ಕೆಂಪಣ್ಣ ಭಜನೆಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ಅವನ ಭಜನೆಯ ಬೈಠಕ್ ಒಂದು ರೀತಿ ಮತ್ತೇರಿಸುತ್ತಿತ್ತು. ಅವನು ಹಾಡಲು ಸುರುಮಾಡಿದರೆ ಹಿಮ್ಮೇಳದವರು ತಲಿ ಕೆರೆದುಕೊಳ್ಳುತ್ತಿದ್ದರು. ಏಕೆಂದರೆ ಅವನು ಹೇಳಿದ ಪದಗಳನ್ನು ಹಾಡುವುದು ಅಷ್ಟು ಸುಲಭವಾಗಿರಲಿಲ್ಲ. ಅವನ ಪದಗಳೋ ರೈಲು ಬಂಡಿಯಂತೆ ಉದ್ದವಾಗಿರುತ್ತಿದ್ದವು. ‘ಬೆಳ್ಳನೇ ಎರೆಡೆತ್ತು ಬೆಳ್ಳಿಯ ಬಾರುಕೋಲು ಕೇರಿಯ ದಂಡಿಯ ಹೊಲಕ್ಕೆ… ಕೆರೆಯ ದಂಡೆಯ ಹೊಲಕ್ಕೆ… ‘ ಎಂದು ಚೆಂದವಾಗಿ ಪದ ಹಾಡಹತ್ತಿದರೆ ಬಸವಣ್ಣನ ಗುಡಿಯೊಳಗಿನ ಕಲ್ಲಿನ ಬಸವನು ಕೂಡಾ “ಕೆಂಪಣ್ಣ ಹೊಲಕ್ಕೆ ನಾನು ಬರ್ತೀನಿ” ಅಂತಾ ಜೊತೆಯಾಗುತ್ತಿತ್ತು.
ಮಂಜಯ್ಯ ದೇವರಮನಿ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

 

ಊರು ಕತ್ತಲೆಯ ಕೌದಿಯನ್ನು ಸರಿಸಿ ಎದ್ದೇಳಲು ನೋಡುತ್ತಿತ್ತು, ಕೆಂಪಾತಿ ಕೆಂಪು ಸೂರ್ಯ ಇಬ್ಬನಿಯಿಂದ ಊರ ಮುಖ ತೊಳೆಯುತ್ತಿದ್ದ, ತಂಗಾಳಿ ಹಿತವಾಗಿ ತೀಡುತಿತ್ತು. ಸಗಣಿ ಹೊಡೆಯುವವರು, ಅಂಗಳ ಗುಡಿಸುವವರು ನೀರು ತರುವವರಿಂದ ಮೇಗಳಕೇರಿ ಮತ್ತು ತೆಳಗಿನಕೇರಿಗಳಿಗೆ ಜೀವ ಬಂದಿತ್ತು. ಊರು ಹುಮ್ಮಸ್ಸಿನ ಹೊಳೆಯಲ್ಲಿ ಮೀಯುತ್ತಿದ್ದಾಗ ಕೆಂಪಣ್ಣ ಪ್ರತ್ಯಕ್ಷನಾಗಿ ಏನಾದರೊಂದು ಸುದ್ದಿ ಬಿತ್ತಿ ಜನರನ್ನು ತಬ್ಬಿಬ್ಬು ಮಾಡಿಬಿಡುತ್ತಿದ್ದ. ಕೆಲವೊಂದು ಸುದ್ದಿಗಳನ್ನು ಅರಗಿಸಿಕೊಳ್ಳಲು ಕೇರಿಯ ಜನರಿಗೆ ತಾಸು ದೀಡು ತಾಸು ಬೇಕಿತ್ತು. ಸುದ್ದಿ ಬಿತ್ತುವ ವಿಚಾರದಲ್ಲಿ ಕೆಂಪಣ್ಣ ಯಾವುದೇ ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿದ್ದ. ಕೆಂಪಣ್ಣನಿಗೆ ನಿದ್ದೆ ಕಡಿಮೆ ಅವನದು ಕೋಳಿ ನಿದ್ದೆ. ಒತ್ತಾಯಕ್ಕೆ ಕಣ್ಣುಮುಚ್ಚಿದರೆ ಒಂದು ಜಂಪ ನಿದ್ದೆ ಮತ್ತೆ ಬುದುಕ್ಕನೆ ಎದ್ದು ಬಿಡುತ್ತಿದ್ದ. ಹಾಳಾದ ನಿದ್ದೆ ಕಣ್ಣಿಗೆ ಸುಳಿಯೋದಿಲ್ಲ ಎಂದು ಕೌದಿಯನ್ನು ತುಂಬಾ ಗುಬ್ಬಲು ಹಾಕಿಕೊಂಡು ದುಂಡಿ ಉಳ್ಯಾಡಿದಂಗೆ ಒಳ್ಯಾಡಿ ಮೇಲೇಳುತ್ತಿದ್ದ. ಸ್ವಲ್ಪ ಮೈ ಹಗುರಾದಂತಾಗಿ ಮುಂದಿನ ಕೆಲಸಕ್ಕೆ ಕೈ ಹಚ್ಚುತ್ತಿದ್ದ.

ಸುದ್ದಿಗಾರ ಕೆಂಪಣ್ಣ ಅನ್ನೋದೆ ನಮ್ಮೂರಿನಲ್ಲಿ ಒಂದು ವಿಶಿಷ್ಟ ವ್ಯಕ್ತಿತ್ವ. ವಯಸ್ಸಾದರೂ ಅವನಲ್ಲಿ ಹುಡುಗುತನವಿತ್ತು, ತುಂಟತನವಿತ್ತು ಅದು ಎಲ್ಲರನ್ನೂ ಅವನತ್ತ ಸೆಳೆಯುತ್ತಿತ್ತು. ಈರಣ್ಣನ ಗುಡಿ ಪೂಜೆ ಮಾಡೋ ಚಂದ್ರಶೇಖರಯ್ಯನವರು “ಏ ಕೆಂಪಣ್ಣ ಕೋಳಿಗುಟ್ಟಿದ್ದಯಾ ಹ್ಯಾಂಗೋ ಮಾರಾಯ… ಕೋಳಿ ಮುಕಳಾಗ ಏಳ್ತಿಯಾ, ಕೋಳಿ ತಿಂದಂಗೆ ತಿಂತೀಯಾ, ಕೋಳಿ ನಿದ್ದಿ ಮಾಡ್ತಿಯಾ, ನಿನ್ನ ನೋಡಿ ಕೋಳಿ ಕೂಡಾ ನಾಚಿಕೊಳ್ಳುತ್ತೇ ಬಿಡು” ಎಂದು ಹೋಗಳುತ್ತಿದ್ದರು. ಪಕ್ಕಾ ಒಳ್ಕಿ ಕಟ್ಟಿಗೆಯಂತಹ ದೇಹ, ಬಣ್ಣವೋ ನಸುಗಪ್ಪು, ಬಟ್ಟೆಯೆಂದರೆ ಮಂಜೂರು ಪಾಟಿನ ಅಂಗಿ, ಸೊಂಟಕ್ಕೆ ಸುತ್ತಿದ ಕೊಳೆಯಿಂದ ಬಿಳಿ ಕಳೆದುಕೊಂಡ ಪಂಚೆ, ತೆಲೆಗೆ ಸುತ್ತಿದ ತವಲ್ಲು ಕಿರೀಟದಂತೆ ಸದಾ ವಿರಾಜಮಾನವಾಗಿರುತ್ತಿತ್ತು. ಎಲೆಯಡಿಕೆ ಚೀಲವಿಲ್ಲದ ಕೆಂಪಣ್ಣನನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅದು ಭದ್ರವಾಗಿ ಸೊಂಟದಲ್ಲಿ ನೇತಾಡುತ್ತಿರುತ್ತದೆ. ಒಂದು ವೇಳೆ ಬೀಡಿ ಇಲ್ಲದಿದ್ದರೂ ದಿನದೂಡುತ್ತಿದ್ದ ಎಲೆಯಡಿಕೆ ಇಲ್ಲದೆ ಒಂದುಗಂಟೆ ಕಳೆಯುವುದು ಕೂಡ ಕೆಂಪಣ್ಣನಿಗೆ ದುಸ್ತರವಾಗುತ್ತಿತ್ತು. ಎಲೆಯಡಿಕೆ ಹಾಕಿಕೊಳ್ಳದೆ ಯಾವ ಕೆಲಸವನ್ನೂ ಮುಟ್ಟುತ್ತಿರಲಿಲ್ಲ. ಆದ್ದರಿಂದ ಅವನ ಹೆಂಡತಿ ಸರೋಜಕ್ಕ ತಿಮ್ಮನಕಟ್ಟಿ ಸಂತೆಯಿಂದ ವಾರಕ್ಕೆ ಆಗುವಷ್ಟು ಕಾಲು ಕೆಜಿ ಅಡಿಕೆ ಒಂದು ಕವಳಗಿ ಎಲೆ ಮತ್ತು ಒಂದು ಪೆಂಡಿ ಹೊಗೆಸೊಪ್ಪು ತರುತ್ತಿದ್ದಳು. ಕೆಂಪಣ್ಣ ನಾಲ್ಕೇ ನಾಲ್ಕು ದಿನಕ್ಕೆ ಖಾಲಿ ಮಾಡಿ ಕೂರುತ್ತಿದ್ದ. ಬೇಸಾಯ ತರಬಿ ಎಲೆಯಡಿಕೆಗೆ ಅವರಿವರ ಬಳಿ ಅಲೆಯುತ್ತಿದ್ದ. ಹೀಗೆ ನಾಲ್ಕಾರು ಮೈಲಿ ಅಲೆದು ಕೊನೆಗೆ ಯಾರೋ ಹೊಲ ಹೊಡೆಯುವರ ಬಳಿ ಗಿಟ್ಟಿಸಿಕೊಂಡು ತಲಬು ಮಾಡೋ ಹೊತ್ತಿಗೆ ಸಂಜೆಯಾಗಿರುತ್ತಿತ್ತು. ದಿನವಿಡೀ ಅಲೆಯುತ್ತಿದ್ದರಿಂದ ಕಾಲು ಎಕರೆ ಹೊಲವನ್ನೂ ಕುಂಟೆ ಹರಗುತ್ತಿರಲಿಲ್ಲ. ಹೀಗೇ ಅಸಡ್ಡೆ ಮಾಡಿದ್ದರಿಂದ ಹತ್ತಾರು ಎಕರೆ ಜಮೀನಿನಲ್ಲಿ ಜಾಲಿ ಬೆಳೆದು ನಿಂತಿದ್ದವು.

ಕೆಂಪಣ್ಣನಿಗೆ ಭಜನೆ ಹುಚ್ಚು ಸ್ವಲ್ಪ ಹೆಚ್ಚೆಂದರೆ ತಪ್ಪಿಲ್ಲ. ಶ್ರಾವಣದಲ್ಲಿ ಸರಿಹೊತ್ತಿನ ತನಕ ಭಜನೆ ಮಾಡುತ್ತಿದ್ದ ಅವನು ಭಜನೆ ಪದ ಹಾಡಲು ಶುರು ಮಾಡಿದರೆ ಸರಿಹೊತ್ತಿನ ತನಕ ಮುಗಿಯುತ್ತಿರಲಿಲ್ಲ. ಕೆಂಪಣ್ಣ ಲೆಕ್ಕದಲ್ಲಿ ನನಗೆ ದೊಡ್ಡಪ್ಪನಾಗಬೇಕು ಆದರೆ ನಾನು ಪೂವಣ್ಣ ಎಂದು ಕರೆಯುತ್ತಿದ್ದೆ. ಅದಕ್ಕೆ ಕಾರಣ ನಾನು ಚಿಕ್ಕವನಿದ್ದಾಗ ಕೆಂಪಣ್ಣ ಅನ್ನಲು ಬರುತ್ತಿರಲಿಲ್ಲ. ಎಷ್ಟೇ ಪ್ರಯತ್ನಪಟ್ಟರು ನನ್ನ ಬಾಯಿಯಿಂದ ಕೆಂಪಣ್ಣ ಎಂದು ಉಚ್ಚರಿಸಲಿಕ್ಕೆ ಸಾಧ್ಯವಾಗಲಿಲ್ಲವಂತೆ ಅಪ್ಪ ಅಮ್ಮ ತುಂಬಾ ಹೇಳಿಕೊಟ್ಟರು ಹು ಹೂಂ ಬರಲಿಲ್ಲ. ಕೊನೆಗೆ ಪೂವಣ್ಣ ಅಂತಾನೆ ಕರೆಯುತ್ತಿದ್ದೆನಂತೆ. ಊರಿನವರ ಕೆಂಪಣ್ಣ ನನ್ನ ಬಾಯಲ್ಲಿ ಪೂವಣ್ಣನಾದ. ಅವನು ನಾನು ಜೊತೆಗೆ ಎಮ್ಮೆ ಕಾಯಲು ಹೋಗುತ್ತಿದ್ದರಿಂದಲೋ… ಗೊಬ್ಬರಗಾಡಿಯಲ್ಲಿ ಕಾಡಿ ಬೇಡಿ ಹತ್ತಿಕೊಂಡು ಅವನಿಂದ ಎತ್ತಿನ ಹಗ್ಗ ಕಸಿದುಕೊಂಡು ‘ಪೂವಣ್ಣ ನಂಗೂ ಗಾಡಿ ಹೊಡಿಯೋದು ಹೇಳಿಕೊಡೋ’ ಎಂದು ದುಂಬಾಲು ಬಿದ್ದಾಗ ನಡುವೆ ಕೂರಿಸಿಕೊಂಡು ಗಾಡಿ ಹೊಡೆಯುವುದನ್ನು ಕಲಿಸಿದ್ದರಿಂದಲೋ… ಗೊಬ್ಬರದ ಮೇಲೆ ಕುಳಿತು ಚಡ್ಡಿ ಅಂಗಿಗೆ ಸಗಣಿಕಲೆ ಮುಣಿಸಿಕೊಂಡು ಮನೆಗೆ ಬಂದಾಗ ಅಮ್ಮನ ಕೈಯಿಂದ ಗೋನಜುಳ್ಳಿ ಏಟನ್ನು ತಪ್ಪಿಸಿದ್ದರಿಂದಲೋ… ಶಾಲೆ ಬಿಟ್ಟು ಕಳ್ಳಿಸಾಲು ತಿರಿಗಿದಕ್ಕೆ ಅಪ್ಪನಿಂದ ನೆರವೇರುತ್ತಿದ ಮಹಾ ಮಂಗಳಾರತಿಯಿಂದ ಬಚಾವು ಮಾಡಿದ್ದರಿಂದಲೋ… ಪೂವಣ್ಣ ನಂಗೂ ಎಲೆಡ್ಕಿ ಕೊಡೋ ಅಂತಾ ಕೇಳಿ ಗೋಗರೆದಾಗ ಸಂಣ್ಣುಡ್ರು ಎಲೆಡ್ಕಿ ತಿಂದ್ರೆ ಮೂಕಳ್ಯಾಗ ಹಲ್ಲು ಉದ್ರುತ್ತಾವೆ ಅಂತೇಳಿ ಹೆದ್ರಿಸುತ್ತಿದ್ದರಿಂದಲೋ… ಭಜನೆ ಮಾಡುವಾಗ ಟಕೋರಿ ತಾಳ ತಪ್ಪಿದಾಗ ಗದರಿಸಿ ಬೆದರಿಸಿ ಕಲಿಸಿಕೊಟ್ಟಿದ್ದರಿಂದಲೋ… ಯಾವುದೇ ಪೀಜು ತೆಗೆದುಕೊಳ್ಳದೆ ತನ್ನ ಅನುಭವ ಪಾಠಶಾಲೆಗೆ ನನ್ನನ್ನು ದಾಖಲಿಸಿಕೊಂಡು ತಿದ್ದಿ ಬುದ್ದಿ ಹೇಳಿದ್ದರಿಂದಲೋ… ಗೊತ್ತಿಲ್ಲ! ಆವನೊಬ್ಬ ಮಹಾಗುರುವಾಗಿದ್ದ ನನ್ನ ಬಾಲ್ಯಪೀಠಿಕಾ ಕಲಿಕಾಲಯಕ್ಕೆ!

ಕೆಂಪಣ್ಣನಿಗೆ ನಿದ್ದೆ ಕಡಿಮೆ ಅವನದು ಕೋಳಿ ನಿದ್ದೆ. ಒತ್ತಾಯಕ್ಕೆ ಕಣ್ಣುಮುಚ್ಚಿದರೆ ಒಂದು ಜಂಪ ನಿದ್ದೆ ಮತ್ತೆ ಬುದುಕ್ಕನೆ ಎದ್ದು ಬಿಡುತ್ತಿದ್ದ. ಹಾಳಾದ ನಿದ್ದೆ ಕಣ್ಣಿಗೆ ಸುಳಿಯೋದಿಲ್ಲ ಎಂದು ಕೌದಿಯನ್ನು ತುಂಬಾ ಗುಬ್ಬಲು ಹಾಕಿಕೊಂಡು ದುಂಡಿ ಉಳ್ಯಾಡಿದಂಗೆ ಒಳ್ಯಾಡಿ ಮೇಲೇಳುತ್ತಿದ್ದ. ಸ್ವಲ್ಪ ಮೈ ಹಗುರಾದಂತಾಗಿ ಮುಂದಿನ ಕೆಲಸಕ್ಕೆ ಕೈ ಹಚ್ಚುತ್ತಿದ್ದ.

ಕೆಂಪಣ್ಣ ಭಜನೆಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ಅವನ ಭಜನೆಯ ಬೈಠಕ್ ಒಂದು ರೀತಿ ಮತ್ತೇರಿಸುತ್ತಿತ್ತು. ಅವನು ಹಾಡಲು ಸುರುಮಾಡಿದರೆ ಹಿಮ್ಮೇಳದವರು ತಲಿ ಕೆರೆದುಕೊಳ್ಳುತ್ತಿದ್ದರು. ಏಕೆಂದರೆ ಅವನು ಹೇಳಿದ ಪದಗಳನ್ನು ಹಾಡುವುದು ಅಷ್ಟು ಸುಲಭವಾಗಿರಲಿಲ್ಲ. ಅವನ ಪದಗಳೋ ರೈಲು ಬಂಡಿಯಂತೆ ಉದ್ದವಾಗಿರುತ್ತಿದ್ದವು. ‘ಬೆಳ್ಳನೇ ಎರೆಡೆತ್ತು ಬೆಳ್ಳಿಯ ಬಾರುಕೋಲು ಕೇರಿಯ ದಂಡಿಯ ಹೊಲಕ್ಕೆ… ಕೆರೆಯ ದಂಡೆಯ ಹೊಲಕ್ಕೆ… ನಾವು ಹೋಗಿ ಜೋಳಾವ ಬಿತ್ತೋಣ ಬಾರೋ… ಮುತ್ತಿನಂತ ಜೋಳವಾ ಬಿತ್ತೋಣ ಬಾರೋ… ಸೋಮಲಿಂಗಯ್ಯನಿಗೆ ಒಡವೆ ಮೇಲೆ ಬಂಗಾರದ ಕಳಸ… ಯಾರು ಮಾಡಿಸಿದವರು… ಯಾರು ಮಾಡಿಸಿದರೋ ಬಂಗಾರದ ಒಡವೆಯ ನೋಡಿ ಬರೋಣ ಬಾರೋ…!’ ಎಂದು ಚೆಂದವಾಗಿ ಪದ ಹಾಡಹತ್ತಿದರೆ ಬಸವಣ್ಣನ ಗುಡಿಯೊಳಗಿನ ಕಲ್ಲಿನ ಬಸವನು ಕೂಡಾ “ಕೆಂಪಣ್ಣ ಹೊಲಕ್ಕೆ ನಾನು ಬರ್ತೀನಿ” ಅಂತಾ ಜೊತೆಯಾಗುತ್ತಿತ್ತು. ಆದರೆ ಕೆಲ ಹುಡುಗರು “ಸುರುವಾತ್ರಲೇ ಕೆಂಪಣ್ಣನ ಕೊರತಾ ಬೇಗ ಮುಗಿಯೋಲ್ಲ ಮೇಲೆಳ್ರಿ ಹೋಗಿ ಉಂಡು ಮಕ್ಕೋಣನಾ… ನಡ್ರೇಲೆ… ನಡ್ರಿ ಬೇಗ” ಎಂದು ಕಾಲು ಕೀಳುತ್ತಿದ್ದರು. ನಾನು ಮಾತ್ರ ಪಕ್ಕದಲ್ಲೇ ಕುಳಿತು ಅವನ ಪದಗಳನ್ನು ಲೀಲಾಜಾಲವಾಗಿ ಎತ್ತಿ ಕೊಡುತ್ತಿದ್ದೆ; ಅದಕ್ಕೆ ಕೆಂಪಣ್ಣ ಹೂವು ನೋಟ ಬೀರಿ ತಲೆ ಹಾಕುತ್ತಿದ್ದ.

ಭಜನೆ ಸದ್ದು ನಿಲ್ಲುವೊತ್ತಿಗೆ ನಡುರಾತ್ರಿ ಕಳೆದಿರುತ್ತಿತ್ತು. ಒತ್ತಾಯ ಪೂರಕವಾಗಿ ಕೌದಿಯಲ್ಲಿ ಕಾಲು ಚಾಚಿದ್ರು ನಿದ್ದೆ ಸುಳಿಯುತ್ತಿದ್ದಿಲ್ಲ. ಒಂದು ಜೂರಿ ಜಗ್ಗಿ ಬಿಟ್ಟಂಗೆ ಜಂಪು ತಗೊಂಡು ನಿದ್ದೆಯಿಂದೇಳುತ್ತಿದ್ದ. ಬೆಳಕರಿಯೋದು ಇನ್ನೂ ತಡ ಅಂತಾ ಗೊತ್ತಾಗುತ್ತಲೇ ನೀರೊಲಿಗೆ ಕಟ್ಟಿಗಿ ತುರುಕಿ ಬೆಂಕಿ ಹಾಕುತ್ತಿದ್ದ. ಅದೆ ಬೆಂಕಿಯಲ್ಲಿ ಮೈ ಕಾಸಿಕೊಳ್ಳುತ್ತಾ ಬಕ್ಕಣ್ಣದಲ್ಲಿನ ಬೀಡಿ ಕಟ್ಟು ತೆಗೆದು ಅದುಮಿ ನೋಡಿ ಗಟ್ಟಿಯಾದದ್ದನ್ನು ಆಯ್ದು ಮೂತಿಗೆ ಕೆಂಡ ತಾಗಿಸಿ ನಾಕು ದಮ್ಮು ಎಳೆದರೆ ಮೈಯಂತ ಮೈಯೆಲ್ಲಾ ಉರಿಯಾಗುತ್ತಿತ್ತು. ಭಜನೆ ಪದಗಳನ್ನು ಒಬ್ಬನೇ ಗುನುಗಿಕೊಳ್ಳುತ್ತ ಬಣವೆಯಿಂದ ಮೇವು ಹಿರಿದು ಕತ್ರಿಬಡ್ಡಿಗೆ ಕೊಟ್ಟು ತುಂಡು ಮಾಡಿ ಗೊಂದಲಿಗೆಗೆ ಸುರುಯುತ್ತಿದ್ದ. ಚಳಿಗೆ ಮೈ ಕೊಡವಿ ಎದ್ದ ದನಗಳು ಮೇವು ನುರಿಸುತ್ತಿದ್ದವು. ಕವ್ವ ಕತ್ತಲೆಯಲ್ಲೇ ಸಗಣಿ ಹೊಡೆದು ಗೋತಾ ಮುಗಿಯೋಷ್ಟೊತ್ತಿಗೆ ನೀರು ಕಾದಿರುತ್ತಿದ್ದವು ಕೈ ಕಾಲು ಮುಖ ತೊಳೆದು ಮೂಡಲು ಕೆಂಪೇರುವುದನ್ನು ಕಾಯುತ್ತ ಕೂರುತ್ತಿದ್ದ. ಕೆಂಪೇರಿದ್ದೆ ತಡ ಸುದ್ದಿ ಬಿತ್ತಲು ಕೇರಿಗಳ ಕಡೆ ಪಾದ ಬೆಳಸುತ್ತಿದ್ದ. ಸುತ್ತ ಹತ್ತಾರು ಹಳ್ಳಿಗಳಲ್ಲಿ ಅವನಿಗೆ ತಾಗದ ಸುದ್ದಿಗಳೇ ಇಲ್ಲ. ‘ಗೊತ್ತಿಲ್ಲ ನಿಮ್ಗೆ ಗೊತ್ತಿಲ್ಲ?’ ಅಂತಾ ಗೊತ್ತಿಲ್ಲದ ಇಚಾರ ಊರಿಗೆಲ್ಲಾ ಬಿತ್ತುವುದೇ ಅವನ ನಿತ್ಯದ ಕಾಯಕ. ಲಗ್ನದ ಸುದ್ದಿ, ಮೈ ನೇರತ ಸುದ್ದಿ, ಯಾರಿಗಾದ್ರೂ ಕೂಸು ಹುಟ್ಟಿದ್ರೆ ಆ ಸುದ್ದಿ, ಅಷ್ಟೇ ಯಾಕೆ ಓಡಿ ಹೋದವರ ಸುದ್ದಿ; ಕಳ್ಳ ಬಸುರಾದವರ ಸುದ್ದಿ ಎಲ್ಲವೂ ಕೆಂಪಣ್ಣಗೆ ಮೊದಲು ತಾಗುತ್ತಿದ್ದವು. ಅವ್ನ ಹೆಣ್ತಿ ಇವ್ನು ಇಟ್ಟಗೊಂಡ ಸುದ್ದಿ, ಇವ್ನು ಹೆಣ್ತಿ ಅವ್ನು ಇಟ್ಟಗೊಂಡ ಸುದ್ದಿಯನ್ನು ಊರು ಮುಂದಿನ ಅಗಸ್ಯಾಗ ಬಿತ್ತಿ ಅಡುಗಿ ಮನಿ ನುಗ್ಗುತ್ತಿದ್ದ. ಕಳ್ಳ ಹಾದ್ರ ಹುಳ್ಳು ಹುಳ್ಳುಗೆ ಹಬ್ಬುತಿದ್ದಂಗೆ ಕೈ ಕೈ ಹಿಚಿಗಿಕೊಳ್ಳೋದು ಮಾತ್ರ ಕಳ್ಳಪಿಂಡಿಗಳದಾಗುತ್ತಿತ್ತು. ಹಂಗಾಗಿ ಯಾರಿಗೂ ಹೇಳಬ್ಯಾಡಪ್ಪ ಅಂತಾ ತಿನ್ನಾಕ ಗರಂ ಗರಂ ಕೊಡ್ತಿದ್ದರು. ಕೊಟ್ಟುದ್ದು ತಿಂದು ಅಗಸ್ಯಾಗ ಹೂಸು ಬಿಡೋದು ಮಾತ್ರ ಕೆಂಪಣ್ಣ ಮರಿತಿದ್ದಿಲ್ಲ. ಆದ್ದರಿಂದ ಕೆಂಪಣ್ಣನನ್ನು ನ್ಯೂಸ್ ಪೇಪರ್ ಕೆಂಪಣ್ಣ ಅಂತಲೇ ಕರೆತಿದ್ರು. ಟಿವಿಗಳಿಲ್ಲದ ಸುದ್ದಿಪತ್ರಿಕೆಗಳು ಊರಿಗೆ ಬಾರದಿದ್ದ ಕಾಲದಲ್ಲಿ ಆ ಕೆಲಸವನ್ನು ಕೆಂಪಣ್ಣ ಅಚ್ಚುಕಟ್ಟಾಗಿ ಮಾಡುತ್ತಿದ್ದ.

ಕೆಂಪಣ್ಣ ಗ್ರಾಮ ಪಂಚಾಯಿತಿ ಎಲೆಕ್ಷನ್ನಿಂದ ಪಾರ್ಲಿಮೆಂಟ್ ಎಲೆಕ್ಷನ್ನಿನವರೆಗೂ ತಿಳಿದುಕೊಂಡಿದ್ದ. ಕಾಲೇಜು ಹೋಗುವ ಹುಡುಗರನ್ನು ಕಾಡಿ ಬೇಡಿ ಪ್ರಜಾವಾಣಿ ಪತ್ರಿಕೆ ತರಿಸಿಕೊಂಡು ಒಂದಕ್ಷರ ಬಿಡದಂತೆ ಓದುತ್ತಿದ್ದ. ಅದು ತನ್ನ ಮನೆಯ ತುದಿ ಕಟ್ಟೆಯ ಮೇಲೆ ಕುಕ್ಕರಗಾಲಿನಲ್ಲಿ ಕುಂತು. ಬೀದಿಯಲ್ಲಿ ಹೋಗುವವರು “ಏ ಕೆಂಪಣ್ಣ ಬಿದ್ದಿಯೋ ಮಾರಾಯ ನೆಟ್ಟಗ ಕೂತಗೊಂದು ಓದು” ಅಂದ್ರೆ ‘ಇಲ್ಲ ಬಿಡಣ್ಣ ನಂಗೆ ತುದಿ ಕಟ್ಟಿಮ್ಯಾಲೆ ಕುಂತ್ರೆನೇ ತೇಲಿಗತ್ತೋದು” ಅಂತೇಳಿ ಹಲ್ಲು ಕಿರಿಯುತ್ತಿದ್ದ. ಪೇಪರ್ ಎಷ್ಟೇ ಹಳೆಯದಾದರೂ ಸರಿ ಅವನನ್ನು ಕೇಳದೆ ಒಲೆಗೆ ಹಾಕುವಂತಿರಲಿಲ್ಲ. ಹಾಗೆನಾದರೂ ಅವನ ಹೆಂಡತಿ ಸರೋಜಮ್ಮ ಹಾಕಿದಳೆಂದರೆ ದೊಡ್ಡ ಜಗಳವೆ ಆಗುತಿತ್ತು. ಪ್ರತಿಯೊಂದು ಸುದ್ದಿಯು ಅವನಿಗೆ ಬೇಕಿತ್ತು. ಸುದ್ದಿ ಬಿತ್ತುವುದೆಂದರೆ ಎಲ್ಲಿಲ್ಲದ ಉತ್ಸಾಹ. ಇನ್ನೊಬ್ಬರಿಗೆ ಹೇಳದೆ ಸುಮ್ಮನಿರುವದಂತೂ ಅವನಿಂದ ಸಾಧ್ಯವಿಲ್ಲ. ಆದ್ದರಿಂದ ಮೂಡಲು ಕೆಂಪೇರುತ್ತಿದ್ದಂತೆ ಕೇರಿಗಳಿಗೆ ಹೊಂಟುಬಿಡುತ್ತಿದ್ದ.

ನಸುಕು ಹರಿಯುತ್ತಿದ್ದಂತೆ ಅಂಗಳ ಸಾರಿಸಿ ರಂಗೋಲಿ ಬಿಡುವ ಹೆಣ್ಣುಮಕ್ಕಳು ಕೂಡಾ ಕೆಂಪಣ್ಣ ಬರುವುದನ್ನು ನೋಡಿದರೆ “ಏನೋ ಸುದ್ದಿ ಬಂತು ತಡ್ರಿ” ಅಂತಾ ಒಳಗೋಗದೆ ನಿಂತು ಬಿಡುತ್ತಿದ್ದರು. “ನಿಮ್ಗೆ ಗೊತ್ತಿಲ್ಲ… ಗೊತ್ತಿಲ್ಲ… ನೀಲವ್ವನ ಮಗಳು ಎಣ್ಣಿ ಕುಡುದಾಳಂತೆ ಉಳಿತೋತೋ ಹ್ಯಾಂಗೋ ಹೇಳೋಕಾಗಲ್ಲ, ಗೌರಕ್ಕನ ಸೊಸೆ ನೇಣು ಹಾಕೆಂದು ಸಾಯ್ತಂತೆ, ಮಲ್ಲವ್ವ ಗಂಡ ಕುಡಿಯಾಕ ತಾಳಿ ಹರಿದಿದ್ಕೆ ಹುಡ್ರು ಕಟ್ಗೆಂದು ಹೊಳಿಬಿದ್ಳಂತೆ, ಜಗದಣ್ಣನ ಮಕ್ಕಳು ಬೈಕ್ನ್ಯಾಗ ಬಿದ್ದು ರಾಮರಗ್ತ ಉಳಿಯಂಗಿಲ್ಲಂತೆ” ಎಂಬಿತ್ಯಾದಿ ಸುದ್ದಿಗಳನ್ನು ಬಿತ್ತಿ ಸದ್ದಿಲ್ಲದೆ ಹೋಗಿಬಿಡುತ್ತಿದ್ದ.

ಒಂದು ಸಲ ನಾನು ಮತ್ತು ನನ್ನ ಅಣ್ಣ ಆನಂದಯ್ಯ ಬೆಳಬೆಳಗ್ಗೆನೆ ಬೈಕಿನಲ್ಲಿ ಉಕ್ಕಡಗಾತ್ರಿಗೆ ಹೊರಟಿದ್ದೆವು. ಬಸಾಪುರದ ಬಳಿ ನಾಯಿಯೊಂದು ಅಡ್ಡ ಬಂದಿದ್ದರಿಂದ ಇಬ್ಬರೂ ಬಿದ್ದುಬಿಟ್ಟೆವು. ಅದು ಹೇಗೆ ಕೆಂಪಣ್ಣನಿಗೆ ಸುದ್ದಿ ತಾಗಿತೋ ಉಕ್ಕಡದ ಅಜ್ಜಯ್ಯನೆ ಬಲ್ಲ. ನಾವು ಬಿದ್ದ ಸುದ್ದಿ ಆಗಲೇ ಊರು ತುಂಬಿತ್ತು. “ಜಗದಣ್ಣನ ಮಕ್ಕಳು ಬಸಾಪುರ ಕತ್ರಿಯಲ್ಲಿ ಬಕ್ಕ ಬರಲೇ ಬಿದ್ದು ರಾಮರಗ್ತ ಉಳಿಯಗಿಲ್ಲಾಂತ ಬಿಡು” ಎಂದು ಅಪ್ಪ ಅಮ್ಮಗೆ ಹೇಳಿದ್ದೆ ತಡ ನಮ್ಮಮ್ಮ “ಅಯ್ಯೋಯೋ ನನ್ನ ಮಕ್ಕಳು… ನನ್ನ ಮಕ್ಕಳು… ಅಜ್ಜಯ್ಯ ನೀನೇ ಕಾಪಾಡು” ಗೋಳೋ ಎಂದು ಅಳಲಾರಂಭಿಸಿದಳಂತೆ. ಎಲ್ಲಿ ಏನು ಕಥೆ ಅಂತಿದ್ದಂಗೆ ತುಮ್ಮಿಣಕಟ್ಟೆ ಆಸ್ಪತ್ರೆಗೆ ಜನಗಳು ಧಾವಿಸತೊಡಗಿದರಂತೆ. ಬಂದು ನೋಡಿದರೆ ನಮಗೇನು ದೊಡ್ಡ ಗಾಯಗಳಾಗಿರಲಿಲ್ಲ. ತರಚಿದ ಗಾಯಗಳಾಗಿದ್ದವು ಅಷ್ಟೆ. ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ನೋಡಿದ ಅಮ್ಮ ಇನ್ನೂ ಜೋರಾಗಿ ಅಳಲಾರಂಭಿಸಿದಳು. ನಾವು ಎಷ್ಟೇ ಹೇಳಿದರು ಸುಮ್ಮನಾಗಲಿಲ್ಲ.

ಸಂಜೆ ಮನೆಗೆ ಬಂದ ಮೇಲೆ ಅಮ್ಮ ಕೆಂಪಣ್ಣನಿಗೆ ಉಗಿದು ಉಪ್ಪಿನಕಾಯಿ ಹಾಕುತ್ತಾಳೆ ಅಂದುಕೊಂಡರೆ ಬಿಸಿ ಬಿಸಿ ವಗ್ಗಣ್ಣಿ ಮಂಡಕ್ಕಿ ಹಚ್ಚಿಕೊಡಬೇಕೆ! ಅಂತೂ ತನ್ನ ಮಕ್ಕಳು ಬಹುದೊಡ್ಡ ಅಪಾಯದಿಂದ ಪಾರಾಗಿದ್ದಕ್ಕಿರಬೇಕು ಅಂದುಕೊಂಡು ಸುಮ್ಮನಾಗಿದ್ದಳೇನೋ.

ಕೆಂಪಣ್ಣನ ಸುದ್ದಿಗೆ ಯಾರು ಅನುಮಾನ ಪಡುವಂತಿರಲಿಲ್ಲ ಅಷ್ಟು ವಸ್ತುನಿಷ್ಟವಾಗಿ ಹೇಳುವಂತಿರುತ್ತಿತು.  ನಮ್ಮ ಬಗ್ಗೆ ಅಷ್ಟೆಲ್ಲ ಹೇಳಿದರೂ, ಮತ್ಯಾಕೆ ಅಮ್ಮ ವಗ್ಗಣ್ಣಿ ಹಚ್ಚಿಕೊಟ್ಟಿದ್ದಳು ಅಂದ್ರೆ ಸುದ್ದಿ ಮುಟ್ಟಿದ ಕೆಲವೆ ನಿಮಿಷದಲ್ಲಿ “ಏನಿಲ್ಲಂತೆ ಕೈಕಾಲು ಕೆತ್ತಿದವಂತೆ ಅಷ್ಟೆ.  ಜೀವಕ್ಕೇನು ತೊಂದ್ರೆಯಿಲ್ಲ” ಎಂಬ ಸುದ್ದಿಯನ್ನು ಅವನೇ ನೀಡಿದ್ದನಂತೆ!

ಹೀಗೆ ಒಂದಾದ ಮೇಲೊಂದು ಸುದ್ದಿಗೆ ಬರವಿರಲಿಲ್ಲ.