ಆ 74 ಜನರಲ್ಲಿ ಒಬ್ಬರಾದ ನಮ್ಮ ತಂದೆ ವಿಧಾನಸಭೆಯಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದರು ಎನ್ನುವ ಕುತೂಹಲ ನನಗೆ ಮೊದಲಿಂದಲೂ ಇತ್ತು. ಮನೆಯಲ್ಲಿ ಹೆಚ್ಚು ಮಾತನಾಡದವರು ಅಲ್ಲಿ ಮಾತಾಡುತ್ತಿದ್ದರೇ? ಏನು ಮಾತನಾಡುತ್ತಿದ್ದರು? ಅಥವಾ ‘ಸೈಲೆಂಟ್ ಮೆಂಬರ್ʼ ಆಗಿದ್ದರೋ? ಕಳೆದ ಹತ್ತು ವರ್ಷಗಳಲ್ಲಿ ಈ ಕುತೂಹಲ ಇನ್ನೂ ಹೆಚ್ಚಾಯಿತು. ವಿಧಾನಸೌಧದ ಗ್ರಂಥಾಲಯದಲ್ಲಿ ನನ್ನ ಹಳೆಯ ಎಂ ಎಸ್ ಸಿ ಸಹಪಾಠಿ ವಾಸುದೇವ ರಾವ್ ಗೌರವ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆಂದು ತಿಳಿಯಿತು.
ಪಾಲಹಳ್ಳಿ ವಿಶ್ವನಾಥ್ ಬರೆದ ಹೀಗೊಂದು ಕುಟುಂಬದ ಕಥೆ ಪುಸ್ತಕ ಒಂದು ಅಧ್ಯಾಯ

 

 1952ರ ಚುನಾವಣೆ

ರಾಮಯ್ಯನವರಿಗೆ 1952ರ ಮೊದಲ ಚುನಾವಣೆಯಲ್ಲಿ ಪಾರ್ಲಿಮೆಂಟಿಗೆ ಸ್ಪರ್ಧಿಸುವ ಇಚ್ಛೆಯೂ ಇರುತ್ತದೆ. (1950ರ ಸಮಯದಲ್ಲಿ ಅವರ ದಿನಚರಿಯಲ್ಲಿ ‘ನಾನು 1952ರಲ್ಲಿ ನಡೆಯುವ ಪಾರ್ಲಿಮೆಂಟ್ ಚುನಾವಣೆಗೆ ಅರ್ಜಿ ಹಾಕಿಕೊಂಡಿದ್ದೇನೆ.. ಸಿಗುವುದು ಕಷ್ಟ..ʼ). ಆದರೆ ನಾವು ಮುಂದೆ ನೋಡುವ ಹಾಗೆ ಅದು ಸಿಗದೆ, ಹಳೆಯ ಕಾಂಗ್ರೆಸ್ಸಿಗರಾಗಿದ್ದರಿಂದ ೧೯೫೨ರ ಸಾರ್ವತ್ರಿಕ ಚುನಾವಣೆಗೆ ಅವರಿಗೆ ಬಸವನಗುಡಿ ಕ್ಷೇತ್ರದಿಂದ ಉಮೇದುವಾರರಾಗುವ ಅವಕಾಶ ಸಿಕ್ಕಿತು. ಅವರ ವಿರೋಧವಾಗಿ ಇತರ ಪಕ್ಷಗಳಿಂದ ಈ ಅಭ್ಯರ್ಥಿಗಳು ಇದ್ದರು: ಶ್ರೀಕಂಠೇಶ್ವರ್ (ಪ್ರಜಾ ಸಮಾಜವಾದಿ), ದೇವಡು ನರಸಿಂಹ ಶಾಸ್ತ್ರಿ (ಜನಸಂಘ), ದಯಾನಂದಸಾಗರ್.

ಶ್ರೀಕಂಠೇಶ್ವರ್ ಬಡಾವಣೆಯ ಖ್ಯಾತ ದಂತವೈದ್ಯರು ಮತ್ತು ನಾರ್ತ್ ರೋಡಿನಲ್ಲಿ ಇರುತ್ತಿದ್ದರು. ದೇವುಡು ಕನ್ನಡದ ದೊಡ್ಡ ಲೇಖಕರು (ಮಹಾ ಬ್ರಾಹ್ಮಣ, ಮಹಾ ಕ್ಷತ್ರಿಯ ಇತ್ಯಾದಿ ಕೃತಿಗಳು). ಆಗ ಇನ್ನೂ ಯುವಕರಾಗಿದ್ದ ದಯಾನಂದಸಾಗರ್ ಮುಂದೆ ದೊಡ್ಡ ಮಂತ್ರಿಗಳು, ಉದ್ಯಮಿಗಳೂ ಆದರು (ಕೆ.ಎಮ್.ಪಿ- ಕೃಪಲಾನಿಯವರ ಕಿಸಾನ್ ಮಜ್ದೂರ್ ಪಕ್ಷ) ಇತ್ಯಾದಿ. ಆ ದೇಶ ಪೂರ್ತಿ ಆ ಸಮಯದಲ್ಲಿ ಪ್ರಜಾ ಸೋಶಿಯಲಿಸ್ಟ್ ಪಕ್ಷವನ್ನು ಮುಖ್ಯ ವಿರೋಧಿ ಪಕ್ಷವೆಂದು ಪರಿಗಣಿಸಲಾಗಿತ್ತು.

ನನ್ನ ನೆನಪು: ನನಗೆ ಆಗ ಇನ್ನೂ ಹತ್ತು ವರ್ಷವೂ ಆಗಿರಲಿಲ್ಲ. ಮನೆಯಲ್ಲಿ ಬಹಳ ಸಂಭ್ರಮವಿದ್ದದ್ದು ಮಾತ್ರ ಚೆನ್ನಾಗಿ ನೆನಪಿನಲ್ಲಿದೆ. ಮನೆಯ ಮತ್ತು ಸುತ್ತಮುತ್ತಲಿನ ಹುಡುಗಿಯರು/ಯುವತಿಯರು ‘ಎಲ್ಲಾ ಓಟುದಾರರೆ, ಕಾಂಗ್ರೆಸ್ ಅಭಿಮಾನಿಗಳೆ, ಜೋಡಿಯೆತ್ತಿಗೆ ಓಟುʼ ಇತ್ಯಾದಿ ಹಾಡುಗಳನ್ನು ಹೇಳಿಕೊಂಡು ಓಡಾಡುತ್ತಿದ್ದರು. ಮನೆಯಲ್ಲೂ ಬಹಳ ಜನ ಬಂದ ಹೋಗುತ್ತಿದ್ದರು. ‘ಒಬ್ಬ ಯುವಕ ಪಂಚವಾರ್ಷಿಕ ಯೋಜನೆಗಳ ವಿಷಯ ಬಹಳ ಚೆನ್ನಾಗಿ ಮಾತಾಡಿದʼ ಎಂದು ಮನೆಗೆ ಬಂದವರೊಬ್ಬರು ಹೇಳಿದಾಗ ‘ಅವರು ರಾಮಯ್ಯನವರ ಮಗ (ಅಣ್ಣ) ಬ್ರಹ್ಮಾನಂದ’ ಎಂದು ಯಾರೋ ಉತ್ತರ ಕೊಟ್ಟಿದ್ದರು. ಆದರೆ ಆ ನೆನಪುಗಳೆಲ್ಲಾ ಬಹಳ ಮಸುಕು. ನಾನು ಆಗ 5/6 ನೆಯ ಕ್ಲಾಸಿನಲ್ಲಿ ಇದ್ದಿರಬಹುದು. ಆಗ ನಮ್ಮಗಳ ಜೀವನದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಆಟ! ಅದರಲ್ಲೂ ಕ್ರಿಕೆಟ್! ಆ ವರ್ಷ ಇಂಗ್ಲೆಂಡಿನಿಂದ ಪ್ರಪ್ರಥಮ ಅಧಿಕೃತ ಕ್ರಿಕೆಟ್ ಟೀಮ್ ಬ೦ದಿತ್ತು. ಹೊವಾರ್ಡ್ ಎನ್ನುವವರ ನೇತೃತ್ವದಲ್ಲಿ ಇಂಗ್ಲೆಂಡ್ ಆಡುವುದಿತ್ತು. ಆಗೆಲ್ಲ ಇಂಗ್ಲೆಂಡಿನ ನಕ್ಷೆ ನಮಗೆ ಚೆನ್ನಾಗಿ ತಿಳಿದಿತ್ತು; ಆ ಜ್ಞಾನ ಹುಟ್ಟಿದ್ದು ಕ್ರಿಕೆಟ್ ನಿಂದ! ಯಾವಯಾವ ಕ್ರಿಕೆಟಿಗರು ಇಂಗ್ಲೆಂಡಿನ ಯಾವಯಾವ ಪ್ರಾಂತ್ಯ (ಕೌಂಟಿ) ದಿಂದ ಬಂದವರು ಎಂಬುದೆಲ್ಲಾ ನಮಗೆ ತಿಳಿದಿತ್ತು. ಆದ್ದರಿಂದ ಪ್ರಾಂತ್ಯಗಳು ಎಲ್ಲಿವೆ ಎಂಬುದನ್ನೂ ತಿಳಿದುಕೊಂಡಿದ್ದೆವು.

1952ರ ಫೆಬ್ರವರಿಯ (6 ರಿಂದ 10ನೆಯ ತಾರೀಖು) ಸಮಯ. ಪಂದ್ಯ ಮದರಾಸಿನ ಚೀಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು. ನಮಗೆ ( ಮಕ್ಕಳಿಗೆ) ಕವರುಗಳಲ್ಲಿ ಕಾಗದಗಳನ್ನು ತುಂಬುವ ಕೆಲಸ ಕೊಟ್ಟಿದ್ದರು. ಕ್ರಿಕೆಟ್ ಕಾಮೆಂಟರಿ ಕೇಳುತ್ತಾ ಕೆಲಸ ಮಾಡುತ್ತಿದ್ದೆವು. ಕಡೆಗೂ ಭಾರತ ಗೆದ್ದಿತ್ತು; ಅದು ಭಾರತದ ಮೊದಲ ವಿಜಯ! ನಮ್ಮ ಮನಸ್ಸಿನಲ್ಲಿ ತುಂಬಿದ್ದು ಬೇರೆ ವಿಜಯಗಳೇ(ಮರ್ಚೆಂಟ್, ಮಾಂಜ್ರೇಕರ್, ಹಜಾರೆ); ಇದರ ಮಧ್ಯೆ ನಮ್ಮ ತಂದೆಯ ವಿಜಯದ ನೆನಪೇ ಇಲ್ಲ! ಪತ್ರಿಕೆಯಲ್ಲಿ ಚುನಾವಣೆಯ ಪರಿಣಾಮ ಬಂದಿದ್ದನ್ನು ನೋಡಿದ್ದ ನೆನಪು ಮಸುಕು; ಅದರಲ್ಲಿ ಒಂದು ದೀಪ (ಜನಸಂಘದ ಚಿನ್ಹೆ) ಇದ್ದದ್ದು ಚೆನ್ನಾಗಿ ಜ್ಞಾಪಕ. ರಾಮಯ್ಯನವರು ಸುಲಭವಾಗಿ ವಿಜಯಿಯಾಗಿದ್ದರು. ಚುನಾವಣೆಗೆ ೧೦೦೦೦ ಖರ್ಚಾಯಿತೆಂದು ಯಾರೋ ಹೇಳಿದ ಜ್ಞಾಪಕ (ಆಗ ಬಸವನಗುಡಿಯ ವಿದ್ಯಾರ್ಥಿ ಭವನ ದೋಸೆಗೆ 25 ಪೈಸೆ, ಈಗ 60-70 ರೂ! ಆದ್ದರಿಂದ 250-300 ರಷ್ಟು ಹೆಚ್ಚು. ಆದ್ದರಿಂದ ಚುನಾವಣೆಯ ಖರ್ಚು 25 – 30 ಲಕ್ಷ ಇರಬೇಕಿತ್ತು. ಈಗಲೂ ಚುನಾವಣಾ ಆಯೋಗ ಅಸೆಂಬ್ಲಿ ಚುನಾವಣೆಗಳಿಗೆ 25-35 ಲಕ್ಷ ನಿಗದಿ ಮಾಡಿದೆ. ಆದರೆ ಅನೇಕರು ಒಂದು ಕೋಟಿಗೂ ಹೆಚ್ಚು ಖರ್ಚು ಮಾಡುತ್ತಾರಂತೆ!) ಅಕ್ಟೋಬರ್ 25, 1951 ರಿಂದ ಫೆಬ್ರವರಿ 21, 1952 ರವರೆಗೆ 489 ಸ್ಥಾನಗಳಿಗೆ 68 ಹಂತಗಳಲ್ಲಿ ದೇಶದ ಮೊದಲ ಲೋಕಸಭಾ ಚುನಾವಣೆ ನಡೆಯಿತು. 45% ಮತಗಳೊಂದಿಗೆ, ಕಾಂಗ್ರೆಸ್ ಚುನಾವಣೆಯಲ್ಲಿ ಭಾರಿ ಜಯ ಸಾಧಿಸಿತು. ಸದನದಲ್ಲಿ 364 ಕಾಂಗ್ರೆಸ್ಸಿಗೆ ದಕ್ಕಿತು ಮತ್ತು ಏಪ್ರಿಲ್ 17, 1952 ರಂದು, ಮೊದಲ ಲೋಕಸಭೆಯನ್ನು ಜವಾಹರಲಾಲ್ ನೆಹರು ಅವರು ಕಾಂಗ್ರೆಸ್ ಸರ್ಕಾರವನ್ನು ಪ್ರಧಾನ ಮಂತ್ರಿಯಾಗಿ ಮುನ್ನಡೆಸಿದರು.

ಆಗ ನಮ್ಮಗಳ ಜೀವನದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಆಟ! ಅದರಲ್ಲೂ ಕ್ರಿಕೆಟ್! ಆ ವರ್ಷ ಇಂಗ್ಲೆಂಡಿನಿಂದ ಪ್ರಪ್ರಥಮ ಅಧಿಕೃತ ಕ್ರಿಕೆಟ್ ಟೀಮ್ ಬ೦ದಿತ್ತು. ಹೊವಾರ್ಡ್ ಎನ್ನುವವರ ನೇತೃತ್ವದಲ್ಲಿ ಇಂಗ್ಲೆಂಡ್ ಆಡುವುದಿತ್ತು. ಆಗೆಲ್ಲ ಇಂಗ್ಲೆಂಡಿನ ನಕ್ಷೆ ನಮಗೆ ಚೆನ್ನಾಗಿ ತಿಳಿದಿತ್ತು; ಆ ಜ್ಞಾನ ಹುಟ್ಟಿದ್ದು ಕ್ರಿಕೆಟ್ ನಿಂದ!

ಆಗಿನ ಮೈಸೂರು ರಾಜ್ಯ ದ ರಾಜಕೀಯವನ್ನು ಹಿಂದಿನ ಅಧ್ಯಾಯದಲ್ಲಿ ವಿವರಿಸಿದೆ. 1930ರ ದಶಕದ ಕೊನೆಯಲ್ಲಿ ಎರಡು ಪಕ್ಷಗಳಿದ್ದವು: ಮೈಸೂರು ಕಾಂಗ್ರೆಸ್ (ನಿಜಲಿಂಗಪ್ಪ, ಭಾಷ್ಯಮ್, ಹನುಮಂತಯ್ಯ ಇತ್ಯಾದಿ) ಮತ್ತು ಪ್ರಜಾ ಪಕ್ಷ (ಕ.ಸಿ.ರೆಡ್ಡಿ, ಎಚ್.ಸಿ.ದಾಸಪ್ಪ ಇತ್ಯಾದಿ). 1939ರಲ್ಲಿ ಎರಡೂ ಪಕ್ಷಗಳು ವಿಲೀನವಾದವು. ಆದರೂ ಮುಂದೆಯೂ ಈ ವಿಭಜನೆ ಯಾವುದೋ ರೀತಿಯಲ್ಲಿ ಮುಂದುವರಿದ ಹಾಗೆ ಕಾಣುತ್ತದೆ. ಒಂದು ಕೆ.ಸಿ.ರೆಡ್ಡಿ ಗುಂಪು. ಇನ್ನೊಂದು ಕೆಂಗಲ್ ಹನುಮಂತಯ್ಯನವರ ಗುಂಪು. ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಹನುಮಂತಯ್ಯನವರ ನೇತೃತ್ವದಲ್ಲಿ ರೆಡ್ಡಿಯವರ ವಿರುದ್ಧ ‘ವಿಶ್ವಾಸಮತ ಯಾಚನೆʼಯ ಪ್ರಕರಣ ಬರುತ್ತದೆ. ಆದರೆ ಸರ್ಕಾರ ಬೀಳುವುದಿಲ್ಲ. ಆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುತ್ತದೆಯಾದರೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಲ್ಲಿ ಕೆ.ಸಿ.ರೆಡ್ಡಿ ಗುಂಪು ಪರಾಭವಗೊಂಡು ಕೆಂಗಲ್ ಗುಂಪು ವಿಜಯಸಾಧಿಸಿದ ಕಾರಣ ಹನುಮಂತಯ್ಯ ಮುಖ್ಯಮಂತ್ರಿಯಾಗುತ್ತಾರೆ. ಕೆ.ಸಿ.ರೆಡ್ಡಿ ಕೇಂದ್ರದ ಮಂತ್ರಿಯಾಗಿ ರಾಜ್ಯದ ರಾಜಕೀಯದಿಂದ ಬಿಡಿಸಿಕೊಳ್ಳುತ್ತಾರೆ. ಆದರೂ ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆ ನಡೆಯುತ್ತಲೆ ಇರುತ್ತದೆ. ಮೈಸೂರು ವಿಧಾನ ಸಭೆಯ 99 ಸೀಟುಗಳಲ್ಲಿ ಕಾಂಗ್ರೆಸ್ ಗೆ 74 (46 % ಮತಗಳು) ಸಿಕ್ಕಿತ್ತು. ಕೆ.ಎಮ್‌.ಪಿ. ಎ. 8 ಮತ್ತು ಸೋಷಲಿಷ್ಟರಿಗೆ 3. ಹನುಮಂತಯ್ಯನವರು (1908-1980) ಮುಖ್ಯಮಂತ್ರಿಯಾದರು. ನೆನಪಿರುವ ತರಹ ಇತರ ಮಂತ್ರಿಗಳು – ಕಡಿದಾಳ್ ಮಂಜಪ್ಪ, ಎಚ್.ಸಿ. ದಾಸಪ್ಪ, ಟಿ.ಮರಿಯಪ್ಪ, ಸಿದ್ದಯ್ಯ, ಸಿದ್ದಲಿಂಗಯ್ಯ, ಚೆನ್ನಿಗರಾಮಯ್ಯ ಇತ್ಯಾದಿ…

ವಿಧಾನಸಭಾ ಸದಸ್ಯ:

ಆ 74 ಜನರಲ್ಲಿ ಒಬ್ಬರಾದ ನಮ್ಮ ತಂದೆ ವಿಧಾನಸಭೆಯಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದರು ಎನ್ನುವ ಕುತೂಹಲ ನನಗೆ ಮೊದಲಿಂದಲೂ ಇತ್ತು. ಮನೆಯಲ್ಲಿ ಹೆಚ್ಚು ಮಾತನಾಡದವರು ಅಲ್ಲಿ ಮಾತಾಡುತ್ತಿದ್ದರೇ? ಏನು ಮಾತನಾಡುತ್ತಿದ್ದರು? ಅಥವಾ ‘ಸೈಲೆಂಟ್ ಮೆಂಬರ್ʼ ಆಗಿದ್ದರೋ? ಕಳೆದ ಹತ್ತು ವರ್ಷಗಳಲ್ಲಿ ಈ ಕುತೂಹಲ ಇನ್ನೂ ಹೆಚ್ಚಾಯಿತು. ವಿಧಾನಸೌಧದ ಗ್ರಂಥಾಲಯದಲ್ಲಿ ನನ್ನ ಹಳೆಯ ಎಂ ಎಸ್ ಸಿ ಸಹಪಾಠಿ ವಾಸುದೇವ ರಾವ್ ಗೌರವ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆಂದು ತಿಳಿಯಿತು. ಭಾರತದಲ್ಲಿ ಅನೇಕ ಗ್ರಂಥಾಲಯಗಳಲ್ಲಿ ಕೆಲಸ ಮಾಡಿದ ವಾಸುದೇವರಾವ್ ವಿಷಯದಲ್ಲಿ ತಜ್ಞರಾಗಿದ್ದರಿಂದ ಕರ್ನಾಟಕ ಸರ್ಕಾರ ಅವರನ್ನು ನೇಮಿಸಿದ್ದರು. ಅವರು ವಿಧಾನ ಸೌಧದ ಒಳಗೆ ಬರಲು ಅನುಮತಿ ದೊರಕಿಸಿಕೊಟ್ಟರು. ಹಾಗೆ ಗ್ರಂಥಾಲಯದ ಒಳಗೆ ಆ ಕಾಲದ ವಿಧಾನ ಸಭಾ ಕಲಾಪಗಳ ಪುಸ್ತಕಗಳನ್ನು ನೋಡಿ ಕಾಪಿ ಮಾಡಿಕೊಳ್ಳಲು ಅವಕಾಶ ಕೊಟ್ಟರು. ಅವರ ಔದಾರ್ಯಕ್ಕೆ ನಾನು ಅವರಿಗೆ ಚಿರರುಣಿ. ಅವರು ಕೊಟ್ಟ ಅವಕಾಶವನ್ನು ಹೆಚ್ಚು ಬಳಸಿಕೊಳ್ಳದ್ದು ನನ್ನ ತಪ್ಪು. ಅದಕ್ಕೆ ಸೋಮಾರಿತನ ಮತ್ತು ಸಮಯದ ಅಭಾವವೆರಡೂ ಕಾರಣವಾದವು.

ನಾನು ತಿರುಗಿ ಹಾಕಿದ 3-4 ಪುಸ್ತಕಗಳಲ್ಲಿ ರಾಮಯ್ಯನವರ ಹೆಸರು ಆಗಾಗ್ಗೆ ಕಾಣಿಸುತ್ತಿತ್ತು. ಹಾಗೇ ಅವರು ಭಾಗವಹಿಸಿದ ವಿಷಯಗಳ ಒಂದು ಪಟ್ಟಿಯೂ ಸಿಕ್ಕಿದ್ದು (ಚಿತ್ರ). ಬೇರೆಯವರ ಪಟ್ಟಿಗಳಿಗೆ ನೋಡಿ ಹೋಲಿಸಿದಾಗ ರಾಮಯ್ಯನವರ ಹೆಸರು ಸ್ವಲ್ಪ ಹೆಚ್ಚು ಕಡೆ ಕಾಣಿಸಿತು; ಅನೇಕರಿಗಿಂತ ಹೆಚ್ಚು ಭಾಗವಹಿಸಿದ್ದಲ್ಲದೆ ಅವರ ಚರ್ಚೆಗಳ ವಿಷಯಗಳ ವ್ಯಾಪ್ತಿಯೂ ಹೆಚ್ಚುಇತ್ತು: ಶಿಕ್ಷಣ, ಹರಿಜನ ಸಮಸ್ಯೆಗಳು, ಬೆಂಗಳೂರಿನ ಕೊಳಚೆ ಪ್ರದೇಶಗಳು, ವಸತಿ, ತೆರಿಗೆ, ಆಯವ್ಯಯ ಇತ್ಯಾದಿ. ರಿಲಿಜಿಯಸ್ ಮತ್ತು ಚಾರಿಟಬಲ್ ಇನಾಮ್ ಗಳನ್ನು ರದ್ದು ಮಾಡಿದ ಕಾನೂನಿನ ಬಗ್ಗೆಯಂತೂ ಬಹಳ ಚರ್ಚಿಸಿರುವದನ್ನು ನೋಡಬಹುದು. ಇದು ಆಡಳಿತ ಪಕ್ಷವು ಪ್ರಸ್ತಾವಿಸಿದ್ದು ಆ ಪಕ್ಷದವರೇ ಆದ ರಾಮಯ್ಯನವರು ಅದರ ವಿರುದ್ಧವೆ ತಮ್ಮ ವಾದವನ್ನು ಮಂಡಿಸಿದ್ದು ಕುತೂಹಲಕಾರಿ ವಿಷಯ!

ದೇವಾಲಯಗಳಿಗೆ, ಮಠಗಳಿಗೆ ದೇಣಿಗೆ ರದ್ದು ಮಾಡಬೇಕೆಂಬುದು ಆ ಕಾನೂನಿನ ಉದ್ದೇಶವಾಗಿತ್ತು. ನಾನು ನೋಡಿದ ಪುಸ್ತಕಗಳಲ್ಲಿ ವಾದ ಮುಖ್ಯವಾಗಿ ಗೋಪಾಲಗೌಡರು ಮತ್ತು ರಾಮಯ್ಯನವರ ಮಧ್ಯೆ ನಡೆಯಿತು. ಆಗ ಗೋಪಾಲಗೌಡರು (ಸೋಷಲಿಸ್ಟ ಪಕ್ಷದವರು, ಒಳ್ಳೆಯ ವಾಗ್ಮಿಗಳು, ಯುವಕರು) ಈಗಿನ ಕಾಲದಲ್ಲಿ ಅವುಗಳಿಗೆ ಅರ್ಥವಿಲ್ಲ, ಇನಾಮುಗಳು ಹೋಗಬೇಕು ಎಂದೂ ರಾಮಯ್ಯನವರು ಸ್ವಲ್ಪ ಸಾವಧಾನವೆಂದೂ ಚರ್ಚೆ ನಡೆಯುತ್ತದೆ. ಇಬ್ಬರದೂ ಪುಟಗಟ್ಟಲೆ ವಾದಗಳಿವೆ. ರಾಮಯ್ಯನವರು ಗೌಡರ ವಾಗ್ಪಟುತ್ವವನ್ನು ಹೊಗಳುತ್ತಾರೆ.. ಈ ಇನಾಮಿನ ರದ್ದಿನ ವಿಷಯದಲ್ಲಿ ರಾಮಯ್ಯನವರು ಮಾಡಿದ ಚರ್ಚೆಯ ಕೆಲವು ವಾಕ್ಯಗಳು: “ಹಳೇ ವಿಷಯಗಳು ಕೆಲವರಿಗೆ ಹಿಡಿಸದಿರಬಹುದು… ನಮಗೆ ಅರ್ಥವಾಗದ ವಿಷಯಗಳ ಬಗ್ಗ ಬಹಳ ಲಘುವಾಗಿ ಮಾತನಾಡುವುದು ಬೇಡ. ಶೇಕ್ಸ್‌ಪಿಯರ್ ಹೇಳಿದಹಾಗೆ ನಮಗೆ ಅರ್ಥವಾಗದ್ದು, ನಮಗಿಂತ ದೊಡ್ಡದ್ದು ಏನೋ ಇದೆ. ಈ ‘ಧರ್ಮದ ವಿಷಯದಲ್ಲಿ ಅತಿ ತರ್ಕ ಬೇಡ ಮತ್ತು ನಂಬಿಕೆ ಎನ್ನುವುದನ್ನು ಬದಿಗಿರಿಸುವುದು ಬೇಡ. ಕೆಲವರಿಗೆ ನಂಬಿಕೆ ಎನ್ನುವುದು ಇರುತ್ತದೆ. ಅವರನ್ನು ಸಹಿಸಿ ಮತ್ತು ಬದುಕಲು ಬಿಡಿ. ಸರ್, ನನ್ನ ವಿನಂತಿ ಏನೆಂದರೆ.. ಈ ಮಸೂದೆ ಈಗ ಮತ್ತೊದು ಕಮಿಟಿಗೆ ಹೋಗಲಿದೆ. ಈ ಸಂಸ್ಥೆಗಳ ಅಸ್ತಿತ್ವಕ್ಕೆ ಧಕ್ಕೆ ಬರಬಾರದು ಮತ್ತು ಅವರ ಖರ್ಚಿಗೆ ಎಷ್ಟು ಹಣ ಬೇಕೋ ಅಷ್ಟನ್ನು ಸರಕಾರಕೊಡಲಿ! (ಈ ಚರ್ಚೆಗಳ ಬಗ್ಗೆ ಸಹಪಾಠಿಯೊಬ್ಬರು “ಇವತ್ತು ಪ್ರಜಾವಾಣಿಯಲ್ಲಿ ಒಂದು ಕಾರ್ಟೂನಿತ್ತು. ಅದರಲ್ಲಿ ವಾದದಲ್ಲಿ ನಿಮ್ಮ ತಂದೆಯನ್ನು ಒಂದು ಕಡೆ, ಬೇರೆಯವರನ್ನೆಲ್ಲ ಇನ್ನೊಂದು ಕಡೆ ತೋರಿಸಿದ್ದರು.” ಎಂದು ಹೇಳಿದ್ದು ನೆನಪಿನಲ್ಲಿದೆ)

ಚಿತ್ರ: 1954/55 ರಲ್ಲಿ ಮೈಸೂರು ವಿಧಾನ ಸಭೆಯಲ್ಲಿ ರಾಮಯ್ಯನವರು ಭಾಗವಹಿಸಿದ್ದ ಚರ್ಚೆಗಳ ಪಟ್ಟಿ( ಅಪೂರ್ಣ) ಮತ್ತು ಅವರ ಭಾಷಣದ ಕಡೆಯ ಭಾಗ