ಜಗತ್ತಿನ ಅತಿದೊಡ್ಡ ನಗರ ಲಂಡನ್. ಆದರೆ ಸಂತಸ ನೆಮ್ಮದಿಗಳು ನೆಲೆಸಿರುವ ಊರಲ್ಲ. ಕಾರ್ಮಿಕರ ಸಂಕಟ, ಕ್ರಾಂತಿಯ ಭಯ, ಇಡೀ ಪಟ್ಟಣವನ್ನು ಸ್ತಬ್ದವಾಗಿಸಬಲ್ಲ ಮುಷ್ಕರಗಳು ವಿಜೃಂಭಿಸುತ್ತಿದ್ದ, ಎರಡನೆಯ ಮಹಾಯುದ್ಧದ ಭೀಕರ ಆಘಾತಗಳಿಂದ ಕಕ್ಕಾಬಿಕ್ಕಿಯಾದ ಜಾಗ. ಅಂತಹ ಪ್ರಕ್ಷುಬ್ದ ಕಾಲದಲ್ಲಿ ಎಲಿಜೆಬೆತ್ ಹುಟ್ಟಿದ್ದು.ಆ ಪ್ರಕ್ಷುಬ್ಧತೆಯ ಸಹವಾಸದಿಂದ ಅವರಿಗೆ ಎಂದೂ ಬಿಡುಗಡೆ ಸಿಗಲೇ ಇಲ್ಲ. ಬ್ರಿಟನ್ನಿನ ಜನಸಾಮಾನ್ಯರ, ಕಾಮನ್ ವೆಲ್ತ್ ದೇಶಗಳ ಜನರ ಅಷ್ಟೇ ಏಕೆ ಸಂಪರ್ಕಕ್ಕೆ ಬಂದ ಜಗತ್ತಿನ ಎಲ್ಲ ಪ್ರಧಾನಿಗಳ, ಅಧ್ಯಕ್ಷರ, ಮಹಾನಾಯಕರ ಅಪಾರ ಪ್ರೀತಿ ಅಭಿಮಾನವನ್ನು ಸಂಪಾದಿಸಿದ ಮಹಾರಾಣಿ ಒಂದು ಶತಮಾನದ ರಾಜಕೀಯ ಸಾಮಾಜಿಕ ಆರ್ಥಿಕ ವೈಜ್ಞಾನಿಕ ಆರೋಗ್ಯ ಕ್ಷೇತ್ರಗಳ ಪ್ರಗತಿ ಮತ್ತು ದುರಂತಗಳಿಗೆ ಸಾಕ್ಷಿಯಾದವರು ನಿನ್ನೆಯಷ್ಟೇ ಅಗಲಿದ್ದಾರೆ. ಅವರ ಕುರಿತು ಯೋಗೀಂದ್ರ ಮರವಂತೆ ಬರೆದ ಲೇಖವೊಂದು ಇಲ್ಲಿದೆ.
“ನನ್ನ ಇಡೀ ಜೀವನ, ಅದು ದೀರ್ಘ ಇರಲಿ, ಹೃಸ್ವ ಇರಲಿ… ನಿಮ್ಮ ಸೇವೆಗೆ ಮುಡಿಪಾಗಿರುತ್ತದೆ ಎಂದು ನಿಮ್ಮೆಲ್ಲರೆದುರು ಘೋಷಿಸುತ್ತೇನೆ” ಎಂದು ಹಿರಿಯರು ಬರೆದುಕೊಟ್ಟ ಹಾಳೆಯಿಂದ ಓದುವುದನ್ನು ಇಡೀ ಬ್ರಿಟನ್, ಟಿವಿ ನೇರ ಪ್ರಸಾರದಲ್ಲಿ ನೋಡಿ ಸಂತಸ ಪಡುತ್ತಿದ್ದಾಗ ಬೀದಿಗಿಳಿದು ಜಯಘೋಷ ಮಾಡುತ್ತಿದ್ದಾಗ ಆತಂಕದಲ್ಲಿ ಇದ್ದವರು- ಆಯ್ಕೆ ಸ್ವೇಚ್ಚೆ ಸ್ವಾತಂತ್ಯ್ರಗಳನ್ನು ಪೂರ್ತಿ ಕಳೆದುಕೊಂಡು, ಹೀಗೆ ವಚನ ನೀಡಿ ಏಕಾಏಕಿ ಸಿಂಹಾಸನ ಏರಬೇಕಾಗಿ ಬಂದ ಎರಡನೆಯ ಎಲಿಜೆಬೆತ್ ಮಾತ್ರ ಇರಬಹುದು. ಯುವರಾಣಿ ಮಹಾರಾಣಿ ಆಗುವ ಸಂದರ್ಭವನ್ನು ಟಿವಿಯಲ್ಲಿ ಬಿತ್ತರಿಸುವುದಕ್ಕೆ ಆಗಿನ ಪ್ರಧಾನಿ ವಿನ್ಸ್‌ಟನ್ ಚರ್ಚಿಲ್‌ರ ವಿರೋಧ ಇದ್ದರೂ ಅರಮನೆಯ ಹಿರಿಯರು ಕೇಳಿರಲಿಲ್ಲ. ಬಹುತೇಕ ಕಪ್ಪು ಬಿಳುಪು ವರ್ಣದ ಮುದ್ರಣ- ಪ್ರಸರಣ ಮಾಧ್ಯಮ ಅದಾಗಿದ್ದರೂ ಬ್ರಿಟನ್ನಿನ ಮಟ್ಟಿಗೆ ಮೊದಲ ಬಾರಿಗೆ ಕೆಲವು ದೃಶ್ಯಗಳನ್ನು ವರ್ಣ ವಿಡಿಯೋಗ್ರಹಣದ ಮೂಲಕವೂ ಪ್ರಾಯೋಗಿಕವಾಗಿ ಪ್ರಸಾರ ಮಾಡಲಾಗಿತ್ತು. 70 ವರ್ಷಗಳ ಹಿಂದೆ ನಿನ್ನೆಯಂತಹದೇ (ಸೆ.೮) ಒಂದು ದಿನ, ಅಲ್ಲಿಯ ತನಕದ ಬ್ರಿಟನ್ನಿನ ಮಹಾರಾಜ ಎನಿಸಿದ್ದ ತಂದೆಯ ಅಚಾನಕ್ ಮರಣವಾದಾಗ ಆಕೆ ಮಹಾರಾಣಿಯ ಪೀಠವೇರಲೇಬೇಕಿತ್ತು. ಪಾರಂಪರ್ಯ ಶಿಷ್ಟಾಚಾರಗಳ ಕಟ್ಟಿನಲ್ಲಿ ಬಂಧಿಯಾಗಿ ಮಹಾರಾಣಿಯ ಮಹಾ ಜವಾಬ್ದಾರಿ ಹೊರಬೇಕಾಗಿತ್ತು. ಈಗ ಆ ದಿನವನ್ನು ನೆನೆಸಿಕೊಂಡರೆ, ಅದೊಂದು ದೂರದ ಮಸುಕು ಇತಿಹಾಸ. ಹತ್ತಿರದ ಇತಿಹಾಸ ಏನಿದ್ದರೂ ನಿನ್ನೆ ಆಕೆಯ ನಿರ್ಗಮನದ ಸುದ್ದಿ. ಮತ್ತದರ ಕುರಿತಾದ ವರದಿ ಚರ್ಚೆಗಳದ್ದು.
ಇಂಗ್ಲೆಂಡ್‌ನ ಮಹಾರಾಜನಾಗಿದ್ದ, ತನ್ನ ಅಜ್ಜನ ಕಿರಿಯ ಮಗನ ಮಗಳಾದ ಎಲಿಜೆಬೆತ್, ಮುಂದೊಂದು ದಿನ ಉತ್ತರಾಧಿಕಾರಿಣಿಯಾಗುವ ಸಂಭವನೀಯತೆ ತೀರ ಕಡಿಮೆಯೇ ಇತ್ತು. ರಾಜಮನೆತನದ ಪದ್ಧತಿಯಂತೆ ಬಾಲ್ಯ ಯೌವ್ವನಗಳನ್ನು ಮನೆಯಲ್ಲಿಯೇ ಆಪ್ತರ ನಡುವೆ ಖಾಸಗಿಯಾಗಿ ಕಳೆದವಳು. ಯಾವ ಶಾಲೆಗೂ ಹೋಗದೇ, ಪರಿಚಾರಕಿಯರಿಂದ ಅಲ್ಪಸ್ವಲ್ಪ ಮನೆಪಾಠ ಹೇಳಿಸಿಕೊಂಡು, ಕುದುರೆ ಸವಾರಿ ಕಲಿಯುತ್ತ ಬೆಳೆದವಳು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಬಕಿಂಗ್‌ಹ್ಯಾಮ್ ಅರಮನೆ ಹಿಟ್ಲರನ ಬಾಂಬು ದಾಳಿಗೆ ತುತ್ತಾಗುವ ಹೊತ್ತಲ್ಲಿ ಎಲಿಜಿಬೆತ್ ತನ್ನ ಮುದ್ದಿನ ತಂಗಿ ಮಾರ್ಗರೆಟ್‌ಳ ಜೊತೆ ಲಂಡನ್‌ನ ಹೊರವಲಯದ ವಿಂಡ್ಸರ್ ಅರಮನೆಯ ಬಲಿಷ್ಠ ಕಲ್ಲಿನ ಕೋಟೆಯ ನಡುವೆ ಆಟ ಆಡಿಕೊಂಡಿದ್ದಳು. ಅಜ್ಜನ ಸಾವಿನ ನಂತರ ಪಟ್ಟ ಏರಬೇಕಿದ್ದ ದೊಡ್ಡಪ್ಪ, ತನ್ನ ಪ್ರೇಯಸಿಗೋಸ್ಕರ ಸಿಂಹಾಸನವನ್ನು ಹಠಾತ್ ತ್ಯಾಗ ಮಾಡಿದಾಗ, ಎಲಿಜೆಬೆತ್‌ಳ ತಂದೆ ರಾಜಪದವಿ ಸ್ವೀಕರಿಸಲೇಬೇಕಾಯಿತು. ಆಕಸ್ಮಿಕವಾಗಿ ಅರಸನಾದವನಿಗೆ ಮಗನಿಲ್ಲದ ಕಾರಣ ಹಿರಿಯ ಮಗಳಾದ ಎಲಿಜೆಬೆತ್ ಭವಿಷ್ಯದ ರಾಣಿಯಾಗುವುದು ಅನಿವಾರ್ಯವಾಯಿತು.
ಇಪ್ಪತ್ತೈದರ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಇಪ್ಪತ್ತಾರರ ಹರೆಯದಲ್ಲಿ ರಾಣಿ ಎನಿಸಿಕೊಂಡ ಎರಡನೆಯ ಎಲಿಜಿಬೆತ್ ಸಾಗಿ ಬಂದ ಹಾದಿ ದೀರ್ಘ ಮತ್ತು ಅದಕ್ಕಿಂತ ಹೆಚ್ಚಾಗಿ ದುರ್ಗಮ. “ಆಕೆ ಬದಲಾಗುವುದಿಲ್ಲ, ಆದರೆ ಹೊಂದಿಕೊಳ್ಳುತ್ತಾಳೆ” ಎಂದು ರಾಣಿಯ 96 ವರ್ಷ ಆಯಸ್ಸಿನ, 70 ವರ್ಷಗಳ ಪ್ರಭುತ್ವದ ಬದುಕಿನ ಬಗ್ಗೆ ಕುತೂಹಲ ಹಾಗು ಸಹಾನುಭೂತಿ ಇರಿಸಿಕೊಂಡ ಅರಮನೆ ವಿಶ್ಲೇಷಕರು ವರ್ಣರಂಜಿತವಾಗಿ ವಿವರಿಸುತ್ತಾರೆ. ಅಸಾಧಾರಣ ಮಹಾರಾಣಿಯ ನಿರ್ಗಮನದ ಕುರಿತು ಗದ್ಗದಿತರಾಗಿ ಮಾತನಾಡುತ್ತಾರೆ. ಬ್ರಿಟನ್ನಿನ ಮೂಲೆಮೂಲೆಯ ಹಳ್ಳಿಗಳು ಉಗಿ ಬಂಡಿಯ ಶಿಳ್ಳೆ ಮತ್ತು ಧೂಮಕ್ಕೆ ಎಚ್ಚರಗೊಳ್ಳುವ ಕಾಲದಿಂದ ಕ್ಷಿಪ್ರವಾಗಿ ಸಾಗಿ ಇತ್ತೀಚಿನ ಈಗಿನ ಕೃತಕ ಬುದ್ಧಿಮತ್ತೆಯ ಯುಗವನ್ನು ತಲುಪಿಯಾಗಿದೆ. ತಿಂಗಳಿನಲ್ಲಿ ಇಳಿದು ಮಂಗಳನ ಆಸುಪಾಸಲ್ಲಿ ಸುತ್ತುಹೊಡೆದು ಅಂತರಿಕ್ಷದ ಇನ್ಯಾವುದೋ ಮೂಲೆಗೆ ಲಗ್ಗೆ ಹಾಕುವ ತಯಾರಿ ನಡೆಯುತ್ತಿದೆ. ಜೊತೆಗೆ ಜಗತ್ತು ತಲ್ಲಣಗೊಳ್ಳುವ ಯುದ್ಧ ಹಿಂಸೆ, ಲೋಕಕಂಟಕ ಸಾಂಕ್ರಾಮಿಕಗಳೂ ಬಂದು ಕಾಡಿಸಿ ಪೀಡಿಸಿ ಹೋಗಿವೆ. ಬ್ರಿಟಿಷ್ ವಸಾಹತಿನ ಕಾಲದಲ್ಲಿ ರಾಣಿಯ ಪರವಾದ ಘೋಷಗಳು, ವರ್ಣಬೇಧದ ವಿರುದ್ಧ ಪ್ರತಿಭಟನೆಯ ಕೂಗುಗಳೂ ಕೇಳಿ ತಣ್ಣಗಾಗಿವೆ.
ಅರಸೊತ್ತಿಗೆ ಅಧಿಕಾರವನ್ನು ಶಕ್ತಿಯನ್ನು ಕಳೆದುಕೊಂಡು ಹೆಮ್ಮೆ ಪರಂಪರೆಗಳ ಒಂದು ದುರ್ಬಲ ಸಂಕೇತವಾಗಿ ಮಾತ್ರ ಉಳಿದಿದೆ. ಇವೆಲ್ಲವನ್ನೂ ಬದುಕಿನ ಹೆಜ್ಜೆಗುರುತಾಗಿ ದಾಖಲಿಸಬಲ್ಲ ಅಪೂರ್ವ ವ್ಯಕ್ತಿ ಈಗಷ್ಟೇ ನಿರ್ಗಮಿಸಿರುವ ಮಹಾರಾಣಿ. ಮತ್ತೆ ಆಕೆ ಕುಳಿತು ಎದ್ದ ಸಿಂಹಾಸನ ಒಂದು ಶತಮಾನದ ಮನುಜರ ಸಕಲ ಉನ್ನತಿ ಅವನತಿಗಳಿಗೆ ಮೂಕ ಸಾಕ್ಷಿಯಾಗಿದ್ದು, ಈಗಷ್ಟೇ ಖಾಲಿಯಾಗಿದೆ.
1926ರಲ್ಲಿ ಲಂಡನ್ ಅವಸರದ ಗಿಜಿಗಿಜಿಯ ಕೈಗಾರಿಕಾ ಕೇಂದ್ರ, 75 ಲಕ್ಷ ಜನಸಂದಣಿಯ ಜಗತ್ತಿನ ಅತಿದೊಡ್ಡ ನಗರ. ಆದರೆ ಸಂತಸ ಉಲ್ಲಾಸ ನೆಮ್ಮದಿಗಳು ನೆಲೆಸಿರುವ ಊರಲ್ಲ. ಕಾರ್ಮಿಕರ ಸಂಕಟ, ಕ್ರಾಂತಿಯ ಭಯ, ಇಡೀ ಪಟ್ಟಣವನ್ನು ಸ್ತಬ್ದವಾಗಿಸಬಲ್ಲ ಮುಷ್ಕರಗಳು ವಿಜೃಂಭಿಸುತ್ತಿದ್ದ, ಎರಡನೆಯ ಮಹಾಯುದ್ಧದ ಭೀಕರ ಆರ್ಥಿಕ ಸಾಮಾಜಿಕ ರಾಜಕೀಯ ಆಘಾತಗಳಿಂದ ಕಕ್ಕಾಬಿಕ್ಕಿಯಾದ ಜಾಗ. ಅಂತಹ ಪ್ರಕ್ಷುಬ್ದ ಕಾಲದಲ್ಲಿ ಎಲಿಜೆಬೆತ್ ಹುಟ್ಟಿದ್ದು. ಬಹುಶಃ ಅಂದು ಅಂಟಿಕೊಂಡ ಪ್ರಕ್ಷುಬ್ಧತೆಯ ಸಹವಾಸದಿಂದ ಅವರಿಗೆ ಎಂದೂ ಬಿಡುಗಡೆ ಸಿಗಲೇ ಇಲ್ಲ. ಬ್ರಿಟನ್ನಿನ ಜನಸಾಮಾನ್ಯರ, ಕಾಮನ್ ವೆಲ್ತ್ ದೇಶಗಳ ಜನರ ಅಷ್ಟೇ ಏಕೆ ಸಂಪರ್ಕಕ್ಕೆ ಬಂದ ಜಗತ್ತಿನ ಎಲ್ಲ ಪ್ರಧಾನಿಗಳ, ಅಧ್ಯಕ್ಷರ, ಮಹಾನಾಯಕರ ಅಪಾರ ಪ್ರೀತಿ ಅಭಿಮಾನವನ್ನು ಸಂಪಾದಿಸಿದ ಮಹಾರಾಣಿ ಒಂದು ಶತಮಾನದ ರಾಜಕೀಯ ಸಾಮಾಜಿಕ ಆರ್ಥಿಕ ವೈಜ್ಞಾನಿಕ ಆರೋಗ್ಯ ಕ್ಷೇತ್ರಗಳ ಪ್ರಗತಿ ಮತ್ತು ದುರಂತಗಳಿಗೆ ಸಾಕ್ಷಿಯಾದವರು. ಜೊತೆಗೆ ಅರಮನೆ ವಾಸದ ಪ್ರತಿ ಅಧ್ಯಾಯದಲ್ಲೂ ನೋವು ಸಂಕಟಗಳನ್ನೂ ಎದುರಿಸಿದವರು.
ಅಜ್ಜನ ಸಾವಿನ ನಂತರ ಪಟ್ಟ ಏರಬೇಕಿದ್ದ ದೊಡ್ಡಪ್ಪ, ತನ್ನ ಪ್ರೇಯಸಿಗೋಸ್ಕರ ಸಿಂಹಾಸನವನ್ನು ಹಠಾತ್ ತ್ಯಾಗ ಮಾಡಿದಾಗ, ಎಲಿಜೆಬೆತ್‌ಳ ತಂದೆ ರಾಜಪದವಿ ಸ್ವೀಕರಿಸಲೇಬೇಕಾಯಿತು. ಆಕಸ್ಮಿಕವಾಗಿ ಅರಸನಾದವನಿಗೆ ಮಗನಿಲ್ಲದ ಕಾರಣ ಹಿರಿಯ ಮಗಳಾದ ಎಲಿಜೆಬೆತ್ ಭವಿಷ್ಯದ ರಾಣಿಯಾಗುವುದು ಅನಿವಾರ್ಯವಾಯಿತು.
ಯೌವನದ ಕಾಲದಲ್ಲಿ ಪ್ರೀತಿಸಿದ ಹುಡುಗ ಫಿಲಿಪ್ ಆಂಗ್ಲ ಹುಟ್ಟಿನವನಲ್ಲದ ಕಾರಣ ಮದುವೆ ಆಗುವಾಗ ತಿರಸ್ಕಾರ ಅಡೆತಡೆಗಳನ್ನು ಎದುರಿಸಿ ಮೀರಬೇಕಾಯಿತು. ನಿತ್ಯವೂ ತಂಗಿಯ ಜೊತೆಗೆ ಆಟಆಡಿಕೊಂಡು ನಲಿಯುತ್ತಿದ್ದ ದಿನಗಳು ಹಿಂದೆ ಸರಿದವು. ಮಹಾರಾಣಿಯಾದ ಮೇಲೆ ಹೊಣೆಗಾರಿಕೆ ಶಿಷ್ಟಾಚಾರದ ಆವರಣದಲ್ಲಿ ಅದೇ ತಂಗಿಯನ್ನು ದೂರ ಇಡಬೇಕಾಯಿತು. ತನ್ನ ನಾಲ್ವರು ಮಕ್ಕಳಲ್ಲಿ ಮೂವರ ವಿಚ್ಚೇದನ ಮರುಮದುವೆಯ ಹಿಂದುಮುಂದಿನ ಸಂದರ್ಭಗಳನ್ನು ಸಹಿಸಬೇಕಾಯಿತು. ಅರಮನೆಯ ಸುತ್ತಲೇ ಕ್ಯಾಮೆರಾ ಪೆನ್ನು ಹಿಡಿದು ಓಡಾಡುವ, ಕ್ರೂರ ಪತ್ರಿಕೋದ್ಯಮದ ಶಿಕಾರಿಯಾಗಿ ಊಹಾಪೋಹ ಸಂಶಯ ಗುಸುಗುಸು ಅಪಹಾಸ್ಯಗಳ ವಸ್ತುವಾಗಬೇಕಾಯಿತು. ಸರಕಾರದಿಂದ ರಾಜಮನೆತನದ ಖರ್ಚುವೆಚ್ಚಗಳ ಮೇಲಿನ ಕಡಿವಾಣ, ಅರಸೊತ್ತಿಗೆಯನ್ನು ದೇಶದ ಬೊಕ್ಕಸಕ್ಕೆ ಲಾಭದಾಯಕವಾಗಿಸುವ ಒತ್ತಡಗಳನ್ನು ಎದುರಿಸಬೇಕಾಯಿತು. ಜನಸಾಮಾನ್ಯರು ಎದುರಿಸುವ ಅಥವಾ ಕೆಲವೊಮ್ಮೆ ಅದಕ್ಕಿಂತಲೂ ಮಿಗಿಲಾದ ಸಂಕೀರ್ಣ ಸೂಕ್ಷ್ಮ ಸಾಂಸಾರಿಕ ದುರಂತಗಳಿಗೆ ಸಾಕ್ಷಿಯಾಗಬೇಕಾಯಿತು.
ಪದವಿ ಏರುವಾಗಿನ ಮೊಟ್ಟಮೊದಲ ಪ್ರಮಾಣವಚನದಿಂದ ಹಿಡಿದು ಪ್ರತಿ ವರ್ಷವೂ ಸಂಸತ್ತು ಅಧಿವೇಶನ ಶುರುವಾಗುವ ಮುನ್ನ ಮಾಡುವ ಸಾಂಪ್ರದಾಯಿಕ ಭಾಷಣದ ತನಕ, ಕ್ರಿಸ್ಮಸ್ ಸಂದೇಶದಿಂದ ಹಿಡಿದು ಯಾವುದೇ ದೊಡ್ಡ ಯಶಸ್ಸು ಅಥವಾ ದುರಂತದ ಸಮಯದ ಔಪಚಾರಿಕ ಹೇಳಿಕೆಗಳ ತನಕದ ಪ್ರತಿ ಶಬ್ದವನ್ನೂ ಮಹಾರಾಣಿಗೆ ಯಾರೋ ಯೋಚಿಸಿ ಬರೆದುಕೊಟ್ಟಿರುತ್ತಾರೆ. ಸಾರ್ವಜನಿಕ ಜೀವನದಲ್ಲಿ ಓದುವ ಆಡುವ ಪ್ರತಿ ಮಾತೂ ಇನ್ಯಾರದೋ ಮನಸಿನಿಂದ ಹುಟ್ಟಿದ್ದು. ಕಾಲ ಸಂದರ್ಭ ಪರಿಣಾಮ ಔಪಚಾರಿಕತೆ ಶಿಷ್ಟಾಚಾರಗಳ ತಕ್ಕಡಿಯಲ್ಲಿ ತೂಗಿ ಅಳೆದು ಹೇಳಿಸಲ್ಪಟ್ಟಿದ್ದು. ಅರಮನೆಯ ಆಪ್ತರೊಬ್ಬರು ಹೇಳುವಂತೆ ಮಹಾರಾಣಿ ತೆರೆದ ಮನಸಿನಿಂದ ಮುಕ್ತವಾಗಿ ಮಾತನಾಡುವುದು ಸಾಧ್ಯ ಆಗುವುದು ತನ್ನ ಮನೆಯ ಸಾಕು ಬೆಕ್ಕು ನಾಯಿ ಕುದುರೆಗಳಂತಹ ಪ್ರಾಣಿಗಳಲ್ಲಿ ಮಾತ್ರ. ಯಾವಾಗಲೂ ಜನರಿಂದ ಪರಿವಾರದಿಂದ ಅಭಿಮಾನಿಗಳಿಂದ ರಕ್ಷಣಾ ಪಡೆಯಿಂದ ಸೇವಕಿಯರಿಂದ ಅರಮನೆಯ ಬಂಧು ಬಾಂಧವರಿಂದ ಸುತ್ತುವರಿದಿದ್ದರೂ ಅನಿಸಿದ್ದನ್ನು ಹೇಳಲಾಗದ ಮಹಾರಾಣಿಯು ಒಂಟಿ ಎಂದೂ ಕಲ್ಪಿಸಿದವರಿದ್ದಾರೆ.
ಮಹಾರಾಣಿಯ ದೀರ್ಘ ಸಕ್ರಿಯ ಬದುಕನ್ನು ಹಲವು ದಿಕ್ಕುಗಳಿಂದ ನೋಡಿ ವಿಭಿನ್ನವಾಗಿ ವಿಮರ್ಶಿಸಬಹುದಾದರೂ ಕ್ಷೋಭೆಗಳೇ ತುಂಬಿದ ಕಾಲ ಬದುಕಿನಲ್ಲಿ ಅರಸೊತ್ತಿಗೆ ಏನು ಬಯಸುತ್ತದೋ, ಸಿಂಹಾಸನ ಯಾವುದರಿಂದ ಸಂತೃಪ್ತವಾಗುತ್ತದೋ ಅದನ್ನೇ ಸಹನೆಯಿಂದ ಸ್ಥಿರವಾಗಿ ನೀಡುತ್ತಾ ಬಂದ ಧೀರೋದ್ದಾತ ವ್ಯಕ್ತಿ ಎಂದೇ ಬ್ರಿಟನ್ನಿನ ಬಹುತೇಕರು ಅಭಿಪ್ರಾಯ ಪಡುತ್ತಾರೆ. ವೈಯಕ್ತಿಕ ಸುಖ ನೆಮ್ಮದಿಗಳನ್ನು ತ್ಯಾಗ ಮಾಡಿ ಕರ್ತವ್ಯ, ನಿಷ್ಠೆಗಳನ್ನು ಸ್ವೀಕರಿಸಿದವರು ಎಂದೂ ಸ್ಮರಿಸುತ್ತಾರೆ. ಪತ್ನಿ ತಾಯಿ ಅಕ್ಕ ಅಮ್ಮ ಅಜ್ಜಿ ಅತ್ತೆ ಆಮೇಲೆ ಒಂದು ದೇಶದ ಸಾಂಕೇತಿಕ ಸಾಮ್ರಾಜ್ಞಿ ಹೀಗೆ ಹಲವು ಕಠಿಣ ಪಾತ್ರಗಳನ್ನು ನಗುನಗುತ್ತಾ ಏಕಕಾಲದಲ್ಲಿ ನಿಭಾಯಿಸಿದುದರ ಬಗ್ಗೆ, ಪ್ರತಿ ಬದಲಾವಣೆಗೂ ಒಗ್ಗಿಕೊಂಡುದರ ಬಗ್ಗೆ ಸಹಾನುಭೂತಿ ಗೌರವ ತೋರುತ್ತಾರೆ.
ಸುದೀರ್ಘ ಕಾಲ, ಬ್ರಿಟನ್ನಿನ ಒಂದು ಯುಗದ ಬದಲಾವಣೆ ವೈಪರೀತ್ಯ ವೈವಿಧ್ಯಗಳ ಎದುರಿಗೆ ನಿಂತ ಅಚಲ ಮೌನ ಪ್ರೇಕ್ಷಕಿಯ ಮೂರ್ತಿಯೊಂದು ಇದೀಗ ಕರಗಿ ಮಾಯವಾಗುತ್ತಿದೆ ಎಂದೂ ಬಣ್ಣಿಸುತ್ತಾರೆ. ತನ್ನ ಬಗೆಗಿನ ವಿಮರ್ಶೆ, ಹೊಗಳಿಕೆ ಒಳನೋಟಗಳು ಜೀವಪಡೆದು ಬ್ರಿಟನ್ನಿನ ಹಾದಿಬೀದಿಗಳಲ್ಲಿ ಹುಲುಸಾಗಿ ಓಡಾಡುವ ನಿನ್ನೆ ಸಂಜೆ, ಸಾರ್ವಜನಿಕವಾಗಿ ಪ್ರತಿ ಬಾರಿ ಕಾಣಿಸಿಕೊಳ್ಳುವಾಗಲೂ ಕಡುಬಣ್ಣದ ಆ ದಿನಕ್ಕೆಂದೇ ಹಲವರು ಕೂಡಿ ವಿನ್ಯಾಸಗೊಳಿಸಿದ ಹೊಚ್ಚ ಹೊಸ ಪೋಷಾಕು, ಹೊಂದುವ ಅಲಂಕೃತ ಹ್ಯಾಟು, ಒಂದು ಕೈಯಲ್ಲಿ ಹೊಳೆಯುವ ತೂಗು ಪಾರ್ಸ್ ಮತ್ತೆ ಇನ್ನೊಂದು ಕೈಯನ್ನು ಎತ್ತಿ ಟಾಟಾ ಮಾಡುತ್ತಾ ತನ್ನನ್ನು ಗಮನಿಸುತ್ತಿರುವ ಸಮಸ್ತರಿಗೂ ನಗು ಬೀರಿ ಮಹಾರಾಣಿ ಮರೆಯಾಗಿದ್ದಾರೆ; ಹಿರಿಯ ಮಗ “ಮೂರನೆಯ ಕಿಂಗ್ ಚಾರ್ಲ್ಸ್, ಹೊಸ ದೊರೆ” ಎಂದು ಕರೆಸಿಕೊಂಡು ವಚನ ಸ್ವೀಕರಿಸುವ ತಯಾರಿಯಲ್ಲಿದ್ದಾರೆ.
ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ “ಏರ್ ಬಸ್” ವಿಮಾನ ಕಂಪನಿಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞ. ಬರವಣಿಗೆ, ಯಕ್ಷಗಾನ ಆಸಕ್ತಿಯ ವಿಷಯಗಳು. ಮೂಲತಃ ಕನ್ನಡ ಕರಾವಳಿಯ ಮರವಂತೆಯವರು. “ಲಂಡನ್ ಡೈರಿ-ಅನಿವಾಸಿಯ ಪುಟಗಳು” ಇವರ ಪ್ರಕಟಿತ ಬಿಡಿಬರಹಗಳ ಗುಚ್ಛ.