದ್ದಳು. ನಾವು ಇವೆರಡೇ ಹಬ್ಬಗಳನ್ನು ಆಚರಿಸುತ್ತಿದ್ದೆವು. ಆಕಸ್ಮಿಕವಾಗಿ ರೋಗ ರುಜಿನುಗಳು ಬರಬಹುದೆಂಬ ಕಾರಣದಿಂದ ಅದಕ್ಕೂ ಹಣ ಕೂಡಿಡುತ್ತಿದ್ದಳು.
ಸೂಫಿ ಸಂತ ಖ್ವಾಜಾ ಅಮೀನುದ್ದೀನ ನಮ್ಮ ಮನೆ ದೈವ. ಪ್ರತಿವರ್ಷ ಅವರ ದರ್ಗಾದ ಉರುಸ್ ಸಂದರ್ಭದಲ್ಲಿ ಕಂದೂರಿ ಮಾಡುವುದಕ್ಕಾಗಿ ತಂದೆ ಹಣ ಕೂಡಿಡುತ್ತಿದ್ದರು.
ಮನೆಯ ಡಬ್ಬದಲ್ಲಿ ಕೂಡಿಟ್ಟ ಹಣದಿಂದ ಮನೆ ಬಾಡಿಗೆ, ಚಿಮಣಿಗಾಗಿ ಘಾಸಲೇಟ್ ಎಣ್ಣೆ (ಕೆರೊಸಿನ್), ಸೀರೆ, ಧೋತರ, ಬಟ್ಟೆಬರೆ ಮುಂತಾದವುಗಳಿಗಾಗಿ ಬಳಕೆಯಾಗುತ್ತಿತ್ತು. ಹೀಗೆ ಅವರು ಯಾವುದೇ ಕಾರಣಕ್ಕೂ ಸಾಲ ಮಾಡುವ ಪ್ರಸಂಗವೇ ಬರುತ್ತಿರಲಿಲ್ಲ. ಅಷ್ಟೊಂದು ಅಚ್ಚುಕಟ್ಟಾಗಿ ಅವರು ತಮ್ಮದೇ ಆದ ಅರ್ಥಶಾಸ್ತ್ರೀಯ ಪ್ರಜ್ಞೆಯನ್ನು ಹೊಂದಿದ್ದರು.
ಆದರೆ ನಮ್ಮ ಮನೆಯ ಅರ್ಥಶಾಸ್ತ್ರಕ್ಕೆ ದೇವರುದಿಂಡಿರುಗಳೆಂಬ ಸೋರಿಕೆಯ ತಾಣಗಳಿದ್ದವು. ದರ್ಗಾ(ಸೂಫಿ ಸಂತರ ಸಮಾಧಿ)ಗಳು, ಮರಗಮ್ಮ, ದುರ್ಗಮ್ಮ, ಏಳುಮಕ್ಕಳತಾಯಿ ಮುಂತಾದವು ಅವ್ವನ ಬದುಕಿನ ಭಾಗವಾಗಿದ್ದವು. ಅವಳು ವಾರದಲ್ಲಿ ಐದು ದಿನ ಉಪವಾಸವಿರುತ್ತಿದ್ದಳು. ಅವುಗಳಲ್ಲಿ ಕೆಲವೊಂದು ಒಪ್ಪೊತ್ತಿನ ಉಪವಾಸ, ಕೆಲವು ಉಪವಾಸದಲ್ಲಿ ಸಾಬೂದಾನಿ ಪಾಯಸ ಕುಡಿಯಬಹುದು, ಕೆಲವು ನಿರಾಹಾರ ಉಪವಾಸ, ರವಿವಾರ ಮತ್ತು ಬುಧವಾರ ಮಾತ್ರ ಉಪವಾಸದಿಂದ ಮುಕ್ತವಾದ ದಿನಗಳಾಗಿದ್ದವು.
ಶಾಖಾಹಾರಿಯಾಗಿದ್ದ ಅವಳು ಒಂದೊಂದು ದೇವರಿಗೆ ಒಂದೊಂದು ಆಹಾರದ ವಸ್ತುಗಳನ್ನು ಹರಕೆ ಹೊತ್ತು ಬಿಡುತ್ತಿದ್ದಳು. ಅವುಗಳಲ್ಲಿ ಬಾಳೆಹಣ್ಣು, ಅಕ್ಕಿ ಮುಂತಾದವು ಸೇರಿರುತ್ತಿದ್ದವು. ದರ್ಗಾಗಳಿಗೆ ತೆಂಗಿನಕಾಯಿ, ಮರಗಮ್ಮ, ದುರ್ಗಮ್ಮ ಮುಂತಾದ ದೇವತೆಗಳಿಗೆ ಹುಂಜ ಕೊಡುವುದು ಮುಂತಾದ ಮೂಢನಂಬಿಕೆಗಳು ಅವಳ ಗಾಢ ನಂಬಿಕೆಗಳಾಗಿದ್ದವು. ಇವೆಲ್ಲ ಧರ್ಮಗಳನ್ನು ಮೀರಿದ ದೇವರ ನಂಬಿಕೆಗಳಾಗಿವೆ ಎಂಬ ಸಮಾಧಾನ ತಂದರೂ ನಮ್ಮ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುವ ಹಣ ಹೀಗೆ ಪೋಲಾಗುವುದು ನನಗೆ ಎಂದೂ ಹಿಡಿಸಲಿಲ್ಲ. ನಾನು ಪಾಸಾದಾಗಲೆಲ್ಲ ತಾನು ದೇವರುಗಳಿಗೆ ಹೊತ್ತ ಹರಕೆಯ ಕಾರಣದಿಂದ ಎಂಬುದರಲ್ಲಿ ಅವಳಿಗೆ ಅಚಲವಾದ ನಂಬಿಕೆ ಇತ್ತು. ನನಗದು ಎಳ್ಳಷ್ಟೂ ಹಿಡಿಸುತ್ತಿರಲಿಲ್ಲ. ಹೀಗಾಗಿ ನಾನು ಬಾಲ್ಯದಲ್ಲೇ ಸಂಪ್ರದಾಯಗಳಿಂದ ದೂರ ಉಳಿದೆ.
ಅಂತು ಇಂತು ನಮ್ಮ ಬದುಕು ಸಾಗಿತ್ತು. ಕೋಟೆಗೋಡೆ ಆಚೆ ಕಂದಕದಲ್ಲಿ ಒಬ್ಬ ವ್ಯಕ್ತಿಯ ಹಾಳು ಭೂಮಿ ಇತ್ತು. ಆತ ಸಹಕಾರಿ ಬ್ಯಾಂಕೊಂದರಲ್ಲಿ ಸಿಪಾಯಿ ಆಗಿದ್ದರು. ಕುರಿಗಳನ್ನು ಮೇಯಿಸುವುದಕ್ಕಾಗಿ ಆ ಭೂಮಿಯನ್ನು ನನ್ನ ತಂದೆ ವರ್ಷದ ಬಾಡಿಗೆಗೆ ಪಡೆದರು. ಆಗ ಬಾಡಿಗೆ ವರ್ಷಕ್ಕೆ 50 ರೂಪಾಯಿ ಇರಬಹುದು. ಅಲ್ಲಿ ಗಿಡಗಂಟಿಗಳು ಬೆಳೆದದ್ದರಿಂದ ಆಡುಗಳಿಗೆ ತಿನ್ನಲು ಸಿಗುತ್ತಿತ್ತು. ನನ್ನ ತಂದೆ ಒಂದು ಭಾಗವನ್ನು ಆಡುಗಳಿಗೆ ಬಿಟ್ಟು ಇನ್ನೊಂದು ಭಾಗವನ್ನು ಹಸನುಗೊಳಿಸಿದರು. ನಮಗೆ ಒಂದು ಗೇಣು ಭೂಮಿಯೂ ಇರಲಿಲ್ಲ. ಆದರೆ ತಂದೆಗೆ ಕೃಷಿಕನಾಗುವ ಹುಚ್ಚು ಬಹಳವಿತ್ತು. ಬೆಳದಿಂಗಳ ರಾತ್ರಿಯಲ್ಲಿ ಕೂಡ ಅವರು ಆ ಭೂಮಿಯಲ್ಲಿ ದುಡಿಯುತ್ತಿದ್ದರು. ಅವರಿಗೆ ದುಡಿತದ ಆನಂದವೇ ಆನಂದ. ದುಡಿದು ದುಡಿದು ಕಲ್ಲುಗಳಿಂದ ತುಂಬಿದ ಆ ಹಾಳು ಭೂಮಿಯನ್ನು ಸಮನಾಗಿಸಿ, ಸಮೃದ್ಧಗೊಳಿಸಿದರು. ಅಗೆದು ಅಗೆದು ಬಾವಿ ತೋಡಿದರು. ಬಾಳೆಯ ಸಸಿ ನೆಟ್ಟರು. ಹಳೆಯ ಡೀಸಲ್ ಎಂಜಿನ್ ಕೊಂಡು ನೀರು ಉಣಿಸುತ್ತ ಚಿಕ್ಕ ಬಾಳೆಯ ಬನವನ್ನೇ ಸೃಷ್ಟಿಸಿದರು.
ಒಂದು ಸಲ ಆ ಕಡೆ ಹಾದು ಹೋಗುವಾಗ ಆ ಜಾಗ ಕೊಟ್ಟ ವ್ಯಕ್ತಿ ಬಾಳೆಯ ಬನವನ್ನು ನೋಡಿ ಬಹಳ ಸಂತೋಷ ಪಟ್ಟರು. ‘ಅಬ್ದುಲ್‍ಸಾಬ ಈ ಜಾಗ ನಿಮಗೆ ಕಾಣಿಕೆ’ ಎಂದು ಉದ್ಗಾರ ತೆಗೆದರು. ನನ್ನ ತಂದೆಯ ಕಾಯಕ ಶ್ರದ್ಧೆ ಅವರ ಮೇಲೆ ಆಳವಾದ ಪರಿಣಾಮ ಬೀರಿತು. ತದನಂತರ ಅವರು ಭೂ ಬಾಡಿಗೆಯನ್ನು ತೆಗೆದುಕೊಳ್ಳಲಿಲ್ಲ. ‘ಈ ಜಾಗ ನಿಮ್ಮ ಹೆಸರಿನಿಂದ ಹಚ್ಚುವೆ’ ಎಂದು ಹೇಳಿದರು. ಆಗ ನನ್ನ ತಂದೆ ಒಪ್ಪಲಿಲ್ಲ. ‘ನಿಮ್ಮ ಹೆಸರೇ ಇರಲಿ, ನಾನಿಲ್ಲಿ ದುಡಿದು ತಿನ್ನುವೆ’ ಎಂದು ತಮ್ಮ ಹೆಸರಿಗೆ ಹಚ್ಚುವುದನ್ನು ಕೊನೆಯವರೆಗೂ ನಿರಾಕರಿಸಿದರು. ಅವರು ತೀರಿಕೊಂಡ ನಂತರ ಅವರ ಮಗ ಬಿಂದಪ್ಪ ಕೂಡ ಯಾವುದೇ ತಕರಾರು ಮಾಡಲಿಲ್ಲ. ಆತ ಐಹಿಕ ದುರಾಸೆಗಳಿಂದ ಮುಕ್ತನಾಗಿದ್ದ. ಆದರೆ ಕುಡಿದು ಮೌನವಾಗಿರುತ್ತಿದ್ದ. ಆತ ತೀರಿಕೊಂಡಮೇಲೆ ಅತನ ಹೆಂಡತಿ ಮತ್ತು ಮಕ್ಕಳು ಕೊಡಬಾರದ ಕಷ್ಟ ಕೊಟ್ಟರು. ಎಷ್ಟೋವರ್ಷಗಳಿಂದ ಕೋರ್ಟಲ್ಲಿ ಕೇಸು ನಡೆಯುತ್ತಿದೆ. ನನ್ನ ತಮ್ಮಂದಿರು ಅದರ ಸ್ವಲ್ಪ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಅಷ್ಟನ್ನು ಬಿಟ್ಟು ಉಳಿದುದೆಲ್ಲವನ್ನೂ ಕೊಡಲು ಸಿದ್ಧರಿದ್ದಾರೆ. ಆದರೆ ಅವನ ಮಕ್ಕಳು ಕೋರ್ಟಿಗೆ ಹೋಗಿದ್ದಾರೆ. ಅರ್ಧ ಶತಮಾನದಿಂದ ಆ ಜಾಗದಲ್ಲಿದ್ದು ಈಗ ಹೋಗೆಂದರೆ ಎಲ್ಲಿ ಹೋಗಬೇಕು ಎಂಬುದು ನನ್ನ ತಮ್ಮಂದಿರ ಪ್ರಶ್ನೆಯಾಗಿದೆ.
ಅಡತಿ ಅಂಗಡಿಯಲ್ಲಿ ಪಾಟೀಲ ಎಂಬ ಕಾರಕೂನರಿದ್ದರು. ಜನ ಅವರನ್ನು ‘ಗೌಡರು’ ಎಂದು ಕರೆಯುತ್ತಿದ್ದರು. ಅವರು ಗಂಭೀರವಾದ ಮನುಷ್ಯ. ತಮ್ಮ ಕೆಲಸವನ್ನು ಚಾಕಚಕ್ಯತೆಯಿಂದ ಮಾಡುತ್ತಿದ್ದರು. ಅವರಿಗೆ ನನ್ನ ತಂದೆಯ ಬಗ್ಗೆ ಪ್ರೀತಿ ಮತ್ತು ಕಾಳಜಿಗಳಿದ್ದವು. ಅವರು ವಿಜಾಪುರದಲ್ಲಿ ಒಂದು ಗುಂಟೆ ಜಾಗವನ್ನು ಕೆಲ ವರ್ಷಗಳ ಹಿಂದೆ ಕೊಂಡಿದ್ದರು. ಅವರು ಒಂದು ದಿನ ನನ್ನ ತಂದೆಗೆ ಹೇಳಿದರು: ‘ಅಬ್ದುಲ್‍ಸಾಬ್ ನನ್ನ ಒಂದು ಗುಂಟೆ ಜಾಗವನ್ನು ನಿನಗೆ ಕೊಡುವೆ. ನಾನು 200 ರೂಪಾಯಿಗೆ ಖರೀದಿಸಿ ಬಹಳ ದಿನಗಳಾದವು. ನೀನು ಅಷ್ಟೇ ಕೊಟ್ಟು ಖರೀದಿ ಮಾಡು’ ಎಂದು ತಿಳಿಸಿದರು. ಅವರು ಹೀಗೆ ಹೇಳುವುದರ ಹಿಂದೆ ಕಾಳಜಿ ಇತ್ತು. ಬಾಡಿಗೆ ಮನೆಯಲ್ಲಿ ಎಷ್ಟು ದಿನ ಇರೋದು. ಸ್ವಂತ ಮನೆ ಮಾಡಿಕೊಳ್ಳಲಿ. ಇಲ್ಲದಿದ್ದರೆ ಮುಂದೊಂದು ದಿನ ಕಷ್ಟಕ್ಕೊಳಗಾಗಬೇಕಾಗುವುದು ಎಂಬುದು ಅವರ ವಿಚಾರವಾಗಿತ್ತು.
ನನ್ನ ತಂದೆ ಆ ಸೈಟು ಕೊಳ್ಳುವ ಮನಸ್ಸು ಮಾಡಿದರು. ಒಂದಿಷ್ಟು ಕೋಳಿ ಮತ್ತು ಹೋತ ಮಾರಿದರು. ನನ್ನ ಅಜ್ಜಿ ಕೂಡಿಸಿಟ್ಟ ಹಣ ಕೊಟ್ಟಳು, ನನ್ನ ತಾಯಿ ತತ್ತಿ ಮತ್ತು ಕುಳ್ಳು ಮಾರಿದ ಹಣ ಕೊಟ್ಟಳು. ಹೀಗೆ ಕೆಲ ತಿಂಗಳಲ್ಲಿ ಕಷ್ಟಪಟ್ಟು ಒಂದು ನೂರು ರೂಪಾಯಿ ಕೂಡಿಸಿದರು. ಇನ್ನೊಂದು ನೂರು ರೂಪಾಯಿ ಹೇಗೆ ಕೂಡಿಸುವುದು ಎಂಬ ಚಿಂತೆಯಾಯಿತು. ಶಿವಪ್ಪ ಎಂಬ ಆತ್ಮೀಯ ಮಿತ್ರರಿದ್ದರು. ಅವರು ಬೇರೊಂದು ಅಡತಿ ಅಂಗಡಿಯಲ್ಲಿ ಹಮಾಲಿ ಮಾಡುತ್ತಿದ್ದರು. ಲಕ್ಷ್ಮೀ ವಾರವಾದ ಶುಕ್ರವಾರದಂದು ಅಡತಿ ಅಂಗಡಿಗಳು ಬಂದ್ ಇರುತ್ತಿದ್ದವು. ಒಂದು ಶುಕ್ರವಾರ ತಂದೆ ನನ್ನನ್ನು ಕರೆದುಕೊಂಡು ಶಿವಪ್ಪನವರ ಮನೆಗೆ ಹೋದರು. ಶಿವಪ್ಪ ಮನೆಯಲ್ಲಿದ್ದರು. ಅದು ಇದು ಮಾತನಾಡಿದ ನಂತರ ‘ನೂರು ರೂಪಾಯಿ ಬೇಕಿತ್ತು’ ಎಂದರು. ಶಿವಪ್ಪ ಬಹಳ ಖುಷಿ ಪಟ್ಟರು. ‘ಅಬ್ದುಲ್‍ಸಾಬ್ ಎಂದೂ ಕೇಳದ ನೀವು ಹಣ ಕೇಳುವುದೆಂದರೇನು.’ ಎಂದು ಹೇಳುತ್ತ ಒಳಗೆ ಹೋಗಿ ನೀಲಿ ನೋಟು (100 ರೂಪಾಯಿ ನೋಟು) ತಂದುಕೊಟ್ಟರು. ಹಾಗೆ ಕೊಡುವಾಗ ಅವರ ಮುಖದಲ್ಲಿ ಧನ್ಯತಾಭಾವ ಮೂಡಿತ್ತು. ‘ಶಿವಪ್ಪ ಭಾಳ ಉಪಕಾರ ಮಾಡಿದ್ರಿ’ ಎಂದು ನನ್ನ ತಂದೆ ಹೇಳಿದಾಗ, ಅವರು ‘ಯಪ್ಪಾ ನೀ ಕೇಳೋದು ಹೆಚ್ಚೋ, ನಾ ಕೊಡೋದು ಹೆಚ್ಚೋ’ ಎಂದು ಬೀಳ್ಕೊಟ್ಟರು.
ಈ ನೂರು ರೂಪಾಯಿ ಹೇಗೆ ತೀರಿಸುವುದು ಎಂದು ನನ್ನ ತಂದೆ ಒಂದು ವಾರ ಬಹಳ ಯೋಚನೆ ಮಾಡಿದರು. ನೂರು ರೂಪಾಯಿ ಕೂಡಿಸುವಷ್ಟು ಯಾವ ಆದಾಯದ ಮೂಲಗಳೂ ಕಾಣಲಿಲ್ಲ. ಕೈ ಬಾಯಿಗೆ, ಮಕ್ಕಳ ಖರ್ಚಿಗೆ ಮತ್ತು ಹಬ್ಬಹರಿದಿನಗಳಿಗೆ ಮಾತ್ರ ಎಲ್ಲ ರೀತಿಯ ಹಣ ಗಳಿಸುವುದು ಸಾಕಾಗುತ್ತಿತ್ತು.
‘ಸಾಲ ತೆಗೆದುಕೊಂಡು ಮರಳಿ ಕೊಡುವ ಶಕ್ತಿ ಇಲ್ಲದಿದ್ದರೆ ಸಾಲ ತೆಗೆದುಕೊಳ್ಳಬಾರದು’ ಎಂದು ತೀರ್ಮಾನಿಸಿದರು. ‘ಜಾಗಾ ಕೊಳ್ಳೂ ತಾಕತ್ ಇಲ್ರಿ’ ಎಂದು ಗೌಡರಿಗೆ ತಿಳಿಸಿದರು. ‘ನಿನಗೆ ಸಾಧ್ಯವಾದಾಗ ಕೊಡು’ ಎಂದು ಅವರು ಹೇಳಿದರೂ ಒಪ್ಪಲಿಲ್ಲ.
ಮುಂದಿನ ಶುಕ್ರವಾರ ಮತ್ತೆ ಶಿವಪ್ಪನವರ ಮನೆಗೆ ಹೋಗಿ ಅದೇ ನೀಲಿ ನೋಟನ್ನು ಕೊಟ್ಟು ಬಂದರು. ಸಾಲ ತೀರಿಸಿದ ಸಮಾಧಾನ ಅವರ ಮುಖದಲ್ಲಿತ್ತು.
(ಚಿತ್ರಗಳು: ಸುನೀಲಕುಮಾರ ಸುಧಾಕರ)
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.
I teared up reading about your father and his principles! The person who asked your father to keep the land by looking at the banana plants is so dear! I don’t think we will ever see such humane behaviour ever in our life time! Thank you for so beautifully writing from your memories!