ಹಾಸನದ ಚನ್ನರಾಯಪಟ್ಟಣದ ಬಳಿ ಹರಿಹರಪುರ ಅಂತ ಒಂದು ಸ್ಥಳವಿದೆ. ಅಲ್ಲೊಂದು ಹರಿಹರೇಶ್ವರನ ದೇವಾಲಯವಿದ್ದರೂ ಒಳಗೆ ದೇವರಿಲ್ಲ. ತ್ರಿಕೂಟೇಶ್ವರ ಅಂದರೆ ಮೂರು ಗರ್ಭಗುಡಿಗಳು ಒಂದು ನವರಂಗವನ್ನು ಹೊಂದಿರುತ್ತದೆ. ಅದರ ಪ್ರಕಾರ ಅಲ್ಲಿ ಮೂರು ಮೂರ್ತಿಗಳಿರಬೇಕಿತ್ತು. ಮುಖ್ಯ ದೇವರು ಹರಿಹರೇಶ್ವರ. ಇನ್ನೆರಡು ರಂಗನಾಥ ಮತ್ತು ಸರಸ್ವತಿಗೆ ಸೇರಿದ್ದು. ಆದರೆ ಇವತ್ತು ಮೂರೂ ಖಾಲಿ. ಎಲ್ಲಿ ಹೋದವು ಆ ಮೂರ್ತಿಗಳು ? ಅವು ಹರಿಹರಪುರದಿಂದ ೬೫೦೦ ಕಿ.ಮೀ ದೂರದಲ್ಲಿರುವ ಡೆನ್ಮಾರ್ಕಿನ ಕೋಪನ್ ಹೇಗನ್ ಮ್ಯೂಸಿಯಂನ ಏರ್ ಕಂಡೀಷನ್ ರೂಮಿನಲ್ಲಿ ತಣ್ಣಗೆ ಕುಳಿತಿವೆ. ಇಲ್ಲಿಂದ ಅಲ್ಲಿಗೆ ಹೋಗಿದ್ದಾದರೂ ಹೇಗೆ? ಇತಿಹಾಸಕಾರ ಪ್ರೊ. ಎಸ್. ಷೆಟ್ಟರ್ ಅವರ ಪುಸ್ತಕದಲ್ಲಿ ಇದರ ಬಗ್ಗೆ ದೀರ್ಘವಾಗಿ ಬರೆದಿದ್ದಾರೆ.
ಗಿರಿಜಾ ರೈಕ್ವ ಬರೆಯುವ ‘ದೇವಸನ್ನಿಧಿ’ ಅಂಕಣ ಬರಹ ಇಂದಿನ ಓದಿಗಾಗಿ.
ಒಂದು ಹಳೇ ಕಟ್ಟಡದ ಒಂದು ಕೋಣೆ. ಅದರ ತುಂಬಾ ಬಿದ್ದು ಚೆಲ್ಲಾಡುತ್ತಾ ಇದ್ದ ದೇವ ದೇವಿಯರ ವಿಗ್ರಹಗಳು, ಭಾರತದ ಯಾವ ಯಾವುದೋ ದೇವಾಲಯಗಳ ಭಾಗವಾಗಿದ್ದ ಶಿಲ್ಪಕಲೆಯ ತುಣುಕುಗಳು ಇಲ್ಲಿ ಒಂದರ ಮೇಲೊಂದು ಗುಡ್ಡೆ ಗುಡ್ಡೆಯಾಗಿ ಬಿದ್ದಿದ್ದವು. ಅವುಗಳ ಸುತ್ತಾ ಜೇಡ ಬಲೆ ನೇಯ್ದು ಅದನ್ನು ಯಾರಾದರೂ ಮುಟ್ಟಿ ತಿಂಗಳುಗಳೇ ಕಳೆದಿವೆ ಅನ್ನುವುದನ್ನು ಹೇಳುತ್ತಿತ್ತು. ಇನ್ನು ಕಟ್ಟಡದ ಹೊರಗೆ ದೊಡ್ಡ ಬಯಲಲ್ಲಿ ಆರು ಅಡಿ ಎತ್ತರದ ವಿಗ್ರಹಗಳಿಂದ ಸಪ್ತಮಾತೃಕೆಯರ ವಿಗ್ರಹಗಳ ತನಕ ನೂರಾರು ಶಿಲ್ಪಗಳು ಕೇಳುವವರಿಲ್ಲದೆ ನೆಲದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ನಾವು ಒಂದೆರಡು ಶಿಲ್ಪಗಳನ್ನು ಕಾರಿಗೆ ಹಾಕಿಕೊಂಡು ಬಂದಿದ್ದರೂ ಯಾರೂ ಕೇಳುವವರಿರಲಿಲ್ಲವೇನೋ ಎಂದು ಅನಿಸಿತು. ನಮಗೆ ಹೀಗೆ ಅನಿಸುವಂತೆ ಈ ವಿಗ್ರಹಗಳನ್ನು ಇರಿಸಿದ್ದಾರೆ ಎಂದಮೇಲೆ, ದರ್ಮಾರ್ಗವನ್ನೇ ಆರಿಸಿಕೊಂಡವರಿಂದ ಇವುಗಳನ್ನು ರಕ್ಷಿಸುವುದಾದರೂ ಹೇಗೆ.
ಅದು ಆಶಾಪುರಿ. ನಾನೊಮ್ಮೆ ಅಧ್ಯಯನದ ಸಲುವಾಗಿ ಭೋಪಾಲ್ ಸಮೀಪದ ಈ ಆಶಾಪುರಿ ಎಂಬ ಊರಿಗೆ ಹೋಗಿದ್ದೆ. ಅದೊಂದು ಪುಟ್ಟ ಊರು. ಅಲ್ಲಿ ಮೇಲೆ ಹೇಳಿದ ಜಾಗ ಆ ಊರಿನ ಪ್ರಾಚ್ಯವಸ್ತುಸಂಗ್ರಹಾಲಯ ಮತ್ತು ಪ್ರಾಚ್ಯವಸ್ತುಗಳ ಗೋದಾಮು. ಅದನ್ನು ನೋಡಿಕೊಳ್ಳಲು ಏಕೈಕ ವ್ಯಕ್ತಿ. ಅವನನ್ನು ನೋಡಿದರೆ ಬಹಳ ಸಂಬಳ ಬರುವಂತಿರಲಿಲ್ಲ. ಆದರೆ ಅವನೆಂದೂ ಕಳ್ಳತನದ ಕೆಟ್ಟ ಯೋಚನೆ ಮಾಡಿದವನಲ್ಲ. ಬದುಕಿನ ನಿಷ್ಠೆಯೆಂದರೆ ಅಂತಹುದು.
ಇದು ನಮ್ಮ ದೇಶದ ಪ್ರಾಚ್ಯವಸ್ತುಗಳ ಸಂಪತ್ತಿನ ಕಥೆ. ಅದನ್ನು ಅಂತಹ ಒಂದು ಕಲಾಕೃತಿಯನ್ನು ಮರುಸೃಷ್ಟಿಸಲು ಆಗದ ನಾವು ಅವುಗಳ ಬಗ್ಗೆ ತೋರುವ ನಿರ್ಲಕ್ಷ ನಿಜಕ್ಕೂ ಶೋಚನೀಯ. ೫೦೦೦೦ ಕ್ಕೂ ಹೆಚ್ಚಿನ ಶಿಲ್ಪಗಳು ಭಾರತದಿಂದ ಕಳ್ಳಸಾಗಾಣೆಯಾಗಿವೆ. ವೈಯಕ್ತಿಕ ಲಾಭದ ಆಚೆಗೆ ಹೊರಗೆ ಏನಾದರೆ ನಮಗೇನು ಅನ್ನುವ ಧೋರಣೆ. ಇವತ್ತಿಗೂ ಅನೇಕ ದೇವಾಲಯಗಳಿಂದ ವಿಗ್ರಹಗಳು ಕಾಣೆಯಾಗುತ್ತಿವೆ. ಅದೂ ಪೂಜೆ ನಡೆಯುವ ದೇವಾಲಯಗಳಿಂದ.
ಇನ್ನು ಪೂಜೆ ನಡೆಯದ ದೇವಾಲಯಗಳದ್ದು ಕೇಳುವುದೇ ಬೇಡ. ಒಂದು ಪಕ್ಷ ಕಳೆದ ವಿಗ್ರಹ ಸಿಕ್ಕರೆ ಅದು ಪ್ರಾಚ್ಯವಸ್ತು ಸಂಗ್ರಹಾಲಯಕ್ಕೋ , ಗೋದಾಮಿಗೋ ಹೋಗುತ್ತದೆಯೇ ವಿನಃ ಮತ್ತೆ ದೇವಾಲಯಕ್ಕೆ ಹೋಗುವುದಿಲ್ಲ.
ಬೆಂಗಳೂರಿನ ಸಮೀಪವಿರುವ ಮಣ್ಣೆ ಗಂಗರ ಒಂದು ಕಾಲದ ರಾಜಧಾನಿ. ಇವತ್ತಿಗೂ ಅಲ್ಲಿ ಅಗೆದರೆ ಅನೇಕ ವಸ್ತುಗಳು ಸಿಗುತ್ತಲೇ ಇವೆ. ಆದರೆ ಸರಕಾರದ ನಿರ್ಲಕ್ಷದಿಂದ ಅಲ್ಲಿನ ಭಗ್ನಾವಶೇಷಗಳಿಗೆ ಯಾವುದೇ ರಕ್ಷಣೆ ಇಲ್ಲ. ಈಗೊಂದೈದಾರು ವರ್ಷಗಳ ಹಿಂದೆ ಅಲ್ಲಿನ ಕೆರೆ ಏರಿಯ ಮೇಲೆ ಒಂದು ಸೂರ್ಯನ ವಿಗ್ರಹ ಇತ್ತಂತೆ. ಆಮೇಲೆ ಅದು ಕಳುವಾಯಿತಂತೆ. ಇವತ್ತಿಗೂ ಅದು ಹೇಗೆ ಕಳುವಾಯಿತು ಮತ್ತು ಯಾರು ಕದ್ದರು ಅಂತ ತಿಳಿದಿಲ್ಲ. ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಸೂರ್ಯನ ಆರಾಧನೆ ಮಾಡುವ ಸೌರ ಪಂಥವಿತ್ತು ಎಂಬ ಮಾತನ್ನು ಪುಷ್ಟೀಕರಿಸಲು ಪ್ರೊ. ಕ.ವೆಂ. ರಾಗೋಪಾಲರಂಥ ವಿದ್ವಾಂಸರು ಅದನ್ನು ಉಲ್ಲೇಖಿಸಿದ್ದುಂಟು.
ಇತ್ತೀಚೆಗೆ ಒಬ್ಬ ಹಿರಿಯ ವಿದ್ವಾಂಸರೊಡನೆ ಮಾತನಾಡುವಾಗ ಅವರು ಆಂಧ್ರದ ಕೃಷ್ಣ-ಸತ್ಯಭಾಮರ ಅರ್ಧನಾರೀಶ್ವರ ಮೂರ್ತಿಯ ಬಗ್ಗೆ ಹೇಳಿ ನನಗೆ ಅದನ್ನು ನೋಡಲು ಸಲಹೆ ನೀಡಿದರು. ನಾನು ಅಲ್ಲಿಗೆ ಹೋಗುವ ಇರಾದೆಯಿಂದ ಅದರ ಬಗ್ಗೆ ಗೂಗಲ್ ಮಾಡಿದಾಗ ತಿಳಿಯಿತು- ಅದು ಕಳುವಾಗಿ ೪-೫ ವರ್ಷಗಳೇ ಆಗಿವೆ ಎಂದು. ಅದರ ಬಗ್ಗೆ ʼದಿ ಹಿಂದೂʼ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿದ್ದು ಬಿಟ್ಟರೆ ಬೇರೆ ಎಲ್ಲೂ ವರದಿಯಾಗಿರಲಿಲ್ಲ. ನರಕಾಸುರ ವಧೆಯನ್ನು ತೋರಿಸುವ ಸುಂದರ ಮೂರ್ತಿ ಅದು. ಸತ್ಯಭಾಮ ನರಕಾಸುರನನ್ನು ಸಂಹಾರಮಾಡಿದ್ದು. ಮೂರ್ತಿಯ ಬಲಭಾಗ ಕೊಳಲನ್ನು ಹಿಡಿದ ಕೃಷ್ಣನ್ನು ತೋರಿದರೆ ಅದರ ಎಡ ಭಾಗ ಬಿಲ್ಲುಬಾಣ, ಪರಶು ಮತ್ತು ಪಾಶವನ್ನು ಹಿಡಿದಿರುವ ಸ್ತ್ರೀ. ತೀರಾ ಅಪರೂಪದ ಮೂರ್ತಿ ಅದು. ಈಗದು ಯಾವ ವಿದೇಶದ ಮ್ಯೂಸಿಯಂ ನಲ್ಲಿ ಇದೆಯೋ ಅಥವಾ ಯಾರ ಮನೆಯ ಅಲಂಕಾರದ ಭಾಗವಾಗಿದೆಯೋ? ಅಥವಾ ಅದು ಪಚ್ಚೆಯಿಂದ ಮಾಡಿದ ಮೂರ್ತಿ ಅಂತ ಹಣದಾಸೆಗೆ ಕದ್ದ ಕಳ್ಳ ಅದು ಸಾಮಾನ್ಯ ಕಲ್ಲು ಅಂತ ತಿಳಿದು ಒಡೆದು ಹಾಕಿದ್ದಾನೋ? ಗೊತ್ತಿಲ್ಲ.
ನಮ್ಮ ದೇಶದ ಪ್ರಾಚ್ಯವಸ್ತುಗಳ ಸಂಪತ್ತಿನ ಕಥೆ. ಅದನ್ನು ಅಂತಹ ಒಂದು ಕಲಾಕೃತಿಯನ್ನು ಮರುಸೃಷ್ಟಿಸಲು ಆಗದ ನಾವು ಅವುಗಳ ಬಗ್ಗೆ ತೋರುವ ನಿರ್ಲಕ್ಷ ನಿಜಕ್ಕೂ ಶೋಚನೀಯ. ೫೦೦೦೦ ಕ್ಕೂ ಹೆಚ್ಚಿನ ಶಿಲ್ಪಗಳು ಭಾರತದಿಂದ ಕಳ್ಳಸಾಗಾಣೆಯಾಗಿವೆ. ವೈಯಕ್ತಿಕ ಲಾಭದ ಆಚೆಗೆ ಹೊರಗೆ ಏನಾದರೆ ನಮಗೇನು ಅನ್ನುವ ಧೋರಣೆ.
ಹಾಸನದ ಚನ್ನರಾಯಪಟ್ಟಣದ ಬಳಿ ಹರಿಹರಪುರ ಅಂತ ಒಂದು ಸ್ಥಳವಿದೆ. ಅದೊಂದು ಪುಟ್ಟ ಹಳ್ಳಿ. ಅಲ್ಲೊಂದು ದೇವಾಲಯ. ಅದನ್ನು ನೋಡಲು ಹೋಗಿದ್ದೆ. ಹೊಯ್ಸಳರ ಕಾಲದ ಒಂದು ದೇವಾಲಯ ಅದು. ಅದರ ಸುತ್ತಲೂ ಹಸು ಕರುಗಳನ್ನು ಕಟ್ಟಿದ್ದರು. ಹುಡುಗರು ದೇವಾಲಯದ ಮೇಲೆ ಹತ್ತಿ ಅದರ ಶಿಖರದ ಮೇಲೆ ಏಣಿಯಂತೆ ಹತ್ತಿ ಇಳಿದು ಆಟ ಆಡುತ್ತಿದ್ದರು. ಹರಿಹರೇಶ್ವರನ ದೇವಾಲಯವಾದರೂ ಒಳಗೆ ದೇವರಿಲ್ಲ. ಖಾಲಿ ಗರ್ಭಗುಡಿ ಅದು. ತ್ರಿಕೂಟೇಶ್ವರ ಅಂದರೆ ಮೂರು ಗರ್ಭಗುಡಿಗಳು ಒಂದು ನವರಂಗವನ್ನು ಹೊಂದಿರುತ್ತದೆ. ಅದರ ಪ್ರಕಾರ ಮೂರು ಮೂರ್ತಿಗಳಿರಬೇಕಿತ್ತು. ಮುಖ್ಯ ದೇವರು ಹರಿಹರೇಶ್ವರ. ಇನ್ನೆರಡು ರಂಗನಾಥ ಮತ್ತು ಸರಸ್ವತಿಗೆ ಸೇರಿದ್ದು. ಆದರೆ ಇವತ್ತು ಮೂರೂ ಖಾಲಿ. ಎಲ್ಲಿ ಹೋದವು ಆ ಮೂರ್ತಿಗಳು?
ಅವು ಹರಿಹರಪುರದಿಂದ ೬೫೦೦ ಕಿ.ಮೀ ದೂರದಲ್ಲಿರುವ ಡೆನ್ಮಾರ್ಕಿನ ಕೋಪನ್ ಹೇಗನ್ ನ ಮ್ಯೂಸಿಯಂನ ಏರ್ ಕಂಡೀಷನ್ ರೂಮಿನಲ್ಲಿ ತಣ್ಣಗೆ ಕುಳಿತಿವೆ. ಇಲ್ಲಿಂದ ಅಲ್ಲಿಗೆ ಹೋಗಿದ್ದಾದರೂ ಹೇಗೆ ? ಇತಿಹಾಸಕಾರ ಪ್ರೊ. ಎಸ್. ಷೆಟ್ಟರ್ ಅವರ ಪುಸ್ತಕದಲ್ಲಿ ಇದರ ಬಗ್ಗೆ ದೀರ್ಘವಾಗಿ ಬರೆದಿದ್ದಾರೆ. ಅದರ ಕಥೆ ಹೀಗಿದೆ.
೧೮೯೪ ರ ಸ್ವಾತಂತ್ಯಪೂರ್ವದ ಕಾಲ. ಡೇನಿಷ್ ಮಿಷನರಿಯಾಗಿದ್ದ ಲೆವೆಂತಾಲ್ ತಮಿಳುನಾಡಿನ ವೆಲ್ಲೂರಿನಲ್ಲಿ ಕೆಲಸ ಮಾಡುತ್ತಾಇದ್ದ. ಅವನು ದಕ್ಷಿಣ ಭಾರತದುದ್ದಕ್ಕೂ ಓಡಾಡುತ್ತಾ ಇದ್ದ. ಹಾಗೆ ತಿರುಗುವಾಗ ಒಮ್ಮೆ ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನಕ್ಕೆ ಬರುತ್ತಾನೆ. ದೇವಾಲಯ ಕಂಡು ಅವನು ಬೆರಗಾಗುತ್ತಾನೆ. ಅಂತಹ ಅದ್ಭುತ ಕೆತ್ತನೆಗಳನ್ನು ನೋಡಿ ಇವನ್ನು ಅವಕಾಶ ಸಿಕ್ಕರೆ ತನ್ನೂರಿಗೆ ಸಾಗಿಸಬೇಕು ಎಂದುಕೊಳ್ಳುತ್ತಾನೆ. ಆದರೆ ಅಲ್ಲಿ ಯಾವ ಅವಕಾಶ ಕಾಣುವುದಿಲ್ಲ. ಅಲ್ಲಿಂದ ತುಸು ದೂರದಲ್ಲಿರುವ ಕೇದಾರೇಶ್ವರ ದೇವಸ್ಥಾನಕ್ಕೆ ಬರುತ್ತಾನೆ. ಅದರ ಭಗ್ನಾವಶೇಷಗಳನ್ನು ನೋಡುತ್ತಾನೆ. ತಟ್ಟೆ ತುಂಬಾ ಸಿಹಿ ತಿಂಡಿ ತಂದು ಮುಂದೆ ಇಟ್ಟರೆ ಅಗೋ ಹಾಗೇ ಅವನಿಗೆ ಖುಷಿಯಾಗುತ್ತೆ. ಅವುಗಳಲ್ಲಿ ಕೆಲವನ್ನಾದರೂ ತಾನು ತನ್ನೂರಿಗೆ ಸಾಗಿಸಬಹುದು ಎಂದುಕೊಳ್ಳುವುದರಲ್ಲಿ ಸ್ಥಳೀಯರು ಹಾಗೆ ಮಾಡಲು ಸಾಧ್ಯವಿಲ್ಲ . ಇದು ಮೈಸೂರು ಸಂಸ್ಥಾನಕ್ಕೆ ಸೇರಿದ್ದು . ಅವರೂ ಇದನ್ನು ದುರಸ್ತಿ ಮಾಡುತ್ತಾ ಇದ್ದಾರೆ ಅಂದು ಹೇಳುತ್ತಾರೆ.
ಅವನು ಸುಮ್ಮನಾಗಲಿಲ್ಲ. ಹಾಸನದ ಡಿ ಸಿ ಆಫೀಸಿಗೆ ಹೋಗಿ ಅಲ್ಲಿನ ಡಿ.ಸಿ ಯನ್ನು ಕೇಳುತ್ತಾನೆ. ಅವರು ಅದು ಸಾಧ್ಯವಿಲ್ಲ ಎಂದ ಮೇಲೆ ಅವರನ್ನು ಅಲ್ಲಿನ ಹೂದೋಟದಲ್ಲಿ ಇರುವ ಒಂದು ವಿಗ್ರಹವನ್ನಾದರೂ ಕೊಡಿರೆಂದು ಕೇಳಿಪಡೆದು ಅದನ್ನು ಡೆನ್ಮಾರ್ಕಿಗೆ ಸಾಗಿಸುತ್ತಾನೆ. ಆನಂತರ ಹೊಯ್ಸಳರ ದೇವಾಲಯಗಳಾದ ಕೋರವಂಗಲ, ಹಿರೆಕಡಲೂರು, ಹರಿಹರಪುರ ಮುಂತಾದ ಕಡೆಯಲ್ಲೆಲ್ಲಾ ಸಂಚರಿಸಿ ಅವುಗಳ ಬಗ್ಗೆ ಮಾಹಿತಿ ಕೂಡಿಹಾಕುತ್ತಾನೆ. ಅದೆಲ್ಲಾ ತನ್ನೂರಿನ ಮ್ಯೂಸಿಯಂ ಗೆ ಎಂತಹ ಒಳ್ಳೆಯ ವಸ್ತುಗಳು ಎಂದು ಅವನಿಗೆ ಅನಿಸುತ್ತದೆ.
ಹರಿಪುರದಲ್ಲಿ ದೇವಾಲಯಗಳಲ್ಲಿ ಪೂಜೆ ನಡೆಯದೆ ಇದ್ದದ್ದು ಅವನಿಗೆ ಇನ್ನೂ ಸುಲಭವಾಯಿತು. ಡಿಸಿ ಆಫೀಸಿನಲ್ಲಿ ಕೋರಿಕೆ ಸಲ್ಲಿಸಿ ಪಡೆದು, ತಾನು ಕಳಿಸಿದ್ದ ಒಂದು ಮೂರ್ತಿಗೆ ಡೆನ್ಮಾರ್ಕಿನಿಂದ ಬಂದ ಧನ್ಯವಾದದ ಪತ್ರದೊಂದಿಗೆ ಮೈಸೂರಿನ ಅಧಿಕಾರಿಗಳನ್ನು ಭೇಟಿ ಮಾಡುತ್ತಾನೆ. ಅವರನ್ನು ಒಲಿಸಿಕೊಂಡು ಕೆಲವು ಶಿಲ್ಪಗಳನ್ನು ಡೆನ್ಮಾರ್ಕಿನ ಮ್ಯೂಸಿಯಂ ಗೆ ತೆಗೆದುಕೊಂಡು ಹೋಗಲು ಅವರಿಂದ ಒಪ್ಪಿಗೆ ಪಡೆಯುತ್ತಾನೆ. ಆಮೇಲೆ ೩೫ ಎತ್ತಿನ ಗಾಡಿಗಳಲ್ಲಿ೧೦೦ ಜನ ಕೂಲಿಗಳ ಸಹಾಯದಿಂದ ಹಳೆಬೀಡು, ಕೋರವಂಗಲ, ಹಿರೇಕಡಲೂರು, ಹರಿಹರಪುರ ಮುಂತಾದ ಊರುಗಳಿಂದ ತನಗೆ ಸಾಧ್ಯವಾದಷ್ಟೂ ವಿಗ್ರಹಗಳನ್ನು ಲೂಟಿ ಮಾಡಿಕೊಂಡು ಮದ್ರಾಸಿಗೆ ಕಳಿಸುತ್ತಾನೆ. ಈಗ ಸುಮಾರು ೪೧ ಶಿಲ್ಪಗಳು ಅಲ್ಲಿಂದ ಡೆನ್ಮಾರ್ಕಿಗೆ ಪ್ರಯಾಣ ಬೆಳೆಸಿ ಅಲ್ಲಿನ ಮ್ಯೂಸಿಯಂನಲ್ಲಿ ಕುಳಿತಿವೆ.
ಲೆವೆಂತಾಲ್ ತನ್ನ ದಿನಚರಿಯಲ್ಲಿ ಹಿರೆಕಡಲೂರಿನ ಒಂದು ಘಟನೆಯನ್ನು ಬರೆದಿದ್ದಾನೆ. ಅಲ್ಲಿನ ರಂಗನಾಥನನ್ನು ಗರ್ಭಗುಡಿಯಿಂದ ಕಿತ್ತು ಗಾಡಿಗೆ ತುಂಬುವಾಗ ಊರಿನ ಹೆಂಗಸು ʼಗೋವಿಂದ ಗೋವಿಂದʼ ಅಂತ ಯಾರೋ ಸತ್ತು ಹೋದಂತೆ ಜೋರಾಗಿ ಅಳುತ್ತಿದ್ದುದನ್ನು ದಾಖಲಿಸುತ್ತಾನೆ. ಮತ್ತೊಂದು ಘಟನೆಯಲ್ಲಿ ಹೇಗೆ ತಾನು ೨ ರೂಪಾಯಿ ಮತ್ತು ಒಂದು ಕನ್ನಡಕವನ್ನು ಕೊಟ್ಟು ಒಬ್ಬ ಹಳ್ಳಿಯವನಿಂದ ಸಪ್ತಮಾತೃಕೆಯರಿದ್ದ ಒಂದು ಶಿಲ್ಪದ ಪ್ಯಾನಲ್ ಅನ್ನು ಖರೀದಿಸಿದೆ ಅಂತನೂ ಬರೆದುಕೊಂಡಿದ್ದಾನೆ.
ಅವೆಲ್ಲ ಡೆನ್ಮಾರ್ಕಿನ ಮ್ಯೂಸಿಯಂನಲ್ಲಿ ಇದೆ ಅಂತ ಎಲ್ಲರಿಗೂ ಗೊತ್ತು. ಅವು ವಾಪಾಸ್ ಬರುವುದು ಹೇಗೆ? ಊರ ಜನ ಒಗ್ಗೂಡಿ ಮತ್ತೆ ವಾಪಾಸ್ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಹಿಂದೆ ಸರಕಾರಗಳ ಪ್ರಬಲ ಇಚ್ಛಾಶಕ್ತಿ, ಸಹಭಾಗಿತ್ವವಂತೂ ಅತ್ಯಗತ್ಯ.
ಇದು ಒಂದು ಊರಿನ ಮ್ಯೂಸಿಯಂ ಪಾಲಾದ ಶಿಲ್ಪಗಳ ಕಥೆ. ಹೀಗೇ ಅನೇಕ ಶಿಲ್ಪಗಳು ಜಗತ್ತಿನಾದ್ಯಂತ ಇರುವ ಅನೇಕ ಮ್ಯೂಸಿಯಂಗಳ ಪಾಲಾಗಿವೆ. ಇದರ ಹಿಂದೆ ದೊಡ್ಡ ಕ್ರಿಮಿನಲ್ಗಳ ಜಾಲವೇ ಇದೆ. ದೇವಾಲಯಗಳಿಂದ ಕದಿಯುವುದರಿಂದ ಹಿಡಿದು , ಅದಕ್ಕೆ ಬೇಕಾದ ಎಲ್ಲಾ ಸುಳ್ಳು, ಫೇಕ್ ದಾಖಲೆಗಳ ಸಹಿತ ಹಡಗು ಹತ್ತಿಸುವ ತನಕ ಎಲ್ಲವೂ ಇಲ್ಲಿನ ಅಧಿಕಾರಿಗಳ ಮೂಗಿನ ಕೆಳಗೇ ನಡೆಯುತ್ತದೆ. ಅದಕ್ಕೆ ಒಳಗಿನವರ ಸಹಾಯವೂ ಇದ್ದೇ ಇರುತ್ತದೆ, ಆಮೇಲೆ ಅವೆಲ್ಲಾ ಮಿಲಿಯನ್ ಗಟ್ಟಲೆ ಹಣಕ್ಕೆ ಮಾರಾಟವಾಗುತ್ತವೆ. ಸರಕಾರಗಳ ಸಂಸ್ಕೃತಿ ಇಲಾಖೆ, ಆರ್ಕಿಯಾಲಜಿ ಇಲಾಖೆಯಲ್ಲಿರುವ ಸಿಬ್ಬಂದಿಗೆ ಸಾಂಸ್ಕೃತಿಕ ಸಂಪತ್ತಿನ ರಕ್ಷಣೆ, ಅವುಗಳ ವಿವರೌಾದ ವಿಡಿಯೋ ಮಾಡಿ ದಾಖಲೀಕರಿಸುವುದು, ಈ ದೇವಾಲಯ-ಶಿಲ್ಪಗಳ ಬಗ್ಗೆ ಕಲರ್ ಚಿತ್ರಗಳಿರುವ ಪುಟ್ಟಪುಟ್ಟ ಪುಸ್ತಕಗಳ ಮುದ್ರಣ ಮಾಡುವುದು ಮತ್ತು ಅದನ್ನು ದೊಡ್ಡ ಸಂಖ್ಯೆಯಲ್ಲಿ ಮುದ್ರಿಸಿ ಸಾಮಾನ್ಯಜನರಿಗೆ ಹಂಚುವ ಕೆಲಸ ಮಾಡಬೇಕಾಗಿದೆ. ಸಾಮೂಹಿಕ ಜಾಗೃತಿ ನಮ್ಮ ಅವಿಸ್ಮರಣೀಯ ಸಾಂಸ್ಕೃತಿಕ ಸಂಪದವನ್ನು ಜತನಮಾಡಿಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ತಮಿಳುನಾಡಿನಲ್ಲಿ ಚೋಳರ ಕಾಲದ, ಅತ್ಯಂತ ಬೆಲೆಬಾಳುವ ಕಂಚು ಮತ್ತು ಇತರ ಶಿಲ್ಪಗಳನ್ನು ಹೇಗೆ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಅನ್ನುವುದರ ಬಗ್ಗೆಯೆ ಕೆ. ವಿಜಯ್ ಕುಮಾರ್ ಎಂಬುವರು ʼದಿ ಐಡಲ್ ಥೀಫ್ʼ ಎಂಬ ಪುಸ್ತಕವನ್ನೇ ಬರೆದಿದ್ದಾರೆ. ಅದರಲ್ಲಿ ಕಳ್ಳಸಾಗಾಣಿಕೆ ಮಾಡುವ ಇಹ ಪರ ವೃತ್ತಾಂತವನ್ನ ವಿವರವಾಗಿ ಬರೆದು ಅದರಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪೊಲೀಸರ ಸಹಾಯದಿಂದ ಹೇಗೆ ಅವನನ್ನು ಬಂಧಿಸಲಾಯಿತು ಅನ್ನುವುದನ್ನು ಓದಬಹುದು. ವಿಜಯ್ ಕುಮಾರ್ ಒಂದು ಕಾರ್ಪೊರೇಟ್ ಕೆಲಸದಲ್ಲಿರುವವರು. ಆದರೆ ಅವರು ಮತ್ತವರ ಸಂಗಡಿಗರು ಮಾಡಿದ ಸ್ವಯಂಸೇವಾ ಸಂಶೋಧನೆಯ ಸಹಾಯದಿಂದ ಅನೇಕ ಬೆಲೆಬಾಳುವ ವಿಗ್ರಹಗಳು ಭಾರತಕ್ಕೆ ವಾಪಸ್ಸು ಬಂದಿವೆ. ಅಲ್ಲದೆ ಇವರ ನಿರಂತರ ಪ್ರಯತ್ನದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ಜಾಲವೂ ಸಾಕ್ಷಿ ಸಹಿತ ಸಿಕ್ಕಿಬಿದ್ದಿದೆ. ಈ ಕೆಲಸವನ್ನು ಅವರು ಮತ್ತು ಅವರ ಸಂಗಡಿಗರು ಸೇರಿಕೊಂಡು ಕಟ್ಟಿದ್ದ ʻಪ್ರೈಡ್ ಇಂಡಿಯಾʼ ಎಂಬ ಸಂಸ್ಥೆಯ ಮೂಲಕ ಮಾಡಿದರು.
ಪರಮಾತ್ಮನ ಸೃಷ್ಟಿಯಲ್ಲಿ ಮತ್ತು ನಿಸರ್ಗವಿವೇಕದಲ್ಲಿ ಒಂದು ಬಂದು ಇದ್ದು ನಾಶವಾಗುವ ಪ್ರಕ್ರಿಯೆ ಸಾಮಾನ್ಯ. ಆದರೆ ಸೃಷ್ಟಿ-ಸ್ಥಿತಿ- ಸಂಹಾರದ ದೊಡ್ಡ ತತ್ತ್ವ ಇಂಥ ಕಡೆಗಳಲ್ಲಿ ಕೆಲಸಕ್ಕೆ ಬರುವುದಿಲ್ಲ. ಇಲ್ಲಿ ಬೇಕಾದದ್ದು ಪ್ರಬಲ ಇಚ್ಛಾಶಕ್ತಿ ಮತ್ತು ಜನಜಾಗೃತಿ. ಇವತ್ತು ವಿಡಿಯೋಗಳು ಎಷ್ಟು ಪ್ರಬಲ ಮಾಧ್ಯಮವಾಗಿ ತಲೆಎತ್ತಿವೆ. ಅದರಲ್ಲಿ ವಿಶ್ವದ ವಿವಿಧ ಸಂಸ್ಕೃತಿಗಳ ಬಗ್ಗೆ ತಿಳಿದುಕೊಳ್ಳಲು ಬೇಕಾದ ವಿಷಯ ಸಂಪತ್ತು ಇದೆ. ಅದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯ ಮ್ಯೂಸಿಯಂ ಇಲಾಖೆ, ಕೇಂದ್ರ ಮ್ಯೂಸಿಯಂ ಇಲಾಖೆ, ವಾರ್ತಾ ಪ್ರಚಾರ ಇಲಾಖೆ -ಇತ್ಯಾದಿ ಸಂಸ್ಥೆಗಳು ಜಂಟಿಯಾಗಿ ಒಂದು ವೈಜ್ಞಾನಿಕ ಯೋಚನೆ ರೂಪಿಸಿ ನಮ್ಮ ನಾಡಿನ ದೇವಾಲಯಗಳನ್ನು ರಕ್ಷಿಸುವುದರೊಂದಿಗೆ ಅಲ್ಲಿರುವ ಒಂದೊಂದು ಕಲ್ಲು ಅಲ್ಲೇ ಉಳಿಯುವಂತೆ ನೋಡಿಕೊಳ್ಳಬೇಕು. ಭಿನ್ನ ವಿಗ್ರಹಗಳ ಮರುಪೂಜೆಯ ಕುರಿತು ಕೂಡ ಪಂಡಿತರು, ಭಕ್ತರು, ಅಧಿಕಾರವರ್ಗದ ನಡುವೆ ಮುಕ್ತಮನಸ್ಸಿನ ಚರ್ಚೆ ನಡೆದು ಪೂಜಾ ವಿಷಯವನ್ನು ನಮ್ಮ ಯುಗಧರ್ಮಕ್ಕೆ ಮತ್ತು ಸಾಂಸ್ಕೃತಿಕ ಸಂಕಟಗಳಿಗೆ ಪರಿಹಾರ ರೂಪವಾಗಿ ರೂಪಿಸಿಕೊಳ್ಳಲೇಬೇಕಾದ ತುರ್ತು ನಮ್ಮ ಮುಂದಿದೆ.
ಇದೊಂದು ಸತತವಾದ ಸಾಂಸ್ಕೃತಿಕ ಹೋರಾಟ.
ಗಿರಿಜಾ ರೈಕ್ವ ವೃತ್ತಿಯಲ್ಲಿ ಕಾರ್ಪೋರೇಟ್ ರಿಯಲ್ ಎಸ್ಟೇಟ್ ಮತ್ತು ಫೆಸಿಲಿಟಿಸ್ ಉದ್ಯೋಗಿ. ಅಲೆದಾಟ, ತಿರುಗಾಟ, ಹುಡುಕಾಟ ಆಸಕ್ತಿ ಮತ್ತು ರಂಗಭೂಮಿಯಲ್ಲಿ ಒಲವು ಹೊಂದಿದ್ದಾರೆ.