ಪ್ರತಿಯೊಬ್ಬರ ಮನೆಯಲ್ಲಿ ಸಂವಿಧಾನ ಇರಬೇಕು. ಇಂದು ನಾವು ಸಂವಿಧಾನವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಚಿತ್ರದಲ್ಲಿ ತೋರಿಸಿದ ಹಾಗೆ ಒಂದು ಹೋರಾಟಕ್ಕೆ ಮಾಧ್ಯಮ ಮತ್ತು ಸಂಘಟನೆಗಳು ತುಂಬಾ ಅವಶ್ಯಕ. ಈ ಎರಡು ಪ್ರಾಮಾಣಿಕವಾಗಿದ್ದರೆ ಯಶಸ್ಸು ಶತಸಿದ್ಧ. ಇಂದಿನ ಹೋರಾಟವು ದಾರಿ ತಪ್ಪುವುದಕ್ಕೆ ಕಾರಣ ಕೇವಲ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕಾಗಿ ಹೋರಾಟದ ದಿಕ್ಕನ್ನೇ ಬದಲಿಸುತ್ತಿರುವುದನ್ನು ಕಾಣುತ್ತೇವೆ.
ಮಂಸೋರೆ ನಿರ್ದೇಶನದ “19.20.21” ಚಲನಚಿತ್ರದ ಕುರಿತು ವಿಜಯಲಕ್ಷ್ಮೀ ದತ್ತಾತ್ರೇಯ ದೊಡ್ಡಮನಿ ಬರಹ

ಎಲ್ಲಿವರೆಗೆ ನಾವು ಮೂಕರಾಗಿರುತ್ತೇವೆಯೋ ಅಲ್ಲಿಯವರೆಗೆ ಯಾವುದೇ ತೊಂದರೆಗೆ ಒಳಗಾಗುವುದಿಲ್ಲ. ಯಾವಾಗ ನಮ್ಮ ಹಕ್ಕಿಗಾಗಿ ಧ್ವನಿ ಎತ್ತಲು ಪ್ರಾರಂಭಿಸುತ್ತೇವೊ ಆಗಲೆ ಪ್ರಭುತ್ವ ನಮ್ಮ ಮೇಲೆ ತಿರುಗಿ ಬೀಳುತ್ತದೆ. ಪ್ರಭುತ್ವದ ಅಡಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ತುಂಬಾ ಜಾಣತನದಿಂದ, ಹಕ್ಕಿಗಾಗಿ ಧ್ವನಿ ಎತ್ತಿದವರ ಸುತ್ತಲೂ ತಮ್ಮ ಜಾಲವನ್ನು ಬೀಸುತ್ತಾರೆ. ಅಂತಹ ಮೂರು ಹಕ್ಕಿನ ನಿಜ ಕಥೆಯೇ ಈ 19.20.21  ಸಿನಿಮಾ. ಈ ಚಿತ್ರವನ್ನು ಮಂಸೋರೆ ಅವರು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ನಾನು ನೋಡಿದ ಸಿನಿಮಾಗಳಲ್ಲಿ ತುಂಬಾ ಇಷ್ಟವಾಗಿದ್ದು 19.20.21  ಸಿನಿಮಾ.

ಸಾಮಾಜಿಕ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ಮತ್ತು ನಿಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವುದು ಅತಿ ಹೆಚ್ಚು ಅಂದರೆ ತಮಿಳು ಹಾಗೂ ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ಕಾಣುತ್ತೇವೆ. ಉದಾಹರಣೆ ತಮಿಳಿನ ‘ಜೈಭೀಮ್‌’, ಮಲಯಾಳಂನ ‘ಜನ-ಗಣ-ಮನ’ ಇತ್ಯಾದಿ ಸಿನಿಮಾಗಳನ್ನು ನೋಡಬಹುದು. ಕಾಡೆ ಸರ್ವಸ್ವ ಎಂದು ನಂಬಿ ಬದುಕುತ್ತಿರುವ, ಯಾರಿಗೂ ತೊಂದರೆ ಕೊಡದೆ, ನಾಗರಿಕ ಸಮಾಜದಿಂದ ದೂರದಲ್ಲಿದ್ದ, ಮುಗ್ಧ ಮಲೆಕುಡಿಯ ಸಮಾಜ ತಮ್ಮ ಹಕ್ಕುಗಳಿಗಾಗಿ ಪ್ರಶ್ನೆ ಕೇಳಿದ್ದಕ್ಕೆನೇ, ಅನೇಕ ಕಷ್ಟ ಕೋಟಲೆಗಳಿಗೆ ಒಳಗಾಗುತ್ತಾರೆ.

(ಮಂಸೋರೆ)

ಕಾಯುವವರೇ ಕೊಲ್ಲಲು ಬಂದ ಕಥೆಯೇ ಇದಾಗಿದೆ. ಮಲೆಕುಡಿ ಎನ್ನುವ ಆದಿವಾಸಿ ಸಮುದಾಯದ ಯುವಕನು ನಕ್ಸಲ್ ಜೊತೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ 2012ರಲ್ಲಿ ಬಂಧಿಸುತ್ತಾರೆ. 9 ವರ್ಷ ಸತತವಾಗಿ ವಿಚಾರಣೆ, ಸಾಕ್ಷಿ ಹುಡುಕಾಟ ಎಂದು ನ್ಯಾಯಾಲಯದಲ್ಲಿ ಕೇಸ್ ಮುಂದಕ್ಕೆ ಹೋಗುತ್ತಲೇ ಇರುತ್ತದೆ. ಒಂಬತ್ತು ವರ್ಷದ ನಂತರ ಆತ ನಿರಪರಾಧಿ ಎಂದು ಘೋಷಿಸಲಾಗುತ್ತದೆ. ವಿಠಲ ಮಲೆಕುಡಿಯವರೆ, ಮಲೆಕುಡಿ ಸಮುದಾಯದ ಮೊದಲ ಪದವೀಧರರು [ಎಂ.ಎ ಪತ್ರಿಕೋದ್ಯಮ ಮಂಗಳೂರು ವಿಶ್ವವಿದ್ಯಾಲಯ]

ಈ ಸಿನಿಮಾದಲ್ಲಿ ವಿಠಲನ ಪಾತ್ರಧಾರಿ ಮಂಜು ಎಂಬ ಹೆಸರಿನಲ್ಲಿ ಬದಲಾಯಿಸಲಾಗಿದೆ. ಈ ಸಿನಿಮಾದ ನಾಯಕ ಪಾತ್ರ, ಸಿನಿಮಾ ಪ್ರಾರಂಭದಿಂದ ಕೊನೆಯವರೆಗೂ ನೋಡುಗರಲ್ಲಿ ಕುತೂಹಲವನ್ನು ಕೆರಳಿಸುತ್ತದೆ. ಮುಂದೇನು? ಏನಾಗಬಹುದು? ಎನ್ನುವ ಪ್ರಶ್ನೆಯೊಂದಿಗೆ ಪ್ರೇಕ್ಷಕರು ದೃಶ್ಯವನ್ನು ನೋಡುತ್ತಾರೆ. ಇಲ್ಲಿ ನಾಯಕ ಮಲೆಕುಡಿ ಬುಡಕಟ್ಟು ಜನಾಂಗಕ್ಕೆ ಸೇರಿದ ಕಾಲೇಜು ವಿದ್ಯಾರ್ಥಿಯಾಗಿದ್ದಾನೆ. ಆತನ ಜ್ಞಾನದ ಅರಿವು ಹೆಚ್ಚಾದಂತೆ, ಅವನಲ್ಲಿ ತಮಗೆ ದೊರೆಯಬೇಕಾಗಿದ್ದ ಸಂವಿಧಾನಾತ್ಮಕವಾದ ಹಕ್ಕುಗಳ ಅರಿವಾಗುತ್ತದೆ. ಅದರಿಂದ ವಂಚಿತರಾಗಿದ್ದ ತಮ್ಮ ಸಮುದಾಯದ ಹಕ್ಕನ್ನು ಪಡೆಯುವುದಕ್ಕೆ ಪ್ರಭುತ್ವದ ವಿರುದ್ಧ ಧ್ವನಿ ಎತ್ತಲು ಪ್ರಾರಂಭಿಸುತ್ತಾನೆ.

ಈ ಹಿಂದೆ ಹೇಳಿದ ಹಾಗೆ ಈ ಸಿನಿಮಾ ಮೂರು ಹಕ್ಕುಗಳ ಕಥೆಯನ್ನೇ ಆಧರಿಸಿದೆ. ಅದರಲ್ಲಿ ಮೊದಲನೆಯ ಹಕ್ಕು ಆರ್ಟಿಕಲ್ 19 ನಮ್ಮ ಅಭಿವ್ಯಕ್ತಿ ಸ್ವಾತಂತ್ರವನ್ನು ತಿಳಿಸುತ್ತದೆ. ಎರಡನೇಯ ಆರ್ಟಿಕಲ್ 20 ಒಬ್ಬ ವ್ಯಕ್ತಿಯನ್ನ ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆಗೆ ಒಳಪಡಿಸಬಾರದು ಹಾಗೂ ಆಪಾದಿತ ವ್ಯಕ್ತಿಯನ್ನ ತನ್ನ ವಿರುದ್ಧ ಸಾಕ್ಷಿಯಾಗಿರಲು ಒತ್ತಾಯಿಸಬಾರದು. ಆರ್ಟಿಕಲ್ 21 ಜೀವಿಸುವ ಹಕ್ಕು ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಗೌರವಯುತವಾಗಿ ಜೀವಿಸುವ ಹಕ್ಕನ್ನು ಹೊಂದಿದ್ದಾನೆ. ಸಂವಿಧಾನ ನಮಗೆ ಈ ಹಕ್ಕನ್ನು ನೀಡಿದೆ. ಆದರೆ ಆದಿವಾಸಿಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಅವರನ ಕಾಡಿನಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಅವರ ಮೇಲೆ ಸುಳ್ಳು ಕೇಸನ್ನು ಹಾಕಿ [ಯು.ಎ.[ಪಿ].ಎ] ಕಾಯ್ದೆಯನ್ನ ದುರ್ಬಳಕೆ ಮಾಡಿಕೊಳ್ಳುವ ಪ್ರಭುತ್ವವು ಸ್ಥಳೀಯ ರಾಜಕಾರಣಿಗಳ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಕೈಜೋಡಿಸಿರುವುದನ್ನು ಕಾಣುತ್ತೇವೆ.

ಆದಿವಾಸಿ ಜನಗಳಿಗೆ ಮೂಲಭೂತ ಅವಶ್ಯಕತೆಗಳು ದೊರೆಯದ ಹಾಗೆ ಮಾಡಿ ಅಲ್ಲಿಂದ ಅವರಿಗೆ ಒಕ್ಕಲಿಬ್ಬಿಸುವ ಕೆಲಸ ಮಾಡುತ್ತಾರೆ. 19.20.21 ಸಿನಿಮಾದಲ್ಲಿ ಆದಿವಾಸಿ ಜನಗಳ ಮೇಲೆ ಪ್ರಭುತ್ವ ಹಾಗೂ ಪೊಲೀಸ್ ವ್ಯವಸ್ಥೆ ನಡೆಸುವ ದೌರ್ಜನ್ಯವನ್ನು ಬಯಲಿಗೆ ಎಳೆಯುವ ಕೆಲಸ ಮಾಧ್ಯಮದವರು ಮತ್ತು ಸಂಘಟನಾಕಾರರು ಮಾಡಿರುವುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಮಂಜು ಎಂಬ ವಿದ್ಯಾರ್ಥಿಯನ್ನು ಪೊಲೀಸರು ನಕ್ಸಲ್‌ರಿಗೆ ಸಹಾಯ ಮಾಡುತ್ತಿದ್ದಾರೆ ಎಂಬ ಅನುಮಾನದಿಂದ ಬಂಧಿಸುತ್ತಾರೆ. ಆತನ ಕುಟುಂಬ ಹಾಗೂ ನೆರೆಯವರ ಮೇಲೆ ನಿರಂತರದ ದಬ್ಬಾಳಿಕೆ ನಡೆಸುವ ವ್ಯವಸ್ಥೆಯನ್ನು ಮಾಧ್ಯಮದವರು ಬಯಲಿಗೆ ತರುತ್ತಾರೆ. “ಶಿಕ್ಷಣ ಸಂಘಟನೆ ಹೋರಾಟ” ಎಂದು ಬಾಬಾ ಸಾಹೇಬರು ಹೇಳಿದ ಮಾತಿನಂತೆ ಮಂಜು ತನ್ನ ಹಕ್ಕನ್ನು ಪ್ರಭುತ್ವಕ್ಕೆ ಕೇಳುವ ಧೈರ್ಯ ಮಾಡುತ್ತಾನೆ. ತಮ್ಮ ಸಮುದಾಯದಲ್ಲಿ ಹೆಚ್ಚು ಓಟುಗಳಿಲ್ಲದ ಕಾರಣಕ್ಕಾಗಿಯೇ ತಾವು ಸೌಲಭ್ಯ ವಂಚಿತರಾಗಿದ್ದಾರೆ, ತಮಗೆ ಆಸ್ಮಿತೆ ಇಲ್ಲದಂತಾಗಿದೆ ಎಂದು ಮಂಜು ಮಾಧ್ಯಮದ ಮುಂದೆ ಹೇಳುತ್ತಾನೆ.

ಇಲ್ಲಿ ನಾಯಕ ಮಲೆಕುಡಿ ಬುಡಕಟ್ಟು ಜನಾಂಗಕ್ಕೆ ಸೇರಿದ ಕಾಲೇಜು ವಿದ್ಯಾರ್ಥಿಯಾಗಿದ್ದಾನೆ. ಆತನ ಜ್ಞಾನದ ಅರಿವು ಹೆಚ್ಚಾದಂತೆ, ಅವನಲ್ಲಿ ತಮಗೆ ದೊರೆಯಬೇಕಾಗಿದ್ದ ಸಂವಿಧಾನಾತ್ಮಕವಾದ ಹಕ್ಕುಗಳ ಅರಿವಾಗುತ್ತದೆ. ಅದರಿಂದ ವಂಚಿತರಾಗಿದ್ದ ತಮ್ಮ ಸಮುದಾಯದ ಹಕ್ಕನ್ನು ಪಡೆಯುವುದಕ್ಕೆ ಪ್ರಭುತ್ವದ ವಿರುದ್ಧ ಧ್ವನಿ ಎತ್ತಲು ಪ್ರಾರಂಭಿಸುತ್ತಾನೆ.

ಹಕ್ಕಿಗಾಗಿ ಧ್ವನಿಯೆತ್ತಿದ ಮಂಜುನ ಮೇಲೆ ಯು.ಎ.ಪಿಎ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವ ಕಾಯ್ದೆ ಹಾಕಿ ಆತನನ್ನು ಬಂಧಿಸುತ್ತಾರೆ. ಸಿನಿಮಾದಲ್ಲಿ ಪದೇ ಪದೇ ಕಾಣಿಸುವ ಪ್ರತಿಮೆಗಳೆಂದರೆ ಅಂಬೇಡ್ಕರ್ ಹಾಗೂ ಭಗತ್‌ಸಿಂಗ್ ಚಿತ್ರಪಟ, ಕವಿ ಸಿದ್ಧಲಿಂಗಯ್ಯನವರ ‘ಯಾರಿಗೆ ಬಂತು 47ರ ಸ್ವಾತಂತ್ರ್ಯ’, ಎಂಬ ಕ್ರಾಂತಿ ಗೀತೆ, ಭಗತ್ ಸಿಂಗ್ ಜೀವನ ಚರಿತ್ರೆಯ ಪುಸ್ತಕ. ಜೊತೆಗೆ ಕಮ್ಯುನಿಸ್ಟ್ ಹಾಗೂ ನಕ್ಸಲ್ ಚಿಂತನೆಯ ಸಾಲುಗಳ ಪುಸ್ತಕದ ಜೊತೆ ದೇವನೂರರ ಒಡಲಾಳ ಕೃತಿಯೂ ಕಾಣಿಸಿಕೊಳ್ಳುತ್ತದೆ.

ಮಂಜುವಿನ ಮನೆ ಹಾಗೂ ಹಾಸ್ಟೆಲ್‌ನಲ್ಲಿ ಜಪ್ತಿ ಮಾಡಿದ ವಸ್ತುಗಳಲ್ಲಿ ಭಗತ್ ಸಿಂಗ್ ಪುಸ್ತಕಗಳು ಇರುತ್ತವೆ. ಆ ಪುಸ್ತಕಗಳು ಇರುವ ಕಾರಣಕ್ಕೆ ಅವನ ಸಂಬಂಧ ನಕ್ಸಲ್ ಜೊತೆ ಇದೆ ಎಂದು ಪೋಲೀಸರು ಅವನನ್ನು ಬಂಧಿಸುತ್ತಾರೆ. ಮಂಜುವಿನ ಕೇಸ್ 9 ವರ್ಷ ನಡೆಯುತ್ತದೆ. ಕೊನೆಗೆ ಮಂಜು ಹಾಗೂ ಆತನ ತಂದೆಗೆ ನ್ಯಾಯ ಸಿಗುತ್ತದೆ. ಬಿಡುಗಡೆಯಾಗಿ ಹೊರಗೆ ಬಂದಾಗ ಅಡ್ವೋಕೇಟರು ಮಾಧ್ಯಮದವರಿಗೆ ಹೀಗೆ ಹೇಳುತ್ತಾರೆ. “ಮಂಜುಗೆ ಗೌರವ ಪೂರ್ವಕವಾದ ಬಿಡುಗಡೆ ಸಿಗಬೇಕಾಗಿತ್ತು. ಆದರೆ ಕೇವಲ ಬಿಡುಗಡೆ ಸಿಕ್ಕಿದೆ ಪರವಾಗಿಲ್ಲ” ಅಂತ ಹೇಳುತ್ತಾರೆ. ಹೌದು ತಪ್ಪೇ ಮಾಡದ ಮಂಜು ಸುದೀರ್ಘವಾಗಿ ಮಾನಸಿಕ ಮತ್ತು ದೈಹಿಕವಾದ ನೋವನ್ನು ಅನುಭವಿಸಿದ. ಅವನಿಗೆ ಗೌರವ ಪೂರ್ವಕವಾದ ಬಿಡುಗಡೆ ದೊರೆಯಬೇಕಿತ್ತು ಎನ್ನುವ ಮಾತು ಪ್ರೇಕ್ಷಕರಿಗೆ ವಿಚಾರಿಸಲು ಹಚ್ಚುತ್ತದೆ. ಚಿತ್ರದ ಕೊನೆಯಲ್ಲಿ ಮಂಜುವನ್ನ ಬಂಧಿಸಿ ಸುಳ್ಳು ಸಾಕ್ಷಿ ಸೃಷ್ಟಿಸಿದ ಪೊಲೀಸ್ ಅಧಿಕಾರಿಯ ಮೊಮ್ಮಗಳಿಗೆ ಮಂಜು ಪರಾ ವಕೀಲರು ಉಡುಗೊರೆಯಾಗಿ ಒಂದು ಸಂವಿಧಾನದ ಪುಸ್ತಕ ಕೊಡುತ್ತಾರೆ.

ಪ್ರತಿಯೊಬ್ಬರ ಮನೆಯಲ್ಲಿ ಸಂವಿಧಾನ ಇರಬೇಕು. ಇಂದು ನಾವು ಸಂವಿಧಾನವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಚಿತ್ರದಲ್ಲಿ ತೋರಿಸಿದ ಹಾಗೆ ಒಂದು ಹೋರಾಟಕ್ಕೆ ಮಾಧ್ಯಮ ಮತ್ತು ಸಂಘಟನೆಗಳು ತುಂಬಾ ಅವಶ್ಯಕ. ಈ ಎರಡು ಪ್ರಾಮಾಣಿಕವಾಗಿದ್ದರೆ ಯಶಸ್ಸು ಶತಸಿದ್ಧ. ಇಂದಿನ ಹೋರಾಟವು ದಾರಿ ತಪ್ಪುವುದಕ್ಕೆ ಕಾರಣ ಕೇವಲ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕಾಗಿ ಹೋರಾಟದ ದಿಕ್ಕನ್ನೇ ಬದಲಿಸುತ್ತಿರುವುದನ್ನು ಕಾಣುತ್ತೇವೆ.

ನಮ್ಮ ಹೋರಾಟ ಪ್ರಾಮಾಣಿಕವಾಗಿದ್ದರೆ, ಸಂವಿಧಾನ ಬದ್ಧವಾಗಿದ್ದರೆ ಜಯ ಸಿಕ್ಕೇ ಸಿಗುತ್ತದೆ. ಈ ದೇಶದ ಮೂಲ ನಿವಾಸಿಗಳು ಎಂದು ಕೇವಲ ಬಾಯಿ ಮಾತಿನಲ್ಲಿಯೇ ಹೇಳಿಕೊಳ್ಳುತ್ತೇವೆ. ಆದರೆ ಸ್ವಾತಂತ್ರ ದೊರೆತು 75ನೇ ವರ್ಷಾಚರಣೆಗೆ ಎರಡು ಮೂರು ದಿನಗಳ ಹಿಂದೆಯೇ. ಮೂಲ ನಿವಾಸಿಯಾದ ಬಾಲಕ ಕೇವಲ ನೀರಿಗಾಗಿ ಪ್ರಾಣ ಕಳೆದುಕೊಂಡಿದ್ದು ದುರಂತವೆ. ಮೂಲ ನಿವಾಸಿಗಳು ಇನ್ನೂ ಪ್ರತಿನಿತ್ಯ ತಮ್ಮ ಹಕ್ಕಿಗಾಗಿ ಹೋರಾಡುತ್ತಲೇ ಇದ್ದಾರೆ.

ಇಡೀ ಸಿನಿಮಾ ನಾಯಕ ಕೇಂದ್ರಿತ ಅಂತ ಮೇಲ್ನೋಟಕ್ಕೆ ಕಂಡು ಬಂದರೂ ಹಾಗೆ ಇರದೆ ಸಿನಿಮಾವು ಒಂದು ಸಮುದಾಯದ ಹಕ್ಕಿನ ಹೋರಾಟವಾಗಿದೆ. ಒಟ್ಟಾರೆಯಾಗಿ ಈ ಸಿನಿಮಾ ಸಂವಿಧಾನದ ಆಶಯ ಹಾಗೂ ಅಂಬೇಡ್ಕರ್ ಚಿಂತನೆಯ ಸಾರವನ್ನು ಹಿಡಿದಿಟ್ಟಿದೆ. ತಮಿಳಿನಲ್ಲಿ ಜೈ ಭೀಮ್ ಸಿನಿಮಾದ ಹಾಗೆ ಕನ್ನಡದಲ್ಲಿ 19.20.21 ಅಂತಹ ಅದ್ಭುತ ಸಿನಿಮಾವನ್ನು ಕೊಟ್ಟ ಮಂಸೋರೆಚಿತ್ರ ತಂಡಕ್ಕೆ ನನ್ನ ಕೃತಜ್ಞತೆಗಳು.