ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಗಳಂದು ನಮಗೆಲ್ಲ ಸಂಭ್ರಮವೋ ಸಂಭ್ರಮ. ಹಿಂದಿನ ದಿನವೇ ನಮ್ಮ ಮೇಷ್ಟ್ರು ಯಾರ್ಯಾರಿಗೆ ಏನೇನು ಕೆಲಸ ಎಂದು ತಿಳಿಸುತ್ತಿದ್ದರು. ಸ್ವಲ್ಪ ದೊಡ್ಡ ಮಕ್ಕಳು ಹಿಂದಿನ ಸಂಜೆಯೇ ತಮ್ಮನೆಯ ಹಿತ್ತಲಿನಲ್ಲಿರುವ ಮಾವಿನ ಗಿಡದಿಂದ ಮಾವಿನ ಸೊಪ್ಪನ್ನು ತಂದು ಅದನ್ನು ದಾರದಲ್ಲಿ ಪೋಣಿಸಿ ಶಾಲೆಯ ಬಾಗಿಲಿಗೆ ಕಟ್ಟುತ್ತಿದ್ದರು. ಹೆಚ್ಚಾಗಿ ಇದು ಗಂಡುಮಕ್ಕಳ ಕೆಲಸವಾಗಿತ್ತು. ನಾಲ್ಕನೆಯ ತರಗತಿಯ ಹುಡುಗಿಯರು ಬೆಳಗ್ಗೆ ಬೇಗ ಬಂದು ರಂಗೋಲಿ ಹಾಕುತ್ತಿದ್ದರು. ಆಗ ನಮಗೆ ಸಮವಸ್ತ್ರದ ಕಟ್ಟುಪಾಡಿರಲಿಲ್ಲ. ಹಾಗಾಗಿ ನಮ್ಮ ಬಳಿ ಇರುವ ಒಳ್ಳೆಯ ಬಟ್ಟೆಯನ್ನು ಧರಿಸಿ, ಎಂಟುಗಂಟೆಗೆ ನಾವು ಶಾಲೆಯಲ್ಲಿರುತ್ತಿದ್ದೆವು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನಾಲ್ಕನೆಯ ಕಂತಿನಲ್ಲಿ ಅಂದಿನ ಮಕ್ಕಳ ಆಟ-ಪಾಠದ ಕುರಿತ ಬರಹ ನಿಮ್ಮ ಓದಿಗೆ
ನಾನು ಹುಟ್ಟಿ ಬೆಳೆದುದು ಸೊರಬದ ಸಮೀಪದ ಒಂದು ಕುಗ್ರಾಮದಲ್ಲಿ. ಊರಿಗೆ ಒಂದೇ ಬೀದಿ, ಏಳೆಂಟು ಮನೆಗಳು. ನಾನು ಒಂದನೆಯ ತರಗತಿಗೆ ಸೇರುವ ವರ್ಷ ನಮ್ಮೂರಿನಲ್ಲಿ ಶಾಲೆ ಶುರುವಾಯಿತು. ಅದುವರೆಗೆ ನಮ್ಮೂರಲ್ಲಿ ಶಾಲೆ ಇರಲಿಲ್ಲ. ಶಾಲೆಯ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಸುತ್ತಮುತ್ತಲಿನ ನಾಲ್ಕೈದು ಮೈಲುಗಳಲ್ಲಿ ಯಾವುದೇ ಶಾಲೆ ಇರಲಿಲ್ಲ. ಮೊದಲ ವರ್ಷವೇ ಒಂದು ಮತ್ತು ಎರಡನೆಯ ತರಗತಿಗಳು ಒಟ್ಟಿಗೆ ಪ್ರಾರಂಭವಾದವು. ಆ ವರ್ಷ ನಾವು ಏಳೆಂಟು ಮಕ್ಕಳು ಒಂದನೆಯ ತರಗತಿಗೆ ಸೇರಿಸಿದ್ದರೆ, ಎಂಟರಿಂದ ಹನ್ನೆರಡರವರೆಗಿನ ಸ್ವಲ್ಪ ದೊಡ್ಡ ಮಕ್ಕಳನ್ನು ಎರಡನೆಯ ತರಗತಿಗೆ ಸೇರಿಸಿದ್ದರು. ತೀರ ಕಡಿಮೆ ಮಕ್ಕಳಿರುವುದರಿಂದ ಅದು ಏಕೋಪಾಧ್ಯಾಯ ಶಾಲೆಯಾಗಿತ್ತು. ಪ್ರತಿದಿನವೂ ಶಾಲೆ ಶುರುವಾಗುವಾಗ ನಮ್ಮನ್ನೆಲ್ಲ ಸಾಲಾಗಿ ನಿಲ್ಲಿಸಿ ಚಂದ್ರಶೇಖರ ಮೇಷ್ಟ್ರು `ಜೈ ಭಾರತ ಭೂಮಿಗೆ ಮಾತೆಗೆ ಜೈ ಪಾವನ ಮೂರುತಿಗೆ ಸನ್ಮಂಗಳವಾಗಲಿ ಸತತಂ’ ಮತ್ತು `ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ’ ಎಂದು ಹೇಳಿಕೊಡುತ್ತಿದ್ದರು. ನಮಗೆಲ್ಲ ಆದಷ್ಟು ಗಟ್ಟಿ ದನಿಯಲ್ಲಿ ಅದನ್ನು ಹೇಳುವ ಉತ್ಸಾಹ. ಕೆಲದಿನಗಳಲ್ಲಿ ಅದನ್ನು ಕಲಿತು ನಾವೇ ಹೇಳುವಷ್ಟು ಜಾಣರಾದೆವು. ನಾವು ಶಾಲೆಯಲ್ಲಿ ಓದುತ್ತಿರುವಾಗ ಮನೆಯ ಚಿಕ್ಕಪುಟ್ಟ ಕೆಲಸಗಳನ್ನು ಮಾಡಬೇಕಿತ್ತು. ಶಾಲೆಯಲ್ಲಿಯೂ ಅಷ್ಟೆ. ಶಾಲೆಯನ್ನು ಗುಡಿಸುವ ಕೆಲಸ ದೊಡ್ಡ ಮಕ್ಕಳದಾಗಿತ್ತು. ಕೇವಲ ಪ್ರಾಥಮಿಕ ಶಾಲೆಯಾಗಿದ್ದು ತೀರ ಕಡಿಮೆ ಸಂಖ್ಯೆ ಮಕ್ಕಳಿರುವುದರಿಂದ ಶಾಲೆಯ ಎಲ್ಲ ಕೆಲಸಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಅನಿವಾರ್ಯವಿತ್ತು. ಶಾಲೆಯನ್ನು ಗುಡಿಸಿ ಸ್ವಚ್ಛಗೊಳಿಸುವುದಲ್ಲದೆ, ಮಕ್ಕಳ ಸ್ವಚ್ಛತೆಯನ್ನು ಪರಿಶೀಲಿಸುವ ಕೆಲಸವೂ ಮಕ್ಕಳದೇ ಆಗಿತ್ತು. ಒಬ್ಬರು ಮಕ್ಕಳ ಬಟ್ಟೆ, ಉಗುರುಗಳನ್ನು ಪರಿಶೀಲಿಸಿದರೆ, ಇನ್ನೊಬ್ಬರು ಶಾಲೆಯಲ್ಲಿರುವ ಗಡಿಯಾರಕ್ಕೆ ಕೀಲಿಕೊಡಬೇಕಿತ್ತು. ಈ ಕೆಲಸವನ್ನು ಪಾಳಿಯ ಮೇಲೆ ಹಂಚಲಾಗುತ್ತಿತ್ತು. ಕೆಲವೊಮ್ಮೆ ಮೂರು ಮತ್ತು ನಾಲ್ಕನೆಯ ತರಗತಿಯಲ್ಲಿ ಓದುತ್ತಿರುವ ಚುರುಕಾಗಿರುವ ಮಕ್ಕಳು ಒಂದು, ಎರಡನೆಯ ತರಗತಿಯ ಮಕ್ಕಳಿಗೆ ಗಣಿತವನ್ನು ಹೇಳಿಕೊಡುವುದು, ಪಾಠವನ್ನು ಓದಿಸುವುದು ಮುಂತಾದ ಜವಾಬ್ದಾರಿಯನ್ನು ನಿರ್ವಹಿಸಬೇಕಿತ್ತು.
ನಮ್ಮ ಶಾಲೆ ಪ್ರಾರಂಭವಾಗುತ್ತಿದ್ದುದೇ ಬೆಳಗ್ಗೆ ಹತ್ತೂವರೆ ಗಂಟೆಗೆ. ಸುಮಾರು ಮೂರುವರ್ಷ ಕಾಲ ನಮ್ಮ ಪಕ್ಕದೂರಿನ ವೀರಪ್ಪ ಮೇಷ್ಟ್ರು ನಮ್ಮ ಶಾಲೆಯ ಮೇಷ್ಟ್ರಾಗಿದ್ದರು. ಆಗ ಅವರು ಸೈಕಲ್ಲಿನಲ್ಲಿ ಶಾಲೆಗೆ ಬರುತ್ತಿದ್ದರು. ಅವರು ನಮ್ಮೂರಿಗೆ ಪ್ರವೇಶಿಸುತ್ತಲೇ ಅವರವರ ಮನೆಯೆದುರು ಹೋಗುವಾಗ ನಮ್ಮ ಹೆಸರು ಹಿಡಿದು ಕರೆದು ಮುಂದುವರಿಯುತ್ತಿದ್ದರು. ಆಗ ನಾವು ನಮ್ಮ ಪಾಟಿಚೀಲ ಹಿಡಿದು ಶಾಲೆಗೆ ಓಡುತ್ತಿದ್ದೆವು. ಒಮ್ಮೊಮ್ಮೆ ಹನ್ನೊಂದು ಗಂಟೆ ಆಗುವುದೂ ಇತ್ತು. ಆದರೆ ಅವರು ನಮಗೆ ಚೆನ್ನಾಗಿ ಎಲ್ಲವನ್ನೂ ಕಲಿಸುತ್ತಿದ್ದುದರಿಂದ ಊರಲ್ಲಿ ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವರ ಕಾಲದಲ್ಲಿ ಮೂರು ಮತ್ತು ನಾಲ್ಕನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಶಾಲೆ ಎದುರಿನ ಕೈತೋಟದಲ್ಲಿ ಒಬ್ಬರಿಗೆ ಇಂತಿಷ್ಟು ಜಾಗವೆಂದು ನಿಗದಿಪಡಿಸಿ ಅಲ್ಲಿ ನಾವು ಗಿಡನೆಟ್ಟು ಬೆಳೆಸಲು ಅವಕಾಶ ಕಲ್ಪಿಸಿದ್ದರು. ನಮ್ಮ ನಮ್ಮ ಮನೆಯಿಂದ ಗಿಡಗಳನ್ನು ತಂದು ನೆಟ್ಟು ಬೆಳೆಸಲು ನಮ್ಮ ನಡುವೆ ಪೈಪೋಟಿ ಇರುತ್ತಿತ್ತು. ಆ ಗಿಡಗಳಿಗೆ ನೀರೆರೆಯುವ, ಗೊಬ್ಬರ ಹಾಕುವ ಕೆಲಸಗಳು ನಮಗೆ ಖುಶಿ ಕೊಡುತ್ತಿದ್ದವು. ಮೊಗ್ಗು ಬಿಟ್ಟಿತೇ? ಹೂವರಳುವುದು ಯಾವಾಗ? ಎನ್ನುವ ಕುತೂಹಲದಿಂದ ಶಾಲೆಯು ಪ್ರಾರಂಭವಾಗುವ ಮೊದಲು, ಮುಗಿಯುವ ಸಮಯದಲ್ಲಿ ಒಮ್ಮೆ ಆ ಗಿಡಗಳ ಹತ್ತಿರ ಹೋಗಿ ನೋಡುತ್ತಿದ್ದೆವು.
ನೆಟ್ಟ ಗಿಡದಲ್ಲಿ ಮೊಗ್ಗು ಬಿಟ್ಟಾಗ, ಹೂವರಳಿದಾಗ ಸಂಗಾತಿಗಳನ್ನು ಕರೆದು ತೋರಿಸಿ ಹೆಮ್ಮೆಪಡುತ್ತಿದ್ದೆವು. ನಮ್ಮ ಪಾಟಿಚೀಲ ಹೆಚ್ಚು ಭಾರವಿರುತ್ತಿರಲಿಲ್ಲ. ಈಗಿನಂತೆ ಆಗ ಪುಸ್ತಕದಲ್ಲಿ ಪೆನ್ಸಿಲ್ನಿಂದ ಬರೆಯುವ ಪರಿಪಾಠವಿರಲಿಲ್ಲ. ನಾವು ಶಾಲೆಯಲ್ಲಿ ಬರೆಯುತ್ತಿದ್ದುದು ಪಾಟಿಯ (slate) ಮೇಲೆ ಬಳಪದಿಂದ. ಪಾಟಿಯಲ್ಲಿ ಬರೆದುದನ್ನು ಮತ್ತೆ ಮತ್ತೆ ಅಳಿಸಿ ಬರೆಯುತ್ತಿದ್ದೆವು. ಪಾಟಿ, ಬಳಪ, ಪಠ್ಯಪುಸ್ತಕದ ಹೊರತಾಗಿ ಬೇರೆ ಪುಸ್ತಕಗಳನ್ನು ಹೊತ್ತೊಯ್ಯುವ ಪ್ರಮೇಯವಿರಲಿಲ್ಲ. ಕೆಲವೊಮ್ಮೆ ಮನೆಯಿಂದ ಬರೆದುಕೊಂಡು ಬರಲು ಹೇಳುವುದಿತ್ತು. ಆಗಲೂ ನಾವು ಬರೆಯುತ್ತಿದ್ದುದು ಪಾಟಿಯಲ್ಲಿಯೇ. ನಮ್ಮ ಅಕ್ಷರಾಭ್ಯಾಸ ನಡೆಯುತ್ತಿದ್ದುದೇ ಪಾಟಿಯಲ್ಲಿ. ನಮ್ಮ ಬರವಣಿಗೆ ಸುಧಾರಿಸಲಿ ಎಂದು ಸ್ವಲ್ಪ ದೊಡ್ಡ ಮಕ್ಕಳಿಗೆ ಕಾಪಿಪುಸ್ತಕದಲ್ಲಿ ಕಾಪಿ ಬರೆಯಲು ಹೇಳುತ್ತಿದ್ದರು. ಅದರಲ್ಲಿ `ಶುದ್ಧಬ್ರಹ್ಮ ಪರಾತ್ಪರ ರಾಮ’ ಎಂದು ಪ್ರಾರಂಭವಾಗುವ ಬಾಲರಾಮಾಯಣದ ಸಾಲುಗಳು ಇರುತ್ತಿದ್ದವು. ಮಧ್ಯಂತರ ರಜೆಯಲ್ಲಿ ಬರೆಯಲು ಕೊಡುತ್ತಿದ್ದುದನ್ನು ಮೂರನೆಯ ಮತ್ತು ನಾಲ್ಕನೆಯ ತರಗತಿ ಮಕ್ಕಳು ಮಾತ್ರ ಪುಸ್ತಕದಲ್ಲಿ ಬರದುಕೊಂಡು ಹೋಗಬೇಕಿತ್ತು.
ಮಳೆಗಾಲದಲ್ಲಿ ಪಾಟಿಯಲ್ಲಿ ಬರೆಯುವುದಕ್ಕೆ ನಮಗೆ ಬಹಳ ಖುಶಿಯಿತ್ತು. ಯಾಕೆಂದರೆ, ಬರೆದುದನ್ನು ಅಳಿಸಲು ನಾವು ಕಂಡುಕೊಂಡ ಉಪಾಯ ಗೌರಿಗಿಡದ (ಕರ್ಣಕುಂಡಲದಂತಹ ಗಿಡ) ದಂಟಿನಿಂದ ಬರೆದುದನ್ನು ಅಳಿಸುವುದು. ಯಾರು ದೊಡ್ಡ ದಂಟಿರುವ ಗೌರಿಗಿಡವನ್ನು ಕಿತ್ತು ತರುತ್ತಾರೆನ್ನುವ ಸ್ಪರ್ಧೆ ನಮ್ಮ ನಡುವೆ ಇರುತ್ತಿತ್ತು. ಆ ದಂಟಿಗೆ ನಮ್ಮ ಪಾಟಿಚೀಲವೇ ಆಶ್ರಯ. ಪೆನ್ಸಿಲ್ಲು ಕಳವಾಯಿತು ಅನ್ನುವ ಮಾತೇ ಇರಲಿಲ್ಲ. ಕೆಲವೊಮ್ಮೆ ನಮ್ಮ ಬಳಪವನ್ನು ಪಕ್ಕದಲ್ಲಿ ಕುಳಿತವರು ತೆಗೆಯುವುದಿತ್ತು. ಅದನ್ನು ಹೆಚ್ಚಾಗಿ ನಾವೇ ಬಗೆಹರಿಸಿಕೊಳ್ಳುತ್ತಿದ್ದೆವು. ನಾವು ಓದುವ ಕಾಲಕ್ಕೆ ಶಾಲೆಯಲ್ಲಿ ಮೇಷ್ಟ್ರು ಮಕ್ಕಳನ್ನು ಶಿಕ್ಷಿಸುವಂತಿಲ್ಲ ಎನ್ನುವ ಭಾವನೆ ಇರಲಿಲ್ಲ. ಶಿಕ್ಷೆಯು ಶಿಕ್ಷಣದ ಒಂದು ಭಾಗವಾಗಿತ್ತು. ಆದರೆ ತೀರ ಚೇಷ್ಟೆ ಮಾಡುವ ಮಕ್ಕಳ ಹೊರತಾಗಿ ಸುಮ್ಮನೆ ನಮ್ಮನ್ನು ಶಿಕ್ಷಿಸುತ್ತಿರಲಿಲ್ಲ. ವಾರದಲ್ಲಿ ಕನಿಷ್ಠ ಮೂರು ದಿವಸ ಶಾಲೆಯ ಕೊನೆಯ ಅವಧಿಯಲ್ಲಿ ನಮ್ಮನ್ನು ಸಾಲಾಗಿ ನಿಲ್ಲಿಸಿ ನಮ್ಮಿಂದ ಮಗ್ಗಿ ಹೇಳಿಸುತ್ತಿದ್ದರು. ಪ್ರತಿ ವಿದ್ಯಾರ್ಥಿಯು ಒಂದೊಂದು ಮಗ್ಗಿಯನ್ನು ಹೇಳಬೇಕಿತ್ತು. ತಪ್ಪಾಗಿ ಹೇಳಿದರೆ ಮುಂದಿನವರು ಅದನ್ನು ಹೇಳಬೇಕಿತ್ತು. ಸರಿಯಾಗಿ ಹೇಳಿದವರಿಂದ ತಪ್ಪಾಗಿ ಹೇಳಿದವರಿಗೆ ಮೂಗುಹಿಡಿದು ಕೆನ್ನೆಗೆ ಹೊಡೆಸುತ್ತಿದ್ದರು. ಹೀಗೆ ನಮ್ಮ ಜೊತೆಯವರಿಂದ ಹೊಡೆಸಿಕೊಳ್ಳುವುದು ನಾಚಿಕೆಯ ಸಂಗತಿ ಎಂದು ಸರಿಯಾಗಿ ಮಗ್ಗಿ ಕಲಿಯುತ್ತಿದ್ದೆವು. ಅದರಲ್ಲಿ ಹುಡುಗ ಹುಡುಗಿ ಎನ್ನುವ ಭೇದವಿರಲಿಲ್ಲ. ಮನೆಯಲ್ಲಿಯೂ ಅಷ್ಟೆ, ಪ್ರತಿದಿನ ಸಂಜೆ ಕೈಕಾಲು ಮುಖ ತೊಳೆದು ದೇವರಿಗೆ ಕೈಮುಗಿದ ಮೇಲೆ ಜಗಲಿಯಲ್ಲಿ ಸಾಲಾಗಿ ಕುಳಿತು `ಬಾಯಿಪಾಠ’ ಹೇಳಬೇಕಿತ್ತು. ವಾರ, ತಿಂಗಳು, ನಕ್ಷತ್ರ, ಋತುಗಳು, ಸಂವತ್ಸರಗಳು, ಮಗ್ಗಿ ಹೀಗೆ ಎಲ್ಲವನ್ನೂ ಒಟ್ಟಾಗಿ ಕುಳಿತು ಹೇಳುವ ಪರಿಪಾಠವನ್ನು ಹಿರಿಯರು ರೂಢಿಸಿದ್ದರು.
ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಗಳಂದು ನಮಗೆಲ್ಲ ಸಂಭ್ರಮವೋ ಸಂಭ್ರಮ. ಹಿಂದಿನ ದಿನವೇ ನಮ್ಮ ಮೇಷ್ಟ್ರು ಯಾರ್ಯಾರಿಗೆ ಏನೇನು ಕೆಲಸ ಎಂದು ತಿಳಿಸುತ್ತಿದ್ದರು. ಸ್ವಲ್ಪ ದೊಡ್ಡ ಮಕ್ಕಳು ಹಿಂದಿನ ಸಂಜೆಯೇ ತಮ್ಮನೆಯ ಹಿತ್ತಲಿನಲ್ಲಿರುವ ಮಾವಿನ ಗಿಡದಿಂದ ಮಾವಿನ ಸೊಪ್ಪನ್ನು ತಂದು ಅದನ್ನು ದಾರದಲ್ಲಿ ಪೋಣಿಸಿ ಶಾಲೆಯ ಬಾಗಿಲಿಗೆ ಕಟ್ಟುತ್ತಿದ್ದರು. ಹೆಚ್ಚಾಗಿ ಇದು ಗಂಡುಮಕ್ಕಳ ಕೆಲಸವಾಗಿತ್ತು. ನಾಲ್ಕನೆಯ ತರಗತಿಯ ಹುಡುಗಿಯರು ಬೆಳಗ್ಗೆ ಬೇಗ ಬಂದು ರಂಗೋಲಿ ಹಾಕುತ್ತಿದ್ದರು. ಆಗ ನಮಗೆ ಸಮವಸ್ತ್ರದ ಕಟ್ಟುಪಾಡಿರಲಿಲ್ಲ. ಹಾಗಾಗಿ ನಮ್ಮ ಬಳಿ ಇರುವ ಒಳ್ಳೆಯ ಬಟ್ಟೆಯನ್ನು ಧರಿಸಿ, ಎಂಟುಗಂಟೆಗೆ ನಾವು ಶಾಲೆಯಲ್ಲಿರುತ್ತಿದ್ದೆವು. ಊರಿನ ಹಿರಿಯರು ಯಾರಾದರೂ ಒಬ್ಬರನ್ನು ಆಹ್ವಾನಿಸುವ ನಮ್ಮ ಮೇಷ್ಟ್ರು ಅವರಿಂದ ಧ್ವಜಾರೋಹಣ ಮಾಡಿಸುತ್ತಿದ್ದರು. ರಾಷ್ಟ್ರಗೀತೆ, ಸ್ವಾತಂತ್ರ್ಯದ ಹಾಡುಗಳನ್ನು ನಾವು ಹಾಡುತ್ತಿದ್ದೆವು. ಹಿರಿಯರು ಸ್ವಾತಂತ್ರ್ಯ ಹೋರಾಟ ಕುರಿತಂತೆ, ಗಾಂಧೀಜಿಯವರು ಅದಕ್ಕಾಗಿ ಹೇಗೆ ಹೋರಾಡಿದರು ಎನ್ನುವ ಬಗ್ಗೆ ಮಾತನಾಡುತ್ತಿದ್ದರು. ಹೂವಿನ ಹಾರ ಹಾಕಿರುವ ಗಾಂಧೀಜಿಯವರ ಫೋಟೋವನ್ನು ಶಾಲೆ ಬಿಟ್ಟಿರುವ ಯಾರಾದರೂ ಸ್ವಲ್ಪ ದೊಡ್ಡ ಹುಡುಗರು ಹಿಡಿದಿರುತ್ತಿದ್ದರು. `ಭಾರತ ಮಾತಾಕಿ ಜೈ’ `ಮಹಾತ್ಮಾ ಗಾಂಧೀ ಕಿ ಜೈ’ ಎಂದು ಜೈಕಾರ ಹಾಕುತ್ತ ನಾವೆಲ್ಲ ಊರಿನ ಬೀದಿಯಲ್ಲಿ ಪ್ರಭಾತಫೇರಿ ಹೋಗುತ್ತಿದ್ದೆವು.
ಅವರ ಕಾಲದಲ್ಲಿ ಮೂರು ಮತ್ತು ನಾಲ್ಕನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಶಾಲೆ ಎದುರಿನ ಕೈತೋಟದಲ್ಲಿ ಒಬ್ಬರಿಗೆ ಇಂತಿಷ್ಟು ಜಾಗವೆಂದು ನಿಗದಿಪಡಿಸಿ ಅಲ್ಲಿ ನಾವು ಗಿಡನೆಟ್ಟು ಬೆಳೆಸಲು ಅವಕಾಶ ಕಲ್ಪಿಸಿದ್ದರು. ನಮ್ಮ ನಮ್ಮ ಮನೆಯಿಂದ ಗಿಡಗಳನ್ನು ತಂದು ನೆಟ್ಟು ಬೆಳೆಸಲು ನಮ್ಮ ನಡುವೆ ಪೈಪೋಟಿ ಇರುತ್ತಿತ್ತು. ಆ ಗಿಡಗಳಿಗೆ ನೀರೆರೆಯುವ, ಗೊಬ್ಬರ ಹಾಕುವ ಕೆಲಸಗಳು ನಮಗೆ ಖುಶಿ ಕೊಡುತ್ತಿದ್ದವು.
ನನಗೆ ಈಗಲೂ ನೆನಪಿದೆ. ನಾನು ಮೂರನೆಯ ಮತ್ತು ನಾಲ್ಕನೆಯ ತರಗತಿಯಲ್ಲಿದ್ದಾಗ ಆ ದಿನಗಳಂದು ತುಸು ತಡವಾಗಿ ಎಚ್ಚರಾದರೆ ಮನೆಯಲ್ಲಿ ಬೇಗ ಎಬ್ಬಿಸಬೇಕೆಂದು ಗಲಾಟೆ ಮಾಡುತ್ತಿದ್ದೆ. ಅಕ್ಕ, ಅಣ್ಣಂದಿರು ಬಾವುಟ ಹಾರಿಸಿ ಆಯಿತೆಂದು ನನ್ನನ್ನು ಗೋಳುಹೊಯ್ದುಕೊಳ್ಳುತ್ತಿದ್ದರು. ಊರಿನ ಎಲ್ಲ ಮಕ್ಕಳಿಗೂ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವಗಳು ಹಬ್ಬದ ದಿನಗಳಾಗಿದ್ದುವು. ನಮಗಷ್ಟೇ ಅಲ್ಲ, ನಮ್ಮೂರಿನ ಹಿರಿಯರಿಗೂ ಅವು ವಿಶೇಷ ದಿನಗಳಾಗಿದ್ದುವು. ಗಾಂಧೀಜಿ ಎಂದರೆ ನಮಗೆ ಗೊತ್ತಾಗುತ್ತಿರಲಿಲ್ಲ. ಮಹಾತ್ಮಾ ಗಾಂಧಿ ಎಂದರೇನೆ ನಮಗೆ ತಿಳಿಯುತ್ತಿತ್ತು. ಅದು ಹಿಂದಿನ ಶತಮಾನದ ಐವತ್ತರ ದಶಕದ ಕೊನೆಯ ಭಾಗ. ಸ್ವಾತಂತ್ರ್ಯದ ನೆನಪುಗಳು ಹಿರಿಯರ ಮನದಲ್ಲಿ ಅಚ್ಚೊತ್ತಿದ್ದ ದಿನಗಳವು. ಸ್ವಾತಂತ್ರ್ಯ ಹೋರಾಟಗಾರರಿಗೆ ನಮ್ಮ ಅಜ್ಜ ಆಶ್ರಯವಿತ್ತವರು. ನನ್ನ ಸೋದರಮಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಆರುತಿಂಗಳ ಕಾಲ ಬೆಳಗಾವಿಯ ಜೈಲುವಾಸಿಯಾಗಿದ್ದವರು. ಸ್ವಾತಂತ್ರ್ಯ ಹೋರಾಟದ ಕತೆಗಳನ್ನು ಮಕ್ಕಳಿಗೆ ಹೇಳುವುದೆಂದರೆ ನಮ್ಮ ತಂದೆಗೆ ಎಲ್ಲಿಲ್ಲದ ಉತ್ಸಾಹ.
ನನ್ನ ಶಾಲಾದಿನಗಳಲ್ಲಿ ನಮ್ಮೂರಿನ ಶಾಲೆಗೆ ಹೆಚ್ಚಾಗಿ ಬಯಲುಸೀಮೆಯವರೇ ಉಪಾಧ್ಯಾಯರಾಗಿ ಬರುತ್ತಿದ್ದವರು. ಅವರಿಗೆ ಉಳಿದುಕೊಳ್ಳಲು ಶಾಲೆಯಲ್ಲಿ ಸ್ಥಳವಿರಲಿಲ್ಲ. ಆದರೂ ಅವರು ಊರಿನಿಂದ ಹಾಸಿಗೆ ಹೊದಿಕೆಗಳನ್ನು ತಂದು ಅಲ್ಲಿಯೇ ರಾತ್ರಿಹೊತ್ತು ಮಲಗುತ್ತಿದ್ದರು. ದೂರದ ಊರಿನಿಂದ ಬರುವ ಅವರ ಊಟ, ತಿಂಡಿ, ಸ್ನಾನ-ಪಾನಾದಿಗಳಿಗೆ ಊರಿನವರೇ ವ್ಯವಸ್ಥೆ ಮಾಡಬೇಕಿತ್ತು. ಒಂದು ತಿಂಗಳು, ಎರಡು ತಿಂಗಳು ಪಾಳಿಯಲ್ಲಿ ಅವರಿಗೆ ವ್ಯವಸ್ಥೆ ಮಾಡಲಾಗುತ್ತಿತ್ತು.`ಇನ್ನೊಂದು ಸ್ವಲ್ಪ ದಿವ್ಸ ನಮ್ಮನೆಗೆ ಊಟಕ್ಕೆ ಬರ್ತಾರೆ ಮೇಷ್ಟ್ರು ಎನ್ನುವ ಖುಶಿ ನಮ್ಮದಾಗಿರುತ್ತಿತ್ತು. ಮನೆಯ ಹಿರಿಯರಿಗೆ ಅದರಿಂದ ತೊಂದರೆ ಇತ್ತೋ ಇಲ್ಲವೋ? ನಮಗೆ ಅರ್ಥವಾಗುವ ವಯಸ್ಸಂತೂ ಅಲ್ಲ. ಶನಿವಾರ ಎಂಟು ಗಂಟೆಯಿಂದ ಹನ್ನೊಂದೂವರೆವರಿಗೆ ನಮ್ಮ ತರಗತಿ ನಡೆಯುತ್ತಿತ್ತು. ಆದಿತ್ಯವಾರ ಹೇಗೂ ರಜೆ. ಆ ಒಂದೂವರೆ ದಿನ ಕಳೆದಿದ್ದೆ ಗೊತ್ತಾಗದ ಹಾಗೆ ಆಡುತ್ತಿದ್ದೆವು. ನಮ್ಮೂರಿನಲ್ಲಿ ವರ್ಷದ ನಾಲ್ಕೈದು ತಿಂಗಳು ಮಳೆಗಾಲ. ಸಾಧಾರಣ ಜೂನ್ ಮದ್ಯಭಾಗದಲ್ಲಿ ಮಳೆ ಶುರುವಾದರೆ ಸೆಪ್ಟೆಂಬರ್ ಕೊನೇವರೆಗೆ ಎಡಬಿಡದೆ ಮಳೆ ಹೊಯ್ಯತಿತ್ತು. ಅಕ್ಟೋಬರಿನಲ್ಲಿ ಮಳೆಗೆ ಸ್ವಲ್ಪ ಬಿಡುಗಟ್ಟು ಇರುತ್ತಿತ್ತು. ಮಳೆಗಾಲದಲ್ಲಿ ಮನೆಯೊಳಗಿನ ಆಟವೇ. ಚನ್ನೆಮಣೆ, ಪಗಡೆಕಾಯಿಗಳು ಹೊರಬರುತ್ತಿದ್ದವು. ಕೂತು ಆಡುವ ಆಟ ಅಷ್ಟೇನೂ ಇಷ್ಟವಾಗುತ್ತಿರಲಿಲ್ಲ. ಆದರೆ ಅನಿವಾರ್ಯವಾಗಿತ್ತು. ನಾವು ಹುಡುಗಿಯರು ಬಿಳಿಕಲ್ಲುಗಳನ್ನು ಗುಂಡಾಗುವಂತೆ ಮಾಡಿಕೊಂಡು ಅದರಲ್ಲಿ ಆಡುತ್ತಿದ್ದೆವು. ಹುಡುಗರು ಹುಡುಗಿಯರು ಎನ್ನುವ ಭೇದವಿಲ್ಲದೆ ಎಲ್ಲರೂ ವೃತ್ತಾಕಾರವಾಗಿ ಕುಳಿತು ಆಡುತ್ತಿದ್ದುದು ಟೋಪಿಯಾಟ. ನಮಗೆ ಟೋಪಿ ಸಿಗುತ್ತಿರಲಿಲ್ಲ. ಹಾಗಾಗಿ ಯಾರದೋ ಮನೆಯಿಂದ ಟವೆಲ್ ಅಥವಾ ಚೀಲತಂದು ಆಡುತ್ತಿದ್ದೆವು.
ಕೆಲವೊಮ್ಮೆ ಹತ್ತಕ್ಕಿಂತ ಹೆಚ್ಚು ಮಕ್ಕಳಿದ್ದರೆ ಎರಡು ಗುಂಪು ಮಾಡಿಕೊಂಡು ಆಡುವ ಆಟಗಳಿಗೆ ಪ್ರಾಶಸ್ತ್ಯ. ಕುಂಟ್ಕುಂಟ್ ಕುಲ್ಲಕ್ಕಿ ಏನ್ಬಂದೆ ಬೆಳ್ಳಕ್ಕಿ ಹಬ್ಬಕ್ಕೊಂದು ಕುರಿ ಬೇಕಾಗಿತ್ತು ಎನ್ನುವ ಆಟ ಅಥವಾ ವಜ್ರಾಮಿಯಾಮಿ ಚಿಕ್ಕುಬುಕ್ಕು ಯಾಮಿ ಹಸ್ನಾಯ್ ಬೋಳ್ನಾಯ್ ಗಪ್ಚಿಪ್ ಮಳೆಹನಿ ಗಿಳಿ ಪೋ ಗಿಳಿ ಪೋ’ ಎಂದು ಹಣ್ಣು ಹೂಗಳನ್ನು ಹೆಸರಿಸುವ ಆಟ ನಮಗೆ ಮಜಾ ಕೊಡುತ್ತಿತ್ತು. ಬೇಸಿಗೆಯಲ್ಲಿ ಆಡುವ ಆಟವೇ ಬೇರೆ. ಬೇಸಿಗೆ ರಜೆಯಲ್ಲಿ ನಮ್ಮ ಬಂಧುಗಳ ಮಕ್ಕಳೂ ನಮ್ಮೊಂದಿಗೆ ಭಾಗಿಯಾಗುತ್ತಿದ್ದುದರಿಂದ ನಮ್ಮ ಆಟಕ್ಕೆ ಇನ್ನಷ್ಟು ಕಳೆಕಟ್ಟುತ್ತಿತ್ತು. ಕುಂಟಬಿಲ್ಲೆ, ತೂರ್ಚೆಂಡು, ಕಂಬಕಂಬದ ಆಟ, ಇವರ್ಬಿಟ್ ಅವರ್ಬಿಟ್ ಇವರ್ಯಾರು ಮುಂತಾಗಿ ಆಡುತ್ತಿದ್ದೆವು.
ಶಿವರಾತ್ರಿ ಮುಗಿಯಿತು ಅಂದರೆ ಕಾಡಿನ ಹಣ್ಣಿನ ಕಾಲ. ನಾವು ಗುಂಪಾಗಿ ಕೌಳಿಹಣ್ಣು, ಮುಳ್ಳಣ್ಣು, ಸಂಪೆಹಣ್ಣು ಕೊಯ್ಯಲು ಕಾಡಿನಂಚಿಗೆ ಲಗ್ಗೆ ಇಡುತ್ತಿದ್ದೆವು. ಒಂದು ಮಳೆಯಾದರೆ ಸಾಕು, ಮಾವಿನ ಹಣ್ಣುಗಳ ಸುಗ್ಗಿ. ಊರಿನ ತುಂಬ ಹುಳಿ ಮಾವಿನ ಹಣ್ಣಿನ ಮರಗಳು. ಹಣ್ಣನ್ನು ಆರಿಸಿ ತಂದರೆ ಹಣ್ಣಿನಿಂದ ಸಾಸುವೆ, ಗೊಜ್ಜು ಎಂದು ಏನೇನೋ ತರಾವರಿ ಅಡುಗೆ ತಯಾರಾಗುತ್ತಿತ್ತು. ನಸುಕಿನಲ್ಲಿ ಎದ್ದು ಮಾವಿನಹಣ್ಣನ್ನು ಆರಿಸಲು ಓಡುತ್ತಿದ್ದೆವು. ಹಣ್ಣು ಹುಳಿಯೋ ಸಿಹಿಯೋ ಗೊತ್ತಾಗದ ವಯಸ್ಸು. ಮರದಲ್ಲಿಯೇ ಹಣ್ಣಾಗಿ ಅವು ಕೆಳಗೆ ಉದುರುತ್ತಿದ್ದವು. ನಮಗಿಂತ ಮೊದಲೇ ಯಾರಾದರೂ ಅವುಗಳನ್ನು ಹೆಕ್ಕಿ ನಮಗೆ ಹಣ್ಣು ಸಿಗದಿದ್ದರೆ ಹಣ್ಣಿಗಾಗಿ ನಮ್ಮ ಬೇಡಿಕೆ ಗಾಳಿಯೊಂದಿಗೆ. ಗಾಳಿ ಗಾಳಿ ತಂಗಾಳಿ ನಂಗೊಂದ್ಹಣ್ಣು ನಿಂಗೊಂದ್ಹಣ್ಣು ಸೂರ್ಯದೇವರಿಗೆ ಇಪ್ಪತ್ಹಣ್ಣು ಅಲ್ಲಾಡೆ ಅಲ್ಲಾಡೆ’ ಎಂದು ಹಾಡುತ್ತಿದ್ದೆವು. ಗಾಳಿಬೀಸಿ ಮರ ಅಲುಗಾಡಿದರೆ ಹಣ್ಣು ಕೆಳಗೆ ಬೀಳುತ್ತದೆ ಎನ್ನುವ ನಿರೀಕ್ಷೆ.
ನಮಗಾಗ ಪಟ್ಟಣದಿಂದ ಹಣ್ಣನ್ನು ತಂದುಕೊಡುವ ರೂಢಿ ಇರಲಿಲ್ಲ. ಕೆಲವೊಮ್ಮೆ ಕಿತ್ತಳೆಹಣ್ಣಿನ ಕಾಲದಲ್ಲಿ ಮನೆಗೆ ಹಣ್ಣುತರುವುದಿತ್ತು. ನಾಲ್ಕಾರು ಮಕ್ಕಳ ನಡುವೆ ಅವು ಹಂಚಿಕೆಯಾಗುತ್ತಿದ್ದುದರಿಂದ ತೃಪ್ತಿಯಾಗುತ್ತಿರಲಿಲ್ಲ. ಕಾಡುಹಣ್ಣು ಮತ್ತು ಮಾವಿನಹಣ್ಣುಗಳು ನಮಗೆ ಸಮೃದ್ಧವಾಗಿ ದೊರೆಯುತ್ತಿದ್ದವು. ಮನೆಯಲ್ಲಾಗುವ ಬಾಳೆಹಣ್ಣಿಗೆ ಕೊರತೆ ಇರಲಿಲ್ಲ. ಬಾಳೆಹಣ್ಣಿನ ದೋಸೆ, ರೊಟ್ಟಿ, ಸೀಕರಣೆಗಳು ಆಗಾಗ ನಮ್ಮ ಊಟ, ತಿಂಡಿಗಳ ಭಾಗವಾಗುತ್ತಿದ್ದವು. ಅಪರೂಪಕ್ಕೊಮ್ಮೆ ಅಮ್ಮ ಮನೆಯಲ್ಲಿ ಬಿಸ್ಕತ್ ತಯಾರಿಸುತ್ತಿದ್ದರು. ಗೋಧಿಹಿಟ್ಟಿಗೆ ಬೆಣ್ಣೆ ಮತ್ತು ಸಕ್ಕರೆಪುಡಿ ಸೇರಿಸಿ ಚೆನ್ನಾಗಿ ನಾದಿ ಅದನ್ನು ತಟ್ಟಿ ಬಾಟಲಿ ಮುಚ್ಚಳಿನಿಂದ ಅದಕ್ಕೊಂದು ಆಕಾರಕೊಟ್ಟು ಕಾವಲಿಯಲ್ಲಿ ಬೇಯಿಸುತ್ತಿದ್ದರೆ ನಾವು ಅಡಿಗೆಮನೆಯಿಂದ ಕದಲುತ್ತಿರಲಿಲ್ಲ. ಒಂದೋ ಎರಡೋ ಕೈಗೆ ಬಂದಮೇಲೆ ಜಗುಲಿಗೆ ನಮ್ಮ ಓಟ.
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.