ಮಕ್ಕಳ ಮನೋಭಾವವನ್ನು ಗ್ರಹಿಸಿ ರಚಿಸಿರುವ ಈ ಸಂಕಲನದಲ್ಲಿ  ಸಾಮಾನ್ಯ ಕಥೆಗಳೂ ಇವೆ. ಜೊತೆಗೆ ಅಸಾಮಾನ್ಯ ಫ್ಯಾಂಟಸಿ ಕಥೆಗಳೂ ಇವೆ. ಕಲ್ಪನೆಯನ್ನು ಇಷ್ಟಪಡುವ ಮಕ್ಕಳಿಗೆ ಫ್ಯಾಂಟಸಿ ಇಷ್ಟವಾಗುತ್ತದೆ. ಅವರ  ಇಷ್ಟವನ್ನು ಗ್ರಹಿಸಿ , ಅವರು ಕಥೆಗಳನ್ನು ಪೋಣಿಸಿದ್ದಾರೆ. ಫ್ಯಾಂಟಸಿ ಕಥೆಗಳನ್ನು ಹೇಳಲು ಕಾಲ್ಪನಿಕ ಅಜ್ಜನೊಬ್ಬನನ್ನು ಸೃಷ್ಟಿಸಿಕೊಂಡಿದ್ದಾರೆ.  ನಾಗರಾಜ್ ಎಂ ಹುಡೇದ  ಬರೆದ ‘ಅವತಾರ್ ಮತ್ತು ಹಾರುವ ಕುದುರೆ’ ಕಥಾಸಂಕಲನದ ಕುರಿತು ಪ.ನಾ.ಹಳ್ಳಿ ಹರೀಶ್‍ ಕುಮಾರ್ ಅವರ ಅಭಿಪ್ರಾಯ  ಇಲ್ಲಿದೆ. 

ದೊಡ್ಡವರ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಪರಿಗಣಿಸುವ ಅವಕಾಶಗಳೇ ಕಡಿಮೆಯಾಗಿವೆ. ಸರಳವಾದ ಸಾಹಿತ್ಯ ಸೃಷ್ಟಿ ಬಹು ಸವಾಲಿನದು ಎಂಬುದಕ್ಕೆ ಮಕ್ಕಳ ಸಾಹಿತ್ಯ ಲೋಕವೇ ಸಾಕ್ಷಿ ಎನ್ನಬಹುದು. ಆದರೂ ಪ್ರಯತ್ನಗಳು ನಡೆಯುತ್ತಲೇ ಇವೆ.  ಕ್ರಿಯಾಶೀಲ ಶಿಕ್ಷಕ ನಾಗರಾಜ್ ಹುಡೇದ ರವರು ರಚಿಸಿರುವ ಮೊದಲ ಮಕ್ಕಳ ಕಥಾಸಂಕಲನ ಅವತಾರ್ ಮತ್ತು ಹಾರುವ ಕುದುರೆ ಸುಲಲಿತವಾಗಿ ಓದಿಸಿಕೊಂಡು ಹೋಗುವ ಪುಸ್ತಿಕೆ.

(ನಾಗರಾಜ್ ಎಂ ಹುಡೇದ)

ಸೃಜನಶೀಲತೆಯನ್ನು ಮೈಗೂಡಿಸಿಕೊಂಡು ಸದಾಕಾಲ ಶಾಲೆ ಮತ್ತು ಶಾಲಾ ಮಕ್ಕಳ ಪ್ರಗತಿಗಾಗಿ ಶ್ರಮಿಸುತ್ತಿರುವ ನಾಗರಾಜುರವರು ಮಕ್ಕಳ ಮನೋಭಾವವನ್ನು ಚೆನ್ನಾಗಿ ಬಲ್ಲರು.  ಶಾಲೆಯಲ್ಲಿಯೂ ಅವರು   “ಕಥಾ ಓದು” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ತಮ್ಮ ಶಾಲಾ ಮಕ್ಕಳಿಗೆ ಅಷ್ಟೇ ಅಲ್ಲದೆ ಸುತ್ತಲಿನ ಶಾಲೆಗಳ ಮಕ್ಕಳಿಗೂ ಸಹ ಆ ಕಾರ್ಯಕ್ರಮದ ಮೂಲಕ ಅನೇಕ ಮಕ್ಕಳ ಕಥೆಗಳನ್ನು ಹೇಳಿ ಅವರಲ್ಲಿನ ಕುತೂಹಲವನ್ನು ತಣಿಸುತ್ತಿದ್ದರು. ಕಥಾ ಓದು ಕಾರ್ಯಕ್ರಮಕ್ಕಾಗಿ ರಚಿತವಾದ ಅನೇಕ ಕಥೆಗಳಲ್ಲಿ ಆಯ್ದ 13 ಕಥೆಗಳ ಸಂಕಲನವೇ “ಅವತಾರ್ ಮತ್ತು ಹಾರುವ ಕುದುರೆ”.

ಇಲ್ಲಿ ಸಾಮಾನ್ಯ ಕಥೆಗಳು ಇವೆ. ಜೊತೆಗೆ ಅಸಾಮಾನ್ಯ ಫ್ಯಾಂಟಸಿ ಕಥೆಗಳೂ ಇವೆ. ಕಲ್ಪನೆಯನ್ನು ಇಷ್ಟಪಡುವ ಮಕ್ಕಳಿಗೆ ಫ್ಯಾಂಟಸಿ ಇಷ್ಟವಾಗುತ್ತದೆ. ಅವರ  ಇಷ್ಟವನ್ನು ಗ್ರಹಿಸಿ, ಅವರು ಕಥೆಗಳನ್ನು ಪೋಣಿಸಿದ್ದಾರೆ. ಫ್ಯಾಂಟಸಿ ಕಥೆಗಳನ್ನು ಹೇಳಲು ಕಾಲ್ಪನಿಕ ಅಜ್ಜನೊಬ್ಬನನ್ನು ಸೃಷ್ಟಿಸಿಕೊಂಡಿದ್ದಾರೆ.

ಕುವೆಂಪುರವರ ಬೊಮ್ಮನಹಳ್ಳಿಯ ಕಿಂದರಿಜೋಗಿಯನ್ನು ನೆನಪಿಸಿಕೊಳ್ಳುವ ಮೂಲಕ ತಮ್ಮ ಕಥಾ ಬುತ್ತಿಯನ್ನು ಬಿಚ್ಚಿಡುವ ಲೇಖಕರು, ಕಥೆ ಹೇಳುವ ಅಜ್ಜನ ಮೂಲಕ ಒಂದೊಂದೇ ಕಥೆಗಳನ್ನು ಎಲ್ಲಿಯೂ ಬೇಜಾರಾಗದಂತೆ ನಿರೂಪಿಸಿದ್ದಾರೆ.

ಇಲ್ಲಿನ ಪ್ರತಿ ಕಥೆಯೂ ತನ್ನದೇ ಆದ ಅಂತಃಸತ್ವವನ್ನು ಒಳಗೊಂಡಿದ್ದು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಾಮಾಜಿಕ ಪ್ರಜ್ಞೆ ಮತ್ತು ಪರಿಸರ ಕಾಳಜಿಯನ್ನು ಬಿಂಬಿಸಲು ಪ್ರಯತ್ನಿಸಿವೆ. ಅವತಾರ ಮತ್ತು ಹಾರುವ ಕುದುರೆಯು ನೆಲ-ಜಲ ಅರಣ್ಯ ಸಂರಕ್ಷಣೆಯ ಅಗತ್ಯತೆಯನ್ನು ರಂಜನಾತ್ಮಕವಾಗಿ ತಿಳಿಸಿದರೆ, ‘ಕೊರೋನವೈರಸ್ ಮತ್ತು ಪುಟ್ಟಿ’  ಕಥೆಯಲ್ಲಿ ಕಥೆಗಾರರು ಜಗತ್ತನ್ನೇ ಕಾಡಿದ ಕೊರೊನವನ್ನೇ ಬೆದರಿಸುವ ಪುಟ್ಟಿ ಪಾತ್ರವನ್ನು ಜಾಣ್ಮೆಯಿಂದ ರೂಪಿಸಿದ್ದಾರೆ.

ಸಾಮಾಜಿಕ ಅಂತರ, ಶುಚಿತ್ವದ ಮೂಲಕ ವೈರಸ್ ವಿರುದ್ಧದ ಯುದ್ಧವನ್ನು ಗೆಲ್ಲುವ ತಂತ್ರವನ್ನು ಕಥೆ ಹೇಳುತ್ತಲೇ ತಿಳಿಸಿದ್ದಾರೆ. ಕಣ್ಣಿಗೆ ಪಕ್ಕನೇ ಗೋಚರಿಸದಷ್ಟು ಸಣ್ಣಗಾತ್ರದ ಗೊದ್ದಿರುವೆಗಳ ಗುಂಪು ಬೃಹತ್ ಗಾತ್ರದ ಆನೆಗಳ ಹಿಂಡನ್ನೇ ಹಿಮ್ಮೆಟ್ಟಿಸಿ, ಕಬ್ಬಿನ ಗದ್ದೆಯನ್ನು ಉಳಿಸುವ ‘ಕಬ್ಬಿನಗದ್ದೆ ಮತ್ತು ಗೊದ್ದಿರುವೆ’ ಕಥೆಯು ಪರಿಸರದಲ್ಲಿ ಜೀವಿಗಳ ಪರಸ್ಪರ ಸಮತೋಲನ ಮತ್ತು ಪರಸ್ಪರ ಅವಲಂಬನೆಯ ತತ್ವವನ್ನು ಸಾರುತ್ತದೆ. ಬಂಗಾಳಿ ಮರ ಕಥೆಯಂತೂ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಗುರುತರವಾದ ಜವಾಬ್ದಾರಿ ನಿರ್ವಹಿಸಬಲ್ಲುದು.

ಮಾತನಾಡುವ ಮರಗಳು ಮನುಷ್ಯ ಮತ್ತು ತಾನಿರುವ ಪರಿಸರದ ನಡುವಿನ ಸಹಜ ಸಂಬಂಧವನ್ನು ನಮ್ಮ ಮುಂದೆ ತೆರೆದಿಟ್ಟರೆ, ‘ಆನೆ ಸೊಂಡಿಲು ಜಿಂಕೆ ಮೈ ಮುಟ್ಟೋಣ ಬನ್ನಿʼ ಕಥೆಯು ಮಕ್ಕಳು ಮತ್ತು ಪ್ರಾಣಿಗಳನ್ನು ಸ್ನೇಹದಿಂದ ಬೆಸೆಯಬೇಕಾದ ಸಂದೇಶ ಸಾರುತ್ತದೆ. ಅರಣ್ಯ ಸಂರಕ್ಷಣೆಯ ಮಹತ್ವವನ್ನು ಸಾರುತ್ತ ಶಾಲೆಗೆ ದಡ್ಡನಾಗಿದ್ದರೂ, ನಾಡಿಗೇ ಬುದ್ಧಿ ಹೇಳಿದ ಬಕ್ಕೂನ ಕಥೆಯಾಗಲೀ, ಸರಳ ವಿವಾಹಗಳ ಬಗ್ಗೆ ತಿಳಿಸುವ ಕಪ್ಪೆಗಳ ಮದುವೆ, ಕುತೂಹಲದ ರಾಪಾ ದಿಬ್ಬ, ಬಂಗಾರದ ಸರ, ‘ಕಚ್ಚಾಡುವ ನಕ್ಷತ್ರ’ಗಳ ಕತೆ..  ಹೀಗೆ ಇಲ್ಲಿನ ಕಥೆಗಳು ಒಂದಕ್ಕಿಂತ ಒಂದು ವಿಭಿನ್ನ ನೆಲೆಯಲ್ಲಿ ಬಿತ್ತರಗೊಳ್ಳುತ್ತ ಸಾಗುತ್ತವೆ. ಅವೆಲ್ಲವುಗಳ ಉದ್ದೇಶ ಪರಿಸರ ಸಂರಕ್ಷಣೆ ಮತ್ತು ಸಹಬಾಳ್ವೆಯ ಜೀವನದ ಸಂದೇಶ ನೀಡುವುದೇ ಆಗಿದೆ.

ಶತಾಯುಷಿಯಾದರೂ ತನ್ನಲ್ಲಿನ ಮಗುವಿನ ಮನಸ್ಸನ್ನು ಹಾಗೆಯೇ  ಕಾಪಿಟ್ಟುಕೊಂಡಿರುವ ಗೂಗಲ್ ಭೀಮಪ್ಪಜ್ಜನ ಬಾಯಿಂದ “ಗಿಡ ಕಡದ ಮ್ಯಾಲ ಆಸರ ಇಲ್ಲದ ಹಕ್ಕಿಗೋಳಹಂಗ ಕಥಿಗೋಳೆಲ್ಲ ಹಾರಿ ಹಾರಿ ದೂರ ದೂರ ಹೋಗಿಬಿಟ್ಟವಪಾ ಎಪ್ಪಾ” ಎಂಬ ಮಾತುಗಳು ಕೇಳುತ್ತೇವೆ. ‘ಈಗ ಮೌಲ್ಯಯುತ ನೀತಿ ಕಥೆಗಳೂ ಇಲ್ಲ, ಕಥೆ ಹೇಳೋ ಅಜ್ಜಂದಿರೂ ಇಲ್ಲಾ ಎಂಬುದನ್ನು ಸೂಚ್ಯವಾಗಿ ಹೇಳಿದಂತಿದೆ ಅವರ  ಈ ಮಾತು. ಹಾಗೆ ನೋಡಿದರೆ ಕಥೆಗಳು ಮಕ್ಕಳಿಗಾಗಿ ನಿರೂಪಿಸಲ್ಪಟ್ಟಿದ್ದರೂ, ದೊಡ್ಡವರಿಗೂ ಬೇಕಾದ ಸಂದೇಶಗಳು ಇಲ್ಲಿವೆ.

ಇಲ್ಲಿನ ಕಥೆಗಳು ಒಬೀರಾಯನ ಕಥೆಗಳಾಗಿರದೇ ಪ್ರಚಲಿತ ಸನ್ನಿವೇಶಗಳಲ್ಲಿ ನಮ್ಮ ಸುತ್ತಲು ನಡೆಯುವ ನೈಜ ಹಿನ್ನೆಲೆಯ ಕಥೆಗಳಾಗಿವೆ. ದಿನನಿತ್ಯ ನಾವು ಕಾಣುವ ಅನೇಕ ವಿಚಾರಗಳು ಕಥೆಗಳಲ್ಲಿ ಪಾತ್ರಗಳಾಗಿ, ಸನ್ನಿವೇಶಗಳಾಗಿ ಬಂದಿವೆ.  ಸಂಕಲನಕ್ಕೆ ಮುನ್ನುಡಿ ಬರೆದಿರುವ ಶಿಶು ಸಾಹಿತ್ಯದಲ್ಲಿ ಸಾಕಷ್ಟು ಸಂಶೋಧನಾತ್ಮಕ ಕೃಷಿ ಮಾಡಿರುವ ಆನಂದ್ ಪಾಟೀಲ್ ಅವರು ಹೇಳಿರುವಂತೆ ಇಲ್ಲಿನ ಕಥೆಗಳು ಕೇವಲ ಮಕ್ಕಳಿಗಾಗಿ ಮಾತ್ರ ಅಲ್ಲದೆ ದೊಡ್ಡವರೊಡನೆಯೂ ಮಾತಿಗಿಳಿಯಬಲ್ಲವು.‌

(ಕೃತಿ: ಅವತಾರ್ ಮತ್ತು ಹಾರುವ ಕುದುರೆ(ಮಕ್ಕಳ ಕಥಾ ಸಂಕಲನ), ಲೇಖಕರು : ನಾಗರಾಜ್ ಎಂ ಹುಡೇದ, ಪ್ರಕಾಶಕರು : ಕಸ್ತೂರಿ ಪ್ರಕಾಶನ. ತಂಗೋಡ, ಪುಟ : 105, ಬೆಲೆ : 100/-)