ಯಾವ ಯಾವ ಕಾರಣಕ್ಕೆ ದಾಂಪತ್ಯಗಳು ಮುರಿದು ಬೀಳ್ತಿವೆ ಎಂಬುದು ಚರ್ಚೆಗೆ ನಿಲುಕುವ ವಿಷಯವೇ ಅಲ್ಲ. ಈಗ ಪ್ರತಿಮನೆಯಲ್ಲೂ ವಿಚ್ಚೇದನದ ಕೇಸ್‌ಗಳು, ಹೆಣ್ಣು-ಗಂಡಿನ ವರ್ತನೆ, ಮನಃಸ್ಥಿತಿಯ ಕುರಿತಾದ ದೂರುಗಳು, ಸ್ತ್ರೀವಾದ, ನೊಂದಗಂಡಂದಿರ ಸಂಘದ ಅಳಲುಗಳು ಯಥೇಚ್ಛವಾಗಿವೆ. ಯಾರ ಪರವೂ, ವಿರುದ್ಧವೂ ನಿಲ್ಲಲಾಗದ, ನಿಂತು ಸಾಧಿಸಲಾಗದ ಸಿಕ್ಕಾಗಿ ಉಳಿದಿವೆ. ಆದರೆ ಮಕ್ಕಳು ಬೇಕು ಅಥವಾ ಬೇಡ ಎಂಬ ಕಾರಣಕ್ಕಾಗಿ ನಡೆಯುತ್ತಿರುವ ದಾಂಪತ್ಯ ಸಮರಗಳ ಬಗ್ಗೆ ಸ್ವಲ್ಪ ಗಮನಹರಿಸಬಹುದು.
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ ನಿಮ್ಮ ಓದಿಗೆ
ಅವಳು ಹೇಳಿ ಮುಗಿಸಿಯಾಗಿತ್ತು. ಇದಾಗಿ ಮೂರು ತಿಂಗಳು ಕಳೆದರೂ, ತನ್ನಷ್ಟಕ್ಕೆ ಒಮ್ಮೆ ಮನಸ್ಸಿನ ಮೂಲೆಯಿಂದ ದಿಗ್ಗೆಂದು ನೆನಪು ಹೊತ್ತಿ ಉರಿಯತೊಡಗುತ್ತದೆ. ಪ್ರಶ್ನೆಗಳು ಮುಗಿದು ಉತ್ತರದ ಒಂದಕ್ಷರವೂ ಶುರುವಾದ ಉದಾಹರಣೆಯಿಲ್ಲ. ಮರೆವು ದೇವರಿತ್ತ ವರವಲ್ಲವೆ? ಇನ್ಯಾವುದೋ ವಿಷಯ ಮುನ್ನೆಲೆಗೆ ಬಂದು ಮೂಕವಾದ ಮನಸ್ಸಿಗೆ ಮಾತು ಕಲಿಸಿ ಹೊರಡುತ್ತದೆ. ಕೆಲವೊಮ್ಮೆ ಯಾವುದರಿಂದಲೂ ಸಿಗದ ಸಂತೈಕೆ ಬರಹ ರೂಪಕ್ಕಿಳಿಸಿದಾಗ ಸಿಗುವುದುಂಟು. ಹಾಗೆ ಬರೆದು ನಾನು ಹಗುರಾಗಬಹುದು. ಆದರೆ ಇಂತಹ ಮತ್ತು ಇದಕ್ಕಿಂತ ಘೋರ ಪರಿಸ್ಥಿತಿಯಲ್ಲಿ ಇರುವವರು ಹಗುರಾಗಬಹುದೆ? ಮತ್ತೆ ಉಳಿಯುವುದು ಪ್ರಶ್ನೆ ಮಾತ್ರ.
ಇದೊಂದು ಬುದ್ಧಿ ಅಷ್ಟಾಗಿ ಬೆಳೆಯದ ಸ್ವಲ್ಪ ಪೆದ್ದು ಎನಿಸುವ, ನಿಧಾನಸ್ಥೆ ಹುಡುಗಿಯ ಅವಸ್ಥೆ. ತವರಿನಲ್ಲಿ ಎಣ್ಣೆಬತ್ತಿಗೆ ನೇರ. ವಿದ್ಯಾವಂತರಲ್ಲ. ಹೇಗೋ ದುಡ್ಡುಕಾಸು ಹೊಂದಿಸಿ ದೂರದ ಬಂಧುವನ್ನು ಹುಡುಕಿ ಮದುವೆ ಮಾಡಿದ್ದಾರೆ. ಈ ಹುಡುಗಿಗಿರುವ ಆರೋಗ್ಯ ಸಮಸ್ಯೆಯಿಂದ ಮಕ್ಕಳಾಗಿಲ್ಲ. ಅದಕ್ಕೆ ಔಷಧಿ ಕೊಡಿಸುವ ಮನಸ್ಸು ಅತ್ತೆಮನೆಯವರಿಗಿಲ್ಲ. ತವರಿನವರು ಕೊಡಿಸುತ್ತೇವೆಂದರೂ ಕಳಿಸುವ ಕಾಳಜಿಯಿಲ್ಲದ ಜನ. ಆ ಹುಡುಗಿ ಹೊರಗಾದರೆ, ದನಕ್ಕೆ ಬಡಿದಂತೆ ಗಂಡ ಬಡಿಯುತ್ತಾನೆ. ರಾಜಿ, ಸಂಧಾನ, ಪಂಚಾಯಿತಿ ಎಲ್ಲವೂ ಸೋಲುವುದು, ಮಕ್ಕಳಿದ್ದಿದ್ದರೆ ಯಾಕೆ ಹೀಗಾಗುತ್ತಿತ್ತು ಎಂಬ ಪ್ರಶ್ನೆಯೊಂದಿಗೆ. ಗಂಡ ಬಡಿದು ಕೊಂದರೆ ಎಂಬ ಭಯ, ಮನೆಗೆ ಕರೆದುಕೊಂಡು ಬಂದರೆ ಆಕೆಯ ಭವಿಷ್ಯದ ಕಥೆಯೇನು ಎಂಬ ಆತಂಕ, ಈ ಮಧ್ಯೆ ಎಲ್ಲ ವಿಷಯದಲ್ಲೂ ತಮ್ಮದೊಂದು ಮಹದಾಭಿಪ್ರಾಯ ದಾಖಲಿಸಿಯೇ ತೀರಬೇಕೆಂದು ಟೊಂಕ ಕಟ್ಟಿ ನಿಂತ ಸಮಾಜ, ಬಂಧು ಮಿತ್ರರು. ವಿದ್ಯೆ, ಹಣ, ಚೂರು ಆಸ್ತಿಯಿದ್ದಿದ್ದರೆ ಪರಿಹಾರವಾಗುತ್ತಿತ್ತೇನೋ ಅನ್ನಿಸುವುದು ಸಹಜ. ಆದರೆ ವಿಷಮ ದಾಂಪತ್ಯವೆಂಬುದು ವಿದ್ಯೆ, ಜಾತಿ, ಅಂತಸ್ತು, ಹಣ, ಮತ್ತಿತರ ವಿಷಯಗಳನ್ನು ಮೀರಿ, ಎಲ್ಲಾ ಜಾತಿ, ವರ್ಗ, ಸ್ತರಗಳಲ್ಲೂ ಸಾಮಾನ್ಯವಾಗಿ ಕಂಡುಬರುತ್ತಿರುವ ಸಮಸ್ಯೆ.
ಇದುವರೆಗೂ ನೂರಾರು ಗಂಡು-ಹೆಣ್ಣುಗಳನ್ನು ತೋರಿಸಿ, ಇಪ್ಪತ್ತೈದು ಮುವ್ವತ್ತು ಮದುವೆಗಳಿಗೆ ಕಾರಣರಾದ ಆಪ್ತರೊಬ್ಬರು ಹೇಳುತ್ತಿದ್ದರು. “ಈಗೀಗ ಮದುವೆಗೆ ಗಂಡು-ಹೆಣ್ಣು ತೋರಿಸುವುದಿರಲಿ, ಸೂಚಿಸಲು ಕೂಡ ಹೆದರಿಕೆಯಾಗತ್ತೆ. ಮದುವೆ ಮಾಡಿಸುವುದು ಪುಣ್ಯದ ಕೆಲಸ ಅಂತಿದ್ದರು ನಮ್ಮ ತಂದೆ. ಯಾವತ್ತೂ ಹಣಕ್ಕಾಗಿ ಹೆಣ್ಣು ಗಂಡು ತೋರಿಸಿ ಗೊತ್ತಿಲ್ಲ ನಂಗೆ. ಹುಟ್ಟಿದ ಮನೆ, ಕೊಟ್ಟ ಮನೆ ಎರಡೂ ಕಡೆಯೂ ದೊಡ್ಡ ಬಳಗ. ಮಕ್ಕಳು, ಮೊಮ್ಮಕ್ಕಳು, ಬಂದು ಸೇರಿದವರು ಅಂತ ಗಂಡು, ಹೆಣ್ಣಿಗೆ ಕೊರವಿಲ್ಲ. ಹಬ್ಬಹರಿದಿನ, ಮುಂಜಿ, ನಾಮಕರಣ ಅಂತ ಜನ ಸೇರಿದ ಕಡೆಯಲ್ಲೇ ಮಾತಿಗೆ ಮಾತು ಬಂದು, ಸಂಬಂಧಗಳು ಕೂಡಿಬಿಡುತ್ತಿದ್ದವು. ಮದುವೆಯಾದವರೆಲ್ಲಾ ಚೆನ್ನಾಗಿದ್ದಾರೆ. ಒಂದಿಬ್ಬರಿಗೆ ಮಕ್ಕಳಿಲ್ಲ. ಕೆಲವರಿಗೆ ಸರಿಯಾದ ಉದ್ಯೋಗವಿಲ್ಲದೆ ಹಣಕಾಸಿಗೆ ತೊಂದರೆ. ಆರೋಗ್ಯ ಸಮಸ್ಯೆ, ಪತಿ/ಪತ್ನಿ ವಿಯೋಗ ಇಂತವೂ ಇಲ್ಲ ಅಂತಿಲ್ಲ. ಆದರೆ ನಿಮ್ಮಿಂದಾಗಿ ಹೀಗಾಯ್ತು ಅಂತ ಆಪಾದಿಸಿದ್ದಿಲ್ಲ. ವಿಧಿ ಬರೆದಿಟ್ಟ ಹಾಗೆ ಆಗತ್ತೆ ಅಂತ ಬದುಕನ್ನು ಬಂದ ಹಾಗೆ ಸ್ವೀಕರಿಸಿದವರೇ ಜಾಸ್ತಿ. ಈಗ ಕಷ್ಟಕ್ಕೆ ಬಂದಿರುವುದೇನು ಗೊತ್ತಾ? ಇರುವಷ್ಟು ದಿನ, ಕಷ್ಟಸುಖಗಳನ್ನು ಹಂಚಿಕೊಂಡು ಬಾಳ್ವೆ ಮಾಡಬೇಕೆಂದು ಈಗಿನವರಿಗೆ ಹೇಳುವ ಹಾಗಿಲ್ಲ. ಸಂಸಾರ ಬಂಧವಾಗಿ ಉಳಿದಿಲ್ಲ. ಈಗೇನಿದ್ದರೂ ಅಂಗಡಿಯಲ್ಲಿ ವಸ್ತುವನ್ನು ಕೊಂಡು ತಂದಂತೆ. ಇಷ್ಟವಾದರೆ ಇಟ್ಟುಕೊಳ್ಳುವುದು. ಬೇಡ ಅನ್ನಿಸಿದ ಮರುಕ್ಷಣವೇ ಬಿಸಾಡುವುದು.
ಯಾವ ಕಾಲಕ್ಕೂ ಗಂಡ-ಹೆಂಡಿರ ಮಧ್ಯೆ ಜಗಳವಿತ್ತು. ದರ್ಪದ ಗಂಡಸರಿದ್ದ ಹಾಗೆ, ಸೂಕ್ಷ್ಮವಾಗಿ ಕೂದಲಿನಲ್ಲೇ ಗಂಟಲು ಕುಯ್ಯುವ ಹೆಂಡತಿಯರೂ ಇದ್ದರು. ಜೋರಿನ ಅತ್ತೆಮನೆಯ ಹಾಗೆ, ನಮ್ಮ ಮಗಳು-ಅಳಿಯ ಅಂತ ಮುಚ್ಚಟೆಯಿಂದ ಕಾಣುವ ತೌರುಮನೆಗಳೂ ಇದ್ದವು. ಹೊಂದಾಣಿಕೆ ಎಂಬುದು ಎರಡೂ ಬದಿಯೂ ಚಾಲ್ತಿಯಲ್ಲಿತ್ತು. ಆಗಿನದ್ದೆಲ್ಲ ಸರಿ ಅಂತಿಲ್ಲ. ಆದರೆ ಈ ಕಾಲ ನಂಬಿಕೆ ಹುಟ್ಟಿಸ್ತಿಲ್ಲ.” ಪಾಪ ಕೇಳುವ ಕಿವಿಯೊಂದಕ್ಕಾಗಿ ಹಂಬಲಿಸಿದವರಂತೆ ಹೇಳುತ್ತಾ ಹೋದರು. ಪ್ರತಿಕ್ರಿಯೆಯ ನಿರೀಕ್ಷೆಯೂ ಇದ್ದಂತಿರಲಿಲ್ಲ.
ಯಾವ ಯಾವ ಕಾರಣಕ್ಕೆ ದಾಂಪತ್ಯಗಳು ಮುರಿದು ಬೀಳ್ತಿವೆ ಎಂಬುದು ಚರ್ಚೆಗೆ ನಿಲುಕುವ ವಿಷಯವೇ ಅಲ್ಲ. ಈಗ ಪ್ರತಿಮನೆಯಲ್ಲೂ ವಿಚ್ಚೇದನದ ಕೇಸ್‌ಗಳು, ಹೆಣ್ಣು-ಗಂಡಿನ ವರ್ತನೆ, ಮನಃಸ್ಥಿತಿಯ ಕುರಿತಾದ ದೂರುಗಳು, ಸ್ತ್ರೀವಾದ, ನೊಂದಗಂಡಂದಿರ ಸಂಘದ ಅಳಲುಗಳು ಯಥೇಚ್ಛವಾಗಿವೆ. ಯಾರ ಪರವೂ, ವಿರುದ್ಧವೂ ನಿಲ್ಲಲಾಗದ, ನಿಂತು ಸಾಧಿಸಲಾಗದ ಸಿಕ್ಕಾಗಿ ಉಳಿದಿವೆ. ಆದರೆ ಮಕ್ಕಳು ಬೇಕು ಅಥವಾ ಬೇಡ ಎಂಬ ಕಾರಣಕ್ಕಾಗಿ ನಡೆಯುತ್ತಿರುವ ದಾಂಪತ್ಯ ಸಮರಗಳ ಬಗ್ಗೆ ಸ್ವಲ್ಪ ಗಮನಹರಿಸಬಹುದು.
ತ್ರೇತಾಯುಗದಿಂದಲೂ ಇರುವ ಸವಾಲೊಂದನ್ನು, ಇಷ್ಟೆಲ್ಲಾ ಆಧುನಿಕತೆ ಮೈಗೂಡಿದ ಮೇಲೂ ಇನ್ನಷ್ಟು ಜಟಿಲಗೊಳಿಸಿಕೊಂಡ ಶ್ರೇಯ ನಮ್ಮದು. ಈ ವಿಷಯದಲ್ಲಿ ಹಿಂದಿನ ಕಾಲವೇ ವಾಸಿಯಿತ್ತೇನೋ…. ತಮಗೆ ತಿಳಿದ ಔಷಧ, ಉಪಚಾರ, ದೇವರ ಹರಕೆ ಮುಗಿದ ಮೇಲೆ, ನಮ್ಮ ಹಣೆಯಲ್ಲಿ ಬರೆದಂತಾಗಲಿ ಎಂದು ದಂಪತಿಗಳು ನಿರಾಳವಾಗಿರುತ್ತಿದ್ದ ಉದಾಹರಣೆ ನಮ್ಮಲ್ಲೇ ಸಾಕಷ್ಟಿವೆ. ತೋಟ, ಗಿಡಗಳು, ಆಕಳು, ಹಸು, ನಾಯಿ, ಬೆಕ್ಕು, ಕಾಲಿಗೆ ತೊಡರಿದ ಮಕ್ಕಳನ್ನೇ ತಮ್ಮ ಮಕ್ಕಳೆಂದು ನಿರ್ವಾಜ್ಯ ಪ್ರೇಮ ಹರಿಸಿದ ವ್ಯಕ್ತಿಗಳಿದ್ದರು. ಆದರೆ ವಿಜ್ಞಾನ ಮುಂದುವರೆದಿದೆ. ಒಂದಲ್ಲ ಹತ್ತು ಆಸ್ಪತ್ರೆಗಳು ಹೇಗಾದರೂ ಒಂದು ಮಗು ಮಾಡಿಸಿ ಕೊಡುತ್ತವೆ ಎಂದು ನಿರಂತರ ಚಿಕಿತ್ಸೆಗೆ, ಮಾನಸಿಕ ಒತ್ತಡಕ್ಕೆ ತೆರೆದುಕೊಳ್ಳುತ್ತಿರುವ ಜೋಡಿಗಳ ಓಟಕ್ಕೆ ನಿಲುಗಡೆಯೇ ಇಲ್ಲದಾಗಿದೆ. ಇನ್ನೂ ಜಗತ್ತಿಗೆ ಬರದ ಒಂದು ಜೀವಕ್ಕಾಗಿ, ಜೊತೆಯಾಗಿ ಬಾಳಿ ಬದುಕಬೇಕಾದ ಜೀವಗಳ ಬದುಕು ದುಸ್ತರವಾಗುವುದು ಯಾವ ನ್ಯಾಯ? ಬದುಕಿನ ಅತ್ಯಂತ ಸುಂದರ ದಿನಗಳು ಕೊನೆಮೊದಲಿಲ್ಲದ ಪರೀಕ್ಷೆ, ನಿರೀಕ್ಷೆ, ಟ್ರೀಟ್ಮೆಂಟುಗಳಲ್ಲಿ ನಲುಗಿ, ಗಂಡಹೆಂಡತಿಯ ವೈಮನಸ್ಯಕ್ಕೆ ಕಾರಣವಾಗಿ, ವಿಚ್ಚೇದನದಲ್ಲಿ ಕೊನೆಗಾಣುವುದು ದುರಂತವಲ್ಲವೆ? ಇತ್ತ ಬದುಕಿನ ಅಮೂಲ್ಯ ಸಮಯ, ಹಣ, ಆರೋಗ್ಯ, ಸಂಬಂಧಗಳನ್ನು ಕಳೆದುಕೊಂಡು ಅರ್ಧ ಆಯುಷ್ಯವನ್ನು ಅತಂತ್ರವಾಗಿ ಕಳೆಯುವಂತಾದರೆ…. ಇಲ್ಲಿ ಸಮಾಜ, ಹೆತ್ತವರು, ಸ್ನೇಹಿತರು ವಹಿಸಬಹುದಾದ ಪಾತ್ರ ದೊಡ್ಡದಿದೆ.
ಮಗುವಿಗಾಗಿ ಪೀಡಿಸುವುದಕ್ಕಿಂತ, ಒತ್ತಡ ಹೇರಿ, ಕೊಂಕು ಮಾತಾಡಿ ನೋಯಿಸುವುದಕ್ಕಿಂತ, ಗಂಡ-ಹೆಂಡತಿ ಸುಖವಾಗಿ ಬಾಳಿರೆಂದು ಆಶಿಸುವುದರಲ್ಲಿ, ಅವರನ್ನು ಮನುಷ್ಯರಾಗಿ ನಡೆಸಿಕೊಳ್ಳುವುದರಲ್ಲಿ ಕಾಳಜಿ ತೋರಿದರೆ ಸಾಕು. ಜನಸಂಖ್ಯೆ ಮಿತಿಮೀರಿ ಬೆಳೆದಿರುವ ಈ ದಿನಗಳಲ್ಲಿ ಬಲವಂತವಾಗಿ, ಸಂತೋಷ ಬಲಿಗೊಟ್ಟು, ಆಡಿಕೊಳ್ಳುವ ಬಾಯಿ ಮುಚ್ಚಿಸಲಾದರೂ ಒಂದು ಮಗು ಮಾಡಿಕೊಳ್ಳಬೇಕೆಂಬ ಒತ್ತಡ ಸೃಷ್ಟಿಸದಿದ್ದರೆ, ಅದು ಈ ಜಗತ್ತಿಗೆ ಮಾಡಬಹುದಾದ ದೊಡ್ಡ ಉಪಕಾರ.
ದುರ್ದೈವವೆಂದರೆ ವಿದ್ಯೆ, ಸಂಸ್ಕಾರ, ಅರಿವಿನ ಕೊರತೆಯಿಂದ ಮಂಕು ಹುಡುಗಿಗೆ ಬಡಿಯುವ ಕ್ರೂರಿ ಗಂಡನಿದ್ದಂತೆಯೇ, ಎಲ್ಲಾ ಅರಿವಿದ್ದೂ, ಹಣಕಾಸಿನ ಬಲವಿದ್ದೂ, ವಿವೇಚನೆಯನ್ನು ಗಾಳಿಗೆ ತೂರಿ ತಣ್ಣನೆ ಕ್ರೌರ್ಯ ಮೆರೆಯುವ ಹೆಣ್ಣು-ಗಂಡುಗಳಿದ್ದಾರೆ. ಎರಡೂ ಬದಿಯೂ ಶೋಷಣೆ, ಪರಿಸ್ಥಿತಿಯ ಕೆಟ್ಟ ಲಾಭ ಪಡೆದುಕೊಳ್ಳುತ್ತಿರುವ ಪ್ರಸಂಗಗಳಿವೆ. ಸಮಾಜ, ಬಂಧುಬಳಗ, ಸ್ನೇಹಿತರ ಸಣ್ಣತನದಷ್ಟೇ ಭೀಕರವಾಗಿ ಗಂಡ-ಹೆಂಡತಿಯರ ನಡುವಿನ ಬಿರುಕು, ಒಡಕು ಹಿಂಸಿಸುತ್ತಿರುತ್ತದೆ. ಈ ಬದುಕು ಇಷ್ಟೆಲ್ಲ ಅಪಸವ್ಯಗಳಿಗೆ ತೆರೆದುಕೊಳ್ಳಬೇಕಾದಷ್ಟು ದೊಡ್ಡದಿದೆಯೆ? ಕಡೆಪಕ್ಷ ನಮ್ಮ ಮನಸ್ಸಿನ ಸಂತೋಷ, ಸಾರ್ಥಕತೆಗಾಗಿಯಾದರೂ ಅನಪೇಕ್ಷಿತ ಹೋರಾಟಗಳಿಂದ ಹೊರಬಂದು ನೆಮ್ಮದಿಪಡೆಯಬಹುದೆ? ಓಹ್. ಪ್ರಶ್ನೆ ಮುಗಿಯುವುದಿಲ್ಲ.
ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.
ಬಹಳ ಸುಂದರವಾದ ಮತ್ತು ಪ್ರಸ್ತುತವಾದ ಲೇಖನ. 👏👏👏. ಧರ್ಮೇಚ, ಅರ್ಥೇಚ, ಕಾಮೇಚ ನಾತಿಚರಿತವ್ಯ.. ಯಾರು ಯಾರಿಗೆ ಹೇಳಿದ್ದರೂ, ಕೆಲವು ಕಾಲದ ನಂತರ ಮರೆತವರಂತೆ ಬಾಳುವ ದಂಪತಿ ನೋಡಿದರೆ, ಇದು ಭಾರತೀಯ ಸಮಾಜ ಎನಿಸುವುದೇ ಇಲ್ಲ. ಸಾಂಗತ್ಯದ ಸುತ್ತಾ ಸಂಸಾರದ ಇತರೆ ವಿಷಯಗಳೇ ಹೊರತು, ಆ ಇತರೆ ವಿಷಯಗಳ ಪಾಲನೆಗಾಗಿ ಸಾಂಗತ್ಯವಲ್ಲ. ಇಂದಿನ ಪರಿಸ್ಥಿತಿಗೆ ಬಹಳ ಸೂಕ್ತವಾದ ಈ ಲೇಖನ, ದಂಪತಿ ಮತ್ತು ಸಮಾಜ, ಎರಡೂ ಕಡೆಯ ನಾಗರಿಕ ನಡೆ ಹೇಗಿರಬೇಕೆಂದು ತಿಳಿಸುತ್ತಿದೆ. ಇಂಥ ಮೇಲ್ನೋಟಕ್ಕೆ ಕಾಮನ್ ಎನಿಸುವ ಆದರೆ, ಬಹಳ ಪರಿಣಾಮಕಾರಿಯಾದ ಮಾನವ ಸಂಬಂಧಗಳ ಕುರಿತಾದ ಲೇಖನಗಳು ನಾಗಶ್ರೀ ಅವರಿಂದ ಇನ್ನಷ್ಟು ಬರಲಿ ಎಂದು ಕೋರುತ್ತೇನೆ.
Such relevant thoughts, I wait eagerly to read your articles!