ತುಣುಕು ನಿಶ್ಯಬ್ದ ಹುಡುಕಿಕೊಂಡು..

ಹೌದು,
ನಿನ್ನ ಎದೆಯ ಬೀದಿಯಲಿ
ನಿತ್ಯ ಅಲೆಯುತ್ತೇನೆ
ನೀನು ಬೀಳಿಸಿಕೊಂಡು ಹೋದ
ಶಬ್ದವೊಂದು
ಇನ್ನೂ ಕುರುಹು ಕಾದಿರಿಸಿದೆ
ಆದರೆ
ನಿನ್ನ ಬೆರಳಿಗಂಟಿದ್ದ ತುಣುಕು
ನಿಶ್ಯಬ್ದಕ್ಕಾಗಿ ನಡೆಯುತ್ತಲೆ‌ ಇದ್ದೇನೆ..

ಬಿಸಿಲಕೋಲಿನ ತಂತುಗಳನು
ಎಳೆದುಕಟ್ಟಿ
ಮೀಟಿ ಹೊಮ್ಮಿಸಿದ ದನಿಯಲ್ಲಿ
ನೋವಿನ ನೂರು ಶಬ್ದವಿದ್ದರೂ
ಜಗತ್ತು ಕಿವುಡು..

ಮೊಳೆವ ಬೀಜಕ್ಕೂ ಇದೆ
ಒಂದು ಬಿಕ್ಕಳಿಕೆ
ಚಿಗುರ ತುಳಿಸಿಕೊಂಡ ಎಳೆ
ಎಸಳಿಗೂ ಇದೆ ನೋವ
ಕದಲಿಕೆ
ಹಾದಿ ಬದಿಯಲಿ ಬಿದ್ದ ಈ ಶಬ್ದಗಳು
ಎಷ್ಟೊಂದು ಅನಾಥ..

ರಂಗೋಲಿ ಇಡುವ ಕೈಗಳ
ಹಸಿರು ಬಳೆಯ ಗಲ್ ಗಲ್ ಶಬ್ದ
ಎರಡು ಚುಕ್ಕಿಗಳ ಮಧ್ಯೆ
ಉಳಿದ ಖಾಲಿ ಜಾಗದಲಿ
ದಾರಿ ತಪ್ಪಿ ನಿಂತು ಕಳವಳಿಸುತ್ತದೆ..

ಹಗಲಿಗೊಂದು ದನಿಯಿದೆ
ಇರುಳಿಗೊಂದು ನರಳಿಕೆಯಿದೆ
ಉರುಳುರುಳುವಾಗ
ಶಬ್ದಗಳು ಕಳಚಿ ಕಳಚಿ ಬಿದ್ದು
ನಡೆಯುವ ಹಾದಿಯಲ್ಲಿ ಬಿದ್ದು
ಅಂಗಾಲು ಚುಚ್ಚುತ್ತವೆ..

ಓಡಿ ಬರುವ ಅಲೆಗಳನು ಹಿಡಿದು
ನಿಲ್ಲಿಸಿ
ಗದರಿಸಿ, ಚುಪ್ ಎಂದು
ಸದ್ದು ಅಡಗಿಸಿ
ಅಲ್ಲೆ ಅಲ್ಲೆ ಮರಳ ಮೇಲೆ
ಎಲ್ಲಾ ಶಬ್ದಗಳನು ಒಟ್ಟಿ..
ಎಲ್ಲವನೂ ಅಲೆಗೆ ಒಪ್ಪಿಸಿ..

ಧ್ಯಾನಕೆ ಕೂತ ಕಡಲಿಗೊಂದು
ಭಿನ್ನಹ
ಅವಳ ಬೆರಳಿಗಂಟಿದ ನಿಶ್ಯಬ್ದವೊಂದನು
ದಡಕ್ಕೆ ಎಸೆದು ಬಿಡು..
ಶತಮಾನಗಳಿಂದ ಕಾದೆ ಇದ್ದೇನೆ
ಒಂದು ತುಣುಕು ನಿಶ್ಯಬ್ದಕ್ಕಾಗಿ..

(ಕಲೆ: ರೂಪಶ್ರೀ ವಿಪಿನ್)