ಮತ್ತೊಂದು ದೀಪಾವಳಿ ಬಂದಿದೆ … ದೀಪಾವಳಿಯೆಂದರೆ ತಕ್ಷಣ ನೆನಪಾಗೋದು ಸಾಲು ದೀಪಗಳು, ಬಣ್ಣ ಬಣ್ಣದ ಆಕಾಶಬುಟ್ಟಿ, ಕಂಠ ಮಟ್ಟ ತಿಂದು ತಿಂದು ಇನ್ನು ಜನ್ಮವೆಲ್ಲ ಸಿಹಿಯನ್ನೇ ತಿನ್ನಬಾರದು ಅಂತ ಆ ಕ್ಷಣಕ್ಕೆ ಅಂತನ್ನಿಸೋ ಅಷ್ಟು ಸಿಹಿಯ overdose, ಬಚ್ಚಲಿನಲ್ಲಿನ ಹಂಡೆಯಲ್ಲಿನ ಕುದಿ ಕುದಿ ನೀರು, ಹರಳೆಣ್ಣೆ ಸ್ನಾನ, ಮುಂಜಾವಿನಲ್ಲೇ ಎದ್ದು ಪಟಾಕಿ ಹೊಡೆಯೋ ಸಂಭ್ರಮ. ಈಗಿನ ಥರದ ಸೀರಿಯಲ್ ಲೈಟ್‌ಗಳನ್ನು ಹಾಕಿರುವ ಸ್ವರ್ಗ ಲೋಕದ ಬಾಗಿಲು ತೆಗೆದಿದೆಯೇನೋ ಅಂತನ್ನಿಸುವಂತ ಆಕಾಶ ಪೂರಾ ಆವರಿಸುವ ಪಟಾಕಿಗಳು ಆಗ ಇರಲಿಲ್ಲ. ಸುರ್ ಸುರ್ ಬತ್ತಿ, ಮತಾಪು, ವಿಷ್ಣು ಚಕ್ರ, ಭೂಚಕ್ರ, ರಾಕೆಟ್, ಕುದುರೆ ಪಟಾಕಿ, ಕೇಪುಗಳನ್ನ ಗುಡ್ಡೆ ಹಾಕಿಕೊಂಡು ಮನೇಲಿರೋ ಮಕ್ಕಳು ಹಂಚಿಕೊಳ್ಳುತ್ತಿದ್ದ ನೆನಪುಗಳು. ದೊಡ್ಡ ಮಕ್ಕಳು ಮಸ್ತಾಗಿ ಸಣ್ಣವಕ್ಕೆ ಟೋಪಿ ಹಾಕಿ ನಮ್ಮ ಪಟಾಕಿಗಳನ್ನು ಎಗರಿಸೋದು, ನಾವು ಕೊನೆಯವು ಲಬ ಲಬ ಅಂತ ಅಳುವುದು, ಅಪ್ಪ-ಅಮ್ಮ ‘ಶನಿಗಳಾ ಎಷ್ಟ್ ತಂದು ಕೊಟ್ರೂ ತೃಪ್ತಿಯಿಲ್ಲ ನಿಮಗೆ. ಮುಂದಿನ ಸಲದಿಂದ ಪಟಾಕಿ ಮುಖ ಕಾಣ್ತೀರಾ ನಾವೂ ನೋಡೇ ಬಿಡ್ತೀವಿ’ ಅಂತ ಹಾಕುವ ಸವಾಲು, ಬೆದರಿಕೆಗಳು … ಅದೂ ಎಲ್ಲ ಮಾಮೂಲು ಪ್ರತೀ ವರ್ಷ. ಕೇಪುಗಳನ್ನು ಹಾಕಿದ ಗನ್ನು ಕೈಗೆ ಬಂದರೆ ಅದು ಸಿಡಿಯುವಾಗ ಕಣ್ಣು ಮುಚ್ಚಿಕೊಂಡರೂ ನೋಡುವವರ ಎದುರು ಜೇಮ್ಸ್ ಬಾಂಡ್ ಥರ ಸ್ಟಂಟ್ ಹೊಡೆಯುತ್ತಿದ್ದ ನನ್ನಂಥ ಪುಕ್ಕಲು ಪುರಿಗಳ ಹುಂಬತನ, ಕೈಲೇ ಹಿಡಿದು ಪಟಾಕಿ ಅಂಟಿಸಿ, ಅದು ತಪ್ಪಿ ಕೈಲೇ ಸಿಡಿದುಬಿಟ್ಟರೂ ಏನೂ ಆಗಿಲ್ಲ ಅನ್ನೋ ಹಾಗೆ ಪೋಸ್ ಕೊಡೋ ಹೈಸ್ಕೂಲು ದಾಟಿದ ಪಡ್ಡೆಗಳ ಹೀರೋಯಿಸಂ … ಎಲ್ಲದರ ಜೊತೆ ಮರೆಯಲಾಗದ ಮತ್ತೊಂದೆರಡು ನೆನಪುಗಳು …
***
ನನ್ನಜ್ಜಿ ಸಖತ್ ಭಯದ ಸ್ವಭಾವದವರು. ಭಯವೆಂದರೆ ಅಂತಿಂಥದ್ದಲ್ಲ … ಎಲ್ಲದಕ್ಕೂ ಭಯ. ಮಿಕ್ಸರ್ ಆನ್ ಮಾಡಿದರೆ ಮಿಕ್ಸರ್ ಅಣುಬಾಂಬಿನ ಹಾಗೆ ಸಿಡಿದು ಬಿಡುತ್ತೇನೋ ಅನ್ನೋ ಥರ ಹೆದರಿ ‘ಬೇಡ ಸುಮ್ನಿರು, ಒರಳಲ್ಲಿ ರುಬ್ಬಿ ಹಾಕಿದರೆ ಹುಳಿಗೆ ಒಳ್ಳೆ ರುಚಿ’ ಅಂತ ಎಂತೆಂಥದ್ದೋ ಕಳ್ಳ ಕಾರಣ ಹುಡುಕಿ ಮಿಕ್ಸರ್ ಉಪಯೋಗಿಸದ ಹಾಗೆ ತಡೆಯುತ್ತಿದ್ದರು. ಕುಕ್ಕರ್ ಇಟ್ಟರೆ ಅದರ ವೇಯ್ಟ್ ಎಗರಿ ಹೋಗಿ ಅದರಲ್ಲಿನ ಬಿಸಿ ಅನ್ನ, ಬೇಳೆಯೆಲ್ಲ ಆಚೆ ಬಂದು ನಮ್ಮ ಮುಖ ಮೂತಿಗೆಲ್ಲ ಅಂಟ್ಕೊಂಡು ನಮ್ಮ ‘ಅದ್ಭುತ ಸೌಂದರ್ಯ’ ಮುಕ್ಕಾಗಿ ಹೋಗುತ್ತೇನೋ ಅನ್ನೋ ಹಾಗೆ ಗಾಭರಿ ಬಿದ್ದು ‘ಪಾತ್ರೇಲಿ ಅನ್ನ ಮಾಡಿದರೆ ಹದವಾಗಿರತ್ತೆ. ಕುಕ್ಕರಲ್ಲಿಟ್ಟರೆ ತಳದಲ್ಲಿ ಬರೀ ನೀರು ನೀರು ಅನ್ನ’ ಅಂತ ನೆಪ ಹಾಕುತ್ತಿದ್ದರು ಅಜ್ಜಿ. ಐಯರ್ನ್ ಬಾಕ್ಸ್ ಹಾಕಿ ಬಟ್ಟೆ ತಿಕ್ಕುತ್ತಿದ್ದರೆ ಪಕ್ಕ ಕೂತು ‘ನೀನು ಒಂದು ಕೆಲಸ ಮಾಡು, ಮೈನ್ ಸ್ವಿಚ್ ಆಫ್ ಮಾಡಿ ಬಿಟ್ಟು ಆಮೇಲೆ ಇಸ್ತ್ರಿ ಮಾಡು. ಆ ವಯರ್ ಏನಾದ್ರೂ ಸಿಡಿದುಬಿಟ್ಟು ಕರೆಂಟ್ ಹೊಡೆದ್ರೆ?’ ಅನ್ನುತ್ತಿದ್ದರು. ನನಗೆ ಒಂದೇ ನಗು ಮೈನ್ ಸ್ವಿಚ್ ಆಫ್ ಮಾಡಿ ಮಾಡಿ ತಿಕ್ಕುತ್ತಾ ಕೂತರೆ ಒಂದು ಬಟ್ಟೆ ಐಯರ್ನ್ ಮಾಡಕ್ಕೆ ಬರೀ ಒಂದು ಘಂಟೆ ಆದ್ರೂ ಬೇಕಾಗಲ್ವಾ ಅಂತ. ಮತ್ತೆ ಕೊಳ್ಳೆಗಾಲದ ಅವರ ಮನೆಗೆ ಬೇಸಿಗೆಯಲ್ಲಿ ಹೋಗ್ತಿದ್ದೆವು. ಆಗ ಅಲ್ಲಿ ರಣ ಸೆಖೆ. ನಾವು ಉದ್ದಕ್ಕೆ ಒಂದು ರೂಮಿನಲ್ಲಿ 25-30 ಜನ ಮಲಗುತ್ತಿದ್ದೆವು. ನಮ್ಮಜ್ಜಿ ಕಿಟಕಿ ತೆಗೆದು ಮಲಗಿದರೆ ನಾವೆಲ್ಲ ಮಲಗಿ ಸುಮಾರು ಹೊತ್ತಾದ ಮೇಲೆ ಮೆತ್ತಗೆ ಬಂದು ತೆರೆದಿದ್ದ ಕಿಟಕಿಯೆಲ್ಲ ಮುಚ್ಚಿ ಹೋಗುತ್ತಿದ್ದರು. ನಾವು ಅವರು ಆ ಕಡೇ ಹೋದರು ಅಂತ ಗ್ಯಾರಂಟಿ ಆದಮೇಲೆ ಮತ್ತೆ ಕಿಟಕಿ ತೆರೆದರೆ ಮತ್ತೆ ಬಂದು ಮುಚ್ಚಿ ಓಡುತ್ತಿದ್ದರು. ನಮ್ಮಜ್ಜನ ಮನೆಯಲ್ಲಿ ಅವರ ಮಾವ ಮದುವೆಯಲ್ಲಿ ಕೊಟ್ಟಿದ್ದಂಥ ಕಂಡೀಷನ್ನಲ್ಲಿ ಇದ್ದಂಥ ಒಂದು ಫ಼್ಯಾನ್ ಇತ್ತು. ಗಾಳಿಗಿಂತ ಸದ್ದೇ  ಜಾಸ್ತಿ. ಈ ಸೆಖೆ ತಾಳಲಾರದೇ ಅದನ್ನು ಆನ್ ಮಾಡಿದರೆ ಹತ್ತೇ ನಿಮಿಷದಲ್ಲಿ ಯಾವ ಮಾಯದಲ್ಲೋ ಬಂದು ಅದನ್ನೂ ಆಫ್ ಮಾಡಿ ಬಿಡುತ್ತಿದ್ದರು. ಅದನ್ಯಾಕೆ ಆಫ್ ಮಾಡ್ತೀರಿ ಅಂದರೆ ಆ ಟೇಬಲ್ ಫ಼್ಯಾನ್‍ನ ಮುಂದಿನ ಕವರ್ ಹಾರಿ ಬಂದು ಹೊಡೆದುಬಿಟ್ಟರೆ ಅನ್ನೋ ಭಯಕ್ಕಂತೆ ! ಕತ್ತಲು ಮುಸುಕುವಷ್ಟರಲ್ಲಿ ಮನೆ ಸೇರದಿದ್ದರೆ ಭಯ, ಪರೀಕ್ಷೆ ಸಮಯದಲ್ಲಿ ಮನೆ ಒಳಗೆ ಕೂತು ಮಧ್ಯರಾತ್ರಿಯಲ್ಲಿ ಓದುತ್ತಿದ್ದರೆ ಅದಕ್ಕೂ ಭಯ …ನನ್ನಜ್ಜಿ ಜೊತೆಗಿದ್ದರೆ ಭಯಕ್ಕೆ ಹೊಸ ವ್ಯಾಖ್ಯೆಯೇ ಹುಟ್ಟಿಬಿಡುತ್ತಿತ್ತು !!
ನನಗೆ ಅವರ ಭಯವನ್ನೆಲ್ಲ ನೋಡ್ತಾ ನೋಡ್ತಾ ಒಂದಿನ ಇವರ ಈ ಪರಿಯ ಭಯಕ್ಕೆ ಕಾರಣ ಏನಿರಬಹುದು ಅನ್ನೋ ಕುತೂಹಲ ಹುಟ್ಟಿತು. ಆಗ ಅಮ್ಮ ಹೇಳಿದ ಕಥೆ ಇದು …
ಅಜ್ಜಿ ಮನೆಯಲ್ಲಿ ಹಸು, ಎಮ್ಮೆ ಎಲ್ಲ ಕಟ್ಟಿಕೊಂಡಿದ್ದರು. ಅವಕ್ಕೆ ಮೇವು ಹಾಕೋದಿಕ್ಕೆ ಮನೆಯ ಮೇಲೆ ಒಣ ಹುಲ್ಲನ್ನು ಸಂಗ್ರಹಿಸಿ ಇಡೋದು ಅಜ್ಜಿ ಅಭ್ಯಾಸ. ತಾರಸಿ ಪೂರಾ ಒಣಹುಲ್ಲಿನ ರಾಶಿ. ಹಾಗೊಂದು ಸಲ ಹೊಸತಾಗಿ ಒಂದು ಲೋಡು ತರಿಸಿ ಇಟ್ಟಿದ್ದರಂತೆ. ಅದು ದೀಪಾವಳಿ ಹಬ್ಬದ ಸಮಯ. ಯಾರೋ ಹಚ್ಚಿದ ರಾಕೆಟ್ ಆ ಹುಲ್ಲಿನ ಮೆದೆಗೆ ಬಿದ್ದು ಇಡೀ ಹುಲ್ಲಿನ ರಾಶಿ ಧಗ ಧಗ ಹತ್ತಿ ಉರಿಯೋದಿಕ್ಕೆ ಶುರುವಾಗಿದೆ. ಊರಿನ ಜನರೆಲ್ಲ ಓಡಿ ಬಂದು ಬಾವಿಯಲ್ಲಿ ನೀರು ಸೇದಿ ಹಾಕೋದಿಕ್ಕೆ ಶುರು ಮಾಡೋ ಆಷ್ಟರಲ್ಲಿ ಎಲ್ಲಾ ಭಸ್ಮ. ಮನೆಗೆ ಬೆಂಕಿ ಹತ್ತೋದನ್ನು ಮಾತ್ರ ತಡೆಗಟ್ಟಲು ಸಾಧ್ಯವಾಯ್ತಂತೆ. ­­­­ನನ್ನಜ್ಜ ಅಡ್ವೊಕೇಟ್ ಆಗಿದ್ದರು. ನನ್ನಜ್ಜಿಗೆ ಹುಲ್ಲಿಗೆ ಬೆಂಕಿ ಬಿದ್ದಿದ್ದಕ್ಕೆ ನನ್ನಜ್ಜ ತೆಗೆದುಕೊಂಡ ಯಾವುದೋ ಕೇಸ್‌ನ ಎದುರಾಳಿ ಬೇಕಂತಲೇ ಮಾಡಿದ್ದು ಅನ್ನೋ ಭ್ರಮೆ ಹುಟ್ಟಿಬಿಟ್ಟಿದೆ. ಹಾಗೆ ಶುರುವಾದ ಭಯ ಯಾರೆಷ್ಟೇ ಹೇಳಿದರೂ ಕಡಿಮೆಯಾಗದೇ ಕೊನೆಗೆ ಅವರ ವ್ಯಕ್ತಿತ್ವದ ಭಾಗವೇ ಆಗಿಹೋಯ್ತು. ಅಮ್ಮ ಈ ಕಥೆ ಹೇಳಿದ ಮೇಲೆ ಅಜ್ಜಿಯ ಭಯವನ್ನು ಕೂಡಾ ಸಹಿಸಿಕೊಳ್ಳಲು ಶುರು ಮಾಡಿದೆ …
ಇನ್ನೊಂದು ಘಟನೆಯೆಂದರೆ ನಮ್ಮ ಕಾಲೋನಿಯಲ್ಲಿದ್ದವರದ್ದು. ಆ ಮನೆಯ ಹೆಂಗಸಿಗೆ ಮಗು ಹುಟ್ಟಿದಾಗ ಸ್ವಲ್ಪ ಹಿಸ್ಟೀರಿಯಾ ಥರ ಆಗಿಹೋಗಿತ್ತು. ಚುರುಕಿಲ್ಲದ ಹೆಂಗಸು. ಕೂತರೆ ಕೂತಲ್ಲೇ, ನಿಂತರೆ ನಿಂತಲ್ಲೇ. ಅದೊಂದು ದೀಪಾವಳಿ ದಿನ ಹೊಸ್ತಿಲಿನ ಎರಡೂ ಕಡೆ ಹಣತೆ ಹಚ್ಚಿದ್ದಾರೆ ಆಕೆ. ಮಗುವಿಗೆ ಒಂದು ವರ್ಷವಿರಬೇಕು. ಅದು ಅಂಬೆಗಾಲಿಡುತ್ತಾ ಬಂದು ಹಣತೆ ಪಕ್ಕ ಪಟ್ಟರಿಸಿ ಕೂತಿದೆ. ಅದು ಹಾಕಿದ್ದ ನೈಲಾನ್ ಫ್ರಾಕಿಗೆ ಬೆಂಕಿ ಹತ್ತಿ ಕುಂಡಿಯೆಲ್ಲ ಬೆಂದುಬಿಟ್ಟಿತ್ತು. ಆಗ ಅದು ಕಿಟ್ಟಂತ ಕಿರುಚಿದಾಗ ಅದರ ಅಮ್ಮ ನೋಡಿದೆ. ಎದುರು ಎದುರೇ ಇದ್ದ ಮನೆಯಿಂದ ನಾವೆಲ್ಲ ಓಡುವಷ್ಟರಲ್ಲಿ ಆ ಪ್ರಳಯಾಂತಕ ಹೆಂಗಸು ಲಕ್ಷಣವಾಗಿ ಹುಣಿಸೆಹುಳಿ ತಂದು ಗಾಯಕ್ಕೆ ಹಾಕಿಬಿಟ್ಟಿದೆ ! ಅಬ್ಬಬ್ಬಾ … ಮೊದಲೇ ಬೆಂದು ಮಾಂಸ ಕಾಣುತ್ತಿದ್ದ ಕುಂಡೆಗೆ ಈ ರಣವೈದ್ಯ ಮಾಡಿದರೆ ಅದರ ಗತಿ ಹೇಗಾಗಿರಬೇಕು ಪಾಪ. ಆ ಮಗುವಿನ ಅಪ್ಪ ಮನೆಗೆ ಬಂದು ನೋಡಿ ಸಿಕ್ಕಾಪಟ್ಟೆ ದುಃಖಪಟ್ಟುಬಿಟ್ಟಿದ್ದರು. ಆ ಭಾಗ ಮುಟ್ಟುವ ಹಾಗಿಲ್ಲ, ಬಿಡುವ ಹಾಗಿಲ್ಲದ ಸ್ಥಿತಿ. ಹುಣಿಸೆಹುಳಿ ಒರೆಸಲು ಹೋದರೆ ಹಸಿ ಹಸಿ ಮಾಂಸ ಕೈಗೆ ಬರುತ್ತೇನೋ ಅನ್ನುವ ಹಾಗೆ ಆಗಿಹೋಗಿತ್ತು. ಆಗ ತಾನೇ ಪಟಾಕಿ ಸಂಭ್ರಮ ಮುಗಿಸಿ ಮನೆ ಸೇರಿದ್ದ ನಾವು ಸಣ್ಣ ಮಕ್ಕಳು ಆ ದೃಶ್ಯ ನೋಡಿ ಜ್ಞಾನ ತಪ್ಪುವುದೊಂದು ಬಾಕಿ. ಆ ರಾತ್ರಿಯಲ್ಲಿ ಮಗುವನ್ನು ಎತ್ತಿಕೊಂಡು ಮೈಸೂರಿಗೆ ಓಡಿದ್ದರು. ಆಮೇಲೆ ಅದು ಪೂರ್ತಿ ನೆಟ್ಟಗಾಗ ಬೇಕಾದರೆ ಸುಮಾರು ಮೂರು ತಿಂಗಳಾದರೂ ಕಳೆದಿತ್ತೇನೋ ಅಂತ ನೆನಪು …­­­­­­­­­­­­­­
***
ಹೋದ ದೀಪಾವಳಿಯ ನಂತರ ಅನಾರೋಗ್ಯಕ್ಕೆ ಬಿದ್ದ ನಾನು ಒಂದು ವರ್ಷ ಯಾವ ಹಬ್ಬವನ್ನೂ ಮಾಡಿಲ್ಲ ಮನೆಯಲ್ಲಿ. ಹಬ್ಬವಿರಲಿ, ಎಲ್ಲಿ ದೇವರನ್ನು ಬೇಡಿಕೊಳ್ಳುವ ಗೀಳಿಗೆ ಬೀಳುತ್ತೇನೋ ಅಂತ ಹೆದರಿ ದೇವರ ಎದುರು ಒಂದು ದೀಪ ಕೂಡಾ ಹತ್ತಿಸಲಿಲ್ಲ ಇಡೀ ವರ್ಷ. ಆ ದೀಪಾವಳಿಗೂ-ಈ ದೀಪಾವಳಿಗೂ ಮಧ್ಯೆ ಒಂದು ಯುಗ ಕಳೆದಿದೆಯೇನೋ ಅನ್ನುವಷ್ಟು ನೋವಿನ ದಿನಗಳು. ಈಗ ಎಲ್ಲದಕ್ಕೂ ಒಂದು ಕೊನೆ ಬಂದಿದೆ. ಯಾವಾಗಲೂ ಸುಂದರವೇ ಆಗಿದ್ದ ಬದುಕು ಈಗ ಮತ್ತೂ ಸುಂದರ, ಸುಂದರ ಅನ್ನಿಸುತ್ತಿದೆ. ನನ್ನೆದೆಯಲ್ಲೂ ಈಗ ದೀಪಾವಳಿ; ಮನಸಿನಲ್ಲೆಲ್ಲ ಇಳಿಬಿಟ್ಟ ಕನಸಿನ ತೂಗುಬುಟ್ಟಿಗಳು … ಕನಸೆಲ್ಲ ನನಸೇ ಆಗಿ ಹೋಗಬಹುದೇನೋ ಅನ್ನುವ ಮಿಣುಕು ಆಸೆಯ, ಭರವಸೆಯ ಹಣತೆಗಳು …
ನನಗೀಗ ಬರೀ ದೀಪಾವಳಿಯನ್ನಲ್ಲ, ಬದುಕನ್ನೇ celebrate ಮಾಡುವ ಹುಚ್ಚು ಹತ್ತಿದೆ …