ವಾಲ್ಕಾಟ್‌ ಅವರ ಕವಿತೆಗಳನ್ನು ವಿಮರ್ಶಿಸುತ್ತಾ, ಕವಿ ಗ್ಲಿನ್ ಮ್ಯಾಕ್ಸ್‌ವೆಲ್‌ರು ಹೀಗೆ ಹೇಳುತ್ತಾರೆ; “ಕವಿಯಾಗಿ ವಾಲ್ಕಾಟ್‌ರ ಸಾಮರ್ಥ್ಯ ವಿಷಯವಸ್ತುಗಳ ಆಯ್ಕೆಯಲ್ಲಿ ಮತ್ತು ನಿರೂಪಣೆಯಲ್ಲಿ ಮಾತ್ರ ಅಡಗಿಲ್ಲ; ಅವರ ‘ಕಿವಿ’ ಅಥವಾ ‘ಶ್ರವಣ’ ಕೂಡ ದೊಡ್ಡ ಪಾತ್ರ ವಹಿಸಿದೆ.” “ಅವರ ಕಾವ್ಯದ ಸಾಲುಗಳು ಕಾಲದಲ್ಲಿ ಚಲಿಸುತ್ತಿರುವ ದೇಹದ ಅರಿವಿನ ಭಾವನೆಯಿಂದ ನಿರಂತರ ಕಂಪನದಲ್ಲಿರುತ್ತವೆ, ಇಲ್ಲಿ ಆತ್ಮವು ಛಂದಸ್ಸಿನ ಮೇಲೆ ಒಗೆದಂತಿರುತ್ತದೆ”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ವೆಸ್ಟ್ ಇಂಡೀಸ್-ನ ಸೇಂಟ್ ಲೂಸಿಯಾ ದೇಶದ ಕವಿ ಡೆರಿಕ್ ವಾಲ್ಕಾಟ್-ರ (DEREK WALCOTT) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ವೆಸ್ಟ್ ಇಂಡೀಸ್‌-ನ ಮಾಜಿ ಬ್ರಿಟಿಷ್ ವಸಾಹತು ಸೇಂಟ್ ಲೂಸಿಯಾ (St Lucia) ದ್ವೀಪರಾಷ್ಟ್ರದಲ್ಲಿ ಜನಿಸಿದ ನೊಬೆಲ್ ಪ್ರಶಸ್ತಿ ವಿಜೇತ ಕವಿ ಮತ್ತು ನಾಟಕಕಾರ ಡೆರಿಕ್ ವಾಲ್ಕಾಟ್ ಅವರು ವರ್ಣಚಿತ್ರಕಾರರಾಗಿ ತರಬೇತಿ ಪಡೆದರು. ತಮ್ಮ ಯುವಾವಸ್ಥೆಯಲ್ಲಿ ಸಾಹಿತ್ಯದತ್ತ ವಾಲಿದ ವಾಲ್ಕಾಟ್‌ರ ಮೊದಲ ಕವನವನ್ನು ಸ್ಥಳೀಯ ಪತ್ರಿಕೆಯೊಂದು ಪ್ರಕಟಿಸಿತು. ಅವರಿಗಾಗ 14 ವಯಸ್ಸು. ಐದು ವರ್ಷಗಳ ನಂತರ, 200 ಡಾಲರ್‌ಗಳ ಮೊತ್ತವನ್ನು ಎರವಲು ಪಡೆದು, “25 ಪೊಯೆಮ್ಸ್” (25 Poems) ಎಂಬ ಹೆಸರಿನ ತಮ್ಮ ಮೊದಲ ಕವನ ಸಂಕಲನವನ್ನು ಅವರೇ ಪ್ರಕಟಿಸಿ, ಬೀದಿ ಮೂಲೆಗಳಲ್ಲಿ ವಿತರಿಸಿದರು.

1962-ರಲ್ಲಿ ಪ್ರಕಟವಾದ “ಇನ್ ಎ ಗ್ರೀನ್ ನೈಟ್: ಪೊಯಮ್ಸ್ 1948-1960” (In a Green Night: Poems 1948-1960) ಸಂಕಲನದಿಂದ ವಾಲ್ಕಾಟ್ ಒಬ್ಬ ಪ್ರಮುಖ ಕವಿಯಾಗಿ ಹೆಸರುಗಳಿಸತೊಡಗಿದರು. ಈ ಸಂಕಲನದಲ್ಲಿ ಕಂಡುಬರುವ ಕವನಗಳು ಕರಿಬಿಯನ್ ಎಂಬ ಪ್ರದೇಶ, ಅದರ ಸಂಸ್ಕೃತಿ ಮತ್ತು ಅದರ ಇತಿಹಾಸವನ್ನು ಕೊಂಡಾಡುತ್ತವೆ ಹಾಗೂ ವಸಾಹತುಶಾಹಿಯ ಗಾಯಗಳನ್ನು ಪ್ರಶ್ನಿಸುತ್ತವೆ. ವಾಲ್ಕಾಟ್ ಅವರು ತಮ್ಮ ಸುದೀರ್ಘವಾದ ಮತ್ತು ವಿಶಿಷ್ಟವಾದ ಸಾಹಿತ್ಯ ಜೀವನದ ಉದ್ದಕ್ಕೂ, ಭಾಷೆ, ಅಧಿಕಾರ ಮತ್ತು ಸ್ಥಳದ ಬಗ್ಗೆಗಿನ ವಿಷಯಗಳಿಗೆ ಮತ್ತೆ ಮತ್ತೆ ಮರಳಿದರು.

1950-ರ ದಶಕದಿಂದ ವಾಲ್ಕಾಟ್‌ರು ಬೋಸ್ಟನ್, ನ್ಯೂಯಾರ್ಕ್ ಮತ್ತು ಸೇಂಟ್ ಲೂಸಿಯಾಗಳ ಮಧ್ಯೆ ತಮ್ಮ ಬದುಕನ್ನು ಕಳೆದರು. ಪಾಶ್ಚಾತ್ಯ ಸ್ವೀಕೃತ-ಮೂಲಕೃತಿಗಳು ಮತ್ತು ತಮ್ಮ ದ್ವೀಪರಾಷ್ಟ್ರದ ಪ್ರಭಾವಗಳೊಂದಿಗೆ ಅವರ ಕಾವ್ಯವು ಪ್ರತಿಧ್ವನಿಸುತ್ತದೆ ಹಾಗೂ ಕರಿಬಿಯನ್‌ನ ಪ್ರಾಂತೀಯ ಜನಭಾಷೆ ಮತ್ತು ಇಂಗ್ಲಿಷ್ ಭಾಷೆಗಳ ನಡುವೆ ಪಲ್ಲಟಗೊಳ್ಳುತ್ತಾ, ಆಗಾಗ್ಗೆ ಅವರು ತಮ್ಮ ಇಂಗ್ಲಿಷ್ ಹಾಗೂ ವೆಸ್ಟ್ ಇಂಡಿಯನ್ ಮಿಶ್ರಿತ ಸಂತತಿಯ ಬಗ್ಗೆಯೂ ಮಾತಾಡುತ್ತಾರೆ.

ತಾಂತ್ರಿಕ ನಿಯಂತ್ರಣ, ಪಾಂಡಿತ್ಯ ಮತ್ತು ದೊಡ್ಡ ಕ್ಯಾನ್ವಾಸ್‌ಗಳಿಗೆ ಹೆಸರುವಾಸಿಯಾದ ವಾಲ್‌ಕಾಟ್‌ರ ಬಗ್ಗೆ, ಕವಿ ಮತ್ತು ವಿಮರ್ಶಕ ಶಾನ್ ಒ’ಬ್ರಯನ್ ಹೀಗೆ ಹೇಳಿದ್ದರು, “ಪ್ರಸ್ತುತ ಇಂಗ್ಲಿಷ್‌ನಲ್ಲಿ ಕಾವ್ಯ ಬರೆಯುತ್ತಿರುವ ಬೆರಳೆಣಿಕೆಯಷ್ಟು ಕವಿಗಳಲ್ಲಿ ಮಹಾಕಾವ್ಯ ಬರೆಯಲು ಸಾಮರ್ಥ್ಯ ಹೊಂದಿರುವವರಲ್ಲಿ ಇವರು ಒಬ್ಬರು… ಅವರ ಕಾವ್ಯಕಾರ್ಯವು ಸಾಗರದ ಪ್ರಮಾಣದಲ್ಲಿ ಕಲ್ಪಿಸಿಕೊಳ್ಳಲಾಗುತ್ತೆ ಮತ್ತು ಅದರ ಒಂದು ಮೂಲಭೂತ ಕಾಳಜಿಯು ಸಾಗರ ಮತ್ತು ಅದರೊಂದಿಗೆ ಮಾನವ ವ್ಯವಹಾರಗಳಿಂದ ರಚಿಸಲ್ಪಟ್ಟ ಏಕಕಾಲಿಕ ಏಕತೆ ಮತ್ತು ವಿಭಜನೆಯ ಕಾರಣಗಳನ್ನು ನೀಡುವುದಾಗಿದೆ.”

ಅನೇಕ ಓದುಗರು ಮತ್ತು ವಿಮರ್ಶಕರು ವಾಲ್ಕಾಟ್ ಬರೆದ ಮಹಾಕಾವ್ಯ ‘ಒಮೆರೋಸ್’-ನ್ನು (Omeros 1990) ಅವರ ಕಾವ್ಯಜೀವನದ ಪ್ರಮುಖ ಸಾಧನೆಯೆಂದು ಕಂಡಿದ್ದಾರೆ. ‘ಒಮೆರೋಸ್’-ನಲ್ಲಿ ವಾಲ್ಕಾಟ್-ರು ಟ್ರೋಜನ್ ಯುದ್ಧವನ್ನು ಕೆರಿಬಿಯನ್ ಮೀನುಗಾರರ ಹೋರಾಟವಾಗಿ ಮರುರೂಪಿಸಿದ್ದಾರೆ. ಒ’ಬ್ರಯನ್-ರ ಪ್ರಕಾರ ಈ ಕಾವ್ಯವು, “ಕರಿಬಿಯನ್ ಅನುಭವದ ಪ್ರತಿಯೊಂದು ಅಂಶವನ್ನು ಸ್ಪರ್ಶಿಸುವ ಪ್ರಯತ್ನವಾಗಿದೆ.” ಇದನ್ನು ಒಂದು ‘ಆರ್ಸ್ ಪೊಯೆಟಿಕಾ’ (Ars poetica) ಎಂದು ವಿವರಿಸುತ್ತಾ, “ಕಲೆಗೆ ಸಂಬಂಧಿಸಿದ ಕೃತಿಯಿದು – ಕಲೆಯ ಅರ್ಥ ಮತ್ತು ಪ್ರಾಮುಖ್ಯತೆ ಮತ್ತು ಕಲಾತ್ಮಕ ವೃತ್ತಿಯ ಸ್ವರೂಪದ ಬಗ್ಗೆ ಮಾತನಾಡುತ್ತೆ.”

ಕನ್ನಡದ ಪ್ರಮುಖ ಕವಿಗಳು, ಅನುವಾದಕರಾದ ಕಮಲಾಕರ ಕಡವೆಯವರು ತಮ್ಮ ಲೇಖನದಲ್ಲಿ (‘ದ್ವೀಪಗಳ ಮಹಾಕವಿ ಡೆರಿಕ್ ವಾಲ್ಕಾಟ್,’ “ಆಂದೋಲನ,” ಸೆಪ್ಟೆಂಬರ 12, 2021) ವಾಲ್ಕಾಟ್‌ರ ಮಹಾಕಾವ್ಯದ ಬಗ್ಗೆ ಮಾತನಾಡುತ್ತಾ ಹೀಗೆನ್ನುತ್ತಾರೆ: “ವಾಲ್ಕಾಟ್ ಅವರ ಕಾವ್ಯ ವಸಾಹತುಶಾಹಿಯ ಸಂತ್ರಸ್ತರಾದ ಮೂಲನಿವಾಸಿ ಕ್ಯಾರಿಬ್ ಜನರ, ಆಫ್ರಿಕಾದಿಂದ ಕರೆತಂದ ಜೀತಗಾರರ, ಏಷಿಯಾದಿಂದ ಬಂದ ಕೂಲಿ ಸಮುದಾಯಗಳ ಇತಿಹಾಸ ಮತ್ತು ವರ್ತಮಾನಗಳ ಅನ್ವೇಷಣೆ ಮತ್ತು ನಿರೂಪಣೆಯನ್ನು ತುಂಬ ಸೂಕ್ಷ್ಮವಾಗಿಯೂ, ಮನೋಜ್ಞವಾಗಿಯೂ ನಿರ್ವಹಿಸುತ್ತದೆ. ಯುರೋಪಿನ ಕಾವ್ಯಮಾದರಿಗಳನ್ನು ಬಳಸಿಕೊಂಡು (“ಒಮೆರೋಸ್”) ವಸಾಹತುವಾಸಿಗಳ ದೃಷ್ಟಿಕೋನದಿಂದ ಬರೆದು ವಾಲ್ಕಾಟ್ ಹೊಸ ಪರಂಪರೆಗೆ ನಾಂದಿಹಾಡುತ್ತಾರೆ. ಈ ಪ್ರಯೋಗದಲ್ಲಿ ಅನ್ಯೋಕ್ತಿ (allegory), ವ್ಯಂಗ್ಯ, ಅಣಕ, ಪುನರಾವರ್ತನೆಗಳೆಲ್ಲ ವಾಲ್ಕಾಟ್ ಅವರು ತಮ್ಮ ಕಾವ್ಯವಿಷಯಕ್ಕೆ ರಾಜಕೀಯ ಸ್ವರೂಪ ನೀಡುವ ರೀತಿಗಳಾಗಿ ಬರುತ್ತವೆ.”

“ಅವರ ಕಾವ್ಯಕಾರ್ಯವು ಸಾಗರದ ಪ್ರಮಾಣದಲ್ಲಿ ಕಲ್ಪಿಸಿಕೊಳ್ಳಲಾಗುತ್ತೆ ಮತ್ತು ಅದರ ಒಂದು ಮೂಲಭೂತ ಕಾಳಜಿಯು ಸಾಗರ ಮತ್ತು ಅದರೊಂದಿಗೆ ಮಾನವ ವ್ಯವಹಾರಗಳಿಂದ ರಚಿಸಲ್ಪಟ್ಟ ಏಕಕಾಲಿಕ ಏಕತೆ ಮತ್ತು ವಿಭಜನೆಯ ಕಾರಣಗಳನ್ನು ನೀಡುವುದಾಗಿದೆ.”

ವಾಲ್ಕಾಟ್‌ ಅವರ ಆಯ್ದ ಕವಿತೆಗಳನ್ನು (2007) ವಿಮರ್ಶಿಸುತ್ತಾ, ಕವಿ ಗ್ಲಿನ್ ಮ್ಯಾಕ್ಸ್‌ವೆಲ್‌ರು ಹೀಗೆ ಹೇಳುತ್ತಾರೆ; “ಕವಿಯಾಗಿ ವಾಲ್ಕಾಟ್‌ರ ಸಾಮರ್ಥ್ಯ ವಿಷಯವಸ್ತುಗಳ ಆಯ್ಕೆಯಲ್ಲಿ ಮತ್ತು ನಿರೂಪಣೆಯಲ್ಲಿ ಮಾತ್ರ ಅಡಗಿಲ್ಲ; ಅವರ ‘ಕಿವಿ’ ಅಥವಾ ‘ಶ್ರವಣ’ ಕೂಡ ದೊಡ್ಡ ಪಾತ್ರ ವಹಿಸಿದೆ.” “ಅವರ ಕಾವ್ಯದ ಸಾಲುಗಳು ಕಾಲದಲ್ಲಿ ಚಲಿಸುತ್ತಿರುವ ದೇಹದ ಅರಿವಿನ ಭಾವನೆಯಿಂದ ನಿರಂತರ ಕಂಪನದಲ್ಲಿರುತ್ತವೆ, ಇಲ್ಲಿ ಆತ್ಮವು ಛಂದಸ್ಸಿನ ಮೇಲೆ ಒಗೆದಂತಿರುತ್ತದೆ, ಛಂದಸ್ಸು ಮೆಟ್ಟಿಲುಗಳು, ರಾತ್ರಿಗಳು, ಅಥವಾ ಉಸಿರುಗಳಾಗಿರಬಹುದು; ಸಾಲುಗಳು ದಿನಗಳು, ವರ್ಷಗಳು, ಅಥವಾ ಅಲೆಗಳಾಗಿರಬಹುದು.”

ವಾಲ್ಕಾಟ್-ರು ಹೆಸರಾಂತ ನಾಟಕಕಾರರೂ ಆಗಿದ್ದು ಇಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದರು. ‘ಡ್ರೀಮ್ ಆನ್ ಮಂಕಿ ಮೌಂಟನ್’ (Dream on Monkey Mountain) ನಾಟಕಕ್ಕಾಗಿ 1971 ರಲ್ಲಿ ಅವರು ಓಬಿ ಪ್ರಶಸ್ತಿಯನ್ನು (Obie Award) ಗೆದ್ದರು. “ನಾಟಕೀಯ ರೂಪದಲ್ಲಿ ಒಂದು ಕವಿತೆ” ಎಂದು ಈ ನಾಟಕವನ್ನು ವರ್ಣಿಸಲಾಗಿದೆ. ವಾಲ್ಕಾಟ್-ರ ನಾಟಕಗಳು ಬಹುವಾಗಿ ವೆಸ್ಟ್ ಇಂಡಿಯನ್ ಅನುಭವದ ಅಂಶಗಳನ್ನು ಮುಂದಿಡುತ್ತವೆ. ಸಾಮಾನ್ಯವಾಗಿ ಅವರ ನಾಟಕಗಳಲ್ಲಿ ಕರಿಬಿಯನ್ ಜಗತ್ತಿನಲ್ಲಿ ವಸಾಹತುಶಾಹಿ ಕಾಲದ ನಂತರದ ಸಾಮಾಜಿಕ-ರಾಜಕೀಯ ಮತ್ತು ಜ್ಞಾನಶಾಸ್ತ್ರದ ಪರಿಣಾಮಗಳ ಚಿತ್ರಣಗಳಿರುತ್ತವೆ. ನೀತಿಕಥೆ, ಸಾಂಕೇತಿಕತೆ, ಜಾನಪದ ಮತ್ತು ನೈತಿಕತೆಯಂತಹ ವಿವಿಧ ಪ್ರಕಾರಗಳಿಂದ ಅವರು ನಾಟಕಗಳು ಪ್ರೇರಿತವಾಗಿವೆ.

1950-ರಲ್ಲಿ ಅವರು ತಮ್ಮ ಅವಳಿ ಸಹೋದರನ ಜತೆ ಸೇರಿ ‘ಟ್ರಿನಿಡಾಡ್ ಥಿಯೇಟರ್ ವರ್ಕ್‌ಶಾಪ್’-ನ್ನು ಸ್ಥಾಪಿಸಿದರು, ಹಾಗೆಯೇ, 1981-ರಲ್ಲಿ ಬೋಸ್ಟನ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾಗ ಬೊಸ್ಟನ್ ಪ್ಲೇರೈಟ್ಸ್ ಥಿಯೇಟರ್-ನ್ನು ಸ್ಥಾಪಿಸಿದರು. ಅಮೇರಿಕದ ಕೊಲಂಬಿಯಾ, ಯೇಲ್, ರಟ್ಗರ್ಸ್ ವಿಶ್ವವಿದ್ಯಾನಿಲಯಗಳಲ್ಲಿ ಹಾಗೂ ಇಂಗ್ಲೆಂಡಿನ ಎಸೆಕ್ಸ್ ಯೂನಿವರ್ಸಿಟಿಯಲ್ಲಿ ಸಹ ಪ್ರಾಧ್ಯಾಪಕರಾಗಿದ್ದರು.

ನೊಬೆಲ್ ಪ್ರಶಸ್ತಿಯಲ್ಲದೆ, ವಾಲ್ಕಾಟರಿಗೆ ತಮ್ಮ ಕಾವ್ಯಪಯಣದಲ್ಲಿ ಹಲವಾರು ಸಾಹಿತ್ಯ ಪ್ರಶಸ್ತಿಗಳು ಹಾಗೂ ಸನ್ಮಾನಗಳು ದೊರಕಿವೆ: ‘ಡ್ರೀಮ್ ಆನ್ ಮಂಕಿ ಮೌಂಟನ್’ ನಾಟಕಕ್ಕಾಗಿ 1971 ರಲ್ಲಿ ‘ಓಬಿ’ ಪ್ರಶಸ್ತಿ, ‘ಮೆಕ್‌ಅರ್ಥರ್ ಫೌಂಡೇಷನ್‌’-ನ ‘ಜೀನಿಯಸ್’ ಪ್ರಸಸ್ತಿ, ‘ರಾಯಲ್ ಸೊಸೈಟಿ ಆಫ಼್ ಲಿಟರೇಚರ್’ ಪ್ರಶಸ್ತಿ, ಕಾವ್ಯಕ್ಕಾಗಿ ‘ದಿ ಕ್ವೀನ್ಸ್ ಮೆಡಲ್,’ 2010-ರಲ್ಲಿ ‘ವೈಟ್ ಇಗ್ರೆಟ್ಸ್’ ಕವನ ಸಂಕಲನಕ್ಕಾಗಿ ‘ಟಿ.ಎಸ್. ಎಲಿಯಟ್’ ಪ್ರಶಸ್ತಿ, 2015-ರಲ್ಲಿ ‘ಗ್ರಿಫಿನ್ ಟ್ರಸ್ಟ್ ಫ಼ರ್ ಎಕ್ಸಲೆನ್ಸ್ ಇನ್ ಪೊಯೆಟ್ರಿ’-ಯ ಜೀವಮಾನ ಪ್ರಶಸ್ತಿ, ಇತ್ಯಾದಿ.

ಕಮಲಾಕರ ಕಡವೆಯವರ ಪ್ರಕಾರ, “ವಾಲ್ಕಾಟ್ ಅವರ ಕಾವ್ಯಕ್ಕೆ ಬಹುಮುಖೀ ಆಯಾಮವಿದೆ. ತಮ್ಮ ತಾಯ್ನಾಡು ಸೇಂಟ್ ಲೂಸಿಯಾದ ಕಡಲತಡಿಯನ್ನು ಸತತ ತೋಯುವ ಅಲೆಗಳಂತ ಲಯಬದ್ಧತೆ, ದ್ವೀಪದೊಳನಾಡಿನ ಗುಡ್ಡಗಳ ಹಸಿರಿನಂತ ಸಾಂದ್ರ ರೂಪಕತೆ, ನೀರಸ ವಾಸ್ತವಗಳನ್ನು ಸ್ವಾರಸ್ಯದ ಬಣ್ಣದಲ್ಲಿ ಅದ್ದಿ ಚಿತ್ರಿಸುವ ಮಾಂತ್ರಿಕತೆ ವಾಲ್ಕಾಟ್ ಕಾವ್ಯಶೈಲಿ. ಕ್ಯಾರಿಬಿಯನ್ ಇತಿಹಾಸವನ್ನು ಹಾಸಿಹೊದ್ದಿರುವ ಅವರ ಬರಹಗಳಲ್ಲಿ ವಸಾಹತು ಹಿನ್ನೆಲೆಯ ಪಳೆಯುಳಿಕೆಗಳ ಶೋಧವೂ ಜಾರಿಯಲ್ಲಿರುತ್ತದೆ. ಸೇಂಟ್ ಲೂಸಿಯಾ, ಬೋಸ್ಟನ್ ಮತ್ತು ತ್ರಿನಿದಾದಗಳ ನಡುವೆ ಜೀವನ ಸಾಗಿಸುತ್ತಿದ್ದ ವಾಲ್ಕಾಟ್ ಸಮ್ಮಿಶ್ರ ಸಂಸ್ಕೃತಿಯ ಬದುಕಿನ ಸಂಕೀರ್ಣತೆಗಳನ್ನು ಮತ್ತೆ ಮತ್ತೆ ಪರೀಕ್ಷಿಸುವ ಕೃತಿಗಳನ್ನು ರಚಿಸಿದ್ದಾರೆ. ಅವರ ಕಾವ್ಯ ಕ್ಯಾರಿಬಿಯನ್ ಸಮಾಜದಲ್ಲಿ ಕಂಡುಬರುವ ಆಫ್ರಿಕಾ, ಏಶಿಯಾ ಮತ್ತು ಯುರೋಪಿನ ಸಂಸ್ಕೃತಿಗಳ ತರಹೇವಾರಿ ಸಂಯೋಜನೆಗಳನ್ನು ಚಿತ್ರಿಸುತ್ತದೆ. ನೋಬಲ್ ಪ್ರಶಸ್ತಿಯ ಸಮೀತಿ ಸೂಚಿಸಿರುವಂತೆ, ಅವರದ್ದು “ಐತಿಹಾಸಿಕ ಪ್ರಜ್ಞೆ, ಬಹುತ್ವಕ್ಕೆ ಬದ್ಧತೆ, ವಾಸ್ತವದ ತೀವ್ರ ಅರಿವುಗಳುಳ್ಳ ತೇಜಸ್ವೀ ಕಾವ್ಯ.”

*****

1
ಕಡಲ್‌ದ್ರಾಕ್ಷಿಗಳು
ಇಂಗ್ಲಿಷ್ ಮೂಲ: SEA GRAPES

ಬೆಳಕಿಗೆ ಒರಗಿರುವ ಹಾಯಿಪಟವೊಂದು
ದಣಿದಿದೆ ದ್ವೀಪಗಳ ಸುತ್ತಿ ಸುತ್ತಿ,
ಹಡಗೊಂದು ಧಾವಿಸುತ್ತಿದೆ ಕರಿಬಿಯನ್ ಕಡಲಿನಲ್ಲಿ

ಮನೆಯತ್ತ, ಒಡಿಸಿಯಸ್ ಇರಬಹುದೇನೋ,
ಮನೆಯಕಡೆ ಹೊರಟಿರುವನು ಏಜಿಯನ್ ಕಡಲ ದಾರಿಯಲ್ಲಿ,
ಅಪ್ಪನಿಗಾಗಿ, ಗಂಡನಿಗಾಗಿ ಕಾಯುತ್ತಿರುವ ಮನೆ,

ಒಣಗಿ ಸುಕ್ಕು ಸುಕ್ಕಾದ ಹುಳಿ ದ್ರಾಕ್ಷಿಗಳ ಅಡಿಯಲ್ಲಿ,
ಪ್ರತಿಯೊಂದು ಕಡಲ್‌ಕಾಗೆಯ ಕೀರಲಿನಲ್ಲೂ ನಾವ್ಸಿಕಾಳ
ಹೆಸರು ಕೇಳಿಸಿಕೊಳ್ಳುವ ಆ ವ್ಯಭಿಚಾರಿಯ ಹಾಗೆ;

ಇದು ಯಾರಿಗೂ ನೆಮ್ಮದಿ ತರುವುದಿಲ್ಲ. ಭ್ರಾಂತಿ ಮತ್ತು
ಕರ್ತವ್ಯದ ನಡುವಣ ಈ ಪ್ರಾಕ್ತನ ಯುದ್ಧ ಎಂದೂ
ಮುಗಿಯುವುದಿಲ್ಲ, ಸಮುದ್ರಗಳ ಸುತ್ತುವವನಿಗೂ,

ದಡದಲ್ಲಿ ಮೆಟ್ಟಿಗೆ ಕಾಲು ತೂರಿಸಿ ಮನೆಯತ್ತ ನಡೆಯುವವನಿಗೂ,
ಅದೇ ಯುದ್ಧವಿದು ಇಬ್ಬರಿಗೂ ಅಂದಿನಿಂದಲೂ, ಯಾವಾಗ ಟ್ರಾಯ್
ತನ್ನ ಹಳೆಯ ಕಾಂತಿಯನ್ನು ನಿಟ್ಟುಸಿರಿತೋ ಅಂದಿನಿಂದ,

ಯಾವಾಗ ಆ ಅಂಧ ಬಾಹುಬಲಿ ಎಸೆದ ಬಂಡೆಗಲ್ಲು
ನೆಲದ ಉಬ್ಬನ್ನು ಬಗೆದಾಗ ಉದ್ಭವಿಸಿದ ಮಹಾ ಷಟ್‌ಪಾದಿಗಳು
ಸುಸ್ತಾದ ಅಲೆನೊರೆಗಳ ಕೊನೆಗಂಡವೋ ಅಂದಿನಿಂದ.

ಗ್ರೀಕ್ ಚಿರಕೃತಿಗಳು ಸಾಂತ್ವನ ನೀಡುತ್ತವೆ, ಆದರೆ ಸಾಕಾಗಲ್ಲ.

***

2
ಅಂತಗಳು
ಇಂಗ್ಲಿಷ್ ಮೂಲ: ENDINGS

ವಸ್ತುಗಳು ಸ್ಫೊಟಿಸುವುದಿಲ್ಲ
ಅವು ಅಳಿಯುತ್ತವೆ, ಅಳಿಸಿಹೋಗುತ್ತವೆ,

ದೇಹದಿಂದ ಬೆಳಕು ಕುಂದಿಹೋದ ಹಾಗೆ
ಹೊಯ್ಗೆಯಲ್ಲಿ ನೊರೆ ತಟ್ಟನೆ ಸೋರಿಹೋದ ಹಾಗೆ,

ಪ್ರೇಮದ ಮಿಂಚಿನ ಹೊಳಪು ಕೂಡ
ಗುಡುಗುಡುಗುತ್ತ ಮಡಿಯುವುದಿಲ್ಲ,

ಅದು ಸಾಯುತ್ತೆ ಹೂವುಗಳ
ಬಾಡುವ ದನಿಯ ಜತೆ

ಬೆವರುವ ನೊರೆಗಲ್ಲಿನಿಂದ ಚರ್ಮ ಒರೆಸಿಹೋದ ಹಾಗೆ,
ಎಲ್ಲವೂ ಇದನ್ನು ರೂಪಿಸುತ್ತದೆ

ಕೊನೇಗೆ ನಮ್ಮಲ್ಲಿ ಉಳಿಯುವುದು
ಬೆಯ್ಠೋವನ್-ನ ತಲೆಯ ಸುತ್ತ ಆವರಿಸಿದ ಮೌನ.

***

3
ಬಲ
ಇಂಗ್ಲಿಷ್ ಮೂಲ: FORCE

ಬದುಕು ಹುಲ್ಲಿನ ಗರಿಗಳನ್ನು ನೆಲದೊಳಕ್ಕೆ ಬಡಿಯುತ್ತಲೇ ಇರುತ್ತೆ.
ಈ ಬಡಿತ ನಾ ಮೆಚ್ಚುತ್ತೇನೆ;
ಪ್ರೇಮ ಕಠಿಣ. ನಾ ಮೆಚ್ಚುತ್ತೇನೆ
ಹೆದ್ದೆರೆ ಮತ್ತು ಬಂಡೆಯ ನಡುವಣ ಭೀಕರ ಅಲಾಬಲಿ.
ಅವರೊಳಗೆ ಒಂದೊಪ್ಪಂದವಿದೆ.
ನಾಗಾಲೋಟದಲ್ಲಿರುವ ಸಿಂಹ ಮತ್ತು ಬೆದರಿ ನಿಂತ ಹರಿಣಿಯ
ನಡುವಣ ಕರಾರನ್ನೂ ಗ್ರಹಿಸಿಕೊಳ್ಳಬಲ್ಲೆ,
ಅವಳ ಕಣ್ಗಳ ಭೀತಿಯಲ್ಲೆಲ್ಲೋ ಸಮ್ಮತವಿದೆ.
ಯಾವುದು ನನಗೆ ಎಂದೂ ಅರ್ಥವಾಗದೆಂದರೆ
ಇದನ್ನು ಬರೆಯುತ್ತಿರುವ ಈ ಪ್ರಾಣಿ
ತಾನೆ ಬದುಕಿನ ಕೇಂದ್ರವೆಂದು ಸಾಧಿಸುವುದು.

***

4
ಕಡಲ ಜಲ್ಲೆಗಳು
ಇಂಗ್ಲಿಷ್ ಮೂಲ: SEA CANES

ನನ್ನ ಗೆಳೆಯರಲ್ಲಿ ಅರ್ಧದಷ್ಟು ಜನ ತೀರಿಹೋಗಿದ್ದಾರೆ.
ಭೂಮಿ ಹೇಳಿತು, ನಾನು ನಿನಗೆ
ಹೊಸ ಗೆಳೆಯರನ್ನು ಮಾಡಿಕೊಡುವೆ.
ಬೇಡ, ಬದಲಾಗಿ, ತಿರುಗಿ ಕೊಡು ಅವರನ್ನು,
ಹೇಗಿದ್ದರೋ ಹಾಗೇ, ಎಲ್ಲಾ ಲೋಪಗಳೊಂದಿಗೆ,
ನಾನು ಅಂಗಲಾಚಿದೆ.

ಜಲ್ಲೆಗಳ ಮಧ್ಯೆ ನುಸುಳಿ ಬರುವ ಅಲೆನೊರೆಗಳ
ಮಂದ ಮರ್ಮರದಲ್ಲಿ ಅವರ ಮಾತಿನ ತುಣುಕುಗಳ
ಹಿಡಿಯಬಲ್ಲೆ ನಾನು ಈ ರಾತ್ರಿ,
ಆದರೆ ಒಬ್ಬನೆ ನಡೆಯಲಾರೆ ನಾನು
ಈ ಬೆಳದಿಂಗಳು ಬಿಂಬಿಸುವ ಕಡಲ ತೆರೆಗಳ
ಮೇಲೆ ಆ ಬಿಳಿಯ ರಸ್ತೆಯುದ್ದಕ್ಕೂ,
ತೇಲಾಡಲಾರೆ ನಾನು ಭೂಮಿಯ ಭಾರವ
ತೊರೆದ ಗೂಬೆಗಳ ಸ್ವಪ್ನಭಾವದಲ್ಲಿ.

ಓ ಭೂಮಿಯೇ, ನಿನ್ನ ಜತೆಗಿರುವ ನನ್ನ ಗೆಳೆಯರ ಸಂಖ್ಯೆ
ಪ್ರೀತಿಸಲು ಉಳಿದವರ ಸಂಖ್ಯೆಗಿಂತ ಹೆಚ್ಚು.

ಗಡಿಕಲ್ಲಿನ ಬಳಿಯಲ್ಲಿರುವ ಕಡಲಜಲ್ಲೆಗಳು
ಹಸಿರು ಬೆಳ್ಳಿ ಬಣ್ಣಗಳ ಹೊಳಪಿಸುತ್ತವೆ;
ನನ್ನ ಆಸ್ಥೆಯ ದೇವಶೂಲಗಳಾಗಿದ್ದವು ಅವು,

ಆದರೆ ಏನು ಅಳಿದವೊ ಅದರಿಂದ ಮತ್ತೂ ದೃಢವಾದದ್ದು ಹುಟ್ಟುತ್ತೆ
ಅದಕ್ಕೆ ಕಲ್ಲಿನ ಯುಕ್ತ ಕಾಂತಿಯಿರುತ್ತೆ,
ಚಂದ್ರಕಾಂತಿಯನ್ನು ಸಹಿಸುತ್ತೆ,
ಹತಾಶೆಯಿಂದ ಬಲುದೂರವಿರುತ್ತೆ,
ಗಾಳಿಯಂತೆ ಪ್ರಬಲವಾಗಿ,
ಜಲ್ಲೆಗಳನ್ನು ಇಬ್ಭಾಗಿಸುತ್ತ ನಾವು ಪ್ರೀತಿಸುವವರನ್ನು
ನಮ್ಮ ಮುಂದೆ ತಂದು ನಿಲ್ಲಿಸುತ್ತದೆ,
ಹೇಗಿದ್ದರೋ ಹಾಗೇ, ಎಲ್ಲಾ ಲೋಪಗಳೊಂದಿಗೆ,
ಹೆಚ್ಚು ಉದಾತ್ತವಾಗೇನಲ್ಲ, ಇರುವಂತೆ ಅಷ್ಟೇ.

***

5
ಮತ್ತೂ, ಮತ್ತೂ ಪ್ರೀತಿ
ಇಂಗ್ಲಿಷ್ ಮೂಲ: LOVE AFTER LOVE

ಮುಂದೊಂದು ದಿನ ಬರುತ್ತೆ
ಅಂದು, ಉಲ್ಲಾಸದಿಂದ,
ನಿನ್ನನ್ನೇ ನೀನು ಸ್ವಾಗತಿಸುವೆ
ನಿನ್ನದೇ ಬಾಗಿಲಿಗೆ ನೀನು ಬಂದಾಗ,
ನಿನ್ನದೇ ಕನ್ನಡಿಯಲ್ಲಿ ನಿನ್ನನ್ನು ನೀ ಕಂಡಾಗ,

ನಗುವರು ಈರ್ವರೂ
ಒಬ್ಬರನ್ನೊಬ್ಬರು ಸ್ವಾಗತಿಸುವಾಗ,
ಹೇಳುವರು, ಬಾ ಕೂರು. ಊಟ ಮಾಡು.
ನೀನು ಮತ್ತೆ ಪ್ರೀತಿಸಲು
ತೊಡಗುವೆ ಆ ಅಪರಿಚಿತನನ್ನು
ನಿನ್ನದೇ ತಾನಾಗಿದ್ದವನನ್ನು.

ಕುಡಿಯಲು ಕೊಡು. ಉಣ್ಣಲು ಕೊಡು. ತಿರುಗಿ ಕೊಡು
ನಿನ್ನ ಹೃದಯವನ್ನು ತನಗೇ, ಆ ಅಪರಿಚಿತನಿಗೆ
ನಿನ್ನನ್ನು ನಿನ್ನ ಜೀವಮಾನವೆಲ್ಲಾ ಪ್ರೀತಿಸಿದವನಿಗೆ,
ನೀನು ಬೇರೊಬ್ಬರಿಗಾಗಿ ನಿರ್ಲಕ್ಷಿಸಿದವನಿಗೆ,
ಹೃದಯಾಂತರಾಳದಿಂದ ನಿನ್ನನ್ನು ಅರಿತವನಿಗೆ.

ತೆಗಿ ಹೊರಗೆ ಆ ಪುಸ್ತಕದ ಕಪಾಟಿನಿಂದ
ಪ್ರೇಮಪತ್ರಗಳನ್ನು, ಛಾಯಾಚಿತ್ರಗಳನ್ನು,
ಆ ಹತಾಶೆಭರಿತ ಚೀಟಿಗಳನ್ನು,

ಸುಲಿದುಹಾಕು ನಿನ್ನದೇ ಪ್ರತಿಬಿಂಬವನ್ನು ಕನ್ನಡಿಯಿಂದ.
ಕೂತುಕೊ. ನಿನ್ನ ಜೀವನದ ಸವಿಯುಣ್ಣು.

***

6
ನಡುಬೇಸಗೆ, ಟೊಬ್ಯಾಗೊ*
ಮೂಲ ಇಂಗ್ಲಿಷ್ ಕವನ: MIDSUMMER, TOBAGO

ಅಗಲವಾದ ಬಿಸಿಲುಬಡಿದ ಕಡಲಕರೆಗಳು.

ಬಿಳಿ ತಾಪ.
ಒಂದು ಹಸಿರು ನದಿ.

ಒಂದು ಸೇತುವೆ,
ಬೇಸಗೆಯ ನಿದ್ರೆಯಲ್ಲಿರುವ ಮನೆಯಂಗಳದಲ್ಲಿ

ಆಗಸ್ಟ್ ತಿಂಗಳೆಲ್ಲಾ ಮಂಪರಿಸುತ್ತಿರುವ
ಕಮರಿದ ಹಳದಿ ತಾಳೆಮರಗಳು.

ನಾನು ಹಿಡಿದಿಟ್ಟುಕೊಂಡಿರುವ ದಿನಗಳು,
ನಾನು ಕಳಕೊಂಡ ದಿನಗಳು,

ನನ್ನ ನೆಲೆನೀಡುವ ಕೈಗಳನ್ನ
ಮೀರಿ, ಪುತ್ರಿಯರಂತೆ, ಬೆಳೆಯುವ ದಿನಗಳು.

*ಟೊಬ್ಯಾಗೊ ಎನ್ನುವುದು ಕರಿಬಿಯನ್/ವೆಸ್ಟ್ ಇಂಡೀಸ್-ನಲ್ಲಿರುವ ‘ಟ್ರಿನಿಡ್ಯಾಡ್ ಅಂಡ್ ಟೊಬ್ಯಾಗೊ’ ಹೆಸರಿನ ದ್ವಿ-ದ್ವೀಪ ರಾಷ್ಟ್ರದ ಒಂದು ದ್ವೀಪ ಭಾಗ.