Advertisement
ಗರತಿಯ ಹಾಡು ಮತ್ತು ಸ್ತ್ರೀ ದೃಷ್ಟಿಕೋನ: ಲಿಂಗರಾಜ ಸೊಟ್ಟಪ್ಪನವರ್‌ ಅಂಕಣ

ಗರತಿಯ ಹಾಡು ಮತ್ತು ಸ್ತ್ರೀ ದೃಷ್ಟಿಕೋನ: ಲಿಂಗರಾಜ ಸೊಟ್ಟಪ್ಪನವರ್‌ ಅಂಕಣ

ಜನಪದ ಎನ್ನುವದು ಸ್ತ್ರೀ ಕೇಂದ್ರಿತವಾದ ಭಾವುಕ ನೆಲೆ. ಅವಳ ಹಂಬಲ, ಹತಾಶೆ, ಸಡಗರ ಸಂಕಟಗಳು, ಹಾತೊರಿಕೆ, ಕನವರಿಕೆ ಹಾಗೂ ಪ್ರತಿರೋಧಗಳಿಗೆ ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಅದು ರೂಪಗೊಂಡಿರುವಂತದ್ದಾಗಿದೆ. ಜನಪದ ಧಾರೆಯುದ್ದಕ್ಕೂ ಹೆಣ್ಣನ್ನು ಉತ್ತಮರ ಮಗಳು ಆಗಿಸುವ ಅಭೀಪ್ಸೆ ಒಂದು ಪುರುಷ ಪ್ರಣೀತವಾದ ಅನುಕೂಲಸಿಂಧು ಗರತಿ ಧರ್ಮವನ್ನು ರೂಪಿಸಿದೆ ಮತ್ತೆ ಅದು ಒಂದು ಹೆಣ್ಣಿನ ಮೂಲಕವೆ ಇನ್ನೊಂದು ಹೆಣ್ಣಿಗೆ ಧಾರೆಯೆರೆಯುವಂತೆ ಸಂಯೋಜಿಸಲಾಗಿದೆ.
ಲಿಂಗರಾಜ ಸೊಟ್ಟಪ್ಪನವರ್‌ ಬರೆಯುವ “ಉತ್ತರದ ಕತೆಗಳು” ಅಂಕಣದ ಮೂರನೆಯ ಬರಹ

ಜನಪದ ಎನ್ನುವದು ಸ್ತ್ರೀ ಕೇಂದ್ರಿತವಾದ ಭಾವುಕ ನೆಲೆ. ಅವಳ ಹಂಬಲ, ಹತಾಶೆ, ಸಡಗರ ಸಂಕಟಗಳು, ಹಾತೊರಿಕೆ, ಕನವರಿಕೆ ಹಾಗೂ ಪ್ರತಿರೋಧಗಳಿಗೆ ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಅದು ರೂಪಗೊಂಡಿರುವಂತದ್ದಾಗಿದೆ. ಜನಪದ ಧಾರೆಯುದ್ದಕ್ಕೂ ಹೆಣ್ಣನ್ನು ಉತ್ತಮರ ಮಗಳು ಆಗಿಸುವ ಅಭೀಪ್ಸೆ ಒಂದು ಪುರುಷ ಪ್ರಣೀತವಾದ ಅನುಕೂಲಸಿಂಧು ಗರತಿ ಧರ್ಮವನ್ನು ರೂಪಿಸಿದೆ ಮತ್ತೆ ಅದು ಒಂದು ಹೆಣ್ಣಿನ ಮೂಲಕವೆ ಇನ್ನೊಂದು ಹೆಣ್ಣಿಗೆ ಧಾರೆಯೆರೆಯುವಂತೆ ಸಂಯೋಜಿಸಲಾಗಿದೆ. ಲಿಂಗಣ್ಣನವರ ಗರತಿಯ ಹಾಡುಗಳಲ್ಲಿ ಇಂತದ್ದೊಂದು ಗ್ರಹಿಕೆ ಸಾಧ್ಯವಾಗದೆ ಮೇಲ್ನೋಟಕ್ಕೆ ದಕ್ಕಿದ ಹೆಣ್ಣಿನ ಸೈರಣೆ, ವಿಧೇಯತೆ, ಎದೆಗಾರಿಕೆ, ಪತಿಭಕ್ತಿ, ದೈವಪ್ರೀತಿ ಇಂತವುಗಳನ್ನು ಮತ್ತೆ ತೋರಿಸಲಾಗಿದೆ. ಇಲ್ಲಿ ಸ್ತ್ರೀತನ ಎನ್ನುವದು ತಾಯಿ ಮಗಳು ಸೊಸೆ ಹೆಂಡತಿಯಾಗಿ ತನ್ನ ನಯವಂತಿಕೆಯನ್ನು ಸಾಬೀತುಪಡಿಸುವಂತೆ ತೋರುತ್ತಾದರೂ ಅದೊಂದು ತೋರು ಮಾತ್ರ.

“ಹತ್ತಾರು ಬಯ್ದರೂ..
ಉತ್ತರಾ ಬ್ಯಾಡ ನನ ಮಗಳ..”

ಇಲ್ಲಿ ಇದಿರು ಮಾತನಾಡಬಾರದು ಎಂಬ ನೀತಿ ಇದೆಯಾದರೂ ಸ್ತ್ರೀ ಸಂಕುಲದ ಮೇಲೆ ಪಾರಂಪರಿಕವಾಗಿ ಇಂತದ್ದೊಂದು ನೀತಿಯನ್ನು ಹೇರಲಾಗಿದೆ ಎಂಬುದನ್ನು ಲೋಕಕ್ಕೆ ಸಾರುತ್ತ (ಹಾಡುತ್ತ)

ಇಟ್ಹಾಂಗ ಇರಬೇಕು
ತವರಿಗೆ ಹೆಸರ ತರಬೇಕು..
ಎಂಬುದನ್ನು ಪರಾಮರ್ಶೆಗೆ ಒಳಪಡಿಸಬೇಕಾಗಿದೆ ಎಂಬ ಆರ್ತನಾದವೂ ಇದೆ. ಆದರೆ ಅದು ಕ್ಷೀಣವಾಗಿದೆ.

ಪೂಜೆ ಮಾಡಿದರೇನು ಪತ್ರಿ ಏರಿಸಿದರೇನು?
ಪತಿ ಮೇಲೆ ಭಕ್ತಿಯಿರಬೇಕು..

ಒಂದು ಸಂದರ್ಭದಲ್ಲಿ ದೇವರನ್ನು ಅಲ್ಲಗಳೆದರೂ ಪತಿಯೇ ಪರದೈವ ಎಂಬುದನ್ನು ಪ್ರತಿಷ್ಠಾಪಿಸುವಲ್ಲಿ ಜನಪದ ಮುತುವರ್ಜಿ ತೋರುತ್ತದೆ. ಅದರ ಮುಖ್ಯ ಕಾಳಜಿ ಅಡಗಿರುವದು ಹೆಣ್ಣನ್ನು ಉತ್ತಮರ ಮಗಳು ಆಗಿಸುವ ಮೂಲಕ ಗರತಿ ಸಂಹಿತೆಯನ್ನು ಕಾಪಿಟ್ಟುಕೊಳ್ಳುವದಾಗಿದೆ.

ಹತ್ತು ರೂಪಾಯಿ.. ಮೊಗದೋರೊ
ಎಂದು ಕೇಳುವ ಕಿತ್ತೂರಿನ ದೊರೆಗೂ

ನನ್ನ ಮೆಟ್ಟಿನ ಕಿಮ್ಮತ್ತು ನಿನಗಿಲ್ಲ.. ಎನ್ನುವ ದಿಟ್ಟತನವನ್ನು ಗರತಿಯಲ್ಲಿ ಅಪೇಕ್ಷಿಸುವ ಸಮಾಜ

ಉಂಡರೂ ಸೇರ ಉಟ್ಟರೂ ಸೇರ
ಮುಂಡೆ ಬಾಚರೂ ಸೇರ.. ಗಂಡನಲ್ಲ ದುಸ್ಮಾನ

ಎಂದು ಪುರುಷನ ವಿರುದ್ಧ ಅಂಥದ್ದೆ ದಿಟ್ಟತನ ತೋರಿದಾಗ ಅವಳಿಗೆ ಸ್ವಾಭಿಮಾನ ಸನ್ನಡತೆ ಸಹನೆ ಕುಲಗೌರವ ಶೀಲಸಂಪನ್ನತೆ ಮುಂತಾದ ವಿಶೇಷಣಗಳನ್ನು ಹೇರಿ ಅಧೀರಳಾಗಿಸಿದೆ.

ಜನಪದ ಹೆಣ್ಣಿನ ದೈವಭಕ್ತಿ ಪ್ರಶ್ನಾತೀತವಾದದ್ದು. ಕರುಣ ಬಂದರೆ ಕಾಯೋ ಮರಣ ಬಂದರೆ ಒಯ್ಯೋ.. ಎನ್ನುವಂತೆ ತನ್ನ ಬದುಕನ್ನು ಅರ್ಪಿಸಿಕೊಳ್ಳುತ್ತಾಳಾದರೂ…

“ಕೊಂಡ ಹಾಯಿಸಿದವನೆಂತ ಗಂಡ..” ಎಂದು ರಾಮನನ್ನು ಪ್ರಶ್ನಿಸಿ ಸಾಮಾನ್ಯನನ್ನಾಗಿಸುತ್ತಾಳೆ.

ಬಾಗಾದಿ ಬಲಕಿರಲಿ, ವೈರಿ ಎಡಕಿರಲಿ
ಛಾಡಿ ಮನೆ ಇದಿರಿರಲಿ | ಬಲಭೀಮ
ದೇವ ನನ ಮೇಲೆ ದಯವಿರಲಿ..

ಹೀಗೆ ತನ್ನ ಕಾವ ದೈವವನ್ನು ಮೊರೆಯಿಡುತ್ತಾಳೆ. ದೈವದ ನಡೆಯನ್ನೂ ಪ್ರಶ್ನಿಸುತ್ತಾಳೆ.

ಕಾಶಿಗೆ ಹೋಗಾಕ ಏಸು ದಿನ ಬೇಕು
ತಾಸಿನ್ಹೊತ್ಹಾದಿ ತವರೂರು..

ತವರಲ್ಲೆ ಕಾಶಿಯನ್ನು ತಾಯಿಯಲ್ಲೆ ದೇವರನ್ನು ಕಾಣುವ ಅವಳ ವಾಸ್ತವ ಪ್ರಜ್ಞೆ ಅವತ್ತಿನ ಮೌಢ್ಯಭರಿತ ಮನಸುಗಳಿಗೆ ತಾಗಿದ ಝಳವೂ ತೋರಿದ ಬೆಳಕೂ ಆಗಿದೆ.

ಇಟ್ಟು ಮರಗುವ ನಾಯಿ
ಕೊಟ್ಟು ಕೊರಗುವ ನಾಯಿ
ಎಂದು ಸಂಗ್ರಹಿಸಿಡುವ ಮಾನವ ಪ್ರವೃತ್ತಿಯನ್ನು ಅಲ್ಲಗಳೆಯುವ ಹಂಚುಣ್ಣುವ ಲೋಕಪ್ರೀತಿಯನ್ನು ತೋರುವ ಜನಪದದ ಹೆಣ್ಣು

“ತನ್ನಂಗ ನೋಡಿದರ ಭಿನ್ನಿಲ್ಲ ಬೇಧಿಲ್ಲ..” ಎಂಬ ಲೋಕದೃಷ್ಟಿಯನ್ನು ಸಾರುತ್ತಾಳೆ.

ಮೂಗುತಿ ಮುಂಭಾರ ತುರುಬಿನ ಹಿಂಭಾರ
ಗೆಳತಿ ಕೊಟ್ಟ ಸೀರೆ ನೀರಿಗೆ ಭಾರ

ಹೆಣ್ಣಿನ ನಡತೆಯನ್ನು ನಿಯಂತ್ರಿಸಲು ಒಂದು ಅಪಕ್ವ ವಿಚಾರಧಾರೆಯನ್ನು ಹೇಗೆ ಒಂದು ಟೂಲ್ ಆಗಿ ಜನಪದವನ್ನು ಬಳಸಿ ಸ್ತ್ರೀ ಅಸ್ಮಿತೆಯ ಮೇಲೆ ಹೇರಲಾಯಿತು ಎಂಬುದನ್ನು ಹೆಣ್ಣು ತನ್ನ ಹಾಡಿನ ಮೂಲಕವೆ ಈ ಗಂಡುಜಗತ್ತಿಗೆ ಅರುಹಿದಂತಿದೆ.

ಮಡದಿಯ ಬಡದಾನ
ಮನದಲ್ಲೆ ಮರುಗ್ಯಾನ..
ಎನ್ನುವಲ್ಲಿ ಗಂಡಸಿನ ಕುರಿತ ಅನುಕಂಪದಂತೆ ತೋರಿದರೂ ಅಂಥದ್ದೊಂದು ಮರುಗುವಿಕೆಯನ್ನು ಅವನಲ್ಲಿ ಅವಳು ಕಾಣುವ ಅಪೇಕ್ಷೆ ಇದ್ದಂತೆ ಅನಿಸುತ್ತದೆ.

ಜನಪದ ಹೆಣ್ಣು ತನ್ನ ಬದುಕು ಹೀಗಿದೆ ಎಂದು ಹಾಡುತ್ತಲೆ ಅದು ಹೇಗೆ ಹೇಗೆಲ್ಲಾ ಇರಬಹುದಾದ ಸಾಧ್ಯತೆಗಳನ್ನು ಲೋಕ ಕಂಡುಕೊಳ್ಳಲು ಆಹ್ವಾನಿಸುತ್ತಿರುವಂತೆ ನನಗೆ ಗರತಿಯ ಹಾಡುಗಳು ತೋರುತ್ತವೆ.

ಅವಳ ಅಭಿವ್ಯಕ್ತಿಯೂ ಹೆಣ್ಣನ್ನು ಸೈರಣಿ ಗರತಿ ಕ್ಷಮಯಾಧರಿತ್ರಿ ಸುಮಂಗಲಿ ಎಂದೆಲ್ಲಾ ಹೇಳುವಲ್ಲಿ ಏನೋ ಲೋಪವಿದೆ. ಲೋಕವೆ ಅದರ ಗರತಿ ಸಂಹಿತೆಯನ್ನು ಪರಾಮರ್ಶಿಸಿಕೊಳ್ಳಲಿ ಎಂದು ಆಗ್ರಹಿಸುತ್ತಿರುವಂತೆ ಗರತಿಯ ಹಾಡುಗಳು ಕೇಳುತ್ತವೆ.

ವಚನಗಳನ್ನು ಪುರಾಣ ಪ್ರವಚನಕಾರರೊಬ್ಬರು ಓದಿ ತನ್ನ ಮೆಲ್ಪದರದ ಗ್ರಹಿಕೆಯನ್ನು ಒಂದು ನೀತಿ ಭೋದನೆ ತಿಳುವಳಿಕೆ ಸೀಮಿತಗೊಳಿಸುವಂತೆ ಇಲ್ಲಿನ ಗರತಿಯ ಹಾಡುಗಳನ್ನು ಸೀಮಿತ ಅರ್ಥಗ್ರಹಿಕೆಗೆ ಒಳಪಡಿಸಿ ವಿಸ್ತರಿಸಲಾಗಿದೆ. ಒಂದು ಹೆಣ್ಣು ಒಳನೋಟವಾಗಲಿ ಸ್ತ್ರೀ ಸಮಷ್ಠಿ ಪ್ರಜ್ಞೆಯ ಮುನ್ನೋಟವಾಗಲಿ ಇಲ್ಲಿ ಕಾಣಸಿಗುವದಿಲ್ಲ. ಎಲ್ಲವನ್ನು ಸೋಸಿದರೆ ಆ ಕಾಲದ ಗರತಿ ಸಂಹಿತೆ ಸ್ಪಷ್ಟವಾಗುತ್ತದೆ. ಆದರೆ ಇಲ್ಲಿರುವ ಗರತಿಯ ಹಾಡುಗಳು ಗರತಿ ಎಂಬ ಪರಿಕಲ್ಪನೆಯನ್ನು ಕೇವಲ ಶೀಲ ನಡತೆ ಸ್ತ್ರೀ ಪಾವಿತ್ರ್ಯಕ್ಕೆ ಸೀಮಿತಗೊಳಿಸದೆ ಗರತಿ ಎಂಬುವವಳು ಪತಿನಿಷ್ಠಳೂ ದೈವ ಭಕ್ತಳೂ ಆಗಿರುವ ಹಾಗೆ ತನ್ನಂತೆ ಪರರ ಬಗೆಯುವ, ಯಾವುದನ್ನೂ ಸಂಗ್ರಹಿಸಿಡಬಾರದು ಕೊಟ್ಟಿದ್ದು ತನಗೆ.. ತಂದೆ ತಾಯಿಯರಲ್ಲಿ ದೇವರನ್ನು ಕಾಣಬೇಕು, ಪ್ರಕೃತಿ ಎಂಬುದು ಪರದೈವ, ಇಬ್ಬರ ಹೆಂಡಿರ ಕಾಟ ತಗಣಿಯ ಕಾಟ.. ಸಾವಿರ ಕೊಟ್ಟರೂ ಸವತಿಯ ಮನೆ ಬೇಡ.. ಎಂಬ ಹೆಣ್ಣಿನ ಲೋಕದೃಷ್ಟಿಯೂ ಇಲ್ಲಿ ಗರತಿಸಂಹಿತೆಯ ಭಾಗವಾಗಿದೆ. ಇದು ಗರತಿಯ ಹಾಡುಗಳ ಹೆಚ್ಚುಗಾರಿಕೆ.

About The Author

ಲಿಂಗರಾಜ ಸೊಟ್ಟಪ್ಪನವರ್‌

ಲಿಂಗರಾಜ ಸೊಟ್ಟಪ್ಪನವರ ಹಾವೇರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರು. ಇವರ ಅನೇಕ ಕಥೆಗಳು ವಿವಿಧ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ಇವರ ಹಲವು ಕಥೆಗಳಿಗೆ ಪ್ರಶಸ್ತಿಗಳು ದೊರಕಿವೆ. ಮಾರ್ಗಿ – ಇವರ ಪ್ರಕಟಿತ ಕಥಾ ಸಂಕಲನ. ಮನ್ಸೂರ್ ಸಾಹೇಬನ ಕೇಗೆಲ್ ಎಕ್ಷಪರೀಮೆಂಟು (ಕಥಾ ಸಂಕಲನ) ಹಾಗೂ ಹರಿವ ನದಿಯೂ ಹಂಬಲದ ತಟವೂ- ಕವನ ಸಂಕಲನಗಳು ಪ್ರಕಟಣೆ ಹಂತದಲ್ಲಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ