Advertisement
ಏಳು ಪುಣ್ಯದ ಕೆರೆಗಳನ್ನು ಕೊಟ್ಟವರು ತೀರಿಹೋದರು

ಏಳು ಪುಣ್ಯದ ಕೆರೆಗಳನ್ನು ಕೊಟ್ಟವರು ತೀರಿಹೋದರು

ನೋಡಲು ಬಿಕಾರಿಯಂತೆ ತೋರುವ ಆದರೆ ಮಾತನಾಡಲು ತೊಡಗಿದರೆ ಸಂತನಂತೆ ಕಾಣುವ ಕಾಮೇಗೌಡರು ಒಣ ಪ್ರದೇಶವಾದ ಮಳವಳ್ಳಿ ತಾಲ್ಲೂಕಿನ ಕುಂದೂರು ಬೆಟ್ಟದ ಪಾದದಲ್ಲಿ ಕೈಯ್ಯಾರೆ ತೋಡಿರುವ ಈ ಏಳು ಕೆರೆಗಳು ಕರ್ಮಯೋಗಿಯೊಬ್ಬ ನಲವತ್ತು ವರ್ಷಗಳಿಂದ ನಡೆಸಿರುವ ಕಾಯಕದಂತೆ ಬೆಳಗುತ್ತಿವೆ. ಈ ಕೆರೆಗಳ ಸುತ್ತ ಇವರು ಬೆಳೆಸಿರುವ ಗಿಡಮರಗಳನ್ನು ಕಿಡಿಗೇಡಿಗಳು ಕತ್ತರಿಸುತ್ತಲೇ ಇರುತ್ತಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡರು ತಾವು ಕಟ್ಟಿದ ಹದಿನಾರು ಕೆರೆಗಳನ್ನು ಇಲ್ಲೇ ಬಿಟ್ಟು ತಾವು ಮಾತ್ರ ಇಂದು ಬೆಳಗ್ಗೆ ತೀರಿಹೋದರು. ಅವರ ಕುರಿತು ಅಬ್ದುಲ್ ರಶೀದ್ ಬರೆದಿದ್ದ ವ್ಯಕ್ತಿಚಿತ್ರ ನಿಮ್ಮ ಓದಿಗೆ

ಕೊಳಕು ಅಂಗಿಯ, ಹರಿದ ಚಡ್ಡಿಯ ಮೈಯೆಲ್ಲ ಬೆವರ ಪರಿಮಳದ ಈ ಮುದುಕನ ಹತ್ತಿರ ಹೋದರೆ, ‘ಬುದ್ದೀ, ಹತ್ತಿರ ಬರಬೇಡಿ, ನಾನು ವಾಸನೆ ಮುದುಕ, ಒಂದು ವಾರದಿಂದ ಮೈಗೆ ನೀರು ಹಾಕೊಂಡಿಲ್ಲ. ಈ ಕೆರೆ ಕಟ್ಟಿ ಮುಗಿಯುವವರೆಗೆ ನಾನು ಸ್ನಾನ ಮಾಡಲ್ಲ ಅಂತ ಶಪಥ ಹಾಕೊಂಡಿದೀನಿ, ದೂರ ಹೋಗಿ’ ಎಂದು ತಾವೇ ದೂರ ಹೋಗಿ ನಿಲ್ಲುತ್ತಾರೆ.

‘ಅಲ್ಲ ಕಾಮೇ ಗೌಡ್ರೇ, ಹೋಗಿ ಹೋಗಿ ಬೆಟ್ಟದ ಬುಡದಲ್ಲಿರೋ ಸರ್ಕಾರೀ ಜಾಗದಲ್ಲಿ ಕೆರೆ ತೋಡಿದೀರಲ್ಲಾ. ಇದನ್ನೇ ನಿಮ್ಮ ಜಮೀನಿನಲ್ಲಿ ತೋಡಬಹುದಿತ್ತಲ್ಲಾ’ ಅಂದರೆ ನಗುತ್ತಾರೆ.

‘ಅಲ್ಲ ಬುದ್ದೀ, ನಿಮಗೇನಾದ್ರೂ ಬುದ್ದಿ ಇದೆಯಾ? ಸ್ವಂತ ಜಾಗದಲ್ಲಿ ಕೆರೆ ತೋಡಿದ್ರೆ ನನ್ನ ಮಕ್ಳು, ಮೊಮ್ಮಕ್ಳು ಬುಟ್ಟಾರಾ, ನಮ್ಮಪ್ಪಂಗೆ ಬುದ್ದಿ ಇಲ್ಲ ಅಂತ ಕೆರೆ ಮುಚ್ಸಿ ತೋಟ ಮಾಡಲ್ವಾ? ಅಥ್ವಾ ತೋಟಾನೇ ಮಾರ್ಕೊಂಡು ಬೆಂಗ್ಳೂರಿಗೆ ಒಂಟೋಗಲ್ವಾ. ಅದ್ಕೇ ಸರ್ಕಾರೀ ಜಮೀನಲ್ಲಿ ಕೆರೆ ತೋಡಿದ್ದೀನಿ. ಈಗ ಇವನ್ನೆಲ್ಲ ಯಾವ ಮಗಂಗೆ ಮಾರ್ಕೊಳ್ಳಕ್ಕಾಗುತ್ತೆ ಹೇಳಿ. ಯಾರಿಗೂ ಮಾರಕ್ಕಾಗಲ್ಲ, ಯಾರಿಗೂ ಮುಚ್ಚಕಾಗಲ್ಲ, ಯಾರಿಗೂ ಕೊಂಡ್ಕೊಳ್ಳಕ್ಕೂ ಆಗಲ್ಲ, ಆಗ ಏನಾಗುತ್ತೆ ಹೇಳಿ. ಪಕ್ಷಿಗಳು ಬರುತ್ತೆ. ಪ್ರಾಣಿಗಳು ಬರುತ್ತೆ, ದನ ಕರು ಚಿರತೆ ಆನೆಗಳು ಬರುತ್ತೆ, ನೀರು ಕುಡ್ಕೊಂಡು ಹೊಟ್ಟೆ ತುಂಬಿಸ್ಕೊಂಡು ಶಿವ ಶಿವಾ ಅಂತ ಖುಷಿ ಪಟ್ಕೊಂಡು ಹೋಗುತ್ವೆ. ಈ ಮಕ್ಳನ್ನ ಸಾಕಿ ಬೆಳೆಸೋದ್ರಿಂದ ಏನು ಸಿಗುತ್ತೆ? ವಯಸ್ಸಾದ್ ಮೇಲೆ ಒದೆ ಸಿಗುತ್ತೆ’ ಅಂತ ನಗುತ್ತಾರೆ.

ನೋಡಲು ಬಿಕಾರಿಯಂತೆ ತೋರುವ ಆದರೆ ಮಾತನಾಡಲು ತೊಡಗಿದರೆ ಸಂತನಂತೆ ಕಾಣುವ ಕಾಮೇಗೌಡರು ಒಣ ಪ್ರದೇಶವಾದ ಮಳವಳ್ಳಿ ತಾಲ್ಲೂಕಿನ ಕುಂದೂರು ಬೆಟ್ಟದ ಪಾದದಲ್ಲಿ ಕೈಯ್ಯಾರೆ ತೋಡಿರುವ ಈ ಏಳು ಕೆರೆಗಳು ಕರ್ಮಯೋಗಿಯೊಬ್ಬ ನಲವತ್ತು ವರ್ಷಗಳಿಂದ ನಡೆಸಿರುವ ಕಾಯಕದಂತೆ ಬೆಳಗುತ್ತಿವೆ. ಈ ಕೆರೆಗಳ ಸುತ್ತ ಇವರು ಬೆಳೆಸಿರುವ ಗಿಡಮರಗಳನ್ನು ಕಿಡಿಗೇಡಿಗಳು ಕತ್ತರಿಸುತ್ತಲೇ ಇರುತ್ತಾರೆ. ಸರಿಯಾಗಿ ಕಣ್ಣು ಕಾಣಿಸದ ಈ ಹಣ್ಣು ಹಣ್ಣು ಮುದುಕ ಕೋಲೂರಿಕೊಂಡು ನಡೆಯುವ ಕಾಲು ದಾರಿಗಳಲ್ಲಿ ಬೇಕು ಬೇಕೆಂತಲೇ ಮುಳ್ಳು ಕಡ್ಡಿಗಳನ್ನು ಸುರಿಯುತ್ತಾರೆ. ಈತ ದಣಿವಾರಿಸಿಕೊಳ್ಳಲು ಕೂರುವ ಜಾಗದಲ್ಲಿ ಹೇಸಿಗೆ ಮಾಡಿ ಹೋಗುತ್ತಾರೆ. ಕಣ್ಣಮುಂದೆಯೇ ತಾನು ನೆಟ್ಟು ಬೆಳೆಸಿದ ಗಿಡಗಳ ಕೊಂಬೆಗಳನ್ನು ತರಿದುಕೊಂಡು ಹೋಗುವ ಪಾಪಿಗಳನ್ನು ಕಾಮೇಗೌಡರು ಕೆಟ್ಟದಾಗಿ ಬೈಯುತ್ತಾ ಅಟ್ಟಿಸಿಕೊಂಡು ಹೋಗುತ್ತಾರೆ. ಆಮೇಲೆ ಸುಸ್ತಾಗಿ ನಿಂತುಕೊಳ್ಳುತ್ತಾರೆ.

‘ಪಾಪಿಗಳಾದ ಮನುಷ್ಯರಿರುವ ಕಡೆ ಈ ಪುಣ್ಯದ ಕಾರ್ಯವನ್ನು ನೀವಾದರೂ ಯಾಕೆ ಮಾಡುತ್ತೀರಾ ಗೌಡರೇ’ ಎಂದು ಕೇಳುತ್ತೇನೆ.

‘ಪಾಪಿಗಳಿಂದಲೇ ಈ ಲೋಕದ ಲಯ ನಡೆಯುತ್ತಿರುವುದು ಬುದ್ದೀ… ಪಾಪಿಗಳಿಲ್ಲದಿದ್ದರೆ ಈ ಲೋಕ ಯಾವಾಗಲೋ ನಿಂತು ಹೋಗುತ್ತಿತ್ತು’ ಎನ್ನುತ್ತಾರೆ ಗೌಡರು.

‘ಸತ್ಯವಂತರು ಶಿವಶಿವಾ ಅಂತ ಪೂಜೆ ಮಾಡಿಕೊಂಡು ಸುಮ್ಮನಿರುತ್ತಾರೆ. ಅವರೆಲ್ಲ ಸ್ವರ್ಗಕ್ಕೆ ಹೋಗುತ್ತಾರೆ. ಪಾಪಿಗಳು ಸುಮ್ಮನಿರಲಾರದೆ ಏನಾದರೂ ಘಾತಕ ಕೆಲಸ ಮಾಡಿ ಪುನಃ ಪುನರ್ಜನ್ಮ ಪಡೆದು ಭೂಮಿಗೆ ಮರಳಿ ಬರುತ್ತಾರೆ. ಭೂಮಿಯಲ್ಲಿ ಎಲ್ಲರೂ ಒಳ್ಳೆಯವರಾಗಿದ್ದರೆ ಭೂಮಿ ಖಾಲಿಯಾಗಿರುತ್ತಿತ್ತು. ಸ್ವರ್ಗ ತುಂಬಿಕೊಂಡು ಬಿಡುತ್ತಿತ್ತು. ಅದಕ್ಕೇ ಪಾಪಿಗಳಿರಬೇಕು ಲೋಕದಲ್ಲಿ’ ಎಂದು ಅತ್ಯಂತ ಕ್ಲಿಷ್ಟವಾದ ತತ್ವಜ್ಞಾನವೊಂದನ್ನು ಚಿಟಿಕೆ ಹೊಡೆದಂತೆ ಸುಲಲಿತವಾಗಿ ಹೇಳಿ ಮುಗಿಸಿ ಕಾಮೇಗೌಡರು ಫೋಟೋಗೆ ಇನ್ನೊಂದು ಸುಂದರವಾದ ಪೋಸು ಕೊಡುತ್ತಾರೆ.

‘ಪಾಪಿಗಳಿಂದಲೇ ಈ ಲೋಕದ ಲಯ ನಡೆಯುತ್ತಿರುವುದು ಬುದ್ದೀ… ಪಾಪಿಗಳಿಲ್ಲದಿದ್ದರೆ ಈ ಲೋಕ ಯಾವಾಗಲೋ ನಿಂತು ಹೋಗುತ್ತಿತ್ತು’ ಎನ್ನುತ್ತಾರೆ ಗೌಡರು.

‘ಎಲ್ಲರೂ ಪೇಪರಲ್ಲಿ ಓದಲಿ ಬುದ್ದಿ, ಎಲ್ಲರೂ ಟೀವೀಲಿ ನೋಡಲಿ ಬುದ್ದಿ. ಎಲ್ಲರೂ ಈ ಬಿಕಾರಿಗೆ ಸಹಾಯ ಮಾಡಲಿ ಬುದ್ದೀ. ಏಳು ಕೆರೆ ನನ್ನ ಕುರಿ ಮಾರಿದ ಕಾಸಿನಿಂದಲೇ ತೋಡಿಸಿದ್ದೀನಿ. ಇನ್ನೂ ಯಾರಾದರೂ ಸಹಾಯ ಮಾಡಿದರೆ ಈ ಜನ್ಮ ಮುಗಿದು ಹೋಗುವುದರೊಳಗೆ ಇನ್ನೂ ಮೂರು ಕೆರೆಗಳನ್ನ ತೋಡಿಸಿ ಶಿವನ ಪಾದ ಸೇರ್ಕೊಂಬಿಡ್ತೀನಿ ಬುದ್ದೀ’ ಎಂದು ಗೌಡರು ಜೆ ಸಿ ಬಿ ತಂದು ಇನ್ನೂ ಮೂರು ಕೆರೆಗಳನ್ನು ತೋಡಲು ಇನ್ನೂ ಎಷ್ಟು ಕಾಸು ಬೇಕಾಗಬಹುದು ಎಂದು ಲೆಕ್ಕಾಚಾರ ಹಾಕುತ್ತಾರೆ.

ಈ ಗೌಡರ ಕಥೆಯೇ ಹೀಗೆ. ಎಲ್ಲಿಂದ ಕಾಸು ಸಿಕ್ಕಿದರೂ ಅದನ್ನು ತಂದು ಕುಂದೂರು ಬೆಟ್ಟದ ಬುಡದಲ್ಲಿರುವ ಕೆರೆಗಳಿಗೆ ಸುರಿಯುವುದು. ಕೆಲವು ವರ್ಷಗಳ ಹಿಂದೆ ಗೌಡರ ಹಿರಿಯ ಸೊಸೆ ಗರ್ಭವತಿಯಾದಾಗ ಹೆರಿಗೆಗೆ ಅಂತ ಆಸ್ಪತ್ರೆಗೆ ಸೇರಿಸಿದ್ದರಂತೆ. ಹೆರಿಗೆ ಸಹಜವಾಗಿ ಆಗಲಾರದು. ಡಾಕ್ಟರು ಕಾಸು ಕೀಳಲು ಗರ್ಭವತಿಯ ಹೊಟ್ಟೆ ಕುಯ್ಯಬಹುದು. ಅದಕ್ಕಾಗಿ ಹಣ ಬೇಕಾಗಬಹುದು ಎಂದು ಗೌಡರು ಯಾರಿಗೂ ಗೊತ್ತಾಗದ ಹಾಗೆ ಇಪ್ಪತ್ತು ಸಾವಿರ ರೂಪಾಯಿಗಳನ್ನ ಚೆಡ್ಡಿಯ ಜೇಬಿನಲ್ಲಿ ಅಡಗಿಸಿಟ್ಟುಕೊಂಡಿದ್ದರಂತೆ. ಗೌಡರ ಪುಣ್ಯಕ್ಕೆ ಸೊಸೆಗೆ ಸಹಜ ಹೆರಿಗೆಯಾಯಿತು. ಗೌಡರು ಚೆಡ್ಡಿ ಜೇಬಲ್ಲಿದ್ದ ಇಪ್ಪತ್ತು ಸಾವಿರದ ಜೊತೆ ಇನ್ನೂ ಸ್ವಲ್ಪ ಸಾಲ ಸೋಲ ಮಾಡಿ ಬೆಟ್ಟದ ಪಾದದಲ್ಲಿ ಇನ್ನೊಂದು ಕೆರೆ ತೋಡಿಸಿ ಆ ಕೆರೆಗೆ ಹುಟ್ಟಿದ ಮೊಮ್ಮಗಳ ಹೆಸರನ್ನಿಟ್ಟರು. ತಾವು ತೋಡಿಸಿದ ಅಷ್ಟೂ ಕೆರೆಗಳಿಗೆ ಗೌಡರು ತಮ್ಮ ಮಗನ, ಮೊಮ್ಮಕ್ಕಳ ಹೆಸರಿಟ್ಟಿದ್ದಾರೆ. ‘ಇದು ಯಾಕೆ?’ ಎಂದು ಕೇಳಿದರೆ ‘ಇನ್ನೇನು ಬುದ್ದಿ.. ಮೊಮ್ಮಗಳು ದೊಡ್ಡವಳಾಗಿ ಅವಳಿಗೆ ಮದುವೆಯೂ ಆಗಿ, ಗಂಡನ ಕೈ ಹಿಡಕೊಂಡು, ಅಜ್ಜ ತನ್ನ ಹೆಸರಲ್ಲಿ ಕಟ್ಟಿರುವ ಕೆರೆಯನ್ನು ತೋರಿಸಲು ಬೆಟ್ಟದ ಬುಡಕ್ಕೆ ನಡಕೊಂಡು ಇಬ್ಬರೂ ಬರುತ್ತಾರೆ. ಬರುವಾಗ ಕೆರೆಯಲ್ಲಿ ಹಕ್ಕಿ ಪಕ್ಷಿಗಳು, ಹಸು ಕರುಗಳು ನೀರು ಕುಡೀತಾ ಇರುತ್ತವೆ. ಆಗ ಅವಳು ಎಷ್ಟು ಜಂಬದಿಂದ ಗಂಡನ್ ಜೊತೆ ಮಾತಾಡ್ತಾಳೆ ಅಲ್ವಾ? ನೀವು ಸೈಟ್ ಕೊಡ್ಸಿ, ಮನೆ ಕಟ್ಸಿ, ಬಂಗಾರ ಕೊಟ್ಟು ಮದುವೆ ಮಾಡಿದ್ರೂ ಇಷ್ಟು ಜಂಬ ಇರುತ್ತಾ ಹೇಳಿ, ಜೊತೆಗೆ ಅವ್ರಿಗೆ ವಾಕಿಂಗ್ ಮಾಡಿದ ಹಾಗೂ ಆಯ್ತು ಅಲ್ವಾ ಅನ್ನುತ್ತಾರೆ.

‘ಆದರೆ ನಿಮಗೆ ಇದರಿಂದ ಏನು ಸಿಗುತ್ತದೆ ಗೌಡರೇ’ ಎಂದು ನಾನು ಅಮಾಯಕನಂತೆ ಕೇಳುತ್ತೇನೆ.

‘ನೋಡಿ ಬುದ್ದೀ’ ಎಂದು ಗೌಡರು ತಾವು ಹೊಸದಾಗಿ ತೋಡಿರುವ ಇನ್ನೂ ನೀರು ತುಂಬಿರದ ಕೆರೆಯ ದಡದಲ್ಲಿ ನೆಟ್ಟಿರುವ ಗೋಗಲ್ಲನ್ನು ತೋರಿಸುತ್ತಾರೆ. ಗೋಗಲ್ಲು ಎಂದರೆ ಗೋವುಗಳು ಮೈಯನ್ನು ತುರಿಸಿಕೊಳ್ಳಲಿ ಎಂದು ನೆಲದಲ್ಲಿ ಆಳವಾಗಿ ನೆಟ್ಟಿರುವ ಕಂಬದಂತಹ ಕಲ್ಲು.

‘ಈ ಕೆರೆ ಇದೆಯಲ್ಲ ಬುದ್ದಿ. ಇದರಲ್ಲಿ ನೀರು ತುಂಬಿಕೊಂಡ ಮೇಲೆ ಒಂದು ಗೋವು ಬಂದು ಹೊಟ್ಟೆ ತುಂಬ ನೀರು ಕುಡಿದು ಸಂತೋಷದಲ್ಲಿ ಈ ಗೋಗಲ್ಲಿಗೆ ಮೈ ಉಜ್ಜಿಕೊಂಡು ಆನಂದದಲ್ಲಿ ಕಣ್ಮುಚ್ಚಿಕೊಳ್ಳುತ್ತಲ್ಲಾ. ಆಗ ನಾವು ಮನುಷ್ಯರು ಮಾಡಿಕೊಂಡಿರುವ ಜನ್ಮ ಜನ್ಮಾಂತರದ ಸಾಲಗಳೆಲ್ಲಾ ಪರಿಹಾರ ಆಗುತ್ತೆ ಬುದ್ದೀ…’ ಎಂದು ಗೌಡರು ತಮ್ಮ ಕಾಣಿಸದ ಕಣ್ಣುಗಳನ್ನು ಇನ್ನೂ ಮುಚ್ಚಿಕೊಂಡು ಆನಂದ ಪಡುತ್ತಾರೆ. ನಾವು ಬೆಟ್ಟದ ದಾರಿಯನ್ನು ಇಳಿಯುತ್ತೇವೆ. ದಾರಿಯಲ್ಲಿ ಒಂದು ಬರಡಾಗಿರುವ ಪ್ರಪಾತದಂತಹ ದೊಡ್ಡ ಹೊಂಡ ‘ಇದು ಪಾಪದ ಕೆರೆ’ ಎಂದು ಗೌಡರು ನಗುತ್ತಾರೆ. ಅದು ಸರಕಾರ ಮಳೆ ಕೊಯ್ಲು ಯೋಜನೆಯ ಅಡಿಯಲ್ಲಿ ಲಕ್ಷಾಂತರ ಅನುದಾನದಲ್ಲಿ ತೋಡಿರುವ ದೊಡ್ಡದಾದ ಒಂದು ಹೊಂಡ. ಒಂದು ಮಳೆಗಾಲದಲ್ಲೂ ಅದರಲ್ಲಿ ನೀರು ತುಂಬೇ ಇಲ್ಲ, ಅದು ನರಕದ ಬಾಯಿಯಂತೆ ಬಾಯಿ ತೆರೆದುಕೊಂಡು ನಿಂತಿದೆ. ಅದರ ಅಕ್ಕಪಕ್ಕದಲ್ಲೇ ಕಾಮೇಗೌಡರ ಪುಣ್ಯದ ಕೆರೆಗಳು ಈ ಬೇಸಿಗೆಯಲ್ಲೂ ನೀರು ತುಂಬಿ ಹೊಳೆಯುತ್ತಿವೆ.

‘ಇದೊಂದು ಮೂರು ಲಕ್ಷ ಪ್ರಶಸ್ತಿ ಸಿಕ್ ಬಿಡ್ಲಿ ಬುದ್ದೀ. ಜೆಸಿಬಿ ತಂದು ಇನ್ನೂ ಮೂರು ಕೆರೆ ತೋಡಿಸಿ ಶಿವಶಿವಾ ಅಂತ ಸುಮ್ನಿದ್ದು ಬಿಡ್ತೀನಿ ಬುದ್ದಿ, ಇನ್ನು ನನ್ನ ಕೈಲಾಕಿಲ್ಲ, ವಯಸ್ಸಾಗೋಯ್ತು. ಊರಲ್ಲೂ ವೈರಿಗಳು ಹೆಚ್ಕೊಂಡಿದ್ದಾರೆ. ನನ್ನ ಪ್ರಾಣಕ್ಕೂ ಅಪಾಯವಿದೆ. ಕೆರೆ ತೋಡಿ ಮುಗಿಸೋ ತನ್ಕ ಸರಕಾರಕ್ಕೆ ಹೇಳಿ ರಕ್ಷಣೆ ಕೊಡ್ಸಿ ಬುದ್ದೀ. ಆಮೇಲೇನಾದ್ರೂ ಆಗ್ಲಿ ಬುಡಿ’ ಕಾಮೇಗೌಡರು ಕೇಳಿಕೊಳ್ಳುತ್ತಾರೆ.

About The Author

ಅಬ್ದುಲ್ ರಶೀದ್

ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.

1 Comment

  1. .ಮಹೇಶ್ವರಿ.ಯು

    ಆತ್ಮೀಯ ಸ್ಪರ್ಶದ ತುಂಬ ಚಂದದ ಬರಹ

    Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ