ಕೆಲವು ಕೆಟ್ಟ ಸನ್ನಿವೇಶಗಳಲ್ಲಿ ಈ ಪ್ರಪಂಚವೇ ನಮ್ಮ ವಿರುದ್ಧ ನಿಂತಿದೆಯೇನೋ, ಇಲ್ಲಿ ಮಾನವೀಯತೆ, ಸ್ನೇಹ, ಸೌಜನ್ಯಕ್ಕೆ ಜಾಗವೇ ಇಲ್ಲವೇನೋ ಎನ್ನಿಸುವ ಹೊತ್ತಿನಲ್ಲಿ ಇಂತಹ ಹಚ್ಚನೆಯ ಹಿತವನ್ನು ಸವರಿದ ಸಂದರ್ಭಗಳನ್ನು ಮೆಲುಕು ಹಾಕಬೇಕು. ಬಹುಶಃ ಈ ಪ್ರಪಂಚ ನಡೆಯುತ್ತಿರುವುದೇ ಇಂತಹ ಅಜ್ಞಾತ ಕೈಗಳ ಅಭಯದಿಂದ. ಪ್ರತಿದಿನವೂ ಸಿಗುವ ಅವಕಾಶ ಇರುವ, ಸಂಬಂಧಗಳಿಂದ ಅಂಟಿಕೊಂಡ, ಸ್ನೇಹ-ವ್ಯವಹಾರ-ವಿಶ್ವಾಸ- ಪರಿಚಯದ ಮುಸುಕು ಹೊದ್ದ ದಿನನಿತ್ಯದ ಕೊಡು-ಕೊಳ್ಳುವಿಕೆಗೆ ಒಂದು ತೂಕವಾದರೆ, ಮತ್ತೊಮ್ಮೆ ಸಿಗುವ ಸಾಧ್ಯತೆಯೇ ಕ್ಷೀಣವಾಗಿರುವ ಅಪ್ಪಟ ಮನುಷ್ಯಸಂಬಂಧವಾಗಿ ಎದುರಾಗುವ ಉಪಕಾರಗಳದ್ದು ಮತ್ತೊಂದು ವಜನು.
ನಾಗಶ್ರೀ ಅಜಯ್‌ ಬರೆಯುವ ಅಂಕಣ “ಲೋಕ ಏಕಾಂತ”

“ಆಕೆಯನ್ನ ಜೀವನದಲ್ಲಿ ಇನ್ನೊಂದು ಸಲ ನೋಡ್ತೀನೋ ಇಲ್ಲವೋ ಗೊತ್ತಿಲ್ಲ. ಇವತ್ತು ಎದುರು ಬಂದು ನಿಂತರೆ ಗುರುತು ಹಿಡೀತೀನೋ ಇಲ್ಲವೋ ಅದೂ ಗೊತ್ತಿಲ್ಲ. ಆದರೆ ಅವತ್ತು ನನ್ನ ಜೀವ ಕಾಪಾಡಿದ ದೇವತೆಯಾಕೆ. ನಿನ್ನ ತಂಗಿ ಹುಟ್ಟಿದಾಗ ವಿಪರೀತ ಲೋ ಬಿಪಿ ಆಗೋಗಿ ಬದುಕೋದೇ ಕಷ್ಟವಿತ್ತು. ಮೈಮೇಲೆ ದೇವರು ಬಂದಂತೆ ಓಡಿ ಹೋಗಿ ಒಂದು ಬಾಟೆಲ್ ಡ್ರಿಪ್ಸ್ ಐದೇ ನಿಮಿಷದಲ್ಲಿ ದೇಹದೊಳಗೆ ಇಳಿಯುವಂತೆ ಹಾಕಿದ್ದಳು. ಅಂತೂ ಮಕ್ಕಳ ತಾಯಾಗಿ ನಾನು ಉಳಿದುಕೊಂಡೆ. ಒಂದು ಕ್ಷಣ ಅವಳು ಎಚ್ಚರ ತಪ್ಪಿದ್ದರೆ, ಪುಟ್ಟ ಇಬ್ಬರು ಹೆಣ್ಣುಮಕ್ಕಳು ಅನಾಥರಾಗಿಬಿಡ್ತಿದ್ರಿ. ಒಂದು ವೇಳೆ ತಂದೆ ಇಲ್ಲದಿದ್ದರೂ, ಹೆತ್ತತಾಯಿ ಮನಸ್ಸು ಕಲ್ಲು ಮಾಡ್ಕೊಂಡು ಮಕ್ಕಳನ್ನು ಬೆಳೆಸಿ, ಎಲ್ಲಾ ಮುಚ್ಚಟೆ ಮಾಡಿ ದಡ ಸೇರಿಸ್ತಾಳೆ. ಆದರೆ ಒಂಟಿ ಗಂಡಸು ಕೆಲವನ್ನು ಮಾಡಬೇಕಂದ್ರೂ ಮಾಡಲಾರ. ಮೈನೆರೆದಾಗ, ಬಸಿರು, ಬಯಕೆ, ಬಾಣಂತನ ಅಂದರೆ ತಾಯಿಯ ಆಸರೆ ಕೊಡುವ ನೆಮ್ಮದಿ ಈ ಲೋಕದಲ್ಲಿ ಎಲ್ಲಿಂದ ಕಡ ತರೋದಕ್ಕಾಗತ್ತೆ ಹೇಳು..” ಈ ಮಾತನ್ನು ಅಮ್ಮ ಕನಿಷ್ಟ ಸಾವಿರ ಸಲ ಆಡಿರಬಹುದು.. ಪ್ರತಿಸಲವೂ ಆಕೆ ಕಣ್ತುಂಬಿ, ಪರವಶಳಾಗಿ ಈ ಕಥೆಯನ್ನು ಹೊಸದೆಂಬಂತೆ ಹೇಳುತ್ತಾಳೆ. ದಾದಿಯ ಆ ಹೊತ್ತಿನ ಕರ್ತವ್ಯನಿಷ್ಠೆ, ಸಮಯಪ್ರಜ್ಞೆಗೆ ಲೌಕಿಕದ ಯಾವ ಉಡುಗೊರೆ ನೀಡಲಾಗದಿದ್ದರೂ, ಹೃದಯಪೂರ್ವಕ ಒಳಿತನ್ನು ಹಾರೈಸುವುದನ್ನಂತೂ ತಪ್ಪಿಸಿಲ್ಲ. ಅಷ್ಟರಮಟ್ಟಿಗೆ ಹೆಸರು ತಿಳಿಯದ ದಾದಿಯ ಋಣ ನಮ್ಮ ಮೇಲೆ.

ಮೂರು ತಿಂಗಳ ಪುಟ್ಟ ಕೂಸು, ನಾಲ್ಕು ವರ್ಷದ ದೊಡ್ಡ ಮಗು, ಗಂಡನೊಂದಿಗೆ ಸಣ್ಣ ಸಂಬಳದ ನೌಕರಿಯ ಕಾರಣಕ್ಕೆ ಹೊಸ ಊರಿಗೆ ಬಂದಿಳಿದಾಗ, ಇಡೀ ಮನೆ ನಿಭಾಯಿಸುತ್ತಾ, ಮಕ್ಕಳನ್ನು, ಗಂಡನನ್ನು ಸಂಭಾಳಿಸುತ್ತಾ ಸೋತು ಹೋಗುವ ಮುವ್ವತ್ತರ ಹುಡುಗಿಯನ್ನು ಬೀದಿಯೊಂದು ಅಪ್ಪಿಕೊಂಡ ರೀತಿಯೇ ಚೆಂದ. “ಎದ್ದ ಬಾಣಂತಿ ಹೀಗೆ ಚಾಕರಿ ಮಾಡಿದರೆ ಗತಿಯೇನು? ಆ ಕೈಗೂಸನ್ನು ನಮಗೆ ಕೊಡು. ಹಾಲು ಕುಡಿಯೋ ಕಂದನ್ನ ಆಡಿಸಿ, ಬೆಳೆಸಿ ಕೊಡ್ತೀವಿ. ಲಾಲಿಸಿದ್ರೆ ಮಕ್ಕಳು. ಪೂಜಿಸಿದ್ರೆ ದೇವರು.” ಎಂದು ಹೇಳುತ್ತಾ ಹೊತ್ತು ಹೊತ್ತಿಗೆ ಹಾಲು ಕುಡಿಸಿ, ಆಟವಾಡಿಸಿ, ನಿದ್ದೆ ಪೂರೈಸಿ ಸಂಜೆ ತನಕ ಸ್ವಲ್ಪ ಸುಧಾರಿಸಿಕೊ ಹುಡುಗಿ ಎಂದವರು ಈಗ ಕಾಲಾನುಕ್ರಮದಲ್ಲಿ ಚದುರಿ ಹೋಗಿದ್ದಾರೆ. ಅವರ ಮನೆಯವರಿಗೆ ಇಲ್ಲದ ಚಿಂತೆ ನಮಗೇಕೆ? ಮಕ್ಕಳನ್ನು ಹೆತ್ತ ಮೇಲೆ, ಸಕಲ ಹೊಣೆಯೂ ಅವರದೇ. ಇವರಿಂದ ನಮಗೇನಾಗಬೇಕು? ಎಂಬ ಅಡ್ಡಮಾತುಗಳಿಗೆ ಅವಕಾಶವೇ ನೀಡದೆ ಕೇರಿಯೊಂದು ಕಾಳಜಿಯಿಂದ ಕುಟುಂಬವನ್ನು ಪೊರೆಯುವುದು‌ ಸಣ್ಣ ಸಂಗತಿಯಲ್ಲ.

ಓದುವ ಮಕ್ಕಳಿದ್ದಾರೆ. ದೊಡ್ಡದನಿಯಲ್ಲಿ ಟಿವಿ ಹಾಕಿದರೆ ಅವರಿಗೆ ಕಷ್ಟವಾಗತ್ತೆ. ನಿನಗೆ ಕೇಳಿಸದಿದ್ರೂ ಪರವಾಗಿಲ್ಲ. ಪರೀಕ್ಷೆ ಹೊತ್ತಲ್ಲಿ ಹುಡುಗರಿಗೆ ತೊಂದರೆಯಾಗಬಾರದು. ಎಂದು ಹೆಂಡತಿಗೆ ಬುದ್ಧಿ ಹೇಳುತ್ತಿದ್ದ ಮೇಷ್ಟರಿದ್ದರು. ಮಕ್ಕಳ ಪಾಟಿಚೀಲ, ಪುಸ್ತಕ, ಬಣ್ಣದ ಪೆನ್ಸಿಲ್ಲು, ಜಾಮಿಟ್ರಿ ಬಾಕ್ಸು ಹೊಂದಿಸಲು ಹಗಲಿರುಳು ಮಕ್ಕಳ ಒಳಿತಿನ ಜಪ ಮಾಡುವ, ಕರೋನಾ ಸಮಯದಲ್ಲಿ ಕಾಣದ ಮಕ್ಕಳ ಬಗ್ಗೆ ಪರಿತಪಿಸಿದ, ಅನುದಾನಗಳನ್ನು ಸದುಪಯೋಗ ಮಾಡಲು ಶ್ರಮಿಸುವ ಶಿಕ್ಷಕಿಯರಿದ್ದಾರೆ.ಇಂಥ ಖಾಯಿಲೆಗೆ ಮದ್ದೇ ಇಲ್ಲವೇನೋ ಎಂದು ಹತಾಶರಾದ ಘಳಿಗೆಯಲ್ಲಿ, ಪರ್ಯಾಯ ಚಿಕಿತ್ಸೆಯ ಅರಿವು ಮೂಡಿಸಿ ಮನದ ಭಾರ ಇಳಿಸಿದವರು ಸಿಕ್ಕಿದ್ದು ರೈಲುಪಯಣದಲ್ಲಿ. ಮತ್ತೆ ಸಿಗಬಹುದು. ಸಿಗದೆಯೂ ಇರಬಹುದು. ಈಗ ಜಾಲತಾಣಗಳಿದೆ ಫೋನ್ ಪ್ರತಿಯೊಬ್ಬರ ಕೈಲಿದೆ. ಆದರೆ, ಇನ್ನೊಂದು ಮಾತು ಹೆಚ್ಚಿಗೆ ಆಡಿದರೂ ಆ ಕ್ಷಣದ ಅನುಭೂತಿಯೇ ಕಳೆದುಹೋಗಬಹುದಾದ ಎಚ್ಚರ ಬಾಯಿಕಟ್ಟಿ ಹಾಕಿರುತ್ತದೆ. ಬಹಳ ಸಲ ಎಲ್ಲರೂ ಮನಸ್ಸಿನ ಮಾತನ್ನು ಸರಾಗವಾಗಿ ಆಡಲಾರದೆ ನುಂಗಿಕೊಂಡಿರುತ್ತಾರೆ. ಸಹಾಯ, ಸಹಕಾರ, ಸಹೃದಯತೆಯನ್ನು ಮುಕ್ತವಾಗಿ ಮೆಚ್ಚಿದಷ್ಟು ಬೇಗ ಮಾತಾಗಿ ಮೂಡಿಸದ ಅಪ್ಪಟ ಮೌನಿಗಳು ನಾವು. ಆಡಬೇಕಾದ ಸಿಹಿಮಾತುಗಳೆಲ್ಲಾ ಕಣ್ಣಂಚಿನ ಮಿಂಚಾಗಿಯೋ, ತುಟಿಯ ಮೇಲಿನ ಕಿರುನಗೆಯಾಗಿಯೋ, ಅಪ್ಪುಗೆಯಲ್ಲೋ, ಕಿರು ಕಾಣಿಕೆಯಲ್ಲೋ ಪ್ರತಿಫಲನಗೊಳ್ಳುವುದು ಸತ್ಯ.

ಕೆಲವು ಕೆಟ್ಟ ಸನ್ನಿವೇಶಗಳಲ್ಲಿ ಈ ಪ್ರಪಂಚವೇ ನಮ್ಮ ವಿರುದ್ಧ ನಿಂತಿದೆಯೇನೋ, ಇಲ್ಲಿ ಮಾನವೀಯತೆ, ಸ್ನೇಹ, ಸೌಜನ್ಯಕ್ಕೆ ಜಾಗವೇ ಇಲ್ಲವೇನೋ ಎನ್ನಿಸುವ ಹೊತ್ತಿನಲ್ಲಿ ಇಂತಹ ಹಚ್ಚನೆಯ ಹಿತವನ್ನು ಸವರಿದ ಸಂದರ್ಭಗಳನ್ನು ಮೆಲುಕು ಹಾಕಬೇಕು. ಸರಿಯಿಲ್ಲದ ನೂರು ಸವಾಲುಗಳ ಪಟ್ಟಿಹಿಡಿದು ನೋಯುವುದಕ್ಕಿಂತ ಒಳ್ಳೆಯತನವಿದೆ ಎಂಬ ನಂಬಿಕೆ ಬಲ ನೀಡುತ್ತದೆ. ಬಹುಶಃ ಈ ಪ್ರಪಂಚ ನಡೆಯುತ್ತಿರುವುದೇ ಇಂತಹ ಅಜ್ಞಾತ ಕೈಗಳ ಅಭಯದಿಂದ. ಪ್ರತಿದಿನವೂ ಸಿಗುವ ಅವಕಾಶ ಇರುವ, ಸಂಬಂಧಗಳಿಂದ ಅಂಟಿಕೊಂಡ, ಸ್ನೇಹ-ವ್ಯವಹಾರ-ವಿಶ್ವಾಸ- ಪರಿಚಯದ ಮುಸುಕು ಹೊದ್ದ ದಿನನಿತ್ಯದ ಕೊಡು-ಕೊಳ್ಳುವಿಕೆಗೆ ಒಂದು ತೂಕವಾದರೆ, ಮತ್ತೊಮ್ಮೆ ಸಿಗುವ ಸಾಧ್ಯತೆಯೇ ಕ್ಷೀಣವಾಗಿರುವ ಅಪ್ಪಟ ಮನುಷ್ಯಸಂಬಂಧವಾಗಿ ಎದುರಾಗುವ ಉಪಕಾರಗಳದ್ದು ಮತ್ತೊಂದು ವಜನು.


ಮನುಷ್ಯ ಎಷ್ಟೇ ಬೆಳೆದರೂ ಹಂಬಲಿಸುವುದು ಹಾತೊರೆಯುವುದು ಹನಿಪ್ರೀತಿಗಾಗಿಯೇ. ದರ್ಪದಿಂದ ಮೆರೆದವರು, ನಿಷ್ಠುರವಾದಿಯಾದವರು, ತಾನುಂಟು ಮೂರು ಲೋಕವುಂಟು ಎಂದು ದ್ವೀಪವಾದವರು ಕೂಡ ಆಳದಲ್ಲಿ ಪುಕ್ಕಲರೇ. ಎಲ್ಲರೊಳಗೊಂದಾಗಿ ಬದುಕಲಿತ್ತ ಅವಕಾಶದಲ್ಲಿ ನಾವು ಸಹಜವಾಗಿ, ಸರಳವಾಗಿ ಒಬ್ಬರಿಗೆ ಆಗುವುದೇ ಸಾರ್ಥಕ್ಯವಿರಬಹುದು. ಆಡಿದ ಮಾತು, ಕೊಟ್ಟ ಸಲಹೆ, ಹಂಚಿಕೊಂಡ ಕೆಲಸ, ಹೊತ್ತ ಜವಾಬ್ದಾರಿ, ಸಮಯಕ್ಕೆ ಒದಗಿದ ಸಾಂತ್ವನ ಸಾಮಾನ್ಯ ಕ್ಷಣವೊಂದನ್ನು ವಿಶೇಷವಾಗಿಸಬಹುದು. ಒಬ್ಬೊಬ್ಬರ ಜೀವನವೂ ಲಕ್ಷಾಂತರ ಜೀವ ಎಳೆಗಳೊಂದಿಗೆ ಹೆಣೆದ ವಿಸ್ಮಯ ವಸ್ತ್ರ. ಹೆಣಿಗೆ ಜಾಳಾಗದಂತೆ, ಕಲೆಗಾರಿಗೆ ಕಲೆಯಾಗದಂತೆ, ನಾಜೂಕಾಗಿ ಕಾಪಾಡುವ, ಕೃತಜ್ಞರಾಗುವ ಹೊಣೆ ನಮ್ಮದು. ಅನಾಮಿಕರ ಭಾವಕೋಶದಲ್ಲಿ ಸುಂದರ ನೆನಪಾಗಿ ಉಳಿಯುವ ವ್ಯಕ್ತಿತ್ವ ನಮ್ಮದಾದರೆ ಎಷ್ಟು ಚೆಂದ. ಅಲ್ಲವೇ?