ಚೆಸ್ಟ್ ನಟ್ ಎಂದರೆ ಒಂದು ರೀತಿಯ ಹಲಸಿನ ಬೀಜದ ಹಾಗಿರುತ್ತದೆ. ಕೆಂಡದಲ್ಲಿ ಆಗ ತಾನೇ ಸುಟ್ಟು ಒಂದು ಪೊಟ್ಟಣದಲ್ಲಿ ತುಂಬಿಸಿ ಕೊಡುತ್ತಾರೆ. ಈ ಪೊಟ್ಟಣದ ವಿಶೇಷ ಎಂದರೆ, ಇದರಲ್ಲಿ ಎರಡು ಭಾಗವಿರುತ್ತದೆ. ಒಂದರಲ್ಲಿ ಬಿಸಿ ಬಿಸಿ ಚೆಸ್ಟ್ ನಟ್ ಹಾಕಿದ್ದರೆ, ಮತ್ತೊಂದು ಭಾಗ ಖಾಲಿ ಇರುತ್ತದೆ. ಬಿಡಿಸಿದ ಸಿಪ್ಪೆ ಹಾಕಲು ಖಾಲಿ ಭಾಗವನ್ನು ಬಳಸಬೇಕು! ಇದು ಗಮನಿಸಲೇಬೇಕು ಎನ್ನುವಷ್ಟು ದೊಡ್ಡ ವಿಷಯ ಅಲ್ಲದಿದ್ದರೂ, ನಮಗೆ ಇದರಿಂದೊಂದು ಪಾಠ ಇದೆ ಎನ್ನುವ ಕಾರಣಕ್ಕೆ ಇಲ್ಲಿ ವಿವರವಾಗಿ ಹೇಳುತ್ತಿದ್ದೇನೆ. ನಮ್ಮ ಬಸವನಗುಡಿಯ ಕಡಲೇಕಾಯಿ ಪರಿಷೆಯಲ್ಲಿಯೂ ಸಹ ಇಂತ ಪೊಟ್ಟಣಗಳನ್ನು ಉಪಯೋಗಿಸಿದರೆ ಎಷ್ಟು ಚೆನ್ನ!
“ದೂರದ ಹಸಿರು” ಸರಣಿಯಲ್ಲಿ ಯೂರೋಪಿನ ಕ್ರಿಸ್ಮಸ್ ರಾಜಧಾನಿ ಸ್ಟ್ರಾಸ್ಬುರ್ಗ್ನಲ್ಲಿ ಓಡಾಡಿದ ಅನುಭವದ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ
ಯುರೋಪಿನಾದ್ಯಂತ ವರ್ಷದ ದೊಡ್ಡ ಹಬ್ಬ ಎಂದರೆ ಕ್ರಿಸ್ಮಸ್. ಪ್ರತಿ ಊರಿನಲ್ಲೂ ಸಹ, ಆಯಾ ಊರಿನ ಸಂಪ್ರದಾಯ ಮತ್ತು ಜನಸಂಖ್ಯೆಗನುಗುಣವಾಗಿ “ಕ್ರಿಸ್ಮಸ್ ಮಾರ್ಕೆಟ್” ಆಯೋಜಿಸಲಾಗುತ್ತದೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ನವೆಂಬರ್ ಕೊನೆಯಿಂದ ಡಿಸೆಂಬರ್ ಕೊನೆಯವರೆಗೆ ನಡೆಯುವ ಈ ಜಾತ್ರೆಗೆ, ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಾತರದಿಂದ ಕಾಯುತ್ತಿರುತ್ತಾರೆ! ಹೀಗೆ ಪ್ರತಿ ಊರಿನಲ್ಲಿಯೂ ನಡೆಯುತ್ತಿದ್ದರೆ, ಯಾವ ಊರಿನ “ಕ್ರಿಸ್ಮಸ್ ಮಾರ್ಕೆಟ್” ಬಗ್ಗೆ ಬರೆಯಲಿ ಎನ್ನುವ ಗೊಂದಲವಿತ್ತು. ಆದರೆ ಇತ್ತೀಚೆಗಷ್ಟೇ ಮುಗಿದ ಕ್ರಿಸ್ಮಸ್ ಹಬ್ಬ ನನಗೊಂದು ಉತ್ತರವನ್ನು ಹುಡುಕಿ ಕೊಟ್ಟಿದೆ.
ಫ್ರೆಂಚ್ ಭಾಷೆಯಲ್ಲಿ ಕ್ರಿಸ್ಮಸ್ ಹಬ್ಬಕ್ಕೆ “ನೋಯಲ್” ಎನ್ನುತ್ತಾರೆ. ಫ್ರಾನ್ಸ್ ದೇಶದ ಈ ನಗರದ ಕ್ರಿಸ್ಮಸ್ ಮಾರ್ಕೆಟ್ “ಕ್ರಿಸ್ಮಸ್ ಕ್ಯಾಪಿಟಲ್” ಎಂದೇ ಹೆಸರಾಗಿದೆ. ಯಾವ ಊರಿದು ಎಂದು ಊಹಿಸಬಲ್ಲಿರಾ? ಮತ್ತೊಂದು ಸುಳಿವು ನೀಡುತ್ತೇನೆ. ಈ ನಗರದಲ್ಲಿ ಯೂರೋಪಿಯನ್ ಒಕ್ಕೂಟದ ಸಂಸತ್ ಭವನವಿದೆ! ನಿಮಗೆ ಈಗಾಗಲೇ ಗೊತ್ತಾಗಿದ್ದರೆ ಸಂತೋಷ. ಈ ನಗರದ ಹೆಸರು “Strasbourg”. ಫ್ರಾನ್ಸ್ ದೇಶದ ಜೆರ್ಮನಿ ಗಡಿಯ ಸಮೀಪವಿರುವ ಈ ನಗರ ತನ್ನದೇ ಆದಂತ ಇತಿಹಾಸ, ಸೌಂದರ್ಯ ಹೊಂದಿದೆ. ಅದಷ್ಟೇ ಅಲ್ಲದೆ ಯೂರೋಪಿಯನ್ ಒಕ್ಕೂಟದ ರಾಜಧಾನಿಗಳಲ್ಲಿ ಒಂದಾಗಿದೆ. ಉಳಿದ ಮೂರೂ ರಾಜಧಾನಿಗಳು ಬೆಲ್ಜಿಯಂನ ಬ್ರಸೆಲ್ಸ್, ಲ್ಯೂಕ್ಸೆಮ್ಬರ್ಗ್ ಮತ್ತು ಜೆರ್ಮನಿಯ ಫ್ರಾಂಕ್ಫರ್ಟ್. ಹೀಗೆ ಯೂರೋಪಿಯನ್ ಒಕ್ಕೂಟಕ್ಕೆ ಒಟ್ಟು ನಾಲ್ಕು ರಾಜಧಾನಿಗಳಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ಒಂದು ದೇಶಕ್ಕೆ ಮಾತ್ರ ಪಾರುಪತ್ಯ ಸಿಗಬಾರದೆಂಬ ಸದುದ್ದೇಶದಿಂದ ಈ ವ್ಯವಸ್ಥೆಯನ್ನು ಮಾಡಲಾಗಿದೆ.
ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಮಾತ್ರ ಸ್ಟ್ರಾಸ್ಬುರ್ಗ್ ನಗರಕ್ಕೆ ಹೊಸದೊಂದು ಕಳೆ ಬಂದುಬಿಡುತ್ತದೆ. ಎಲ್ಲಿ ನೋಡಿದರೂ ಜಗಮಗಿಸುವ ದೀಪದ ಅಲಂಕಾರಗಳು, ಸಿಂಗಾರಗೊಂಡ ಕಟ್ಟಡಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಸ್ಟ್ರಾಸ್ಬುರ್ಗ್ ನಗರದ ಐತಿಹಾಸಿಕ ಭಾಗದಲ್ಲಿ ಕ್ರಿಸ್ಮಸ್ ಮಾರ್ಕೆಟ್ ಆಯೋಜಿಸಲಾಗುತ್ತದೆ. “Capital of Christmas” ಎಂದು ಹೆಸರುವಾಸಿಯಾಗಿರುವ ಈ ನಗರಕ್ಕೆ ವಿಶ್ವದ ಎಲ್ಲೆಡೆಯಿಂದ ಪ್ರವಾಸಿಗರು ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಭೇಟಿ ನೀಡುತ್ತಾರೆ. ಇದೊಂದು ಕಣ್ಣಿಗೆ ಹಬ್ಬ ಎಂದರೂ ತಪ್ಪಾಗಲಾರದು.
ಇನ್ನೊಂದು ಅಚ್ಚರಿಯ ವಿಷಯ ಏನು ಗೊತ್ತೇ? ಸ್ಟ್ರಾಸ್ಬುರ್ಗ್ ಕ್ರಿಸ್ಮಸ್ ಮಾರ್ಕೆಟ್ ಫ್ರಾನ್ಸಿನ ಅತ್ಯಂತ ಪುರಾತನ ಕ್ರಿಸ್ಮಸ್ ಮಾರ್ಕೆಟ್. 1570 ರಲ್ಲಿ ಪ್ರಾರಂಭವಾದ ಈ ಸಂಪ್ರದಾಯ ಅಲ್ಲಿನ ರಾಜಧಾನಿಯಾದ ಪ್ಯಾರಿಸ್ನಲ್ಲಿ ನಡೆಯುವ ಕ್ರಿಸ್ಮಸ್ ಜಾತ್ರೆಗಿಂತಲೂ ಹಳೆಯದು. ಪ್ರತಿ ವರ್ಷವೂ ಜನ ಸಂದಣಿ ಅತಿಯಾಗಿರುತ್ತದೆ. ಇದರ ಇತಿಹಾಸದಲ್ಲಿ, ಇಲ್ಲಿಯವರೆಗೆ ಕೊರೋನಾ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಬಿಟ್ಟರೆ, ಬೇರೆ ಯಾವ ಕಾರಣಕ್ಕೂ ಹಬ್ಬದ ಆಚರಣೆ ನಿಂತ ಉದಾಹರಣೆಗಳಿಲ್ಲ. ಸ್ಟ್ರಾಸ್ಬುರ್ಗ್ ನಗರದಲ್ಲಿ ಕ್ರಿಸ್ಮಸ್ ಆಚರಣೆ ಎಷ್ಟು ಸುಪ್ರಸಿದ್ಧ ಎನ್ನುವುದಕ್ಕೆ ಎರಡು ನಕಾರಾತ್ಮಕ ಘಟನೆಗಳು ಸಾಕ್ಷಿ. 2000 ನೇ ಇಸವಿಯ ಕ್ರಿಸ್ಮಸ್ ಆಚರಣೆ ವೇಳೆ ಭಯೋತ್ಪಾದಕ ಸಂಘಟನೆ “ಅಲ್ ಖೈದಾ”, ಇಲ್ಲಿನ ಕ್ರಿಸ್ಮಸ್ ಮಾರ್ಕೆಟ್ ಅನ್ನು ಬಾಂಬ್ ಇಟ್ಟು ಉಡಾಯಿಸಲು ಸಂಚು ರೂಪಿಸಿತ್ತು. ರಕ್ಷಣಾ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ, ಇಟ್ಟಿದ್ದ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿ ಆಗಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಲಾಯಿತು. ಇಲ್ಲದಿದ್ದರೆ ಮಾನವ ಕುಲದ ಇತಿಹಾಸದಲ್ಲಿ ಅಳಿಸಿಹೋಗದಂತಹ ಘೋರ ದುರಂತವೊಂದು ಅಲ್ಲಿ ನಡೆದು ಹೋಗುತ್ತಿತ್ತು! ಮತ್ತೆ 2018 ರಲ್ಲಿ ಯೂರೋಪಿನ ಹಲವಾರು ಕಡೆ ನಡೆದ “ಒಂಟಿ ತೋಳ” (ಸಿಂಗಲ್ ವೂಲ್ಫ್ ಅಟ್ಯಾಕ್) ಮಾದರಿಯ ಭಯೋತ್ಪಾದನಾ ಘಟನೆಯಲ್ಲಿ ಸ್ಟ್ರಾಸ್ಬುರ್ಗ್ ಕ್ರಿಸ್ಮಸ್ ಮಾರ್ಕೆಟ್ ಸಾಕ್ಷಿಯಾಯಿತು. ಐದು ಜನವರು ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡರು. ಈ ಎರಡು ಕರಾಳ ಘಟನೆಗಳು ಇಲ್ಲಿ ಏಕೆ ನಡೆಯಿತು ಎಂದು ವಿಶ್ಲೇಷಿಸಿದರೆ, ಸಿಗುವ ಉತ್ತರ ಇದು ಕ್ರಿಸ್ಮಸ್ನ ರಾಜಧಾನಿ ಎನ್ನುವುದು! ಆದರೆ ಅದರಿಂದೀಚೆಗೆ ಇಲ್ಲಿ ಬಹಳ ಮುತುವರ್ಜಿಯಿಂದ ರಕ್ಷಣಾ ಪಹರೆಯನ್ನು ಹೆಚ್ಚಿಸಿ ಇನ್ನಾವ ದುರಂತ ನಡೆಯದಂತೆ ನೋಡಿಕೊಳ್ಳಲಾಗಿದೆ. ಜನರ ಉತ್ಸಾಹವನ್ನು ಕುಂದಿಸಿಲ್ಲ ಎನ್ನುವುದಕ್ಕೆ, ಇಲ್ಲಿಗೆ ಹರಿದು ಬರುವ ಜನ ಸಾಗರವೇ ಸಾಕ್ಷಿ!
ಹಾಗಾದರೆ ಸ್ಟ್ರಾಸ್ಬುರ್ಗ್ನಲ್ಲಿ ಕ್ರಿಸ್ಮಸ್ ಹಬ್ಬ ಇಷ್ಟು ಹೆಸರುವಾಸಿಯಾಗಲು ಕಾರಣವಾದರೂ ಏನು? ಹಲವಾರು ದೇಶಗಳಿಂದ ಇಲ್ಲಿಗೆ ಭೇಟಿ ನೀಡಲು ಜನರು ವರ್ಷ ಪೂರ್ತಿ ಕಾತುರತೆಯಿಂದ ಕಾಯುತ್ತಿರುವುದು ಏತಕ್ಕಾಗಿ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು, ಕ್ರಿಸ್ಮಸ್ ಸಮಯದಲ್ಲಿ ಒಮ್ಮೆ ಸ್ಟ್ರಾಸ್ಬುರ್ಗ್ ಭೇಟಿ ನೀಡಿದರೆ ಒಳ್ಳೆಯದು. ಊರಿನ ಐತಿಹಾಸಿಕ ಭಾಗ ಒಂದಷ್ಟು ದೂರದಿಂದಲೇ ಎದ್ದು ಕಾಣುವಂತೆ ಸಿಂಗಾರಗೊಂಡಿರುತ್ತದೆ. ಹಳೆಯ ಮರದ ಮನೆಗಳು, ಕಿರಿದಾದ ವಾಹನರಹಿತ ರಸ್ತೆಗಳು, ತಲೆ ಎತ್ತಿದರೆ ಎಲ್ಲೆಡೆಯೂ ವಿಧ ವಿಧವಾದ ದೀಪದ ಅಲಂಕಾರಗಳು ಕಣ್ಮನ ಸೆಳೆಯುತ್ತವೆ. ಅಲ್ಲಲ್ಲಿ ಚೆಸ್ಟ್ ನಟ್ ಮಾರಾಟದ ತಳ್ಳು ಗಾಡಿಗಳು ಚಳಿಯಲ್ಲಿ ಸಾಗುವಾಗ ಒಳ್ಳೆಯ ವಿರಾಮ ನೀಡುತ್ತವೆ. ಚೆಸ್ಟ್ ನಟ್ ಎಂದರೆ ಒಂದು ರೀತಿಯ ಹಲಸಿನ ಬೀಜದ ಹಾಗಿರುತ್ತದೆ. ಕೆಂಡದಲ್ಲಿ ಆಗ ತಾನೇ ಸುಟ್ಟು ಒಂದು ಪೊಟ್ಟಣದಲ್ಲಿ ತುಂಬಿಸಿ ಕೊಡುತ್ತಾರೆ. ಈ ಪೊಟ್ಟಣದ ವಿಶೇಷ ಎಂದರೆ, ಇದರಲ್ಲಿ ಎರಡು ಭಾಗವಿರುತ್ತದೆ. ಒಂದರಲ್ಲಿ ಬಿಸಿ ಬಿಸಿ ಚೆಸ್ಟ್ ನಟ್ ಹಾಕಿದ್ದರೆ, ಮತ್ತೊಂದು ಭಾಗ ಖಾಲಿ ಇರುತ್ತದೆ. ಬಿಡಿಸಿದ ಸಿಪ್ಪೆ ಹಾಕಲು ಖಾಲಿ ಭಾಗವನ್ನು ಬಳಸಬೇಕು! ಇದು ಗಮನಿಸಲೇಬೇಕು ಎನ್ನುವಷ್ಟು ದೊಡ್ಡ ವಿಷಯ ಅಲ್ಲದಿದ್ದರೂ, ನಮಗೆ ಇದರಿಂದೊಂದು ಪಾಠ ಇದೆ ಎನ್ನುವ ಕಾರಣಕ್ಕೆ ಇಲ್ಲಿ ವಿವರವಾಗಿ ಹೇಳುತ್ತಿದ್ದೇನೆ. ನಮ್ಮ ಬಸವನಗುಡಿಯ ಕಡಲೇಕಾಯಿ ಪರಿಷೆಯಲ್ಲಿಯೂ ಸಹ ಇಂತ ಪೊಟ್ಟಣಗಳನ್ನು ಉಪಯೋಗಿಸಿದರೆ ಎಷ್ಟು ಚೆನ್ನ!
ಹಾಗೆಯೇ ಚೆಸ್ಟ್ ನಟ್ ತಿನ್ನುತ್ತಾ ಮುಂದೆ ಸಾಗಿದರೆ ಅಲ್ಲೊಂದು ಮೈದಾನದಷ್ಟು ವಿಶಾಲವಾದ ಜಾಗದಲ್ಲಿ ಸಾಲು ಸಾಲಾಗಿ ಒಂದೇ ರೀತಿಯ ಮರದ ಅಂಗಡಿಗಳನ್ನು ಹಾಕಿರುತ್ತಾರೆ. ಎಲ್ಲ ಅಂಗಡಿಗಳು ಸಹ ದೀಪದಿಂದ ಕಂಗೊಳಿಸುತ್ತಿರುತ್ತವೆ. ಅಲ್ಲಿ ಕ್ರಿಸ್ಮಸ್ ಹಬ್ಬದ ವಿಶೇಷ ಕುದಿಸಿದ ವೈನ್ ಸಿಗುತ್ತದೆ. ವೈನ್ ಕುದಿಸುವಾಗ ಚಕ್ಕೆಯ ಪುಡಿಯನ್ನು ಹಾಕಿರುತ್ತಾರೆ. ಈ ಕ್ರಿಸ್ಮಸ್ ಮಾರುಕಟ್ಟೆಯ ಸಮಯವಾದ ಒಂದು ತಿಂಗಳು ಬಿಟ್ಟರೆ, ವರ್ಷದ ಇನ್ನಾವುದೇ ಸಮಯದಲ್ಲಿ ಈ ರೀತಿಯ ವೈನ್ ಸಿಗುವುದಿಲ್ಲ. ಪಾನ ಪ್ರಿಯರಿಗೆ ಕೊರೆಯುವ ಚಳಿಯಲ್ಲಿ ಇದೊಂದು ತಪ್ಪಿಸಲಾಗದ ಅನುಭವ. ಮದ್ಯಪಾನ ಮಾಡದವರಿಗೆ, ಮಕ್ಕಳಿಗೆ ಒಂದು ಪರ್ಯಾಯ ವ್ಯವಸ್ಥೆ ಇದೆ. ಈ ಭಾಗದಲ್ಲಿ ಸಿಗುವ ಹುಳಿ ಹಣ್ಣುಗಳ ರಸವನ್ನು ತೆಗೆದು, ಚಕ್ಕೆ ಪುಡಿಯನ್ನು ಹಾಕಿ ಕುದಿಸಿ ಬಿಸಿ ಬಿಸಿಯಾಗಿ ಲೋಟದಲ್ಲಿ ಹಾಕಿ ಕೊಡುತ್ತಾರೆ. ಆ ಲೋಟಕ್ಕೆ ಮುಂಚಿತವಾಗಿ ಠೇವಣಿ ಕೊಟ್ಟಿರಬೇಕು. ಲೋಟ ವಾಪಾಸ್ ನೀಡಿದಾಗ ಹಿಡಿದುಕೊಂಡಿದ್ದ ಲೋಟದ ದುಡ್ಡನ್ನು ವಾಪಾಸ್ ಕೊಡುತ್ತಾರೆ. ಈ ವ್ಯವಸ್ಥೆ ಏಕೆಂದರೆ, ಭಂಡ ಪ್ರವಾಸಿಗರು ಈ ಲೋಟಗಳನ್ನು ನೆನಪಿನ ಕಾಣಿಕೆಯಾಗಿ ತಮ್ಮೊಟ್ಟಿಗೆ ಕೊಂಡೊಯ್ಯುತ್ತಾರೆ. ಅದರ ಮೇಲೆ ಕ್ರಿಸ್ಮಸ್ ಹಬ್ಬದ ಸುಂದರವಾದ ಚಿತ್ರಗಳನ್ನು ಬಿಡಿಸಿರುತ್ತಾರೆ.
1570 ರಲ್ಲಿ ಪ್ರಾರಂಭವಾದ ಈ ಸಂಪ್ರದಾಯ ಅಲ್ಲಿನ ರಾಜಧಾನಿಯಾದ ಪ್ಯಾರಿಸ್ನಲ್ಲಿ ನಡೆಯುವ ಕ್ರಿಸ್ಮಸ್ ಜಾತ್ರೆಗಿಂತಲೂ ಹಳೆಯದು. ಪ್ರತಿ ವರ್ಷವೂ ಜನ ಸಂದಣಿ ಅತಿಯಾಗಿರುತ್ತದೆ. ಇದರ ಇತಿಹಾಸದಲ್ಲಿ, ಇಲ್ಲಿಯವರೆಗೆ ಕೊರೋನಾ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಬಿಟ್ಟರೆ, ಬೇರೆ ಯಾವ ಕಾರಣಕ್ಕೂ ಹಬ್ಬದ ಆಚರಣೆ ನಿಂತ ಉದಾಹರಣೆಗಳಿಲ್ಲ.
ಅಂಗಡಿಗಳ ಸಾಲಿನಲ್ಲಿ ಹಲವಾರು ರೀತಿಯ ಬೇರೆಯ ಅಂಗಡಿಗಳಿರುತ್ತವೆ. ಕ್ಯಾಂಡಲ್ ಮಾರುವ ಅಂಗಡಿಯಲ್ಲಿ ಸುವಾಸನೆ ಭರಿತ, ವೈವಿಧ್ಯಮಯ ಬಣ್ಣ ಮತ್ತು ಆಕಾರದ ಕ್ಯಾಂಡಲ್ ಸಿಗುತ್ತವೆ. ನೆನಪಿನ ಕಾಣಿಕೆಯ ಹಲವಾರು ಅಂಗಡಿಗಳಿರುತ್ತವೆ. ಕರಕುಶಲ ವಸ್ತುಗಳ, ಕೈಯಲ್ಲಿ ತಯಾರಿಸಿದ ಆಟದ ಅಂಗಡಿಗಳು ಕಾಣಸಿಗುತ್ತವೆ. ಚಳಿಗಾಲವಾದ್ದರಿಂದ ಉಣ್ಣೆಯಿಂದ ಮಾಡಿದ ಟೋಪಿ, ಸ್ವೆಟರ್, ಕೈ ಚೀಲಗಳು, ಕಾಲಿನ ಸಾಕ್ಸ್ ಹೀಗೆ ಹತ್ತು ಹಲವಾರು ವಸ್ತುಗಳ ಅಂಗಡಿಗಳೂ ಸಹ ಇರುತ್ತವೆ. ಮಾಂಸ ಪ್ರಿಯರಿಗೂ ಸಹ ಇಲ್ಲಿ ಭೂರಿ ಭೋಜನಕ್ಕೆ ಹಲವಾರು ಅಂಗಡಿ ಮುಂಗಟ್ಟುಗಳಿವೆ. ಜನಗಳಿಂದ ಗಿಜಿಗುಡುತ್ತಿರುವ ಈ ಮುಂಗಟ್ಟುಗಳಲ್ಲಿ ಹೆಚ್ಚಾಗಿ ಹಂದಿ ಮತ್ತು ಗೋ ಮಾಂಸ ಮಾರುತ್ತಾರೆ.
ಹೀಗೆ ಎಲ್ಲ ಅಂಗಡಿಗಳನ್ನು ಒಮ್ಮೆ ಸುತ್ತಾಡುವಾಗ, ಒಂದು ಅಂಗಡಿಯಲ್ಲಿ ಸೈಕಲ್ ಬ್ರಾಂಡ್ ಅಗರಬತ್ತಿ ಕಣ್ಣಿಗೆ ಬಿತ್ತು. ನನ್ನ ಹೆಂಡತಿಗೆ, ಜೊತೆಯಲ್ಲಿದ್ದ ಸ್ನೇಹಿತರಿಗೆ ತೋರಿಸಿ “ಇಲ್ನೋಡಿ ಸೈಕಲ್ ಬ್ರಾಂಡ್ ಅಗರಬತ್ತಿ ಇಲ್ಲೂ ಸಿಗತ್ತೆ” ಅಂದೆ. ಅಂಗಡಿಯಲ್ಲಿದ್ದೋರು “ಒಹ್, ನೀವು ಕನ್ನಡಿಗರಾ? ಯಾವ ಊರು? ಇಲ್ಲಿ ಎಲ್ಲಿದಿರಾ?” ಅಂತ ಕೇಳಿದ್ದು ನೋಡಿ ಆಶ್ಚರ್ಯ, ಸಂತೋಷ ಎಲ್ಲ ಒಟ್ಟಿಗೆ ಆಯ್ತು. ರಮೇಶ್ ಮತ್ತು ಅವರ ಪತ್ನಿ ಪ್ಯಾರಿಸ್ ವಾಸಿಗಳು. ಕಳೆದ 32 ವರ್ಷಗಳಿಂದ ಸ್ಟ್ರಾಸ್ಬುರ್ಗ್ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಒಂದು ಅಂಗಡಿ ಹಾಕಿ ಒಂದು ತಿಂಗಳು ಇಲ್ಲಿ ಕಾಲ ಕಳೆಯುತ್ತಾರಂತೆ. ಮೂಲ ಬೆಂಗಳೂರಿನ ಬನಶಂಕರಿಯವರಾದ ಇವರ ಪರಿಚಯವಾಗಿದ್ದು ಬಹಳ ಖುಷಿ ಅನ್ನಿಸಿತು. ಬಯಸದೆ ಇದ್ದ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಸಿಗುವ ಮಸಾಲೆ ದೋಸೆ, ಇಡ್ಲಿ-ವಡೆ, ಕನ್ನಡದ ಇಂಪು ನೀಡುವ “ಅಡ್ರಿನಿಲ್ ರಶ್” ಬೇರೆ ಯಾವ ಸಂಗತಿಗಳೂ ಕೊಡುವುದಿಲ್ಲ. ರಮೇಶ್ ಅವರು ವಿಧ ವಿಧವಾದ ಅಗರಬತ್ತಿಗಳು, ಸಾಂಬ್ರಾಣಿಗಳು, ದೇವರ ವಿಗ್ರಹಗಳು, ಯೋಗದ ಶರ್ಟ್-ಪ್ಯಾಂಟ್ಗಳನ್ನೂ ತಮ್ಮ ಅಂಗಡಿಯಲ್ಲಿ ಮಾರುತ್ತಿದ್ದರು. ಇತ್ತೀಚಿಗೆ ಎಲ್ಲ ಆನ್ಲೈನ್ ಆದ ನಂತರ ವ್ಯಾಪಾರ ಮುಂಚಿನ ಹಾಗಿಲ್ಲ ಎಂದು ಅಲುವತ್ತುಕೊಂಡರು. ಉಭಯ ಕುಶಲೋಪರಿ ವಿಚಾರಿಸಿದ ನಂತರ ನಾವುಗಳು ಸಹ ರೈಲಿನೆಡೆಗೆ ತೆರಳಿದೆವು.
ಮಾರುಕಟ್ಟೆಯ ಪ್ರಮುಖ ಆಕರ್ಷಣೆ ಎಂದರೆ “ಕ್ರಿಸ್ಮಸ್ ಮರ”. ದೊಡ್ಡ ಪೈನ್ ಮರವೊಂದನ್ನು ನಿಲ್ಲಿಸಿ, ಅದಕ್ಕೆ ನವ ವಧುವಿನಂತೆ ಅಲಂಕಾರ ಮಾಡಿರುತ್ತಾರೆ. ಬಣ್ಣ ಬಣ್ಣದ ದೀಪಗಳಿಂದ ಸುತ್ತುವರಿದಿರುವ ಈ ಮರದ ಮುಂದೊಂದು ಸೆಲ್ಫಿ ಇಲ್ಲದಿದ್ದರೆ ಕ್ರಿಸ್ಮಸ್ ಮಾರುಕಟ್ಟೆಗೆ ಬಂದಿದ್ದರೂ ಬಂದಿಲ್ಲವೆಂಬ ಅಂಬೋಣ. ಹಾಗಾಗಿ ಇಲ್ಲಿ ಸರತಿ ಸಾಲು ಇದ್ದರೂ, ಸಮಾಧಾನದಿಂದ ಸಾಲಿನಲ್ಲಿ ನಿಂತು ಫೋಟೋಗಳನ್ನು ತೆಗೆದುಕೊಳ್ಳಬೇಕು. ಸ್ಟ್ರಾಸ್ಬುರ್ಗ್ನ ಹೃದಯ ಭಾಗದಲ್ಲಿರುವ ಐತಿಹಾಸಿಕ ಕ್ಯಾಥೆಡ್ರೆಲ್ ಇಲ್ಲಿನ ಸಾರ್ವಕಾಲಿಕ ಆಕರ್ಷಣೆ. ಕ್ರಿಸ್ಮಸ್ ಸಮಯದಲ್ಲಂತೂ, ಕಾಲಿಡಲು ಜಾಗವಿಲ್ಲದಷ್ಟು ಜನ ತುಂಬಿರುವುದರಿಂದ ಈ ಕ್ಯಾಥೆಡ್ರೆಲ್ ಒಳಗೆ ಹೋಗಲು ಅವಕಾಶ ಸಿಗಲಿಲ್ಲ. ಆದರೆ ಹೊರಗಿನಿಂದ ನೋಡಲು ಬೃಹದಾಕಾರದ ಕಟ್ಟಡ. ಉತ್ಕೃಷ್ಟ ವಾಸ್ತುಶಿಲ್ಪಕಲೆ ಇದಕ್ಕೆ ಇನ್ನಷ್ಟು ಮೆರಗನ್ನು ತಂದಿದೆ. ಸುತ್ತ ಮುತ್ತಲಿನ ಹೋಟೆಲ್ಗಳಿಗೆ ಕ್ರಿಸ್ಮಸ್ ಮಾರುಕಟ್ಟೆಯ ಕಾಲ “ಸುವರ್ಣ ಯುಗ” ಎಂದರೂ ಅತಿಶಯೋಕ್ತಿಯಲ್ಲ. ನಮ್ಮ ಮೈಸೂರಿನಲ್ಲಿ ದಸರಾ ಸಮಯದಲ್ಲಿ ಹೇಗೆ ಹೋಟೆಲ್ನವರಿಗೆ ವ್ಯಾಪಾರದ ವಹಿವಾಟು ಜೋರಾಗಿರುತ್ತದೆಯೋ, ಹಾಗೆಯೇ ಇಲ್ಲಿ ಸಹ. ಬಿಡುವಿರದಷ್ಟು ದುಡಿದು ಆಮೇಲೆ ತಿಂಗಳುಗಳಷ್ಟು ಸಮಯ ವಿಶ್ರಾಂತಿ ಪಡೆಯುತ್ತಾರೆ ಎಂದು ಕೇಳಿದ್ದೇನೆ.
ನಾವು ಇರುವ ಊರಿನಲ್ಲಿ ಕ್ರಿಸ್ಮಸ್ ಮಾರುಕಟ್ಟೆ ಇದ್ದರೂ ಸಹ, ಸ್ಟ್ರಾಸ್ಬುರ್ಗ್ ನಗರದಲ್ಲಿ ನಡೆಯುವ ಕ್ರಿಸ್ಮಸ್ ಹಬ್ಬದ ಮಾರುಕಟ್ಟೆ ಬಹಳ ವಿಶೇಷ ಅನ್ನಿಸಿತು. ಯೂರೋಪಿನ ಇತರೆ ನಗರಗಳಾದ ಜೆರ್ಮನಿಯ ನ್ಯುರೆಮ್ ಬರ್ಗ್, ಕೊಲೊನ್, ಬೆಲ್ಜಿಯಂ ನ ರಾಜಧಾನಿ ಬ್ರಸೆಲ್ಸ್, ಇಟಾಲಿಯ ರೋಮ್, ಚೆಕ್ ಗಣರಾಜ್ಯದ ರಾಜಧಾನಿ ಪ್ರಾಗ್, ಹಂಗೇರಿ ರಾಜಧಾನಿ ಬುಡಾಪೆಸ್ಟ್ ನಗರಗಳು ಕ್ರಿಸ್ಮಸ್ ಹಬ್ಬದ ಆಚರಣೆಗೆ ಮತ್ತು ಕ್ರಿಸ್ಮಸ್ ಮಾರುಕಟ್ಟೆಗಳಿಗೆ ಬಹಳ ಹೆಸರುವಾಸಿ. ಈ ಸಮಯದಲ್ಲಿ ಯೂರೋಪ್ ಭೇಟಿ ನೀಡುವ ಅವಕಾಶ ಸಿಕ್ಕರೆ ಅವಶ್ಯ “ಕ್ರಿಸ್ಮಸ್ ಮಾರುಕಟ್ಟೆ”ಗೆ ಒಮ್ಮೆ ಭೇಟಿ ನೀಡಿ.
(ಫೋಟೋಗಳು: ಲೇಖಕರವು)
ಮೂಲತಃ ದಾವಣಗೆರೆಯವರಾದ ಗುರುದತ್ ಸಧ್ಯ ಜೆರ್ಮನಿಯ ಕಾನ್ಸ್ಟೆನ್ಸ್ನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೋಟೋಗ್ರಫಿ, ಪ್ರವಾಸ, ಚಾರಣ, ಪುಸ್ತಕಗಳ ಓದು ಇವರ ಹವ್ಯಾಸಗಳು..
ಕಣ್ಣಿಗೆ ಕಟ್ಟಿದ ಹಾಗೆ ಬರೆದಿದ್ದೀಯ ಚೆನ್ನಾಗಿದೆ
ಚೆನ್ನಾಗಿದೆ ಗುರು.
೨೦೦೫ರಲ್ಲಿ ನಾನು ಕಂಡಿದ್ದ ಕ್ರಿಸ್ಮಸ್ ಮಾರುಟ್ಟೆಯ ದೃಶ್ಯಗಳು ಕಣ್ಮುಂದೆ ಬಂದವು. ಕಡಲೇ ಕಾಯಿ ಪರಿಶೆಯ ಉಲ್ಲೇಖ ನಮ್ಮ ದೇಶದಲ್ಲಿ ಕಾಣಸಿಗುವ ಹಬ್ಬಹರಿದಿನಗಳ ಅಮೋಘ ವೈಭವ, ವೈವಿಧ್ಯತೆ, ಹಿರಿಮೆ ಎಲ್ಲವೂ ಹಾಗೆ ಹಾದುಹೋಗಿ ತುಲನಾತ್ಮಕ ದೃಷ್ಟಿ ಜಾಗೃತವಾಗಿ ಬಿಟ್ಟಿತು😊