ಆ ದಿನ ನಾಗರಪಂಚಮಿ ಹಬ್ಬ. ಇದ್ದ ಸಾಮಾನಿನಲ್ಲಿಯೇ ಸೂಳಿರೊಟ್ಟಿ ಮಾಡಬೇಕೆಂಬುದು ಶಿಕ್ಷಕಿಯರ ಸಂಕಲ್ಪ. ಕರಾವಳಿ ಜನರ ಸಂಪ್ರದಾಯದಂತೆ ಹಬ್ಬಕ್ಕೆ ಮನೆ ಮಂದಿಯೆಲ್ಲ ಸೇರಿ ಮಾಡುವ ಸೂಳಿರೊಟ್ಟಿ ಆ ದಿನದ ವಿಶೇಷ ತಿಂಡಿ. ಇದನ್ನು ಮಾಡಲು ಇಡ್ಲಿ ಬೇಯಿಸುವ ಪಾತ್ರೆ ಬೇಕೆ ಬೇಕು. ಆದರೂ ಹೊಂದಿಸಿ ಗುಣಿಸಿ ಇದ್ದ ಅಡುಗೆ ಪಾತ್ರೆಯಲ್ಲಿಯೆ ಸೂಳಿರೊಟ್ಟಿ ಮಾಡಿ ತಿಂದಾಗ ಒಂದು ಸಾಹಸವೇ ಆಗಿತ್ತು. ಅಷ್ಟೊಂದು ನೀಟಾಗಿ ಬರದ ಸೂಳಿರೊಟ್ಟಿಗಳು ಸಿ.ಆರ್. ನಾಯ್ಕರ ಬಾಯಿಗೂ ಬಿತ್ತು. ಅಣಶಿಯ ಚಳಿ ಮಳೆ ಗಾಳಿಯಲ್ಲಿ ಹಬೆಯಾಡುವ ಬೆಳಗ್ಗಿನ ಬಿಸಿ ಬಿಸಿ ಚಹಾದ ಜೊತೆಗೆ ಮುಕ್ತ ಮಾತಾಡಿ ಕಷ್ಟ ಸುಖಗಳೆಲ್ಲ ಹಂಚಿಹೋಗಿತ್ತು….
‘ಕಾಳಿಯಿಂದ ಕಡಲಿನವರೆಗೆ’ ಅಂಕಣದಲ್ಲಿ ಅಕ್ಷತಾ ಕೃಷ್ಣಮೂರ್ತಿ ಬರಹ.
ಬಹುಶಃ ಅದು ರಾತ್ರಿ ಎರಡು ಗಂಟೆ ಆಗಿರಬಹುದು. ದಿನವೂ ಒಂಬತ್ತು ಗಂಟೆಗೆ ಮಲಗುವ ಕಣ್ಣುಗಳಿಗೆ ಆ ದಿನ ನಿದ್ರೆಯಿಲ್ಲ. ಕಣ್ಣು ತೆರೆದೆ ಕೂತರೆ, ನಾಳೆಯ ಬೆಳಗು ಆಲಸ್ಯವಾಗಬಹುದೆಂಬ ಮತ್ತೊಂದು ಚಿಂತೆ. ಅಣಶಿಯ ಕಾಜುಗಾರ ಮನೆಯಲ್ಲಿ ಆ ರಾತ್ರಿ ಇದೇ ಮೊದಲ ಸಲ ಇರುಳು ನೋಡಿದಂತೆ ಕಳೆಯುವ ಕ್ಷಣ. ವಿಪರೀತ ಚಳಿಗೆ ಹೊದ್ದ ರಜಾಯಿಗಳು ತಂಪು ತಂಪು. ಅಣಶಿ ಕಾಡಿನ ಪ್ರಾಣಿಗಳಿಗೆ ಸೋಕಿದ ಗಾಳಿ, ಇಡೀ ಅಣಶಿಯ ಎಲ್ಲ ಸಂಗತಿಗಳ ವಾಸನೆಯೊಂದಿಗೆ ಬೆರೆತಿದೆಯೋ ಎಂಬಂತೆ ಭಾಸ.
ಅಜ್ಜನಂಗಡಿಯಲ್ಲಿ ಕರೆದುಕೊಳ್ಳುತ್ತಿರುವ ಉಳ್ಳಾಗಡ್ಡೆ ಬಜಿಯ ವಾಸನೆ, ದಿನಕರ ಮಾಮಾನ ಅಂಗಡಿಯಲ್ಲಿ ತಯಾರಾಗುತ್ತಿರುವ ಐದು ರೂಪಾಯಿಗೆ ಒಂದೇ ಸಿಗುವ ಬೂಂಧಿಲಾಡಿನ ಇರುಹು, ಬಾಡಿಗೆ ಮನೆಯಲ್ಲಿ ಒಂದು ಎಲೆ ಅಡಿಕೆ ಚಿಂಚಿ ಇಟ್ಟುಕೊಂಡೆ ಇರುವ ಶರ್ವಾ ತಾಲೂಕದಾರ್ ಮಾಸ್ತರರ ಎಲೆ ಅಡಿಕೆಯ ತಾಂಬೂಲ, ಇರುಳಲ್ಲಿ ಹೆಜ್ಜೆ ಗುರುತು ದಾಖಲಿಸುವ ಹುಲಿ ಕರಡಿಗಳ ನೆರಳು, ಸರಿಯಾಗಿ ಒಂಬತ್ತು ಗಂಟೆಗೆ ದಾಂಡೇಲಿಯಿಂದ ಬಂದ ಬಸ್ಸು ಅಣಶಿ ತಲುಪುವ ಹೊತ್ತು, ಬೆಳಿಗ್ಗೆಯೆ ಗದ್ದೆಗೆ ಹೋದವನು ಕತ್ತಲೆ ನೋಡಿಯೆ ಕೆಲಸ ಮುಗಿಸಿ ಸಂಪಿಗೆ ಜಲಪಾತಕ್ಕೆ ಮೈಯೊಡ್ಡಿ ಅಂಗಳದ ನಂದಿಬಟ್ಟಲು ಹೂವನ್ನು ತುಳಸಿಗೆ ಹಾಕಿ ಕೈ ಮುಗಿವ ಹೊತ್ತು …. ಎಲ್ಲ ಸೇರಿ ಕತ್ತಲೆಯೊಳಗೆ ಚಂದದ ಪಟ್ಟಾಂಗಕ್ಕೆ ಇಳಿದಿದೆ. ಇದರ ನಡುವೆ ಮಾಸ್ತರ್ ಮಂದಿಗಳಿಗೆ ಸ್ವಲ್ಪ ಹೊತ್ತು ಕಣ್ಣು ಮುಚ್ಚಿದರೆ ಸಾಕು ಕುಸಿದ ಗುಡ್ಡವೆ ಕಣ್ಣೆದುರು ಬಂದಂತಾಗಿ ರಾತ್ರಿಯ ನಿರವತೆಯಲ್ಲಿ ಒಂಥರಾ ಭಯ. ಕುಸಿದ ಗುಡ್ಡ ಸರಿಯಾಗುವುದೋ … ಇಲ್ಲವೋ… ಎಂಬ ಪ್ರಶ್ನೆಯ ಭಯ, ಒಡೆಯುವ ಹಾದಿಗಳ ಭಯ, ಮುಂದೇನು? ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ ಎಂದೆನಿಸುವ ಭಾವ. ನಿದ್ದೆ ಇಲ್ಲದ ಈ ರಾತ್ರಿಯಲ್ಲಿ ಜೊತೆಯಲ್ಲಿ ಮಲಗಿದ ಉಳಿದ ಜೀವಗಳು ಗುಟ್ಟಾಗಿ ತಮ್ಮ ತಮ್ಮ ಯೋಚನೆಯಲ್ಲಿಯೇ ಕಳೆದು ಹೋದ ಮೌನ, ಪ್ರತಿ ತಿರುವಿನಲ್ಲಿಯೂ ಅಭದ್ರತೆ ಎದ್ದು ಕಾಂಬುವ ಇರುಳದು. ಹರಿದು ಹಂಚಿ ಹೋದ ಕುಟುಂಬಗಳ ಕನಸುಗಳು ನಾಡಿನಾಚೆ ಕಾಡಿನಾಚೆ ಕಂಡೂ ಕಾಣದಂತಹ ನೆರಳು.
ಇಂತಹ ರಾತ್ರಿಗಳನ್ನೆ ಹೊತ್ತ ಮನೆಗೆ ಒಂದು ಬೆಳ್ಳಂಬೆಳಿಗ್ಗೆ ಕಂಡವರು, ಕಾಳಿ ಸರಂಕ್ಷಿತ ಪ್ರದೇಶದಲ್ಲಿ ಅರಣ್ಯ ರಕ್ಷಕರಾಗಿ ಆಗಿ ಕೆಲಸ ಮಾಡುತ್ತಲಿದ್ದ ಸಿ ಆರ್ ನಾಯ್ಕ ಅವರು. ಕಾಡಿನ ಎಲ್ಲ ಮಾಹಿತಿಯುಳ್ಳ ಅಪರೂಪದ ಮನುಷ್ಯ. ಜೋಯಿಡಾಕ್ಕೆ ಹೊರಟವರು, ಕಾಜುಗಾರ ಮನೆಯಲ್ಲಿದ್ದ ಶಿಕ್ಷಕರನ್ನು ನೋಡ ಬಂದರು. ಅಣಶಿ ಕಡೆಗೆಲ್ಲ ಹಾಗೆ. ಪರಿಚಯವಿದ್ದವರು ಪಕ್ಕದಿಂದ ಹಾದು ಹೋಗಬೇಕಾದರೆ ಯೋಗಕ್ಷೇಮ ವಿಚಾರಿಸುವುದಷ್ಟೇ ಅಲ್ಲ; ಬೇರೆ ಊರಿಂದ ಏನಾದರೂ ಸಾಮಾನುಗಳು ಬೇಕಾದರೆ ಅದನ್ನು ತಂದು ಕೊಡುವ ಕೆಲಸವೂ ನಿರಂತರ ಎಲ್ಲರೊಟ್ಟಿಗೆ ನಡೆಯುತ್ತಿರುತ್ತದೆ. ಹೀಗಾಗಿ ಯಾರ ಮನೆಗೆ ಇಂದು ಯಾವ ಸಾಮಾನು ಬೇಕು ಎಂಬ ಸಣ್ಣ ಮಾಹಿತಿ ಅಲ್ಲೆ ಅಕ್ಕ ಪಕ್ಕದವರಿಗೆ ಗೊತ್ತಿರುತ್ತದೆ.
ಆ ದಿನ ನಾಗರಪಂಚಮಿ ಹಬ್ಬ. ಇದ್ದ ಸಾಮಾನಿನಲ್ಲಿಯೇ ಸೂಳಿರೊಟ್ಟಿ ಮಾಡಬೇಕೆಂಬುದು ಶಿಕ್ಷಕಿಯರ ಸಂಕಲ್ಪ. ಹಬ್ಬಕ್ಕೆ ಮನೆ ಮಂದಿಯೆಲ್ಲ ಕರಾವಳಿ ಜನರ ಸಂಪ್ರದಾಯದಂತೆ ಮಾಡುವ ಸೂಳಿರೊಟ್ಟಿ ಆ ದಿನದ ವಿಶೇಷ ತಿಂಡಿ. ಇದನ್ನು ಮಾಡಲು ಇಡ್ಲಿ ಬೇಯಿಸುವ ಪಾತ್ರೆ ಬೇಕೆ ಬೇಕು. ಆದರೂ ಹೊಂದಿಸಿ ಗುಣಿಸಿ ಇದ್ದ ಅಡುಗೆ ಪಾತ್ರೆಯಲ್ಲಿಯೆ ಸೂಳಿರೊಟ್ಟಿ ಮಾಡಿ ತಿಂದಾಗ ಒಂದು ಸಾಹಸವೇ ಆಗಿತ್ತು. ಅಷ್ಟೊಂದು ನೀಟಾಗಿ ಬರದ ಸೂಳಿರೊಟ್ಟಿಗಳು ಸಿ.ಆರ್. ನಾಯ್ಕರ ಬಾಯಿಗೂ ಬಿತ್ತು. ಬೆಳಿಗ್ಗಿನ ಬಿಸಿ ಬಿಸಿ ಚಹಾ ಅಣಶಿಯ ಚಳಿ ಮಳೆಗಾಳಿಯಲ್ಲಿ ಹಬೆಯಾಡುವ ಮಾತಾಡಿ ಕಷ್ಟ ಸುಖಗಳೆಲ್ಲ ಹಂಚಿಹೋಗಿತ್ತು…. ವಾಪಸಾಗುವಾಗ ಹತ್ತಿರ ಕರೆದು ಬಿಗ್ ಬಾಸ್ ಮನೆ ಎಂದು ಇದನ್ನು ಕರೆಯಬಹುದು ಎಂದು ನಾಮಕರಣವನ್ನು ಅವರು ಮಾಡಿ ಕೂಡ ಆಗಿತ್ತು. ಐದಾರು ಶಿಕ್ಷಕರಿದ್ದ ಕಾಜುವಾಡದ ಈ ಮನೆ ಹೊಸ ಹೆಸರಿನೊಂದಿಗೆ ನಾಮಕರಣವಾದ ಖುಷಿ ಒಂದೆಡೆಯಾದರೆ ಬಿಗ್ ಬಾಸ್ ಮನೆಯಂತೆ ಹಂಚಿಕೊಂಡು ಮಾಡುವ ಕೆಲಸ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೊಂದಿಕೊಳ್ಳುವ ಗುಣ. ತಮ್ಮ ಆಶೋತ್ತರಗಳನ್ನು ಬದಿಗೊತ್ತಿ ಪ್ರತಿ ದಿನ ಆದಷ್ಟು ಖುಷಿಯಿಂದಿರುವ ಬಗೆ ಎಲ್ಲ ಕತ್ತಲೆ ರಾತ್ರಿಯಲ್ಲಿ ಬೆಳಕಾಗಿ ಹೊಳೆಯುತ್ತಿತ್ತು.
ಬೆಳಿಗ್ಗೆಯೆ ಗದ್ದೆಗೆ ಹೋದವನು ಕತ್ತಲೆ ನೋಡಿಯೆ ಕೆಲಸ ಮುಗಿಸಿ ಸಂಪಿಗೆ ಜಲಪಾತಕ್ಕೆ ಮೈಯೊಡ್ಡಿ ಅಂಗಳದ ನಂದಿಬಟ್ಟಲು ಹೂವನ್ನು ತುಳಸಿಗೆ ಹಾಕಿ ಕೈ ಮುಗಿವ ಹೊತ್ತು …. ಎಲ್ಲ ಸೇರಿ ಕತ್ತಲೆಯೊಳಗೆ ಚಂದದ ಪಟ್ಟಾಂಗಕ್ಕೆ ಇಳಿದಿದೆ.
ರಾತ್ರಿಯಾದೊಡನೆ ಇಲ್ಲಿ ಮನುಷ್ಯರ ಒಂದು ದನಿಯೂ ಕೇಳದು. ಸರಾಯಿ ಅಂಗಡಿ ಇಲ್ಲದಿದ್ದರೂ ಕದ್ದು ಕುಡಿವ ಕಳ್ಳಿನ ಸದ್ದು, ಅಣಶಿವಾಡಾದಲ್ಲಿ ಇದ್ದ ಬಿಳಿಕೋಳಿ ಕೂಗು, ಕಾಡಂಚಿನ ಕೊನೆ ಮನೆಯ ಜಗಳ, ರತ್ನಾಕರ ವೇಳಿಪನ ರಾತ್ರಿ ಗಾನಾ, ಕಾಜುವಾಡಾದ ದಾಯಾದಿ ಕದನ, ಮನೆಯ ಸುತ್ತ ಯಾವುದೋ ನೆರಳು ಕಂಡ ನಾಯಿಯ ಭಯ, ಇಲ್ಲದ ನೆಟ್ವರ್ಕ್ ನಿಂದ ಮೊಬೈಲ್ ರಿಂಗಣಿಸದೇ ಮೌನ… ಎಲ್ಲದಕ್ಕೂ ಒಮ್ಮೆಲೆ ಕತ್ತಲು ಪ್ರಾಪ್ತವಾದಂತೆ.. ಇಂತಹ ಕತ್ತಲೆಯಲ್ಲಿಯೆ ಸದ್ಯ ಕೇಳುವುದು ಒಂದೇ ಸದ್ದು. ಅದು ಕಾಡಿನಂಚಿನ ಕೊನೆಯ ಕಾಜುಗಾರ ಮನೆಯಿಂದ. ಸುರಿವ ಮಳೆಯಲ್ಲಿ, ಕರೆಂಟ್ ಇಲ್ಲದ ರಾತ್ರಿಗಳಲ್ಲಿ, ಸ್ವೇಟರು, ಶಾಲು, ರಜಾಯಿಗೆ ಹೆದರದ ಚಳಿಯನ್ನು ಓಡಿಸಲು ಕಂಡುಕೊಂಡ ಮಾರ್ಗ ಚಳಿ ಕಾಯಿಸುವುದು. ಮನೆಯ ದೊಡ್ಡ ತೆಣೆಯಲ್ಲಿ ಕಾಜುಗಾರರೆ ಮಾಡಿಟ್ಟಿದ್ದ ಚೌಕದ ತಗಡಿನ ಡಬ್ಬಿ. ನಾಲ್ಕು ಕಡೆಗೆ ಸಣ್ಣ ಕಿಂಡಿಯಿರುವ ಅದರ ಹೊಟ್ಟೆಯೊಳಗೆ ಮೂರ್ನಾಲ್ಕು ಕಟ್ಟಿಗೆಗಳು ನೆಟ್ಟಗೆ ನಿಂತು ಬೆಂಕಿ ಹೊತ್ತಿಸಿಕೊಳ್ಳುತ್ತವೆ. ಆಗ ಹೊರಟ ಹೊಗೆ ವಾಸನೆಯೂ ಧೂಮದ ಪರಿಮಳದಂತೆ ಕಾಡುವ ಚಳಿಗೆ ಏನೊ ಹೊಸ ಬಗೆಯ ಆಹ್ಲಾದ.
ಶರ್ವಾ ತಾಲೂಕದಾರ ಸರ್ ಮನೆಯಲ್ಲಿ ಒಂದರ ಮೇಲೊಂದು ಒಣ ಕಟ್ಟಿಗೆ ಸಾಕಿಟ್ಟಿದ್ದು, ಬಿಗ್ ಬಾಸ್ ಮನೇಲಿ ಇದ್ದವರ ಅನುಕೂಲಕ್ಕೆ ಒಂದುವರೆ ತಿಂಗಳವರೆಗೂ ಕರಗುವುದು. ಬಿಸಿಲಿನಲ್ಲಿ ಕೂಡಿಸಿಟ್ಟ ದೊಡ್ಡ ಆಸ್ತಿ ಇದ್ದಂತೆ ಅದು. ಏಕೆಂದರೆ ಬೇಸಿಗೆಯ ನಂತರ ಆರು ತಿಂಗಳವರೆಗೆ ಮಳೆ ಹೊತ್ತುಕೊಂಡ ಅಣಶಿಗೆ ಮಳೆಗಾಲದಲ್ಲಿ ಇಂತಹ ಕಟ್ಟಿಗೆಗಳು ವರಪ್ರಸಾದವಿದ್ದಂತೆ. ಬಿದ್ದ ಕಟ್ಟಿಗೆಯನ್ನು ಆರಿಸುವುದು ಸುಲಭದ ಕೆಲಸವಲ್ಲ. ಬೇಸಿಗೆಯಲ್ಲಿ ಕಾಡಿನ ದಾರಿ ಹಾಯಬೇಕು, ಹಲಸಿನ ಹಣ್ಣಾಗುವ ಹೊತ್ತು ಅದಾದ ಕಾರಣ, ಆಗ ಕಾಡಲ್ಲಿ ವಿಪರೀತ ಅಡ್ಡಾಡುವ ಕರಡಿಗಳ ಕಣ್ಣು ತಪ್ಪಿಸಿ ಕಟ್ಟಿಗೆ ಹೆಕ್ಕಬೇಕು. ಅದನ್ನು ಅಷ್ಟೇ ಮಜಬೂತಾಗಿ ಕಟ್ಟಿಟ್ಟು ಮಳೆ ಹನಿಯಿಂದ ರಕ್ಷಿಸಬೇಕು. ಇಷ್ಟೆಲ್ಲ ಮಾಡಿದ ನಂತರವೆ ಅಚಾನಕ್ ರೂಪಗೊಂಡ ನಮ್ಮ ಬಿಗ ಬಾಸ್ ಮನೆಯ ಶಿಕ್ಷಕರಿಗೆ ತಾಲೂಕದಾರರ ಈ ಕಟ್ಟಿಗೆ ಒದಗಿ ಬಂದದ್ದು.
ಮನೆಯಲ್ಲಿದ್ದ ಶಿಕ್ಷಕರ ಜೊತೆ ಇನ್ನೂ ಹತ್ತಿರದಲ್ಲಿದ್ದ ಉಳಿದ ಶಿಕ್ಷಕರು ಸೇರಿಕೊಂಡು ಪುಟ್ಟ ಅಂಗಳ ತುಂಬಿ ಅಲ್ಲೊಂದು ಮಾಸ್ಟರ್ ಶಾಲೆ ರೂಪಗೊಳ್ಳುತ್ತದೆ. ಬೆಂಕಿಯ ಸುತ್ತ ಕುಳಿತವರಿಗೆ ವೃತ್ತಪತ್ರಿಕೆ ಸಿಗದ ಊರಿನಲ್ಲಿದ್ದರೂ ಲೋಕದ ಸಂಗತಿಗಳು ಬಾಯಿಂದ ಬಾಯಿಗೆ ಹರಡಿ ಗೊತ್ತಾಗುತ್ತದೆ. ನಂತರ ರಾತ್ರಿ ಈ ರೀತಿಯಾಗಿ ಪುನಃ ಒಟ್ಟಾಗಿ ಅದೆ ಸುದ್ದಿಗಳು ರದ್ದಿಯಾಗದೆ ತಾಜಾತನದೊಂದಿಗೆ ಅವರವರ ಮಾತಿನ ಕೌಶಲ್ಯ ಧಾಟಿಯಲ್ಲಿ ಹೊಸ ನಮೂನೆಯಾಗಿ ಕಾಣುತ್ತದೆ. ಲೋಕದ ವಿಷಯ ಬಂದರೂ, ಪ್ರತಿ ಬಾರಿ ವಿನೋದ ಸರು ಮಾತಾಡುವಾಗ ಶಾಲೆಯಿಂದ ಆರಂಭವಾಗುವ ವಿಷಯ ಕೊನೆ ಹಂತದಲ್ಲಿ ಅಣಶಿ ಕುಸಿದ ಘಟ್ಟದ ಕಡೆಗೆ ಬಂದು ನಿಲ್ಲುತ್ತವೆ. ಇವರ ಮಾತಿನ ನಡುವೆ ಏಕತಾನತೆ ಕಳೆಯಲೆಂಬಂತೆ ಸುವರ್ಣ ಅಕ್ಕೋರು ಹುರಿದ ಶೇಂಗಾ ತಂದಿಡುತ್ತಾರೆ.
ಬಿಕಣಾ (ಹಲಸಿನ ಬೇಳೆ) ಕೂಡ ಇಂತಹ ಸಂದರ್ಭದಲ್ಲಿ ಸರಿಯಾದ ಸಾಥ್ ನೀಡುತ್ತದೆ. ಮಳೆ ಹಾಗೂ ಚಳಿಯ ಈ ಕಹಾನಿಯಲ್ಲಿ ಸಣ್ಣವರಿರುವಾಗಿನ ಘಟನೆಗಳು ನೆನಪಾಗಿ ಚರ್ಚೆಯಾಗುತ್ತವೆ. ಕಟ್ಟಿಗೆ ಒಲೆಯಲ್ಲಿ ಸುಟ್ಟ ಗೇರುಬೀಜ ನೆನಪಾಗಿ ಒಂದು ಕ್ಷಣ ಬಾಯಲ್ಲಿ ನೀರು. ಹೊಡತಲು ನೀಡುವ ಶಾಖಕ್ಕೆ ಮೈ ಮನ ಬಿಸಿಯಾಗಿ ಒಂದು ನಮೂನಿ ಆರಾಮು ಸಿಗುತ್ತದೆ.
ಒಂದೊಂದೆ ಕಟ್ಟಿಗೆ ಕರಗಿದಂತೆಲ್ಲ ಇರುಳು ಕರಗುತ್ತ ರದ್ದಿಯಾಗಿ ಹೊಸ ಬೆಳಕು ಮೂಡುತ್ತದೆ. ದಿನ ದಾಟುತ್ತಿದೆ.
ಅಕ್ಷತಾ ಕೃಷ್ಣಮೂರ್ತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರು. ಜೊಯಿಡಾದ ದಟ್ಟ ಕಾನನದ ಅಣಶಿಯ ಶಾಲೆಯಲ್ಲಿ ಹದಿನಾಲ್ಕು ವರ್ಷದಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ದೀಪ ಹಚ್ಚಬೇಕೆಂದಿದ್ದೆʼ ಇವರ ಪ್ರಕಟಿತ ಕವನ ಸಂಕಲನ
ಚೆಂದದ ಬರಹ
ತುಂಬಾ ಚೆನ್ನಾಗಿದೆ
ಧನ್ಯವಾದ ಮ್ಯಾಡಂ
ಅದ್ಭುತ ಅನುಭವದ ಬರಹ….
ಅದ್ಭುತ ಅನುಭವದ ಬರಹ….
ಕಾಡಿನ ಅಂಚಿನ ಊರಿನ ಇರುಳಿನ ಸೊಬಗನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ.