ಈ ಆತ್ಮಕಥನ ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳ ನೆನೆದರೆ ತುಂಬ ಬೇಸರವಾಗುತ್ತದೆ. ಅನೇಕರು ಸತ್ತು ಹೋಗಿದ್ದಾರೆ… ಅವರು ಕೇವಲ ಪಾತ್ರವಾಗಿರಲಿಲ್ಲ… ನನ್ನ ವ್ಯಕ್ತಿತ್ವದ ಬೇರುಗಳಾಗಿದ್ದರು. ಆದರೆ ಆ ಕ್ಷಣಕ್ಕೆ ಪಾತ್ರಗಳಾಗಿಯೇ ಬರೆಹಕ್ಕೆ ಕರೆದುಕೊಂಡೆ. ಇವನು ಕೆಟ್ಟವನು… ಅವರು ಬಹಳ ಒಳ್ಳೆಯವರು ಎಂಬ ಭೇದ ಮಾಡಲಿಲ್ಲ. ಬಾಲ್ಯದಲ್ಲಿ ಇಡೀ ಊರಾದ ಊರೇ ನೆರೆದು ರಾಮಾಯಣ ಮಹಾಭಾರತಗಳ ನಾಟಕ ನೋಡುತ್ತಿದ್ದರು. ನಮಗೆ ರಾಮನೂ ರಾವಣನೂ ಇಬ್ಬರೂ ನಮ್ಮ ಸ್ವಂತ ಸಂಬಂಧಿಕರೇ ಆಗಿರುತ್ತಿದ್ದರು.
ಒಂದು ವರ್ಷಕ್ಕೂ ಹೆಚ್ಚುಕಾಲ ಕೆಂಡಸಂಪಿಗೆಗೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ತಮ್ಮ ಆತ್ಮಕತೆಯನ್ನು ಬರೆದ ಮೊಗಳ್ಳಿ ಗಣೇಶ್ ಕೆಂಡಸಂಪಿಗೆಯ ಓದುಗರಿಗೆ ಪತ್ರವೊಂದನ್ನು ಬರೆದಿದ್ದಾರೆ
ನಾನೆ ಪಾತ್ರವಾದೆ
ನಾನೆ ಬರೆದೆ
ನಾನೇ ಓದಿದೆ
ಪ್ರಿಯ ಕೆಂಡಸಂಪಿಗೆಯ ಬಳಗವೇ… ನಿಮಗೆ ನಮಸ್ಕಾರ. ಒಂದು ದಿನ ರಶೀದ್ ನಿನ್ನ ಬಾಲ್ಯದ ಕಾಡುವ ಏನಾದರೂ ಒಂದು ವಿಷಯದ ಬಗ್ಗೆ ಬರೆದುಕೊಡು. ಅದು ಕಥೆಯಂತೆ ಇರದಿರಲಿ ‘ನನ್ನ ಅಜ್ಜನಿಗೆ ಒಂದು ಆಸೆ ಇತ್ತು’ ಎಂದು ಆಗ ಆತ್ಮಕಥಾನಕವಾಗಿ ಬರೆದಿದ್ದಲ್ಲಾ… ಆ ತರದ್ದು ಬರೆದು ಕಳಿಸುವೆಯಾ, ಪ್ರಕಟಿಸುವೆ ಎಂದು ಕೇಳಿದರು. ಮತ್ತೆ ಅದನ್ನೇ ಬರೆಯಲು ಉತ್ಸಾಹ ಬರಲಿಲ್ಲ. ಗೆಳೆತನಕ್ಕೆ ಬೆಲೆಕೊಟ್ಟು; ಆಯ್ತು ಬರೀತಿನಿ ಎಂದು ಆರು ಪುಟವ ನನ್ನ ಹಾಗೂ ನನ್ನ ಅಪ್ಪನ ಸಂಬಂಧ ಹೇಗಿತ್ತು ಎಂಬುದನ್ನು ಉತ್ಕಟವಾಗಿ ಬರೆದು ಕಳಿಸಿದೆ.
ರಶೀದ್ ಓದಿ ಮೆಚ್ಚಿದ ಕೂಡಲೆ ನನ್ನ ಕಿವಿಗಳು ಬೆಚ್ಚಗಾದವು. ಇವನು ನನಗಿಂತ ಚೆಂದ ಕಥೆ ಬರೆವ ಮಾಯಾವಿ. ಕನ್ನಡ ಕಥನ ಗದ್ಯ ಶೈಲಿಗೆ ಇವನ ಜೊತೆ ಪೈಪೋಟಿ ಮಾಡುವ ಮತ್ತೊಬ್ಬ ಕಥೆಗಾರನಿಲ್ಲ. ಅಷ್ಟು ಚೆಂದ ಚಿತ್ರಕ ಕಾವ್ಯ ಗದ್ಯ ಶೈಲಿಯ ಇವನು ಇಷ್ಟು ಇಳ್ಳೆಯ ಮಾತು ಹೇಳಿದನಲ್ಲಾ… ನನ್ನನ್ನು ಫಿಕ್ಸ್ ಮಾಡುತ್ತಿದ್ದಾನೆ ಎನಿಸಿತು. ಬಹುಪಾಲು ಮರೆತು ಹೋದಂತಾಗಿರುವ ನಾನು ಈ ಗೆಳೆಯನ ಒತ್ತಾಸೆಯ ನಿರ್ಲಕ್ಷಿಸಬಾರದು ಎಂದು ಕೆಂಡಸಂಪಿಗೆಗೆ ಹದಿನೈದು ದಿನಕ್ಕೆ ಒಂದು ಕಂತು ಬರೆವೆ… ಅದು ಆತ್ಮಕಥೆಯೊ ಏನೊ… ಏನಾದರೂ ಆಗಲಿ ಬರೆವೆ ಎಂದು ಆರಂಭಿಸಿದೆ. ಐದಾರು ಕಂತುಗಳು ಒಂದಾದ ನಂತರ; ತುಂಬ ಚೆನ್ನಾಗಿ ಬರೀತಿದ್ದೀಯೇ; ಆತ್ಮಕಥೆ ಬರಿ ಎಂದು ಹೇಳಿದ್ದ. ಕಾದಂಬರಿ ತರ ಬರೀತಿದ್ದೀಯೇ; ಅದೇನಾದರೂ ಆಗಲಿ… ಸುಮ್ಮನೆ ಬರಿ ಹೇಗೆ ಎಂತು ಎಂದು ತಲೆಕೆಡಿಸಿಕೊಳ್ಳಬೇಡ ಎಂದು ರಶೀದ್ ಬೆನ್ನು ತಟ್ಟಿದ ಸಮಕಾಲೀನ ಒಂದೇ ತಲೆಮಾರಿನ ಕಥೆಗಾರರ ನಡುವೆ ಒಂದು ತರದ ಮಾತ್ಸರ್ಯ ಇರುತ್ತದೆ. ರಶೀದ್ ಎಂದೂ ಅಂತದ್ದೇನನ್ನೂ ಮಾಡಿಲ್ಲ. ಇತರೆ ಯಾವ ಕಥೆಗಾರರೂ ನನ್ನನ್ನು ಕಡೆಗಣಿಸಲಿಲ್ಲ. ಪುಣ್ಯವಂತ! ವಿಮರ್ಶಕರು ಅತ್ತ ಸುಮ್ಮನೆ ಬೊಗಳೆ ಮಾಡುತ್ತಿರಲಿ… ಬರೆಯುತ್ತಾ ಸಾಗಿದಂತೆ ತೀವ್ರತೆ ಹೆಚ್ಚಿತು. ವಾರ ವಾರ ಬರೆವೆ ಎಂದೆ. ಆ ನಡುವೆ ಅನಾರೋಗ್ಯದಲ್ಲಿ ಏರು ಪೇರಾಯಿತು. ಆಸ್ಪತ್ರೆಯಲ್ಲೆ ಬರೆದೆ. ಈ ಆತ್ಮಕಥೆಗೆ ರಶೀದ್ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಎಂದು ನಾಮಕರಣ ಮಾಡಿದ್ದ. ಅದು ಎಲ್ಲೆಲ್ಲಿಗೊ ನನ್ನ ಕರೆದೊಯ್ದಿತು. ನನ್ನ ಬಾಲ್ಯದ ಸುತ್ತ ಇದ್ದವರ ಬಗ್ಗೆ ಬರೆದೆ. ನನ್ನ ಸಣ್ಣ ಕಥೆಗಳಲ್ಲಿ ಆತ್ಮಕಥೆಯ ಹಲವು ಸಂಗತಿಗಳು ತುಂಬಿದ್ದವು. ನನ್ನ ನಾನು ಮರೆತು ಮನೆಯ ಒಳಗಿನ ನರಕವ ವಿವರಿಸಿದೆ. ವೈಯಕ್ತಿಕವಾಗಿ ನಿರೂಪಿಸುವಾಗ ನನ್ನ ನಾನೇ ವೈಭವೀಕರಿಸಿಕೊಳ್ಳುವ ಸ್ವಮರುಕಗೊಳ್ಳುವ ಅಪಾಯ ಇದೆ ಎಂದು ನನ್ನ ಸುತ್ತಣ ಲೋಕದ ಮೂಲಕ ನನ್ನ ನಾನು ನೋಡಿಕೊಳ್ಳಲು ಮುಂದಾದೆ.
ಇಲ್ಲಿ ನಾನೇ ಬರೆಹದ ವಸ್ತು. ಪಾತ್ರ ಸಂದರ್ಭ. ಅದನ್ನು ಹೇಳುತ್ತ ಬರೆಯುವವನೂ ನಾನೇ… ಹಾಗೆಯೇ ಬರೆದಾದ ನಂತರ ಸರಿಯೊ ತಪ್ಪೋ ಎಂದು ಓದುವವನೂ ನಾನೇ ಆದೆ. ಒಳ್ಳೆಯ ನಾಟಕವಾಯಿತು. ವಿಚಿತ್ರ ಇಕ್ಕಟ್ಟು ಕೂಡ ಎದುರಾಯಿತು. ವಿಮರ್ಶಕನೂ ನನ್ನೊಳಗೇ ಇಣುಕಿದ. ಕೆಂಡಸಂಪಿಗೆಯ ಓದುಗ ವಲಯದ ಸೂಕ್ಷ್ಮತೆ ನನಗೆ ಮೊದಲಿಂದಲೂ ಗೊತ್ತಿತ್ತು. ಆಗೊಮ್ಮೆ ಹತ್ತು ಹನ್ನೆರಡು ವರ್ಷಗಳ ಹಿಂದೆ ಹಂಪಿಯ ಗತ ವೈಭವದ ಬಗ್ಗೆ ನಿನಗೆ ತೋಚಿದಂತೆ ಬರಿ ಎಂದು ಇದೇ ರಶೀದ್ ಬರೆಸಿದ್ದ. ಅದನ್ನು ಪೂರೈಸದೆ ಅರ್ಧಕ್ಕೇ ನಿಲ್ಲಿಸಿಬಿಟ್ಟಿದ್ದೆ. ಹೊರಗಿನಿಂದ ಓದುಗ ಮಿತ್ರರು ಹೊಗಳಿದರು. ನನ್ನೊಳಗೆ ಒಬ್ಬ ಕಾಫ್ಕಾನಿ ಪೈಡ್ ಆದ ವ್ಯಕ್ತಿ ಒಬ್ಬ ಇದ್ದಾನೆ ಎಂಬುದು ಭಾಗಶಃ ಅನೇಕರಿಗೆ ಗೊತ್ತಿಲ್ಲ. ಕಮೂ, ಕಾಫ್ಕಾರನ್ನು ಈಗಲೂ ನಾನು ಬಿಟ್ಟಿಲ್ಲ. ನನ್ನ ನರಕದ ಅಧಿಪತಿಯೇ ನನ್ನ ಅಪ್ಪನಾಗಿದ್ದ. ಹಿಂಸೆಯ ಕೂಪದಿಂದ ಅಕಸ್ಮಾತ್ ತಪ್ಪಿಸಿಕೊಂಡು ಬಂದು ಮತ್ತೆ ಆ ಬಗ್ಗೆ ಬರೆವಾಗ ಬಹಳ ಸಂಕಟವಾಗುತ್ತಿತ್ತು. ಎಲ್ಲವನ್ನೂ ಬರೆಯಲು ಆಗಲಿಲ್ಲ.
ಈ ಬರೆಹ ಬರೆವ ಮೊದಲೇ ಕರೋನ ಕಾಲದಲ್ಲಿ ಒಂದು ಸಾವಿರ ಪುಟದ ಕಾದಂಬರಿಯ ಬರೆದು ಬಿಟ್ಟಿದ್ದೆ. ಅಲ್ಲಿದ್ದ ಬಾಲ್ಯ ಕಾಲದ ವಿವರಗಳು ಮತ್ತೆ ಇಲ್ಲೂ ಎದುರಾದವು. ಅದು ಈಗ ಬೇಡ ಎಂದು ಎತ್ತಿ ಆ ಬರೆಹವ ಮರೆಗೆ ಇಟ್ಟು ಬಿಟ್ಟೆ. ಈಗ ನೋಡಿದರೆ ಇದೆಲ್ಲ ಇಷ್ಟು ಬೇಗ ಮುಗಿಯಿತೇ ಎನಿಸುತ್ತದೆ. ಈ ಆತ್ಮಕಥನ ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳ ನೆನೆದರೆ ತುಂಬ ಬೇಸರವಾಗುತ್ತದೆ. ಅನೇಕರು ಸತ್ತು ಹೋಗಿದ್ದಾರೆ… ಅವರು ಕೇವಲ ಪಾತ್ರವಾಗಿರಲಿಲ್ಲ… ನನ್ನ ವ್ಯಕ್ತಿತ್ವದ ಬೇರುಗಳಾಗಿದ್ದರು. ಆದರೆ ಆ ಕ್ಷಣಕ್ಕೆ ಪಾತ್ರಗಳಾಗಿಯೇ ಬರೆಹಕ್ಕೆ ಕರೆದುಕೊಂಡೆ. ಇವನು ಕೆಟ್ಟವನು… ಅವರು ಬಹಳ ಒಳ್ಳೆಯವರು ಎಂಬ ಭೇದ ಮಾಡಲಿಲ್ಲ. ಬಾಲ್ಯದಲ್ಲಿ ಇಡೀ ಊರಾದ ಊರೇ ನೆರೆದು ರಾಮಾಯಣ ಮಹಾಭಾರತಗಳ ನಾಟಕ ನೋಡುತ್ತಿದ್ದರು. ನಮಗೆ ರಾಮನೂ ರಾವಣನೂ ಇಬ್ಬರೂ ನಮ್ಮ ಸ್ವಂತ ಸಂಬಂಧಿಕರೇ ಆಗಿರುತ್ತಿದ್ದರು. ಜೀವನದಲ್ಲು ಅಷ್ಟೇ ಬೀದಿ ತುಂಬ ಅದೇ ಜನ ರಾಮಾಯಣ ಮಹಾಭಾರತಗಳ ಪಾತ್ರಗಳಾಗಿ ಬೆರೆತ ಜೀವನನಾಟಕ. ಈ ಬರಹದಲ್ಲೂ ಹಾಗೇ ಅನಿಸಿತು. ಅಷ್ಟೆಲ್ಲ ಕ್ರೂರಿಗಳ ನಡುವೆ ನಾನು ನರಳಿದ್ದರಿಂದಲೇ ನಾನು ಮನುಷ್ಯನಾದೆನೇನೊ… ಹೀಗೆ ಹಿಂಸೆಕೊಟ್ಟಿದ್ದಿರಲ್ಲಾ… ಈಗೇನು ಮಾಡುವಿರಿ ಎಂದು ಉಳಿದಿರುವ ಪ್ರಾಜ್ಞರನ್ನು ತಗಾದೆಗೆ ಕರೆಯುವುದಿಲ್ಲ. ಎಲ್ಲವನ್ನು ಅವರವರಿಗೇ ಬಿಟ್ಟುಬಿಡುತ್ತೇನೆ. ನಾನೇನೊ ಮಹಾನ್ ಎಂದು ಬೀಗುವಂತದ್ದು ನನ್ನ ಜೀವನದಲ್ಲಿ ಘಟಿಸಲೇ ಇಲ್ಲ. ಇದ್ದದ್ದನ್ನು ಸೃಜನಶೀಲ ಧ್ಯಾನ ಭಾವದಲ್ಲಿ ಬರೆದೆ. ಏನನ್ನೇ ಬರೆದರೂ ತಂತಾನೆ ನನಗೆ ಸೃಜನಶೀಲವಾದ ಏನೊ ಶಕ್ತಿ ತಲೆಗೇರುತ್ತದೆ. ಅದು ಬಂದಾಗ ಮಾತ್ರ ಮುಂದೆ ಹೋಗುತ್ತದೆ. ಇಲ್ಲವಾದರೆ ಕೆಡುತ್ತದೆ. ಕಾಲ್ಪನಿಕವಾದ ಏನನ್ನೂ ಸೇರಿಸಲಿಲ್ಲ. ಬಣ್ಣಗಳ ಸಂಯೋಜನೆಗೆ ರೂಪಕ ಶಕ್ತಿ ಬೇಕು. ಬರಿದೆ ಪಾತ್ರಗಳಿಂದ ಕಥೆ ಆಗುವುದಿಲ್ಲ. ಸಂಗೀತಗಾರ ಹಲವು ಸ್ವರಗಳನ್ನು ಪಕ್ಕವಾದ್ಯಗಳ ನಾದದಿಂದ ತುಂಬಿಕೊಳ್ಳುತ್ತಾನೆ. ಹಾಗೇ ಇಲ್ಲೂ ನಾನೂ ಮಾಡಿದೆ.
ಈ ಬರೆಹದಲ್ಲಿ ನಾನು ನೆಪ ಅಷ್ಟೇ… ಒಂದು ವ್ಯವಸ್ಥೆಯ ಸ್ಥಿತಿಯಲ್ಲಿ ಕಾಲದ ಅಲೆಯಲ್ಲಿ ತೇಲಿಹೋಗುವವನು. ತಿದ್ದಿತೀಡಿ; ಓದಿಸಿ ಸಲಹೆ ಪಡೆದು ಪ್ರಕಟಿಸುವ ಪೈಕಿಯವನು ನಾನಲ್ಲ. ಸರಿಯೊ ತಪ್ಪೋ ಗೊತ್ತಿಲ್ಲ. ಬರೆದೆ; ಅಲ್ಲಿಗೆ ಅದು ಮುಗಿಯಿತು; ಮುಂದಿನಕ್ಕೆ ನಡೆ ಎಂದು ಮನಸ್ಸು ಒತ್ತಾಯಿಸುತ್ತದೆ. ಇಲ್ಲಿನ ಯಾವ ಒಂದು ಕಂತನ್ನೂ ಒಮ್ಮೆಗೇ ಬರೆದು ಡಿಟಿಪಿಗೆ ಕಳಿಸಿ ಕೆಂಡಸಂಪಿಗೆಗೆ ತಲುಪುವ ವ್ಯವಸ್ಥೆ ಮಾಡಿಕೊಂಡಿದ್ದೆ. ಈ ಬರಹ ಇಷ್ಟು ಬೇಗ ಬರೆದು ಮುಗಿಸಲು ನನ್ನ ವಿದ್ಯಾರ್ಥಿಗಳು ಮುಖ್ಯ ಕಾರಣ. ನನ್ನ ಸಂಶೋಧನಾ ವಿದ್ಯಾರ್ಥಿಗಳಾದ ಪಂಪಾಪತಿ; ಅಭಿಲಾಷ ಹೆಚ್.ಕೆ, ಶಿಲಿನಾ ಕೋಟೆ… ಈ ಮೂವರೂ ಬರೆದ ಕೂಡಲೆ ಪಡೆದು ಪಂಪನಿಂದ ಡಿಟಿಪಿ ಮಾಡಿಸಿ ಅಲ್ಲೆ ಅಭಿಲಾಷ ಕರೆಕ್ಷನ್ ಹಾಕಿ; ಅದರ ಒಂದು ಅಂತಿಮ ರೂಪವ ನನ್ನ ವಾಟ್ಸಪಿಗೆ ಕಳಿಸಿ… ಓಕೆ ಎಂದ ಕೂಡಲೆ ಅದನ್ನು ಕೆಂಡಸಂಪಿಗೆಗೆ ಸೆಂಡ್ ಮಾಡಿ ಕ್ಷಣಮಾತ್ರದಲ್ಲಿ ಎಲ್ಲ ಕೆಲಸ ಮುಗಿಸುತ್ತಿದ್ದರು. ರೀರೈಟಿಂಗ್ ಸಹವಾಸಕ್ಕೆ ಹೋಗಲೇ ಇಲ್ಲ. ಮೈಮರೆತು ಬರೆದಿರುವೆ. ತಿದ್ದಿದರೆ ಏನಾದರೂ ಕೃತಕತೆ ತೂರಿಕೊಳ್ಳುತ್ತೆ ಎಂದು ಮತ್ತೊಮ್ಮೆ ನೋಡಲು ಹೋಗುತ್ತಿರಲಿಲ್ಲ. ಬುಗುರಿ ಬರೆದ ಕಾಲದಿಂದಲೂ ನಾನು ಇದನ್ನೇ ಬೆಳೆಸಿ ಉಳಿಸಿಕೊಂಡಿರುವೆ.
ಚೆನ್ನಾಗಿ ಬರೆಯಬೇಕು ಎಂಬುದಕ್ಕಿಂತ ಆ ಕಾಲದ ಆ ನೆನಪಿನ ಉತ್ಕಟತೆಯಿಂದ ಬಿಡಿಸಿಕೊಳ್ಳಬೇಕು ಎಂಬ ತೀವ್ರತೆಯಿಂದ ಆ ಕ್ಷಣಕ್ಕೆ ಬರೆವೆ. ಅದನ್ನು ತಿದ್ದಬಾರದು… ಹಾಗೆ ಮಾಡುವುದು ತಪ್ಪು ಎಂಬ ಭಾವನೆ ಹಿಂದಿನಿಂದಲೂ ಬಂದುಬಿಟ್ಟಿದೆ. ಈಗ ಇಷ್ಟೆಲ್ಲ ಬರೆದಿರುವೆ. ಮರೆತೇ ಹೋಗಿರುವೆ. ನನಗಿದು ಶಾಪ ಮತ್ತು ವರ… ಎರಡೂ ಆಗಿವೆ. ಪ್ರತಿ ಕಂತನ್ನೂ ಮೇಲೆ ಸೂಚಿಸಿದ ಮೂವರೂ ವಿದ್ಯಾರ್ಥಿಗಳು ಓದಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವಾಗ ಅಚ್ಚರಿ ಉಂಟಾಗುತ್ತಿತ್ತು. ಸಾಹಿತ್ಯದ ವಿದ್ಯಾರ್ಥಿಗಳಲ್ಲ ಅವರು. ನನ್ನ ಸಮಾಜವಿಜ್ಞಾನದ ಪಾಠ ಪ್ರವಚನಗಳಿಗೆ ಮನಸೋತಿದ್ದರು. ಈ ಬರೆಹ ಈ ಸ್ಥಿತಿ ತಲುಪುವಲ್ಲಿ ಇವರ ಕಾಳಜಿ, ಪ್ರೀತಿ, ವಿಶ್ವಾಸ ಬಹಳ ಮುಖ್ಯ. ಅವರನ್ನು ವಿಶೇಷವಾಗಿ ನೆನೆವೆ. ಪ್ರತಿಸಲ ಸುಂದರ ಅರ್ಥಗರ್ಭಿತ ಚಿತ್ರಗಳ ಬಿಡಿಸುತ್ತಿದ್ದ ರೂಪಶ್ರೀ ಕಲ್ಲಿಗನೂರು ಅವರಿಗೆ ನಮಸ್ಕಾರಗಳು. ಇನ್ನು ರಾಜಲಕ್ಷ್ಮಿ ಕೋಡಿಬೆಟ್ಟು ಅವರು ತುಂಬ ಆಪ್ತವಾಗಿ ಬಿಟ್ಟರು. ಪ್ರತಿಸಲದ ಕಂತನ್ನು ವಿನ್ಯಾಸಗೊಳಿಸಿ ಓದುಗರ ಮುಂದಿಡುತ್ತಿದ್ದ ಅವರನ್ನು ಮರೆಯಲಾರೆ. ಕೆಂಡಸಂಪಿಗೆಯ ಒಳ ಬಳಗದ ಸ್ಪಷ್ಟ ಪರಿಚಯ ನನಗಿಲ್ಲ. ಅವರೆಲ್ಲರಿಗೂ ನಮನಗಳು. ಸದ್ಯದಲ್ಲೇ ಈ ಕೃತಿ ಲಡಾಯಿ ಪ್ರಕಾಶನದಿಂದ ಹೊರ ಬರಲಿದೆ. ಖರೀದಿಸಿ ಇನ್ನೊಮ್ಮೆ ಓದಬೇಕೆಂದು ವಿನಂತಿಸುವೆ.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ನಾನು ಕೂಡ ಕೆಲವು ಕಂತುಗಳನ್ನು ಓಡಿರುವೆ, ಮೊಗಳ್ಳಿ ಯ ಹಿಂದಿನ ನೆನಪುಗಳು ಮರುಕಳಿಸಿದವು, ವಂದನೆಗಳು
ತುಂಬಾ ಸಂತಸದ ಸಂಗತಿ ಸರ್.
ಆ ಸಾವಿರ ಪುಟಗಳ ಕೃತಿಯೂ ಬರಲಿ..
ನನಗಂತೂ ನಿಮ್ಮ ” ಮಿಂಚಿನ ಅಕ್ಷರ ಮಾಲೆ ” ಕತೆಯು ಸದಾ ಕಾಡುತ್ತದೆ
ಇದರ ಬಗ್ಗೆ ಅಥವಾ ಲಿಂಕ್ ಇದ್ದರೆ ತಿಳಿಸಿ
Sir, How fast your are completed such a wonderful writing, Please anyway continue…..
JP
Nayandanahalli Bangalore