ತಲೆಮಾರು ಎನ್ನುವುದು ಮುಂದುವರಿಯುತ್ತಾ ಹೋದ ಹಾಗೆ ಕೌಶಲ್ಯ ಎನ್ನುವುದು ಹಿಂದಿಗಿಂತ ಹೆಚ್ಚು ಶಕ್ತ ಅಥವಾ ಹೆಚ್ಚೋ ಎಂಬಂತೆ ಮುಂದುವರಿಯುವುದು ನಮ್ಮ ಅನುಭವ ಅಥವಾ ಪ್ರಕೃತಿ ನಿಯಮ. ಪ್ರತಿಭೆ, ಕೌಶಲ್ಯ, ಮತ್ತು ಚಿಂತನೆಗಳಲ್ಲಿ ನಾವು ನಮ್ಮ ಹಿರಿಯರಿಗಿಂತ ಮುಂದುವರಿದಿದ್ದೇವೆ ಎನ್ನುವುದನ್ನು ನಾನೂ ನೀವೂ ಒಪ್ಪಿಕೊಳ್ಳುವುದಾದರೆ ನಮ್ಮ ಮುಂದಿನ ಪೀಳಿಗೆಯೂ ಖಂಡಿತ ನಮಗಿಂತ ಮುಂದಿರುತ್ತದೆ ಎನ್ನುವುದನ್ನು ಒಪ್ಪಬೇಕು. ಇದು ಸಾಹಿತ್ಯ ಕ್ಷೇತ್ರಕ್ಕೂ ಅನ್ವಯಿಸುವ ಮಾತು. ಪಂಪ ರನ್ನರ ಕಾಲಕ್ಕೆ ಇದನ್ನು ಅನ್ವಯಿಸಬಹುದೇ ಎಂದರೆ ಪಂಪನಿಗಿಂತ ರನ್ನ, ಜನ್ನ ‘ದೊಡ್ಡ’ವರಲ್ಲ. ಆದರೆ ಪಂಪನಿಗಿಂತ ‘ಕಡಿಮೆ’ಯವರಲ್ಲ.
ಕವಿ, ಕಾದಂಬರಿಕಾರ ಡಾ. ನಾ. ಮೊಗಸಾಲೆಯವರೊಟ್ಟಿಗೆ ನಡೆಸಿದ ಮಾತುಕತೆಯನ್ನು ಹಂಚಿಕೊಂಡಿದ್ದಾರೆ ಡಾ. ಸುಭಾಷ್ ಪಟ್ಟಾಜೆ

ಪಟ್ಟಾಜೆ: ಸಾಹಿತಿಯಾಗಲು ನಿಮಗೆ ಒದಗಿದ ಪ್ರಭಾವ, ಪ್ರೇರಣೆ ಮತ್ತು ಪ್ರೋತ್ಸಾಹಗಳು ಯಾವುವು?

ಮೊಗಸಾಲೆ: ಸಾಮಾನ್ಯವಾಗಿ ಲೇಖಕನೊಬ್ಬ ತಾನೇ ತಾನಾಗಿ ‘ಲೇಖಕನಾಗುವುದು’ ಹೆಚ್ಚು. ಅದು ಅವನಿಗೆ ಗೊತ್ತಿಲ್ಲದ ಹಾಗೆ ಅವನ ಒಳಗೆ ಹುಟ್ಟುವ ಪ್ರಕ್ರಿಯೆ. ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ನಮ್ಮ ಮನಸ್ಸಿನಲ್ಲಿ ಸುಖ ದುಃಖಗಳು ಹುಟ್ಟಲು ಹಾರ್ಮೋನುಗಳ ಸ್ರಾವ ಹೇಗೆ ಕಾರಣವಾಗುತ್ತದೋ ಹಾಗೆ ಲೇಖಕನಾಗಲು ಅಥವಾ ಸಾಹಿತ್ಯ ಪ್ರೀತಿಯ ಕೆಲಸಗಳನ್ನು ಮಾಡಲು ನಮ್ಮ ದೇಹದಲ್ಲಿರುವ ಯಾವುದೋ ಒಂದು ಸ್ರಾವವು (ಅದು ಇಂಥದ್ದೇ ಎಂದು ಹೆಸರಿಸುವುದು ಕಷ್ಟ) ಕಾರಣವಾಗಿರಬೇಕು ಎಂದು ನನ್ನ ತರ್ಕ. ಇಲ್ಲದಿದ್ದರೆ ಒಂದೇ ವಾತಾವರಣದಲ್ಲಿ ಬೆಳೆದ ಒಂದು ಕುಟುಂಬದಲ್ಲಿ ಯಾರೋ ಒಬ್ಬ ಮಾತ್ರ ಯಾಕೆ ಸಾಹಿತಿಯಾಗುತ್ತಾನೆ?

ಇಂಥ ಸಾಹಿತ್ಯ ಪ್ರೀತಿ ಮತ್ತು ಬರವಣಿಗೆಯ ‘ಹುಚ್ಚು’ ಕೆಲವರಲ್ಲಿ ಮಾತ್ರ ಹುಟ್ಟುತ್ತದೆ. ಇದೇಕೆ ಹೀಗೆ ಎಂಬುದು ನಿಗೂಢ. ಉದಾಹರಣೆಗೆ ನಾವು ನಾಲ್ಕು ಜನ ಅಣ್ಣ ತಮ್ಮಂದಿರು, ಮೂರು ಜನ ಅಕ್ಕಂದಿರು ಇದ್ದು ಈ ಏಳು ಮಂದಿಯೂ ಬೆಳೆದದ್ದು ಒಂದೇ ವಾತಾವರಣದಲ್ಲಿ. ಆದರೆ ಈ ಏಳು ಮಂದಿಯಲ್ಲಿ ನನಗೊಬ್ಬನಿಗೆ ಮಾತ್ರ ಈ ಪ್ರವೃತ್ತಿ ಯಾಕೆ ಬೆಳೆಯಿತು ಎನ್ನುವುದು ನನಗೆ ಆಶ್ಚರ್ಯ. ಹಾಗೇ ನನಗೆ ಮೂರು ಮಕ್ಕಳಿದ್ದು ಅವರಲ್ಲಿ ಮಧ್ಯಮ ಮಗನಿಗೆ ಮಾತ್ರ ಈ ಸಾಹಿತ್ಯ ಪ್ರೀತಿ ಯಾಕೆ ಹುಟ್ಟಿತು ಎನ್ನುವುದೂ ಕುತೂಹಲ. (ಅವನು ಈಗ ಬರೆದು ಪ್ರಕಟಿಸಿರುವ ‘ವೈರಸ್’ ಕಾದಂಬರಿ ‘ಸುಧಾ’ದಂಥ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗಿ ವಿಮರ್ಶಕರ ಗಮನ ಸೆಳೆಯಿತು ಎನ್ನುವುದೂ ‘ಕೇವಲ’ ನನ್ನ ಅಥವಾ ಪರಿಸರದ ಪ್ರಭಾವ ಎನ್ನಲಾಗದೋ ಏನೋ!)

ಅದೇನೇ ಇರಲಿ, ನಾನು ಹುಟ್ಟಿದ್ದು ಕಾಸರಗೋಡು ತಾಲೂಕಿನ ಮಂಜೇಶ್ವರ ಸಮೀಪದ ‘ಕೋಳ್ಯೂರು’ ಎನ್ನುವ ಸಾಮಾನ್ಯ ಹಳ್ಳಿಯಲ್ಲಿ. ಅದು ಯಕ್ಷಗಾನದ ತವರೂರಾಗಿದ್ದುದು ಪ್ರೇರಣೆಗೆ ಒಂದು ಕಾರಣವಾಗಿದ್ದಿರಬಹುದಾದರೂ, ಅದಕ್ಕಿಂತ ಹೆಚ್ಚು ಪ್ರೇರಣೆಯಾಗಿದ್ದದ್ದು ನನ್ನ ಮನೆ. ನನ್ನ ತಂದೆಯ ಅಕ್ಕ ಮೂಕಾಂಬಿಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಆಕೆ ಗಂಡನಿಂದ ತಿರಸ್ಕಾರಕ್ಕೊಳಗಾಗಿ ತವರಿನಲ್ಲಿ, ಅಂದರೆ ನಮ್ಮ ಮನೆಯಲ್ಲೇ ವಾಸವಿರಬೇಕಾಯಿತು. ಆಕೆಯು (1910ರ ಸುಮಾರಿಗೆ) ಮೂರನೇ ಈಯತ್ತೆ ತನಕ ಓದಿದವರಾಗಿದ್ದರೂ ಕುಮಾರವ್ಯಾಸ ಭಾರತದಂಥ ಕೃತಿಗಳನ್ನು ಓದಿ ವ್ಯಾಖ್ಯಾನಿಸುವಷ್ಟು ಸಮರ್ಥರಿದ್ದರು. ನಾವು ಏಳೂ ಮಂದಿಯನ್ನು ಹಡೆದ ಮಕ್ಕಳೆಂದೇ ಪರಿಗಣಿಸಿದ್ದರು. ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸಿದ್ದರು. ಅವರು ಪ್ರತಿದಿನ ಎಂಬಂತೆ ಮಧ್ಯಾಹ್ನದ ಊಟದ ನಂತರ ಮಹಾಕಾವ್ಯಗಳನ್ನು ಓದುವ ಪರಿಪಾಠ ಇಟ್ಟುಕೊಂಡದ್ದರಿಂದ ಅನಿವಾರ್ಯವಾಗಿ ನಾವು ಅದನ್ನು ಕೇಳುತ್ತಿದ್ದೆವು. ಅದು ಬೀರಿರುವ ಪ್ರಭಾವ ಖಂಡಿತ ಇದೆ ಎಂದು ನನ್ನ ಅಭಿಪ್ರಾಯ.

ಆಮೇಲೆ ನಾನು ಮೂರನೇ ತರಗತಿ ತನಕ ಕೋಳ್ಯೂರಿನಲ್ಲೇ ಶಾಲೆಗೆ ಹೋಗುತ್ತಿದ್ದರೂ ಆ ದಿನಗಳಲ್ಲಿ ಶಾಲೆಗೆ ಹೋಗಲು ನಿರುತ್ಸಾಹ ಮತ್ತು ಔದಾಸೀನ್ಯಗಳನ್ನು ತೋರುತ್ತಿದ್ದುದರಿಂದ ನನ್ನ ಚಿಕ್ಕಪ್ಪ ಕೃಷ್ಣಭಟ್ಟರು ಮುಂದಿನ ಓದಿಗಾಗಿ ನನ್ನನ್ನು ಸೋದರ ಮಾವಂದಿರಲ್ಲಿಗೆ ಅಂದರೆ ವಡಿಯೂರಿಗೆ ಕಳುಹಿಸಿದರು. ಈ ನಡುವೆ (ನನ್ನ ಎಳವೆಯಲ್ಲೇ ಅಂದರೆ ಐದನೇ ವರ್ಷಕ್ಕೆ ತಂದೆಯನ್ನು ಕಳೆದುಕೊಂಡದ್ದರಿಂದ ನಮ್ಮ ಇಡೀ ಕುಟುಂಬದ ಭಾರ ಚಿಕ್ಕಪ್ಪನ ಹೆಗಲ ಮೇಲಿತ್ತು. ಆರ್ಥಿಕ ಸಂಕಷ್ಟದಿಂದ ಅವರು ನನ್ನ ಇಬ್ಬರು ಅಣ್ಣಂದಿರನ್ನು ಓದಿಗಾಗಿ ಆಗಲೇ ವಡಿಯೂರಿಗೆ ಕಳುಹಿಸಿದ್ದರು. ನಾನು ವಡಿಯೂರಿನಲ್ಲಿದ್ದು ಕನ್ಯಾನ ಹೈಯರ್ ಎಲಿಮೆಂಟರಿ (ಬೋರ್ಡ್‍ಶಾಲೆ) ಗೆ ಸೇರಿದೆ. ಆಮೇಲೆ ಅದು ಹೈಸ್ಕೂಲು ಆದಾಗ ಅಲ್ಲಿಗೇ ಸೇರಿಕೊಂಡು ನನ್ನ ಮ್ಯಾಟಿಕ್ಯುಲೇಶನ್ ತನಕದ ಅಭ್ಯಾಸವನ್ನು ಮುಗಿಸಿದೆ. ಆ ದಿನಗಳಲ್ಲಿ ನನ್ನ ಮಾವನ ಮನೆಯಲ್ಲಿ ಸಾಹಿತ್ಯ ಕೃತಿಗಳನ್ನು ಓದುವ ಅಭ್ಯಾಸ ಒಂದಿಬ್ಬರು ಮಾವಂದಿರಲ್ಲಿ ಇತ್ತು. ‘ನವಭಾರತ’, ‘ವಿಕ್ರಮ’, ‘ರಾಷ್ಟ್ರಮತ’, ಮೊದಲಾದ ಪತ್ರಿಕೆಗಳನ್ನು ತಾನು ತರಿಸುವುದರ ಜೊತೆಗೆ ಪ್ರಸಿದ್ಧ ಪ್ರಕಾಶಕರಾದ ‘ಮನೋಹರ ಗ್ರಂಥ ಮಾಲೆ’, ‘ಮಿಂಚಿನ ಬಳ್ಳಿ ಪ್ರಕಾಶನ’, ‘ಸಮಾಜ ಪುಸ್ತಕಾಲಯ’, ಮೊದಲಾದವುಗಳ ಪ್ರಕಟಣೆಗಳನ್ನು ವಾರ್ಷಿಕ ಚಂದದಾರರಾಗಿ ತರಿಸಿಕೊಳ್ಳುತ್ತಿದ್ದರು. ಪತ್ತೇದಾರಿ ಕಾದಂಬರಿಕಾರ ಎನ್. ನರಸಿಂಹಯ್ಯನವರ ಕೃತಿಗಳನ್ನು, ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಗಳನ್ನು ಕೊಂಡುಕೊಂಡು ಓದುತ್ತಿದ್ದರು. ಇದು ನನ್ನಲ್ಲಿ ಓದುವ ಹವ್ಯಾಸವನ್ನು ಹುಟ್ಟು ಹಾಕಿತು.

ನನ್ನ ಸೃಜನಶೀಲತೆಗೆ ಪ್ರಾಯಃ ಪ್ರೇರಣೆ ನೀಡಿದ್ದು ಬಿ. ಎಂ. ಇದಿನಬ್ಬನವರು. ಅವರು ಆ ದಿನಗಳಲ್ಲಿ ಮಂಗಳೂರಿನ ಒಂದು ಸಹಕಾರಿ ಸಂಘದಲ್ಲಿ ಗುಮಾಸ್ತರಾಗಿದ್ದರು. ಶಿಶು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿ, ಅಲ್ಲೇ ಮಾರಾಟ ಮಾಡುತ್ತಿದ್ದರು. ಆ ಸಹಕಾರಿ ಸಂಘದಲ್ಲಿ ನನ್ನ ಮಾವಂದಿರಿಗೆ ವ್ಯವಹಾರ ಇದ್ದುದರಿಂದ ಸಹಜವಾಗಿಯೇ ಇದಿನಬ್ಬನವರ ಕೃತಿ ನನ್ನ ಮಾವನವರ ಮೂಲಕ ನನ್ನ ಕೈಗೂ ಬಂತು. ಇದಿನಬ್ಬನವರು ಹವ್ಯಾಸಿ ಕಾವ್ಯ ವಾಚನಕಾರರಾಗಿದ್ದು ಅನೇಕ ಶಾಲೆಗಳಿಂದ ಬರುವ ಆಹ್ವಾನದ ಮೇರೆಗೆ ಕವನ ವಾಚನವನ್ನು ಮಾಡುತ್ತಿದ್ದರು. ನಾನು ಓದುತ್ತಿದ್ದ ಕನ್ಯಾನದ ಹೈಯರ್ ಎಲಿಮೆಂಟರಿ ಶಾಲೆಗೆ ನನ್ನ ಐದನೇ ತರಗತಿಗೆ ಅಧ್ಯಾಪಕರಾಗಿ ಬಂದ, ಮೂಲತಃ ಕನ್ಯಾನದವರೇ ಆಗಿದ್ದ ಪಂಜಾಜೆ ಶಂಕರಭಟ್ಟರು ಅಪರೂಪದ ಸಾಹಿತ್ಯಾರಾಧಕರಾಗಿದ್ದು ಕಾವ್ಯ ವಾಚನಕ್ಕಾಗಿ ಇದಿನಬ್ಬವರನ್ನು ನಮ್ಮ ಶಾಲೆಗೆ ಆಹ್ವಾನಿಸಿದರು. ಆ ದಿನ ಇದಿನಬ್ಬನವರು ಓದಿದ ಅನೇಕ ಕವನಗಳ ಪೈಕಿ ಅವರೇ ರಚಿಸಿದ್ದ ‘ನವಿಲು’ ಎಂಬ ಕವನ ನನ್ನ ಮೇಲೆ ವಿಶೇಷ ಪ್ರಭಾವವನ್ನು ಬೀರಿತು. ಬಂಧನಕ್ಕೊಳಗಾದ ನವಿಲು ತನ್ನನ್ನು ಮನುಷ್ಯರು ಸಾಕುವುದನ್ನು ಒಪ್ಪದೇ ಆಹಾರ ತ್ಯಜಿಸಿ ಸತ್ತ ವಿಚಾರವನ್ನಷ್ಟೇ ಆ ಕವನ ಸರಳವಾಗಿ ಹೇಳುತ್ತಿತ್ತಾದರೂ ಅದು ನನ್ನ ಮೇಲೆ ಗಾಢ ಪರಿಣಾಮವನ್ನು ಬೀರಿ ಗದ್ಗದಿತನಾಗಿದ್ದೆ. ಆ ದಿನದಿಂದ ನನ್ನೊಳಗೆ ‘ಕಾವ್ಯ ಸಂವೇದನೆ’ ಪ್ರಕಟಗೊಂಡು ಶಿಶುಗೀತೆಗಳನ್ನು ಬರೆಯಲು ಪ್ರಾರಂಭಿಸಿದೆ. ಗುರುಗಳಾದ ಪಂಜಾಜೆಯವರು ಸಾಕಷ್ಟು ಪ್ರೋತ್ಸಾಹವನ್ನು ನೀಡಿದರು. ಇದರಿಂದ ನಾನು ಹತ್ತನೇ ತರಗತಿ ಮುಗಿಸುವಷ್ಟರಲ್ಲಿ ಭಾವಗೀತೆಗಳನ್ನು ಬರೆಯಲು ಪ್ರಾರಂಭಿಸಿದ್ದೆ. ಪತ್ರಿಕೆಗಳಿಗೂ ಕವನಗಳನ್ನು ಕಳುಹಿಸಿದ್ದೆ. ‘ಭಾರತ’ ಎನ್ನುವಂಥ ಪುತ್ತೂರಿನ ಸಾಪ್ತಾಹಿಕವೊಂದರಲ್ಲಿ ನನ್ನ ಕವಿತೆಯೊಂದು ಆಗ ಪ್ರಕಟವಾಗಿತ್ತು. ಮುಂದೆ ನಾನು ಉಡುಪಿ ಆಯುರ್ವೇದ ಕಾಲೇಜಿನಲ್ಲಿ ಅಭ್ಯಸಿಸುವಾಗ ಈ ಹವ್ಯಾಸವನ್ನು ಮುಂದುವರಿಸಿದೆ.

ಪಟ್ಟಾಜೆ: ಕಾಂತಾವರಕ್ಕೆ ಬಂದ ನೀವು ಯುವಕ ಮಂಡಲ, ಕನ್ನಡ ಸಂಘ, ಅಲ್ಲಮ ಪೀಠವನ್ನು ಸ್ಥಾಪಿಸಿದ ಉದ್ದೇಶವೇನು? ಅವುಗಳ ಚಟುವಟಿಕೆಗಳ ಬಗ್ಗೆ ಸ್ವಲ್ಪ ಮಾಹಿತಿ ನೀಡಬಹುದೇ?

ಮೊಗಸಾಲೆ: ಕಾಂತಾವರ ಎನ್ನುವುದು ಅವಿಭಜಿತ ದಕ್ಷಿಣ ಕನ್ನಡದ ಎಲ್ಲಾ ಹಳ್ಳಿಗಳ ಹಾಗಿರುವ ಒಂದು ಟಿಪಿಕಲ್ ಹಳ್ಳಿ. ಆ ದಿನಗಳಲ್ಲಿ ಇಲ್ಲಿಗೆ ವಾಹನಗಳಲ್ಲಿ ಬರಲಿಕ್ಕೆ ಸರಿಯಾದ ರಸ್ತೆ, ವಿದ್ಯುತ್ ಸೌಕರ್ಯ, ಬಾಡಿಗೆ ಮನೆ, ಊಟ ಉಪಾಹಾರಗಳಿಗೆ ಬೇಕಾದ ಸಾಮಾನ್ಯ ಹೋಟೆಲ್ ಕೂಡ ಇರಲಿಲ್ಲ. ಈಗ ಒಳ್ಳೆಯ ರಸ್ತೆ, ವಿದ್ಯುತ್ ಮತ್ತು ನಾಗರಿಕ ಸೌಲಭ್ಯಗಳು ಬಂದರೂ ಈಗಲೂ ಇಲ್ಲಿ ಒಂದೇ ಒಂದು ಹೋಟೇಲು ಇಲ್ಲ. ಬಾಡಿಗೆಗೆ ಸಿಗಬಹುದಾದ ಮನೆಗಳೂ ಇಲ್ಲ. ನಾನು ಆ ದಿನಗಳ ಮೊದಲ ವರುಷದಲ್ಲಿ ಸಾಮಾನ್ಯವೆನ್ನಬಹುದಾಗಿದ್ದ ಕಾರಂತರ ಹೋಟೇಲಿನಲ್ಲಿ ಉಪಯೋಗಕ್ಕೆ ಇಲ್ಲವೆಂಬಂತಿದ್ದ ಒಂದು ಪುಟ್ಟ ಕೋಣೆಯನ್ನು ಬಾಡಿಗೆಗೆ ಹಿಡಿದೆ. ಊಟ ಉಪಾಹಾರವೂ ಆ ಪುಟ್ಟ ಹೋಟೆಲಲ್ಲೇ ಆಗುತ್ತಿತ್ತು. ಸ್ನಾನಾದಿಗಳಿಗೆ ಸಾರ್ವಜನಿಕ ಬಾವಿಯನ್ನು, ಬಹಿರ್ದೆಶೆಗೆ ಬಯಲನ್ನೇ ಆಶ್ರಯಿಸುತ್ತಿದ್ದೆ. ಇದರಿಂದ ಅನಾಥ ಭಾವ ಬರುವುದು ಸಹಜ ತಾನೇ? ಇದರಿಂದ ಹೊರಬರಲು ನಾನು ಮಾಡಿಕೊಂಡ ಮೊದಲ ವ್ಯವಸ್ಥೆ ಅಂದರೆ ಆ ಊರಿನ ಗಣ್ಯ ಮನೆತನದ ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾದದ್ದು. ಇದು ಪ್ರಾಯ ಸಹಜವಾದದ್ದು ಮತ್ತು ಅನಿವಾರ್ಯ ಎಂಬಂತೆ ಇತ್ತು. ಇದರಿಂದ ನನಗೆ ಆ ಮನೆಯಲ್ಲಿ ಆಸರೆ ದೊರಕಿತು. ಆದರೂ ಓದಲು ಪತ್ರಿಕೆ, ಗ್ರಂಥಾಲಯ ಇಲ್ಲದಿದ್ದರೆ ಕತ್ತಲಲ್ಲಿ ಇದ್ದ ಹಾಗೆ ಅಲ್ಲವೇ? ಅದನ್ನು ಆಗಗೊಡಬೇಕಾದರೆ ಅಥವಾ ರೋಗಿಗಳಿಲ್ಲದ ಹೊತ್ತಿನಲ್ಲಿ ಸಾರ್ವಜನಿಕರ ಸಂಪರ್ಕದಲ್ಲಿ ಹೆಚ್ಚು ಹೆಚ್ಚು ಇರಬೇಕಾದರೆ ಒಂದು ಸಂಘಟನೆ ಬೇಕು ಎಂದು ನಿರ್ಧರಿಸಿದೆ. ಅದಕ್ಕಾಗಿ ಅಲ್ಲಿದ್ದ ಶಾಲೆಯ ಮತ್ತು ಪಂಚಾಯತು ಸದಸ್ಯರ ನೆರವು ಪಡೆದು ಯುವಕ ಮಂಡಲವನ್ನು ಸ್ಥಾಪಿಸಬಾರದೇಕೆಂದು ಅನಿಸಿತು. ಆ ಕಲ್ಪನೆಯು ಆಗ ಆ ಊರಿಗೆ ಹೊಸತೆಂದರೆ ಹೊಸತು ಆಗಿತ್ತು. ನಾನು ಅರೆ ಸರಕಾರಿ ನೌಕರನಾದುದರಿಂದ ಮತ್ತು ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಯೂ ತೀರಾ ಕಡಿಮೆ ಇದ್ದುದರಿಂದ ಈ ಸಂಘಟನೆಯು ನನ್ನ ವ್ಯಕ್ತಿತ್ವವನ್ನು ಸಾರ್ವಜನಿಕವಾಗಿ ರೂಪಿಸಲಿಕ್ಕೆ ಇಂದಿನ ಜೇಸಿ, ಲಯನ್ಸ್, ರೋಟರಿ ಸಂಸ್ಥೆಗಳ ಹಾಗೆ ಅವಶ್ಯವೆನಿಸಿ ಅದಕ್ಕೆ ಹೆಚ್ಚು ಶ್ರಮ ಹಾಕಿದೆ. ಇದರಿಂದ ಒಂದು ಯುವಕ ಮಂಡಲ ಹುಟ್ಟಿಕೊಂಡಿತು (1966).

ಅದು ಸುಮಾರು ಆರೇಳು ವರ್ಷಗಳ ಕಾಲ ಚೆನ್ನಾಗಿ ಕೆಲಸ ಮಾಡಿತು. ಯುವಕರಲ್ಲಿ ಸಂಘಟನೆಯ ಪರಿಕಲ್ಪನೆಯನ್ನು ಬೆಳೆಸಿತು. ಜೊತೆಗೆ ಅವರಲ್ಲಿ ಕೃಷಿ ಸಂಸ್ಕೃತಿಯ ಜೊತೆ ಸಾರ್ವಜನಿಕ ಜೀವನವೂ ಅವಶ್ಯ ಎನ್ನಬಹುದಾದ ಅರಿವೂ ಮೂಡಿತು. ಈ ನಡುವೆ ಊರಿನಲ್ಲಿ ಒಂದು ಪುಟ್ಟ ಗ್ರಂಥಾಲಯವೂ ರೂಪುಗೊಂಡಿತು. ಅಲ್ಲಿಗೆ ಬೇರೆ ಬೇರೆ ಪತ್ರಿಕೆಗಳು ಬರತೊಡಗಿದುವು. ಕಬಡ್ಡಿಯಂಥ ಆಟಗಳೂ ಯುವ ಕೃಷಿಕರನ್ನು ಆಕರ್ಷಿಸಿದುವು. ಯಕ್ಷಗಾನ ತರಬೇತಿ ಮತ್ತು ಸಾಮಾಜಿಕವಾದ ಕೆಲಸಗಳು ಮುಖ್ಯವಾಗಿ ನೂತನ ಕಾಲು ದಾರಿಗಳ ರಚನೆ, ಮಳೆ ಬಿದ್ದ ಕೆಟ್ಟು ಹೋದ ಕಾಲುದಾರಿಗಳ ದುರಸ್ಥಿ ಕಾರ್ಯಗಳೂ ನಡೆದುವು. ಬರಬರುತ್ತಾ ಈ ಯುವಕ ಮಂಡಲದಲ್ಲಿ ಜಾತಿ ರಾಜಕೀಯಗಳೂ, ಅಧಿಕಾರದ ಲಾಲಸೆಯೂ ಹುಟ್ಟಿ ಅದು ತನ್ನನ್ನು ನಾಶ ಮಾಡಿಕೊಂಡಿತು. ಇದರ ವಾಸನೆ ಬರುತ್ತಿದ್ದ ಹಾಗೆ ನಾನು ಹಿಂದೆ ಸರಿದು ಅದರಿಂದ ದೂರ ನಿಂತೆ ಅಥವಾ ಹೊರ ಬಂದೆ.

ಇಂಥ ಯಾವುದೇ ಸಂಸ್ಥೆಯೊಂದು ಇಲ್ಲಿ ಹುಟ್ಟುವುದೇ ಆದರೆ ಅದು ನನ್ನ ವೈದ್ಯಕೀಯ ಕ್ಷೇತ್ರದ ಜನಪ್ರಿಯತೆಯನ್ನು ಮೀರಿ, ಅದು ಗ್ರಾಮದ ಗಡಿಗಳನ್ನು ಮೀರಬೇಕು ಎಂಬ ಪಾಠವನ್ನು ಈ ಸಂಘಟನೆ ನನಗೆ ಕಲಿಸಿತು. ಆ ಮಹತ್ವಾಕಾಂಕ್ಷೆಯಿಂದಲೇ ಕನ್ನಡದ ಕೆಲಸಗಳನ್ನು ಮಾಡಲು ‘ಕನ್ನಡ ಪರ ಸಂಘಟನೆಯೊಂದನ್ನು ಕಾಂತಾವರದಲ್ಲಿ ಯಾಕೆ ಸ್ಥಾಪನೆ ಮಾಡಬಾರದು?’ ಎಂಬ ಕನಸು ನನ್ನಲ್ಲಿ ಹುಟ್ಟಿಕೊಂಡಿತು. ಆದರೆ ಕಾಂತಾವರದಂಥ ಸಾಕಷ್ಟು ಸಾಹಿತ್ಯಾಸಕ್ತರಿಲ್ಲದ ಅಥವಾ ಕೃಷಿಕರೇ ಪ್ರಧಾನವಾಗಿರುವ ಈ ಊರಲ್ಲಿ ಇಂಥ ಸಂಘಟನೆಗೆ ಹೊರಟರೆ, ಅದು ಯಶಸ್ವಿಯಾಗದು ಅನಿಸಿತು. ಕಾಂತಾವರವೂ ಸೇರಿದಂತೆ ಸುತ್ತಮುತ್ತಲಿನ ಇನ್ನೂ ನಾಲ್ಕು ಗ್ರಾಮಗಳಲ್ಲಿನ ಸುಮಾರು ಏಳೆಂಟು ಶಾಲೆಗಳ ಅಧ್ಯಾಪಕರನ್ನು (ಆಗ ಪ್ರತಿಯೊಂದು ಶಾಲೆಯಲ್ಲಿ ಏಳೆಂಟು ಅಧ್ಯಾಪಕರಿದ್ದರು) ಒಟ್ಟು ಸೇರಿಸಿದರೆ ಇದು ಸಾಧ್ಯವಾಗಬಹುದು ಎಂಬ ಧೈರ್ಯ ಮೂಡಿತು. ಈ ನೆಲೆಯಲ್ಲಿ ಮುಂದುವರಿದಾಗ ಅನೇಕ ಅಧ್ಯಾಪಕರು ನನ್ನ ಆಶಯಕ್ಕೆ ಸ್ಪಂದಿಸಿದರು. ಆಗ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಉಡುಪಿ, ಮಣಿಪಾಲ, ಬ್ರಹ್ಮಾವರ, ಮಂಗಳೂರು ಮತ್ತು ಪುತ್ತೂರಿನಲ್ಲಿ ಮಾತ್ರ ಸಂಘಟನೆಗಳ ಮೂಲಕ (ಸಾಹಿತ್ಯ ಸಂಘ, ಕರ್ನಾಟಕ ಸಂಘ, ಕನ್ನಡ ಸಂಘ ಇತ್ಯಾದಿ ಹೆಸರಿನಲ್ಲಿ) ಕನ್ನಡದ ಕೆಲಸಗಳು ನಡೆಯುತ್ತಿದ್ದವು.

ಈ ಸಂಘಟನೆಗಳು ಆಗಾಗ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ ಆಸಕ್ತರ ಸಂಖ್ಯೆ ಕಡಿಮೆಯಾಗಿತ್ತು. ಹಾಗಾಗಿ ಕಾಂತಾವರದಲ್ಲೂ ಅಂಥ ಒಂದು ಪ್ರಯತ್ನ ನಡೆಯಲಿ ಎಂಬಂತೆ ಬೆಳುವಾಯಿ, ಕಾಂತಾವರ, ಬೋಳ, ಕೆದಿಂಜೆ, ನಂದಳಿಕೆ ಎಂಬ ಐದು ಗ್ರಾಮಗಳ ಆಶ್ರಯದಲ್ಲಿ ‘ಕಾಂತಾವರ ಕನ್ನಡ ಸಂಘ’ವನ್ನು (26 ಮೇ 1976) ಹುಟ್ಟು ಹಾಕಿದೆ. ಪ್ರಾರಂಭದಲ್ಲಿ ಆರು ರೂಪಾಯಿಗಳ ಇಪ್ಪತ್ತೊಂಬತ್ತು ಸದಸ್ಯರಿಂದ ಸ್ಥಾಪಿತವಾದ ಈ ಸಂಸ್ಥೆ ಈಗ ನಲುವತ್ತಾರು ವರುಷಗಳ ಮೇಲೆ ಸಾವಿರ ರೂಪಾಯಿಗಳ, ನೂರಕ್ಕೂ ಮಿಕ್ಕ ಸದಸ್ಯರನ್ನು ತನ್ನ ಪ್ರೀತಿಯ ತೆಕ್ಕೆಗೆ ತೆಗೆದುಕೊಂಡಿದೆ. ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳ ಬಂಡವಾಳವನ್ನು ಹೊಂದಿದೆ. ಆದರೆ ಈಗ ಎಲ್ಲಾ ಕಡೆ ಇರುವಂತೆ ಸ್ಥಳೀಯ ಸಾಹಿತ್ಯಾಸಕ್ತರ ಸ್ಪಂದನೆ ಕಡಿಮೆಯಾಗುತ್ತಾ ಬಂದು ಮುಂದೆ ಈ ಸಂಘದ ನಡೆ ಹೇಗೆ ಎನ್ನುವುದು ಚಿಂತೆಗೆ ಕಾರಣವಾಗಿದೆ.

ವರ್ಧಮಾನ ಪ್ರಶಸ್ತಿ ಪೀಠ ಎನ್ನುವುದು ಕನ್ನಡ ಸಂಘದಂಥ ವಿಶಾಲ ದೃಷ್ಟಿಯ ಸಂಘಟನೆಯಲ್ಲ. ಅದೊಂದು ಸಾಹಿತ್ಯ ಲಲಿತಕಲಾ ಅಕಾಡೆಮಿ. ಅಂದರೆ ಸೀಮಿತ ಉದ್ದೇಶವುಳ್ಳ ಸಂಸ್ಥೆ. ಇದರ ಹುಟ್ಟಿಗೆ ಕಾರಣವನ್ನು ತಿಳಿದರೆ ಅದರ ಚಟುವಟಿಕೆಗಳು ತಾನೇ ಮುನ್ನೆಲೆಗೆ ಬಂದಂತಾಗುತ್ತದೆ. 1978ರ ಸುಮಾರಿಗೆ ಕಾಂತಾವರ ಕನ್ನಡ ಸಂಘವು ರಾಜ್ಯಕ್ಕೇ ಮೊದಲೆಂಬಂತೆ ‘ಮುದ್ದಣ ಸ್ಮಾರಕ ಕಾವ್ಯ ಪ್ರಶಸ್ತಿ’ಯನ್ನು ಸ್ಥಾಪಿಸಿದಾಗ ಖಾಸಗಿ ನೆಲೆಯಲ್ಲಿ ಪ್ರಶಸ್ತಿ ನೀಡುವ ಸಂಸ್ಥೆಗಳು ಕರ್ನಾಟಕದಲ್ಲಿ ಎಲ್ಲೂ ಇರಲಿಲ್ಲ. ಕನ್ನಡ ಸಂಘವು ಈ ಪ್ರಶಸ್ತಿಯನ್ನು ಖಾಸಗಿಯಾಗಿ ಸ್ಥಾಪಿಸಿದ್ದರೂ ಆ ಪ್ರಶಸ್ತಿಯು ಪ್ರಾಯೋಜಕತ್ವದ ನೆಲೆಯಲ್ಲಿ ವ್ಯಕ್ತಿಯೊಬ್ಬನು ನೀಡುವ ದೇಣಿಗೆಯಿಂದ ನಡೆದು, ಮುಂದೆ ಪ್ರಶಸ್ತಿ ಪುರಸ್ಕೃತವಾದ ಕೃತಿಯು ಮುದ್ರಣಕ್ಕೆ ಬಂದಾಗ, ಪ್ರಾಯೋಜಕರ ಹೆಸರನ್ನು ಕೃತಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂಬ ನಿಯಮವನ್ನು ರೂಪಿಸಿದ್ದರೂ ಸಾಹಿತ್ಯ ಕ್ಷೇತ್ರದಲ್ಲಿ ಅನೇಕರಿಗೆ ಪ್ರಾಯೋಜಕರ ಹೆಸರನ್ನು ತಮ್ಮ ಕೃತಿಯಲ್ಲಿ ಹಾಕುವುದು ಬೇಡ ಎಂಬ ಸಣ್ಣ ಅಸಮಾಧಾನದ ಮಾತು ಕೇಳಿ ಬಂತು. ಆದ್ದರಿಂದ ಪ್ರಶಸ್ತಿಯನ್ನು ಹಾಗೇ ಇರಿಸಿಕೊಂಡು ಪ್ರಾಯೋಜಕರಿಲ್ಲದೆ ಸ್ವತಂತ್ರವಾಗಿ ಪ್ರಶಸ್ತಿ ನೀಡುವ ಪೀಠವೊಂದು ಕನ್ನಡಕ್ಕೆ ಬೇಕು –ಅದು ಜ್ಞಾನ ಪೀಠ ಪ್ರಶಸ್ತಿಯ ಮಾದರಿಯಲ್ಲಿ ಇರಬೇಕು- ಎಂದು ನಿರ್ಧರಿಸಿ ಮೂಡಬಿದ್ರೆಯ ಜೈನ ಮಠಾಧೀಶರನ್ನು, ಧರ್ಮಸ್ಥಳದ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರನ್ನು ವಿನಂತಿಸಿದೆ. ಇಬ್ಬರೂ ಒಪ್ಪಿಗೆ ಸೂಚಿಸುತ್ತಿದ್ದಂತೆ ಆಗ ಮೂಡಬಿದ್ರೆಯಲ್ಲಿದ್ದ ಗಣ್ಯ ವ್ಯಕ್ತಿಗಳಾದ ಡಾ. ಪಿ. ಎನ್. ಆರಿಗ (ದ. ಕ. ಜಿಲ್ಲಾ ಸರ್ಜನ್) ಕೆಲ್ಲಗುತ್ತು ಶ್ರೀ ಜಯರಾಜ ಬಲ್ಲಾಳ (ಪ್ರಸಿದ್ಧ ಉದ್ಯಮಿ) ಶಿರ್ತಾಡಿಯ ಶ್ರೀ ಧರ್ಮ ಸಾಮ್ರಾಜ್ಯ (ರಾಜಕೀಯ ಮುತ್ಸದ್ಧಿ) ಹಿರಿಯ ಸಾಹಿತಿಗಳಾದ ಬನ್ನಂಜೆ ಗೋವಿಂದಾಚಾರ್ಯ ಹಿರಿಯ ವಿದ್ವಾಂಸ, ಪತ್ರಕರ್ತ ಮೊದಲಾದವರನ್ನು ಸಂಪರ್ಕಿಸಿ ‘ವರ್ಧಮಾನ ಪ್ರಶಸ್ತಿ ಪೀಠ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದೆವು. ಇದರ ಸ್ಥಾಪಕಾಧ್ಯಕ್ಷರಾದ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ಹನ್ನೊಂದು ವರುಷಗಳ ಕಾಲ ಅದನ್ನು ಮುನ್ನಡೆಸಿದರು. ಆಮೇಲೆ ದಿ. ಕುಲ್ಯಾಡಿ ಮಾಧವ ಪೈ, ದಿ| ಸಿ. ಕೆ. ಪಡಿವಾಳ್ ಅವರು ಅಧ್ಯಕ್ಷರಾಗಿ ಒದಗಿ ಬಂದರು. ಈಗ ಶ್ರೀ ಸಂಪತ್ ಸಾಮ್ರಾಜ್ಯ ಅವರು ಅಧ್ಯಕ್ಷರಾಗಿದ್ದಾರೆ.

ಈ ಸಂಸ್ಥೆ ವಾರ್ಷಿಕ ಪ್ರಶಸ್ತಿಗಳನ್ನು ಪಾರದರ್ಶಕವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ನೀಡುವುದು ಬಿಟ್ಟರೆ ಅದರಾಚೆಯ ಸಾಹಿತ್ಯಕ ಚಟುವಟಿಕೆಗಳನ್ನು ನಡೆಸುವುದಿಲ್ಲ. ಹಾಗಾಗಿ ಇದಕ್ಕೊಂದು ‘ಮಿತಿ’ ಇದೆ. ಆದರೆ ಕನ್ನಡ ಸಂಘದ ಚಟುವಟಿಕೆಗಳ ವ್ಯಾಪ್ತಿ ತುಂಬಾ ವಿಸ್ತಾರವಾಗಿದ್ದು ಅವುಗಳಲ್ಲಿ ತಿಂಗಳ ಉಪನ್ಯಾಸಗಳು, ಪ್ರಶಸ್ತಿ ಪ್ರದಾನ ಸಮಾರಂಭಗಳು ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ ಪ್ರಕಟಣೆಗಳು ಮುಖ್ಯವಾಗಿವೆ. 2006ರಿಂದ ಒಂದು ತಿಂಗಳೂ ತಪ್ಪದಂತೆ ‘ನುಡಿ ನಮನ’ ಎಂಬ ತಿಂಗಳ ಕಾರ್ಯಕ್ರಮಗಳು ಕೊರೊನಾ ಪ್ರಾರಂಭವಾಗುವ ತನಕ ಅದು ನಡೆಸಿದೆ. ಅದಕ್ಕಿಂತ ಮೊದಲು ಇಂಥ ಕಾರ್ಯಕ್ರಮಗಳು ಐದು ಗ್ರಾಮಗಳ ಬೇರೆ ಬೇರೆ ಶಾಲೆಗಳಲ್ಲಿ ಅನಿಯಮಿತವಾಗಿ ನಡೆಯುತ್ತಿತ್ತು. 1976ರಿಂದ 2002ರ ತನಕ ಸಂಘದ ಕೇಂದ್ರ ಕಛೇರಿಯು ಅದು ಸ್ಥಾಪನೆಯಾದ ಕಾಂತಾವರದ ಬೇಲಾಡಿ ಶಾಲೆಯಲ್ಲೇ ಇದ್ದರೆ 2003ರಲ್ಲಿ ಸಂಘವು ಕಾಂತಾವರ ದೇವಸ್ಥಾನದ ಬಳಿ, ಕರ್ನಾಟಕದ ನೇತಾರರಾಗಿದ್ದ ಕಾಂತಾವರ ಬಾರಾಡಿ ಬೀಡು (ಕೆ. ಬಿ.) ಜಿನರಾಜ ಹೆಗ್ಡೆಯವರ ಶತಮಾನೋತ್ಸವದ ನೆನಪಿಗಾಗಿ ಕಟ್ಟಿಸಿದ ಕನ್ನಡ ಭವನಕ್ಕೆ ಸ್ಥಳಾಂತರವಾಯಿತು. ಸರಕಾರ ಮತ್ತು ಸಾರ್ವಜನಿಕರ ನೆರವಿನಿಂದ ಸುಮಾರು 25 ಲಕ್ಷ ರೂಪಾಯಿಗಳಲ್ಲಿ ಈ ಭವನವು ನಿರ್ಮಾಣವಾಗಿದ್ದು, ಇಲ್ಲಿಗೆ ಸಂಘದ ಕೇಂದ್ರ ಕಛೇರಿಯು ಸ್ಥಾಪನೆಯಾದ ಮೇಲೆ ಸಂಘದ ಎಲ್ಲಾ ಚಟುವಟಿಕೆಗಳು ಪಂಚ ಗ್ರಾಮಗಳ ಆಶ್ರಯದಲ್ಲಿ ನಡೆಯದೆ ಕೇಂದ್ರ ಕಛೇರಿಯಾದ ‘ಕನ್ನಡ ಭವನ’ದಲ್ಲೇ ನಡೆಯುತ್ತಾ ಬರುತ್ತಿದೆ.

ಕೊರೊನಾ ಕಾಲದಲ್ಲಿ ಸುಮಾರು ಎರಡು ವರ್ಷಗಳವರೆಗೆ ಸಂಘದ ಚಟುವಟಿಕೆಗಳು ಪೂರ್ತಿ ಸ್ಥಗಿತವಾಗಿದ್ದರೂ ಆಮೇಲೆ ಹಿಂದಿನ ಎಲ್ಲಾ ಚಟುವಟಿಕೆಗಳಿಗೆ ಮರುಜೀವವನ್ನು ಕೊಡಲಾಗಿದೆ. ಆದರೆ ಪ್ರೇಕ್ಷಕರ ಕೊರತೆಯಿಂದಾಗಿ ಅದು ಈಗ ಕಾಂತಾವರದಲ್ಲಿ ನಡೆಯದೆ ಕಾರ್ಕಳದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜೊತೆ ಜಂಟಿಯಾಗಿ ನಡೆಯುತ್ತಿದೆ.

ಸಂಘದ ಬಹುದೊಡ್ಡ ಯೋಜನೆಗಳಲ್ಲಿ ಎರಡು ವಿಧ. ಮೊದಲನೆಯದ್ದು, ದತ್ತಿ ನಿಧಿಗಳ ಮೂಲಕ ರಾಜ್ಯ ಮಟ್ಟದ ಪ್ರಶಸ್ತಿ ನೀಡುವುದು. 2003ರ ತನಕ ಕೇವಲ ‘ಮುದ್ದಣ ಕಾವ್ಯ ಪ್ರಶಸ್ತಿ’ಯನ್ನು ನೀಡುತ್ತಾ ಬಂದಿದ್ದ ಸಂಘವು ಆ ಮೇಲೆ ಸಾಹಿತ್ಯ, ಸಂಶೋಧನೆ, ನಾಟಕ, ವಿಮರ್ಶೆ, ಲಲಿತ ಕಲೆ, ಸಾಂಸ್ಕೃತಿಕ ಕ್ಷೇತ್ರಗಳನ್ನು ಮುಂದಿಟ್ಟುಕೊಂಡು ಒಂಬತ್ತು ಪ್ರಶಸ್ತಿಗಳನ್ನು ನೀಡುತ್ತಿದೆ. ಈ ವರುಷದಿಂದ ಗಮಕ ಕಲೆಗೆ ಒತ್ತು ನೀಡಲು ಮುಂದಾಗಿ ಗಮಕ ವಾಚನ ಮತ್ತು ಗಮಕ ವ್ಯಾಖ್ಯಾನಕ್ಕೆ ತಲಾ ಒಂದೊಂದು ಪ್ರಶಸ್ತಿಗಳನ್ನು ನೀಡಲು ಮುಂದಾಗಿದೆ. ಈ ಹನ್ನೊಂದು ಪ್ರಶಸ್ತಿಗಳಿಗೆ ಪ್ರತಿಯೊಂದಕ್ಕೂ ಪ್ರಾಯೋಜಕರಿದ್ದು ಅವು ತಲಾ ಹತ್ತು ಸಾವಿರ ರೂಪಾಯಿಗಳ ನಗದು ಮತ್ತು ತಾಮ್ರಪತ್ರದ ಸನ್ಮಾನವನ್ನು ಒಳಗೊಂಡಿರುತ್ತವೆ.

ಸಂಘದ ಇನ್ನೊಂದು ಮಹತ್ವದ ಯೋಜನೆ ‘ನಾಡಿಗೆ ನಮಸ್ಕಾರ’ ಎನ್ನುವ ಗ್ರಂಥಮಾಲೆ. ಇದು ಅವಿಭಜಿತ ದ.ಕ ಜಿಲ್ಲೆಯ ಕಾಸರಗೋಡು ಸೇರಿದಂತೆ ಆ ಪ್ರದೇಶದ ಸಾಧಕರನ್ನು ಸುಮಾರು ಅರುವತ್ತು ಪುಟಗಳ ಹೊತ್ತಗೆಯ ಮೂಲಕ ಪರಿಚಯಿಸುವ ಯೋಜನೆಯನ್ನು ಹೊಂದಿದ್ದು ಇದರಲ್ಲಿ ವಿವಿಧ ಕ್ಷೇತ್ರಗಳ ಅಪ್ರಸಿದ್ಧ ಮತ್ತು ಪ್ರಸಿದ್ಧರ ಕಡೆಗೆ ಬೆಳಕು ಬೀರಲಾಗುತ್ತದೆ. ಈ ತನಕ 331 ಹೊತ್ತಗೆಗಳು ಈ ಮಾಲೆಯಲ್ಲಿ ಪ್ರಕಟವಾಗಿದ್ದು ಇನ್ನೂ ಮುಂದುವರಿಯುತ್ತಿದೆ. ಇದರ ಜೊತೆಗೆ ಸಂಘವು ಸುಮಾರು 25ರಷ್ಟು ಬಿಡಿ ಪ್ರಕಟಣೆಗಳನ್ನೂ ಮಾಡಿದೆ. ಸಂಘವು ಸ್ಥಾಪನೆಯಾದ ಮರು ವರುಷವೇ ಅಂದರೆ 1970ರಲ್ಲಿ ‘ದಕ್ಷಿಣ ಕನ್ನಡ ಕಾವ್ಯ 1901-1976’ ಮತ್ತು ಸಂಘದ ಬೆಳ್ಳಿ ಹಬ್ಬದ ಸಮಯದಲ್ಲಿ ‘ದಕ್ಷಿಣ ಕನ್ನಡದ ಶತಮಾನದ ಕಾವ್ಯ (1901-2000)’ ಎಂಬ ಎರಡು ಆ್ಯಂಥಾಲಜಿಗಳನ್ನು ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಪ್ರಕಟಿಸಿದೆ. ಸಂಘಕ್ಕೆ ನಲುವತ್ತು ತುಂಬಿದ ನೆನಪಿಗಾಗಿ ‘ಸಂಘಜಂಗಮ’ ಎನ್ನುವ ಬೃಹತ್ ಸಂಪುಟವನ್ನು ಐದು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಪ್ರಕಟಿಸಿದೆ.

ಇಂಥ ಸಂಘವು ಈ ಚಟುವಟಿಕೆಗಳಿಗೆ ಮೀಸಲಾಗಿರಬಾರದು, ಇದು ಸ್ನಾತಕೋತ್ತರ ಕೇಂದ್ರದ ಅಧ್ಯಯನಕ್ಕೆ ಅವಕಾಶ ನೀಡಬೇಕು, ತನ್ಮೂಲಕ ಇಲ್ಲಿ ಸಂಶೋಧನೆಗಳು ನಡೆಯಬೇಕು ಎಂದು ಅನೇಕರು ನೀಡಿದ ಸಲಹೆ ಮೇರೆಗೆ ಸಂಘವು ‘ಅಲ್ಲಮಪ್ರಭು ಪೀಠ’ ಎಂಬ ಸಾಂಸ್ಕೃತಿಕ ಟ್ರಸ್ಟನ್ನು ಕಾಂತಾವರದಲ್ಲಿ ಪ್ರತ್ಯೇಕವಾಗಿ (2010ರಲ್ಲಿ) ಸ್ಥಾಪಿಸಲು ಮುಂದಾಯಿತು. ಅಲ್ಲಮನು ನಾಡು ಕಂಡ ಅಪರೂಪದ ದಾರ್ಶನಿಕ ಎಂಬ ಕಾರಣದಿಂದ ಅವನ ಹೆಸರನ್ನು ಈ ಟ್ರಸ್ಟಿಗೆ ಇರಿಸಲಾಯಿತು. ಇದು ಯಾವುದೇ ಮತ ಧರ್ಮದ ತತ್ವಗಳಿಗೆ ಮೀಸಲಾದುದಲ್ಲ. ಸಾಮಾಜಿಕ ಚಟುವಟಿಕೆಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾಹಿತ್ಯಕ ಉಪನ್ಯಾಸಗಳನ್ನು, ತಾತ್ತ್ವಿಕ ನೆಲೆಯ ಪ್ರಕಟಣೆಗಳನ್ನು ಹೊರತರುತ್ತಿರಬೇಕು ಎನ್ನುವುದು ಇದರ ಆಶಯ. ಸುಮಾರು 3.65 ಎಕರೆ ಜಮೀನನ್ನು ಹೊಂದಿರುವ ಇದರ ಅಭಿವೃದ್ಧಿಗಾಗಿ ಸರಕಾರದಿಂದ ಅರುವತ್ತು ಲಕ್ಷ ರೂಪಾಯಿಗಳ ಅನುದಾನ 2013ರಲ್ಲಿ ಬಂದಿದ್ದರಿಂದ, ‘ಮಹಾಮನೆ’ ಎಂಬ ಆಡಳಿತ ಮತ್ತು ಗ್ರಂಥಾಲಯಕ್ಕಾಗಿ ನೂತನ ಕಟ್ಟಡಕ್ಕೆ ಪೀಠವು ಕೈ ಹಾಕಿದರೂ ಮುಂದೆ ಸರಕಾರದ ನೆರವು ಸಿಗದಿದಿರುವುದರಿಂದ ಆ ಕೆಲಸವು ನಿಂತಂತಾಗಿದೆ. ಅದರ ಚಟುವಟಿಕೆಗಳೂ ಹಿಂದೆ ಬಿದ್ದಿವೆ. ಇದೊಂದು ಮಾತ್ರ ನನ್ನ ಕನಸಿನಲ್ಲಿ ಅಪರಿಪೂರ್ಣವಾದ ಮತ್ತು ನೆನೆಗುದಿಗೆ ಬಿದ್ದ ಯೋಜನೆ.

ಪಟ್ಟಾಜೆ: ನಿಮ್ಮ ಸಾಹಿತ್ಯ ರಚನೆಯ ಮುಖ್ಯಧಾರೆಗಳು ಯಾವುವು? ಕವಿ, ಕತೆಗಾರ, ಕಾದಂಬರಿಕಾರರಾದ ನೀವು ನಿಮ್ಮದೇ ಶೈಲಿಯನ್ನು ರೂಢಿಸಿಕೊಳ್ಳಲು ಹೇಗೆ ಸಾಧ್ಯವಾಯಿತು?

ಮೊಗಸಾಲೆ: ನಾನು ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದ್ದು ಕವಿಯಾಗಿ. ಈಗಾಗಲೇ ಹೇಳಿದ ಹಾಗೆ ಬಿ. ಎಂ. ಇದಿನಬ್ಬರ ಕಾವ್ಯವಾಚನವನ್ನು ಕೇಳಿದ್ದೇ ಪ್ರೇರಣೆಯಾಗಿ. ಆಮೇಲೆ ಹೈಸ್ಕೂಲಲ್ಲಿ ಕನ್ನಡ ಮೇಸ್ಟ್ರಾಗಿದ್ದ ಪಂಜಾಜೆ ಶಂಕರ ಭಟ್ಟರಿಂದ ಲೇಖನ ಮತ್ತು ಕತೆಗಳನ್ನು ಬರೆಯಲು ಪ್ರೋತ್ಸಾಹ ಸಿಕ್ಕಿತು. ಹೈಸ್ಕೂಲಿನ ಆ ದಿನಗಳಲ್ಲಿ ನಾನು ಬರೆಯುತ್ತಿದ್ದ ಬರಹಗಳೆಲ್ಲ ಬಾಲಿಶವಾಗಿದ್ದವು. ಬಳಿಕ ಆಯುರ್ವೇದದ ಕಾಲೇಜಿಗೆ ಹೋದ ಮೇಲೆ ಆಯುರ್ವೇದದಷ್ಟೇ ಕನ್ನಡ ಸಾಹಿತ್ಯವನ್ನೂ ಓದುವ ಹವ್ಯಾಸವನ್ನು ಬೆಳೆಸಿಕೊಂಡು ಕತೆಗಳನ್ನೂ ಬರೆದೆ. ನಾನು ನಾಲ್ಕೂವರೆ ವರುಷಗಳ ಕಾಲ ಆಯುರ್ವೇದದ ಓದಿಗಾಗಿ ಉಡುಪಿಯಲ್ಲಿ ಇದ್ದ ಕಾಲಾವಧಿಯಲ್ಲಿ ಏನೆಂದರೂ ಹತ್ತಿಪ್ಪತ್ತು ಕತೆಗಳನ್ನು ಬರೆದಿದ್ದೆ. ಅವುಗಳು ‘ಕರ್ಮವೀರ’, ‘ಜನಪ್ರಗತಿ’, ‘ರಾಯಭಾರಿ’, ‘ಭವ್ಯವಾಣಿ’, ‘ಪ್ರಜಾಮತ’, ‘ಯುಗಪುರುಷ’, ‘ಮಲ್ಲಿಗೆ’ ಮುಂತಾದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿ ಉದಯೋನ್ಮುಖ ಕತೆಗಾರ ಎಂಬ ಹೆಸರನ್ನು ತಂದು ಕೊಟ್ಟವು. ‘ಗೋಕುಲ’, ‘ಕೈಲಾಸ’, ‘ಯುಗಪುರುಷ’ ಮತ್ತು ‘ವಿಕ್ರಮ’ದಲ್ಲಿ ಕವಿತೆಗಳೂ ಆಗಾಗ ಪ್ರಕಟವಾಗಿ ನನಗೆ ಹೆಸರು ತಂದುವು.

ಇದೇ ಸುಮಾರಿಗೆ (1963-64) ನನ್ನ 18-19ನೇ ವಯಸ್ಸಿನಲ್ಲಿ ‘ಮಣ್ಣಿನ ಮಕ್ಕಳು’ ಎಂಬ ಕಾದಂಬರಿಯನ್ನು ಬರೆದೆ. ಇದು ನನ್ನ ಇಪ್ಪತ್ತೊಂದರ ವಯಸ್ಸಿನಲ್ಲಿ (1965) ಮುದ್ರಣವಾಗಿ ಹೊರ ಬಂತು. ಅದೇ ವರುಷದ ಜನವರಿಯಲ್ಲಿ (1965) ನನ್ನ ಮೊದಲ ಕಥಾ ಸಂಕಲನ ‘ಆಶಾಂಕುರ’ (ಕೇವಲ ನಾಲ್ಕು ಕತೆಗಳು) ಬಿ. ಎನ್. ಜೋಗಿತ್ತಾಯರ ಜೊತೆ ಪ್ರಕಟವಾಗಿತ್ತು. ಜೂನ್ ತಿಂಗಳಲ್ಲಿ ನನ್ನ ಇನ್ನೊಂದು ಕಥಾ ಸಂಗ್ರಹ ‘ಹಸಿರು ಬಿಸಿಲು’ ಕೂಡಾ ಪ್ರಕಟವಾಗಿತ್ತು.

ಆ ದಿನಗಳಲ್ಲಿ ನನ್ನ ಮೊದಲ ಆಯ್ಕೆ ಕಾವ್ಯವೇ. ಆದರೆ ಕಾಂತಾವರಕ್ಕೆ ಬಂದು ನೆಲಸಿದ ಮೇಲೆ ಹೊಟ್ಟೆಯ ಪ್ರಶ್ನೆಯೇ ಮುಂದಾಗಿ ನನ್ನ ಎಲ್ಲಾ ಚಟುವಟಿಕೆಗಳೂ ಮೂರು ನಾಲ್ಕು ವರುಷ ನಿಂತ ನೀರಾಗಿ ಹೋಯಿತು. 1969ರ ಸುಮಾರಿಗೆ ನನ್ನ ಎರಡನೇ ಕಾದಂಬರಿ ‘ಅನಂತ’ವು ಪ್ರಕಟವಾದಾಗ ಅದು ಗ್ರಾಮಾಂತರ ಪ್ರದೇಶದ ಇಲ್ಲಿನ ಓದುಗರಿಗೂ ಇಷ್ಟವಾಗಿ ಅನೇಕರು ಅಭಿನಂದಿಸಿದರು. ಅದರಿಂದ ಉತ್ತೇಜನಗೊಂಡು ‘ಕನಸಿನ ಬಳ್ಳಿ’ ಎಂಬ ಕಾದಂಬರಿಯನ್ನು ಬರೆದೆ. ಕವನಗಳನ್ನೂ ಬರೆಯಲಾರಂಭಿಸಿದೆ. 1971ರ ಸುಮಾರಿಗೆ ನಾನು ಬರೆದ ‘ಕಾಂತಾವರದ ವರ್ತಮಾನ’ ಎಂಬ ಕವಿತೆಯು ‘ಉದಯವಾಣಿ’ಯಲ್ಲಿ ಪ್ರಕಟವಾದಾಗ, ಅದರ ಸಾಂಕೇತಿಕತೆಯನ್ನು ತಿಳಿಯದ ಕಾಂತಾವರದ ಮಂದಿ- ಮುಖ್ಯವಾಗಿ ಒಬ್ಬಿಬ್ಬರು ಅಧ್ಯಾಪಕರು ಮತ್ತು ಪಂಚಾಯತು ಸದಸ್ಯರು -ನನ್ನ ಮೇಲೆ ಮುಗಿಬಿದ್ದರು. ನಾನು ಆಸ್ಪತ್ರೆಗೆ ಬರುವ ರಸ್ತೆಯಲ್ಲಿ ಪೊರಕೆಧಾರಿಗಳಾದ ಹತ್ತಿಪ್ಪತ್ತು ಹೆಂಗಸರನ್ನು ನಿಲ್ಲಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಯಿತು. ನನ್ನ ಮಾವ ಕೆ. ರಾಮಕೃಷ್ಣಯ್ಯನಂಥ ಆಢ್ಯರು ನನ್ನ ಬೆಂಬಲಕ್ಕೆ ನಿಂತರೂ ಜನರ ಆಕ್ರೋಶ ಕಡಿಮೆಯಾಗಲಿಲ್ಲ. ಆ ಕವಿತೆಯನ್ನು ಯಾರನ್ನಾದರೂ ಉದ್ದೇಶಿಸಿ ಬರೆದಲ್ಲಿ, ಯಾರಾದರೂ ಅದನ್ನು ತಪ್ಪಾಗಿ ಅರ್ಥೈಸಿ ನೊಂದುಕೊಂಡಿದ್ದರೆ ಕ್ಷಮೆ ಕೇಳುತ್ತೇನೆ ಎಂದು ನಾನು ‘ಉದಯವಾಣಿ’ ಯಲ್ಲಿ ಪ್ರಕಟಿಸಿದೆ. ಇದರಿಂದಾಗಿ ನಾನು ಮುಂದೆ ‘ಕಾಂತಾವರ’ವನ್ನು ರೂಪಕಕ್ಕೆ ಇಳಿಸಿ ನನ್ನ ಕತೆ, ಕಾದಂಬರಿಗಳಲ್ಲಿ ‘ಸೀತಾಪುರ’ವನ್ನು ಬಳಸಿಕೊಂಡೆ. ಆ ಮೇಲಿನ ನನ್ನ ಬಹುತೇಕ ಕತೆ, ಕಾದಂಬರಿಗಳು ನಡೆಯುವ ಪ್ರದೇಶವು ಸೀತಾಪುರವೇ ಆಯಿತು.

ನನ್ನ ಕವಿತೆ ಮತ್ತು ಕತೆಗಳು ಮೊದಮೊದಲಿನ ವರುಷಗಳಲ್ಲಿ ಇವು ನನ್ನದೇ ಎನ್ನುವಷ್ಟು ‘ಅಸ್ಮಿತೆ’ಯನ್ನು ಪಡೆದಿರಲಿಲ್ಲ. ಆಮೇಲೆ ಅವುಗಳು ನಿಧಾನವಾಗಿ ನನ್ನದೇ ಎಂಬ ರೀತಿಯಲ್ಲಿ ಹೊರ ಬರತೊಡಗಿದವು. ಇತ್ತೀಚಿನ ನನ್ನ ನಾಲ್ಕೈದು ಕವಿತಾ ಸಂಗ್ರಹಗಳು ‘ನನ್ನದೇ’ ಎನ್ನುವಷ್ಟು ‘ತನ್ನತನ’ದಿಂದ ಕೂಡಿದೆ ಎಂಬ ಮಾತಿದೆ. ಕತೆಗಳೂ ಅಷ್ಟೇ. ಕಾದಂಬರಿಗಳ ವಸ್ತು, ತಂತ್ರ ಮತ್ತು ಪ್ರಾದೇಶಿಕತೆಯ ವೈಶಿಷ್ಟಗಳಿಂದ ಅವುಗಳು ಕೂಡಾ ‘ನನ್ನದೇ’ ಎನ್ನುವ ಹಾಗೆ ಇರಬಹುದೇನೋ! ಯಾಕೆಂದರೆ ಕಾದಂಬರಿಯಂಥ ಸುದೀರ್ಘ ರಚನೆಯಲ್ಲಿ ಕಾರಂತ, ಕುವೆಂಪು, ಭೈರಪ್ಪನಂಥವರು ತಮ್ಮದೇ ಛಾಪು ಮೂಡಿಸಿದ ಹಾಗೆ ನಾನೂ ನನ್ನ ಛಾಪು ಸ್ವಲ್ಪ ಮಟ್ಟಿಗೆ ಮೂಡಿಸಿದ್ದೇನೆ ಎಂಬ ನಂಬಿಕೆ ಇದೆ. ನನ್ನದೇ ಆದ ಶೈಲಿ ಅಥವಾ ರಚನಾ ವಿಧಾನವನ್ನು ನನ್ನ ಕೃತಿಗಳಲ್ಲಿ ತರಲು ನಾನು ‘ತಿಣುಕ’ಲಿಲ್ಲ. ಅವು ಸಹಜವಾಗಿ ನನ್ನದೇ ಆಗಿ ಬಂದಿವೆ ಎಂಬ ಅಭಿಪ್ರಾಯ ನನ್ನದು.

ಪಟ್ಟಾಜೆ: ನೀವು ವೈದ್ಯಕೀಯ ರಂಗದಲ್ಲಿ ದುಡಿದವರು. ಆ ಹಿನ್ನೆಲೆಯಲ್ಲಿ ನಿಮ್ಮ ‘ಅನುಭವ’ವು ಅಲ್ಲಿ ಹೇಗೆ ಸಾಹಿತ್ಯವಾಗಿ ಬಂತು? ಮತ್ತು ವೈದ್ಯಕೀಯ ಅನುಭವದಿಂದ ನಿಮ್ಮ ಒಟ್ಟು ಸಾಹಿತ್ಯಕ್ಕೆ ಏನಾದರೂ ಪ್ರಯೋಜನ ಸಿಕ್ಕಿದೆಯೇ?

ಮೊಗಸಾಲೆ: ನಾನು ವೈದ್ಯನಾಗಿ ವೃತ್ತಿ ಜೀವನಕ್ಕೆ ಪ್ರವೇಶಿಸಿದಾಗ ವೈದ್ಯಕೀಯ ಸಾಹಿತ್ಯದ ರಚನೆ ಬಿಡಿ, ನಾವು ಯಾವುದನ್ನು ಇಂದು ಶುದ್ಧ ಸಾಹಿತ್ಯ (ಕತೆ, ಕವಿತೆ, ಕಾದಂಬರಿ, ನಾಟಕ ಇತ್ಯಾದಿ) ಎನ್ನುತ್ತೇವೋ ಅದರಲ್ಲಿ ಹೆಚ್ಚು ಕೃತಿ ಬರೆದೇನು ಅಥವಾ ಬರೆಯಬೇಕು ಎಂದುಕೊಂಡವನಲ್ಲ. ಆಗಲೇ ಸುಮಾರು ಏಳೆಂಟು ವರುಷದಿಂದ ಸಾಹಿತ್ಯದಲ್ಲಿ ಕೈಯಾಡಿಸಿದ್ದ ನಾನು ಒಂದು ಕಾದಂಬರಿ ಮತ್ತು ಎರಡು ಪುಟ್ಟ ಕಥಾ ಸಂಗ್ರಹವನ್ನು ಹೊರ ತಂದಿದ್ದರೂ ಇನ್ನೂ ಬರೆಯಬಲ್ಲೆ ಎನ್ನುವ ಧೈರ್ಯ ಇರಲಿಲ್ಲ. ಬರೆಯಬೇಕು, ಸಾಹಿತಿಯಾಗಿ ಹೆಸರು ಪಡೆಯಬೇಕು ಎನ್ನುವ ಸಂಕಲ್ಪ ಮಾತ್ರ ಇತ್ತು. ಈಗಾಗಲೇ ಹೇಳಿದಂತೆ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ವಾತಾವರಣ ಆ ದಿನಗಳಲ್ಲಿ ಕಾಂತಾವರದಲ್ಲಿ ಇದ್ದಿರಲಿಲ್ಲ. ಆದರೂ ಸಾಹಿತ್ಯ ಕೃಷಿ ತನ್ನಷ್ಟಕ್ಕೆ ನನ್ನನ್ನು ಅದರಲ್ಲಿ ಒಳಗೊಳ್ಳುವ ಹಾಗೆ ಹೇಗೆ ಆಯಿತು ಗೊತ್ತಿಲ್ಲ. ಅದು ಅದರಷ್ಟಕ್ಕೇ ಆಯಿತು ಎನ್ನುವ ಹಾಗೆ, ಅಥವಾ ಪಾವೆಂ ಆಚಾರ್ಯರು ಹೇಳಿದ ಹಾಗೆ ‘ಆಯಾಚಿತವಾಗಿ ಏರಲು ಕುದುರೆ ಒದಗಿ ಬಂತು, ನಾನು ಏರಿದೆ’ ಎನ್ನುವಂತೆ ನನ್ನ ಸಾಹಿತ್ಯ ಕೃಷಿ ಮುಂದುವರಿಯಿತು. ಮಹತ್ವದ ಕೃತಿಗಳನ್ನು ಬರೆಯಬಲ್ಲೆ ಎಂಬ ಆತ್ಮವಿಶ್ವಾಸವೂ ಹುಟ್ಟಿತು. ಆ ನೆಲೆಯಲ್ಲಿ ‘ನನ್ನದಲ್ಲದ್ದುʼ, ‘ಉಲ್ಲಂಘನೆ’, ‘ಮುಖಾಂತರ’, ‘ಧಾತು’, ‘ಧರ್ಮಯುದ್ಧ’, ‘ಇದ್ದೂ ಇಲ್ಲದ್ದು’ ಮೊದಲಾದ ಕಾದಂಬರಿಗಳು ಮತ್ತು ‘ಇಹಪರದ ಕೊಳ’ , ‘ದೇವರು ಮತ್ತೆ ಮತ್ತೆ’, ‘ಬೇಲಿಯ ಗೂಟದ ಮೇಲೊಂದು ಚಿಟ್ಟೆ’ಯಂಥ ಕವನ ಸಂಗ್ರಹಗಳು ಮಹತ್ವದ್ದಾಗಿವೆ. ಕತೆಗಳಲ್ಲಿ ‘ನುಗ್ಗೆ ಗಿಡ’ ದಂಥ ಏಳೆಂಟು ಕತೆಗಳು ಮೇಲ್ಮಟ್ಟದವುಗಳೇ ಎಂಬ ನಂಬಿಕೆ ಅಥವಾ ಧೈರ್ಯ ನನಗಿದೆ. ಅಂತೆಯೇ ನಾನು ವೈದ್ಯಕೀಯ ಬರೆಹಗಳಿಗೆ ಕೈ ಹಾಕಿದ್ದು ಅಯಾಚಿತವಾಗಿ ಮತ್ತು ಆಕಸ್ಮಿಕವಾಗಿ.

1990ರ ದಶಕದಲ್ಲಿ ಬೆಂಗಳೂರಿನಿಂದ ಹೊರಡುತ್ತಿದ್ದ ‘ಪ್ರಜಾಪ್ರಭುತ್ವ’ ಎನ್ನುವ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿದ್ದ ಕಿರಿಯ ಗೆಳೆಯ ಡಾ. ವಸಂತ ಕುಮಾರ ಪೆರ್ಲ ಅವರು ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಪ್ರಜಾಮತ’ ಸಾಪ್ತಾಹಿಕವೊಂದರಲ್ಲಿ ‘ವೈದ್ಯಕೀಯ ಸಮಾಲೋಚನೆ’ ಎನ್ನುವ ವಿಭಾಗವಿದ್ದು, ಆ ರೀತಿಯಲ್ಲೇ ‘ಪ್ರಜಾಪ್ರಭುತ್ವ’ ಪತ್ರಿಕೆಯಲ್ಲೂ ಇಂಥ ಅಂಕಣವೊಂದನ್ನು ಯಾಕೆ ಪ್ರಾರಂಭಿಸಬಾರದು ಎಂಬ ನಿರ್ಧಾರಕ್ಕೆ ಬಂದು, ಅದನ್ನು ನಡೆಸಿಕೊಡಬೇಕು ಎಂದು ನನ್ನಲ್ಲಿ ವಿನಂತಿಸಿದರು. ‘ಅದು ಕಷ್ಟಸಾಧ್ಯ, ನನ್ನ ಅನುಭವ ಸಾಲದು’ ಎಂದು ಹೇಳಿದರೂ ಅವರು ಮೇಲಿಂದ ಮೇಲೆ ನನ್ನನ್ನು ಒತ್ತಾಯಿಸತೊಡಗಿದಾಗ ನಾನು ಯುದ್ಧವನ್ನು ಇದಿರಿಸಲು ಹೊರಟ ಸೈನಿಕನ ಹಾಗೆ ಒಪ್ಪಿಕೊಂಡೆ. ಆಗ ಈ ಅಂಕಣಕ್ಕೆ ಬಂದ/ಬರುತ್ತಿದ್ದ ಪ್ರಶ್ನೆಗಳು ಗಂಭೀರ ಆರೋಗ್ಯ ಸಮಸ್ಯೆಗೆ ಸಂಬಂಧಪಟ್ಟವುಗಳಾಗಿರದೆ ಲೈಂಗಿಕತೆಗೆ ಸಂಬಂಧಿಸಿದವೇ ಮುಖ್ಯವಾಗಿದ್ದುದು ಕುತೂಹಲವನ್ನು ಹುಟ್ಟಿಸಿತು. ಇದರಿಂದಾಗಿ ನಾನು ವೈದ್ಯಕೀಯ ಸಾಹಿತ್ಯ ಮತ್ತು ಲೈಂಗಿಕ ವಿಜ್ಞಾನವನ್ನು ಹೆಚ್ಚು ಅಭ್ಯಸಿಸಬೇಕಾಯಿತು. ಅದೇನಾಯಿತೋ ಗೊತ್ತಿಲ್ಲ, ನಾನು ವೈದ್ಯಕೀಯ ತಜ್ಞನೆಂಬಂತೆ ಜನರು ನನ್ನಿಂದ ಪರಿಹಾರ ನಿರೀಕ್ಷಿಸತೊಡಗಿದರು. ನಾನು ಬಹಳ ನಾಜೂಕಿನಿಂದ ಪರಿಹಾರಗಳನ್ನು ನೀಡಹತ್ತಿದೆ. ಅದು ನಿಜಕ್ಕೂ ಜನಪ್ರಿಯವಾಯಿತು. ಆದರೆ ಪತ್ರಿಕೆ ಕೆಲವೇ ಸಮಯದಲ್ಲಿ ನಿಂತು ಹೋಗಿ, ತನ್ನ ಅಂಕಣವೂ ನಿಂತು ಹೋಯಿತು.

ಮುಂದೆ ನನ್ನ ಮಿತ್ರರಾದ ಡಾ. ಬಿ. ಜನಾರ್ದನ ಭಟ್ಟರು ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಜನಾಂತರಂಗ’ ಎಂಬ ದೈನಿಕದ ಸಾಪ್ತಾಹಿಕದ ಸಂಪಾದಕರಾದಾಗ (1999 ಇರಬೇಕು) ಅವರು ನನ್ನ ಹಿಂದಿನ ವೈದ್ಯಕೀಯ ಅಂಕಣದ ಜನಪ್ರಿಯತೆಯನ್ನು ಗಮನಿಸಿ ‘ಜನಾಂತರಂಗ’ದಲ್ಲಿ ಅದು ಪ್ರಾರಂಭಿಸೋಣ ಎಂದು ಅಭಿಪ್ರಾಯ ಪಟ್ಟರು. ಇಲ್ಲಿಯೂ ನಾನು ಹಿಂದೇಟು ಹಾಕಿದೆ. ಆದರೆ ಭಟ್ಟರು ಮತ್ತು ಆ ಪತ್ರಿಕೆಯ ಸಂಪಾದಕರಾದ ಚಿ. ನಿ. ಸೀತಾರಾಮ ಅವರು ಒತ್ತಾಯಿಸಿದಾಗ ಆ ಪತ್ರಿಕೆಯಲ್ಲೂ ಅಂಕಣವನ್ನು ಪ್ರಾರಂಭಿಸಿದೆ. ಇಲ್ಲೂ ಈ ಅಂಕಣವು ಜನಪ್ರಿಯವಾಯಿತು. ಕೊನೆ ಕೊನೆಗೆ ಅದು ಗಂಭೀರವಾದ ವೈದ್ಯಕೀಯ ಸಮಸ್ಯೆಗಳಿಗಿಂತ ಹೆಚ್ಚಾಗಿ ಲೈಂಗಿಕ ಸಮಸ್ಯೆಗಳಿಗೇ ಒತ್ತು ಕೊಡುವಂಥ ‘ರೂಪಕ್ಕೆ’ ಬಂದದ್ದರಿಂದ ನಾನು ಲೈಂಗಿಕ ತಜ್ಞ ಎನ್ನುವಂಥ ಅಭಿಪ್ರಾಯವು ಸಾರ್ವಜನಿಕರಲ್ಲಿ ಮೂಡಿ ವೈಯಕ್ತಿಕವಾಗಿ ದೂರವಾಣಿ ಕರೆಗಳು ಬರತೊಡಗಿದವು. ಕೆಲವರು ನನ್ನನ್ನು ‘ಹುಡುಕಿಕೊಂಡು’ ಮನೆಗೂ ಬರಲು ಮುಂದಾದರು. ಇದರಿಂದ ನನಗೆ ‘ಕಿರಿಕಿರಿ’ಯಾಗಿ ಈ ಅಂಕಣವನ್ನು ನಿಲ್ಲಿಸಿ ಬಿಡೋಣ ಅಂದರೆ ಸಂಪಾದಕರು ಅವರದ್ದೇ ಆದ ‘ಕರಾವಳಿ ಅಲೆ’ ಎಂಬ ಪತ್ರಿಕೆಯಲ್ಲಿ ಪ್ರತಿದಿನವೂ ನನ್ನ ಅಂಕಣ ಇರಲಿ ಎಂದು ಒತ್ತಾಯಿಸಿದರು. ನಡುವೆ ಯಾರೋ ಒಬ್ಬರು ಈ ಅಂಕಣವು ಜನರ ಸ್ವಾಸ್ಥ್ಯಕ್ಕೆ ಒಳ್ಳೆದಲ್ಲ ಎನ್ನುವಂತೆ ಬರೆದ ಪತ್ರ ಅದೇ ಪತ್ರಿಕೆಯಲ್ಲಿ ಪ್ರಕಟವಾದಾಗ ಸಂಪಾದಕರಲ್ಲಿ ಜನಾಭಿಪ್ರಾಯವನ್ನು ಸಂಗ್ರಹಿಸಲು ಸೂಚಿಸಿದೆ. ಅಭಿಪ್ರಾಯದಲ್ಲಿ ನೂರಾರು ಜನ ಭಾಗವಹಿಸಿದರೂ ‘ಈ ಅಂಕಣ ಬೇಡ’ ಎಂದವರು ಪ್ರಾಯಃ ಒಂದೆರಡು ಶೇಕಡ ಇದ್ದಿರಬಹುದು. ಆದರೂ ನನಗೆ ‘ಇದು ಸಾಕು’ ಅನಿಸತೊಡಗಿತ್ತು. ಇದರಿಂದ ನನ್ನ ಶುದ್ಧ ಸಾಹಿತ್ಯ ಸೃಷ್ಟಿಗೆ ತೊಂದರೆಯಾಗುತ್ತದೆ ಎಂಬ ಆತಂಕವಾಗಿ ಆ ಅಂಕಣವನ್ನೇ ನಿಲ್ಲಿಸಿದೆ.

ಜನಸಾಮಾನ್ಯರಲ್ಲಿ ಮಾತ್ರವಲ್ಲ ಪದವೀಧರರಲ್ಲೂ ಕೂಡಾ ಲೈಂಗಿಕ ಜ್ಞಾನವು ಶೂನ್ಯ ಎಂಬುದನ್ನು ನಾನು ಈ ವೈದ್ಯಕೀಯ ಅಂಕಣದ ಮೂಲಕ ತಿಳಿದುಕೊಂಡೆ. ಹಾಗಾಗಿ ನಮ್ಮ ಪಠ್ಯಗಳಲ್ಲಿ ಲೈಂಗಿಕ ವಿಜ್ಞಾನವೂ ಬೇಕು ಎಂದು ನಾನು ‘ಪ್ರಜಾವಾಣಿ’ಯಲ್ಲಿ ಮುಖಪುಟದ ಲೇಖನ ಬರೆದಾಗ ಸಾಕಷ್ಟು ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿತು.

ಹೇಳಿ ಕೇಳಿ ನಾನು ಒಬ್ಬ ಸಾಮಾನ್ಯ ವೈದ್ಯ. ಆದರೆ ಈ ಅಂಕಣಕ್ಕಾಗಿ ನಾನು ಸಾಕಷ್ಟು ವೈದ್ಯಕೀಯ ಹೊತ್ತಗೆಗಳನ್ನು ಅಭ್ಯಸಿಸಬೇಕಾಯಿತು. ಆದರೆ ನನ್ನಲ್ಲಿ ಪ್ರಶ್ನೆ ಕೇಳಿದ ಯಾರೊಬ್ಬರಿಗೂ ನಾನು ಚಿಕಿತ್ಸೆ ಬರೆಯುತ್ತಿದ್ದಿಲ್ಲ. ಇದು ‘ಹೀಗಿರಬಹುದು’ ಅಥವಾ ‘ಹೀಗೂ ಆಗಿರಬಹುದು’ ಎನ್ನುವುದನ್ನು ನಯವಾಗಿ ಹೇಳಿ ‘ನೀವು ನನ್ನಿಂದ ಚಿಕಿತ್ಸೆ ಅಪೇಕ್ಷಿಸಬಾರದು’ ಎನ್ನುತ್ತಿದ್ದೆ. ಸ್ವಯಂ ಚಿಕಿತ್ಸೆಗೆ ಆಗಲೂ ಮತ್ತು ಈಗಲೂ ಕೂಡಾ ನಾನು ವಿರೋಧಿಯೇ.

ಆಮೇಲೆ ಈ ವೈದ್ಯಕೀಯ ಅಂಕಣಗಳನ್ನು ನಾನು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಅದು ಸಾಕಷ್ಟು ಜನಪ್ರಿಯವಾಯಿತು. ಆದರೆ ಈ ಹೊತ್ತಗೆಗಳು ಚಿಕಿತ್ಸೆಗೆ ನೆರವಾಗಲಾರವು. ರೋಗಿಯ ಅರಿವನ್ನು ಅಥವಾ ಆತನಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಅಲ್ಪಮಟ್ಟಿಗೆ ಸಹಕಾರಿ ಅಷ್ಟೆ.

1969ರ ಸುಮಾರಿಗೆ ನನ್ನ ಎರಡನೇ ಕಾದಂಬರಿ ‘ಅನಂತ’ವು ಪ್ರಕಟವಾದಾಗ ಅದು ಗ್ರಾಮಾಂತರ ಪ್ರದೇಶದ ಇಲ್ಲಿನ ಓದುಗರಿಗೂ ಇಷ್ಟವಾಗಿ ಅನೇಕರು ಅಭಿನಂದಿಸಿದರು. ಅದರಿಂದ ಉತ್ತೇಜನಗೊಂಡು ‘ಕನಸಿನ ಬಳ್ಳಿ’ ಎಂಬ ಕಾದಂಬರಿಯನ್ನು ಬರೆದೆ. ಕವನಗಳನ್ನೂ ಬರೆಯಲಾರಂಭಿಸಿದೆ. 1971ರ ಸುಮಾರಿಗೆ ನಾನು ಬರೆದ ‘ಕಾಂತಾವರದ ವರ್ತಮಾನ’ ಎಂಬ ಕವಿತೆಯು ‘ಉದಯವಾಣಿ’ಯಲ್ಲಿ ಪ್ರಕಟವಾದಾಗ, ಅದರ ಸಾಂಕೇತಿಕತೆಯನ್ನು ತಿಳಿಯದ ಕಾಂತಾವರದ ಮಂದಿ- ಮುಖ್ಯವಾಗಿ ಒಬ್ಬಿಬ್ಬರು ಅಧ್ಯಾಪಕರು ಮತ್ತು ಪಂಚಾಯತು ಸದಸ್ಯರು -ನನ್ನ ಮೇಲೆ ಮುಗಿಬಿದ್ದರು.

ಪಟ್ಟಾಜೆ: ನೀವು ನವ್ಯದ ಕಾಲದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಕಾಲಿಟ್ಟವರು. ಆ ಮೇಲಿನ ದಲಿತ ಬಂಡಾಯದಂಥ ಸಾಹಿತ್ಯಕ ಚಳವಳಿಯನ್ನೂ ಹಾದು ಬಂದವರು. ಆಯಾ ಕಾಲದಲ್ಲಿ ಅವು ನಿಮಗೆ ಅನಿವಾರ್ಯವೆಂದು ಅನಿಸಿದೆಯೇ ಅಥವಾ ಸಹಜವಾದ ಆಕರ್ಷಣೆಯೇ ಎಂಬ ಕುತೂಹಲದ ಜೊತೆಗೆ ಇನ್ನೊಂದು ಪ್ರಶ್ನೆ. ಈ ಚಳವಳಿಗಳ ನಡುವೆ ನೀವು ನಿಮ್ಮ ಸ್ವಂತಿಕೆಯನ್ನು ಹೇಗೆ ಉಳಿಸಿಕೊಂಡಿರಿ?

ಮೊಗಸಾಲೆ: ವೈದ್ಯ ವೃತ್ತಿಯಿಂದ ನನ್ನ ಸಾಹಿತ್ಯಕ್ಕೆ ಹೇಳಿಕೊಳ್ಳುವಂಥ ವಿಶೇಷ ಪ್ರಯೋಜನವಾಗಲಿಲ್ಲ. ಅದಕ್ಕೆ ಎರಡು ಕಾರಣ. ಮೊದಲನೆಯದ್ದು-ನಾನು ವೃತ್ತಿ ಜೀವನ ಪ್ರಾರಂಭಿಸುವ ಮುನ್ನ ಕುಟುಂಬ ವೈದ್ಯ Family Phygisiana ಎಂಬಂಥ ಒಂದು ವಿಶಿಷ್ಟ ಸಂಬಂಧ- ರೋಗಿ ಮತ್ತು ವೈದ್ಯರು ಪರಸ್ಪರ ಒಪ್ಪಿಕೊಂಡಂತೆ ಇತ್ತು. ಇಂಥ ಕುಟುಂಬ ವೈದ್ಯರು ತಮಗೆ ಚಿಕಿತ್ಸೆ ನೀಡುವುದು ಅಸಾಧ್ಯ ಅನಿಸಿದಾಗ ಬೇರೆ ತಜ್ಞರ ಕಡೆ ಅವರು ತನ್ನ ರೋಗಿಯನ್ನು ಕಳುಹಿಸಿಕೊಟ್ಟ ಮೇಲೂ ಆ ಬಗ್ಗೆ ನಿಜವಾದ ಕಾಳಜಿ ಇಟ್ಟುಕೊಳ್ಳುತ್ತಿದ್ದರು. ರೋಗಿಗಳನ್ನು ಹಾಗೆ, ಅವರಿಗೆ ವೈದ್ಯನೆಂಬವನು ‘ಕೇವಲ ವೈದ್ಯ’ನಾಗಿರಲಿಲ್ಲ. ಅವನು ತನ್ನ ಕುಟುಂಬದ ಆಪ್ತ, ತನ್ನ ಕಷ್ಟ ಸುಖಗಳನ್ನು ಕೇಳಲು ಇರುವಾತ ಮತ್ತು ತನಗೆ ಸಾಂದರ್ಭಿಕವಾಗಿ ಮಾರ್ಗದರ್ಶನ ಮಾಡಬಲ್ಲವನು ಎಂಬ ಪರಿಕಲ್ಪನೆ ಅವರಲ್ಲಿ ದಟ್ಟವಾಗಿತ್ತು. ಈಗ ಅದು ಇಲ್ಲವಾಗಿ ಅದು ಕೇವಲ ವ್ಯವಹಾರವಾಗಿ ಹೋಗಿದೆ. ಇದರಿಂದಾಗಿ ವೈದ್ಯ ತನ್ನ ಗ್ರಾಹಕರ ಕಷ್ಟ ಸುಖಗಳನ್ನು ಈಗ ತಿಳಿದುಕೊಳ್ಳಲಾರ ಅಥವಾ ರೋಗಿಯೂ ವೈದ್ಯರಲ್ಲಿ ತನ್ನ ಕಷ್ಟ ಸುಖಗಳನ್ನು ಹೇಳಲು ಉತ್ಸಾಹ ತೋರಲಾರ.

ಎರಡನೆಯದ್ದು -ಹಿಂದಿನ ದಿನಗಳಲ್ಲಿ ವೈದ್ಯರಲ್ಲಿ ರೋಗಿಗಳನ್ನು ಮುಕ್ತವಾಗಿ ಕುಳಿತು ಚರ್ಚಿಸುವ ಅಥವಾ ವೈದ್ಯನು ‘ಕುಳಿತು ಕೇಳುವ’ ಪರಿಪಾಠ ಇತ್ತು. ಆಗ ರೋಗಿಗಳ ಸಂಖ್ಯೆಯೂ ಈಗಕ್ಕಿಂತ ಅರ್ಧದಷ್ಟು ಕಡಿಮೆ ಇದ್ದುದು ಒಂದು ಅದಕ್ಕೆ ‘ಕಾರಣ’ವಾಗಿರಬಹುದು. ಈಗ ರೋಗಿಯೂ ವೈದ್ಯನೂ ‘ಬಿಜಿ’ ಎಂಬಂತಾಗಿ ‘ಕ್ಲಿನಿಕಲ್ ಎಕ್ಸಾಮಿನೇಷನ್’ (ರೋಗಿಯನ್ನು ಸ್ಪರ್ಶಿಸಿ ಕಾಯಿಲೆಯನ್ನು ತಿಳಿಯುವ ವಿಧಾನ) ನಿಂತೇ ಹೋದಂತಾಗಿದೆ. ರೋಗಿಯ ‘ಬಾಯಿ ಮಾತು’ ಮತ್ತು ‘ಲ್ಯಾಬೋಲೇಟರಿ ರಿಪೋರ್ಟ್’ ಮಾತ್ರ ರೋಗ ನಿರ್ಣಯಕ್ಕೆ ದಾರಿ ಎಂಬಂತಾಗಿದೆ. ಆದ್ದರಿಂದ ವೈದ್ಯಕೀಯ ವೃತ್ತಿ ಎನ್ನುವುದು ಈಗ ಯಾಂತ್ರಿಕವಾಗಿದ್ದು ಈ ವೃತ್ತಿಯಿಂದ ಸಾಹಿತ್ಯಕ್ಕೆ ಪ್ರಾಯಃ ಪ್ರಯೋಜನವಿಲ್ಲ.

ಆದರೆ ನಾನು ನನ್ನ ‘ಪಂಥ’ ಎಂಬ ಕಾದಂಬರಿಯಲ್ಲಿ ವೈದ್ಯ ವಿಜ್ಞಾನವನ್ನು- ಒಂದು ‘ಮಿತಿ’ಯಲ್ಲಿ ಸನ್ನಿವೇಶ ಸೃಷ್ಟಿಗಾಗಿ, ‘ನೀರಿನೊಳಗಿನ ಮಂಜು’ ಕಾದಂಬರಿಯಲ್ಲಿ ಲೈಂಗಿಕ ವಿಜ್ಞಾನದ ಅರಿವಿಗಾಗಿ ಸೂಕ್ಷ್ಮವಾಗಿ ಬಳಸಿಕೊಂಡಿದ್ದೇನೆ. ‘ನೆಲಮುಗಿಲುಗಳ ಮಧ್ಯೆ’ ಎನ್ನುವುದು ‘ದಯಾಮರಣ’ದ ಹಿನ್ನೆಲೆಯ ಕೃತಿ. ಉಳಿದ ಹಾಗೆ ನನ್ನ ಕೆಲವು ಕಾದಂಬರಿಗಳಲ್ಲಿ ವೈದ್ಯರು ಪಾತ್ರಗಳಾಗಿ ಬರುತ್ತಾರೆ. ಆದರೆ ಅವುಗಳು ಉಳಿದ ಪಾತ್ರಗಳಷ್ಟೇ ಸಾಂದರ್ಭಿಕವಾಗಿರುವುದರಿಂದ ಬೇರೆಯೇ ಆದ ‘ಮಹತ್ವ’ ಇಲ್ಲ.

ಪಟ್ಟಾಜೆ: ನೀವು ನವ್ಯದ ಕಾಲದಲ್ಲಿ ಕನ್ನಡ ಸಾಹಿತ್ಯ ಲೋಕ ಪ್ರವೇಶಿಸಿದವರು. ದಲಿತ ಬಂಡಾಯ ಮುಂತಾದ ಅವಸ್ಥಾಂತರಗಳನ್ನು ಹಾದು ಬಂದವರು. ಆಯಾ ಚಿಂತನೆಗಳಿಂದ ನೀವು ಪಡೆದ ಲಾಭಗಳೇನು? ಅದರೆಡೆಯಲ್ಲೂ ನೀವು ನಿಮ್ಮದೇ ಆದ ಸ್ವಂತಿಕೆಯನ್ನು ಹೇಗೆ ಉಳಿಸಿಕೊಂಡಿರಿ?

ಮೊಗಸಾಲೆ: ನಾನು ನವ್ಯ ಚಳುವಳಿಯ ಕಾಲದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟದ್ದು ಹೌದು. ಅದು ಸುಮಾರಾಗಿ 1965ರ ಹಿಂದೆ ಮುಂದೆ ಇರಬೇಕು ಎಂದು ನನ್ನ ನೆನಪು. ಆ ಮೊದಲು ನನ್ನ ಕವಿತೆ, ಕತೆಗಳು ರೋಮ್ಯಾಂಟಿಕ್ ಮಾದರಿಯಲ್ಲಿದ್ದುವು. ಅದೇ ಸರಿಯಾದ ಮಾರ್ಗ ಎಂಬ ನಂಬಿಕೆಯೂ ಇತ್ತು. ಆದರೆ 1964 -65ರ ಸುಮಾರಿಗೆ ನಾನು ಉಡುಪಿಯಲ್ಲಿ ಕಲಿಯುತ್ತಿದ್ದಾಗ ‘ನವ್ಯ ಕವಿತೆ’ ಎಂಬಂತೆ ಕವಿತೆಗಳನ್ನು ಬರೆಯುತ್ತಿದ್ದ ಮತ್ತು ಆ ದಿನಗಳ ಪ್ರಸಿದ್ಧ ಕವಿ ಎಂದು ನಾನು ತಿಳಿದುಕೊಂಡಿದ್ದ ಯು. ಕೆ. ವಿ. ಆಚಾರ್ಯರ ಪರಿಚಯವಾಗಿ ಅವರಿಂದ ನವ್ಯದ ‘ಪ್ರಾಥಮಿಕ ಪಾಠ’ಗಳನ್ನು ಹೇಳಿಸಿಕೊಂಡೆ (ಅಂದರೆ ಇಂತಿಂಥ ಪುಸ್ತಕಗಳನ್ನು ಅಭ್ಯಸಿಸಿ ಎಂಬಂತೆ) ಅದು ನನ್ನನ್ನು ನವ್ಯದ ಅರಿವಿನ ಕಡೆಗೆ ಪೂರ್ತಿಯಾಗಿ ಕರೆದೊಯ್ಯಲಿಲ್ಲ. ಈ ನಡುವೆ ‘ಗೋಕುಲ’ ವಾರಪತ್ರಿಕೆಯಲ್ಲಿ ಪುಂಖಾನುಪುಖವಾಗಿ ನವ್ಯದ ಮಾದರಿಯಲ್ಲಿ ಕವಿತೆಗಳನ್ನು ಬರೆಯುತ್ತಿದ್ದ ಸುಬ್ರಾಯ ಚೊಕ್ಕಾಡಿಯವರ ಪರಿಚಯವಾಗಿ ಅವರ ಜೊತೆ ನವ್ಯ ಸಾಹಿತ್ಯದ ವಿಚಾರವಾಗಿಯೇ ಪತ್ರ ವ್ಯವಹಾರ ನಡೆಸಲು ಮುಂದಾದೆ. ಸುಮಾರು 2-3 ವರುಷಗಳ ಕಾಲ ಅಂದರೆ ನಾನು ಉಡುಪಿಯಲ್ಲಿ ಓದು ಮುಗಿಸಿ ಕಾಂತಾವರದಲ್ಲಿ ಉದ್ಯೋಗಸ್ಥನಾದ ಬಳಿಕವೂ ಅದು ಮುಂದುವರಿಯಿತು. ಇದರಿಂದ ‘ನವ್ಯ’ ಅಂದರೆ ಹೇಗೆ ನವ್ಯ? ಯಾಕೆ ನವ್ಯ? ಎನ್ನುವ ಅನುಭವವಾಗತೊಡಗಿತು. ನಾನು ಆಗಲೇ ‘ಸಂಕ್ರಮಣ’, ‘ಕವಿತಾ’, ‘ಲಹರಿ’, ‘ಸಾಕ್ಷಿ’ಯೇ ಮೊದಲಾದ ಪ್ರಸಿದ್ಧ ಪತ್ರಿಕೆಗಳನ್ನು ತರಿಸಿ ಅಲ್ಲಿಂದಲೂ ನವ್ಯದ ಹೊರ ಒಳಗನ್ನು ಸ್ವಲ್ಪ ಮಟ್ಟಿಗೆ ಅರಿತುಕೊಂಡಿದ್ದೆ. ರೋಮ್ಯಾಂಟಿಕ್ ಸಂಪ್ರದಾಯಕ್ಕೆ ಇನ್ನು ಅಸ್ತಿತ್ವ ಇಲ್ಲ, ನವ್ಯದಲ್ಲಿ ಬರೆಯುವುದು ಅನಿವಾರ್ಯ ಮತ್ತು ಸಾಹಿತ್ಯ ಕೃತಿ ಹೆಚ್ಚು ಮಹತ್ವವನ್ನು ಪಡೆಯಬೇಕಾದರೆ ಅದರಲ್ಲಿ ಪ್ರತಿಮೆ, ಧ್ವನಿ, ಸಂಕೇತ, ವ್ಯಂಗ್ಯ, ನಾಟಕೀಯತೆ ಇತ್ಯಾದಿಗಳು (ಎಲ್ಲವೂ ಎಲ್ಲಾ ಕೃತಿಗಳಲ್ಲೂ ಇರಬೇಕಿಂದಿಲ್ಲ!) ಬೇಕೇ ಬೇಕು. ಆಗ ಆಕೃತಿ ಹೆಚ್ಚು ಶಕ್ತವಾಗಿರುತ್ತದೆ ಎಂದು ನನಗೆ ಅನಿಸತೊಡಗಿತು.

ಇದಕ್ಕಾಗಿ ನಾನು ಇಂಥ ನವ್ಯ ಸಾಹಿತ್ಯ ಕೃತಿಗಳನ್ನು (ನಾಟಕ, ಸಣ್ಣಕತೆ, ಕಾವ್ಯ ಮತ್ತು ಕಾದಂಬರಿಗಳನ್ನು) ತರಿಸಿಕೊಂಡೆ. ಇವುಗಳ ಓದಿನಿಂದ ‘ನವ್ಯ’ ಅಂದರೆ ಏನು ಎನ್ನುವುದರ ಖಚಿತ ಅನುಭವವಾಯಿತು. ಇದರಿಂದಾಗಿ ನನಗೆ ಆ ಪ್ರಕಾರದಲ್ಲಿ ಬರೆಯುವುದು ಹೆಚ್ಚು ಸೂಕ್ತ ಮತ್ತು ಅಗತ್ಯ ಅನಿಸಿತು. ಆಮೇಲೆ ನಾನು ಆ ಪ್ರಕಾರದಲ್ಲಿ ಕವಿತೆಗಳನ್ನು ಬರೆಯಲು ಪ್ರಯತ್ನಿಸಿದೆ. ಅವುಗಳು ‘ಸಾಕ್ಷಿ’, ‘ಸಂಕ್ರಮಣ’ದಂಥ ಪ್ರಸಿದ್ಧ ಪತ್ರಿಕೆಗಳಲ್ಲೂ ‘ಪ್ರಜಾವಾಣಿ’, ‘ಸುಧಾ’, ‘ಉದಯವಾಣಿ’ಯಂಥ ದೈನಿಕಗಳ ಸಾಪ್ತಾಹಿಕದಲ್ಲೂ ಪ್ರಕಟವಾಗತೊಡಗಿತು. ಆದರೆ ಕತೆಗಳಲ್ಲಿ ಈ ಪ್ರಕಾರವನ್ನು ಅಳವಡಿಸುವುದು ಕಷ್ಟವಾದುದರಿಂದ ರಮ್ಯ ಮತ್ತು ನವ್ಯದ ನಡುವಿನ ಮಾರ್ಗದಲ್ಲೇ ಬರೆಯತೊಡಗಿದೆ. (ಆದರೆ ಕತೆ ಬರೆದದ್ದು ತೀರಾ ಕಡಿಮೆ) ಆ ಮೇಲೆ ನಾನು ‘ನನ್ನದಲ್ಲದ್ದು’ ಎಂಬ ಕಾದಂಬರಿಯನ್ನು ಬರೆದಾಗ, ಅದನ್ನು ಅನೇಕರು ‘ನವ್ಯ’ ಎಂದು ಪರಿಭಾವಿಸಿದರು. ಕೆಲವರು ಅದು ನವ್ಯದ್ದಲ್ಲ, ನವ್ಯದ ‘ಅಸ್ತಿತ್ವವಾದ’ ಮತ್ತು ‘ಅನಾಥ ಪ್ರಜ್ಞೆ’ ಆ ಕಾದಂಬರಿಯಲ್ಲಿದ್ದರೂ ಅದು ರಮ್ಯ ಮತ್ತು ನವ್ಯ ಎರಡರ ನಡುವಿನ ಕೃತಿ ಎಂದು ಅಭಿಪ್ರಾಯಪಟ್ಟರು. ಏನಿದ್ದರೂ ಅದು ಪ್ರಕಟವಾದಾಗ ಅದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ (1977) ಬಂತು. ಇದರಿಂದ ಅದು ಪ್ರಸಿದ್ಧವಾಯಿತು. ಮುಂದೆ ‘ಕಸ್ತೂರಿ’ಯ ಪುಸ್ತಕ ವಿಭಾಗದಲ್ಲಿ ಆ ಮೇಲೆ ‘ಮಲ್ಲಿಗೆ’ಯಲ್ಲಿ ಎರಡೆರಡು ಬಾರಿ (ಒಮ್ಮೆ ಪ್ರಕಟವಾಗಿ ನಾಲ್ಕಾರು ವರುಷ ಆದ ಮೇಲೆ) ಸಂಕ್ಷಿಪ್ತ ರೂಪದಲ್ಲಿ ಪ್ರಕಟವಾಯಿತು. ಇದರಿಂದಾಗಿ ಜನರು ನನ್ನನ್ನು ಅಖಿಲ ಕರ್ನಾಟಕ ಮಟ್ಟದಲ್ಲಿ ಗುರುತಿಸುವಂತಾಯಿತು.

ಕಾವ್ಯ ಕ್ಷೇತ್ರದಲ್ಲಿ ನನ್ನ ಮೊದಲ ಕವನ ಸಂಗ್ರಹ ಪ್ರಕಟವಾದಂದಿನಿಂದ ತೊಡಗಿ ಮುಂದಿನ ಏಳೆಂಟು ಸಂಗ್ರಹಗಳು ಬರುವ ತನಕವೂ ನವ್ಯದ ದಾರಿಯಲ್ಲೇ ನಡೆದೆ. ನಡುವೆ ‘ನವ್ಯ’ ಪರಂಪರೆಯೂ ಹಿಂದೆ ಸರಿದು ಬಂಡಾಯ ದಲಿತ ಇಲ್ಲವೇ ಸ್ತ್ರೀ ಸಂವೇದನೆಯು ಮುಂದೆ ಬಂದಾಗ ಅದೂ ಕೂಡಾ ಈ ಕಾಲ ಸ್ಥಿತಿಗೆ ಅಗತ್ಯ ಎಂಬಂತೆ ಆ ಪರಂಪರೆಯ ಕವಿತೆಗಳನ್ನು ಬರೆಯ ಹೊರಟೆ. ಇಂಥವುಗಳಲ್ಲಿ ರಾಜಕೀಯದ ಹಿನ್ನೆಲೆ ಇದ್ದು ಇವು ವ್ಯಂಗ್ಯ ಮತ್ತು ವಿಷಾದದ ರೂಪದಲ್ಲಿ ಹೊರ ಬಂದವು. ಆದರೆ ಇವು ನನ್ನ ಮಾಧ್ಯಮವಲ್ಲ ಎಂದು ಅನಿಸತೊಡಗಿತು. ನಡುವೆ ಅಲ್ಲಮನ ಅಧ್ಯಾತ್ಮ ನನಗೆ ಇಷ್ಟವಾಗಿ ಇಹಪರದ ಕುರಿತಾಗಿ ಚಿಂತನೆಗಳು ಮುಂದೆ ಬಂದು ಆ ಹಿನ್ನೆಲೆಯ ಕವಿತೆಗಳಾಚೆ ನಾನು ಹೊರಳಿದೆ. ಬೇಕೆಂದೇ ಹೊರಳಿದ್ದಲ್ಲ. ಕವಿತೆಗಳೇ ಆ ದಾರಿಯಲ್ಲಿ ಹೋಗಲು ನನ್ನನ್ನು ಪ್ರೇರೇಪಿಸಿದುವು ಎಂದು ಕಾಣುತ್ತದೆ. ಇದು ಅಧ್ಯಾತ್ಮದ ಹಿನ್ನೆಲೆಯ ಕವಿತೆಗಳು ಎಂದು ಅನೇಕರು ಹೇಳತೊಡಗಿದರು. ವಾಸ್ತವವಾಗಿ ಅಧ್ಯಾತ್ಮ ಅಂದ ಕೂಡಲೇ ನಾವು ಯಾವುದನ್ನು ಧರ್ಮ ದೇವರುಗಳ ಮೂಲಕ ಅಧ್ಯಾತ್ಮ ಎನ್ನುತ್ತೇವೋ ಅದು ಖಂಡಿತಾ ಅಲ್ಲ. ಅವುಗಳಿಗೆ ‘ಕೇವಲ’ವಾದ ಕೆಲವು ‘ಮಿತಿ’ಗಳಿವೆ. ಅವುಗಳ ಆಚೆ ಇರುವ ಪ್ರಕೃತಿ ಮತ್ತು ಮನುಷ್ಯ ಸಂಬಂಧ, ಈ ಸಂಬಂಧವನ್ನು ಒಪ್ಪಿಕೊಂಡು ಅದನ್ನು ಮೀರಬಹುದಾದ ಲೋಕವೊಂದು ಇದ್ದರೆ, ಅದು ನಮ್ಮ ಕಲ್ಪನೆಯ ಪರಲೋಕವಾಗದೆ (ಸ್ವರ್ಗ ನರಕಾದಿಗಳು ಅಲ್ಲ) ಹೇಗಿದೆ ಅಥವಾ ಹೇಗಿರಬೇಕು ಎನ್ನುವುದನ್ನು ‘ಹುಡುಕುವ’ ಪ್ರಯತ್ನವೇ ಅಧ್ಯಾತ್ಮ. ಹಾಗೆ ಹುಡುಕುವಾಗ ಅದು ಸಿಗಬೇಕು ಎಂಬ ನಿರೀಕ್ಷೆ ಅಥವಾ ನಿರಾಶೆ ಇರಬಾರದು. ಯಾಕೆಂದರೆ ಅದು ‘ನಿರ್ವಾತ’ವಾಗಿರಬಹುದು ಇಲ್ಲವೇ ‘ಇದ್ದೂ ಇಲ್ಲದಿರಬಹುದು’ ಎನ್ನುವ ಪರಿಕಲ್ಪನೆ ನನ್ನ ಇತ್ತೀಚಿನ ಕಾವ್ಯದ ‘ಅಂತಃಶರೀರ’ ಅಂದುಕೊಂಡಿದ್ದೇನೆ.

ನವ್ಯ ಸಾಹಿತ್ಯದ ಪ್ರಕಾರದಿಂದ ಅಥವಾ ಬಂಡಾಯ ದಲಿತ ಚಳುವಳಿಯಿಂದ ನನಗೆ ನೇರವಾದ ಪ್ರಯೋಜನವಾಗಿಲ್ಲ, ಆದರೆ ಯಾವುದೇ ಒಂದು ಚಳುವಳಿ ನಮ್ಮಲ್ಲಿ ಪ್ರಾರಂಭವಾದಾಗ, ನಮ್ಮ ಮೇಲೆ ಅದು ಪ್ರಭಾವ ಬೀರಿಲ್ಲ ಅಂದರೆ ‘ನಾವು’ ಎನ್ನುವುದು ‘ನಾವು’ ಆಗಿ ಇರುವುದಿಲ್ಲ. ಅಥವಾ ಆಗಿರದೇ ಇದ್ದರೆ ಅಂಥವರು ‘ಜಡಭರತ’ರಾಗಿ ಇರಬಹುದೇನೋ! ಹಾಗಾಗಿ ಕನ್ನಡದಲ್ಲಿ ಕ್ರಿಯಾಶೀಲವಾಗಿ ಬಂದು ಹೋದ ಎಲ್ಲಾ ಚಳುವಳಿಗಳೂ ನನ್ನ ಹತ್ತಿರಕ್ಕೆ ಬಂದು ಹೋಗಿವೆ. ಆದರೆ ನಾನು ಆ ಚಳವಳಿಗಳ ಭಾಗವಾಗಿ ಹೋಗಿಲ್ಲ.

ಪಟ್ಟಾಜೆ: ಏನೇ ಇದ್ದರೂ ಬರಹಗಾರನ ಕೃತಿಯನ್ನು ಅವನ ಜಾತಿ ಧರ್ಮ ಮತ್ತು ಪ್ರಾಂತ್ಯಗಳು ಪ್ರಭಾವಿಸುವುದಿಲ್ಲವೇ?

ಮೊಗಸಾಲೆ: ಸೃಜನಶೀಲ ಬರಹಗಾರನಾದವನಿಗೆ ಜಾತಿ, ಧರ್ಮ, ದೇಶಕಾಲ (ಪ್ರಾಂತ್ಯ ಎನ್ನುವುದು ಬೇಡ) ಒಂದು ಮಿತಿಯಲ್ಲಿ ಪ್ರಭಾವ ಬೀರಬಹುದು. ಬೀರದೆಯೂ ಇರಬಹುದು. ಅದು ಅವನ ಮನೋಧರ್ಮವನ್ನು ಹೊಂದಿಕೊಂಡಿರುತ್ತದೆ. ಯಾಕೆಂದರೆ ಬಾಲ್ಯದ ಜೀವನಾನುಭವಗಳು ಮತ್ತು ಸಂಸ್ಕಾರಗಳು ಅವನ ಮೇಲೆ ಬೀರಿದ ಪ್ರಭಾವ ಸ್ವಲ್ಪ ಮಟ್ಟಿಗೆ ಕೃತಿಗಳ ಮೇಲೂ ಬೀರಬಹುದು.

ನನ್ನ ಉದಾಹರಣೆಯನ್ನು ನೀಡುವುದಾದರೆ, ನಾನು ಅತ್ಯಂತ ಸಂಪ್ರದಾಯಸ್ಥ (ಹವ್ಯಕ ಬ್ರಾಹ್ಮಣ) ಕುಟುಂಬದಿಂದ ಬಂದವನು. ಬಾಲ್ಯದಲ್ಲಿ ಮಡಿಮೈಲಿಗೆ, ದೇವರು ದಿಂಡಿರ ವಿಚಾರದಲ್ಲಿ ಹಿರಿಯರು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದೂ ಇದೆ. ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳೆಯುತ್ತಾ ಬಂದ ಹಾಗೆ ಅದೂ ವೈದ್ಯಕೀಯ ವೃತ್ತಿಯ ಅಭ್ಯಾಸದ ದಿನಗಳಲ್ಲಿ ಮಡಿ ಮೈಲಿಗೆ ಎನ್ನುವುದು (ಸಾವು, ಹೆಂಗಸರ ಮುಟ್ಟು ಇತ್ಯಾದಿಗಳೂ ಕೂಡಾ ಅಂಥವೆ) ‘ಜಾತಿ’ ಧರ್ಮಗಳ ನಡುವೆ ಇರುವ ಮಡಿವಂತಿಕೆ ಅಸ್ಪೃಶ್ಯತೆ ಎನ್ನುವುದು ಬರೇ ಭ್ರಮೆ ಎಂಬ ಅರಿವಾಯಿತು. ನನ್ನ ಕಾಲೇಜಿನ ದಿನಗಳಲ್ಲಿ ನಾನು ಪೇಜಾವರ ಮಠದಲ್ಲಿ ವಾಸವಾಗಿದ್ದೆ. ಉಡುಪಿ ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಊಟ ಮಾಡುತ್ತಿದ್ದೆ. ಅಲ್ಲಿ ಮೇಲು ಕೀಳು (ದ್ವೈತ – ಅದ್ವೈತ, ಬ್ರಾಹ್ಮಣ – ಶೂದ್ರ) ಇತ್ಯಾದಿಗಳು ಮುಂದೆ ಬಂದಾಗ ಅದು ತೀರಾ ಅಮಾನವೀಯ ಮತ್ತು ಜೀವವಿರೋಧಿ ಅನಿಸತೊಡಗಿತ್ತು. ಹಾಗಾಗಿ ನನ್ನ ಬಾಲ್ಯದಲ್ಲಿ ಹೇರಲ್ಪಟ್ಟ ಜಾತಿ ಮತ ಧರ್ಮಗಳಿಂದ ನಾನು ಮಾನಸಿಕವಾಗಿ ಹೊರ ಬಂದೆ. ಆಮೇಲೆ ಕಾಂತಾವರದಲ್ಲಿ ನೆಲೆ ನಿಂತು ಸಂಘಟನೆಗೆ ತೊಡಗಿದಾಗ, ಅದರಲ್ಲಿ ಒಳಗೊಂಡ ಎಲ್ಲರನ್ನೂ ಶೂದ್ರ, ಬ್ರಾಹ್ಮಣ, ದಲಿತ, ಬಲಿತ ಎಂಬ ಭೇದಭಾವ ಇಲ್ಲದೆ ಮನೆಯಲ್ಲಿ ಎಲ್ಲರಿಗೂ ಸಹಪಂಕ್ತಿ ಭೋಜನ ನೀಡಿ ವಾಸ್ತವದ ನೆಲೆಯಲ್ಲೂ ಜಾತ್ಯತೀತನಾದೆ. ಹಾಗಾಗಿ ನನ್ನ ಸಾಹಿತ್ಯಕ್ಕೆ ‘ಜಾತಿಯ ರಾಜಕೀಯ’ ಅಥವಾ ‘ಧರ್ಮಕಾರಣ’ ಪ್ರವೇಶವಾಗಲಿಲ್ಲ. ಆದರೆ ಜಾತಿಯೇ ಆಧಾರವಾಗಿ ಬ್ರಾಹ್ಮಣನೆಂಬ ಕಾರಣವೊಡ್ಡಿ ನನ್ನನ್ನು ಕಡೆಗಣಿಸುವ ಅಥವಾ ತಪ್ಪಾಗಿ ಅರ್ಥೈಸುವ ಕೆಲವು ಎಡಪಂಥೀಯರ ಮನೋಭಾವ ನನಗೆ ನೋವು ತಂದಿದೆ. ಮಾತ್ರವಲ್ಲ ‘ಪ್ರಶಸ್ತಿ ರಾಜಕಾರಣ’ದಲ್ಲಿ ಬ್ರಾಹ್ಮಣನೆಂಬ ಕಾರಣದಿಂದ ನಾನು ವಂಚಿತನಾಗುತ್ತಿದ್ದೇನೆ.

ಪಟ್ಟಾಜೆ: ಸಂಘಟನೆಯೊಂದಿಗೆ ಬರವಣಿಗೆಯಲ್ಲೂ ನಿರಂತರವಾಗಿ ತೊಡಗಿಸಿಕೊಳ್ಳಲು ನಿಮಗೆ ಹೇಗೆ ಸಾಧ್ಯವಾಯಿತು?

ಮೊಗಸಾಲೆ: ನನಗೆ ಈ ಎರಡೂ ವಿಚಾರಗಳು ಒಂದು ಇನ್ನೊಂದಕ್ಕೆ ಅಡ್ಡಿಯಾಗಿಲ್ಲ. ಸಂಘಟನೆ ಇಲ್ಲದೆ ನಾನಿಲ್ಲ ಎಂಬಂತೆ ಈ ಸಂಘಟನೆಗಳು ನನ್ನನ್ನು ಆವರಿಸಿವೆ. ಅವು ಯಾವತ್ತೂ ‘ಭಾರ’ ಎಂದೆನಿಸಲಿಲ್ಲ. ಅದು ನನಗೆ ಸದಾ ಜೀವಂತಿಕೆಯನ್ನು ಅಥವಾ – ಲವಲವಿಕೆಯನ್ನು ಅಂದರೆ ನಾಳೆ ಏನು ಮಾಡೋಣ? ಎಂಬಂತೆ ನನ್ನ ಮನಸ್ಸಿನ ಆರೋಗ್ಯವನ್ನು ಕಾಪಾಡುತ್ತಿವೆ. ಕೊರೊನಾ ಕಾಲ ಘಟ್ಟದಲ್ಲಿ ಸಂಘಟನೆಯ ‘ಬಲ’ ಇಲ್ಲದೆ ಸೊರಗಿದ್ದಾಗ ನನ್ನಲ್ಲಿ ನಾನು ತೊಡಗಿಸಿಕೊಳ್ಳಲು ಕಾರಣವಾದದ್ದು ಸೃಷ್ಟಿಶೀಲ ಸಾಹಿತ್ಯ. ಆ ದಿನಗಳಲ್ಲಿ ‘ಧರ್ಮಯುದ್ಧ’ ಮತ್ತು ‘ಇದ್ದೂ ಇಲ್ಲದ್ದು’ ಎಂಬ ಎರಡು ಕಾದಂಬರಿಗಳನ್ನು ಬರೆದೆ. ಕೊರೊನಾ ಬಾರದಿರುತ್ತಿದ್ದರೆ ಈ ಕೃತಿಗಳು ಹುಟ್ಟುತ್ತಿರಲಿಲ್ಲ ಎಂಬ ಗುಮಾನಿ ನನಗಿದೆ. ಅಂದರೆ ‘ನಿತ್ಯವೂ ಸಾಹಿತ್ಯ’ ಎಂಬಂಥ ಚಿಂತನೆಯು ಸಂಘಟನೆಗಳ ಮೂಲಕ ಅಥವಾ ಸಾಹಿತ್ಯ ಸೃಷ್ಟಿಯ ಪರಿಕಲ್ಪನೆಯ ಎಚ್ಚರದ ಮೂಲಕ ನನ್ನ ಮನಸ್ಸನ್ನು ಸದಾ ಬೆಚ್ಚಗಿಡುತ್ತಾ ಬಂದಿದೆ. ಹಾಗಾಗಿ ಇವು ಎರಡೂ ನನಗೆ ಅನಿವಾರ್ಯ ಮತ್ತು ಇವು ಒಂದಕ್ಕೊಂದು ಪೂರಕ ಎಂದು ನನ್ನ ನಂಬಿಕೆ.

ಪಟ್ಟಾಜೆ: ನಿಮ್ಮ ಗದ್ಯಪದ್ಯಗಳು ಗಡುಸಾದ ಭಾರವಾದ ಪದಗಳಿಂದ ಜಡವಾಗಿರದೆ ಸರಳತೆ ಮತ್ತು ಸಹಜತೆಗಳಿಂದ ಚಲಿಸುತ್ತವೆ. ಈ ಹಿನ್ನೆಲೆಗೆ ಏನಾದರೂ ಕಾರಣ ಇದೆಯೇ?

ಮೊಗಸಾಲೆ: ನನ್ನ ಬರವಣಿಗೆ ಹೀಗಿರಬೇಕು ಅಥವಾ ಹೀಗಿರಬಾರದು ಎಂದು ನಾನು ತಲೆಕೆಡಿಸಿಕೊಂಡವನಲ್ಲ. ‘ಕವಿತೆಯೇ ಹೋಗು ಮನುಷ್ಯನ ಮಾತಾಗು’ ಎಂಬುದು ನನ್ನ ಕವಿತೆಯೊಂದರ ‘ಶಿರೋನಾಮೆ’ ಯಾಗಿತ್ತು. ಆ ಸಾಲನ್ನೇ ಮುಂದಿಟ್ಟುಕೊಂಡು ಡಾ. ಹಾ. ಮಾ. ನಾ. ಅವರು ‘ತರಂಗ’ದ ತಮ್ಮ ಅಂಕಣದಲ್ಲಿ ನನ್ನ ಬಗ್ಗೆ ಬಹಳ ಪ್ರೀತಿಯ ಮತ್ತು ವಿಶ್ವಾಸದ ಮಾತುಗಳನ್ನು (27-8-1994ರಂದು ನನ್ನ 50ರ ಸಂಭ್ರಮದಲ್ಲಿ) ಬರೆದಿದ್ದರು. ನಾವು ಮಾತನಾಡುವುದು ಹೇಗೋ ಹಾಗೆ ಬರವಣಿಗೆಯೂ ನನ್ನ ಪಾಲಿಗೆ ಒಂದು ‘ಸಹಜಕ್ರಿಯೆ’. ಮಾತನಾಡುವಾಗ ಅದು ಶಬ್ದಗಳಿಂದ ವಿಜೃಂಭಿಸಬೇಕು, ವ್ಯಾಕರಣ ಬದ್ಧವಾಗಿರಬೇಕು, ಅಥವಾ ಆಲಂಕಾರಿಕವಾಗಿರಬೇಕು ಎಂದು ನಾವು ಯೋಚಿಸುವುದಿಲ್ಲ ತಾನೇ? ಹಾಗಾಗಿ ಕೃತಿಯಲ್ಲಿ ‘ಮೊದಲು ಏನು ಹೇಳಬೇಕು’ ಎಂದು ಯೋಚಿಸುತ್ತೇನೆ. ಆಮೇಲೆ ಅದರ ‘ಮಾಧ್ಯಮ’ವು ಕತೆಯಲ್ಲೋ ಕವಿತೆಯಲ್ಲೋ ಕಾದಂಬರಿಯಲ್ಲೋ ಇದ್ದರೆ ಆಗಬಹುದೇ ಎಂದು ಚಿಂತಿಸುತ್ತೇನೆ. ಆ ಚಿಂತನೆ ತನ್ನಿಂದ ತಾನೇ ಒಂದು ಆಕಾರವನ್ನು ಪಡೆಯುತ್ತದೆ. ಹಾಗಾಗಿ ನನ್ನ ಬರಹಗಳಲ್ಲಿ ತಾಂತ್ರಿಕತೆ, ಶೈಲಿಗಳ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ ಎಂಬಂತೆ ಅವುಗಳು ಸೃಷ್ಟಿಯಾಗುತ್ತವೆ. ಇದು ಡಾ. ಶಿವರಾಮ ಕಾರಂತರು ನನ್ನ ಮೇಲೆ ಪರೋಕ್ಷವಾಗಿ ಬೀರಿದ ಪ್ರಭಾವ ಅಂದುಕೊಂಡಿದ್ದೇನೆ.

ಪಟ್ಟಾಜೆ: ಸಾಹಿತ್ಯದಲ್ಲಿ ದೇಸೀಯತೆ ಬೇಕೆನ್ನುತ್ತೀರಾ?

ಮೊಗಸಾಲೆ: ಖಂಡಿತ ಬೇಕು. ಸಣ್ಣಕತೆ ಮತ್ತು ಕಾದಂಬರಿಗಳಲ್ಲಿ ಇದ್ದರೆ ಚೆನ್ನ. ದೇವನೂರು ಮಹಾದೇವ ಅವರ ‘ಕುಸುಮ ಬಾಲೆ’ ಮಹತ್ವ ಪಡೆದದ್ದು ಅದರಲ್ಲಿನ ಕಥನ ಕೌಶಲದಿಂದ ಮಾತ್ರವಲ್ಲ ದೇಸೀಯತೆಯಿಂದ ಕೂಡಾ. ನಾನು 1969ರ ಸುಮಾರಿನಲ್ಲಿ ಪ್ರಕಟಿಸಿದ ನನ್ನ ಎರಡನೇ ಕಾದಂಬರಿ ‘ಅನಂತ’ವು ಹವ್ಯಕ ಸಮುದಾಯಕ್ಕೆ ಸಂಬಂಧಿಸಿದ ಕಾದಂಬರಿಯಾಗಿದ್ದು, ಅದರಲ್ಲಿನ ‘ಮಾತುಕತೆ’ಗಳು(ಸಂಭಾಷಣೆಗಳು) ಹವ್ಯಕ ಭಾಷೆಯಲ್ಲೇ ಇದ್ದುವು. ದುರದೃಷ್ಟ ಅಂದರೆ ಪ್ರೊ| ತೆಕ್ಕುಂಜ ಗೋಪಾಲಕೃಷ್ಣ ಭಟ್ಟರಂಥ ವಿದ್ವಾಂಸರು ಅದು ಕಾದಂಬರಿಯ ಓದಿಗೆ ತೊಡಕು ಎಂಬಂತೆ ಮಾತನಾಡಿದ್ದಲ್ಲದೆ, ಆ ಒಲವನ್ನು ಅವರು ಒಪ್ಪಲಿಲ್ಲ. ಸೇಡಿಯಾಪು ಕೃಷ್ಣ ಭಟರು ಮತ್ತು ಶಿವರಾಮ ಕಾರಂತರು ಕೂಡ ಇಂಥ ನಿಲುವಿನವರೇ ಆಗಿದ್ದರು. ಇವರೆಲ್ಲ ಪ್ರಾದೇಶಿಕತೆಯನ್ನು ಕಥಾ ವಸ್ತುವಿನಲ್ಲಿ ಒಪ್ಪುತ್ತಿದ್ದರೇ ವಿನಾ ‘ಆಡು ಭಾಷೆ ಅಲ್ಲಿ ಬೇಡ’ ಎಂಬ ನಿಲುವಿನವರಾಗಿದ್ದರು. ಮುಂದೆ ಖ್ಯಾತ ಕತೆಗಾರ್ತಿ ವೈದೇಹಿಯಂಥವರು ಕಥಾ ನಿರೂಪಣೆಯಲ್ಲೂ ದೇಸೀಯತೆಯನ್ನು (ಅಂದರೆ ಕುಂದಾಪುರ ಕನ್ನಡವನ್ನು) ತಂದಾಗ ಅದು ಅವರ ಕತೆಗಳಿಗೆ ಹೆಚ್ಚು ಮಹತ್ವವನ್ನು ತಂದಿತು. ನಾನು ಕಥಾ ವಸ್ತುವಿನಲ್ಲಿ ಪ್ರಾದೇಶಿಕತೆಗೆ ಹೆಚ್ಚು ಒತ್ತು ಕೊಡುತ್ತೇನೆ. ನನ್ನ ಕೃತಿಗಳ ಕಥಾ ವಸ್ತುಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೆಚ್ಚಾಗಿ ಮೀರುವುದಿಲ್ಲ. ಸಂಭಾಷಣೆಗಳು ಗ್ರಾಂಥಿಕ ಕನ್ನಡದಲ್ಲೇ ಇದ್ದರೂ ನಡು ನಡುವೆ ಆ ಪ್ರದೇಶದ ಆಡುಭಾಷೆಯಲ್ಲಿರುವ ಕೆಲವು ನುಡಿಗಟ್ಟುಗಳನ್ನು (ಈಚೆಗೆ ಎರಡು ಕಾದಂಬರಿಗಳಲ್ಲಿ ಸಂಭಾಷಣೆಯನ್ನು ಸಹ ಒಂದು ಮಿತಿಯಲ್ಲಿ) ಬಳಸಿಕೊಂಡಿದ್ದೇನೆ. ಒಟ್ಟಾರೆಯಾಗಿ ಹೇಳುವುದಾದರೆ ದೇಸೀಯತೆ ಎನ್ನುವುದು ಒಂದು ಕೃತಿಯ ಚೆಲುವನ್ನು ಹೆಚ್ಚಿಸುತ್ತದೆ. ಅದು ವಾಸ್ತವಕ್ಕೆ ಹತ್ತಿರವಾಗಿ ಆ ಪ್ರದೇಶದ ಸಂಸ್ಕೃತಿಯನ್ನು ಸ್ಪಷ್ಟವಾಗಿ ಚಿತ್ರಿಸಲು ಸಹಕಾರಿಯಾಗುತ್ತದೆ.

ಪಟ್ಟಾಜೆ: ಸಾಹಿತ್ಯದಲ್ಲಿ ಎಡ ಮತ್ತು ಬಲಪಂಥಗಳ ಬಗ್ಗೆ ನಿಮ್ಮ ನಿಲುವೇನು?

ಮೊಗಸಾಲೆ: ಎಡಬಲ ಎನ್ನುವುದು ಒಂದು ಸಿದ್ಧಾಂತಕ್ಕೆ ಬದ್ಧವಾಗಿದ್ದರೆ ಅಥವಾ ಸೀಮಿತವಾಗಿದ್ದರೆ, ಅದರಲ್ಲಿ ಲೇಖಕನಾದವನಿಗೆ ಏನು ಹೇಳಬೇಕೋ ಅದನ್ನು ಹೇಳುವುದು ಕಷ್ಟ ಮತ್ತು ಅದು ಯಾವುದೋ ಒಂದು ಸಮುದಾಯವನ್ನು ಅಥವಾ ಧರ್ಮವನ್ನು ಎದೆಗೂಸಾಗಿ ಒಪ್ಪಿಕೊಂಡ ಹಾಗೆ ಆಗುತ್ತದೆ. ಸಾಹಿತ್ಯ ಸೃಷ್ಟಿ ಎನ್ನುವುದಕ್ಕೆ ಹಣೆಪಟ್ಟಿ ಬೇಡ, ಅಥವಾ ಯಾವುದೇ ಸಿದ್ಧಾಂತವೂ ಕೂಡಾ. ಸೃಜನಶೀಲ ಸಾಹಿತಿಯಾದವನಿಗೆ ಅವನ ಅನುಭವಗಳನ್ನು ಪ್ರಾಮಾಣಿಕವಾಗಿ ಹೇಳಲು ಎಡಬಲಗಳ ಅವಶ್ಯಕತೆ ಇಲ್ಲ. ಈ ಜಗತ್ತು ಎನ್ನುವುದು ಪ್ರಕೃತಿ ಎಂಬ ಅರ್ಥ ಪಡೆಯುವುದು ತನಗೆ ತಾನೇ ಬದ್ಧತೆಯನ್ನು ಇರಿಸಿಕೊಂಡದ್ದರಿಂದ. ಪ್ರಕೃತಿಯ ಮಕ್ಕಳಾದ ನಾವು ಪ್ರಕೃತಿಯ ಹಾಗೆ ಮುಕ್ತವಾಗಿ ಚಿಂತಿಸುವುದು ಅಥವಾ ಮುಕ್ತವಾಗಿ ಬರೆಯುವುದು ನಮ್ಮ ಅಗತ್ಯ ಎಂದು ಹೇಳಿದರೆ, ಅದು ‘ಜೀವ ವಿರೋಧಿ’ ಅನ್ನುವವರೂ, ಪ್ರಕೃತಿಯಲ್ಲಿ ‘ಜೀವ ವಿರೋಧಿ’ ಇಲ್ಲವೇ ‘ಜೀವಪರ’ ಎನ್ನುವುದು ಇದ್ದರೆ ಅದು ‘ಸಹಜ’ ಎಂಬಂತೆ ಒಪ್ಪಿಕೊಳ್ಳುವವರೂ ಇರಬಹುದು. ಸಹಜವಾಗಿ ನೋಡಿ, ಸಹಜವಾಗಿ ಅನುಭವಿಸಿ, ಸಹಜವಾಗಿ ಬರೆಯುವುದು ನನಗೆ ಇಷ್ಟ. ಡಾ. ಶಿವರಾಮ ಕಾರಂತರು ಆ ನೆಲೆಯಲ್ಲೇ ‘ಬಾಳ್ವೆಯೇ ಬೆಳಕು’ ಎಂದಿರಬಹುದು. ನಾನು ಅವರನ್ನು ಈ ರೀತಿಯಿಂದ ಒಪ್ಪಿಕೊಂಡವನು.

ಪಟ್ಟಾಜೆ: ಇತ್ತೀಚೆಗೆ ಕಾದಂಬರಿ ಪ್ರಕಾರವು ಕ್ಷೀಣಿಸುತ್ತಿರಲು ಕಾರಣಗಳೇನು?

ಮೊಗಸಾಲೆ: ಇದಕ್ಕೆ ಉತ್ತರಿಸುವುದು ಕಷ್ಟ. ಯಾಕೆಂದರೆ ಅದರ ಲೆಕ್ಕಚಾರಗಳು ನನಗೆ ಗೊತ್ತಿಲ್ಲ. ಆದರೂ ಒಂದು ಮಾತು ಹೇಳಬಹುದೇನೋ, ಒಂದು ಕಾಲದಲ್ಲಿ ಮೇಲಿಂದ ಮೇಲೆ ಎಂಬಂತೆ ಕಾದಂಬರಿಗಳನ್ನು ಬರೆಯುತ್ತಿದ್ದ (ನಾ. ಡಿಸೋಜ, ಕೆ. ಟಿ. ಗಟ್ಟಿ, ಸಾಯಿಸುತೆ ಮೊದಲಾದವರು) ಜನಪ್ರಿಯ ಕಾದಂಬರಿಕಾರರಾಗಿದ್ದು ಈಗ ವಯೋಸಹಜವಾಗಿ ಹಿನ್ನೆಲೆಗೆ ಸರಿದಿದ್ದಾರೆ. ಹೊಸತಾಗಿ ಕಾದಂಬರಿ ಕ್ಷೇತ್ರಕ್ಕೆ ಪ್ರವೇಶಿಸಿದವರು ಸಂಖ್ಯೆಗಿಂತ ಕೃತಿಯ ಉತ್ಕೃಷ್ಟತೆ ಮುಖ್ಯ ಎಂದು ತಮಗೆ ತಾವೇ ಬದ್ಧತೆಗಳನ್ನು ಅಳವಡಿಸಿಕೊಂಡು ಬರೆಯುತ್ತಿರುವುದೂ ಈ ‘ಮಿತಿ’ಗೆ ಕಾರಣವಿರಬಹುದು. ಇನ್ನೂ ಒಂದು ಮಾತು ಹೇಳುವುದಾದರೆ, ಕಾದಂಬರಿ ರಚನೆಗೆ ಒಂದು ರೀತಿ ದೀರ್ಘಕಾಲದ ಧ್ಯಾನಸ್ಥ ಸ್ಥಿತಿ ಬೇಕು. ಸಣ್ಣಕತೆ, ಕಾವ್ಯಕ್ಕೆ ಅಷ್ಟು ಬೇಡ. ಆದ್ದರಿಂದಲೇ ಹೊಸತಾಗಿ ಈ ಸಾಹಿತ್ಯ ಕ್ಷೇತ್ರಕ್ಕೆ ಬಂದವರು ಹೆಚ್ಚಾಗಿ ಕಾವ್ಯವನ್ನು ಆಮೇಲೆ ಸಣ್ಣಕತೆಯ ಕ್ಷೇತ್ರವನ್ನು ಹೆಚ್ಚು ಒಪ್ಪಿಕೊಳ್ಳುತ್ತಿದ್ದಾರೋ ಏನೋ!

ಪಟ್ಟಾಜೆ: ಮಾತೃ ಭಾಷೆಯನ್ನು ಉಳಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳು ಯಾವುವು?

ಮೊಗಸಾಲೆ: ಇದು ಒಂದು ಸಿದ್ಧಾಂತದಿಂದ ಅಥವಾ ಸರಕಾರ ಹಾಕುವ (ಹಾಕಿದ) ಒಂದು ‘ಯೋಜನೆ’ಯಿಂದ ಸಾಧ್ಯವಾಗದ ಕಾರ್ಯ. ಭಾಷೆಯ ಬಗ್ಗೆ ಪ್ರೀತಿ ಸಹಜವಾಗಿ ಹುಟ್ಟಬೇಕು. ಅಂದರೆ ಹೇಗೆ ನಮ್ಮ ತಂದೆ ತಾಯಿಯನ್ನು ‘ಇವರು ತಂದೆ, ಇವರು ತಾಯಿ’ ಎಂದು ನಾವು ಒಪ್ಪಿಕೊಳ್ಳುತ್ತೇವೋ ಹಾಗೇ ಭಾಷೆಯೂ ಅಷ್ಟೇ ಮುಖ್ಯ ಎಂದು ಮನದಟ್ಟಾದರೆ ಮಾತ್ರ ಇದು ಸಾಧ್ಯ. ಆಧುನಿಕತೆ ಎನ್ನುವುದು ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮಟ್ಟಕ್ಕೆ ಬೆಳೆದಿರುವಾಗ ‘ಮಾತೃಭಾಷೆ’ ಎನ್ನುವುದಕ್ಕೆ ಅರ್ಥವಿಲ್ಲ, ಅದು ನಿಷ್ಪ್ರಯೋಜಕ ಎಂಬ ಮನಸ್ಥಿತಿಗೆ ಬಂದಿದ್ದೇವೆ. ನಮ್ಮ ರಾಜ್ಯದ ಒಳಗೇ ಇದ್ದು ಆಂಗ್ಲ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಹಿರಿಯರು ಕೂಡಾ ಮಕ್ಕಳು ತಮ್ಮಲ್ಲಿ ‘ಮಮ್ಮಿ’ ‘ಡ್ಯಾಡಿ’ ಎಂದು ಹೇಳುವುದನ್ನು ಇಷ್ಟಪಡುತ್ತಾರೆ. ತಮ್ಮದೇ ಆದ ಪ್ರಾದೇಶಿಕ ಭಾಷೆಗಳಲ್ಲಿ (ತುಳು, ಕೊಂಕಣಿ, ಬ್ಯಾರಿ, ಇತ್ಯಾದಿ) ಸಾರ್ವಜನಿಕವಾಗಿ ವ್ಯವಹರಿಸಲು ಹಿಂದೇಟು ಹಾಕುತ್ತಾರೆ. ಈ ಪ್ರವೃತ್ತಿ ಮುಂದುವರಿದರೆ, ಇನ್ನು ಹತ್ತಿಪ್ಪತ್ತು ವರುಷಗಳಲ್ಲಿ ‘ಕನ್ನಡವೆನ್ನುವುದು ಕೇವಲ ಆಡು ಭಾಷೆ’ಯಾಗಿ ಮಾತ್ರ ಉಳಿದು ಅದರ ಲಿಪಿಯನ್ನು ಬಳಸುವುದು ನಿಂತೇ ಹೋಗಬಹುದು. ಈಗ ನಾವು ತುಳು ಅಥವಾ ಕೊಂಕಣಿ ಸಾಹಿತ್ಯವನ್ನು ಕನ್ನಡದಲ್ಲಿ ಮುದ್ರಿಸಿ ಹೇಗೆ ಓದುತ್ತೇವೋ, ಹಾಗೇ ಕನ್ನಡ ಸಾಹಿತ್ಯವನ್ನು ಕೂಡಾ ಇಂಗ್ಲೀಷ್ ಅಕ್ಷರಗಳಲ್ಲಿ ಬರೆದು ಕನ್ನಡದಲ್ಲಿ ಓದುವ ಸ್ಥಿತಿ ಬರಬಹುದು. ಇದಕ್ಕೆ ಇರುವ ಪರಿಹಾರ ಅಂದರೆ ಹಿರಿಯರು ತಮ್ಮ ಮನೆಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲೇ ಮಾತನಾಡಬೇಕು ಇಂಗ್ಲೀಷ್ ಶಿಕ್ಷಣಕ್ಕೆ ಮಕ್ಕಳನ್ನು ಕಳುಹಿಸಿದರೂ ಕನ್ನಡವನ್ನು ಓದಲು ಕಲಿಸಿಕೊಡಬೇಕು.

ಸರಕಾರದಿಂದ ಇಂಥ ಭಾಷಾ ಪ್ರೇಮವನ್ನು ಜನರಲ್ಲಿ ‘ಹೇರುವುದು’ ಕಷ್ಟ ಸಾಧ್ಯ. ನಮ್ಮ ಕರ್ನಾಟಕದ ಹಾಗೆ, ಇತರ ರಾಜ್ಯಗಳಲ್ಲೂ ಈ ಕಿಚ್ಚು ಹಬ್ಬಿದೆ. ಕೇರಳ, ತಮಿಳುನಾಡಿನಂಥ ಮಾತೃ ಭಾಷಾ ಪ್ರೇಮಿಗಳ (ಹಿಂದಿ ವಿರೋಧಿಗಳ) ರಾಜ್ಯದಲ್ಲಿ ಇಂಗ್ಲೀಷಿಗೆ ವಿರೋಧ ಇಲ್ಲ. ಆದರೆ ಹಿಂದಿಗೆ ವಿರೋಧ ಇದೆ. ಈ ಎಡಬಿಡಂಗಿತನವು ‘ಜಾಗತಿಕ ಸಮಸ್ಯೆ’ಯಾಗಿದೆ. ಆದರೆ ‘ಕಾಂತಾರ’ ಸಿನಿಮಾ ನೋಡಿದ ಮೇಲೆ ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜನರು ಸಹಜವಾಗಿ ಒಪ್ಪಿದ ಹಾಗೆ ಕನ್ನಡದ (ಮಾತೃ ಭಾಷೆಯ) ಮಹತ್ವವು ಜನರಿಗೆ ಅರಿವಾದಾಗ ಮಾತ್ರ ಕನ್ನಡ ಉಳಿಯುವುದು ಸಾಧ್ಯ.

ಪಟ್ಟಾಜೆ: ಸಾಹಿತಿಯ ಇಂದಿನ ಹೊಣೆಗಾರಿಕೆ ಏನು?

ಮೊಗಸಾಲೆ: ಇದು ಅವಾಸ್ತವಿಕ ಪ್ರಶ್ನೆ. ಸಾಹಿತಿಯಾದವನು ಯಾವತ್ತೂ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತದ್ದು ಪುಸ್ತಕದ ಬದನೆಕಾಯಿಯಾಗಿಯೇ ಹೊರತು ವಾಸ್ತವವಾಗಿ ಅಲ್ಲ. ಸಾಹಿತಿ ಎನ್ನುವವನು ನಮಗೆ ‘ಮಾರ್ಗದರ್ಶಕ’ ಎನ್ನುವ ಮನೋಭಾವ ನಮ್ಮ ಜನರಲ್ಲಿ ಹುಟ್ಟಿದಾಗ ಅವನಿಗೆ ‘ಹೊಣೆಗಾರಿಕೆ’ ಎನ್ನುವುದು ಬರುತ್ತದೆ. ಅಂಥ ಮನೋಭಾವ ನಮ್ಮಲ್ಲಿ ಖಂಡಿತ ಇಲ್ಲ. ಸಾಮಾನ್ಯವಾಗಿ ನಮ್ಮ ಜನ ಸಾಹಿತಿಗಳನ್ನು ‘ನಮಗಿಂತ ಭಿನ್ನ’ ಎಂದು ಒಪ್ಪಿಕೊಳ್ಳುತ್ತಾರೆ ನಿಜ. ಆದರೆ ವಾಸ್ತವದಲ್ಲಿ ಜನರಿಗೆ ಸಾಹಿತಿಗಳ ಮೇಲೆ ಯಾವ ನಿರೀಕ್ಷೆಯೂ ಇರುವುದಿಲ್ಲ. ಹಾಗಾಗಿ ಸಾಹಿತಿಗಳ ‘ಮಾತು’ಗಳು ವೇದಿಕೆಯ ಸಂಭ್ರಮಕ್ಕೆ ಸೀಮಿತವಾಗುತ್ತವೆಯೇ ಹೊರತು ಅದನ್ನು ಜನ ಅನುಸರಿಸಬೇಕೆಂಬಷ್ಟು ಪ್ರಭಾವ ಬೀರುವಲ್ಲಿ ‘ಅಂಥ ಭಾಷಣ’ಗಳು ನಿರೀಕ್ಷಿತ ಮಟ್ಟವನ್ನು ತಲುಪುದಿಲ್ಲ. ಒಮ್ಮೆ ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟ ಹಾಗೆ ಇವು ಹೇಳಿಕೆಗೆ ‘ಖುಶಿ’ ನೀಡುತ್ತವೆ ಅಷ್ಟೇ. ಆದರೆ ಹಿಂದೆ ಅಂದರೆ ಮಾಸ್ತಿ, ಕುವೆಂಪು, ಬೇಂದ್ರೆ, ಕಾರಂತ, ಡಿ. ವಿ. ಜಿ ಮೊದಲಾದವರ ಕಾಲದಲ್ಲಿ ಸಾಹಿತಿಗಳ ಬಗ್ಗೆ ಅದೇನೋ ಹೇಳಲಾಗದ ಒಂದು ಭಾವ ಅಕ್ಷರಸ್ಥರಲ್ಲಿ ಇತ್ತು. ಕಾರಣ ಅವರ ನಡೆ ನುಡಿ ಹಾಗಿತ್ತು. ಈಗ ಅಂಥ ಸಾಹಿತಿಗಳು ಎಲ್ಲಿದ್ದಾರೆ? ಸಿಗರೇಟು ಸೇದುತ್ತಾ, ಬಿಯರ್ ಕುಡಿಯುತ್ತಾ ‘ನಾನು ಕಥೆ ಕಾದಂಬರಿ ಬರೆದೆ’ ಎಂದರೆ ಜನರಿಗೆ ಏನು ಅನಿಸಬೇಡ?

ಹಾಗೆ ನೋಡಿದರೆ ನಮ್ಮ ಮಠಾಧೀಶರು ಈ ದಿನಗಳಲ್ಲಿ ಹೆಚ್ಚು ಸಶಕ್ತರು. ಅವರು ‘ಧರ್ಮ’ದ ಹೆಸರಲ್ಲಿ, ಜಾತಿಯ ಹೆಸರಲ್ಲಿ ಜನರನ್ನು ಒಗ್ಗೂಡಿಸಬಹುದು. ಯಾವನೇ ಒಬ್ಬ ಸಾಹಿತಿಯಿಂದ ಇಂದು (ಹಿಂದೆ ಸಾಧ್ಯ ಇದ್ದಿರಬಹುದು) ಒಂದು ಸಾವಿರ ಜನರನ್ನು ಕಲೆ ಹಾಕುವುದು ಕಷ್ಟ.

ಪಟ್ಟಾಜೆ: ನೀವು ಕವಿತೆ ಮತ್ತು ಕಾದಂಬರಿಗಳ ರಚನೆಯ ಬಗ್ಗೆ ಹೆಚ್ಚು ಆಸಕ್ತರಾಗಲು ಕಾರಣ ಏನು?

ಮೊಗಸಾಲೆ: ನನ್ನ ಅನುಭವವನ್ನು ಮತ್ತು ಕನಸುಗಳನ್ನು ಹೇಳಲು ಸಾಹಿತ್ಯದ ಯಾವ ಪ್ರಕಾರ ಅಗತ್ಯ ಎಂಬುದನ್ನು ನಾನು ಬರೆಯುವ ಮೊದಲು ಯೋಚಿಸುತ್ತೇನೆ. ತೀರಾ ಸಂಕೀರ್ಣವಾದ, ಕೆಲವು ಸಲ ಅಸ್ಪಷ್ಟವೂ ಇರಬಹುದಾದ ವಿಚಾರಗಳು ಕಾವ್ಯಕ್ಕೆ ಹೆಚ್ಚು ಒಗ್ಗಿಕೊಳ್ಳುತ್ತವೆ. ಕಾವ್ಯದಲ್ಲಿ ಅಲಂಕಾರಗಳು, ಧ್ವನಿ, ಸಂಕೇತ, ಪ್ರತಿಮೆಗಳು ಹೇಗೆ ಅದನ್ನು ಉತ್ತುಂಗಕ್ಕೆ ಎತ್ತುತ್ತದೋ, ಅಸ್ಪೃಶ್ಯತೆ ಕೂಡಾ ಇದರ ಜೊತೆ ಇರುವುದುಂಟು. ಕಾವ್ಯ ಪೂರ್ತಿ ಅರ್ಥ ಆಯಿತು ಎಂಬಂತೆ ಇರುವುದು ಕಡಿಮೆ ಸ್ವಲ್ಪ ಸ್ಪಷ್ಟ, ಸ್ವಲ್ಪ ಅಸ್ಪಷ್ಟ ಅದರ ಗುಣ, ಪೂರ್ಣ ಅರ್ಥವಾದಾಗ ಅದು ‘ವಾಚ್ಯ’ ಆಗುತ್ತದೆ. ‘ವಾಚ್ಯ’ ಎನ್ನುವುದು ಕಾವ್ಯದ ಗುಣ ಅಲ್ಲ. ಹಾಗಾಗಿ ಕಾವ್ಯ ನನಗೆ ಬೇಕಾಗಿರುವುದು ಮೇಲಿನ ಕಾರಣಕ್ಕೆ.

ಕಾದಂಬರಿ ಹಾಗಲ್ಲ. ವಿಶಾಲವಾದ ಅನುಭವವನ್ನು ಸಾಹಿತ್ಯಕ್ಕೆ ಇಳಿಸಬೇಕಾದರೆ ದೊಡ್ಡ ಚೌಕಟ್ಟು ಬೇಕು. ಅದಕ್ಕೆ ಕಾದಂಬರಿ ಸೂಕ್ತ. ಹಾಗಾಗಿ ಈ ಎರಡರಲ್ಲಿ ನನ್ನ ಆಯ್ಕೆ ಸಹಜವಾಗಿ ಇರುತ್ತದೆ ಮತ್ತು ಆ ರೀತಿಯಲ್ಲಿ ಅದು ಹೆಚ್ಚು ಯಶಸ್ವಿಯಾಗುತ್ತದೆ ಎಂದು ನನ್ನ ಅನುಭವ.

ಪಟ್ಟಾಜೆ: ನೀವು ಬರೆದ ಕತೆಗಳು ಸಂಖ್ಯೆಯ ದೃಷ್ಟಿಯಲ್ಲಿ ಕಡಿಮೆ ಎಂಬ ಮಾತಿದೆ ಯಾಕೆ?

ಮೊಗಸಾಲೆ: ಹೌದು. ಒಟ್ಟಾರೆಯಾಗಿ ಹೇಳುವುದಾದರೆ ಕಡಿಮೆಯೇ. ಸಣ್ಣಕತೆ ಎನ್ನುವುದು ಅದ್ಭುತವಾದ ಕಲಾಪ್ರಕಾರವಾಗಿದ್ದು ಅದನ್ನು ಬರೆಯುವುದು ಸುಲಭವಲ್ಲ. ವಾಸ್ತವವಾಗಿ ಅದನ್ನು ಕೆತ್ತುವುದು ಎನ್ನಬಹುದೇನೋ ಅದರ ವಸ್ತುಗಳೂ ಅಷ್ಟೆ. ‘ಕತೆ’ ಇರಲೂಬಹುದು. ‘ಇಲ್ಲದೆ’ಯೂ ಇರಬಹುದು. ಅದು ತೆರೆದುಕೊಳ್ಳುವ ರೀತಿಯಿಂದ ಅಂದರೆ ‘ಕತೆ’ ಎನ್ನುವುದು ತನ್ನನ್ನು ತಾನೇ ಕತೆಯಲ್ಲಿ ತೆರೆದುಕೊಂಡು ‘ಕತೆ’ಯಾಗುತ್ತದೆ. ಇಲ್ಲಿ ತಂತ್ರ, ಶೈಲಿ, ಕೊನೆಗೆ ಅದು ಕೊಡಬಹುದಾದ ‘ಪಂಚ್’ ಇಲ್ಲವೇ ‘ಸಂದೇಶ’ ಎಲ್ಲವೂ ಮುಖ್ಯವೇ. ಇಂಥ ಪ್ರಕಾರವನ್ನು ಚೆನ್ನಾಗಿ ದುಡಿಸಿಕೊಳ್ಳುವುದು ನನಗೆ ತುಸು ಕಷ್ಟವೇ. ಕಾದಂಬರಿಯಾದರೆ ವಿಸ್ತಾರವಾದ ಕ್ಯಾನ್ವಾಸಿನದ್ದಾಗಿದ್ದು, ಅದರಲ್ಲಿ ‘ಹೇಳಬೇಕಾದದ್ದನ್ನು ಹೇಳುವುದು’ ಸುಲಭ. ಕತೆಯಲ್ಲಿ ತುಸು ಕಷ್ಟ. ನಾನು ಉಡುಪಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಬರೆದ ಸುಮಾರು ಇಪ್ಪತ್ತಕ್ಕೂ ಮಿಕ್ಕ ಕತೆಗಳ ಪೈಕಿ ಯಾವುದೂ ಈಗ ಲಭ್ಯವಿಲ್ಲ. ಗೆದ್ದಲು ಹಿಡಿದು ಕಳೆದು ಹೋಗಿವೆ. ಆದರೂ ನಾನು ಸುಮಾರು ಎಪ್ಪತ್ತೈದು ಕತೆಗಳನ್ನು ಬರೆದಿರಬಹುದು. ಅವುಗಳಲ್ಲಿ ಈಗ ಪುಸ್ತಕ ರೂಪದಲ್ಲಿ ಬಂದಿರುವುದು ಕೇವಲ ನಲವತ್ತು ಮಾತ್ರ. ಇನ್ನೂ ಎಂಟು ಕತೆಗಳು ಪುಸ್ತಕ ರೂಪದಲ್ಲಿ ಬರಲಿಲ್ಲ. ಅದಕ್ಕೆ ಒಂದಿಷ್ಟು ಕತೆಗಳನ್ನು ಸೇರಿಸಿ ಪ್ರಕಟಿಸಬೇಕೆಂಬ ಆಸೆ ಇದೆ. ಆದರೆ ಆಗುತ್ತಿಲ್ಲ.

ಪಟ್ಟಾಜೆ: ನಿಮ್ಮ ಕೆಲವು ಕಾದಂಬರಿಗಳಲ್ಲಿ ‘ಉಪ್ಪು’, ‘ತೊಟ್ಟಿ’, ‘ಧರ್ಮಯುದ್ಧ’, ‘ಮುಖಾಂತರ’ ‘ಉಲ್ಲಂಘನೆ’ ಮೊದಲಾದವುಗಳಲ್ಲಿ ರಾಜಕೀಯ ಸನ್ನಿವೇಶಗಳು ಕಾಣಿಸಿಕೊಳ್ಳಲು ಪ್ರತ್ಯೇಕ ಕಾರಣಗಳಿವೆಯೇ?

ಮೊಗಸಾಲೆ: ರಾಜಕೀಯ ಎನ್ನುವುದು ಪ್ರಜಾಪ್ರಭುತ್ವದ ದೇಶದಲ್ಲಿ ಪ್ರಜೆಗಳ ಒಂದು ಭಾಗವಾಗಿದೆ. ಪ್ರಜೆಗಳೇ ಪ್ರಭುಗಳು ಎಂಬ ತತ್ವ ಇಲ್ಲಿದ್ದರೂ, ಪ್ರಭುತ್ವ ಎನ್ನುವುದು ಪ್ರಜೆಗಳಿಂದ ದೂರವೇ ನಿಂತ ಹಾಗೆ ಇರುತ್ತದೆ. ಇದೊಂದು ಆದರ್ಶದ ಸಿದ್ಧಾಂತ. ಹೇಳಲಿಕ್ಕೆ ಕೇಳಲಿಕ್ಕೆ ರಮ್ಯ. ಆದರೆ ವಾಸ್ತವದಲ್ಲಿ ಇಲ್ಲಿ ಪ್ರಜೆ ನಗಣ್ಯ. ಪ್ರಭುವೇ ಸರ್ವಸ್ವ. ಈ ಸ್ಥಿತಿಯಿಂದ ಹೊರಬರಲು ಇರುವ ದಾರಿ ಚುನಾವಣೆಯೊಂದೇ ಅಲ್ಲ. ಚುನಾವಣೆಯಿಂದ ಅದು ಆಗುವುದೂ ಇಲ್ಲ. ಆದರೆ ಪ್ರಭುತ್ವದ ಇದಿರು ‘ಜನಾಭಿಪ್ರಾಯ’ ಮುಂದೆ ಬಂದರೆ ಪ್ರಭುತ್ವವೂ ಮೆತ್ತಗಾಗುತ್ತದೆ ಎಂದು ನಮಗೆ ಗೊತ್ತು. ಈ ಹಿನ್ನೆಲೆಯಲ್ಲಿ ಜನಾಭಿಪ್ರಾಯವನ್ನು ರೂಪಿಸುವುದರಲ್ಲಿ ಮಾಧ್ಯಮಗಳು ಹೇಗೆ ಮುಖ್ಯವೋ ಹಾಗೆ ಸ್ವಲ್ಪ ಮಟ್ಟಿಗೆ ಸಾಹಿತ್ಯವೂ ‘ಕೆಲಸ’ ಮಾಡಬಹುದು. ರಾಜಕೀಯದ ನಿಜವಾದ ಮುಖದರ್ಶನವನ್ನು ಒಂದು ಮಿತಿಯಲ್ಲಿ ಅನಾವರಣ ಮಾಡಬಹುದು ಎಂಬ ನಂಬಿಕೆ ನನಗಿದೆ. ನಮಗೆ ತಿಳಿದೋ ತಿಳಿಯದೆಯೋ ರಾಜಕಾರಣ ಎನ್ನುವುದು ನಮ್ಮ ದೈನಂದಿನ ಬದುಕಿನಲ್ಲೂ ಕೈಯಾಡಿಸುತ್ತಿರುತ್ತದೆ. ರಾಜಕಾರಣ ಎನ್ನುವುದಕ್ಕೆ ಪಕ್ಷ ರಾಜಕಾರಣ ಒಂದೇ ಮುಖವಲ್ಲ ಧರ್ಮ ರಾಜಕಾರಣ, ಕುಟುಂಬ ರಾಜಕಾರಣ, ಸಾಹಿತ್ಯ ರಾಜಕಾರಣವೂ ಮುಂತಾದ ಅನೇಕ ಮುಖಗಳಿದ್ದು, ಈ ಪಕ್ಕಾ ರಾಜಕಾರಣಗಳನ್ನೆಲ್ಲ ಒಂದು ಮಿತಿಯೊಳಗೆ ಸಾಹಿತ್ಯ ಕೃತಿಗಳಲ್ಲಿ ತರಬೇಕು ಎನ್ನುವುದು ನನ್ನ ನಿಲುವು. ಆದ್ದರಿಂದ ನೀವು ಉದಾಹರಿಸದ ಕೃತಿಗಳಲ್ಲದೆ ನನ್ನ ಇತರ ಕೃತಿಗಳಲ್ಲೂ ರಾಜಕಾರಣದ ವಾಸನೆ ಇದೆ. ಹಿಂದೆ ನನ್ನ ಕವಿತೆಗಳಲ್ಲಿ ‘ರಾಜಕೀಯ’ದ ವಾಸನೆ ಹೆಚ್ಚೆನ್ನುವಂತೆ ಇತ್ತು. ಖ್ಯಾತ ಕಾದಂಬರಿಕಾರ ಕುಂ. ವೀ ಅವರು ಒಮ್ಮೆ ನನ್ನನ್ನು ಖಾಸಗಿಯಾಗಿ ‘ರಾಜಕೀಯ ಕವಿ’ ಎಂದದ್ದೂ ಉಂಟು.

ಪಟ್ಟಾಜೆ: ನಿಮ್ಮ ಇತ್ತೀಚಿನ ಕೃತಿಗಳು ಯಾವುವು? ಅವುಗಳು ಏನನ್ನು ಹೇಳುತ್ತವೆ?

ಮೊಗಸಾಲೆ: ‘ಇದ್ದೂ ಇಲ್ಲದ್ದು’ ಕಾದಂಬರಿಯ ನಂತರ ನಾನು ‘ನೀರು’ ಎಂಬ ಕಾದಂಬರಿಯನ್ನು ಬರೆದಿದ್ದೇನೆ (ಆಗೋಸ್ತ್ 2021). ಇದು ಒಂದು ಕುಟಂಬ ರಾಜಕೀಯದ ಕಥಾನಕ. ಸಾಮಾನ್ಯವಾಗಿ ಹವ್ಯಕರಲ್ಲಿ ಅದರಲ್ಲೂ ಸಹೋದರೊಳಗೆ ‘ಹಿಸ್ಸೆ’ (ಪಾಲು) ಆದಾಗ ನೀರಿನ ವ್ಯಾಜ್ಯಗಳು ಹುಟ್ಟಿಕೊಳ್ಳುವುದು ಸಾಮಾನ್ಯ. ಹವ್ಯಕ ಸಮುದಾಯದಲ್ಲಿ ಅಡಿಕೆ ತೋಟದಲ್ಲಿರುವ ಒಂದು ಮರವೂ ತನ್ನ ಪಾಲಿಗೆ ಬರಬೇಕೆಂದು ಅಣ್ಣ ತಮ್ಮಂದಿರೊಳಗೆ ಜಗಳವಾಗುವುದು, ಆಮೇಲೆ ಅದು ನ್ಯಾಯಾಲಯಕ್ಕೆ ಹೋಗುವುದು ಸಾಮಾನ್ಯ. ಆ ವ್ಯಾಜ್ಯ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿನ ತನಕ ಮುಂದುವರಿಯತ್ತದೆ ಎಂಬ ಮಾತು ಅಥವಾ ‘ಲೇವಡಿ’ ಪ್ರಚಾರದಲ್ಲಿದೆ. ಈ ಕಾದಂಬರಿಯ ‘ವಸ್ತು’ ನನ್ನ ಕುಟಂಬದಲ್ಲಿ ನಡೆದುದೇ ಆಗಿದ್ದರೂ, ಪೂರ್ತಿ ಅದೇ ಆಗಿರದೆ ಈ ಹಿನ್ನಲೆಯಲ್ಲಿ ಸಾಂಕೇತಿಕವಾಗಿ ಬರುತ್ತದೆ. ಇಂತಹ ಜಗಳಗಳಲ್ಲಿ ಯಾವ ವಸ್ತುವೇ ಕಾರಣವಾಗಿ ಆ ‘ಜಗಳ’ವು ಹುಟ್ಟಿಕೊಳ್ಳುತ್ತದೋ, ಅದಕ್ಕಿಂತ ಮೇಲಾಗಿ ಇರುವುದು ಸ್ವಪ್ರತಿಷ್ಠೆ ಅಥವಾ ಜಗಳ ಕಾಯುವ ಇಬ್ಬರಲ್ಲೂ ಇರುವ ‘ಮೇಲರಿಮೆ’.

ಇಂಥ ‘ನೀರು’ ಕಾದಂಬರಿಯಲ್ಲಿ ಸೋದರರಿಬ್ಬರಲ್ಲಿ ಜಗಳ ಪ್ರಾರಂಭವಾಗುವುದು ಹಿಸ್ಸೆಯಲ್ಲಿ ಅಲ್ಲ. ಹಿಸ್ಸೆಯಲ್ಲಿ ಇಬ್ಬರಿಗೂ ಸಿಕ್ಕಿದ ಒಂದು ಕೆರೆ (ಕೊಳ)ಯ ನೀರಿನ ಹಕ್ಕಿನ ವಿಚಾರದಲ್ಲಿ. ಅದರ ಪ್ರಕಾರ ಆ ಕೆರೆಯ ನೀರು ಇಬ್ಬರ ಕೃಷಿಗೂ ಸಮಾನವಾಗಿ ಇದೆಯಾದರೂ ಹಿಸೆಯಾದ ನಂತರ ಆ ಸಹೋದರರಲ್ಲಿ ದೊಡ್ಡವನು ತನ್ನ ಕೃಷಿಗೆ ಆ ಕೆರೆಯ ನೀರು ಸಾಕಾಗದು ಎಂದು ಕೊಳವೆ ಬಾವಿಯನ್ನು ತೆಗೆಸಲು ಮುಂದಾಗುತ್ತಾನೆ. ಕೊಳವೆ ಬಾವಿಯಲ್ಲಿ ಅವನಿಗೆ ಧಾರಾಳ ನೀರು ಸಿಗುತ್ತದೆ. ಆಗ ಅವನ ತಮ್ಮ ‘ನಿನ್ನ ನೀರಿನ ಹಕ್ಕನ್ನು ತಮ್ಮನಾದ ನನಗೆ ಬಿಟ್ಟು ಕೊಡಬಹುದಲ್ಲ?’ ಎಂಬ ಪ್ರಸ್ತಾಪವನ್ನು ಮುಂದಿಡುತ್ತಾನೆ. ಆದರೆ ಅಣ್ಣ ಆ ಹಕ್ಕನ್ನು (ಅದು ಅವಶ್ಯ ಇಲ್ಲದಿದ್ದರೂ) ಬಿಟ್ಟು ಕೊಡುವುದಿಲ್ಲ. ಇದರಿಂದಾಗಿ ಇದು ಒಂದು ರೀತಿಯಲ್ಲಿ ‘ಭರತ ಬಾಹುಬಲಿಯ’ ‘ಯುದ್ಧ’ವೇ ಆಗಿ ಪರಿಣಮಿಸಿ ಮುಂದೆ ಅನೇಕ ತಿರುವುಗಳನ್ನು ತೆಗೆದುಕೊಂಡು ಆ ಊರಿನ ರಾಜಕೀಯದಲ್ಲೂ ಒಳಗೊಳ್ಳುತ್ತದೆ ಅಥವಾ ಪ್ರಭಾವ ಬೀರುತ್ತದೆ. ಈ ಇಬ್ಬರಲ್ಲೂ ತಮ್ಮ ಮನೆಗೆಲಸದ ಹೆಣ್ಣಿನ ಬಗ್ಗೆ ಇದ್ದ ಲಾಲಸೆ ಮತ್ತು ತಮ್ಮನಿಗೆ ಹೆಣ್ಣು ಒದಗದೆ ಹೋದ ನಿರಾಶೆಯಿಂದ ಹುಟ್ಟಿದ ಆಕ್ರೋಶವೇ ಈ ‘ಜಗಳ’ದ ಹಿಂದಿನ ಕಾರಣವೆನ್ನುವುದು ಕೊನೆಗೆ ‘ಸ್ಫೋಟ’ವಾಗುತ್ತದೆ. ಹೀಗೆ ‘ನೀರು’ ಎನ್ನುವುದು ‘ನೀರೆ’ಯಾಗಿಯೂ ಜೀವನಕ್ಕೆ ಅವಶ್ಯವಾದ ‘ನೀರಾಗಿ’ಯೂ ಧ್ವನಿಸುವುದು ಈ ಕಾದಂಬರಿಯ ವಿಶೇಷತೆಯಾಗಿದೆ.

ಈ ಕಾದಂಬರಿ ಬರೆದಾದ ಮೇಲೆ ಈ ವರ್ಷ ಮತ್ತೆ ಇದೇ ಅಕ್ಟೋಬರ್‌ ತಿಂಗಳಲ್ಲಿ (2022) ಮತ್ತೊಂದು ಕಾದಂಬರಿಯನ್ನು ಬರೆದೆ. ಇದು ಒಂದು ಊರು ನಿಧಾನವಾಗಿ ಹೇಗೆ ರಾಜಕೀಕರಣಗೊಳ್ಳುತ್ತಿದೆ ಎನ್ನುವುದನ್ನು ವಾಸ್ತವದ ನೆಲೆಯಲ್ಲಿ ಅನಾವರಣ ಮಾಡುವ ಪ್ರಯತ್ನ. ಈಗಾಗಲೇ ನಾನು ಹೇಳಿದ ಹಾಗೆ ರಾಜಕೀಯ ಎನ್ನುವುದು ನಮ್ಮ ಬದುಕಿನ ಭಾಗವಾಗಿ, ಅದು ನಮ್ಮನ್ನು ಕದಂಬ ಬಾಹುಗಳಲ್ಲಿ ಅಪ್ಪಿಕೊಳ್ಳುತ್ತದೆ. ನೀವು ‘ಬೇಡ’ ಎಂದರೂ ಬೆಂಬಿಡದ ಹಾಗೆ, ಅದು ಬೆಂಬತ್ತಿ ನಮ್ಮನ್ನು ತನ್ನ ಒಳಗೆ ಎಳೆದುಕೊಳ್ಳುವುದು ಇನ್ನೊಂದು ರೀತಿಯ, ‘ಕ್ರೌರ್ಯವೇ’ ಆಗುತ್ತದೆ. ಈ ಕ್ರೌರ್ಯವೇ ಈ ಕಾದಂಬರಿಯನ್ನು ‘ನಡೆಸುತ್ತಿದೆ’. ಹಾಗಾಗಿ ಈ ಕಾದಂಬರಿಗೆ ‘ಊರೆಂಬುವ ಊರಲ್ಲಿ’ ಎಂಬ ಹೆಸರನ್ನು ಇಡಲು ಇಚ್ಛಿಸಿದ್ದೇನೆ. ಅದು ‘ಸೀತಾಪುರ’ ಎನ್ನುವ ಕಾಲ್ಪನಿಕ ಊರಲ್ಲಿ ನಡೆಯುತ್ತಿದೆಯಾದರೂ ಅದು ಭಾರತದ ಯಾವುದೇ ಹಳ್ಳಿಗೂ ಅನ್ವಯಿಸಬಹುದಾಗಿದೆ. ಅಂದರೆ ಎಲ್ಲಾ ಹಳ್ಳಿಗಳೂ ಒಂದೇ ಎಂಬಂತಾಗಿ ತನ್ನಲ್ಲಿ ಅಸ್ಮಿತೆ ಎನ್ನುವುದು ಇಲ್ಲದಂತಾಗಿ, ರಾಜಕೀಯವೇ ಇದಕ್ಕೆ ಕಾರಣವಾಗುತ್ತಿದೆ ಎನ್ನುವುದು ಈ ಕೃತಿಯ ಹಿಂದಿನ ಆಶಯ.

ಪಟ್ಟಾಜೆ: ಯುವ ಪೀಳಿಗೆಯ ಸಾಹಿತ್ಯ ಚಟುವಟಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಮೊಗಸಾಲೆ: ತಲೆಮಾರು ಎನ್ನುವುದು ಮುಂದುವರಿಯುತ್ತಾ ಹೋದ ಹಾಗೆ ಕೌಶಲ್ಯ ಎನ್ನುವುದು ಹಿಂದಿಗಿಂತ ಹೆಚ್ಚು ಶಕ್ತ ಅಥವಾ ಹೆಚ್ಚೋ ಎಂಬಂತೆ ಮುಂದುವರಿಯುವುದು ನಮ್ಮ ಅನುಭವ ಅಥವಾ ಪ್ರಕೃತಿ ನಿಯಮ. ಪ್ರತಿಭೆ, ಕೌಶಲ್ಯ, ಮತ್ತು ಚಿಂತನೆಗಳಲ್ಲಿ ನಾವು ನಮ್ಮ ಹಿರಿಯರಿಗಿಂತ ಮುಂದುವರಿದಿದ್ದೇವೆ ಎನ್ನುವುದನ್ನು ನಾನೂ ನೀವೂ ಒಪ್ಪಿಕೊಳ್ಳುವುದಾದರೆ ನಮ್ಮ ಮುಂದಿನ ಪೀಳಿಗೆಯೂ ಖಂಡಿತ ನಮಗಿಂತ ಮುಂದಿರುತ್ತದೆ ಎನ್ನುವುದನ್ನು ಒಪ್ಪಬೇಕು. ಇದು ಸಾಹಿತ್ಯ ಕ್ಷೇತ್ರಕ್ಕೂ ಅನ್ವಯಿಸುವ ಮಾತು. ಪಂಪ ರನ್ನರ ಕಾಲಕ್ಕೆ ಇದನ್ನು ಅನ್ವಯಿಸಬಹುದೇ ಎಂದರೆ ಪಂಪನಿಗಿಂತ ರನ್ನ, ಜನ್ನ ‘ದೊಡ್ಡ’ವರಲ್ಲ. ಆದರೆ ಪಂಪನಿಗಿಂತ ‘ಕಡಿಮೆ’ಯವರಲ್ಲ. ವಚನ ಯುಗ ಬಂದಾಗ, ಆ ಸಾಹಿತ್ಯವು ಆ ಕಾಲದ ಸಮೃದ್ಧ ಬೆಳೆಯಾಗಿತ್ತು. ಹಿಂದೆ ಪಂಪರನ್ನಾದಿಗಳು ಏನು ಹೇಳಿದ್ದರೋ ಅದಕ್ಕೆ ಕಡಿಮೆ ಇಲ್ಲದಂತೆ ಬೇರೊಂದು ರೀತಿಯ ಸಾಹಿತ್ಯವಾಗಿ ವಿಜೃಂಭಿಸಿತು. ಕಳೆದ ಶತಮಾನಕ್ಕೆ ಬಂದರೆ ಬೇಂದ್ರೆ, ಕುವೆಂಪು, ಅಡಿಗ, ಕಾರಂತ, ಮಾಸ್ತಿ, ಪುತಿನ ಎಲ್ಲಾ ದೈತ್ಯ ಪ್ರತಿಭೆಗಳೇ. ಅವರ ನಂತರದವರಾದ ಲಂಕೇಶ, ಅನಂತಮೂರ್ತಿ, ಭೈರಪ್ಪ, ಕಂಬಾರ, ಕಾರ್ನಾಡ ಮೊದಲಾದವರೆಲ್ಲರೂ ಆ ಮಟ್ಟದವರೇ. ಇದನ್ನೆಲ್ಲ ಯಾಕೆ ಹೇಳುತ್ತೇನೆಂದರೆ, ನನ್ನ ನಂತರದ ತಲೆಮಾರಿನ ಲೇಖಕರು (ಎಲ್ಲರೂ ಅಲ್ಲ) ನನಗಿಂತ ಚೆನ್ನಾಗಿಯೇ ಬರೆಯಬಲ್ಲರು ಎಂಬ ನಿರೀಕ್ಷೆ ನನಗೆ ಇದೆ. ನಿರಾಶೆ ಖಂಡಿತ ಇಲ್ಲ.

ಆದರೆ ಒಂದು ಮಾತು. ಯಾವುದೇ ಕೃತಿ ಹೆಚ್ಚು ಶಕ್ತಿಶಾಲಿಯಾಗುವುದು ಅದು ಕೃತಿಕಾರನ ಜೀವನಾನುಭವದ ಗಟ್ಟಿತನದಿಂದ. ಇಂದಿನ ನಮ್ಮ ಯುವಕರ ಜೀವನಾನುಭವವು ನಮ್ಮ ಜೀವನಾನುಭವಕ್ಕಿಂತ ಭಿನ್ನ. ಹಾಗಾಗಿ ಇದರಲ್ಲಿ ಯಾವುದು ಶ್ರೇಷ್ಠ, ಯಾವುದು ಕನಿಷ್ಠ ಎಂಬ ಪ್ರಶ್ನೆ ಹುಟ್ಟುವುದಿಲ್ಲ. ಪ್ರಶ್ನೆ ಇರುವುದು ಲೇಖಕನಾದವನು ತಾನು ಬದುಕಿದ ಕಾಲಾವಧಿಯಲ್ಲಿ ಬದುಕಿಗೆ ಹೇಗೆ ಸ್ಪಂದಿಸಿದ, ಆ ಸ್ಪಂದನೆ ಅವನ ಕೃತಿಯಲ್ಲಿ ಹೇಗೆ ಅನಾವರಣ ಆಯಿತು ಎಂಬ ರೀತಿಯಿಂದ.

ಇಷ್ಟಕ್ಕೂ ಸಾಹಿತ್ಯದಲ್ಲಿ ಶ್ರೇಷ್ಠತೆಯ ವ್ಯಸನ ಬೇಕೋ ಬೇಡವೋ ಎಂಬ ಪ್ರಶ್ನೆ ನವ್ಯದ ಕಾಲದಲ್ಲಿ ‘ಅಬ್ಸೇಶನ್’ ಥರ ಆಯಿತು. ಕಾರಣ ಅದು ವ್ಯಕ್ತಿ ಕೇಂದ್ರಿತವಾದ ನಿಲುವು. ಆ ನಂತರ ವ್ಯಕ್ತಿಗಿಂತ ಸಮಷ್ಟಿ ಮುಖ್ಯ ಎನ್ನುವುದು ದಲಿತ ಬಂಡಾಯ ಸಾಹಿತ್ಯ ಪ್ರಕಾರದಲ್ಲಿ ಮುಂದೆ ಬಂತು.

ಆ ಪ್ರಕಾರದ ಸಾಹಿತ್ಯದಲ್ಲಿ ಶ್ರೇಷ್ಠತೆಯ ವ್ಯಸನ ಎನ್ನುವುದು ಅದರ ಪ್ರಾರಂಭದ ದಿನಗಳಲ್ಲಿ ಇದ್ದ ಹಾಗೆ ಇರಲಿಲ್ಲ. ನಿಧಾನವಾಗಿ ಅಲ್ಲೂ ಈಗ ಅದು ಬೆಳೆದದ್ದು ಹೆಚ್ಚಲ್ಲದಿದ್ದರೂ ವಿಪರ್ಯಾಸ.


ಪಟ್ಟಾಜೆ: ಹೊಸ ಪೀಳಿಗೆಯ ಬರೆಹಗಾರರಿಗೆ ನೀವು ಏನಾದರೂ ಹೇಳುವುದಿದೆಯೇ?

ಮೊಗಸಾಲೆ: ಇಲ್ಲ. ಯಾಕೆಂದರೆ ಪ್ರತಿಯೊಬ್ಬನೂ ಅವನವನ ಶಕ್ತಿ, ಪ್ರಯತ್ನ, ಮತ್ತು ಪ್ರತಿಭೆಯಿಂದ ಮೇಲೆ ಬರಬೇಕು ಎನ್ನುವುದು ನನ್ನ ನಿಲುವು. ‘ಉದ್ಧರೇತ್ ಆತ್ಮನಾತ್ಮಾನಾಂ’ ಎನ್ನುವ ಮಾತಿದೆಯಲ್ಲ ಹಾಗೆ! ಅಂದರೆ ‘ನಿನ್ನನ್ನು ನೀನೇ ಉದ್ಧರಿಸು’ (ಎತ್ತಿಕೋ) ಎನ್ನುವ ಹಾಗೆ. ನಾನು ಆಗಲೇ ಹೇಳಿದ ಹಾಗೆ ಲೇಖಕನಾದವನಿಗೆ ಅವನ ‘ಬಾಳ್ವೆಯೇ ಬೆಳಕು’. ಹೊರಗಿನ ದೇವರು ಖಂಡಿತ ಅಲ್ಲ. ಸಮೃದ್ಧ ಜೀವನಾನುಭವವೇ ಸಾಹಿತ್ಯದ ಮಹತ್ವವನ್ನು ಮತ್ತು ಸಮೃದ್ಧಿಯನ್ನು ಬೆಳೆಸಬಹುದೇ ಹೊರತು ಕಲ್ಪನೆ ಕನಸುಗಳಿಂದ ಅಲ್ಲ. ನನ್ನ ಕೃತಿಗಳಿಲ್ಲ ಮುಖ್ಯವಾಗಿ ಕಾದಂಬರಿ ಮತ್ತು ಸಣ್ಣ ಕತೆಗಳು ನನ್ನ ಜೀವನಾನುಭವದ ಮೇಲೆ ನಿಂತಿವೆ. ನಾನು ಅನುಭವಿಸಿದ, ನೋಡಿದ, ಕೇಳಿದ ವಿಷಯಗಳೇ ನನ್ನ ಕೃತಿಗಳ ವಸ್ತು. ಅವುಗಳಲ್ಲಿ ನನ್ನ ಚಿಂತನೆ ಮತ್ತು ಭಾವವನ್ನು ನಾನು ತುಂಬುತ್ತಿರುವುದಕ್ಕಿಂತ ನನಗೆ ನನ್ನ ಕೃತಿಗಳು ‘ಗಟ್ಟಿ’ಯಾಗಿವೆ ಎಂಬ ಭರವಸೆ ಇದೆ. ಈ ಕಾರಣದಿಂದ ನನ್ನ ಉಪದೇಶ ಅಥವಾ ಸಂದೇಶದಿಂದ ಯಾವುದೇ ಯುವ ಲೇಖಕನು ಬೆಳೆಯಲಾರ. ಆದರೂ ಅವರಿಗೆ ಹೇಳಬಹುದಾದ ಮಾತೆಂದರೆ ‘ಕೇಳು’ವುದಕ್ಕಿಂತ ಹೆಚ್ಚು ‘ನೋಡು’ವುದನ್ನು ಕಲಿತುಕೊಳ್ಳಿ.