ಅನುವಾದವೆಂದರೆ ಪದಗಳ ಅದಲಿ ಬದಲಿಯಲ್ಲ; ಪದಶಃ ಬದಲಾವಣೆಯಲ್ಲ ಕವಿತೆಯ ಬಾವವನ್ನು ಮುಕ್ಕಾಗಿಸದೆ ಅತ್ಯಂತ ಸೂಕ್ಷ್ಮವಾಗಿ ಅಂದುಕೊಂಡ ಭಾಷೆಯಲ್ಲಿ ಹೇಳುವ ರೀತಿಯಾಗಿದೆ. ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಅನುವಾದಿಸುವುದು ನಿಜಕ್ಕೂ ಸವಾಲಿನ ಕೆಲಸ. ಕನ್ನಡ ಸಾಹಿತ್ಯ ಲೋಕಕ್ಕೆ ಇಂತಹ ಅನೇಕ ಕೃತಿಗಳು ಪ್ರವೇಶ ಪಡೆದಿವೆ. ಇತ್ತೀಚೆಗೆ ಅಮೆರಿಕನ್ ಕವಯತ್ರಿ ಎಮಿಲಿ ರಾಲ್ಫ್ ಗ್ರೋಶೆಲ್ಸ್ ಅವರ ‘ಚೈಲ್ಡ್ ಹುಡ್’ ಎಂಬ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಮೈ. ಶ್ರೀ. ನಟರಾಜ್. ‘ಶೈಶವ’ ಎನ್ನುವ ಶೀರ್ಷಿಕೆಯ ಈ ಕವನಸಂಕಲನದ ವಿಭಿನ್ನತೆಯನ್ನು ಗುರುತಿಸಿದ್ದಾರೆ ಲೇಖಕಿ ಸುಮಾವೀಣಾ. ಮಕ್ಕಳ ಬಾಲ್ಯವನ್ನೇ ವಸ್ತುವಾಗಿಸಿಕೊಂಡು ಒಡಮೂಡಿದ ಕೃತಿಯ ಕುರಿತು ಅವರು ಬರೆದ ಪುಟ್ಟ ಬರಹವೊಂದು ಇಲ್ಲಿದೆ.
‘ದತ್ತಕ’ ಎನ್ನುವ ಪರಿಭಾಷೆಯನ್ನು ಅನನ್ಯವಾಗಿ ಹೊತ್ತು ತಂದಿರುವ ವಿಶಿಷ್ಟ ಅನುವಾದಿತ ಕವಿತೆಗಳ ಗುಚ್ಛ ‘ಶೈಶವ’. ಮೈ.ಶ್ರೀ ನಟರಾಜರ ಕೃತಿ ‘ಶೈಶವ’ , ಧರೆಯ ಮೇಲಣ ತಾರೆಗಳು ಎನ್ನುವ ಉಪಶೀರ್ಷಿಕೆಯೊಂದಿಗೆ ಕಾವ್ಯಾಸಕ್ತರ ಕೈ ಸೇರುತ್ತಿದೆ. ಕೃತಿಯ ಮೂಲಕ ಮೈ.ಶ್ರೀ. ನಟರಾಜ ಅವರ ಇಂಗ್ಲಿಷ್ ಹಾಗು ಕನ್ನಡ ಪಾಂಡಿತ್ಯ ಏಕಕಾಲಕ್ಕೆ ಓದುಗರನ್ನು ಸೆಳೆದು ಅವರ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ.
ಸಾಹಿತ್ಯ ಲೋಕದಲ್ಲಿ ಅಂತರ್ಶಿಸ್ತೀಯ ಅಧ್ಯಯನ ಇತ್ತೀಚೆಗೆ ಬಹುವಾಗಿ ಕೇಳಿ ಬರುತ್ತಿರುವ ಪದ. ಈ ಹಿನ್ನೆಲೆಯಲ್ಲಿ ಎಮಿಲಿ ಗ್ರೋಶೆಲ್ಸ್ ಅವರು ವಿಜ್ಞಾನ ಮತ್ತು ಗಣಿತದ ಅಂತರ್ಗತ ದರ್ಶನಗಳನ್ನು ಕಂಡುಕೊಂಡವರು, ಹಾಗೆ ಅನುವಾದಕರಾದ ಮೈ.ಶ್ರೀ. ನಟರಾಜ್ ಅವರು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಕಷ್ಟು ನುರಿತವರು. ಇವರಿಬ್ಬರ ಕಾವ್ಯಾಸಕ್ತಿಯ ಫಲಿತವೆ ‘ಶೈಶವ’ ಕೃತಿ. ಏಕತಾನತೆ ಇಲ್ಲದ ವೈವಿಧ್ಯಮಯ ವಸ್ತುಗಳನ್ನು ಹೊಂದಿರುವ ಈ ಕೃತಿಯ ಕವನಗಳು ಒಂದಕ್ಕಿಂತ ಮತ್ತೊಂದು ಭಿನ್ನ.
ಪ್ರಸ್ತುತ ಕೃತಿಯಲ್ಲಿ ಅಮೆರಿಕನ್ ಸಂವೇದನೆಯನ್ನು ಕನ್ನಡಕ್ಕೆ ತರುವ ಪ್ರಯತ್ನದಲ್ಲಿ ನಟರಾಜರು ಯಶಸ್ವಿಯಾಗಿದ್ದಾರೆಂದೆ ಹೇಳಬಹುದು. ಇದು ಅಕ್ಷರಶಃ ಅನುವಾದವಲ್ಲ. ಅಮೆರಿಕದ ಹೆಣ್ಣಿನ ಮನೋಮಯ ಚಿಂತನೆಯನ್ನೂ ಕನ್ನಡ ತಾಯಂದಿರಲ್ಲಿ ನೋಡುವ ಇವರ ದೃಷ್ಟಿ ಮಹತ್ವವನ್ನು ಪಡೆದಿದೆ. ಶಬ್ದಗಳಿಗೆ ಪ್ರತಿ ಶಬ್ದಗಳನ್ನು ಹುಡುಕಿ ಬರೆಯುವುದು ಸುಲಭ. ಆದರೆ ಈ ಶೈಶವ ಕೃತಿ ಹಾಗಾಗಿಲ್ಲ. ಇದೊಂದು ಶಬ್ದದ ಶಿಲ್ಪದೊಳಗಿರುವ ಭಾವ ಶಿಲ್ಪ ಅಥವ ಸಂವೇದನೆಯ ಶಿಲ್ಪ ಎಂದೇ ಹೇಳಬಹುದು.
ಯಾವುದೇ ಕೃತಿಕಾರನಿಗೆ, ಕವಿಗೆ ಅನುವಾದಕನಿಗೆ ತನ್ನ ಕೆಲಸದಲ್ಲಿ ಆತ್ಯಂತಿಕವಾದ ಶಿಸ್ತು ಇರಬೇಕು ಎನ್ನುವುದನ್ನು ಈ ಕೃತಿ ನನಗೆ ಹೇಳಿಕೊಟ್ಟಿದೆ ಅದಕ್ಕೆ ನಟರಾಜರ ಕವಿತೆಗಳ ಟಿಪ್ಪಣಿಗಳೆ ಸಾಕ್ಷಿ.
ಕೃತಿಯ ಮೊದಲ ಹತ್ತು ಪದ್ಯಗಳು ಭ್ರೂಣ, ಮಕ್ಕಳ ಬೆಳವಣಿಗೆ, ಹೆರಿಗೆ ಮೊದಲಾದ ಮಾತುಗಳನ್ನು ಹೇಳಿದರೆ ನಂತರದ ಕವಿತೆಗಳು ಮಕ್ಕಳ ಬಾಲ್ಯದ ಕುತೂಹಲ, ತಾಯಿಯ ಕನವರಿಕೆ, ಜವಾಬ್ದಾರಿಯ ಕುರಿತು ತಮ್ಮ ಇರವನ್ನು ತೋರಿಸುತ್ತವೆ. ಮೊದಲ ಕವಿತೆ ‘ಆಲಿಕೆ’ಯಲ್ಲಿ
ಒಂಟಿಗುಲಾಬಿಯೇ ಸಾಕು ಪರಿಮಳವ ಪಸರಿಸಲು
ಅದರೆ ಕವಿಗಳಿಗೆ ಬೇಕು ಆಲಿಸುವ ಕಿವಿಗಳು
ತಾಯಿಗೆ ಬೇಕೇಬೇಕು ತೊಟ್ಟಿಲ ಭಾಷೆ
ಎನ್ನುವ ಸಾಲುಗಳಲ್ಲಿ ಯಾರಿಗೆ ಯಾವುದು ಪ್ರಾಣ, ಯಾವುದಕ್ಕೆ ಯಾವುದರ ಅಗತ್ಯವಿದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ತಾಯಿಯಾದವಳು ಇನ್ನು ಹುಟ್ಟದೆ ಇರುವ ತನ್ನ ಮಗುವಿನ ಚಿಂತನೆಯಲ್ಲಿ ಇದ್ದು ಅದರ ಪೋಷಣೆಯ ಬಗ್ಗೆ ನಿರಂತರ ಧ್ಯಾನಸ್ಥಳಾಗಿರುತ್ತಾಳೆ ಎಂಬುದನ್ನು ಅನುವಾದಕರು ಇಲ್ಲಿ ಸಮರ್ಪಕವಾಗಿ ತಂದಿದ್ದಾರೆ.
‘ವಾರಗಳು ಮೂವತ್ತಾರು’ ಕವಿತೆಯಲ್ಲಿಯೂ ಇನ್ನೇನು ಮಗುವಿಗೆ ಜನ್ಮ ನೀಡುವ ತಾಯಿ ಚಿತ್ರಿತಳಾಗಿದ್ದಾಳೆ. ಗರ್ಭದಲ್ಲಿ ಪೋಷಿಸಿದ ಆ ಮಗುವಿನ ಮುಖವನ್ನು ಕಾಣುವ ತವಕ ಆಕೆಯ ಪ್ರೀತಿ ಮತ್ತು ತಲ್ಲಣಗಳನ್ನು ಏಕಕಾಲಕ್ಕೆ ಚಿತ್ರಿಸುತ್ತದೆ. ‘ದತ್ತಕಕೆ ಮುನ್ನ’ ಕವಿತೆ ವಿಭಿನ್ನತೆಯ ದೃಷ್ಟಿಯಿಂದ ಓದುಗರ ಹೃದಯವನ್ನು ತಲುಪುತ್ತದೆ. ಬದಲಾದ ದಿನಮಾನಗಳಲ್ಲಿ ಕುಟುಂಬ, ಸಂತಾನ ಪದಗಳು, ಲಿವ್ ಇನ್, ಬಾಡಿಗೆ ಗರ್ಭ, ದತ್ತು ಸ್ವೀಕಾರ ಮುಂತಾದ ಪದಗಳ ಮೂಲಕ ಗುರುತಿಸಿಕೊಳ್ಳುತ್ತಿದೆ. ಅದರಲ್ಲೂ ದತ್ತು ಸ್ವೀಕಾರ ಎನ್ನುವುದು ಹಿಂದೆಯು ಇತ್ತು. ಆದರೆ ಈಗ ಚಾಲ್ತಿಯಲ್ಲಿರುವುದಕ್ಕೆ ಸಮಯದ ಕೊರತೆ. ಮಾನಸಿಕ ಸಿದ್ಧತೆಯ ಕೊರತೆ ಮುಂತಾದವುಗಳು ಕಾರಣವಾಗುತ್ತವೆ. ಹೆಸರಿಲ್ಲದ ವಿಳಾಸವಿಲ್ಲದ ಅನಾಥ ಮಕ್ಕಳಿಗೆ ವಿಳಾಸ ನೀಡಿ ಜೈವಿಕ ಭೌತಿಕ ಗುರುತನ್ನು ಕೊಟ್ಟು ಸುಂದರ ಬದುಕನ್ನು ಕಟ್ಟಿಕೊಡುವುದು ಕರ್ತವ್ಯ ಎಂಬುದು ಇಲ್ಲಿ ವೇದ್ಯವಾಗುತ್ತದೆ. ಮಕ್ಕಳಿಗೆ ಜನ್ಮ ನೀಡುವವರು ಮಾತ್ರ ತಾಯಂದಿರು ಅಲ್ಲ, ಆ ಪ್ರೀತಿಯನ್ನು ತೋರಿಸಿ ಅನುಭವಿಸುವುದೂ ತಾಯ್ತನವೇ ಎಂಬ ಭಾವ ಇಲ್ಲಿ ವಿಶೇಷವಾಗಿ ಪ್ರಕಟವಾಗಿದೆ.
‘ಕುಟುಂಬದ ಅಮೂರ್ತ ಭಾವಬಿಂಬ’ , ‘ಅಳತೆ ಮೀರಿದ ಪ್ರಮೇಯ’, ‘ಊಹೆಯ ಕೂಸು’ ಮುಂತಾದ ಪದಗಳಲ್ಲಿ ತಾಯಾಗ ಹೊರಟ ಮಹಿಳೆಯ ಆಲೋಚನಾ ಲಹರಿ ಇಲ್ಲಿದೆ. ಇದರ ಮುಂದುವರೆದ ಭಾಗ ಎನ್ನುವಂತೆ ‘ದತ್ತಕದ ನಂತರ’ ಎನ್ನುವ ಕವಿತೆಯಲ್ಲಿ ಮಗುವಿನೊಂದಿಗಿನ ಆತ್ಮೀಯತೆ, ತಾದಾತ್ಮ್ಯಗಳು ‘ಬರಿದು ತೊಟ್ಟಿಗೆ ನೀರ ಸುರಿಬಿಟ್ಟು ಜೋಗುಳವ ಪಾಡಿಸಿದೆ, ನೀಲನೇವರಿಕೆ ಮೊದಲಾದ ಮಾತುಗಳ ಮೂಲಕ ಅಭಿವ್ಯಕ್ತಗೊಂಡಿದೆ.
ದತ್ತು ತೆಗೆದುಕೊಂಡ ಮಗು ಎಲ್ಲಿಂದ ಬಂದಿದ್ದರೇನಂತೆ, ನನ್ನೊಡಲನ್ನು ಸೇರಿದ ಬಳಿಕ ನೀನು ನನಗೆ ಸ್ಫೂರ್ತಿಯ ಚಿಲುಮೆ ಎನ್ನುತ್ತಾ ಆ ಮಗುವಿನ ಮುಖ ಲಕ್ಷಣಗಳ ಕುರಿತು ಮಾತನಾಡುವ ಪರಿ ಓದುಗರನ್ನು ದತ್ತಕದ ಕುರಿತು ಯೋಚಿಸಲೂ ಜೊತೆಗೆ ದತ್ತಕದ ಬಗ್ಗೆ ಇರುವ ಪೂರ್ವಗ್ರಹ ಪೀಡಿತ ಮನೋಭಾವವನ್ನು ತೊಡೆಯಲು ದಿಕ್ಸೂಚಿಯಾಗಿದೆ. ಕ್ರಿಸ್ಮಸ್ ಹಬ್ಬದ ಹನ್ನೆರಡನೆ ರಾತ್ರಿ, ಶರದ್ಋತುವಿನ ಬಾನಿನಲ್ಲಿ ಸಂಗೀತ ಕಚೇರಿ ಕವಿತೆಗಳಲ್ಲಿಯೂ ತಾಯಿಯ ಭಾವನೆಗಳು ಲಹರಿಯಾಗಿ ಹರಿದಿವೆ.
‘ಕತ್ತಲೆಯ ನುಸುಳಿ ಬಾ ಬಳಿಗೆ’ ಎನ್ನುವ ಕವಿತೆ ಮನದ ಬಯಕೆ ಮನೆಯವರೆಗೆ ಚಾಚಿರುವ ಪರಿ ಓದುಗರನನ್ನು ಸೂಜಿಗಲ್ಲಿನಂತೆ ಸೆಳೆಯುವಂತೆ ಮಾಡುತ್ತದೆ. ಪ್ರಕೃತಿಯಲ್ಲಿ ನಾವು ಏನೇನು ಬೇಕೋ ಎಲ್ಲವನ್ನು ಪಡೆದುಕೊಳ್ಳುತ್ತೇವೆ ಆದರೆ ಪ್ರತಿಯಾಗಿ ಕೆಟ್ಟದನ್ನೆ ಕೊಡುತ್ತೇವೆ. ಅದಾಗಬಾರದು ಎಂದು ಮಗುವಿಗೆ ಉಬ್ಬಸದ ತೊಂದರೆಯಾದಾಗ ಗಾಳಿ ಸೋಸುವ ಯಂತ್ರ ಬಳಸುವಾಗ ಮಗುವಿನ ಶರೀರಪ್ರಕೃತಿ ಮತ್ತು ನೈಜ ಪ್ರಕೃತಿಯನ್ನು ಸಮೀಕರಿಸಿ ಹೇಳುವುದು ವಿಶಿಷ್ಟವಾಗಿ ಮೂಡಿ ಬಂದಿದೆ.
‘ಮಳೆ ಎಲ್ಲಿಂದ ಬರತ್ತೆ’ ಸಹಜವಾಗಿ ಮಕ್ಕಳಲ್ಲಿ ಹುಟ್ಟುವ ಕುತೂಹಲ ಅಷ್ಟೇ ಮುಗ್ಧ. ಈಗಂತೂ ಎಲ್ಲಿ ನೋಡಿದರೂ ಕಥನ ಕುತೂಹಲ, ಇಲ್ಲದ ವಿಚಾರಗಳದ್ದೆ ಮೆರವಣಿಗೆ. ಆದರೆ ಮಗು ಅದನ್ನು ಮೀರುವ ವಿಷಯ ಕುತೂಹಲಿಯಾಗಿದೆ. ಇದು ದೊಡ್ಡವರಿಗೂ ಒಂದು ಪಾಠವೇ ಆದಂತಿದೆ
ಅಮೆರಿಕದ ಹೆಣ್ಣಿನ ಮನೋಮಯ ಚಿಂತನೆಯನ್ನೂ ಕನ್ನಡ ತಾಯಂದಿರಲ್ಲಿ ನೋಡುವ ಇವರ ದೃಷ್ಟಿ ಮಹತ್ವವನ್ನು ಪಡೆದಿದೆ. ಶಬ್ದಗಳಿಗೆ ಪ್ರತಿ ಶಬ್ದಗಳನ್ನು ಹುಡುಕಿ ಬರೆಯುವುದು ಸುಲಭ. ಆದರೆ ಈ ಶೈಶವ ಕೃತಿ ಹಾಗಾಗಿಲ್ಲ. ಇದೊಂದು ಶಬ್ದದ ಶಿಲ್ಪದೊಳಗಿರುವ ಭಾವ ಶಿಲ್ಪ ಅಥವ ಸಂವೇದನೆಯ ಶಿಲ್ಪ ಎಂದೇ ಹೇಳಬಹುದು.
ಮುಂದೆ ‘ಅಣಿಮೆ’ ಎಂಬ ಕವಿತೆಯಲ್ಲಿ “ಎಲ್ಲಿಂದ ಶುರುಮಾಡಿದರೂ ಹತ್ತೇ ಬೆರಳುಗಳು” ಎನ್ನುವ ಮಾತು ಅತ್ಯಂತ ಧ್ವನಿ ಪೂರ್ಣವಾಗಿದೆ ಹುಟ್ಟು ಸಾವನ್ನು ಸೂಚಿಸುವುದು . ಇಲ್ಲಿ ಬರುವ ದೇಗುಲದ ಸುಪ್ರಭಾತವೂ ಮೇಪಲ್, ಒಖ್ ವಾಲ್ನಟ್ ಮೊದಲಾದ ಶಬ್ದಗಳು ಕವಿತೆಯನ್ನು ‘ಇಂಡೋ ಅಮೆರಿಕನ್’ ಆಗಿಸಿದೆ ಎನ್ನಬಹುದು. .
ಊರಿಗೆ ಅರಸನಾದರೂ ತಾಯಿಗೆ ಮಗ ಎನ್ನುವಂತೆ ಮಗ ಮಗುವಾಗಿದ್ದಾಗಿಂದ ಮಗನಾಗಿ ತನ್ನ ಸ್ವಂತ ಕೆಲಸವನ್ನು ನಿರ್ವಹಿಸುವವರೆಗೆ ಆತನಿಗೆ ಏನೆಲ್ಲ ಕಷ್ಟಗಳು ಬರಬಹುದು ಎಂದು ಕನಲುವ ಪರಿ ಇಲ್ಲಿ ಮಾತೃಹೃದಯದ ತಲ್ಲಣಗಳನ್ನು ಅನಾವರಣಗೊಳಿಸುತ್ತದೆ.
ಈಡನ್ ಉದ್ಯಾನವನ, ಡೈನೋಸೊರಸ್ ವ್ಯಂಗ್ಯ ಚಿತ್ರಗಳನ್ನು ನೋಡುವಾಗ ಅವುಗಳನ್ನು ಗಮನಿಸುತ್ತಲೇ ಮಗುವಿನ ದೃಷ್ಟಿಯಲ್ಲಿ ಅಮ್ಮನೆ ಸರ್ವಸ್ವ ಎಂಬ ಮನೋಭಾವ ಮೂಡುವುದನ್ನು ಕವನಗಳು ಗುರುತಿಸಿವೆ.
‘ಆಶಯದ ಆಕೃತಿ’ ಇದರಲ್ಲಿ ಹೆತ್ತವರು ಒಡಹುಟ್ಟಿದವರು ಅನ್ನುವುದಕ್ಕಿಂತ ತನ್ನನ್ನು ಯಾರು ನೋಡಿಕೊಳ್ಳುತ್ತಾರೋ ಅವರ ಜೊತೆಗೆ ನಂಟು ಬೆಸೆಯುತ್ತಾ ಹೊಗುತ್ತದೆ. ದಾದಿ ಮತ್ತು ಅವಳ ಮಗಳನ್ನು ನೋಡಬಯಸುವ ಮಗುವಿನ ಮನಸ್ಸು ಇಲ್ಲಿ ಉದಾಹರಣೆಯಾಗಿದೆ.
‘ಪ್ರಾಥಮಿಕ ಶಾಲೆಗೆ ಕೊನೆ ಭೇಟಿ’ – ಮಕ್ಕಳಿಗೆ ತಾವು ಕಲಿತ ಶಾಲೆಯ ಕುರಿತು ಒಲವು ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ತಾಯಿಯಾದವಳಿಗೆ ತನ್ನ ಮಕ್ಕಳು ಕಲಿತ ಶಾಲೆ ಎಂದಿಗೂ ಆಪ್ಯಾಯಮಾನ. ತನ್ನ ಮಕ್ಕಳಿಗೆ ಅಕ್ಷರ ಜ್ಞಾನ ಒದಗಿಸಿದ ಶಾಲೆಗೆ ಅಮ್ಮ ಋಣಿಯಾಗಿರುವುದು ಅವಳ ಕರ್ತವ್ಯ ಜಾಗೃತಿಯನ್ನು ಸೂಚಿಸುತ್ತದೆ. ಮಕ್ಕಳ ಪರವಾಗಿ ಅವರು ಕಲಿತ ಶಾಲೆಯನ್ನು ಸ್ಮರಿಸುವುದು ವಿಭಿನ್ನ ನೆಲೆಯಾಗಿದೆ. ಅಮೆರಿಕೆಯ ಭಾವವನ್ನು ಶುದ್ಧ ಕನ್ನಡದ ವಾತಾವರಣಕ್ಕೆ ಅನ್ವಯಿಸಿ ಹೇಳಿರುವ ಪರಿ ಅನನ್ಯ.
ದತ್ತು ತೆಗೆದುಕೊಂಡ ಮಗು ಎಲ್ಲಿಂದ ಬಂದಿದ್ದರೇನಂತೆ ನನ್ನೊಡಲನ್ನು ಸೇರಿದ ಬಳಿಕ ನೀನು ನನಗೆ ಸ್ಫೂರ್ತಿಯ ಚಿಲುಮೆ ಎನ್ನುತ್ತಾ ಆ ಮಗುವಿನ ಮುಖ ಲಕ್ಷಣಗಳ ಕುರಿತು ಮಾತನಾಡುವ ಅಮ್ಮ, ಓದುಗರನ್ನು ದತ್ತಕದ ಕುರಿತು ಯೋಚಿಸಲೂ ಜೊತೆಗೆ ದತ್ತಕದ ಬಗ್ಗೆ ಇರುವ ಪೂರ್ವಗ್ರಹ ಪೀಡಿತ ಮನೋಭಾವವನ್ನು ತೊಡೆಯಲು ದಿಕ್ಸೂಚಿಯಾಗಿದೆ ಎನ್ನಬಹುದು. ಕ್ರಿಸ್ಮಸ್ ಹಬ್ಬದ ಹನ್ನೆರಡನೆ ರಾತ್ರಿ, ಶರದ್ಋತುವಿನ ಬಾನಿನಲ್ಲಿ ಸಂಗೀತ ಕಚೇರಿ ಕವಿತೆಗಳಲ್ಲಿಯೂ ತಾಯಿಯ ಭಾವನೆಗಳು ಲಹರಿಯಾಗಿ ಹರಿದಿವೆ.
‘ಕತ್ತಲೆಯ ನುಸುಳಿ ಬಾ ಬಳಿಗೆ’ ಎನ್ನುವ ಕವಿತೆ ಮನದ ಬಯಕೆ ಮನೆಯವರೆಗೆ ಚಾಚಿರುವ ಪರಿ ಓದುಗರನನ್ನು ಸೂಜಿಗಲ್ಲಿನಂತೆ ಸೆಳೆಯುವಂತೆ ಮಾಡುತ್ತದೆ. ಪ್ರಕೃತಿಯಲ್ಲಿ ನಾವು ಏನೇನು ಬೇಕೋ ಎಲ್ಲವನ್ನು ಪಡೆದುಕೊಳ್ಳುತ್ತೇವೆ. ಆದರೆ ಪ್ರತಿಯಾಗಿ ಕೆಟ್ಟದನ್ನೆ ಕೊಡುತ್ತೇವೆ, ಅದಾಗಬಾರದು ಎಂದು ಮಗುವಿಗೆ ತಿಳಿಹೇಳುತ್ತಾಳೆ ಅಮ್ಮ. ಮಗುವಿಗೆ ಉಬ್ಬಸದ ತೊಂದರೆಯಾದಾಗ ಗಾಳಿ ಸೋಸುವ ಯಂತ್ರ ಬಳಸುವಾಗ ಮಗುವಿನ ಶರೀರಪ್ರಕೃತಿ ಮತ್ತು ನೈಜ ಪ್ರಕೃತಿಯನ್ನು ಸಮೀಕರಿಸಿ ಅಮ್ಮ ಹೇಳುವುದು ವಿಶಿಷ್ಟವಾಗಿ ಮೂಡಿ ಬಂದಿದೆ.
ಪಂಚಮ- ಷಡ್ಜ ಮೊದಲಾದ ಪದಗಳು ಸಂಕಲನದಲ್ಲಿ ಅಡಗಿರುವ ಸಂಗೀತ ಪ್ರೀತಿಯನ್ನು ತೋರಿಸುತ್ತದೆ. ಕವಿಯೂ, ಅನುವಾದಕರೂ ಸಂಗೀತ ಪ್ರಿಯರೇ. ಪಿಯಾನೋ ಮೊದಲ ಪಾಠ ಎನ್ನುವ ಕವಿತೆಯಲ್ಲಿ ಮಕ್ಕಳ ಸಂಗೀತಾಭ್ಯಾಸದ ನೆನಪುಗಳು ಹಾಡಾಗಿರುವುದನ್ನು ಕಾಣಬಹುದು. ಕಾಲ್ಚೆಂಡಿನ ಆಟಕ್ಕೆ ಸಂಬಂದಿಸಿದ ಕವಿತೆಗಳು, ವರ್ಣಚಿತ್ರಗಳನ್ನು ನೋಡಲು ಹೋಗುವ ಸಂದರ್ಭ ಮುಂದಿನ ಕವಿತೆಗಳಲ್ಲಿ ಬರುತ್ತದೆ.
ಆಧುನಿಕ ತಂತ್ರಜ್ಞಾನ, ಟಿ.ವಿ., ಮೊಬೈಲ್ ಮೊದಲಾದವುಗಳು ಮಕ್ಕಳ ಕ್ರಿಯಾಶಿಲತೆಯನ್ನು ಮಸುಕಾಗಿಸಿವೆ ಎಂಬುದನ್ನು ‘ಧರೆಯ ಮೇಲಣ ತಾರೆಗಳು’ ಕವಿತೆ ಹೇಳುತ್ತದೆ ಮೊಬೈಲ್ ಟಿವಿಗಳು ಪ್ರಾಪಂಚಿಕ ಜ್ಞಾನಕ್ಕೆ ಮಕ್ಕಳನ್ನು ತೆರೆದುಕೊಳ್ಳಲು ಬಿಡುತ್ತಿಲ್ಲ. ಸವಿಯಾದ ಬಾಲ್ಯವನ್ನು ಅನುಭವಿಸಿರುವ ಪೋಷಕರು ಮಕ್ಕಳನ್ನು ಮೊಬೈಲ್ ಟಿವಿಗಳ ಕಪಿಮುಷ್ಟಿಯಿಂದ ಹೊರತರಬೇಕಿದೆ ಎಂಬ ಜವಾಬ್ದಾರಿಯ ಎಚ್ಚರವನ್ನು ಕವಿತೆ ಕಟ್ಟಿಕೊಡುವುದು.
ಬಾಲ್ಯ ಕಳೆದು ಶಿಕ್ಷಣ ಮುಗಿಸಿ ಬದುಕನ್ನು ಕಟ್ಟಿಕೊಂಡ ಮಕ್ಕಳು ಜೀವನ ನಿರ್ವಹಣೆಗಾಗಿ ಮನೆ ಬಿಡಬೇಕಾಗುತ್ತದೆ ಅಂತ ಮಕ್ಕಳು ತಾವು ಬೆಳೆದ ಮನೆಯನ್ನು ಮತ್ತೆ ಸೇರುತ್ತವೆಯೇ ಇಲ್ಲವೆ ಖಾಯಂ ಆಗಿ ತ್ಯಜಿಸುತ್ತವೆಯೇ, ಇಲ್ಲ ಮರಳಿ ಬಂದು ಬಾಲ್ಯದ ನೆನಪನ್ನು ಹಸಿರಾಗಿಸಿಕೊಳ್ಳುತ್ತವೆಯೇ ಎಂಬುದನ್ನು ಪತಂಗಗಳ ರೂಪಕದಲ್ಲಿ ಕಟ್ಟಿಕೊಟ್ಟಿದ್ದಾರೆ.
ಒಟ್ಟು ಮೂವತ್ತು ಕವಿತೆಗಳ ಗುಚ್ಛ ಈ ಶೈಶವ ಕೃತಿ. ಶೈಶವ ಅರ್ಥಾತ್ ಬಾಲ್ಯ ಯಾರದ್ದು? ನಾವು ಸಲುಹುವ ಮಕ್ಕಳದ್ದೊ ಸಾಕುತ್ತಿರುವ ತಾಯಂದಿರದ್ದೋ ಎನ್ನುವ ಭಾವ ಬರುತ್ತದೆ. ಇಲ್ಲಿನ ಬಹುತೇಕ ಕವಿತೆಗಳು ಎರಡು ತಲೆಮಾರಿನ ಬಾಲ್ಯ, ಕಿಶೋರಾವಸ್ಥೆಯನ್ನು ಅನುಸಂಧಾನಿಸುವಂತಿದೆ. ಕವಿತೆಗಳು ಆಯಾ ದೇಶ ಕಾಲ ಸುತ್ತಲಿನ ಪರಿಸರ ಮುಂತಾವುಗಳನ್ನು ಅನುಸರಿಸಿ ಹುಟ್ಟುತ್ತವೆ ಹಾಗೆ ಅಮೆರಿಕನ್ ಪ್ರಜ್ಞೆಯಲ್ಲಿ ಜನ್ಮಿಸಿದ ಕವಿತೆಗಳ ಭಾವಕ್ಕೆ ಕನ್ನಡದ ಪರಿಮಳವನ್ನು ಅನ್ವಯಿಸಿ ಕವಿತೆಗಳನ್ನು ಕನ್ನಡೀಕರಿಸಿದ ಮೈ. ಶ್ರೀ. ನಟರಾಜರ ಪ್ರತಿಭೆ, ಕಾವ್ಯ ಕಾಣ್ಕೆ ಓದುಗರನ್ನು ಬಹುಬೇಗ ಸೆಳೆಯುತ್ತದೆ.
(ಕೃತಿ: ಶೈಶವ, ಅನುವಾದಕರು: ಮೈ.ಶ್ರೀ .ನಟರಾಜ, ಮೂಲ ಕವಿ: ಎಮಿಲಿ ಗ್ರೋಶೆಲ್ಸ್, ಪ್ರಕಾಶಕರು: ಅಭಿನವ, ಬೆಲೆ: 100/-)
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.