ಅರ್ನಾಕ್ಸ್ ಬೆಳೆದಿದ್ದು ಫ್ರಾನ್ಸಿನ ನಾರ್ಮಂಡಿ ಪ್ರಾಂತ್ಯದ ಯ್ವೆಟೊಟ್ ಎಂಬ ಪುಟ್ಟ ನಗರದಲ್ಲಿ. ಅವರ ತಂದೆ ಅಲ್ಲಿ ಒಂದು ಕಿರಾಣಿ ಅಂಗಡಿ ಮತ್ತು ಕೆಫೆಯನ್ನು ನಡೆಸುತ್ತಿದ್ದರು. ಅಲ್ಲಿಯ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಅವರಿಗೆ ಬಡತನವು ತಂದಿಡಬಹುದಾದ ಸಾಮಾಜಿಕ ತಾರತಮ್ಯದ ಅರಿವಾಯಿತು. ತಮ್ಮ ಬರವಣಿಗೆಯ ಐವತ್ತು ವರ್ಷಗಳಲ್ಲಿ ಅವರು ಬರೆದ ಕೃತಿಗಳ ಸಂಖ್ಯೆ ಇಪ್ಪತ್ತಕ್ಕಿಂತಲೂ ಹೆಚ್ಚು. ಹೆಚ್ಚಿನವು ಕಾದಂಬರಿಗಳಾದರೆ ಇನ್ನು ಕೆಲವು ನಾಟಕಗಳು, ಚಿತ್ರಕಥೆಗಳು ಹಾಗೂ ಕಚ್ಚಾ ದಿನಚರಿಯ ರೂಪದ ಬರಹಗಳೂ ಇವೆ. ‘ದ ಇಯರ್ಸ್’ ಎಂಬ ಅವರ ಪ್ರಸಿದ್ಧ ಕೃತಿ 1950ರಿಂದ 2006ರವರೆಗಿನ ಮಹಿಳೆಯರ ಬದುಕಿನ ಸಂಘರ್ಷಗಳನ್ನು ಚಿತ್ರಿಸುತ್ತದೆ. ‘ಎ ಮ್ಯಾನ್ಸ್ ಪ್ಲೇಸ್’ ಎಂಬುದು ಅವರ ತಂದೆಯೊಂದಿಗಿನ ಅವರ ಸಂಬಂಧಗಳನ್ನು ಚಿತ್ರಿಸುವ ಕಾದಂಬರಿ. 2022ರ ನೊಬೆಲ್ ಪಾರಿತೋಷಕ ಫ್ರಾನ್ಸಿನ ಲೇಖಕಿ ಎಂಭತ್ತರ ಹರೆಯದ ಆನ್ ಅರ್ನಾಕ್ಸ್ ಅವರ ಮುಡಿಗೇರಿದ್ದು, ಅವರ ಕುರಿತು ಸುಧಾ ಆಡುಕಳ ಬರಹ
ಏಕಲವ್ಯನ ಬೆರಳಿಗಾದ ಗಾಯ ಎಲ್ಲರ ನೋವಾಗುವ ಕೌತುಕ
ಎಲ್ಲೋ ಬಡಿಯುವ ಚಿಟ್ಟೆಯ ರೆಕ್ಕೆಗಳು
ಮತ್ತೆಲ್ಲೋ ಬಿರುಗಾಳಿ ಎಬ್ಬಿಸಬಹುದು
ಎನ್ನುತ್ತದೆ ಚಾವೋಸ್‌ನ ಪತಂಗ ಪರಿಣಾಮ ಸಿದ್ಧಾಂತ. ಪುಟ್ಟ ಕಂಪನವೊಂದು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಪ್ರಪಂಚದಲ್ಲಿ ಉಂಟುಮಾಡಬಹುದಾದ ಅಗಾಧ ಪರಿಣಾಮದ ಬಗ್ಗೆ ಬೆಳಕು ಚೆಲ್ಲುತ್ತವೆ ಈ ಮಾತುಗಳು. “ಜೀವನದ ಹಸಿಬಿಸಿ ಅನುಭವಗಳೆಲ್ಲವನ್ನೂ ಭಟ್ಟಿಯಿಳಿಸಿದ ಸಾಹಿತ್ಯಕ್ಕೆ ನೊಬೆಲ್ ನೀಡುವುದರ ಹಿಂದೆ ಏನಾದರೂ ರಾಜಕೀಯ ಉದ್ದೇಶಗಳಿವೆಯೆ?” ಎಂಬ ಪತ್ರಕರ್ತರ ಪ್ರಶ್ನೆಗೆ ನೊಬೆಲ್ ಆಯ್ಕೆ ಸಮಿತಿ ನೀಡಿದ ಉತ್ತರವು ಈ ಮೇಲಿನ ಮಾತುಗಳನ್ನು ನೆನಪಿಸುವಂತಿದ್ದವು. “ಹೌದು, ಆನ್ ಅರ್ನಾಕ್ಸ್ ಅವರ ಹೆಚ್ಚಿನ ಕೃತಿಗಳು ಅವರ ಜೀವನಾಧಾರಿತವಾಗಿವೆ. ಆದರೆ ಅದೇ ಕಾಲಕ್ಕೆ ಅವು ಜಗತ್ತಿನ ಅನೇಕ ರಾಷ್ಟ್ರಗಳ ಮಹಿಳೆಯರ ಭಾವಗಳನ್ನೂ ತಮ್ಮೊಂದಿಗೆ ಬೆರೆಸಿಕೊಂಡಿವೆ. ವೈಯಕ್ತಿಕ ನೋವುಗಳು ಜಗದ ನೋವುಗಳನ್ನಾಗಿ ಬೆಸೆಯುವ ಸಾಹಿತ್ಯಿಕ ಗುಣಗಳಿಗಾಗಿ ನಾವು ಪ್ರಶಸ್ತಿಯನ್ನು ನೀಡುವ ಮೂಲಕ ನಾವು ನೊಬೆಲ್ ಪಾರಿತೋಷಕದ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸಿದ್ದೇವೆ ಎಂದು ನಮಗನಿಸುತ್ತಿದೆ.”
ಎಷ್ಟು ಸತ್ಯವಾದ ಮಾತುಗಳು! ಜಗತ್ತಿನಲ್ಲಿ ಎಷ್ಟೆಲ್ಲ ಯುವಕರು ನಾನಾ ಕಾರಣಗಳಿಂದಾಗಿ ತಮ್ಮ ಬೆರಳುಗಳನ್ನು ಕಳಕೊಂಡಿರಬಹುದು, ಅವೆಲ್ಲವೂ ಅವರ ವೈಯಕ್ತಿಕ ನೋವುಗಳು. ಆದರೆ ಏಕಲವ್ಯನ ಬೆರಳಿಗಾದ ಗಾಯ ಹಾಗಲ್ಲ, ಅದು ನಮ್ಮೆಲ್ಲರ ಸ್ಮೃತಿಯಲ್ಲಿ ದಾಖಲಾದ ನಮ್ಮದೇ ಅನಿಸುವ ನೋವು. ವೈಯಕ್ತಿಕ ನೋವಿಗೆ ಸಾಮಾಜಿಕ ಆಯಾಮದ ಲೇಪನವಾದಾಗ ಅದು ಉಂಟುಮಾಡುವ ಪರಿಣಾಮವಿದು.
2022ರ ನೊಬೆಲ್ ಪಾರಿತೋಷಕ ಮತ್ತೆ ಮಹಿಳಾ ಸಾಹಿತಿಯ ಮುಡಿಗೇರಿದೆ. ಎಂಭತ್ತರ ಹರೆಯದ ಫ್ರಾನ್ಸಿನ ಲೇಖಕಿ ಆನ್ ಅರ್ನಾಕ್ಸ್ ಈ ಗೌರವಕ್ಕೆ ಪಾತ್ರರಾದ ಜಗತ್ತಿನ ಹದಿನೇಳನೆಯ ಮಹಿಳಾ ಸಾಹಿತಿ ಮತ್ತು ಆ ದೇಶದ ಮೊದಲ ಮಹಿಳಾ ಸಾಹಿತಿಯಾಗಿದ್ದಾರೆ. “ತಮ್ಮ ವ್ಯಕ್ತಿಗತ ನೆನಪುಗಳ ಆಳವನ್ನು, ಸಾಮಾಜಿನ ವ್ಯವಸ್ಥೆಯಲ್ಲಿನ ಪ್ರತ್ಯೇಕತೆಗಳನ್ನು ಮತ್ತು ನಿರ್ಬಂಧಗಳನ್ನು ಧೈರ್ಯವಾಗಿ ಮತ್ತು ಚಿಕಿತ್ಸಕ ಒಳನೋಟಗಳ ಮೂಲಕ ತೆರೆದಿಟ್ಟ ಕಾರಣಗಳಿಂದಾಗಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ” ಎಂದು ಆಯ್ಕೆ ಸಮಿತಿ ಪ್ರಕಟಿಸಿದೆ. “ಪ್ರತಿಷ್ಠಿತ ಪ್ರಶಸ್ತಿ ದೊರಕಿದ್ದು ಅತ್ಯಂತ ಸಂಭ್ರಮದ ವಿಷಯ. ಇದು ಅಸಮಾನತೆಯ ವಿರುದ್ಧದ ನನ್ನ ಹೋರಾಟದ ಜವಾಬ್ದಾರಿಯನ್ನು ಹೆಚ್ಚಿಸಿದೆ” ಎಂಬುದು ಅರ್ನಾಕ್ಸ್ ಅವರ ತಕ್ಷಣದ ಪ್ರತಿಕ್ರಿಯೆಯಾಗಿದೆ.
ನೊಬೆಲ್ ಬಹುಮಾನವನ್ನು ಪ್ರಕಟಿಸುವ ಮೊದಲು ಆಯ್ಕೆ ಸಮತಿಯು ತನ್ನ ಟ್ವಿಟರ್ ನಲ್ಲಿ ಈ ಬಹುಮಾನವನ್ನು ಪಡೆದ ಮೊಟ್ಟಮೊದಲ ಯುರೋಪಿಯನ್ ಅಲ್ಲದ ನಮ್ಮ ದೇಶದ ಕವಿ ರಬೀಂದ್ರನಾಥ ಟ್ಯಾಗೋರ್ ಅವರನ್ನು ಸ್ಮರಿಸಿದ್ದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.
“ಚಿಟ್ಟೆಗಳು ತಿಂಗಳುಗಳನ್ನು ಲೆಕ್ಕಹಾಕುವುದಿಲ್ಲ
ಕ್ಷಣಗಳನ್ನು ಎಣಿಸುತ್ತವೆ, ಹಾಗಾಗಿ
ಅವುಗಳಿಗೆ ಬೇಕಾದಷ್ಟು ಸಮಯವಿದೆ”
ಎಂಬ ರಬೀಂದ್ರರ ಸಾಲುಗಳನ್ನು ಉಲ್ಲೇಖಿಸುತ್ತಾ, ಅವರ ಕವಿತೆಗಳು ಸೂಕ್ಷ್ಮ, ಸುಂದರ ಮತ್ತು ಹೊಸತನಗಳಿಂದ ಕೂಡಿವೆ ಎಂದು ಹೇಳಲಾಗಿದೆ. 1913ರಲ್ಲಿ ತಮ್ಮ ಗೀತಾಂಜಲಿಗಾಗಿ ನೊಬೆಲ್ ಪಡೆದ ರವೀಂದ್ರರ ಕಾವ್ಯದ ರೆಕ್ಕೆಗಳು ಬಡಿದ ಪರಿಣಾಮಗಳು ಇಂದಿಗೂ ದಾಖಲಾಗುತ್ತಲೇ ಇವೆ.
ಅರ್ನಾಕ್ಸ್ ಅವರ ಸಾಹಿತ್ಯಕ್ಕೆ ನೊಬೆಲ್ ಘೋಷಿಸುವಾಗ ರವೀಂದ್ರರ ಉಲ್ಲೇಖವಾಗಿರುವುದು ಇವರಿಬ್ಬರ ಸಾಹಿತ್ಯದ ನಡುವಿರುವ ಸಾಮ್ಯತೆಯ ಕಾರಣದಿಂದಲೂ ಇರಬಹುದೇನೊ? ರವೀಂದ್ರರಂತೆಯೇ ಆರ್ನಾಕ್ಸ್ ಅವರೂ ಕೂಡ ತಮ್ಮ ಜೀವನದ ಘಟನೆಗಳನ್ನೇ ತಮ್ಮ ಸಾಹಿತ್ಯದ ಮೂಲದ್ರವ್ಯವಾಗಿ ಮಾಡಿಕೊಂಡವರು. ತಮ್ಮ ಬಾಲ್ಯದ ಕಟ್ಟುಪಾಡುಗಳು, ತಾರುಣ್ಯದಲ್ಲಿ ಸರೋವರದಲ್ಲಿ ತೇಲುವ ದೋಣಿಯಲ್ಲಿ ಒಬ್ಬರೇ ಕುಳಿತು ಧೇನಿಸಿದ ಬದುಕಿನ ಸತ್ಯಗಳು, ಶಾಂತಿನಿಕೇತನದ ವಾತಾವರಣದಲ್ಲಿ ಮುಕ್ತ ಕಲಿಕೆಯ ಸನ್ನಿವೇಶದಲ್ಲಿ ಕೇಳಿಬಂದ ಮಕ್ಕಳ ಲವಲವಿಕೆಯ ಕಲರವದ ಸದ್ದುಗಳು, ರಾಷ್ಟ್ರೀಯತೆಯ ಕಾವು ದೇಶದಲ್ಲಿ ಹುಟ್ಟುಹಾಕಿದ ತಲ್ಲಣಗಳು, ಗಡಿರೇಖೆಗಳನ್ನು ಮೀರಿದ ಮಾನವೀಯತೆಯಲ್ಲಿನ ಅಗಾಧ ನಂಬಿಕೆಗಳು ಇವೆಲ್ಲವೂ ರವೀಂದ್ರರ ಸಾಹಿತ್ಯದ ಒಳಸೆಲೆಗಳಾಗಿ ಒದಗಿದ್ದವು. ಅಂತೆಯೇ ಅರ್ನಾಕ್ಸ ಅವರ ಕೃತಿಗಳಲ್ಲೂ ಅವರ ಬಾಲ್ಯದ ಬಡತನ, ಹಳ್ಳಿಯ ಬದುಕಿನ ಕಥನಗಳು, ಹದಿಹರೆಯದ ಅಚಾತುರ್ಯದಿಂದಾದ ಬಸುರಿತನ, ದಾಂಪತ್ಯದ ಸಂಘರ್ಷಗಳು, ತನಗಿಂತಲೂ ಮೂವತ್ತು ವರ್ಷ ಚಿಕ್ಕವರಾದ ಗೆಳೆಯನೊಂದಿಗಿನ ಪ್ರೇಮ, ಎರಡನೆಯ ಮಹಾಯುದ್ಧದ ನಂತರದ ಫ್ರೆಂಚ್ ಮಹಿಳೆಯರ ಬದುಕು ಇವೆಲ್ಲವೂ ನೈಜವಾಗಿ ಚಿತ್ರಣಗೊಂಡಿವೆ. ವಿಮರ್ಶಕರು ಅರ್ನಾಕ್ಸರ ಎಲ್ಲ ಕೃತಿಗಳನ್ನು ಅವರ ಜೀವನಚರಿತ್ರೆಯ ತುಣುಕುಗಳು ಎಂದು ಗುರುತಿಸಿದಾಗಲೂ ಅರ್ನಾಕ್ಸ ಅವುಗಳನ್ನು ಶುದ್ಧ ಫಿಕ್ಷನ್ ಎಂದು ವಾದಿಸುತ್ತಲೇ ಬಂದಿದ್ದಾರೆ.
ಸೆಪ್ಟೆಂಬರ್ 1, 1940ರಲ್ಲಿ ಹುಟ್ಟಿದ ಅರ್ನಾಕ್ಸ್ ಬೆಳೆದಿದ್ದು ಫ್ರಾನ್ಸಿನ ನಾರ್ಮಂಡಿ ಪ್ರಾಂತ್ಯದ ಯ್ವೆಟೊಟ್ ಎಂಬ ಪುಟ್ಟ ನಗರದಲ್ಲಿ. ಅವರ ತಂದೆ ಅಲ್ಲಿ ಒಂದು ಕಿರಾಣಿ ಅಂಗಡಿ ಮತ್ತು ಕೆಫೆಯನ್ನು ನಡೆಸುತ್ತಿದ್ದರು. ಅಲ್ಲಿಯ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಅವರಿಗೆ ಬಡತನವು ತಂದಿಡಬಹುದಾದ ಸಾಮಾಜಿಕ ತಾರತಮ್ಯದ ಅರಿವಾಯಿತು. ಅವರು ಕುಟುಂಬದಲ್ಲಿ ಮೊದಲ ಬಾರಿಗೆ ಕಾಲೇಜು ಮೆಟ್ಟಿಲು ತುಳಿದವರಾಗಿದ್ದರು. ಕೆಲಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ನಿರ್ವಹಿಸಿದರೂ ಓದಿನ ಹಸಿವು ಅವರನ್ನು ವಿದ್ಯಾಭ್ಯಾಸವನ್ನು ಮುಂದುವರೆಸುವಂತೆ ಮಾಡಿತು. ಮುಂದೆ ಅವರು ಎರಡು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. 2000ದಲ್ಲಿ ಬರವಣಿಗೆಯ ಕಾರಣಕ್ಕಾಗಿ ವೃತ್ತಿಯನ್ನು ತೊರೆದರು. ಬಾಲ್ಯದಿಂದಲೇ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದ ಅವರು ತಮ್ಮ 34ನೇ ವರ್ಷದಲ್ಲಿ ಮೊದಲ ಕಾದಂಬರಿಯನ್ನು ಬರೆದರು. “ಕ್ಲೀನ್ಡ್ ಔಟ್” ಅವರ ಹದಿಹರೆಯದ ಅನುಭವಗಳನ್ನು ದಾಖಲಿಸುವ ಕೃತಿಯಾಗಿದ್ದು, ಅನೇಕ ಓದುಗರನ್ನು ಸೆಳೆಯಿತು. ತಮ್ಮ 19ನೆಯ ವಯಸ್ಸಿನಲ್ಲಿ ಅವರು ಮೊದಲ ಬಾರಿಗೆ ಮನೆಯಿಂದ ಹೊರಗೆ ಕಾಲೇಜಿನ ಕಾರ್ಯಕ್ರಮಕ್ಕಾಗಿ ಹೋಗಿದ್ದರು. ಅಲ್ಲಿ ಅವರಿಗಾದ ಲೈಂಗಿಕ ಸಂಬಂಧದಿಂದಾಗಿ ಗರ್ಭಿಣಿಯಾಗಿದ್ದರು. ಆಗ ಫ್ರಾನ್ಸಿನಲ್ಲಿ ಗರ್ಭಪಾತಕ್ಕೆ ಅವಕಾಶವಿರಲಿಲ್ಲ. ಕುಟುಂಬದವರಿಗೆ ವಿಷಯ ತಿಳಿಸಲು ಭಯಗೊಂಡ ಅರ್ನಾಕ್ಸ್ ಗೆಳೆಯನೊಬ್ಬನ ಸಹಾಯ ಕೋರಿದರು. ಆದರೆ ಅಲ್ಲಿಯವರೆಗೆ ಸ್ನೇಹಿತನಾಗಿದ್ದ ಆತ ಬಸುರಿಯಾದ ಆಕೆ ಗರ್ಭವಿಳಿಸುವ ಮೊದಲೇ ತನ್ನನ್ನೂ ಸೇರಬೇಕೆಂದು ಒತ್ತಾಯಿಸಿತೊಡಗಿದಾಗ ಅವಳು ಆತಂಕಗೊಂಡಳು. ಕಾನೂನಾತ್ಮಕವಲ್ಲದ ಗರ್ಭಪಾತ ತಂದಿಡುವ ಸಂದಿಗ್ಧವನ್ನವಳು ಈ ಕಾದಂಬರಿಯಲ್ಲಿ ಇಪ್ಪತ್ತು ವರ್ಷಗಳ ನಂತರ ನೆನಪಿನಂಗಳಕ್ಕೆ ಜಾರುವ ಮೂಲಕ ಚಿತ್ರಿಸಿದ್ದಳು. ಹೆಣ್ಣಿನ ದೇಹದ ಮೇಲೆ ಆಕೆಗೇಕೆ ಅಧಿಕಾರವಿಲ್ಲ? ಎಂಬ ಅವಳ ಅಂದಿನ ಪ್ರಶ್ನೆ ಇಂದು ನಮ್ಮ ದೇಶದಿಂದ ಹಿಡಿದು ಅನೇಕ ದೇಶಗಳು ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಕ್ರಿಯೆಯವರೆಗೂ ಪರಿಣಾವನ್ನುಂಟುಮಾಡುತ್ತಲೇ ಇವೆ. ಈ ಕಾದಂಬರಿಗೆ ಮೆಚ್ಚುಗೆ ವ್ಯಕ್ತವಾದಂತೆಯೇ ಸಂಪ್ರದಾಯಬದ್ಧರಾದ ವೈರಿಗಳನ್ನೂ ಸೃಷ್ಟಿಸಿತು. 1960ರಿಂದ 2000ದವರೆಗಿನ ಕಾಲವನ್ನವರು ತಮ್ಮ ಜೀವನದ ಪರೀಕ್ಷಾ ಕಾಲ ಎಂದೇ ಕರೆದುಕೊಂಡಿದ್ದಾರೆ. ಮುಂದಿನ ತಮ್ಮ ಕೃತಿಗಳಲ್ಲಿ ಅವರು ‘ನಾನು’ ಎಂದಿರಬೇಕಾದಲ್ಲೆಲ್ಲ ‘ಅವಳು’ ಎಂದು ನಮೂದಿಸುತ್ತ ಹೋದರು. ಅವರ ಮೊದಲ ಹಸ್ತಪ್ರತಿಯನ್ನು ಓದಿದ ಅವರ ಗಂಡ ಫಿಲಿಪ್, ಅರ್ನಾಕ್ಸ್ ಅವರ ಬರವಣಿಗೆಯ ಬಗ್ಗೆ ಲೇವಡಿ ಮಾಡಿದ್ದರು. ಮುಂದೆ ಅವರು ಸಂಶೋಧನೆಯ ನೆಪವೊಡ್ಡಿ ತಮ್ಮ ಕೃತಿರಚನೆಗಳಿಗೆ ಸಮಯವನ್ನು ಹೊಂದಿಸಿಕೊಳ್ಳತೊಡಗಿದರು. ಎರಡು ಗಂಡುಮಕ್ಕಳ ತಾಯಿಯೂ ಆದರು. 1984ರಲ್ಲಿ ತಮ್ಮ ಪತಿಯೊಂದಿಗೆ ವಿಚ್ಛೇದನ ಪಡೆದರು.
ತಮ್ಮ ಬರವಣಿಗೆಯ ಐವತ್ತು ವರ್ಷಗಳಲ್ಲಿ ಅವರು ಬರೆದ ಕೃತಿಗಳ ಸಂಖ್ಯೆ ಇಪ್ಪತ್ತಕ್ಕಿಂತಲೂ ಹೆಚ್ಚು. ಹೆಚ್ಚಿನವು ಕಾದಂಬರಿಗಳಾದರೆ ಇನ್ನು ಕೆಲವು ನಾಟಕಗಳು, ಚಿತ್ರಕಥೆಗಳು ಹಾಗೂ ಕಚ್ಚಾ ದಿನಚರಿಯ ರೂಪದ ಬರಹಗಳೂ ಇವೆ. ‘ದ ಇಯರ್ಸ್’ ಎಂಬ ಅವರ ಪ್ರಸಿದ್ಧ ಕೃತಿ 1950ರಿಂದ 2006ರವರೆಗಿನ ಮಹಿಳೆಯರ ಬದುಕಿನ ಸಂಘರ್ಷಗಳನ್ನು ಚಿತ್ರಿಸುತ್ತದೆ. ‘ಎ ಮ್ಯಾನ್ಸ್ ಪ್ಲೇಸ್’ ಎಂಬುದು ಅವರ ತಂದೆಯೊಂದಿಗಿನ ಅವರ ಸಂಬಂಧಗಳನ್ನು ಚಿತ್ರಿಸುವ ಕಾದಂಬರಿ. ಒಂದು ಪುಟ್ಟ ಊರಿನಲ್ಲಿ ಸಾಮಾನ್ಯ ಶ್ರಮಿಕ ವರ್ಗದ ತಂದೆಯೊಂದಿಗೆ ಬೆಳೆಯುವ ಮಗಳ ಮನಸ್ಥಿತಿಯನ್ನು ಚಿತ್ರಿಸುವ ಈ ಕೃತಿಗೆ ಪ್ರತಿಷ್ಠಿತ ಪ್ರಿಕ್ಸ್ ರೆನಾಡೊಟ್ ಪ್ರಶಸ್ತಿ ದೊರಕಿದೆ. ಅವರ ಹೆಚ್ಚಿನ ಕಾದಂಬರಿಗಳು ಹೆಣ್ಣು ಮತ್ತು ಸಂಬಂಧಗಳ ಬಗೆಗೆ ಇವೆ. ತನಗಿಂತಲೂ ತೀರ ಕಿರಿಯನಾದ ತಮ್ಮ ಯುರೋಪಿಯನ್ ಪ್ರೇಮಿಯ ಜತೆಗಿನ ಸಂಬಂಧಗಳ ಬಗ್ಗೆ ಅವರ ‘ಸಿಂಪಲ್ ಫ್ಯಾಶನ್’ ಕಾದಂಬರಿ ವಿವರಿಸುತ್ತದೆ. ‘ದ ಗರ್ಲ್ಸ್ ಸ್ಟೋರಿ’, ‘ಗೆಟ್ಟಿಂಗ್ ಲಾಸ್ಟ್’, ‘ದ ಫ್ರೋಜನ್ ವುಮನ್’ ಅವರ ಇನ್ನೂ ಕೆಲವು ಮಹತ್ವದ ಕೃತಿಗಳು. ನೊಬೆಲ್ ಪಡೆದ ತಮ್ಮ ದೇಶದ ಸಾಹಿತಿಯ ಬಗ್ಗೆ ಬರೆಯುತ್ತಾ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮಾಕ್ರೋನ್ ಹೀಗೆ ಹೇಳುತಾರೆ, “ಆರ್ನಾಕ್ಸ್ ಅವರ ಕೃತಿಗಳು ಮಹಿಳೆಯರ ಮತ್ತು ಶೋಷಿತರ ಬಿಡುಗಡೆಯ ಬಗ್ಗೆ ಮಾತನಾಡುತ್ತವೆ.” ಸ್ವತಃ ಅರ್ನಾಕ್ಸ್ ಅವರೇ ಹೇಳುವಂತೆ, “ಸಾಹಿತ್ಯ ಸಮಾಜದ ಮೇಲೆ ತತ್‌ಕ್ಷಣದ ಪ್ರಭಾವವನ್ನು ಬೀರದಿರಬಹುದು, ಆದರೆ ಅದರ ದೂರಗಾಮಿ ಪರಿಣಾಮಗಳನ್ನು ಅಲ್ಲಗಳೆಯಲಾಗದು.” ಚಿಟ್ಟೆಯ ರೆಕ್ಕೆ ಎಬ್ಬಿಸಬಹುದಾದ ಬಿರುಗಾಳಿಯ ಮುನ್ಸೂಚನೆಯಿದು!
2019ರಲ್ಲಿ ಆರ್ನಾಕ್ಸ್ ಅವರ ಕೃತಿ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಪ್ರಶಸ್ತಿ ದೊರೆಯಲಿಲ್ಲವಾದರೂ ಆಯ್ಕೆ ಸಮಿತಿ ಅವರ ಕೃತಿಯನ್ನು “ಮಹಿಳೆಯೊಬ್ಬರ ನಿರ್ಭೀತವಾದ ಅಭಿವ್ಯಕ್ತಿ” ಎಂದು ಪ್ರಶಂಸಿಸಿತ್ತು. ‘ದೇಶ ಸುತ್ತು, ಕೋಶ ಓದು ಎನ್ನುತ್ತಾರೆ. ಹೆಣ್ಣಿನ ಒಳಗನ್ನು ನೋಡು. ಅಲ್ಲಿ ಇಡಿಯ ಲೋಕವೇ ಅಡಕವಾಗಿದೆ.’ ಎಂಬ ವೈದೇಹಿಯವರ ಮಾತು ಅರ್ನಾಕ್ಸ್ ಅವರ ಅನುಭವ ಲೋಕಕ್ಕೂ ಅನ್ವಯಿಸುತ್ತದೆ. ‘ಭಾಷೆಯೆಂದರೆ ಕಲ್ಪನೆಯ ಮುಸುಕುಗಳನ್ನು ಹರಿದು ಹಾಕುವ ಚೂರಿ’ ಎಂಬ ನಂಬಿಕೆಯೊಂದಿಗೆ ಬರೆಯುತ್ತಿರುವ ಅರ್ನಾಕ್ಸ್ ಅವರ ಎಲ್ಲ ಕೃತಿಗಳು ನಿರಂತರವಾಗಿ ಲಿಂಗ, ಭಾಷೆ ಮತ್ತು ವರ್ಗದ ತಾರತಮ್ಯಗಳು ಜೀವನದಲ್ಲಿ ತಂದಿಡುವ ತಲ್ಲಣಗಳ ಕುರಿತಾಗಿ ಬೇರೆ, ಬೇರೆ ಆಯಾಮಗಳಿಂದ ಶೋಧಿಸುತ್ತವೆ. ಅವರ ಬರಹಗಳಲ್ಲಿ ದಾಖಲಾಗುವ ವೈಯಕ್ತಿಕ ಅನುಭವಗಳು ಸಾಮಾನ್ಯ ವರ್ಗದ ಜನರು ಅನುಭವಿಸುವ ಅವಮಾನ, ಕೀಳರಿಮೆ, ಅಸೂಯೆ ಮತ್ತು ಅಸಹಜತೆಗಳ ಸಶಕ್ತ ಅಭಿವ್ಯಕ್ತಿಗಳಾಗಿರುವುದರಿಂದಲೇ ಏಕಲವ್ಯನ ಬೆರಳಿಗಾದ ಗಾಯದಂತೆ ಓದುಗರನ್ನು ಕಾಡುತ್ತವೆ.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.