ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳು ಪಾಠ ಕೇಳಬೇಕು. ಆಗ ಈ ರೌದ್ರಮಳೆಯಾಗಮನವಾಗುತ್ತಿತ್ತು. ನಾವು ಶಾಲೆಗೆ ಹೊರಡುವ ಸಮಯಕ್ಕೆ ಸರಿಯಾಗಿ ಶಾಲೆ ಬಿಡುವ ಕಡೆಯ ಅವಧಿಯಲ್ಲಿ ಮಳೆ ಹಾಜರಿ ಹಾಕುತ್ತಿತ್ತು. ಜೊತೆಗೆ ಮೈ ಕೊರೆಯುವ ಚಳಿ. ಈ ಕಾರಣಕ್ಕೆ ಮೊದಲ ಬೆಂಚ್ ಬೇಡ ಅನ್ನಿಸುತ್ತಿತ್ತು ಹಿಂದಿನ ಬೆಂಚ್ ಆದರೆ ಕಾಲ ಮೇಲೆ ಕಾಲು ಹಾಕಿ ಚಳಿ ಕಡಿಮೆ ಮಾಡಿಕೊಳ್ಳಬಹುದಲ್ಲ ಅನ್ನುವ ಉಪಾಯ ಅಷ್ಟೇ. ಮಳೆ- ಗಾಳಿಯ ಸದ್ದಿಗೆ ಟೀಚರ್ ಏನು ಹೇಳುತ್ತಿದ್ದರು ಎಂದು ಸರಿಯಾಗಿ ಕೇಳಿಸುತ್ತಿರಲಿಲ್ಲ. ಇದೊಂದು ಖುಷಿ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಎರಡನೆಯ ಬರಹ
ಮಡಿಕೇರಿ ಮಳೆ! ಎಂದರಷ್ಟೆ ಸಾಕು ಮಳೆಗಾಲ ಎನ್ನಬೇಕಿಲ್ಲ. ನೆರಳು ನಮ್ಮ ಜೊತೆಗೇ ಇರುವ ಹಾಗೆ ಇಲ್ಲಿನ ಜನರ ಜೊತೆ ಕೊಡೆ ಇರಬೇಕು. ಈ ಮಳೆನಾಡಿನ ಮೊದಲ ಗಾರ್ಡಿಯನ್ ಅಂದರೆ ಈ ಕೊಡೆ. ಕಪ್ಪು ಕೊಡೆಯೇ ಆಗಬೇಕೆಂದಿಲ್ಲ. ಒಂದು ಕಾಲದಲ್ಲಿ ಕಪ್ಪು ಕೊಡೆಯೇ ಹಿಡಿತಾ ಇದ್ದದ್ದು. ನಮ್ಮ ಕಾಲದಲ್ಲಿ ಅಲ್ಲೊಂದು ಇಲ್ಲೊಂದು ಎಂದು ಪ್ರಾರಂಭವಾಗಿದ್ದ ಬಣ್ಣದ ಕೊಡೆಗಳದ್ದೆ ಎಲ್ಲೆಲ್ಲೂ ಹವಾ ಈಗ.
ಹೊರ ಊರಿನ ನಮ್ಮ ಟೀಚರ್ಸ್ ಕೊಡೆ ಮರೆತು ಬಂದಿದ್ದರೆ ಅವರನ್ನು ನಮ್ಮ ಕೊಡೆಯಲ್ಲಿ ಕರೆದುಕೊಂಡು ಹೋಗುವುದೆ ಪ್ಲೆಶರ್ ಅನ್ನಿಸುತ್ತಿತ್ತು. ಇರಲಿ! ಮೊದಲೇ, ಸೀದಾ ಕಾಲೇಜಿಗೆ ಹೋಗೋಕಾಗುತ್ತಾ… ಶಾಲೆಗೆ ಹೋಗಿ ಅಲ್ವ ನಂತರ ಕಾಲೇಜು. ಕೊಡಗಿನ ಶಾಲಾ ದಿನಗಳ ಮಳೆ ಇನ್ನೂ ಅದ್ಭುತ, ಕೆಲವೊಮ್ಮೆ ಬೇಜಾರನ್ನೂ ತರಸ್ತಿತ್ತು. ಈ ಕೊಡೆ ಬಹುಪಯೋಗಿ! ಬಿಸಿಲಿಗೆ, ಮಳೆಗೆ, ಫ್ಯಾಷನ್ನಿಗೆ, ಉರುಗೋಲಾಗಿ, ಬೆದರಿಸುವ ಕೋಲಾಗಿ, ದಾರಿ ಬಿಡಿಸುವ ಪೋಲಿಸ್ ಲಾಟಿಯಾಗಿಯೂ, ಬಸ್ಸಿನಲ್ಲಿ ಸೀಟು ಹಿಡಿಯಲೂ ಇದೇ ಕೊಡೆ ಉಪಯೋಗಕ್ಕೆ ಬರುತ್ತದೆ. ಮತ್ತಿದು ಪ್ರಾದೇಶಿಕ ಭಿನ್ನತೆಯನ್ನು ಅನುಸರಿಸಿ ‘ಕೊಡೆ; ‘ಛತ್ರಿ’ ಎಂದೆಲ್ಲಾ ಕರೆಸಿಕೊಳ್ಳುತ್ತದೆ.
ಮಲೆನಾಡಿಗರ ಬದುಕಿನ ಅವಿಭಾಜ್ಯ ಅಂಗ ಎಂದರೆ ಕೊಡೆಯೇ. ಮನೆಯ ಹೊರಗೆ ಕಾಲಿಡುವಾಗ ಕೈಯಲ್ಲೊಂದು ಕೊಡೆ ಬೇಕೇ.. ಬೇಕು! ನಾಯಿಗಳು ಅಡ್ಡ ಸಿಕ್ಕರೆ ಬೆದರಿಸಲೂ.. ದನಗಳನ್ನು ಮೇಯಿಸುವಾಗಲೂ ಈ ಕೊಡೆ ಹಿಡಿದೇ ಇರುತ್ತಾರೆ. ಮನೆಯಿಂದ ಹೋಗುವಾಗ ತಿಂಡಿ-ತೀರ್ಥ ತೆಗೆದುಕೊಂಡು ಹೋದರೆ ಸಂಜೆ ಬರುವಾಗ ಸೊಪ್ಪು, ಹೂಗಳೇನಾದರೂ ಸಿಕ್ಕರೆ ಈ ಕೊಡೆಯೊಳಗೆ ಇಟ್ಟುಕೊಂಡು ಬಂದು ಜಗುಲಿಯ ಮೇಲೆ ಸುರಿಯುವ ಅಜ್ಜಿಯರನ್ನು ನೋಡಿದ ನೆನಪು ಇಂದಿಗೂ ಹಸಿರಾಗಿದೆ. ಅಜ್ಜಂದಿರು “U” ಆಕೃತಿಯ ಬೆತ್ತದ ಹಿಡಿಯ ಕೊಡೆಯನ್ನು ಬೆನ್ನಲ್ಲಿ ಶರ್ಟಿಗೆ, ಪ್ಯಾಂಟ್ ಧರಿಸುವವರಾದರೆ ಪ್ಯಾಂಟ್ ಜೇಬಿಗೆ ಸಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಹಾಗೆ ಸಂಜೆ ತರುತ್ತಿದ್ದ ಕುರುಕಲು ತಿಂಡಿಗಳು ಇದೇ ಕೊಡೆಗಳಲ್ಲಿ ಅವಿತಿರುತಿದ್ದವು.
ಕೊಡೆಗಳ ಕುರಿತ ಈ ಬರೆಹ ಕೊಡೆಗಳ ನೆನಪನ್ನು ಮತ್ತಷ್ಟು ಕೊಡಹುತ್ತಿವೆ. ಶಾಲಾ ದಿಗಳಲ್ಲಿ ಕೊಡೆಗಳು ಅದಲು ಬದಲಾಗಬಾರದೆಂದು ಇನಿಶಿಯಲ್ಸ್ ಅನ್ನು ಕೊಡೆಗಳ ಹಿಡಿಗಳಲ್ಲಿ ಬರೆದುಕೊಳ್ಳುತ್ತಿದ್ದೆವು. ಕೆಲವೊಮ್ಮನೆ ಪೋಷಕರೇ ಸೂಜಿದಾರದಿಂದ ಇನಿಶಿಯಲ್ಸ್ ಹೊಲೆದುಕೊಡುತ್ತಿದ್ದರು. ಆದರೂ ಕೊಡೆಗಳು ಅದುಹೋಗೋ ಕಳೆದುಹೋಗುತ್ತಿದ್ದೆವು. ಒದ್ದೆಯಾದ ಕೊಡೆ ನೀರನ್ನು ಗೆಳತಿಯರ ಮುಖಕ್ಕೆಲ್ಲಾ ಚಿಮ್ಮಿಸುವುದು, ಕೀಟಲೆ ಮಾಡಿಕೊಳ್ಳುವುದು ಇದ್ದೇ ಇತ್ತು. ಹಾಗೆ ಮಡಿಕೇರಿಯ ಡೇರಿ ಫಾರ್ಮ್‌ನಿಂದ ಫೀಲ್ಡ್ ಮಾರ್ಷಲ್ ಕಾಲೇಜಿನ ಏರು ದಾರಿಯಲ್ಲಿ ಕೊಡೆ ಹಿಡಿದು ಹೋಗುವ ಕಾಲೇಜು ವಿದ್ಯಾರ್ಥಿಗಳನ್ನು ನೋಡಲು ಇವತ್ತಿಗೂ ಚಂದವೇ! ಇಪ್ಪತ್ತು ವರ್ಷಗಳ ಹಿಂದೆ ಕಾಲೇಜಿಗೆ ಬಣ್ಣದ ಕೊಡೆ ಒಯ್ಯುತ್ತಿದ್ದ ಬೆರಳೆಣಿಕೆ ಮಂದಿಯಲ್ಲಿ ನಾನೂ ಒಬ್ಬಳಾಗಿದ್ದೆ. ಗೆಳತಿಯರು ನನ್ನ ಕೊಡೆ ಗುರುತಿಸಿ ನನ್ನ ಹೆಸರು ಹಿಡಿದು ಕರೆಯಲು ಪ್ರಾರಂಭಿಸಿದ ನಂತರ ಇಷ್ಟದ ಬಣ್ಣದ ಕೊಡೆಯನ್ನು ಕೈ ಬಿಟ್ಟು ಕಪ್ಪು ಕೊಡೆ ತೆಗೆದುಕೊಂಡು ಹೋಗುವ ಹಾಗಾಗಿತ್ತು. ಈಗ “ಕಪ್ಪು ಕೊಡೆ” ಹಿಡಿಯುವವರೆ ಕಡಿಮೆ. ಅದೇ ಏರು ದಾರಿಯಲ್ಲಿ ಬಣ್ಣದ ಛತ್ರಿಗಳನ್ನು ಅರಳಿಸಿ ನಿಧಾನವಾಗಿ ಹೋಗುವ ವಿದ್ಯಾರ್ಥಿಗಳನ್ನು ಈಗ ನೋಡಿದರೆ ಹೂವಿನಮಾಲೆ ಅಲೆಅಲೆಯಂತೆ ಮುಂದೆ ಮುಂದೆ ಸರಿಯುತ್ತಿದೆಯೇನೋ ಅನ್ನಿಸುತ್ತದೆ.
ಕೊಡೆ ಹಿಡಿಯುವುದೂ ಒಂದು ಕೌಶಲ್ಯವೇ ಸರಿ! ಕೊಡೆಯನ್ನು ನೆಟ್ಟಗೆ ಮೇಲ್ಮುಖವಾಗಿ ಹಿಡಿಯುವುದಲ್ಲ. ಗಾಳಿ ಬೀಸುವ ವಿರುದ್ಧ ದಿಕ್ಕಿಗೆ ಹಿಡಿಯಬೇಕು. ಒಂದು ವೇಳೆ ಇಬ್ಬರು ಒಂದೇ ಕೊಡೆಯಲ್ಲಿ ಹೋಗುವುದಾದರೆ ಎತ್ತರದವರು ಬಲಗೈಯಲ್ಲಿ ಕೊಡೆ ಹಿಡಿದರೆ ಬಲಗಡೆ ಕೊಡೆ ಹಿಡಿಸಿಕೊಳ್ಳುವವರು ಇರಬೇಕು. ಎದುರು ಮಳೆ ಬರುತ್ತಿದ್ದರೆ ಕೊಡೆ ಹಿಡಿಯುವುದು ಕಷ್ಟ. ಸಂಪೂರ್ಣ ಮುಖ ಮುಚ್ಚಿಕೊಂಡರೆ ಮುಂದೆ ಬರುವ ವಾಹನಗಳು. ತಿಳಿಯುವುದಿಲ್ಲ. ಮಳೆಯ ಜೊತೆಗೆ ಗಾಳಿ ಬರುತ್ತಿದ್ದರೆ ಕೊಡೆ ಹಿಡಿಯುವುದು ಕಷ್ಟ. ಮಳೆ ನೀರು ರಭಸವಾಗಿ ಮುಖಕ್ಕೆ ರಾಚುತ್ತದೆ. ಮುಖವೆಲ್ಲಾ ಉರಿಯುತ್ತದೆ. ಬಾರೀ ಮಳೆಗೆ ಸ್ವಿಚ್ ಕೊಡೆಗಳು ಅಂದರೆ ಬಟನ್ ಕೊಡೆಗಳು ಅಲ್ಲವೇ ಅಲ್ಲ! ಬಟನ್ ಒತ್ತಿದಾಗ ಓಪನ್ ಆಗದೇ ಹುಚ್ಚಾಟ ತೋರಿಸಿಬಿಡುತ್ತವೆ, ಮುಜುಗರ ತರಿಸಿಬಿಡುತ್ತವೆ. ಇಂಗ್ಲಿಷಿನಲ್ಲಿ ಅಂಬ್ರೆಲ್ಲಾ..! ಎನ್ನುವುದಿಲ್ಲವೇ ಹಾಗೆ ಅಂಬರದ ಮುನಿಸಿಗೆ ಎಲ್ಲಾ ಕಡೆ ಕೊಡೆ ಬೇಕು. ಕೊಡೆ ಹಿಡಿಯಲು ಬಾರದೆ ಇದ್ದರೆ ಬಟನ್ ಕೊಡೆಗಳು ಕೈ ಬಿಟ್ಟು ಅಂಬರಕ್ಕೆ ನೆಗೆದು ಇನ್ನೆಲ್ಲೋ ಬೀಳುತ್ತವೆ ಮತ್ತೆ ನೋಡುವುದೇ ಅಂಬರ ಎಲ್ಲವನ್ನೂ. ಒಂದು ವೇಳೆ ಕೊಡೆ ಹಿಡಿಯಲು ಬಾರದವರು ಮಳೆನಾಡಿನ ಹುಚ್ಚು ಮಳೆಗೆ ಕೊಡೆ ತೋರಿಸಿದರೆ ಕೊಡೆಗಳು ಕೆದರಿದ ತಲೆಯ, ಆಕ್ರೋಶಗೊಂಡ, ಹಲ್ಲು ಬಿಟ್ಟ ಕರಡಿಗಳಂತಾಗುತ್ತವೆ. ಅದನ್ನಿನ್ನೇನು ಮಾಡಲು ಸಾಧ್ಯವಾಗುವುದಿಲ್ಲ. ಅರಳಿದ ತಾವರೆಗಳಂತೆ ಇದ್ದ ಕೊಡೆಗಳು ಒಂದೇ ಬಿರುಗಾಳಿ, ಮಳೆಗೆ ತರಚಿದ ತಾವರೆಯಂತೆ ಅರ್ಥಾತ್ ಮುರುಕಲು ಕೊಡೆಗಳಾಗಿಬಿಡುತ್ತವೆ.
ಜೂನ್ ಒಂದಕ್ಕೆ ಶಾಲೆ ಪ್ರಾರಂಭ. ಕೆಲವೊಮ್ಮೆ ಅದೇ ಜೂನ್ ಒಂದಕ್ಕೆ ಮಾನ್ಸೂನ್ ಕೂಡ ಪ್ರಾರಂಭ ಆಗುತ್ತಿತ್ತು. ಒಂದು ರೀತಿ ಖುಷಿ ಇನ್ನೊಂದು ಕಡೆ ಬೇಜಾರು. ಅಯ್ಯೋ ಹೊಸ ನೋಟ್ಸ್‌ಗಳು ಮಳೆಯಲ್ಲಿ ತೋಯ್ದು ಹೋದುವಲ್ಲ ಅನ್ನುವ ಬೇಜಾರು ಆಗುತ್ತಿತ್ತು. ಬೀಳೋ ಮಳೆಗೂ ಬೇರೆ ಬೇರೆ ಹೆಸರು… ಧೋಧೋ ಮಳೆ, ಚಿರಿ ಪಿರಿ ಮಳೆ, ಪಿರಿ ಪಿರಿ ಮಳೆ, ಕುಟ ಕುಟ ಮಳೆ, ಟಪ ಟಪ ಮಳೆ, ಜಿನಿಗೋ ಮಳೆ, ಜಿಟಿ ಜಿಟಿ ಮಳೆ…. ಹೀಗೆ…!
ಇಂಥ ಮಡಿಕೇರಿಯಲ್ಲಿ ಚಿಕ್ಕವರಿರಲಿ ದೊಡ್ಡವರಿರಲಿ ಎಲ್ಲರೂ ರೇನ್ ಕೋಟ್ ಹಾಕುತ್ತಿದ್ದೆವು. ಅದು ಬ್ಯಾಕ್ ಪ್ಯಾಕ್ ಕಂಪೆನಿಯದ್ದು. ಮೂರೇ ಕಲರ್ಸ್ ನೀಲಿ, ಕೆಂಪು, ಹಸಿರು. ನೀಲಿ ಎದ್ದು ಕಾಣುವ ಕಲರ್ ಕೆಂಪು ಮತ್ತು ಹಸಿರು ಸ್ವಲ್ಪ ಮಸುಕಾಗಿ ಕಾಣುತ್ತಿದ್ದವು. ನಮ್ಮನೆಯಲ್ಲಿ ಹೆಚ್ಚು ನೀಲಿ ರೇನ್ ಕೋಟ್ ಕೊಡಿಸುತ್ತಿದ್ದರು. ಸೆಪ್ಟೆಂಬರ್‌ವರೆಗೆ ಇವುಗಳ ನಿರಂತರ ಧಾರಣೆ. ನಂತರ ರೇನ್ ಕೋಟ್‌ಗಳ ಭಾರ ಬ್ಯಾಗಲ್ಲಿ ಇಡಲು ಸಾಧ್ಯವಾಗದ ಕಾರಣ ಮಳೆ ಇಲ್ಲದಿದ್ದರೆ ಎಡ ಕೈ ಮೇಲೆ ಹಾಕಿಕೊಂಡು ಬರುತ್ತಿದ್ದೆವು. ಮಳೆ ಅಂದರೆ ಎಲ್ಲ ಚಟುವಟಿಕೆಗಳು ಸ್ತಬ್ಧವಾದಂತೆ ಅನ್ನಿಸುತ್ತಿತ್ತು.
ಮಳೆಯಲ್ಲಿ ಹೊರಗೆ ಕಾಲು ತೆಗೆಯುವುದು ಬಹಳ ಪ್ರಯಾಸದ ಕೆಲಸವಾಗುತ್ತಿತ್ತು, ದಿನ ಪತ್ರಿಕೆಗಳು ಸರಿಯಾಗಿ ಸಿಕ್ಕುತ್ತಿರಲಿಲ್ಲ, ಕರೆಂಟ್ ಮೊದಲೆ ಇರುತ್ತಿರಲಿಲ್ಲ. ಮಳೆಗಾಲದಲ್ಲಿ ಪ್ರಚಲಿತವಿದ್ದ ಸಾಮಾನ್ಯ ಪದಗಳು ಎಂದರೆ ರೋಡ್ ಬ್ಲಾಕ್, ರಿವರ್ ಬ್ಲಾಕ್, ಬರೆ ಕುಸಿತ, ಮರ ಬಿದ್ದಿದೆ, ಲೈನ್ ತುಂಡಾಗಿದೆ, ನೀರಲ್ಲಿ ಕೊಚ್ಚಿ ಹೋದರು, ಉಸಿರುಗಟ್ಟಿ ಸಾವು, ವಿದ್ಯುತ್ ತಗುಲಿ ಸಾವು, ನಾಟಿಕೆಲಸ, ಇತ್ಯಾದಿ… ಇನ್ನೂ ವಿಚಾರ ಅಂದರೆ ಮಳೆ ಹೆಚ್ಚಾಗಿ ಶಾಲೆಗೆ ರಜೆ ಕೊಟ್ಟರೂ ಬೇಗ ತಿಳಿಯುತ್ತಿರಲಿಲ್ಲ. ಶಾಲೆವರೆಗೆ ಹೋಗಿ ಬಂದ ದಿನಗಳೂ ಸಾಕಷ್ಟು ಇವೆ, ಇದನ್ನು ತಪ್ಪಿಸಲೆಂದೆ ಶಾಲೆಗೆ ಕೆಲವರು ಕರೆ ಮಾಡಿ ‘ಸಾಲೆ ಉಂಟಾ? ಸಾಲೆ ಉಂಟಾ?’ ಎಂದು ಕೇಳುತ್ತಿದ್ದರಂತೆ. ಅದನ್ನು ಕೇಳಿಸಿಕೊಳ್ಳಲಾಗದೆ ರಿಸಿವರ್ ತೆಗೆದು ಇರಿಸಿದ್ದೀವಿ ಎಂದು ಶಾಲೆಯವರು ಹೇಳುತ್ತಿದ್ದುದು ನೆನಪು. ಈಗ ಮೊಬೈಲ್, ವಾಟ್ಸಾಪ್ ಬಂದು ಎಲ್ಲರನ್ನು ಕುತೂಹಲರಹಿತರನ್ನಾಗಿಸಿದೆ.
ಕೊಡಗಿನ ಶಾಲಾ ದಿನಗಳ ಮಳೆ ಇನ್ನೂ ಅದ್ಭುತ, ಕೆಲವೊಮ್ಮೆ ಬೇಜಾರನ್ನೂ ತರಸ್ತಿತ್ತು. ಈ ಕೊಡೆ ಬಹುಪಯೋಗಿ! ಬಿಸಿಲಿಗೆ, ಮಳೆಗೆ, ಫ್ಯಾಷನ್ನಿಗೆ, ಉರುಗೋಲಾಗಿ, ಬೆದರಿಸುವ ಕೋಲಾಗಿ, ದಾರಿ ಬಿಡಿಸುವ ಪೋಲಿಸ್ ಲಾಟಿಯಾಗಿಯೂ, ಬಸ್ಸಿನಲ್ಲಿ ಸೀಟು ಹಿಡಿಯಲೂ ಇದೇ ಕೊಡೆ ಉಪಯೋಗಕ್ಕೆ ಬರುತ್ತದೆ. ಮತ್ತಿದು ಪ್ರಾದೇಶಿಕ ಭಿನ್ನತೆಯನ್ನು ಅನುಸರಿಸಿ ‘ಕೊಡೆ; ‘ಛತ್ರಿ’ ಎಂದೆಲ್ಲಾ ಕರೆಸಿಕೊಳ್ಳುತ್ತದೆ.
ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳು ಪಾಠ ಕೇಳಬೇಕು. ಆಗ ಈ ರೌದ್ರಮಳೆಯಾಗಮನವಾಗುತ್ತಿತ್ತು. ನಾವು ಶಾಲೆಗೆ ಹೊರಡುವ ಸಮಯಕ್ಕೆ ಸರಿಯಾಗಿ ಶಾಲೆ ಬಿಡುವ ಕಡೆಯ ಅವಧಿಯಲ್ಲಿ ಮಳೆ ಹಾಜರಿ ಹಾಕುತ್ತಿತ್ತು. ಜೊತೆಗೆ ಮೈ ಕೊರೆಯುವ ಚಳಿ. ಈ ಕಾರಣಕ್ಕೆ ಮೊದಲ ಬೆಂಚ್ ಬೇಡ ಅನ್ನಿಸುತ್ತಿತ್ತು ಹಿಂದಿನ ಬೆಂಚ್ ಆದರೆ ಕಾಲ ಮೇಲೆ ಕಾಲು ಹಾಕಿ ಚಳಿ ಕಡಿಮೆ ಮಾಡಿಕೊಳ್ಳಬಹುದಲ್ಲ ಅನ್ನುವ ಉಪಾಯ ಅಷ್ಟೇ. ಮಳೆ- ಗಾಳಿಯ ಸದ್ದಿಗೆ ಟೀಚರ್ ಏನು ಹೇಳುತ್ತಿದ್ದರು ಎಂದು ಸರಿಯಾಗಿ ಕೇಳಿಸುತ್ತಿರಲಿಲ್ಲ. ಇದೊಂದು ಖುಷಿ. ಪಾಠ ಇಲ್ಲ ಸುಮ್ಮನೆ ಕೂರಬಹುದು ಎಂದಾದರೆ ಇನ್ನೊಂದು ಕಡೆ ಮನಗೆ ಹೇಗೆ ಹೋಗುವುದು ಅನ್ನುವ ಚಿಂತೆ ಇರುತ್ತಿತ್ತು. ಇನ್ನು ರೈನ್ ಕೋಟ್ ಒಣಗಿಲ್ಲ ಅಂದರೆ ಬಹಳ ಹಿಂಸೆ ಆಗುತ್ತಿತ್ತು. ತಣ್ಣಗಿನ ರೇನ್ ಕೋಟ್ ಕಾಲನ್ನು ತಾಗುತ್ತಿತ್ತು. ಜೊತೆಗೆ ಜೊತೆಗೆ ಮರಳು ಮಿಶ್ರಿತ ಕೆಸರೂ ಇರುತ್ತಿತ್ತು. ಆಗಂತೂ ಬಹಳ ಇರಿಟೇಟ್ ಆಗುತ್ತಿದ್ದೆವು. ಕೆಲವರಿಗೆ ಕೆಸರನ್ನು ಪಟ ಪಟ ಹಾರಿಸುವುದರಲ್ಲಿ ಬಾರೀ ಖುಷಿ. ಸರಿಯಾದ ಅಳತೆ ಚಪ್ಪಲ್ ಹಾಕಿಲ್ಲ ಅಥವಾ ಹವಾಯಿ ಚಪ್ಪಲ್ ತರದ್ದು ಹಾಕಿದ್ದೆಂದರೆ ಕೆಸರಿನ ಚಿತ್ತಾರ ಸ್ಕರ್ಟ್‌ಗಳ ಮೇಲೆ ಮೂಡುತ್ತಿತ್ತು. ಈ ಕಾರಣಕ್ಕೆ ಬಹಳ ಹಿಂಸೆ ಅನುಭವಿಸಿದ್ದಿದೆ. ಮನೆಗೆ ಹೋದರೆ ಬಿಸಿನೀರ ಸ್ವಾಗತ ಸಾಮಾನ್ಯವಾಗಿರುತ್ತಿತ್ತು. ರೈನ್ ಕೋಟ್ ಇಲ್ಲವೆ ಪುಸ್ತಕಗಳು ಒದ್ದೆಯಾಗಿದ್ದರೆ ಗಾಳಿಯಲ್ಲಿ ಹರಡಿ ಮುಂದಿನ ಕೆಲಸಕ್ಕೆ ಹೋಗಬೇಕಿತ್ತು. ಒಟ್ಟು ಮನೆಗೆ ತಲುಪಿದರೆ ಖುಷಿ… ಸಂಜೆ ಆರು ಗಂಟೆಗೊಮ್ಮೆ ಜೋರು ಮಳೆ ಬಂದು ಬಿಟ್ಟರಂತೂ ಇನ್ನೂ ಖುಷಿ. ಗಾಳಿ ಮಳೆಯ ಕಾರಣ ಕರೆಂಟ್ ಬಂದ್ ಆಗಿ, “ಓದಿ” ಅಂದರೆ “ಕರೆಂಟ್ ಇಲ್ಲ..” ಅನ್ನುವುದಕ್ಕೆ. ಈಗೆಲ್ಲ ಎಲ್ಲ ಕಡೆಯೂ ಚಾರ್ಜರ್ ಲೈಟ್‌ಗಳಿವೆ. ಆದರೆ ನಮ್ಮ ಕಾಲದಲ್ಲಿ ಸೀಮೆ ಎಣ್ಣೆ ದೀಪಗಳು ಸರಿದು ಗ್ಯಾಸ್ ಲೈಟ್‌ಗಳು ಬಂದಿದ್ದವು. ಅವೂ ವಿಪರೀತ ಸದ್ದು ಮಾಡುತ್ತಿದ್ದವು. ಅಪ್ಪಿ ತಪ್ಪಿ ಬಾಗಿಲು ತೆರೆದರೆ ಹುಳಗಳು ಆ ಲೈಟಿನ ಸುತ್ತ ಸುತ್ತುತ್ತಿದ್ದವು.
ಗಾಳಿಯ ಕಾರಣಕ್ಕೆ ಎಲ್ಲಾ ವಸ್ತುಗಳು ತಣ್ಣಗಾಗುತ್ತಿದ್ದವು. ಒಂದು ಜಾಗದಲ್ಲಿ ಹೋಗಿ ಕುಳಿತರೆ ಎಲ್ಲವು ಅಲ್ಲೆ ಊಟ ತಿಂಡಿ ಕಾಫೀ ಜಾಗ ಬಿಟ್ಟು ಒಂದಿಂಚೂ ಕದಲುತ್ತಿರಲಿಲ್ಲ. ಎಂಥ ತುರ್ತು ಬಂದರೂ ಕದಲುತ್ತಿರಲಿಲ್ಲ. ಹಾಗೊಂದು ವೇಳೆ ಎದ್ದು ಬಿಟ್ಟರೆ ಜಾಗದ ಬಿಸಿ ಕಡಿಮೆಯಾಗುತ್ತಿತ್ತು. ಯಾರಾದರೂ ಹೋಗಿ ಕುಳಿತಿದ್ದರೆ ನಾನು ಬಿಸಿ ಮಾಡಿದ್ದೆ ಮಾಡಿದ್ದೆ ಅನ್ನುವುದೇ. ರಾತ್ರಿ ಹೊತ್ತಲ್ಲಿ ಗಾಳಿಯ ಆರ್ಭಟವೆ ಹೆಚ್ಚು ಇರುತ್ತಿತ್ತು. ಮರಗಳೇ ಬಿದ್ದು ಹೋಗುವುವೋ ಅನ್ನುವ ಮಟ್ಟಿಗೆ ಆ ಭಯಂಕರ ಸದ್ದು…! ನಿಜಕ್ಕೂ ಭಯ ತರಿಸುತ್ತಿತ್ತು. ನಮ್ಮ ಮನೆಗಳು ಬಾಣೆಯ ಮೇಲೆ ಹೆಚ್ಚು ಇರುವುದು ಅದರ ಕೆಳಗೆ ತೋಡು ಅರ್ಥಾತ್ ಹಳ್ಳಗಳು ಬಿರು ಮಳೆಯಲ್ಲಿ ರೌದ್ರವಾಗಿ ಮಳೆ ಇಲ್ಲದಾಗ ಪ್ರಶಾಂತವಾಗಿಯೂ ಹರಿಯುತ್ತಿದ್ದವು. ಆ ಹೊದರಿನಲ್ಲಿ ಗುಳ್ಳೆ ನರಿಗಳು ಇರುತ್ತಿದ್ದವು ಕತ್ತಲಾದ ಕೂಡಲೆ ಕೂಗುತ್ತಿದ್ದವು. ಅದಿರಲಿ ಈ ಕಪ್ಪೆಗಳ ಸದ್ದನ್ನು ಕೇಳಲಾಗುತ್ತಿರಲಿಲ್ಲ. ಬೇಲಿ ಎಂದ ಕೂಡಲೆ ಮಳೆ ನಾಡಿನ ಬೇಲಿಗಳೆ ಬೇರೆ ಕಟ್ಟಿಂಗ್ಸ್, ಪಾಲಿ ಮರ ಭೊಗನ್ ವಿಲ್ಲಾ ಬಳ್ಳಿಗಳು ಇತ್ಯಾದಿ.
ಮಡಿಕೇರಿಯಲ್ಲಿ ಎಲ್ಲಿ ನೋಡಿದರೂ ನಮ್ಮ ಕಾಲಕ್ಕೆ ಹೆಚ್ಚು ಕಾಣಿಸುತ್ತಿದ್ದ ಹೂಗಳು ಅಂದರೆ ವಾಟರ್ ಲಿಲ್ಲಿಗಳು. ಮಳೆಯ ನೀರು ಹೆಚ್ಚಾದರೆ ಕರಗಿ ಹೋಗುತ್ತಿದ್ದವು. ಕೆಲವು ಮನೆಗಳಲ್ಲಿ ಅದರದ್ದೆ ಕಲೆಕ್ಷನ್ ಅವುಗಳನ್ನು ಉಳಿಸಿಕೊಳ್ಳುವುದು ಪ್ರಯಾಸವಾಗಿತ್ತು. ಮಳೆ ಎಂದರೆ ಎಲ್ಲಾ ಮನೆಗಳಲ್ಲೂ ಹಂಡೆ ಒಲೆಯಲ್ಲಿ ಬಿಸಿನೀರು ಇದ್ದೇ ಇರುತ್ತಿತ್ತು. ತೀವ್ರಚಳಿಗೆ ಬಿಸಿನೀರಿನ ಅಗತ್ಯ ಅತೀ ಅವಶ್ಯಕವಾಗಿತ್ತು. ಈ ಬಿಸಿನೀರಿನ ಹಂಡೆ ಒಲೆಗಳು ಮನೆಯ ಹೊರಗೆ ಇರುತ್ತಿದ್ದವು ಹೆಚ್ಚಿನ ಮನೆಗಳಲ್ಲಿ ಗೋಡೆಗೆ ಬಳಿದ ಸುಣ್ಣ ಹೋಗಿ ಗೋಡೆ ನೆನೆಯುತ್ತವೆ ಅನ್ನುವ ಕಾರಣಕ್ಕೆ ಡಾಂಬರನ್ನು ಬಳಿದಿರುತ್ತಿದ್ದರು. ಈಗ ಹಳೆ ಮನೆಗಳಲ್ಲಿ ಮಾತ್ರ ನೋಡಲು ಸಾಧ್ಯ.
ಮಳೆಗಾಲ ಅಂದರೆ ವಿಪರೀತ ಸೊಳ್ಳೆಗಳ ಕಾಟ, ಸುತ್ತಲೂ ಎಂತೆತೋ ಹುಳಗಳು, ನೀರು ಹಾವುಗಳ ಕಾಟವಿರುತ್ತಿತ್ತು. ಮಳೆಗಾಲದ ಪ್ರಾರಂಭದ ಜೋರು ಮಳೆಗೆ ಕಪ್ಪೆ ಹಾವಿನ ಮರಿಗಳೆಲ್ಲಾ ಸತ್ತು ಅಂಗಾತ ಬಿದ್ದಿರುತ್ತಿದ್ದವು. ಅವುಗಳ ಮೇಲೆ ವಾಹನಗಳು ಹರಿದು ಇನ್ನಷ್ಟು ರಾಡಿಯಾಗುತ್ತಿತ್ತು. ಮತ್ತೆ ಜೋರಾಗಿ ಮಳೆ ಬಂದರೆ ಮತ್ತೆ ರಸ್ತೆ ಸ್ವಚ್ಛವಾಗುತ್ತಿತ್ತು. ಬಿರುಮಳೆಗೆ ತೋಡಿನಲ್ಲಿದ್ದ ಕಪ್ಪೆ, ಆಮೆಗಳೆಲ್ಲ ಹೊರಗೆ ಬರುತ್ತಿದ್ದವು. ಅವುಗಳನ್ನು ಹಿಡಿಯುವುದು ಆಟವಾಡಿಸುವುದು ತುಂಟ ಹುಡುಗರ ದೊಡ್ಡ ಕೆಲಸವಾಗಿತ್ತು. ಮಡಿಕೇರಿಯಲ್ಲಿ ಜವಗು ಮಣ್ಣು ಆದ ಕಾರಣ ಮಳೆಗಾಲದಲ್ಲಿ ಎರಡು ಹುಳುಗಳನ್ನು ಹೆಚ್ಚು ನೋಡುತ್ತಿದ್ದೆವು. ಒಂದು ಎರೆ ಹುಳು ಇನ್ನೊಂದು ಬಸವನ ಹುಳು. ಗೇಟ್, ಮುಂಬಾಗಿಲು, ಬಾಗಿಲ ಸೆರೆ ಎಲ್ಲೆಲ್ಲೂ ಬಸವನ ಹುಳುಗಳು ನಿಧಾನಗತಿಯಲ್ಲಿ ಚಲಿಸುತ್ತಿರುತ್ತಿದ್ದವು. ಅವುಗಳನ್ನು ತೆಗೆಯುವುದಿರಲಿ ನೋಡಲೇ ಅಸಹ್ಯ ಅನ್ನಿಸುತ್ತಿತ್ತು.
ಮಳೆಗಾಲ ಅಂದರೆ ಕುಡಿಯೋ ನೀರು ಬಿಟ್ಟು ಇತರೆ ಬಳಕೆಯ ನೀರಿಗೆ ತಲೆಕೆಡಿಸಿ ಕೊಳ್ಳಬೇಕಾಗಿರಲಿಲ್ಲ. ಮೊದಲೆ ಮಳೆ ಬರುವಾಗಲೆ ಮಳೆ ನೀರನ್ನು ಪಿವಿಸಿ ಪೈಪ್ ಬಳಸಿ ಟ್ಯಾಂಕಿಗೆ, ದೊಡ್ಡ-ದೊಡ್ಡ ಡ್ರಮ್ಮಿಗೆ ಬೀಳುವ ಹಾಗೆ ಅಡ್ಜಸ್ಟ್ ಮಾಡುತ್ತಿದ್ದರು. ಮೊದಲ ವಾರದ ಮಳೆ ನೀರನ್ನು ಸಂಗ್ರಹಿಸುತ್ತಿರಲಿಲ್ಲ ಹೆಂಚಿನ ಕಪ್ಪೆಲ್ಲ ಇಳಿಯುತ್ತಿತ್ತು ಅನ್ನುವ ಕಾರಣಕ್ಕೆ. ಈ ನೀರಿನಿಂದ ಬಟ್ಟೆ ತೊಳೆದರೆ ಎಷ್ಟೇ ಕೊಳೆ ಇದ್ದರೂ ಬೇಗ ಕೊಳೆ ಬಿಡುತ್ತಿತ್ತು. ಆದರೆ ಒಣಗುತ್ತಿರಲಿಲ್ಲ.
ರೂಮ್ ಹೀಟರ್ ಇದ್ದರೂ ಕರೆಂಟ್ ಇಲ್ಲದೆ ಇರುವ ಕಾರಣಕ್ಕೆ ಅಗ್ಗಿಸ್ಟಿಕೆ ಇಡುತ್ತಿದ್ದರು ಅದರಲ್ಲಿ ಚಳಿ ಕಾಯಿಸುವುದು ಅದರ ಮೇಲೆ ದೊಡ್ಡ ಬಿದಿರಿನಪಂಜರಗಳನ್ನು ಹಾಕಿ ಬಟ್ಟೆ ಹರಡುವುದನ್ನೆಲ್ಲ ಮಾಡಿದಾಗ ಬಟ್ಟೆ ಒಣಗುತ್ತಿದ್ದವು. ತುಸು ಎಚ್ಚರ ತಪ್ಪಿದರೂ ಬಟ್ಟೆಗಳು ಸುಟ್ಟು ಹೋಗುತ್ತಿದ್ದವು. ಜಡಿಮಳೆಯಲ್ಲಿ ಎಲ್ಲವೂ ಸ್ತಬ್ಧವಾಗಿದೆ ಅನ್ನಿಸುತ್ತಿತ್ತು. ತರಕಾರಿ ಕೊಳೆಯುವುದು, ಹಣ್ಣುಗಳನ್ನು ತಿನ್ನುವ ಹಾಗಿಲ್ಲ, ಟಿವಿ ಇಲ್ಲ, ರೇಡಿಯೋ ಇಲ್ಲ, ಮಿಕ್ಸಿ ಓಡಲ್ಲ.. ಹಾಗೆ ಅದಕ್ಕೆ ಅಡ್ಜಸ್ಟ್ ಆಗುವ ಕಾಲ. ಅಪ್ಪಿ ತಪ್ಪಿ ತಣ್ಣನೆ ನೀರನ್ನು ಕುಡಿದರೆ ನೀರು ದೇಹದಲ್ಲಿ ಚಲಿಸುವ ಮಾರ್ಗ ನಮಗೆ ತಿಳಿಯುತ್ತಿತ್ತು.
ಮೊದಲ ಮಳೆ ದಿನಗಳು ಸಂತೋಷ ತರುತ್ತಿದ್ದವು. ಅದರೆ ಆಟಿ ತಿಂಗಳ ಮಳೆ ನಮ್ಮಿಂದ ಶಪಿಸಿಕೊಳ್ಳುತ್ತಿತ್ತು. ಎಂಥ ಪಿರ್ಕಿ, ಹುಚ್ಚು ಮಳೆ, ರಾಕ್ಷಸಿ ಮಳೆ, ಪಿಶಾಚಿ ತರ ಹಿಡಿದಿದೆ… ಎಂದೆಲ್ಲ ಅದಕ್ಕೆ ಊರವರ ಬೈಗುಳ ಸಿಗುತ್ತಿತ್ತು. ಈ ಮಳೆ ನೀರಿನ ಶಬ್ದ ಕೇಳುವುದರಲ್ಲೂ ಒಂದು ಹಿತವಿತ್ತು! ಮಳೆ ರಭಸವಾಗಿ ಬಂದರೆ ದಬದಬನೆ ಸುರಿದಂತೆ, ಮೊಗೆ ಮೊಗೆದು ಚೆಲ್ಲಿದಂತೆ, ನೀರು ರಭಸವನ್ನು ಕಳೆದರೆ ಕಾಮ್ ಆಗಿ ಹರಿಯುವುದು. ಅದೆ ಇಳಿಜಾರಲ್ಲಿ ಜುಳುಜುಳು ಶಬ್ದ ಕೇಳುತ್ತಿತ್ತು. ಆದರೆ ಮಳೆ ಬಂದು ನಿಂತ ಮೇಲೆ ಮಾಡಿನಲ್ಲಿ ಕುಟಕುಟನೆ ಸದ್ದು ಮಾಡಿ ಮತ್ತೆ ನಿಮಿಷ ಎರಡು ನಿಮಿಷಕ್ಕೊಮ್ಮೆ ನೀರು ಬೀಳುವ ಸದ್ದು ಕೋಪ ತರಿಸುತ್ತಿತ್ತು. ಮಳೆ ಬಗ್ಗೆ ಇಲ್ಲಿವರೆಗೆ ಹೇಳಿದ್ದು ಏನೂ ಅಲ್ಲ. ಇನ್ನೂ ಭಯಂಕರ ಇದೆ ನಮ್ಮ ಮಡಿಕೇರಿಯ ಮಳೆಯ ಅವತಾರಗಳು..!
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.