ಸುಳ್ಳು ಸುದ್ದಿಯನ್ನು ತಡೆಯುವ ಪ್ರಯತ್ನ ಹಿಂದೆಯೂ ನಡೆಯುತ್ತಿತ್ತು. ಇಂದೂ ನಡೆಯುತ್ತಿದೆ. ನಮ್ಮ ಉದ್ದೇಶಕ್ಕೆ ಪೂರಕವಾಗಿ ತಂತ್ರಜ್ಞಾನ, ಉಪಕರಣಗಳು ಎಷ್ಟೇ ಸಹಕಾರಿ ಆಗಿದ್ದರೂ ಅವುಗಳನ್ನು ಬಳಸುವ ಮನಸ್ಸುಗಳಲ್ಲಿ ಸುದುದ್ದೇಶವಿಲ್ಲದೇ ಇದ್ದಾಗ, ನಾವು ರೂಪಿಸಿಕೊಂಡ ಅತ್ಯಾಧುನಿಕ ವ್ಯವಸ್ಥೆಗಳು ಪ್ರಯೋಜನವಿಲ್ಲದ್ದಾಗಿಬಿಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಪತ್ತೆಮಾಡುವುದೇ ಒಂದು ಸಾಹಸ. ಮನುಷ್ಯರ ನಡುವಿನ ನಂಬಿಕೆಗಳ ಬುಡವನ್ನು ಅಲ್ಲಾಡಿಸುವ ಸುಳ್ಳುಸುದ್ದಿಗಳ ಪರಿಣಾಮಗಳ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರಹ.
ಎಲ್ಲೋ ಬಹುದೂರದಲ್ಲಿ ಇರುವ ಜನರ, ನಮ್ಮ ಬಂಧುಗಳ ಸುದ್ದಿಯನ್ನು ಕೇಳುವುದು ಇಂದು ಕಷ್ಟವೇನಲ್ಲ. ಆ ದೇಶದಲ್ಲಿ ಏನು ನಡೆಯುತ್ತಿದೆ ಎಂದು ಅರಿಯುವುದು ಕಷ್ಟವಲ್ಲ. ದೇವಾನುದೇವತೆಗಳು ಮನೋಬಲದಲ್ಲಿಯೇ ದೂರದಲ್ಲಿರುವವರನ್ನು ಪ್ರತ್ಯಕ್ಷೀಕರಿಸಿಕೊಂಡು ಮಾತನಾಡಬಲ್ಲವರಾಗಿದ್ದರು ಎಂಬುದನ್ನು ಕಥೆಗಳಲ್ಲಿ ಓದಿದ್ದೇವೆ. ಈಗ ನೋಡಿದರೆ, ಎಲ್ಲೋ ದೂರದಲ್ಲಿರುವವರನ್ನು ನೋಡಿ ಮಾತನಾಡಲು ಮೊಬೈಲ್ ಎಂಬ ಪುಟ್ಟ ಸಾಧನ ನೆರವಾಗುತ್ತಿದೆ ಎಂದು ವಿಸ್ಮಯವಾಗುತ್ತಿದೆ. ದೂರದ ನಡೆಯುವ ಘಟನೆಗಳನ್ನು ಕಣ್ಣಾರೆ ಕಂಡು ಪರಾಂಬರಿಸಲು ವಿವಿಧ ರೀತಿಯ ದೃಶ್ಯ ಮಾಧ್ಯಮಗಳು ವಿಕಾಸ ಹೊಂದಿವೆ. ತಂತ್ರಜ್ಞಾನಗಳು ಸಹಕರಿಸುತ್ತಿವೆ.
ಸ್ಥಳೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಘಟನೆಗಳಿಗೆ, ಯಾರೋ ಗಣ್ಯರೆಂದು ಗುರುತಿಸಿಕೊಂಡವರ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳು ಕ್ಷಣಾರ್ಧದಲ್ಲಿ ವ್ಯ`ಕ್ತವಾಗುತ್ತಿರುತ್ತವೆ. ಇದ್ದಕ್ಕಿದ್ದಂತೆಯೇ ಪ್ರೊಫೈಲುಗಳಲ್ಲಿ, ವಾಲ್ ಗಳಲ್ಲಿ ಕಾಣುವ ಈ ಪ್ರತಿಕ್ರಿಯೆಗಳು ಯಾವುದನ್ನು ಉದ್ದೇಶಿಸಿವೆ ಎಂದು ಅರ್ಥ ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ.
ಜಾಲತಾಣಗಳನ್ನೇ ಸುದ್ದಿಗಾಗಿ ಆಶ್ರಯಿಸುವ ಬೃಹತ್ತಾದ ಯುವಸಮೂಹವಿದೆ. ಸುದ್ದಿಯು ನೇರವಾಗಿ, ಮೂಲದಿಂದಲೇ ದೊರೆಯುತ್ತದೆ ಎಂಬ ನಂಬಿಕೆಯೂ ಅವರೆಲ್ಲರಿಗೂ ಇರುತ್ತದೆ. ಉದಾಹರಣೆಗೆ, ಅನುಷ್ಕಾ ಶರ್ಮಾ ಇವತ್ತು ಏನು ಟ್ವೀಟ್ ಮಾಡಿದರು, ಕಂಗನಾ ರಾಣಾವತ್ ಏನು ಹೇಳಿದರು, ಪಂಜಾಬ್ ನಲ್ಲಿ ಚುನಾವಣೆ ಫಲಿತಾಂಶವೇನು ಎಂಬುದನ್ನು ವ್ಯಕ್ತಿಗಳ ಅಥವಾ ಸಂಸ‍್ಥೆಗಳ ವಾಲ್ ನಿಂದಲೇ ಓದಿ, ಮೂಲ ಸುದ್ದಿಯನ್ನು ಅರಿತುಕೊಂಡಿದ್ದೇವೆ ಎಂಬ ಖುಷಿಯಿರುತ್ತದೆ. ಟ್ವೀಟ್ ಅಥವಾ ಇನ್ಸ್ಟ ಪೋಸ್ಟನ್ನು ಉಲ್ಲೇಖಿಸಿ ವ್ಯಕ್ತಪಡಿಸುವ ಪ್ರತಿಕ್ರಿಯೆಗಳು ಒಂದೆಡೆಯಾದರೆ, ಅವುಗಳನ್ನು ಉಲ್ಲೇಖಿಸದೆಯೇ ಮಾಡುವ ಪೋಸ್ಟ್ ಮತ್ತೊಂದೆಡೆ. ಆದರೆ ಇವೆಲ್ಲವೂ ವ್ಯಕ್ತಿಯ ಸ್ನೇಹಿತರ ಬಳಗವು ಎಷ್ಟು ವಿಸ್ತಾರವಾಗಿದೆ, ಅವರ ಆಸಕ್ತಿಯ ವ್ಯಾಪ್ತಿಯೆಷ್ಟು ಎಂಬುದನ್ನು ಅವಲಂಬಿಸಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಯಾಕೆಂದರೆ ಸ್ನೇಹಿತರ ಬಳಗವು ಸೀಮಿತವಾಗಿದ್ದಾಗ, ವೈಚಾರಿಕ ವಲಯವೂ ಸೀಮಿತವಾಗಿರುತ್ತದೆ. ಅಥವಾ ಅವು ನಮ್ಮ ಆಯ್ಕೆಗೆ ಸೀಮಿತವಾಗಿರುತ್ತವೆ. ಉದಾಹರಣೆಗೆ, ಕ್ರಿಕೆಟ್ ಬಗ್ಗೆ ಒಲವಿಲ್ಲದ ವ್ಯಕ್ತಿಗೆ ಆ ಕ್ಷೇತ್ರದ ಸ್ನೇಹಿತರ ವಲಯ ಕಡಿಮೆಯಿರಬಹುದು. ಸಂಗೀತದ ಒಲವಿರುವ ವ್ಯಕ್ತಿಗೆ ಆ ವಲಯದ ಸ್ನೇಹಿತರ ಬಳಗ ದೊಡ್ಡದಿರಬಹುದು. ಅವರ ಟೈಮ್ ಲೈನ್ ಗಳಲ್ಲಿ ಆಸಕ್ತಿಗನುಗುಣವಾಗಿ ಪೋಸ್ಟ್ ಗಳು ಬಂದು ಬಿದ್ದಿರುತ್ತವೆಯಷ್ಟೇ. ಸುದ್ದಿಮಾಧ್ಯಮಗಳು ಇಂದಿಗೂ ಅತ್ಯಗತ್ಯ ಎಂದು ಅನಿಸುವುದು ಇಂತಹ ಸಂದರ್ಭದಲ್ಲಿ. ಅವು ಸಮಗ್ರ ನೋಟವೊಂದನ್ನು ಕಟ್ಟಿಕೊಡಬಲ್ಲವು. ಆದರೆ ಅಲ್ಲಿಯೂ ಸುಳ್ಳು ಸುದ್ದಿಗಳೇ ಎಷ್ಟೋ ಸತ್ಯಗಳನನ್ನು ಮರೆಮಾಚುವುದಷ್ಟೇ ಅಲ್ಲದೆ, ಹೊಸ ಸಮಸ್ಯೆಗಳ ಸೃಷ್ಟಿಗೂ ಕಾರಣವಾಗಿರುತ್ತವೆ.
ತಾವು ಕೇಳಿದ ಸುದ್ದಿ ನಿಜವೇ,ಕಂಡ ಚಿತ್ರವು ನಿಜವೇ ಎಂದು ಮತ್ತೆ ಮತ್ತೆ ಖಾತ್ರಿಪಡಿಸಿಕೊಂಡು ಪ್ರತಿಕ್ರಿಯಿಸುವುದು ಇಂದು ಎಷ್ಟೊಂದು ಅನಿವಾರ್ಯವಾಗಿದೆ. ಆದರೆ ಬದುಕು ಎಷ್ಟೊಂದು ವೇಗದ ಹಳಿಗಳ ಮೇಲೆ ಸಾಗುತ್ತಿದೆಯೆಂದರೆ, ಈ ಖಾತ್ರಿಪಡಿಸಿಕೊಳ್ಳುವ ಉಸಾಬರಿಗಳಿಗೆ ಸಮಯವೇ ಇಲ್ಲವಾಗಿದೆ.
ಟೈಮ್ ಲೈನ್ ಗಳಲ್ಲಿ ಆಸಕ್ತಿಗನುಗುಣವಾಗಿ ಪೋಸ್ಟ್ ಗಳು ಬಂದು ಬಿದ್ದಿರುತ್ತವೆಯಷ್ಟೇ. ಸುದ್ದಿಮಾಧ್ಯಮಗಳು ಇಂದಿಗೂ ಅತ್ಯಗತ್ಯ ಎಂದು ಅನಿಸುವುದು ಇಂತಹ ಸಂದರ್ಭದಲ್ಲಿ. ಅವು ಸಮಗ್ರ ನೋಟವೊಂದನ್ನು ಕಟ್ಟಿಕೊಡಬಲ್ಲವು.
ಅಂದರೆ ನಮ್ಮ ಉದ್ದೇಶಕ್ಕೆ ಪೂರಕವಾಗಿ ತಂತ್ರಜ್ಞಾನ, ಉಪಕರಣಗಳು ಎಷ್ಟೇ ಸಹಕಾರಿ ಆಗಿದ್ದರೂ ಅವುಗಳನ್ನು ಬಳಸುವ ಮನಸ್ಸುಗಳಲ್ಲಿ ಸುದುದ್ದೇಶವಿಲ್ಲದೇ ಇದ್ದಾಗ, ನಾವು ರೂಪಿಸಿಕೊಂಡ ಅತ್ಯಾಧುನಿಕ ವ್ಯವಸ್ಥೆಗಳು ಪ್ರಯೋಜನವಿಲ್ಲದ್ದಾಗಿಬಿಡುತ್ತದೆ.
ಮೊನ್ನೆ ತಾನೇ ಹತ್ತನೇ ತರಗತಿಯ ಬಳಿಕ ಇನ್ನು ಮುಂದೆ ಬೋರ್ಡ್ ಪರೀಕ್ಷೆಗಳು ಇರುವುದಿಲ್ಲ ಎಂಬ ಸುದ್ದಿ, ಸಲ್ಮಾನ್ ಖಾನ್ ಯಾರನ್ನೋ ಮದುವೆಯಾದರೆಂದು, ಕೇಜ್ರಿವಾಲ್ ಏನೋ ಅಪಚಾರ ಮಾಡಿದರೆಂದು.. ಹೀಗೆ ಎಷ್ಟೊಂದು ಸುಳ್ಳಿಗಾಗಿ ನಾವೆಲ್ಲ ಓದುಗರು ಸಮಯವನ್ನು ವ್ಯರ್ಥ ಮಾಡಿದೆವು !
ಸುಳ್ಳು ಸುದ್ದಿಯು ಅನಾಹುತಗಳನ್ನು ಸೃಷ್ಟಿ ಮಾಡದೇ ಇದ್ದಾಗ ಅವುಗಳನ್ನುಮರೆತು ಅಥವಾ ಕ್ಷಮಿಸಿ ಮುಂದಕ್ಕೆ ಹೋಗುತ್ತಿರಬಹುದೇನೋ. ಬಿಕ್ಕಟ್ಟಿನ ಸಂದರ್ಭದಲ್ಲಿ, ಸಮುದಾಯಗಳೆರಡು ಕುದಿ ಮೌನದಲ್ಲಿ ದ್ದಾಗ ಇಂತಹ ಸುದ್ದಿಗಳು ಜೀವಗಳನ್ನು ಬಲಿಪಡೆಯುತ್ತವೆ. ಯುದ್ಧೋನ್ಮಾದದಲ್ಲಿರುವ ರಷ್ಯಾ, ಅರಿವಿದ್ದೂ ಸುಳ್ಳು ಸುದ್ದಿಹರಡುವವರಿಗೆ ಜೈಲು ಶಿಕ್ಷೆಯನ್ನು ವಿಧಿಸುವ ಮಸೂದೆಯನ್ನು ಇತ್ತೀಚೆಗಷ್ಟೇ ಮಂಡನೆ ಮಾಡಿದೆ. ವಿವಿಧ ದೇಶಗಳಲ್ಲಿ ಈ ಪ್ರಯತ್ನಗಳು ವಿವಿಧ ಹಂತಗಳಲ್ಲಿ ನಡೆಯುತ್ತಿರುತ್ತದೆ. ಈ ಕುರಿತು ಯುನೆಸ್ಕೋ ಕೂಡ ಕೈಪಿಡಿಯೊಂದನ್ನು ಹೊರತಂದಿದೆ.
ಸುಳ್ಳು ಸುದ್ದಿಗಳು ಬರುತ್ತವೆ, ಮತ್ತು ಅವುಗಳ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕು ಎಂಬುದು ಒಂದು ಆಯಾಮವಾದರೆ, ‘ಸುಳ್ಳು’ ಎಂದು ಗೊತ್ತಿದ್ದೂ ಅಂತಹ ಸುದ್ದಿಗಳನ್ನು ಹರಡುವವರ ಉದ್ದೇಶವೇನಿರುತ್ತವೆ ಎಂದು ಅರಿವುದು ಇನ್ನೊಂದು ಆಯಾಮ. ಎಷ್ಟೋ ಸಂದರ್ಭಗಳಲ್ಲಿ ಅವು ಸುಮ್ಮನೇ ಜನರ ಹುಬ್ಬೇರಿಸುವಂತೆ ಮಾಡಿ, ಆಕರ್ಷಿಸುವ ವಿಧಾನಗಳಾಗಿರಬಹುದು. ಆದರೆ ಎಲ್ಲ ಸಂದರ್ಭಗಳಲ್ಲಿಯೂ ಉದ್ದೇಶ ಅಷ್ಟೇ ಅಗಿರುವುದಿಲ್ಲ. ಜನರು ಅಥವಾ ಓದುಗರು, ಹೀಗೂ ಯೋಚನೆ ಮಾಡಲಿ ಎಂಬ ಉದ್ದೇಶದಿಂದ ಅಥವಾ ಜನರು ಹೀಗೆಯೇ ಯೋಚನೆ ಮಾಡಲಿ ಎಂಬ ಉದ್ದೇಶದಿಂದ ಸುಳ್ಳುಸುದ್ದಿಗಳನ್ನು ಸೃಷ್ಟಿ ಮಾಡಲಾಗುತ್ತದೆ. ಹಾಗಾಗಿ ಇದನ್ನು ಉದ್ದೇಶಪೂರ್ವಕವಾಗಿ, ಜನರನ್ನು ಅಥವಾ ಸಮುದಾಯವನ್ನು ತಪ್ಪುದಾರಿಗೆ ಎಳೆಯಲು ಸೃಷ್ಟಿಸಿದ ಸುಳ್ಳು ಸುದ್ದಿ (Disinformation), ಅರಿವಿಲ್ಲದೇ ನೀಡಿದ ತಪ್ಪು ಮಾಹಿಡಿ ಅಥವಾ ಅರೆಮಾಹಿತಿ ( misinformation) ಮತ್ತು ಸಮಾಜದ ಸ್ವಾಸ್ಥ್ಯ ಕದಡಲೆಂದೇ ಸೃಷ್ಟಿಸಿದ ಕೆಟ್ಟ ಮಾಹಿತಿ (malinformation )ಎಂದು ವಿಭಾಗಿಸಿಕೊಂಡು, ಅನೇಕ ಮಾಧ್ಯಮ ಸಂಸ್ಥೆಗಳು ಇವುಗಳ ಪರಾಮರ್ಶೆಗೆ ಪ್ರತ್ಯೇಕ ವಿಭಾಗವನ್ನು ನಿರ್ವಹಿಸುತ್ತಿವೆ.
ಈ ರೀತಿಯ ಸುದ್ದಿಗಳು ಹೊಸದಾಗಿ ಸೃಷ್ಟಿಯಾದವುಗಳಲ್ಲ. ಹಿಂದೆಯೂ ಇಂತಹ ತಪ್ಪು ಒಪ್ಪುಗಳಿದ್ದರೂ, ಅವುಗಳು ಇಷ್ಟೊಂದು ವೇಗವಾಗಿ ಹರಡುತ್ತಿರಲಿಲ್ಲ. ಹಾಗಾಗಿ ಸಂಭವನೀಯ ಅಪಾಯಗಳನ್ನು ನಿಯಂತ್ರಿಸುವುದು ಸಾಧ್ಯವಿತ್ತು. ಆದರೆ ಇಂದು ಮೆಸೇಜು, ವಿಡಿಯೊ, ಸುಳ್ಳುವಿಡಿಯೊ, ಆನ್ಲೈನ್ ಲಿಂಕ್ ಗಳು ಮುಂತಾಗಿ ಅನೇಕ ರೀತಿಯ ಸೌಕರ್ಯಗಳಿವೆ. ಈ ಮೂಲಕ ಸುಳ್ಳುಸುದ್ದಿಗಳು ಅಂಕೆ ಮೀರಿದ ಭಾರಿ ಅನಾಹುತಗಳನ್ನು ಸೃಷ್ಟಿಸಬಲ್ಲವು. ಅದರಲ್ಲಿಯೂ ತಮ್ಮದೇ ವಿಚಾರಗಳನ್ನು ಎಲ್ಲರೂ ಕೇಳಬೇಕು (Propaganda) ಎಂಬ ಆಶಯ, ಜನರನ್ನೆಲ್ಲ ತಮ್ಮದೇ ವಿಚಾರಗಳಡಿಯಲ್ಲಿ ನಿಯಂತ್ರಣದಲ್ಲಿಡಬೇಕು ಎಂಬ ಹಪಾಹಪಿಯು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದವು. ಜಗತ್ತಿನಲ್ಲಿಯೂ ಇಂತಹ ವಿದ್ಯಮಾನಗಳಿಗೆ, ಅಫ್ಘಾನಿಸ್ಥಾನ, ಉತ್ತರ ಕೊರಿಯ, ಚೀನಾ ಮುಂತಾಗಿ ಅನೇಕ ಉದಾಹರಣೆಯಾಗಳು ಕಾಣಸಿಗುತ್ತಿವೆ. ಸುಳ್ಳಿ ನ ಆಧಾರದಲ್ಲಿ ಸಂಘಟಿತರಾಗುವ ಜನರು, ಕೊನೆಗೆ ಸುಳ್ಳಿಗಾಗಿಯೇ ಹೋರಾಟಕ್ಕಿಳಿಯುತ್ತಾರೆ.
20 ಮತ್ತು 21ನೇ ಶತಮಾನದಲ್ಲಿ ‘ಮಾಹಿತಿ’ಯೇ ಅಭಿವೃದ್ಧಿಯ ಮುಖ್ಯ ವಾಹಕವಾಗಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮಾಧ್ಯಮ ಸಂಸ್ಥೆಗಳು, ‘ಮಾಹಿತಿ’ಯು ಮುಕ್ತವಾಗಿ ಎಲ್ಲ ವರ್ಗದ ಜನರಿಗೆ ತಲುಪುವಂತೆ ಮಾಡುವ ಆ ಮೂಲಕ ಜ್ಞಾನದ ಬಾಗಿಲನ್ನು ತೆರೆಯುವ ಹೊಣೆ ಹೊತ್ತು ಕೆಲಸ ಮಾಡುತ್ತ ಒಟ್ಟು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕಾಗಿದೆ. ಆದರೆ ಯಾವಾಗ ಡಿಜಿಟಲ್ ಲೋಕವು ಮಾಹಿತಿ ಕ್ಷೇತ್ರದಲ್ಲಿ ಅನಪೇಕ್ಷಿತವಾದ ಅಡ್ಡ ಪರಿಣಾಮಗಳನ್ನು ಬೀರಲು ಶುರು ಮಾಡಿತೋ, ಆವಾಗ, ಮಾಧ್ಯಮಲೋಕದ ವಿಶ್ವಾಸಾರ್ಹತೆಗೆ ಧಕ್ಕೆಯುಂಟಾಯಿತು.
ಹಾಗಾಗಿ ಇಂತಹ ಸುದ್ದಿಗಳನ್ನು ನಿರ್ಬಂಧಿಸುವ ಉದ್ದೇಶದಿಂದ ಡಿಜಿಟಲ್ ಮಾಧ್ಯಮಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತವೆ. ಮನುಷ್ಯರೇ ಸತ್ಯಾಸತ್ಯತೆಯನ್ನು ಪತ್ತೆ ಮಾಡಲು ಪ್ರಯತ್ನಿಸುವುದು ಒಂದು ವಿಧಾನ. ಆದರೆ ಅಲ್ಲಿಯೂ, ಈ ಸತ್ಯವನ್ನು ಪತ್ತೆ ಮಾಡಲು ಹೊರಟವರು ಎಷ್ಟರ ಮಟ್ಟಿಗೆ ವಸ್ತುನಿಷ್ಟರಾಗಿರುತ್ತಾರೆ ಎಂಬ ಸಂಶಯ ಬರುವುದುಂಟು. ಹಾಗಾಗಿ ತಂತ್ರಜ್ಞಾನವನ್ನೇ ಬಳಸುವುದು ಹೆಚ್ಚಿನವರು ಬಯಸುವ ಮತ್ತೊಂದು ವಿಧಾನ. ಯಂತ್ರಗಳಷ್ಟೇ ನಿಷ್ಪಕ್ಷಪಾತವಾಗಿ ಕೆಲಸ ಮಾಡಬಲ್ಲವು ಎಂಬ ನಿರ್ಣಯಕ್ಕೇ ಹೆಚ್ಚು ಮತಗಳು ಬೀಳುತ್ತಿರುವ ಕಾಲವಿದು.
ಸಾಮಾನ್ಯವಾಗಿ ವಿವರವಾಗಿ ಪ್ರಕಟವಾಗುವ ಸುದ್ದಿಯ ಮೂಲವನ್ನು ಹುಡುಕಿ, ಸತ್ಯವನ್ನು ಬಗೆಯುವುದು ಸಾಧ್ಯವಾಗುತ್ತದೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ಬ್ರೇಕಿಂಗ್ ನ್ಯೂಸ್ ನ ಹಿನ್ನೆಲೆಯನ್ನು ತಕ್ಷಣವೇ ಪತ್ತೆ ಮಾಡಿ, ಸತ್ಯದ ಮೇಲೆ ಬೆಳಕು ಚೆಲ್ಲುವುದು ಸಾಧ್ಯವಾಗುವುದಿಲ್ಲ. ಸುದ್ದಿಯು ಹುಟ್ಟಿ, ಒಂದಿಷ್ಟು ಬೆಳೆದಾಗಲೇ, ಅದರ ಪೂರ್ವಜಾಡು ಹಿಡಿದು ಸಾಗುವುದಕ್ಕೆ ದಾರಿ ದೊರೆಯುತ್ತದೆ.
ಸುದ್ದಿಗಳಿಗೆ ವೇಗವಾಹಕಗಳಾಗಿರುವ ಸಾಮಾಜಿಕ ಜಾಲತಾಣಗಳದ್ದೂ ಮತ್ತೊಂದು ಕತೆ. ಅವು ತಮ್ಮ ಗೋಡೆಗಳಲ್ಲಿ ತಪ್ಪು ಮಾಹಿತಿ, ಕೆಟ್ಟ ಮಾಹಿತಿ ಹರಡದಂತೆ ಏನಾದರೂ ಎಚ್ಚರ ವಹಿಸಬೇಕಲ್ಲವೇ? ಅವು ‘ನಿಷ್ಪಕ್ಷಪಾತ’ ಎಂಬ ಸೋಗಿನಲ್ಲಿ ಕೆಟ್ಟ ಮಾಹಿತಿಯ ವೇಗವಾಹಕಗಳಾಗಿ ವರ್ತಿಸಬಹುದೇ ಎಂಬ ಪ್ರಶ್ನೆ ಏಳುತ್ತದೆ. ಫೇಸ್ಬುಕ್, ವಾಟ್ಸ್ ಆಪ್, ಇನ್ಸ್ಟಗ್ರಾಂ ಮುಂತಾದವು ಇಂತಹ ಅನೇಕ ಆರೋಪಗಳಿಗೆ ಪ್ರತಿಕ್ರಿಯಿಸುತ್ತ ಬಂದಿವೆ.
ಆದರೂ, ‘ನೂರಾರು ಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ , ಸುಳ್ಳು ಸುದ್ದಿಯನ್ನು ಪತ್ತೆ ಮಾಡಿ ನಿಗ್ರಹಿಸಲು ಅಂತಹ ಯಾವುದೇ ಪ್ರಯತ್ನವನ್ನು ಮಾಡುತ್ತಿಲ್ಲ’ ಎಂದು ಘಂಟಾಘೋಷವಾಗಿ ಹೇಳಿದವರು ಫ್ರಾನ್ಸಿಸ್ ಹೌಗನ್ ಎಂಬಾಕೆ. ಫೇಸ್ ಬುಕ್ಕಾಗಲೀ, ಅದರ ವ್ಯಾಪ್ತಿಯ ಇತರ ಸಾಮಾಜಿಕ ಜಾಲತಾಣಗಳಾಗಲೀ ಸುಳ್ಳು ಸುದ್ದಿ, ದ್ವೇಷದ ಸುದ್ದಿ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಯಾವುದೆ ಪ್ರಯತ್ನ ಮಾಡುತ್ತಿಲ್ಲ ಎಂದು ಹೌಗನ್ ಆರೋಪಿಸಿ, ಅದಕ್ಕೆ ಪೂರಕ ದಾಖಲೆಗಳನ್ನು ನೀಡಿದ್ದರು. ಅದೇ ದಾಖಲೆ ಪತ್ರಗಳನ್ನು ಇರಿಸಿಕೊಂಡು, ‘ವಾಲ್ ಸ್ಟ್ರೀಟ್ ಜರ್ನಲ್’ ಸರಣಿ ವರದಿಗಳನ್ನು ಪ್ರಕಟಿಸಿತ್ತು ಕೂಡ. ಡೇಟಾ ಎಂಜಿನಿಯರ್ ಆಗಿರುವ ಹೌಗನ್ ಅವರು , ಸ್ವಲ್ಪಕಾಲ ಫೇಸ್ಬುಕ್ ನಲ್ಲಿಯೇ ಉದ್ಯೋಗಿಯಾಗಿದ್ದರು. ಬಳಿಕ ರಾಜೀನಾಮೆ ನೀಡಿದವರು. ಫೇಸ್ಬುಕ್ ವೇದಿಕೆಗಳಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯತಂದೊಡ್ಡುವ ಮಾಹಿತಿ ಗಳು ಪ್ರಕಟವಾಗುತ್ತಿದ್ದರೂ, ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದನ್ನು ಕಂಡು ಅವರು ಸಿಡಿದೆದ್ದವರು.
ತನ್ನ ವೇದಿಕೆಗೆ ಹೆಚ್ಚಿನ ಗ್ರಾಹಕರು ಬರಬೇಕು ಎಂಬುದಷ್ಟೇ ಸಾಮಾಜಿಕ ಜಾಲತಾಣಗಳ ಸೀಮಿತ ಉದ್ದೇಶವಾಗಿದ್ದರೆ, ಸುಳ್ಳು ಸುದ್ದಿಗಳಿಂದ ಅವುಗಳಿಗೆ ಹೆಚ್ಚಿನ ಲಾಭವಾಗುತ್ತದೆ. ಯಾಕೆಂದರೆ ಸುಳ್ಳು ಮಾಹಿತಿ ಮತ್ತು ದುರ್-ಮಾಹಿತಿಗಳ ಬಗ್ಗೆ ಜನರಿಗೆ ಕುತೂಹಲ ಜಾಸ್ತಿಯಿರುತ್ತದೆ. ಅದು ಮನಸ್ಸನ್ನು ಪ್ರಚೋದಿಸುವುದರಿಂದ, ಮತ್ತಷ್ಟು ಓದುವ ಕುತೂಹಲವನ್ನು ಕೆರಳಿಸುತ್ತದೆ .
ಆದರೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಸಾಮಾಜಿಕ ಜಾಲತಾಣಗಳ ಹೊಣೆಗಾರಿಕೆಯಾಗಿದ್ದಾಗ, ಸುಳ್ಳನ್ನು ನಿರ್ಬಂಧಿಸುವ ಮತ್ತು ತನ್ನದೇ ಬಳಕೆದಾರರು ವಾಸಿಸುವ ಸಮಾಜದಲ್ಲಿ ಬಿರುಕು ಮೂಡದಂತೆ ಎಚ್ಚರವಹಿಸುವ ಹೊಣೆ ಅವುಗಳದ್ದಾಗಿರುತ್ತದೆ ಅಲ್ವೇ.
ಸ್ಥಳೀಯವಾಗಿ ಯೋಚನೆ ಮಾಡುವುದಾದರೆ, ನೆರೆಮನೆಯವರನ್ನು ಸಂಶಯದಿಂದ ನೋಡುತ್ತ ಜೀವನ ನಡೆಸುವ ಸಂದರ್ಭ ಸೃಷ್ಟಿಯಾಗಿದೆ. ಜಾಗತಿಕವಾಗಿ ಯಾವ ದೇಶದ ಕುರಿತೂ ಮತ್ತೊಂದು ದೇಶಕ್ಕೆ ಒಂದಿಂಚೂ ನಂಬಿಕೆ ಉಳಿದಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮೊಳಗೆ ಉಳಿದಿರುವ ಮಾನವೀಯತೆಯನ್ನು ನಂಬುವುದಾದರೆ, ಸುಳ್ಳು ಸುದ್ದಿಗಳು ಹೆಚ್ಚು ಬೆಳೆಯಲಾರವೇನೋ.ಸಾದತ್ ಹಸನ್ ಮಂಟೋ ಬರೆದ ಒಂದು ಕತೆ ಈ ಸಂದರ್ಭದಲ್ಲಿ ನೆನಪಾಗುತ್ತದೆ.
‘ನೋಡು, ಅವನಿನ್ನೂ ಸತ್ತಿಲ್ಲ ಉಸಿರಾಡುತ್ತಿದ್ದಾನೆ..’
‘ಇರಲಿ ಬಿಡು ಗೆಳೆಯಾ, ನನಗೂ ವಿಶ್ರಾಂತಿ ಬೇಕಾಗಿದೆ’
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.