‘ಈಗೀಗ ಗಿರಣಿ ಕೆಲಸದ ಬಗ್ಗೆ ಬೇಸರ ಬರುತ್ತಿತ್ತು. ಶ್ವಾಸಕೋಶದಲ್ಲಿ ಹತ್ತಿ ಸೇರಿ ಕಾರ್ಮಿಕರ ಆರೋಗ್ಯ ಹದಗೆಡುತ್ತಿತ್ತು. ಹಾಗಾಗಿ ಈ ಗಿರಣಿ ಕೆಲಸ ಬಿಡುವ ಮನಸ್ಸಾಗುತ್ತಿತ್ತು. ಸೂಪರ್ವೈಸರ್  ಹೆಂಡತಿಗೆ ಹೊಡೆದಂತೆ  ನಮಗೆ ಹೊಡೆಯುತ್ತಿದ್ದ. ಅಶ್ಲೀಲವಾಗಿ ಬೈಯುತ್ತಿದ್ದ. ಮಶೀನು ಹೊಲಸಾದರೆ ಬಡಿದು ಕೆಲಸದಿಂದ ಅರ್ಧಕ್ಕೆ ಕಳಿಸುತ್ತಿದ್ದ. ಊಟ ಮುಗಿಸಿಕೊಂಡು ಬರಲು ತಡವಾದರೆ ಹಸಿ ಬರಲಿನಿಂದ ಥಳಿಸುತ್ತಿದ್ದ. ಇಂಥಹ ಎಷ್ಟೋ ಅನ್ಯಾಯಗಳು ನೂಲಿನ ಗಿರಣಿಯಲ್ಲಿ ನಡೆಯುತ್ತಿದ್ದವು. ಒಂದು ಸಂಘಟನೆ ಕಟ್ಟಿ ಈ ಅನ್ಯಾಯ ತಡೆಗಟ್ಟಬೇಕೆಂದು ಅನ್ನಿಸುತ್ತಿತ್ತು. ಆದರೆ ಪ್ರತಿಭಟನೆ ಮಾಡುವವರನ್ನು ಕಿತ್ತೊಗೆಯುತ್ತಿದ್ದರು. ಹೀಗಾಗಿ ಯಾರೂ ಮುಂದೆ ಬರುತ್ತಿರಲಿಲ್ಲ’
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹನ್ನೆರಡನೆಯ ಕಂತು.

 

ಗಂಟಿಚೋರ ಸಮುದಾಯದವರು ಗಿರಣಿವಡ್ಡರ್ ಎಂತಲೂ ಗುರುತಿಸಿಕೊಳ್ಳುತ್ತಾರೆ. ಆರಂಭದ ಎಂ.ಕೆನಡಿ, ಎಂಥೋವನ್ ಒಳಗೊಂಡಂತೆ ಅನೇಕರು ಈ ಸಮುದಾಯವನ್ನು ದಾಖಲಿಸುವಾಗ ಗಿರಣಿವಡ್ಡರ್ ಹೆಸರನ್ನು ಸಮಾನಾಂತರ ಪದವಾಗಿಯೂ, ಪರ್ಯಾಯ ಪದವನ್ನಾಗಿಯೂ ಗುರುತಿಸಲಾಗಿದೆ. ಹೀಗೆ ಗುರುತಿಸಿಕೊಳ್ಳಲು ಚಾರಿತ್ರಿಕ ಪಲ್ಲಟವೊಂದು ಕಾರಣ. ಈ ಸಮುದಾಯವನ್ನು ಸೆಟ್ಲಮೆಂಟುಗಳಲ್ಲಿ ನೆಲೆಗೊಳಿಸಿದ ಮೇಲೆ ಸಮುದಾಯದ ಜನರನ್ನು ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಸಿದರು. ಇದಕ್ಕೆ ಪೂರಕವಾಗಿ ಕಾಟನ್ ಮಿಲ್ಲುಗಳಲ್ಲಿ ಮಾನವಸಂಪನ್ಮೂಲವಾಗಿ ಸೆಟ್ಲಮೆಂಟ್ ವಾಸಿಗಳನ್ನು ಬಳಸಿದರು. ಇದಕ್ಕೆ ಪೂರಕವಾಗಿ ಈಗಲೂ ಗೋಕಾಕ ಫಾಲ್ಸ್ ಸೆಟ್ಲಮೆಂಟಿನಲ್ಲಿರುವ ಗಂಟಿಚೋರ ಸಮುದಾಯದವರು ಗಿರಣಿಗಳಲ್ಲಿ ಕೆಲಸಮಾಡುತ್ತಿರುವುದನ್ನು ಕಾಣಬಹುದು.

ಜೆ.ಎನ್.ಪಾರ್ಕರ್ ತನ್ನ `ಮಾಡ್ರನ್ ರಿಲಿಜಿಯನ್ ಮೂವ್ ಮೆಂಟ್ಸ್ ಇನ್ ಇಂಡಿಯಾ’ (1915) ಕೃತಿಯಲ್ಲಿ ಗಂಟಿಚೋರ ಸಮುದಾಯವನ್ನು ಉಲ್ಲೇಖಿಸುತ್ತಾ `1901 ರಲ್ಲಿ ಬಾಂಬೆ ಪ್ರೆಸಿಡೆನ್ಸಿಯ ದಕ್ಷಿಣಕ್ಕಿರುವ ಬಿಜಾಪುರದಲ್ಲಿ ವಿಶೇಷ ಸೆಟ್ಲಮೆಂಟೊಂದನ್ನು ನಿರ್ಮಿಸಿ, ಇಲ್ಲಿ ನೆಲೆಸಿದ ಸಮುದಾಯಗಳಿಗೆ ಉದ್ಯೋಗಗಳನ್ನು ಸೃಷ್ಟಿಸಿದರು. ಅಂತೆಯೇ ನೂಲನ್ನು ತೆಗೆಯುವ ಮತ್ತು ನೇಕಾರಿಕೆ ಮಾಡುವ ಗಿರಣಿಗಳನ್ನು ತೆರೆದರು. ಕೆಲವರಿಗೆ ಈ ಮಿಲ್ಲುಗಳಲ್ಲಿ ಕೆಲಸವನ್ನು ಕೊಟ್ಟರು’ ಎಂದು ಹೇಳುತ್ತಾನೆ.

ಹೀಗೆ ಬ್ರಿಟೀಷರು ಕಲ್ಪಿಸಿದ ಪರ್ಯಾಯಗಳಲ್ಲಿ ಗಿರಣಿ ಕೆಲಸವೂ ಒಂದಾಗಿತ್ತು. ಹೀಗಾಗಿ ಈ ಸಮುದಾಯದ ಅದರಲ್ಲೂ ಮುಖ್ಯವಾಗಿ ಸೆಟ್ಲಮೆಂಟ್ ವಾಸಿಗಳು ಗಿರಣಿಗಳಲ್ಲಿ ಕೆಲಸಮಾಡಲು ಆರಂಭಿಸಿದ್ದರಿಂದ ತುಡುಗುತನದ ವೃತ್ತಿ ಸಹಜವಾಗಿ ಇಲ್ಲವಾದ್ದರಿಂದ ಹೊಸ ವೃತ್ತಿಯಾದ `ಗಿರಣಿ’ ಕೆಲಸವನ್ನು ಸೇರಿಸಿಕೊಂಡು ಗಿರಣಿ ವಡ್ಡರ್ ಎಂದು ನಮೂದಿಸತೊಡಗಿದರು. ಅಂತೆಯೇ ಇದೇ ಹೆಸರು ಕುಲದ ಹೆಸರಾಗಿಯೂ ಮಾರ್ಪಾಟು ಹೊಂದಿತು. ಹೀಗೆ ವೃತ್ತಿಯ ಪಲ್ಲಟವಾದ ನಂತರ ಗಂಟಿಚೋರರಲ್ಲಿ ಕೆಲವರು ಗಿರಣಿವಡ್ಡರ್ ಆಗಿ ಬದಲಾದರು. ಹೀಗೆ ಬದಲಾದ ಸಮುದಾಯವು ಇಂದು ಹಿಂದುಳಿದ ವರ್ಗಗಳಲ್ಲಿ ಪ್ರಾತಿನಿಧ್ಯ ಪಡೆದಿದೆ. ಈ ಸಮುದಾಯವು ಮೂಲತಃ ಗಂಟಿಚೋರ್ಸ್ ಆದ ಕಾರಣ ಪರಿಶಿಷ್ಟ ಜಾತಿಯ ಸೌಲಭ್ಯಕ್ಕಾಗಿಯೂ ಹೋರಾಟ ಮಾಡುವಂತಾಗಿದೆ.

ಗಿರಣಿ ಕೆಲಸವು ಕರ್ನಾಟಕವನ್ನು ಒಳಗೊಂಡಂತೆ ಇತರೆ ರಾಜ್ಯಗಳಲ್ಲಿ ನೆಲೆಸಿದ ಈ ಸಮುದಾಯದಲ್ಲಿಯೂ ಇತ್ತು. ಮಹಾರಾಷ್ಟ್ರದಲ್ಲಿಯೂ ಉಚಲ್ಯಾ ಸಮುದಾಯದವರು  ಗಿರಣಿ ಕೆಲಸದಲ್ಲಿ ದುಡಿಯುತ್ತಿದ್ದರು. ಲಕ್ಷ್ಮಣ್ ಗಾಯಕವಾಡ ಅವರ ಆತ್ಮಕಥನದಲ್ಲಿ ಗಿರಣಿ ಕೆಲಸದ ಕಷ್ಟಗಳನ್ನೂ, ಶೋಷಣೆಯನ್ನೂ ಈ ಶೋಷಣೆಯ ಕಾರಣ ಕಾರ್ಮಿಕ ಸಂಘಟನೆ ಕಟ್ಟಿದ ಸಂಗತಿಗಳನ್ನು ಬರೆಯುತ್ತಾರೆ. ಅವರು ಗಿರಣಿ ಕೆಲಸದ ಕಷ್ಟಗಳನ್ನು ಹೀಗೆ ದಾಖಲಿಸುತ್ತಾರೆ. `ಈಗೀಗ ಗಿರಣಿ ಕೆಲಸದ ಬಗ್ಗೆ ಬೇಸರ ಬರುತ್ತಿತ್ತು. ಶ್ವಾಸಕೋಶದಲ್ಲಿ ಹತ್ತಿ ಸೇರಿ ಕಾರ್ಮಿಕರ ಆರೋಗ್ಯ ಹದಗೆಡುತ್ತಿತ್ತು. ಹಾಗಾಗಿ ಈ ಗಿರಣಿ ಕೆಲಸ ಬಿಡುವ ಮನಸ್ಸಾಗುತ್ತಿತ್ತು. ಸೂಪರ್ ವೈಜರ್ ನಮಗೆ , ತನ್ನ ಹೆಂಡತಿಗೆ ಹೊಡೆದಂತೆ ಹೊಡೆಯುತ್ತಿದ್ದ. ಅಶ್ಲೀಲವಾಗಿ ಬೈಯುತ್ತಿದ್ದ. ಮಶೀನು ಹೊಲಸಾದರೆ ಬಡಿದು ಕೆಲಸದಿಂದ ಅರ್ಧಕ್ಕೆ ಕಳಿಸುತ್ತಿದ್ದ. ಊಟ ಮುಗಿಸಿಕೊಂಡು ಬರಲು ತಡವಾದರೆ ಹಸಿ ಬರಲಿನಿಂದ ಥಳಿಸುತ್ತಿದ್ದ. ಇಂಥಹ ಎಷ್ಟೋ ಅನ್ಯಾಯಗಳು ನೂಲಿನ ಗಿರಣಿಯಲ್ಲಿ ನಡೆಯುತ್ತಿತ್ತು. ಒಂದು ಸಂಘಟನೆ ಕಟ್ಟಿ ಈ ಅನ್ಯಾಯ ತಡೆಗಟ್ಟಬೇಕೆಂದು ಅನ್ನಿಸುತ್ತಿತ್ತು. ಆದರೆ ಪ್ರತಿಭಟನೆ ಮಾಡುವವರನ್ನು ಕಿತ್ತೊಗೆಯುತ್ತಿದ್ದರು. ಹೀಗಾಗಿ ಯಾರೂ ಮುಂದೆ ಬರುತ್ತಿರಲಿಲ್ಲ’ (ಉಚಲ್ಯಾ:2011:78) ಎಂದು ಸುದೀರ್ಘವಾಗಿ ಗಿರಣಿಗಳ ಒಳಗಿನ ಶೋಷಣೆಯ ಬಗ್ಗೆ ಬರೆಯುತ್ತಾರೆ. ಎಲ್ಲಾ ಕಡೆಯೂ ಇದೆ ಮಾದರಿ ಇರಲಿಲ್ಲವಾದರೂ, ಶೋಷಣೆಯೇ ಇರಲಿಲ್ಲವೆಂತಲ್ಲ.

ಇದೀಗ ಗಿರಣಿಗಳಲ್ಲಿ ಕೆಲಸ ಮಾಡುವ ಗಂಟಿಚೋರ್ಸ್ ಸಮುದಾಯದವರು ಮತ್ತೊಂದು ಹೊಸ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಮುಖ್ಯವಾಗಿ ಕೆಲಸ ಮಾಡುತ್ತಿದ್ದ ಗಿರಣಿಗಳು ಲಾಕ್ ಔಟ್ ಆಗುತ್ತಿವೆ. ನರಗುಂದದ ಗಿರಣಿ ಲಾಕ್ ಔಟ್ ಆದ ಕಾರಣ ಇಲ್ಲಿ ಗಿರಣಿಗಳಲ್ಲಿ ದುಡಿವ ಜನರು ಬಯಲಿಗೆ ಬಿದ್ದಿದ್ದಾರೆ. ಅವರಿಗೆ ವಸತಿಯೂ ಇಲ್ಲದೆ ಟೆಂಟುಗಳಲ್ಲಿ ಜೀವಿಸುವಂತಾಗಿದೆ. ಈ ಬರಹ ಬರೆವ ಹೊತ್ತಲ್ಲಿ ಗೋಕಾಕ ಫಾಲ್ಸ್ ಗಿರಣಿಯೂ ಲಾಕ್ ಔಟ್ ಆಗಿರುವ ಸುದ್ದಿ ತಿಳಿಯಿತು. ನಿಧಾನಕ್ಕೆ ಗಿರಣಿಗಳಲ್ಲಿ ಕೆಲಸ ಮಾಡುವವರ ಪ್ರಮಾಣ ಗಿರಣಿಗಳ ಸ್ಥಗಿತತೆಯಿಂದಾಗಿ ಕಡಿಮೆಯಾಗತ್ತಿದೆ.

ಬಾವಿ ತೋಡುವುದು

ವಿಶೇಷವಾಗಿ ಗಂಟಿಚೋರ ಸಮುದಾಯದ ಬಾವಿ ತೋಡುವ ವೃತ್ತಿಯು ಕಂಡುಬಂದದ್ದು ಬೆಳಗಾಂವ ಜಿಲ್ಲೆ ಗೋಕಾಕ ತಾಲೂಕಿನ ಹಳ್ಳೂರು ಗ್ರಾಮದಲ್ಲಿ. ಈ ಗ್ರಾಮದಲ್ಲಿ ಅಧ್ಯಯನದ ಸಮೀಕ್ಷೆಯಂತೆ 34 ಗಂಟಿಚೋರ ಕುಟುಂಬಗಳಿವೆ. ಇದರಲ್ಲಿ 173 (ಗಂ 71 ಹೆ 61) ರಷ್ಟು ಜನಸಂಖ್ಯೆ ಇದೆ. ವಿಚಾರಿಸಲಾಗಿ ಬಹುಪಾಲು ಕುಟುಂಬಗಳು ಬಾವಿತೋಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಬಾವಿ ತೋಡುತ್ತಿದ್ದ ಹೊಲವೊಂದಕ್ಕೆ ಹೋಗಿ `ಬಾವಿ ತೋಡುವ’ ಈ ಕೆಲಸವನ್ನು ನೋಡಲಾಯಿತು. ಇದು ತುಂಬಾ ಅಪಾಯಕಾರಿ ವೃತ್ತಿ ಎನ್ನಿಸಿತು. ಆಯಿಲ್ ಮೆಷಿನ್ ಒಂದರಿಂದ ಚಕ್ರಕ್ಕೆ ಸುತ್ತಿದ ತಂತಿಯಾಕಾರದ ದಪ್ಪನೆ ವೈರಿನ ತುದಿಗೆ ಕಟ್ಟಿದ ಅಗಲವಾದ ಬಾನಿಯನ್ನು ಬಾವಿಗೆ ಇಳಿಸುತ್ತಾರೆ. ಆಗ ಬಾವಿಯ ಒಳಗೆ ಅಗೆಯುತ್ತಿದ್ದವರು ಸಲಿಕೆ ಹಾರೆ ಬಳಸಿ ಕಲ್ಲು ಮಣ್ಣನ್ನು ತುಂಬುತ್ತಾರೆ. ಹೀಗೆ ತುಂಬಿದ್ದನ್ನು ಮೆಷಿನ್ ಮೇಲಕ್ಕೆ ಎತ್ತುತ್ತದೆ. ಹೀಗೆ ಮೇಲಕ್ಕೆ ಎತ್ತುವಾದ ಈ ಬಾನಿಯಿಂದ ಕಲ್ಲುಗಳು ಕಳಚಿ ಬಿದ್ದರೆ, ಬಾವಿಯ ಒಳಗೆ ಕೆಲಸ ಮಾಡುವವರಿಗೆ ಸದಾ ಅಪಾಯ ಕಾದಿರುತ್ತದೆ. ಹೀಗೆ ಕಲ್ಲು ಬಿದ್ದು ಒಂದಿಬ್ಬರು ಸಾವನ್ನಪ್ಪಿದ ಘಟನೆಯನ್ನು ಹೇಳಿದರು. ಇಂತಹದ್ದೊಂದು ಅಪಾಯಕಾರಿ ವೃತ್ತಿಯಲ್ಲಿ ಹಳ್ಳೂರು ಗಂಟಿಚೋರರು ಬದುಕನ್ನು ಸವೆಸುತ್ತಿದ್ದಾರೆ. ಈ ವೃತ್ತಿ ಹಳ್ಳೂರನ್ನು ಒಳಗೊಂಡಂತೆ ರಾಯಭಾಗ ತಾಲೂಕಿನ ದ್ಯಾವಪ್ರಹಟ್ಟಿ, ಕಡಕಭಾವಿ, ಶಾಹುಪಾರ್ಕ, ಚಿಕ್ಕೋಡಿ ತಾಲೂಕಿನ ಕೆ.ಕೆ.ಮಮದಾಪುರ ಮುಂತಾದ ಕಡೆಗಳಲ್ಲಿ ಕಂಡುಬರುತ್ತದೆ. ಕೆಲವರು ಬಾವಿ ತೋಡುವ ಕೆಲಸ ಮಾಡುತ್ತಿದ್ದರು ಎಂದು ಹೇಳುತ್ತಾರೆ.

ಈ ಸಮುದಾಯದ ಅದರಲ್ಲೂ ಮುಖ್ಯವಾಗಿ ಸೆಟ್ಲಮೆಂಟ್ ವಾಸಿಗಳು ಗಿರಣಿಗಳಲ್ಲಿ ಕೆಲಸಮಾಡಲು ಆರಂಭಿಸಿದ್ದರಿಂದ ತುಡುಗುತನದ ವೃತ್ತಿ ಸಹಜವಾಗಿ ಇಲ್ಲವಾದ್ದರಿಂದ ಹೊಸ ವೃತ್ತಿಯಾದ `ಗಿರಣಿ’ ಕೆಲಸವನ್ನು ಸೇರಿಸಿಕೊಂಡು ಗಿರಣಿ ವಡ್ಡರ್ ಎಂದು ನಮೂದಿಸತೊಡಗಿದರು. ಅಂತೆಯೇ ಇದೇ ಕುಲದ ಹೆಸರಾಗಿಯೂ ಮಾರ್ಪಾಟು ಹೊಂದಿತು. 

ರಾಯಭಾಗ ತಾಲೂಕಿನ `ಕಟಕಬಾವಿ’ ಊರಿನ ಹೆಸರಲ್ಲೇ ಬಾವಿ ತೋಡುವ ವೃತ್ತಿಸೂಚಕ ಸಂಕೇತವಿದೆ. ಅಂತೆಯೇ ಕಟಕಬಾವಿಯಲ್ಲಿ ನೆಲೆಸಿದ ಗಂಟಿಚೋರರ 62 ಕುಟುಂಬಗಳಲ್ಲಿ ಹಲವು ಕುಟುಂಬಗಳು ಬಾವಿ ತೋಡುವ ವೃತ್ತಿಯಲ್ಲಿ ತೊಡಗಿಕೊಂಡಿವೆ. ಈ ಎಳೆಯನ್ನಿಡಿದು ಗಂಟಿಚೋರ ಸಮುದಾಯಕ್ಕೂ ಈ ವೃತ್ತಿಗೂ ಏನಾದರೂ ಪುರಾತನ ನಂಟು ಇರಬಹುದೇ ಎನ್ನುವ ಅನುಮಾನವೊಂದು ನನ್ನನ್ನು ಕಾಡಿತು. ಕಾರಣ ಈ ಹಿಂದೆ ಚರ್ಚೆ ಮಾಡಿದಂತೆ ಈ ಸಮುದಾಯ ಶಾಕ್ತಪರಂಪರೆಗೆ ಸೇರಿದೆ. ಈ ಕಾರಣಕ್ಕೆ ಈ ಸಮುದಾಯವು ಜಲ ಸಂಸ್ಕೃತಿಗೆ ನೇರ ಲಗತ್ತಾಗುತ್ತದೆ. ಈ ಹಿನ್ನೆಲೆಯೊಂದು ಬಾವಿ ತೋಡುವ ಕೆಲಸದ ಹಿಂದೆ ಚಾರಿತ್ರಿಕ ಎಳೆಯಾಗಿ ನಂಟುಪಡೆದಿರಬಹುದು. ಇಲ್ಲಿ ಬಾವಿ ತೋಡುವ ಮೂಲಕ ಭೂಗರ್ಭದಿಂದ ಗಂಗೆಯನ್ನು ಮೇಲೆತ್ತುವ ಈ ಕ್ರಿಯೆ ಮೂಲತಃ ಶಾಕ್ತಪಂಥದ ನೆಲೆಯಿಂದಲೇ ಬಂದದ್ದಾಗಿದೆ.

ಈ ಬಗೆಯ ಸಾಂಸ್ಕೃತಿಕ ಹಿನ್ನೆಲೆ ಇದ್ದಾಗಲೂ, ಸದ್ಯಕ್ಕದು ಹೊಟ್ಟೆಪಾಡಿನ ಕೆಲಸವಾಗಿದೆ. ಹಾಗಾಗಿ ಪರ್ಯಾಯ ವೃತ್ತಿಗಳನ್ನು ಕೈಗೊಳ್ಳಲು ಸರಕಾರ ತನ್ನ ಯೋಜನೆಗಳಲ್ಲಿ ಸಹಾಯ ಮಾಡಿದರೆ, ಈ ಸಮುದಾಯ ಈ ಅಪಾಯಕಾರಿ ವೃತ್ತಿಯಿಂದ ಬಿಡುಗಡೆ ಪಡೆಯಲು ಸಾಧ್ಯವಿದೆ. ಅಂತೆಯೇ ಇದೇ ವೃತ್ತಿಯನ್ನು ಸುರಕ್ಷಿತವಾಗಿ ಮುಂದುವರೆಸಲು ಸರಕಾರ ಆಧುನಿಕ ತಾಂತ್ರಿಕ ಸೌಲಭ್ಯವನ್ನು ಪಡೆಯಲು ಸಹಕರಿಸಬಹುದಾಗಿದೆ.

ಆಧುನಿಕ ವೃತ್ತಿಗಳು

ನಗರದಲ್ಲಿ ನೆಲೆಸಿದ ಗಂಟಿಚೋರರು ಅವಲಂಬಿಸಿರುವ ನಗರ ಸಂಬಂಧಿ ವೃತ್ತಿಗಳಲ್ಲಿ ಆಟೋ ಓಡಿಸುವ ವೃತ್ತಿಯನ್ನು ಅವಲಂಬಿಸಿದವರ ಸಂಖ್ಯೆ ಹೆಚ್ಚಿದೆ. ಈ ಪ್ರಮಾಣ ಮುಖ್ಯವಾಗಿ ಹುಬ್ಬಳ್ಳಿಯ ಸೆಟ್ಲಮೆಂಟಲ್ಲಿ ಹೆಚ್ಚಾಗಿ ಕಾಣುತ್ತದೆ. ಉಳಿದಂತೆ ಗದಗ ಬೆಟಗೇರಿ ಸೆಟ್ಲಮೆಂಟ್, ಗೋಕಾಕ ಸೆಟ್ಲಮೆಂಟ್, ಬಿಜಾಪುರ ಸೆಟ್ಲಮೆಂಟಗಳಲ್ಲಿ ಕಡಿಮೆ ಪ್ರಮಾಣದಲ್ಲಿದ್ದಾರೆ. ಸಹಜವಾಗಿ ಆಟೋ ಕೊಳ್ಳಲು ಪರಿಶಿಷ್ಟ ಜಾತಿ ಸಬ್ಸಿಡಿ ಸಾಲವನ್ನು ಪಡೆದವರೂ ಇದ್ದಾರೆ. ನಮ್ಮ ಗಣತಿಯಲ್ಲಿ ಈ ಸಂಗತಿಯನ್ನು ಕಾಣಿಸಿಲ್ಲ. ಈ ಸೌಲಭ್ಯ ಎಲ್ಲಾ ಭಾಗಕ್ಕೂ ವಿಸ್ತರಿಸಬೇಕಿದೆ. ಆದರೆ ಹುಬ್ಬಳ್ಳಿ ಸೆಟ್ಲಮೆಂಟಲ್ಲಿ ಸಮುದಾಯದ ಸದಸ್ಯರ ಜತೆ ಮಾತನಾಡುವಾಗ ಈ ಬಗೆಗೆ ಮಾಹಿತಿ ಸಿಕ್ಕಿತು.

ಆಟೋ ಓಡಿಸುವವರು ನಗರಕ್ಕೆ ಹೊಂದಿಕೊಂಡ ಸಮುದಾಯಗಳಲ್ಲಿ ಹೆಚ್ಚಿದ್ದಾರೆ. ಅದರಲ್ಲೂ ಡ್ರೈವಿಂಗ್ ಲೈಸೆನ್ಸ್ ಪಡೆದು ಬೇರೆಯ ವಾಹನಗಳನ್ನು ಓಡಿಸುವವರ ಸಂಖ್ಯೆಯೂ ಇದೆ. ಹೀಗಾಗಿ ಇಂದು ನಗರದಲ್ಲಿ ನೆಲೆಸಿದ ಮತ್ತು ನಗರಕ್ಕೆ ತೀರಾ ಸಮೀಪದಲ್ಲಿರುವ ಗಂಟಿಚೋರ ಸಮುದಾಯದ ಗಂಡು ಹೆಣ್ಣುಗಳು ಕಾರು, ಬೈಕು ಮೊದಲಾದ ವಾಹನಗಳ ಶೋರೂಮುಗಳಲ್ಲಿ, ಗಾರ್ಮೆಂಟ್ ಅಂಗಡಿ ಒಳಗೊಂಡಂತೆ ನಗರ ಕೇಂದ್ರಿತ ಹಲವು ಬಗೆಯ ಮಾರಾಟ ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರುಗಳೆಲ್ಲಾ ಕಡಿಮೆ ಕೂಲಿಗೆ ದುಡಿಯುತ್ತಿದ್ದಾರೆ. ಈ ಸಂಗತಿ ಇತರೆ ಸಮುದಾಯಗಳ ವೃತ್ತಿ ಆಯ್ಕೆಗೂ ಸಾಮಿಪ್ಯ ಹೊಂದಿರುವುದು ವೃತ್ತಿಗಳಲ್ಲಿ ಸಮುದಾಯಗಳ ಏಕರೂಪಿ ಆಯ್ಕೆಗಳನ್ನು ಕಾಣಿಸುತ್ತಿವೆ. ಈ ಸಂಖ್ಯೆಯು ಸಹಜವಾಗಿ ಮಹಾನಗರಕ್ಕೆ ಹೊಂದಿಕೊಂಡ ಹುಬ್ಬಳ್ಳಿಯಲ್ಲಿ ಹೆಚ್ಚಾಗಿಯೂ ಮತ್ತು ಗದಗ ಗೋಕಾಕ ಸೆಟ್ಲಮೆಂಟುಗಳಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿಯೂ ಕಂಡುಬರುತ್ತದೆ.

ವೃತ್ತಿಯಾಧಾರಿತ ವಲಸೆ

ಗಂಟಿಚೋರ ಸಮುದಾಯದಲ್ಲಿ ವೃತ್ತಿಯಾಧಾರಿತ ಅರೆವಲಸೆಯೂ ಇದೆ. ಆದರೆ ಈ ಅಧ್ಯಯನದ ಸಂದರ್ಭಕ್ಕೆ ನಮಗೆ ಮಾಹಿತಿ ಅಲಭ್ಯವಾದ ಕಾರಣ ಈ ವಲಸೆಯ ಬಗ್ಗೆ ಸರಿಯಾದ ಅಂಕಿ ಅಂಶ ಕೊಡಲು ಸಾದ್ಯವಾಗಿಲ್ಲ. ಸಾಮಾನ್ಯವಾಗಿ ಕೂಲಿಯನ್ನು ಆಶ್ರಯಿಸಿ ಗೋಕಾಕ ಮತ್ತು ರಾಯಭಾಗ ತಾಲೂಕಿನ ಕೆಲವು ಹಳ್ಳಿಗಳ ಗಂಟಿಚೋರರು ಗೋವಾ, ಬೆಂಗಳೂರು, ಕಾರವಾರ, ಮಂಗಳೂರು, ಉಡುಪಿ ಮುಂತಾದ ನಗರಗಳಿಗೆ ವಲಸೆ ಹೋಗುತ್ತಾರೆ. ಈ ಬಗೆಯ ವಲಸೆಯು ಅರೆವಲಸೆಯಾಗಿದ್ದು, ವರ್ಷದಲ್ಲಿ ಕೆಲವು ತಿಂಗಳು ಮಾತ್ರ ವಲಸೆ ಹೋಗಿ ದುಡಿದು ಮಳೆಗಾಲ ಆರಂಭವಾಗುತ್ತಿದ್ದಂತೆ ಮರಳುತ್ತಾರೆ. ಮರಳಿದ ನಂತರ ಇವರು ವಲಸೆಯಲ್ಲಿ ದುಡಿದ ಹಣವನ್ನು ಹೊಲವಿದ್ದವರು ಕೃಷಿಗೆ ಹೂಡುತ್ತಾರೆ. ಮಂದುವರೆದು ಮಳೆ ಬರದೆ ಹೊಲದ ಬೆಳೆ ಕೈಕೊಟ್ಟರೆ ಮತ್ತೊಮ್ಮೆ ವಲಸೆ ಹೋಗುತ್ತಾರೆ. ಹೀಗೆ ವಲಸೆ ಹೋಗುವ ಅನಿವಾರ್ಯತೆ ಈ ಸಮುದಾಯದಲ್ಲಿಯೂ ಇದೆ.

ಇನ್ನು ಗಂಟಿಚೋರ ಸಮುದಾಯದ ತುಡುಗು ಅಥವಾ ಕಳ್ಳತನದ ಪ್ರವೃತ್ತಿಗೆ ಸಂಬಂಧಿಸಿದ ವಲಸೆ ಕಡಿಮೆ ಪ್ರಮಾಣದಲ್ಲಿದೆ. ನಗರದ ಗಂಟಿಚೋರ್ ಸಮುದಾಯದ ಕೆಲವರು ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗುವುದು ತುಡುಗು ಮಾಡಲು ಎನ್ನುವ ಅಭಿಪ್ರಾಯವಿದೆ. ಹೀಗೆ ತುಡುಗು ಮಾಡಲು ಹೋಗುವವರಲ್ಲಿ ಹೆಚ್ಚಾಗಿ ಮದುವೆಯಾಗದ 18 ರಿಂದ 25 ವರ್ಷದ ಯುವಕರು ಎನ್ನುವುದು ತಿಳಿಯಿತು. ಹುಬ್ಬಳ್ಳಿ ಮತ್ತು ಗದಗ ಸೆಟ್ಲಮೆಂಟಿನಿಂದಲೂ ಹೀಗೆ ತುಡುಗುತನಕ್ಕಾಗಿ ವಲಸೆ ಹೋಗುವ ಕೆಲವು ಯುವಕರಿದ್ದಾರೆ ಎಂಬ ಮಾಹಿತಿ ಸಿಕ್ಕಿತು.

ವಿಶೇಷವಾಗಿ ಹಂಸನೂರಿನ ಗಂಟಿಚೋರರು ಮುಂಬೈ ಮತ್ತು ಗೋವಾ ವಲಸೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕಾರಣ ಅಲ್ಲಿನ ದುಡಿಮೆಗೆ ಈ ಊರಿನ ಜನರು ಹೊಂದಿಕೊಂಡಿದ್ದಾರೆ. ಕೆಲವರು ಅಲ್ಲಿಯೇ ಪೂರ್ಣಪ್ರಮಾಣದಲ್ಲಿ ನೆಲೆಸಿದ್ದಾರೆ ಕೂಡ. ಹಂಸನೂರಿನ ತುಡುಗು ಮಾಡಲು ಪ್ರಸಿದ್ಧವಾಗಿದ್ದ ಭೀಮವ್ವನನ್ನು `ಬೊಂಬಾಯಿ ಭೀಮವ್ವ’ ಎಂತಲೇ ಕರೆಯುತ್ತಿದ್ದರು. ಈ ಭೀಮವ್ವನ ಮಕ್ಕಳು ಬಾಂಬೆಯಲ್ಲಿ ಪೋಲಿಸ್ ಇಲಾಖೆಯಲ್ಲಿ ನೌಕರಿಯಲ್ಲಿದ್ದಾರೆ ಎಂದು ಶಾಬು ಎನ್ನುವವರು ಮಾಹಿತಿ ಕೊಟ್ಟರು. ಆದರೆ ಇವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

ಬಾಲೇಹೊಸೂರು ಗಂಟಿಚೋರ ಸಮುದಾಯದಲ್ಲಿಯೂ ಈ ಬಗೆಯ ಅರೆವಲಸೆಯ ಪ್ರವೃತ್ತಿಯಿದೆ. ಹೀಗೆ ವೃತ್ತಿಯನ್ನು ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುವುದು ಕೇವಲ ಗಂಟಿಚೋರ ಸಮುದಾಯಕ್ಕೆ ಮಾತ್ರ ಸೀಮಿತವಾಗಿ ಹೇಳುವಂತಿಲ್ಲ. ಇದು ಉತ್ತರ ಕರ್ನಾಟಕದ ಬಹುಮುಖ್ಯ ಲಕ್ಷಣವೂ ಆಗಿದೆ. ಸಾಮಾನ್ಯವಾಗಿ ದಲಿತ ಕೆಳಜಾತಿ ಸಮುದಾಯಗಳು ಹೆಚ್ಚು ವಲಸೆ ಹೋಗುತ್ತವೆ ಎನ್ನುವುದು ಪ್ರಮುಖ ಲಕ್ಷಣವಾಗಿದೆ.

(ಫೋಟೋಗಳು: ಲೇಖಕರ ಸಂಗ್ರಹದಿಂದ)