ಉಸಿರಾಡಿದ್ದೆ ಅವಳೆದೆ ನಡುವೆ. ಏನೊ ಸುಖ ತೊಟ್ಟಿಲ ಕೂಸಂತೆ. ತಾಯನ್ನು ಅಪ್ಪ ಕೊಲ್ಲುವನು ಎಂಬುದು ಈ ಹುಚ್ಚಿಗೆ ಹೇಗೆ ಗೊತ್ತಾಯಿತು! ಯಾರಿಗೂ ಗೊತ್ತಿಲ್ಲದ್ದ ಹೇಗೆ ಪತ್ತೆ ಮಾಡಿದ್ದಳು. ಇವಳೆಂತಹ ಹುಚ್ಚಿ. ಇಲ್ಲವೇ ಯಕ್ಷಿಣಿ ಇರಬೇಕೇ? ಎಷ್ಟು ವಿಷಯಗಳೆಲ್ಲ ತಂತಾನೆ ಅವಳಿಗೆ ತಿಳಿಯುತ್ತಿದ್ದವು. ಅವತ್ತೊಂದಿನ ನಟ್ಟಿರುಳಲ್ಲಿ ನಾಳೆ ಬೆಳಿಗ್ಗೆ ಇಂತವರು ಸಾಯುತ್ತಾರೆ ಎಂದು ಹೇಳಿದ್ದಳು. ಹಾಗೇ ಆ ಊರ ದೊಡ್ಡ ಸಾಹುಕಾರ ಪ್ರಾಣ ಬಿಟ್ಟಿದ್ದ. ಒಹೋ; ಅವಳಲ್ಲಿ ಮೃತ್ಯು ದೇವತೆಯೂ ಸೇರಿಕೊಂಡಿದ್ದಾಳೆಂದು ಜನ ಅವಳ ಕಣ್ಣಿಂದ ತಪ್ಪಿಸಿಕೊಳ್ಳುತ್ತಿದ್ದರು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಹದಿಮೂರನೆಯ ಕಂತು

 

ಅದೊಂದು ದಟ್ಟ ಮರೆಯ ಹೊಳೆಯ ನಿರ್ಜನ ಪ್ರದೇಶ. ಜೀವನಕ್ಕೆ ವಿದಾಯ ಹೇಳಿ ಅಲ್ಲಿ ನೆಗೆದು ಬಿದ್ದು ಪ್ರಾಣ ಬಿಡುತ್ತಿದ್ದರು. ಗಂಡಸರಾರೂ ಹೆಂಡತಿಯ ಕಾಟ ಸಾಕೆಂದು ನೀರಿಗೆ ಹಾರಿ ಜೀವ ಬಿಟ್ಟ ಒಂದು ಸಂಗತಿಯೂ ನನಗೆ ಗೊತ್ತಿಲ್ಲ. ಹೆಂಗಸರಿಗೆ ಅದು ಯಾಕೆ ಅಷ್ಟು ಸುಲಭವಾಯಿತೊ ಗೊತ್ತಿಲ್ಲ.

ನಮ್ಮ ಊರಲ್ಲಿ ಒಬ್ಬ ಹುಚ್ಚಿಯಿದ್ದಳು. ಸದಾ ಸಿಂಡ್ರೆಲಾ ಕ ತೆಯ ಕೊಳಕಿಯಂತಿದ್ದಳು. ತಂಗಿಯರೆಲ್ಲ ಚತುರೆಯರು. ಬೇಕಾದ ಗಂಡಸರು  ಕುದುರೆ ಮೇಲೆ ಕೂರಿಸಿಕೊಂಡು ಹೊರಟು ಹೋಗುತ್ತಿದ್ದರು. ಆಕೆಯ ಅಪ್ಪ ಅಮ್ಮ ಮುಗ್ದರು. ಹುಚ್ಚಿ ಮಗಳ ಚಿಂತೆಯಲ್ಲಿ ಸದಾ ಪರಿತಪಿಸುತ್ತಿದ್ದರು. ಆ ಹುಚ್ಚಿಯ ಹೆಸರು ಅಮರಾವತಿ. ಛೇ ಎಂತಹ ನಾಮಾಂಕಿತ! ಜನ ಇಟ್ಟಿದ್ದ ಹೆಸರು ನಾತಿ. ಅಂದರೆ ಕೊಳಕಿ. ಅವಳು ಯಾವಾಗ ಎಲ್ಲಿ ಸ್ನಾನ ಮಾಡುವಳೊ ಎಂಬುದೆ ಯಾರಿಗೂ ತಿಳಿದಿರಲಿಲ್ಲ. ಅವಳ ತಲೆ ತುಂಬ ಹೇನುಗಳು ತುಂಬಿಕೊಂಡಿದ್ದವು. ಅಸಾಧಾರಣ ಧೈರ್ಯವಂತೆ. ಸದಾ ಸೊಂಟದಲ್ಲಿ ಒಂದು ಹರಿತ ಕತ್ತಿಯ ಇಟ್ಟುಕೊಂಡಿದ್ದಳು.

ಯಾವುದೊ ದೆವ್ವ ಅವಳ ಮೋಹಕ್ಕೆ ಸಿಲುಕಿ ಆಕೆಯ ದೇಹದಲ್ಲಿ ಬಂದು ಜೀವನ ಮಾಡುತ್ತಿದೆ ಎಂದು ಮಡಕೂಸಮ್ಮ ಹೇಳುತ್ತಿದ್ದಳು. ಮಡಕೂಸಿಗೆ ಹುಚ್ಚಿ ಹತ್ತಿರದ ಒಂದೇ ವಟಾರದವಳು. ಊರ ಯಾವ ಗಂಡಸರನ್ನೂ ಕಂಡರಾಗುತ್ತಿರಲಿಲ್ಲ. ಜನರ ಸಹವಾಸ ಇಲ್ಲದೆ ಬದುಕುವುದನ್ನು ಚೆನ್ನಾಗಿ ಅಳವಡಿಸಿಕೊಂಡಿದ್ದಳು. ಎಲ್ಲಿ ನಾಲ್ಕು ಜನ ಸೇರುತ್ತಾರೊ ಅಲ್ಲಿಂದ ದೂರ ಸರಿಯುತ್ತಿದ್ದಳು. ಯಾವ ಗುಡಿಗೂ ಹೋಗುತ್ತಿರಲಿಲ್ಲ. ಆದರೆ ದೇವರ ಹಬ್ಬಗಳಲ್ಲಿ ನಿಯಂತ್ರಿಸುವುದು ಬಹಳ ಕಷ್ಟವಿತ್ತು. ಅದೇಗೊ ಮಾಯದಲ್ಲಿ ಪ್ರತ್ಯಕ್ಷವಾಗಿ ಬಿಡುತ್ತಿದ್ದಳು. ದೇವರಿಗೆ ಸವಾಲು ಹಾಕುವಂತೆ ಕುಣಿಯುತ್ತಿದ್ದಳು. ತಮಟೆ ನಗಾರಿಯವರು ಅಮರಾವತಿ ಬಂದಳು ಎಂದರೆ ಅವರ ಮೈಮೇಲೆ ಆವೇಶ ಬಂದು ಬಿಡುತ್ತಿತ್ತು. ಊರಾದ ಊರ ಹೆಂಗಸರೆಲ್ಲ ಬೆರಗಾಗುತ್ತಿದ್ದರು. ಆರ್ಭಟಿಸಿ ಕೇಕೆ ಹಾಕುತ್ತಿದ್ದಳು. ಸೀರೆ ಸೆರಗ ಸೊಂಟಕ್ಕೆ ಬಲವಾಗಿ ಕಟ್ಟಿಕೊಂಡಿರುತ್ತಿದ್ದಳು. ಕುಪ್ಪಸ ಬಿಗುವಾಗಿತ್ತು. ಹಣೆ ತುಂಬ ಹರಿಶಿಣ ಕುಂಕುಮ ಮೆತ್ತಿರುತ್ತಿದ್ದಳು. ಅದು ಹೇಗೊ ಕಾಡಿಗೆಯನ್ನು ಕಣ್ಣುಗಳಿಗೆ ದೊಡ್ಡದಾಗಿ ಬಳಿದುಕೊಂಡಿರುತ್ತಿದ್ದಳು.

ಆಗಂತು ಅವಳನ್ನು ಯಾರೂ ಹುಚ್ಚಿ ಎನ್ನುತ್ತಿರಲಿಲ್ಲ. ಜನ ಬೇಸರಪಡುತ್ತಿರಲಿಲ್ಲ. ತಾಯಿ ಮಾರವ್ವನ ತಂಗಿ ಹುಚ್ಚಿ ಮೇಲೆ ಬಂದಿದ್ದಾಳೆ ಎಂದು ನಂಬುತ್ತಿದ್ದರು. ಬಿಡಿ ದಿನಗಳಲ್ಲಿ ಅಷ್ಟೊಂದು ತಿರಸ್ಕಾರ ಮಾಡುತ್ತಿದ್ದ ಜನ; ದೇವರ ಉತ್ಸವದಲ್ಲಿ ಅವಳನ್ನು ಮೆರೆಸುತ್ತಿದ್ದರು. ಕೆಲವರು ಕಾಲಿಗೆ ಬೀಳುತ್ತಿದ್ದರು. ಮಡಿಲಲ್ಲಿ ಹರಿಶಿಣ ಕುಂಕುಮ ತುಂಬಿಕೊಂಡು ಆಗಾಗ ಗಾಳಿಗೆ ತೂರಿ ಎರಚುತಿದ್ದಳು. ಮಾರವ್ವನ ಪೂಜಾರಪ್ಪ ಸಪ್ಪಗಾಗಿಬಿಡುತ್ತಿದ್ದ. ತಮಟೆ ನಗಾರಿಯವರು ಪೂಜಾರಪ್ಪನನ್ನು ಗಮನಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ.

ತೆಂಬಿಟ್ಟಿನ ತಟ್ಟೆ, ಮಡೆ ಹೊತ್ತ ಊರ ಹೆಂಗಸರೆಲ್ಲ ಹೈಚೋಚಿಗ. ದೇವಾನು ದೇವತೆಯರು ಹುಚ್ಚಿಯಾಗಿ ಯಾಕೆ ಇಂಗೆ ಕುಣೀತಾರೆ ಎಂದು ಹೆದರುತ್ತಿದ್ದರು. ಹುಚ್ಚಿಗೆ ಪ್ರಜ್ಞೆಯೆ ಇರಲಿಲ್ಲ. ಜನರ ಹರ್ಷೋದ್ಗಾರಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿದ್ದಳು. ಅವಳ ಮೈಯನ್ನು ಯಾರೂ ಮುಟ್ಟುತ್ತಿರಲಿಲ್ಲ. ಅಂತಹ ಯಾವ ವಾಂಛೆಯೂ ಅವಳಿಗೆ ಇರಲಿಲ್ಲ. ಯಾವ ಪುರುಷರೂ ಮುಟ್ಟಿರಲಿಲ್ಲ. ಯಾಕೊ ಏನೊ ಗಂಡಸರೆಂದರೆ ಅವಳಿಗಾಗುತ್ತಿರಲಿಲ್ಲ. ಮನುಷ್ಯರೇ ಇಲ್ಲದ ಲೋಕದಲ್ಲಿ ಪ್ರಾಣಿ ಪಕ್ಷಿಗಳ ಜೊತೆ ಇದ್ದು ಬಿಡುತ್ತಿದ್ದಳೇನೊ.

ಕುಂತಲ್ಲಿ ಕೂರುತ್ತಿರಲಿಲ್ಲ. ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಯಾವಾಗಲೂ ಕೊಳಕಾಗಿರುತ್ತಿದ್ದಳು. ಅವಳು ನಕ್ಕಿದ್ದನ್ನು ಯಾರೂ ಕಂಡಿರಲಿಲ್ಲ. ಯಾರಾದರೂ ಎಲೆ ಮೇಲೆ ಏನಾದರೂ ಹಾಕುತ್ತಿದ್ದರು. ಅದನ್ನೆ ಉಣ್ಣುತ್ತಿದ್ದಳು. ಯಾರ ಜೊತೆಗೂ ಮಾತಿಲ್ಲ. ಊರವಳು ಎಂದು ಜನ ಅನುಕಂಪದಲ್ಲೆ ಇದ್ದರು.

ಯಾರೊ ಒಬ್ಬ ಕುದುರೆ ಗಾಡಿಯ ಮೇಲೆ ಬಂದ. ಅದ್ಧೂರಿ ಅಶ್ವ. ಗಾಡಿಯ ಅಲಂಕಾರವೇ ಚಂದ. ಅಲ್ಲೊಂದು ಬನ್ನಿ ಮರವಿತ್ತು. ನದಿ ದಡವದು. ಅವಳನ್ನು ಗಮನಿಸಲಿಲ್ಲ. ಕುದುರೆಗೆ ನೀರು ಕುಡಿಸಿ ಮೈ ತೊಳೆದುಕೊಂಡ. ಉಲ್ಲಾಸ ತುಂಬಿತು. ಕುದುರೆ ಕೆನೆಯಿತು. ಅಮರಾವತಿ ಉದಾಸೀನದಿಂದ ನೋಡಿದಳು. ಚೆಲುವಾಗ ಕುದುರೆಗಾಡಿ ಕಟ್ಟಿದ ಹುಚ್ಚಿ ಆ ಮರದ ನೆರಳಲ್ಲಿ ಕೂತಿದ್ದಳು. ಮಾತಾಡಬೇಕೆನಿಸಿತು ಅವನಿಗೆ…

‘ಎಲ್ಲಿಗೆ? ಯಾವೂರು? ಬರುವೆಯಾ ನನ್ನ ಜೊತೆ?’

‘ಬರುವಾಗಲೂ ಯಾರೂ ಇಲ್ಲ, ಹೋಗುವಾಗಲೂ ಯಾರೂ ಇಲ್ಲ’

‘ಅಂಗನ್ನಬಾರದು; ನೀನು ಬರುವಾಗಲೇ ಒಂದು ಗಂಡು ಹುಟ್ಟಿರುತ್ತದೆ. ಒಂದು ಗಂಡು ಹುಟ್ಟಿದಾಗಲೇ ಇನ್ನೆಲ್ಲೊ ಒಂದು ಹೆಣ್ಣು ಜನ್ಮ ಪಡೆದಿರುತ್ತದೆ.

‘ಇರಬಹುದೂ… ನಾನೀಗ ಅದಕೇನು ಮಾಡಲಿ’

‘ನನ್ನ ಜೊತೆ ಬಂದು ಬಿಡೂ… ದೂರ ಕರೆದೊಯ್ಯುವೆ’

‘ನೋಡಿದೆಯಾ ಅಪರಿಚಿತ ಒಂದು ಕೊಳಕಿ ಹೆಣ್ಣು ಮಾತಾಡಿದರೂ ನೀವು ಗಂಡಸರು ಎಷ್ಟೊಂದು ಯೋಜನೆ ಹಾಕಿಕೊಳ್ಳುತ್ತೀರಿ? ನಿನ್ನನ್ನು ಮಾತಾಡಿಸಿದ್ದೇ ತಪ್ಪಾಯ್ತು; ನಾ ನಿನ್ನೊಡನೆ ಬರಲಾರೆ ಹೊರಟು ಹೋಗು’

‘ನಿನ್ನ ಅಂತರಂಗದ ಸೌಂದರ್ಯ ಅಪಾರವಾಗಿದೆ. ಅದಕ್ಕೆ ಮರುಳಾದೆ ನಾನು. ಬಾ ಚೆಲುವೇ ಬಾ’

‘ನಾನೊಂದು ವಾಸನೆಯ ಹೆಂಗಸು. ಮಾಸದ ಒಡಲವಳು ಮುಟ್ಟುವುದೂ ಅಷ್ಟು ಸುಲಭವಲ್ಲ… ಹೋಗು ಹೋಗು’

‘ನೀನು ಯಾರೆಂದಾದರೂ ಹೇಳು. ನನಗೆ ಕೊಂಚ ಅತೀಂದ್ರಿಯತೆ ಗೊತ್ತು. ಯಾರೊಳಗೆ ಏನಿದೆ ಎಂಬುದು ಗೊತ್ತು.’

‘ಒಹೋ; ನೀನೊಬ್ಬ ಮಾಟಗಾರನೊ… ಮೋಸಗಾರತಾನೆ’

‘ಖಂಡಿತ ಇಲ್ಲಾ. ದೈವದ ಕೃಪೆಯಲ್ಲಿ ಕೆಲವರ ಮುಖದಲ್ಲಿ ಏನೊ ವಿಶೇಷ ಕಾಣಿಸುತ್ತದೆ’

‘ಅದೆಲ್ಲ ಬೇಡ. ಒಳಗಿನದು ಹೊರಗಿನದು ಎರಡೂ ನನಗೆ ಸಂಬಂಧವಿಲ್ಲಾ. ಹಾದಿ ಹೋಕ ನೀನು; ಸರಿಯಾಗಿ ನಿನ್ನ ದಾರಿಯ ಕಂಡುಕೊ ಹೋಗು’

ವಿಷಾದದಲ್ಲಿ ಅವನ ಕುದುರೆ ಕೆನೆಯಿತು. ಗಾಡಿ ಹತ್ತಿ ಆ ಮನುಷ್ಯ ಹೊರಟು ಹೋದ. ಹುಚ್ಚಿಗೆ ಹಗಲು ರಾತ್ರಿಗಳ ಪರಿವೆಯೆ ಇರಲಿಲ್ಲ. ದೆವ್ವ ಎಂದು ಹೆದರಿಸುತ್ತಿದ್ದಳು. ವಿಚಿತ್ರ ಸದ್ದುಗಳ ನೀರವ ರಾತ್ರಿಗಳಲ್ಲಿ ಹೊರಡಿಸುತ್ತಿದ್ದಳು. ಊರವರೆಲ್ಲ ಅವಳನ್ನು ಬಿಟ್ಟು ಬಿಟ್ಟಿದ್ದರು. ಮಕ್ಕಳೂ ಹೆದರುತ್ತಿದ್ದವು. ಕೆಲವರೂ ಇವಳನ್ನು ಹಿಡಿದು ಹಗ್ಗ ಕಟ್ಟಿ ದೂರದ ಊರೊಂದಕ್ಕೆ ರಾತ್ರಿ ವೇಳೆ ಬಿಟ್ಟು ಬರಬೇಕು ಎಂದು ಪಂಚಾಯ್ತಿ ಮಾಡಿದ್ದರು.

ಆಗಾಗ ನಾನವಳ ಕಣ್ಣಿಗೆ ಬೀಳಲು ಭಯ ಪಡುತ್ತಿದ್ದೆ. ಒಂದು ದಿನ ಮಾಯದಲ್ಲಿ ಬಂದು ಹೆಗಲ ಮೇಲೆ ಕೈ ಹಾಕಿ ಕೆನ್ನೆ ಸವರಿ ಮುತ್ತುಕೊಟ್ಟಿದ್ದಳು. ಹುಚ್ಚೆ ಉಯ್ದುಕೊಳ್ಳುವಂತಾಗಿತ್ತು.

‘ಅಳಬ್ಯಾಡಾ; ಯದರಬ್ಯಾಡಾ ನೀನಂದ್ರೆ ನನಗೆ ಪ್ರೀತಿ’

ಗಂಟಲು ಒಣಗಿತ್ತು. ಮುಖ ನೋಡಲಾಗದೆ ತಲೆ ತಗ್ಗಿಸಿದೆ. ‘ನನ್ನ ಮುಖ ನೋಡೊ; ನಿಮ್ಮಮ್ಮ ಗೆಣಿಕಾತಿ ನಾನೂ, ನಿಮ್ಮತ್ತೆಯರೂ ನನಗೆ ಇಷ್ಟ… ನಿಮ್ಮಪ್ಪನ ಬಿಡೂ… ಮುಂದೆ ಎಂಗೆ ಸಾಯ್ತನೆ ಅನ್ನುದಾ ನೀನೆ ನೋಡ್ತಿಯೇ… ನಾನು ದೆವ್ವ ಆಗಿದ್ರೆ ಇಷ್ಟೊತ್ತಿಗೆ ಮುರ್ಕತಿದ್ದೆ. ಒಂದು ಕಸದ ಹೆಂಗಸು ನಾನು! ಏನ ಮಾಡಲಿ? ಒಂದನಿಯ ಕಂಬನಿಯ ನೀಡಬಲ್ಲೆ ನಿನಗೆ… ಅಷ್ಟೇ! ನೆನಪಿಟ್ಟುಕೊ; ದೇವರಿದ್ದಾನೊ ಇಲ್ಲವೊ… ಅವನ ಅಗತ್ಯ ನಮಗಿಲ್ಲ. ನಮ್ಮ ಇಚ್ಚಾ ಶಕ್ತಿಯೆ ನಮ್ಮ ದೇವರು. ಆ ನಮ್ಮೊಳಗಿನ ಚೈತನ್ಯ ಕೈಗೂಡದಿದ್ದರೆ ಯಾವ ದೇವರಿಂದಲೂ ಒಂದು ನಯಾ ಪೈಸೆಯಷ್ಟು ಉಪಕಾರವಿಲ್ಲ.

ನಿಮ್ಮಪ್ಪ ಆ ಮಂಗಾಡಳ್ಳಿ ಹುಚ್ಚನ ಕಡಿಸುವಾಗ ಪೊದೆ ಮರೆಯಲ್ಲಿ ಕೂತು ಎಂಗೆ ನೋಡುತ್ತಿದ್ದ ಗೊತ್ತೇ… ಅವನ ಒಂದೊಂದು ಛೀತ್ಕಾರವೂ ಅವನ ಕಿವಿ ಮೇಲೆ; ದೇವರೇ ಕಡಿಸುವ ಮಾತಿನಂತೆ ಬಡಿಯುತ್ತಿದ್ದವು. ಅಂತವನಿಗೆ ಹುಟ್ಟಿ ಬಿಟ್ಟೆಯಲ್ಲೊ ನೀನೂ! ಹೋಗಲಿ ಬಿಡು ಆ ಹಳೆಯ ಹಿಂಸೆ ಈಗ ಯಾಕೆ ಬೇಕೂ… ನಿನ್ನ ಪುಟ್ಟ ತುಟಿ ಹಲ್ಲು ನಿನ್ನ ತಾಯಿಯವು. ನಿನ್ನ ಹಣೆ ಕಣ್ಣು ಮೂಗು ಕಿವಿ ಕಂಡರೆ ಕಿತ್ತುಕೊಂಡು ತಿಂದು ಬಿಡಬೇಕು ಅನಿಸ್ತದೆ.

ಯಾರಿಗಾದರೂ ಹೆದರದಿರು ಒಂದು ಕಪ್ಪು ಇರುವೆ ಬಂದರೂ ಅಧೀರನಾಗದಿರು. ಹೆದರುವುದೆ ದೆವ್ವ ಧೈರ್ಯವಿರುವುದೆ ದೇವರು. ಹುಚ್ಚ ಕಳ್ಳ ಕೊಲೆಪಾತಕಿ ಇವರೆಲ್ಲ ಎಲ್ಲಿಂದ ಬಂದರು? ನಮ್ಮ ನಡುವಿನಿಂದಲೇ ನಮ್ಮ ನಡತೆಗಳ ಕಾರಣಗಳಿಂದಲೇ ಬಂದವರು. ಕಳ್ಳ ಸುಳ್ಳ ಪಾತಕಿಗಳ ಮನುಷ್ಯರನ್ನಾಗಿ ಪರಿವರ್ತಿಸುವುದು ಸುಲಭ. ಆದರೆ ಬುದ್ಧಿವಂತರೆಂಬ ನಯವಂಚಕರನ್ನು ಮಾನವರಾಗಿ ಬದಲಾಯಿಸುವುದು ಬಹಳ ಕಷ್ಟ. ಕ್ರೌರ್ಯ ಸದಾ ಎದೆಯ ಮರೆಯಲ್ಲೆ ಅರೆನಿದ್ದೆಯಲ್ಲಿ ಸಂಚಿಗಾಗಿ ಕಾಯುತ್ತಿರುತ್ತದೆ. ನಿನಗೆ ಇದೆಲ್ಲ ಗೊತ್ತಿಲ್ಲ. ಹುಚ್ಚಿಯಾದ ನನಗೆ ಮನುಷ್ಯರ ದರ್ಶನವಾಗಿಬಿಟ್ಟಿದೆ! ನಿನಗಿನ್ನೂ ಮೀಸೆಯೇ ಬಂದಿಲ್ಲವಲ್ಲೊ… ಯಾವಾಗ ಗಂಡಸಾಗುವೆ’ ಎಂದು ತಲೆಸವರಿದ್ದಳು. ಏನೊ ನಿರಾಳವಾಯಿತು. ಹುಚ್ಚಿ ಯಾವತ್ತೂ ನನ್ನ ಹೆದರಿಸಿರಲಿಲ್ಲ. ಒಮ್ಮೊಮ್ಮೆ ತಣ್ಣಗೆ ಮರದ ಕೆಳಗೆ ಕೂತು ತನ್ನ ಪಾಡಿಗೆ ತಾನಿರುತ್ತಿದ್ದಳು.

ಭೂತ ಪಿಶಾಚಿ ಕಾಟ ಎಂದು ಮಂತ್ರದ ದಾರ ಕಟ್ಟಿಸಿದ್ದರು. ಆ ಕೂಡಲೆ ಕಿತ್ತು ಬಿಸಾಡುತ್ತಿದ್ದಳು. ನನ್ನ ತಾಯಿಯ ಕಂಡು ಮಾತಾಡಿ ಕೈ ಹಿಡಿದುಕೊಳ್ಳುತ್ತಿದ್ದಳು. ನನ್ನ ತಾಯಿಗೆ ಭೀತಿಯೆ ಇರಲಿಲ್ಲ.

‘ಇರ್ಲೀ ತಾಳವ್ವ; ಒಳ್ಳೆ ಕಾಲ ಬರ್ತದೆ ಬಂದೇ ಬರ್ಬೇಕು; ನೀನಲ್ಲ ಹುಚ್ಚಿ ಇನ್ನೂ ಸ್ವಲ್ಪ ಕಾಯುತ್ತಿರು, ನಿನ್ನನ್ನೇ ಕಾಲ ಹುಡಿಕಂಡು ಬತ್ತದೆ’ ಎಂದಿದ್ದಳು ನನ್ನ ತಾಯಿ, ಹಾಗಾಗಿಯೇ ಆ ಹುಚ್ಚಿಗೆ ನನ್ನ ಮೇಲೂ ಪ್ರೀತಿ, ಮಮಕಾರ ಏನೊ ಮೋಹ! ಅನಂತರದಿಂದ ಹುಚ್ಚಿ ಕಂಡಾಗಲೆಲ್ಲ ಸುಮ್ಮನೆ ನಗುತ್ತಿದ್ದೆ. ಅವಳು ಹಾಗೇ ಹೊರಟು ಹೋಗುತ್ತಿದ್ದಳು. ಊರಾಚೆ ಓಡಿಸಿ ಅವಳ ಎಂದು ಆಗಾಗ ಕೆಲವರು ತಗಾದೆ ತೆಗೆಯುತ್ತಿದ್ದರು. ಅಂತವರ ಮನೆಗೆ ನುಗ್ಗಿ ಎಂತಹ ರಾಕ್ಷಸಿ ಆಗಿ ಗಂಡಸರಿಗೇ ಬಡಿಯುತ್ತಿದ್ದಳು ಎಂದರೆ ಅದನ್ನು ಹೇಳಲಾಗದು. ಆವೇಶದಲ್ಲಿ ಬೇಕಾದರೆ ಕೊಂದೇ ಬಿಡುತ್ತಿದ್ದಳು. ಅಂತಹ ಜಗಳಗಳಲ್ಲಿ ಅಕಸ್ಮಾತ್ ಹುಚ್ಚಿ ಕಚ್ಚಿದಳು ಎಂದರೆ ವರ್ಷ ಒಂದರೊಳಗೆ ಆ ವ್ಯಕ್ತಿ ಸತ್ತು ಹೋಗುವನು ಎಂಬ ಪ್ರತೀತಿ ಇತ್ತು. ಅಕಸ್ಮಾತ್ ಒಂದಿಬ್ಬರು ಸತ್ತು ಹೋಗಿದ್ದರು. ಅವಳನ್ನು ಊರು ಬಿಡಿಸುವುದು ಸಾಧ್ಯವೇ ಇರಲಿಲ್ಲ. ‘ಒಂದು ದಿನ ಸತ್ತು ಹೋಗುತ್ತಾಳೆ ಯಾರೂ ಊಟ ಹಾಕದಿದ್ದರೆ’ ಎಂದು ಜನ ಗುಸು ಗುಸು ಮಾತಾಡಿದ್ದರು. ಎಂತಹ ಗಟ್ಟಿ ಜೀವದ ಮಾಯಾವಿಯೊ ಅವಳು!

ಮಡಕೂಸಮ್ಮನಿಗೆ ಮಾಟ ಮಂತ್ರ ಗೊತ್ತಿತ್ತು. ಏನೇನೊ ಪ್ರಯೋಗ ಮಾಡಿದ್ದಳು. ಮೆಟ್ಕಂದಿರು ಪಿಶಾಚಿಯೇ; ನೀನು ಬಿಟ್ಟು ಹೋಗು; ನಾಲ್ಕು ಕಾಲಿನ ಬೇಟೆ ಮಾಡಿಸಿ ನಿನ್ನ ನೆನಪಿಗೆ ಕಲ್ಲು ನೆಡಿಸುವೆ ಎಂದು ಹರಕೆ ಕಟ್ಟಿಕೊಂಡಿದ್ದಳು. ಆಗಾಗ ನನ್ನ ನೆನೆದು ಅವನ ಕರೆಸಿ; ನನ್ನ ತೊಡೆ ಮೇಲೆ ಕೂರಿಸಿಕೊಳ್ಳಬೇಕು ಎನ್ನುತ್ತಿದ್ದಳು. ನನ್ನಪ್ಪ ಇಂತಹ ಸಂಗತಿಗಳಲ್ಲಿ ಪುಕ್ಕಲ. ಕಳಿಸಿಕೊಡೀ; ಅವಳು ಕತ್ತು ಮುರಿದರೆ ನಾನು ಜವಾಬ್ದಾರನಲ್ಲ ಎನ್ನುತ್ತಿದ್ದ. ಇನ್ನು ಆ ತಾತ ದೆವ್ವಗಳ ದೊರೆಗೆ ಈ ಸಮಸ್ಯೆ ಹೇಳಿದರೆ;
“ಎಲ್ಲಿ ಸರೋಯ್ತದೆ. ಇನ್ನು ರವಸ್ಟು ಕರ್ಮ ಅದೇ… ಅದು ಮುಗೀತದೆ. ಬಿಡಿ ಅದರ ಚಿಂತೆಯ ಎನ್ನುತಿದ್ದ. ಎಲ್ಲಿ ನನ್ನ ನಿರುಮ್ಮಳ ಇರುಳಲ್ಲಿ ಅಮರಾವತಿ ಎದುರಾಗುವಳೊ ಎಂಬ ಪ್ರಜ್ಞೆಯೇ ಬಂದಿರಲಿಲ್ಲ. ಆಕೆ ಸಿಕ್ಕಿದ್ದರೆ ನಾವು ಏನು ಮಾಡುತಿದ್ದೆವೊ… ಖಂಡಿತ ಅವಳು ಕತ್ತು ಮುರಿಯುತ್ತಿರಲಿಲ್ಲ. ಅಪ್ಪಿಕೊಳ್ಳುತ್ತಿದ್ದಳೇನೊ! ಅವಳಿಗೆ ಮಲಗಲು ನಿರ್ದಿಷ್ಟವಾದ ಒಂದು ಜಾಗವೇ ಇರಲಿಲ್ಲ. ಎಲ್ಲಿಯಾದರೂ ಮಲಗುತ್ತಿದ್ದಳು. ಅವಳಲ್ಲಿ ಮಲಗಿದ್ದಾಳೆ ಎಂದರೆ ಯಾವ ಗಂಡಸೂ ಸುಳಿಯುತ್ತಿರಲಿಲ್ಲ. ಎತ್ತರದ ಮೈಕಟ್ಟಿನವಳು. ಯಾಕೆ ಹೀಗಾದಳು ಎಂಬುದೆ ನಿಗೂಢವಾಗಿತ್ತು. ಅವಳಿಗೆ ಇಬ್ಬರು ತಂಗಿಯರಿದ್ದರು. ಅಂದ ಚೆಂದದವರು. ಒಂದೇ ವರ್ಷದಲ್ಲಿ ಅವರಿಬ್ಬರ ಮದುವೆ ಆಗಿ ಹೋಗಿತ್ತು. ಹಿರಿ ಮಗಳು ಅಮರಾವತಿಯನ್ನು ಯಾರೂ ಕೇಳಿರಲಿಲ್ಲ ಎಂದಲ್ಲ. ಸಾಕಷ್ಟು ಜನ ಕೇಳಿದ್ದರು. ಯಾಕೊ ಏನೊ ಮದುವೆ ಎಂದರೆ ಹುಚ್ಚಿಗೆ ಆಗುತ್ತಿರಲಿಲ್ಲ. ಯಾರ ಮದುವೆಗಳಿಗೂ ಹೋಗುತ್ತಿರಲಿಲ್ಲ. ತನ್ನ ಯಾವ ನಿಲುವನ್ನೂ ಯಾರೊಟ್ಟಿಗೂ ಹೇಳಿಕೊಳ್ಳುತ್ತಿರಲಿಲ್ಲ. ಒಮ್ಮೊಮ್ಮೆ ಗಂಡಸರಂತೆ ಆಡುತ್ತಿದ್ದಳು. ತನಗನಿಸಿದಂತೆ ಯಾವತ್ತೂ ಸ್ವತಂತ್ರವಾಗಿದ್ದಳು. ಮಕ್ಕಳ ಬಗ್ಗೆ ಮೋಹವೇ ಇರಲಿಲ್ಲ. ಆದರೆ ಅವಳ ಎದೆಗಳು ಎಷ್ಟು ದಪ್ಪ ಇದ್ದವು ಎಂದರೆ; ಹೇಳಿದರೆ ಅಶ್ಲೀಲವಾಗುತ್ತದೆ. ನಾನು ಸಿಕ್ಕಿದಾಗಂತು ಅವಳು ತನ್ನೆರಡು ಮೊಲೆಗಳ ನಡುವೆ ನನ್ನ ಪುಟ್ಟ ಮುಖವ ಒತ್ತಿ ಹಿಡಿದುಕೊಂಡು ಹಾಗೇ ಸುಮಾರು ಹೊತ್ತು ನಿಂತು ಬಿಡುತ್ತಿದ್ದಳು. ನನಗೆ ಉಬ್ಬಸವಾಗುತ್ತಿತ್ತು. ಕಣ್ತುಂಬ ತುಂಬಿಕೊಂಡು ನೀರ ಬಟ್ಟಾಡಿಸುತ್ತಿದ್ದಳು… ‘ಯಾಕೆ’ ಎನ್ನುತ್ತಿದ್ದೆ.

‘ನಿಮ್ಮಪ್ಪ ನಿಮ್ಮವ್ವನ್ನ ಯಾವಾಗ ಕೊಂದುಬಿಡುವನು’

‘ಗೊತ್ತಿಲ್ಲಾ; ಯಾವಾಗಾದರೂ ಸಾಯಿಸಿಬಿಡುವನು’

‘ನಿಮ್ಮವ್ವನಿಗೆ ಯೆದರಿಕೆ ಇಲ್ವೇ… ಬಿಟ್ಟೋಗಲಿ ಬಿಡೂ’

‘ಅವುಳಾಗ್ಲೆ ಸತ್ತಂಗವಳೆ. ಸಾಯಿಸ್ಲಿ ಬಿಡೂ ಅಂತಾರೆಡಿಯಾಗವಳೆ’

‘ಅಯ್ಯೋ ನನ ರಾಜಾ ಅವಳ ಜೊತೆಲೇ ಇರು. ಅವುಳು ಸತ್ರೂ ಯಾವತ್ತೂ ನಿನ್ನ ಬೆನ್ನಿಗಂಟಿದ ನೆರಳಾಗಿ ಬರ್ತಾಳೆ’

‘ನಿಜವೇ… ಸತ್ತವರು ಮಣ್ಣೊ ಬೂದಿಯೊ ಆಗುವರಲ್ಲಾ’

‘ಅವರ ದೇಹ ಅಂಗಾಯ್ತದೆ ಅಷ್ಟೇ… ಅವರಾತ್ಮ ಇದೆಯಲ್ಲಾ; ಅದು ಯೀ ಗಾಳಿಲಿ ಬೆಳೆಕೆಲಿ ಇದ್ದೆ ಇರ್ತದೆ. ನಮ್ಮ ದೇಹಕ್ಕೆ ಬಂದು ಬೆನ್ನಿಗೆ ಅಂಟಿಕೊಂಡಿರ್ತದೆ’

‘ಇದು ಸತ್ಯವಾ? ಅಂಗಿದ್ರೆ ಏನೇನೊ ಆಗ್ಬೇಕಿತ್ತಲ್ಲಾ’

‘ಅದೂ ಎಲ್ಲರ್ಗು ಆಗುವಂತದ್ದಲ್ಲ. ನಿನ್ನಂತವರಿಗೆ ಮಾತ್ರ ಸಾಧ್ಯ’

ಊರ ಯಾವ ಗಂಡಸರನ್ನೂ ಕಂಡರಾಗುತ್ತಿರಲಿಲ್ಲ. ಜನರ ಸಹವಾಸ ಇಲ್ಲದೆ ಬದುಕುವುದನ್ನು ಚೆನ್ನಾಗಿ ಅಳವಡಿಸಿಕೊಂಡಿದ್ದಳು. ಎಲ್ಲಿ ನಾಲ್ಕು ಜನ ಸೇರುತ್ತಾರೊ ಅಲ್ಲಿಂದ ದೂರ ಸರಿಯುತ್ತಿದ್ದಳು. ಯಾವ ಗುಡಿಗೂ ಹೋಗುತ್ತಿರಲಿಲ್ಲ. ಆದರೆ ದೇವರ ಹಬ್ಬಗಳಲ್ಲಿ ನಿಯಂತ್ರಿಸುವುದು ಬಹಳ ಕಷ್ಟವಿತ್ತು. ಅದೇಗೊ ಮಾಯದಲ್ಲಿ ಪ್ರತ್ಯಕ್ಷವಾಗಿ ಬಿಡುತ್ತಿದ್ದಳು.

ಉಸಿರಾಡಿದ್ದೆ ಅವಳೆದೆ ನಡುವೆ. ಏನೊ ಸುಖ ತೊಟ್ಟಿಲ ಕೂಸಂತೆ. ತಾಯನ್ನು ಅಪ್ಪ ಕೊಲ್ಲುವನು ಎಂಬುದು ಈ ಹುಚ್ಚಿಗೆ ಹೇಗೆ ಗೊತ್ತಾಯಿತು! ಯಾರಿಗೂ ಗೊತ್ತಿಲ್ಲದ್ದ ಹೇಗೆ ಪತ್ತೆ ಮಾಡಿದ್ದಳು. ಇವಳೆಂತಹ ಹುಚ್ಚಿ. ಇಲ್ಲವೇ ಯಕ್ಷಿಣಿ ಇರಬೇಕೇ? ಎಷ್ಟು ವಿಷಯಗಳೆಲ್ಲ ತಂತಾನೆ ಅವಳಿಗೆ ತಿಳಿಯುತ್ತಿದ್ದವು. ಅವತ್ತೊಂದಿನ ನಟ್ಟಿರುಳಲ್ಲಿ ನಾಳೆ ಬೆಳಿಗ್ಗೆ ಇಂತವರು ಸಾಯುತ್ತಾರೆ ಎಂದು ಹೇಳಿದ್ದಳು. ಹಾಗೇ ಆ ಊರ ದೊಡ್ಡ ಸಾಹುಕಾರ ಪ್ರಾಣ ಬಿಟ್ಟಿದ್ದ. ಒಹೋ; ಅವಳಲ್ಲಿ ಮೃತ್ಯು ದೇವತೆಯೂ ಸೇರಿಕೊಂಡಿದ್ದಾಳೆಂದು ಜನ ಅವಳ ಕಣ್ಣಿಂದ ತಪ್ಪಿಸಿಕೊಳ್ಳುತ್ತಿದ್ದರು. ಬೀದಿ ಮಕ್ಕಳ ಎತ್ತಿಕೊಂಡು ಹೋಗಿ ಬಾಗಿಲ ಸಂದಿಯಲ್ಲಿ ಕೂರಿಸುತ್ತಿದ್ದರು. ಮಕ್ಕಳ ಮುರಿದುಕೊಳ್ಳುವಳು ಎನ್ನುತ್ತಿದ್ದರು ಊರ ಮಸಣಿಯರು ಇವಳ ಸಹವಾಸ ಮಾಡಿದ್ದರೆಂದು ಚಕಿತಗೊಳ್ಳುತ್ತಿದ್ದರು. ‘ಲೊ; ಅದ್ಯಾಕ್ಲಾ ಹುಚ್ಚಿ ಅಷ್ಟು ಪ್ರೀತಿ ಮಾಡಳು’ ಎಂದು ಬೆದರಿದ ದನಿಯಲ್ಲಿ ಕೇಳುತ್ತಿದ್ದರು. ‘ನಾನೂ ಒಬ್ಬ ಹುಚ್ಚ, ಹುಚ್ಚರಿಗೆ ಹುಚ್ಚರೇ ಪ್ರೀತಿ’ ಎಂದಿದ್ದೆ. ‘ಬಾಳಾ ಬೆರಕೆಗೆ ಹುಟ್ಟಿದ್ದೀಯೆ ನೀನು… ಆಗ್ಲೇ ಎಂಗ್ಮಾತಾಡ್ನೆ ನೋಡು’ ಮರು ಮಾತಾಡಿರಲಿಲ್ಲ. ನನ್ನ ಮೇಲೆ ಯಾಕೆ ಇಷ್ಟೆಲ್ಲ ಜನರಿಗೆ ಈ ಪರಿಯ ಬೈಗಳ ತಿರಸ್ಕಾರ? ನನ್ನ ತಪ್ಪೇನು? ‘ಅವರಪ್ಪನೇ ಅವನನ್ನೊಂದು ಗೊಬ್ಬರದ ಹುಳ ಎಂದು ಬಿಸಾಡಿದ್ದಾನೆ… ಅಂತಾದ್ದರಲ್ಲಿ ನಮ್ಮದೇನು’ ಎಂದು ತೀರಾ ನಿರ್ಲಕ್ಷ್ಯ ಮಾಡುತ್ತಿದ್ದರೇನೊ.

ಅದಿರಲಿ; ಆ ಹುಚ್ಚಿ ನಿಮ್ಮವ್ವನ್ನ ಯಾವಾಗ ಕೊಲ್ಲುವನು ಎಂದು ಕೇಳಿದಳಲ್ಲಾ; ಅದರ ನಿಗೂಢವೇನು? ನನ್ನ ತಾಯಿ ಸತ್ತ ನಂತರ ನನ್ನ ಗತಿ ಏನಾಗಬಹುದೂ… ಏನಾಗಬೇಕೊ ಅದೇ ಆಗುತ್ತದೆ ಅಷ್ಟೇ. ಅದನ್ನು ಯಾರು ತಾನೇ ತಪ್ಪಿಸಿಕೊಳ್ಳುವರು ಎಂದು ಯೋಚಿಸಿ ಅನ್ಯ ಮನಸ್ಕನಾದೆ. ನನಗಾಗಲೆ ಪದೇ ಪದೆ ಬರುತ್ತಿದ್ದ ತತ್ವ ಪದಕಾರರ ಮೋಡಿ ಮಾತುಗಳು ಸಲೀಸಾಗಿ ತಿಳಿಯುತ್ತಿದ್ದವು. ಊರ ಹೊರಗೆ ಸೂಫಿ ಸಂತರ ಸಮಾಧಿಗಳಿದ್ದವು. ಕೆಲವೊಂದು ವಿಶಾಲವಾಗಿದ್ದು ಕೂತು ಧ್ಯಾನಿಸಲೆಂದೇ ಕಲ್ಲಿನಲ್ಲಿ ಕಟ್ಟಿಸಿದಂತಿದ್ದವು. ಅಂತಲ್ಲಿ ಬಂಗಿ ಸೇದುತ್ತ ಪದವಾಡುತ್ತ ಲೋಕದ ಲೀಲೆಗಳ ವ್ಯರ್ಥ ಜಿಜ್ಞಾಸೆಯನ್ನು ಮಾಡುತ್ತಿದ್ದರು. ಅವರ ಮಾತುಗಳಲ್ಲಿ ಮಾಂತ್ರಿಕತೆಯಿತ್ತು. ಲೀಲೆಯಿತ್ತು. ಹುಚ್ಚಿ ಅತ್ತ ಮಾತ್ರ ಸುಳಿಯುತ್ತಿರಲಿಲ್ಲ. ಜ್ಞಾನಿಗಳಿರುವಲ್ಲಿ ನಮ್ಮಂತವರು ಸುಳಿಯಬಾರದು ಎನ್ನುತ್ತಿದ್ದಳು. ನಮ್ಮ ತಾತ ಕರುಣಾಮಯಿ. ಅವಳು ಹೋಟೆಲತ್ತ ಬಂದ ಕೂಡಲೆ ಅವಳಿಗೆ ದೋಸೆ ಕೊಡಿಸುತ್ತಿದ್ದ. ಒಂದೇ ಸಲಕ್ಕೆ ತಿಂದು ಸೆರಗಿಗೆ ಕೈ ಒರೆಸಿಕೊಂಡು ಹೊರಟು ಹೋಗುತ್ತಿದ್ದಳು. ಕರೆಂಟ್ ಚಿಕಿತ್ಸೆ ಕೊಟ್ಟು ನೋಡಣ್ಣಾ ಅವಳ ಹುಚ್ಚೆಲ್ಲ ಕಿತ್ಕಂದೋಯ್ತದೆ ಎಂದಿದ್ದರು. ಅಲ್ಲೆ ಸೊರ ಸೊರನೆ ಚಹಾ ಸೇವಿಸುತ್ತಿದ್ದ ಮಡಕೂಸಮ್ಮ ದಂಗೆ ಎದ್ದಿದ್ದಳು. ಎಲ್ಲರನ್ನೂ ಬಲಿತೆಗೆದುಕೊಂಡು ಬಿಡುತ್ತಾಳೆ ಎಂದು ಇನ್ನಾರೊ ಎಚ್ಚರಿಸಿದ್ದರು. ಆ ಕಾರ್ಯ ಸಾಗಿರಲಿಲ್ಲ. ಒಂದು ವೇಳೆ ಕೊಟ್ಟಿದ್ದಿದ್ದರೆ ಏನಾಗುತ್ತಿತ್ತೊ! ಬಡಿದು ಬಿಸಾಡುತಿದ್ದಳು.

ನನ್ನ ತಾಯಿಯನ್ನು ಸುಮ್ಮನೆ ಅವಳು ಯಾಕೆ ಹುಚ್ಚಿ ಎಂದು ಕೇಳಿದ್ದೆ. ಅದೆಲ್ಲ ನಿನ್ನ ವಯಸ್ಸಿಗೆ ತಿಳಿಯದು ಬಿಡಪ್ಪಾ ಎಂದಿದ್ದಳು. ಅದೇ ನನಗೆ ಹಠವಾಯಿತು. ಒಂದು ಕಾಲಕ್ಕೆ ಅವಳ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತು. ಉಪಾಯದಲ್ಲಿ ಬಲೆಗೆ ಕೆಡವಿಕೊಂಡು ಕಠಿಣ ರಾಮ ರಸ ಕುಡಿಸಿದ್ದರು. ಪ್ರಜ್ಞೆ ಇಲ್ಲದೆ ಎರಡು ದಿನ ತೋಟ ಒಂದರ ಮರೆಯ ಮನೆಯಲ್ಲಿ ಬಿದ್ದಿದ್ದಳು. ಗುಂಪು ಅವಳ ಮೇಲೆ ಪದೇ ಪದೇ ಮಲಗಿತ್ತು. ಮೂರನೇ ದಿನ ತಾನು ಎದ್ದಾಗಲೂ ತಾನು ಎಲ್ಲಿರುವೆ ಎಂಬುದೇ ಅಮರಾವತಿಗೆ ಗೊತ್ತಿರಲಿಲ್ಲ. ಅರೆ ಹುಚ್ಚಿಯಂತಾಗಿದ್ದಳು. ತನ್ನ ದೇಹದ ಮೇಲೆ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದರೂ; ಆ ಅಘಾತದಿಂದ ಎಚ್ಚರಗೊಂಡಿರಲಿಲ್ಲ. ಸ್ಪಷ್ಟ ವಿವರಗಳೆ ಹೊಳೆಯುತ್ತಿಲ್ಲ. ಯಾರು ಹೀಗೆ ಮಾಡಿದರು ಎಂಬ ಎಚ್ಚರವೇ ಇಲ್ಲ. ಎಲ್ಲ ಕಣ್ಣಿಗೆ ಬಟ್ಟೆ ಕಟ್ಟಿದಂತೆ. ಯಾರನ್ನು ಆರೋಪಿಸುವುದು? ಕಂಡ ಕಂಡವರ ಮುಖಗಳೆಲ್ಲ ಹಾಗೇ ಕಾಣುತ್ತವೆ! ಗಂಡಸರೆಲ್ಲ ಹೀಗೆಯೇ; ಅವನೇ ಇವನೇ ಯಾವನೊ ಎಂದು ಅನುಮಾನ ಬಂದ ಗಂಡಸರ ಮೇಲೆ ಜಗಳಕ್ಕೆ ಬೀಳುತ್ತಿದ್ದಳು. ಜನ ಸಲೀಸಾಗಿ ಹುಚ್ಚಿ ಎಂದು ಹೆಸರಿಟ್ಟಿದ್ದರು. ಹುಚ್ಚಿ ಆ ಹಿಂಸೆಯನ್ನು ಯಾರಿಗೂ ಹೇಳಿಕೊಂಡಿರಲಿಲ್ಲ. ಹೇಳಿದರೆ ನ್ಯಾಯ ಸಿಗುವುದೇ? ಯಾರಿಗೂ ಏನನ್ನೂ ತಿಳಿಸದೆ ನಾನೊಬ್ಬಳೆ ಹುಡುಕಿ ಮಾಡಬೇಕಾದ್ದ ಮಾಡುವೆ ಎಂದು ತಿರ್ಮಾನಿಸಿದ್ದಳು.

ಹೆಂಗಸರ ಅಂತರಂಗದಲ್ಲಿ ಕಡು ದುಃಖ ಹೆಪ್ಪುಗಟ್ಟಿರುತ್ತದೆ. ಅದು ಯಾವಾಗ ಯಾವ ನೆಪದಲ್ಲಿ ಸಿಡಿಯುವುದೊ ಹೇಳಲಾಗದು. ನಮ್ಮಪ್ಪನ ಹೆಣ್ಣುಗಳ ಬೇಟೆಯನ್ನು ಬೀದಿ ಮಧ್ಯೆ ನಿಂತು ತಿರಸ್ಕರಿಸುತ್ತಿದ್ದವಳು ಹುಚ್ಚಿ ಒಬ್ಬಳೇ… ‘ಹುಚ್ಚುನಾಯಿ ಬೊಗಳ್ಕಲಿ ಬಿಡ್ರೊ’ ಎನ್ನುತ್ತಿದ್ದ ಅಪ್ಪ. ಹುಚ್ಚರನ್ನು ಕಂಡರೆ ಸಾಧಾರಣ ನಾಯಿಗಳು ಬೊಗಳುವುದುಂಟು. ಅಲ್ಲಿ ಉಲ್ಟಾ ಆಗಿತ್ತು. ಅಮರಾವತಿಯ ಹಿಂದೆ ಯಾವತ್ತೂ ನಾಯಿಗಳು ಇದ್ದೇ ಇರುತ್ತಿದ್ದವು. ಬರಬೇಡಿ ಹೋಗಿ ಎಂದರೂ ಅವು ಬಿಡುತ್ತಿರಲಿಲ್ಲ. ಹೆಣ್ಣು ನಾಯಿಗಳೇ ಹೆಚ್ಚು. ಸುಸ್ತಾಗಿ ಮರದಡಿ ಆಕೆ ಮಲಗಿದ್ದರೆ ನಾಯಿಗಳು ಕಾಯುವಂತೆ ಅವಳ ಸುತ್ತ ಬಿದ್ದಿರುತ್ತಿದ್ದವು. ಮರಿ ನಾಯಿಗಳೂ ಸೇರಿಕೊಂಡು ಅವಳ ಕಾಲ ಬಳಿಯಲ್ಲಿ ಚಿನ್ನಾಟವಾಡುತ್ತಿದ್ದವು.

ಅವಳಿಗೆ ಹಸಿವೇ ಬಾದಿಸುತ್ತಿರಲಿಲ್ಲ. ಚೆನ್ನಾಗಿ ನೀರು ಕುಡಿಯುತ್ತಿದ್ದಳು. ಹಿತವಾಗಿ ಬಿಸಿಲು ಕಾಯುತ್ತಿದ್ದಳು. ಅಪರೂಪಕ್ಕೆ ತನಗೆ ಬೇಕಾದವರು ಏನನ್ನಾದರು ಕೊಟ್ಟರೆ ಒಂದಿಷ್ಟು ತಿಂದು ನಾಯಿ ಕೋಳಿಗಳಿಗೆ ಹಾಕಿ ಬಿಡುತ್ತಿದ್ದಳು. ಅಹಾ! ಕೊಳಕಿ ಎಂಬುದನ್ನು ಬಿಟ್ಟರೆ ಅವಳ ಅಂತರಾಳ ಎಷ್ಟೊಂದು ಸುಂದರ. ಅವಳ ಇಂಚರದ ದನಿಯೇ ಚೆಂದ. ಖಡಕ್ ಆದಳು ಎಂದರೆ ಮುಗಿಸಿಬಿಡುತ್ತಿದ್ದಳು. ಇಡೀ ಊರಲ್ಲೇ ಅವಳಂತೆ ಯಾರೂ ಇರಲಿಲ್ಲ. ಗಂಡೆಂಗಸು ಎಂತಲೂ ಕರೆಯುತ್ತಿದ್ದರು. ಅವಳ ಒಳಗೆ ಬಹಳ ಆದ್ರವಾದ ಹೆಣ್ಣಿದ್ದಳು. ಕರಗಿ ಹರಿವ ಹೊಳೆಯಂತಿದ್ದಳು.  ನಮ್ಮ ಪೂರ್ವ ಕಾಲದ ಪಾಪ ಫಲ ಎಂದು ಇಂತಹ ಹೆಣ್ಣು ಮಗಳ ಹೆತ್ತಮ್ಮ , ಅವಳ ಅಪ್ಪ ತಮ್ಮನ್ನೆ ಶಪಿಸಿಕೊಳ್ಳುತ್ತಿದ್ದರು. ಹುಚ್ಚಿಗೆ ಆಗಿದ್ದ ಗಾಯ ಆಳದಲ್ಲೇ ಇತ್ತು. ಆದರೆ ವಿಶ್ವಾಸ ಕಳೆದುಕೊಂಡಿರಲಿಲ್ಲ. ಇಟ್ಟ ಗುರಿಯ ಮುಟ್ಟದೆ ಬಿಡೆನು ಎಂಬ ಚಲವಿತ್ತು.

ಹೀಗಿರುವಾಗ ಒಂದು ದಿನ ಹೊಳೆಯಲ್ಲಿ ಸ್ನಾನ ಮಾಡಲು ಹೊರಟೆ. ತಾಯಿ ಮೈಸೂರು ಸ್ಯಾಂಡಲ್ ಸೋಪು ಬಳಸುತ್ತಿದ್ದಳು. ಅದರಲ್ಲಿ ಒಂದು ಚೂರನ್ನು ಚಾಕುವಿನಿಂದ ಕತ್ತರಿಸಿಕೊಂಡು ಪೇಪರಿಗೆ ಸುತ್ತಿ ಜೇಬಿಗೆ ಹಾಕಿಕೊಂಡು ಬಂದಿದ್ದೆ. ಅದೊಂದು ನಿರ್ಜನ ಮಡು. ಸುತ್ತ ಮುತ್ತ ಮರ ಮರೆ. ತಡಿಯಲ್ಲಿ ಬೆಳೆದ ಎತ್ತರದ ಜೊಂಡು. ಅಲ್ಲೂ ಗೀಜಗಗಳು ಗೂಡು ಕಟ್ಟಿದ್ದವು. ಆ ಮಡುವೊ ಬಹಳ ಹಳೆಯದು. ಅಲ್ಲಿ ಹುಚ್ಚಿ ಕೂತಿದ್ದಳು. ತನ್ನ ಒಂದೇ ಸೀರೆಯ ಒಂದು ಕಡೆಯಿಂದ ತೊಳೆಯುತ್ತ. ಪೂರ್ತಿ ಬಿಚ್ಚಿ ಇನ್ನೊಂದು ಬಟ್ಟೆ ತೊಡಲು ಅವಳ ಬಳಿ ಬದಲಿ ಏನೂ ಇರಲಿಲ್ಲಾ. ಆ ಪೆಂಟೆಯ ಹೆಂಗಸರು ಸಾಮೂಹಿಕವಾಗಿ ಸ್ನಾನ ಮಾಡುತ್ತಿದ್ದರು. ನನ್ನ ತಾಯ ಅರೆ ಬರೆ ಬೆತ್ತಲೆಯ ಕಾಯುತ್ತ ದಿಬ್ಬದ ಮೇಲೆ ಕಾದು ಕೂತಿರುತ್ತಿದ್ದೆ. ಹುಚ್ಚಿಯನ್ನು ಕಂಡಾಗ ಸಂಕಟವಾಯಿತು. ತಕ್ಷಣವೆ ನನ್ನ ಗಮನಿಸಿ ಸಿಟ್ಟಿಲ್ಲದೆ ಹತ್ತಿರ ಕರೆದಳು. ಅದೊಂದು ಗುಪ್ತ ರಮಣೀಯ ನಿಸರ್ಗ. ನನ್ನ ತಲೆಯ ತೊಳೆದುಕೊಡೊ ಎಂದಳು. ಅಲ್ಲೇ ಇತ್ತು ಬಿಳಿಯ ಚೌಳುಪ್ಪು ಉಜ್ಜಿ ಉಜ್ಜಿ ತಲೆಯ ತುಂಬ ಇದ್ದ ಬಹುಪಾಲು ಹೇನುಗಳು ಸತ್ತವು. ಮೊಟ್ಟೆಗಳು ಕೂದಲಿಗೆ ಅಂಟಿಕೊಂಡಿದ್ದವು. ಬಾಚಣಿಕೆಯಿಂದ ಗೀರಿ ಉದ್ದ ಕೂದಲ ಎಳೆದೆ. ನೂರಾರು ಮೊಟ್ಟೆಗಳು ಕಿತ್ತು ಹೋಗಿದ್ದವು. ಜೇಬಿನಲ್ಲಿದ್ದ ಮೈಸೂರು ಸ್ಯಾಂಡಲ್ ಸೋಪು ತೆಗೆದು ತೋರಿ ತಲೆಗೆ ಮೈಗೆ ಉಜ್ಜಿದೆ. ಬೆತ್ತಲೆ ದೇಹ. ಅವಳ ಸೀರೆಯ ದಂಡೆಯ ಗಿಡಗಳಿಗೆ ಕಟ್ಟಿ ಮತ್ತೂ ಮರೆ ಮಾಡಿದ್ದೆ. ತೊಳೆದಂತೆಲ್ಲ ಹುಚ್ಚಿಯ ಬೆನ್ನ ಚರ್ಮವೇ ಸವೆದಂತೆ ಕೊಳೆ ಉರುಟುರುಟಾಗಿ ಹರಿದು ಹೋಯಿತು. ಬಿಸಿಲು ಅವಳ ಬೆನ್ನ ಮೇಲೆ ಹೊಳೆಯುತ್ತಿತ್ತು. ಎದೆಯನೆಲ್ಲ ತಾನೇ ಉಜ್ಜಿಕೊಂಡಳು. ಕುಂಡಿಗಳ ಕಲ್ಲಿಂದ ಉಜ್ಜಿ ಉಜ್ಜಿ ಕೆರೆದು ಹಾಕು ಎಂದಳು. ಆ ಕೆಲಸವನ್ನು ನಾನು ನನ್ನ ತಾಯಿಗೂ ಮಾಡಿದ್ದೆ. ಅದರಲ್ಲೇನು ಅಸಹ್ಯ. ದೇವರು ಮಾಡಿರುವ ಬಗೆ ಅದು. ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದಳು. ತಿಕದ ತನಕ ಉತ್ಸಾದಲ್ಲಿ ಅಳತೆ ಗೊತ್ತಿಲ್ಲದೆ ತೊಳೆಯುತ್ತಿದ್ದೆ. ‘ಬಿಡೋ ನಾನೇ ತೊಳೆದುಕೊಳ್ಳಬೇಕು ಅಲ್ಲೆಲ್ಲ’ ಎಂದಳು. ತೊಡೆಗಳ ಮತ್ತೆ ಉಜ್ಜಿದೆ. ಎಷ್ಟು ಕಾಲದ ಕೊಳೆಯೊ; ಯಾವ ಗಂಡಸರ ಶಾಪದ ಕೊಳಕೊ. ಹಾಗೆ ಕ್ಲೀನ್ ಮಾಡುವುದನ್ನು ನನ್ನ ತಾಯಿಂದ ಕಲಿತಿದ್ದೆ. ‘ಆ ಕಡೆ ತಿರಿಕೊ’ ಎಂದು ತೊಡೆ ನಡುವಿನ ಸಂದಿಯ ತಾಯಿ ತೊಳೆದುಕೊಳ್ಳುತ್ತಿದ್ದಳು. ಕಂಡಿದ್ದೆ. ಆ ಸುಖವೆಲ್ಲ ಎಲ್ಲಿ ಸಮಾಧಿ ಆಯಿತೊ!

ಹುಚ್ಚಿಯೂ ಹಾಗೆ ತೊಳೆದುಕೊಳ್ಳುತ್ತಿದ್ದಳು ಮುಲಾಜಿಲ್ಲದೆ. ಅವಳ ಹಿಂಬದಿಯೂ ದೇವರು ಮಾಡಿದ ನಿತಂಬ ಮಡಕೆ. ಮಿರಿ ಮಿರಿ ಮಿರುಗುವ ಕುಂಡಿಗಳು. ಆ ಮಡುವಿನಿಂದೆದ್ದು ಬಂದಳು. ‘ನಾನತ್ತ ಹೋಗಲೇ’ ಎಂದೆ. ‘ಇಲ್ಲ ಇಲ್ಲಾ; ನನ್ನ ಬೆತ್ತಲೆ ದೇಹದ ಮುಂದೆ ಬಂದು ನಿಲ್ಲಬೇಕು ಎಂದಳು. ‘ಹೂಹೂ; ಬರಲ್ಲ ನನಗಾಗಲ್ಲ’ ಎಂದೆ. ‘ಬಿಟ್ಟೆನೇ ನಿನ್ನ ಬಾ ನನ್ನ ನೋಡು ಎಂದು ಗೋಮಟೇಶ್ವರನಂತೆ ನಿಂತಳು. ಬೇರೆ ದಾರಿ ಇರಲಿಲ್ಲ. ಬಾ ಬೇಗ ಎಂದು ಹುಚ್ಚಿ ಆದೇಶಿಸಿದಳು. ಹತ್ತಿರ ಹೋದೆ. ತಲೆ ಎತ್ತಿ ನನ್ನ ದೇಹದ ಅಡಿಯಿಂದ ಮುಡಿ ತನಕ ನೋಡು! ಆ ಗೊಮ್ಮಟೇಶ ಅತ್ತ ಇರಲೀ.. ಇತ್ತ ಮರೆಯಲ್ಲಿ ನೋಡಿ ನನ್ನೆದೆ ಮಧ್ಯೆ ಮುಖವಿಡೊ ಎಂದು ಎಳೆದು ನೀಳ ಕೂದಲ ಅತ್ತಿತ್ತ ಸರಿಸಿದಳು. ಆಗಲ್ಲ; ನೀವು ನನ್ನ ಚಿಕ್ಕಮ್ಮನಂತೆ ನನ್ನ ತಾಯಿ ಹೇಳಿದ್ದಾರೆ. ನನಗೆ ವಯಸ್ಸೇ ಬಂದಿಲ್ಲ ಎಂದೆ. ಅಮರಾವತಿಯ ಒಂದು ತೊಡೆಗೆ ನಾನು ಸಮನಿರಲಿಲ್ಲ ಎತ್ತಿ ಎದೆಗಪ್ಪಿ ಹೆಗಲ ಮೇಲೆ ಕೂರಿಸಿಕೊಂಡಳು. ಕ್ಷಣ ಯೋಚಿಸಿ;

ನಿನ್ನ ಮೋಹಿಸಿಬಿಟ್ಟೆನಲ್ಲಾ! ಮಗನ ಸಮಾನ ನೀನು. ಹುಚ್ಚಿ ನಾನು. ಈ ಲೋಕ ನಿರ್ಲಜ್ಜ ಅಪರಾಧಗಳ ಕೂಪ ಎಂದುಕೊಂಡಳು. ಅದಾವ ಪರಿಯಲ್ಲಿ ತಲೆ ನೀವಿದ್ದನೊ! ಅವೆರಡು ಮರ್ಮಾಂಗ ಬಿಟ್ಟು ಹದವಾಗಿ ನಿವಾಳಿಸಿದ್ದೆ. ಅಮರಾವತಿ ಘಮ ಘಮ ಎನ್ನುತ್ತಿದ್ದಳು. ನಾನು ಎಂದೂ ಗೊಮ್ಮಟನ ನೋಡಲಿಲ್ಲ ಎಂಬ ದುಃಖವಿಲ್ಲ. ಅಮರಾವತಿಯ ಇಡೀ ದೇಹವ ಬೆತ್ತಲಾಗಿ ಕಂಡ ನಂತರವೇ ನನ್ನ ಜೀವನದ ಹೆದ್ದಾರಿ ತೆರೆದುಕೊಂಡಿತ್ತು. ಪ್ರಭುದ್ದತೆಗಿಂತಲೂ ಮಮಕಾರ ಅಪಾರವಾಗಿ ಮೈ ತುಂಬ ಬೇರು ಬಿಟ್ಟಿತ್ತು. ಊರಲ್ಲಿ ಅಮರಾವತಿಯನ್ನು ನೋಡುವ ರೀತಿಯೇ ಬದಲಾಗಿತ್ತು. ವಾರಕ್ಕೆ ಒಮ್ಮೆಯಾದರೂ ಸ್ನಾನಕ್ಕೆ ಹೋಗುವ ಬಾ ಎಂದು ಕರೆಯುತ್ತಿದ್ದಳು. ಏನಾಯ್ತು ಇವಳಿಗೆ?

ಯಾವ ರಾಜಕುಮಾರ ತುಂಬಿದ ಪ್ರಾಯದಲ್ಲಿ ಸಿಕ್ಕಿದ? ಹೇಗಿದ್ದವಳು ಹೇಗಾದಳಲ್ಲಾ ಎಂದು ದೆವ್ವಗಳ ಪೂಜಾರಿಯ ಕೇಳಿದರೆ; ಅವಳು ನನ್ನ ಕೆನ್ನೆಗೆ ಹರಕೆ ಒಪ್ಪಿಸಬೇಕು ಎಂದು ಲಂಚ ಕೇಳಿದ್ದ. ಹೋಗಿ ಪಟಾರೆಂದು ಎರಡೂ ಕೆನ್ನೆಗಳಿಗೆ ಹೊಡೆದು ಬಂದಿದ್ದಳು. ಹುಚ್ಚಿ ಹುಚ್ಚಿ ಹುಚ್ಚಿಯೇ ಎಂದಿದ್ದಳು. ನಾನು ಕೇಳಿದ್ದ ಮುತ್ತಿನ ಹರಕೆ ಅವಳಿಗೆ ಅರ್ಥವಾಗಲಿಲ್ಲ. ಭ್ರಮಣೆ ಇನ್ನೂ ಹೋಗಿಲ್ಲ ಎಂದು ದೇವಿಯ ಹೆಸರಲ್ಲಿ ತನೆಗ ತಾನೆ ಮಂಗಳಾರತಿ ಮಾಡಿಕೊಂಡಿದ್ದ.

ದಿನದಿಂದ ದಿನಕ್ಕೆ ತನ್ನ ಅತ್ತೆಯರು ದೂರ ಸರಿದಂತೆ ಅಮರಾವತಿಯೇ ನನಗೆ ಆಪ್ತವಾಗಿಬಿಟ್ಟಿದ್ದಳು. ಮಾಯದ ಮೋಹದ ವರಸೆ ಹೇಗಿರುತ್ತದೆ ಎಂದು ಹೇಳಲಾಗದು. ಆಕೆಯ ದೇಹದ ಕಾಮನೆಯಲ್ಲ ನನ್ನ ಆಸೆ. ಹೆಂಗಸಿನ ಬೆತ್ತಲೆಯೇ ದೇವರಂತೆ ಕಾಣುತ್ತಿತ್ತು. ಅಪ್ಪಿಕೊಳ್ಳಬೇಕೆನಿಸುತ್ತಿತ್ತು. ಯಾಕೊ ಗೊತ್ತಿಲ್ಲಾ. ಸುತ್ತಣ ಲೋಕದ ಹಿಂಸೆಯೆ ಮರೆತು ಹೋಗುತ್ತಿತ್ತು. ಅವಳ ಎದೆ ಮೇಲೆ ತಲೆ ಇಟ್ಟುಕೊಳ್ಳುವುದು ನನ್ನ ಜೀವಕ್ಕೆ ಶಾಶ್ವತತೆಯ ವಿಶ್ವಾಸ ತುಂಬುತಿತ್ತು. ಅದಕ್ಕಾಗಿಯೋ ಏನೊ ಹಸುಗೂಸುಗಳು ತಾಯ ತೊಡೆ ಮೇಲೆ ಮಲಗಿ ಎದೆ ಕಚ್ಚಿಕೊಂಡು ಲೋಕವನ್ನೇ ಗೆದ್ದಂತೆ ಕೈ ಕಾಲುಗಳ ಆಡಿಸುತ್ತಿದ್ದುದು!

ಹೀಗೆ ಕಾಲ ಮುಂದೆ ಹೊರಟು ಹೋಗಿತ್ತು. ‘ಬಾರೊ ಹೊಳೆ ದಂಡೆಗೆ ಹೋಗಿ ಬರುವ’ ಎಂದಳು ಅಮರಾವತಿ. ಅಪ್ಪ ಹಿಂಸಿಸಿದ್ದ. ಆಯ್ತು ಎಂದು ಹಿಂಬಾಲಿಸಿದೆ. ಸ್ನಾನ ಮಾಡೋಣವೇ ಎಂದಳು. ಬೇಡ ಎಂದೆ. ನಾಚಿಕೆ ಯಾಕೆ ನಿನಗೆ ಬಾ ಎಂದು ಕೈ ಹಿಡಿದಳು. ಸೋಪು ತಂದಿಲ್ಲ. ಅದಕೇನಂತೆ; ಚೌಳುಪ್ಪು ಇದೆ. ನೀರಲ್ಲಿ ಈಜು ಕಲಿಸುವೆ ಬಾರೊ ರಾಜಾ ಎಂದು ತಲೆ ಸವರಿದಳು. ಒಪ್ಪಲಿಲ್ಲ. ಅಲ್ಲೊಂದು ಬೇಲದ ಹಣ್ಣಿನ ಮರ ಇದೆ. ಹಣ್ಣು ಉದಿರಿರುತ್ತವೆ ಬಾ ಎಂದಳು. ಹೋದೆವು. ತಿಂದೆವು. ಅಲ್ಲಿ ಇಲ್ಲಿ ನದಿ ದಂಡೆಯಲ್ಲಿ ಸುತ್ತಾಡಿದೆವು. ರಸ್ತೆಗೆ ಬಂದೆವು. ಅದೇ ಬನ್ನಿ ಮರದ ಕೆಳಗೆ ಕೂತೆವು. ನಗಾಡಿದೆವು. ಸಣ್ಣದಾಗಿ ಅಮರಾವತಿಯ ದೇಹದ ಚೆಲುವು ನನ್ನ ಮುಗ್ದ ಮನಸ್ಸಿನಲ್ಲಿ ಚಿಗುರುತಿತ್ತು.

ಅದೇ ಕುದುರೆ ಗಾಡಿ ವೇಗದಲ್ಲಿ ಬಂತು. ಇಬ್ಬರಿಗೂ ಅಚ್ಚರಿ. ಅವನ ಕುದುರೆಯೇ ರಾಜಗುದುರೆಯಂತಿತ್ತು. ಕೆಳಗಿಳಿದು ಬಂದು ನೆಲದ ಮೇಲೆ ಅಮರಾವತಿಗೆ ಶರಣಾಗುವಂತೆ ಕೂತ. ನಕ್ಕಳು. ಅವನೂ ಕೂಡ. ನಾನು ಇಬ್ಬರನ್ನೂ ಗಮನಿಸುತ್ತಿದ್ದೆ. ಈ ಹುಡುಗ ಯಾರೆಂದು ಕೇಳಿದ. ನನ್ನಕ್ಕನ ಮಗ ಎಂದಳು. ಮುದ್ದಾಗಿದ್ದಾನೆ; ಸ್ವಲ್ಪ ಕಪ್ಪು ಅಷ್ಟೇ ಎಂದು ಆಕೆಯನ್ನೇ ದಿಟ್ಟಿಸಿ ಪ್ರಾರ್ಥಿಸಿದ. ಈಗಲಾದರೂ ನನ್ನ ಜೊತೆ ಬರುವೆಯಾ… ತಲೆಗೆ ಕಿರೀಟದಂತೆ ನಿನ್ನ ಧರಿಸುವೆ ಎಂದ, ನಕ್ಕಳು ಜೋರಾಗಿ. ಮಾಯಾ ಮಾಯದಲ್ಲಿ ಒಂದಾದರು. ಆತ ಸಾಮಾನ್ಯ ಜಟಕಾ ಸಾಬಿಯಾಗಿರಲಿಲ್ಲ. ಭವ್ಯವಾದದ್ದೆಲ್ಲ ಅವನಿಗಿತ್ತು. ತಲೆಮಾರುಗಳ ಅಂತರದಲ್ಲಿ ಆತ ಟಿಪ್ಪುಸುಲ್ತಾನನ ವಂಶಸ್ಥ. ಆ ಕಾಲದ ವೈಭವಗಳ ಬಿಟ್ಟಿರಲಿಲ್ಲ. ಬ್ರಿಟೀಷರಂತಿದ್ದ. ಯಾಕೆ ಅಂತಹ ಹಾದಿ ಬೀದಿಯ ಹುಚ್ಚಿ ಅಮರಾವತಿಯ ಮೇಲೆ ಅವನಿಗೆ ಪ್ರೇಮ ಉಂಟಾಯಿತೊ! ತನ್ನ ಸಕಲ ಸಂಪತ್ತನ್ನೆಲ್ಲ ಹೇಳಿಕೊಳ್ಳುತ್ತಿದ್ದ. ಅದಕ್ಕೆಲ್ಲ ನೀನೆ ಒಡತಿ. ಬಾಲ್ಯ ವಿವಾಹವಾಗಿತ್ತು ನನಗೆ. ನನ್ನ ಹೆಂಡತಿ ಯಾವುದೊ ಖಾಯಿಲೆಯಿಂದ ತೀರಿಕೊಂಡ ನಂತರ ನಾನು ಮತ್ತೆ ಯಾವ ಹೆಣ್ಣನ್ನೂ ಬಯಸಲಿಲ್ಲ. ಸುಮ್ಮನೆ ಈ ದಾರಿಯಲ್ಲಿ ಹೋಗುತ್ತಿದ್ದೆ. ನೀನು ಕಂಡೆ. ಆಗ ಒಲ್ಲೆ ಎಂದೆ ಈಗ ನಗಾಡುತ್ತಿರುವೆ. ಸಕಾಲ ಕ್ಷಣಿಕ. ಅದು ಮುಗಿಯುವುದರ ಒಳಗಾಗಿ ನಾವು ತೀರ್ಮಾನಕ್ಕೆ ಬಂದು ಬಿಡಬೇಕು. ಹತ್ತು ಕುದುರೆ ಗಾಡಿಯ ಎಂದ ಕೈ ಹಿಡಿದು ಒಳಗೆ ಕೂರಿಸಿದ. ಸಲೀಸಾಗಿ ಕುದುರೆ ಮೇಲೆ ಕೂತಂತೆ ಕಂಡಳು. ಅವನ ಹೆಸರು ನಾಸಿರ್. ಆತನ ಆನಂದಕ್ಕೆ ಪಾರವೇ ಇರಲಿಲ್ಲ. ಹಾಗೆ ಹುಚ್ಚಿ ಕೂತದ್ದನ್ನು ನೋಡಿ ನನ್ನ ಕಣ್ಣಲ್ಲಿ ಆನಂದದ್ದೊ ದುಃಖದ್ದೊ ಕಣ್ಣೀರು ಬಳ ಬಳನೆ ಬಂದು ಬಿಟ್ಟವು. ಅನಾಥವಾಗಿ ಮನೆಗೆ ಹಿಂತಿರುಗಿದ್ದೆ. ಅಪ್ಪ ಯಾರದೊ ಮೇಲೆ ಜಗಳ ಆಡಿದ್ದ ಆಗತಾನೆ. ಬಿಡಿಸಿದ್ದರು ಜನ ‘ಎಲ್ಲೊಗಿದ್ದೊ ಸೂಳೆ ಮಗನೇ’ ಎಂದು ಕಪಾಳಕ್ಕೆ ಬಡಿದು ಕಂಬಕ್ಕೆ ಬಲವಾಗಿ ನೂಕಿದ್ದ. ‘ಬಿಡಣ್ಣೊ ಯಾರ್ದೊ ಕ್ವಾಪ ಪಾಪ ಅವನ ಮ್ಯಾಲೆ ಯಾಕೆ’ ಎಂದು ತಡೆದಿದ್ದರು.

ಅಪ್ಪ ಹೊಡೆದಿದ್ದಕ್ಕಿಂತಲೂ ಅಮರಾವತಿ ಕುದುರೆ ಗಾಡಿಯಲ್ಲಿ ಕೂತು ಟಾಟಾ ಮಾಡಿ ಹೊರಟು ಹೋದದ್ದು ತಡವಾಗಿ ನನ್ನೊಳಗೆ ಹೇಳಲಾಗದ ಸಂಕಟದ ಕಿಚ್ಚ ಹಚ್ಚಿತ್ತು. ಹೀಗಾಯಿತು ಎಂದು ಯಾರಿಗೂ ಹೇಳಲಿಲ್ಲ. ಹೇಳಿದ್ದರೂ ಏನು ತಾನೆ ಆಗುತ್ತಿತ್ತು? ಊರ ಯಾರೊಬ್ಬರೂ ಅವಳೆಲ್ಲಿ ಕಾಣುತ್ತಿಲ್ಲ ಎಂದು ತಿಂಗಳುಗಳೆ ಕಳೆದಿದ್ದರೂ ನೆನಪು ಮಾಡಿಕೊಂಡಿರಲಿಲ್ಲ. ‘ನನ್ನ ದೈವ ನಿನಗಿವಳು ಸೂಕ್ತ ಎಂದು ತೋರಿತು. ದೇವರ ಮಾತ ಪಾಲಿಸಿದೆ’ ಎಂದಿದ್ದ ನಾಸಿರ್ ಮಾತು ಆಳವಾಗಿ ನಾಟಿತ್ತು. ಎಂತಹ ಜನ! ತಾಯಿ ಒಮ್ಮೆ ಕೇಳಿದ್ದಳು. ನಿಜ ಹೇಳದೆ ತಪ್ಪಿಸಿಕೊಂಡಿದ್ದೆ. ಯಾರಿಗೂ ಹೀಗೆ ಹೋದಳು ಎಂದು ಹೇಳಬಾರದು ಎಂದು ಅಮರಾವತಿ ವಿನಂತಿಸಿದ್ದಳು. ಅವಳ ಕೊರಗು ಬಹಳ ಕಾಲ ಕಾಡಿತ್ತು. ಮತ್ತೆ ಸಿಗುವುದಾದರೆ ಸಿಗುತ್ತಾಳೆ. ಇಲ್ಲವಾದರೆ ಇಲ್ಲ ಎಂದು ಮನವ ಕಲ್ಲು ಮಾಡಿಕೊಂಡೆ.