ನಮ್ಮ ಗೈಡ್, ಇತಿಹಾಸ ತಜ್ಞೆ ಗುಲ್ಚೆಹರಾ ನಮ್ಮನ್ನು ಈ ಮದ್ರಸಾ ಮುಂದೆ ಇರುವ ಬೃಹತ್ತಾದ ಏಕಶಿಲಾ ಕುಂಡವನ್ನು ತೋರಿಸಿದಳು. ಅದು ಒಂದು ಟ್ಯಾಂಕರ್ ನೀರು ತುಂಬುವಷ್ಟು ಆಳ ಮತ್ತು ಅಗಲ ಹೊಂದಿದೆ. ೧೯೧೭ರಲ್ಲಿ ರಷ್ಯಾದಲ್ಲಿ ನಡೆದ ಅಕ್ಟೋಬರ್ ಮಹಾಕ್ರಾಂತಿ ನಡೆದ ಘಟನೆಯಲ್ಲಿ ಕಮ್ಯುನಿಸ್ಟ್ ಸರ್ಕಾರ ಬಂದದ್ದು ಗೊತ್ತಾದ ಕೂಡಲೆ ಸಮರಕಂದದ ಯುವತಿಯರು ತಮ್ಮ ಬುರ್ಖಾಗಳನ್ನು ತಂದು ಈ ಕುಂಡದಲ್ಲಿ ಹಾಕಿ ಸುಟ್ಟರು ಎಂದು ಗುಲ್ ಚೆಹರಾ ತಿಳಿಸಿದಳು. ಹಾಗೆ ಬುರ್ಖಾಗಳನ್ನು ಸುಟ್ಟವರಲ್ಲಿ ಆಗ ಯುವತಿಯಾಗಿದ್ದ ತನ್ನ ಅಜ್ಜಿಯೂ ಇದ್ದಳೆಂದು ಹೇಳಿದಳು. ನಮಗೆಲ್ಲ ಆಶ್ವರ್ಯವೆನಿಸಿತು.  ರಂಜಾನ್‌ ದರ್ಗಾ ಬರೆಯುವ ʻನೆನಪಾದಾಗೆಲೆಲ್ಲʼ ಸರಣಿಯ ೪೬ನೇ ಕಂತು ಇಂದಿನ ಓದಿಗಾಗಿ.

ಮಧ್ಯ ಏಷ್ಯಾದ ಅಜೇಯ ದಾಳಿಕೋರ ತೈಮೂರಲಂಗ (೧೩೩೬-೧೪೦೫) ೧೩೭೦ರಲ್ಲಿ ತನ್ನ ಸಾಮ್ರಾಜ್ಯದ ರಾಜಧಾನಿಯಾಗಿ ಸಮರಕಂದ್ ನಗರವನ್ನು ಆಯ್ಕೆ ಮಾಡಿಕೊಂಡು ಸಾಮ್ರಾಟನಾದಾಗ ತೈಮೂರಿ ರಾಜವಂಶದ ಪ್ರಾರಂಭವಾಯಿತು.

ತನ್ನ ಸಾಮ್ರಾಜ್ಯ ವಿಸ್ತಾರಕ್ಕಾಗಿ ತೈಮೂರಲಂಗನಿಗೆ ಚಂಗೇಜ್ ಖಾನ್ (೧೧೬೨-೧೨೨೭) ಮಾದರಿಯಾಗಿದ್ದ. ತನ್ನ ೨೧ ವರ್ಷದ ಆಳ್ವಿಕೆಯಲ್ಲಿ ಚಂಗೇಜ್ ಖಾನ್ ಪೃಥ್ವಿಯ ಶೇಕಡಾ ೨೦ ರಷ್ಟು ಭೂಮಿಯ ಸಾಮ್ರಾಟನಾಗಿದ್ದ. ಆತ ಕ್ರೂರಿಯೂ, ದಕ್ಷನೂ ಆಗಿದ್ದ. ಮಂಗೋಲಿಯದ ವಿವಿಧ ಬುಡಕಟ್ಟುಗಳ ಜನರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾದ. ಅವರಿಗೆ ಅಕ್ಷರ ಜ್ಞಾನ ನೀಡಿದ. ಕಾನೂನು ರಚಿಸಿದ. ಧಾರ್ಮಿಕ ಸ್ವಾತಂತ್ರ್ಯಕ್ಕೆ  ಧಕ್ಕೆ ಬರದಂತೆ ನೋಡಿಕೊಂಡ. ತೈಮೂರ್ ಈತನ ಪ್ರಭಾವಕ್ಕೆ ಒಳಗಾಗಿ ಮಧ್ಯ ಏಷ್ಯಾ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ್ದ.

ಕ್ರಿಶ್ತ ಶಕ ೧೪೦೫ರಲ್ಲಿ ತೈಮೂರಲಂಗನ ಮರಣಾನಂತರ ಆತನ ಮಗ ಶಾರುಖ್ ಖಾನ್ (೧೩೭೭-೧೪೪೭) ೧೪೦೫ ರಿಂದ ೧೪೪೭ರ ವರೆಗೆ ಆಳಿದ. ಆತ ತನ್ನ ರಾಜಧಾನಿಯನ್ನು ಸಮರಕಂದದಿಂದ ಹೆರಾತ್ಗೆ ಬದಲಾಯಿಸಿದ. ಸಮರಕಂದ್ ಮತ್ತು ಅಫಘಾನಿಸ್ತಾನದಲ್ಲಿರುವ ಹೇರಾತ್ ನಗರಗಳ ಮೇಲೆಯೆ ಸಿಲ್ಕ್ ರೋಡ್ ಹಾದು ಹೋಗುವುದರಿಂದ ಮತ್ತು ಏಷ್ಯಾ ಯುರೋಪ್ ವ್ಯಾಪಾರ ಮಾರ್ಗ ಇದೇ ಆಗಿದ್ದರಿಂದ ಸುಲ್ತಾನ್ ಶಾರುಖ್ ಖಾನನ ಸಂಪತ್ತಿನ ಹೆಚ್ಚಳಕ್ಕೆ ಅದು ಕಾರಣವಾಯಿತು. ಚೀನದ ಮಿಂಗ್ ಸಾಮ್ರಾಜ್ಯದ ಜೊತೆ ಸಂಬಂಧವನ್ನು ಗಟ್ಟಿಗೊಳಿಸಿಕೊಂಡು ಸಿಲ್ಕ್ ರೋಡ್ಗೆ ಸಂಬಂಧಿಸಿದ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ಆತ ಯಶಸ್ಸು ಸಾಧಿಸಿದ. ಸಮರಕಂದ್ ಮೇಲಿಂದಲೇ ಸಿಲ್ಕ್ ರೋಡ್ ಹಾದು ಹೋಗುವುದರಿಂದ ಏಷ್ಯಾ ಮತ್ತು ಯುರೋಪಿಗೆ ಸಮರಕಂದ್ ಪ್ರಮುಖ ನಗರವಾಗಿ ಪರಿಚಿತವಾಯಿತು. ಚೈನಾ, ಇರಾನ್, ಇರಾಕ್ ಪ್ರದೇಶಗಳ ಮೂಲಕ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಜ್ಞಾನ ಸಮರಕಂದ್ಗೆ ಹರಿದು ಬಂದಿತು.

ದಯಾಳು ಶಾರುಖ್ ತನ್ನ ತಂದೆಯ ಕ್ರೂರ ಮಾರ್ಗವನ್ನು ಅನುಸರಿಸಲಿಲ್ಲ. ತನ್ನ ನಡವಳಿಕೆಯಿಂದ ಮಾದರಿ ಇಸ್ಲಾಮೀ ಆಡಳಿತಗಾರ ಎಂದು ಹೆಸರುವಾಸಿಯಾದ. ಟರ್ಕೋ-ಮಂಗೋಲ್ ಯುದ್ಧೋನ್ಮತ್ತ ದಾಳಿಕೋರನಾಗಿದ್ದ ತೈಮೂರನಿಂದಾಗಿ ಸಂಭವಿಸಿದ ಭೌತಿಕ ಮತ್ತು ಮಾನಸಿಕ ಅಲ್ಲೋಲಕಲ್ಲೋಲವನ್ನು ಮಧ್ಯ ಏಷ್ಯಾದ ಮತ್ತು ಇತರೆ ಸಂಕಷ್ಟಕ್ಕೊಳಗಾದ ಜನರು ಮರೆತು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತೆ ಆಳ್ವಿಕೆ ಮಾಡಿದ. ಆತ ತನ್ನ ಕಾಲದ ಕಲೆ ಮತ್ತು ಸಾಹಿತ್ಯಕ್ಕೆ ಪೋಷಕನಾಗಿ ಅವುಗಳ ಬೆಳವಣಿಗೆಗೆ ಕಾರಣೀಕರ್ತನಾದ.

ಶಾರುಖ್ ಖಾನ್ ಮಗ ಉಲುಗ್ ಬೇಗ್ (೧೩೯೪-೧೪೪೯) ಗಣಿತಜ್ಞ, ಖಗೋಳವಿಜ್ಞಾನಿ ಮತ್ತು ಶಿಕ್ಷಣ ಪ್ರೇಮಿಯಾಗಿದ್ದ. ೧೩೯೮ರಲ್ಲಿ ದೆಹಲಿ ಲೂಟಿ ಮಾಡಿದ ಅಜ್ಜ ತೈಮೂರ್ ೧೪೦೫ರಲ್ಲಿ ಮರಣ ಹೊಂದಿದಾಗ ಉಲುಗ್ ಬೇಗ್ ೧೧ ವರ್ಷದ ಬಾಲಕನಾಗಿದ್ದ. ೧೪೦೯ರಲ್ಲಿ ತನ್ನ ೧೬ನೇ ವಯಸ್ಸಿಗೆ ಸಮರಕಂದದ ರಾಜ್ಯಪಾಲನಾದ. ತನ್ನ ೨೩ನೇ ವಯಸ್ಸಿಗೆ ಸಮರಕಂದ್ ಮತ್ತು ಬುಖಾರಾಗಳಲ್ಲಿ ಮದ್ರಸಾಗಳ ನಿರ್ಮಿಸಿದ. ಇವು ಆ ಕಾಲದ ವಿಶ್ವವಿದ್ಯಾಲಯಗಳು. ಅನಾಟೋಲಿಯಾ, ಇರಾನ್, ಇರಾಕ್ ಮೊದಲು ಮಾಡಿ ಮಧ್ಯ ಏಷ್ಯಾದ ಅನೇಕ ವಿದ್ವಾಂಸರನ್ನು ಈ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ ನೇಮಿಸಿದ. ಸಮರಕಂದದ ಶೇರ್ದೋರ್ ಮದ್ರಸಾ ನೋಡುವ ಅವಕಾಶವೂ ನನಗೆ ಲಭಿಸಿತು. ಆ ವಿಶಾಲವಾದ ವಿಶ್ವವಿದ್ಯಾಲಯದ ಹೆಬ್ಬಾಗಿಲ ಮೇಲ್ಗಡೆ ಎಡ ಬಲದಲ್ಲಿ ಮೊಸಾ಼ಯಿಕ್ ಡಿಸೈ಼ನ್ನಲ್ಲಿ ವರ್ಣರಂಜಿತವಾದ ಎರಡು ಹುಲಿಗಳ ಚಿತ್ರಗಳಿವೆ. ಶೇರ್ ಅಂದರೆ ಹುಲಿ, ದೋರ್ ಅಂದರೆ ದ್ವಾರ. ಈ ಮಹಾದ್ವರದ ಮುಂದೆ ವಿಶಾಲವಾದ ಎತ್ತರದ ಪ್ರಾಂಗಣವಿದೆ. ಒಳಗಡೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿದಂತೆ ಸಾವಿರಾರು ಜನರಿಗೆ ಸಾಕಾಗುವಷ್ಟು ವಿಶಾಲ ಪ್ರದೇಶದಲ್ಲಿ ವರ್ಗ ಕೋಣೆಗಳು, ಗ್ರಂಥಾಲಯ ಮುಂತಾದ ವ್ಯವಸ್ಥೆ ಜೊತೆಗೆ ವಸತಿಗೃಹಗಳೂ ಇವೆ. ಸಮರಕಂದ್ ವಿದ್ವಾಂಸರ ಕೇಂದ್ರವಾಗಬೇಕು ಎಂಬುದು ಉಲುಗ್ ಬೇಗ್ ಆಶಯವಾಗಿತ್ತು. ಅದಕ್ಕಾಗಿ ಅವರು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು.

ಶಾರುಖ್ ಖಾನ್ ಮಗ ಉಲುಗ್ ಬೇಗ್ (೧೩೯೪-೧೪೪೯) ಗಣಿತಜ್ಞ, ಖಗೋಳವಿಜ್ಞಾನಿ ಮತ್ತು ಶಿಕ್ಷಣ ಪ್ರೇಮಿಯಾಗಿದ್ದ. ೧೩೯೮ರಲ್ಲಿ ದೆಹಲಿ ಲೂಟಿ ಮಾಡಿದ ಅಜ್ಜ ತೈಮೂರ್ ೧೪೦೫ರಲ್ಲಿ ಮರಣ ಹೊಂದಿದಾಗ ಉಲುಗ್ ಬೇಗ್ ೧೧ ವರ್ಷದ ಬಾಲಕನಾಗಿದ್ದ. ೧೪೦೯ರಲ್ಲಿ ತನ್ನ ೧೬ನೇ ವಯಸ್ಸಿಗೆ ಸಮರಕಂದದ ರಾಜ್ಯಪಾಲನಾದ. ತನ್ನ ೨೩ನೇ ವಯಸ್ಸಿಗೆ ಸಮರಕಂದ್ ಮತ್ತು ಬುಖಾರಾಗಳಲ್ಲಿ ಮದ್ರಸಾಗಳ ನಿರ್ಮಿಸಿದ.

ನಮ್ಮ ಗೈಡ್, ಇತಿಹಾಸ ತಜ್ಞೆ ಗುಲ್ಚೆಹರಾ ನಮ್ಮನ್ನು ಈ ಮದ್ರಸಾ ಮುಂದೆ ಇರುವ ಬೃಹತ್ತಾದ ಏಕಶಿಲಾ ಕುಂಡವನ್ನು ತೋರಿಸಿದಳು. ಅದು ಒಂದು ಟ್ಯಾಂಕರ್ ನೀರು ತುಂಬುವಷ್ಟು ಆಳ ಮತ್ತು ಅಗಲ ಹೊಂದಿದೆ. ೧೯೧೭ರಲ್ಲಿ ರಷ್ಯಾದಲ್ಲಿ ನಡೆದ ಅಕ್ಟೋಬರ್ ಮಹಾಕ್ರಾಂತಿ ನಡೆದ ಘಟನೆಯಲ್ಲಿ ಕಮ್ಯುನಿಸ್ಟ್ ಸರ್ಕಾರ ಬಂದದ್ದು ಗೊತ್ತಾದ ಕೂಡಲೆ ಸಮರಕಂದದ ಯುವತಿಯರು ತಮ್ಮ ಬುರ್ಖಾಗಳನ್ನು ತಂದು ಈ ಕುಂಡದಲ್ಲಿ ಹಾಕಿ ಸುಟ್ಟರು ಎಂದು ಗುಲ್ ಚೆಹರಾ ತಿಳಿಸಿದಳು. ಹಾಗೆ ಬುರ್ಖಾಗಳನ್ನು ಸುಟ್ಟವರಲ್ಲಿ ಆಗ ಯುವತಿಯಾಗಿದ್ದ ತನ್ನ ಅಜ್ಜಿಯೂ ಇದ್ದಳೆಂದು ಹೇಳಿದಳು. ನಮಗೆಲ್ಲ ಆಶ್ವರ್ಯವೆನಿಸಿತು. ತನ್ನ ಅಜ್ಜಿ ಆ ಘಟನೆಯನ್ನು ಹೇಳಿದಾಗ ತಾನು ಕೂಡ ಆಶ್ವರ್ಯಪಟ್ಟಿದ್ದೆ ಎಂದು ಆಕೆ ತಿಳಿಸಿದಳು. ಉಜ್ಬೆಕಿಸ್ತಾನದಲ್ಲಿ ನಾವು ಎಲ್ಲಿಯೂ ಬುರ್ಖಾಧಾರಿ ಹೆಣ್ಣುಮಕ್ಕಳನ್ನು ಕಾಣಲಿಲ್ಲ. ಆದರೆ ಅವರ ಉಡುಗೆ ತೊಡುಗೆಗಳ ಮೇಲೆ ಐರೋಪ್ಯ ಭಾಗದ ಸೋವಿಯತ್ ದೇಶದ ಪ್ರಭಾವ ಅಷ್ಟಾಗಿ ಬಿದ್ದಿದ್ದಿಲ್ಲ. ಪರಂಪರೆಯ ಪ್ರಭಾವದೊಂದಿಗೆ ಆಧುನಿಕತೆ ಮೇಳೈಸಿತ್ತು.

ನಮ್ಮ ಚಾಲಕನ ಹೆಸರು ಅಬ್ದುಲ್ ಎಂದಿತ್ತು. ಆತ ತನ್ನ ಕೈಮೇಲೆ ಹಚ್ಚೆ (ಟ್ಯಾಟು) ಹಾಕಿಸಿಕೊಂಡಿದ್ದ. ಭಾರತದಲ್ಲಿ ಟ್ಯಾಟು ಹಾಕಿಸಿಕೊಂಡ ಒಬ್ಬ ಮುಸ್ಲಿಮನನ್ನೂ ನಾನು ಆ ಕಾಲದಲ್ಲಿ ನೋಡಿರಲಿಲ್ಲ. (ಧರ್ಮಗಳು ಇಂದಿಗೂ ವಿವಿಧ ರೀತಿಯ ಕಂಟ್ರೋಲ್ ಲೈನ್ಗಳಿಂದ ಕೂಡಿವೆ.)
ಸಮರಕಂದದ ಎಲ್ಲ ಪ್ರಾಚೀನ ಇಮಾರತುಗಳು ಮೊಸೈ಼ಕ್ ಡಿಸೈ಼ನ್ಗಳಿಂದ ಕಂಗೊಳಿಸುತ್ತಿವೆ. ಅವುಗಳ ವರ್ಣರಂಜಿತ ಸೌಂದರ್ಯ ಯಾವುದೋ ಕಲ್ಪನಾ ಲೋಕಕ್ಕೆ ಎಳೆದೊಯ್ಯುತ್ತವೆ. ಮನುಷ್ಯ ತಮ್ಮ ಪ್ರತಿಭೆಯನ್ನು ಯುದ್ಧಕ್ಕೆ, ಕೊಲೆ, ಸುಲಿಗೆಗೆ ಬಳಸದೆ ಸೃಜನಶೀಲತೆಗೆ ಮತ್ತು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಉದ್ದೇಶದಿಂದ ಬಳಸಿದರೆ. ಜಗತ್ತು ಮಾನವ ನಿರ್ಮಿತ ಅಮಾನುಷ ಕೃತ್ಯಗಳಿಂದ ಖಂಡಿತವಾಗಿಯೂ ವಿಮೋಚನೆಗೊಳ್ಳುವುದು. ಸಮರಕಂದದ ರೇಗಿಸ್ತಾನ್ ಚೌಕ್ ಪ್ರದೇಶದಲ್ಲಿ ಸುಳಿದಾಡುವ ಯಾವುದೇ ವ್ಯಕ್ತಿಗೆ ಹೀಗೆ ಅನ್ನಿಸದಿರದು.

ಉಲುಗ್ ಬೇಗ್ ಪ್ರತಿಮೆ

ಅಲ್ಲಿಯೂ ಸುಂದರ ಮಸೀದಿಗಳಿವೆ ಜನರು ತಮ್ಮಷ್ಟಕ್ಕೆ ತಮ್ಮದೇ ಆದ ರೀತಿಯಲ್ಲಿ ಬದುಕುತ್ತಾರೆ. ಪವಿತ್ರ ಕುರಾನ್ ಹೇಳುವ ಹಾಗೆ ಧರ್ಮದಲ್ಲಿ ಒತ್ತಾಯವಿಲ್ಲ. ಯಾರೂ ಯಾರನ್ನೂ ಪ್ರಶ್ನಿಸುವುದಿಲ್ಲ. (ನನ್ನ ಸೋವಿಯತ್ ದೇಶದ ಭೇಟಿಯ ಸಂದರ್ಭದಲ್ಲಿ ಆಂದ್ರಪೊವ್ ಆಗಿನ ಸೋವಿಯತ್ ದೇಶದ ಮುಖ್ಯಸ್ಥರಾಗಿದ್ದರು. ಅದಕ್ಕೆ ಮೊದಲು ಅವರು ಗೂಢಚರ್ಯೆ ಸಂಸ್ಥೆಯಾಗಿದ್ದ ಕೆ.ಜಿ.ಬಿ.ಯ ಮುಖ್ಯಸ್ಥರಾಗಿದ್ದರು. ನಾನು ಸೋವಿಯತ್ ದೇಶದಿಂದ ವಾಪಸ್ ಬಂದ ನಂತರ ೧೯೮೪ನೇ ಆಗಸ್ಟ್ ೯ ರಂದು ನಿಧನರಾದರು. ‘ಸೋವಿಯತ್ ಜನರ ಐಹಿಕ ಅಭ್ಯುದಯ ಸಾಧಿಸಿದ್ದೇವೆ. ಆದರೆ ಅವರ ಒಳಗೆ ಇದನ್ನೂ ಮೀರಿದ ಹಸಿವಿದೆ. ಆ ಕಡೆ ಗಮನ ಕೊಡುವುದು ಅವಶ್ಯವಾಗಿದೆ’ ಎಂದು ಅವರು ಸಾವಿಗೆ ಮುನ್ನ ಬರೆದಿಟ್ಟಿದ್ದರು ಎಂದು ವರದಿಯಾಗಿತ್ತು. ಆಗ ಗೊರ್ಬಚೆವ್ ಹೆಸರು ನಾವಾರೂ ಕೇಳಿರಲಿಲ್ಲ. ಅವರ ನಿಧನದ ನಂತರ ಗೊರ್ಬಚೆವ್ ಅವರ ಸ್ಥಾನಕ್ಕೆ ಬಂದರು. ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದಾಗ, ಗೊರ್ಬಚೆವ್ ೧೯೮೬ರಲ್ಲಿ ೧೧೦ ಸದಸ್ಯರ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡಿದರು. ಬರುವ ಸಂದರ್ಭದಲ್ಲಿ ಅವರು ತಾಷ್ಕೆಂಟಲ್ಲಿ ಉಳಿದಾಗ ಅಲ್ಲಿನ ನಾಯಕರಿಗೆ ಧರ್ಮದ ವಿಚಾರದಲ್ಲಿ ಎಚ್ಚರಿಕೆ ನೀಡಿದರು. ಮುಂದೆ ಗ್ಲಾಸ್ನೊಸ್ತ್ (ಮುಕ್ತತೆ) ಮತ್ತು ಪೆರಸ್ತೋಯಿಕಾ (ಪುರ್ರಚನೆ) ಬಗ್ಗೆ ಮಾತನಾಡುತ್ತ ‘ಧರ್ಮವು ಜನರ ಅಪೀಮು ಎಂದು ಮಾರ್ಕ್ಸ್ ಹೇಳಿದ್ದಾರೆ. ಆದರೆ ಒಂದು ಡೋಸ಼್ ತೆಗೆದುಕೊಂಡರೆ ತೊಂದರೆ ಇಲ್ಲ’ ಎಂದು ಹೇಳಿದ್ದರು. ಶೀತಲಸಮರವನ್ನು ಅಂತ್ಯಗೊಳಿಸುವ ಭ್ರಮೆಯಿಂದ ರೂಪಿಸಿದ ಅವರ ನೀತಿಯಿಂದಾಗಿ ೧೯೯೧ರಲ್ಲಿ ಸೋವಿಯತ್ ದೇಶ ಒಡೆದು ೧೫ ಗಣರಾಜ್ಯಗಳಾದವು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಫ್ಯಾಸಿಸ್ಟ್ ಹಿಟ್ಲರನ ವಿರುದ್ಧ ಹೋರಾಡುತ್ತ ಸೋವಿಯತ್ ದೇಶದ ಎರಡು ಕೋಟಿ ಯುವಕರು ಹುತಾತ್ಮರಾದರು. ಇಂದು ಸ್ವತಂತ್ರ ಗಣರಾಜ್ಯವಾಗಿರುವ ರಷ್ಯಾ ಮತ್ತು ಯುಕ್ರೇನ್ ದೇಶಗಳ ಯುವಕರು ವೈರಿಗಳಂತೆ ಪರಸ್ಪರ ಯುದ್ಧನಿರತರಾಗುವಂಥ ದುರಂತ ದಿನಗಳನ್ನು ನೋಡುತ್ತಿದ್ದೇವೆ. ಸೋವಿಯತ್ ದೇಶದ ವಿವಿಧ ಗಣರಾಜ್ಯಗಳ ಯುವಕ ಯುವತಿಯರು ಹೊಟ್ಟೆ ಹೊರೆಯಲು ವಿದೇಶಗಳಲ್ಲಿ ಸುತ್ತುತ್ತಿದ್ದಾರೆ. ಯುವತಿಯರು ದುಬೈ ಡೆಸರ್ಟ್ ಸಫಾರಿ ಭಾಗವಾದ ಮನರಂಜನಾ ಕಾರ್ಯಕ್ರಮದಲ್ಲಿ ಅರೆ ಬೆತ್ತಲೆ ಡಾನ್ಸ್ ಮಾಡುವುದನ್ನು ಕೆಲವರ್ಷಗಳ ಹಿಂದೆ ನೋಡಿದೆ.)
ಉಲುಗ್ ಬೇಗ್ ತಮ್ಮ ೩೦ನೇ ವರ್ಷಕ್ಕೆ ಸಮರಕಂದದಲ್ಲಿ ಖಗೋಳ ವಿಕ್ಷಣಾಲಯ ನಿರ್ಮಿಸಿದರು. ೧೪೨೪ರಿಂದ ಪ್ರಾರಂಭವಾದ ಇದರ ನಿರ್ಮಾಣ ಕಾರ್ಯ ೧೪೨೯ಕ್ಕೆ ಪೂರ್ಣಗೊಂಡಿತು. ಉಲುಗ್ ಬೇಗ್ ಹದಿಹರೆಯದವರಾಗಿದ್ದಾಗ ಇರಾನಿನ ಖಗೋಳ ವೀಕ್ಷಣಾಲಯ ನೋಡಿ ಅದರ ಪ್ರಭಾವಕ್ಕೆ ಒಳಗಾಗಿದ್ದರು. ನಂತರ ಅವರ ಚಿತ್ತವೆಲ್ಲ ಗಣಿತ, ಖಗೋಳವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವದ ಶಿಕ್ಷಣದ ಕಡೆಗೆ ಹೊರಳಿತು. ಅವರ ಈ ವಿಶಾಲವಾದ ವೀಕ್ಷಣಾಲಯ ಗೆಲಿಲಿಯೊ ದೂರದರ್ಶಕ ತಯಾರಿಸುವುದಕ್ಕೆ ೧೫೦ ವರ್ಷಗಳಷ್ಟು ಹಿಂದೆಯೆ ನಿರ್ಮಿತವಾದುದು. ರಷ್ಯಾದ ಪುರಾತತ್ವ ಶಾಸ್ತ್ರಜ್ಞರು ೧೯೦೮ರಲ್ಲಿ ಈ ಸ್ಥಳದಲ್ಲಿ ಖಗೋಳ ವೀಕ್ಷಣಾಲಯ ಇದ್ದುದನ್ನು ಪತ್ತೆ ಹಚ್ಚಿದರು.

ಉಲುಗ್ ಬೇಗ್ ವೇಳೆಯಲ್ಲಿ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ದೂರದರ್ಶಕಗಳಿರಲಿಲ್ಲ. ತಮ್ಮ ವೀಕ್ಷಣಾಲಯದಲ್ಲಿ ಇನ್ನೂ ಹೆಚ್ಚಿನ ವೈಜ್ಞಾನಿಕ ಬದಲಾವಣೆ ಮಾಡಿದರು. ಸತತ ಪ್ರಯತ್ನದ ಮೂಲಕ ೧೦೧೮ ನಕ್ಷತ್ರಗಳ ಪಟ್ಟಿಯನ್ನು ತಯಾರಿಸಿದರು. ಅಲ್ಲದೆ ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ಗ್ರಹಗಳ ಸ್ಥಾನ ಕಂಡುಹಿಡಿಯುವ ಮಾನದಂಡಗಳನ್ನು ಕಂಡುಹಿಡಿದರು.
ತಂದೆ ಸುಲ್ತಾನ್ ಶಾರುಖ್ ಖಾನ್ ಮತ್ತು ಮಗ ರಾಜ್ಯಪಾಲ ಉಲುಗ್ ಬೇಗ್ ಇದ್ದ ಸಂದರ್ಭದಲ್ಲಿ ತೈಮೂರಿ ಸಾಮ್ರಾಜ್ಯ ಆರ್ಥಿಕ ಮತ್ತು ವಿಜ್ಞಾನದ ಕ್ಷೇತ್ರಗಳಲ್ಲಿ ಮಹತ್ವದ್ದನ್ನು ಸಾಧಿಸಿ ಸುವರ್ಣಯುಗದ ಕಲ್ಪನೆ ಮೂಡಿಸಿತು.

ಉಲುಗ್ಬೇಗ್ ಖಗೋಳ ವಿಕ್ಷಣಾಲಯ ದುಂಡಗಾಗಿದ್ದು ಮೂರು ಅಂತಸ್ತುಗಳನ್ನು ಹೊಂದಿತ್ತು. ಅಲ್ಲದೆ ಅದು ಮಧ್ಯ ಏಷ್ಯಾದಲ್ಲೇ ಬೃಹತ್ತಾದ ವೀಕ್ಷಣಾಲಯವಾಗಿತ್ತು. ಆದರೆ ೧೬ನೇ ಶತಮಾನದಲ್ಲಿ ನಡೆದ ಅಂತರ್ಯುದ್ಧದಲ್ಲಿ ಉಲುಗ್ ಬೇಗ್ ನಿರ್ಮಿಸಿದ್ದ ಆ ಮಹಾನ್ ಖಗೋಳ ವೀಕ್ಷನಾಲಯವನ್ನು ಹಾಳುಮಾಡಲಾಯಿತು. ಮೊಘಲ್ ರಾಜವಂಶದ ಸ್ಥಾಪಕ ಬಾಬರ್ ಈ ಮಹಾನ್ ವೀಕ್ಷನಾಲಯಕ್ಕೆ ಭೇಟಿ ನೀಡಿದ ಕೊನೆಯ ದೊರೆ.

ಅಕ್ಬರ್ ಕಾಲದಲ್ಲಿ ದೆಹಲಿಯಲ್ಲಿ ಜಂತರ್ ಮಂತರ್ ನಿರ್ಮಾಣವಾಗುವುದಕ್ಕೆ ಉಲುಗ್ ಬೇಗ್ ಖಗೋಳ್ ವೀಕ್ಷಣಾಲಯವೇ ಪ್ರೇರಣೆಯಾಗಿದೆ.
೧೪೪೭ರಲ್ಲಿ ತಂದೆ ಶಾರುಖ್ ಖಾನ್ ಇರಾನಿನ ರಾಯ್ ನಗರದಲ್ಲಿ ಅನಾರೋಗ್ಯದಿಂದ ತೀರಿಕೊಂಡ. ಆ ಸಂದರ್ಭದಲ್ಲಿ ರಾಜಧಾನಿ ಹೇರಾತ್ನ ಉಸ್ತುವಾರಿಯನ್ನು ಮೊಮ್ಮಗ ಅಲಾ ಅಲ್ ದೌಲಾ (ತೀರಿಕೊಂಡ ಮಗ ಬೈಸುಂಘುರ್ನ ಮಗ) ನೋಡಿಕೊಳ್ಳುತ್ತಿದ್ದ. ಆತ ಸಿಂಹಾಸನವೇರಲು ತಯಾರಿ ನಡೆಸಿದ.

ತಂದೆ ಶಾರುಖ್ ಖಾನ್ ತೀರಿಕೊಂಡ ನಂತರ ಮಗ ಉಲುಗ್ ಬೇಗ್ ಉತ್ತರಾಧಿಕಾರಿಯಾಗಲು ಬಹಳ ಕಷ್ಟಪಡಬೇಕಾಯಿತು. ಸಂಬಂಧಿಕರ ಮಧ್ಯೆಯೆ ಅಂತರ್ಯುದ್ಧ ಪ್ರಾರಂಭವಾಯಿತು. ತಂದೆಯ ಮರಣದ ಸುದ್ದಿ ಕೇಳಿದ ಕೂಡಲೆ ಉಲುಗ್ ಬೇಗ್ ಹೇರಾತ್ ಕಡೆಗೆ ಹೊರಟರು. ಅಲಾ ಅಲ್ ದೌಲಾ ಹೇರಾತ್ ಸಿಂಹಾಸನಕ್ಕಾಗಿ ಯುದ್ಧ ಸಾರಿದ.

ಆತ ಹೇರಾತ್ ಸಿಂಹಾಸನಕ್ಕಾಗಿ ಹಾತೊರೆದ. ಆದರೆ ೧೪೪೮ರಲ್ಲಿ ಉಲುಗ್ ಬೇಗ್ ವಿರುದ್ಧ ಮುರ್ಘಬ್ನಲ್ಲಿ ಸಾರಿದ ಯುದ್ಧದಲ್ಲಿ ಸೋತ. ನಂತರ ಖುರಾಸಾನ್ನಲ್ಲಿ ಆಳುತ್ತಿದ್ದ ದೌಲಾನ ಸಹೋದರ ಅಬುಲ್ ಖಾಸಿಂ ಬಾಬರ್ ಮಿರ್ಜಾ ಉಲುಗ್ ಬೇಗರನ್ನು ಸೋಲಿಸಿದ.

ನಂತರ ಉಲುಗ್ ಬೇಗ್ ಬಲ್ಖ್ ನಗರಕ್ಕೆ ಹೋದರು. ಉಜ್ಬೆಕಿಸ್ತಾನ್ ಗಡಿಯಿಂದ ೭೪ ಕಿಲೊ ಮೀಟರ್ ದೂರದಲ್ಲಿ ಅಫಘಾನಿಸ್ತಾನದ ಬಲ್ಖ್ ನಗರವಿದೆ. ಅಲ್ಲಿ ಅವರ ಮಗ ಅಬ್ದುಲ್ ಲತೀಫ್ ಮಿರ್ಜಾ ರಾಜ್ಯಪಾಲನಾಗಿದ್ದ. ಆತ ಅಲ್ಲಿ ತಂದೆಯ ವಿರುದ್ಧ ಬಂಡಾಯವೆದ್ದ ಕಾರಣ ಇನ್ನೊಂದು ಅಂತರ್ಯುದ್ಧ ಪ್ರಾರಂಭವಾಯಿತು. ಉಲುಗ್ ಬೇಗ್ ಮಗನಿಗೆ ಶರಣಾಗತನಾದ. ಮಗ ಅಬ್ದುಲ್ ಲತೀಫ್ ತನ್ನ ತಂದೆ ಉಲುಗ್ ಬೇಗ್ನನ್ನು ೧೪೪೯ರಲ್ಲಿ ಮೆಕ್ಕಾ ಯಾತ್ರೆಗೆ ಕಳುಹಿಸಿದ. ಆದರೆ ಅವರು ಮೆಕ್ಕಾ ತಲಪುವ ಮೊದಲೇ ಕೊಲೆ ಮಾಡಿಸಿದ! ಹೀಗೆ ಮಧ್ಯಯುಗದ ವಿಜ್ಞಾನಿ ರಾಜ ಉಲುಗ್ ಬೇಗ್ ಅವರ ಅಂತ್ಯವಾಯಿತು! ಆಗ ಅವರಿಗೆ ೫೫ ವರ್ಷ ವಯಸಾಗಿತ್ತು. ಅಷ್ಟರೊಳಗೆ ಅವರು ಅಗಾಧವಾದುದನ್ನು ಸಾಧಿಸಿದ್ದರು.

ಸುಸಂಸ್ಕೃತ ಉಲುಗ್ ಬೇಗ್ ಅಜ್ಞಾನಿಗಳ ಕಣ್ಣಲ್ಲಿ ಸಪ್ಪೆ ರಾಜನ ಹಾಗೆ ಕಂಡರು. ಮೂಲಭೂತವಾದಿಗಳು ಅವರ ಖಗೋಳವಿಜ್ಞಾನದ ಪ್ರತಿಭೆಯನ್ನು ಹೀಗಳೆದರು. ಅಧಿಕಾರ ಹೋದರೂ ಪರವಾಗಿಲ್ಲ ಜ್ಞಾನ ಮತ್ತು ಖಗೋಳವಿಜ್ಞಾನದಿಂದ ದೂರ ಸರಿಯಲಾರೆ ಎಂಬ ಮನೋಭಾವ ಅವರದಾಗಿತ್ತು ಎಂದು ಗುಲ್ಚೆಹರಾ ಹೇಳಿದಳು.


(ಸಿಂಹಾಸನವೇರುವುದಕ್ಕಾಗಿ ಮಕ್ಕಳೇ ತಂದೆಯನ್ನು, ಸಹೋದರ ಸಹೋದರನನ್ನು, ಹೆಂಡತಿ ಗಂಡನನ್ನು, ಮನೆಯವರೇ ಮನೆಯವರನ್ನು, ಮುಸ್ಲಿಮರು ಮುಸ್ಲಿಮರನ್ನು, ಹಿಂದುಗಳು ಹಿಂದುಗಳನ್ನು ಕೊಂದ ಅನೇಕ ಘಟನೆಗಳಿಗೆ ಇತಿಹಾಸ ಸಾಕ್ಷಿಯಾಗಿದೆ. ವಿವಿಧ ಧರ್ಮಗಳ ರಾಜರು ತಮ್ಮ ಸಿಂಹಾಸನಕ್ಕಾಗಿ ತಮ್ಮ ತಮ್ಮ ಧರ್ಮಗಳನ್ನು ಬಳಸಿಕೊಳ್ಳುತ್ತಾರೆ. ಅವರು ಮಾಡುವ ತಮ್ಮದೇ ಧರ್ಮದ ದುರುಪಯೋಗದ ಕಾರಣ ಜನರಲ್ಲಿ ವಿಷಬೀಜ ಬಿತ್ತುತ್ತಾರೆ. ಮುಂದೆ ಆಯಾ ಧರ್ಮಗಳ ಜನರು ಒಬ್ಬರನ್ನೊಬ್ಬರು ಸಂಶಯದಿಂದ ಕಾಣುತ್ತ ಬದುಕುವ ಪರಿಸ್ಥಿತಿಯನ್ನು ನಿರ್ಮಿಸುತ್ತಾರೆ. ಇದನ್ನೇ ಇಂದಿನ ಕೋಮುವಾದಿ ರಾಜಕಾರಣಿಗಳು ಪಾಲಿಸುತ್ತಿದ್ದಾರೆ. ಜನ ಎಚ್ಚರಗೊಳ್ಳುವವರೆಗೆ ಇದು ಹೀಗೇ ನಡೆದಿರುತ್ತದೆ.

(ಮುಂದುವರೆಯುವುದು)
*