ಅದೇ ದಿನ ಎಷ್ಟೋ ಎತ್ತರದಿಂದ ಉದ್ದನೆಯ ಕತ್ತಿಯಲ್ಲಿ ಸೇಬನ್ನು ಇಬ್ಭಾಗ ಮಾಡುವ ಪುಟ್ಟ ಹುಡುಗಿಗೆ ಆ ದಿನ ಆಯ ತಪ್ಪಿ ಉದ್ದನೆಯ ಕತ್ತಿ ಹೊಟ್ಟೆಯನ್ನು ತೂರಿ ಬೆನ್ನಿಂದ ಆಚೆ ಬರುತ್ತಿರುವಾಗಲೂ ಇದೂ ಒಂದು ಕಸರತ್ತು ಎಂದು ನೋಡಿದ ಪ್ರೇಕ್ಷಕರು ಇದ್ದರು. ಮರುದಿನ ಶಕ್ತಿ ಪೇಪರಿನಲ್ಲಿ ಆದ ದುರ್ಘಟನೆ ಬಗ್ಗೆ ಸುದ್ದಿ ಓದಿ ಎಷ್ಟೋ ಜನರು ಬೇಸರಿಸಿದ್ದಿದೆ. ಅಂಥ ಘಟನೆ ಆದರೂ ಆ ಸಂದರ್ಭದಲ್ಲಿ ಕಂಪೆನಿ ಅದನ್ನು ಗೌಪ್ಯವಾಗಿರಿಸಿದ್ದು ಆಶ್ಚರ್ಯ. ಆದರೆ ಹಬ್ಬ ಬಂತಲ್ಲ, ಅದರಲ್ಲಿ ವ್ಯಸ್ತವಾದವು….. ಲೋಕದ ರೀತಿನೇ ಹಾಗಲ್ವೆ..
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ

ಯುಗಾದಿ ಸಂಭ್ರಮ ಮಡಿಕೇರಿಯಲ್ಲಿ ಫಿಫ್ಟಿ ಫಿಫ್ಟಿ ಎಂದರೂ ತಪ್ಪಿಲ್ಲ….. ಕಾರಣ ಇಲ್ಲಿ ಚಾಂದ್ರಮಾನ ರೀತ್ಯಾ ಸೌರಮಾನ ರೀತ್ಯಾ ಆಚರಣೆ ಮಾಡುವವರು ಇಲ್ಲಿದ್ದಾರೆ. ಆದರೂ ಚಾಂದ್ರಮಾನ ರೀತ್ಯಾ ಯುಗಾದಿ ಆಚರಣೆ ಮೊದಲು ಬರುವುದರಿಂದ ಸಹಜವಾಗಿ ಆ ಉತ್ಸಾಹ ಇದ್ದೇ ಇತ್ತು. ಹೋಳಿ ಹುಣ್ಣಿಮೆ ಕಳೆದರೆ ಪರೀಕ್ಷಾ ಕಾಲ ಜೊತೆ ಜೊತೆಗೆ ಮನೆಯನ್ನು ಒಂದೆಡೆಯಿಂದ ಶುದ್ಧ ಮಾಡಿಕೊಳ್ಳುವ ದೊಡ್ಡ ಕೆಲಸವೆ ಇರುತ್ತಿತ್ತು. ಪಿ.ಯು.ಸಿಗೆ ಬರುವವರೆಗೆ ಆ ತಲೆಬಿಸಿ ಇರಲಿಲ್ಲ. ಪಿ.ಯು.ಸಿ. ಕಳೆದ ಮೆಲೆ ಪರೀಕ್ಷೆಗಳೆಲ್ಲವೂ ಹಬ್ಬ ಕಳೆದ ಮೇಲೆ ಇರುತ್ತಿದ್ದುದರಿಂದ ಮನೆಯನ್ನು ಕ್ಲೀನ್ ಮಾಡುವುದೆ ಬಹು ದೊಡ್ಡ ತಲೆಬಿಸಿ ಕೆಲಸ. ಕಳ್ಳಾಟ ಮಾಡಲು ಛಾನ್ಸ್ ಇರುತ್ತಿರಲಿಲ್ಲ. ಬೈಗುಳ ಕೇಳಿಯೋ ನಯವಾದ ಮಾತುಗಳಿಗೆ ತಲೆಬಾಗಿಯೋ ಮನೆ ಕ್ಲೀನ್ ಮಾಡಿಕೊಂಡ ನಂತರ ಹೊಸ ಬಟ್ಟೆ ಖರೀದಿಗೆ ಯಾವಾಗ ಹೋಗೋದು ಅನ್ನುವ ತವಕ. ಅದೂ ಜವಹರ್ ಬಟ್ಟೆ ಅಂಗಡಿಗೆ ಹೋಗಬೇಕು; ಅಲ್ಲಿ ಕಲೆಕ್ಷನ್ ಇರುತ್ತದೆಯೋ ಇಲ್ಲವೋ ಅನ್ನುವ ಚಟಪಡಿಕೆ ಬೇರೆ….. ಇರಲಿ ಯಾವುದೋ ಒಂದು ಡ್ರೆಸ್ ಇಷ್ಟವಿದ್ದುದೋ ಇಷ್ಟವಿಲ್ಲದ್ದೋ ಗೊತ್ತಿಲ್ಲ…… ಒಂದು ಡ್ರೆಸ್ ಅಂತೂ ಸಿಕ್ಕುತ್ತಿತ್ತು…..

ಆಗೆಲ್ಲ ಈಗಿನಂತೆ ಕೊಳ್ಳುವ ಬಟ್ಟೆಯನ್ನು ಹಾಕಿಕೊಂಡು ನೋಡಲು ಅವಕಾಶ ಇರುತ್ತಿರಲಿಲ್ಲ. ಪಿಯುಸಿಗೆ ಸೇರಿದ ವರ್ಷ ಹಬ್ಬದ ಬಟ್ಟೆ ಜೊತೆಗೆ ಬಾಟ ಶೋ ರೂಮಿನಿಂದ ಬೆಲ್ಟ್ ಸ್ಲಿಪ್ಪರ್ ಖರೀದಿಸಿದ್ದೆ……. ತುಂಬಾ ಚಂದದ್ದು. 1994 ರಲ್ಲಿ 349 ರ ಬೆಲೆಯದ್ದು ಇನ್ನೂ ಚಂದ… ನೆನಪಿದೆ. ಅದನ್ನೊಮ್ಮೆ ಧರಿಸಿಕೊಂಡು ನೋಡಬೇಕು. ಆದರೆ ಪರ್ಮಿಷನ್ ಇರಲಿಲ್ಲ. ಪರ್ಮಿಷನ್ ಇಲ್ಲ ಅನ್ನುವ ಕಾರಣಕ್ಕೆ ರಾತ್ರಿಯೂ ಹಾಕಬಾರದು ಎನ್ನುವಂತಿಲ್ಲವಲ್ಲ…. ನಾನೂ ಹೊಸ ಬಟ್ಟೆ ಹಾಕಿಕೊಂಡು ಸೋಫ ಕೆಳಗೆ ಇದ್ದ ಸ್ಲಿಪ್ಪರ್ ಬಾಕ್ಸ್ ತೆಗೆದು ಹಾಕಿಕೊಂಡು ಜೀರೋ ಕ್ಯಾಂಡಲ್ ಬಲ್ಬಿನ ಬೆಳಕಲ್ಲೇ ಹೇಗೆ ಕಾಣಬಹುದು ಎನ್ನುತ್ತಾ ಕನ್ನಡಿಯನ್ನೊಮ್ಮೆ ಇಣುಕಿದರೆ ಜಗ್ಗನೆ ಮನೆಯ ಎಲ್ಲಾ ದೀಪಗಳು ಹೊತ್ತಿಕೊಂಡವು. ಸಿಕ್ಕಿ ಬಿದ್ದದ್ದಕ್ಕೆ ನಾಚಿಕೆಯಾಯಿತು…… ಆದರೂ ಹೊಸ ಧಿರಿಸಿನ ಅನಾವರಣ ರಾತ್ರಿಯಲ್ಲಿ ಆದ ವಿಷಯ ಹಬ್ಬದ ದಿನದವರೆಗೆ ಮನೆಯವರ ಬಾಯಲ್ಲಿ ಚಾಲ್ತಿಯಲ್ಲಿತ್ತು…… ಯುಗಾದಿ ಬಂದಿದ್ದೆ ಚೈತ್ರ ಬಂದಿಹಳು ಚೈತನ್ಯ ತಂದಿಹಳು ಎನ್ನುವುದಕ್ಕೆ ಪೂರಕವಾಗಿ ಹೊಸ ಉತ್ಸಾಹ ಎಲ್ಲೆಲ್ಲೂ ಇರುತ್ತಿತ್ತು. 1996 ರ ಯುಗಾದಿ ನೆನಪನ್ನು ಇಲ್ಲಿ ನೆನಪಿಸಿಕೊಳ್ಳುವೆ…..

ನಮ್ಮ ಮನೆಯ ಕೆಳಗೆ ಡೈರಿ ಫಾರಂ ಇತ್ತು … ಅಲ್ಲಿ ಜಂಬೋ ಸರ್ಕಸ್ ಕಂಪೆನಿ ಬಂದು ಬೀಡು ಬಿಟ್ಟಿತ್ತು. ಸರ್ಕಸ್ ನೋಡಲು ಆಗ ಬಹಳ ಆಸೆಯಿತ್ತು. ಆದರೆ ಪರ್ಮಿಷನ್ ಇರಲಿಲ್ಲ ಮನೆಯಲ್ಲಿ. ಬೇಸಗೆ ಅಂದರೆ ನೀರಿನ ಅಭಾವ ಎಂದು ಪ್ರತ್ಯೇಕ ಹೇಳಬೇಕಿಲ್ಲ…. ಎಂದು ತಿಳಿಯುವೆ. ಮುನ್ಸಿಪಾಲಿಟಿ ನಲ್ಲಿಯಲ್ಲಿ ನೀರು ಬಾರದೆ ಇದ್ದಾಗ ಈಗಿನ ಸಾಯಿ ಹಾಸ್ಟೆಲ್ ಕಾಂಪೌಂಡಿಗೆ ಹೊಂದಿಕೊಂಡಿರುವ ಬೋರ್‌ವೆಲ್ಲೇ ಗತಿಯಿತ್ತು. ಬೋರ್ ವೆಲ್ ಕಂಡಿಷನ್‌ನಲ್ಲಿಯೇ ಇರುತ್ತಿತ್ತು ಶಿವರಾತ್ರಿಯವರೆಗೆ. ಅಲ್ಲಿಂದ ಅದರ ಸದ್ದು ಕೇಳುವುದೇ ಒಂದು ಬೋರಿಂಗ್ ಆಗುತ್ತಿತ್ತು. ಎಷ್ಟು ಹೊತ್ತಲ್ಲೂ ಬೋರ್ ವೆಲ್ ಹೊಡೆಯುವ ಸದ್ದು. ಒಮ್ಮೆ ಹೀಗೆ ಬಿಂದಿಗೆ ಹಿಡಿದು ಅಲ್ಲಿ ಹೋದರೆ ಡೈರಿ ಫಾರಂನಲ್ಲಿ ಕೆಲಸ ಮಾಡುವ ಹೆಂಗಸು ಬಂದಿದ್ದರು. ಅವರಿಗೆ ಸರ್ಕಸ್ ಕಂಪೆನಿ ಇರುವವರೆಗೂ ನೋಡುವ ಖುಷಿಯಿತ್ತು. ಹಾಗಾಗಿ ನಮ್ಮನ್ನು ಮಾತಿಗೆಳೆದರುʼ “ಸರ್ಕಸ್ ನೋಡಿದ್ರ” ಅಂದರೆ ನಮ್ಮದು ಏಕ ಶಬ್ದ ಸಂಭಾಷಣೆ..

“ಇಲ್ಲ!”
ಮತ್ತೆ ಅವರು ಯಾಕೆ ನೋಡಿಲ್ಲ.
“ಸಮಯವಿಲ್ಲ…..” ಎಂದೆ ನಾನು

ಅದಕ್ಕವರು ಅಯ್ಯೋ ನಾವು ದಿನ್ನಾ……. ನೋಡ್ತೀವಿ ಗೊತ್ತುಂಟ……. ನಮ್ಗೆ ಟಿಕೆಟ್ ಎಂತಸ… ಇಲ್ಲ. ಫ್ರೀ……. ತೋರಿಸ್ತಾರೆ. ಅವರ ಪ್ರಾಣಿಗಳಿಗೆ ನಾವು ಫ್ರೀ ಹುಲ್ಲು ಹಾಕ್ತೇವೆ…….. ಎನ್ನುತ್ತಿದ್ದಂತೆ ನಾವಾದ್ರೂ ಅಲ್ಲಿ ಇರಬಾರದಾಗಿತ್ತ ಅನ್ನಿಸುತ್ತಿತ್ತು. ಯುಗಾದಿ ಹಬ್ಬಕ್ಕೆ ಎರಡು ದಿನ ಹಿಂದೆ ನಮಗೂ ವಿಶೇಷ ಪಾಸ್ ಸಿಕ್ಕಿದ ಆಂಟಿಯೊಬ್ಬರು ನಮ್ಮನ್ನು ಸರ್ಕಸ್ಸಿಗೆ ಕರೆದುಕೊಂಡು ಹೋದರು… ಪ್ರಾರಂಭದಲ್ಲಿ ಖುಷಿ ಆಯಿತು. ಆನಂತರ ಬರಬಾರದಿತ್ತು ಅನ್ನಿಸಿತು. ಆ ಪ್ರಾಣಿಗಳಿಗೆ ಸ್ವಾತಂತ್ರ್ಯವಿರಲಿಲ್ಲ. ತಮ್ಮ ತಮ್ಮ ಕಸರತ್ತು ಮುಗಿಯುತ್ತಿದ್ದಂತೆ ಪ್ರೇಕ್ಷಕರ ಚಪ್ಪಾಳೆಗೂ ಕಾಯದೆ, ಕ್ಷಣವೂ ತಡಮಾಡದೆ ಮಾಲಿಕನ ಆಣತಿಯಂತೆ ಅವು ಹಿಂತಿರುಗುತ್ತಿದ್ದವು. ಇನ್ನು ಸರ್ಕಸ್ಸಿನ ಸಿಬ್ಬಂದಿ ಸಂಜೆಯಾಗುತ್ತಲೇ ಮಿರಮಿರ ಮಿಂಚುವ ಮೇಕಪ್‌ನೊಂದಿಗೆ ಹಾಜರಿ ಹಾಕಿದರೂ…. ಬದುಕಿಗೋಸ್ಕರ ಇತರರನ್ನು ರಂಜಿಸುವ ಅವರ ಬದುಕು ಕಳಾಹೀನವಾಗಿತ್ತು ಎನ್ನುವುದರ ಚಿತ್ರಣವನ್ನು ಹಗಲಿನಲ್ಲಿ ಕಾಲೇಜಿಗೆ ಹೋಗುವಾಗ ಕಂಡೆನು.

ಚಿಕ್ಕದೊಂದು ಟೆಂಟಿನಡಿ ಅವರ ವಾಸ. ಅಲ್ಲಿಯೇ ಸ್ನಾನ, ಅಡುಗೆ, ಬಟ್ಟೆ ಹರಡುವುದು…. ಹಸುಗೂಸಿಗೆ ಊಟ ಮಾಡಿಸುವುದು ಇತ್ಯಾದಿ……. ನೋವಿನ ಜನರು ಹಂಚುವ ಖುಷಿಯಲ್ಲಿ ಅಷ್ಟೇನೂ ಮಧುರತೆ ಇರುವುದಿಲ್ಲ…… ಇರಲಿ ಯುಗಾದಿ ಅನ್ನುವ ಕಾರಣಕ್ಕೆ ಒಂದು ಹೆಚ್ಚಿಗೆ ಶೋ ಮಾಡಲು ಸರ್ಕಸ್ ಕಂಪೆನಿಯವರು ನಿರ್ಧರಿಸಿ ಅದನ್ನು ಆಟೋ ಮೂಲಕ ಅನೌನ್ಸ್ ಮಾಡಿಸಿದ್ದು ವಿಷಾದ ಅನ್ನಿಸುತ್ತಿತ್ತು……

ಅದೇ ದಿನ ಎಷ್ಟೋ ಎತ್ತರದಿಂದ ಉದ್ದನೆಯ ಕತ್ತಿಯಲ್ಲಿ ಸೇಬನ್ನು ಇಬ್ಭಾಗ ಮಾಡುವ ಪುಟ್ಟ ಹುಡುಗಿಗೆ ಆ ದಿನ ಆಯ ತಪ್ಪಿ ಉದ್ದನೆಯ ಕತ್ತಿ ಹೊಟ್ಟೆಯನ್ನು ತೂರಿ ಬೆನ್ನಿಂದ ಆಚೆ ಬರುತ್ತಿರುವಾಗಲೂ ಇದೂ ಒಂದು ಕಸರತ್ತು ಎಂದು ನೋಡಿದ ಪ್ರೇಕ್ಷಕರು ಇದ್ದರು. ಮರುದಿನ ಶಕ್ತಿ ಪೇಪರಿನಲ್ಲಿ ಆದ ದುರ್ಘಟನೆ ಬಗ್ಗೆ ಸುದ್ದಿ ಓದಿ ಎಷ್ಟೋ ಜನರು ಬೇಸರಿಸಿದ್ದಿದೆ. ಅಂಥ ಘಟನೆ ಆದರೂ ಆ ಸಂದರ್ಭದಲ್ಲಿ ಕಂಪೆನಿ ಅದನ್ನು ಗೌಪ್ಯವಾಗಿರಿಸಿದ್ದು ಆಶ್ಚರ್ಯ. ಆದರೆ ಹಬ್ಬ ಬಂತಲ್ಲ, ಅದರಲ್ಲಿ ವ್ಯಸ್ತವಾದವು….. ಲೋಕದ ರೀತಿನೇ ಹಾಗಲ್ವೆ. ಆಗುವುದೆಲ್ಲವೂ ಆಗುತ್ತಿರುತ್ತದೆ. ಅದರ ನಡುವೆಯೇ ಜೀವನವೂ ನಿರಾಯಾಸವಾಗಿ ನಡೆಯುತ್ತಿರುತ್ತದೆ.

ನಾನೂ ಹೊಸ ಬಟ್ಟೆ ಹಾಕಿಕೊಂಡು ಸೋಫ ಕೆಳಗೆ ಇದ್ದ ಸ್ಲಿಪ್ಪರ್ ಬಾಕ್ಸ್ ತೆಗೆದು ಹಾಕಿಕೊಂಡು ಜೀರೋ ಕ್ಯಾಂಡಲ್ ಬಲ್ಬಿನ ಬೆಳಕಲ್ಲೇ ಹೇಗೆ ಕಾಣಬಹುದು ಎನ್ನುತ್ತಾ ಕನ್ನಡಿಯನ್ನೊಮ್ಮೆ ಇಣುಕಿದರೆ ಜಗ್ಗನೆ ಮನೆಯ ಎಲ್ಲಾ ದೀಪಗಳು ಹೊತ್ತಿಕೊಂಡವು. ಸಿಕ್ಕಿ ಬಿದ್ದದ್ದಕ್ಕೆ ನಾಚಿಕೆಯಾಯಿತು…… ಆದರೂ ಹೊಸ ಧಿರಿಸಿನ ಅನಾವರಣ ರಾತ್ರಿಯಲ್ಲಿ ಆದ ವಿಷಯ ಹಬ್ಬದ ದಿನದವರೆಗೆ ಮನೆಯವರ ಬಾಯಲ್ಲಿ ಚಾಲ್ತಿಯಲ್ಲಿತ್ತು…

ಅಂತೂ ಯುಗಾದಿ ಹಬ್ಬ ಬಂತು. ಮಾವು- ಬೇವು, ಹೋಳಿಗೆ –ತುಪ್ಪದ ಪರಿಮಳ ಎಲ್ಲೆಡೆ ಸಂಚಾರಿಣಿಯಾಗಿ ಆವರ್ತನಗೊಳ್ಳುತ್ತಾ ಇದ್ದರೆ ಎಂಥ ಜಡ ಮನಸ್ಸೂ ಉಲ್ಲಸಿತವಾಗಬೇಕು… ಹಿಗ್ಗಬೇಕು…….. ಯುಗಾದಿ ಚಂದಿರ ಅರ್ಥಾತ್ ವಸಂತ ಚಂದಿರನ ಕಂಡು ಚೇತೋಹಾರಿಯಾಗಬೇಕು ಎಂದೆನಿಸುತ್ತದೆ.

ವಸಂತ ಚಂದಿರನ ಕುರಿತು ಒಂದಷ್ಟು ಚಿಂತನೆ ಮಾಡುವುದಾದರೆ “ಹೆಜ್ಜೆಗೊಂದು ಹೊಸ ಯುಗಾದಿ, ಚೆಲುವು ನಮ್ಮ ಜೀವನ ನಮ್ಮ ಹಾದಿಯೋ ಅನಾದಿ, ಪಯಣವೆಲ್ಲ ಪಾವನ” ಎಂಬ ಕೆ.ಎಸ್. ನರಸಿಂಹಸ್ವಾಮಿಯವರ ಸಾಲಿನಂತೆ ನಮ್ಮ ಜೀವನದ ಪಯಣದ ಆವೃತ್ತಿಗೂ ಯುಗಾದಿ ಚಂದ್ರನಿಗೂ ಸಂಬಂಧವಿದೆ.. ವಸಂತ ಮಾಸದ ಚಂದ್ರನೋ ನೋಡಲು ಬಹಳ ಪ್ರಕಾಶಮಾನವಾಗಿ ಕಾಣಿಸುತ್ತಾನೆ.

‘ಯುಗಾದಿ’ ಎಂದರೆ ಬೇವು-ಬೆಲ್ಲಗಳ ಸಮಾಗಮ. ಪಂಚಾಂಗ ಶ್ರವಣ ಇತ್ಯಾದಿಗಳನ್ನು ಮುಗಿಸಿದ ಬಳಿಕ ಯುಗಾದಿ ಊಟ ಮಾಡಿ, ಚಂದ್ರನನ್ನು ನೋಡಬೇಕು ಶುಭ ಎನ್ನುತ್ತಾರೆ. ಆದರೆ ಗಣೇಶ ಚತುರ್ಥಿಯ ದಿನ ಚಂದ್ರ ನೋಡುವುದು ನಿಷಿದ್ಧ ಹಾಗೊಂದು ವೇಳೆ ಆ ಚಂದ್ರನನ್ನು ನೋಡಿದ್ದರೆ ಆ ದೋಷ ಯುಗಾದಿ ಚಂದ್ರನನ್ನು ನೋಡುವ ಮೂಲಕ ನಿವಾರಣೆಯಾಗುತ್ತದೆ ಎನ್ನುತ್ತಾರೆ.

ನಮ್ಮಲ್ಲಿ ನವಗ್ರಹಗಳಲ್ಲಿ ಸೂರ್ಯನನ್ನು ತಂದೆಗೆ ಹೋಲಿಸಿದರೆ ಚಂದ್ರನನ್ನು ತಾಯಿಗೆ ಹೋಲಿಸುವುದಿದೆ. ಅಲ್ಲದೆ ಚಂದ್ರನನ್ನು ಬುದ್ಧಿವಂತಿಕೆ ಹಾಗು ಉತ್ತಮ ನಡವಳಿಕೆಯ ದ್ಯೋತಕವಾಗಿಯೂ ಬಿಂಬಿಸಲಾಗುತ್ತದೆ. ಯುಗಾದಿಚಂದ್ರ ಅಷ್ಟು ಸುಲಭಕ್ಕೆ ಕಾಣಸಿಗುವುದಿಲ್ಲ. ಅಮವಾಸ್ಯೆಯ ಮರುದಿನ ಚಂದ್ರ ಬೇಗ ಗೋಚರಿಸುವುದು ಕಷ್ಟ. ಹಾಗೊಂದು ವೇಳೆ “ಕಷ್ಟ ಪಟ್ಟರೆ ಸುಖ” ಎಂಬಂತೆ ಆ ಚಂದ್ರನನ್ನು ಕಷ್ಟ ಪಟ್ಟು ನೋಡಿದರೆ ಮನಸ್ಸಿಗೆ ಸಂತಸವಾಗುತ್ತದೆ. ಇನ್ನು ಕೆಲವೆಡೆ ಒಂದು ವರ್ಷದ ಮಳೆ- ಬೆಳೆಗಳ ಸಾಧ್ಯತೆಯನ್ನು ಹೇಳುವಾಗ ಯುಗಾದಿ ಚಂದ್ರ ಗೋಚರಿಸುವ ಗೆರೆಯಾಕಾರವನ್ನೂ ಗಣನೆಗೆ ತೆಗೆದುಕೊಳ್ಳುವುದೂ ಇದೆ.

ಇವಿಷ್ಟು ಯುಗಾದಿ ಹಬ್ಬದ ಚಂದ್ರನ ಕುರಿತ ವಿಚಾರವಾದರೆ ‘ಕವಿರಾಜಮಾರ್ಗ’ ಕೃತಿಯ ಮೂರನೆಯ ಪರಿಚ್ಛೇದದ 124ನೆ ಪದ್ಯದಲ್ಲಿ ಸಮಾಹಿತಾಲಂಕಾರಕ್ಕೆ ಉದಾಹರಣೆಯಾಗಿ ಉಲ್ಲೇಖವಾಗಿರುವ ಚಂದ್ರನನ್ನೂ ನೋಡೋಣ!

ಮುಳಿದಿರ್ದ ನಲ್ಲಳಲ್ಲಿಗೆ
ತಿಳಿಪಲ್ ಪೋಪೆನ್ನ ಬಗೆಗೆ ದೊರೆಕೊಳೆ ಮತ್ತಿಂ
ತೆಳೆವೆರೆ ಗಗನಾಂತರದೊಳ್
ಪೊಳೆದತ್ತೆತ್ತಂ ವಸಂತಸಮಯೋತ್ತಂಸಂ

ಇದರರ್ಥ ಕೋಪಗೊಂಡ ನಲ್ಲೆಯನ್ನು ತವಿಸಲು ಹೊರಟ ನಲ್ಲನಿಗೆ ವಸಂತಮಾಸಕ್ಕೇ ಶಿರೋಭೂಷಣದಂತಿದ್ದ ಚಂದ್ರ ಸಹಾಯ ಮಾಡಲು ಎಳೆವರೆಯಾಗಿ ಉದಯಿಸಿದ, ಕತ್ತಲನ್ನು ದೂಡಿದ, ಮಾರ್ಗ ತೋರಿಸಿದ ಎಂಬುದಾಗಿ. ಚಂದ್ರನನ್ನು ಮನಃಕಾರಕ, ಮನಸ್ಸಿನ ಮೇಲೆ ಪರಿಣಾಮ ಬೀರುವಂಥವನು ಹಾಗಾಗಿ ಪ್ರಿಯೆಯ ಮನಸ್ಸನ್ನು ಸಮಾಧಾನಿಸಿದ ಎಂದೂ ಅರ್ಥೈಸುವುದಿದೆ. ಕವಿರಾಜಮಾರ್ಗ ಕೃತಿಯಲ್ಲಿ ಸಮಾಹಿತಾಲಂಕಾರಕ್ಕೆ (ಸಮಾಹಿತ ಪದಕ್ಕೆ ಪ್ರಸನ್ನ ಚಿತ್ತ, ಒಟ್ಟುಗೂಡಿಸಿದ, ವ್ಯವಸ್ಥೆಗೊಳಿಸಿದ ಎಂಬ ಅರ್ಥವಿದೆ) ಉದಾಹರಿಸಿದ ಈ ಪದ್ಯದಲ್ಲಿ ಕೋಪಗೊಂಡ ನಾಯಕಿಯ ಮನಸ್ಸನ್ನು ತವಿಸಲು ನಾಯಕನ ಪರವಾಗಿ ಸ್ವತಃ ದೈವಾದತ್ತವಾದ ಚಂದ್ರನೇ ಬಂದ ಎಂದಿದೆ.

ಈ ಬರೆಹದ ಆರಂಭದಲ್ಲಿ ಚಂದ್ರನನ್ನು ತಾಯಿಗೂ ಹೋಲಿಸುತ್ತಾರೆ ಎಂದು ಹೇಳಿರುವ ಕಾರಣದಿಂದ ಪಿ.ಲಂಕೇಶರ ಅವ್ವ ಕವಿತೆಯಲ್ಲಿ ತಾಯಿ, ಯುಗಾದಿ, ಚಂದ್ರನನ್ನು ಉಲ್ಲೇಖಿಸಿರುವುದನ್ನೂ ಚುಟುಕಾಗಿ ಗಮನಿಸೋಣ!

ಸತ್ತಳು ಈಕೆ
ಬಾಗು ಬರೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ? …..

ಎಂದು. ಅಂದರೆ ಎಷ್ಟು ಯುಗಾದಿಯ ಚಂದ್ರನನ್ನು ಅವ್ವ ನೋಡಿದ್ದಾಳೊ ಅಷ್ಟು ವರ್ಷ ಆಕೆಗೆ ಎಂದಿರುವ ಲಂಕೇಶರು ತಕ್ಷಣವೇ ನೋಡಿದ ಅಷ್ಟು ಚಂದ್ರರಲ್ಲಿ ನೆಮ್ಮದಿಯ ಚಂದ್ರರೆಷ್ಟು ಎನ್ನುವ ಮರುಪ್ರಶ್ನೆಯನ್ನು ಪ್ರಶ್ನಾರ್ಥಕವಾಗಿಯೇ ಉಳಿಸಿಕೊಂಡು ಭಾವುಕರಾಗಿದ್ದಾರೆ. ಮುಂದುವರೆದು;

ಹೆತ್ತದ್ದಕ್ಕೆ, ಸಾಕಿದ್ದಕ್ಕೆ: ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ……… ಹೊರಟು ಹೋದುದಕ್ಕೆ

ಎನ್ನುತ್ತಾ ಲಂಕೇಶರು ತಾಯಿಯನ್ನು ನೆನೆದು ಆರ್ದ್ರವಾಗಿ ಉಳಿದಿರುವುದೇ “ಕೃತಜ್ಞತೆಯ ಕಣ್ಣೀರು” ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.


ಬಾಳೆಲ್ಲಾ ಸುಖ-ದುಃಖ, ಬೇವು -ಬೆಲ್ಲ ಎಂಬಂತೆ ಕನ್ನಡ ಸಾಹಿತ್ಯದಲ್ಲೂ ಯುಗಾದಿಯ ಚಂದ್ರ ನೋವಿಗೂ-ನಲಿವಿಗೂ ಸೂಚಕವಾಗಿದ್ದಾನೆ. ಮುಂದಿನ ಬರಹನಲ್ಲಿ ಕನ್ನಡ ಸಾಹಿತ್ಯ ಹಾಗು ಜಾನಪದ ಪರಂಪರೆಯಲ್ಲಿ “ಯುಗಾದಿ’’ಯನ್ನು ಸಂಭ್ರಮಿಸೋಣ!