ಎಷ್ಟೋ ಕಥೆಗಳಲ್ಲಿ ನಾವೇ ಮುಖ್ಯವೋ, ಅಮುಖ್ಯವೋ ಒಂದು ಪಾತ್ರವಾಗಿ ಚಲಿಸುತ್ತಿರುತ್ತೇವೆ. ಅಸಲಿಗೆ ನಮ್ಮ ಸತ್ವಪರೀಕ್ಷೆಯಾಗುವುದು, ಇಂತಹ ದ್ವಂದ್ವಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಜವಾಬ್ದಾರಿ ನಮ್ಮ ಹೆಗಲೇರಿದಾಗ. ಹಾವು ಸಾಯಬಾರದು. ಕೋಲು ಮುರಿಯಬಾರದು ಎನ್ನುವ ನಾಜೂಕಯ್ಯರು ಹೇಗೋ ಬಚಾವಾಗುತ್ತಾರೆ. ಇದ್ದರೆ ಒಂದು ಕಡೆ. ಎರಡು ದೋಣಿಯ ಪಯಣ ನಮಗಲ್ಲ ಎನ್ನುವವರಿಗೆ ಸವಾಲು ಹೆಚ್ಚಿನದು. ಆದರೆ ಬಹಳಷ್ಟು ಸಲ ನಮ್ಮ ಪ್ರಯತ್ನಕ್ಕಿಂತ ಆ ಕ್ಷಣದ ಬಲವೇ ಹೆಚ್ಚಾಗಿ, ತುರ್ತು ಪರಿಸ್ಥಿತಿಯಲ್ಲಿ ಎರಡರಲ್ಲೊಂದು ತೀರ್ಮಾನವಾಗಿಬಿಟ್ಟಿರುತ್ತದೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದಲ್ಲಿ ಹೊಸ ಬರಹ
“ಇದುವರೆಗೂ ಡಾಕ್ಟರ್ ಹೇಳಿದ್ದನ್ನೆಲ್ಲ ಕೇಳಿದ್ದಾಯಿತು. ಅವರ ಔಷಧಿ, ಪಥ್ಯ, ನೀವು ನಂಬಿ ನಡೆದ ದೇವರು, ವ್ರತ, ಜಪತಪ, ಅವರಿವರು ಹೇಳಿದ ಮಂತ್ರ, ತಂತ್ರ, ವಿಭೂತಿ, ಆಯುರ್ವೇದ, ಹಸಿರು ಔಷಧಿ, ಅಲೋಪತಿ… ಇನ್ನು ಈ ಹೋರಾಟಕ್ಕೆ ಅರ್ಥವಿಲ್ಲ. ಖರ್ಚಾದ ಹಣ, ನಿದ್ದೆಗೆಟ್ಟ ರಾತ್ರಿಗಳು, ಕಳೆದ ಕಾಲ ತಿರುಗಿ ಬರುವುದಿಲ್ಲ. ಬದುಕಬೇಕೆನ್ನುವ ಆಸೆಯಾಗಲಿ, ಹೋರಾಡಲೇಬೇಕೆನ್ನುವ ಛಲವಾಗಲೀ ನನ್ನಲ್ಲಿ ಉಳಿದಿಲ್ಲ. ದಯವಿಟ್ಟು ಮುಂದಿನ ಚಿಕಿತ್ಸೆಗಾಗಿ ಬಲವಂತಪಡಿಸಬೇಡಿ. ಇರುವಷ್ಟು ಕಾಲ ನರಳಿಕೊಂಡಾದರೂ ಇರುತ್ತೇನೆ. ನನ್ನ ತೀರ್ಮಾನವನ್ನು ಗೌರವಿಸುವುದೇ ನೀವು ಮಾಡಬಹುದಾದ ಅತಿದೊಡ್ಡ ಸಹಾಯ.” ಎಂದು ಆಕೆ ಘೋಷಿಸಿದಾಗ, ಅವಳಿಗೆ ಇಪ್ಪತ್ತಮೂರರ ಪ್ರಾಯ.
ಕಳೆದ ಏಳೆಂಟು ವರ್ಷಗಳಲ್ಲಿ ಎದುರಿಸಿದ ಆರೋಗ್ಯ ಸಮಸ್ಯೆ, ಒಂದು ಮತ್ತೊಂದಕ್ಕೆ ಎಡೆಮಾಡಿಕೊಡುತ್ತಾ ಕಿಡ್ನಿಗಳೆರಡು ವಿಫಲವಾಗಿ, ಡಯಾಲಿಸಿಸ್ ಒಂದೇ ಉಳಿದ ಮಾರ್ಗ ಎನ್ನುವಷ್ಟರಲ್ಲಿ ಆಕೆಗೆ ಬದುಕು ಸಾಕು ಎನ್ನಿಸಿತ್ತು. ಇದು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಕಿಡ್ನಿಕಸಿ ಮಾಡಿದರೂ ಬದುಕುಳಿಯುವ ಸಾಧ್ಯತೆ ಕೇವಲ ಹತ್ತು ಪ್ರತಿಶತ ಎನ್ನುತ್ತಿದ್ದ ದಿನಗಳವು. ಚಟ, ದುರಭ್ಯಾಸ, ಬೇಜವಾಬ್ದಾರಿ ನಡೆಯಿಂದ ತಾನಾಗಿ ಮೈಮೇಲೆ ಎಳೆದುಕೊಂಡ ಅನಾರೋಗ್ಯವಲ್ಲ. ವಿಧಿ, ಹಣೆಬರಹ ಎಂದು ನಿಟ್ಟುಸಿರಿಡದೆ ಬೇರೆ ಹೆಸರಿಡಲಾಗದ ಸಮಸ್ಯೆ. ತನ್ನ ತಪ್ಪಿಲ್ಲದೆಯೂ ಬಂದೆರಗಿದ ಈ ಸವಾಲಿನೊಂದಿಗೆ ಸೆಣೆಸುವುದಾದರೂ ಎಷ್ಟು ಕಾಲ ಎನಿಸಿರಬೇಕು ಆಕೆಗೆ. ಹಾಗಾಗಿ ತೀರ್ಮಾನವನ್ನು ಆಕೆ ತಿಳಿಸಿಯಾಗಿತ್ತು. ಬದುಕಿರುವ ಕೊನೆಯ ಕ್ಷಣದವರೆಗಾದರೂ ನೋವು, ಹಿಂಸೆ ಹೆಚ್ಚು ಬಾಧಿಸದಂತೆ, ನಮ್ಮಿಂದ ಲೋಪವಾಯಿತು ಎಂದು ಆತ್ಮಸಾಕ್ಷಿ ತಿವಿಯದಂತೆ, ಖರ್ಚಿಗೆ ಹೆದರಿ ಹಿಂದೆ ಸರಿಯದೆ ಅವಳನ್ನು ಶಕ್ತಿಮೀರಿ ಚೆನ್ನಾಗಿ ನೋಡಿಕೊಳ್ಳಬೇಕೆನ್ನುವ ಮನಸ್ಸು ಪ್ರೀತಿಪಾತ್ರರದು. ಒಮ್ಮೆ ಆಕೆಯ ಕಡೆಗೆ, ಮತ್ತೊಮ್ಮೆ ಪ್ರೀತಿಪಾತ್ರರ ಕಡೆಗೆ ತೂಗುಯ್ಯಾಲೆಯಾಡುವ ನ್ಯಾಯ.
ಆರೋಗ್ಯದ ವಿಷಯ ಮಾತ್ರವಲ್ಲ. ಹಲವು ವಿಷಯಗಳಲ್ಲಿ ಇಂತಹ ಇಕ್ಕಟ್ಟು ಬಿಕ್ಕಟ್ಟು ಸೃಷ್ಟಿ ಮಾಡಿರುತ್ತದೆ. ಯಾವ ಕಡೆಗೆ ವಾಲಿದರೂ, ಪಶ್ಚಾತ್ತಾಪದ ಸೆಳಕು. ನಾವು ಅದುವರೆಗೂ ನಂಬಿಕೊಂಡು ಬಂದ ಮೌಲ್ಯ, ಆದರ್ಶ, ಪಾಪಪುಣ್ಯದ ಲೆಕ್ಕಾಚಾರಗಳೆಲ್ಲ ಅಡ್ಡಡ್ಡ ಮಲಗಿಬಿಡುತ್ತವೆ.
“ಅವಳನ್ನು ಎಷ್ಟು ಪ್ರೀತಿಯಿಂದ ಜೋಪಾನವಾಗಿ ನೋಡಿಕೊಳ್ಳಬೇಕೆಂದು ಪ್ರಯತ್ನಿಸುತ್ತೇನೆ. ಅವಳೆಲ್ಲ ಆಸೆಗಳನ್ನೂ ನನ್ನವೆಂದುಕೊಂಡು ಸಾಥ್ ನೀಡುತ್ತೇನೆ. ಆದರೂ ವಾರಕ್ಕೊಮ್ಮೆ ಕ್ಷುಲ್ಲಕ ಕಾರಣಕ್ಕೆ ನನ್ನ ಮೇಲೆ ಮುನಿಸು. ರಂಪಾಟ. ಎಲ್ಲಿ ತಪ್ಪುತ್ತಿದ್ದೇನೆನ್ನುವ ಸುಳಿವೇ ಸಿಗದೆ, ಕಂಗಾಲಾಗುತ್ತೇನೆ. ಅವಳನ್ನು ಬಿಟ್ಟಿರಲಾರೆ. ಈ ನೋವನ್ನು ಸಹಿಸಲಾರೆ. ಪ್ರೀತಿಸುವುದೇ ತಪ್ಪಾ?” ಎನ್ನುವ ಅವನು.
“ನನಗೇನೂ ಅವನ ಮೇಲೆ ದ್ವೇಷವಿಲ್ಲ. ನಿಜ ಹೇಳಬೇಕೆಂದರೆ, ಇಡೀ ಬದುಕಿನಲ್ಲಿ ಅವನ ಹಾಗೆ ಪ್ರೀತಿ, ಮುದ್ದಿನ ಮಳೆಗರೆದವರು ಯಾರಿಲ್ಲ. ಹತ್ತರಲ್ಲಿ ಹನ್ನೊಂದನೆಯವಳಾಗಿದ್ದ ನನ್ನನ್ನು ವಿಶೇಷವಾಗಿ ಕಂಡಿದ್ದು ಅವನು ಮಾತ್ರ. ಏನು ಗೊತ್ತಾ? ಈ ಅತಿಯಾದ ಕಾಳಜಿ, ಮುದ್ದು, ಗೌರವವನ್ನು ನನಗೆ ಸಂಭಾಳಿಸೋಕೆ ಬರಲ್ಲ. ಅಬ್ಬೇಪಾರಿ ಬದುಕು ಅಭ್ಯಾಸವಾಗಿರುವ ನನಗೆ, ಅರ್ಧದಿನವಾದರೂ ನೀನಾ ಎಂದು ಕೇಳುವವರಿಲ್ಲದೆ ಹಾಯಾಗಿ ಇರಬೇಕೆನ್ನಿಸುತ್ತೆ. ಒಂದು ಹೊತ್ತು ತಿನ್ನದಿದ್ದರೆ, ಬಸ್ಸಿನ ನೂಕುನುಗ್ಗಾಟದಲ್ಲಿ ಪ್ರಯಾಣ ಮಾಡಿದರೆ, ಸಣ್ಣ ಜ್ವರ ಬಂದು ಮಲಗಿದರೆ, ರಿಕ್ಷಾದವನ ಹತ್ತಿರ ಜಗಳವಾದರೆ… ಪ್ರಪಂಚ ಮುಳುಗಿಹೋಗಲ್ಲ. ನಾನು ಸಾಯಲ್ಲ. ಅವೆಲ್ಲ ಕ್ಷಣಗಳನ್ನು, ಸಣ್ಣಪುಟ್ಟ ನೋವನ್ನು ನಾನು ಇಷ್ಟಪಡುತ್ತೇನೆ. ಅದು ನನ್ನ ಸಹಜ ಬದುಕು. ಇವನ ಪ್ರೀತಿಯ ದೆಸೆಯಿಂದ ಅವೆಲ್ಲವನ್ನೂ ಕಳೆದುಕೊಳ್ಳುತ್ತಿದ್ದೇನೆ ಎಂಬ ಅರಿವು ಸುಪ್ತಮನಸ್ಸಿನಲ್ಲಿ ಕೆಲಸ ಮಾಡುತ್ತಿರುತ್ತದೆ. ಸಣ್ಣಪುಟ್ಟ ವಿಷಯಕ್ಕೆ ಜಗಳವಾಗಿ, ದೂರವಿಡುತ್ತೇನೆ. ಮತ್ತೆ ಅವನಿಲ್ಲದ ಬದುಕು ಬರಡೆನ್ನಿಸಿ, ಹತ್ತಿರಾಗುತ್ತೇನೆ. ಇದು ತಪ್ಪು. ಆದರೆ ಸದಾ ಸರಿಯಾಗಿ ನಡೆಯೋಕೆ ನನಗಾಗಲ್ಲ.” ಎಂದು ಅವಳು ಬಯಲಾಗುತ್ತಾಳೆ. ಇಬ್ಬರ ನಡುವಿದ್ದವರು ತಲೆಚಚ್ಚಿಕೊಂಡು, ಕೈ ಮುಗಿಯುತ್ತಾರೆ.
ಇಂತಹ ಸಾವಿರ ಕಥೆಗಳು ನಮ್ಮ ಮಧ್ಯೆಯೇ ಓಡಾಡುತ್ತಿರುತ್ತವೆ. ಎಷ್ಟೋ ಕಥೆಗಳಲ್ಲಿ ನಾವೇ ಮುಖ್ಯವೋ, ಅಮುಖ್ಯವೋ ಒಂದು ಪಾತ್ರವಾಗಿ ಚಲಿಸುತ್ತಿರುತ್ತೇವೆ. ಅಸಲಿಗೆ ನಮ್ಮ ಸತ್ವಪರೀಕ್ಷೆಯಾಗುವುದು, ಇಂತಹ ದ್ವಂದ್ವಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಜವಾಬ್ದಾರಿ ನಮ್ಮ ಹೆಗಲೇರಿದಾಗ. ಹಾವು ಸಾಯಬಾರದು. ಕೋಲು ಮುರಿಯಬಾರದು ಎನ್ನುವ ನಾಜೂಕಯ್ಯರು ಹೇಗೋ ಬಚಾವಾಗುತ್ತಾರೆ. ಇದ್ದರೆ ಒಂದು ಕಡೆ. ಎರಡು ದೋಣಿಯ ಪಯಣ ನಮಗಲ್ಲ ಎನ್ನುವವರಿಗೆ ಸವಾಲು ಹೆಚ್ಚಿನದು. ಆದರೆ ಬಹಳಷ್ಟು ಸಲ ನಮ್ಮ ಪ್ರಯತ್ನಕ್ಕಿಂತ ಆ ಕ್ಷಣದ ಬಲವೇ ಹೆಚ್ಚಾಗಿ, ತುರ್ತು ಪರಿಸ್ಥಿತಿಯಲ್ಲಿ ಎರಡರಲ್ಲೊಂದು ತೀರ್ಮಾನವಾಗಿಬಿಟ್ಟಿರುತ್ತದೆ. ಆದದ್ದೆಲ್ಲಾ ಒಳಿತೇ ಎಂದು ಸಮಾಧಾನಿಸಿಕೊಂಡರಾಯಿತು. ಕಾದು ನೋಡುವ ತಂತ್ರವೇ ಪ್ರತಿಸಲ ಫಲಿಸುವುದೊಂದು ಸೋಜಿಗ.
ಆದರೂ ತಿಳಿದಿರುವ ಕಥೆಯನ್ನು ಅರ್ಧಂಬರ್ಧ ಹೇಳಿ, ಮಾತು ಮುಗಿಸುವುದು ಹೇಗೆ? ಚಿಕಿತ್ಸೆ ಬೇಡವೆಂದು ಹೇಳಿದ ಆಕೆಯ ತೀರ್ಮಾನವನ್ನು, ಬಹುಕಷ್ಟದಿಂದ ಮನೆಯವರು ಒಪ್ಪಿಕೊಂಡಿದ್ದರು. ಮೈಯಲ್ಲಿ ನೀರಿನಂಶ ಹೆಚ್ಚಾಗಿ, ಉಸಿರಾಡಲು ಕಷ್ಟಪಡುತ್ತಿದ್ದಾಗ, ಆಕೆಯ ಅಣ್ಣ, “ನೀನು ಪ್ರಾಣ ಬಿಡುವುದೇ ಸತ್ಯವಾದರೆ, ಹೀಗೆ ನರಳುತ್ತಾ ಸಾಯುವುದನ್ನು ನೋಡುತ್ತಾ ಕುಳಿತಿರಲಾರೆ. ನನ್ನ ಆತ್ಮಸಾಕ್ಷಿ ಇದನ್ನು ಒಪ್ಪುವುದಿಲ್ಲ. ಆಸ್ಪತ್ರೆಗೆ ಸೇರಿಸುತ್ತೇನೆ. ಮುಂದಿನದು ದೈವೇಚ್ಛೆ” ಎಂದು ಆಸ್ಪತ್ರೆಗೆ ಸೇರಿಸಿದ. ಮುಂದೆ ಕಿಡ್ನಿಕಸಿಯೂ ಫಲಕಾರಿಯಾಯಿತು. ಆರೋಗ್ಯದೊಂದಿಗೆ ಆಯುಷ್ಯವೂ ಜೊತೆಯಾಯಿತು.
ಇಂತಹ ನಿಜಜೀವನದ ಘಟನೆಗಳೇ ಅಲ್ಲವೇ ಬದುಕಿನ ರುಚಿ ಹೆಚ್ಚಿಸುವುದು?
ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.
ನೂರಕ್ಕೆ ನೂರು ಪ್ರತಿಶತ ನನಗೊಪ್ಪಿದ ಮಾತು. ಸಹಜತೆ ಎಂದಿಗೂ ರೂಢಿಸಿಕೊಂಡು ಬರುವಂಥದ್ದಲ್ಲ. ಸಹಜ ಭಾವನೆ, ಅಭಿಪ್ರಾಯ, ಸಂತೋಷ, ಸಂತಾಪ ಎಲ್ಲವೂ ಆ ಕ್ಷಣದ ಸತ್ಯಗಳು ಮತ್ತು ದಿನಚರಿಯಲ್ಲಿ ಬೆರೆತುಹೋದ ಆಪ್ತ ನಡವಳಿಕೆಗಳು. ಅದರ ಮುಖ ಪ್ರೇಮದಲ್ಲಾದರೂ ಸರಿ, ಸಾವಿನಲ್ಲಾದರೂ ಸರಿ ಸಹಜವಾಗೇ ಅನಾವರಣವಾಗುತ್ತದೆ. ಮೈಗೂಡಿಸಿಕೊಂಡವರಿಗೆ ಗೊತ್ತು ಅದರ ಸುಖ. ????