ದೂರದೃಷ್ಟಿಯುಳ್ಳ ಆಡಳಿತಗಾರರ ಲೆಕ್ಕಾಚಾರವನ್ನೂ ಮೀರಿ ಅಪರಾಧಿಗಳು, ಪಾಪಿಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಲೇ ಇತ್ತು. ನಗರವು ಬೆಳೆದಂತೆ, ಎಲ್ಲ ವರ್ಗದ ಜನರು, ತಂತ್ರಜ್ಞರು, ಪೋಲೀಸರು ಕೂಡ ಹೆಚ್ಚಾಗುತ್ತಾರೆ ಎಂಬುದು ನಿಜವಾದರೂ, ಅಪರಾಧಿಗಳ ಸಂಖ್ಯೆಯ ಬೆಳವಣಿಗೆಯ ದರ ಎಲ್ಲ ಅನುಪಾತಗಳನ್ನೂ ಮೀರಿತ್ತು. ಪೋಲೀಸರ ದಕ್ಷತೆ, ನಾಗರಿಕರ ಸಮಾಜಪ್ರಜ್ಞೆಯಿಂದಾಗಿ ಎಲ್ಲ ಠಾಣೆಗಳಲ್ಲೂ ಹೆಚ್ಚು ಹೆಚ್ಚು ದೂರುಗಳು ಬರುತ್ತಿದ್ದವು, ದಾಖಲಾಗುತ್ತಿದ್ದವು. ಕಳ್ಳರು, ಕೊಲೆಗಡುಕರು ಕೂಡ ಬೇಗ ಬೇಗ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಹಾಗೆ ಸಿಕ್ಕಿಬಿದ್ದವರನ್ನೆಲ್ಲ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳುವ ಮುನ್ನ ಕೂಡಿಟ್ಟುಕೊಳ್ಳಲು ಠಾಣೆಗಳಲ್ಲಿ ಕೋಣೆಗಳೇ ಇರಲಿಲ್ಲ.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಐದನೆಯ ಬರಹ ನಿಮ್ಮ ಓದಿಗೆ
ಕಳೆದ ಸಾಲಿನ ಮುಂಗಾರು, ಹಿಂಗಾರು, ಎರಡರಲ್ಲೂ ಎಡವಟ್ಟಾಯಿತು. ಹಾಗಾಗಿ ಸರ್ಕಾರ, ಸಮಾಜ ಈ ಸಲ ತುಂಬಾ ಎಚ್ಚರ ವಹಿಸಿತು. ಹವಾಮಾನ ವರದಿ, ಮುಂಗಾರು ಮುನ್ನೋಟ ಆಶಾವಾದಿಯಾಗಿದ್ದರೂ, ಯಾವುದೇ ರೀತಿಯ ಮನುಷ್ಯ ಪ್ರಯತ್ನದಲ್ಲೂ ಕೊರೆ ಬರಬಾರದೆಂದು ಮುಜರಾಯಿ ಇಲಾಖೆಯವರೇ ಸಮಯಕ್ಕೆ ತಕ್ಕಂತೆ ಆದೇಶ ಹೊರಡಿಸಿ, ಎಲ್ಲ ದೇವಸ್ಥಾನಗಳಲ್ಲೂ ರುದ್ರಾಭಿಷೇಕ, ಪರ್ಜನ್ಯ ಜಪ, ವಿರಾಟಪರ್ವ ವಾಚನ, ಶಾಂತಿ ಹೋಮಗಳಿಗೆ ವ್ಯವಸ್ಥೆ ಮಾಡಿದರು. ಇಂತಿಂತಹ ದೇವಸ್ಥಾನದಲ್ಲಿ ಇಂತಿಂತಹ ಆಚರಣೆ ಎಂದು ನಿಗದಿ ಮಾಡಿದ್ದರೂ, ಗಂಗಾಧರೇಶ್ವರ, ಸೋಮೇಶ್ವರ, ಅರಕೇಶ್ವರ, ನಂಜುಂಡೇಶ್ವರ, ಕಪಾಳೇಶ್ವರ ದೇವಾಲಯಗಳಲ್ಲಿ ಎಲ್ಲ ಆಚರಣೆಗಳಿಗೂ ವ್ಯವಸ್ಥೆ ಮಾಡಿದ್ದರು. ಸರ್ಕಾರ ಈ ರೀತಿಯ ಪ್ರಯತ್ನ ಮಾಡಿದ್ದರೆ, ಜಾತಿವಾರು ಸಂಘಗಳು ಕೂಡ ಎಲ್ಲರಿಗೂ ಸೇರಿದ ಆಕಾಶ, ಭೂಮಿ ಮತ್ತು ಮಳೆಗೂ ಕೂಡ ತಮ್ಮ ತಮ್ಮ ಜಾತಿಯ ಸಂಘದ ಆವರಣದಲ್ಲೇ ಪ್ರತ್ಯೇಕ ಪ್ರಾರ್ಥನೆ-ಪೂಜೆಗಳಿಗೆ ವ್ಯವಸ್ಥೆ ಮಾಡಿಕೊಂಡವು. ಇದೆಲ್ಲ ಆಧುನಿಕ ಕಾಲದಲ್ಲಿ ಸಲ್ಲದ್ದು, ಬದಲಿಗೆ ನಾವು ಹವಾಮಾನ ಇಲಾಖೆಯ ಕಾಂಪೋಂಡಿನಲ್ಲೇ ಡೇರೆ ಹಾಕಿಕೊಂಡು ಮೌನ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ವೈಜ್ಞಾನಿಕ ಮನೋಧರ್ಮದವರು ಕೂಡ ಕಣಕ್ಕೆ ಇಳಿದರು. ಯಾರು ಏನಾದರೂ ಮಾಡಿಕೊಳ್ಳಲಿ, ಎಲ್ಲರ ಉದ್ದೇಶವೂ ಒಂದೇ ಆಗಿದ್ದರಿಂದ, ಹೆಚ್ಚು ವಾಗ್ವಾದಗಳು ನಡೆಯಲಿಲ್ಲ.
ಮಳೆ ಬಂತು, ಮಳೆ ಬಿತ್ತು, ಮುಟ್ಟಿನೋಡಿಕೊಳ್ಳುವ ಹಾಗೆ. ಅದನ್ನೇ ನೋಡುತ್ತಾ ಹಪ್ಪಳ ಸುಟ್ಟುಕೊಂಡು ತಿನ್ನುತ್ತಾ, ಸುಮ್ಮನೆ ಕುಳಿತಿರಬೇಕಾದ ಹಾಗೆ. ಪುನರ್ವಸು, ಪುಷ್ಯ, ವಿಶಾಖಾ, ಹಸ್ತ, ಚಿತ್ತಾ, ಸ್ವಾತಿ, ಎಲ್ಲ ಮಳೆಗಳೂ ತ್ರಿಪಾದ ಜಲಲಗ್ನದಲ್ಲಾಗಲೀ, ಪೂರ್ಣ ಜಲಲಗ್ನದಲ್ಲಾಗಲೀ, ಶುಕ್ರ ನಕ್ಷತ್ರ ಸಂಚಾರದಲ್ಲಾಗಲೀ, ಗ್ರಹಗಳ ಸೌಮ್ಯವಾದಿ ಸಂಚಾರದಲ್ಲಾಗಲೀ, ಒಂದಕ್ಕೊಂದು ವ್ಯತ್ಯಾಸವಿಲ್ಲದಂತೆ ಧಾರಾಕಾರವಾಗಿ ಸುರಿಯಿತು. ಈ ಮಳೆಗೆ ಯಾರ ನೆನಪಿನಲ್ಲೂ ಹೋಲಿಕೆಯಿರಲಿಲ್ಲ. ಶಿಲಾಯುಗದ ಕೊನೆ ದಿನಗಳಲ್ಲಿ, ಆರ್ಯರ ಮೊದಲ ತಂಡ ಬಂದಾಗ, ಸಿಪಾಯಿ ದಂಗೆಯ ಕೊನೆಯ ದಿವಸ, ಹೀಗೆಲ್ಲ ಮಳೆ ಬಿದ್ದಿದ್ದಂತೆ ಎಂದು ಊಹಾಪೋಹವಾಗಿ ಜನ ಮಾತಾಡಿಕೊಂಡರು.
ಇನ್ನೊಂದು ಕಾರಣಕ್ಕೂ ಈ ಮಳೆಗಾಲ ತುಂಬಾ ದಿನ ನೆನಪಿನಲ್ಲಿ ಉಳಿಯುವಂತಾಯಿತು. ಇತಿಹಾಸ ಮತ್ತು ಪುರಾಣಗಳಲ್ಲಿ ಎಂದೂ, ಎಲ್ಲೂ ದಾಖಲಾಗದ ಈ ಪ್ರಮಾಣದ ವರುಣನ ಕೃಪೆಯಿಂದ, ಯಾವುದೇ ರೀತಿಯ ಜೀವಹಾನಿಯೂ ಆಗಲಿಲ್ಲ. ಸರ್ಕಾರವು ಮುನ್ನೋಟದಿಂದ ವರ್ತಿಸಿತು. ಕೆಳಮಟ್ಟದಲ್ಲಿರುವ ಬಡಾವಣೆಯ ಮನೆಗಳಿಂದ ಜನರನ್ನು ವರ್ಗಾಯಿಸಿತು. ಗಂಜಿ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳಲ್ಲಿ ಸ್ವಯಂಸೇವಕರು ಅಪರೂಪದ ಶ್ರದ್ಧೆಯಿಂದ ದುಡಿದರು. ಉಡಾಫೆಯಿಂದ ಕೆಲವರು ಕಾರುಗಳನ್ನು ಮನೆ ಮುಂದೆ ನಿಲ್ಲಿಸಿದ್ದರೂ, ಅದು ಕೊಚ್ಚಿಕೊಂಡು ಹೋಗಿದ್ದರೂ, ಸರ್ಕಾರಿ ಅಧಿಕಾರಿಗಳು ನಂತರ ಅವನ್ನು ಹುಡುಕಿಕೊಟ್ಟರು. ವಿಕಲ್ಪ-ವಿಕೋಪಗಳ ನಿರ್ವಹಣೆ, ಮಳೆಯಂತೆಯೇ ಇತಿಹಾಸದಲ್ಲಿ, ಸಮಕಾಲೀನ ಬದುಕಿನಲ್ಲಿ ಅಪೂರ್ವವಾಗಿತ್ತು.
ಆದರೆ ನಾಗರಿಕ ಜಗತ್ತು, ಮಾಧ್ಯಮಗಳು ಗಮನಿಸದೆಹೋದ, ಇಲ್ಲ, ಇಲ್ಲ, ಅವರ ಗ್ರಹಿಕೆಯ ಹತ್ತಿರಕ್ಕೂ ಬಾರದ ಒಂದು ಬೆಳವಣಿಗೆ ಮಹಾನಗರದ ಕೇಂದ್ರ ಕಾರಾಗೃಹದ ಆವರಣದಲ್ಲಿ ಕಂಡು ಬಂತು. ನಗರದ ಹೊರವಲಯದಲ್ಲಿರುವ ಜೈಲಿನ ಪ್ರಾಂಗಣವು ತುಂಬಾ ವಿಶಾಲವಾದದ್ದು. ದೂರದೃಷ್ಟಿಯುಳ್ಳ ಆಡಳಿತಗಾರರು, ಮುಂದೆ ಈ ನಗರ ಹೇಗೆ ಬೆಳೆಯಬಹುದು, ಹೇಗೇ ಬೆಳೆದರೂ, ಅಪರಾಧಿಗಳ, ಪಾಪಿಗಳ ಸಂಖ್ಯೆ ಕೂಡ ಎಷ್ಟಿರಬಹುದು ಎಂದೆಲ್ಲಾ ಸರಿಯಾಗಿ ಲೆಕ್ಕಾಚಾರ ಹಾಕಿ, ವಿಶಾಲವಾದ ಪ್ರಾಂಗಣ ಕಟ್ಟಿಸಿದ್ದರು. ಖೈದಿಗಳಿಗೆ ಬೇಕಾಗುವ ಕೋಣೆಗಳ ಸಂಖ್ಯೆ ಮಾತ್ರ ಹೆಚ್ಚಿರಲಿಲ್ಲ. ಪ್ರಾಂಗಣದ ಒಳಗಡೆಯೇ ಪ್ರಾರ್ಥನಾ ಮಂದಿರ, ರಂಗಭೂಮಿ, ಆಸ್ಪತ್ರೆ, ಗ್ರಂಥಾಲಯ, ಕೈತೋಟ, ಕರಕುಶಲ ಕೇಂದ್ರ, ಎಲ್ಲದಕ್ಕೂ ಅನುಕೂಲವಿತ್ತು. ಶೌಚಾಲಯಗಳ ಸಂಖ್ಯೆಯೇ ಹದಿನೇಳಿತ್ತು ಎಂದ ಮೇಲೆ, ಬೇರೆ ಏನನ್ನಾದರೂ ವಿವರಿಸುವ ಅಗತ್ಯವಿದೆಯೇ?
ದೂರದೃಷ್ಟಿಯುಳ್ಳ ಆಡಳಿತಗಾರರ ಲೆಕ್ಕಾಚಾರವನ್ನೂ ಮೀರಿ ಅಪರಾಧಿಗಳು, ಪಾಪಿಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಲೇ ಇತ್ತು. ನಗರವು ಬೆಳೆದಂತೆ, ಎಲ್ಲ ವರ್ಗದ ಜನರು, ತಂತ್ರಜ್ಞರು, ಪೋಲೀಸರು ಕೂಡ ಹೆಚ್ಚಾಗುತ್ತಾರೆ ಎಂಬುದು ನಿಜವಾದರೂ, ಅಪರಾಧಿಗಳ ಸಂಖ್ಯೆಯ ಬೆಳವಣಿಗೆಯ ದರ ಎಲ್ಲ ಅನುಪಾತಗಳನ್ನೂ ಮೀರಿತ್ತು. ಪೋಲೀಸರ ದಕ್ಷತೆ, ನಾಗರಿಕರ ಸಮಾಜಪ್ರಜ್ಞೆಯಿಂದಾಗಿ ಎಲ್ಲ ಠಾಣೆಗಳಲ್ಲೂ ಹೆಚ್ಚು ಹೆಚ್ಚು ದೂರುಗಳು ಬರುತ್ತಿದ್ದವು, ದಾಖಲಾಗುತ್ತಿದ್ದವು. ಕಳ್ಳರು, ಕೊಲೆಗಡುಕರು ಕೂಡ ಬೇಗ ಬೇಗ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಹಾಗೆ ಸಿಕ್ಕಿಬಿದ್ದವರನ್ನೆಲ್ಲ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳುವ ಮುನ್ನ ಕೂಡಿಟ್ಟುಕೊಳ್ಳಲು ಠಾಣೆಗಳಲ್ಲಿ ಕೋಣೆಗಳೇ ಇರಲಿಲ್ಲ. ಇರುವ ಕೋಣೆಗಳೆಲ್ಲ ಭರ್ತಿಯಾಗಿದ್ದವು. ಒಂದೊಂದು ಕೋಣೆಯಲ್ಲಿ ನಾಲ್ಕಾರು ಅಪರಾಧಿಗಳಿದ್ದು, ಒಬ್ಬರ ಮೈಮೇಲೆ ಒಬ್ಬರು ಯಾವಾಗಲೂ ಬೀಳುತ್ತಿದ್ದರು. ಇಲಾಖೆಯ ಎಲ್ಲ ಸ್ತರದಲ್ಲೂ ವಿವರವಾಗಿ ಚರ್ಚಿಸಿ, ಜೈಲು ಅಧಿಕಾರಿಗಳ ಸಹಕಾರ ಪಡೆದು, ಕೇಂದ್ರ ಕಾರಾಗೃಹದ ಪ್ರಾಂಗಣದ ಮಧ್ಯ ಭಾಗದಲ್ಲಿ ಇದ್ದ ವಿಶಾಲವಾದ ಜಾಗದಲ್ಲಿ ಎಂಟು ಅಡಿ ಎತ್ತರದ ಗೋಡೆ ಕಟ್ಟಿಸಿದರು, ಒಂದು ಮೂಲೆಯಲ್ಲಿ ತಡಿಕೆ ಕಟ್ಟಿ ಶೌಚಾಲಯದ ವ್ಯವಸ್ಥೆ ಮಾಡಿದರು ಎನ್ನುವುದನ್ನು ಬಿಟ್ಟರೆ ಬೇರೆ ಯಾವ ಅನುಕೂಲಗಳೂ ಇಲ್ಲ. ಕೋಣೆಯಿಲ್ಲ, ಹಾಸಿಗೆಯಿಲ್ಲ, ಅಡುಗೆ ಮನೆಯಿಲ್ಲ, ಎಲ್ಲವೂ ಬಯಲಿನಲ್ಲೇ ಆಗಬೇಕು. ಮಲಗುವುದು, ಕೂರುವುದು, ಉಣ್ಣುವುದು, ಮೈ ಪರಚಿಕೊಳ್ಳುವುದು, ಸಕಲವೂ. ವಿಚಾರಣೆ, ತನಿಖೆ, ಕೋರ್ಟ್ ಆದೇಶ, ಇವುಗಳಿಗೆಲ್ಲ ಮುಂಚೆಯೇ ಎಲ್ಲ ಅನುಮಾನಿತರನ್ನು ತಂದು ಗುಂಪು ಗುಂಪಾಗಿ ಈ ದೊಡ್ಡಿಯಲ್ಲಿ ಕೂಡು ಹಾಕುತ್ತಿದ್ದರು. ಗೊತ್ತಿಲ್ಲದ, ಗುರಿಯಿಲ್ಲದ ಇವರಿಗೆಲ್ಲ ಊಟ-ತಿಂಡಿ ಕೂಡ ಅಷ್ಟೆ, ಒಂದು ವ್ಯಾನ್ನಲ್ಲಿ ಬರುವುದು. ನೂಕುನುಗ್ಗಲಿನಲ್ಲಿ ಊಟ ಸಿಕ್ಕಿದರೆ ಉಂಟು, ಇಲ್ಲದಿದ್ದರೆ ಇಲ್ಲ. ಹೀಗೇ ನಾಗರಿಕತೆ ನಡೆದುಕೊಂಡು ಹೋಗುತ್ತಿತ್ತು. ಅದೃಷ್ಟ ತುಂಬಾ ಚೆನ್ನಾಗಿದ್ದವರಿಗೆ ನ್ಯಾಯಾಂಗ ಬಂಧನದ ಆದೇಶ ಸಿಕ್ಕಿ ಮೊದಲ ಹಂತದಲ್ಲಿ Dormitoryಗೆ, ನಂತರ ಸಣ್ಣ ಕೋಣೆಗಳಿರುವ ಬ್ಯಾರಕ್ಗೆ ಬಡ್ತಿ ಸಿಗುತ್ತಿತ್ತು.
ಸ್ವರ್ಣಗೌರಿ ವ್ರತ, ವಿನಾಯಕ ಚತುರ್ಥಿಯ ದಿನಗಳನ್ನು ಸೇರಿಸಿಕೊಂಡು ಎರಡು ವಾರ ಬಿಡುವಿಲ್ಲದ ಮಳೆ ಸುರಿಯಿತಲ್ಲ, ಆಕಾಶವೇ ಎಲ್ಲ ಕಡೆಯೂ ತೂತು ಬಿದ್ದು ಹೋಗಿದೆ ಎನ್ನುವ ಹಾಗೆ.
ಗಂಜಿ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳಲ್ಲಿ ಸ್ವಯಂಸೇವಕರು ಅಪರೂಪದ ಶ್ರದ್ಧೆಯಿಂದ ದುಡಿದರು. ಉಡಾಫೆಯಿಂದ ಕೆಲವರು ಕಾರುಗಳನ್ನು ಮನೆ ಮುಂದೆ ನಿಲ್ಲಿಸಿದ್ದರೂ, ಅದು ಕೊಚ್ಚಿಕೊಂಡು ಹೋಗಿದ್ದರೂ, ಸರ್ಕಾರಿ ಅಧಿಕಾರಿಗಳು ನಂತರ ಅವನ್ನು ಹುಡುಕಿಕೊಟ್ಟರು. ವಿಕಲ್ಪ-ವಿಕೋಪಗಳ ನಿರ್ವಹಣೆ, ಮಳೆಯಂತೆಯೇ ಇತಿಹಾಸದಲ್ಲಿ, ಸಮಕಾಲೀನ ಬದುಕಿನಲ್ಲಿ ಅಪೂರ್ವವಾಗಿತ್ತು.
ಜೈಲಿನ ಬಟಾಬಯಲಿನಲ್ಲಿ ಮಾತ್ರ ವಿಚಿತ್ರ, ವಿಪರೀತ ಪರಿಸ್ಥಿತಿ. ಸಾವಿರಾರು ಅನುಮಾನಿತ ನಾಗರಿಕರು, ಭಾವಿ ಖೈದಿಗಳು ಎಲ್ಲ ಹೋಗಬೇಕು; ಸೂರಿಲ್ಲ ತಾರಸಿಯಿಲ್ಲ, ಮರೆಯಿಲ್ಲ ಮನೆಯಿಲ್ಲ, ಬಾಗಿಲಿಲ್ಲ ಕಿಟಕಿಯಿಲ್ಲ. ಮಲಗುವ ಮಾತು ಆ ಕಡೆ ಇರಲಿ, ಒಂದು ಕಡೆ ಕುಳಿತುಕೊಳ್ಳೋಣವೆಂದರೆ, ಎಲ್ಲರೂ ಸೇರಿ ಕುಳಿತರೆ ಕುಳಿತುಕೊಳ್ಳಲು ಕೂಡ ಸ್ಥಳವಿಲ್ಲ. ಮಳೆ ನಿಲ್ಲುವ ತನಕವಾದರೂ Dormitoryಗೆ ಬಿಡಿ, ಸಭಾಂಗಣದೊಳಗೆ ಬಿಡಿ ಅಂದರೆ ಅದಕ್ಕೂ ಒಪ್ಪುವುದಿಲ್ಲ. ಇಲ್ಲಿ ನಮ್ಮ ಬ್ಯಾರಕ್ಗೆ ತಂದು ತುಂಬಬೇಡಿ ಎಂದು ಸೀನಿಯರ್ ಖೈದಿಗಳು ತಗಾದೆ ತೆಗೆದರು. ಇದನ್ನೆಲ್ಲ ಗಮನಿಸಿದ ಹೊಸದಾಗಿ ಜೈಲು ಇಲಾಖೆಗೆ ಸೇರಿದ್ದ ತರುಣ ಅಧಿಕಾರಿಯೊಬ್ಬರು ಸ್ವಲ್ಪ ದಿನ ಕಲ್ಯಾಣ ಮಂಟಪವೊಂದನ್ನು ಬಾಡಿಗೆಗೆ ತೆಗೆದುಕೊಳ್ಳಬಹುದಲ್ಲವೇ ಎಂಬ ಸೂಚನೆ ನೀಡಿದಾಗ, ಎಲ್ಲರೂ ಅಧಿಕಾರಿಯ ಬಾಯಿ ಬಡಿದರು. ಜೀವನಾನುಭವವಿಲ್ಲದವರು ಮಾತ್ರ ಇಂತಹ ಸಲಹೆಗಳನ್ನು ನೀಡುತ್ತಾರೆ ಎಂಬುದು ಹಿರಿಯರ ಅಭಿಪ್ರಾಯವಾಗಿತ್ತು. ಅನುಮಾನಿತರು ಮೊದಲ ದಿನಗಳಲ್ಲಿ ಸ್ವಲ್ಪ ತಾಳ್ಮೆ ತೋರಿದರು.
ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಓಡಾಡುತ್ತಾ ಒದ್ದೆಯಾದ ಬಟ್ಟೆಯನ್ನೇ ಮತ್ತೆ ಮತ್ತೆ ಹಿಂಡಿಕೊಳ್ಳುತ್ತಾ, ಹಾಗೆ ಹಿಂಡಿಕೊಂಡ ಬಟ್ಟೆಯಿಂದಲೇ ಮೈ ಒರೆಸಿಕೊಳ್ಳುತ್ತಿದ್ದರು. ಆದರೆ ಒಂದೆರಡು ದಿನದ ನಂತರ, ಊಟ ನೀಡುವ ವ್ಯಾನ್ ಬರಲೇ ಇಲ್ಲ. ಜೈಲಿನಲ್ಲಿರುವ ಅಡುಗೆ ಮನೆಯವರು ಈ ರೀತಿಯ ಅನುಮಾನಿತರಿಗೆ ಊಟ-ತಿಂಡಿ ಹಾಕುವುದು ತಮ್ಮ ಡ್ಯೂಟಿಯಲ್ಲಿ ಬರುವುದಿಲ್ಲವೆಂದು, ಅದಕ್ಕೆ ಬೇಕಾದ ದಿನಸಿ ಸಾಮಾನುಗಳನ್ನು ಕೂಡ ತಮಗೆ ಯಾರೂ ಒದಗಿಸಿಲ್ಲವೆಂದು ತಕಾರರು ತೆಗೆದರು. ಏನು ಮಾಡಬೇಕು? ಚಳಿ, ಮಳೆ, ಒದ್ದೆ ಬಟ್ಟೆ, ಮಲಗಲು ಕೂರಲು ಜಾಗವಿಲ್ಲ, ಊಟದ ವ್ಯಾನ್ ಬರುತ್ತಿಲ್ಲ; ಅತ್ತರು, ಕಿರುಚಾಡಿದರು, ಎದೆ ಎದೆ ಬಡಿದುಕೊಂಡರು, ಕೂದಲು ಕಿತ್ತುಕೊಂಡರು, ಹೇಗಿದ್ದರೂ ಒದ್ದೆ ಬಟ್ಟೆ ತಾನೆ ಎಂದು ನಗ್ನರಾದರು, ಮೈ ಪರಚಿಕೊಂಡರು, ವಿಚಿತ್ರ ಕೂಗುಗಳನ್ನು ಹಾಕುತ್ತಾ ಕುಣಿದಾಡಿದರು. ಜೈಲಧಿಕಾರಿಗಳಿಗೆ ಇದೆಲ್ಲ ವಿಪರೀತ ಅನಿಸಿತು. ಮೊದಲು ಲಘುವಾಗಿ, ನಂತರ ಯಥೋಚಿತವಾಗಿ ಬೆತ್ತ ಪ್ರಹಾರ ಮಾಡಿದರು. ಭಯ ಇರಲೆಂದು ಕೆಲವರನ್ನು ಎಡಗಾಲಿನಿಂದ ಒದ್ದು ಮೂಲೆಗೆ ನೂಕಿದರು. ಮೈಯೆಲ್ಲಾ ಬಿಸಿಯಾಗುವ ತನಕ ಏಟುಗಳು ಬಿದ್ದವು. ಮೈಯೆಲ್ಲಾ ಈಗಲೇ ಒದ್ದೆಯಾಗಿದ್ದದ್ದರಿಂದ ಬಾಸುಂಡೆ ಮೂಡುವುದು ಕಷ್ಟವಾಗಲಿಲ್ಲ. ಕೆಲವರ ಮೈಯಾದರೂ ನೀಲಿಗಟ್ಟಿತು. ಅದನ್ನು ತೋರಿಸಲು ಕೂಡ ಯಾರೂ ಇರಲಿಲ್ಲ.
ಈ ಕಾಲಾವಧಿಯಲ್ಲೇ ವಿನಾಯಕನ ಸಾರ್ವಜನಿಕ ವಿಸರ್ಜನೆ ಕೂಡ ಮುಗಿದು, ಮಳೆ ಕ್ರಮೇಣವಾಗಿ ನಿಲ್ಲುತ್ತಾ ನಾಗರಿಕ ಜಗತ್ತಿನ ಬದುಕು ಕೂಡ ಸುಸೂತ್ರವಾಗಿ ನಡೆಯಲು ಪ್ರಾರಂಭಿಸಿತು. ಜೈಲು ಮತ್ತು ಮಳೆಯ ಸಂಬಂಧ ಹೊರ ಜಗತ್ತಿನಲ್ಲಿ ಯಾರಿಗೂ ಗೊತ್ತಾಗದಿದ್ದರಿಂದ, ಶತಮಾನದಲ್ಲೇ ಅಪರೂಪವಾದ ಮಳೆಯನ್ನು, ನಂತರದ ಪರಿಸ್ಥಿತಿಯನ್ನು ಸರ್ಕಾರ ಯಾವುದೇ ರೀತಿಯ ಸಾವು ನೋವಿಲ್ಲದ ರೀತಿಯಲ್ಲಿ ನಿರ್ವಹಿಸಿದ ರೀತಿಯನ್ನು ಕುರಿತು ಎಲ್ಲ ಕಡೆಯೂ ಮೆಚ್ಚುಗೆಯ ಮಾತುಗಳೇ ಕೇಳಿಬಂದವು. ಮಳೆ, ಪ್ರವಾಹದಿಂದಾಗಿ ಪ್ರತಿವರ್ಷವೂ ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುತ್ತಿದ್ದ ರಾಜ್ಯಗಳು ಕರುನಾಡಿನ ಮಾದರಿ ಆಡಳಿತದಿಂದ ಕಲಿಯಬೇಕಾದ್ದು ಬಹಳವಿದೆ ಎಂದು ಅಧಿಕಾರಿಗಳ ನಿಯೋಗಗಳನ್ನು ಕಳಿಸಿದವು.
ಜೈಲು, ಮಳೆ, ಬಾಸುಂಡೆ ಸಂಬಂಧಗಳ ಬಗ್ಗೆ ನನಗೂ ಏನೇನೂ ಗೊತ್ತಿರಲಿಲ್ಲ. ವಾವೆಯಲ್ಲಿ ನಮ್ಮ ಚಿಕ್ಕಪ್ಪನಾಗಬೇಕಾಗಿದ್ದವರೊಬ್ಬರು ಬಾಲ್ಯದಿಂದಲೂ ಸಣ್ಣ-ಪುಟ್ಟ ಕಳ್ಳತನಗಳನ್ನು ಮಾಡುತ್ತಾ ಆಗಿಂದಾಗ್ಗೆ ಜೈಲಿಗೆ ಹೋಗಿ ಬರುತ್ತಿದ್ದರು. ಈಚೆಗೆ ಅವರು ಸಿಕ್ಕಿರಲೇ ಇಲ್ಲ. ಮಳೆಯ ಸಂದರ್ಭದಲ್ಲಿ ಜೈಲಿನ ಬಟಾಬಯಲಿನಲ್ಲಿ ಸಿಕ್ಕಿಹಾಕಿಕೊಂಡು ಬಾಸುಂಡೆ ಬರಿಸಿಕೊಂಡವರಲ್ಲಿ ಅವರೂ ಒಬ್ಬರಾಗಿದ್ದರು. ಮಳೆಯ ಪ್ರಕೋಪವೆಲ್ಲ ಮುಗಿದ ಮೇಲೆ ಅವರಿಗೆ ನ್ಯಾಯಾಂಗ ಬಂಧನಕ್ಕೆ ಬಡ್ತಿ ಸಿಕ್ಕಿದ್ದರಿಂದ, ಬ್ಯಾರಕ್ಗೆ ಹೋಗುವಾಗ ಪರಿಚಿತರ ವಿಳಾಸವೆಂದು ನನ್ನ ವಿಳಾಸ ಕೊಟ್ಟಾಗ ನಾನು ಅವರನ್ನು ನೋಡಲು ಹೋಗಿದ್ದೆ. ಚಿಕ್ಕಪ್ಪನ ಮುಂಗೈ, ಕತ್ತಿನ ಭಾಗದಲ್ಲಿ ಮೂಡಿದ್ದ ಬಾಸುಂಡೆಗಳನ್ನು ನೋಡಿದಾಗ ತುಂಬಾ ಬೇಜಾರಾಯಿತು. ಮುಂದಿನ ಸಲ ಬಂದಾಗ ಹಚ್ಚಿಕೊಳ್ಳಲು ಯಾವುದಾದರೂ ಮುಲಾಮು ತಂದುಕೊಡಪ್ಪಾ ಎಂದು ಹೇಳಿದ್ದರು. ಮರೆತೇ ಹೋಯಿತು. ಮುಂದಿನ ಸಲ ಹೋದಾಗ ನೆನಪಿಟ್ಟುಕೊಂಡು ತಗೊಂಡು ಹೋಗಿ ಕೊಡಬೇಕು.
(“ಜೈಲು ಕತೆಗಳು” ಸರಣಿಯ ಎಲ್ಲ ಬರಹಗಳೂ ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಪುಸ್ತಕದ ವಿವರಗಳು…
ಕೃತಿ: ಜೈಲು ಕತೆಗಳು, ಲೇಖಕರು: ಕೆ. ಸತ್ಯನಾರಾಯಣ, ಪ್ರಕಾಶಕರು: ಅಮೂಲ್ಯ ಪುಸ್ತಕ (9448676770), ಬೆಲೆ: 170/-)
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.