ಅಂತೂ ಇಂತೂ ಇಪ್ಪತ್ತು ಕಿಲೋ ಮೀಟರ್ ದೂರದಿಂದ ಹಿಂದೆ ಹಿಂದೆಯೇ ಬಂದ ಕಾರು ನಮ್ಮ ಬೈಕನ್ನು ಅಡ್ಡಗಟ್ಟಿ ನಿಂತೆ ಬಿಟ್ಟಿತು. ನನಗಂತೂ ಕೈ ಕಾಲುಗಳಲ್ಲಿ ನಡುಕ ಶುರುವಾಯಿತು. ನಾವೇನ್ ತಪ್ಪು ಮಾಡಿದ್ದೇವೆ? ಎಂಬ ಪ್ರಶ್ನೆಗಳ ಬಾಣಕ್ಕೆ ತಲೆ ಸಿಡಿಯುವಂತಾಯಿತು. ನಾನು ಬೈಕ್‌ನಿಂದ ಇಳಿಯದೆ ಯತೀಶ್‌ನನ್ನು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣು ಮುಚ್ಚಿ ಹಾಗೇ ಕೂತೆ. ನಂತರ ನನ್ನ ಪಾದಗಳನ್ನು ಯಾರೋ ಮೃದುವಾಗಿ ಸ್ಪರ್ಶಿಸಿದಂತೆ ಆಯಿತು. ಕಣ್ಣು ಬಿಟ್ಟಾಗ ಆ ಹುಡುಗ ನಮಸ್ಕಾರ ಮಾಡುತ್ತಿದ್ದಾನೆ!
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

ಅದು ನಲಿ-ಕಲಿ ತರಗತಿ. ನಾನು ನೆಲದ ಮೇಲೆ ಹಾಸಿದ್ದ ಜಮಖಾನೆ ಮೇಲೆ ಕುಳಿತು ಪಾಠ ಮಾಡುತ್ತಿದ್ದೆ. ಒಬ್ಬ ವಿದ್ಯಾರ್ಥಿ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಓಡಾಡುತ್ತಿದ್ದ. ಹೋಗುವಾಗೊಮ್ಮೆ ಬರುವಾಗೊಮ್ಮೆ ಕಾಲಿನಿಂದ ನನ್ನ ಮತ್ತು ಇತರ ಮಕ್ಕಳನ್ನು ಒದೆಯುತ್ತಿದ್ದ. ನನಗೆ ಕಾಲು ತಾಕಿದಾಗ ಅವನು ಗಮನಿಸದೆ ಆಕಸ್ಮಿಕವಾಗಿ ಕಾಲು ತಾಕಿಸಿದ್ದಾನೆ ಎಂದು ಸುಮ್ಮನಾದೆ. ಆದರೆ ಮಕ್ಕಳು ಇಂತಹದನ್ನೆಲ್ಲ ಬಿಡುವ ಜಾಯಮಾನದವರಲ್ಲ. ಮಿಸ್ ಮಿಸ್ ಅಂತ ಜೋರಾಗಿ ಎಲ್ಲರೂ ಒಕ್ಕೊರಲಿನಿಂದ ಕೂಗಿದರು. ಅವರ ಏರಿದ ಧ್ವನಿಗೆ ಏನಾಯಿತೋ ಎಂದು ಬೆಚ್ಚಿಬಿದ್ದು, ಯಾಕೆ ಮಕ್ಕಳಾ ಏನಾಯಿತು? ಇದನ್ನೇನು ತರಗತಿ ಅಂದುಕೊಂಡಿರುವಿರಾ? ಇಲ್ಲಾ ಮಾರ್ಕೆಟ್ಟಾ? ಹೀಗೆ ಕಿರುಚಾಡಲು ಅಂದೆ. ನೋಡಿ ಮಿಸ್ ಇವನು ನನ್ನನ್ನು ಕಾಲಿನಿಂದ ಒದ್ದ ಎಂದ ಒಬ್ಬ ವಿದ್ಯಾರ್ಥಿ. ಉಳಿದ ಮಕ್ಕಳು ನನಗೂ ಒದ್ದ ಮಿಸ್ ಎಂದು ದನಿಗೂಡಿಸಿದರು.

ಆ ವಿದ್ಯಾರ್ಥಿಯ ಹೆಸರು ನಿಶಾಂತ್. ಸ್ವಲ್ಪ ಹೆಚ್ಚು ಅನ್ನುವಷ್ಟೇ ತುಂಟತನದ ಹುಡುಗ. ಯಾವ ಟೀಚರ್‌ಗಳಿಗೂ ಕೂಡ ಹೆದರುತ್ತಿರಲಿಲ್ಲ. ಸ್ವಲ್ಪ ಮೊಂಡು ಬುದ್ಧಿ. ನನ್ನನ್ನು ಬೈತೀರಾ? ಹೊಡಿತೀರಾ? ನಮ್ಮ ಅಪ್ಪನಿಗೆ ಹೇಳುವೆ, ಅಜ್ಜಿ ಕರಕೊಂಡು ಬಂದು ಬೈಯ್ಯಿಸುವೆ ಇರಿ ಎಂದು ಎಲ್ಲರಿಗೂ ಅವಾಜ್ ಹಾಕುತ್ತಿದ್ದ. ನಾನು ಗಮನಿಸಿದಂತೆ ಅವನನ್ನು ಕೋಪದಿಂದಾಗಲಿ, ಹೆದರಿಸಿ ಬೆದರಿಸಿ ಪೆಟ್ಟುಕೊಟ್ಟು ಸರಿ ದಾರಿಗೆ ತರುವುದು ಅಷ್ಟು ಸುಲಭವಾಗಿಲ್ಲ ಎಂಬ ಅರಿವಿತ್ತು. ಆದ್ದರಿಂದ ನಾನು ಅವನನ್ನು ಹತ್ತಿರ ಕರೆದು “ಬಾ ಇಲ್ಲಿ ನಿಶಾಂತ, ನೀನು ತುಂಬಾ ಜಾಣ ಹುಡುಗ. ನೀನು ಬೇರೆ ಮಕ್ಕಳಿಗೆ ಸರಿಯಾಗಿದ್ದನ್ನು ಹೇಳಿಕೊಡಬೇಕು. ಅಂತಹದರಲ್ಲಿ ನೀನೆ ತಪ್ಪು ಮಾಡ್ತಾರಾ? ನೀನು ಯಾರಿಗೂ ಕಾಲಿನಿಂದ ಒದೆಯಬಾರದು… ಕಾಲನ್ನ ಇತರರಿಗೆ ತಾಕಿಸಬಾರದು‌ ಅಲ್ವಾ” ಅಂದೆನು. ಆಗ ಬೇರೆ ಮಕ್ಕಳು ಮಿಸ್ ನಮ್ಮ ಅಜ್ಜಿ ಹೇಳುತ್ತಿದ್ದರು “ಕಾಲಿನಿಂದ ಯಾರಿಗಾದರೂ ಒದ್ದರೆ ಅವರನ್ನು ಮುಟ್ಟಿ ನಮಸ್ಕಾರ ಮಾಡಿಕೊಳ್ಳಬೇಕಂತೆ” ಎಂದರು. ಕೇಳಿಸಿಕೊಂಡಾ ಪುಟ್ಟ, ಇನ್ನು ಮುಂದೆ ನೀನು ಹಾಗೆ ಮಾಡಬೇಕು ಗೊತ್ತಾಯ್ತಾ ಅಂದೆ. ಆಗಲಿ ಅಂತ ತಲೆ ಅಲ್ಲಾಡಿಸಿದ್ದ. ನಾನು ಅರ್ಧಕ್ಕೆ ನಿಂತಿದ್ದ ಪಾಠವನ್ನು ಮುಂದುವರಿಸಿದೆ. ಸ್ವಲ್ಪ ಸಮಯದ ನಂತರ ಅವನು ಮತ್ತೆ ಓಡಾಟ ಶುರು ಮಾಡಿದ. ಈಗ ಒದೆಸಿಕೊಳ್ಳುವ ಸರದಿ ಮಾತ್ರ ನನ್ನದು. ಬೇಕಂತ ಕಾಲಿನಿಂದ ಒದೆಯುವುದು, ನಮಸ್ಕಾರ ಮಾಡಿಕೊಳ್ಳುವುದು. ಮತ್ತೆ ಒದೆಯೋದು ಸಾರಿ ಮಿಸ್, ಅಂತ ಹೇಳಿ ನಮಸ್ಕಾರ ಮಾಡುವುದು ಮಾಡುತ್ತಿದ್ದ. ಅವನ ಪ್ರಕಾರ ಒದೆಯುವುದು ತಪ್ಪಲ್ಲ. ಆಮೇಲೆ ನಮಸ್ಕಾರ ಮಾಡಿ ಸಾರಿ ಹೇಳಿದರೆ ಸಾಕು.

ಇದು ತುಂಬಾ ಸಣ್ಣ ವಿಚಾರವೇ ಆಗಿರಬಹುದು. ಆದರೆ ಮುಂದೆ ದೊಡ್ಡ ದೊಡ್ಡ ತಪ್ಪುಗಳಿಗೆ ಪ್ರೇರಣೆಯಾಗಬಹುದು. ಇದಕ್ಕೆಲ್ಲ ಕಾರಣವೇನು? ಹೊಣೆ ಯಾರು? ಶಿಕ್ಷಕರಾ? ಪೋಷಕರಾ? ಸಮಾಜವಾ? ಉತ್ತರಿಸುವುದು ಅತಿ ಕ್ಲಿಷ್ಟ. ಮಕ್ಕಳಲ್ಲಿ ಮಾನವೀಯ ಮತ್ತು ನೈತಿಕ ಮೌಲ್ಯಗಳ ಕುಸಿತವಾಗುತ್ತಿದೆ. ಇದರ ಜವಾಬ್ದಾರಿ ಯಾರದು? ಹಿಂದೆ ನಮಗೆಲ್ಲ ಮಾನವೀಯ ಮೌಲ್ಯ ಶಿಕ್ಷಣವನ್ನು ಕಲಿಸಲು ನೀತಿ ಕಥೆಗಳು, ಪುರಾಣ ಪುಣ್ಯ ಕಥೆಗಳು ಹಾಗೂ ಐತಿಹಾಸಿಕ ಕಥೆಗಳನ್ನು ಹೇಳಿಕೊಡುವ ಮೂಲಕ ನೈತಿಕ ಶಿಕ್ಷಣವನ್ನು ಕೊಡುತ್ತಿದ್ದರು. ಅದನ್ನ ಯಥಾವತ್ತಾಗಿ ಪಾಲಿಸುತ್ತಿದ್ದೆವು. ಆ ಮೂಲಕ ಪ್ರೀತಿ, ಪ್ರೇಮ, ವಾತ್ಸಲ್ಯ, ಸ್ನೇಹ, ಶಾಂತಿ, ಅಹಿಂಸೆ, ಸಹಕಾರ, ತಾಳ್ಮೆ, ಗೌರವ ಭಾವನೆ, ಪರೋಪಕಾರಿ ಬುದ್ಧಿ ಮುಂತಾದ ಗುಣಗಳನ್ನು ಕಲಿಸುತ್ತಿದ್ದರು. ಇಂದು ಕಾಲ ಬದಲಾಗಿದೆ. ಬದುಕು ಯಾಂತ್ರಿಕವಾಗಿದೆ. ಮಕ್ಕಳು ಭಾವನಾತ್ಮಕ ಮತ್ತು ಮಾನಸಿಕ ವಲಯಕ್ಕಿಂತ ಹೆಚ್ಚಾಗಿ ಬೌದ್ಧಿಕವಾಗಿ ಪ್ರಭುದ್ಧರಾಗುತ್ತಿದ್ದಾರೆ. ಹಾಗಾಗಿ ಮೌಲ್ಯಗಳು ಮತ್ತು ನೈತಿಕ ಮೌಲ್ಯಗಳ ಬೆಳವಣಿಗೆಗೆ ಹೆಚ್ಚು ಆದ್ಯತೆ ಕೊಡಬೇಕಾಗಿದೆ. ಅದಕ್ಕಾಗಿ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳನ್ನು ಕೂಡ ಸಮ್ಮಿಳಿತಗೊಳಿಸಿ ಇಂಟಿಗ್ರೇಟೆಡ್ ಶಿಕ್ಷಣ ನೀಡಲಾಗುತ್ತಿದೆ.

ಮಕ್ಕಳಿಗೆ ಕಿರಿಯ ತರಗತಿಗಳಲ್ಲಿ ಮೌಲ್ಯಗಳನ್ನು ಕಲಿಸಲು ಹೆಚ್ಚು ಪ್ರಾಧಾನ್ಯತೆ ನೀಡಬೇಕು. ಕಾರಣ ಮಕ್ಕಳು ಆ ವಯಸ್ಸಿನಲ್ಲಿ ಶಿಕ್ಷಕರು ಹೇಳಿದ್ದೆಲ್ಲವನ್ನು ಮುಗ್ಧವಾಗಿ ನಂಬುತ್ತಾ ಶಿಕ್ಷಕರನ್ನೇ ತನ್ನ ಬದುಕಿನ ರೋಲ್ ಮಾಡೆಲ್ ಆಗಿ ಪರಿಗಣಿಸುತ್ತಾರೆ. ಹಾಗಾಗಿ ಶಿಕ್ಷಕರು ಮೊದಲು ತಾವು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮಕ್ಕಳಿಗೆ ಮಾದರಿಯಾಗಿ ಅವುಗಳನ್ನ ಕಲಿಸುತ್ತಾ ಸಾಗಬೇಕಾಗುತ್ತದೆ.

ನನಗೀಗಲೂ ನೆನಪಿದೆ; ನನ್ನ ಪ್ರಾಥಮಿಕ ಶಾಲಾ ಶಿಕ್ಷಕರಾದ ಸದಾಶಿವಯ್ಯ ಅವರು ಒಳ್ಳೆಯ ಹಾಡುಗಾರರು. ಅವರು ನಮಗೆಲ್ಲ ಭಕ್ತಿ ಗೀತೆಗಳು ಹೇಳಿಕೊಡುತ್ತಿದ್ದರು. ಅವುಗಳು ನಮ್ಮ ಮೇಲೆ ತುಂಬಾ ಪ್ರಭಾವ ಬೀರಿದ್ದವು. ‘ಶಿವ ಶಿವ ಎಂದರೆ ಭಯವಿಲ್ಲ…
ಶಿವನಾಮಕ್ಕೆ ಸಾಟಿ ಬೇರಿಲ್ಲ’

ಈ ಹಾಡನ್ನು ಸದಾ ಹೇಳಿಕೊಡುತ್ತಿದ್ದರು. ನಾವೆಲ್ಲರೂ ಈ ಹಾಡನ್ನು ಭಯದಿಂದಲೋ, ಭಕ್ತಿಯಿಂದಲೋ ತನ್ಮಯರಾಗಿ ಹಾಡುತ್ತಿದ್ದೆವು. ಆದರೆ ಹಾಡು ಹೇಳಿಕೊಟ್ಟು ನಿಲ್ಲಿಸಿದ ತಕ್ಷಣ ನನಗೆ ಏನಾಗಿದೆ? ಶಿವ ಶಿವ ಎಂದರೆ ಭಯ ಇಲ್ಲ ಎನ್ನುತ್ತಿರುವೆ. ಶಿವನಿಗೆ ಕೋಪ ಬಂದರೆ ಏನ ಗತಿ ಎಂದು ಚಡಪಡಿಸುತ್ತಿದ್ದೆ. ಶಿವಪ್ಪಾ ನಿನ್ನ ಕಂಡರೆ ನನಗೆ ಭಯ ಇದೆ, ಆದರೇ ಏನು ಮಾಡಲಿ ನಮ್ಮ ಟೀಚರ್ ಶಿವ ಶಿವ ಎಂದರೆ ಭಯವಿಲ್ಲ ಎಂದು ಹೇಳಿಕೊಡುತ್ತಾರೆ. ಗುರುಗಳ ಮಾತು ಕೇಳಬೇಕು ಅಲ್ವಾ ಅದಕ್ಕೆ ಹೇಳಿದೆ ಅಷ್ಟೇ, ನಿನ್ನ ಮೂರನೇ ಕಣ್ಣಿಂದ ನನ್ನ ಸುಡಬೇಡ‌ ಎಂದು ದೇವರಿಗೆ ಮನವಿ ಸಲ್ಲಿಸುತ್ತಿದ್ದೆನು. ಬುದ್ಧಿ ಬೆಳೆದಂತೆ ಪ್ರಬುದ್ಧತೆ ಬಂದ ಮೇಲೆ ಆ ಹಾಡಿನ ಅರ್ಥ ತಿಳಿದು ನಗುತ್ತಿದ್ದೆನು. ಮಕ್ಕಳ ಮೇಲೆ ಹಾಡು ನಾಟಕ ಕಥೆಗಳು ಹೆಚ್ಚು ಪ್ರಭಾವ ಬೀರುತ್ತವೆ. ಆದ್ದರಿಂದ ಅವುಗಳಲ್ಲಿ ಮಕ್ಕಳನ್ನು ಹೆಚ್ಚು ಹೆಚ್ಚು ತೊಡಗಿಸುವ ಮೂಲಕ ಇವನ್ನೆಲ್ಲ ಕಲಿಸಬೇಕಿದೆ. ಸತ್ಯ ಹರಿಶ್ಚಂದ್ರ ಮತ್ತು ಶ್ರವಣಕುಮಾರ ನಾಟಕಗಳು ಗಾಂಧೀಜಿಯ ಬದುಕಿನ ದಿಕ್ಕನೆ ಬದಲಿಸಿದ್ದನ್ನ ನಾವು ಮರೆಯುವಂತಿಲ್ಲ. ವಿದ್ಯಾರ್ಥಿಗಳು ದಾರಿ ತಪ್ಪಿದರೆ ನೇರವಾಗಿ ಶಿಕ್ಷಕರನ್ನೇ ಹೊಣೆ ಮಾಡುತ್ತಾರೆ. ಯಾರು ನಿಮಗೆ ಬುದ್ಧಿ ಕಲಿಸಿದ ಟೀಚರ್ ಅಂತ. ಹಾಗಾಗಿ ಈ ವಿಚಾರದಲ್ಲಿ ಶಿಕ್ಷಕರು ಅತಿ ಹೆಚ್ಚಿನ ಕಾಳಜಿ ಹೊತ್ತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ.

ಶಿಕ್ಷಣ ಇಲಾಖೆ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತಲು, ಅವರನ್ನು ಸಮಾಜಕ್ಕೆ ಆರೋಗ್ಯಕರ ಆಸ್ತಿಯನ್ನಾಗಿ ಮಾಡಲು ಹಿಂದಿಗಿಂತಲೂ ಇಂದು ಅನೇಕ ಹೊಸ ಹೊಸ ತಂತ್ರಗಳನ್ನು ಚಟುವಟಿಕೆಗಳನ್ನು ಬಳಸುತ್ತಿದೆ. ಆದರೂ ನಾವು ನಿರೀಕ್ಷಿತ ಪ್ರಮಾಣದಲ್ಲಿ ಸಾಧಿಸಬೇಕಿದೆ.

ನನ್ನದೇ ವಿದ್ಯಾರ್ಥಿಗಳ ಘಟನೆಗಳನ್ನ ಹೇಳುವುದಾದರೆ, ನಾನು ಮತ್ತು ಯತೀಶ್ ಒಮ್ಮೆ ಶಾಲೆ ಮುಗಿಸಿ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದೆವು. ಆಗ ಹಿಂದಿನಿಂದ ಕಾರೊಂದು ನಮ್ಮನ್ನೆ ಫಾಲೋ ಮಾಡುತ್ತಾ ದೂರದಿಂದಲೂ ಹಿಂದೆಯೆ ಬರುತ್ತಿತ್ತು.ಅದು ಒನ್ ವೇ ರಸ್ತೆ ಆಗಿದ್ದರಿಂದ ನಮ್ಮನ್ನು ಓವರ್ ಟೆಕ್ ಮಾಡಲು ಸಾಧ್ಯವಾಗಲಿಲ್ಲ. ಡ್ರೈವ್ ಮಾಡುತ್ತಿದ್ದ ಹುಡುಗ ಒಂದೇ ಸಮನೆ ಹಾರ್ನ್ ಮಾಡುತ್ತಿದ್ದ. ಯತೀಶ್‌ಗೆ ಈ ಕಾರು ತುಂಬಾ ದೂರದಿಂದ ನಮ್ಮನ್ನು ಹಿಂಬಾಲಿಸುತ್ತಿದೆ ಅಂದೆ. ಅದಕೆ ಅವರು ಅವನಿಗೆ ಮುಂದೆ ಹೋಗಲು ಜಾಗಬೇಕು. ಆದರೆ ಜಾಗ ಇಲ್ಲದ್ದರಿಂದ ಹೀಗೆ ಹಾರ್ನ್ ಮಾಡುತ್ತಿರುವ ಅಷ್ಟೇ ಅಂದರು. ಅಂತೂ ಇಂತೂ ಇಪ್ಪತ್ತು ಕಿಲೋ ಮೀಟರ್ ದೂರದಿಂದ ಹಿಂದೆ ಹಿಂದೆಯೇ ಬಂದ ಕಾರು ನಮ್ಮ ಬೈಕನ್ನು ಅಡ್ಡಗಟ್ಟಿ ನಿಂತೆ ಬಿಟ್ಟಿತು. ನನಗಂತೂ ಕೈ ಕಾಲುಗಳಲ್ಲಿ ನಡುಕ ಶುರುವಾಯಿತು. ನಾವೇನ್ ತಪ್ಪು ಮಾಡಿದ್ದೇವೆ? ಎಂಬ ಪ್ರಶ್ನೆಗಳ ಬಾಣಕ್ಕೆ ತಲೆ ಸಿಡಿಯುವಂತಾಯಿತು. ನಾನು ಬೈಕ್‌ನಿಂದ ಇಳಿಯದೆ ಯತೀಶ್‌ನನ್ನು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣು ಮುಚ್ಚಿ ಹಾಗೇ ಕೂತೆ. ನಂತರ ನನ್ನ ಪಾದಗಳನ್ನು ಯಾರೋ ಮೃದುವಾಗಿ ಸ್ಪರ್ಶಿಸಿದಂತೆ ಆಯಿತು. ಕಣ್ಣು ಬಿಟ್ಟಾಗ ಆ ಹುಡುಗ ನಮಸ್ಕಾರ ಮಾಡುತ್ತಿದ್ದಾನೆ!

ಸುಮಾರು ಇಪ್ಪತ್ತೆರಡು ವರ್ಷದ ಸದೃಢ ದೇಹದಾರಿ ಯುವಕ. ಯಾರು ಎಂದು ಗುರುತಿಸಲಾರದೆ ಅವನೆಡೆ ನೋಡಿದೆ. ಬಹುಶಃ ನನ್ನೊಳಗಿನ ಪ್ರಶ್ನೆ ಅವನಿಗೆ ಅರ್ಥವಾಗಿತ್ತು. ಮಿಸ್ ನಾನು ನಿಮ್ಮ ಸ್ಟೂಡೆಂಟ್ ಸೋಮಶೇಖರ. ನೀವು ಯಾವಾಗಲೂ ಸೋಮ ಸೋಮ ಅಂತ ಕರೀತಿದ್ರಲ್ಲ ನೆನಪಿಲ್ಲವಾ ಮಿಸ್ ಅಂದಾಗ, ಸೂರ್ಯ ರಶ್ಮಿಗೆ ಅರಳಿ ನಗುವ ಮಂದಾರ ಪುಷ್ಪದಂತೆ ನನ್ನ ಮೊಗದಲಿ ನಗುವೊಂದು ಕಿಸಕ್ಕನೆ ಮೂಡಿತು. ಮೆದುವಾದ ಕೆನ್ನೆಗಳೀಗ ಈಗ ಗಡುಸಾಗಿವೆ, ಮುಗ್ದತೆ, ಕುತೂಹಲ ಇದ್ದ ಕಣ್ಣುಗಳೊಳಗೆ ಈಗ ಆತ್ಮವಿಶ್ವಾಸವಿದೆ. ಏನೋ ಸಾಧಿಸಿರುವ ಖುಷಿಯು ಎದ್ದು ಕಾಣುತ್ತಿದೆ. ನೀಲಿ ಬಣ್ಣದ ಚಡ್ಡಿ ಹಾಕುತ್ತಿದ್ದವ ಜೀನ್ಸ್ ಪ್ಯಾಂಟ್ ಟೀ ಶರ್ಟ್ ತೊಟ್ಟು ನನ್ನೆದುರು ನಿಂತಿದ್ದಾನೆ. ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ. ಅವನು ದೈಹಿಕವಾಗಿ ಅಷ್ಟೇ ಬೆಳೆದಿರಲಿಲ್ಲ ಪ್ರಭುದ್ಧವಾಗಿ ಕೂಡ ಬೆಳೆದಿದ್ದ.

ಸ್ವಲ್ಪ ಸಾವರಿಸಿಕೊಂಡು ವಾಸ್ತವಕ್ಕೆ ಬಂದ ನಾನು ಯಾಕೋ? ಸೋಮ ಹಾಗೆ ಮಾಡಿದೆ. ನೀನು ಹೀಗಾ ಹಿಂಬಾಲಿಸುವುದು, ಒಂದು ಕ್ಷಣ ನನ್ನ ಗುಂಡಿಗೆ ನಿಂತು ಹೋಗಿತ್ತು ಅಂದೆ… ಪ್ಲೀಸ್ ಹಾಗೇ ಅನ್ನಬೇಡಿ, ಬಿಡ್ತು ಅನ್ನಿ ಮಿಸ್, ನೀವು ಇನ್ನೂ ನೂರಾರು ವರ್ಷ ಬಾಳಿ ಬದುಕಬೇಕು. ನನ್ನಂತಹ ಅದೆಷ್ಟೋ ವಿದ್ಯಾರ್ಥಿಗಳ ಬದುಕು ರೂಪಿಸಬೇಕು ಅಂದನು. ಟೀಚರ್ ಮೇಲೆ ಅವನು ತೋರಿದ ಪ್ರೀತಿ ಕಾಳಜಿ ನನ್ನ ವೃತ್ತಿ ಬಗ್ಗೆ ನನಗೆ ಹೆಮ್ಮೆ ಮೂಡಿಸಿತು. ಟೀಚರ್ ನಾನೀಗ ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕ ಆಗಿರುವೆ. ಈಗ ತಾನೇ ಪೋಲಿಸ್ ಟ್ರೈನಿಂಗ್ ಮುಗಿಸಿ ಊರಿಗೆ ಬರುತ್ತಿದ್ದೆ, ನಿಮ್ಮನ್ನು ನೋಡಿದೆ. ನಿಮ್ಮನ್ನು ಮಾತನಾಡಿಸಿ ನಿಮ್ಮ ನಂಬರ್ ತಗೋಬೇಕು ಅಂತ ನಿಮ್ಮ ಹಿಂದೆಯೇ ಬಂದೆ, ಸಾರಿ ಮಿಸ್ ಎಂದನು. ಅವನು ತನ್ನ ಜೀವನದ ಗುರಿ ತಲುಪಿರುವುದನ್ನು ಕಂಡು ಖುಷಿಯಾಯಿತು. ಅವನಿಗೆ ಅದಕ್ಕಾಗಿ ಅಭಿನಂದನೆ ಹೇಳಿದೆ. ಆ ಕ್ರೆಡಿಟ್ ನಿಮಗೆ ಸೇರಬೇಕು, ನೀವು ಅದೆಷ್ಟು ಚಂದ ಪಾಠ ಹೇಳಿಕೊಡುತ್ತಿದ್ರಿ, ಪ್ರೀತಿ ಕಾಳಜಿ ಮಾಡುತ್ತಿದ್ರಿ, ನನಗೆ‌ ಅದೆಲ್ಲಾ ಆದರ್ಶವಾಗಿದೆ. ನಾನು ನಿಮ್ಮಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಬ್ಬ ಶಿಕ್ಷಕರ ಯಶಸ್ಸು ಅವನ ವಿದ್ಯಾರ್ಥಿಗಳು ಸಾಗುತ್ತಿರುವ ದಾರಿಯಲ್ಲಿ ಕಾಣುತ್ತದೆ ಎಂಬುದು ಸತ್ಯ.

 ನಾವೆಲ್ಲರೂ ಈ ಹಾಡನ್ನು ಭಯದಿಂದಲೋ, ಭಕ್ತಿಯಿಂದಲೋ ತನ್ಮಯರಾಗಿ ಹಾಡುತ್ತಿದ್ದೆವು. ಆದರೆ ಹಾಡು ಹೇಳಿಕೊಟ್ಟು ನಿಲ್ಲಿಸಿದ ತಕ್ಷಣ ನನಗೆ ಏನಾಗಿದೆ? ಶಿವ ಶಿವ ಎಂದರೆ ಭಯ ಇಲ್ಲ ಎನ್ನುತ್ತಿರುವೆ. ಶಿವನಿಗೆ ಕೋಪ ಬಂದರೆ ಏನ ಗತಿ ಎಂದು ಚಡಪಡಿಸುತ್ತಿದ್ದೆ. ಶಿವಪ್ಪಾ ನಿನ್ನ ಕಂಡರೆ ನನಗೆ ಭಯ ಇದೆ, ಆದರೇ ಏನು ಮಾಡಲಿ ನಮ್ಮ ಟೀಚರ್ ಶಿವ ಶಿವ ಎಂದರೆ ಭಯವಿಲ್ಲ ಎಂದು ಹೇಳಿಕೊಡುತ್ತಾರೆ. ಗುರುಗಳ ಮಾತು ಕೇಳಬೇಕು ಅಲ್ವಾ ಅದಕ್ಕೆ ಹೇಳಿದೆ ಅಷ್ಟೇ, ನಿನ್ನ ಮೂರನೇ ಕಣ್ಣಿಂದ ನನ್ನ ಸುಡಬೇಡ‌ ಎಂದು ದೇವರಿಗೆ ಮನವಿ ಸಲ್ಲಿಸುತ್ತಿದ್ದೆನು.

ಅಂದ ಹಾಗೆ ಮತ್ತೊಂದು ಘಟನೆ. ಆಗ ನನ್ನ ಅಪ್ಪ ತೀರಿಕೊಂಡಿದ್ದರು. ಮೊದಲನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯುತ್ತಿತ್ತು. ಎಲ್ಲರೂ ಅಪ್ಪನ ಸಮಾಧಿ ಪೂಜೆ ಮಾಡುತಿದ್ದೆವು. ರಸ್ತೆ ಬದಿಯಲ್ಲಿಯೇ ನಮ್ಮ ಹೊಲವಿತ್ತು. ಆ ರಸ್ತೆಯಲ್ಲಿ ಬಂದ ಯುವಕನೊಬ್ಬ ತನ್ನ ಬುಲೆಟ್ ಬೈಕನ್ನು ರಸ್ತೆ ಪಕ್ಕಕ್ಕೆ ಪಾರ್ಕ್ ಮಾಡಿ ಸಮಾಧಿ ಬಳಿ ಬಂದವನೇ ಸಮಾಧಿಗೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿದ. ನನಗೆ ಅಚ್ಚರಿ ಆಯಿತು. ಯಾರಿವ! ಗುರುತಿಲ್ಲ, ಪರಿಚಯ ಇಲ್ಲ, ಸಂಬಂಧಿಯಲ್ಲ,ನೆರೆ-ಹೊರೆಯಲ್ಲ. ಹಾಗಾದರೆ ಯಾರಿವ ಅಂತ ಯೋಚಿಸುತ್ತಾ ಸೂಕ್ಷ್ಮವಾಗಿ ಗಮನಿಸಿದಾಗ ಗುರುತು ಸಿಕ್ಕಿತು. ನನ್ನ ವಿದ್ಯಾರ್ಥಿ ಜಯಣ್ಣ. ನೀನು ಜಯಣ್ಣ‌ ಅಲ್ವಾ ಎಂದೆ. ಹೌದು ಟೀಚರ್ ನಾನು ನಿಮ್ಮ ಜಯಣ್ಣನೇ ಅಂದನು. ಎಷ್ಟು ಬೆಳದಿರುವೆ ನೋಡು, ಗುರುತು ಸಿಗಲಿಲ್ಲ ಅಂದೆ. ಏನು ಕೆಲಸ ಮಾಡುತ್ತಿರುವೆ ಎಂದೆನು. ನಾನು ಇಂಜಿನೀಯರಿಂಗ್ ಮುಗಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದನು. ಅವನ ಸಂಬಳದ ಮೊತ್ತ ಕೇಳಿ ನನ್ನ ವಿದ್ಯಾರ್ಥಿ ನನಗಿಂತ ದುಪ್ಪಟ್ಟು ದುಡಿಯುತ್ತಿರುವುದನ್ನು ನೋಡಿ ಹೆಮ್ಮೆ ಅನಿಸಿತು.‌ ಪ್ರೀತಿಯಿಂದ ಹೊಗಳಿದೆ. ಆಗ ಅವನು “ತನ್ನ ವಿದ್ಯಾರ್ಥಿಗಳ ಬದುಕನ್ನು ಹಸನುಗೊಳಿಸುತ್ತಾ ತಾನು ಇದ್ದಲ್ಲೇ ಇದ್ದು ವಿದ್ಯಾರ್ಥಿಗಳನ್ನು ಆಕಾಶದೆತ್ತರಕ್ಕೆ ಬೆಳೆಸುವವನೇ ಗುರು” ಅಲ್ವಾ ಟೀಚರ್ ಅಂದಾಗ ಅದೆಷ್ಟು ಪ್ರಭುದ್ಧ ಆಲೋಚನೆಗಳು ಎನಿಸಿ ಅಚ್ಚರಿಯಾಯಿತು.

ಮಿಸ್ ನಿಮ್ಮ ಕೈಯಲ್ಲಿ ಒಮ್ಮೆ ಆದರೂ ಪೆಟ್ಟು ತಿನ್ನಬೇಕು ಅಂದುಕೊಂಡಿದ್ದೆ. ಆದರೆ ನೀವು ಒಮ್ಮೆಯೂ ನನ್ನನ್ನು ಹೊಡೆದು ಬಡಿದು ಬುದ್ಧಿ ಹೇಳಲೇ ಇಲ್ಲ. ನಮ್ಮ ಎಲ್ಲಾ ತಪ್ಪುಗಳನ್ನು ಪ್ರೀತಿಯಿಂದಲೇ ತಿದ್ದಿದಿರಿ. ಈಗ ನೋಡಿ ಮಿಸ್ ನಿಮ್ಮ ಜಯಣ್ಣ ಹೀಗೆ‌ ಇದಾನೆ, ನಿಮ್ಮಂತಹ ಮಗಳನ್ನು ನಮಗೆ ನೀಡಿದ್ದಕ್ಕಾಗಿ ನಿಮ್ಮ ಅಪ್ಪನಿಗೆ ಮೊದಲು ವಂದಿಸಿದೆ ಎಂದಾಗ ನನ್ನ ಕಂಗಳಿಗೆ ಎರಡು ಹನಿ ನೀರು ಹನಿಯದೇಯಿರಲು ಸಾಧ್ಯವೇ ಆಗಲಿಲ್ಲ.

ಇದಕ್ಕೆ ವ್ಯತಿರಿಕ್ತವಾದ ಮತ್ತೊಂದು ಘಟನೆ… ಸ್ಟಡಿ ಸರ್ಟಿಫಿಕೇಟ್ ಬರೆಸಿಕೊಳ್ಳಲು ವಿದ್ಯಾರ್ಥಿಯೊಬ್ಬ ಶಾಲೆಗೆ ಬಂದ. ಬಂದವನು ತಾನು ತಂದಿದ್ದ ಫಾರ್ಮ್ ಅನ್ನು ಟೇಬಲ್ ಮೇಲೆ ಇಟ್ಟು ಟೆರೇಸ್ ನೋಡುತ್ತಾ ನಿಂತನು. ಬಂದವನು ಟೀಚರ್‌ಗೆ ನಮಸ್ಕಾರ ಹೇಳುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ. ಕಿಟಕಿಯಲ್ಲಿ ಜೋರಾಗಿ ಬೀಸಿದ ಗಾಳಿಗೆ ಆ ಫಾರ್ಂ‌ ತೂರಿತು. ನಾನು ಎದ್ದು ಅದನ್ನು ಹುಡುಕುತ್ತಿರುವೆ, ಅದನ್ನು ಹಿಡಿಯಲು ಹರ ಸಾಹಸ ಪಡುತ್ತಿರುವೆ ಆ ಹುಡುಗ ಇದನ್ನು ನೋಡಿಯೂ ನೋಡದಂತೆ ಇದಕ್ಕೂ ನನಗೂ ಸಂಬಂಧವಿಲ್ಲ. ಅವರೇ ಹಿಡಿದುಕೊಳ್ಳಲಿ ಎನ್ನುವಂತೆ ಅಹಂ ನಿಂದ ಎರಡು ಕೈಗಳನ್ನ ಜೇಬಿನಲ್ಲಿ ತೂರಿಸಿಕೊಂಡು ಮಕ್ಕಳು ಕಾರ್ಟೂನ್ ನೋಡಿ ನಗುವಂತೆ ನನ್ನೆಡೆ ನೋಡಿ ಅಪಹಾಸ್ಯದ ವ್ಯಂಗ್ಯ ನಗೆ ಬೀರುತ್ತಾ ನಿಂತಿದ್ದಾನೆ. ಇದನ್ನು ನೋಡಿದರೆ ಈ ಮೂರು ಮಕ್ಕಳು ನನ್ನ ವಿದ್ಯಾರ್ಥಿಗಳೇ, ಒಂದೇ ರೀತಿ ಕಲಿಸಿರುವೆ, ಆದರೆ ಗುಣ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸಗಳಿವೆ. ಇದಕ್ಕೆಲ್ಲ ನಾವೇ ಕಾರಣವಾ? ನಾವು ನಿಜವಾಗಿ ಯೋಚಿಸಬೇಕಿದೆ. ಗುರು ಹಿರಿಯರನ್ನು ಗೌರವಿಸುವುದು, ಕಿರಿಯರನ್ನು ಪ್ರೀತಿಸುವುದು, ಅಸಹಾಯಕರನ್ನು ಕಾಳಜಿ ಮಾಡುವುದು, ಪರಸ್ಪರ ಸಹಕಾರ ನೀಡುವುದು, ಸೇವಾ ಮನೋಭಾವ, ಆರೋಗ್ಯಕರ ಸ್ಪರ್ಧಾ ಗುಣ ಇವುಗಳನ್ನೆಲ್ಲ ನಾವು ಮತ್ತಷ್ಟು ಪ್ರಬಲವಾಗಿ ಕಲಿಸಬೇಕಿದೆ. ಹೆಚ್ಚು ಹೆಚ್ಚು ನೀತಿ ಕಥೆಗಳನ್ನು ಓದಿಸಿದರೆ ಸಾಲದು ಅವುಗಳನ್ನು ಪಾಲಿಸುವಂತೆ ಮಾಡಿ ಅದರ ಫಲಿತ ಕೊಡುವ ಖುಷಿಯನ್ನ ಅನುಭವಿಸುವಂತೆ ಮಾಡಬೇಕಿದೆ ಅನ್ನಿಸುತ್ತದೆ.

ನಾವು ಚಿಕ್ಕವರಿದ್ದಾಗ ನಮ್ಮ ಟೀಚರ್ ಪ್ರತಿದಿನ ಒಂದು ಒಳ್ಳೆಯ ಕೆಲಸ ಬರೆದುಕೊಂಡು ಬರುವಂತೆ ಹೇಳುತ್ತಿದ್ದರು. ನಾವು ಅದಕ್ಕೊಂದು ಪುಸ್ತಕ ಇಟ್ಟು ದಿನಾಂಕ ನಮೂದಿಸಿ ಪ್ರತಿದಿನ ಒಂದು ಒಳ್ಳೆಯ ಕೆಲಸ ಬರೆಯುತ್ತಿದ್ದೆವು. ಅದನ್ನೇನು ನಾವು ಮಾಡಿ ದಾಖಲಿಸುತ್ತಿರಲಿಲ್ಲ. ಶಿಕ್ಷಕರ ಭಯಕ್ಕೆ ಬರೆಯುತ್ತಿದ್ದೆವು.

ಇಂದು ಶಾಲೆಗೆ ಬರುವಾಗ ದಾರಿಯಲ್ಲಿ ಬಿದ್ದಿದ್ದ ಮುಳ್ಳುಗಳನ್ನು ತೆಗೆದು ಪಕ್ಕಕ್ಕೆ ಹಾಕಿದೆ, ರಸ್ತೆ ದಾಟಲು ಪರದಾಡುತ್ತಿದ್ದ ಕುರುಡನನ್ನು ರಸ್ತೆ ದಾಟಿಸಿದೆ, ಅಮ್ಮನಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಿದೆ, ಹಸಿದಿದ್ದ ಭಿಕ್ಷುಕನಿಗೆ ಅನ್ನ ನೀಡಿದೆ, ಚಳಿಯಲ್ಲಿ ನಡುಗುತ್ತಿದ್ದ ಬಡ ಮಗುವಿಗೆ ನನ್ನ ಸ್ವೆಟರ್ ನೀಡಿದೆ, ನನ್ನ ಗೆಳತಿಗೆ ಬರೆಯಲು ಪುಸ್ತಕ ಇರಲಿಲ್ಲ ನಾನು ಅದನ್ನು ಕೊಟ್ಟೆ. ಮೋರಿಗೆ ಬಿದ್ದಿದ್ದ ನಾಯಿಮರಿಯನ್ನು ತೆಗೆದು ಅದರ ಅಮ್ಮನ ಬಳಿ ಸೇರಿಸಿದೆ, ನಮ್ಮ ಪಕ್ಕದ ಮನೆ ಅಜ್ಜಿಗೆ ದಿನಸಿ ತಂದು ಕೊಟ್ಟೆ, ಮೂಲೆಮನೆ ಅಜ್ಜ ಕಾಯಿಲೆ ಬಿದ್ದಾಗ ಔಷಧಿ ತಂದುಕೊಟ್ಟೆ, ದೇವಾಲಯದ ಅರ್ಚಕರಿಗೆ ಹೂ ಕಟ್ಟಿ ಕೊಟ್ಟೆ, ಶಾಲೆಗೆ ಹೋಗಿ ಪಾಠ ಕಲಿಯದ ಅಮ್ಮನಿಗೆ ಓದಲು ಕಲಿಸಿದೆ, ರಸ್ತೆಯಲ್ಲಿ ಬಿದ್ದಿದ್ದ ದೊಡ್ಡ ಗುಂಡಿಗಳನ್ನು ಮುಚ್ಚಿದೆ, ನನ್ನ ತಮ್ಮನಿಗೆ ಓದಲು ಸಹಾಯ ಮಾಡಿದೆ. ಹೀಗೆ ಪ್ರತಿಯೊಬ್ಬರೂ ತಮಗೆ ತೋಚಿದ್ದನ್ನು, ಒಳ್ಳೆಯ ಕೆಲಸ ಅನಿಸಿದ್ದನ್ನು ಬರೆದುಕೊಂಡು ಹೋಗಿ ತೋರಿಸುತ್ತಿದ್ದೆವು. ಆ ಒಳ್ಳೆಯ ಕೆಲಸ ಬರೆಯುವುದರಿಂದ ಮಕ್ಕಳಿಗೆ ಬಹುಮುಖಿ ಅನುಕೂಲಗಳಿದ್ದವು. ಒಳ್ಳೆಯ ಕೆಲಸ ಯಾವುದು ಎಂದು ಮಕ್ಕಳಿಗೆ ಅರಿವು ಮೂಡಿಸುವುದು ಪ್ರಮುಖ ಆಶಯವಾದರೂ ಅದರೊಟ್ಟಿಗೆ ಅಕ್ಷರಗಳು ಅಂದವಾಗುತ್ತಿದ್ದವು. ಮತ್ತೆ ಗುಣಿತಾಕ್ಷರಗಳು ದೋಷದಿಂದ ಮುಕ್ತವಾಗುತ್ತಿದ್ದವು. ಆ ಕೆಲಸಗಳನ್ನೆಲ್ಲ ಮಕ್ಕಳು ಮಾಡುವುದಿಲ್ಲ ಎಂದು ಶಿಕ್ಷಕರಿಗೂ ಗೊತ್ತಿತ್ತು. ಸುಮ್ಮನೆ ಬರೆಯುತ್ತಾರೆ ಎಂದು ತಿಳಿದಿದ್ದರೂ ಅವೆಲ್ಲವನ್ನು ಓದಿ ಶಹಭಾಷ್ ಗಿರಿ ನೀಡಿ ಪ್ರೋತ್ಸಾಹಿಸುತ್ತಿದ್ದರು. ಅವರ ಆಶಯ ಮಕ್ಕಳಿಗೆ ಒಳಿತು ಕೆಡಕುಗಳನ್ನು ಪರಿಚಯಿಸುವುದಾಗಿತ್ತು. ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ತಯಾರು ಮಾಡುವುದಾಗಿತ್ತು. ಇದು ನೈತಿಕ ಮೌಲ್ಯಗಳನ್ನು ಕಲಿಸುವ ಒಂದು ಪ್ರಬಲ ಅಸ್ತ್ರವಾಗಿತ್ತು. ಆಗ ನಮಗೆ ಯಾವುವು ಒಳ್ಳೆಯ ಕೆಲಸಗಳು ಎಂದು ತಿಳಿಯುತ್ತಿತ್ತು. ಹಾಗೆಲ್ಲ ಮಾಧ್ಯಮಗಳ ಪ್ರಭಾವ ಇಲ್ಲದರಿಂದ ನಮಗೆಲ್ಲ ಸಂಪನ್ಮೂಲಗಳ ಕೊರತೆ ಇತ್ತು, ಎಲ್ಲಕ್ಕೂ ಶಿಕ್ಷಕರೇ ಆಕರವಾಗಿರುತ್ತಿದ್ದರು. ಅವರು ಹೇಳಿದ್ದನ್ನ ಚಾಚು ತಪ್ಪದೇ ಪಾಲಿಸುತ್ತಿದ್ದೆವು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಜಾಲತಾಣಗಳು, ಸಮೂಹ ಮಾಧ್ಯಮಗಳು ಮಕ್ಕಳನ್ನು ಇನ್ನಿಲ್ಲದಂತೆ ಸೆಳೆಯುತ್ತಿವೆ. ಒಳಿತು ಕೆಡಕಿನ ಪರಾಮರ್ಶೆಗಳ ಗೋಜಿಗೆ ಹೋಗುವುದೆ ಇಲ್ಲ.


ಹೀಗಿರುವಾಗ ಮೌಲ್ಯಗಳನ್ನು ಕಲಿಸುವುದು ಶಿಕ್ಷಕರಿಗೆ ಇರುವ ಅತಿ ದೊಡ್ಡ ಸವಾಲಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಇವುಗಳನ್ನು ಕಲಿತು ಪಾಲಿಸುತ್ತಾರಾದರೂ ಮುಂದಿನ ತರಗತಿಗಳಿಗೆ ಹೋದಾಗ ಹೊರಗಿನ ಸೆಳೆತ ಆಕರ್ಷಣೆಗೆ ಒಳಗಾಗಿ ಚಂಚಲತೆಗೆ ಹಾತುಕೊಂಡು ಆನೆ ನಡೆದಿದ್ದೇ ದಾರಿ ಎನ್ನುವಂತಾಗುತ್ತಾರೆ. ದಾರಿ ತಪ್ಪಿಸುವ ಅನೇಕ ಕಾರಣಗಳು ಅಲ್ಲಿ ಹುಟ್ಟಿಕೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ಅವರೊಳಗಿನ ಅರಿವಿನ ಕಣಜವ ತೆರೆದು ಅವನ ಮೇಲೆ ಪ್ರಭಾವ ಬೀರುವ ಮಾಧ್ಯಮಗಳನ್ನು ಅಸ್ತ್ರಗಳನ್ನಾಗಿ ಮಾಡಿಕೊಂಡು ದೃಶ್ಯ ಶ್ರವ್ಯ ಮಾಧ್ಯಮಗಳ ಮೂಲಕ ಮಕ್ಕಳಿಗೆ ಮೌಲ್ಯಗಳ ಅರಿವು ಮೂಡಿಸಬೇಕಾಗಿರುವುದು ಇಂದಿನ ಅತಿ ಮುಖ್ಯ ತುರ್ತಾಗಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಅನೇಕ ನವ ನವೀನ ಕಾರ್ಯಕ್ರಮಗಳನ್ನು ರೂಪಿಸಿ, ಸೃಜನಾತ್ಮಕ ಮತ್ತು ರಚನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುತ್ತಿದೆ. ಮೌಲ್ಯ ಶಿಕ್ಷಣ, ಜೀವನ ವಿಜ್ಞಾನ, ರಂಗಕಲೆ, ಯೋಗ ಮುಂತಾದ ಹಲವಾರು ತರಬೇತಿಗಳ ಮೂಲಕ ಮಕ್ಕಳನ್ನು ಮಾನವೀಯತೆ ಇರುವ ಮನುಷ್ಯರನ್ನಾಗಿ ಬೆಳೆಸಲು ಪ್ರಯೋಗಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಎಲ್ಲಾ ಮಕ್ಕಳಲ್ಲೂ ನೈತಿಕತೆ ಮನೆ ಮಾಡಲಿ. ಸ್ವಸ್ಥ ಸಮಾಜ ನಿರ್ಮಾಣ ಆಗಲಿ ಎಂದು ಆಶಿಸುವೆ.