Advertisement
ಮಕ್ಕಳ ಶಿಕ್ಷಣದಲ್ಲಿ ಕುಟುಂಬದ ಜವಾಬ್ದಾರಿ: ಅನುಸೂಯ ಯತೀಶ್  ಸರಣಿ

ಮಕ್ಕಳ ಶಿಕ್ಷಣದಲ್ಲಿ ಕುಟುಂಬದ ಜವಾಬ್ದಾರಿ: ಅನುಸೂಯ ಯತೀಶ್ ಸರಣಿ

ನೋಡಿ ಮೇಡಮ್ ನೀವು ಮೊದಲು ಅವನಿಗೆ ಟಿವಿ ನೋಡೋದು ಬಿಡಿಸಿ. ಶಾಲೆಯಿಂದ ಬಂದಾಗ ಟಿವಿ ಮುಂದೆ ಕೂತ್ರೆ ಅರ್ಧ ರಾತ್ರಿವರೆಗೂ ಒಂದಾದ ಮೇಲೆ ಒಂದರಂತೆ ಧಾರವಾಹಿ ನೋಡ್ತಾನೆ. ಮಲಗೋದು ಸರಿ ರಾತ್ರಿ ಆಗಿರುತ್ತೆ. ಬೆಳಗ್ಗೆ ಏಳಲು ತಲೆಸುತ್ತು ಅಂತಾನೆ. ನಿದ್ದೆ ಬರುತ್ತೆ ಅಂತ ಹತ್ತು ಗಂಟೆಯಾದರೂ ಮಲಕೊಂಡವ್ನೆ. ಅದಕ್ಕೆ ನಿಮ್ಮ ಮೇಲೆ ಕೋಪ ಬಂದಿದೆ. ನಿಮ್ಮ ಮೇಲೆ ಕೂಗಾಡಿದ್ದು ಇನ್ಯಾಕೆ ಅಂದುಕೊಂಡ್ರಿ ಅಂತ ಆಕೆಯ ಕಿರುಚಾಟ, ಹಾರಾಟದ ಹಿಂದಿನ ಸತ್ಯ ಬಾಯ್ಬಿಟ್ಟಳು. “ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ” ಎಂಬ ಗಾದೆ ಮಾತು ಕೇಳಿದ್ಯಲ್ಲ ಹಾಗಾಯಿತು ನಿಮ್ಮ ಮಾತು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

ಅಂದು ಪ್ರಾರ್ಥನೆ ಮುಗಿಸಿ ಮಕ್ಕಳ ಹಾಜರಾತಿ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಶಾಲೆಗೆ ದಡಬಡನೆ ಬಂದ ಪೋಷಕಿಯೊಬ್ಬರು ಏನ್ರೀ ಮೇಡಂ, ಮಕ್ಕಳಿಗೆ ನೀವು ಕಲಿಸಿರುವುದು ಇದೇನಾ? ನೀವು ಅದೇನು ಹೇಳಿ ಕೊಡ್ತಿರೋ ಏನೋ? ನಾವು ನಿಮ್ಮನ್ನು ನಂಬಿ ಶಾಲೆ ಕಳಿಸ್ತೀವಿ. ಆದರೆ ನೀವು ಮಕ್ಕಳಿಗೆ ಸ್ವಲ್ಪವೂ ಭಯ ಭಕ್ತಿ ಏನು ಕಲಿಸಿಲ್ಲ ಎಂದು ಕಾದ ಬಾಣಲೆಯಲ್ಲಿ ಬಿದ್ದು ಪಟಪಟ ಸಿಡಿವ ಹುರುಳಿ ಕಾಳುಗಳಂತೆ ಒಂದೇ ಸಮನೆ ಒದರಲಾರಂಭಿಸಿದರು. ಇಂತಹ ಮಾತುಗಳು, ಘಟನೆಗಳು ಶಿಕ್ಷಕರಿಗೆ ಸಹಜವೆಂಬ ಅರಿವಿರುವ ನಾನು ಅವರ ಕಡೆಗೊಮ್ಮೆ ದೃಷ್ಟಿ ಬೀರಿದೆ. ಕಂಗಳು ಕೆಂಡದುಂಡೆಗಳನ್ನು ಉಗುಳುವಷ್ಟೇ ಪ್ರಖರವಾಗಿದ್ದವು. ಕೈ ಬಾಯಿಗಳು ಅಷ್ಟ ದಿಕ್ಕುಗಳನ್ನು ನೋಡಿ ಬರುತ್ತಿದ್ದವು. ಜಾರುತ್ತಿದ್ದ ಸೆರಗನ್ನು ಸರಿಪಡಿಸಿಕೊಳ್ಳುತ್ತಾ, ನೆರಿಗೆ ಹಿಡಿದು ಸೊಂಟಕ್ಕೆ ಸಿಕ್ಕಿಸಿದ ಪರಿ ನೋಡಿದರೆ ಇವಳೇನು ನನ್ನ ಜೊತೆ ಮಲ್ಲ ಯುದ್ಧಕ್ಕೆ ಸಿದ್ಧಳಾಗುತ್ತಿದ್ದಾಳಾ? ಎನಿಸಿತು. ಬಿಡುವಿಲ್ಲದೆ ಹೊರಳುತ್ತಿದ್ದ ನಾಲಿಗೆಯ ರಭಸಕ್ಕೆ ಬಾಯಲ್ಲಿ ಜಗಿಯುತ್ತಿದ್ದ ಎಲೆ ಅಡಿಕೆ ರಸ ತರಗತಿಯಲ್ಲೆಲ್ಲ ಸೋರಿತು. ಅವಳ ಕೋಪಾಗ್ನಿಯನ್ನು ಕಂಡು ಒಂದು ಕ್ಷಣ ನಾನು ವಿಚಲಿತಳಾದೆ. ಇಷ್ಟೊಂದು ಕೋಪ ಮಾಡಿಕೊಂಡಿದ್ದಾಳೆಂದರೆ ಅಂತಹ ಭಯಾನಕ ತಪ್ಪನ್ನು ನಾನೇನು ಮಾಡಿರಬಹುದು? ಎಂದು ಯೋಚಿಸಿದೆ. ಏನೂ ಹೊಳೆಯಲಿಲ್ಲ. ತಕ್ಷಣ ಸಾವರಿಸಿಕೊಂಡು ಬಾರಮ್ಮ ಇಲ್ಲಿ, ಯಾಕೆ ಇಷ್ಟೊಂದು ರೌದ್ರಾವತಾರ ತಾಳಿರುವೆ, ಏನಾಯಿತು? ಸಮಾಧಾನದಿಂದ ವಿಷಯ ಏನೆಂದು ತಿಳಿಸಿ‌, ನೀವು ಹೀಗೆ ಕಿರುಚಾಡುತ್ತಿದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ. ತರಗತಿಯಲ್ಲಿರುವ ಇತರ ಮಕ್ಕಳಿಗೂ ವಿನಾಕಾರಣ ತೊಂದರೆಯಾಗುತ್ತದೆ. ಇಷ್ಟಕ್ಕು ನಿಮ್ಮ ಮಗ ಎಲ್ಲಿ? ಅವನು ಯಾಕೆ ಇನ್ನು ಶಾಲೆಗೆ ಬಂದಿಲ್ಲ? ಎಂದು ಸ್ವಲ್ಪ ಮೃದುವಾಗಿ ಕೇಳಿದೆ.

ಒಬ್ಬರು ಕೋಪದಲ್ಲಿ ಮಾತನಾಡುವಾಗ ಮತ್ತೊಬ್ಬರು ಸಾಧ್ಯವಾದಷ್ಟು ತಾಳ್ಮೆಯಿಂದ ವರ್ತಿಸಬೇಕು. ಅದರ ಹೊರತಾಗಿ ನಾನೇನು ಅವರಿಗಿಂತ ಕಡಿಮೆ ಎಂದು ಜಟಾಪಟಿಗೆ ಇಳಿದರೆ ಎದುರಿಗೆ ಇರುವ ಸಮಸ್ಯೆ ದುಪ್ಪಟ್ಟಾಗುತ್ತದೆ. ಆಗ ಪರಿಹಾರ ಎಂಬುದು ಮರೀಚಿಕೆಯಾಗುತ್ತದೆ. ಅದರಲ್ಲೂ ಶಿಕ್ಷಕರು ತೊಡಲೇಬೇಕಾದ ಆಭರಣ ಎಂದರೆ ಸಹನೆ, ತಾಳ್ಮೆ ಮತ್ತು ವಿವೇಚನಾ ಪೂರ್ಣ ಸಾಂದರ್ಭಿಕ ನಡವಳಿಕೆ.

ಅವಳಿಗೆ ಒಂದು ಲೋಟ ನೀರು ಕೊಟ್ಟು ನೀವು ಮೊದಲು ಹೊರಗೆ ಹೋಗಿ ಬಾಯಲ್ಲಿರುವ ಎಲೆ ಅಡಿಕೆ ಉಗಿದು‌ ಬಾಯಿ ತೊಳೆದುಕೊಂಡು ಬನ್ನಿ .ಮಕ್ಕಳಿಗೆಲ್ಲ ಸಿಡಿಯುತ್ತೆ ಎಂದು ಸ್ವಲ್ಪ ಕಟುವಾಗಿ ಹೇಳಿದೆ. ಈಗ ನೀವು ಬಂದ ವಿಷಯವೇನು ಹೇಳಿ? ನಿಮ್ಮ ಸಮಸ್ಯೆಯಾದರೂ ಏನು? ಎಂದು ಕೇಳಿದೆ. ನಿಮ್ಮ ಮಗ ಎಲ್ಲಿ? ಎಂದೆ. ಅವನು ಇನ್ನೂ ಎದ್ದಿಲ್ಲ ಮಲಗಿದ್ದಾನೆ. ಅದನ್ನು ಹೇಳಲೇ ನಾನು ಬಂದೆ ಎಂದಳು. ನಾನಾಗ ಅಲ್ಲಮ್ಮ ಮಗ ಮಲಗಿರುವುದು ಶಾಲೆಯಲ್ಲಲ್ಲ. ನಿಮ್ಮ ಮನೆಯಲ್ಲಿ. ನೀವು ಎಬ್ಬಿಸಿ ಸಿದ್ಧ ಮಾಡಿ ಶಾಲೆಗೆ ಕಳುಹಿಸಬೇಕು. ಅದರಲ್ಲಿ ನನ್ನ ಪಾತ್ರವೇನಿದೆ? ನೀವು ನನಗೆ ಹೇಳುವುದೇನಿದೆ ಎಂದೆ.

ನೋಡಿ ಮೇಡಮ್ ನೀವು ಮೊದಲು ಅವನಿಗೆ ಟಿವಿ ನೋಡೋದು ಬಿಡಿಸಿ. ಶಾಲೆಯಿಂದ ಬಂದಾಗ ಟಿವಿ ಮುಂದೆ ಕೂತ್ರೆ ಅರ್ಧ ರಾತ್ರಿವರೆಗೂ ಒಂದಾದ ಮೇಲೆ ಒಂದರಂತೆ ಧಾರವಾಹಿ ನೋಡ್ತಾನೆ. ಮಲಗೋದು ಸರಿ ರಾತ್ರಿ ಆಗಿರುತ್ತೆ. ಬೆಳಗ್ಗೆ ಏಳಲು ತಲೆಸುತ್ತು ಅಂತಾನೆ. ನಿದ್ದೆ ಬರುತ್ತೆ ಅಂತ ಹತ್ತು ಗಂಟೆಯಾದರೂ ಮಲಕೊಂಡವ್ನೆ. ಅದಕ್ಕೆ ನಿಮ್ಮ ಮೇಲೆ ಕೋಪ ಬಂದಿದೆ. ನಿಮ್ಮ ಮೇಲೆ ಕೂಗಾಡಿದ್ದು ಇನ್ಯಾಕೆ ಅಂದುಕೊಂಡ್ರಿ ಅಂತ ಆಕೆಯ ಕಿರುಚಾಟ, ಹಾರಾಟದ ಹಿಂದಿನ ಸತ್ಯ ಬಾಯ್ಬಿಟ್ಟಳು. “ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ” ಎಂಬ ಗಾದೆ ಮಾತು ಕೇಳಿದ್ಯಲ್ಲ ಹಾಗಾಯಿತು ನಿಮ್ಮ ಮಾತು. ನಿಮ್ಮ ಮಗ ಮನೆಯಲ್ಲಿ ಟಿವಿ ನೋಡಿದರೆ ನೀವು ಅದನ್ನು ತಡೆಯಬೇಕು. ಅವನಿಗೆ ಬುದ್ಧಿ ಹೇಳಿ ಓದಲು ಕೂಡಿಸಬೇಕು. ಅದನ್ನು ಬಿಟ್ಟು ನನ್ನನ್ ಯಾಕೆ ದೂರ್ತಿರಾ ಎಂದು ಖಾರವಾಗಿಯೇ ಪ್ರಶ್ನಿಸಿದೆ.

ಅಲ್ಲ ಮಿಸ್ ಓದ್ಸೋದು ಬರ್ಸೋದು ಏನಿದ್ರೂ ಟೀಚರ್ ಕೆಲಸ ನಂದಲ್ಲ. ಸರ್ಕಾರ ನಿಮಗೆ ತಾನೇ ಸಂಬಳ ಕೊಡೋದು ಅಂತ ಮುಖ ಸಿಂಡರಿಸಿಕೊಂಡು ಕೇಳಿದರು. ಎಂತಹ ವಿಪರ್ಯಾಸ ನೋಡಿ. ಈ ತಾಯಿಗೆ ಮಗನ ಭವಿಷ್ಯಕ್ಕಿಂತ ನನಗೆ ಸರ್ಕಾರಿ ಸಂಬಳ ಬರುತ್ತದೆ ಎಂಬ ಅಸಹನೆಯೆ ಎದ್ದು ಕಾಣುತ್ತಿತ್ತು‌. ನೀವು ಟಿ.ವಿ. ರಿಮೋಟನ್ನು ಅವನ ಕೈಗೆ ಸಿಗುವಂತೆ ಏಕೆ ಇಡುತ್ತೀರಿ. ಮೇಲೆ ಎತ್ತಿಡಿ ಎಂದು ಸುಲಭ ಪರಿಹಾರ ನೀಡಿಬಿಟ್ಟೆ. ಅದಕ್ಕೆ ಆ ತಾಯಿ ಅಲ್ಲ ಮಿಸ್, ನಾವು ಟಿವಿ ನೋಡೋದು ಬೇಡ್ವಾ? ಅವನು ಓದಲಿ ಅಂತ ನಮ್ಮ ಖುಷಿಗೆ ನಾವು ಬೆಂಕಿ ಹಾಕಿಕೊಳ್ಳಬೇಕಾ? ದಿನವೆಲ್ಲ ಕೆಲಸ ಮಾಡಿ ಸಾಕಾಗಿ ಬಂದಿರ್ತೀವಿ. ರಾತ್ರಿಯಲ್ಲಿ ನಾವು ಟಿವಿ ನೋಡಕ್ ಹೋದ್ರೆ ಈ ದಾಂಡಿಗ ಯಾಕೆ ಬಂದು ನಮ್ಮ ಜೊತೆ ಸೇರ್ಕೊಬೇಕು? ಇವನು ಹೊರಗೆ ಕೂತು ಪಾಠ ಓದಿದ್ರೆ ಆಗಲ್ವಾ ಎಂದು ಒಂದೇ ಸಮನೆ ಬಡಬಡಿಸಿದರು. ಕೆಲವು ಪೋಷಕರ ಮನಸ್ಥಿತಿ ಹೇಗಿರುತ್ತದೆ ನೋಡಿ. ತಮ್ಮ ಮಕ್ಕಳ ಕಲಿಕೆಗೆ ಅವರು ಏನನ್ನು ಮಾಡಲು ಸಿದ್ಧರಿಲ್ಲ. ಕಲಿಕೆಯ ಸಂಪೂರ್ಣ ಹೊಣೆಯನ್ನು ಟೀಚರ್ ಮತ್ತು ಮಕ್ಕಳೆ ಹೊರಬೇಕು. ಒತ್ತರಿಸಿ ಬರುತ್ತಿದ್ದ ಕೋಪವನ್ನು ನಿಯಂತ್ರಿಸಿಕೊಂಡು ಹೇಳಿದೆ. ನೋಡಿ ಅಮ್ಮ ಈ ಮಕ್ಕಳು ಇನ್ನೂ ಚಿಕ್ಕವರು. ಅವರಿಗೆ ಸರಿ ತಪ್ಪುಗಳು ಗೊತ್ತಾಗುವುದಿಲ್ಲ. ಇಂದಿನ ಸಮೂಹ ಮಾಧ್ಯಮಗಳ ಪ್ರಭಾವಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಅವರ ಅಮೂಲ್ಯ ಸಮಯವನ್ನು, ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಹಾಗಾಗಿ ಮಕ್ಕಳಿಗೆ ಬುದ್ಧಿ ಬಂದು ಸ್ವತಃ ತೀರ್ಮಾನಿಸುವಷ್ಟು ವಿವೇಚನೆ ಬರುವವರೆಗೂ ಪೋಷಕರು ಮಕ್ಕಳ ಕಡೆ ಹೆಚ್ಚು ಗಮನ ನೀಡಬೇಕು. ಕಾಲ ಕಾಲಕ್ಕೆ ಮಕ್ಕಳಿಗೆ ಸರಿ ತಪ್ಪುಗಳನ್ನ ತಿದ್ದಿ ಹೇಳಬೇಕು. ಶಾಲೆಯಲ್ಲಿ ನಮ್ಮ ಜವಾಬ್ದಾರಿ ಇರುತ್ತದೆ. ಇಲ್ಲ ಎಂದು ನಾನೆಲ್ಲಿ ಹೇಳಿದೆ. ನಾವು ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ಶಾಲೆಯಿಲ್ಲದ ಸಮಯದಲ್ಲಿ, ಮಕ್ಕಳು ಮನೆಯಲ್ಲಿರುವಾಗ ನೀವು ಕೂಡ ಅಷ್ಟೇ ಜವಾಬ್ದಾರಿ ವಹಿಸಿಕೊಳ್ಳಬೇಕು. ಎರಡು ಕೈ ಸೇರಿದರೆ ತಾನೆ ಚಪ್ಪಾಳೆ ಮೂಡಲು ಸಾಧ್ಯ. ಹಾಗೆ ಮಕ್ಕಳ ಏಳಿಗೆಗೆ ಶಿಕ್ಷಕರು ಮತ್ತು ಪೋಷಕರು ಇಬ್ಬರು ಸಮಾನವಾಗಿ ಜವಾಬ್ದಾರಿಗಳನ್ನು ತೆಗೆದುಕೊಂಡು ಮುನ್ನಡೆಸಬೇಕು. ನಿಮಗೆ ಮಕ್ಕಳ ಏಳಿಗೆಗಿಂತ ಬೇರೆ ಇನ್ನೇನು ಬೇಕು ಹೇಳಿ. ನಿಮ್ಮ ಮಕ್ಕಳು ಮುಂದೆ ಚೆನ್ನಾಗಿರುವುದು ಮುಖ್ಯವೋ? ಅಥವಾ ಇಂದು ನೀವು ಟಿವಿ ನೋಡುವುದು ಮುಖ್ಯವೋ? ನೀವೇ ತೀರ್ಮಾನಿಸಿ. ಹಾಗಂತ ನಾನು ಪೂರ್ಣವಾಗಿ ನೀವು ಟಿವಿ ನೋಡಬೇಡಿ ಎಂದು ಹೇಳುತ್ತಿಲ್ಲ. ಒಂದಿಷ್ಟು ವಾರ್ತೆ ಕೇಳಿ, ಮಕ್ಕಳಿಗೂ ಒಂದಷ್ಟು ಲೋಕಜ್ಞಾನದರಿವು ಮೂಡುತ್ತದೆ. ಜೊತೆಗೆ ಥಟ್‌ ಅಂತ ಹೇಳಿ ಕಾರ್ಯಕ್ರಮ ಸೇರಿದಂತೆ ಹಲವಾರು ಮಕ್ಕಳ ಜ್ಞಾನ ವೃದ್ಧಿಸುವ ಕಾರ್ಯಕ್ರಮಗಳನ್ನ ಸ್ವಲ್ಪ ಸಮಯ ನೋಡಿ ಎಂದೆನು. ಅವರಿಗೆ ನನ್ನ ಉತ್ತರ ಸರಿ ಕಾಣಲಿಲ್ಲ ಎನಿಸುತ್ತದೆ. ನೀವೇನೋ ಹೇಳ್ತಿರಿ. ಚೇರ್ ಮೇಲೆ ನೆರಳಲ್ಲಿ ಕೂತು ಕಾಲ ಕಳಿತೀರಾ. ನಾವು ಬಿಸಿಲಲ್ಲಿ ದುಡಿದು ಬರ್ತೀವಿ. ನಿಮ್ಗೇನ್ ಗೊತ್ತಾಗುತ್ತೆ ನಮ್ಮಂತವರ ಕಷ್ಟ ಎಂದಳು. ನಾನು ತುಂಬಾ ತಾಳ್ಮೆಯಿಂದ ಹೌದಮ್ಮ ನೀವು ಹೇಳುವುದು ನೂರಕ್ಕೆ ನೂರು ಸರಿ ಎಂದೆ. ಯಾವಾಗ ಆಕೆಯ ಮಾತು ಸರಿ ಎಂದೇನೋ ಆಗ ಅರಿವಿಲ್ಲದಂತೆ ಆಕೆಯ ಲಕ್ಷ್ಯ ನನ್ನೆಡೆಗೆ ಬಂದಿತು.

ಒಬ್ಬರು ಕೋಪದಲ್ಲಿ ಮಾತನಾಡುವಾಗ ಮತ್ತೊಬ್ಬರು ಸಾಧ್ಯವಾದಷ್ಟು ತಾಳ್ಮೆಯಿಂದ ವರ್ತಿಸಬೇಕು. ಅದರ ಹೊರತಾಗಿ ನಾನೇನು ಅವರಿಗಿಂತ ಕಡಿಮೆ ಎಂದು ಜಟಾಪಟಿಗೆ ಇಳಿದರೆ ಎದುರಿಗೆ ಇರುವ ಸಮಸ್ಯೆ ದುಪ್ಪಟ್ಟಾಗುತ್ತದೆ. ಆಗ ಪರಿಹಾರ ಎಂಬುದು ಮರೀಚಿಕೆಯಾಗುತ್ತದೆ. ಅದರಲ್ಲೂ ಶಿಕ್ಷಕರು ತೊಡಲೇಬೇಕಾದ ಆಭರಣ ಎಂದರೆ ಸಹನೆ, ತಾಳ್ಮೆ ಮತ್ತು ವಿವೇಚನಾ ಪೂರ್ಣ ಸಾಂದರ್ಭಿಕ ನಡವಳಿಕೆ.

ನೀವೇ ಹೇಳಿದರಿ ನಾನು ನೆರಳಲ್ಲಿ ಚೇರ್ ಮೇಲೆ ಆರಾಮವಾಗಿ ಕೂರುವೆ, ನೀವು ಬಿಸಿಲಲ್ಲಿ ದುಡಿಯುವೆ ಅಂತ ಯಾಕಿರಬಹುದು? ಅಂತ ಯೋಚಿಸಿ ಎಂದಾಗ ನೀವು ಓದಿದ್ದೀರಾ? ಕೆಲಸ ತೆಗೆದುಕೊಂಡಿದ್ದೀರಾ? ಅದಕ್ಕೆ ಸುಖವಾಗಿ ಇದ್ದೀರಿ. ಆದರೆ ನಾನು ನಾಲ್ಕು ಅಕ್ಷರ ಕಲಿತಿಲ್ಲ. ಈಗ ಕೂಲಿ ನಾಲಿ ಮಾಡಿ ಬರುತ್ತಿದ್ದೇನೆ. ಹಾಗೆ ಒಳ್ಳೆಯ ಕೆಲಸಗಳು ಸಿಗುವುದಿಲ್ಲ ಅಷ್ಟೇ ಅಂದಳು. ನೋಡಿ ನಿಮಗೆ ಎಲ್ಲವೂ ಗೊತ್ತಿದೆ. ಇದರಲ್ಲಿ ನಾನು ಹೇಳುವುದು ಏನು ಇಲ್ಲ. ಈ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ವಿದ್ಯೆ ಬೇಕು. ಅದು ದೊರೆಯಲು ನೀವು ಶಾಲೆಯ ಶಿಕ್ಷಕರಷ್ಟೇ ಹೊಣೆ ಹೊರಬೇಕು. ನಾವು ಶಾಲೆಯಲ್ಲಿ ಕಲಿಸಿದ್ದನ್ನ ನೀವು ಮನೆಯಲ್ಲಿ ಅಭ್ಯಾಸ ಮಾಡಲು ಹೇಳಬೇಕು. ನಿಮ್ಮ ಮಗ ಈಗ ಚೆನ್ನಾಗಿ ಕಲಿತು ವಿದ್ಯಾವಂತನಾದರೆ ಮುಂದೆ ನನ್ನ ಹಾಗೆ ನೆರಳಿನಲ್ಲಿ, ಚೇರ್ ಮೇಲೆ ಕೂತು ಕೆಲಸ ಮಾಡುವ ಆಫೀಸರ್ ಆಗುತ್ತಾನೆ. ಇಲ್ಲ ಅಂದ್ರೆ ನಿನ್ನದೇ ಬದುಕು, ನಿನ್ನದೆ ದಾರಿ ಅವನಿಗೆ ಗಟ್ಟಿ ಆಗುತ್ತೆ. ಏನು ಮಾಡುವಿರೋ ನೀವೇ ತೀರ್ಮಾನಿಸಿ ಎಂದೆ. ಅವಳ ಕಣ್ಣುಗಳಲ್ಲಿದ್ದ ಕೋಪ, ಆವೇಶ ತಣ್ಣಗಾಗಿ ಮುಖ ಪ್ರಶಾಂತ ಭಾವಕ್ಕೆ ತಿರುಗಿತು. ಆಗ ಆಕೆ ಶಾಂತ ಚಿತ್ತದಿಂದ ನೀವು ಹೇಳೋದು ಸರಿ ಮೇಡಂ ನನಗೂ ಅರ್ಥ ಆಗ್ತಿದೆ. ಇನ್ಮುಂದೆ ಟಿವಿ ನೋಡಲ್ಲ. ಅವನನ್ನು ಟಿವಿಯಿಂದ ದೂರವಿಟ್ಟು ಓದಿಸುತ್ತೀನಿ. ಅವನು ಚೆನ್ನಾಗಿದ್ರೆ ತಾನೇ ನಾವು ಚೆನ್ನಾಗಿರೋದು. ಓದಿ ದುಡಿಯುವಂತಾದರೇ ಕೊನೆ ಕಾಲದಲ್ಲಿ ನಮಗೂ ಊಟ ಬಟ್ಟೆ ಹಾಕುತ್ತಾನೆ ಎಂದು ಖುಷಿಯಿಂದ ಬೀಗಿದರು.

ವಿದ್ಯಾಭ್ಯಾಸ ಅಂತ ಬಂದಾಗ ಶಿಕ್ಷಕರನ್ನು ನೇರ ಹೊಣೆ ಮಾಡುವುದು ಎಷ್ಟರಮಟ್ಟಿಗೆ ಸರಿ ಹೇಳಿ? ಹೊಣೆಯನ್ನು ಹೊತ್ತ ಪೋಷಕರೇ ಶಾಲೆಗೆ ತಳಪಾಯ ಎಂಬ ಮಾತು ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಹೆತ್ತವರ ಪಾತ್ರವನ್ನು ತೋರಿಸುತ್ತದೆ. ಹಿಂದಿನ ದಿನಗಳಿಗೂ ಈಗಿನ ದಿನಗಳಿಗೂ ತುಂಬಾ ವ್ಯತ್ಯಾಸವಿದೆ. ಹಿಂದೆ ನಾವೆಲ್ಲ ಓದುವಾಗ ಎಲ್ಲರ ಮನೆಗಳಲ್ಲಿ ರೇಡಿಯೋ ಮಾತ್ರ ಇರುತ್ತಿತ್ತು. ಇಡೀ ಊರಿಗೆ ಒಂದೊ ಎರಡೋ ಟಿವಿ ಇರುತ್ತಿದ್ದವು. ಅದರಲ್ಲೂ ಡಿಡಿ ದೂರದರ್ಶನ ಮಾತ್ರ ಇದ್ದು ಪರಿಮಿತ ಕಾರ್ಯಕ್ರಮಗಳು ಪ್ರಸಾರ ಆಗುತ್ತಿದ್ದವು. ಮೊಬೈಲ್ ಇರಲೇ ಇಲ್ಲ. ಹಾಗಾಗಿ ಮನೋರಂಜನೆ ಅಂತ ಬಂದಾಗ ಮನೆಯಲ್ಲಿ ಮಕ್ಕಳೊಂದಿಗೆ ಪೋಷಕರು ಕೂಡಿ ಚೌಕಾಬಾರ, ಆನೆಗಟ್ಟ, ಅಲಗುಳಿ ಮನೆ ಆಟಗಳನ್ನು ಆಡುತ್ತಿದ್ದರು. ಅದರಿಂದ ಮಕ್ಕಳ ಮೆದುಳು ಚುರುಕಾಗುತ್ತಿತ್ತು. ಲವಲವಿಕೆ ಕಾಣುತ್ತಿತ್ತು. ಆದರಿಂದು ಸಾಮಾಜಿಕ ಜಾಲತಾಣಗಳು ಮತ್ತು ಸಮೂಹ ಮಾಧ್ಯಮಗಳ ಪ್ರಭಾವಗಳಿಗೆ ಸಿಲುಕಿ ಮಕ್ಕಳು ಅಪ್ರಜ್ಞಾಪೂರ್ವಕವಾಗಿ ವರ್ತಿಸುತ್ತಿದ್ದಾರೆ. ಇದು ನೇರವಾಗಿ ಮಕ್ಕಳ ಶಿಕ್ಷಣದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಮಕ್ಕಳು ಟಿವಿ ಕಾರ್ಯಕ್ರಮಗಳ ಕಡೆಗೆ ಒಲವು ಬೆಳೆಸಿಕೊಂಡು ಓದುವ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಮಾತ್ರವಲ್ಲ ದೈಹಿಕವಾಗಿ ಮತ್ತು ಮಾನಸಿಕವಾಗಿ, ಭಾವನಾತ್ಮಕವಾಗಿ ಕೂಡ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿ ಕನ್ನಡಕ ಧರಿಸುವಂತೆ ಆಗಿದೆ. ಸಣ್ಣ ಪುಟ್ಟ ವಿಷಯಗಳಿಗೂ ಮಾನಸಿಕ ಕಿರಿಕಿರಿ ಅನುಭವಿಸುತ್ತಾರೆ. ಅನುಕರಣೆ ಮಾಡಲು ಹೋಗಿ ತೊಂದರೆಗೀಡಾಗುತ್ತಾರೆ. ಇವುಗಳಿಂದ ಮುಕ್ತಿ ಪಡೆಯಲು ಪೋಷಕರು ಸಾಧ್ಯವಾದಷ್ಟು ಮಕ್ಕಳನ್ನು ಹೊರಗಿನ ಈ ರೀತಿಯ ಆಕರ್ಷಣೆಗಳಿಂದ ದೂರವಿಟ್ಟು ವಿದ್ಯಾಭ್ಯಾಸದ ಕಡೆಗೆ ಗಮನ ನೀಡಿ ವಿದ್ಯಾಭ್ಯಾಸದ ಕಡೆಗೆ‌ ಪ್ರೇರೇಪಿಸಬೇಕು. ತಾವು ಹರಟೆ ಹೊಡೆಯುತ್ತ ಮಕ್ಕಳಿಗೆ ಬುದ್ಧಿವಾದ ಹೇಳಿದರೆ ಆಗದು. ಮಕ್ಕಳ ಓದಿಗೆ ತಮ್ಮ ಕೈಲಾದ ಮಾರ್ಗದರ್ಶನ ಮಾಡಬೇಕು.

ನನ್ನ ತಂದೆ ತಾಯಿಗಳು ನನ್ನನ್ನು ಓದಿಸಿದ್ದು ನನಗೆ ಈಗಲೂ ನೆನಪಿದೆ. ನಮ್ಮ ಮಗಳು ನಮ್ಮಂತೆ ಕಷ್ಟ ಪಡಬಾರದು ಅಂತ ಬಹಳಷ್ಟು ಆಸಕ್ತಿ ತೋರುತ್ತಿದ್ದರು. ಒಂದು ದಿನವೂ ಶಾಲೆಗೆ ತಪ್ಪಿಸಿಕೊಳ್ಳಲು ಅವಕಾಶ ನೀಡುತ್ತಿರಲಿಲ್ಲ. ಶಾಲೆಯಲ್ಲಿ ಏನು ಪಾಠ ಮಾಡಿದರು? ನಿನಗಿನ್ನು ಯಾವುದು ಅರ್ಥ ಆಗಿಲ್ಲ? ಹೋಮ್ ವರ್ಕ್ ಏನ್ ಕೊಟ್ಟವರೆ? ಎಂದೆಲ್ಲ ಅಪ್ಪ ಪ್ರಶ್ನಿಸುತ್ತಿದ್ದರು. ಅವರ ಆ ಮಾನಿಟರಿಂಗ್‌ನಿಂದ ಅಂದಂದಿನ ಪಾಠಗಳನ್ನು ಅಂದಂದೇ ಓದಿ ಮುಗಿಸುತ್ತಿದ್ದೆ. ಅದರ ಫಲಿತಾಂಶ ನಾನಿಂದು ಶಿಕ್ಷಕಿಯಾಗಿರುವೆ. ಅಂತಹ ಪ್ರೋತ್ಸಾಹ ಮೇಲ್ವಿಚಾರಣೆ ಇಂದು ಹಿಂದಿಗಿಂತಲೂ ಅಧಿಕವಾಗಿದೆ. ಮಕ್ಕಳ ಮನಸ್ಸನ್ನು ಚಂಚಲಗೊಳಿಸುವ ಕಾರಣಗಳು ಇಂದು ಯಥೇಚ್ಛವಾಗಿವೆ. ಹಾಗಾಗಿ ಅವುಗಳ ಕಪಿಮುಷ್ಠಿಯೊಳಗೆ ಸಿಲುಕಿ ಮಕ್ಕಳು ಹಾಳಾಗದಂತೆ ತಡೆಯಲು ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ಜಾಗೃತಿ ವಹಿಸಬೇಕು. ಇಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಮತ್ತೊಂದು ಸಮಸ್ಯೆ ಎಂದರೆ ಪೋಷಕರು ಕೂಲಿಗೆ ಹೋದಾಗ ಮಕ್ಕಳನ್ನು ಶಾಲೆ ತಪ್ಪಿಸಿ ಜೊತೆಗೆ ಕರೆದುಕೊಂಡು ಹೋಗುವುದು. ಇಂತಹ ಒಂದು ಘಟನೆ ಜರುಗಿತು. ಒಬ್ಬ ವಿದ್ಯಾರ್ಥಿನಿ ಶಾಲೆಗೆ ಬಂದಿರಲಿಲ್ಲ. ಪದೇ ಪದೇ ಶಾಲೆಗೆ ಗೈರು ಹಾಜರಾಗುತ್ತಿದ್ದಳು.

ಕಾರಣ ಕೇಳಿದರೆ ಅವರ ಅಮ್ಮ ಬಂದು ನನ್ನೊಡನೆ ಜಗಳ ಮಾಡಿದರು. ನಿಮಗೆ ಅಂದ್ರೆ ಮೇಡಂ ಸಂಬಳ ಬರುತ್ತದೆ. ನಮ್ಮ ಹೊಟ್ಟೆಯೂ ತುಂಬ ಬೇಡವೇ? ನಾನು ಕೆಲಸಕ್ಕೆ ಹೋಗದಿದ್ದರೆ ಹೊಟ್ಟೆ ತುಂಬುವುದಿಲ್ಲ ಎಂದು ಏರು ಧ್ವನಿಯಲ್ಲಿ ಕೂಗಾಡಿದರು. ನಾನು ಖಂಡಿತ ಹೋಗಿ ಅಮ್ಮ. ನೀವು ಕೆಲಸಕ್ಕೆ ಹೋಗುವುದಕ್ಕೂ‌ ಮಗಳು ಶಾಲೆ ತಪ್ಪಿಸುವುದಕ್ಕೂ ಸಂಬಂಧವೇನು ಅಂದು ಪ್ರಶ್ನಿಸಿದೆ. ಆಗ ಆಕೆ ಮನೆಯಲ್ಲಿ ಚಿಕ್ಕ ಮಗು ಇದೆ. ಇದನ್ನು ಯಾರು ನೋಡಿಕೊಳ್ಳುತ್ತಾರೆ? ಅದಕ್ಕೆ ಆ ಮಗುವನ್ನು ನೋಡಿಕೊಳ್ಳಲು ಇವಳನ್ನು ಶಾಲೆ ತಪ್ಪಿಸಿ ಕರೆದುಕೊಂಡು ಹೋಗುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾನಾಗ ಚಿಕ್ಕ ಮಗುವನ್ನ ಅಂಗನವಾಡಿಗೆ ಕಳಿಸಲು ಸಲಹೆ ನೀಡಿದೆ. ಆದರೆ ಅಂಗನವಾಡಿ ಟೀಚರ್ ಮೇಲಿನ ಇವರ ವೈಯಕ್ತಿಕ ಕೋಪದ ಕಾರಣದಿಂದ ಒಪ್ಪಲಿಲ್ಲ. ಇವರಿಬ್ಬರ ನಡುವಿನ ವೈಮನಸ್ಸನ್ನು ನಿವಾರಿಸಿ ಆ ಪುಟ್ಟ ಮಗುವನ್ನು ಅಂಗನವಾಡಿಗೆ ಕಳಿಸಲು ಒಪ್ಪಿಸುವಲ್ಲಿಗೆ ಸಾಕು ಸಾಕಾಗಿ ಹೋಯಿತು. ಇದರಿಂದ ನನಗೆ ಆದ ಲಾಭ ಆ ಮಗು ಶಾಲೆಗೆ ನಿಯಮಿತವಾಗಿ ಬರುವಂತಾಯಿತು. ಇದರ ಜೊತೆಗೆ ವಾರದಲ್ಲಿ ಎರಡು ದಿನ ಸೋಮವಾರ ಶುಕ್ರವಾರ ಪೂಜೆ ಮಾಡಬೇಕು. ಅದಕ್ಕಾಗಿ ಮನೆಯನ್ನು ಸ್ವಚ್ಛಗೊಳಿಸಬೇಕು ಅಂತ ಶಾಲೆಗೆ ತಪ್ಪಿಸುವ ಮಕ್ಕಳು, ಸಂಜೆ ಊರಿಗೆ ಹೋಗಲು ಬೆಳಗ್ಗೆಯಿಂದಲೇ ತಪ್ಪಿಸಿ ಮನೆಯಲ್ಲಿ ಕೂರುವ ಮಕ್ಕಳು, ಊರಿನಲ್ಲಿ ಎಲ್ಲೋ ಗಣೇಶನನ್ನು ಕೂರಿಸಿದರೆ ಶಾಲೆಗೆ ಗೈರು ಹಾಜರಾಗುವರು. ಇಂತಹ ಮಕ್ಕಳು ನಮಗೆಲ್ಲ ದೊಡ್ಡ ಸವಾಲುಗಳು. ಇವನ್ನೆಲ್ಲ ನಿಭಾಯಿಸಿಕೊಂಡು ಸಾಧ್ಯವಾದಷ್ಟರ ಮಟ್ಟಿಗೆ ಗೈರು ಹಾಜರಾಗದಂತೆ ನೋಡಿಕೊಂಡು ಶಾಲೆಗೆ ಬರಲು ಮಕ್ಕಳನ್ನು ಹುರಿದುಂಬಿಸುತ್ತಾ, ಚೆನ್ನಾಗಿ ಓದಲು ಪ್ರೋತ್ಸಾಹಿಸುತ್ತಾ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಶಿಕ್ಷಕರ ನಡೆ ಶ್ಲಾಘನೀಯವಾಗಿದೆ.

About The Author

ಅನುಸೂಯ ಯತೀಶ್

ಅನುಸೂಯ ಯತೀಶ್ ಅವರು ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಕಥೆ ಕವನ ಗಜಲ್ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರೆಯುವ ಇವರ ಮೆಚ್ಚಿನ ಆದ್ಯತೆ ವಿಮರ್ಶೆಯಾಗಿದೆ. ಈಗಾಗಲೆ ಅನುಸೂಯ ಯತೀಶ್ ಅವರು 'ಕೃತಿ ಮಂಥನ', 'ನುಡಿಸಖ್ಯ', 'ಕಾವ್ಯ ದರ್ಪಣ' ಎಂಬ ಮೂರು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.

2 Comments

  1. veda

    ಶಿಕ್ಷಕರ ಕೆಲಸ ಬಹಳ ಸುಲಭದ ಕೆಲಸ ಅಂತ ಹೇಳುವವರಿಗೆಲ್ಲ ನಿಮ್ಮ ಲೇಖನ ಮಾದರಿಯಾಗಿದೆ. ಪ್ರತಿಯೊಬ್ಬ ನಿಷ್ಟಾವಂತ ಶಿಕ್ಷಕ/ಶಿಕ್ಷಕಿ ಮೇಲೆ ಎಂತಹ ಗುರುತರವಾದ ಜವಾಬ್ಧಾರಿಗಳಿರುತ್ತವೆ ಹಾಗೂ ಎಷ್ಟೆಲ್ಲ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ನಿಮ್ಮ ಪ್ರತಿಯೊಂದು ಲೇಖನದಲ್ಲೂ ಚೆನ್ನಾಗಿ ಬರೆದಿದ್ದೀರಿ ಅನುಸೂಯಾರವರೆ. ಶುಭವಾಗಲಿ.

    Reply
  2. ಎಸ್ ಪಿ.ಗದಗ.

    ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಪಾತ್ರ ಎಷ್ಟೊಂದು ಮಹತ್ವದ್ದಾಗಿದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಮನ ಮುಟ್ಟುವಂತೆ ವಿವರಿಸಿದ್ದೀರಿ. ನಿಮ್ಮನ್ನು ಶಿಕ್ಷಕಿಯಾಗಿ ಪಡೆದ ಮಕ್ಕಳು ನಿಜವಾಗಿ ಅದ್ರಷ್ಟವಂತರು. ನಿಮ್ಮ ಹಾಗೆ ಸದಾ ಮಕ್ಕಳ ಒಳಿತನ್ನು , ಶ್ರೇಯಸ್ಸನ್ನು ಬಯಸುವ ಶಿಕ್ಷಕರ ಸಂಖ್ಯೆ ಹೆಚ್ಚಾಗಲಿ ಎಂದು ನಮ್ಮ ಮನದಾಳದ ಹಾರೈಕೆ.

    Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ