ಕನಸುಗಳಿಗೆ ನೂರು ರೆಕ್ಕೆ

ನನಗ್ಯಾಕೋ ನನ್ನ ಬಗ್ಗೆಯೇ ಅನುಮಾನ
ಯಾವ ಕಾಯಿಲೆ ನನಗೆ?!
ಕೂತಲ್ಲೇ ಕೂರಲಾಗುವುದಿಲ್ಲ
ನಿಂತಲ್ಲೆ ನಿಲ್ಲಲೂ ಆಗುತ್ತಿಲ್ಲ
ಆದರೆ ನಿಮ್ಮ ಗೆಸ್ ತಪ್ಪು
ಇದು ಆ ಕಾಯಿಲೆಗಳಲ್ಲಿ
ಯಾವುದೂ ಅಲ್ಲ…

ಮುಂಜಾವಿನ ಚುಮುಚುಮು
ಚಳಿಯಲ್ಲಿ ಸುರಿವ ಮಂಜಿಗೆ ಹೆದರಿ
ಬೆಚ್ಚಗೆ ಶೂನೊಳ ಸೇರಿದ ನಾಗರದಂತೆ
ಯಾವುದೋ ಅರಿವಿರದ ಅಜ್ಞಾತ
ಸ್ಥಳವೊಂದರಲ್ಲಿ ಚೆಚ್ಚಗೆ ಮಲಗುವ
ಜನರೇ ಇಲ್ಲದ ಭೂಮಿಯ ಮೇಲೆ
ಏಕಾಂಗಿ ಅಲೆಯುವ
ಸಣ್ಣ ಸಣ್ಣ ತುಂಬೆ ಹೂಗಳ ತನಿರಸವನ್ನು
ದುಂಬಿಯಾಗಿ ಹೀರುವ
ಯಾವ ಗುರುತ್ವಕ್ಕೂ ನಿಲುಕದೆ
ತೇಲಾಡಲು ಮನಸಾಗುವ
ಮನೋವೈಕಲ್ಯಕ್ಕೆ ಯಾವುದೇ ಹೆಸರಿರುವುದಿಲ್ಲ

ಎದೆಯೊಳಗೆ ನೂರು ಚಿಟ್ಟೆ
ರೆಕ್ಕೆ ಬಡಿಯುತ್ತವೆ
ಕರಾಳ ರಾತ್ರಿಯ ಸಂಚಿನ ಕನಸಿಗೆ
ಹೆದರಿ ಪತರಗುಡುತ್ತವೆ
ಕೃಷ್ಣನ ಸಂಚಿಗೆ ಬಲಿಯಾದ ಕರ್ಣನಂತೆ
ರೆಕ್ಕೆಗಳ ದಾನ ಮಾಡಿ
ಅಥವಾ ಕಳೆದುಕೊಂಡು
ಹೇಗೆ ಹೇಳುವುದೋ…
ಸಾವನ್ನೇ ತಂದುಕೊಳ್ಳುತ್ತವೆ

ಯಾವುದನ್ನು ದೊಡ್ಡದು ಎನ್ನುತ್ತೇವೋ
ಆ ದೊಡ್ಡತನ ಸುಮ್ಮನೇ ಬರುವುದಿಲ್ಲ
ಯಾವುದು ಶಕ್ತಿಯೋ ಅದು
ನಮ್ಮೊಳಗೇ ಇದೆ
ಯಾವುದು ನಮ್ಮ ಆಯ್ಕೆಯೋ
ಅದು ನಮ್ಮ ನಮ್ಮ ಮನೋವೈಕಲ್ಯದ ಫಲವೂ

ಇಲ್ಲವಾಗಿದ್ದರೆ…
ಕುರಿ ಮಂದೆಯಲ್ಲೊಂದು ಜಿಂಕೆ
ಕಣ್ಣರಳಿಸಲು ಸಾಧ್ಯ ಹೇಗೆ
ಚರ್ಮವನ್ನು ಕಳಚಿಕೊಳ್ಳುವ ಹಾವಿಗೆ
ಅದನ್ನು ಮರಳಿ ಪಡೆಯುವುದೂ ಗೊತ್ತು
ಕನಸುಗಳಿಗೆ ನೂರು ರೆಕ್ಕೆ
ನಾವೀಗ ನಕ್ಷತ್ರಗಳ ಚಾದರ ಹೊದ್ದು
ಮಲಗಬೇಕಿದೆ…

(ಕಲೆ: ರೂಪಶ್ರೀ ವಿಪಿನ್)