ಒಬಾಮಾ ಪ್ರಮಾಣವಚನದ ಕಡೆಯಲ್ಲಿ ‘So help me, God’ ಅಂದದ್ದು ನೀವು ಕೇಳಿರಬಹುದು. ಕೇಳಿಸಿಯೂ ಅದನ್ನು ನಿರ್ಲಕ್ಷಿಸಿರಬಹುದು. ಅಮೇರಿಕಾದಲ್ಲೇನು ಅದು ವಿಶೇಷವಲ್ಲ ಎಂದು ನಿಮಗೆ ಅನಿಸಿರಬಹುದು. ಆದರೆ, ಅಮೇರಿಕನ್ ಸಂವಿಧಾನದ ಮೂಲಪ್ರಮಾಣ ವಚನದಲ್ಲಿ ದೇವರ ಸುದ್ದಿಯೇ ಇಲ್ಲವಂತೆ. ಜಾರ್ಜ್ ವಾಷಿಂಗ್ಟನ್ ಅದನ್ನು ವಯ್ಯಕ್ತಿಕವಾಗಿ ಸೇರಿಸಿಕೊಂಡನಂತೆ. ಅಲ್ಲಿಂದ ಅದು ಸಂಪ್ರದಾಯವಾಗಿಬಿಟ್ಟಿದೆ. ಈ ಸಲ ನಾಸ್ತಿಕರ ಗುಂಪೊಂದು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ದೇವರ ಪ್ರಸ್ತಾಪದ ವಿರುದ್ಧ ಮೊಕ್ಕದಮೆ ಹೂಡಿತು. ನಿರೀಕ್ಷೆಯಂತೇ ಸೋತಿತು. ಗೆಲ್ಲುತ್ತೇವೆಂದು ಮೊಕ್ಕದಮೆಕಾರರೂ ಅಂದುಕೊಂಡಿರಲಿಲ್ಲ. ಜಗತ್ತಿನ ಒಬ್ಬ ಶಕ್ತಿಶಾಲಿ ವ್ಯಕ್ತಿ, ನಾಸ್ತಿಕರೂ ಸೇರಿದಂತೆ ಎಲ್ಲ ಜನರ ಮತದಿಂದ ಗೆದ್ದವನು, ದೇವರ ಸಹಾಯ ಕೇಳುವುದು ಹೇಗೆ ಸರಿ ಎಂಬುದು ಇಲ್ಲಿ ಪ್ರಶ್ನೆ. ಮತ್ತು ಪ್ರಶ್ನೆ ಅಷ್ಟೇ ಅಲ್ಲ.
ಇಂಗ್ಲೆಂಡಿನ ಬಸ್ಸುಗಳ ಮೇಲೆ ‘ದೇವರಿಲ್ಲ. ಬದುಕನ್ನು ಸಂತೋಷದಿಂದ ಅನುಭವಿಸಿ’ ಎಂಬಂತ ಫಲಕಗಳನ್ನು ನಾಸ್ತಿಕವಾದಿಗಳು ಹಾಕಿರುವುದರ ಬಗ್ಗೆ ನೀವು ಸುದ್ದಿ ಓದಿರಬಹುದು. ಇಟಲಿಯಲ್ಲಿ ಹಾಗೆ ಮಾಡಲು ಸಾಧ್ಯವಾಗದ್ದು ನಿಮಗೆ ಗೊತ್ತಿರಬಹುದು. ಆಸ್ಟ್ರೇಲಿಯಾದಲ್ಲಿ ಅಡ್ವರ್ಟೈಸಿಂಗ್ ಏಜನ್ಸಿಯೇ ಹೆದರಿ ಹಿಂತೆಗೆದದ್ದು ನಿಮಗೆ ಗೊತ್ತಿಲ್ಲದಿರಬಹುದು.
ದಿನ ಬೆಳಗಾದರೆ ಹಲವು ಧರ್ಮ, ಗುರು, ದೇವಸ್ಥಾನಗಳ ಪ್ರಚಾರ ಫಲಕ ನೋಡುವವರಿಗೆ ಇದು ಯಾಕೆ ಉದ್ಧಟತನ ಅನಿಸುತ್ತದೋ ತಿಳಿಯದು. ಎಲ್ಲ ದೇಶದಲ್ಲೂ ಹೀಗೊಂದು ಪ್ರಚಾರ ನಡೆಸಬೇಕು. ಜನರು ತಮ್ಮ ಆಯ್ಕೆಗಳ ಬಗ್ಗೆ ಜಾಗೃತಿಗೊಳ್ಳಬೇಕು ಎನ್ನುವುದು ಆ ಪ್ರಚಾರದ ಆಶಯ. ಆದರೆ ಅದು ತಾವಂದುಕೊಂಡಷ್ಟು ಸುಲಭವಲ್ಲ ಎಂದು ಈಗ ತಿಳಿಯುತ್ತಿದೆ. ನಂಬಿಕೆಯ, ಧರ್ಮದ, ದೇವರ ಬೇರು ನಮ್ಮ ತಲೆಯಲ್ಲಿ ಎಷ್ಟು ಆಳಕ್ಕೆ ಇಳಿದಿದೆ ಎಂದು ತನ್ಮೂಲಕ ಅರಿವಿಗೆ ಬರುತ್ತಿದೆ.
ಹೀಗೆ ಆಳಕ್ಕೆ ಇಳಿಯುವುದರಲ್ಲಿ ನಮ್ಮ ವಿದ್ಯಾಭ್ಯಾಸ ಎಷ್ಟು ದೊಡ್ಡ ಕೆಲಸ ಮಾಡಿದೆ ಅನ್ನುವುದು ಹೊಸ ಸಂಗತಿಯೇನಲ್ಲ. ಅಮೇರಿಕದ ಶಾಲೆಗಳಲ್ಲಿ ಡಾರ್ವಿನನ ವಿಕಾಸವಾದದ ಜತೆಜತೆಗೆ ಧಾರ್ಮಿಕ ನಂಬಿಕೆಯಾದ “ಸೃಷ್ಟಿಕ್ರಿಯೆ”ಯನ್ನೂ ವಿಜ್ಞಾನವೆಂಬಂತೆ ಕಲಿಸಬೇಕೆಂಬ ಒತ್ತಡ ಅತಿಯಾಗಿದೆ! ದೇವರು ದಿಂಡರು ಎಂದರೆ ಜನ ನಂಬಲಾರರು ಎಂದು ತಿಳಿದಿರುವ ಈ ಆಸ್ತಿಕರು “intelligent design” ಎಂದು ಮಾತಾಡುತ್ತಿದ್ದಾರೆ. ವಿಜ್ಞಾನದಂತೇ ಬಟ್ಟೆ ತೊಟ್ಟ ಧಾರ್ಮಿಕ ನಂಬಿಕೆಯನ್ನು ಮುಂದೊಡ್ಡುತ್ತಿದ್ದಾರೆ!
ಆಸ್ಟ್ರೇಲಿಯದ ಪಬ್ಲಿಕ್ ಶಾಲೆಗಳಲ್ಲಿ ವಾರಕ್ಕೆ ಒಂದು ಗಂಟೆಗಿಂತ ಹೆಚ್ಚಾಗಿ “ಧಾರ್ಮಿಕ ಪಾಠ” ಇರಕೂಡದೆಂಬ ಕಾನೂನಿದೆ. ಅದೂ ಕೂಡ ತಂದೆ ತಾಯಂದಿರು ಲಿಖಿತ ಒಪ್ಪಿಗೆ ಸೂಚಿಸಿ ಪತ್ರ ಸಹಿಮಾಡಿ ಕೊಟ್ಟರೆ ಮಾತ್ರ. ಇಲ್ಲದಿದ್ದರೆ ಇಲ್ಲ. ಆದರೆ, ಈಗೀಗ ಚರ್ಚುಗಳು “ಸಾಂಸ್ಕೃತಿಕ ಚಟುವಟಿಕೆ” ಎಂಬ ಸೋಗಿನಲ್ಲಿ ಹಿಂಬಾಗಿಲಿನಿಂದ ನುಸುಳುವ ನೀಚ ಕೆಲಸಕ್ಕೆ ತೊಡಗಿವೆ. ಆ ಚರ್ಚುಗಳು ಮಕ್ಕಳಿಗೆ “spiritual guidance” ಕೊಡುವುದು ತಮ್ಮ ಕರ್ತವ್ಯ ಎಂದು ಬಗೆದಿದ್ದಾರಂತೆ. ಅದೂ ಪಬ್ಲಿಕ್ ಶಾಲೆಯಲ್ಲಿ ಕಲಿಯುವ (“ದಾರಿ ತಪ್ಪಿದ”!) ಮಕ್ಕಳಿಗೋಸ್ಕರವಂತೆ. ಇದರ ಬಗ್ಗೆ ಇತ್ತೀಚೆಗೆ ಒಂದು ವಿಚಿತ್ರ ಸಂಗತಿ ಹೊರಬಿತ್ತು. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆಯಾದ ನೈತಿಕ ಗುಣಗಳನ್ನು ಇವರ “ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ” ಹೇಳಿದ್ದಾರಂತೆ. ಈ ದ್ವಿಪಟ್ಟಿಯ ಅಪಾಯವನ್ನು ಬದಿಗಿರಸಿದರೆ ಅದೆಂತಾ ನಗೆಪಾಟಲಿನ ಸಂಗತಿ ಎಂದು ತಟ್ಟನೆ ತಿಳಿಯುತ್ತದೆ.
ಹೆಣ್ಣುಮಕ್ಕಳಿಗೆ ಗಂಡುಮಕ್ಕಳಿಗೆ
ಕೃತಜ್ಞತೆ ಕೃತಜ್ಞತೆ
ಔದಾರ್ಯ ಔದಾರ್ಯ
ನಿಯತ್ತು/ನಿಷ್ಠೆ ನಿಯತ್ತು/ನಿಷ್ಠೆ
ಸೈರಣೆ ಸೈರಣೆ
ತಾಳ್ಮೆ – ಬೇಕಾಗಿಲ್ಲ-
ನಮನೀಯತೆ – ಬೇಕಾಗಿಲ್ಲ-
ವಿಧೇಯತೆ – ಬೇಕಾಗಿಲ್ಲ-
ನಯ – ಬೇಕಾಗಿಲ್ಲ-
ಸಮಯಪ್ರಜ್ಞೆ – ಬೇಕಾಗಿಲ್ಲ-
ಅವಲಂಬನಾರ್ಹತೆ -ಬೇಕಾಗಿಲ್ಲ-
ಸಂಯಮ – ಬೇಕಾಗಿಲ್ಲ-
ಶ್ರದ್ಧೆ – ಬೇಕಾಗಿಲ್ಲ-
ಶಿಸ್ತು – ಬೇಕಾಗಿಲ್ಲ-
ಸ್ವ-ಹೆಜ್ಜೆ – ಬೇಕಾಗಿಲ್ಲ-
ಪ್ರತ್ಯುತ್ಪನ್ನತೆ – ಬೇಕಾಗಿಲ್ಲ-
ಜವಾಬ್ದಾರಿ – ಬೇಕಾಗಿಲ್ಲ-
-ಬೇಕಾಗಿಲ್ಲ- ನಮ್ರತೆ
-ಬೇಕಾಗಿಲ್ಲ- ನ್ಯಾಯವಂತಿಕೆ
-ಬೇಕಾಗಿಲ್ಲ- ಸತ್ಯನುಡಿಯುವುದು
-ಬೇಕಾಗಿಲ್ಲ- ದಯೆ
-ಬೇಕಾಗಿಲ್ಲ- ಕಾರ್ಯತತ್ಪರತೆ
ಹೆಣ್ಣುಮಕ್ಕಳು ಒಳ್ಳೆಯವರಾಗಲು ಒಟ್ಟು ಹದಿನಾರು ಗುಣಗಳು ಬೇಕಾಗಿದ್ದರೆ, ಒಳ್ಳೆಯ ಗಂಡುಮಕ್ಕಳಿಗೆ ಒಂಬತ್ತು ಗುಣಗಳು ಸಾಕು! ಬೇಕು/ಬೇಡಗಳ ಈ ಪಟ್ಟಿ ನೋಡಿದರೆ ಇವರ ತಲೆಯಲ್ಲಿ ನಮ್ಮ ಮುಂದಿನ ತಲೆಮಾರು ಹೇಗೆ ರೂಪುಗೊಳ್ಳಬೇಕೆಂದಿದೆ ಎಂಬುದು ನಿಮಗೆ ಅರ್ಥವಾಗುತ್ತದೆ. ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಈ ಮಾರ್ಗದರ್ಶನ ನೀಡುವ ಹಿಲ್‌ಸಾಂಗ್ ಎಂಬ ಚರ್ಚಿಗೆ ಹೋಗಿ ಕೂಡಾಡಿ ಬಂದಿದ್ದ. ಈಗಿನ ಪ್ರಧಾನಿ ನಾನೇನೂ ಕಡಿಮೆಯಿಲ್ಲ ಎಂಬಂತೆ ತಾನು “ಕ್ರಿಶ್ಚಿಯನ್ ಡೆಮಾಕ್ರಟ್” ಎಂದು ಒದರಿಕೊಂಡಿದ್ದ!
ಈ ಬಗೆಯ ಶಿಕ್ಷಣ/ಮಾರ್ಗದರ್ಶನ ಕ್ರಿಶ್ಚಯನ್ ಧರ್ಮಕ್ಕಷ್ಟೇ ಸೀಮಿತವೇನಲ್ಲ. ಎಲ್ಲ ಧರ್ಮದಲ್ಲೂ ಕಾಣುವ ಸಂಗತಿಯೆ ಮತ್ತು ಧರ್ಮಕ್ಕೇ ಮೂಲಭೂತವಾದ ಅಂಶ ಕೂಡ. ಭಾರತೀಯ ಮಠಗಳು ನಡೆಸುವ ಶಾಲೆಗಳಲ್ಲಿ ಮಕ್ಕಳಿಗೆ ಅವರ ಲಿಂಗದ ಆಧಾರದ ಮೇಲೆ ಕೆಲಸ ಹೇಳಿಕೊಡುತ್ತಾರೆನ್ನುವುದನ್ನು ಕೇಳಿಬಲ್ಲೆ. ಇತ್ತೀಚೆಗೆ ರಾಯಚೂರು ಶೇಷಗಿರಿದಾಸ ಹಾಡಿರುವ ಸೀಡಿಯೊಂದರಲ್ಲಿ ಕೇಳಿದ ಪುರಂದರ ದಾಸರ ಹಾಡು ಇದನ್ನೆಲ್ಲಾ ಮೀರಿಸುವಂತಿದೆ. “ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮಾ ಮಗಳೆ, ಶುದ್ಧಳಾಗಿ ಗಂಡನ ಒಡನೆ ಬಾಳಬೇಕಮ್ಮ” ಎಂಬ ಪಲ್ಲವಿಯಿರುವ ಹಾಡಲ್ಲಿ ಹೆಣ್ಣುಮಕ್ಕಳು ಹೇಗೆಲ್ಲಾ ಇರಬೇಕು ಎಂಬ ದೊಡ್ಡ ಪಟ್ಟಿಯೇ ಇದೆ.
ಅತ್ತೆಮಾವಗಂಜಿಕೊಂಡು ನಡೆಯಬೇಕಮ್ಮ/ಚಿತ್ತದೊಲ್ಲಭನಕ್ಕರೆಯನು ಪಡೆಯಬೇಕಮ್ಮ
ಹೊತ್ತುಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ/ಹತ್ತು ಮಂದಿಗೊಪ್ಪುವ ಹಾಗೆ ಉಳಿಯಬೇಕಮ್ಮಾ ಮಗಳೆ!
ಕೊಟ್ಟುಕೊಂಬುವ ನೆಂಟರ ಒಡನೆ ದ್ವೇಷಬೇಡಮ್ಮ/ಅಟ್ಟು ಉಂಬುವ ಕಾಲದಲ್ಲಿ ಆಟಬೇಡಮ್ಮ
ಹಟ್ಟಿಬಾಗಿಲಲ್ಲಿ ಬಂದು ನಿಲ್ಲಬೇಡಮ್ಮಾ/ಕಟ್ಟಿ ಆಳುವ ಗಂಡನ ಒಡನೆ ಸಿಟ್ಟು ಬೇಡಮ್ಮಾ ಮಗಳೆ!
ನೆರೆಹೊರೆಯವರಿಗೆ ನ್ಯಾಯ ಹೇಳಬೇಡಮ್ಮ/ದರ್ಪ ಕೋಪ ಮತ್ಸರವನ್ನು ಮಾಡಬೇಡಮ್ಮ
ಪರರ ನಿಂದಿಪ ಹೆಂಗಳರೊಡನೆ ಸೇರಬೇಡಮ್ಮ/ಗುರುಪುರಂದರ ವಿಠಲನ ಸ್ಮರಣೆ ಮರೆಯಬೇಡಮ್ಮಾ ಮಗಳೆ!
ಇಪ್ಪತ್ತೊಂದನೇ ಶತಮಾನದಲ್ಲಾದರೂ ನಮ್ಮ ಬದುಕು, ಸಮಾಜ ಹಾಗು ನೈತಿಕತೆಯನ್ನು ಈ ಆಸ್ತಿಕರ “ಕಪಿ”ಮುಷ್ಟಿಯಿಂದ ಬಿಡಿಸಬೇಕಾಗಿದೆ ಅನಿಸುವುದಿಲ್ಲವೆ?
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.