ಈತ ಸ್ಕಾಂಡಿನೇವಿಯನ್ ದೇಶವೊಂದರ ಪತ್ತೇದಾರಿ ಬರಹಗಾರ. ನನ್ನ ಕಳೆದ ಹತ್ತಾರು ವರ್ಷಗಳ ಗೆಳೆಯ. ಮುಖದಲ್ಲಿ ಸದಾ ತುಂಟ ಹುಡುಗನೊಬ್ಬನ ನಗು. ದೂರದಿಂದ ಕಂಡೊಡನೆ ತಲೆ ಅಲ್ಲಾಡಿಸುತ್ತಾ ಬಳಿ ಬಂದು ಮಾತನಾಡುತ್ತಾನೆ. ಈತನ ಮಡದಿ ಭಾರತದವಳು. ಅಂತರಾಷ್ಟ್ರೀಯ ಖ್ಯಾತಿಯ ಕಾದಂಬರಿಗಾರ್ತಿ. ಆದರೆ ಈ ಕುರಿತು ಒಂಚೂರೂ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ಬರೆಯುತ್ತಲೇ ಇರುತ್ತಾಳೆ. ಮೊನ್ನೆ ಮಡಿಕೇರಿಯಲ್ಲಿ ಇದ್ದಕ್ಕಿದ್ದಂತೆ ಮಳೆ ಬಂದು ಮಂಜು ಮುಸುಕಿ ಭೂಲೋಕವೆಲ್ಲ ದೇವಲೋಕದಂತೆ ಬೆಳ್ಳಂಬೆಳ್ಳಗಾದಾಗ ಈಕೆಗೆ ಕೊಂಚ ಶೀತವಾಗಿದೆ ಅನಿಸಿ ಬಿಸಿ ನೀರಿಗೆ ಒಂದಿಷ್ಟು ಬ್ರಾಂದಿ ಬೆರೆಸಿ ಕುಡಿದು ಎಲ್ಲ ಸರಿಯಾಯಿತು ಎಂದು ಆಕೆ ಅಂದ ಮೇಲೆ ನಾವು ಮೂವರು ಮತ್ತೆ ಮಾತನಾಡುತ್ತಾ ಕುಳಿತಿದ್ದೆವು.
ಸುಮಾರು ಹದಿನೈದು ವರ್ಷಗಳ ಹಿಂದೆ ಭಾರತದ ಬರಹಗಾರರ ನಿಯೋಗವೊಂದರಲ್ಲಿ ನಾನು ಈತನ ದೇಶಕ್ಕೆ ಹೋಗಿದ್ದೆ. ಆಗ ಈತ ನಮಗೆ ಮಾರ್ಗದರ್ಶಿಯಾಗಿದ್ದ. ಆಗ ಆತನಿಗೆ ಮದುವೆಯೂ ಆಗಿರಲಿಲ್ಲ. ನಾನಾದರೋ ಇದ್ದ ಒಬ್ಬಳೇ ಹೆಂಡತಿಯನ್ನೂ ಒಂಟಿಯನ್ನಾಗಿಸಿ ಇಲ್ಲಿ ಬಂದು ಬಿಟ್ಟಿದ್ದೆ. ಬಂದವನು ಹೊಸ ದೇಶವೊಂದನ್ನು ಕಂಡು ಬೆರಗಾಗುವುದನ್ನು ಬಿಟ್ಟು, ಬಿಟ್ಟು ಬಂದ ಹೆಂಡತಿಯನ್ನು ಯೋಚಿಸುತ್ತಾ ಖಿನ್ನನಾಗಿ ಓಡಾಡುತ್ತಿದ್ದೆ. ಜೊತೆಯಲ್ಲಿ ಇದ್ದವರೆಲ್ಲರೂ ದೊಡ್ಡ ದೊಡ್ಡ ಬರಹಗಾರರು. ಜೀವನದ ಏಕಾಂತಗಳನ್ನೂ, ವೈರುಧ್ಯಗಳನ್ನೂ ಅರಗಿಸಿ ಕುಡಿದವರು. ಅಲ್ಲಿನ ಅಕ್ಟೋಬರ್ ತಿಂಗಳ ಮಸುಕೂ, ಮಳೆಯೂ, ವಿಚಾರಸಂಕಿರಣಗಳೂ ಅವರಿಗೆಲ್ಲ ವಯೋ ಸಹಜ ಆಗುಹೋಗುಗಳಂತೆ ಸಹಜವಾಗಿ ಕಾಣುತ್ತಿತ್ತೋ ಏನೋ. ನನಗಂತೂ ಅಯ್ಯೋ ನನ್ನ ಹುಚ್ಚು ಅಲೆದಾಟಕ್ಕೆ ಇಲ್ಲಿ ಜಾಗವೇ ಇಲ್ಲವಲ್ಲಾ ಅನಿಸುತ್ತಿತ್ತು.
ಆಗ ನನ್ನ ಜೊತೆಗಿದ್ದ ಈತ ‘ಇಲ್ಲಿ ಯಾರೂ ತುಂಟರಿಲ್ಲ. ಇಲ್ಲಿ ಯಾರೂ ಪೋಲಿಗಳಿಲ್ಲ. ಇಲ್ಲಿ ಎಲ್ಲವೂ ಬೆಲೆ ಬಾಳುವಂತೆ ಕಾಣುತ್ತಿರುತ್ತದೆ. ಆದರೆ ನಿಜವಾಗಿಯೂ ಇಲ್ಲಿ ಬಹುತೇಕ ಎಲ್ಲರೂ ಒಂಟಿತನದಲ್ಲಿ ಒದ್ದಾಡುತ್ತಿರುತ್ತಾರೆ. ಒಂದು ರೀತಿ ಒಣ ಗಾಂಭೀರ್ಯವನ್ನು ಆರೋಪಿಸಿಕೊಂಡು ಸೊರಗುತ್ತಿರುವ ದೇಶ ನಮ್ಮದು. ನಾನು ಇದೆಲ್ಲವನ್ನೂ ಬಿಟ್ಟು, ನನ್ನ ಇಲ್ಲಿನ ಗೆಳತಿಯನ್ನೂ ಬಿಟ್ಟು ನಿಮ್ಮ ದೇಶಕ್ಕೆ ಬರಬೇಕೆಂದಿದ್ದೇನೆ. ಗಂಗೆಯೂ, ಗೌರಿಯೂ, ಕಾಳಿಯೂ, ಭಗವತಿಯೂ ಯಮುನೆಯಾ, ರಾಧೆಯೂ ಇರುವ ನಿನ್ನ ದೇಶ ನನಗೆ ಇಷ್ಟ’ ಅಂದಿದ್ದ. ನನಗೂ ನಿಜ ಅನ್ನಿಸುತ್ತಿತ್ತು. ನಾವಿದ್ದ ಸ್ಟಾಕ್ ಹೋಮ್ ನ ಹೋಟೆಲಿನ ಬಾಲ್ಕನಿಯ ಮುಂದೆ ಒಂದು ದೊಡ್ಡ ಅಪಾರ್ಟ್ ಮೆಂಟು.ಅಪಾರ್ಟ್ ಮೆಂಟಿನ ಎಲ್ಲ ಕಿಟಕಿಗಳಿಗೂ ದೊಡ್ಡ ದೊಡ್ಡ ಗಾಜುಗಳು. ಸಂಜೆಯವರೆಗೆ ನೀರವವಾಗಿರುತ್ತಿದ್ದ ಕೋಣೆಗಳಲ್ಲಿ ಕತ್ತಲಾಗುತ್ತಿದ್ದಂತೆ ಒಂದೊಂದಾಗಿ ಹೊತ್ತಿಕೊಳ್ಳುತ್ತಿದ್ದ ದೀಪಗಳು. ಒಳಗಡೆ ಕಾಣಿಸುತ್ತಿದ್ದ ಒಂಟಿ ಗಂಡಸರು ಮತ್ತು ಒಂಟಿ ಹೆಂಗಸರು. ಅವರು ಒಂದೇ ರೀತಿ ಕತ್ತರಿಸಿ ತಿನ್ನುತ್ತಿದ್ದ ಸೇಬಿನ ಚೂರುಗಳು. ಒಂದೇ ರೀತಿ ಕೂರುತ್ತಿದ್ದ ಅವರೆಲ್ಲರ ಒಂದೇ ಭಂಗಿ ಮತ್ತು ಅವರೆಲ್ಲರೂ ಒಂಟಿ ಒಂಟಿಯಾಗಿ ಒಂದೇ ರೀತಿ ಗ್ಲಾಸಿಗೆ ಏನೋ ಸುರಿದು ಕುಡಿಯುತ್ತಿದ್ದ ಪರಿ ಪರದೆಯಿಲ್ಲದ ಕಿಟಕಿಗಳಿಂದ ಎಲ್ಲವೂ ಕಾಣಿಸುತ್ತಿತ್ತು.
‘ಇಲ್ಲಿ ಎಲ್ಲವೂ ಕನಸಿನಂತೆ ನಡೆದು ಹೋಗುತ್ತಿದೆ. ಊಟ, ಕುಡಿತ, ಚಹಾ, ಬಿಸ್ಕತ್ತು, ನಡೆದಾಟ ಮತ್ತು ಚಳಿ. ಇಲ್ಲಿ ಎಲ್ಲವೂ ಮಂಜು ಕವಿದುಕೊಂಡಿದೆ. ಕಟ್ಟಡಗಳು, ಮರಗಳು ಮತ್ತು ಅರಮನೆಗಳು. ಸಾಕು ನಾಯಿಗಳನ್ನು ರಾಜಕುಮಾರರಂತೆ ವಾಕ್ ಕರೆದುಕೊಂಡು ಹೋಗುತ್ತಿರುವ ಸುಂದರಿಯರಾದ ಹುಡುಗಿಯರು. ತುಂಬಾ ಬೌದ್ಧಿಕವಾಗಿ ನಡೆಯುತ್ತಿರುವ ಸಾಹಿತ್ಯಿಕ ಚರ್ಚೆಗಳು. ನಾನು ನನ್ನ ಆತ್ಮಕ್ಕೆ ಒಂದು ಸಣ್ಣ ಬೀಗ ಜಡಿದು, ಕಣ್ಣುಗಳನ್ನು ಅಗಲಕ್ಕೆ ತೆರೆದಿಟ್ಟುಕೊಂಡು ಆಗಾಗ ನಿದ್ದೆ ಹೋಗುತ್ತ ಪುಟ್ಟ ಪುಟ್ಟ ಕವಿತೆಗಳನ್ನು ಬರೆಯುತ್ತಾ ಕಾಲ ಕಳೆಯುತ್ತಿರುವೆ’ ಎಂದು ಊರಲ್ಲಿದ್ದ ಒಂಟಿ ಹೆಂಡತಿಗೆ ಪತ್ರ ಬರೆದಿದ್ದೆ.
‘ಏನು ಬರೆಯುತ್ತಾ ಕೂತಿದ್ದೀಯಾ?’ ಎಂದು ಕೇಳಿದ್ದ. ‘ಇರುವ ಒಬ್ಬಳು ಹೆಂಡತಿಗೆ ಪೂಸಿ ಹೊಡೆದು ಒಂದು ಪ್ಲೀಸಿಂಗ್ ಪತ್ರ ಬರೆಯುತ್ತಿರುವೆ. ತುಂಬಾ ಖುಷಿಯಲ್ಲಿರುವೆ ಎಂದರೆ ನಾನು ಅವಳನ್ನು ಮರೆತೇ ಬಿಟ್ಟಿರುವೆ ಎಂದು ಸಂಕಟಪಟ್ಟುಕೊಳ್ಳುತ್ತಾಳೆ. ಅದಕ್ಕೆ ಒಂಟಿತನವನ್ನು ಒಂದಿಷ್ಟು ಹೆಚ್ಚಾಗಿಯೇ ಬರೆದು ಕಳಿಸುತ್ತಿರುವೆ’ ಎಂದು ಪತ್ರವನ್ನು ಅಂಚೆಗೆ ಹಾಕಿದ್ದೆ. ‘ಅಯ್ಯೋ ನನಗೂ ಒಬ್ಬಳು ಇಂಡಿಯಾದ ಹೆಂಡತಿ ಬೇಕು. ಎಷ್ಟು ಮುಗ್ಧವಾಗಿರುತ್ತಾರಲ್ಲಾ. ಎಷ್ಟು ಸೌಮ್ಯವಾಗಿರುತ್ತಾರಲ್ಲಾ’ ಎಂದೆಲ್ಲಾ ಅಂದಿದ್ದ. ‘ನನಗೂ ಇಲ್ಲಿನ ಸುಂದರಿಯರನ್ನು ನೋಡಿದಾಗ ಹಾಗೇ ಅನಿಸುತ್ತದೆ ಮಾರಾಯ. ಇದೆಲ್ಲಾ ಗಂಡಸರ ಕಲ್ಪನಾ ವಿಲಾಸ’ ಎಂದು ನಕ್ಕಿದ್ದೆ. ‘ಹೌದಲ್ಲವಾ’ ಎಂದು ಆತನೂ ಕಣ್ಣು ಹೊಡೆದು ನಕ್ಕಿದ್ದ.
ಈಗ ನೋಡಿದರೆ ಇದೀಗ ಈ ಮಡಿಕೇರಿಯಲ್ಲಿ ಉರಿ ಬಿಸಿಲಿನ ನಡುವೆ ಇದ್ದಕ್ಕಿದ್ದಂತೆ ತೇಲಿಬಂದ ಮೋಡಗಳ ನಡುವೆ ಬೆಟ್ಟವೊಂದರ ನೆತ್ತಿಯ ಮೇಲಿನ ಹೋಟೆಲ್ಲೊಂದರ ಒಳಗೆ ಚಳಿಯಲ್ಲಿ ಸಿಲುಕಿಕೊಂಡು ಆತನೂ, ಆತನ ಭಾರತೀಯ ಮಡದಿಯೂ, ನಾನೂ ಹುಚ್ಚುಹುಚ್ಚಾಗಿ ಗಲಗಲ ನಗುತ್ತಾ ಹರಟುತ್ತಿದ್ದೆವು. ಆಕೆ ಆತನಿಗಿಂತಾ ತೀರಾ ಸಣ್ಣವಳೇನಲ್ಲ. ಆದರೆ ರಸ್ತೆಯಲ್ಲಿ ಹೋಗುತ್ತಿರುವಾಗ ಯಾರೋ ‘ಈಕೆ ನಿಮ್ಮ ಮಗಳೇ?’ಎಂದು ಕೇಳಿದರಂತೆ. ಅದಕ್ಕೆ ಈತ ತೀರಾ ವ್ಯಗ್ರನಾಗಿರುವವನಂತೆ ಸಿಟ್ಟು ತೋರಿಕೊಂಡ. ‘ಇಲ್ಲಾ ಮಾರಾಯಾ ನಿನ್ನ ತಲೆಗೂದಲು ಸಹಜವಾಗಿಯೇ ಬೆಳ್ಳಗಿದೆ. ಮತ್ತು ಆಕೆಯ ಮುಡಿಯೂ ಸಹಜವಾಗಿಯೇ ಕರ್ರಗಿದೆ. ಹಾಗಾಗಿ ನರ ಮನುಷ್ಯರು ಸಹಜವಾಗಿಯೇ ಹಾಗಂದುಕೊಳ್ಳುತ್ತಾರೆ. ಏನು ಮಾಡುವುದು ಸಹಿಸಿಕೋ ಅಂದೆ. ‘ಮನುಷ್ಯರ ಮಾತುಗಳನ್ನು ಕೇಳಿ ನನ್ನ ಮಡದಿಯೂ ಹಾಗೆಂದು ಭಾವಿಸಿಕೊಂಡರೆ ಕಷ್ಟ’ ಅಂದು ಕಣ್ಣು ಹೊಡೆದ. ಆಕೆ ಇದೇನೂ ತಮಾಷೆ ಅಲ್ಲವೆಂಬಂತೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದಳು. ಅಂತರಾಷ್ಟ್ರೀಯ ಖ್ಯಾತಿಯ ಬರಹಗಾರ್ತಿ. ಏನೋ ಬರೆಯಲು ಯೋಚಿಸುತ್ತಿರಬೇಕು ಎಂದು ಸುಮ್ಮನಾದೆ.
ಇವರಿಬ್ಬರೂ ಮಡಿಕೇರಿಗೆ ಬಂದಿರುವುದು ಬರೆಯಲಿಕ್ಕಾಗಿಯೇ. ಬೆಳಗ್ಗೆ ಎದ್ದು ಪ್ರಾತಃವಿದಿಗಳನ್ನು ಮುಗಿಸಿ ಏಳು ಗಂಟೆಗೆ ಬರೆಯಲು ಕುಳಿತರೆ ಏಳುವುದು ಮಧ್ಯಾಹ್ನದ ಊಟಕ್ಕೇ. ಊಟ ಮುಗಿಸಿ ಸಣ್ಣ ನಿದ್ದೆ ಹೊಡೆದು ಮತ್ತೆ ಬರೆಯಲು ಕುಳಿತರೆ ನಿಲ್ಲಿಸುವುದು ಆಕಾಶ ಕತ್ತಲಾದ ಮೇಲೆಯೇ. ಆನಂತರ ರಾತ್ರಿ ಮತ್ತೆ ಬರೆಯುವುದು. ಬೇರೆ ಬೆಂಗಳೂರಿನಂತಹ ಊರಲ್ಲಿದ್ದರೆ ಜನರನ್ನು ಭೇಟಿಯಾಗುತ್ತಲೇ ನರಜನ್ಮ ಮುಗಿದು ಹೋಗುತ್ತದೆ, ಬರೆಯಲು ಸಮಯವೇ ಸಿಗುವುದಿಲ್ಲ ಎಂದುಕೊಂಡು ಈ ಊರಿಗೆ ಬಂದು ನೆಲೆಸಿದ್ದಾರೆ. ಇಲ್ಲಿ ಯಾರನ್ನೂ ಭೇಟಿಯಾಗಬೇಕಾಗಿಲ್ಲ. ಸಂಜೆ ಹೊತ್ತಿನ ಯಾವ ಪಾರ್ಟಿಗಳೂ ಇಲ್ಲ. ಇಲ್ಲಿ ಯಾರ ಕಾಟವೂ ಇಲ್ಲ ಎಂದು ಇಲ್ಲಿ ಮನೆ ಮಾಡಿಕೊಂಡು ಅನವರತ ಬರೆಯುತ್ತಿದ್ದಾರೆ.
ಆತ ಆತನ ಸ್ಕಾಂಡಿನೇವಿಯನ್ ಭಾಷೆಯೊಂದರಲ್ಲಿ. ಈಕೆ ಇಂಗ್ಲಿಷಿನಲ್ಲಿ. ಈತ ಬರೆದ ಇತ್ತೀಚೆಗಿನ ಪತ್ತೇದಾರಿ ಕಾದಂಬರಿಯ ವಸ್ತು ಗಹನವೂ ತಮಾಷೆಯೂ ಆಗಿದೆ. ಹಿಂದಿನ ಕಾಲದಲ್ಲಿ ಯುರೋಪಿಯನ್ನರು ಭಾರತವನ್ನು ತಮ್ಮ ವಸಾಹತು ಕಾಲೋನಿ ಮಾಡಿಕೊಂಡಂತೆ ಈ ಕಾಲದಲ್ಲಿ ಭಾರತ ದೊಡ್ಡ ವಸಾಹತುಶಾಯಿಯಾಗಿ ಈತನ ದೇಶವನ್ನು ಕಾಲನಿ ಮಾಡಿಕೊಂಡು ಅದಕ್ಕೆ ‘ಸ್ಕಾಂಡಿನೇವಿಸ್ತಾನ್’ ಎಂದು ಹೆಸರಿಟ್ಟು ಅದನ್ನು ಆಳಲು ತೊಡಗುತ್ತದೆ. ಆಗ ಏನೇನೆಲ್ಲಾ ಸಂಭವಿಸುತ್ತದೆ ಎನ್ನುವುದು ಈತನ ಈ ಕಾದಂಬರಿಯ ವಸ್ತು. ‘ಚೆನ್ನಾಗಿದೆ ಮಾರಾಯಾ. ಇಂತದೆಲ್ಲಾ ವಸ್ತುಗಳು ನಿನ್ನ ತಲೆಗೆ ಹೇಗೆ ಹೊಳೆಯುತ್ತದೆ’ ಎಂದು ಕೇಳಿದೆ. ಆತ ಮಡದಿಯನ್ನು ನೋಡಿ ತಲೆ ಅಲ್ಲಾಡಿಸಿ ನಕ್ಕ.
ನಾವು ಬಹಳ ಹೊತ್ತು ಪರಸ್ಪರ ಸಂಸಾರದ , ಸಾಹಿತ್ಯದ, ಜಾಗತಿಕ ಸಾರ್ವತ್ರಿಕ ಸಂಗತಿಗಳ ಕುರಿತು ಹರಟೆ ಹೊಡೆಯುತ್ತಾ ಮಳೆ ನಿಲ್ಲುವುದನ್ನೇ ಕಾಯುತ್ತಿದ್ದೆವು. ಅವರಿಗೆ ಆದಷ್ಟು ಬೇಗ ಮನೆ ತಲುಪಿ ಬರೆಯಲು ಕೂರಬೇಕಿತ್ತು. ನಾನಾದರೋ ಒಂದು ನಾಡು ಕೋಳಿ ಮೊಟ್ಟೆಯನ್ನು ಬೇಯಿಸಲು ಇಟ್ಟು ಸ್ಟೌ ಆರಿಸಲು ಮರೆತು ಬಂದಿದ್ದೆ. ಆ ಮೊಟ್ಟೆಯ ಅವಸ್ಥೆ ಯೋಚಿಸಿ ನಗು ಬರುತ್ತಿತ್ತು. ಸಮಯ ಹೋಗಲು ನಾನು ಅವರಿಗೆ ಒಂದಕ್ಕಿಂತ ಒಂದು ವಿಚಿತ್ರವೂ, ಗಹನವೂ, ಕರುಣಾಜನಕವೂ ಆದ ಕಥೆಗಳನ್ನು ಹೇಳುತ್ತಿದ್ದೆ. ಅದನ್ನೆಲ್ಲ ಕೇಳುತ್ತಿದ್ದ ಮಡದಿ ‘ಅಲ್ಲಾ ಎಷ್ಟೆಲ್ಲ ಕಥೆಗಳನ್ನು ಹೇಳುತ್ತಿದ್ದೀಯಾ. ಇದನ್ನೆಲ್ಲ ಯಾಕೆ ಬರೆದಿಲ್ಲ’ ಎಂದು ಕೇಳಿದಳು. ‘ಬರೆದಿದ್ದೇನಲ್ಲಾ’ ಎಂದು ನಾನು ಆಕೆಗೆ ನಾ ಬರೆದ ಕತೆ ಕಾದಂಬರಿಗಳ ಹೆಸರುಗಳನ್ನು ಹೇಳಿದೆ ‘ಅಯ್ಯೋ ಇದೆಲ್ಲ ನಮಗೆ ಗೊತ್ತೇ ಇಲ್ಲವಲ್ಲಾ.ಯಾಕೆ ಇವುಗಳ ಬಗ್ಗೆ ಎಲ್ಲೂ ಚರ್ಚೆಯೇ ಆಗುವುದಿಲ್ಲಾ’ ಎಂದು ಆಕೆ ಕೇಳಿದಳು.
‘ಮಾರಾಯ್ತೀ ಅದಕ್ಕೆಲ್ಲ ತುಂಬಾ ಪುರುಸೊತ್ತು ಬೇಕಾಗುತ್ತದೆ. ಒಬ್ಬರನ್ನೊಬ್ಬರು ಹೊಗಳಬೇಕಾಗುತ್ತದೆ. ಉದಾಹರಣೆಗೆ ನಿನ್ನ ಗಂಡ ಆತನ ದೇಶಕ್ಕೆ ಹೋಗಿ ನನ್ನ ಕುರಿತು ಈತನ ದೇಶದಲ್ಲಿ ಈತನೇ ಏಕಮಾದ್ವಿತೀಯ ಬರಹಗಾರ ಅಂತ ಹೊಗಳಬೇಕಾಗುತ್ತದೆ. ನಾನೂ ಹಾಗೆಯೇ ನಿನ್ನ ಗಂಡನೇ ಆತನ ದೇಶದ ಅತ್ಯುನ್ನತ ಲೇಖಕ ಅಂತ ಇಲ್ಲೆಲ್ಲ ಡಂಗುರ ಹೊಡೆಯಬೇಕಾಗುತ್ತದೆ. ನಾನು ಆತನ ಬೆನ್ನನ್ನು ಕೆರೆಯುವುದು. ಆತ ನನ್ನ ಬೆನ್ನನ್ನು ಕೆರೆಯುವುದು.ಆತನ ಪುಸ್ತಕವನ್ನು ನಾನು ಪೂರ್ವೋತ್ತರ ಏಕಮಾದ್ವಿತೀಯ ಅನ್ನುವುದು ಆತನೂ ನನ್ನನ್ನು ಹಾಗೇ ಹೊಗಳುವುದು. ಅದು ನನಗೂ ಹಿಂಸೆ. ಆತನಿಗೂ ಹಿಂಸೆ. ಇದೆಲ್ಲ ಬೇಡ ಮಾರಾಯ್ತೀ. ಸುಮ್ಮನೆ ಇಲ್ಲಿ ಈ ಹೊತ್ತಲ್ಲಿ ಹೀಗೆ ಮಳೆ ನಿಲ್ಲುವುದನ್ನೇ ಕಾಯುತ್ತಾ ಗಲಗಲ ಹರಟುವುದು ಒಂದಿಷ್ಟೂ ಸುಸ್ತು ಮಾಡುವುದಿಲ್ಲ. ಅಲ್ವಾ’ ಎಂದೆ. ಆಕೆ ಎಲ್ಲ ಅರಿತ ಲೇಖಕಿಯಂತೆ ನೋಡುತ್ತಿದ್ದಳು. ಆತನೂ ಎಂದಿನ ಹಾಗೆ ನಗುತ್ತಿದ್ದ. ಅಷ್ಟು ಹೊತ್ತಿಗೆ ಮಳೆಯೂ ನಿಂತು ಗಾಳಿ ಬೀಸಲು ತೊಡಗಿತು.
(ಫೋಟೋಗಳೂ ಲೇಖಕರವು)
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.