ಸೂಮೆತ್ಸ್‌ರ ಅಡಕಮಾತಿನ, ನಿಖರವಾದ ಕವನ ರಚಿಸುವ ವಿಧಾನವನ್ನು ಗಮನಿಸಿ, ತ್ರೀನ್ ಸೂಮೆತ್ಸ್‌ರು ಒಂದು ತರಹದ ಕರಾಳವಾದ ‘ಸೈಕೊಗ್ರಾಫಿಕ್’ (psychographic) ಬರವಣಿಗೆ ಶೈಲಿಯನ್ನು ಹೊಂದಿದ್ದಾರೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಅವರದ್ದು ಮಿತಭಾಷೆಯ ಕಾವ್ಯವಾದ್ದರಿಂದ ಅವರ ಕಾವ್ಯವನ್ನು ಸಾಂಕೇತಿಕ ಭಾಷೆಯಿಂದ ಸಾಮಾನ್ಯ ಭಾಷೆಗೆ ತಂದು ಓದಬೇಕಾಗುತ್ತದೆ. ಸೂಮೆತ್ಸ್ ಅವರ ಕಾವ್ಯವನ್ನು ಓದುವಾಗ ಗ್ರಹಿಸಬಹುದಾದ ಬಿದುರತೆ ಮತ್ತು ಭೇದ್ಯತೆಯ ಭಾವನೆಗಳ ಹಿಂದೆ ಇರುವ ವಿಲಕ್ಷಣವಾದ ಸ್ಥಳರಹಿತತೆ ಕಂಡುಬರುತ್ತೆ…
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಎಸ್ಟೋನಿಯಾ ದೇಶದ ಕವಿ ತ್ರೀನ್ ಸೂಮೆತ್ಸ್ (Triin Soomets) ಅವರ ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ

ತ್ರೀನ್ ಸೂಮೆತ್ಸ್‌ರ ಕಾವ್ಯವು, ಪ್ರಾರಂಭದಿಂದಲೂ, ಪ್ರಧಾನವಾಗಿ ಮುಕ್ತ ಪದ್ಯದಲ್ಲಿದೆ; ಅವರ ಕಾವ್ಯದಲ್ಲಿ ಅನೇಕ ವೇಳೆ ಶೃಂಗಾರದ ಒಳಧ್ವನಿ ಇರುತ್ತದೆ. ತಮ್ಮದೇ ಆಧುನಿಕತಾವಾದದ ರೀತಿಯಲ್ಲಿ, ಸೂಮೆತ್ಸ್ ತಮ್ಮ ಪ್ರತಿಮೆಗಳಲ್ಲಿ ದೇಹ, ಹಿಂಸೆ, ಲೋಹ, ರಕ್ತ, ಯಂತ್ರೋಪಕರಣಗಳು, ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಭಾವಿ ಲಕ್ಷಣಗಳನ್ನು ಸಂಯೋಜಿಸಿ ಬಳಸುತ್ತಾರೆ. ಒಂದೆಡೆ ಇವು ಸಾಂಪ್ರದಾಯಿಕ ಕ್ಲೀಷೆಗಳನ್ನು ಪ್ರತಿನಿಧಿಸುತ್ತಾ, ಹೊಸ ಸಂದರ್ಭಗಳಲ್ಲಿ ಅನಿರೀಕ್ಷಿತ ಸಂಬಂಧಗಳನ್ನು ರಚಿಸುತ್ತವೆ. ವೈಯಕ್ತಿಕ ಶೈಲಿಯೊಂದಿಗೆ ಸಾಂಸ್ಕೃತಿಕ ಸಂಪ್ರದಾಯಗಳ ಸಂಯೋಜನೆ, ಆತ್ಮರತಿಯ ಹಾಗೂ ಲೈಂಗಿಕ ಉದ್ವಿಗ್ನತೆಯ ಸೃಷ್ಟಿ, ಹಾಗೂ ನಾಟಕೀಯತೆಯಂತಹ ವಿಷಯಗಳು ಸೂಮೆತ್ಸ್‌ರ ಕಾವ್ಯವನ್ನು ನಿರೂಪಿಸುತ್ತವೆ.

1969-ರಲ್ಲಿ ಟ್ಯಾಲಿನ್‌ ನಗರದಲ್ಲಿ ಜನಿಸಿದ ತ್ರೀನ್ ಸೂಮೆತ್ಸ್, ಟಾರ್ಟು ವಿಶ್ವವಿದ್ಯಾಲಯದಲ್ಲಿ ಎಸ್ಟೋನಿಯನ್ ಭಾಷಾಶಾಸ್ತ್ರವನ್ನು ಅಧ್ಯಯನ ಮಾಡಿದರು. 1994 ರಲ್ಲಿ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಅವರು ಹಲವಾರು ಪತ್ರಿಕೆಗಳಲ್ಲಿ ಪ್ರೂಫ಼್-ರೀಡರ್ ಮತ್ತು ಸಂಪಾದಕರಾಗಿ ಕೆಲಸ ಮಾಡಿದ್ದಾರೆ. 1986-ರಿಂದಲೇ ಸೂಮೆತ್ಸ್‌ ಅವರು ನಿಯತಕಾಲಿಕೆಗಳಲ್ಲಿ ತಮ್ಮ ಕವಿತೆಗಳನ್ನು ಪ್ರಕಟಿಸಲು ಪ್ರಾರಂಭಿಸಿದರು. 1990-ರಲ್ಲಿ ‘ಸಿನೈನ್ ಲಿನ್’ (Sinine Linn – The Blue City) ಕವನ ಸಂಕಲನದೊಂದಿಗೆ ಸಾಹಿತ್ಯಲೋಕಕ್ಕೆ ಪಾದಾರ್ಪಣೆ ಮಾಡಿದರು. 1989-ರಿಂದ 1999-ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ಅವರು ಬರೆದ ಕವನಗಳನ್ನು ಒಳಗೊಂಡ ‘ಸೂನ್’ (Soon – Vein, 2000) ಸಂಗ್ರಹದಲ್ಲಿ ಅವರ ಆರಂಭದ ಕಾವ್ಯ ಪಥವನ್ನು ಕಾಣಬಹುದು. ಈ ಸಂಗ್ರಹದಲ್ಲಿ 1990-ರ ದಶಕದ ಮೊದಲಾರ್ಧದಲ್ಲಿ ಪ್ರಕಟವಾದ ಮೂರು ಸಂಕಲನಗಳಿಂದ ಮತ್ತು 1999 ರಲ್ಲಿ ಪ್ರಕಟವಾದ ನಾಲ್ಕನೆಯ ಸಂಕಲನ, ‘ಪಿಡುರ್ಡುಸ್ಯಾಲ್ಗ್’-ನಿಂದ (Pidurdusjälg – Skid Mark) ಕವನಗಳನ್ನು ಆಯ್ದುಕೊಳ್ಳಲಾಗಿದೆ. ಈ ಅವಧಿಯಲ್ಲಿ ಸೂಮೆತ್ಸ್ ತಮ್ಮನ್ನು ವ್ಯಕ್ತಪಡಿಸುವ ವಿಧಾನದಲ್ಲಿ ಪರಿಷ್ಕಾರ ಹಾಗೂ ಸಂಯಮ ಹೆಚ್ಚಾದ ಹಾಗೆ ಪ್ರತಿಭಟನೆಯ ಲಕ್ಷಣಗಳೂ ಹೆಚ್ಚಾದಂತೆ ಕಂಡುಬರುತ್ತದೆ. ಇಪ್ಪತ್ತನೆಯ ಶತಮಾನದ ಕೊನೆಯ ಹಾಗೂ ಇಪ್ಪತ್ತೊಂದನೆಯ ಶತಮಾನದ ಆರಂಭದ ಕಾಲದ ಅತ್ಯಂತ ನವೀನ ಹಾಗೂ ನಿಗೂಢ ಎಸ್ಟೋನಿಯನ್ ಕವಿಗಳಲ್ಲಿ ಒಬ್ಬರು ಎಂದು ಸೂಮೆತ್ಸ್‌ರು ಹೆಸರುಗಳಿಸಿದ್ದಾರೆ. ಅವರ ಕಾವ್ಯದಲ್ಲಿ ಅವರು ‘ಲಿಂಗ ಅರಿವಿಗೆ’ (gender cognition) ಹೊಸ ದಾರಿಯನ್ನು ರಚಿಸಿದ್ದಾರೆ.

ಅವರ ಭಾವಗೀತಾತ್ಮಕ ವ್ಯಕ್ತಿತ್ವವು ವಿಭಿನ್ನ ಸ್ತ್ರೀ ಪಾತ್ರಗಳನ್ನು ವಹಿಸಿಕೊಂಡು ವಿಭಿನ್ನ ಲೋಕಗಳಲ್ಲಿ ಸಂಚರಿಸುತ್ತದೆ: ಅದು ಪ್ರಣಯ ನಾಯಕಿಯ ಪಾತ್ರವಾಗಿರಬಹುದು, ಉಭಯಲಿಂಗರತಳ, ಸ್ವಪೀಡಕಳ, ತ್ಯಾಗಮಯಿಯ, ಕ್ರೂರ ಪ್ರೇಮಿಯ ಅಥವಾ ಬೇರೆ ಯಾವುದೇ ಪಾತ್ರವಾಗಿರಬಹುದು. ಕಾಮಪ್ರಚೋದಕ ಮತ್ತು ನಾಟಕೀಯ ಸನ್ನಿವೇಶಗಳು ಭಾವಗೀತಾತ್ಮಕ ಸನ್ನಿವೇಶಗಳೊಂದಿಗೆ ಪರ್ಯಾಯವಾಗಿ ಬದಲಾಗುತ್ತಿರುತ್ತವೆ ಹಾಗೂ ಸಂಭಾಷಣೆಗಳೊಂದಿಗೆ ಸ್ವಗತಗಳು ಪರ್ಯಾಯವಾಗಿ ಬದಲಾಗುತ್ತಿರುತ್ತವೆ. ಅವರ ಕಾವ್ಯದಲ್ಲಿ ಒಬ್ಬ/ಳು “ಅನ್ಯ/ಳು” ಯಾವಾಗಲೂ ಇರುತ್ತಾನೆ/ಳೆ. ಅವರ ಪಠ್ಯಗಳ ಮೇಲಿನ ಪದರವು ‘ಕಾರ್ನೀವಲ್’ ತರಹದ ಭಾವನೆಗಳನ್ನು ಕೊಡುತ್ತವೆ (ಭಾಷಾ ವಿನೋದದ ಜತೆ) ಆದರೆ ಅದೇ ವೇಳೆಗೆ ಅವರು ಬಳಸುವ ವಿವಿಧ ಸಾಂಸ್ಕೃತಿಕ ಸಂಕೇತಗಳು ಮತ್ತು ಕವನಗಳಲ್ಲಿರುವ ದೈಹಿಕತೆಯು ಗಂಭೀರ ಸಂಘರ್ಷದ ಸಂದರ್ಭಗಳು ಮತ್ತು ಭಾವೋದ್ರೇಕಗಳನ್ನು ಒತ್ತಿ ಹೇಳುತ್ತದೆ.

ಸೂಮೆತ್ಸ್-ರ ಅಡಕಮಾತಿನ, ನಿಖರವಾದ ಕವನ ರಚಿಸುವ ವಿಧಾನವನ್ನು ಗಮನಿಸಿ, ತ್ರೀನ್ ಸೂಮೆತ್ಸ್‌ರು ಒಂದು ತರಹದ ಕರಾಳವಾದ ‘ಸೈಕೊಗ್ರಾಫಿಕ್’ (psychographic) ಬರವಣಿಗೆ ಶೈಲಿಯನ್ನು ಹೊಂದಿದ್ದಾರೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಅವರದ್ದು ಮಿತಭಾಷೆಯ ಕಾವ್ಯವಾದ್ದರಿಂದ ಅವರ ಕಾವ್ಯವನ್ನು ಸಾಂಕೇತಿಕ ಭಾಷೆಯಿಂದ ಸಾಮಾನ್ಯ ಭಾಷೆಗೆ ತಂದು ಓದಬೇಕಾಗುತ್ತದೆ. ಸೂಮೆತ್ಸ್ ಅವರ ಕಾವ್ಯವನ್ನು ಓದುವಾಗ ಗ್ರಹಿಸಬಹುದಾದ ಬಿದುರತೆ ಮತ್ತು ಭೇದ್ಯತೆಯ ಭಾವನೆಗಳ ಹಿಂದೆ ಇರುವ ವಿಲಕ್ಷಣವಾದ ಸ್ಥಳರಹಿತತೆ ಕಂಡುಬರುತ್ತೆ – ಇಡೀ, ದೈತ್ಯಾಕಾರದ ಬ್ರಹ್ಮಾಂಡವು ಅಲ್ಲಿ ಕಾಣುತ್ತೆ, ಆದರೆ ಅದಕ್ಕೆ ಆಧಾರ ನೀಡುವ ಒತ್ತುಗೋಡೆಗಳಿರುವುದಿಲ್ಲ, ಅಲ್ಲದೇ ಸುರಕ್ಷತೆಯ ಕೊರತೆಯ ಭಾವನೆಯೂ ಇದೆ – ಇದು ಸೂಮೆತ್ಸ್‌ರ ಕಾವ್ಯವನ್ನು ವಿಶೇಷವಾಗಿ ಪರಿಣಾಮಕಾರಿಯಾಗಿಸುತ್ತದೆ.

ತ್ರೀನ್ ಸೂಮೆತ್ಸ್ ಅವರು ಹತ್ತಕ್ಕೂ ಹೆಚ್ಚು ಕವನ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಎರಡು ಸಂದರ್ಭಗಳಲ್ಲಿ, ಅಂದರೆ, 2000 ಮತ್ತು 2009-ರಲ್ಲಿ ಅವರು ‘ಯುಹಾನ್ ಲೀವ್’ (Juhan Liiv) ಕಾವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. 2013-ರಲ್ಲಿ ಅವರ ಕವನ ಸಂಕಲನ ‘ಅಸ್ಯಾಡೆ ಒಮಾಡುಸ್ಡ್’ (Asjade Omadused) ‘ಎಸ್ಟೋನಿಯನ್ ಕಲ್ಚರಲ್ ಎಂಡೋಮೆಂಟ್‌’ ಸಂಸ್ಥೆಯ ಕಾವ್ಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2004 ರಲ್ಲಿ ಅವರ ‘ತೂರ್ಮಟೆರ್ಯಲ್’ (Toormaterjal – Raw Material) ಸಂಕಲನಕ್ಕೆ ಸಾಂಸ್ಕೃತಿಕ ಸಾಪ್ತಾಹಿಕ ‘ಸರ್ಪ್’ ಪ್ರಶಸ್ತಿಯನ್ನು ನೀಡಲಾಯಿತು. ಈ ಸಂಕಲನ ಅವರ ಬರವಣಿಗೆಯ ವಿಶಿಷ್ಟತೆಗಳಾದ ಭಾವನಾತ್ಮಕ ಉದ್ವಿಗ್ನತೆ, ನಿಕಟತೆ, ಸಾಮಾಜಿಕತೆ, ಹಾಗೂ ಅನುಭಾವತೆಗಳನ್ನು ಅತ್ಯಂತ ಗಾಢವಾಗಿ ಪ್ರತಿಬಿಂಬಿಸುತ್ತದೆ. ಅದೇ ವರ್ಷ, ‘ಲೆಪಿಂಗ್ ಎನ್ಆರ್ 2’ Leping nr 2 (Covenant Number 2. Poems 2000–2003) ಸಂಕಲನ ಪ್ರಕಟವಾಯಿತು. ಈ ಸಂಕಲನದಲ್ಲಿ ಸೂಮೆತ್ಸ್‌ ಅವರು ಒಂದು ವಿಭಿನ್ನ ರೀತಿಯ ಕಾವ್ಯವನ್ನು ಮುಂದಿಟ್ಟರು – ಚಿಕ್ಕ, ಹೈಕು ರೂಪದ ಕವನಗಳು, ವೈಷಯಿಕ, ಶಕ್ತಿಯುತ ಹಾಗೂ ಭಾವೋದ್ರಿಕ್ತ, ಹೆಣ್ಣುತನದಿಂದ ಕೂಡಿದ ಕವನಗಳು.

ಸಮಕಾಲೀನ ಎಸ್ಟೋನಿಯನ್ ಸಾಹಿತ್ಯದ ಕ್ಷೇತ್ರದಲ್ಲಿ ಸೂಮೆತ್ಸ್‌ರ ಪ್ರಾಮುಖ್ಯತೆಯನ್ನು ವಿವರಿಸುವುದು ಕಷ್ಟವೇನಲ್ಲ. ಒಂದೇ ವಾಕ್ಯದಲ್ಲಿ ಹೇಳುವುದಾದರೆ, ತ್ರೀನ್ ಸೂಮೆತ್ಸ್‌ರ ಕಾವ್ಯವು ವಿರುದ್ಧಗಳ ಪ್ರಪಂಚವೆಂದು ಹೇಳಬೇಕು. ಇದು ಏಕಕಾಲದಲ್ಲಿ ಕೇಂದ್ರಾಪಗಾಮಿ ಮತ್ತು ಕೇಂದ್ರಾಭಿಮುಖವಾಗಿರುವ ಪ್ರಪಂಚವಾಗಿದೆ. ಇಲ್ಲಿ ಆನಂದ ಮತ್ತು ನೋವು, ಪ್ರೀತಿ ಮತ್ತು ವಿನಾಶ, ದೇಹ ಮತ್ತು ರೂಪಕ, ಪ್ರೀತಿ ಮತ್ತು ಪ್ರಜ್ಞೆ, ಪ್ರೀತಿ ಮತ್ತು ಅರ್ಥ ಘರ್ಷಿಸುತ್ತಲೇ ಇರುತ್ತವೆ. ಅರ್ಥ ಮತ್ತು ಅರ್ಥದ ನಿಗ್ರಹವು ಕೇವಲ ಅರ್ಧ ಹೆಜ್ಜೆಯ ಅಂತರದಲ್ಲಿರುತ್ತದೆ. ಇಲ್ಲಿ ಹಿಮ ಉರಿಯುತ್ತಿರುತ್ತೆ, ಅದರ ಜ್ವಾಲೆಗಳು ನೀಲಿ ಬಣ್ಣದ್ದಾಗಿರುತ್ತೆ. ಒಂದೆರಡು ಸಾಲುಗಳ ಅಂತರದಲ್ಲಿ ನಾವು ಹಾಡು, ಪ್ರಾರ್ಥನೆ, ಮತ್ತು ಅತ್ಯಾಚಾರವನ್ನು ಎದುರಾಗುತ್ತೇವೆ. ಸೂಮೆತ್ಸ್ರ ಕಾವ್ಯದಲ್ಲಿರುವ ಸಾಮರಸ್ಯವನ್ನು ಕೇವಲ ಸೂಮೆತ್ಸ್ರಿಂದ ಮಾತ್ರ ಸಾಧಿಸಲು ಸಾಧ್ಯ.

ಇಲ್ಲಿ ಅನುವಾದಿಸಿರುವ ಎಂಟು ಕವನಗಳಲ್ಲಿ ಮೊದಲ ಐದು ಕವನಗಳನ್ನು ಮಿರಿಯಮ್ ಮೆಕ್‌ಇಲ್ಫಾಟ್ರಿಕ್-ಕ್ಸೆನೊಫೊಂಟೊವ್-ರವರು (Miriam McIlfatrick-Ksenofontov) ಹಾಗೂ ನಂತರದ ಮೂರು ಕವನಗಳನ್ನು ಎಚ್. ಎಲ್. ಹಿಕ್ಸ್ ಹಾಗೂ ಯೂರಿ ಟ್ಯಾಲ್ವೆಟ್-ರವರು (H. L. Hix and Jüri Talvet) ಎಸ್ಟೋನಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.

1
ನೀರು ನಿರ್ಮಲವಾಗಿತ್ತು
ಮೂಲ: And the water was pure

ನೀರು ನಿರ್ಮಲವಾಗಿತ್ತು
ಎಂದಿಗಿಂತಲೂ ಹೆಚ್ಚು ನಿರ್ಮಲವಾಗಿತ್ತು.
ಬರಿಗೈಯ ಬೊಗಸೆಯಲ್ಲಿ ಹಿಡಿದು
ಕುಡಿದಳು ಕೊನೆಯ ಹನಿಯವರೆಗೂ.

ಆದಿ ಬೇಸಗೆಯ ಕರಗುವ ಹಿಮ
ಕಣ್ಣಿಗೆ ಕುಕ್ಕುತ್ತಿತ್ತು.
ಅದರ ಅಡಿಯಿಲ್ಲದ ಜಗತ್ತು
ಮುಳುಗಿತು ಅಡ್ಡಲಾಗಿ ಆರು ಸಲ.

ಕರಗಿದ ಅಷ್ಟೊಂದು ನೋವು
ಸುರಿದು ಬಿದ್ದವು ಅವಳ ಮೇಲೆ.
ಬರಿಗಾಲಲ್ಲಿ ನಡೆದಳವಳು
ಬತ್ತಲಾಗಿ ನಡೆದಳವಳು.

2
ಕತ್ತಲು ಮತ್ತು ನೆರಳುಗಳು ಮಾತ್ರ
ಮೂಲ: Only Darkness and Shadows

ಕತ್ತಲು ಮತ್ತು ನೆರಳುಗಳು ಮಾತ್ರ,
ನನ್ನ ಕಣ್-ನರಗಳು ತುಡಿಯುತಿವೆ
ಯಾವುದೋ ಅಸಹಜ ಆಘಾತದ ಭಯದಲ್ಲಿ.

ದೇಶಗಳು, ಸಂಖ್ಯೆಗಳು ಬದಲಾಗುತ್ತವೆ,
ಬಣ್ಣಗಳು, ನಾದಗಳು ಮಾಸುತ್ತವೆ,
ನನ್ನ ಬೆರಳು ಕ್ಷಯಿಸುತ್ತಿದೆ,
ನನ್ನ ಉಂಗುರ ನಿಸ್ತೇಜವಾಗುತಿದೆ.

ನಸುಕು ಬಾನಂಚಿನೊಳಗೆ ಸೀಳಿಕೊಂಡು ಹೋಗುತ್ತೆ,
ಎಲ್ಲವೂ ಹೆಪ್ಪುಗಟ್ಟಿವೆ, ಅಸೂಯೆಪಡುತ್ತಿವೆ,
ನಿದ್ದೆಗಾಗಿ, ಇಲ್ಲಾ ಕರುಣೆಗಾಗಿ ಕಾಯುತ್ತಿರುವಂತೆ.

ವರುಷಗಳು ಜಾರಿಹೋಗುತ್ತಿವೆ ತಾಸುಗಳ ಹಾಗೆ,
ಹೊಯಿಗೆಯಲ್ಲಿ ಯಾವ ಸುಳಿವೂ ಬಿಡದೆ,
ಯಾವ ಆಕಾರವೂ ನೆರಳು ಬೀರುತ್ತಿಲ್ಲ.

3
ಆ ಕನ್ನಡಿಗೆ ಮತ್ತೇರಿರಬೇಕು
ಮೂಲ: The mirror must be drunk

ಆ ಕನ್ನಡಿಗೆ ಮತ್ತೇರಿರಬೇಕು:
ಅದರ ಮುಖ ತಿಳಿಯಾಗಿಲ್ಲ,
ಕಲೆಗಳು ಹಾಗೂ ಗೀರುಗಳು,
ಅಕ್ಷರಗಳು, ಪದಗಳು ಹಾಗೂ ಕಣ್ಣುಗಳು,
ಸತ್ಯಗಳು, ಬೆರಳುಗಳು, ಸೈರನ್ನುಗಳು,
ಸಂಜ್ಞೆಗಳು, ಸಂಕೋಲೆಗಳು ಹಾಗೂ ಆಯುಧಗಳು
ನನ್ನತ್ತ ಬರುತ್ತವೆ, ನನ್ನ ಕೈಗಳ ಬಂಧಿಸುತ್ತವೆ,
ನನ್ನನ್ನು ಬಲವಂತವಾಗಿ ಹರಕಲಾದ ಚಾಪೆಯ
ಮೇಲೆ ಅಂಗಾತ ಬೀಳಿಸುತ್ತವೆ,
ನನ್ನನ್ನು ಕಚ್ಚಲು, ಪರಾರಿಯಾಗಲು,
ನನ್ನ ಎಲ್ಲಾ ಸಂಪತ್ತನ್ನು, ಆಲೋಚನೆಗಳನ್ನು,
ಮತ್ತೆ ಕೆಲವು ಹೆಸರುಗಳನ್ನು
ಒಂದು ಸಣ್ಣ ಕರಿ ಪೆಟ್ಟಿಗೆಯಲ್ಲಿ ಮರೆಯಾಗಿಸಿ,
ಕಿಟಕಿಯ ಹೊರಗೆ ಎಸೆಯಲು,
ಬೆಳಗ್ಗಿನ ತನಕ ನನ್ನ ತಲೆಯನ್ನು
ಗಾಜಿನ ಚೂರುಗಳ ಮೇಲೆ ಮನಸಾರೆ ಜಜ್ಜಲು.

ನಾನು ಒಂದೊಂದಾಗಿ ವರುಷಗಳತ್ತ ನಡೆಯುವೆ,
ಹತ್ತಿರದವರಿಗೆಲ್ಲ ವಯಸ್ಸಾಗಿದೆ,
ಆಗಬೇಕು ಅಂತ್ಯಕ್ರಿಯೆಗಳು,
ನಾನೂ ಸಾಯುತ್ತಿರುವೆ,
ಈಗ ಇದು ಒಂದು ಸಾಹಸವೆಂದೂ ಅನಿಸುವುದಿಲ್ಲ,
ನಾನು ಹತ್ತಿರಹೋಗುವೆ,
ಒಂದೊಂದಾಗಿ ಕೋಣೆಗಳನ್ನು ದಾಟುವೆ:
ಅಸಡ್ಡೆ ಹಾಗೂ ಆಸೆ, ಕೊಡಲಿ ಹಾಗೂ ಗುಲಾಬಿ
ನನ್ನೊಳಗೆ ಸಂಧಿಸಿ ಒಂದಾಗುತ್ತವೆ.

ಈಗ ವಿಚಾರ ಮತ್ತು ಆಚಾರ ಅನಿವಾರ್ಯವಾಗಿ ಸೇರಲೇಬೇಕು,
ನುಡಿ ತಿರುಳಾಗುತ್ತೆ, ಹಾಡು ಮಗುವಾಗುತ್ತೆ –
ಸಂಕೋಲೆಗಳಿಂದ ಕೈಗಳನ್ನು ಎಳೆದು ಬಿಡಿಸಿಕೊಳ್ಳುವೆ,
ನನ್ನ ಹೊಡೆತ ಕಡಕ್ಕಾಗಿರುತ್ತೆ, ಖಚಿತವಾಗಿರುತ್ತೆ.
ನನ್ನ ಮುಖದಲ್ಲಿ ಗೆದ್ದವಳ ಸದುದ್ದಿಶ್ಚಿತ ಪಶ್ಚಾತಾಪ
ನಿರಾಳವಾಗಿ ಕಂಪಿಸುತ್ತಿದೆ:
ಇದು ನನ್ನ ಮುಖವಾಗಿರಲಿಲ್ಲ.

4
ಮಳೆಯಲ್ಲಿ ಪೂರ್ತಿ ನೆನೆದಿರುವೆ ನಾನು
ಮೂಲ: Rain, rain soaks into me

ಮಳೆ,
ಮಳೆಯಲ್ಲಿ ಪೂರ್ತಿ ನೆನೆದಿರುವೆ ನಾನು.
ನನ್ನೆಲ್ಲಾ ಗ್ಲಾಸುಗಳು ನುಚ್ಚುನೂರಾಗಿವೆ
ನನ್ನ ನಗ್ನ ಹೃದಯದ ಮೇಲೆ
ತಾರೆಗಳೂ ಮಿನುಗಾಡುತ್ತಿವೆ,
ನನ್ನ ನೆಟ್ಟನೋಟವನ್ನು ಹಕ್ಕಿಯೊಂದು ಬೆಚ್ಚೆಬ್ಬಿಸಿದೆ.
ಇದು, ಇದೇ ನನ್ನ ಹಾಡು:
ಈ ಘಳಿಗೆಯಲ್ಲಿ, ನಾನಿರಬೇಕೆಂದು ಅನಿಸಿದಾಗ,
ಇಲ್ಲದಂತಾಗುತ್ತೇನೆ,
ನನ್ನ ಸಮತೋಲನ ದಾರಿಹೋಕನೊಬ್ಬನ
ಅಲೆದಾಡುವ ಆಲೋಚನೆಗಳಲ್ಲಿದೆ,
ಯುವಕನೊಬ್ಬನ ಮೂಡಿನಲ್ಲಿದೆ.
ನನ್ನ ಆಸರೆ ಖಾಲಿಯಾಗಿ ಬಿದ್ದಿದೆ,
ತಾರೆಗಳ ಬಿಂಬಿಸುವ ಗ್ಲಾಸು ಅದು,
ಆದರೂ ತುಂಬಿದೆ ಅಜ್ಞಾತ ಅರ್ಥಗಳಿಂದ.
ನಾನು ಮಾತಾಡಿದಾಗ,
ವೇಗ ಮತ್ತು ದೂರ ನಗುತ್ತವೆ:
ನಾವು ಹೊಂದಿಕೊಂಡು ಹೋಗುತ್ತೇವೆ.

5
ಪ್ರತಿ ದಿನ ಕಿಟಕಿಯ ಹಿಂದೆ ಮತ್ತದೇ ಚಿತ್ರ
ಮೂಲ: Behind the window every day the same painting

ಪ್ರತಿ ದಿನ ಕಿಟಕಿಯ ಹಿಂದೆ ಮತ್ತದೇ ಚಿತ್ರ:
ಸರೋವರದ ಮಧ್ಯದಲ್ಲಿ ಹೊಂಬಣ್ಣದ ಕ್ಯಾಮಮೈಲ್ ಹೂಗಳು
ತೂಗಾಡುತ್ತಾ ಸಂಜೆಗಾಗಿ ಕಾಯುತ್ತಿವೆ.
ಆಕಾಶ ಪ್ರಕಾಶಮಾನವಾಗಿದೆ ಹಕ್ಕಿಗಳ ರೆಕ್ಕೆಗಳಿಂದ.
ಬಾನಿನಲ್ಲಿ ಒಂಟಿ ಹಾಯಿಯೊಂದು ತೇಲಿಹೋಗುತಿದೆ.
ಆಕಾಶ ಪ್ರಕಾಶಮಾನವಾಗಿದೆ ಹಕ್ಕಿಗಳ ರೆಕ್ಕೆಗಳಿಂದ
ಹಾಗೂ ಭೂಮಿಯಲ್ಲಿ ಕಿಣಿಕಿಣಿಸುವ ಕಾಂಡಗಳು ಮುರಿದಿವೆ
ಪ್ರತಿ ದಿನ ಮತ್ತದೇ ಪುನರುತ್ಥಾನಕ್ಕಾಗಿ ಕಾಯುತ್ತಿರುವಂತೆ:
ನಲವತ್ತು ವರ್ಷದ ಎಸ್ಟೋನಿಯನ್ ಭಾಷೆಯ ಶಿಕ್ಷಕನೊಬ್ಬ
ಬಸ್ಸಿನಲ್ಲಿ ಕೂತಿದ್ದಾನೆ ಕಿಟಕಿಯತ್ತ ಮುಖ ಮಾಡಿ
ಕ್ಯಾಮಮೈಲ್ ಹೂಗಳು ಸರಿದು ಹೋಗುತ್ತಿವೆ
ಒಂದು ಸಿಗರೇಟು ಹೊತ್ತಿಸಿ ಕಾಲ ಮೇಲೆ ಕಾಲು ಹಾಕಿ ಒರಗಿದ,
ಕಿಟಕಿಯಾಚೆ ಗಾಳಿ ಬೀಸುತಿದೆ.

6
ನೀನೊಂದು ಹಕ್ಕಿ, ಮಿತ್ರಾ
ಮೂಲ: You are a bird, my friend

ನೀನೊಂದು ಹಕ್ಕಿ, ಮಿತ್ರಾ,
ನಿನ್ನ ರೆಕ್ಕೆಗಳ ಸಂಯುಕ್ತ ಬಲದಿಂದ
ನಾನು ಬಿದ್ದು
ಚೂರು ಚೂರಾಗದಂತೆ
ನೀ ನನ್ನ ತಡೆಯುವೆ.
(ನಾನು ಚಿಪ್ಪನ್ನು ಒಡೆಯದಂತೆ ತಡೆಯುವೆ,
ಏಕೆಂದರೆ ಮೊಟ್ಟೆ ಇಟ್ಟಾಗಿದೆ,
ಅದರೊಳಗಿದೆ ನಿನ್ನ ಹಕ್ಕಿ-ಹೃದಯ,
ಅದರೊಳಗಿವೆ ನಿನ್ನ ನೆರಳು, ನಿನ್ನ ರೂಪ,
ಅದರೊಳಗಿವೆ ನಿನ್ನ ತಿರುಳು, ನಿನ್ನ ಮೃತ್ಯು.
ಅದರೊಳಗಿದೆ ನಿನ್ನ ಜೀವದ ಗ್ರಂಥಿ.
ಆ ಮೊಟ್ಟೆಯೆ ಈ ಲೋಕದ ಕಣ್ಣು.)

7
ನನ್ನ ಹೃದಯವ ಕೊಡಬಯಸುವೆ ನಿನಗೆ
ಮೂಲ: I would give you my heart

ನನ್ನ ಹೃದಯವ ಕೊಡಬಯಸುವೆ ನಿನಗೆ,
ಆದರೆ ಎಲ್ಲಿಯೂ ನನಗದು ಸಿಗುತ್ತಿಲ್ಲ
ಅದರ ಹೂಗಳ ಪರಿಮಳದ ಸುಳಿವೂ ಸಹ,
ಎಲ್ಲೋ ಕಳೆದಿರುವೆ ಅದನ್ನು, ಇರುಳ ಮಳೆಯಲ್ಲಿ
ಕಣ್‌ರೆಪ್ಪೆಗಳ ತೊಯ್ಸಿಕೊಂಡು ಹೊನ್ನಮರಗಳಡಿಯಲ್ಲಿ
ಅಲೆದಾಡುತ್ತಿರಬೇಕಾದರೆ ಅಲ್ಲೆಲ್ಲೋ.

ಒಂದು ರಾತ್ರಿಯ ಕೊಡಬಯಸುವೆ ನಿನಗೆ,
ಆದರೆ ಎಲ್ಲಿಯೂ ನನಗೆ ಕಾಣುತ್ತಿಲ್ಲ
ದಿನಾಂತ್ಯ ಘೋಷಿಸುವ ಆ ಉದಯಿಸುವ ತಾರೆ,
ಬೆಳಗಾದ ಮೇಲೆ ನಿನ್ನ ತುಟಿಗಳನ್ನ
ನನ್ನ ತುಟಿಗಳ ಮೇಲೆ ಇಡಬೇಕು ನೀನು,
ಬಿಸಿಲು ದಿನದ ಮಧ್ಯಾಹ್ನದಲ್ಲಿ ನನ್ನೊಂದಿಗೆ
ಕೂಡಬೇಕು ನೀನು.

ನನ್ನನ್ನು ನಾನು ಕೊಡಬಯಸುವೆ ನಿನಗೆ,
ಆದರೆ ಎಲ್ಲಿಯೂ ನನಗೆ ಕಾಣುತ್ತಿಲ್ಲ
ಮರಳಿನಲ್ಲಿ ಅಚ್ಚಾದ ಹೆಜ್ಜೆಯ ಗುರುತು ಸಹ,
ನೀನು ಗಾಳಿಗಳ ಹತ್ತಬೇಕು,
ನೆರಳುಗಳ ಹಿಂಬಾಲಿಸಬೇಕು
ಸದ್ದಿಲ್ಲದೆ – ಹಗುರವಾಗಿ.

8
ನಿನ್ನ ಮೈಯೊಂದಿಗೆ ಆಟವಾಡಿದೆ ನಾನು
ಮೂಲ: I played with your body

ನಿನ್ನ ಮೈಯೊಂದಿಗೆ ಆಟವಾಡಿದೆ ನಾನು
ಬೇರೆ ಪಥಗಳೆಲ್ಲವೂ ಸ್ವರ್ಗದೆಡೆಗೆ ಏರಿಹೋದಾಗ
ಉಳಿದ ನೆರಳುಗಳೆಲ್ಲವೂ ಬತ್ತಲಾದಾಗ
ನಾನು ಬಟ್ಟೆ ತೊಟ್ಟು ಸಿಂಗರಿಸಿಕೊಂಡೆ
—– —– —–
ಗಾಳಿಗಳು ಬೀಸಿದವು
ಕಹಳೆಗಳು ಮೊಳಗಿದವು
ಸಂಗೀತಗಾರನೊಬ್ಬ ದೊಡ್ಡ ಮನೆಯೊಂದರ
ಮೂಲೆಯಲ್ಲಿ ಕೂತು ಕುಡಿಯುತ್ತಿದ್ದ, ನಿಜ:
ಪುರುಷನ ಲಕ್ಷಣರೂಪದಂತೆ
ಆ ಆಟ ಒಂದು ಪ್ರತಿರೂಪದಂತೆ

ಬಾ ನನ್ನ ಜತೆ ಟೊಲೇಡೊ-ಗೆ.