ನನ್ನಂತೆಯೇ ಮೊದಲ ಸಲ ಕೃಷಿಗೆ ಇಳಿಯುವವರು ಮೊದಮೊದಲು ತುಂಬಾ ಹಿಂಸೆ ಪಡುವುದಂತೂ ನಿಜ, ಆದರೆ ಎಷ್ಟು ದಿನ ತಾಳುತ್ತಾರೆ, ಎಷ್ಟು ಯಶಸ್ವಿಯಾಗುತ್ತಾರೆ ಎಂಬುದು ಆ ನಶೆಯ ತೀವ್ರತೆಯ ಮೇಲೆ, ಹಾಗೂ ನಮ್ಮ ಯಶಸ್ಸಿನ ಮಾನದಂಡದ ಮೇಲೆ ಅವಲಂಬಿಸಿದೆ. ನಾನು ಕೂಡ ಕೃಷಿಯಲ್ಲಿ ಇನ್ನೂ ಎಷ್ಟು ವರ್ಷಗಳು ಉತ್ಸಾಹ ತೋರುತ್ತೇನೋ, ಎಷ್ಟು ಯಶಸ್ವಿಯಾಗುತ್ತೇನೋ ಗೊತ್ತಿಲ್ಲ ಆದರೆ ನಮ್ಮ ಮುಂದಿನ ಪೀಳೀಗೆಗೆ ಒಂದು ಒಳ್ಳೆಯ ಕೃಷಿಯ ಕಥನವನ್ನು, ಅನುಭವಗಳನ್ನು, ಅಭಿರುಚಿಯನ್ನು ಕೊಡುತ್ತಿರುವೆನಲ್ಲ ಎಂಬ ಸಮಾಧಾನ ಇದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ಹಳ್ಳಿಯಿಂದ ಬಂದ ಕೂಡಲೇ ಬೆಂಗಳೂರಿನಲ್ಲಿ ಒಂದೆರಡು ದಿನಗಳ ಮಣ್ಣು ರಹಿತ ಕೃಷಿ ಕಾರ್ಯಾಗಾರದಲ್ಲಿ ತೊಡಗಿಸಿಕೊಂಡೆ. ನನ್ನ ಕಾರ್ಯಾಗಾರಗಳಲ್ಲಿ ಬರುವ ತುಂಬಾ ಜನರು ಸಾಫ್ಟ್ವೇರ್ ಉದ್ಯಮದಲ್ಲಿ ಇರುವವರೇ ಹಾಗೂ ಅಲ್ಲಿಂದ ಹೊರಗೆ ಬರಬೇಕು ಅಂತ ಬಯಸುವವರು. ಇವರ ಜೊತೆಗೆ ವಿವಿಧ ಹಿನ್ನೆಲೆಯುಳ್ಳ ಹಲವಾರು ಜನರು ಕೂಡ ನನ್ನ ಸಂಪರ್ಕಕ್ಕೆ ಬಂದಿದ್ದಾರೆ. ಅದರಲ್ಲಿ ವಿಜ್ಞಾನಿಗಳು, ವೈದ್ಯರು, NGO ದಲ್ಲಿ ಕೆಲಸ ಮಾಡುವವರು, ಪ್ರೊಫೆಸರ್ಗಳು… ಹೀಗೆ ಪಟ್ಟಿ ಇನ್ನೂ ದೊಡ್ಡದು. ನಾನು ಅವರಿಗೆ ಕೃಷಿ ಕಲಿಸುವುದರ ಜೊತೆಗೆ ಅವರಿಂದಲೂ ಎಷ್ಟೋ ಹೊಸ ವಿಷಯಗಳನ್ನು ಕಲಿಯುತ್ತೇನೆ. ಅವರ ಹಿನ್ನೆಲೆ, ಅನುಭವಗಳು ಇವೆಲ್ಲವನ್ನೂ ಅರಿಯುವುದು ನನಗೆ ಅತೀವ ಸಂತಸ ಕೊಡುವ ಸಂಗತಿ.
ನನ್ನ ಬಗ್ಗೆ, ಬೆಳೆಸಿರಿಯ ಬಗ್ಗೆ google ನಲ್ಲಿ ನೋಡಿ ತುಂಬಾ ಜನರು ಕರೆ ಮಾಡುತ್ತಾರೆ. ಬಹುತೇಕ ಗಂಭೀರವಾಗಿ ಕೃಷಿ ಮಾಡಬೇಕು ಅನ್ನುವವರು ಕೆಲವರು. ಇನ್ನೂ ಕೆಲವರು ಸುಮ್ಮನೆ ಕುತೂಹಲಕ್ಕೆ ಅಂತಲೇ ಫೋನ್ ಮಾಡಿರುತ್ತಾರೆ. ಅದರಲ್ಲಿ ಹಲವರು ನಿಮ್ಮನ್ನು ಭೇಟಿಯಾಗಬೇಕು ಅಂತ ಹೇಳುತ್ತಾರೆ. ನನ್ನನ್ನು ಭೇಟಿಯಾಗಬೇಕು ಎಂಬುದಕ್ಕಿಂತ ಇವನೇನು ಮಾಡಿರಬಹುದು ನೋಡೋಣ ಎಂಬ ಕುತೂಹಲ ಕೂಡ ಹಲವರಲ್ಲಿ ಇರುತ್ತದೆ. ಅದು ಸಹಜವೇ. ಮೊದಲೆಲ್ಲಾ ಹಾಗೆ ಭೆಟ್ಟಿ ಆಗಲು ಅವಕಾಶ ಕೊಡುತ್ತಿದ್ದೆ. ಆದರೆ ಹಾಗೆ ನನ್ನನ್ನು “ಕಾಣಲು” ಬಂದವರು ಎದ್ದು ಹೋಗುವ ಲಕ್ಷಣವನ್ನೇ ತೋರುತ್ತಿರಲಿಲ್ಲ! ಅರ್ಧ ಗಂಟೆ , ಒಂದು ಗಂಟೆ ಹೀಗೆ ತಮ್ಮ ಪ್ರಶ್ನೆಗಳ ಸುರಿಮಳೆಯನ್ನು ಸುರಿಸುತ್ತ ಕೂತುಬಿಡುತ್ತಿದ್ದರು. ಹಾಗೆ ಯಾರಿಗೂ ಕೂಡ ನಾವು ತೊಂದರೆ ಕೊಡಬಾರದು. ಬೇರೆಯವರ ಸಮಯಕ್ಕೆ ಬೆಲೆ ಕೊಡುವುದನ್ನು ಎಲ್ಲರೂ ಕಲಿಯಲೆಬೇಕು. ಇಂತಹ ಅನುಭವಗಳಾದ ಮೇಲೆ ಈ ತರಹದ ಕುತೂಹಲಿ ಕಲಿಗಳನ್ನು ಭೇಟಿಯಾಗುವುದನ್ನು ಕಡಿಮೆ ಮಾಡಿದೆ. ನಿಮಗೆ ಅಷ್ಟು ತಿಳಿಯುವ ಆಸೆಯಿದ್ದರೆ ನನ್ನ ತರಬೇತಿ ಶಿಬಿರಕ್ಕೆ ಬನ್ನಿ ಅಂತ ವಿನಯದಿಂದ ಹೇಳುವುದನ್ನು ರೂಢಿಸಿಕೊಂಡೆ. ಹಾಗಂತ ಎಲ್ಲರಿಗೂ ಹಾಗೆ ಮಾಡಲಾಗುತ್ತದೆಯೇ? ಫೋನಿನಲ್ಲಿ ಸಂಭಾಷಣೆಯ ಬಳಿಕ ಕೆಲವರನ್ನು ಭೇಟಿ ಕೂಡ ಆಗುತ್ತಿದ್ದೆ.
ಅವತ್ತು ಒಂದಿನ ಜಗದೀಶ ಅನ್ನುವವರು ಕರೆ ಮಾಡಿದ್ದರು. ನನ್ನನ್ನು ಭೇಟಿ ಮಾಡಬೇಕು ಅಂದರು. ಹಾವೇರಿಯ ಕಡೆಯವರು ಎಂತಲೂ, ಅವರ ಕೃಷಿ ಜಮೀನು ಅಲ್ಲಿಯೇ ಇದೆ ಅಂತ ಹೇಳಿದರು. ಅವರಿಗೂ ಕೃಷಿಕರಾಗಬೇಕು ಎಂಬ ಆಸೆ. ಆದರೆ corporate ಕೆಲಸದಲ್ಲಿ ಇದ್ದುದರಿಂದ ಅತ್ತ ಕಡೆಗೆ ಅಷ್ಟು ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಅದೂ ಅಲ್ಲದೆ ತಾನು ಕಲಿತಿದ್ದು ಬಾಗಲಕೋಟೆಯ ಬಸವೇಶ್ವರ Engineering college ಅಂತ ಹೇಳಿದರು. ನಾನೂ ಅಲ್ಲಿಯೇ ಇಂಜಿನಿಯರಿಂಗ್ ಮಾಡಿದ್ದೆ. ವೃತ್ತಿಯಲ್ಲಿ ಕೂಡ ಮೊದಲು software ಉದ್ಯಮದಲ್ಲಿ ಕೆಲಸ ಮಾಡಿದ್ದೆ. ಈಗ ಕೃಷಿಯ ಹಿಂದೆ ಬಿದ್ದಿದ್ದೆ. ಇಷ್ಟೊಂದು ಸಮಾನ ಅಂಶಗಳು ಇದ್ದಿದ್ದರಿಂದ, ಇಬ್ಬರಿಗೂ ಅನುಕೂಲವಾದ ಒಂದು ದಿನ ಬೆಂಗಳೂರಿನ ನನ್ನ ಬೆಳೆಸಿರಿ ಕಾರ್ಯಾಲಯದಲ್ಲಿ ಭೇಟಿಯಾಗುವ ನಿರ್ಧಾರ ಮಾಡಿದೆವು.
ಜಗದೀಶ ಹಾಗೂ ಅವರ ಇನ್ನೊಬ್ಬ ಮಿತ್ರ ಶಿವು ಅನ್ನುವವರು ಅವತ್ತು ನನ್ನನ್ನು ಭೇಟಿಯಾಗಲು ಬಂದರು. ಉಭಯಕುಶಲೋಪರಿಗಳು ಆದ ನಂತರ ತಾರಸಿಯ ಮೇಲಿದ್ದ ನನ್ನ ಮಣ್ಣು ರಹಿತ ತೋಟವನ್ನು ಅವರಿಬ್ಬರಿಗೂ ತೋರಿಸಿದೆ. ಹಾಗೆಯೇ ಮಾತಾಡುತ್ತಾ ಕೂತಾಗ ಶಿವು ಅವರು ಕೂಡ ಕೃಷಿ ಮಾಡುತ್ತಿದ್ದಾರೆ ಅಂತ ತಿಳಿಯಿತು. ನನ್ನ ಹೊಲ ಹಾವೇರಿಯ ಹತ್ತಿರವೇ ಇದ್ದಿದ್ದು ಅವರಿಗೆ ಗೊತ್ತಾಗಿ, ಅದು ಎಲ್ಲಿದೆ ಅಂತ ಕೇಳಿದರು. ದಾಸನಕೊಪ್ಪ ಅಂದೆ.
ದಾಸನಕೊಪ್ಪದಲ್ಲಿ ಎಲ್ಲಿ?
ಬೆಳ್ಳನಕೆರಿ.. ದಾಸನಕೊಪ್ಪದಿಂದ ನಾಲ್ಕು ಕಿಲೋಮೀಟರು ಒಳಗ.. ಅಂದೆ
ಗೊತ್ತೈತಿ ಬಿಡ್ರಿ ಅಂದ್ರು.. ನನ್ನ ಮುಖದ ಪ್ರಶ್ನಾರ್ಥಕ ಚಿನ್ನೆಯನ್ನು ಗಮನಿಸಿ, ನಕ್ಕರು.
ನಮ್ಮ ಹೊಲಾನು ಅಲ್ಲೇ ಐತೀರಿ ಅನ್ನಬೇಕೆ!
ಇದನ್ನು ಕೇಳಿ ನನಗೆ ಆಶ್ಚರ್ಯ ಆಯ್ತು. ಅವರೂ ಕೂಡ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಇದ್ದಾರೆ. ಹಳ್ಳಿಯಲ್ಲಿ ಹನ್ನೊಂದು ಎಕರೆ ಹೊಲ ತೆಗೆದುಕೊಂಡು ಹಲವಾರು ವರ್ಷಗಳಿಂದ ಹಂತ ಹಂತವಾಗಿ ತೋಟ ನಿರ್ಮಿಸುತ್ತಿದ್ದಾರೆ. ನನಗೆ ಅವರ ಸಾಧನೆ ಕೇಳಿ ಪರಮಾಶ್ಚರ್ಯದ ಜೊತೆಗೆ ನಾಚಿಕೆ ಕೂಡ ಆಯ್ತು. ನಾನು ಕೆಲಸವನ್ನು ಬಿಟ್ಟರೂ ಇನ್ನೂ ಅವರ 10% ಕೂಡ ತೋಟ ಮಾಡಲು ಸಾಧ್ಯವಾಗಲಿಲ್ಲವಲ್ಲ ಅಂತ.
ಇಲ್ಲೇ ಇದ್ದುಕೊಂಡು ಹೆಂಗ ಮಾಡತೀರಿ? ಭಾರಿ ಸಾಧನೆ ಬಿಡ್ರಿ ನಿಮ್ಮದು ಅಂದೆ.
ಆಗ ಅವರು ಹೇಳಿದ ಗುಟ್ಟು.. “ನಮ್ಮ ಅಪ್ಪಾ ಅಲ್ಲೇ ಇರ್ತಾರರಿ”.
ಅದು ಇನ್ನೊಂದು ಅಚ್ಚರಿ! ಅವರ ತಂದೆ ಶ್ರೀ. ಸಿದ್ದಪ್ಪ ಕರಡಿ ಅವರು 70 ವರ್ಷದ ಹರೆಯದವರು. ಅವರ ಮೂಲ ಊರು ಹಾವೇರಿ. ಅವರ ಪತ್ನಿ ತೀರಿಕೊಂಡ ಬಳಿಕ, ಯಾವುದರಲ್ಲಾದರೂ ತೊಡಗಿಸಿಕೊಳ್ಳಬೇಕು ಎಂಬ ಇಚ್ಛೆಯೊಂದಿಗೆ ಬೆಳ್ಳನಕೇರಿಯಲ್ಲಿ ಹೊಲ ತೆಗೆದುಕೊಂಡು ಅಲ್ಲಿಯೇ ಒಂದು ಮನೆ ಕಟ್ಟಿಕೊಂಡು ತೋಟ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಹೊಲದಲ್ಲಿ ಅಥವಾ ತೋಟದಲ್ಲಿ ನಾವೇ ಖುದ್ದಾಗಿ ಇದ್ದರೆ ಅದು ಬಂಗಾರ. ನಾವು ದೂರದಿಂದ ಬಂದು ಹೋಗಿ ಮಾಡುತ್ತಿದ್ದರೆ ತೋಟದ ಗತಿ ಅಧೋಗತಿ! ಶಿವು ಕೂಡ ಬೆಂಗಳೂರಿನಿಂದ ಹಳ್ಳಿಗೆ ಆಗಾಗ ಹೋಗಿ ಬಂದು ಮಾಡುತ್ತಾ ತಮ್ಮ ತೋಟದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು ಅಂತ ತಿಳಿಯಿತು. ನಮ್ಮ ಬಳಗಕ್ಕೆ ಮತ್ತೊಬ್ಬರ ಸೇರ್ಪಡೆಯಾಗಿತ್ತು. ಮುಂದಿನ ಸಲ ಹಳ್ಳಿಗೆ ಹೋದಾಗ ಅವರ ತಂದೆಯನ್ನು ಭೇಟಿಯಾಗಬೇಕು ಅಂತ ನಿರ್ಧರಿಸಿದೆ.
ನಾವು ಉತ್ಕಟವಾಗಿ ಒಂದರ ಬೆನ್ನು ಹತ್ತಿದರೆ ಅದಕ್ಕೆ ಸಂಬಂಧಿಸಿದ, ಅದೇ ತರಹವೆ ಯೋಚಿಸುವ ಹಲವರನ್ನು ನಮ್ಮ ಮುಂದೆ ತಂದು ಕೂಡಿಸುತ್ತದೆ ನಮ್ಮ ಸುಪ್ತಮನಸು! ಅದು ಒಳ್ಳೆಯದು ಇರಬಹುದು ಕೆಟ್ಟದೂ ಇರಬಹುದು. ಕುಡಿತದ ದಾಸನಾದವನಿಗೆ ಕುಡುಕ ಸ್ನೇಹಿತರೆ ಸಿಗುತ್ತಾರೆ. ನಮ್ಮಂತಹ ಕೃಷಿಯ ನಶೆ ಇರುವವರಿಗೆ ವಿಶಿಷ್ಟ ಕೃಷಿಕರೆ ಸಿಗುತ್ತಾರೆ! ಒಟ್ಟಿನಲ್ಲಿ ಎರಡೂ ನಶೆಗಳೆ. ಒಂದು ಆರೋಗ್ಯ ಹಾಳು ಮಾಡಿದರೆ ಇನ್ನೊಂದು ಆರೋಗ್ಯವನ್ನು ಸುಧಾರಿಸುತ್ತದೆ!
ನನ್ನಂತೆಯೇ ಮೊದಲ ಸಲ ಕೃಷಿಗೆ ಇಳಿಯುವವರು ಮೊದಮೊದಲು ತುಂಬಾ ಹಿಂಸೆ ಪಡುವುದಂತೂ ನಿಜ, ಆದರೆ ಎಷ್ಟು ದಿನ ತಾಳುತ್ತಾರೆ, ಎಷ್ಟು ಯಶಸ್ವಿಯಾಗುತ್ತಾರೆ ಎಂಬುದು ಆ ನಶೆಯ ತೀವ್ರತೆಯ ಮೇಲೆ, ಹಾಗೂ ನಮ್ಮ ಯಶಸ್ಸಿನ ಮಾನದಂಡದ ಮೇಲೆ ಅವಲಂಬಿಸಿದೆ. ನಾನು ಕೂಡ ಕೃಷಿಯಲ್ಲಿ ಇನ್ನೂ ಎಷ್ಟು ವರ್ಷಗಳು ಉತ್ಸಾಹ ತೋರುತ್ತೇನೋ, ಎಷ್ಟು ಯಶಸ್ವಿಯಾಗುತ್ತೇನೋ ಗೊತ್ತಿಲ್ಲ ಆದರೆ ನಮ್ಮ ಮುಂದಿನ ಪೀಳೀಗೆಗೆ ಒಂದು ಒಳ್ಳೆಯ ಕೃಷಿಯ ಕಥನವನ್ನು, ಅನುಭವಗಳನ್ನು, ಅಭಿರುಚಿಯನ್ನು ಕೊಡುತ್ತಿರುವೆನಲ್ಲ ಎಂಬ ಸಮಾಧಾನ ಇದೆ. ಕೃಷಿಯ ಸಹವಾಸವೇ ಬೇಡ ಅಂತ ಎಷ್ಟೋ ಜನರು ವಿಮುಖರಾಗುತ್ತಿರುವ ಈ ಸಮಯದಲ್ಲಿ ನಮ್ಮಂತವರು ಕೂಡ ಇದ್ದೀವಲ್ಲ ಎಂಬ ಆಶಾಭಾವನೆ ಕೂಡ ಇದೆ. ನನ್ನ ಎಲ್ಲ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿರುವ ನನ್ನ ಮಗಳು ಪರಿಧಿ ಕೂಡ ಕೃಷಿಯಲ್ಲಿ ಕ್ರಮೇಣ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾಳೆ. ನಿಮ್ಮ ಅಪ್ಪ ಏನು ಮಾಡ್ತಾರೆ ಅಂತ ಯಾರಾದರೂ ಕೇಳಿದರೆ “ಅವರು farmer” ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ನನಗೆ ಅಷ್ಟು ಸಾಕು! ಅವಳೂ ಕೊಡ ಮುಂದೊಮ್ಮೆ ತನ್ನ ಆಹಾರವನ್ನು ತಾನೇ ಬೆಳೆಯುವ ಹಾಗೆ ಆದರೆ ಅದಕ್ಕಿಂತ ದೊಡ್ಡ ಯಶಸ್ಸು ಏನಿದೆ?
ಹಿಂದೊಮ್ಮೆ ನನ್ನ ಹೆಂಡತಿಯ ಬಳಗದವರ ಒಂದು ಸಮಾರಂಭಕ್ಕೆ ಶಿರಸಿಯ ಹತ್ತಿರದ ಒಂದು ಹಳ್ಳಿಗೆ ಹೋಗಿದ್ದೆ. ಅದು ನನ್ನ ಹೆಂಡತಿಯ ತವರು ಮನೆ ಆದರೂ ಅಲ್ಲಿಗೆ ಹೆಚ್ಚಿಗೆ ಹೋಗುವುದು ನಾನೇ! ಹೀಗಾಗಿ ಅದು ಅವಳಿಗಿಂತ ಹೆಚ್ಚಾಗಿ ನನ್ನ ತವರು ಮನೆಯೇ ಆಗಿದೆ. ನಾನು ಹಳ್ಳಿಯ ಹತ್ತಿರವೇ ಇರುವುದರಿಂದ ಯಾವುದೇ ಸಮಾರಂಭಗಳಾದರೂ ನನಗೆ ಹೋಗಿ ಬಾ ಅಂತ ಅಪ್ಪಣೆ ಕೊಡುತ್ತಾಳೆ. ಯಾಕಂದರೆ ಇಬ್ಬರೂ ಅಡ್ಡಾಡುತ್ತಿದ್ದರೆ ನಮ್ಮ ಬೆಂಗಳೂರಿನ ತೋಟವನ್ನು ನೋಡಿಕೊಳ್ಳುವವರು ಯಾರು? ನಾನೂ ಖುಷಿಯಿಂದಲೇ ಹೋಗುತ್ತೇನೆ. ಮಲೆನಾಡಿನ ಸೊಬಗು ಸವಿಯಲು ಅದೊಂದು ಅದ್ಭುತ ಅವಕಾಶ ನನಗೆ! ಊಟ ಮುಗಿಸಿ ಕೂತಿದ್ದಾಗ ಅಲ್ಲೊಬ್ಬರು ಶ್ರೀ. ನರಸಿಂಹ ಹೆಗಡೆ ಅನ್ನುವವರ ಪರಿಚಯ ಆಯ್ತು. ಯಲ್ಲಾಪುರದ ಹತ್ತಿರ ಅವರದೂ ಅಡಿಕೆ ತೋಟಗಳು ಇವೆ. ಅವರೂ ಕೂಡ ತುಂಬಾ ಉತ್ಸಾಹಿ ಕೃಷಿಕರು. ಅವರಿಗೆ ನನ್ನ ಕೃಷಿ ಪಯಣದ ಬಗ್ಗೆ ಯಾರೋ ತಿಳಿಸಿದ್ದರಂತೆ. ಹೀಗಾಗಿ ನನ್ನನ್ನು ಬದಿಗೆ ಕರೆದು ಮಾತಾಡಿಸಿದರು ಆ ಹಿರಿಯರು.
ಹಾಗೆಯೇ ಮಾತಾಡುತ್ತಾ ಕೃಷಿಯೆಡಗೆ ಒಲವಿರುವ ನನ್ನ ಶಿಷ್ಯ ಬಳಗ ಇರುವುದು ಅವರಿಗೆ ತಿಳಿಯಿತು. ಹಾಗೆ ಕೃಷಿ ಮಾಡುವ ಹಂಬಲ ಇರುವ ಎಷ್ಟೋ ಯುವಕರ ಬಳಿ ಹೊಲ/ ತೋಟ ಇರುವುದಿಲ್ಲ. ನಾನೂ ಕೂಡ ಅದೇ ಕಾರಣಕ್ಕೆ ನನ್ನ ಇಬ್ಬರು ಶಿಷ್ಯರನ್ನು ಕರೆತಂದು ನನ್ನ ಹೊಲದಲ್ಲಿ ಪ್ರಯೋಗ ಮಾಡುವ ವಿಷಯವನ್ನು ಅವರಿಗೆ ತಿಳಿಸಿದೆ. ಆಗ ಅವರು ತಮ್ಮ ಒಂದು ವಿಚಾರವನ್ನು ನನ್ನ ಮುಂದೆ ಇಟ್ಟರು. ಅದು ತುಂಬಾ ಒಳ್ಳೆಯ ಯೋಜನೆ ಅಂತ ನನಗೆ ತಕ್ಷಣಕ್ಕೆ ಮನವರಿಕೆ ಆಯ್ತು. ಅವರ ಯೋಜನೆ ಏನು ಅಂದರೆ ಅಡಿಕೆ ತೋಟವನ್ನು ಉಚಿತವಾಗಿ ಕೊಡುವುದು! ಅರೆ ಇದೇನು? ಅವರಿಗೆ ಹುಚ್ಚೆ ಅಂತ ಕೇಳಬೇಡಿ. ಅವರ ಉದ್ದೇಶ ಹಳ್ಳಿಯಲ್ಲಿ ಎಷ್ಟೋ ವರ್ಷಗಳಿಂದ ಸ್ಥಾಪಿತವಾಗಿರುವ ಆ ಕೃಷಿ ಸಂಸ್ಕೃತಿಯನ್ನು ಜೀವಂತವಾಗಿಡುವುದು, ಹಾಗೂ ಮುಂದಿನ ಪೀಳಿಗೆಗೆ ಬೆಳೆಸುವುದೇ ಆಗಿತ್ತು. ಅವರಿಗೆ ಈಗಾಗಲೇ 70 ರ ಮೇಲೆ ವಯಸ್ಸಾಗಿತ್ತು. ಅವರು ಅಬ್ಬಬ್ಬಾ ಎಂದರೆ ಇನ್ನೊಂದಿಷ್ಟು ವರ್ಷ ಮಾಡಿಕೊಂಡು ಹೋದಾರು. ಮುಂದೆ ಏನು ಗತಿ? ಯಾರೋ ಒಬ್ಬರಿಗೆ ತೋಟವನ್ನು ಮಾರಿ ಹೋಗುವ ಅನಿವಾರ್ಯತೆ ಎದುರಾಗಬಹುದು. ತೋಟವನ್ನು ಯಾರು ತೆಗೆದುಕೊಳ್ಳುತ್ತಾರೆ, ಹೇಗೆ ನಡೆಸಿಕೊಂಡು ಹೋಗುತ್ತಾರೆ ಎಂಬುದು ಊಹೆಗೂ ಮೀರಿದ್ದು. ಕ್ರಮೇಣ ಅಲ್ಲಿನ ಸಂಸ್ಕೃತಿ ಹಾಳಾಗಿ ಹೋದರೆ ಎಂಬ ಭಯ ಅವರನ್ನು ಕಾಡತೊಡಗಿತ್ತು. ಈಗಾಗಲೇ ಅಲ್ಲಿನ ಹುಡುಗರು ಹೊಟ್ಟೆ ಪಾಡಿಗೆ ಅಂತ ಹಳ್ಳಿಯನ್ನು ತೊರೆದು ಪಟ್ಟಣ ಸೇರಿ ಆಗಿದೆ. ಹಳ್ಳಿಗಳು ವೃದ್ಧಾಶ್ರಮದಂತೆಯೇ ಆಗಿವೆ. ಹುಡುಕಿದರೆ ಬೆರಳೆಣಿಕೆಯಷ್ಟು ಯುವಕರು ಸಿಗುತ್ತಾರೋ ಏನೋ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಹೊಳೆದ ವಿಚಾರ ಇದು.
ಯಾರಾದರೂ ಉತ್ಸಾಹಿ ಯುವಕರಿಗೆ ಹಳ್ಳಿಗೆ ಬಂದು ತೋಟ ಮಾಡಲು ಮನಸ್ಸಿದ್ದರೆ ತಮ್ಮ ತೋಟವನ್ನು ಅವರಿಗೆ ಕೊಡಲು ಅವರು ತಯಾರಿದ್ದರು. ಅವರಿಗೊಂದು ವಾಸ್ತವ್ಯ ಕೂಡ ಅಲ್ಲಿಯೇ ಕಲ್ಪಿಸಿಕೊಡುತ್ತೇನೆ ಅಂತ ಹೇಳಿದರು. ಹಾಗೆ ಬಂದವರು ಅಡಿಕೆ ತೋಟದ ಮಧ್ಯದಲ್ಲಿ ಇರುವ ಜಾಗದಲ್ಲಿ ತಮಗೆ ಏನು ಬೇಕೋ ಅದನ್ನು ಬೆಳೆದುಕೊಳ್ಳಬಹುದು. ಅಂತರ ಬೆಳೆಗಳಾದ ಬಾಳೆ, ಅರಿಶಿನ, ಮೆಣಸು, ಶುಂಟಿ ಏನೇ ಇರಬಹುದು. ಹಾಗೆ ಬೆಳೆದುಕೊಳ್ಳಲು ತೋಟದ ಮಾಲೀಕರಿಗೆ ಯಾವುದೇ ದುಡ್ಡು ಕೊಡುವ ಅವಶ್ಯಕತೆ ಇಲ್ಲ. ಆ ಬೆಳೆಗಳಿಂದ ಬಂದ ಆದಾಯ ಆ ಯುವಕರಿಗೆ ಸೇರುತ್ತದೆ. ಅಡಿಕೆಯಿಂದ ಬಂದ ಆದಾಯ ಮಾತ್ರ ತೋಟದ ಮಾಲೀಕರು ತೆಗೆದುಕೊಳ್ಳುತ್ತಾರೆ. ಅಡಿಕೆ ತೋಟದ ನಿರ್ವಹಣೆ ಕೂಡ ಮಾಲೀಕರೆ ನೋಡಿಕೊಳ್ಳುತ್ತಾರೆ. ಹಸುಗಳನ್ನು ಕೂಡ ಸಾಕಿಕೊಳ್ಳಬಹುದು. ಒಟ್ಟಿನಲ್ಲಿ ನೆಮ್ಮದಿಯ ಜೀವನವನ್ನು ನಡೆಸಲು ಏನು ಬೇಕೋ ಎಲ್ಲವನ್ನೂ ಅಲ್ಲಿ ದೊರಕುವಂತೆ ಮಾಡುತ್ತಾರೆ. ಇದೊಂದು ಅದ್ಭುತ ಪರಿಕಲ್ಪನೆ. ಅಲ್ಲಿ ಎಷ್ಟೋ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಗಳು ಇದ್ದವು.
ವಯಸ್ಸಾದವರಿಗೆ ಜೊತೆಗೆ ಅಂತ ಯುವಕರು ಸಿಕ್ಕಂತಾಯ್ತು. ತೋಟವೆ ಇಲ್ಲ ಎಂದು ಕೊರಗುವ ಯುವಕರಿಗೆ ಒಂದು ನೆಲೆ ಸಿಕ್ಕಂತಾಯ್ತು. ಜೊತೆಗೆ ಅಲ್ಲಿನ ವಿಶಿಷ್ಟ ಸಂಸ್ಕೃತಿ ಕೂಡ ಮುಂದುವರಿಸಿಕೊಂಡು ಹೋಗುವ ಅವಕಾಶ! ನನಗೆ ಇದನ್ನು ಕೇಳಿ ತುಂಬಾ ಖುಷಿ ಆಯಿತು. ನನ್ನ ದಾರಿಯೂ ಇದೆ ಆಗಿತ್ತು. ಒಂದು ದಿನ ನನ್ನ ಎಲ್ಲ ರೈತಾನಂದ ಶಿಷ್ಯರುಗಳನ್ನು ಸೇರಿಸಿ conference ಮಾಡಿ ಅವರ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ ಅಂತ ಹೇಳಿದ್ದೆ. ಅವರೂ ಕೂಡ ಈ conference ನಲ್ಲಿ ಭಾಗವಹಿಸುವೆ ಅಂತ ಆಶ್ವಾಸನೆ ಕೊಟ್ಟಿದ್ದರು. ಅದೀಗ ನೆನಪಾಗಿತ್ತು. ಇಂತಹ ಹೊಸ ಹೊಸ ಯೋಜನೆಗಳು ನನಗೆ ಸಿಕ್ಕಾಪಟ್ಟೆ ಶಕ್ತಿ ತುಂಬುತ್ತವೆ. ಅವುಗಳು ಎಷ್ಟರ ಮಟ್ಟಿಗೆ ಸಾಕಾರ ಆಗುತ್ತವೊ ಅದು ಬೇರೆ ಪ್ರಶ್ನೆ, ಆದರೆ ಪ್ರಯತ್ನವಂತೂ ಮಾಡಬಹುದಲ್ಲವೇ! ಅದಕ್ಕೊಂದು ದಿನಾಂಕ ನಿರ್ಧರಿಸಿ ನನ್ನ ಬಳಗಕ್ಕೆ ಒಂದು ಮೆಸೇಜ್ ಕಳಿಸಿ ಕೂತೆ..!
(ಮುಂದುವರಿಯುವುದು..)
ಗುರುಪ್ರಸಾದ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿ ರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ), ಗ್ರಾಮ “ಡ್ರಾಮಾಯಣ” ಸೇರಿ ಇವರ ನಾಲ್ಕು ಕೃತಿಗಳು ಪ್ರಕಟಗೊಂಡಿವೆ.