ಊರಿನ ಪ್ರತಿ ಬೀದಿಯನ್ನೂ ಅಲಂಕರಿಸಿದ್ದ ಹೊಗೆಸೊಪ್ಪಿನ ಬ್ಯಾರಲ್‌ಗಳ ಪೈಕಿ ವರ್ಷಕ್ಕೆ ಒಂದಾದರೂ ಬೆಂಕಿಯೊಳಗೆ ಕುಣಿಯುವುದು ಕಾಯಂ ಆದಮೇಲೆ, ಅವುಗಳನ್ನು ಊರಿಂದ ಆಚೆ ಹಾಕುವ ಮಹಾ ಸಂಚಿಕೆಗಳು ಶುರುವಾದವು. ಫಯರ್ ಆಫೀಸಿನವರ ಎಚ್ಚರಿಕೆಗಳು, ಪೊಲೀಸಿನವರ ಖಾರದ ಮಾತು, ಬ್ಯಾರಲ್ ಸುತ್ತಮುತ್ತಲ ಮನೆಗಳ ಮಂದಿಯ ತಕರಾರುಗಳ ಫಲವಾಗಿ ಬಹುತೇಕ ಬ್ಯಾರಲ್‌ಗಳು ಸದ್ದಿಲ್ಲದಂತೆ ಊರಿಂದ ಆಚೆ ನಡೆದವು. ಹಾಗಂತ ಸಮಸ್ಯೆಗಳೂ ಊರಾಚೆ ನಡೆದು ಹೋದವು ಎನ್ನುವ ಹಾಗಿಲ್ಲ.
‘ಸೊಗದೆ’ ಅಂಕಣದಲ್ಲಿ ಸಹ್ಯಾದ್ರಿ ನಾಗರಾಜ್ ಹೊಗೆಸೊಪ್ಪು ಬ್ಯಾರಲ್ ಗಳ ಕುರಿತು ಬರೆದಿದ್ದಾರೆ.
ಅದುವರೆಗೂ ಗೋಡೆ ಕಟ್ಟುವ ಕೆಲಸ ಮಾತ್ರ ಹಿಡೀತ್ತಿದ್ದ ಅಪ್ಪ, ಅದ್ಹೇಗೋ ಗೋಡೆ ಕೆಡಹುವ ಕೆಲಸ ಒಪ್ಪಿಕೊಂಡಿದ್ದ. ಪುರಾತನ ಎನ್ನಬಹುದಾದಷ್ಟು ಹಳೆಯದೂ ಅಲ್ಲದ, ಪುರಾತನ ಎನ್ನಲಾಗದ ಕಾರಣಕ್ಕೆ ಹೊಸತು ಅಂತ ಸುಲಭವಾಗಿ ಹೇಳಿ ಮುಗಿಸುವಷ್ಟು ಹೊಸತೂ ಅಲ್ಲದ ಕಟ್ಟಡವದು. ತಲೆಗೆ ಕೆಂಪು ಟವೆಲ್ ಸುತ್ತಿಕೊಂಡಿದ್ದ ಅಪ್ಪನ ಜೊತೆ ಗೋಡೆ ಹತ್ತಿ ಕುಂತು, ಹಾರೆಯಿಂದ ಒಂದೊಂದೇ ಇಟ್ಟಿಗೆ ಬಿಡಿಸಲು ತೊಡಗುತ್ತಿದ್ದಂತೆ, ತರಹೇವಾರಿ ಬಣ್ಣ ಮತ್ತು ವಿನ್ಯಾಸದ ಸಣ್ಣ-ಸಣ್ಣ ಹಾವುಗಳು ಗೋಡೆಯಿಂದ ಹಾರಲು ಶುರುವಿಟ್ಟವು. ಅಪ್ಪ ಗಹಗಹಿಸಿ ನಗತೊಡಗಿದ.
ಅಂಥದ್ದೊಂದು ಕಷ್ಟದ ಕೆಲಸಕ್ಕೆ ನನ್ನನ್ನೂ ಎಳೆದೊಯ್ದಿದ್ದ ಅಪ್ಪನ ಬಗೆಗಿದ್ದ ಸಿಟ್ಟಿನಲ್ಲಿ, ಜೀವಭಯದಿಂದ ಹಾರುತ್ತಿದ್ದ ಹಾವುಗಳ ಬಗ್ಗೆ ಕನಿಷ್ಠ ಕರುಣೆಯೂ ಹುಟ್ಟಿರಲಿಲ್ಲ. ಬದಲಿಗೆ, ಅಪ್ಪನ ನಗುವಿನಿಂದ ಇನ್ನಷ್ಟು ಕೋಪ ಉಕ್ಕಿ, ಗೋಡೆಯನ್ನು ಒಮ್ಮೆಲೇ ಉರುಳಿಸಿ ಮನೆಯ ದಾರಿ ಹಿಡಿಯುವ ಕೆಟ್ಟ ಉಮೇದು. ನಂತರದಲ್ಲಿ ಇದನ್ನು ನೆನೆದಾಗಲೆಲ್ಲ ನಗು ಉಕ್ಕಿ, ಬರೋಬ್ಬರಿ ಇಪ್ಪತ್ತು ಅಡಿ ಎತ್ತರದಿಂದ ಹಾರಿದ ಹಾವುಗಳ ಬಗ್ಗೆ ಅಯ್ಯೋ ಅನ್ನಿಸಿದರೂ, ಕೆಳಗಿದ್ದ ದಟ್ಟ ಹಸುರು ಹುಲ್ಲಿನ ನೆಲಹಾಸಿನ ಮೇಲೆ ನೆಗೆದ ಕಾರಣ ಅವುಗಳಿಗೆ ಪೆಟ್ಟೇನೂ ಆಗಿರಲಾರದು ಎಂಬ ಸಮಾಧಾನ.
ಇಲ್ಲವಾಗಿ ಹಲವು ವರ್ಷಗಳಾದರೂ, ಹಾವುಗಳ ಕಾರಣಕ್ಕೆ ನನ್ನ ತಲೆಯಲ್ಲಿ ಉಳಿದಿರುವ ಆ ಕಟ್ಟಡವು, ನನ್ನೂರಿನ ಚರಿತೆ ಬದಲಿಸಿದ ಹೊಗೆಸೊಪ್ಪಿನ ಬ್ಯಾರಲ್‌ಗಳಲ್ಲೊಂದು. ಬೀಡಿ, ಸಿಗರೇಟಿನ ಒಳಗೆ ಉರಿದು ಬೂದಿಯಾಗುವ ಶೋಕಿಯ ಪದಾರ್ಥವೊಂದು ಉಂಟಲ್ಲ, ಅದೇ ಹೊಗೆಸೊಪ್ಪು. ಬಿದಿರಿನ ಗಟ್ಟಿ ಕೋಲಿಗೆ ಎರಡೂ ಬದಿ ಜೋಡಿ ಸೆಣಬಿನ ದಾರ ಕಟ್ಟಿ, ಆ ದಾರದಲ್ಲಿ ಮಾಲೆಯಂತೆ ಹೊಗೆಸೊಪ್ಪನ್ನು ಪೋಣಿಸಲಾಗುತ್ತೆ. ನಂತರ ಅದನ್ನು ಬ್ಯಾರಲ್‌ನ ಒಳಗೆ ಗೋಡೆಯಿಂದ ಗೋಡೆಗೆ ಅಡ್ಡಡ್ಡ ಹಾದುಹೋದ ಅಡಿಕೆಯ ದಪ್ಪ ಮರಗಳ ಮೇಲೆ ಜೋಡಿಸೋದು. ಆಚೆಯ ದೊಡ್ಡ ಬಾಯಿಯ ಒಲೆಯಿಂದ ಹೊರಟು ಬ್ಯಾರಲ್ ಒಳಗೆ ವ್ಯವಸ್ಥಿತವಾಗಿ ಜೋಡಿಸಲಾದ ಬೃಹತ್ ಗಾತ್ರದ ಸ್ಟೀಲ್ ಪೈಪುಗಳ ಮೂಲಕ ಹೊಮ್ಮುವ ಶಾಖದಿಂದ ಹೊಗೆಸೊಪ್ಪು ಹದವಾಗುತ್ತದೆ. ಹೊಗೆಸೊಪ್ಪು ಅಪ್ಪಿತಪ್ಪಿ ಸ್ಟೀಲ್ ಪೈಪು ತಾಗಿತೋ, ಬೆಂಕಿಯ ಆರ್ಭಟ.
ಬೀಡಿ, ಸಿಗರೇಟಿನ ಒಳಗೆ ಉರಿದು ಬೂದಿಯಾಗುವ ಶೋಕಿಯ ಪದಾರ್ಥವೊಂದು ಉಂಟಲ್ಲ, ಅದೇ ಹೊಗೆಸೊಪ್ಪು. ಬಿದಿರಿನ ಗಟ್ಟಿ ಕೋಲಿಗೆ ಎರಡೂ ಬದಿ ಜೋಡಿ ಸೆಣಬಿನ ದಾರ ಕಟ್ಟಿ, ಆ ದಾರದಲ್ಲಿ ಮಾಲೆಯಂತೆ ಹೊಗೆಸೊಪ್ಪನ್ನು ಪೋಣಿಸಲಾಗುತ್ತೆ.
ಅತಿಯಾಸೆಯಿಂದ ಹೆಚ್ಚು ಕೋಲು ಜೋಡಿಸಿಯೋ, ಸರಿಯಾಗಿ ಜೋಡಿಸದೆಯೋ, ಬ್ಯಾರಲ್ ಒಳಕ್ಕೆ ಗಾಳಿ ನುಗ್ಗಿದ ಕಾರಣಕ್ಕೆ ಹೊಗೆಸೊಪ್ಪು ಸ್ಟೀಲ್ ಪೈಪನ್ನು ತಾಗಿಯೋ ಅಥವಾ ಪೈಪು ತೂತಾಗಿ ಬೆಂಕಿಯ ಕಿಡಿ ಹಾರಿಯೋ… ಅಂತೂ ವರ್ಷಕ್ಕೆ ಒಮ್ಮೆಯಾದರೂ ಊರಿಗೆ ಫಯರ್ ಎಂಜಿನ್ ಓಡಿಬರುವುದು ವಾಡಿಕೆ. ಹೊತ್ತಲ್ಲದ ಹೊತ್ತಲ್ಲಿ ಇದ್ದಕ್ಕಿದ್ದಂತೆ ಯಾರೋ ಗಂಟಲು ಹರಿದುಕೊಳ್ಳುವುದು, ಸುತ್ತಮುತ್ತಲ ಒಂದಷ್ಟು ಮಂದಿ ಬಕೆಟ್-ಬಿಂದಿಗೆ ಹಿಡಿದು ಓಡುವುದು, ಬಾಕಿಯವ್ರೆಲ್ಲ ಅದನ್ನು ಬಾಯಿ ತೆರೆದುಕೊಂಡು ನೋಡುವುದು, ಆಮೇಲೆ ಸೈರನ್ ಜೊತೆಗೆ ಲಾರಿ ಬಂದು ನೀರು ಖಾಲಿ ಮಾಡಿಕೊಂಡು ವಾಪಸಾಗುವುದು… ಒಟ್ಟಾರೆ ಜಾತ್ರೆಯ ವಾತಾವರಣ ಅನ್ನಿ.
ಊರಿನ ಪ್ರತಿ ಬೀದಿಯನ್ನೂ ಅಲಂಕರಿಸಿದ್ದ ಬ್ಯಾರಲ್‌ಗಳ ಪೈಕಿ ವರ್ಷಕ್ಕೆ ಒಂದಾದರೂ ಬೆಂಕಿಯೊಳಗೆ ಕುಣಿಯುವುದು ಕಾಯಂ ಆದಮೇಲೆ, ಅವುಗಳನ್ನು ಊರಿಂದ ಆಚೆ ಹಾಕುವ ಮಹಾ ಸಂಚಿಕೆಗಳು ಶುರುವಾದವು. ಫಯರ್ ಆಫೀಸಿನವರ ಎಚ್ಚರಿಕೆಗಳು, ಪೊಲೀಸಿನವರ ಖಾರದ ಮಾತು, ಬ್ಯಾರಲ್ ಸುತ್ತಮುತ್ತಲ ಮನೆಗಳ ಮಂದಿಯ ತಕರಾರುಗಳ ಫಲವಾಗಿ ಬಹುತೇಕ ಬ್ಯಾರಲ್‌ಗಳು ಸದ್ದಿಲ್ಲದಂತೆ ಊರಿಂದ ಆಚೆ ನಡೆದವು. ನಂತರದಲ್ಲಿ, ಹೊಗೆಸೊಪ್ಪಿನ ಹೊಲಗಳಲ್ಲೇ ಬೀಡು ಬಿಟ್ಟವು. ಗುಡ್ಡಗಳ ಬದಿಯ ಜಮೀನುಗಳಲ್ಲಿ ಒಂದಷ್ಟು, ಅಡಿಕೆ-ತೆಂಗಿನ ತೋಟಗಳಲ್ಲಿ ಒಂದಷ್ಟು ತಲೆಮರೆಸಿಕೊಂಡವು. ಅಂತೂ ಬೆಂಕಿ ಕಾಟದಿಂದ ಊರು ಹೆಚ್ಚೂಕಮ್ಮಿ ಪಾರಾದಂತಾಯಿತು.
ಊರಿನೊಳಗಿದ್ದಾಗ ಬೇರೇನೂ ಗೊತ್ತಿಲ್ಲದಂತೆ ತಮ್ಮ ಪಾಡಿಗೆ ತಾವು ಹೊಗೆಸೊಪ್ಪು ಬೇಯಿಸಿಕೊಂಡಿದ್ದ ಬ್ಯಾರಲ್‌ಗಳಿಗೆ ಈಗ ಬೆಂಕಿಯ ಬದಲು ಮನುಷ್ಯರ ಕಾಟ ಶುರುವಾಯಿತು. ದನ ಕಾಯುವವರು, ಹೊಲಗಳತ್ತ ದನಗಳನ್ನು ಅಟ್ಟಿ ಬ್ಯಾರಲ್ ಛಾವಣಿ ಅಡಿ ಮಲಗಿ ದಿನ ಕಳೆಯುತ್ತಿದ್ದರು. ಊರೊಳಗೆ ಸ್ವಚ್ಛಂದವಾಗಿ ಅಡ್ಡಾಡಲಾಗದ ಕೆಲವು ಜೋಡಿಗಳು ಬ್ಯಾರಲ್‌ಗಳ ಏಕಾಂತದ ಮೊರೆಹೋದವು. ಮಳೆ-ಬಿಸಿಲಿಗೆ ಆಶ್ರಯವಾಗಿಯೂ, ದಾರಿಹೋಕರಿಗೆ ದಣಿವಾದರೆ ಚಣ ಹೊತ್ತು ಕುಂತು ಉಂಡೆದ್ದು ಹೋಗುವ ವಿಶ್ರಾಂತಿಧಾಮವಾಗಿಯೂ ಬ್ಯಾರಲ್‌ಗಳು ಹೊಸ ಜನ್ಮ ಎತ್ತಿದವು. ಇತರರಿಗೆ ಇದರಿಂದ ಏನೂ ಅನ್ನಿಸದಿದ್ದರೂ, ಬ್ಯಾರಲ್‌ನ ಮಾಲೀಕರಿಗೆ ಒಳಗೊಳಗೇ ಶ್ಯಾನೇ ಉರಿ, ಕಿರಿಕಿರಿ.
ಮಾಲೀಕರ ಹೊಟ್ಟೆಯೊಳಗಿನ ಕಿಚ್ಚನ್ನು ಕಡಿಮೆ ಮಾಡಲೋ ಎಂಬಂತೆ, ಬ್ಯಾರಲ್‌ಗಳು ಹೊಗೆಸೊಪ್ಪನ್ನು ದಾಟಿ ಬೇರೆ ಬೆಳೆಗಳಿಗೂ ಉಪಯೋಗಕ್ಕೆ ಬಂದವು. ಮೆಕ್ಕೆಜೋಳ ಕುಯ್ದವರು ಜೋಳವನ್ನು ಬ್ಯಾರಲ್ ಒಳಗೆ ತುಂಬಿಸಿಡುತ್ತಿದ್ದರು. ಅಡಿಕೆ ತೋಟದಲ್ಲಿದ್ದ ಬ್ಯಾರಲ್‌ಗಳಲ್ಲಿ ಅಡಿಕೆ ಸುಲಿಯುವ ಸುಗ್ಗಿ ಎಗ್ಗಿಲ್ಲದೆ ನಡೆಯಿತು. ಹಾಗೆಯೇ, ನೆಲಗಡಲೆ ತರಿಯುವುದಕ್ಕೂ ಬ್ಯಾರಲ್ ಛಾವಣಿಗಳು ನೆರಳು ಕೊಟ್ಟವು. ಮಂಗಳೂರು ಹೆಂಚಿನ ಸೂರುಗಳ ಮೇಲೆ ಕೆಂಪುಮೆಣಸಿನಕಾಯಿ ಧಾರಾಳ ಮಲಗಿ ಒಣಗಿದವು. ಹೀಗೆ, ಹೊಗೆಸೊಪ್ಪಿನ ಕಾಲಕ್ಕೆ ಮೊದಲು ಮತ್ತು ನಂತರ ಬ್ಯಾರಲ್‌ಗಳು ನಾನಾ ಅವತಾರ ತಾಳಿ, ತಮ್ಮ ಮಾಲೀಕರನ್ನು ನೆಮ್ಮದಿಯ ಕಡಲಲ್ಲಿ ಮುಳುಗೇಳಿಸುವ ಸಾಹಸ ಮಾಡುತ್ತಿದ್ದವು.
ಊರಿಗೆ ಹತ್ತಿರದ, ಮಾಲೀಕರು ಸದಾ ಕಣ್ಣಿಟ್ಟಿರುತ್ತಿದ್ದ ಕೆಲವು ಬ್ಯಾರಲ್‌ಗಳು ಕಿಟಿಕಿಟಿಯಿಂದ ದೂರವೇ ಇದ್ದವು ಅನ್ನಿ. ಆದರೆ, ಊರಿಂದ ದೂರದ, ಯಾವಾಗಲೂ ಕಣ್ಣಿಡಲಾಗದ, ವಿಶೇಷವಾಗಿ ಮಾವು ಮತ್ತು ಗೋಡಂಬಿ ತೋಪುಗಳಲ್ಲಿದ್ದ ಬ್ಯಾರಲ್‌ಗಳಿಗೆ ಕಳ್ಳರ ಶುಕ್ರದೆಸೆ ಶುರುವಾಗಿಬಿಟ್ಟಿತ್ತು. ಗಟ್ಟಿಮುಟ್ಟಾದ ಮರಗಳಿಂದ ತಯಾರಿಸಿದ್ದ ಬಾಗಿಲು ಮತ್ತು ಕಿಟಕಿಗಳು ರಾತ್ರಿ ಕಳೆಯುವುದರಲ್ಲಿ ಮಾಯವಾಗಿ, ಬ್ಯಾರಲ್ ಭೂತಬಂಗಲೆಯಂತೆ ಕಾಣುವ ಮ್ಯಾಜಿಕ್ ನಡೆದು, ಮಾಲೀಕರು ತಲೆ ಮೇಲೆ ಕೈ ಹೊತ್ತು ಒಂದೇ ಕಣ್ಣಲ್ಲಿ ಅಳುವ ಹೊಸ ಬಗೆಯ ಪ್ರಸಂಗಗಳ ಸರಣಿ ಕಣ್ತೆರೆಯಿತು.
ಅದೊಂದು ದಿನ ಬೆಳ್ಳಂಬೆಳಗ್ಗೆ ಊರೊಳಗೊಂದು ಆರ್ತನಾದ. ಹದಿನೈದು ಮೇಕೆ ಸಾಕಿಕೊಂಡಿದ್ದ ಮನೆಯೊಂದರಿಂದ ನಾಲ್ಕು ಮೇಕೆ ಮರಿ ನಾಪತ್ತೆ. “ಬಿಡದಿಲ್ಲ ಆ …ಮಗನನ್ನ… ಗೊತ್ತು ನಂಗೆ- ಅವ್ನೇ ಹೊತ್ಕಂಡೋಗಿರದು. ಕಂಪ್ಲೇಂಟ್ ಕೊಟ್ಟು ಬೆಂಡೆತ್ಸಿದ್ರೆ ಬಾಯ್ ಬಿಡ್ತಾನೆ …ಮಗ,” ಮುಂತಾಗಿ ಮಂಗಳಾರತಿ. “ನಮ್ಮನೆ ಮರೀನೇ ತಕ್ಕಂಡೋಗ್ಬೇಕಿತ್ತ… ಅವನ್ ಮನೆ ನಾಶ್ನ ಆಗ… ಅವ್ನ್ ಎಕ್ಕುಟ್ಟ್ ಹೋಗ… ಬರಬಾರದ್ ಬಂದ್ ನೆಗದ್ ಬೀಳ…” ಇತ್ಯಾದಿ ಮಹಾ ಮಂಗಳಾರತಿ. ಸಂಜೆಯಷ್ಟೊತ್ತಿಗೆ, ಊರಿಂದ ಎರಡು ಕಿಲೋಮೀಟರ್ ದೂರದಲ್ಲಿದ್ದ ಗೋಡಂಬಿ ತೋಪಿನ ಬ್ಯಾರಲ್‌ನ ಛಾವಣಿ ಅಡಿ ಮೇಕೆಮರಿಗಳ ತುಪ್ಪಳ, ರಕ್ತದ ಗುರುತು, ಅಡುಗೆಗೆಂದು ಹೂಡಿದ್ದ ಕಲ್ಲಿನ ಒಲೆ ಪತ್ತೆಯಾಗಿತ್ತು. ಊರಿನ ಮೇಕೆಗಳನ್ನು ಸೀದಾ ಗೋಡಂಬಿ ತೋಪಿನ ಬ್ಯಾರಲ್‌ಗೆ ಹೊತ್ತೊಯ್ದಿದ್ದ ಕಳ್ಳರು, ಛಾವಣಿ ಅಡಿಯಲ್ಲಿ ಕುಯ್ದು ಪಾಲು ಹಾಕಿಕೊಂಡು, ಉಳಿದ ಮಾಂಸವನ್ನು ಅಡುಗೆ ಮಾಡಿಕೊಂಡು ಸಮ್ಮ ಬಾರಿಸಿ, ನಿದ್ದೆ ಮಾಡಿ ಎದ್ದುಹೋಗಿದ್ದರು.
ಒಟ್ರಾಸಿ, ಮೇಕೆ ಕಳ್ಳತನ, ಬಾಗಿಲು-ಕಿಟಕಿ ನಾಪತ್ತೆ ಮುಂತಾಗಿ, ಕಂಪ್ಲೇಂಟು ಇದ್ದಾಗ ಮಾತ್ರವೇ ಊರಲ್ಲಿ ಮುಖ ಕಾಣಿಸುತ್ತ ಆರಾಮಕ್ಕೆ ಜಾರಿದ್ದ ಪೊಲೀಸರಿಗೆ ನಿದ್ದೆ ಹೋಗುವ ದಿನಗಳು ಧುತ್ತನೆ ಎದುರಾದವು. ಹೊಗೆಸೊಪ್ಪು, ಶೇಂಗಾ, ಮೆಣಸಿನಕಾಯಿ, ಅಡಕೆ, ಮೆಕ್ಕೆಜೋಳವನ್ನೆಲ್ಲ ಅನಾಮತ್ತಾಗಿ ಹಿಂದೆ ಹಾಕಿದ ಬ್ಯಾರಲ್‌ಗಳು, ಇದ್ದಕ್ಕಿದ್ದಂತೆ ಇಸ್ಪೀಟು ಅಡ್ಡೆಗಳಾಗಿ ಅವತಾರ ಎತ್ತಿದವು! ಅದರ ಜೊತೆಗೆ ಮೆತ್ತಗೆ ಸರಾಯಿಯೂ ಕೈಜೋಡಿಸಿತು.
ಕೇಳಬೇಕೇ? ಕೊರಳಪಟ್ಟಿ ಹಿಡಿದು ಬಡಿದಾಡುವ, ಷರ್ಟ್ ಹರಿದುಕೊಳ್ಳುವ, ಕಲ್ಲುಗಳನ್ನು ಹುಡುಕಿ ಪರಸ್ಪರ ಚಚ್ಚಿಕೊಳ್ಳುವ, ಪಂಚೆ ಉದುರಿಸಿಕೊಂಡು ಹೊಡೆದಾಡುವ ಅಭೂತಪೂರ್ವ ಮನರಂಜನೆಯ ದೃಶ್ಯಗಳ ಹಬ್ಬ. ಯಾರಾದರೂ ಕಂಪ್ಲೇಂಟು ಮಾಡಿದರಷ್ಟೇ ಊರೊಳಗೆ ಅವತರಿಸುತ್ತಿದ್ದ ಪೊಲೀಸರು, ಈಗ ತಾವಾಗಿಯೇ ದಾಂಗುಡಿ ಇಟ್ಟು, ಬ್ಯಾರಲ್‌ಗಳು ಎಲ್ಲೆಲ್ಲಿವೆ ಅಂತ ಮ್ಯಾಪ್ ಮಾಡಿಕೊಳ್ಳತೊಡಗಿದರು.
ಹೀಗೆ, ಕತೆಯ ಮೇಲೆ ಕತೆಯನ್ನು ಹೆರುತ್ತ, ನಾನಾ ಅವತಾರ ತಾಳುತ್ತ ಹೋದ ಬ್ಯಾರಲ್‌ಗಳಿಗೆ ಕೊನೆಗೆ ಎಳ್ಳು-ನೀರು ಬಿಡುವ ಕಾಲವೂ ಬಂತು. ಹೊಗೆಸೊಪ್ಪಿನ ಮಂಡಿಗಳಲ್ಲಿ ರೇಟು ಧಳಕ್ಕನೆ ಪಾತಾಳ ಮುಟ್ಟಿದ್ದು, ಬ್ಯಾರಲ್ ಲೈಸೆನ್ಸ್ ವಿಷಯದಲ್ಲಿ ಸರ್ಕಾರ ಕಠಿಣ ಹೆಜ್ಜೆ ಇಟ್ಟಿದ್ದು, ಹೊಗೆಸೊಪ್ಪಿನ ಬ್ಯಾರಲ್‌ಗಳು ಊರಿನ ಸುತ್ತಲ ಗುಡ್ಡಗಳ ಕಾಡನ್ನೆಲ್ಲ ನುಂಗಿ ನೀರು ಕುಡಿದದ್ದು, ಯಥೇಚ್ಛ ರಸಗೊಬ್ಬರ ಸುರಿಸುರಿದು ನೆಲಕ್ಕೆ ಮಂಕು ಬಡಿದದ್ದು… ಇನ್ನೇನೂ ಬಾಕಿ ಉಳಿದಿರಲಿಲ್ಲ ಬಿಡಿ. ಕೊನೆಗೆ, ಇದೆಲ್ಲಕ್ಕೂ ಸಾಕ್ಷಿಯಾದ ಸುಟ್ಟ ಇಟ್ಟಿಗೆಯ ಕಟ್ಟಡದ ಬಹುತೇಕ ಬ್ಯಾರಲ್‌ಗಳು ಕೈ ಕಟ್ಟಿ, ಬಾಯ್ಮುಚ್ಚಿ ನಿಂತವು. ಈಗಲೂ ಹಾಗೆಯೇ ನಿಂತಿವೆ. ಬೋಳುಗುಡ್ಡಗಳು ಮಾತ್ರ ಮಳೆಗಾಲದಲ್ಲಿ ಹುಲ್ಲು ಬೆಳೆದುಕೊಳ್ಳುತ್ತ, ಇರುವ ಕುರುಚಲು ಕಾಡಿನಲ್ಲೇ ಕುಂಟುತ್ತ ಕಾಲ ಸಾಗಿಸುತ್ತಿವೆ.