ಆರಂಭದಲ್ಲಿ ಮಗುವಿನ ಭಾಷೆಯಲ್ಲದೆ ಬೇರೆ ಭಾಷೆಯಲ್ಲಿ ಕಲಿಸುವ ವಿಚಾರಗಳು ಮಗುವಿಗೆ ಆಪ್ತವಾಗುವುದಿಲ್ಲ. ಬೇರೆ ಭಾಷೆಯಿಂದ ತಿಳುವಳಿಕೆ ಸಿಗಬಹುದು, ಒಳ್ಳೆಯ ನೌಕರಿ ಸಿಗಬಹುದು; ಬದುಕಿನ ರುಚಿ ಸಿಗುವುದಿಲ್ಲ. ನೆನಪಿರಲಿ ಮಗು ಕನ್ನಡ ಕಲಿತಿದೆ ಅಂದರೆ ಬರೀ ಭಾಷೆ ಕಲಿಯುತ್ತಿದೆ ಎಂದರ್ಥವಲ್ಲ; ಕನ್ನಡದ ಸಂಸ್ಕೃತಿಯನ್ನು ಕಲಿಯುತ್ತಿದೆ ಎಂದರ್ಥ. ನಾವು ಭಾಷೆ ಬಿಟ್ಟ ದಿನ ಭಾಷೆಯ ಸಂಸ್ಕೃತಿಯೂ ನಮ್ಮನ್ನು ಬಿಟ್ಟು ಹೋಗುತ್ತದೆ ‘ಬಾಲ್ಯದಲ್ಲಿ ಕಲಿತದ್ದೇ ಬದುಕಿನಲ್ಲಿ ಉಳಿಯುವುದರಿಂದ ಮಕ್ಕಳಿಗೆ ಕನ್ನಡ ಸಂಸ್ಕಾರ ಕಲಿಸಬೇಕು’ ಎಂದಿದ್ದಾರೆ ಚೆನ್ನವೀರ ಕಣವಿಯವರು.
ಕನ್ನಡ ರಾಜ್ಯೋತ್ಸವದ ನಿಮಿತ್ತ ಯಾವುದೇ ಕಲಿಕೆಗೂ ಮಾತೃಭಾಷೆ ಮಕ್ಕಳಿಗೆ ಎಷ್ಟು ಮುಖ್ಯ ಎಂಬುದರ ಕುರಿತು ಸದಾಶಿವ ಸೊರಟೂರು ಬರಹ ನಿಮ್ಮ ಓದಿಗೆ
ಮೊನ್ನೆಯಷ್ಟೆ ಗೆಳೆಯರ ಮನೆಗೆ ಹೋಗಿದ್ದೆ. ಸಂಜೆ ಶಾಲೆಯಿಂದ ಬಂದ ಅವರ ಪುಟಾಣಿ ಮಗುವಿನ ಪಾದಗಳು ಗಾಯಗಳಾಗಿ, ಊದಿ ಕೆಂಪಾಗಿದ್ದವು. ಕಾರಣ ಕೇಳಿದೆ. ಪುಟಾಣಿ ಹೊಸ ಬೂಟು ತೊಟ್ಟು ಶಾಲೆಗೆ ಹೋಗಿದ್ದಾಳೆ. ಬೂಟುಗಳು ಬಿಗಿಯಾಗಿವೆ. ಆ ಮಗುವಿಗೆ ಅದನ್ನು ಅವರ ಮಿಸ್‌ಗೆ ಇಂಗ್ಲಿಷ್‌ನಲ್ಲಿ ಹೇಳಲು ಬಂದಿಲ್ಲ. ಕನ್ನಡದಲ್ಲಿ ಮಾತನಾಡುವಂತಿಲ್ಲ. ಮಾತಾಡಿದರೆ ದಂಡನೆ ಇದೆ. ಮಗು ಸಂಜೆವರೆಗೂ ಬೂಟು ತೊಟ್ಟು ಸಹಿಸಿಕೊಂಡಿದೆ. ಪಾದಗಳು ಗಾಯಗಳಾಗಿವೆ. ಅವು ಬರೀ ಪಾದಗಳಲ್ಲ, ನಮ್ಮ ಮಕ್ಕಳ ಮನಸುಗಳು. ಹೇರುತ್ತಿರುವ ಭಾಷೆಯ ಒತ್ತಡದಿಂದ ಮಕ್ಕಳ ಮನಸಿನಲ್ಲಿ ಇಂತಹ ಎಷ್ಟೊಂದು ಗಾಯಗಳಾಗಿರಬಹುದೆಂದು ಊಹಿಸಿದೆ.
ಆ ಮಗುವಿನ ಕಾಲಿಗೆ ತುಂಬಾ ನೋವಿದೆ. ಹೇಳಿಕೊಳ್ಳಲು ತನ್ನದೆ ಮಾತಿದೆ. ಆದರೆ ಆ ಮಾತು ಆಡುವಂತಿಲ್ಲ. ಅದನ್ನು ಕೇಳಿಸಿಕೊಳ್ಳಲು ಸಿದ್ಧರಿಲ್ಲ. ನೋವಾಗಲಿ, ನಲಿವಾಗಲಿ ಹೊರಬೀಳೋದು ಮಗುವಿನ ಮೂಲ ಭಾಷೆಯಲ್ಲಿಯೇ ಎಂಬುದು ಯಾರಿಗೆ ತಾನೇ ಗೊತ್ತಿಲ್ಲ? ಮುಳ್ಳು ಚುಚ್ಚಿದಾಗ ನಾವು ಅಮ್ಮನನ್ನು ಕರೆಯಲು ಎಂದಾದರೂ ಪದಗಳನ್ನು ಹುಡುಕಿದ್ದೇವೆಯೇ?
ನನ್ನದೆ ತರಗತಿಯ ದೊಡ್ಡ ಮಕ್ಕಳು ಇದಕ್ಕಿಂತ ಭಿನ್ನವಲ್ಲ. ಅದು ಇಂಗ್ಲಿಷ್ ಮಾಧ್ಯಮದ ತರಗತಿ. ಕನ್ನಡ ವಿಷಯ ಬೋಧಿಸುವಾಗ ಅವರ ಮುಖದಲ್ಲಿ ಕಾಣುವ ಕಳೆ, ಲವಲವಿಕೆ ಇಂಗ್ಲಿಷ್ ಆಗಲಿ ಮತ್ತೊಂದು ಭಾಷೆಯನ್ನು ಕಲಿಸುವಾಗ ಇರುವುದಿಲ್ಲ. ಕನ್ನಡ ಅವರಲ್ಲಿ ಆಸಕ್ತಿ, ಉತ್ಸಾಹ ಹಾಗೂ ಸಂಭ್ರಮಗಳನ್ನು ತಂದಿತ್ತರೆ, ಇಂಗ್ಲಿಷ್ ಅವರನ್ನು ಮೌನಿಯಾಗಿಸುತ್ತದೆ. ಅವರ ಮುಖಗಳು ಯಾವುದೊ ಸಂಕಟದಲ್ಲಿ ಸಿಕ್ಕಿಹಾಕಿಕೊಂಡವರಂತೆ ಕಾಣುತ್ತವೆ. ತುಟಿ ಬಿಚ್ಚಿ ನಿರರ್ಗಳವಾಗಿ ಮಾತಾಡಲು ಹೆದರುತ್ತಾರೆ. ಅವರದಲ್ಲದ ಭಾಷೆ ಅವರನ್ನು ಬಂಧಿಸಿದೆ.
ಆರಂಭದಲ್ಲಿ ಮಗುವಿನ ಭಾಷೆಯಲ್ಲದೆ ಬೇರೆ ಭಾಷೆಯಲ್ಲಿ ಕಲಿಸುವ ವಿಚಾರಗಳು ಮಗುವಿಗೆ ಆಪ್ತವಾಗುವುದಿಲ್ಲ. ಬೇರೆ ಭಾಷೆಯಿಂದ ತಿಳುವಳಿಕೆ ಸಿಗಬಹುದು, ಒಳ್ಳೆಯ ನೌಕರಿ ಸಿಗಬಹುದು; ಬದುಕಿನ ರುಚಿ ಸಿಗುವುದಿಲ್ಲ. ಬಾಲ್ಯದಲ್ಲಿ ಏನೇ ಕಲಿಸಿದರೂ ತಾಯಿ ಭಾಷೆಯಲ್ಲಿ ಕಲಿಸುವುದು ಹೆಚ್ಚು ಪರಿಣಾತ್ಮಕವಾದದ್ದು. ನೆನಪಿರಲಿ ಮಗು ಕನ್ನಡ ಕಲಿತಿದೆ ಅಂದರೆ ಬರೀ ಭಾಷೆ ಕಲಿಯುತ್ತಿದೆ ಎಂದರ್ಥವಲ್ಲ; ಕನ್ನಡದ ಸಂಸ್ಕೃತಿಯನ್ನು ಕಲಿಯುತ್ತಿದೆ ಎಂದರ್ಥ. ನಾವು ಭಾಷೆ ಬಿಟ್ಟ ದಿನ ಭಾಷೆಯ ಸಂಸ್ಕೃತಿಯೂ ನಮ್ಮನ್ನು ಬಿಟ್ಟು ಹೋಗುತ್ತದೆ ‘ಬಾಲ್ಯದಲ್ಲಿ ಕಲಿತದ್ದೇ ಬದುಕಿನಲ್ಲಿ ಉಳಿಯುವುದರಿಂದ ಮಕ್ಕಳಿಗೆ ಕನ್ನಡ ಸಂಸ್ಕಾರ ಕಲಿಸಬೇಕು’ ಎಂದಿದ್ದಾರೆ ಚೆನ್ನವೀರ ಕಣವಿಯವರು.
ಮಕ್ಕಳು ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯುವುದಕ್ಕೆ ಯಾವುದೇ ತಕರಾರುಗಳಿರಬಾರದು ನಿಜ. ಆದರೆ, ಮೊದಲು ಯಾವ ಭಾಷೆಯ ಮೂಲಕ ಕಲಿಯಬೇಕು ಎಂಬುದು ನಮಗೆ ಸ್ಪಷ್ಟವಿರಬೇಕು. ದೊಡ್ಡವರಾದ ಮೇಲೆ ಬರೀ ಒಡನಾಟದಲ್ಲೇ ನಾವು ಹಲವು ಭಾಷೆ ಕಲಿತುಬಿಡಬಹುದು. ನಮ್ಮ ಭಾಷೆಯನ್ನು ಚೆನ್ನಾಗಿ ಕಲಿಯದ ಹೊರೆತು ಬೇರೆ ಯಾವ ಕಲಿಕೆಯೂ ಪರಿಣಾಮಕಾರಿಯಾಗದು.
ದಕ್ಷಿಣ ಆಫ್ರಿಕದಲ್ಲಿ ಮನೆಯ ಭಾಷೆ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಒದಗಿಸಿದ ಪ್ರಾಥಮಿಕ ಶಿಕ್ಷಣದ ಪರಿಣಾಮದ ಬಗ್ಗೆ 2007 ರಿಂದ 2011 ರವರೆಗೆ ಒಂದು ಸಂಶೋಧನೆ ನಡೆಯಿತು. ಸುಮಾರು 9೦೦೦ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಬಡ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿತ್ತು. ಅಧ್ಯಯನದ ಒಂದನೇ ಗುಂಪಿನ ಮಕ್ಕಳು ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಕಲಿತವರು, ಎರಡನೇ ಗುಂಪಿನ ಮಕ್ಕಳು ಮನೆಯ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿರವವರು. ಆದರೆ ಈ ಎರಡನೆ ಗುಂಪಿನ ಮಕ್ಕಳಿಗೆ ನಾಲ್ಕನೆಯ ತರಗತಿಯಿಂದ ಇಂಗ್ಲಿಷ್ ಕಲಿಸಲಾಗಿತ್ತು. ಎರಡನೆ ಗುಂಪಿನಲ್ಲಿದ್ದ ನಾಲ್ಕು, ಐದು ಮತ್ತು ಆರನೆಯ ತರಗತಿಗಳಿಗೆ ಅನ್ವಯಿಸುವಂತಹ ಇಂಗ್ಲಿಷ್ ಭಾಷಾ ಮಟ್ಟದ ಪರೀಕ್ಷೆಗಳಲ್ಲಿ ಈ ಎರಡನೇ ಗುಂಪುಗಳ ಫಲಿತಾಂಶ ಉಂಟುಮಾಡಿದ ಅಚ್ಚರಿಯ ಸಂಗತಿಯೆಂದರೆ ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷೆ ಕಲಿತ ಮಕ್ಕಳಿಗಿಂತ ಮೊದಲ ಭಾಷೆಯಲ್ಲಿ ಶಿಕ್ಷಣ ನೀಡಲಾಗಿದ್ದ ಮಕ್ಕಳ ಇಂಗ್ಲಿಷ್ ಭಾಷಾ ಜ್ಞಾನ ಮೂರೂ ತರಗತಿಗಳಲ್ಲಿ ಉತ್ತಮವಾಗಿತ್ತು.
ಕನ್ನಡ ವಿಷಯ ಬೋಧಿಸುವಾಗ ಅವರ ಮುಖದಲ್ಲಿ ಕಾಣುವ ಕಳೆ, ಲವಲವಿಕೆ ಇಂಗ್ಲಿಷ್ ಆಗಲಿ ಮತ್ತೊಂದು ಭಾಷೆಯನ್ನು ಕಲಿಸುವಾಗ ಇರುವುದಿಲ್ಲ. ಕನ್ನಡ ಅವರಲ್ಲಿ ಆಸಕ್ತಿ, ಉತ್ಸಾಹ ಹಾಗೂ ಸಂಭ್ರಮಗಳನ್ನು ತಂದಿತ್ತರೆ, ಇಂಗ್ಲಿಷ್ ಅವರನ್ನು ಮೌನಿಯಾಗಿಸುತ್ತದೆ. ಅವರ ಮುಖಗಳು ಯಾವುದೊ ಸಂಕಟದಲ್ಲಿ ಸಿಕ್ಕಿಹಾಕಿಕೊಂಡವರಂತೆ ಕಾಣುತ್ತವೆ. ತುಟಿ ಬಿಚ್ಚಿ ನಿರರ್ಗಳವಾಗಿ ಮಾತಾಡಲು ಹೆದರುತ್ತಾರೆ. ಅವರದಲ್ಲದ ಭಾಷೆ ಅವರನ್ನು ಬಂಧಿಸಿದೆ.
ಕೆನಡದ ಭಾಷಾ ಶಿಕ್ಷಣ ತಜ್ಞ ಜಿಂ ಕುಮಿನ್ಸ್ ಅವರು ಹೇಳುವಂತೆ ಎರಡನೆಯ ಭಾಷೆಯು ಪ್ರಾರಂಭಿಕ ಶಿಕ್ಷಣದ ಮಾಧ್ಯಮವಾಗಿದ್ದಂತಹ ಸಂದರ್ಭಗಳಲ್ಲಿ ಮೊದಲ ಭಾಷೆಯ ಪ್ರಭಾವ ಅಧಿಕವಾಗಿಯೇ ಇರುತ್ತದೆ. ಅಂದರೆ, ಮಗುವಿಗೆ ಮೊದಲ ಭಾಷೆಯ ಪದಪರಿಚಯ, ಬಳಕೆ ಮತ್ತು ಅನ್ವಯಿಕೆಯ ಶಕ್ತಿಯೂ ಉತ್ತಮವಾಗಿದ್ದಲ್ಲಿ ಮಾತ್ರ ಕಲಿಕೆ ಸರಾಗ ಮತ್ತು ಹೆಚ್ಚು ಧೃಡ.
ಮಕ್ಕಳ ಹಿತದೃಷ್ಟಿಯಿಂದ ಪ್ರಾಥಮಿಕ ಮಟ್ಟದಲ್ಲಿ ನಾವು ಕೊಡುವ ಶಿಕ್ಷಣದ ಮಾಧ್ಯಮವು ಮೊದಲ ಭಾಷೆಯಲ್ಲಿಯೇ ಇದ್ದರೆ ಉತ್ತಮ. ಮಕ್ಕಳ ಸಂಜ್ಞಾನಾತ್ಮಕ ಶಕ್ತಿಗಳು ತಾಯಿ ಭಾಷೆಯ ಮೂಲಕ ಬೇಗ ಮಿದುಳು, ಮನಸು, ನುಡಿಯ ಮೂಲಕ ಬಂದುಬಿಟ್ಟಿರುತ್ತದೆ ಎಂದು ಅಧ್ಯಯನ ಒಂದು ಹೇಳುತ್ತದೆ.
ಮಾನವ ತನ್ನ ಮೊದಲ ಐದು ವರ್ಷಗಳಲ್ಲೇ ಪರಿಸರದಿಂದ ಪ್ರತಿಶತ ತೊಂಬತ್ತೈದರಷ್ಟು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವನು; ಈ ಅವಧಿಯಲ್ಲಿ ಅವನ ಸುಪ್ತಮನಸ್ಸು ಕಂಡೀಷನ್ಡ್ ಆಗಿ, ಆ ರೂಢಿಯಾದ ಕಟ್ಟುಪಾಡುಗಳಿಗೊಳಪಟ್ಟು ಉಳಿದ ಜೀವನವನ್ನು ಕಳೆಯುವನು ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ.
ಐದು ವರ್ಷದವರೆಗೆ ನಮ್ಮ ಮಕ್ಕಳು ಹೇಗೆ ಬೆಳೆಯುತ್ತಾರೆ ಎಂಬುದನ್ನು ಪರಿಭಾವಿಸಿದರೆ, ನಮ್ಮ ಸಮಾಜ ಹೇಗೆ ಬದಲಾಗಬಹುದೆಂದು ಊಹಿಸಬಹುದು. ತನ್ನದಲ್ಲದ ಭಾಷೆಯನ್ನು ಆರಂಭದಲ್ಲಿ ಹೇರುವುದರಿಂದ ಯಾವುದೇ ಲಾಭಗಳಿಲ್ಲ. ಮೂಲ ಭಾಷೆಯಿಂದಲೇ ಮಗುವಿನ ಕಲಿಕೆ ಶುರುವಾಗಬೇಕು ಅದೇ ಸರಿ ಮತ್ತು ಅದೇ ವೈಜ್ಞಾನಿಕವಾದದ್ದು. ಅದು ಮುಂದೆ ಮಗು ಕಲಿಯುವ ಎಲ್ಲಾ ಭಾಷೆಗಳಿಗೂ ಸಹಾಯವಾಗುವುದರಲ್ಲಿ ಅನುಮಾನವೇ ಇಲ್ಲ.
ನಾವು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಕೊಡುವ ಅತ್ಯುತ್ತಮ ಉಡುಗೊರೆಯೆಂದರೆ ಅದರ ತಾಯಿ ಭಾಷೆಯಲ್ಲಿ ಕಲಿಯಲು ಅವಕಾಶ ಕೊಡುವುದು. ಸುಪ್ರೀಂ ಕೋರ್ಟ್ ಭಾಷೆ ಮಾಧ್ಯಮದ ಆಯ್ಕೆಯನ್ನು ಪೋಷಕರ ಹೆಗಲಿಗೆ ಹಾಕಿದೆ. ಪೋಷಕರಿಗೆ ಬಲ ಬಂದಂತಾಗಿದೆ. ಆದರೆ ನಿಜಕ್ಕೂ ನಾವು ಮಗುವಿನ ಆರಂಭದ ಕಲಿಕೆಯನ್ನು ಮೂಲಭಾಷೆಯಲ್ಲೆ ಕೊಡುವುದು ಹೆಚ್ಚು ಪರಿಣಾಮಕಾರಿಯಾದದ್ದು. ಎಲ್ಲವನ್ನೂ ಕಾನೂನು ಮೂಲಕವೇ ಮಾಡಲಾಗುವುದಿಲ್ಲ. ನೆನಪಿರಲಿ, ನಾವು ನಾಳೆಗಳ ಬಗ್ಗೆ ಯೋಚಿಸುವುದು ಎಂದರೆ ಮಕ್ಕಳ ಬಗ್ಗೆ ಯೋಚಿಸುವುದೇ ಆಗಿದೆ.
ಸದಾಶಿವ ಸೊರಟೂರು ಅವರು ಹುಟ್ಟಿದ್ದು ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಇವರ ಹಲವಾರು ಲೇಖನಗಳು, ಕತೆ, ಕವನ, ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಹೆಸರಿಲ್ಲದ ಬಯಲು’ ಮತ್ತು ‘ ತೂತು ಬಿದ್ದ ಚಂದಿರ’ (ಕವನ ಸಂಕಲನ) ಹಾಗೂ ಕನಸುಗಳಿವೆ ಕೊಳ್ಳುವವರಿಲ್ಲ ಭಾಗ ೧ ಮತ್ತು ಭಾಗ ೨. ಹೊಸ್ತಿಲಾಚೆ ಬೆತ್ತಲೆ (ಪ್ರಕಟಿತ ಲೇಖನಗಳ ಕೃತಿಗಳು) ಇವರ ಪ್ರಕಟಿತ ಕೃತಿಗಳು.