ಕನ್ನಡ ಪತ್ರಿಕೋದ್ಯಮದಲ್ಲಿ ಸಾಹಿತ್ಯಪುರವಣಿಗಳು ಕ್ಷೀಣವಾಗಿವೆ, ಅಥವಾ ಕೆಲವು ಮಾಧ್ಯಮ ಸಂಸ್ಥೆಗಳು ಪುರವಣಿಯನ್ನೇ ನಿಲ್ಲಿಸಿಬಿಟ್ಟಿವೆ. ಎರಡು ವರ್ಷಗಳ ಹಿಂದೆ ಕೋವಿಡ್ ಸೋಂಕು ವ್ಯಾಪಿಸದಂತೆ ಹೇರಿದ್ದ ಲಾಕ್ ಡೌನ್ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಗಳು ನಷ್ಟವನ್ನು ಭರಿಸಿಕೊಳ್ಳಲು ಅನೇಕ ಪುಟಗಳನ್ನು ಕಡಿತ ಮಾಡಿದವು. ಅವುಗಳೆಲ್ಲ ಮತ್ತೆ ಆರಂಭವಾಗುತ್ತಿದ್ದರೂ, ಸಾಹಿತ್ಯ ಪುಟಗಳ ವೈಭವ ಮರಳಿ ಬಂದಿಲ್ಲ.
ಜನರಿಗೆ ಸಾಹಿತ್ಯದ ಅಗತ್ಯವಿಲ್ಲವೇ, ಪತ್ರಿಕೆಗಳಿಗೆ ಸಾಹಿತ್ಯವು ಭಾರವೇ ಎಂಬ ಬಗ್ಗೆ ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ಇಲ್ಲಿದೆ.
ಕೋವಿಡ್ ಸೋಂಕು ವ್ಯಾಪಿಸಿದ ಸಂದರ್ಭದಲ್ಲಿ ಎಲ್ಲ ಉದ್ಯಮಗಳೂ ನಷ್ಟದ ಭಯದಿಂದ ಕಂಪಿಸಿದಂತೆ ಪತ್ರಿಕೋದ್ಯಮ ಕೂಡ ನಷ್ಟಕ್ಕೆ ಕೊರಳೊಡ್ಡಿತು. ಅದೇ ಸಂದರ್ಭದಲ್ಲಿ ಕಾಗದವು ದುಬಾರಿಯಾದುದರಿಂದ ಗಾಯದ ಮೇಲೆ ಬರೆ ಎಂಬಂತೆ ಪತ್ರಿಕೆಗಳು ಪುಟಗಳನ್ನು ಕಡಿತ ಮಾಡಿದವು. ಈ ನಡೆಗೆ ಇಂಬು ಕೊಡುವಂತೆ ಆನ್ ಲೈನ್ ಚಟುವಟಿಕೆಗಳು ಬಿರುಸುಗೊಂಡಾಗ, ಪತ್ರಿಕೆಗಳಲ್ಲಿ ಪುಟಗಳಷ್ಟೇ ಅಲ್ಲ ಇಡೀ ಪುರವಣಿಗಳೇ ಕಡಿತವಾದವು. ಕನ್ನಡ ಸಾಹಿತ್ಯಲೋಕವನ್ನು ಪೋಷಿಸುವ ಅಮ್ಮನ ಮಡಿಲಿನಂತಿದ್ದ ಸಾಹಿತ್ಯ ಪುರವಣಿಗಳು ಸರಸರನೆ ಮರೆಯಾಗುತ್ತಾ, ಪತ್ರಿಕೆಗಳು ಹಗುರವಾಗತೊಡಗಿದವು.
ಇದೀಗ ಕೋವಿಡ್‌ನ ಬೆದರಿಕೆ ಕಡಿಮೆಯಾಗಿದ್ದು, ಪರಿಸ್ಥಿತಿಯು ಮರಳಿ ಹದಕ್ಕೆ ಬರುತ್ತಿರುವಾಗ ಆ ಪುಟಗಳು ಮರಳಿ ಬರುತ್ತವೆಯೇ ಎಂದು ಕಾಯುತ್ತಿರುವವರ ನಿರೀಕ್ಷೆ ಸುಳ್ಳಾಗಿದೆ. ಕಡಿತಗೊಂಡ ಇತರ ಅನೇಕ ಪುಟಗಳು, ಜೀವನಶೈಲಿಯನ್ನು ವಿವರಿಸುವ ಪುರವಣಿಗಳು, ಜಾಹೀರಾತಿನ ಪುರವಣಿಗಳು ಮತ್ತೆ ಕಾಣಿಸಿಕೊಂಡರೂ, ಸಾಹಿತ್ಯ, ಸಂಸ್ಕೃತಿ, ಜಿಜ್ಞಾಸೆಗಳನ್ನು ಪೋಷಿಸುತ್ತಿದ್ದ ಸಾಹಿತ್ಯ ಪುರವಣಿ ಮಾತ್ರ ಮರಳಿ ಬರುವಂತೆ ಕಾಣುತ್ತಿಲ್ಲ. ಹಾಗಿದ್ದರೆ ನಿಜಕ್ಕೂ ಸಾಹಿತ್ಯ ಪುರವಣಿಗಳು ಪತ್ರಿಕೆಗಳಿಗೆ ಬೇಡವಾಗಿದ್ದವೇ? ಅಥವಾ ಅವುಗಳು ಓದುಗರಿಗೆ ಬೇಡವಾದವೇ?
ಈ ಪ್ರಶ್ನೆಯು ಇತ್ತೀಚೆಗಿನ ಐದಾರು ವರ್ಷಗಳಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಚರ್ಚೆಯಾಗುತ್ತಲೇ ಇದೆ. ಪತ್ರಿಕೆಗಳಲ್ಲಿರುವ ಹೂರಣಕ್ಕೆ ಸಂಬಂಧಿಸಿ ಸ್ಪರ್ಧೆಗಳು ನಡೆಯುವುದಕ್ಕೆ ಬದಲಾಗಿ, ಯಾವಾಗ ಅವುಗಳ ಪ್ರಸರಣ ಸಂಖ್ಯೆಗೆ ಸಂಬಂಧಿಸಿದಂತೆ ಸ್ಪರ್ಧೆಯು ತೀವ್ರಗೊಂಡಿತೋ, ಆವಾಗ ಪುರವಣಿಗಳು ಪತ್ರಿಕೋದ್ಯಮಕ್ಕೆ ಎಷ್ಟರ ಮಟ್ಟಗೆ ಲಾಭ ತಂದುಕೊಡುತ್ತವೆ ಎಂಬ ದೃಷ್ಟಿಕೋನದಿಂದ ಚರ್ಚೆಗಳು ಶುರುವಾದವು. ಅಂದರೆ ಚರ್ಚೆಯಲ್ಲಿ, ಪ್ರತೀ ಪುಟಕ್ಕೆ ಸಂಬಂಧಿಸಿದ ಹಣದ ಲೆಕ್ಕಾಚಾರವೇ ಪ್ರಧಾನ ವೇದಿಕೆಯನ್ನೇರಿತು. ಈ ರೀತಿಯ ಲೆಕ್ಕಾಚಾರಗಳು ಕನ್ನಡ ಪತ್ರಿಕೋದ್ಯಮಕ್ಕಷ್ಟೇ ಅಲ್ಲ, ಇತರ ಭಾಷಾ ಪತ್ರಿಕೆಗಳಲ್ಲಿಯೂ, ಅಷ್ಟೇ ಏಕೆ, ಇಂಗ್ಲಿಷ್ ಪತ್ರಿಕೆಗಳಲ್ಲಿಯೂ ಕಾಣಿಸುತ್ತದೆ.
‘ಮಲಯಾಳಂನಲ್ಲಿ ಸಾಹಿತ್ಯದ ಪತ್ರಿಕೆ ಕಲಾಕೌಮುದಿ ಇತ್ತೀಚೆಗಷ್ಟೇ ಮುಚ್ಚಿಹೋಗಿರುವುದು ಬೇಸರದ ವಿಷಯ. ಆದರೆ ಪ್ರಮುಖ ಮಾಧ್ಯಮ ಸಂಸ್ಥೆಗಳು ನಡೆಸುವ ದೊಡ್ಡ ದೊಡ್ಡಪತ್ರಿಕೆಗಳು ತಮ್ಮ ಸಾಹಿತ್ಯದ ಪುಟಗಳನ್ನು ಕಡಿತ ಮಾಡುತ್ತಿವೆ, ಸಾಹಿತ್ಯದ ಪುಟಗಳಿಗೆ ಜಾಹೀರಾತು ಬರುವುದಿಲ್ಲ ಎಂಬುದೊಂದೇ ಎಲ್ಲ ಪತ್ರಿಕೆಗಳು ಕೊಡುವ ಕಾರಣವಾಗಿದೆ’ ಎನ್ನುತ್ತಾರೆ, ಮಲಯಾಳಂ ಮನೋರಮಾ ಪತ್ರಿಕೆಯ ಸಹಾಯಕ ಸಂಪಾದಕರಾದ ವರ್ಗೀಸ್ ಸಿ. ಥಾಮಸ್. ಅವರ ಪ್ರಕಾರ, ಕೇರಳದಲ್ಲಿ ಸಣ್ಣ ಸಾಹಿತ್ಯಪತ್ರಿಕೆಗಳು ಚೆನ್ನಾಗಿ ನಡೆಯುತ್ತಿವೆ.
ಸಾಹಿತ್ಯ ಪುರವಣಿಯನ್ನು ಎಲ್ಲರೂ ಓದುವುದಿಲ್ಲ, ಅಥವಾ ಹೆಚ್ಚಿನವರು ಓದುವುದಿಲ್ಲ ಎಂಬುದು ನಿಜವಾಗಿರಬಹುದು. ಆದರೆ ಓದುವವರು ಯಾರು, ಅವರು ಸಾಮಾಜಿಕವಾಗಿ ವಹಿಸುವ ಪಾತ್ರವೇನು ಎಂಬುದು ಮುಖ್ಯವಾಗುತ್ತದೆ. ಅಥವಾ ಈ ವಿಷಯವನ್ನು ಹೀಗೆ ಹೇಳಬಹುದು: ಸಾಹಿತ್ಯ ಪುರವಣಿಗಳು ಮುಂದಿನ ತಲೆಮಾರನ್ನು ರೂಪಿಸುವುದಕ್ಕೆ ಬೇಕಾದ ಹೂರಣಗಳನ್ನು ಒಳಗೊಂಡಿರುತ್ತವೆಯೇ ವಿನಃ, ಮುಂದಿನ ಎಡಿಷನ್ ಗೆ ಜಾಹೀರಾತು ಗಿಟ್ಟಿಸುವ ರೀತಿಯಲ್ಲಿ ಇರುವುದೂ ಸಲ್ಲದು.
ವಿಜಯ ಕರ್ನಾಟಕ ಮತ್ತು ವಿಶ್ವವಾಣಿ ಪತ್ರಿಕೆಯಲ್ಲಿ ಸಾಹಿತ್ಯ ಪುರವಣಿಗಳನ್ನುನಿರ್ವಹಿಸಿದ ಹಿರಿಯ ಪತ್ರಕರ್ತೆ ವಿ.ಎನ್. ವೆಂಕಟಲಕ್ಷ್ಮಿ ಅವರ ಪ್ರಕಾರ, ಪತ್ರಿಕಾ ರಂಗದೊಳಗೆ ಪ್ರವೇಶಿಸಿದ ಸಾಹಿತ್ಯ ನಿರ್ಮೋಹಿಗಳ ಆಖಾಡ ಪುರವಣಿಗಳ ಗುಣಮಟ್ಟಕ್ಕೆ ಅವಸಾನ ಗೀತೆ ಹಾಡಲು ಯತ್ನಿಸಿದ್ದು ನಿಜ.
‘ಕೋವಿಡ್ ಕಾರಣಕ್ಕಾಗಿ ಸಾಹಿತ್ಯ ಪುರವಣಿಗಳನ್ನು ನಿಲ್ಲಿಸಬೇಕಾಯಿತು’ ಎಂಬ ಸಬೂಬು ಕೇವಲ ಸಬೂಬು ಮಾತ್ರ ಆಗಿತ್ತೇ ಎಂದು ಯೋಚಿಸಲು ಹಲವು ಪುರಾವೆಗಳಿವೆ. ಕೋವಿಡ್ ಮುಗಿಯಿತೇ ಅಥವಾ ಇಲ್ಲವೇ ಎಂಬುದು ಇನ್ನೂ ಅಸ್ಪಷ್ಟ ವಲಯದಲ್ಲಿಯೇ ಇದ್ದರೂ.
ಸುಮಾರು 25 ಮಂದಿ ನುರಿತ ಸಿಬ್ಬಂದಿ ಇದ್ದ ಸಾಹಿತ್ಯ ಪುರವಣಿಯನ್ನು ಕೋವಿಡ್ ನ ಮೊದಲ ಅಲೆಯಲ್ಲಿಯೇ ನಿಲ್ಲಿಸಿದ, ಆರ್ಥಿಕವಾಗಿ ಸಶಕ್ತವಾಗಿಯೇ ಇದ್ದ ಪ್ರಮುಖ ಆಂಗ್ಲ ಪತ್ರಿಕೆಯೊಂದರ ಉದಾಹರಣೆ ನೆನಪಿಗೆ ಬರುತ್ತದೆ. ಬಹಳ ಕಾಲ ಪೇರಿಸಿಟ್ಟ ಭಾರವನ್ನು ಹಡಗು ಮುಳುಗುವ ವೇಳೆ ನೀರಿಗೆ ಎಸೆದು ಕೈ ತೊಳೆದುಕೊಂಡಂತೆ ಅದರ ವೈಖರಿ ಇತ್ತು. ಇನ್ನು ಮರು ಆರಂಭಿಸುವ ಮಾತೆಲ್ಲಿ?!
ಕೆಲ ಪಲ್ಲಟಗಳು ‘ಬದುಕನ್ನು ಈ ಹಿಂದೆ ಇಲ್ಲದಂತೆ ಸಂಪೂರ್ಣ ಬದಲಾಯಿಸುತ್ತವೆ’ ಎಂಬ ಉಕ್ತಿ ಕೋವಿಡೋತ್ತರ ಕಾಲಕ್ಕೂ ಅನ್ವಯಿಸುತ್ತದೆ. ಅವುಗಳಲ್ಲಿ ಸಾಹಿತ್ಯ ವಿಷಯಗಳು ಪ್ರಮುಖ ಮತ್ತು ಸಾಕಷ್ಟು ವ್ಯಾಪಕ ಪ್ರಸಾರದ ಮಾಧ್ಯಮಗಳಿಂದ ಕಣ್ಮರೆಯಾದದ್ದು ಸಹ ಒಂದು ಎಂದು ಅಂದುಕೊಳ್ಳಲಡ್ಡಿಯಿಲ್ಲ.
ಆದರೆ ಅವು ಸೀಮಿತ ಪ್ರಸಾರದ ವೇದಿಕೆ, ಮಾಧ್ಯಮಗಳಲ್ಲಿ ಗಟ್ಟಿಯಾಗಿ ಉಳಿದು ಇನ್ನಷ್ಟು ಗುಣಾತ್ಮಕ ಬೆಳವಣಿಗೆ ಹೊಂದಿರುವುದೂ ನಿಜ. ಹೆಚ್ಚು ತಿಳಿವಳಿಕೆ, ಓದು, ಚಿಕಿತ್ಸಕ ಒಳನೋಟಗಳನ್ನು ಹೊಂದಿರುವ ಅಜ್ಞಾತ ಓದುಗರು ಅವುಗಳಲ್ಲಿ ಬರೆದು, ವಿಮರ್ಶಿಸಿ, ತಮ್ಮ ಸಾಹಿತ್ಯ ಪ್ರೀತಿಯನ್ನು ಜೀವಂತವಾಗಿರಿಸಿಕೊಂಡಿದ್ದಷ್ಟೇ ಅಲ್ಲ, ವೃತ್ತಿನಿರತರನ್ನು ತೆಪ್ಪಗೆ ಮಾಡಿದ ನಷ್ಟ ತುಂಬಿಕೊಟ್ಟರು, ಉಕ್ರೇನ್ ಪ್ರಜೆಗಳು ತಾವೇ ಬಂದೂಕು ಹಿಡಿದಂತೆ. ಆದರೂ ಅಧಿಕೃತ, ವ್ಯಾಪಕ ಪ್ರಸಾರದ ಮಾಧ್ಯಮಗಳಲ್ಲಿ ಸಾಹಿತ್ಯ ಮತ್ತೆ ಕಾಣಿಸಿಕೊಂಡು, ಅರಳಬೇಕಾದ ಅಗತ್ಯ ಮಾತ್ರ ಇದ್ದೇ ಇದೆ. ಅದನ್ನು ಕೇಜ್ರಿವಾಲ್ ರಂತಹ ಸಾಮಾಜಿಕ ಕಾರ್ಯಕರ್ತರು ಅಧಿಕಾರ ಹಿಡಿದು ತಂದ ಬದಲಾವಣೆಗಳಿಗೆ ಪರಿಮಾಣಾ ತ್ಮಕವಾಗಿ ಖಂಡಿತ ಹೋಲಿಸಬಹುದು ಎಂದು ಪ್ರಸ್ತುತ ಸ್ಥಿತಿಯನ್ನು ವೆಂಕಟಲಕ್ಷ್ಮಿ ವಿವರಿಸುತ್ತಾರೆ.
ಸಾಹಿತ್ಯ ಪುರವಣಿಗಳು ನಿಲ್ಲುವುದಕ್ಕೆ ಕೋವಿಡ್ ಸಂದರ್ಭದ ಸಂಕಷ್ಟಗಳೇನೂ ಪ್ರಧಾನ ಕಾರಣವಲ್ಲ ಎಂಬುದನ್ನು ಕನ್ನಡ ಪ್ರಭ ಪತ್ರಿಕೆ ಪುರವಣಿಯ ಪ್ರಧಾನ ಸಂಪಾದಕ ಜೋಗಿ ಗುರುತಿಸುತ್ತಾರೆ. ಅಂತಹ ಪುರವಣಿಗಳ ಅಗತ್ಯವಿದೆ ಎಂಬುದನ್ನು ದೊಡ್ಡ ಧ್ವನಿಯಲ್ಲಿ ವ್ಯಕ್ತಪಡಿಸುವುದು ಮುಖ್ಯವಾಗುತ್ತದೆ. ಅದನ್ನು ಬಯಸುವ ಓದುವವರ ವಲಯವೂ ಆಗ್ರಹಿಸಬೇಕಾಗುತ್ತದೆ ಎನ್ನುವ ಅವರು, ತಾವು ಸಾಹಿತ್ಯ ಸಮಾವೇಶವೊಂದಕ್ಕೆ ಹೋದಾಗ ಸಮೀಕ್ಷೆ ಮಾಡಿದ್ದ ವಿಷಯವನ್ನು ಪ್ರಸ್ತಾಪಿಸಿದರು. ‘ಇತ್ತೀಚೆಗೆ ಮೂರು ನಾಲ್ಕು ತಿಂಗಳ ಅವಧಿಯಲ್ಲಿ ಸಾಹಿತ್ಯ ಪುರವಣಿಯಲ್ಲಿ ಬಂದ ಯಾವ ಕತೆ- ಕವನ ಓದಿದಿರಿ ಎಂದು ಒಂದಷ್ಟು ಜನರನ್ನು ಕೇಳಿದ್ದೆ. ಆದರೆ ಅವರಲ್ಲಿ ಅನೇಕರು ಕತೆ-ಕವನಗಳನ್ನು ಓದಿರಲಿಲ್ಲ. ಇದಕ್ಕೆ ಕಾರಣ ಬಹುಶಃ ಸಾಪ್ತಾಹಿಕಗಳೂ ಹೊಸತನವನ್ನೂ ಮೈಗೂಡಿಸಿಕೊಳ್ಳದೇ ಇರುವುದು ಎನಿಸುತ್ತದೆ. ದಶಕಗಳ ಹಿಂದೆ ಭಾನುವಾರದ ಪುರವಣಿ ಆರಂಭವಾದಾಗ ಇದ್ದಂತಹ ಹೂರಣ ಮತ್ತು ವಿನ್ಯಾಸಕ್ಕೆ ಮಾತ್ರ ಪುರವಣಿಗಳು ಮುಂದೆಯೂ ಸೀಮಿತವಾದವೇ ಹೊರತು ಅವು ಸಮಗ್ರ ಸಾಹಿತ್ಯ ಪುರವಣಿಯಾಗಿ ಬೆಳೆದಂತಿಲ್ಲ. ಅದಕ್ಕೆ ಅನೇಕ ಕಾರಣಗಳೂ ಇರತ್ತವೆ’ ಎನ್ನುತ್ತ ಪುರವಣಿಗಳ ಆಯಸ್ಸು ಕುಂದುವುದಕ್ಕೆ ಕಾರಣಗಳನ್ನೂ ಅವರು ಕೊಡುತ್ತಾರೆ:
‘ಅದಕ್ಕೆ ಕಾರಣಕರ್ತರು ಲೇಖಕರೂ ಕೂಡ. ಕತೆ ಕವಿತೆಗಳನ್ನು ಕಳುಹಿಸುವುದನ್ನು ಬಿಟ್ಟು ಪುರವಣಿಗಳ ಚಟುವಟಿಕೆಗಳಲ್ಲಿ ಅವರು ಪೂರ್ತಿಯಾಗಿ ತೊಡಗಿಸಿಕೊಳ್ಳಲಿಲ್ಲ. ಒಂದು ಕಾಲದಲ್ಲಿ ಎಸ್.ಎಲ್. ಭೈರಪ್ಪನವರ ಕಾದಂಬರಿ, ಧಾರಾವಾಹಿ ರೂಪದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಭೈರಪ್ಪನವರಿಗೂ ಗಿರಡ್ಡಿ ಗೋವಿಂದರಾಜು ಅವರಿಗೂ ತಿಂಗಳಾನುಗಟ್ಟಲೆ ಸಂವಾದ ನಡೆಯುತ್ತಿತ್ತು. ಯು.ಆರ್.ಅನಂತಮೂರ್ತಿಯವರು ಮತ್ತು ಡಿ.ಆರ್. ನಾಗರಾಜ್ ಅವರ ನಡುವೆ ವೈಚಾರಿಕ ಚರ್ಚೆ ನಡೆಯುತ್ತಿತ್ತು. ಹೀಗೆ ಇವತ್ತು ಫೇಸ್‍ಬುಕ್ ಎಷ್ಟು ಲೈವ್ ಆಗಿದೆಯೋ, ಆಗ ಸಾಪ್ತಾಹಿಕಗಳೂ ಅಷ್ಟೇ ಕ್ರಿಯಾಶೀಲವಾಗಿದ್ದವು. ನಂತರದ ದಿನಗಳಲ್ಲಿ ಒಬ್ಬರು ಇನ್ನೊಬ್ಬರ ಬಗ್ಗೆ ಬರೆಯುವುದನ್ನು ನಿಲ್ಲಿಸಿಬಿಟ್ಟರು. ಒಂದು ಹಂತದಲ್ಲಿ ಟೀಕೆ, ವಿಮರ್ಶೆಗಳ ಬರಹಗಳನ್ನು ಸಹಿಸಿಕೊಳ್ಳುವುದು ಕಷ್ಟ ಎಂಬ ವಾತಾವರಣ ನಿರ್ಮಾಣವಾಗಿದ್ದೇ, ಈ ಸ್ಥಿತಿಗೆ ಕಾರಣವಿರಬಹುದು. ಅಲ್ಲದೆ ಸಾಹಿತ್ಯ ಪುರವಣಿಗಳಲ್ಲಿ ನಡೆಯುವ ಸಂವಾದ ಚಟುವಟಿಕೆಗಳಿಗೆ ಫೇಸ್ ಬುಕ್ ಜಾಗ ನೀಡಿತು. ಹೀಗಾಗಿ ಅದು ಪತ್ರಿಕೆಗಳ ಪುರವಣಿಗಳಿಗಿಂತ ಹೆಚ್ಚು ಪ್ರತಿಕ್ರಿಯಾತ್ಮಕವಾಗಿದೆ ಎನಿಸುತ್ತದೆ.’
‘ನಂತರದ ದಿನಗಳಲ್ಲಿ ಪ್ರಧಾನವಾದ ಸಾಹಿತ್ಯದ ಸುದ್ದಿಗಳಿದ್ದಾಗ ಅವು, ಮುಖ್ಯ ಪುಟಗಳಲ್ಲಿ ಜಾಗ ಪಡೆದುಕೊಂಡವು. ಹೀಗೆಲ್ಲ ಬದಲಾವಣೆಗಳಾದಾಗ, ಸಾಹಿತ್ಯ ಪುರವಣಿಯೊಂದನ್ನು ಓದುವುದಕ್ಕೆ ವಾರದ ಕೊನೆಯವರೆಗೆ ಕಾಯುವ ಪ್ರಮೇಯ ತಪ್ಪಿಹೋಗಿ ಅದನ್ನು ಪತ್ರಿಕೆಯಿಂದ ಬೇರ್ಪಡಿಸಿ ಪಕ್ಕಕ್ಕೆ ಇಡುವ ಕ್ರಮ ಶುರುವಾಯಿತು’ ಎಂದು ವಿಶ್ಲೇಷಿಸುತ್ತಾರೆ ಜೋಗಿ.
ಕಡಿತಗೊಂಡ ಇತರ ಅನೇಕ ಪುಟಗಳು, ಜೀವನಶೈಲಿಯನ್ನು ವಿವರಿಸುವ ಪುರವಣಿಗಳು, ಜಾಹೀರಾತಿನ ಪುರವಣಿಗಳು ಮತ್ತೆ ಕಾಣಿಸಿಕೊಂಡರೂ, ಸಾಹಿತ್ಯ, ಸಂಸ್ಕೃತಿ, ಜಿಜ್ಞಾಸೆಗಳನ್ನು ಪೋಷಿಸುತ್ತಿದ್ದ ಸಾಹಿತ್ಯ ಪುರವಣಿ ಮಾತ್ರ ಮರಳಿ ಬರುವಂತೆ ಕಾಣುತ್ತಿಲ್ಲ.
ಇತ್ತೀಚೆಗಿನ ದಶಕಗಳಲ್ಲಿ ಡಿಜಿಟಲ್ ಮಾಧ್ಯಮಗಳು ಕೂಡ ಓದುಗರ ಸಾಹಿತ್ಯ ಹಸಿವನ್ನು ತಣಿಸಿದ್ದು ನಿಜ. ಕೋವಿಡ್ ಸೋಂಕಿನ ತಡೆಗೆ ಹೇರಿದ್ದ ಲಾಕ್ ಡೌನ್ ಸಂದರ್ಭದಲ್ಲಿ ಅನಿವಾರ್ಯವಾಗಿ ಸಾಹಿತ್ಯ ಚಟುವಟಿಕೆಗಳೆಲ್ಲ ಡಿಜಿಟಲ್ ವೇದಿಕೆಯೇರಿದವು. ಹೊಸತಲೆಮಾರಿಗೆ ಡಿಜಿಟಲ್ ವೇದಿಕೆ ಇಷ್ಟವೆನಿಸಿದರೂ, ಅವು ಒಂದು ಸಮಗ್ರ ಓದಿನ, ಅನುಭವದ ಖುಷಿಯನ್ನು ಕೊಡಲಾರವು ಎಂಬುದೂ ಬಹುಬೇಗನೇ ಅರಿವಿಗೆ ಬಂದಿದೆ. ಆದರೆ ಅದು ಪೂರಕವಾದ ಪಾತ್ರವನ್ನು ವಹಿಸುತ್ತಿರುವುದು ನಿಜ.
ಹಾಗೆಂದು ಜನಮಾನಸದಲ್ಲಿ ಸಾಹಿತ್ಯದ ಒಲವು ಕಡಿಮೆಯಾಗಿದೆಯೇ ಎಂಬ ಪ್ರಶ್ನೆಯನ್ನು ಜೋಗಿ ಅಲ್ಲಗಳೆಯುತ್ತಾರೆ. ‘ಹೆಚ್ಚೆಚ್ಚು ಜನರು ಸಾಹಿತ್ಯ ಚರ್ಚೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸಾಮಾಜಿಕ ಜಾಲತಾಣಗಳೇ ಸಾಕ್ಷಿ. ಕಳೆದ ಹತ್ತು ವರ್ಷಗಳಲ್ಲಿ ಸಾಹಿತ್ಯ ಸುದ್ದಿಗಳಿಗಾಗಿ ಆನ್ ಲೈನ್ ವೇದಿಕೆಗಳು ನಿರ್ಮಾಣವಾದವು. ಸಾಹಿತ್ಯ ಪುರವಣಿಗಳು ಇಲ್ಲದೆ ಇದ್ದಾಗ, ಈ ವೇದಿಕೆಗಳು ಸಾಹಿತ್ಯ ಜಾಗೃತಿ ಮೂಡಿಸಿವೆ. ಪುರವಣಿಯೊಂದರಲ್ಲಿ ಬರುವ ಲೇಖನವು ಫೇಸ್ ಬುಕ್ ನಲ್ಲಿ ಶೇರ್ ಆದಾಗಲೇ ಅದಕ್ಕೆ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಗುವುದು ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರತಿಕ್ರಿಯಿಸುವುದಕ್ಕಾಗಿ ಒಂದು ವಾರದ ಅವಧಿಯನ್ನು ತಾಳಿಕೊಳ್ಳುವ ತಾಳ್ಮೆ ಇಂದಿನ ವೇಗದ ಬದುಕಿನಲ್ಲಿಲ್ಲ. ನಮ್ಮೆಲ್ಲರ ಬದುಕೂ ಎಷ್ಟೊಂದು ವೇಗ ಪಡೆದುಕೊಂಡಿದೆ ಅಲ್ಲವೇ…’ ಎಂದು ಅವರು ಪ್ರಶ್ನಿಸುತ್ತಾರೆ.
ಬದಲಾದ ಸನ್ನಿವೇಶಕ್ಕೆ ಕಾರಣಗಳೇನು ಎಂಬುದನ್ನು ಹೀಗೆ ಗುರುತಿಸಬಹುದಾದರೂ, ಪತ್ರಿಕೆಯೊಂದಕ್ಕೆ ಸಾಹಿತ್ಯ ಪುರವಣಿಗಳ ಅವಶ್ಯವಿದೆ, ಓದುಗರಿಗೂ ಅದರ ಅಗತ್ಯವಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಆರ್ಥಿಕ ಲಾಭನಷ್ಟಗಳ ಲೆಕ್ಕಾಚಾರವನ್ನಷ್ಟೇ ನಂಬಿ ಪತ್ರಿಕೋದ್ಯಮವು ಮುನ್ನಡೆಯುವುದಾದರೆ, ಇನ್ನೂ ಅನೇಕ ಪುಟಗಳಿಗೆ ಸಂಚಕಾರ ಬರಬಹುದೇನೋ. ಕೊನೆಗೆ ಪತ್ರಿಕೆಯ ಸ್ವರೂಪವೇ ಬದಲಾಗಿಬಿಡುವ ಭಯವಿದೆ. ಆದರೆ ಪತ್ರಿಕೆಯು ಸಾಮಾಜಿಕ ಆರೋಗ್ಯದ ದ್ಯೋತಕವೂ ಹೌದು.
ಮಾಧ್ಯಮ ಪ್ರತಿನಿಧಿಯೊಬ್ಬರು ಪತ್ರಿಕಾ ಗ್ಯಾಲರಿಯಲ್ಲಿ ಕುಳಿತು ಮಾಹಿತಿ ಸಂಗ್ರಹಿಸಲು, ಸರ್ಕಾರದ ಅನೇಕ ಕಚೇರಿಗಳಿಗೆ ತೆರಳಿ ಅಧಿಕಾರಿಗಳು ನಡೆಸುವ ಸಭೆಗಳಲ್ಲಿ ಭಾಗವಹಿಸಿ ವರದಿಗಾರಿಕೆಯನ್ನು ಮಾಡಲು ಸಂವಿಧಾನಾತ್ಮಕವಾದ ಅವಕಾಶವನ್ನು ಕಲ್ಪಿಸಲಾಗಿದೆ. ಈ ಅವಕಾಶಗಳು ದುರುಪಯೋಗವಾಗದಂತೆ ನೀತಿಸಂಹಿತೆಗಳು ಅವರನ್ನು ನಿಯಂತ್ರಿಸುತ್ತವೆ. ಅಂದರೆ ಜನಪರವಾಗಿರುವ, ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವ ಜವಾಬ್ದಾರಿ ಮಾಧ್ಯಮ ಪ್ರತಿನಿಧಿಗಳ ಮೇಲೆ, ಆ ಮೂಲಕ ಮಾಧ್ಯಮ ಸಂಸ್ಥೆಗಳ ಮೇಲಿರುತ್ತದೆ. ಇದೇ ಮಾದರಿಯಲ್ಲಿ ಯೋಚಿಸುವುದಾದರೆ, ಆರೋಗ್ಯಕರ ಆಲೋಚನೆಗಳನ್ನು ಬೆಳೆಸುವ, ಸಾಮಾಜಿಕ ಅಭಿಪ್ರಾಯ ರೂಪಿಸುವ ಜವಾಬ್ದಾರಿಯೊಂದಿಗೆ ಪತ್ರಿಕೆಯು ಸುದ್ದಿಯನ್ನು ಸಿದ್ಧಪಡಿಸುತ್ತದೆ, ಲೇಖನಗಳನ್ನು ಪ್ರಕಟಿಸುತ್ತದೆ, ಸಂಪಾದಕೀಯವನ್ನು ಬರೆಯುತ್ತದೆ.
ಇವೆಲ್ಲವೂ ಅಭಿಪ್ರಾಯ ನಿರೂಪಣೆಯಲ್ಲಿ ವ್ಯಕ್ತಿಯೊಬ್ಬನಿಗೆ ನೆರವಾಗುತ್ತವೆ. ಇದೇ ತರ್ಕಗಳು ಮತ್ತು ವಿಚಾರಗಳು, ಮೃದುರೂಪದಲ್ಲಿ ಲಲಿತ ಕಲೆಗಳ ಮೂಲಕ ವ್ಯಕ್ತವಾಗುತ್ತವಷ್ಟೇ? ಹಾಗಿದ್ದರಿಂದಲೇ ಲಲಿತಕಲೆಗಳಿಗೆ ಸಂಬಂಧಿಸಿದ ವಿಚಾರಗಳಿಗೆ ಸಾಹಿತ್ಯ ಪುರವಣಿಗಳು ಅವಕಾಶವನ್ನು ಒದಗಿಸುತ್ತವೆ. ಆದರೆ ಈ ವಿಚಾರಗಳಿಗೆ ಬೇಕಾದ ಅವಕಾಶ ಸೃಷ್ಟಿಯು ‘ಸಾಹಿತ್ಯ ಪುರವಣಿ’ಯ ರೂಪದಲ್ಲಿರಬೇಕೇ, ಅದು ಇನ್ನಷ್ಟು ಆಕರ್ಷಕವಾಗಿರಬೇಕೇ, ಚೌಕಟ್ಟುಗಳು ಬದಲಾಗಬೇಕೇ ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯಬೇಕೇ ಹೊರತು, ಸಾಹಿತ್ಯವನ್ನೇ ಬರ್ಖಾಸ್ತುಗೊಳಿಸುವುದರಿಂದ ಪತ್ರಿಕೆಗಳು ಹೊಣೆಗಾರಿಕೆಯನ್ನು ನಿಭಾಯಿಸಿದಂತಾಗುವುದಿಲ್ಲ.
ಸಾಹಿತ್ಯ ಪುರವಣಿಯನ್ನು ಎಲ್ಲರೂ ಓದದೇ ಇರಬಹುದು, ಓದಿ ಪ್ರತಿಕ್ರಿಯಿಸದೇ ಇರಬಹುದು, ಆದರೆ ಪತ್ರಿಕೆಯೊಂದರಲ್ಲಿ ಎಲ್ಲ ವಿಚಾರಗಳೂ ಸೇರಿಕೊಂಡು ಸಮಗ್ರವಾಗಿರಬೇಕು ಎಂದು ಅಭಿಪ್ರಾಯಪಡುತ್ತಾರೆ ‘ಪ್ರಜಾವಾಣಿ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಪದ್ಮರಾಜ ದಂಡಾವತಿ. ನಿವೃತ್ತಿಯ ಬಳಿಕ ಅವರು, ‘ಮುದ್ರಣ ಮಾಧ್ಯಮ: ಸಮಕಾಲೀನ ವಿದ್ಯಮಾನಗಳು’ ಎಂಬ ವಿಷಯದಲ್ಲಿ ಸಂಶೋಧನಾ ಪ್ರಬಂಧ ಸಿದ್ಧಪಡಿಸಿದ್ದು, ಈ ವಿಚಾರಗಳ ಕುರಿತು ವಿಸ್ತೃತವಾದ ಕ್ಷೇತ್ರಕಾರ್ಯ ನಡೆಸಿದವರು.
‘ಸಾಹಿತ್ಯ ಪುರವಣಿಗಳೆಂದರೆ ಅದೊಂದು ವಿರಾಮದ ಓದಿಗೆ ಸಲ್ಲುವಂತಹುದು ಎಂಬುದು ನಿಜ. ಆದರೆ ವಿರಾಮಕ್ಕೆ ಹೆಚ್ಚು ಅವಕಾಶವಿಲ್ಲದ ಕಾಲವಿದು- ಎಂಬ ಗ್ರಹಿಕೆ ಪತ್ರಿಕೋದ್ಯಮ ವಲಯಕ್ಕಿದೆ. ಸಾಹಿತ್ಯ ಅನಗತ್ಯ ಎಂಬ ಗ್ರಹಿಕೆ ಮೂಡಿರುವುದರಿಂದ ಪತ್ರಿಕೆಗಳು ಅನೇಕ ಸಾಹಿತ್ಯ ಸಂಬಂಧೀ ಬರಹಗಳನ್ನು ವೆಬ್‌ಸೈಟ್‌ಗೆ ಹಾಕಿವೆ. ಸಾಹಿತ್ಯ ಪುರವಣಿಗಳನ್ನು ಓದಲು ಕೊಂಚಮಟ್ಟಿಗೆ ಏಕಾಂತ ಬೇಕು. ಈ ವಿಚಾರಗಳು ಗಂಭೀರವಾದವು ಎಂಬ ಗ್ರಹಿಕೆ ಇದೆ. ಅದಕ್ಕಾಗಿಯೇ ಲಲಿತ ಕಲೆಗಳಿಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಪತ್ರಿಕೆಯು ನಿರಾಕರಿಸಲು ಶುರು ಮಾಡಿದೆಯೆನಿಸುತ್ತದೆ. ಆ ಜಾಗದಲ್ಲಿ ಲಘು ಬರಹಗಳನ್ನೊಳಗೊಂಡ ಪುರವಣಿಗಳು ಬಂದಿವೆ’ ಎನ್ನುತ್ತಾರೆ.
‘ಸಾಹಿತ್ಯ ಪುರವಣಿ ನಿಲ್ಲುವುದಕ್ಕೆ ಕಾರಣ ನ್ಯೂಸ್‍ಪ್ರಿಂಟ್ ನ ಸಮಸ್ಯೆಯಲ್ಲ. ಕೋವಿಡ್ ಸಂದರ್ಭದ ಬಿಕ್ಕಟ್ಟೂ ಕಾರಣವಲ್ಲ. ಅದಕ್ಕೂ ಮುನ್ನ ಸಾಹಿತ್ಯ ಪುರವಣಿಗಳ ಅಳಿವುಉಳಿವಿನ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಕೊನೆಗೆ ಸಾಹಿತ್ಯವು ಅನುತ್ಪಾದಕವಾದುದು ಎಂಬ ಗ್ರಹಿಕೆಯಿಂದ ಪುರವಣಿಗಳ ಸ್ವರೂಪ ಬದಲಾಗತೊಡಗಿದವು. ವಾರಪೂರ್ತಿ ಕಾದು ಓದುತ್ತಿದ್ದ ಕೆಲವು ಪುರವಣಿಗಳು ಇಂದು ನಿಂತು ಹೋಗಿವೆ. ಒಂದು ಪತ್ರಿಕೆಯಲ್ಲಿ ಕ್ರೀಡೆ, ಸಾಹಿತ್ಯ, ವಾಣಿಜ್ಯ ಮುಂತಾಗಿ ಅನೇಕ ವಿಚಾರಗಳಿರುತ್ತವೆ. ಎಲ್ಲ ಪುಟಗಳನ್ನೂ ಎಲ್ಲರೂ ಓದುವುದಿಲ್ಲ. ಆದರೆ ಓದುಗರಿಲ್ಲವೆಂದೇ ಖಡಾಖಂಡಿತವಾಗಿ ಹೇಳುವಂತಿಲ್ಲ’ ಎಂಬುದು ಅವರ ಅನುಭವದ ಮಾತುಗಳು.
ಆದರೆ ನಿಜಕ್ಕೂ ಪುರವಣಿಗಳು, ಅದರಲ್ಲಿಯೂ ಸಾಹಿತ್ಯ ಪುರವಣಿಗಳ ಉದ್ದೇಶ, ಆರ್ಥಿಕ ಲಾಭವಲ್ಲವೇ ಅಲ್ಲ. ಸಾಹಿತ್ಯದ ಓದುಗರನ್ನು ಸಹೃದಯರೆಂದು ಗುರುತಿಸುತ್ತೇವೆಯೇ ಹೊರತು, ಆರ್ಥಿಕ ಶ್ರೀಮಂತರೆಂದು ಗುರುತಿಸುವುದಿಲ್ಲ. ಯಾಕೆಂದರೆ ಸಾಹಿತ್ಯದ ಓದು ಬುದ್ಧಿ ಭಾವಗಳ ವಿಕಾಸಕ್ಕೆ ಪೂರಕವಾಗಿರುತ್ತವೆ. ಅವು ಮಾಹಿತಿಗಳ ಪುಟದಲ್ಲಿ, ಇನ್‌ಫೋ ಗ್ರಾಫಿಕ್ಸ್‌ನ ‘ಕ್ವಿಕ್ ರೀಡಿಂಗ್’ ನಲ್ಲಿ ಲಭಿಸುವಂತಹುದಲ್ಲ. ಗೊತ್ತಿರುವ ವಿಚಾರವೇ ಆದರೂ ಅದನ್ನು ಸಾಕಷ್ಟು ಪೀಠಿಕೆ ರೂಪದಲ್ಲಿ ಮಂಡಿಸಿ, ವಿಷಯ ವಿಸ್ತಾರ ಮಾಡಿ, ತರ್ಕವನ್ನೂ ಭಾವವನ್ನೂ ಹೆಣೆದು ರೂಪಿಸುವ ‘ವಿಧಾನ’ ದಲ್ಲಿಯೇ ಬದುಕಿಗೂ ಸಮಾಜಕ್ಕೂ ಬೇಕಾದ “ಧೋರಣೆ’’ಯೊಂದು ರೂಪುಗೊಳ್ಳುತ್ತದೆ.
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.