ಹಾಗೆ ನೋಡಿದರೆ ಆಸ್ಟ್ರೇಲಿಯಾದ ನಗರಗಳಲ್ಲಿ ವಾಸಿಸುವ ಸಾಮಾನ್ಯ ಜನರು ಮತ್ತು ಅವರ ನೆರೆಹೊರೆಯವರು ಎನ್ನುವ ವಿಷಯಕ್ಕೆ ಪುನರ್ಜೀವ ಬಂದಿದೆ. ಇದಕ್ಕೆ ಇಂಬು ಕೊಟ್ಟಿರುವುದು ವಲಸಿಗರ ಸಂಖ್ಯೆ, ಅವರ ಮೇಲ್ಮಟ್ಟದ ಉದ್ಯೋಗಗಳು, ಸಂಬಳ, ವಸತಿ ಕೊಳ್ಳುವ ಸಾಮರ್ಥ್ಯ ಇತ್ಯಾದಿ. ಈ ಸಾಮರ್ಥ್ಯದಿಂದ ಅವರು ಸಮಾಜದ ಮೇಲಿನ ಸ್ತರಗಳಿಗೆ ಬಂದು ಹೆಸರು, ಖ್ಯಾತಿ, ಸ್ಥಾನಮಾನಗಳನ್ನು ಗಳಿಸಿ ಮಿಂಚುತ್ತಿದ್ದಾರೆ. ವಾಣಿಜ್ಯ, ರಾಜಕೀಯ ಎಂಬಂತೆ ಮುನ್ನೆಲೆಯ ನಾಯಕತ್ವಕ್ಕೆ ಸೇರುತ್ತಿದ್ದಾರೆ. ಇದು ಸ್ಥಳೀಯರಿಗೆ ಸಹಜವಾಗಿಯೇ ಆತಂಕ ತಂದಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಈ ವಾರ ಆಸ್ಟ್ರೇಲಿಯನ್-ಭಾರತೀಯರಿಗೆ ಅದರಲ್ಲೂ ನಮ್ಮ ರಾಣಿರಾಜ್ಯದ ಭಾರತೀಯರಿಗೆ ಸಂತಸದ ಸುದ್ದಿ ಬಂದಿದೆ. ಆಸ್ಟ್ರೇಲಿಯನ್ ಕೇಂದ್ರ ಸರಕಾರವು ಭಾರತೀಯ ಮೂಲದ ಹೆಸರಾಂತ ವಕೀಲರಾದ ಶ್ರೀ ಗಿರಿಧರನ್ ಸಿವರಾಮನ್ ಅವರನ್ನು Race Discrimination Commissioner ಎಂದು ನೇಮಿಸಿದೆ. ಇದು ಬಹಳ ಗುರುತರವಾದ ಸ್ಥಾನ. ಆಸ್ಟ್ರೇಲಿಯನ್ ಮಾನವ ಹಕ್ಕುಗಳ ಕಮಿಷನ್ ಅಧ್ಯಕ್ಷರಾದ ರೋಸಲಿಂಡ್ ಕ್ರೌಚರ್ ಹೇಳಿಕೆಯ ಪ್ರಕಾರ ಆಸ್ಟ್ರೇಲಿಯಾದಲ್ಲಿ ರೇಸಿಸಮ್ ಪ್ರಕರಣಗಳ ವರದಿಗಳು ಹೆಚ್ಚುತ್ತಿವೆ. ರೇಸಿಸಮ್ ಅನ್ನು ಅದರ ಮೂಲದಲ್ಲಿಯೇ ಗುರುತಿಸಿ, ಕಾರಣಗಳನ್ನು ಪತ್ತೆಮಾಡಿ ಅದನ್ನು ಕಳೆಯುವ ಕೆಲಸ ಬಹಳ ಗಂಭೀರವಾದದ್ದು. ಕಮಿಷನರ್ ಸಿವರಾಮನ್ ಅವರು ಈ ನಿಟ್ಟಿನಲ್ಲಿ ಹೊಸ ನಾಯಕತ್ವವನ್ನು ವಹಿಸಿಕೊಂಡು ಎಲ್ಲರಿಗೂ ನ್ಯಾಯ ಒದಗುವತ್ತ ಕೆಲಸ ಮಾಡಲಿದ್ದಾರೆ, ಎಂದು ರೋಸಲಿಂಡ್ ಆಶಿಸಿದ್ದಾರೆ. ಅಂದರೆ ಬಹುಸಂಸ್ಕೃತಿಗಳಲ್ಲಿಯೂ ಬದುಕಿರುವ ರೇಸಿಸಮ್ಗೆ ಹೊಸ ಮೂಗುದಾರ ಬರಲಿದೆ!
ಹೊಸ ಕಮಿಷನರ್ ಗಿರಿಧರನ್ ಸಿವರಾಮನ್ ಅವರು ವಕೀಲರು, ಮಾನವ ಹಕ್ಕುಗಳ ಕಾರ್ಯಕರ್ತರು, ಹಾಗೂ Multicultural Australia ಸಂಸ್ಥೆಯ ಸಭಾಪತಿ/ಅಧ್ಯಕ್ಷ. ಅವರು ಅನೇಕ ಕಾನೂನುಕಟ್ಟಳೆ, ರೇಸಿಸಮ್ ಸಂಬಂಧಿತ ಪ್ರಕರಣಗಳಲ್ಲಿ ಮತ್ತು ವಲಸಿಗ ಕೆಲಸಗಾರರ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪಕ್ಷಪಾತ ಪ್ರಕರಣಗಳಲ್ಲಿ ವಕೀಲಗಿರಿ ವಹಿಸಿ, ಕೋರ್ಟುಕಚೇರಿಗಳಲ್ಲಿ ಮೊಕದ್ದಮೆಗಳನ್ನು ಇತ್ಯರ್ಥ ಮಾಡಿ ವಲಸಿಗ ಕೆಲಸಗಾರರಿಗೆ ನ್ಯಾಯ ಸಿಕ್ಕುವಂತೆ ಶ್ರಮಿಸಿದ್ದಾರೆ. ತಮ್ಮ ವಲಸಿಗರ ಮಾನವ ಹಕ್ಕುಗಳನ್ನು ಸಂರಕ್ಷಿಸುವ ಕೆಲಸಕ್ಕಾಗಿ ಹೆಸರಾಗಿದ್ದಾರೆ.
ಆಸ್ಟ್ರೇಲಿಯಾದ Race Discrimination Commissioner ಸ್ಥಾನಕ್ಕೆ ಗಿರಿಧರನ್ ಅವರ ನೇಮಕವು ಹಳೆ ಪ್ರಶ್ನೆಗಳನ್ನು ಹೊಸ ಚಿಂತನೆಯ ಮುನ್ನೆಲೆಗೆ ತಂದಿದೆ. ಪ್ರಶ್ನೆಯಿರುವುದು ಜಾಗತಿಕ ಮಟ್ಟದಲ್ಲಿ ಆಸ್ಟ್ರೇಲಿಯಾವು ತನ್ನನ್ನು ಒಂದು ಬಹುಸಂಸ್ಕೃತಿಗಳ ಸಮಾಜವೆಂದು ಗುರುತಿಸಿಕೊಂಡಿರುವುದರ ಬಗ್ಗೆ. ಎಲ್ಲರೂ ದೇಶದೊಳಗೆ ಕೂಡ ಈ ಒಂದು ಗುರುತನ್ನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತಾವು ಹೊರಗಿನ ಎಲ್ಲರನ್ನೂ ಸ್ವಾಗತಿಸುವ ವಿಶಾಲ ಮನೋಭಾವದವರು ಎಂದು ಹೇಳುವವರಿಗೆ ಕಳೆದೆರಡು ದಶಕಗಳಿಂದ ದೇಶದಲ್ಲಿ ಜಾರಿಯಿರುವ ಕಾನೂನು ಮರೆತುಬಿಡುತ್ತದೆ. ಆಗಿನ ಪ್ರಧಾನಮಂತ್ರಿ ಜಾನ್ ಹೊವಾರ್ಡ್ ಹೊರಡಿಸಿದ ಆದೇಶ ‘ಬೋಟ್ಗಳಲ್ಲಿ ಅಥವಾ ಇನ್ಯಾವುದೇ ಕಾನೂನುರಹಿತ ಮಾರ್ಗಗಳಲ್ಲಿ ಬರುವವರಿಗೆ ನಮ್ಮ ದೇಶದಲ್ಲಿ ಪ್ರವೇಶವಿಲ್ಲ’ ಎನ್ನುವುದು ಈಗಲೂ ಜಾರಿಯಲ್ಲಿದೆ. ಅಂತಾರಾಷ್ಟ್ರೀಯ ಒಡಂಬಡಿಕೆ, ಒಪ್ಪಂದಗಳನ್ನು ಆಧರಿಸಿ, ತಮ್ಮ ದೇಶಗಳಲ್ಲಿ ಜೀವಕ್ಕೆ ರಕ್ಷಣೆಯಿಲ್ಲ ಎಂದು ಮಾನವೀಯ ನೆಲೆಯಲ್ಲಿ ಆಶ್ರಯ ಕೇಳುತ್ತಾ ಬರುವವರನ್ನು ನೆರೆದೇಶವಾದ ಪಪುವಾ ನ್ಯೂ ಗಿನಿಯ ಡಿಟೆನ್ಷನ್ ಕೇಂದ್ರಗಳಿಗೆ ಕಳಿಸುತ್ತಾರೆ. ಆದರೆ ಈ ನೀತಿ ಎಲ್ಲಾ ದೇಶಗಳ ನಿರಾಶ್ರಿತರಿಗೆ ಅನ್ವಯಿಸುವುದಿಲ್ಲ. ಇಲ್ಲಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ಧೋರಣೆ ರಾಚುತ್ತದೆ. ಮೈ ಬಣ್ಣ ಬಿಳಿಯಿದ್ದರೆ ಅವರಿಗೆ ಬೆಣ್ಣೆ ಸಿಗುತ್ತದೆ.
ಆದರೆ ಯಾಕೋ ಇನ್ನೊಂದು ವಿಷಯವನ್ನೂ ಜನರು ಮರೆತುಬಿಡುತ್ತಾರೆ. ಆಸ್ಟ್ರೇಲಿಯಾ ಇರುವುದು ಏಷ್ಯಾ-ಪೆಸಿಫಿಕ್ ಪ್ರಾಂತ್ಯದಲ್ಲಿ, ಅಕ್ಕಪಕ್ಕ ರಾಷ್ಟ್ರಗಳ ಜನರು ಯಾರೂ ಬಿಳಿಯರಲ್ಲ, ಆಸ್ಟ್ರೇಲಿಯಾವು ವಸಾಹತು ಸಮಾಜವೆನ್ನುವ ವಿಷಯವು ಮುನ್ನೆಲೆಗೆ ಬಂದು ಅದರ ಚರ್ಚೆಗೆ ಒಂದು ಗಂಭೀರವಾದ ವೇದಿಕೆ ಸಿಗುವುದೇ ಕಡಿಮೆ. ಸಿಕ್ಕರೂ ಅದೊಂದು ತೋರಿಕೆಯಾಗಿ, ಬಲವಂತವಾಗಿ ಹಲ್ಲುಕಿರಿಯುವಂತೆ ಕಾಣುತ್ತದೆ. ಹಲ್ಲು ಕಿರಿಯುವಾಗ ಮುಖದ ಮೇಲೆ ರಾಜಕೀಯ ಬಣ್ಣಗಳು ಢಾಳಾಗಿ ಕುಣಿಯುತ್ತವೆ. ತಮಗೆ ಏಷ್ಯಾ-ಪೆಸಿಫಿಕ್ ಪ್ರಾಂತ್ಯವು ಬಹಳ ಮುಖ್ಯ ಎನ್ನುತ್ತಲೇ ರಾಜಕೀಯ ಮುಖಂಡರು ಅಮೆರಿಕೆಯಿಂದ, ಬ್ರಿಟನ್ನಿನಿಂದ, ಯೂರೋಪಿನಿಂದ ಬರುವ ಆಹ್ವಾನಕ್ಕಾಗಿ ಕಾಯುತ್ತಾರೆ.
ಆಸ್ಟ್ರೇಲಿಯನ್ ಮಾನವ ಹಕ್ಕುಗಳ ಕಮಿಷನ್ ಅಧ್ಯಕ್ಷರಾದ ರೋಸಲಿಂಡ್ ಕ್ರೌಚರ್ ಹೇಳಿಕೆಯ ಪ್ರಕಾರ ಆಸ್ಟ್ರೇಲಿಯಾದಲ್ಲಿ ರೇಸಿಸಮ್ ಪ್ರಕರಣಗಳ ವರದಿಗಳು ಹೆಚ್ಚುತ್ತಿವೆ. ರೇಸಿಸಮ್ ಅನ್ನು ಅದರ ಮೂಲದಲ್ಲಿಯೇ ಗುರುತಿಸಿ, ಕಾರಣಗಳನ್ನು ಪತ್ತೆಮಾಡಿ ಅದನ್ನು ಕಳೆಯುವ ಕೆಲಸ ಬಹಳ ಗಂಭೀರವಾದದ್ದು. ಕಮಿಷನರ್ ಸಿವರಾಮನ್ ಅವರು ಈ ನಿಟ್ಟಿನಲ್ಲಿ ಹೊಸ ನಾಯಕತ್ವವನ್ನು ವಹಿಸಿಕೊಂಡು ಎಲ್ಲರಿಗೂ ನ್ಯಾಯ ಒದಗುವತ್ತ ಕೆಲಸ ಮಾಡಲಿದ್ದಾರೆ, ಎಂದು ರೋಸಲಿಂಡ್ ಆಶಿಸಿದ್ದಾರೆ.
ನೆರೆಹೊರೆ ಅನ್ನುವುದು ಮುಖ್ಯ. ಅದು ಮನುಷ್ಯರಿಗೆ ಮಾತ್ರವಲ್ಲ, ಸಕಲ ಜೀವಿಗಳಿಗೂ ಕೂಡ. ಸ್ವಲ್ಪ ನಮ್ಮ ದೃಷ್ಟಿಯನ್ನು ಆಕಡೆ ಈಕಡೆ ಸರಿಸಿ ಅಕ್ಕಪಕ್ಕದವರನ್ನು ವಿಚಾರಿಸೋಣ. ಅವರು ಯಾರು, ಹೇಗಿದ್ದಾರೆ, ಅವರ ಜೊತೆ ನಮ್ಮ ಮಾತುಕತೆ ಹೇಗಿದೆ ಇತ್ಯಾದಿ. ನೋಡಿ, ಆಸ್ಟ್ರೇಲಿಯಾದಲ್ಲಂತೂ ಬರುಬರುತ್ತಾ ಈ ವಿಷಯ ತುಂಬಾ ಮುಖ್ಯವಾಗುತ್ತಿದೆ. ಬರೀ ನಮ್ಮಂತಹ ಸಾಮಾನ್ಯ ಜನರಿಂದ ಹಿಡಿದು ದೇಶಗಳ ಗಡಿಯಾಚೆ ಇರುವವರೊಡನೆ ನಮ್ಮ ಸಂಬಂಧಗಳು ಹೇಗಿವೆ ಎನ್ನುವುದು ದಿನನಿತ್ಯದ ಚರ್ಚೆಯಾಗಿದೆ. ಸರಕಾರಕ್ಕೆ ಚೈನಾದ ಚಿಂತೆಯಾದರೆ ಸಾಮಾನ್ಯರಿಗೆ ಅಯ್ಯೋ ನಮ್ಮ ಪಕ್ಕದ ಮನೆಗೆ ಕಪ್ಪು, ಕಂದು ಬಣ್ಣದವರು ಬಂದುಬಿಟ್ಟರೆ ನಮ್ಮ ಕತೆಯೇನು ಎನ್ನುವ ಚಿಂತೆ! ಬರುವ ವಲಸಿಗರು ತರುವ ಸಾಂಸ್ಕೃತಿಕ ಬಂಡವಾಳಕ್ಕಿಂತಲೂ ಚಿಂತೆಯಿರುವುದು ಅವರು ಚೆನ್ನಾಗಿ ಇಂಗ್ಲಿಷ್ ಮಾತನಾಡದಿದ್ದರೆ ಹೇಗೆ, ಅವರ ಆಹಾರದಿಂದ ನಮಗೇನಾದರೂ ತೊಂದರೆಯಾದರೆ ಹೇಗೆ, ಅಯ್ಯೋ ಅವರದ್ದು ಬೆಲೆಬಾಳುವ ಕಾರು, ಅದು ಹೇಗೆ ಬಂತು ಎಂದು ಗುಮಾನಿ ಪಡುವ ಜನರು ಈಗಲೂ ಇದ್ದಾರೆ. ಎಲ್ಲದಕ್ಕಿಂತಲೂ ಬಿಳಿ ಮೈಬಣ್ಣಕ್ಕೇ ಹೆಚ್ಚಿನ ಸಾಮರ್ಥ್ಯವಿರುವುದು, ಮಿಕ್ಕದ್ದೆಲ್ಲಾ ಗೌಣ, ಎನ್ನುವ ನಂಬಿಕೆಯ ಜನರ ಬಲವೇ ಈಗಲೂ ಹೆಚ್ಚು.
ಹಾಗೆ ನೋಡಿದರೆ ಆಸ್ಟ್ರೇಲಿಯಾದ ನಗರಗಳಲ್ಲಿ ವಾಸಿಸುವ ಸಾಮಾನ್ಯ ಜನರು ಮತ್ತು ಅವರ ನೆರೆಹೊರೆಯವರು ಎನ್ನುವ ವಿಷಯಕ್ಕೆ ಪುನರ್ಜೀವ ಬಂದಿದೆ. ಇದಕ್ಕೆ ಇಂಬು ಕೊಟ್ಟಿರುವುದು ವಲಸಿಗರ ಸಂಖ್ಯೆ, ಅವರ ಮೇಲ್ಮಟ್ಟದ ಉದ್ಯೋಗಗಳು, ಸಂಬಳ, ವಸತಿ ಕೊಳ್ಳುವ ಸಾಮರ್ಥ್ಯ ಇತ್ಯಾದಿ. ಈ ಸಾಮರ್ಥ್ಯದಿಂದ ಅವರು ಸಮಾಜದ ಮೇಲಿನ ಸ್ತರಗಳಿಗೆ ಬಂದು ಹೆಸರು, ಖ್ಯಾತಿ, ಸ್ಥಾನಮಾನಗಳನ್ನು ಗಳಿಸಿ ಮಿಂಚುತ್ತಿದ್ದಾರೆ. ವಾಣಿಜ್ಯ, ರಾಜಕೀಯ ಎಂಬಂತೆ ಮುನ್ನೆಲೆಯ ನಾಯಕತ್ವಕ್ಕೆ ಸೇರುತ್ತಿದ್ದಾರೆ. ಇದು ಸ್ಥಳೀಯರಿಗೆ ಸಹಜವಾಗಿಯೇ ಆತಂಕ ತಂದಿದೆ. ಉದಾಹರಣೆಗೆ, ಖಾಯಂ ನೆಲೆ (ಪರ್ಮನೆಂಟ್ ರೆಸಿಡೆಂಟ್) ವೀಸಾ ಪಡೆದು ಬಂದು ನೆಲೆಸುವವರಲ್ಲಿ ಬ್ರಿಟನ್ ಆದಮೇಲೆ ಎರಡನೆಯ ಸ್ಥಾನದಲ್ಲಿ ಭಾರತೀಯರಿದ್ದಾರೆ. ಬರುವ ಭಾರತೀಯರಲ್ಲಿ ಹೆಚ್ಚಿನವರು ಒಳ್ಳೆಯ ಶಿಕ್ಷಣ, ಉದ್ಯೋಗಾನುಭವ ಇರುವವರು. ಹಾಗಾಗಿ ಅನೇಕ ಸ್ಥಳೀಯರಿಗೆ ಹೋಲಿಸಿದರೆ ಅವರ ಜೀವನಮಟ್ಟವೂ ಚೆನ್ನಾಗಿರುತ್ತದೆ. ತಮ್ಮ ಶಾಂತ ಸ್ವಭಾವ, ಹೊಂದಾಣಿಕೆಯ ಜೀವನಶೈಲಿಯಿಂದ ಭೇಷ್ ಎನ್ನಿಸಿಕೊಳ್ಳುತ್ತಾರೆ. ಇದೆಲ್ಲದರ ನಡುವೆ ಅವರೂ ಕೂಡ ರೇಸಿಸಮ್ ಅನುಭವಗಳಿಂದ ಬೇಸರಿಸುತ್ತಾರೆ.
ಇದನ್ನೆಲ್ಲ ನಾನು ನಮ್ಮ ಬಡಾವಣೆಯಲ್ಲಿಯೇ ನೋಡುತ್ತಿದ್ದೀನಿ. ನಾನು ಈ ಬಡಾವಣೆಗೆ ಬಂದಾಗ ಇಡೀ ಬೀದಿಗೆ ನಾನೊಬ್ಬಳೇ ಕಂದು ಬಣ್ಣದ (ಬಿಳಿಯರಿಗೆ ಅದು ಕಪ್ಪು ಬಣ್ಣ) ಚರ್ಮದವಳು. ಅಕ್ಕಪಕ್ಕದ ರಸ್ತೆಗಳಲ್ಲಿ ನಾನು ಹಾದುಹೋದರೆ ಜನರು ಮುಖ ತಿರುಗಿಸಿಕೊಳ್ಳುತ್ತಿದ್ದರು. ಅದೂ 21 ನೇ ಶತಮಾನದಲ್ಲಿ!! ಅಯ್ಯೋ ಯಾಕಾದರೂ ಈ ‘ರೆಡ್ ನೆಕ್’ ಬಡಾವಣೆಗೆ ಬಂದು ಬಿದ್ದೆ’ ಎಂದು ಹಳಹಳಿಸಿದ ದಿನಗಳು ಕ್ರಮೇಣ ಕಳೆಯುತ್ತಾ ಬಂದು ಈಗ ನಮ್ಮ ಬಡಾವಣೆಯ ರಸ್ತೆಗಳಲ್ಲಿ ಕಂದು ಬಣ್ಣದ ಜನರು ಹೆಚ್ಚುತ್ತಿದ್ದಾರೆ. ಹೆಚ್ಚಿನವರು ಭಾರತದವರು. ಅಲ್ಲಲ್ಲಿ ಅವರನ್ನು ನೋಡಿದಾಗಲೆಲ್ಲಾ ನನಗೆ ಬಲು ಖುಷಿ. ದೇವರೇ, ಇವರ ಸಂಖ್ಯೆ ಇನ್ನೂ ಹೆಚ್ಚಲಿ, ಇದು ನಿಜವಾಗಿಯೂ ಬಹುಸಂಸ್ಕೃತಿ ಸಮಾಜವಾಗಲಿ, ಎಂದು ಆಗಾಗ ಗಟ್ಟಿಯಾಗೇ ಹೇಳುತ್ತೀನಿ.
ಇದೆಲ್ಲದರ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಹೊಸ Race Discrimination Commissioner ಆಗಿ ಗಿರಿಧರನ್ ಅವರು ಆಯ್ಕೆಯಾದದ್ದು ನಮಗೆಲ್ಲ ಮುಖ್ಯವಾಗುತ್ತದೆ. ಮೊದಲೇ ಹೇಳಿದಹಾಗೆ ಅವರು ಭಾರತೀಯ ಮೂಲದವರು. ತನ್ನೊಳಗೆ ಅನೇಕ ಬಹುಸಂಸ್ಕೃತಿಗಳ ರೆಂಬೆಕೊಂಬೆಗಳನ್ನು ಹಮ್ಮಿಕೊಂಡು, ಅಪ್ಪಿಕೊಂಡು ಉಸಿರಾಡುತ್ತಿರುವ ಭಾರತೀಯತೆ ಬೇರುಗಳ ಸತ್ವವು ಅವರ ಕೆಲಸಗಳನ್ನು ಮತ್ತಷ್ಟು ಪೋಷಿಸಲಿ. ಆಸ್ಟ್ರೇಲಿಯಾದಲ್ಲಿ ಬಹುಸಂಸ್ಕೃತಿಗಳ ಮೌಲ್ಯಗಳು, ಸಮಾನತೆ ಮತ್ತು ನ್ಯಾಯ ಎನ್ನುವುದಕ್ಕೆ ಹೊಸ ಹೊಸ ಅರ್ಥಗಳು ಹೊಮ್ಮಲಿ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.