ಮೊನ್ನೆ ನಮ್ಮ ವೈಶಾಲಿ ಹೆಗಡೆಯವರ ‘ಉರ್ಮಿಳಾನ ಸ್ನಾನ ಕಡಿಕೂ ಮುಗಿತೊ ಇಲ್ಲೊ..?’ ಅನ್ನೊ ಬರಹ ಓದಿ ನನಗ ನನ್ನ ಹೆಂಡತಿ ಸ್ನಾನದ್ದ ಪುರಾಣಗಳು ನೆನಪಾದವು. ಹಂಗ ರಾಮಾಯಣದಾಗ ಲಕ್ಷ್ಮಣ ವನವಾಸಕ್ಕ ತನ್ನ ಹೆಂಡತಿ ಉರ್ಮಿಳಾನ್ನ ಬಿಟ್ಟ ಹೋದಾಗ ಆಕಿ ಸಿಟ್ಟಿಗೆದ್ದ ೧೪ ವರ್ಷಗಟ್ಟಲೆ ಬಚ್ಚಲದಾಗ ಇದ್ದಳೊ ಇಲ್ಲಾ ಅಂವಾ ಹೋಗಬೇಕಾರ ‘ ಆಕಿ ಬಚ್ಚಲದಾಗ ಇದ್ದಾಳ, ಇನ್ನ ಅಕಿ ಹೊರಗ ಬರೋದ ಲೇಟಾಗತದ. ಅಷ್ಟ ಕಾಯಲಿಕ್ಕ ಆಗಂಗಿಲ್ಲಾ, ವನವಾಸಕ್ಕ ಅರ್ಜೆಂಟ್ ಹೋಗಬೇಕು’ ಅಂತ ಆಕಿಗೆ ಹೇಳದ ವನವಾಸಕ್ಕ ಹೋದನೊ ಆ ಶ್ರೀರಾಮಚಂದ್ರಗ ಗೊತ್ತ. ಇನ್ನ ಅಕಿ ಗಂಡ ಬಿಟ್ಟಹೋದಾ ಅಂತ ಶಟಗೊಂಡ ಬಚ್ಚಲದಾಗ ೧೪ ವರ್ಷಗಟ್ಟಲೇ ಏನ ಮಾಡಿದ್ಲು ಅನ್ನೊದರ ಬಗ್ಗೆ ತಲಿಕೆಡಿಸಿ ಕೊಳ್ಳಬೇಕಾದವರು ಆ ರಾಮಾಯಣ ಬರದವರು ಇಲ್ಲಾ ಆ ಊರ್ಮಿಳಾನ್ನ ಕಟಗೊಂಡ ಲಕ್ಷ್ಮಣ. ಆದ್ರ ನಾ ನಮ್ಮ ಮನ್ಯಾಗ ಒಬ್ಬಕಿ ಊರ್ಮಿಳಾನ್ನ ಕಟಗೊಂಡೇನಿ, ಆಕಿನ್ನ ಹನ್ನೆರಡ ವರ್ಷದಿಂದ ದಿವಸಾ ವನವಾಸದಗತೇನ ಅನುಭವಿಸಲಿಕತ್ತೇನಿ, ಇನ್ನ ಆಕಿ ಸ್ನಾನದ ಬಗ್ಗೆ ಒಂದ ನಾಲ್ಕ ಮಾತ ಹೇಳಿಲ್ಲಾಂದ್ರ ನನ್ನ ಮನಸ್ಸಿಗೆ ಸಮಾಧಾನನು ಆಗಂಗಿಲ್ಲಾ ಹಂಗ ನನ್ನ ಮನಸ್ಸು ಸ್ವಚ್ಛನೂ ಆಗಂಗಿಲ್ಲಾ.
ನಾ ತ್ರೇತಾಯುಗದಾಗ ಏನ್ ರಾಮನ ಪೈಕಿ ಇದ್ದೆನೋ, ರಾವಣನ ಪೈಕಿ ಇದ್ದೆನೋ, ಇಲ್ಲಾ ವಾನರ ಸೈನ್ಯದಾಗ ಸೈನಿಕ ಆಗಿದ್ದೆನೋ ಗೊತ್ತಿಲ್ಲಾ ಆದ್ರ ನಾ ಮಾಡ್ಕೊಂಡಿದ್ದ ಮಾತ್ರ ಆ ಲಕ್ಷ್ಮಣನ ಹೆಂಡತೀನ ಇರಬೇಕು ಅಂತ ನನಗ ಅನಸ್ತದ. ಅದ ಯಾಕ ಅಂದ್ರ ನನ್ನ ಹೆಂಡತಿ ಸ್ನಾನ ಮಾಡೋದು ತಾಸ ಗಟ್ಟಲೇ. ಆ ಉರ್ಮಿಳಾ ಹನಿಮೂನಗೆ ಹೋಗೊ ಹೊತ್ತಿನಾಗ ಗಂಡಾ ಅಕಿನ್ನ ಬಿಟ್ಟ ಒಬ್ಬನ ವನವಾಸಕ್ಕ ಹೋದಾ ಅಂತ ಶಟಗೊಂಡ ಬಚ್ಚಲಕ್ಕ ಹೋದರ ನನ್ನ ಹೆಂಡತಿ ಎದರಿಗೆ ನಾ ದೆವ್ವನಂಗ ಇದ್ದರು ದಿವಸಾ ನನ್ನ ಬಿಟ್ಟ ಬಚ್ಚಲಕ್ಕ ತಾಸ ಗಟ್ಟಲೆ ಒಬ್ಬಕೀನ ಹೋಗ್ತಾಳ. ಇನ್ನ ತಲಿಕೆಟ್ಟ ನಾ ‘ ನೀ ಬಚ್ಚಲದಾಗಿಂದ ಲಗೂನ ಹೊರಗ ಬರತೀಯೋ ಇಲ್ಲಾ ನಾ ಖರೇನ ವನವಾಸಕ್ಕ ಹೋಗಲೋ ‘ ಅನ್ನಬೇಕ ಹಂಗ ಮಾಡತಾಳ.
ನಮ್ಮವ್ವಾ ನನ್ನ ಹೆಂಡತಿ ಸ್ನಾನಕ್ಕ ಹೋದಾಗ ಒಮ್ಮೆ ‘ನಿನ್ನ ಉರ್ಮಿಳಾನ ಸ್ನಾನ ಶುರು ಆತೇನಪಾ, ಇನ್ನ ಒಂದ ತಾಸ ಮನಿ ಶಾಂತ ಇರತದ ನೋಡ’ ?
‘ಇವತ್ತ ಬಚ್ಚಲದಿಂದ ಹೊರಗ ಬಾ ಅಂತ ಹೇಳಿಯಿಲ್ಲೋ ನಿನ್ನ ಹೆಂಡತಿಗೆ’?
‘ಅಲ್ಲಾ, ತೊಯಿಸಿದ ಅವಲಕ್ಕಿ ಮಾಡಿದ್ದೆ, ಆರಿ ಹೋಗ್ತಾವ. ಆಕಿದ ಇನ್ನೂ ಬರೋದ ಲೇಟ್ ಇದ್ದರ ಅಲ್ಲೆ ಬಚ್ಚಲದಾಗ ಹಚ್ಚಿದ್ದ ಅವಲಕ್ಕಿ ಒಯದ ಕೊಡತಿ ಏನ್ ನೋಡ, ಬಿಸಿನಿರಾಗ ತೊಯಿಸಿಕೊಂಡ ತಿನ್ನವಳ್ಳಾಕ’ ಅಂತ ನಂಗ ಟಿಂಗಲ್ ಮಾಡತಿರತಾಳ.
ನಾ ಮದುವಿ ಆದ ಹೊಸ್ತಾಗಿ ಈಕಿ ಹಿಂಗ ತಾಸಗಟ್ಟಲೇ ಸ್ನಾನ ಮಾಡೋದ ನೋಡಿ ‘ಹೋಗಲಿ ಬಿಡು, ಸ್ವಚ್ಚ ಸ್ನಾನ ಮಾಡೋ ಪದ್ಧತಿ ಇರಬೇಕ ಅವರ ಮನ್ಯಾಗ, ಹಂಗ ನಮ್ಮಂಗ ಅರ್ಧಾ ಬಕೇಟನಾಗ ಸ್ನಾನ ಮಾಡಿ ರೂಡಿ ಇರಲಿಕ್ಕಿಲ್ಲಾ’ ಅಂತ ಸುಮ್ಮನಿದ್ದೆ. ಮೊದ್ಲ ನಾವ ಬೆಳದ ಬಂದ ಒಣ್ಯಾಗ ವಾರಕ್ಕೊಮ್ಮೆ ನೀರು ಬರತಿತ್ತು. ಹಿಂಗಾಗಿ ನೀರು ಅಗದಿ ನೋಡಿ ಬಳಸ್ತಿದ್ವಿ, ಅದರಾಗ ನೀರು ಜಾಸ್ತಿ ಖರ್ಚ ಆದರ ಮತ್ತ ನಮ್ಮವ್ವ ಬೋರ್ ಹೊಡಸಿ ನಮ್ಮ ಕಡೆಯಿಂದನ ನೀರ ತರಸೋಕಿ ಅಂತ ಇದ್ದ ನೀರಾಗ ಎಲ್ಲಾ ಮುಗಸ್ತಿದ್ವಿ. ಹಂಗ ನಳಾ ಬರೋ ದಿವಸಂತೂ ಮನ್ಯಾಗ ಅಡಗಿಗೆ-ಕುಡಿಲಿಕ್ಕೆ ಅಂತ ಎರಡ ಕೊಡಾ ನೀರ ಬಿಟ್ಟರ ಬಾಕಿ ಎಲ್ಲಾ ಖಾಲಿ ಆಗಿರ್ತಿತ್ತ. ಇನ್ನೇನ ನಳ ಬರತದ ಅಂದ್ರ ನಾವ ಅಗದಿ ಅರಬಿ ಕಳದ ಸ್ನಾನಕ್ಕ ಅಂತ ಅಂಗಳದಾಗ ರೆಡಿಯಾಗಿ ನಿಲ್ಲತಿದ್ವಿ. ‘ನಳಾ ಬಂದ್ರ ಸ್ವಚ್ಛ ಸ್ನಾನ’ ಅನ್ನೊಹಂಗ ಇತ್ತ ಆ ಕಾಲದಾಗ. ಈಗೂ ೫-೬ ದಿವಸಕ್ಕೊಮ್ಮೆ ನಳಾ ಬರ್ತದ, ಆದ್ರ ನೀರು ಕೂಡಿಸಿ ಇಡಲಿಕ್ಕ ಒಂದ ಅಂಡರ್ ಗ್ರೌಂಡ್ ಟ್ಯಾಂಕ್, ಮ್ಯಾಲೆ ಒಂದ ಒವರ್ ಹೆಡ್ ಟ್ಯಾಂಕ ಎಲ್ಲಾ ಈಗ ಅವ. ಆಮ್ಯಾಲೆ ಹಂಗ ನೀರ ಬರಲಿಲ್ಲಾ ಅಂದ್ರು ೨೫೦ ರೂಪಾಯಿ ಕೊಟ್ಟ ಒಂದ ಟ್ಯಾಂಕರ್ ನೀರ ಹಾಕಿಸಿಕೊಂಡ ದಿವಸಾ ಸ್ನಾನ ಮಾಡೊ ಅಷ್ಟ ದೇವರ ನಮ್ಮನ್ನ ಈಗ ಕೈಹಿಡದಾನ. ಹಿಂಗಾಗಿ ನನ್ನ ಹೆಂಡತಿಗೆ ಸ್ವಚ್ಛ ಸ್ನಾನ ಮಾಡಲಿಕ್ಕೆ ನೀರಿನ ಕೊರತೆ ಏನಿಲ್ಲಾ. ನಾ ಅಂತೂ ಇತ್ತಿಚೀಗೆ ಅಕಿ ಸ್ನಾನಕ್ಕ ಹೋದ ಕೊಡಲೇನ ನೀರಿನ ಮೊಟರ್ ಬಟನ್ ಆನ್ ಮಾಡಿ ಬಿಡತೇನಿ. ಮ್ಯಾಲಿನ ಒವರ್ ಹೆಡ್ ಟ್ಯಾಂಕನಾಗಿಂದ ಎಷ್ಟ ನೀರ ಅಕಿ ಖಾಲಿ ಮಾಡಿದರು ನಮ್ಮವ್ವಗ ಗೊತ್ತಾಗಬಾರದು ಅಂತ. ಇಲ್ಲಾಂದರ ನಮ್ಮವ್ವ “ಮ್ಯಾಲೆ ಟ್ಯಾಂಕನಾಗಿನ ನೀರ ಖಾಲಿ ಆದಮ್ಯಾಲೆ ಬರತಾಳೇನಪಾ ನಿನ್ನ ಹೆಂಡತಿ?” ಅಂತ ರಾಗ ಎಳಿತಾಳ.
ಇನ್ನ ನಳಾ ಬಂದ ದಿವಸಂತೂ ಇಕಿ ಸ್ನಾನಕ್ಕ ಹೋಗಬೇಕಾರ ” ಇಕಾ, ಇವತ್ತ ನಳಾ ಬಂದದ, ನಾ ಯರಕೋ ಬೇಕು, ನಾ ಬಚ್ಚಲದಾಗಿಂದ ಹೊರಗ ಬರೋದ ಸ್ವಲ್ಪ ಹೆಚ್ಚು ಕಡಿಮಿ ಆಗಬಹುದು. ನೀವ ಒಂದ ಕುಕ್ಕರ ಇಟ್ಟ ಅನ್ನಾ ಹುಳಿ ಇಷ್ಟ ಮಾಡಿ ಬಿಡರಿ ಸಾಕ” ಅಂತ ನಮ್ಮವ್ವಗ ಹೇಳಿ ಒಳಗ ಹೋದರ, ಮುಂದ ನಮ್ಮವ್ವನ ಅನ್ನಾ ಹುಳಿ ಆಗಿ ಗಂಡಸರದೆಲ್ಲಾ ಊಟಾ ಆದರೂ ಇಕಿ ಏನ್ ಹೊರಗ ಬರಂಗಿಲ್ಲಾ, ಕಡಿಕೆ ತಲಿ ಕೆಟ್ಟ ನಮ್ಮವ್ವ ” ನಳಾ ಹೋತ ಇನ್ನರ ಯರಕೋಳೊದ ಮುಗಸಂತ ಹೇಳ ನಿನ್ನ ಹೆಂಡತಿಗೆ” ಅಂತ ಒಂದ ಹತ್ತ ಸರತೆ ಆಕಿಗೆ ಕೆಳಸೋ ಹಂಗ ಬಚ್ಚಲದ ಬಾಗಲಕ್ಕ ನಿಂತ ಒದರತಾಳ.
ಆದರ ನಾ ಮಾತ್ರ ಬ್ಯಾರೆದಕ್ಕೇನರ ನನ್ನ ಹೆಂಡತಿಗೆ ಕಡಿಮೆ ಮಾಡಿದ್ರು, ಸ್ನಾನದ ನೀರಿಗೆ ಮಾತ್ರ ಇವತ್ತು ಕಡಿಮೆ ಮಾಡಿಲ್ಲಾ ಬಿಡ್ರಿ. ಸುಳ್ಯಾಕ ಹೇಳ್ಬೇಕು, ಹಿಂತಾ ಬರಗಾಲದಾಗೂ ಬ್ಯಾರೆಲ್ ಗಟ್ಟಲೇ ಸ್ನಾನ ಮಾಡತಾಳ. ನಾ ಒಂದ ದಿವಸನೂ ಆಕಿಗೆ ತಿಂಗಳಾ ನಳದ್ದ ಬಿಲ್ ೨೭೦ ರೂಪಾಯಿ ಬರತದ ಅಂತ ಅಂದಿಲ್ಲಾ. ಅಲ್ಲಾ, ಮೊದ್ಲ ನಾ ‘ಅದ ಹೆಂಗ ಈಕಿ ತಾಸಗಟ್ಟಲೆ ಸ್ನಾನ ಮಾಡತಾಳ, ಅಷ್ಟೊತ್ತ ಸ್ನಾನ ಮಾಡೋ ಅಷ್ಟ ಇಕಿ ಹೊಲಸ ಕೆಲಸಾನರ ಏನ ಮಾಡಿರ್ತಾಳ ಮನ್ಯಾಗ’ ಅಂತ ಭಾಳ ವಿಚಾರ ಮಾಡ್ತಿದ್ದೆ. ಮನ್ಯಾಗ ಇಕಿ ಮಾಡೋದ ಒಂದ ನಾಲ್ಕ ಕೆಲಸಾ, ಅದು ನಮ್ಮವ್ವ ಮಾಡಿ ಬಿಟ್ಟಿದ್ದ ಇಕಿ ಮಾಡೋಕಿ, ಹಂತಾಪರಿ ಮೈ ಹೊಲಸ ಆಗೋ ಹಂತಾ ಕೆಲಸಾ ಏನ ನಮ್ಮವ್ವ ಇಕಿಗೆ ಹಚ್ಚತಾಳ ಅಂತ ಅನಸ್ತಿತ್ತು. ಅದರಾಗ ದಿವಸಾ ಒಂದಕ್ಕೂ ಎಮ್ಮಿ ಮೈ ತಿಕ್ಕೊ ಹಂಗ ತನ್ನ ಮೈ ತಿಕ್ಕೊಂಡ ಸ್ನಾನ ಮಾಡಿದರರ ಏನ ಬರ್ತದ ಅಂತ? ಹಂತಾಪರಿ ಮೈ ತಿಕ್ಕೊಂಡ – ತಿಕ್ಕೊಂಡ ವರ್ಷಕ್ಕ ಎರಡ ಮೈ ತಿಕ್ಕೊಳೊ ಕಲ್ಲ, ವಾರಕ್ಕ ಎರಡ ಸಬಕಾರ ಸವಸ್ತಾಳ ಹೊರತು ತಾ ಏನ ಇವತ್ತು ಸವದಿಲ್ಲಾ. ಆಮ್ಯಾಲೆ ಆಕಿ ಎಷ್ಟ ತಿಕ್ಕೊಂಡರು ಇನ್ನೇನ ಆಕಿ ಬಣ್ಣಂತೂ ತಿಳಿ ಆಗಂಗಿಲ್ಲಾ. ಅಕಸ್ಮಾತ ಇನ್ನ ತಿಳಿ ಆದರರ ತೊಗಂಡ ಏನ ಮಾಡೋದ ಅದರಿ, ಮದುವಿ ಆಗಿ ತಿರಗಿ ಎರಡ ಮಕ್ಕಳಾಗ್ಯಾವ. ಆದ್ರು ಈಕಿ ತಾಸಗಟ್ಟಲೆ ಬಚ್ಚಲದಾಗ ಏನ ಉದ್ದ ಹುರಿತಾಳೋ ಆ ದೇವರಿಗೆ ಗೊತ್ತ.
ಈಗ ಪುಣ್ಯಾ ಮನ್ಯಾಗ ಎರೆಡೆರಡ ಬಚ್ಚಲರ ಅವ, ಒಂದ ಆಕಿಗೆ ಇನ್ನೊಂದ ಉಳದವರಿಗೆ. ಮೊದ್ಲ ಅಂತೂ ಮನ್ಯಾಗ ಒಂದ ಬಚ್ಚಲಾ, ಅದು ಅಟ್ಯಾಚಡ. ಮುಗದ ಹೋತ, ಈಕಿ ಒಳಗ ಹೋದ್ಲ ಅಂದ್ರ ಉಳದವರದ ಪ್ರೆಶರ್ ದೇವರ ಕಂಟ್ರೋಲ್ ಮಾಡಬೇಕು. ನಾ ಅಂತೂ ಒಂದ ಹತ್ತ ಸರತೆ ‘ಪ್ರೇರಣಾ…ಪ್ರೇರಣಾ….’ ಅಂತ ಬ್ಯಾನಿ ತಿಂತಿದ್ದೆ. ಪಾಪಾ ನಮ್ಮಪ್ಪ-ಅವ್ವಾ ಇತ್ತಲಾಗ ಒದರಲಿಕ್ಕೂ ಆಗಂಗಿಲ್ಲಾ ತಡ್ಕೊಳ್ಳಿಕ್ಕೂ ಆಗಂಗಿಲ್ಲಾ ಸುಮ್ಮನ ಬಾಯಿ ಮುಚಗೊಂಡ ಚಡಪಡಸತಿದ್ದರು. ಮತ್ತೆಲ್ಲರ್ ಅವರ ಜೋರ್ ಮಾಡಬೇಕು ಆಮ್ಯಾಲೆ ನನ್ನ ಹೆಂಡತಿ ‘ ನನಗ ಅತ್ತಿ ಮನ್ಯಾಗ ಸ್ವಚ್ಛಾಗಿ ಸ್ನಾನ ಮಾಡಲಿಕ್ಕೂ ಯಾರೂ ಬಿಡಂಗಿಲ್ಲಾ’ ಅಂತ ನಾಲ್ಕ ಮಂದಿ ಮುಂದ ಹೇಳಗಿಳ್ಯಾಳ ಅಂತ ನಮ್ಮವ್ವ ತುಟಿ ಪಿಟ್ಟ ಅಂತಿದ್ದಿಲ್ಲಾ.
ನಾನೂ ನೋಡೆ ನೋಡಿದೆ, ಒಂದ ಮೂರ-ನಾಲ್ಕ ವರ್ಷ ನೋಡಿದ ಮ್ಯಾಲೆ ತಡ್ಕೊಳ್ಳಿಕ್ಕೆ ಆಗಲಿಲ್ಲಾ. “ನೀ ಏನ ತಾಸಗಟ್ಟಲೆ ಬಚ್ಚಲದಾಗ ನಟ್ ಕಳತಿಲೇ, ನಾಲ್ಕ ತಂಬಗಿ ನೀರ ಸೂರಕೊಂಡ್ ಭಡಾ-ಭಡಾ ಬರಲಿಕ್ಕೆ ಆಗಂಗಿಲ್ಲೇನ?” ಅಂತ ಒದರಿಲಿಕ್ಕೆ ಶುರು ಮಾಡಿದೆ. ಆಕಿ ಒಂದ ಮಾತ ಹೇಳಿದ್ಲು “ಇಕಾ, ಬೇಕಾರ ನೀವೇಲ್ಲಾ ಮನಿ ಮಂದಿ ಸ್ನಾನ ಮಾಡಿ ಮುಗಿಸಿದ ಮ್ಯಾಲೆ ನಾ ಬಚ್ಚಲದಾಗ ಇಳಿತೇನಿ, ಹಂಗ ನೀವು ಬಚ್ಚಲದಾಗ ಗಡಿಬಿಡಿ ಮಾಡಿ ಆಮ್ಯಾಲೆ ಒಂದ ಹೋಗಿ ಇನ್ನೊಂದ ಆದರ ಅದಕ್ಕ ನೀವ ಜವಾಬ್ದಾರಿ, ಅಲ್ಲೇರ ಸಮಧಾನದಿಂದ ಇರಲಿಕ್ಕೆ ಬಿಡ್ರಿ” ಅಂದ್ಲು. ಅಲ್ಲಾ ಬಚ್ಚಲದಾಗ ಹಂತಾದ ಒಂದ ಹೋಗಿ ಇನ್ನೊಂದ ಆಗೋ ಹಂತಾದು ಏನ ಅದ ಅಂತ ಅನಸ್ತು. ಆಮ್ಯಾಲೆ ನೆನಪಾತ, ಅವನೌನ ನೀರ ಕಾಯಿಸೊ ಗ್ಯಾಸ ಗೀಸರ್, ಇಲೆಕ್ಟ್ರಿಕ್ ಹೀಟರ್ ಕ್ವಾಯ್ಲ್, ಅರಬಿ ಒಣಾ ಹಾಕೋ ನೈಲನ್ ಹಗ್ಗ, ಬಚ್ಚಲಾ ತೊಳ್ಯೋ ಅಸಿಡ್ ಎಲ್ಲಾ ಸುಡಗಾಡಕ್ಕ ಹೋಗೊ ಸಾಮಾನ ( ಅಕಿನ್ನೂ ಹಿಡದ )ಇರೋದ ಆ ಸುಡಗಾಡ ಬಚ್ಚಲಮನ್ಯಾಗ. ಏ ಹೋಗಲಿ ಬಿಡ, ಬಚ್ಚಲದಾಗ ಇಕಿ ಏನರ ಹಾಳಗುಂಡಿ ಬೀಳವಳ್ಳಾಕ್, ನಮ್ಮ ಅವಸರಕ್ಕ ಮತ್ತೇಲ್ಲರ ಅಕಿ ಬಚ್ಚಲದಾಗ ಒಂದ ಹೋಗಿ ಇನ್ನೊಂದ ಮಾಡ್ಕೊಂಡ ಕಡಿಕೆ ನನ್ನ, ನಮ್ಮವ್ವನ ಇಬ್ಬರನೂ ಜೇಲನಾಗ ಸಾರ್ವಜನಿಕ ಬಚ್ಚಲದಾಗ ಸ್ನಾನ ಮಾಡೋ ಹಂಗ ಮಾಡಿ ಗೀಡ್ಯಾಳ ಅಂತ ಸುಮ್ಮನ ಬಿಟ್ಟ ಬಿಟ್ಟೆ.
ಹಂಗ ಈಕಿ ತಾಸಗಟ್ಟಲೆ ಬಚ್ಚಲದಾಗ ಏನ ಮಾಡತಿದ್ಲು ಅಂದ್ರ, ಮೊದ್ಲ ಎಲ್ಲಾರದೂ ಅರಬಿ ಒಗೆಯೋಕಿ, ಆಮ್ಯಾಲೆ ಬಚ್ಚಲಾ- ಸಂಡಾಸ ತಿಕ್ಕೊಕಿ, ಆಮ್ಯಾಲೆ ತನ್ನ ಹಲ್ಲ ತಿಕ್ಕೊಳ್ಳೊಕಿ, ಎರಡಕ್ಕೂ ಬ್ರಶ್ ಬ್ಯಾರೆ-ಬ್ಯಾರೆನ ಮತ್ತ. ಆಮ್ಯಾಲೆ ಫಿನೈಲ್-ಅಸಿಡ್ ಹಾಕಿ ಇಡಿ ಬಾಥರೂಮ್ ಸ್ವಚ್ಚ ಮಾಡೋಕಿ, ಬಕೀಟ/ ತಂಬಿಗೆ ಗಲಬರಿಸಿ ಆಮ್ಯಾಲೆ ತನ್ನ ಸ್ನಾನ ಶುರು ಮಾಡೋಕಿ. ದಿವಸಾ ಒಂದಕ್ಕೂ ಇದ ಹಣೆಬರಹ, ಇವತ್ತ ನಮ್ಮ ಮನಿ ಬಾಥರೂಮ್ ಅಕಿಕಿಂತಾ ಲಕಾ-ಲಕಾ ಅಂತದ ಬೇಕಾರ ಬಂದ ನೋಡ್ರಿ. ಅಲ್ಲಾ ಹಿಂಗ ತಾಸ ಗಟ್ಟಲೇ ಬಾಥರೂಮ್ ಬ್ಲಾಕ್ ಮಾಡಕೊಂಡ ಕೂತರ ಹೆಂಗ್ರಿ, ಕೆಲವೊಮ್ಮೆ ಅಂತೂ ಇಕಿ ಹಿಂಗ ಬಾಥರೂಮಗೆ ಹೋಗೋದಕ್ಕೂ ಯಾರರ ಮನಿಗೆ ಔತಣಾ ಕೊಡಲಿಕ್ಕೆ ಬಂದರು ಅಂದ್ರ, ಈಕಿ ಹೊರಗ ಬರೋತನಕ ಕಾಯೋರ. ಅದರಾಗ ಮನ್ಯಾಗ ನಮ್ಮವ್ವ ಇರಲಾರದಾಗ, ಪಾಪ ಅವರರ ಅರಿಷಣಾ-ಕುಂಕಮಾ ಹಚ್ಚಿ ಹೇಳಿ ಹೋಗಬೇಕು ಅಂತ ಕಾದ-ಕಾಯೋರು. ಕಡಿಕೆ ತಲಿಕೆಟ್ಟ ಇನ್ನ ನನಗ ಅರಷಣಾ-ಕುಂಕಮಾ ಹಚ್ಚಿಲಿಕ್ಕೆ ಬರಂಗಿಲ್ಲಾಂತ ನನ್ನ ಕೈಯಾಗ ಬರೆ ಕಾರ್ಡಕೊಟ್ಟ ‘ಹೇಳ್ರಿ ನಿಮ್ಮ ಮನೆಯವರಿಗೆ, ಬಂದ ಒಂದ ತಾಸ ಕಾದ ಹೋದವಿ’ ಅಂತ ಹೇಳಿ ಹೋಗೋರು. ಇನ್ನ ಮನಿಗೆ ಬಂದ ಮುತ್ತೈದಿಗೆ ನಾವ ಕುಂಕಮಾ ಕೊಟ್ಟ ಕಳಸಬೇಕಂದರ ನಮ್ಮ ಮನಿ ಮುತ್ತೈದಿ ಬಚ್ಚಲದಾಗ, ನಾನ ಹಂಗ ಮನಿ ಬಂದ ಮುತ್ತೈದಿಯರಿಗೆಲ್ಲಾ ಅರಿಷಣಾ-ಕುಂಕಮಾ ಹಚ್ಚಲಿಕ್ಕೂ ಬರಂಗಿಲ್ಲಾ. ಮತ್ತ ಅವರನ ಒಳಗ ದೇವರ ಮನ್ಯಾಗ ಕರದು, ಅಲ್ಲೇ ದೇವರ ಮುಂದಿನ ಪಂಚಪಾಳಾದಾಗಿಂದ ಕುಂಕಮಾ ಹಚಗೊಂಡ ಹೋಗರಿ ಅಂತ ಹೇಳಿ ಕಳಸ್ತಿದ್ದೆ. ಹಿಂತಾವ ಏನಿಲ್ಲಾಂದ್ರು ನನಗ ಒಂದ ಅರವತ್ತ -ಎಪ್ಪತ್ತ ಅನುಭವಾ ಅವ ಬಿಡ್ರಿ. ಅಕಸ್ಮಾತ ಇಕಿ ಸ್ನಾನಕ್ಕ ಹೋದಾಗ ನಾ ಏನರ ಮನ್ಯಾಗ ಕಾಣಲಿಲ್ಲಾ ಅಂದರ ಮನಿಗೆ ಬಂದ ಮಂದಿ “ಏನರಿ, ಸೊಸಿ ಜೊತಿ ಮಗಾನೂ ಸ್ನಾನಕ್ಕ ಇಳದಾನ ಏನ್? ಎಷ್ಟೊತ್ತ ಆತು ನಿಮ್ಮ ಸೊಸಿ ಬಚ್ಚಲ ಬಿಟ್ಟ ಬರವಳ್ಳಲಾ” ಅಂತ ನಮ್ಮವ್ವನ ಮುಂದ ಚಾಷ್ಟಿಗೆ ಅಂದೋರು ಇದ್ದಾರ.
ಇನ್ನ ಆಕಿ ಪೈಕಿ ಯಾರದರ ಫೋನ ಸ್ನಾನಕ್ಕ ಹೋದಾಗ ಬಂದರ ಮುಗದ ಹೋತ, ಒಂದ ಐದ ನಿಮಿಷ ಬಿಟ್ಟ ಮತ್ತ ಮಾಡ್ತೆವಿ ಅಂತ ಅವರ ಹತ್ತ ಸರತೆ ಫೋನ ಮಾಡಿದರು ಇಕಿ ಏನ ಬಚ್ಚಲದಾಗಿಂದ ಹೊರಗ ಬಂದಿರಂಗಿಲ್ಲಾ. ಕಡಿಕೆ ಅವರ ತಲಿಕೆಟ್ಟ ‘ ಅಕಿ ಏನರ ಇವತ್ತ ಹೊರಗ ಬಂದ್ರ ನೀವ ಫೋನ ಮಾಡಸರಿ’ ಅಂತ ಹೇಳಿರ್ತಾರ . ಇಕಿ ಒಂದ ತಾಸ ಬಿಟ್ಟ ಫೋನ ಮಾಡಿದ ಮ್ಯಾಲೆ ಆ ಕಡೆದವರು ‘ಈಗ ಹೇಳಿದ್ರ ನಿಮ್ಮ ಅತ್ತಿ ಮನ್ಯಾಗ ನಿನಗ, ನಾ ಒಂದ ತಾಸ ಹಿಂದ ಫೋನ್ ಮಾಡಿದ್ದೆ’ ಅಂತ ಅವರ ನಮ್ಮ ಬಗ್ಗೆ ತಪ್ಪ ತಿಳ್ಕೊತಾರ. ಅದಕ ನಾ ಅಕಿಗೆ ‘ನೀ ಬಚ್ಚಲಕ್ಕಾ ಹೋಗ ಬೇಕಾರ ಸುಮ್ಮನ ಮೊಬೈಲ್ ಒಯ್ಯಿ’ ಅಂತ ಒಂದ ಹತ್ತ ಸರತೆ ಹೇಳೇನಿ.
ಇಷ್ಟಕ್ಕ ಮುಗಿಯಂಗಿಲ್ಲಾ ಇಕಿ ಸ್ನಾನದ ಹಣಗಲಾ, ನನ್ನವು ಏನಿಲ್ಲಾ ಅಂದ್ರು ಇಷ್ಟ ವರ್ಷದಾಗ ೧೦-೧೫ ಕೊರಿಯರ್ ವಾಪಸ್ ಹೋಗ್ಯಾವ “ಡೋರ ಒಪನ್, ಬಟ್ ಬಾಥರೂಮ್ ಲಾಕ್” ಅಂತ ಬರದ ಕೋರಿಯರನವರ ಎಷ್ಟೋ ಕವರ ವಾಪಸ ಕಳಸಿ ಬಿಟ್ಟಾರ. ಹಿಂಗಾಗಿ ಇಕಿಗೆ ನಾ ಸ್ಟ್ರಿಕ್ಟ್ ಆಗಿ ಹೇಳಿ ಬಿಟ್ಟೆನಿ “ನೀ, ಮನ್ಯಾಗ ಮತ್ತ ಯಾರರ ಇದ್ದಾಗ ಇಷ್ಟ ಸ್ನಾನಕ್ಕ ಹೋಗೋದು” ಅಂತ. ಹಂಗ ಈಕಿ ಸ್ನಾನಕ್ಕ ಹೋದಾಗ ಇತ್ಲಾಗ ಯಾರರ ಇಡಿ ಮನಿ ಕಳವು ಮಾಡಕೊಂಡ ಹೋದರು ಅಕಿಗೆ ಗೊತ್ತಾಗಂಗಿಲ್ಲಾ. ಒಂದವೇಳೆ ಹಂಗ ಗೊತ್ತಾದರೂ ಆಕಿ ಸ್ನಾನ ಪೂರ್ತಿ ಮುಗಿಸಿಕೊಂಡ ಒರಿಸಿಕೊಂಡ ಬರೋದರಾಗ ಅವರ ಮತ್ತ ಎರಡ ಆಜು-ಬಾಜು ಮನಿನೂ ಕಳವು ಮಾಡ್ಕೊಂಡ ಹೋಗಿರತಾರ. ಅದಕ್ಕ ನಮ್ಮವ್ವ ಎಲ್ಲರ ಹೊರಗ ಮದುವಿ-ಗಿದುವಿಗೆ ಹೋಗೋದ ಇತ್ತಂದರ “ನೀ ಸ್ನಾನ ಮುಗಿಸಿಬಿಡವಾ ಮಾರಾಯತಿ, ನಿಂದ ಸ್ನಾನ ಆದ ಮ್ಯಾಲೆ ನಾವ ಹೋಗ್ತೇವಿ. ಸ್ವಲ್ಪ ಲೇಟ ಆದ್ರೂ ಆಗವಲ್ತಾಕ, ಮುಂಜಾನಿ ಅಕ್ಕಿಕಾಳಿಗೆ ಆಗಲಿಲ್ಲಾಂದ್ರು ಮಧ್ಯಾಹ್ನದ ಊಟದ ಹೊತ್ತಿಗೇರ ಹೋಗ್ತೇವಿ” ಅಂತ ಹೇಳ್ತಾಳ. ಹಿಂಗ ನನ್ನ ಹೆಂಡತಿ ಸ್ನಾನದ ಪುರಾಣ ಎಷ್ಟ ಹೇಳಿದರೂ ಮುಗಿಯಂಗಿಲ್ಲಾ , ವಾರ ಮೂರ-ನಾಲ್ಕ ಮಜಾ-ಮಜಾ ಘಟನೆಗಳು ನಡದ ನಡತಿರತಾವ.
ಹದಿನಾಲ್ಕ ವರ್ಷ ವನವಾಸಕ್ಕ ಹೋದಾಗ ಆ ಲಕ್ಷ್ಮಣ ತನ್ನ ಸ್ನಾನದ ಮನ್ಯಾಗಿನ ಹೆಂಡತಿನ ಎಷ್ಟ ಸರತೆ ನೆನಸಿಕೊಂಡಿದ್ದನೋ ಏನೋ ಗೊತ್ತಿಲ್ಲಾ. ಆದ್ರ ನಾ ಅಂತು ದಿವಸಾ ನನ್ನ ಹೆಂಡತಿ ಸ್ನಾನಕ್ಕ ಹೋದಾಗೊಮ್ಮೆ ಅವನ ಹೆಂಡತಿ ಊರ್ಮಿಳಾನ್ನ ನೆನಿಸೇ ನೆನಿಸಿರ್ತೇನಿ. ಅತ್ತಲಾಗ ಬಚ್ಚಲದಾಗ ನನ್ನ ಹೆಂಡತಿನೂ ತಾ ನೀರಾಗ ನೆನೆಸಿಗೋತಿರ್ತಾಳ ಆ ಮಾತ ಬ್ಯಾರೆ. ನನಗ ಒಮ್ಮೊಮ್ಮೆ ಅನಸ್ತದ, ಬಹುಶಃ ಲಕ್ಷ್ಮಣನೂ ತನ್ನ ಹೆಂಡತಿ ‘ಏನ್ ದಿವಸಾ ಇಕಿ ತಾಸ ಗಟ್ಟಲೇ ಸ್ನಾನಕ್ಕ ಹೋಗ್ತಾಳ’ ಅಂತ ತಲಿ ಕೆಟ್ಟ ವನವಾಸಕ್ಕ ಹೋದರು ಹೋಗಿರಬೇಕು ಅಂತ .
ಇಗ ನೋಡ್ರಿ ನಾ ಅಕಿ ಬಚ್ಚಲಕ್ಕ ಹೋದಾಗ ಈ ಲೇಖನಾ ಬರಿಲಿಕ್ಕೆ ಶುರು ಮಾಡಿದ್ದೆ, ಈಗ ಈ ಲೇಖನ ಮುಗಿಲಿಕ್ಕೆ ಬಂದ ನೀವ ಓದೊದು ಮುಗಿಲಿಕ್ಕೆ ಬಂತ, ಆದ್ರ ಈಗ ಬಚ್ಚಲದಾಗಿಂದ ಕ್ಲಿನಿಕ್ ಪ್ಲಸ್ ಶ್ಯಾಂಪೂದ ವಾಸನೆ ಬರಲಿಕತ್ತದ, ಮಿನಿಮಮ್ ಇನ್ನೂ ಅರ್ಧಾ ತಾಸ ಬೇಕ ಆಕಿ ಸ್ನಾನ ಪೂರ್ತಿ ಮುಗಿಲಿಕ್ಕೆ. ಆಕಿ ಏನರ ಹಾಳಗುಂಡಿ ಬೀಳಲಿ ಬಿಡರಿ, ಖರ್ಚ ಆಗೋದು ನೀರು, ಸಬಕಾರ ಇಷ್ಟ ಅಲಾ, ಆಗಲಿ. ಸದ್ಯೇಕ ಈ ಪ್ರಹಸನ ಇಲ್ಲಿಗೆ ಮುಗಸ್ತೇನಿ, ಅಕಿ ಸ್ನಾನಕ್ಕ ಹೋಗಬೇಕಾರ “ರೀ..ಸ್ನಾನ ಮುಗಸೊದರಾಗ ಗಿರಣಿಗೆ ಹೋಗಿ ಬಂದ,ಕಾಯಿ ಪಲ್ಯೆ ತೊಗೊಂಡ ಬರ್ರಿ” ಅಂತ ಹೇಳಿದ್ಲು. ಮತ್ತ ನಾ ಬರಕೋತ ಕೂತಿದ್ದ ನೋಡಿ ” ಅದ ಏನ ಸುಡಗಾಡ ಬರಕೋತ ಕೂತಿರಿ. ನಿಮಗ ಸ್ನಾನಕ್ಕ ಹೋಗೂ ಮುಂಚೆ ಹೇಳಿದ್ದಿಲ್ಲಾ? ಇಷ್ಟೊತ್ತಿಗೆ ನೀವ ಕಾಯಿಪಲ್ಯೆ ತಂದ ಅರ್ಧಾ ತಾಸ ಆಗಿರ್ತಿತ್ತ, ತಾಸ ಗಟ್ಟಲೆ ಆ ಸುಡಗಾಡ ಲೇಖನಾ ಬರಿಯೋದ ಒಂದ ಚಟಾ ಹೋಕ್ಕ ಬಿಟ್ಟದ” ಅಂತ ಬಚ್ಚಲದಾಗಿಂದ ಒದರಕೋತ ಹೊರಗ ಬಂದ್ರು ಬಂದಳ…. ಹೇಳಲಿಕ್ಕೆ ಬರಂಗಿಲ್ಲಾ.
ಹಂಗ ಅಕಿ ಸ್ನಾನಕ್ಕ ಹೋದಾಗ ಮಿನಿಮಮ್ ಒಂದ ಎರಡ ಲೇಖನಾ, ಯರಕೊಳ್ಳಬೇಕಾರ ಒಂದ ಸಣ್ಣ ಕಾದಂಬರೀನ ಬರಿಬಹುದು ಬಿಡ್ರಿ. ಇರವಲ್ತಾಕ, ಮುಂದ ಮತ್ತ ಆಕಿ ಸ್ನಾನಕ್ಕ ಹೋದಾಗ ಬರದರಾತ.
ಹಂಗ ನಾ ಹದಿನೈದ ದಿವಸಕ್ಕೊಮ್ಮೆ ಇಷ್ಟ ಕೆಂಡಸಂಪಿಗೆ ಒಳಗ ಬರಿತೇನಿ ಅಂದರ ಅಕಿ ಹದಿನೈದ ದಿವಸಕ್ಕೊಮ್ಮೆ ಇಷ್ಟ ಸ್ನಾನ ಮಾಡತಾಳ ಅಂತ ತಿಳ್ಕೋಂಡಿರಿ ಎಲ್ಲರ ಮತ್ತ, ಹಂತಾ ಛಲೋ ಹಣೆಬರಹ ನಂದಿಲ್ಲರಿಪಾ, ನನ್ನ ಖೊಟ್ಟಿ ನಸೀಬಕ್ಕ ಅಕಿ ದಿವಸಾ ಸ್ನಾನ ಮಾಡತಾಳ.
ಹಂಗೇನರ ನಿಮ್ಮ ಮನೆಯವರು ಏನರ ನನ್ನ ಹೆಂಡತಿಗತೆ ತಾಸ ಗಟ್ಟಲೇ ಸ್ನಾನ ಮಾಡ್ತಿದ್ದರ ” ಏ, ಏನಲೇ! ಪ್ರೇರಣಾನ ಸ್ನಾನ ಆತಲಾ ನಿಂದೂ” ಅಂತ ಅಂದಗಿಂದಿರಿ ಮತ್ತ, ಅದಕ್ಕ ಉರ್ಮಿಳಾನ ಸ್ನಾನನ ಅನ್ನರಿ. ಸುಳ್ಳ ನನ್ನ ಹೆಂಡತಿ ಹೆಸರ ಯಾಕ ಬದನಾಮ ಮಾಡ್ತೀರಿ..
ಹುಟ್ಟಿದ್ದು ಶಿವಮೊಗ್ಗದೊಳಗ. ಮುಂದೆ ಕಲತಿದ್ದು ಬೆಳದಿದ್ದು ಬಲತಿದ್ದು ಎಲ್ಲಾ ಹುಬ್ಬಳ್ಳಿ ಒಳಗ. ಒಂದ ಆರ ವರ್ಷದಿಂದ ತಿಳದಾಗೊಮ್ಮೆ, ಟೈಮ ಸಿಕ್ಕಾಗೊಮ್ಮೆ ಕನ್ನಡ ಹಾಸ್ಯ ಲೇಖನಗಳನ್ನ ಬರಿಲಿಕತ್ತೇನಿ. ಉತ್ತರ ಕರ್ನಾಟಕದ ಆಡು ಭಾಷೆಯೊಳಗ ಬರೇಯೊದು ನನ್ನ ಲೇಖನಗಳ ವಿಶೇಷತೆ.