ಇನ್ನೇನು ಪ್ರಗತಿ ಮೈದಾನ ಬಂದೇ ಬಿಟ್ಟಿತು, ದೆಹಲಿಗೆ ತುಂಬಾ ಹತ್ತಿರ ಆದೆವು ಅನಿಸುವಷ್ಟರಲ್ಲಿ ಮುಖ್ಯ ಮಂತ್ರಿಗಳಿಗೆ ಇದರಿಂದ ಆಗುವ ಪರಿಸರ ಎಡವಟ್ಟಿನ ಬಗ್ಗೆ ಮತ್ತು ಬೆಂಗಳೂರಿಗೆ ಆಗುವ ಹಾನಿಯನ್ನು ಕುರಿತು ಯಾರೋ ಮಹಾನುಭಾವರು ಅರಿವು ಮೂಡಿಸಿದರು. ಅದರಿಂದ ಆದ ದೊಡ್ಡ ಪ್ರಯೋಜನ ಅಂದರೆ ಕನಸಿನ ಯೋಜನೆ ನನಸಾಗದೇ ಇಂದಿಗೂ ಕೆರೆ ಉಳಿದಿರುವುದು ಮತ್ತು ಐದಾರು ವರ್ಷ ಹಿಂದೆ bel ಸಂಸ್ಥೆ ಕೆರೆಯ ಅಭಿವೃದ್ಧಿಗೆ ಕೈ ಹಾಕಿರುವುದು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ

ಇಪ್ಪತ್ತನೇ ಸಂಚಿಕೆಗೆ ನನ್ನ ಹೈಸ್ಕೂಲ್ ಸಹಪಾಠಿ ಶ್ರಿಮತಿ ಚಂದ್ರಿಕಾ ಅವರು ತಮ್ಮ ಅನುಭವ ಹೀಗೆ ಹಂಚಿಕೊಂಡಿದ್ದಾರೆ…
ಗೋಪಿ ನನ್ನ ಅನುಭವ ಕೇಳಿ.

ಸಾಮಾನ್ಯವಾಗಿ ನಮ್ಮಲ್ಲಿ ಹೆಂಗಸರು ಸ್ಮಶಾನಗಳಿಗೆ ಹೋಗುವುದಕ್ಕೆ ನಿರ್ಬಂಧವಿದೆ. ಆದರೆ ನನಗೆ ಒಮ್ಮೆ. ಹೋಗಲೇಬೇಕಾದ ಅನಿವಾರ್ಯತೆ ಬಂದಿತು. ನನ್ನ ಆತ್ಮೀಯರಾಗಿದ್ದ ದಂಪತಿಗಳು ಕಂಚಿಯ ಬಳಿ ಅಪಘಾತಕ್ಕೊಳಗಾಗಿ, ಇಬ್ಬರೂ ಮೃತರಾದರು. ಮದುವೆಯಾಗಿ ಬಹಳ ವರ್ಷಗಳ ಮೇಲೆ ಹುಟ್ಟಿದ, ಸುಮಾರು 4 ವರ್ಷಗಳ ಹೆಣ್ಣು ಮಗು ಇತ್ತು. ಸುದ್ದಿ ಸಿಕ್ಕ ತಕ್ಷಣ ನಾನು ಮತ್ತು ಇನ್ನೊಬ್ಬರು ಸ್ನೇಹಿತೆ ಜೊತೆಯಾಗಿ ಚೆನ್ನೈಗೆ ಹೋದೆವು. ಸ್ನೇಹಿತೆಯ ತಂಗಿಯ ಮನೆಯ ರಸ್ತೆಯಲ್ಲಿಯೇ ಇದ್ದ ಸ್ಮಶಾನಕ್ಕೆ ಪಾರ್ಥಿವ ಶರೀರ ಬರುವುದು ಖಚಿತವಾಗಿತ್ತು. ಸರಿ ಇಬ್ಬರೂ ಹೋದೆವು. ನನಗೆ ಮನಸ್ಸಿನಲ್ಲಿ ಅಳುಕು ತಪ್ಪಿತಸ್ಥ ಮನೋಭಾವ. ಆದರೂ ಹೇಗೋ ಧೈರ್ಯ ತಂದುಕೊಂಡು ಕಾಯುತ್ತ ಇದ್ದೆವು. ಕುಳಿತುಕೊಳ್ಳಲು ಭಯ. ನನ್ನ ಸ್ನೇಹಿತೆ ಕಾರವಾರದವರು. ಅವರಲ್ಲಿ ಹೆಂಗಸರು ಕಡ್ಡಾಯವಾಗಿ ಹೋಗುತ್ತಾರಂತೆ. ಹಾಗಾಗಿ ಆರಾಮವಾಗಿದ್ದರು. ನಮ್ಮ ಕಣ್ಣು ಮುಂದೆಯೇ ಬೇರೆ 4 ಶವಗಳ ಅಂತ್ಯ ಸಂಸ್ಕಾರ ನಡೆಯಿತು. ಇವರದು ತಡವಾಗಿ ಬಂತು. ಅಷ್ಟು ಹೊತ್ತಿಗಾಗಲೇ ನನ್ನಲ್ಲಿದ್ದ ಧೈರ್ಯವೆಲ್ಲಾ ಹುದುಗಿ ಹೋಗಿತ್ತು. ಮುಖದರ್ಶನ ಮಾಡಿದ ನಂತರ ಸುಮಾರು ಎಲ್ಲರೂ ಹೊರಟು ಹೋದರು. ನನ್ನ ಸ್ನೇಹಿತೆ ಬರಲು ಒಪ್ಪಲಿಲ್ಲ. ಅಗ್ನಿ ಸ್ಪರ್ಶವಾಯಿತು ಆಗಲೂ ಬರಲಿಲ್ಲ. ನನಗೆ ನೋಡಲು ಸಾಧ್ಯವಾಗದೇ ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಂತೆ. ಅಲ್ಲಿ ನಿಲ್ಲಲೂ ಭಯ ಒಬ್ಬಳೇ ಹೊರಗೆ ಬರಲೂ ಭಯ. ನನ್ನ ಸ್ನೇಹಿತೆ ಅದರ ಪಕ್ಕದಲ್ಲಿಯೇ ಹೋಗಿ ನಿಂತರು. ಏನೂ ಮಾಡಲಾಗದೆ ಅವರು ಬಂದ ಮೇಲೆ ಮನೆಗೆ ವಾಪಸ್ಸಾದೆವು. ರಾತ್ರಿ ಬಸ್ಸಿಗೆ ವಾಪಸ್ ಹೊರಟೆವು. ನಿದ್ರೆ ಮಾಡಲಾಗದೇ ಗೋರಿಗಳ ದರ್ಶನವಾಗುತ್ತಿರುವ ಭಾಸವಾಗುತ್ತಿತ್ತು. ತಪ್ಪಿತಸ್ಥ ಮನೋಭಾವ ಕಾಡುತ್ತಿತ್ತು. ಇಂದಿಗೂ ಮೈ ಜುಂ ಅನ್ನಿಸುತ್ತೆ.

ಅದಾದ ಮೇಲೆ ಮತ್ತೆ ಒಂದೆರಡು ಸಲ ಸ್ಮಶಾನಕ್ಕೆ ಹೋಗಬೇಕಾಗಿ ಬಂದಿತು. ಆಮೇಲೆ ಹೋಗುವ ಸಾಹಸ ಮಾಡುತ್ತಿಲ್ಲ. ಸ್ವಂತ ತಂಗಿ ತೀರಿಕೊಂಡಾಗಲೂ ನಿರಾಕರಿಸಿದೆ. ಆದರೂ ತಪ್ಪು ಮಾಡಿದೆನಾ ಅನ್ನಿಸುತ್ತೆ.
ಇದಕ್ಕೆ ನನ್ನ ಉತ್ತರ…..

ಸ್ಮಶಾನಗಳಿಗೆ ಹೆಂಗಸರು ಹೋಗುವುದು ನಮ್ಮಲ್ಲಿ ನಿಷಿದ್ಧ. ಕೆಲವರು ಯಾವುದೋ ಶಾಸ್ತ್ರ ಗ್ರಂಥಗಳನ್ನು ಉದ್ಧರಿಸಿ ಈ ನಿಷೇಧಕ್ಕೆ ತಾತ್ವಿಕ ಆಧಾರ ಕೊಡುತ್ತಾರೆ. ಆದರೆ ಬೇರೆ ಜಾತಿಯವರಿಗೆ ಈ ನಿಷೇಧ ಇಲ್ಲ. ಇದನ್ನು ಕುರಿತು ನನಗೆ ಆಪ್ತರಾದ ಹಿರಿಯ ಸಂಪ್ರದಾಯಸ್ಥರನ್ನು ವಿಚಾರಿಸಿದೆ. ಅವರು ನಮ್ಮ ಹೆಣ್ಣುಮಕ್ಕಳು ತುಂಬಾ ಸೌಮ್ಯವಾಗಿ ಬೆಳೆದಿರುತ್ತಾರೆ. ಬೇರೆ ಹೆಣ್ಣುಮಕ್ಕಳ ಹಾಗೆ ಮನೆಗಳಲ್ಲಿನ ಆಹಾರ ಪದ್ಧತಿಗಳೂ ಸಹ ಅವರ ಮಾನಸಿಕ ಬೆಳವಣಿಗೆಗೆ ನೆರವಾಗುತ್ತದೆ. ಈ ಕಾರಣಕ್ಕೆ ಅಂದರೆ ಹೆಣ್ಣುಮಕ್ಕಳ ಸ್ವಾಸ್ಥ್ಯ ಕಾಪಾಡಲು ಈ ಸಂಪ್ರದಾಯ ಮಾಡಿಕೊಂಡಿದ್ದಾರೆ…. ಎಂದು ಹೇಳಿದರು. ಅವರ ಮಾತು ಸರಿ ಇರಬಹುದು ಅನಿಸಿತು. ಸುಮಾರು ಶವಸಂಸ್ಕಾರಗಳಿಗೆ ಸ್ಮಶಾನಕ್ಕೆ ಹೋಗಿದ್ದೇನೆ. ಅಲ್ಲಿ ಯಾರೂ ನಮ್ಮ ಜಾತಿಯ ಹೆಂಗಸರನ್ನು ನೋಡಿಲ್ಲ.

ಬಹುಶಃ ನಿಮ್ಮ ಹುಟ್ಟಿನಿಂದಲೇ ಈ ಮೈಂಡ್ ಸೆಟ್ ನಿಮ್ಮಲ್ಲಿ ಹುಟ್ಟುವುದರಿಂದ ನಿಮಗೆ ಗಿಲ್ಟ್ ಕಾಡುತ್ತಿರಬಹುದು. ಅದರ ಬಗ್ಗೆ ಚಿಂತೆ ಬಿಡಿ. ನಮಗೆ ನಾವು ಪ್ರಾಮಾಣಿಕ ರಾಗಿದ್ದು ನಮ್ಮ ನಡೆ ನುಡಿ ಮತ್ತೊಬ್ಬರಿಗೆ ನೋವು ಮಾಡದಿದ್ದರೆ ನಮಗಿಂತ ಸಾಧು ಬೇರೆ ಯಾರೂ ಇಲ್ಲ .

ಅರವತ್ತರ ದಶಕದ ಆರಂಭದಲ್ಲಿ ಬೆಂಗಳೂರಿನಲ್ಲಿ ಪಾರ್ಕ್ ಅಥವಾ ಉದ್ಯಾನವನಗಳ ಬಗ್ಗೆ ಈಗಿರುವ ಹಾಗೆ ಆಳವಾದ ಆಪ್ತತೆ, ಕಾಳಜಿ ಮತ್ತು ಪ್ರೀತಿ ಅಷ್ಟಾಗಿ ಇರಲಿಲ್ಲ. ಉದ್ಯಾನ ನಗರಿ ಬೆಂಗಳೂರು ಎನ್ನುವ ಹೆಸರು ಇತ್ತಾದರೂ ಬೆಂಗಳೂರಿನ ಆಗಿನ ಹೆಸರುಮಾಡಿದ ಸುಪ್ರಸಿದ್ಧ ಉದ್ಯಾನವನಗಳು ಅಂದರೆ ಲಾಲ್ ಬಾಗ್, ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್, ಕಬ್ಬನ್ ಪಾರ್ಕ್ ಅಷ್ಟೇ! ಕಂಟ್ರೋಮೇಂಟ್ ಕಡೆ ಅಲಸೂರು, ಬಸವನ ಗುಡಿ ಬ್ಯೂಗಲ್ ರಾಕ್ (ಕಹಳೆ ಬಂಡೆ) ಅಷ್ಟೇ. ಈಗಿನ ಬಹು ಫೇಮಸ್ ಪಾರ್ಕ್‌ಗಳು ಅನಿಸಿದ ಮತ್ತಿಕೆರೆಯ ಜೇಪಿ ಪಾರ್ಕ್, ಜಯನಗರದ ಲಕ್ಷ್ಮಣ ರಾವ್ ಪಾರ್ಕ್ ಮುಂತಾದವು ನಂತರ ಜನ್ಮ ತಳೆದವು. ಸಂಪೂರ್ಣ ಯೋಜಿತ ಬಡಾವಣೆಯಯಾಗಿ ರೂಪುಗೊಂಡ ರಾಜಾಜಿನಗರದಲ್ಲಿ CITB ಕೆಲವು ಸ್ಥಳಗಳನ್ನು CA ನಿವೇಶನ ಎಂದು ಗುರುತು ಮಾಡಿತ್ತು. ಹಾಗಿದ್ದರೂ ಹೀಗೆ ಗುರುತು ಮಾಡಿದ ಜಾಗಗಳು ಉದ್ಯಾನವನ ಆಗಲಿಲ್ಲ. ಬಹುಶಃ ಸಿಕ್ಕಾಪಟ್ಟೆ ಖಾಲಿ ಖಾಲೀ ಜಾಗ ಇದ್ದು ಈಗಿನ ಹಾಗೆ lung space ಗೆ ಒದ್ದಾಡ ಬೇಕಾದ ಪರಿಸ್ಥಿತಿಗೆ ಬೆಂಗಳೂರು ತಲುಪಿರಲಿಲ್ಲ. ಹಾಗೆ ನೋಡಿದರೆ lung space ಎನ್ನುವ ಪದ ಮೊದಲು ಕೇಳಿಸಿದ್ದು ತೊಂಬತ್ತರ ದಶಕದ ಅಂಚಿನಲ್ಲಿ. ಇದಕ್ಕೆ ಪುರಾವೆ ಅಂದರೆ ರಾಜಾಜಿನಗರದ ಮತ್ತು ಜಯನಗರದ ಕೆಲವು ಬ್ಲಾಕ್‌ಗಳಲ್ಲಿ ಈಗಲೂ ಪಾರ್ಕುಗಳು ಇಲ್ಲ. ಬಿಟ್ಟಿದ್ದ ಖಾಲಿ ಜಾಗಗಳು ಮುಂದೆ ದೇವಸ್ಥಾನಗಳಿಗೆ ಹಾದಿ ಕೊಟ್ಟವು ಮತ್ತು ಕೆಲವು ಆಟದ ಮೈದಾನಗಳು ಆದವು. ಮತ್ತು ಕೆಲವು ನೀರು ಸರಬರಾಜು ಇಲಾಖೆ ನುಂಗಿತು. ಮಲ್ಲೇಶ್ವರದ ಒಂದು ಮೈದಾನವನ್ನು ನುಂಗಿದ್ದು ನೀರು ಮತ್ತು ಒಳಚರಂಡಿ ಇಲಾಖೆ. ರಾಜಾಜಿ ನಗರದ ಒಂದು ಪಾರ್ಕ್‌ಅನ್ನು ನೀರು ಸರಬರಾಜು ಇಲಾಖೆ ಮುಕ್ಕಿತು. ಕೆಲವು ಪಾರ್ಕ್ ಅನ್ನು ನಮ್ಮ ಪಾಲಿಕೆಯ ವಿವಿಧ ಅಂಗಗಳು ಕಬಳಿಸಿದವು!

ನಮ್ಮ ಕೆರೆಗಳನ್ನು ಸಹ ಸರ್ಕಾರದ ಅಂಗ ಸಂಸ್ಥೆಗಳು ನುಂಗಿ ನೀರು ಕುಡಿದವು ಅಲ್ಲಿ ಐಷಾರಾಮಿ ಕಟ್ಟಡಗಳು, ಬಡಾವಣೆಗಳು ತಲೆ ಎತ್ತಿದವು. ಹೊರಗಿನಿಂದ ಬಂದ ಬಂಡವಾಳದಾರರಿಗೆ ನಮ್ಮ ಸರ್ಕಾರ ಕೆಂಪು ಹಾಸು ಹಾಸಿ ಆರತಿ ಎತ್ತಿ ಸ್ವಾಗತಿಸಿದವು. ನಮ್ಮ ಸರ್ಕಾರೀ ಅಧಿಕಾರಿಗಳು ವಾಂತಿ ಆಗುವಷ್ಟು ಲಂಚ ತಿಂದು ಕಾನೂನು ಮೀರಿ ಬೇಕಾದ ವ್ಯವಸ್ಥೆ ಕಲ್ಪಿಸಿದರು ಮತ್ತು ಅವರೂ ಎಲ್ಲೆ ಮೀರಿ ಕೊಬ್ಬಿದರು. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆ ಅಕ್ಷರಶಃ ನಿಜ ಮಾಡಿಬಿಟ್ಟರು. ನನಗೆ ಈಗಲೂ ತಮಾಷೆ ಅನಿಸುವುದು ಯಾವುದೇ ಪ್ಲಾನು, ಒಪ್ಪಿಗೆ… ಮೊದಲಾದ ಅವಶ್ಯಕ ದಾಖಲೆಗಳೇ ಇಲ್ಲದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಅದು ಹೇಗೋ ಬಂದಿರುತ್ತೆ. ಮನೆ ಕೆಡವಲು ಒಂದು ಇಲಾಖೆ ಮುನ್ನುಗ್ಗಿದ ಸಂದರ್ಭದಲ್ಲಿ ಸದರಿ ಮನೆಗೆ ಕೊಟ್ಟಿರುವ ವಿದ್ಯುತ್ ಸಂಪರ್ಕ, ಕಟ್ಟಿಸಿಕೊಂಡಿರುವ ತೆರಿಗೆ ಮೊದಲಾದ ಅಂಶಗಳು ಬೆಳಕಿಗೆ ಬರುತ್ತದೆ. ಅದು ಹೇಗೆ ಹೀಗೆ ಆಗುತ್ತದೆ ಎನ್ನುವ ಸಂದೇಹಕ್ಕೆ ಸರ್ಕಾರದ ಯಾವ ದೊಡ್ಡ ಚಿಕ್ಕ ಬ್ರಹ್ಮನ ಬಳಿಯಲ್ಲಿಯೂ ಉತ್ತರ ಸಿಗದು! ಒಂದೇ ತಾರಸಿ ಅಡಿ ಕೆಲಸ ಮಾಡುವ ಹಲವು ಇಲಾಖೆಗಳು ಹೀಗೆ ಲಯ ರಹಿತ ಕೆಲಸವನ್ನು ಲಾಗಾಯ್ತಿನಿಂದ ಮಾಡುತ್ತಿವೆ! ಮತ್ತು ಮುಂದೂ ಮಾಡುತ್ತವೆ. ಸಾರ್ವಜನಿಕರನ್ನು ಹಳ್ಳತಳ್ಳುತ್ತ…
ಕೆರೆಗೆ ಸಂಬಂಧ ಪಟ್ಟ ಹಾಗೆ..

ಒಂದು ವರದಿ: (28-ಜುಲೈ,2014 -1960ರಲ್ಲಿ ಬೆಂಗಳೂರಿನ ಸುತ್ತಮುತ್ತ ಸುಮಾರು 280 ಕೆರೆಗಳಿದ್ದವು. ಆದರೆ ಈಗ ಅವುಗಳ ಸಂಖ್ಯೆ ಇಪ್ಪತ್ತರ ಗಡಿ ದಾಟುವುದಿಲ್ಲ.) ಕೆಂಪೆಗೌಡರು ಕಟ್ಟಿಸಿದ್ದ ಸುಮಾರು 262 ಕೆರೆಗಳಲ್ಲಿ ಈಗ ಉಳಿದಿರುವವು ಕೇವಲ ಇಪ್ಪತ್ತು. ಅವುಗಳಲ್ಲಿಯೂ ಸಹ ಆರೋಗ್ಯವಂತ ಹಾಗೂ ಕುಡಿಯುವುದಕ್ಕೆ ಯೋಗ್ಯ ನೀರನ್ನು ಶೇಖರಿಸಿರುವ ಕೆರೆಗಳು ಬೆರಳೆಣಿಕೆಯಷ್ಟೂ ಇಲ್ಲ. ಸುಮಾರು 500 ವರ್ಷಗಳ ಹಿಂದೆ ಬೆಂಗಳೂರನ್ನು ನಿರ್ಮಿಸಿದ ಕೆಂಪೆಗೌಡರು ಭವಿಷ್ಯದ ಬೆಂಗಳೂರಿನ ಕುರಿತು ಯೋಚಿಸಿಯೆ ಕೆರೆಗಳನ್ನು ನಿರ್ಮಿಸಿ, ಒಂದು ಕೆರೆಯಿಂದ ಇನ್ನೊಂದು ಕೆರೆಗೆ ನೀರು ಹರಿಯುವಂತೆ ರಾಜಕಾಲುವೆಗಳನ್ನೂ ನಿರ್ಮಿಸಿದ್ದರು. ನಂತರದ ದಿನಗಳಲ್ಲಿ, ಕೆರೆಗಳು ಕ್ರಮೇಣ ಗಾಲ್ಫ್‌ ಕ್ಲಬ್‌, ಸ್ಟೇಡಿಯಂ ಹಾಗೂ ಬಸ್‌ ನಿಲ್ದಾಣಗಳಾಗಿ, ಅಪಾರ್ಟ್‌ಮೆಂಟ್‌ಗಳಾಗಿ ಬದಲಾಗುತ್ತಾ ಬಂದವು. ರಾಜ ಕಾಲುವೆ ಮೇಲೆ ಮನೆಗಳು ಬಂದವು. ಕಳೆದ ಶತಮಾನದಲ್ಲಿ ಅಂದರೆ, 1960 ರಲ್ಲಿ 262 ಕೆರೆಗಳಿದ್ದ ಬೆಂಗಳೂರು ಈಗ 81 ಕೆರೆಗಳಿಗೆ ಗಣನೀಯವಾಗಿ ಇಳಿದಿದೆ. ಇರುವ 81 ಕೆರೆಗಳಲ್ಲಿ ಇಂದು ಉಸಿರಾಡುತ್ತಿರುವವು ಕೇವಲ 34. ಇದು ಕಳೆದ ದಶಕದ ಸುದ್ದಿ. ಅದು ಈಗ ಇನ್ನೂ ಕ್ಷೀಣಿಸಿದೆ

(ಕಾಲಾನುಕ್ರಮದಲ್ಲಿ ಕಣ್ಮರೆಯಾದ, ಬೆಂಗಳೂರಿನ ಕೆರೆ/ಜಲಾಶಯಗಳು ಬದಲಾಯಿಸಿಕೊಂಡ ಹೆಸರುಗಳು ಹೀಗಿವೆ.
ಆವರಣದಲ್ಲಿ ಹಳೇ ಹೆಸರು. ಅದು ರೂಪಾಂತರಗೊಂಡದ್ದು ಆವರಣ ರಹಿತ
(ಶೂಲೆ ಕೆರೆ) ಫುಟ್ ಬಾಲ್ ಸ್ಟೇಡಿಯಂ
(ಅಕ್ಕಿ ತಿಮ್ಮನ ಹಳ್ಳಿ ಕೆರೆ) ಹಾಕಿ ಸ್ಟೇಡಿಯಂ
(ಸಂಪಂಗಿ ಕೆರೆ) ಕಂಠೀರವ ಸ್ಟೇಡಿಯಂ
(ಧರ್ಮಾಂಬುಧಿ ಕೆರೆ) ಕೆಂಪೇಗೌಡ ಬಸ್ ಸ್ಟ್ಯಾಂಡ್
(ಚಲ್ಲಘಟ್ಟ ಕೆರೆ) ಗಾಲ್ಫ್ ಮೈದಾನ
(ಕೋರಮಂಗಲದ ಕೆರೆ) ನ್ಯಾಷನಲ್ ಗೇಮ್ಸ್ ಕಾಂಪ್ಲೆಕ್ಸ್
(ಸಿದ್ಧಿಕಟ್ಟೆ ಕೆರೆ) ಕೃಷ್ಣರಾಜ ಮಾರುಕಟ್ಟೆ
(ಕಾರಂಜಿ ಕೆರೆ) ಗಾಂಧೀ ಬಜಾರ್
(ಕೆಂಪಾಬುಧಿ ಕೆರೆ) ಕೊಳಚೆ ನೀರು ಸಂಗ್ರಹಣಾ ಕೇಂದ್ರ
(ನಾಗಶೆಟ್ಟಿಹಳ್ಳಿ ಕೆರೆ) ಅಂತರಿಕ್ಷ /ಬಾಹ್ಯಾಕಾಶ ಇಲಾಖೆ
( ಕಾಡುಗೊಂಡನ ಹಳ್ಳಿ ಕೆರೆ) ಅಂಬೇಡ್ಕರ್ ಮೆಡಿಕಲ್ ಕಾಲೇಜ್
(ಡೊಮ್ಲೂರು ಕೆರೆ) ಬಿಡಿಎ ಬಡಾವಣೆ
(ಮಿಲ್ಲರ್ಸ್ ಕೆರೆ) ಗುರು ನಾನಕ್ ಭವನ
(ಸುಭಾಷ್ ನಗರ ಕೆರೆ) ವಸತಿ ಬಡಾವಣೆ
(ಕುರುಬರ ಹಳ್ಳಿ ಕೆರೆ) ಕುರುಬರ ಹಳ್ಳಿ ಬಡಾವಣೆ
(ಕೋಡಿ ಹಳ್ಳಿ ಕೆರೆ) ಕೋಡಿಹಳ್ಳಿ ಬಡಾವಣೆ
(ಸಿನಿವೈಗಳು ಕೆರೆ) ಬಡಾವಣೆ
(ಮಾರೇನ ಹಳ್ಳಿ ಕೆರೆ) ಬಡಾವಣೆ
(ಶಿವನ ಹಳ್ಳಿ ಕೆರೆ) ಬಸ್ ಸ್ಟ್ಯಾಂಡ್ ಮತ್ತು ಬಡಾವಣೆ
(ಚೆನ್ನಮ್ಮನ ಕೆರೆ) ಸ್ಮಶಾನ
(ಪುಟ್ಟೇನ ಹಳ್ಳಿ ಕೆರೆ) ಜೆಪಿ ನಗರ
(ಜಕ್ಕರಾಯನ ಕೆರೆ) ಆಟದ ಮೈದಾನ

ಇವಿಷ್ಟೂ ದಾಖಲಾಗಿರುವ ಸ್ಥಳಗಳು. ದಾಖಲೆಯೇ ಆಗದೆ ನುಂಗಿದ ಸಣ್ಣಪುಟ್ಟ ಹಳ್ಳ ಕೆರೆ ಕೊಳ್ಳಗಳ ಸಂಖ್ಯೆ ತಿಳಿಯದು. ಜಯನಗರದ ತಾಯಪ್ಪನ ಕೆರೆ ನಂತರ ಬಡಾವಣೆಯ ಭಾಗವಾಯಿತು. ಅದರ ಹೆಸರು ಉಳಿಸಿಕೊಂಡಿದ್ದು ಒಂದು ದೊಡ್ಡ ಕತೆ.

ಪಾರ್ಕ್ ಅಥವಾ ಉದ್ಯಾನವನದ ಕಲ್ಪನೆ ಹೊರಹೊಮ್ಮಿದ್ದು ಎಂಬತ್ತರ ದಶಕದಲ್ಲಿ. ಬೆಂಗಳೂರು ಈಗಿನ ಹಾಗೇ ಲಂಗು ಲಗಾಮು ಇಲ್ಲದೇ ಅಡ್ಡಾದಿಡ್ಡಿಯಾಗಿ ಬೆಳೆಯುತ್ತದೆ ಎಂದು ಊಹಿಸಿದ ಕೆಲವರು ಉದ್ಯಾನವನ ಬೆಳೆಸಲು ಮತ್ತು ಕೆರೆ ಉಳಿಸುವ ಯೋಜನೆ ಹಾಕಿಕೊಂಡರು. ಈ ವೇಳೆಗಾಗಲೇ ಬೆಂಗಳೂರಿನ ಸುಮಾರು ಕೆರೆಗಳು ಬಡಾವಣೆಗಳಾಗಿ ಮಾರ್ಪಾಟು ಹೊಂದಿದ್ದವು. ಲಕ್ಷ್ಮಣರಾವ್ ಸಮಿತಿ ನೇಮಕ ಆಗಿ ಅದು ಅಳಿದುಳಿದ ಕೆರೆಗಳ ಪಟ್ಟಿ ತಯಾರಿಸಿದವು. ಈ ವೇಳೆಗಾಗಲೇ ಸುಮಾರು ಕೆರೆ ಕುಂಟೆಗಳು ಬದಲಾಗಿದ್ದವು. ಬೆಂಗಳೂರಿನ ಅಂತರ್ಜಲ ದಿನೇ ದಿನೇ ಕುಸಿಯುತ್ತಿತ್ತು. 200/300 ಅಡಿ ತೋಡಿದರೆ ಸಿಗುತ್ತಿದ್ದ ನೀರು 1500/2000 ಅಡಿ ತೋಡಿದರೂ ಸಹ ಕಾಣಿಸುತ್ತಾ ಇರಲಿಲ್ಲ. (೧೯೮೪ ರಲ್ಲಿ ವಿದ್ಯಾರಣ್ಯಪುರದಲ್ಲಿ ನಾನು ಮನೆ ಕಟ್ಟಿದಾಗ ಹದಿನೈದು ಆಡಿ ತೋಡಿ ಬಾವಿ ರೆಡಿ ಆಗಿತ್ತು!) ಪರಿಸ್ಥಿತಿ ಹೀಗೆ ಮುಂದುವರೆದರೆ ಇನ್ನು ನೂರು ವರ್ಷಕ್ಕೆ ಬೆಂಗಳೂರು ಒಂದು ನೆನಪು ಆಗಲಿದೆ ಎಂದು ನಗರ ಯೋಜನೆ ತಜ್ಞರು ಹಾಗೂ ಸಮಾಜ ಶಾಸ್ತ್ರಿಗಳು ಹೇಳಲು ಶುರು ಮಾಡಿದ್ದರು. ಬೆಂಗಳೂರಿನ ಸುಮಾರು ಪಕ್ಷಿಗಳು ಇದೇ ಕಾರಣದಿಂದ ವಲಸೆ ಹೋಗಿದ್ದವು. ಗುಬ್ಬಚ್ಚಿಗಳು ಕಣ್ಮರೆ ಆಗಿದ್ದವು.

ರಾಮಕೃಷ್ಣ ಹೆಗಡೆ ಅವರು ಮುಖ್ಯ ಮಂತ್ರಿ ಆಗಿದ್ದಾಗ ಆಗಿನ ಬೆಂಗಳೂರಿನ ಸುತ್ತ ಒಂದು ಹಸಿರು ವಲಯದ ಅಂದರೆ green belt ಯೋಜನೆ ತಂದರು. ಅದರಂತೆ ಈ ವಲಯದಲ್ಲಿ ಕಟ್ಟಡ ಕಟ್ಟಲು ಪರವಾನಗಿ ಇರಲಿಲ್ಲ ಮತ್ತು ಅಲ್ಲಿ ಹಸಿರು ಕಾಡು ಬೆಳೆಸುವ ಯೋಜನೆ ಹಾಕಲಾಗಿತ್ತು. ಕೆಲವು ವರ್ಷ ಈ ಹಸಿರು ವಲಯ ಇತ್ತು. ನಂತರ ಹಸಿರು ವಲಯ ಸತ್ತು ಸ್ಮಶಾನ ಸೇರಿತು. ಹಸಿರು ವಲಯವೂ ಇಲ್ಲ, ಯಾವ ವಲಯವೂ ಈಗ ಇಲ್ಲ. ಬೇಕಾ ಬಿಟ್ಟಿ ಅರಸನ ಅಂಕೆ ಹಾಗೂ ದೆವ್ವದ ಕಾಟ ಇಲ್ಲದೇ ನಗರ ತ್ರಿವಿಕ್ರಮ ಅವತಾರ ತಾಳುತ್ತಿದೆ. ಈಗಿನ ಸರಕಾರದ ಲೌಡ್ ಥಿಂಕಿಂಗ್ ಅಂದರೆ ಕನಕಪುರ, ರಾಮನಗರ ಬೆಂಗಳೂರಿಗೆ ಸೇರಿಸುವುದು. ಇದರಿಂದ ಏನು ಪ್ರಯೋಜನ ಅಂದರೆ ನೆಲದ ಬೆಲೆ ಹೆಚ್ಚುತ್ತೆ. ನೆಲದ ಬೆಲೆ ಹೆಚ್ಚಿಸಿ ಹೊರಗಿನವರಿಗೆ ನೆಲ ಮಾರಿಬಿಡುವುದು. ಅಲ್ಲಿ ಅವರು ದೊಡ್ಡ ದೊಡ್ಡ ಕಟ್ಟಡ ಕಟ್ಟುತ್ತಾರೆ. ಮೂಲ ಮಾಲೀಕ ಆ ಕಟ್ಟಡಗಳಲ್ಲಿ ವಾಚ್ ಮನ್ ಆಗಿರುತ್ತಾನೆ! ಇದು ಬೆಂಗಳೂರಿನ ಸುಮಾರು ದೊಡ್ಡ ಬಿಲ್ಡಿಂಗ್ ಗಳ ಕತೆ. ಸೌಲಭ್ಯ? ನೆಲ ಮಾರಿದ ಮೇಲೆ ನಿಮಗೇಕೆ ಅದರ ಚಿಂತೆ? ಅದನ್ನು ಮಾತ್ರ ಕೇಳಬಾರದು…

ಹೆಗಡೆ ಅವರ ಕಾಲದ ಮತ್ತೊಂದು ನೆನಪು ಅಂದರೆ bel ಪಕ್ಕದ ದೊಡ್ಡ ಬೊಮ್ಮಸಂದ್ರ ಕೆರೆಯದು. ಕೆರೆಗೆ ಮೊದಮೊದಲು ಚೆನ್ನಾದ ಹರಿವು ಇದ್ದು ನೀರು ಶೇಖರ ಆಗುತ್ತಿತ್ತು. ತೆಪ್ಪದಲ್ಲಿ ಓಡಾಡಿದ, ತೆಪ್ಪೋತ್ಸವ ಮಾಡಿದ ನೆನಪು ಸಹ ಈಗಲೂ ಹಲವರಿಗೆ ಇದೆ. ಸುಮಾರು ೧೩೦ ಎಕರೆ ವಿಸ್ತೀರ್ಣದ ಈ ಕೆರೆ ಮೇಲೆ ಯಾವುದೋ ತುಂಬಾ ಪ್ರಭಾವಿ ಗುಂಪಿನ ಹದ್ದಿನ ಕಣ್ಣು ಬಿತ್ತು. ಒಂದು ಸುಂದರ ಕನಸು ಹರಿದಾಡಲು ಶುರು ಆಯಿತು. ದೆಹಲಿಯಲ್ಲಿನ ಪ್ರಗತಿ ಮೈದಾನದ ಮಾದರಿಯಲ್ಲಿ ಈ ಕೆರೆಯನ್ನು ಒಂದು ಪ್ರದರ್ಶನ ತಾಣವನ್ನಾಗಿ ಅಂದರೆ Exhibition Arena ಆಗಿ ವೃದ್ಧಿಪಡಿಸುವುದು. ಇಡೀ ವರ್ಷ ಅಲ್ಲಿ ಎಲ್ಲಾ ರೀತಿಯ ಪ್ರದರ್ಶನ ಇದ್ದೇ ಇರುತ್ತದೆ. ಇದರಿಂದ ಸುತ್ತಮುತ್ತ ಇರುವ ಜನರ ಜೀವನ ಮಟ್ಟ ಏರುತ್ತದೆ. ಯಾವಾಗಲೂ ಜನ ಸಂಚಾರ ಇರುವುದರಿಂದ ಹೆಚ್ಚಿನ ನಾಗರಿಕ ಸೌಲಭ್ಯಗಳು ಅಂದರೆ ಬಸ್ಸು, ವಿದ್ಯುತ್ ಮೊದಲಾದ ಎಲ್ಲಾ ಸುಖಗಳು ಸುಲಭವಾಗಿ ಅದೇ ಅದಾಗಿ ದಕ್ಕುತ್ತದೆ. ಸಿನಿಮಾ ಥಿಯೇಟರ್ ಬರುತ್ತೆ, ಕ್ಲಬ್‌ಗಳು ಬರುತ್ತವೆ, ಲಾಡ್ಜ್‌ಗಳು ಶುರು ಆಗುತ್ತೆ…. ನೆಲದ ಬೆಲೆ ಏರುತ್ತದೆ. ಬಹು ಮಹಡಿ ಕಟ್ಟಡಗಳು ಬರುತ್ತವೆ, ನೆಲ ಮಾರಿ ಬಿಸಿನೆಸ್ ಮಾಡಬಹುದು, ಕಾರು ಕೊಂಡುಕೊಳ್ಳಬಹುದು, ಒಳ್ಳೆಯ ಸ್ಥಳ ಸೇರಬಹುದು, ಒಟ್ಟಿನಲ್ಲಿ ಐಷಾರಾಮಿ ಜೀವನ ನಡೆಸಬಹುದು…. ಮೊದಲಾದ ಸುಂದರಾತಿಸುಂದರ ಅನಿಸುವ ಕನಸುಗಳು ಬಿತ್ತರಗೊಂಡವು. ಎಂತಹ ಸುಂದರ ಕಲ್ಪನೆ ಹರಿಯಬಿಟ್ಟರು ಅಂದರೆ ಯಾರೇ ಆಗಲಿ ಕ್ಲೀನ್ ಬೋಲ್ಡ್ ಆಗಲೇಬೇಕು. ಅಲ್ಲಿನ ಸುತ್ತ ಮುತ್ತಲಿನ ಗ್ರಾಮದ ನಿವಾಸಿಗಳು ಸುಮಾರು ಜನ ಬೋಲ್ಡ್ ಆಗಿಯೂ ಆದರು!

ಇನ್ನೇನು ಪ್ರಗತಿ ಮೈದಾನ ಬಂದೇ ಬಿಟ್ಟಿತು, ದೆಹಲಿಗೆ ತುಂಬಾ ಹತ್ತಿರ ಆದೆವು ಅನಿಸುವಷ್ಟರಲ್ಲಿ ಮುಖ್ಯ ಮಂತ್ರಿಗಳಿಗೆ ಇದರಿಂದ ಆಗುವ ಪರಿಸರ ಎಡವಟ್ಟಿನ ಬಗ್ಗೆ ಮತ್ತು ಬೆಂಗಳೂರಿಗೆ ಆಗುವ ಹಾನಿಯನ್ನು ಕುರಿತು ಯಾರೋ ಮಹಾನುಭಾವರು ಅರಿವು ಮೂಡಿಸಿದರು. ಅದರಿಂದ ಆದ ದೊಡ್ಡ ಪ್ರಯೋಜನ ಅಂದರೆ ಕನಸಿನ ಯೋಜನೆ ನನಸಾಗದೇ ಇಂದಿಗೂ ಕೆರೆ ಉಳಿದಿರುವುದು ಮತ್ತು ಐದಾರು ವರ್ಷ ಹಿಂದೆ bel ಸಂಸ್ಥೆ ಕೆರೆಯ ಅಭಿವೃದ್ಧಿಗೆ ಕೈ ಹಾಕಿರುವುದು. ಇದೇ ಸಮಯದಲ್ಲಿ ಬೆಂಗಳೂರಿನ ಹೊರ ವಲಯದಲ್ಲಿ ಉದ್ಯಾನವನಗಳ ನಿರ್ಮಾಣಕ್ಕೆ ಮತ್ತು ಅಭಿವೃದ್ಧಿಗೆ ಗಮನ ಹರಿಸಲಾಯಿತು. ಚಿಕ್ಕ ಪುಟ್ಟ ಅಳಿದುಳಿದ ಕೆರೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದು ಬಹುತೇಕ ಯಶಸ್ವಿ ಸಹ ಆಯಿತು. ಹಾಗೆ ಒಂದು ಸ್ಲಂ ಆಗಬಹುದಾಗಿದ್ದ ನರಸೀಪುರ ಕೆರೆ (ವಿದ್ಯಾರಣ್ಯಪುರ ಕೆರೆ) ಅಲ್ಲಿನ ನಿವಾಸಿಗಳ ಶ್ರಮದಿಂದ ಉಳಿಯಿತು ಮತ್ತು ಬೆಳೆಯುತ್ತಾ ಇದೆ. ರಾತ್ರೋ ರಾತ್ರಿ ಬಂದು ಗುಡಿಸಲು ಹಾಕುತ್ತಿದ್ದ ವೋಟ್ ಬ್ಯಾಂಕ್ ಜನರನ್ನು ನಿವಾಸಿಗಳು ಹಗಲು ರಾತ್ರಿ ಕಾವಲು ಕಾದು ತಡೆದರು. ಕೆರೆ ಉಳಿಯಿತು. ಈಗ ಜನ ಜಾಗೃತಿ ಎಷ್ಟಿದೆ ಅಂದರೆ ಕೆರೆ ಒತ್ತುವರಿ, ಕೆರೆಗೆ ಕಸ ತುಂಬಿಸುವುದು, ಕೆರೆಗೆ ಕೊಚ್ಚೆ ನೀರು ಹರಿಸುವುದು ಮುಂತಾದ ಪರಿಸರ ಹಾಳುಗೆಡವುವ ಹುನ್ನಾರಗಳನ್ನು ತಡೆಯಲು ಯುವಕರ ಗುಂಪುಗಳು ಸದಾ ಜಾಗೃತವಾಗಿವೆ. ಇದು ನಮ್ಮ ಬೆಂಗಳೂರಿನ ಐವತ್ತು ಅರವತ್ತು ವರ್ಷಗಳ ಹಿಂದಿನ ಗತವೈಭವವನ್ನು ಮತ್ತೆ ಪಡೆಯುವತ್ತ ಕಿರು ಪ್ರಯತ್ನ ಎನಿಸುತ್ತದೆ.

(ಬೆಂಗಳೂರಿನ ಹಳೆಯ ಕೆರೆಗಳು)

ಸುಮಾರು 500 ವರ್ಷಗಳ ಹಿಂದೆ ಬೆಂಗಳೂರನ್ನು ನಿರ್ಮಿಸಿದ ಕೆಂಪೆಗೌಡರು ಭವಿಷ್ಯದ ಬೆಂಗಳೂರಿನ ಕುರಿತು ಯೋಚಿಸಿಯೆ ಕೆರೆಗಳನ್ನು ನಿರ್ಮಿಸಿ, ಒಂದು ಕೆರೆಯಿಂದ ಇನ್ನೊಂದು ಕೆರೆಗೆ ನೀರು ಹರಿಯುವಂತೆ ರಾಜಕಾಲುವೆಗಳನ್ನೂ ನಿರ್ಮಿಸಿದ್ದರು. ನಂತರದ ದಿನಗಳಲ್ಲಿ, ಕೆರೆಗಳು ಕ್ರಮೇಣ ಗಾಲ್ಫ್‌ ಕ್ಲಬ್‌, ಸ್ಟೇಡಿಯಂ ಹಾಗೂ ಬಸ್‌ ನಿಲ್ದಾಣಗಳಾಗಿ, ಅಪಾರ್ಟ್‌ಮೆಂಟ್‌ಗಳಾಗಿ ಬದಲಾಗುತ್ತಾ ಬಂದವು. ರಾಜ ಕಾಲುವೆ ಮೇಲೆ ಮನೆಗಳು ಬಂದವು. ಕಳೆದ ಶತಮಾನದಲ್ಲಿ ಅಂದರೆ, 1960 ರಲ್ಲಿ 262 ಕೆರೆಗಳಿದ್ದ ಬೆಂಗಳೂರು ಈಗ 81 ಕೆರೆಗಳಿಗೆ ಗಣನೀಯವಾಗಿ ಇಳಿದಿದೆ.

ಈಗಲೂ ಜಕ್ಕೂರು ಕೆರೆ, ಅಲ್ಲಾಳಸಂದ್ರ ಕೆರೆ, ಸ್ಯಾಂಕಿ ಕೆರೆ, ಕಾಚರಕನ ಹಳ್ಳಿ ಕೆರೆ, ಲಾಲ್ ಬಾಗ್ ಕೆರೆ… ಮೊದಲಾದವು ತಮ್ಮ ಸುಂದರವಾದ ಪರಿಸರದಿಂದ ಪ್ರಕೃತಿ ಆರಾಧಕರನ್ನು ಕೈ ಬೀಸಿ ಕರೆಯುತ್ತವೆ.. ಅಲ್ಲಿನ ಜಲಚರಗಳು, ಪಕ್ಷಿಗಳು ಬೆಂಗಳೂರಿನ ಸೌಂದರ್ಯವನ್ನು ಹೆಚ್ಚಿಸಿವೆ. ಇಂತಹ ಕೆರೆಗಳ ಅಭಿವೃದ್ಧಿಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು,ನ್ಯಾಯಾಧೀಶರು, ಸಾಹಿತಿಗಳು, ಕಲಾವಿದರು, ಕಾರ್ಮಿಕರು, ವಿಜ್ಞಾನಿಗಳು….. ಹೀಗೆ ಸಮಾಜದ ಸರ್ವರೂ ಪಾಲುಗೊಳ್ಳುತ್ತಿದ್ದಾರೆ. ಇದು ಮೂವತ್ತು ನಲವತ್ತು ವರ್ಷದ ಹಿಂದೆ ಅಸಾಧ್ಯದ ಕಲ್ಪನೆ! ಅಂದಿನ ಆಲಸ್ಯವನ್ನು ಈಗ ನಾಗರಿಕರು ಮೈ ಕೊಡವಿ ಕೊಡವಿ ಎದ್ದಿದ್ದಾರೆ. ಬೆಂಗಳೂರನ್ನು ಉದ್ಯಾನ ನಗರಿ ಅಥವಾ City of Gardens ಅಥವಾ Greenary ಎಂದು ಐದು ದಶಕಗಳ ಹಿಂದೆ ಕರೆದಾಗ ಇದ್ದದ್ದು ಕೈ ಬೆರಳೆಣಿಕೆಯಷ್ಟು ಉದ್ಯಾನವನಗಳು ಮಾತ್ರ. ಮೂವತ್ತು ಮೂವತ್ತೈದು ವರ್ಷಗಳ ಆಸು ಪಾಸಿನಲ್ಲಿ ಬೆಂಗಳೂರಿನ ಸುತ್ತ ಮುತ್ತ ಹಲವಾರು ಬಡಾವಣೆಗಳು ನಿರ್ಮಾಣವಾದವು. ಕೆಲವು ಬಿಡಿಎ ಆದರೆ ಕೆಲವು ಖಾಸಗಿಯವು. ಹೀಗೆ ನಿರ್ಮಾಣಗೊಂಡ ಬಡಾವಣೆಗಳಲ್ಲಿ ಉದ್ಯಾನವನಗಳು ಬಹಳ ಸೊಂಪಾಗಿ ವೃದ್ಧಿಗೊಂಡಿವೆ. ನಾನು ವಾಸವಿರುವ ವಿದ್ಯಾರಣ್ಯಪುರ ಬಡಾವಣೆಯಲ್ಲಿಯೆ ಮೂರು ನಾಲ್ಕು ಕಿಮೀ ಫಾಸಲೆಯಲ್ಲಿ ಹದಿನೈದಕ್ಕೂ ಹೆಚ್ಚು ಸಣ್ಣ ಪುಟ್ಟ ಮಧ್ಯಮ ಗಾತ್ರದ ಉದ್ಯಾವನಗಳು ಇವೆ. ಅದೇ ರೀತಿ ಬೆಂಗಳೂರಿನ ಹೊರ ವಲಯದ ಸುಮಾರು ಬಡಾವಣೆಗಳಲ್ಲಿ ಈ ಬೆಳವಣಿಗೆ ಮನಸಿಗೆ ಖುಷಿ ಕೊಡುತ್ತದೆ. ಇಡೀ ಬೆಂಗಳೂರಿನಲ್ಲಿ ಈಗ ಇರುವ ಉದ್ಯಾನವನಗಳ ಗಣತಿ ಮಾಡುವುದು ಈಗ ಅವಶ್ಯ ಆಗಬೇಕಾದ ಕೆಲಸ. ಈವರೆಗೂ ಸರ್ಕಾರದ ಮಟ್ಟದಲ್ಲಿ ಅಂತಹ ಚಿಂತನೆ ನಡೆದ ಹಾಗಿಲ್ಲ. ಒಂದು ಅಂದಾಜಿನಂತೆ ಸುಮಾರು ಎರಡೂವರೆ ಸಾವಿರ ವಿವಿಧ ಗಾತ್ರದ ಉದ್ಯಾವನಗಳು ಇವೆ ಎಂದು ಜರ್ನಲಿಸ್ಟ್ ಮಿತ್ರರು ತಿಳಿಸಿದರು. ಒಂದು ಗಣತಿ ನಡೆಯಲಿ ಮತ್ತು ಉದ್ಯಾವನಗಳ ಸಂಖ್ಯೆ ಕೇಳಿ ಸಂತಸ ಪಡೋಣ, ನಮ್ಮ ಕಾಲದಲ್ಲಿ ಆಗಿದ್ದು ಎಂದು.

ಇನ್ನೊಂದು ಖುಷಿಯ ಸಂಗತಿ ಅಂದರೆ ಸರಿ ಸುಮಾರು ಎಲ್ಲಾ ಉದ್ಯಾವನಗಳಲ್ಲೂ ಒಂದು ಪುಟ್ಟ ಗಾತ್ರದ ವ್ಯಾಯಾಮದ ಅಂಗಳ ಇರುವುದು. ಇಲ್ಲಿ ಹಲವು ಸುಲಭ ಮತ್ತು ದೇಹಕ್ಕೆ ಹಾನಿ ಮಾಡದ ವ್ಯಾಯಾಮದ ಎಂಟು ಹತ್ತು ಸಲಕರಣೆಗಳು ಇದ್ದು ಅದರ ಸದುಪಯೋಗವನ್ನು ಬೆಂಗಳೂರಿಗರು, ಅದರಲ್ಲೂ ವಿಶೇಷವಾಗಿ ನಿವೃತ್ತರು ಪಡೆಯುತ್ತಾ ಇದ್ದಾರೆ. ನಮ್ಮಲ್ಲಿನ ಒಬ್ಬರು ಆರ್ಥೋ ಪೇಡಿಕ್ ವೈದ್ಯರ ಬಳಿ ನಾನು ಮತ್ತು ನನ್ನವಳು ಆಗಾಗ ಮೈ ಕೈ ನೋವು ಹೇಳಿಕೊಳ್ಳಲು ಹೋಗುವುದುಂಟು. ಇಬ್ಬರಿಗೂ ವಯೋ ಸಹಜ ಮೈ ಕೈ ನೋವುಗಳು ನಂಟರ ಹಾಗೆ ಬರುತ್ತಲೇ ಇರುತ್ತವೆ. ಅವರು ಅಂದರೆ ವೈದ್ಯರು ನನ್ನ ನಮ್ಮ ಸಮಸ್ಯೆ ಪೂರ್ತಿ ಗಮನ ಕೊಟ್ಟು ಕೇಳುತ್ತಾರೆ. ಅಯ್ಯೋ ಮೇಡಮ್ಮೋರೆ, ಎದುರುಗಡೆ ಪಾರ್ಕ್ ಇದೆ ನೋಡಿ, ಅಲ್ಲಿ ಹೀಗೆ ಎರಡು ದೊಡ್ಡ ಚಕ್ರ ಇದೆ ನೋಡಿ. ಅದನ್ನ ಎರಡೂ ಕೈಲಿ ಹಿಡಕೊಳ್ಳಿ. ಎಡಗಡೆಗೆ ಹದಿನೈದು ಸುತ್ತು ತಿರುಗಿಸಿ, ಆಮೇಲೆ ಬಲಗಡೆಗೆ ಹದಿನೈದು ಸುತ್ತು ತಿರುಗಿಸಿ ಎನ್ನುವ ಸಲಹೆ ಕೊಡುತ್ತಾರೆ. ಹಾಗೇ ಅವರು ಹೇಳಿದ ಹಾಗೆ ಹದಿನೈದು ಸುತ್ತು ಎಡಕ್ಕೆ, ಹದಿನೈದು ಸುತ್ತು ಬಲಕ್ಕೆ ಒಂದುವಾರ ತಿರುಗಿಸಿ ನೋವು ಪರಿಹಾರ ಕಂಡುಕೊಂಡಿದ್ದೇವೆ! ಸೈಕಲ್ ತುಳಿಯವುದು ಒಂದು ಮೇಶಿನು ಅಲ್ಲಿ ಪಾರ್ಕ್‌ನಲ್ಲಿ ಇದೆ ನೋಡಿ ಗೋಪಾಲಕೃಷ್ಣ, ಅದನ್ನು ಹತ್ತು ಹತ್ತು ನಿಮಿಷ ದಿವಸಕ್ಕೆ ಎರಡು ಸಲ ಸೈಕಲ್ ತುಳಿಯೋ ಹಾಗೆ ಮಾಡಿ, ಮಂಡಿ ನೋವು ಮಾಯ ಆಗುತ್ತೆ ಅಂತ ಸಲಹೆ ಕೊಡುತ್ತಾರೆ. ಅವರು ಹೇಳಿದ ಹಾಗೆ ಸೈಕಲ್ ವ್ಯಾಯಾಮ ಮಾಡಿ ಮಂಡಿ ನೋವು ಕಡಿಮೆ ಮಾಡಿಕೊಂಡವರು ಅದೆಷ್ಟು ಜನವೋ. ಥೆರಪಿ ವೈದ್ಯರ ಹತ್ತಿರ ಹೋಗಿ ಪಿಸಿಯೊಥೆರಪಿಗೆ ಆಗುವ ಸಾವಿರಾರು ರೂಪಾಯಿ ಖರ್ಚು ಮಿಗಿಸಿದ್ದೇವೆ! ಅಂದರೆ ಇದು ಈ ಸಲಕರಣೆಗಳು ಬರೀ ಜಿಮ್ ಉಪಕರಣ ಮಾತ್ರವಲ್ಲದೆ ನನ್ನಂತ ನಿವೃತ್ತ ಕಡು ಬಡವರಿಗೂ ಸಹ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಒಂದು ಪ್ರಮುಖ ಪಾತ್ರ ವಹಿಸಿದೆ. ಮೊನ್ನೆ ಮೊನ್ನೆ ರಿಟೈರ್ ಆದವರು ಸಹ ಬಂದು ಈ ಸಲಕರಣೆ ಉಪಯೋಗಿಸುತ್ತಾರೆ.

ಮೊನ್ನೆ ಒಂದು ಬೆಂಗಳೂರಿನ ಇನ್ನೊಂದು ಮೂಲೆಯಲ್ಲಿನ ಹೊಸಾ ಜಾಗಕ್ಕೆ ಹೋಗಿದ್ದೆ. ನನಗೆ ಅದು ಹೊಸದು. ಅಲ್ಲೂ ಒಂದು ಸುಮಾರು ದೊಡ್ಡದು ಎನ್ನುವ ಪಾರ್ಕ್ ಹಾಗೂ ಒಂದು ಜಿಮ್ ಅಂಗಳ. ಒಂದು ಗಂಟೆ ಸುತ್ತು ಹಾಕಿ, ಇರುವ ಜಿಮ್ ನಲ್ಲಿ ಕೈ ಕಾಲು ಸುತ್ತಿ ಸರ್ಕಸ್ ಮಾಡಿದೆ. ಆಚೆ ಬಂದರೆ ಅಲ್ಲಿ ಒಂದು ತಳ್ಳು ಗಾಡಿ. ಅದರಲ್ಲಿ ಹಲವಾರು ವಿವಿಧ ಅಳತೆಯ ಸ್ಟೀಲ್ ಕೊಳಗ ಮುಚ್ಚಳ ಸಮೇತ. ಅದರಲ್ಲಿ ಒಂದೊಂದರಲ್ಲು ಸೌಟು. ಅದರ ಸುತ್ತ ಕೆಲವರು ನಿಂತು ಕೆಲವರು ಅಲ್ಲೇ ಬೆಂಚಿನ ಮೇಲೆ ಕುಳಿತು ಅದೇನೋ ಲೋಟಕ್ಕೆ ಹಾಕಿಸಿಕೊಂಡು ಕುಡಿಯುತ್ತಿದ್ದರು. ಹತ್ತಿರ ಹೋದರೆ ಹಲವು ರೀತಿಯ ಆರೋಗ್ಯ ವರ್ಧಕ ಪಾನೀಯಗಳು, ಬರೀ ಹತ್ತು ರೂಪಾಯಿಗೆ ಒಂದು ಲೋಟ! ಸೊಗಡ್ ಬೇರು, ಮೆಂತ್ಯ ಜ್ಯೂಸು, ಸಬ್ಬಕ್ಕಿ ಜ್ಯೂಸು, ಪುದೀನಾ ಜ್ಯೂಸ್, ಚಕ್ಕೋತ ಜ್ಯೂಸು… ಅದೆಷ್ಟೋ ಹಲವಾರು ತರಹ. ಒಂದೊಂದು ಜ್ಯೂಸು ಒಂದೊಂದು ರೋಗಕ್ಕೆ ಪರಿಹಾರ ಅಂತ ಒಂದು ಬೋರ್ಡ್ ತಗುಲಿ ಹಾಕಿದ್ದರು. ಮೈ ಬೆವರು ಹರಿಸಿ ಸುಸ್ತು ಆದಾಗ ಯಾರಾದರೂ ಜ್ಯೂಸ್ ಕೊಡುತ್ತಾರೆ ಅಂದರೆ ಏನು ಅನಿಸುತ್ತೆ?
ನನಗೂ ಸಹ ಅದೇ ಆಗಿದ್ದು…

ಅದೆಷ್ಟು ಖುಷಿ ಆಯ್ತು ಅಂದರೆ ಅಂಗಡಿ ಅವರಿಗೆ ಒಂದು ನೂರರ ನೋಟು ತೆಗೆದು ಕೊಟ್ಟೆ. ಅಲ್ಲೇ ಒಂದೂವರೆ ಗಂಟೆ ಕೂತೆ. ಹತ್ತು ಬೇರೆ ಬೇರೆ ರೀತಿಯ ಜ್ಯೂಸ್ ಒಂದಾದ ಮೇಲೆ ಒಂದರಂತೆ ಲೆಕ್ಕ ಹಾಕಿ ಕುಡಿದೆ. ಪ್ರತಿ ಸಿಪ್ ಹೀರಬೇಕಾದರೂ ತುಂಬಾ ಆಸ್ವಾದಿಸಿಕೊಂಡೆ ಮತ್ತು ಆಹಾ ಯೂಹು ಹೇ ಹೇ ಅಂತ ಜ್ಯೂಸ್ ಎಂಜಾಯ್ ಮಾಡಿದೆ. ಇದು ಅವರ ಕಿವಿಗೂ ಬಿದ್ದಿರಬೇಕು.. ಅವರಿಗೆ ತುಂಬಾ ಸಂತೋಷವಾಯಿತು ಅಂತ ಕಾಣುತ್ತೆ. ಮತ್ತೆ ನಾಲ್ಕು ಲೋಟ ಜ್ಯೂಸ್ ನಾನು ಅವರ ಬಳಿ ಕುಡಿಯದೆ ಇದ್ದದ್ದು ಕೊಟ್ಟರು. ಇದಕ್ಕೆ ದುಡ್ಡು ಬೇಡಿ ಸಾರ್ ಅಂದರು. ನನ್ನ ಮನೆ ಎಲ್ಲಿ, ಇಲ್ಲಿ ಎಲ್ಲಿ ಯಾರ ಮನೆಗೆ ಬಂದಿದ್ರಿ.. ಎಲ್ಲಾ ವಿಚಾರಿಸಿದರು. ಆಗಾಗ ಬನ್ನಿ ಸಾರ್, ನಿಮ್ಮನ್ನ ನೋಡಿದರೆ ಸಂತೋಷ ಆಗುತ್ತೆ, ಈ ವಯಸ್ಸಲ್ಲಿ ಸಹ ಹದಿನಾಲ್ಕು ಲೋಟ ಜ್ಯೂಸ್ ಕುಡಿತಿರಿ ಅಂದರೆ ನಿಮಗೆ ಎಷ್ಟು ಸ್ಟಾಮಿನಾ ಇದೆ ಸಾರ್, ಎಷ್ಟು ಸಂತೋಷ ಆಗುತ್ತೆ ನಿಮ್ಮನ್ನು ನೋಡಿದರೆ ಅಂದರು! ಅವರ ಮಾತಿನಿಂದ ಉಬ್ಬಿದೆ, ಖುಷಿ ಏನೋ ಆಯಿತು. ಮನೇಲಿ ಈ ಸಂಗತಿ ಇನ್ನೂ ಹೇಳಿಲ್ಲ. ಒಂದು ರೀತಿ ಮುಜುಗರ, uncomfort. ಹದಿನಾಲ್ಕು ಲೋಟ ಜ್ಯೂಸು ಒಟ್ಟಿಗೆ ಕುಡಿಯೋ ವಯಸ್ಸೇ ನಿನ್ನದು ಅಂತ ಮನೆಯಲ್ಲಿ ಇರೋರು, ಅಕ್ಕ ಪಕ್ಕದ ಮನೆಯೋರು, ಹೆಂಡತಿ ಅಕ್ಕತಂಗಿಯರು, ಅವರ ಗಂಡಂದಿರು, ನನ್ನ ಬಂಧುಗಳು, ಒಂದು ಲೋಟ ನಿಂಬೆ ಪಾನಕ ಕುಡಿದು ಒಂದು ತಿಂಗಳು ಗಂಟಲು ನೋವು ಅಂತ ಒದ್ದಾಡುವ ಪಕ್ಕದ ಮನೆಯವರು, ನಿಂಬೆ ಹಣ್ಣು ನೋಡಿದರೆ ಗಂಟಲು ಕಟ್ಟುವ ನನ್ನ ಬಂಧು, ಹಾಗಲ ಕಾಯಿ ನೋಡಿ ಬಂದು ಒಂದುವಾರ ಬಾಯೆಲ್ಲಾ ಕಹಿ ಕಹಿ ಅಂತ ಒದ್ದಾಡುವ ಪದ್ಮಕ್ಕ… ಹೀಗೆ ಇಡೀ ಪ್ರಪಂಚ ನನಗೆ ಪೂಜೆ ಮಾಡ್ತಾರೆ ಅಂತ!

ಇದು ಅಂದರೆ ಪಾರ್ಕ್‌ಗಳಲ್ಲಿ ಜಿಮ್ ಅಳವಡಿಕೆ ಕಳೆದ ದಶಕದಲ್ಲಿ ನಡೆದ ಒಂದು ದೊಡ್ಡ ಕೆಲಸ. ನಿವೃತ್ತರು, ಮಹಿಳೆಯರು, ಯುವಕರು ಬೆಳಿಗ್ಗೆ ಸಂಜೆ ವ್ರತದ ಹಾಗೆ ಈ ಜಿಮ್‌ಗಳಲ್ಲಿ ಕಸರತ್ತು ಮಾಡುವುದು ಮಿಕ್ಕವರಿಗೆ ಪ್ರೇರೇಪಣೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಒತ್ತು ನೀಡುತ್ತಿದೆ. ಇಂತಹ ಒಂದು ಯೋಜನೆ ರೂಪಿಸಿ ಅನುಷ್ಟಾನಕ್ಕೆ ತಂದವರು ನಿಜಕ್ಕೂ ಅಭಿನಂದನೆಗೆ ಅರ್ಹರು.

ಈಗ ಬೆಂಗಳೂರನ್ನು ಖಂಡಿತವಾಗಿ ಉದ್ಯಾನನಗರಿ ಎಂದು ಎದೆ ತಟ್ಟಿ ಹೇಳಬಹುದು. ಯಾವುದೇ ಹೊಸ ಬಡಾವಣೆಗೆ ಹೋಗಿ ಅಲ್ಲಿ ನಿಮಗೆ ಉದ್ಯಾನವನಗಳು ಕಾಣುತ್ತವೆ ಮತ್ತು ಅದರ ಆಕರ್ಷಣೆ ತಪ್ಪಿಸಿಕೊಳ್ಳುವುದು ಅಸಾಧ್ಯದ ಮಾತು.

ಇನ್ನೊಂದು ಬೆಂಗಳೂರಿನಲ್ಲಿ ಕೆರೆಗಳು ಮತ್ತು ಉದ್ಯಾನವನಗಳು ಕಡಿಮೆ ಆಗುತ್ತಿದ್ದ ಕಾಲದಲ್ಲಿ ಹಾಗೂ ತೀರಾ ಈಚೆಗೆ ನನ್ನ ಗಮನಕ್ಕೆ ಬಂದಿರೋದು ಅಂದರೆ ಹೋಟೆಲ್‌ಗಳಿಗೆ ಗಾರ್ಡನ್ ಎಂದೋ ಗಾರ್ಡೇನಿಯಾ ಎಂದೋ ಹೆಸರು ಇಡುವುದು. ಕೆಲವು ಹೆಸರಿಗೆ ತಕ್ಕ ಹಾಗೆ ಗಾರ್ಡನ್ ಇದ್ದ ಹಾಗೆ ಇರುತ್ತೆ. ಕೆಲವು ಹೋಟೆಲ್ಲುಗಳು ಉಡುಪಿ ಗಾರ್ಡನ್, ಮಲ್ಪೆ ಗಾರ್ಡನ್ ಎಂದು ಹೆಸರು ಹೊತ್ತಿರುತ್ತೆ ಮತ್ತು ತಮಾಷೆ ಅಂದರೆ ಅಲ್ಲಿ ಒಂದೇ ಒಂದು ಗರಿಕೆ ಹುಲ್ಲೂ ಸಹ ಇರಲ್ಲ! ಮಾಧವನ್ ಪಾರ್ಕ್‌ಲ್ಲಿ ಪಾರ್ಕ್ ಕಾಣದು..! ಕೊಲ್ಸ್ ಪಾರ್ಕ್ ನಲ್ಲಿ ಪಾರ್ಕ್ ಇದೆಯಾ..
(ಮೈಸೂರು ಪಾಕ್ ನಲ್ಲಿ ಪಾಕ್ ಇದೆಯಾ)

ಒಂದು ಸಂಗತಿ ಅಂದಿನ ಬೆಂಗಳೂರು ಅಳವಡಿಸಿಕೊಳ್ಳದೇ ಇದ್ದದ್ದು ಮತ್ತು ಈಗ ಅಳವಡಿಸಲೇ ಬೇಕಾದ ಒಂದು ವಿಷಯ ಬಹಳ ವರ್ಷಗಳಿಂದ ನನ್ನ ತಲೆ ಕೆಡಿಸಿದೆ. ಈಗ ಅದಕ್ಕೆ…

ಬೆಂಗಳೂರಿನ ಪಾರ್ಕ್ ಬಗ್ಗೆ ಹೇಳಬೇಕಾದ ಸಂದರ್ಭ ಬಂದರೆ ನನಗೆ ಉತ್ತರ ಭಾರತದ ಪಾರ್ಕುಗಳ ನೆನಪು ಥಟ್ ಅಂತ ಬರುತ್ತೆ. ನಾನು ನೋಡಿರುವ ಉತ್ತರ ಭಾರತದ ಪಾರ್ಕುಗಳಲ್ಲಿ ಅಂತಹ ವಿಶೇಷ ನನಗೆ ಕಾಣಿಸಿಲ್ಲ. ನಮ್ಮ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಮುಂದೆ ಅವೆಲ್ಲ ಪೇಲವ ಅಂತ ಅನಿಸಿತು. ವಿಸ್ತಾರ ಹಾಗೂ ವೈವಿಧ್ಯತೆಯಲ್ಲಿ ನಮ್ಮ ಪಾರ್ಕುಗಳಲ್ಲಿ ದೊಡ್ಡದು ಮತ್ತು ಸುಂದರ ಕೂಡ. ಆದರೂ ಉತ್ತರ ಭಾರತಕ್ಕೆ ಪ್ರವಾಸ ಹೋಗುವವರು ಅಲ್ಲಿನ ಪುಟ್ಟ ಪಾರ್ಕಿನ ಒಂದೇ ಒಂದು ವಿಶೇಷತೆಗೆ ಸಖತ್ ಟೋಪಿ ಬೀಳುತ್ತಾರೆ! ಅದೇನು ಅಂದಿರಾ?

ಯಾವುದೇ ಪಾರ್ಕ್‌ಗೆ ನೀವು ಹೋದರೆ ಅಲ್ಲಿ ಫೋಟೋಗ್ರಾಫರ್ ಮತ್ತು ಒಂದು ಕಂಪ್ಯೂಟರ್ ಇರುತ್ತೆ. ರಾಜ ಮಹಾರಾಜರ ಕಾಸ್ಟ್ಯೂಮ್ ಇರುತ್ತೆ. ಅದೇ ರೀತಿ ರಾಣಿ ಇವರ ಕಾಸ್ಟ್ಯೂಮ್ ಸಹ ಇರುತ್ತೆ. ಅಲ್ಲಿ ಹೋದವರಿಗೆ ಹಿಂದೆ ಈ ಕಾಸ್ಟ್ಯೂಮ್‌ನಲ್ಲಿ ಫೋಟೋ ತೆಗೆಸಿಕೊಂಡವರ ದೊಡ್ಡ ಆಲ್ಬಂ ತೋರಿಸಿ ಬಲೆಗೆ ಕೆಡವುತ್ತಾನೆ. ರಾಜ ರಾಣಿ ಕಾಸ್ಟ್ಯೂಮ್‌ ಹಾಕಿ ಬೇರೆ ಬೇರೆ ಆಂಗಲ್‌ನಿಂದ ಫೋಟೋ ತೆಗೆದು ಅಲ್ಲೇ ಪ್ರಿಂಟ್ ಹಾಕಿ ಕೊಡ್ತಾನೆ. ಯಾವ ಪ್ರಸಿದ್ಧ ಊರಿಗೇ ಹೋಗಿ ಅಲ್ಲಿನ ವಿಶೇಷತೆಯ ಕಾಸ್ಟ್ಯೂಮ್ ಮತ್ತು ಪೋಟೋ ಸೇಷನ್ ಇದ್ದೇ ಇರುತ್ತೆ. ಮಥುರಾಗೆ ಹೋದರೆ ಅಲ್ಲಿ ರಾಧೆ ಕಾಸ್ಟ್ಯೂಮ್, ಆಗ್ರಾಗೆ ಹೋದರೆ ತುಘಲಕ್ ಕಾಸ್ಟ್ಯೂಮ್, ಅಬುಗೆ ಹೋದರೆ ಅಲ್ಲಿನ ಯತಿಗಳ ಕಾಸ್ಟ್ಯೂಮ್… ಹೀಗೆ ಎಲ್ಲೆಲ್ಲಿ ಹೋಗ್ತೀರಾ ಅಲ್ಲಿಯ ಪ್ರಸಿದ್ಧರ ಗೆಟ್ ಅಪ್‌ನಲ್ಲಿ ನೀವು! ಇಲ್ಲಿಂದ ಪ್ರವಾಸ ಹೋದವರು ಈ ಫೋಟೋಗಳನ್ನು ಕಂಪಲ್ಸರಿಯಾಗಿ ತೆಗೆಸಿಕೊಂಡು ಬಂದು ಇಲ್ಲಿ ಎಲ್ಲರಿಗೂ ತೋರಿಸಿ ಹೊಟ್ಟೆ ಉರಿಸಿದ ಖುಷಿ ಮತ್ತು ಮಾನಸಿಕ ನೆಮ್ಮದಿ ಪಡೆಯುತ್ತಾರೆ! ಜತೆಗೆ ಫೇಸ್ ಬುಕ್ ಬಂದ ಮೇಲೆ ಅವರ ಐವತ್ತು ಅರವತ್ತು ವರ್ಷಗಳ ಹಿಂದಿನ ಫೋಟೋ ಹಾಕಿ ಆಗ ನಾನು ಹೇಗಿದ್ದೇ ಅಂದರೆ…. ಅಂತ ಪುಟಗಟ್ಟಲೆ ಕೊರಿತಾರೆ.

ಉತ್ತರದಿಂದಲೋ ಅಥವಾ ಬೇರೆ ಕಡೆಯಿಂದ ನಮ್ಮೂರಿಗೆ ಬಂದವರು ಇಲ್ಲಿನ ಯಾವ ಫೋಟೋ ಹಿಡಕೊಂಡು ಹೋಗ್ತಾರೆ ನೆನೆಸಿಕೊಳ್ಳಿ. ವಿಧಾನ ಸೌಧ, ಯಾವುದೋ ಮಾಲ್, ಯಾವುದೋ ಸಿನಿಮಾ ಪೋಸ್ಟರ್… ಈ ಫೋಟೋಗಳು…! ಇಲ್ಲಿ ನಮ್ಮ ಲಾಲ್ ಬಾಗ್ ಕಬ್ಬನ್ ಪಾರ್ಕ್ ಕೆ ಆರ್ ಎಸ್ ಇಂತಹ ಕಡೆ ಅವರು ರಾಜ ಮಹಾರಾಜರ ವೇಷ ತೊಟ್ಟು ಫೋಟೋ ತೆಗೆಸಿಕೊಳ್ಳುವ ಯಾವ ಯೋಚನೆಯನ್ನೂ ನಮ್ಮ ಟೂರಿಸಂ ಇಲಾಖೆ ತಲೆಗೆ ಬಂದಿಲ್ಲ. ಮೈಸೂರು ಅರಮನೆ ಮುಂದೆ ನಿಂತು ಜಯಚಾಮರಾಜೇಂದ್ರರ ಕಾಸ್ಟ್ಯೂಮ್ ಹಾಕಿಕೊಂಡು ಫೋಟೋ ತೆಗೆಸಿಕೊಳ್ಳೋದು ಒಂದು ಸೆಕೆಂಡ್ ಕಲ್ಪಿಸಿಕೊಳ್ಳಿ. ಅದೇರೀತಿ ಕೆಂಪೇಗೌಡರ ಕಾಸ್ಟ್ಯೂಮ್‌ನಲ್ಲಿ ನೀವೇ ಇರೋದು, ಕನ್ನಂಬಾಡಿ ಕಟ್ಟೆ ಮುಂದೆ ವಿಶ್ವೇಶ್ವರಯ್ಯ ಅವರ ಕಾಸ್ಟ್ಯೂಮ್ ನಲ್ಲಿ, ಉತ್ತರ ಕರ್ನಾಟಕದ ಯಾವುದಾದರೂ ಊರಿನ ಮುಂದೆ ಅಬ್ಬಕ್ಕ ರಾಣಿಯ, ಕಿತ್ತೂರು ಚೆನ್ನಮ್ಮ…. ಇಂತಹವರ ಕಾಸ್ಟ್ಯೂಮ್ ಹಾಕಿಕೊಂಡು ಇರುವ ಯಾರದಾದರೂ ಫೋಟೋ ಕಲ್ಪಿಸಿಕೊಳ್ಳಿ! ಶ್ರವಣ ಬೆಳಗೊಳದ ಗೊಮ್ಮಟನನ್ನ ಭೇಟಿ ಮಾಡಿ ಗೊಮ್ಮಟನ ಕಾಸ್ಟ್ಯೂಮ್ ಒಂದಿಗೆ ಫೋಟೋ ತೆಗೆಸಿಕೊಳ್ಳಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..?

ನಮ್ಮ ಪ್ರವಾಸೋದ್ಯಮ ಇಲಾಖೆ ಮುಖ್ಯವಾಗಿ ಎಲ್ಲಿ ಎಡವಿದ್ದು ಅಂದರೆ ಇಲ್ಲೇ.. ನಮ್ಮ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಯಾಕೆ ಯೋಚನೆ ಮಾಡಿಲ್ಲ ಅಂತ ನನಗೆ ಅಚ್ಚರಿ. ಮೈಸೂರು ಮಹಾರಾಜ ಅದೇನು ಮಾಡಿದ ನಮ್ಮ ದುಡ್ಡು ನಮಗೆ ಕೊಟ್ಟ, ವಿಶ್ವೇಶ್ವರಯ್ಯ ಅದೇನು ಮಾಡಿದ ಕೂಲಿಯ ಜನ ಅಣೆಕಟ್ಟು ಕಟ್ಟಿದ್ದು, ಮೋದಿ ಏನು ಮಾಡಿದ ನಮ್ಮ ಅಕ್ಕಿ ನಮಗೆ ಕೊಟ್ಟ…. ಎನ್ನುವ ವಿನೂತನ ಸೋಷಿಯಲ್ ಥಿಂಕಿಂಗ್ ನಮ್ಮ ರಾಜಕೀಯದವರಿಂದ ನಮಗೆ ಬಂದಿದೆ. ಅದರಿಂದ ಮಹಾರಾಜರ ಜತೆ ಫೋಟೋ ಅಂದರೆ, ವಿಶ್ವೇಶ್ವರಯ್ಯ ಜತೆ ಫೋಟೋ ಅಂದರೆ ಅದು ಇನ್ನೂ ಫ್ಯೂಡಲ್ ಅದು ಫ್ಯೂಡಲ್ ವ್ಯವಸ್ಥೆ. ನಮ್ಮ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮೊದಲಾದವರ ಕಾಸ್ಟ್ಯೂಮ್ ಗಳನ್ನು ರೆಡಿ ಇಟ್ಟುಕೊಂಡು ಹೊರಗಿಂದ ಬರುವ ಪ್ರವಾಸಿಗಳಿಗೆ ಆಕರ್ಷಣೆ ಹೆಚ್ಚಿಸಬಹುದು! ದಟ್ಟಿ ಪಂಚೆ ಶರ್ಟ್‌ನ ಕಾಸ್ಟ್ಯೂಮ್ ತುಂಬಾ ಸುಲಭ. ಅದೇರೀತಿ ಕುರುಚಲು ಗಡ್ಡ ವೇಸ್ಟ್ ಕೋಟು ಮತ್ತು ಹಲ್ಲು ಉಜ್ಜಿ ಒಂದು ತಿಂಗಳು ಆಗಿರೋ ಮುಖದ ಕಾಸ್ಟ್ಯೂಮ್ ಅಂತೂ ತುಂಬಾ ಸುಲಭ ಅಂದರೆ ಸುಲಭ. ಈ ಕಾಸ್ಟ್ಯೂಮುಗಳನ್ನು ಎಲ್ಲಾ ಕಡೆ ರೆಡಿ ಇಟ್ಟು ಕಂಪಲ್ಸರಿಯಾಗಿ ಪ್ರವಾಸಿಗರಿಗೆ ತೊಡಿಸಿ ಕಾಸು ಕಿತ್ತುಕೊಂಡು ಕುಸಿದಿರುವ ನಮ್ಮ ಆರ್ಥಿಕ ಪರಿಸ್ಥಿತಿ ಯನ್ನು ಸಖತ್ ಮೇಲಕ್ಕೆ ಎತ್ತಿ ಬಿಸಾಕಬಹುದು. ಇತ್ತ ನಮ್ಮನ್ನು ಆಳುವವರು ಖಂಡಿತಾ ಗಮನ ಹರಿಸಬೇಕು. ಇನ್ನೊಂದು ಐವತ್ತು ವರ್ಷದ ನಂತರ ಬೆಂಗಳೂರು ಅಂದರೆ ಈ ನೆನಪು ಕೊಚ್ಚಿಕೊಂಡು ಬರಬೇಕು. ಇದು ಎಂದೋ ಆಗಬೇಕಿದ್ದ ಕೆಲಸ, ಈಗಲಾದರೂ ಆಗಲಿ!!

(ಮುಂದುವರೆಯುವುದು…)