ಎತ್ತರದ ದನಿಯಲ್ಲಿ ಮಾತಾಡುವ ಆಂಗ್ ಸಾನ್ ಸೂ ಚಿಯನ್ನು ಹಿಂದೆ ಕೇಳಿದ್ದ ನನಗೆ – ಮೊನ್ನೆ ಬಿಡುಗಡೆಯ ನಂತರದ ಸಂದರ್ಶನವೊಂದು ಕೇಳಿದಾಗ – ಆ ದನಿಗೆ ವಯಸ್ಸಾದ ಕಳೆ ಬಂದಿದೆ ಅನಿಸಿತು. ಈಗಲೂ ಪ್ರಶ್ನೆಗಳಿಗೆ ಕ್ಷಣ ತಡೆದು ಯೋಚಿಸಿ ಉತ್ತರಿಸುವ ಪರಿ ನಿಮ್ಮನ್ನು ಸೆಳೆಯುತ್ತದೆ. ಆ ತಡೆದ ಕ್ಷಣದಲ್ಲಿ, ಏನು ಹೇಳಿದರೆ ತಪ್ಪಾಗಬಹುದು ಎಂಬ ಆತಂಕವೂ ಇದೆಯೇನೋ ಅನಿಸುತ್ತದೆ. ಅಷ್ಟರಲ್ಲಿ ಬರುವ ಉತ್ತರ ಅದನ್ನು ಪೂರ್ಣವಾಗಿ ನಿರಾಕರಿಸಿದಂತೆ ಅನಿಸುತ್ತದೆ.
ಅಮಿತಾವ್ ಘೋಷ್ ಬರೆದ “at large in Burma” ಎಂಬ ದೀರ್ಘ ಪ್ರಬಂಧವೊಂದನ್ನು ಈ ಹಿಂದೆ ಓದಿದ್ದೆ. ಘೋಷರಿಗೆ ಬರ್ಮಾದ ಜತೆ ಹಲವು ವಯ್ಯುಕ್ತಿಕ ಕೊಂಡಿಗಳು ಇವೆ. ಅವರ “The Glass Palace” ಕಾದಂಬರಿ – ಬರ್ಮಾದ ವಸಾಹತು ಅನುಭವವವನ್ನು ಬರ್ಮಾದ ಕಡೆಯ ರಾಜನ ಗಡಿಪಾರಿನ ಮೂಲಕ, ಅವನ ಮಕ್ಕಳು-ಮರಿಮಕ್ಕಳ ಸಂಚಾರಗಳ ಮೂಲಕ ಹೇಳುತ್ತದೆ. ಘೋಷರ ಅಂತಹ ನಂಟಿನಿಂದಾಗಿಯೇ ಅವರ ಪ್ರಬಂಧ ಬರ್ಮಾದ ಬಗ್ಗೆ ಹಲವು ಹೊಳಹುಗಳನ್ನು ಕೊಡುತ್ತದೆ. ಸೂ ಚಿಯ ಬಿಡುಗಡೆಯ ಈ ಹೊತ್ತಲ್ಲಿ ಘೋಷರ ಆ ಪ್ರಬಂಧವನ್ನು ಮತ್ತೆ ಓದಬೇಕು ಅನಿಸಿತು. ಓದತೊಡಗಿದೆ. ಜಗತ್ತಿನ ಕೆಲವು ವಿದ್ಯಮಾನಗಳನ್ನು ಅರಿಯಲು, ಅರ್ಥಮಾಡಿಕೊಳ್ಳಲು ಹೀಗೆ ಮಾಡಬೇಕಾಗುತ್ತದೆ.
ಬಂಧನದಲ್ಲಿದ್ದಾಗ ಬಿಬಿಸಿ ರೇಡಿಯೋ ಕೇಳುತ್ತ ಜಗತ್ತಿನ ಆಗುಹೋಗನ್ನು ಗ್ರಹಿಸುತ್ತಿದ್ದ ಸೂ ಚಿ ಈಗ ಬಿಡುಗಡೆಯ ನಂತರ ಬಿಬಿಸಿಗೆ ಕೃತಜ್ಞತೆ ಸಲ್ಲಿಸಿದಳು. ಬಿಬಿಸಿಯ ಸಂದರ್ಶನಕಾರ – “ನಿಮ್ಮನ್ನು ಮತ್ತೆ ಬಂಧಿಸಬಹುದು ಎಂಬ ಭಯವಿದೆಯೇ?” ಎಂದು ಕೇಳಿದಾಗ – ಎಂದಿನಂತೆ ಕ್ಷಣ ತಡೆದು – “ಭಯವಿಲ್ಲ – ಆದರೆ ಆ ಸಾಧ್ಯತೆ ಇದ್ದೇ ಇದೆ. ಹೊರಗಿದ್ದು ಬರ್ಮಾಕ್ಕಾಗಿ ಕೈಲಾದಷ್ಟು ಕೆಲಸ ಮಾಡುವಂತೆಯೇ, ಬಂಧನದಲ್ಲೂ ಕೈಲಾದಷ್ಟು ಮಾಡುತ್ತೇನೆ. ಅಷ್ಟೆ.” ದನಿ ದಿಟ್ಟವಾಗಿತ್ತು, ಪಳಗಿದಂತಿತ್ತು. ಘೋಷರು ತಮ್ಮ ಪ್ರಬಂಧದಲ್ಲಿ ಆಕೆಯನ್ನು “ಬರ್ಮಾ ಎನ್ನಬೇಕೋ ಮಯನ್ಮಾರ್ ಎನ್ನಬೇಕೋ?” ಎಂದು ಕೇಳಿದಾಗ ಈ ಹೆಸರು ಬದಲಿಸುವುದು ತನಗೇಕೋ ಇಷ್ಟವಿಲ್ಲ. ಬ್ರಿಟೀಷರು ಇಟ್ಟ ಬರ್ಮಾವೇ ಇರಲಿ ಏನೀಗ ಎಂಬರ್ಥ ಬರುವಂತೆ ಹೇಳಿದ್ದರು. ಹೆಸರು ಬದಲಿಸಿ ಸಂತೃಪ್ತರಾಗುವುದಕ್ಕಿಂತ ಹೆಚ್ಚಿನ ಆಳದ ಒತ್ತಡಗಳತ್ತ ಬೊಟ್ಟುಮಾಡುವಂತಹ ಉತ್ತರ ಅನಿಸಿತು.
ಸೂ ಚಿಯ ವಯ್ಯುಕ್ತಿಕ ನೋವು, ಸಂಕಟ, ಮಕ್ಕಳು ಮೊಮ್ಮಕ್ಕಳ ಜತೆಗಿರಲಾರದ ಸಂಕಷ್ಟಗಳೆಲ್ಲಾ ವಿವರವಾಗಿ ದಾಖಲಾಗಿವೆ. ಅವೆಲ್ಲವುಗಳ ನಡುವೆಯೂ ಆಕೆ ಪ್ರಜಾಪ್ರಭುತ್ವಕ್ಕಾಗಿ ಸೆರೆಯಲ್ಲಿರಲು ಮಾಡಿಕೊಂಡ ಆಯ್ಕೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಹೊರಗೆ ನಿಂತು ಹೆಚ್ಚು ಸಾಧಿಸಬಹುದಿತ್ತು ಎಂದು ಕೆಲವರು ಹೇಳಿದರೆ, ಒಳಗಿರುವುದು ಸೂ ಚಿಯ ಸಾತ್ವಿಕ ಶಕ್ತಿಯ ದ್ಯೋತಕ ಎಂಬಂತ ಮಾತುಗಳನ್ನು ಇನ್ನಿತರರು ಹೇಳುತ್ತಾರೆ. ಸೂ ಚಿ ಒಳಗಿದ್ದೂ ಹೊರಗಿನ ಜನರನ್ನು ಚಿಂತನೆಗೆ ಹಚ್ಚಿದ್ದು ಈ ಎರಡೂ ಮಾತುಗಳ ನಡುವೆ ನಿಲ್ಲುವ ನಿಜ ಅನಿಸುತ್ತದೆ. ಹೊರಗಿರುವ ದಲಾಯಿ ಲಾಮ ಟಿಬೆಟ್ಟಿಗೆ ಏನು ತಂದುಕೊಟ್ಟರು ಎಂಬ ಪ್ರಶ್ನೆ ಮನಸ್ಸಿನಲ್ಲಿ ಸುಳಿದಾಡುತ್ತದೆ. “ದಾ ಸೂ ಚಿ” ಎಂದು ಬರ್ಮಾದ ಜನತೆಗೆ ಪ್ರೀತಿಯ ಅತ್ತೆಯಾದ ಈಕೆ ಒಳಗಿದ್ದು ಮಾಡಿದ್ದು ಸಾಕೇ ಎನಿಸುತ್ತದೆ. ಅದೂ ಕೂಡ ಅಂತಹ ಒಂದು ಉತ್ತರಿಸಿಕೊಳ್ಳಬೇಕಾದ ಪ್ರಶ್ನೆಯೇ.
ಸರ್ವಾಧಿಕಾರದ ಅಡಿಯಲ್ಲಿ ನಲುಗುವ ಜನತೆಯನ್ನು ಜಡವಾಗಿದ್ದಾರೇನೋ ಅಂದುಕೊಳ್ಳುತ್ತೇವೆ. ಅವರ ಜಡತೆಯೇ ಸರ್ವಾಧಿಕಾರಕ್ಕೆ ಮೂಲ ಕಾರಣ ಎಂಬಂತಹ ಮಾತುಗಳನ್ನೂ ಕೇಳಿರುತ್ತೇವೆ. ಸೂ ಚಿಯ ಕತೆ ಅದನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತದೆಯೇನೋ ಅನಿಸುತ್ತದೆ. ವೀರಾವೇಷದ ಹೋರಾಟವಿಲ್ಲದಿದ್ದರೆ – ಆ ಜಾಗವನ್ನು ಜಡತೆ ಆಕ್ರಮಿಸಿದೆ ಎಂಬ ತಿಳವಳಿಕೆಯನ್ನು ಒರೆಗೆ ಹಚ್ಚಲು ಸೂ ಚಿಯ ಕತೆ ಒಳ್ಳೆ ನಿದರ್ಶನ. ಭಾರತ, ಚೈನ ಸರ್ವಾಧಿಕಾರಿಗಳ ಜತೆ ಕೈಜೋಡಿಸಿದ ಸಂಗತಿಯನ್ನು ಮರೆಮಾಚಲು “ಜನತೆಯ ಜಡತೆ” ತುಂಬ ಒಳ್ಳೆಯ ಥಿಯರಿಯಾಗಿ ಕೆಲಸಮಾಡುತ್ತದೆ. ಹಾಗೆ ಹೇಳವುದು ನಿಜ್ಜಕ್ಕೂ ನಮ್ಮ ಜಡತೆಯನ್ನೂ ಮರೆಮಾಚುತ್ತದೆ. ಏಕೆಂದರೆ, ಪ್ರಜಾಪ್ರಭುತ್ವಕ್ಕಾಗಿ ಚೈನಾ ಕೆಲಸ ಮಾಡುವುದು ದೂರ ಉಳಿಯಿತು. ಉಳಿದದ್ದು ಭಾರತವಲ್ಲವೆ?
ಘೋಷರ ತಮ್ಮ ಪ್ರಬಂಧದಲ್ಲಿ ಸೂ ಚಿ ೧೯೯೬ರಲ್ಲಿ ಬಿಡುಗಡೆಯಾದಾಗ ಪ್ರತಿ ಶನಿವಾರದ ಭಾಷಣವನ್ನು, ಅದರ ಸುತ್ತಲಿನ ಆಗುಹೋಗನ್ನು ವಿವರಿಸಿದ್ದಾರೆ. ಶನಿವಾರ ಮಧ್ಯಾಹ್ನದ ಹೊತ್ತು ಬಿಸಿಲಿರಲಿ, ಮಳೆಯಿರಲಿ ಆಕೆಯ ಸೆರೆಯಾದ ಮನೆಯ ಪಕ್ಕದ ಗೇಟಿನ ಎದುರು ಅಲ್ಲೊಬ್ಬರು ಇಲ್ಲೊಬ್ಬರು ಕಾಣಸಿಕೊಳ್ಳುತ್ತಾರೆ. ಗುಂಪುಗುಂಪಾಗಿ ತಮ್ಮತಮ್ಮಲ್ಲೇ ಪಿಸುಗುಡುತ್ತಾ ನಿಲ್ಲುತ್ತಾರೆ. ದೂರದಲ್ಲಿ ಮಿಲಟರಿ ಜುಂಟಾದ ಬೇಹುಗಾರರು ಕಾಣಿಸಿಕೊಳ್ಳುತ್ತಾರೆ. ಚುಟ್ಟಾ ಸೇದುತ್ತಾ, ಎಲೆಅಡಿಕೆ ಅಗಿಯುತ್ತಾ ನಿಂತ ಅವರ ನಡುವಿಂದ ಹಾದು, ಸೂ ಚಿಯ ಮಾತು ಕೇಳಲು ಜನ ಸೇರುತ್ತಾರೆ. ಕಾಲೇಜಿನ ಹುಡುಗರು, ರೈತರು, ಕೆಲಸಗಾರರು ಎಲ್ಲ ರೀತಿಯ ಜನರು. ಅವರು ಅಲ್ಲಿ ಕಾಣಿಸಿಕೊಂಡಿದ್ದೇ ಅವರ ವಿಪತ್ತಿಗೆ ಕಾರಣವಾಗಬಹುದು. ಅವರು ಕಾಣೆಯಾಗಬಹುದು, ಕೆಲಸ ಹೋಗಬಹುದು. ಸೆರೆಯಾಗಬಹುದು – ಪೆನ್ಷನ್ ಕಳಕೊಳ್ಳಬಹುದು. ಹಾಗೆಂದು ಗೊತ್ತಿದ್ದೂ ಜನ ಬರುತ್ತಾರೆ. ಸೂ ಚಿಯ ಮಾತು ಕೇಳಲು ಕಾತರರಾಗಿರುತ್ತಾರೆ. ಆಕೆಗೆ ಬೆಂಬಲ ತೋರಿಸಬಲ್ಲ ಈ ಕ್ರಿಯಯೆನ್ನು ಪ್ರತಿ ಶನಿವಾರ ತಪ್ಪದೇ ಆಚರಿಸುತ್ತಾರೆ. ಮನೆಯ ಗೇಟಿನ ಹಿಂದಿಂದ ಮೇಲಕ್ಕೆದ್ದು ನಿಂತ ಸೂ ಚಿ ಮಾತಾಡುವುದನ್ನು ಸಾಲಾಗಿ ಕೂತು ಸದ್ದಿಲ್ಲದೆ ಕೇಳುತ್ತಾರೆ. ಭಾಷಣ ಮುಗಿದ ನಂತರ ಸದ್ದು ಮಾಡದೆ ಕರಗಿ ಹೋಗುತ್ತಾರೆ. ಆ ಜನ ಸಮೂಹದ ಈ ನಡವಳಿಕೆ ಸೂ ಚಿಯ ಎದೆ ಬೆಚ್ಚಗೆ ಮಾಡುವ, ಆಕೆಯನ್ನು ಹತಾಶೆಗೆ ತಳ್ಳದ ಅತಿ ಮುಖ್ಯವಾದ ಮುಖಾಮುಖಿಯಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.
ಬರ್ಮಾದಲ್ಲೂ ಹತ್ತು ಹಲವಾರು ಬುಡಕಟ್ಟಿನ ಜನರಿದ್ದಾರೆ. ಅವರ ಪರಂಪರಾಗತ ಭೂಮಿಯಡಿ ತೈಲದ ಭಂಡಾರವಿದೆ. ಅದರ ಮೇಲೆ ಮಿಲಟರಿ ಜುಂಟಾದ ಹಿಡಿತವಿದೆ. ಅಂದ ಮೇಲೆ, ಬುಡಕಟ್ಟಿನ ಜನರ ಜೀವನ ದುಸ್ತರಗೊಂಡಿದೆ, ತಮ್ಮ ನೆಲದ ಮೇಲಿನ ಅವರ ಹಕ್ಕಿಗೆ ಚಿಕ್ಕಾಸಿನ ಬೆಲೆಯೂ ಇಲ್ಲ. ತಿರುಗಿಬಿದ್ದ ಬುಡಕಟ್ಟಿನ ಜನರಿಂದ ಎಣ್ಣೆತೂಬುಗಳನ್ನು ರಕ್ಷಿಸಲು, ಅದರ ಸುತ್ತಲೂ ಲಕ್ಷಾಂತರ ಲ್ಯಾಂಡ್ ಮೈನ್ಗಳು. ಅದಕ್ಕೆ ಹಳ್ಳಿಯ ಮಕ್ಕಳು, ಜನರು ಅಷ್ಟೆ ಅಲ್ಲದೆ ಆನೆಗಳಂತಹ ಆನೆಗಳೂ ಬಲಿಯಾಗುತ್ತಲೇ ಇರುವ ಸ್ಥಿತಿ. ಅಲ್ಲಿನ ಬಡತನ, ಹಸಿವು, ದಾರಿದ್ಯ್ರ ಸುದ್ದಿ ದಿಗ್ಬಂಧನದಡಿ ಲೋಕದ ಕಣ್ತಪ್ಪಿಬಿಟ್ಟಿದೆ. ಇವೆಲ್ಲಾ ಯಾಕೋ ಮತ್ತೆ ಮತ್ತೆ ಸಂಪತ್ತು ತಂದಿಕ್ಕುವ ಅದೇ ಚಿಂತಾಜನಕ ಕತೆಯ ಬೇರೆ ರೂಪವಷ್ಟೇ ಆಗಿ ಕೇಳುತ್ತದೆ.
ಭಾರತ, ಚೈನ ಆರ್ಥಿಕ ದಿಗ್ಬಂಧನ ಕೆಲಸ ಮಾಡುವುದಿಲ್ಲ ಎನ್ನುತ್ತಾ ಕೊಲೆಗಡುಕ ಮಿಲಟರಿ ಜುಂಟಾದೊಡನೆ ಕೈಕುಲುಕುತ್ತಲೇ ಇವೆ. “ಪ್ರಾದೇಶಿಕ ರಾಜಕೀಯ ತಂತ್ರಗಾರಿಕೆ” ಎಂದು ಹೇಳಿಕೊಳ್ಳುತ್ತಾ ತಮ್ಮ ನಿಲುವುಗಳನ್ನು ಸಮರ್ಥಿಸಿಕೊಳ್ಳುತ್ತಲೇ ಇವೆ. ನಾವೂ ಅದನ್ನು ಕೇಳಿಕೊಂಡು ತಲೆದೂಗುತ್ತಲೇ ಇದ್ದೇವೆ. ಸೂ ಚಿ ತಾನೇ “ಹೊರದೇಶಗಳಿಂದ ಸುರಿದು ಬರುತ್ತಿರುವ ಬಂಡವಾಳ, ಶ್ರೀಮಂತರ ಜೇಬು ಸೇರುತ್ತಿದೆ. ಜನತೆಗೆ ಏನೂ ದಕ್ಕುತ್ತಿಲ್ಲ. ಆರ್ಥಿಕ ದಿಗ್ಬಂಧನದಿಂದ ಸಾಮಾನ್ಯರಿಗೇನು ತೊಂದರೆ ಆಗುವುದಿಲ್ಲ. ಅದೊಂದೇ ದಾರಿ” ಎಂಬಂತಹ ಮಾತು ಹೇಳಿದ್ದರೂ ಜಾಣ ಕಿವುಡು ನಮ್ಮನ್ನು ಆವರಿಸಿದೆ. ದಿಗ್ಬಂಧನ ಕೆಲಸ ಮಾಡುವುದಿಲ್ಲವೆನ್ನವುದಾದರೆ, ಬೇರೇನು ಮಾಡಬೇಕು, ಮಾಡಿದ್ದೇವೆ ಎಂಬುದರ ಬಗ್ಗೆ ಕಾಣುವ ದಿವ್ಯ ಮೌನ – ನಮ್ಮ “ಪ್ರಾದೇಶಿಕ ರಾಜಕೀಯ ತಂತ್ರಗಾರಿಕೆ”ಯ ಟೊಳ್ಳನ್ನು ಬಯಲು ಮಾಡುತ್ತದೆ ಅಷ್ಟೆ.
೧೯೯೬ರಲ್ಲಿ ಒಂದೆರಡು ವರ್ಷ ಬಿಡುಗಡೆ ಪಡೆದಿದ್ದ ಹೊತ್ತಲ್ಲಿ ಘೋಷರು ಸೂ ಚಿಯನ್ನು ಭೇಟಿ ಮಾಡಿದ್ದಲ್ಲದೆ ಬರ್ಮಾದ ಸುತ್ತಗಲಕ್ಕೂ ಓಡಾಡಿದ್ದರು. ಬರ್ಮಾ-ಥಾಯಿ ಗಡಿಯಲ್ಲಿರುವ ನಿರಾಶ್ರಿತರ ಜತೆ, ಬಂಡಾಯಗಾರರ ಜತೆ, ಬುಡಕಟ್ಟಿನವರ ಜತೆ ಓಡಾಡಿ ಮಾತುಕತೆ ನಡೆಸಿ ಬರ್ಮಾದ ಜನರ ನಾಡಿ ಹಿಡಿಯಲು ಪ್ರಯತ್ನಿಸಿದ್ದಾರೆ. ಸೂ ಚಿ ಬರ್ಮಾವನ್ನು ಆಳುವುದಾದರೆ ಆಗಬಹುದೇನೋ ಎಂದು ಅವರೆಲ್ಲರೂ ಹೇಳಿದ್ದನ್ನು ದಾಖಲಿಸಿದ್ದಾರೆ. ಬರ್ಮಾ ಬಿಡುವ ಮುನ್ನ ಕಡೆಯಲ್ಲಿ ಮತ್ತೆ ಸೂ ಚಿಯನ್ನು ಸಂದರ್ಶಿಸಿದಾಗ, ತನ್ನ ಪಾರ್ಟಿಯ ಮುಖವಾಣಿಯಂತೆ ಮಾತಾಡಿದ, ಕೆಲವು ಸಂಗತಿಗಳಿಗೆ ಆಕೆ ಸ್ವಾಭಾವಿಕವಲ್ಲದ ಬಗೆಯಲ್ಲಿ ಉತ್ತರಿಸಿದ ರೀತಿಯನ್ನು ನೋಡಿ ಆಶ್ಚರ್ಯಪಟ್ಟಿದ್ದಾರೆ. ಬಿಡುಗಡೆಯಾದಾಗ ಮಿಲಟರಿ ಜುಂಟಾದ ಬಗ್ಗೆ ಆಕೆ ಮೆದುವಾಗುವ ಬಗೆ, ಯಾರನ್ನೂ ಟೀಕಿಸದೆ ರಾಜಕೀಯ ತಂತ್ರಗಾರಿಕೆಯನ್ನು ಬಳಸುವ ಪರಿ ನೋಡಿ ಸೂ ಚಿ ಏನೋ ಕಳಕೊಂಡವಳಂತೆ ಘೋಷರಿಗೆ ಕಂಡಿದೆ. ಸೂ ಚಿಯ ಈ ನಡೆವಳಿಕೆಯ ಬಗ್ಗೆ ಒಂದು ರೀತಿಯ ವಿಷಾದದ ನೆರಳಲ್ಲೇ ಅವರು ಬರ್ಮಾದಿಂದ ತೆರಳುತ್ತಾರೆ. ಪ್ರಬಂಧ ಕೂಡ ಅದೇ ನೆರಳಿನಲ್ಲಿ ಮುಗಿಯುತ್ತದೆ. ಅಂದಿನ ಆ ನೆರಳು ಇಂದೂ ಪ್ರಸ್ತುತವಾಗಿರಬಹುದೇ ಎಂದು ನೋಡಬೇಕಿದೆ.
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.