ಇಲ್ಲಿ ಕವಿಯು ಮಾನವನ ಸಹಜ ಗುಣಗಳನ್ನು ಬುದ್ಧನಿಗೆ ಹೋಲಿಸುತ್ತಾ ವಿಡಂಬನಾತ್ಮಕ ರೂಪದಲ್ಲಿ ಈ ಕವಿತೆಗೆ ಜೀವ ತುಂಬಿದ್ದಾರೆ. ಬುದ್ಧನ ನಡೆನುಡಿಗಳೆ ಕವಿತೆಯ ಜೀವಾಳವಾಗಿವೆ. ಇಲ್ಲಿ ವಸ್ತುನಿಷ್ಠೆಗಿಂತ ವ್ಯಕ್ತಿತ್ವದ ಅನಾವರಣಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ರೂಪಕಗಳ ಪ್ರಯೋಗದಲ್ಲಿ ಸಿದ್ಧಹಸ್ತರಾಗಿರುವ ಕವಿ ಅವುಗಳ ಜೊತೆಗೆ ವಾಸ್ತವಿಕತೆಯನ್ನು, ಸಹಜ ಸರಳವಾದ ಸಾಲುಗಳಲ್ಲಿ ಸಶಕ್ತವಾಗಿ ಬಂಧಿಸಿದ್ದಾರೆ. ಇವು ಗಮನ ಸೆಳೆಯುವ ಜೊತೆಗೆ ಚಿಂತನೆಗೆ ಹಚ್ಚಿ ಎಲ್ಲರಿಗೂ ಆಪ್ತವಾಗುತ್ತವೆ.
ಜಬೀವುಲ್ಲಾ ಎಮ್. ಅಸದ್ ಬರೆದ ಬುದ್ಧನ ಕುರಿತು ಕವಿತೆಯ ಕುರಿತು ಅನುಸೂಯ ಯತೀಶ್ ಬರಹ
“ವಿಕಸಿತ ಸಹಸ್ರದಳ ಪದ್ಮ ಪೀಠದ ಮೇಲೆ
ಮಂಡಿಸಿಹ ಧವಲಿಮಾ ಧ್ಯಾನ ಸ್ತಿಮಿತ ಮೂರ್ತಿ
ಹೇ ಬುದ್ಧದೇವ ನಿನ್ನತುಲ ಬುದ್ಧಿ ಸ್ಪೂರ್ತಿ
ಮಾನವನ ಮೂರ್ಖತೆಯ ದಹಿಸುವ ಮಹಾಜ್ವಾಲೆ
ಅರ್ಥವಿಲ್ಲದ ಕರ್ಮತತೀಯ ಮರುರಂಗದಲ್ಲಿ
ಶುಷ್ಕ ಆಚಾರಸೈಕತದಲ್ಲಿ ನಡೆಗೆಟ್ಟು
ನಿರ್ಮಲ ವಿಚಾರದಿ ಲಯವಾಗುತಿರೆ
ಕಟ್ಟು ಕಟ್ಟಳೆಯ ಲೌಹ ಶೃಂಖಲೆಯ ಯಮ ಸಂಗದಲ್ಲಿ
ಕುಬ್ಜವಾಗುತಲಿರಲು ಧರ್ಮದ ಮಹೋನ್ನತಿಯು
ವೈರಾಗ್ಯ ವರ್ಷವನು ಕರೆದು ಜನರಲ್ಲಿ ಮತಿಯು
ಕೃತಿಯ ಬಂಡೆಯ ಬಿರಿದು ಮಾಡುವಂತೆಸಗಿರುವೆ
ಹೇ ಪುಣ್ಯಮತಿ ಮೂರ್ತಿ ಮತದ ಮತಿಹೀನತೆಯು ಸಾಕೆಮಗೆ
ಬೇಕು ಸನ್ಮತಿಯ ನಾಗರಿಕತೆಯು
ನರನ ಸನ್ಮತಿಗಿಂತ ಬೇರೆಯೆ ಜಗದಲ್ಲಿರುವೆ”
-ರಾಷ್ಟ್ರ ಕವಿ ಕುವೆಂಪು
ಕಾವ್ಯ ಪ್ರವೇಶಕ್ಕೆ ಮುನ್ನ:
ಶಾಂತಿ, ಸಹನೆ, ಸೌಹಾರ್ದತೆ, ಪ್ರೀತಿ, ಪ್ರೇಮ, ವಾತ್ಸಲ್ಯ, ಕರುಣೆ, ತ್ಯಾಗ, ಸತ್ಯ, ಶುದ್ಧತೆ ಇಷ್ಟೆಲ್ಲಾ ಗುಣಗಳನ್ನು ಒಂದು ವ್ಯಕ್ತಿತ್ವದಲ್ಲಿ ನೋಡಬಹುದಾದರೆ ಅದು ಬುದ್ಧನಲ್ಲದೇ ಯಾರಿರಲು ಸಾಧ್ಯ. ಇಡೀ ಜಗತ್ತಿಗೆ ಕರುಣೆಯ ಸಾಗರವನ್ನು ಹರಿಸಿ ಶಾಂತಿಯ ಬೆಳಕು ಹಚ್ಚ ಬಯಸಿದ್ದಾರೆ. ಬುದ್ಧನೆಂದರೆ ಬದ್ಧತೆ. ಅವನ ತತ್ವಗಳ ಪಾಲನೆಯಾದರೆ ಜಗವು ಪರಿವರ್ತನೆಯೆಡೆಗೆ ಸಾಗುತ್ತದೆ. ಸಮಾಜದಲ್ಲಿ ಹಿಂಸೆ, ಶೋಷಣೆ, ರಕ್ತಪಾತ, ಅಸಮಾನತೆಗಳು ಬುಡಮೇಲಾಗಿ ಸ್ವಾಸ್ಥ್ಯ ಸಮಾಜವೊಂದರ ಸೃಷ್ಟಿಯಾಗುತ್ತದೆ.
ಹಿರಿಯ ಕವಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿಯವರು “ಬುದ್ಧನೆಂದರೆ ಬೆಳದಿಂಗಳು” ಎಂದಿದ್ದಾರೆ. ಸೂರ್ಯನು ನಿತ್ಯ ಬರುವನಾದರೂ ಆಗಾಗ ಬರುವ ಹುಣ್ಣಿಮೆಯು ಜನರಿಗೆ ಹೆಚ್ಚು ಆಪ್ತವಾಗುತ್ತದೆ. ಹಾಗೆಯೆ ಬುದ್ಧನು. ಅವನ ಸಾರ್ವಕಾಲಿಕ ಹಾಗೂ ಪ್ರಸ್ತುತತೆಯ ಸಂದೇಶಗಳು ಶತಮಾನಗಳಾದರೂ ಬುದ್ಧ ಎಲ್ಲರ ಹೃದಯದಲ್ಲಿ ಚಿರಸ್ಥಾಯಿಯಾದ ಸ್ಥಾನ ಪಡೆದಿರುವುದು.
ಬುದ್ಧನು ವೈಭವದ ಬದುಕಿನಿಂದ ಮುಕ್ತಿಹೊಂದಿ, ಜೀವನದ ಸತ್ಯವನ್ನು ಅರುಹಿ ಮಹಾಪರಿತ್ಯಾಗ ಮಾಡಿ, ನಿರಂತರ ವಿಶ್ವಪರ್ಯಟನೆಯ ನಂತರ ಕೈವಲ್ಯ ಜ್ಞಾನವನ್ನು ಪಡೆದರು. ಅವರು ಇದರಿಂದ ಕಂಡುಕೊಂಡ ಸತ್ಯವೆಂದರೆ ಬಡವರು ಮತ್ತು ದುರ್ಬಲರ ಸೇವೆ ಮಾಡುವುದು ಹಾಗೂ ಅಶಾಶ್ವತ ಜಗದಲ್ಲಿ ನಾವೇನು ಶಾಶ್ವತವಾಗಿರುವುದಿಲ್ಲ. ಅದಕ್ಕಾಗಿ ಪರರಿಗೆ ಸಹಾಯ ಮಾಡಬೇಕು. ಮಾನವೀಯ ನೆಲೆಯಲ್ಲಿ ಬದುಕನ್ನ ಸಾಗಿಸಬೇಕೆಂದು ಬೋಧಿಸಿದರು. ಸರ್ವಸ್ವವನ್ನು ತ್ಯಾಗ ಮಾಡಿ ಜಗದ ತುಂಬ ಶಾಂತಿಯ ಬೀಜ ಬಿತ್ತಿ ಚಂದ್ರಾರ್ಕರಿರುವವರೆಗೂ ಅಜರಾಮರವಾಗಿ ಈ ಜಗದಲ್ಲಿ ಸ್ಥಾನವನ್ನು ಪಡೆದಂತಹ ಕಾರುಣ್ಯಮೂರ್ತಿ ಬುದ್ಧದೇವ.
“ಬುದ್ಧ ವೇದಕ್ಕಾಗಲಿ, ಜಾತಿಗಾಗಲಿ, ಪುರೋಹಿತರಿಗಾಗಲಿ, ಆಚಾರಕ್ಕಾಗಲಿ ಬಾಗಲಿಲ್ಲ” ಎಂಬ ವಿವೇಕಾನಂದರ ಮಾತುಗಳು ಅವರೊಬ್ಬ ವಿಶ್ವಮಾನವರಾಗಿದ್ದರು ಎಂಬುದನ್ನು ಸಾಕ್ಷೀಕರಿಸುತ್ತವೆ. ಬುದ್ಧನ ತಿಳಿಯಾದ ಸತ್ಯದ ವಿಚಾರಗಳು ಜನತೆಯೆದೆಯನ್ನು ನೇರವಾಗಿ ಹೊಕ್ಕುತ್ತವೆ.
“ಅಂಗುಲಿಮಾಲ ನಾನು ಎಷ್ಟೋ ವರ್ಷಗಳಿಂದ ನಿಂತು ಬಿಟ್ಟಿದ್ದೇನೆ. ಇನ್ನು ಮುಂದೆಯೂ ನಿಂತೆ ಇರುತ್ತೇನೆ. ಜೀವಿಗಳಿಗೆ ಹಿಂಸೆ ನೀಡುವುದನ್ನು, ನನಗೆ ನಾನು ಹಿಂಸೆ ಮಾಡುವುದನ್ನು ನಿಲ್ಲಿಸಿ ಬಿಟ್ಟಿದ್ದೇನೆ. ನನ್ನ ಮನಸ್ಸು ಸಂಯಮದಲ್ಲಿ ನಿಂತಿದೆ. ನೀನು? ನಿನಗೆ ಯಾವುದರ ಬಗ್ಗೆಯೂ ಸಂಯಮವಿಲ್ಲ. ನಿನ್ನ ಮನಸ್ಸು ಚಂಚಲ; ಯಾವಾಗಲೂ ತಳಮಳಗೊಂಡಿರುವೆ. ಆದುದರಿಂದ ನೀನು ನಿಂತಿಲ್ಲ.” ಎಂಬ ಬುದ್ಧ ವಾಣಿಯೇ ಕ್ರೂರಿಯಾದ, ಕಟುಕನಾದ ಅಂಗುಲಿಮಾಲನಂತಹ ಕಲ್ಲು ಹೃದಯವನ್ನೂ ಕರಗಿಸಿಬಿಟ್ಟಿದ್ದು. ಇಂತಹ ಮಾತುಗಳು ಎಲ್ಲರಿಗೂ ಆಪ್ತವಾಗಿ ಪ್ರತಿಯೊಬ್ಬರ ಹೃದಯದಲ್ಲಿ ಬುದ್ಧ ಶಾಶ್ವತವಾಗಿ ಇರಲು ಕಾರಣವಾಗಿದೆ.
ಸ್ನೇಹಿತರೆ ನಾನೇಕೆ ಇಂದು ಬುದ್ಧನ ಬಗ್ಗೆ ಚರ್ಚಿಸುತ್ತಿರುವೆ ಎಂದು ಅಚ್ಚರಿ ಹೊಂದಿದ್ದೀರಾ? ನೆನ್ನೆಯಷ್ಟೇ ಬುದ್ಧ ಪೌರ್ಣಿಮೆ. ಈ ಸಂದರ್ಭದಲ್ಲಿ ಜಬೀವುಲ್ಲಾ ಎಂ. ಅಸದ್ ಅವರ ಕವಿತೆಯೊಂದರ ಕುರಿತು ಇಲ್ಲಿ ಹೇಳಲಿದ್ದೇನೆ.
“ಬುದ್ಧ ಜಗವ ಗೆದ್ದ
ಜಗವೆಲ್ಲ ಮಲಗಿರಲು
ಅವನೊಬ್ಬ
ಎದ್ದ ಗೌತಮಬುದ್ಧ”
ಎಂಬ ಕವಿ ವಾಣಿಯು ಬುದ್ಧನ ಗುಣ ಸ್ವಭಾವವನ್ನು ಓದುಗರಿಗೆ ತಿಳಿಸುತ್ತದೆ. ಇಲ್ಲಿ ಕವಿಗೆ ಬುದ್ಧ ಬಹಳವಾಗಿ ಕಾಡಿದ್ದಾನೆ. ಬುದ್ಧನ ವ್ಯಕ್ತಿತ್ವ ಅಂತಹುದು. ಆತನ ಸಮಾನತೆಯ ತತ್ವಕ್ಕೆ, ಶಾಂತಿ ಪ್ರಿಯತೆಗೆ, ಜ್ಞಾನಚಕ್ಷುವಿಗೆ, ಕರುಣೆಗೆ ಮೂರ್ತಿಗೆ, ಸಹನಶೀಲ ಗುಣಕ್ಕೆ ವಶವಾಗದಿರುವವರು ಯಾರಿಹರು. ಹಾಗೆಯೇ ಕವಿಯು ಅವರ ನಡೆ ನುಡಿ ಆಚಾರಗಳಿಗೆ ಬಾಗಿದ್ದಾರೆ. ಜಗತ್ತಿನ ಬಂಧನಗಳಿಂದ ಮುಕ್ತಿ ಪಡೆದು ಬುದ್ಧನ ಕಡೆಗೆ ಸಾಗುವ ಮತ್ತು ಅವರಂತೆ ನಡೆ ನುಡಿ ರೂಪಿಸಿಕೊಳ್ಳುವ ಇಂಗಿತವನ್ನು ಕವಿತೆಯು ಹೊತ್ತು ತಂದಿದೆ. ಇಡೀ ಕವಿತೆ ಯುದ್ಧಕ್ಕೂ ಬುದ್ಧನ ಗುಣಗಳನ್ನು, ತತ್ವಗಳನ್ನು, ಆದರ್ಶಗಳನ್ನು ಪ್ರತಿಪಾದಿಸುತ್ತಲೇ ಮಾನವರಾದ ನಾವು ಅವರಂತೆ ಎಲ್ಲದರಿಂದ ಮುಕ್ತಿ ಹೊಂದಿ ಬದುಕು ನಡೆಸುವುದು ಕಠಿಣವೆಂದು ಓದುಗರ ಮುಂದಿಡುತ್ತಾರೆ. ಚಿಂತನೆಯಲ್ಲಿ ಅವರೆಲ್ಲರನ್ನು ಮುಳುಗಿಸಿ ಅವರ ಮೆದುಳಿಗೆ ಬುದ್ಧ ಪ್ರಭುವಿನ ಜ್ಞಾನದ ದೀಪವನ್ನು ಹಚ್ಚಹೊರಟಿದ್ದಾರೆ. ಇದೇ ಈ ಕವಿತೆಯ ಮಹಾನ್ ಆಶಯವಾಗಿದೆ.
ಕವಿತೆಯ ಶೀರ್ಷಿಕೆ:
“ಬರುವೆ ನಿನ್ನೊಂದಿಗೆ ಬುದ್ಧ” ಶೀರ್ಷಿಕೆಯೇ ಅದ್ಭುತವಾಗಿದೆ. ಬರುವೆ ನಿನ್ನೊಂದಿಗೆ ಬುದ್ಧ ಎಂದರೆ ಬೌದ್ಧಿಕವಾಗಿ ಬರುವುದಲ್ಲ. ಇಲ್ಲಿ ಕವಿ ಬುದ್ಧನ ನುಡಿಗೆ ನಡೆಯಾಗಲು ಬರುವೆಯೆನ್ನುತ್ತಾರೆ. ಗಡಿಸೀಮೆ ಮೀರಿ ನಿಂತ ಬುದ್ಧನ ತತ್ವಗಳನ್ನು ಪಾಲಿಸುತ್ತಾ ಅದೇ ಮಾರ್ಗದಲ್ಲಿ ನಡೆಯಲು ಬರುತ್ತೇನೆಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ಕವಿತೆಯು ತುಂಬಾ ಅರ್ಥಪೂರ್ಣವಾಗಿ ಮೂಡಿಬಂದಿದೆ.
“ಬುದ್ಧನಾಗುವುದೆಂದರೆ
ಕಾಡನರಸಿ ಓಡಿ ಹೋಗುವುದಲ್ಲ. ನೀರಿನಲ್ಲಿ ಮುಳುಗಿ ಏಳುವುದಲ್ಲ. ಮರದಡಿ ಕುಳಿತು ಧ್ಯಾನ ಮಾಡುವುದು ಅಲ್ಲ
ಪ್ರೀತಿ ಕರುಣೆ ಶಾಂತಿಯ ಕಿರಣ
ಅಂತರಂಗಕ್ಕಿಳಿದಾಗ ನಾವು ಮನುಷ್ಯರಾಗುವುದು
ಅದಕ್ಕೆ ಬೇಕು ಬುದ್ಧ ಬೆಳಕು”
ಎಂಬ ಡಾ. ಅರ್ಜುನ ಗೊಳಸಂಗಿ ಅವರ ಕವನದ ಸಾಲುಗಳು ಜಬಿವುಲ್ಲಾ ಅಸದ್ ರವರ ಬುದ್ಧನಾಗುವುದು ಎಂದರೆ, ಬುದ್ಧ ನೊಂದಿಗೆ ಹೋಗುವುದು ಎಂದರೆ ಏನು ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಕವಿತೆಯ ವಿಶ್ಲೇಷಣೆ
೧
#ಬರುವೆ_ನಿನ್ನೊಂದಿಗೆ_ಬುದ್ಧ
“ನಿಲ್ಲು ಬುದ್ಧ…!
ಆಲಯದ ಸಹವಾಸ ಸಾಕಿನ್ನು
ಪಡೆದದೆಲ್ಲವ ತ್ಯಜಿಸಿ
ಬಯಸಿದ್ದೆಲ್ಲವ ಬೂದಿಯಾಗಿಸಿ
ನೀ ನಡೆವ ಬಯಲಿಗೆ
ನಿನ್ನ ನೆರಳ ಕೂಡಿ
ನಾನು ನಿನ್ನೊಂದಿಗೆ ಬರುವೆ”
ಆಲಯದೊಳಗೆ ಬದುಕುತ್ತ ಎಲ್ಲಾ ಲೌಕಿಕ ಸುಖಗಳನ್ನು ಅನುಭವಿಸಿ ಜಗತ್ತಿನ ಐಷಾರಾಮಿ ಬದುಕು ಕಂಡರೂ ತೃಪ್ತಿಯಾಗದೆ ಬುದ್ಧನ ತತ್ವಗಳಿಗೆ ಮಾರುಹೋಗಿ ಬುದ್ಧನೊಂದಿಗೆ ಹೋಗಲು ಕವಿ ಭಾವ ಆಶಿಸುತ್ತದೆ. ಅದಕ್ಕಾಗಿ ಕವಿಯು ಬುದ್ಧನನ್ನು ನಿಲ್ಲು ಬುದ್ಧ ನಾನು ನಿನ್ನೊಂದಿಗೆ ಬರುತ್ತೇನೆ ಎನ್ನುತ್ತಾರೆ. ಬುದ್ಧನೊಂದಿಗೆ ಸಾಗುವುದು ನಮ್ಮಂತಹ ವ್ಯಾಮೋಹಿ ಜನಗಳಿಗೆ ಸುಲಭದ ಮಾತಲ್ಲ. ಅದು ಕವಿಗೂ ಅರಿವಿದೆ. ನಾವು ಇದ್ದಂತೆ ಬುದ್ಧನೊಂದಿಗೆ ಚಲಿಸಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ನಿರ್ಮೋಹಿ ಆಗಬೇಕು. ಆಸೆಯೆಂಬ ಕುದುರೆಯಿಂದ ಕೆಳಗಿಳಿಯಬೇಕು. ಜಗದ ಆಕರ್ಷಣೆಯಿಂದ ದೂರ ಸರಿಯಬೇಕು. ಅರಿಷಡ್ವರ್ಗಗಳನ್ನು ನಿಯಂತ್ರಣದಲ್ಲಿಡಬೇಕು. ಆಗ ಮಾತ್ರ ಬುದ್ಧನ ನಡೆಯನ್ನು ಅನುಕರಿಸಲು ಸಾಧ್ಯ ಎನ್ನುವ ಕವಿಯು ನನಗೆ ಈ ಲೋಕದ ಸಹವಾಸ ಸಾಕು ನಾನು ಏನೆಲ್ಲಾ ಪಡೆದಿದ್ದೇನೆ, ಬೇಕು-ಬೇಡಗಳನ್ನು ನನ್ನದಾಗಿಸಿಕೊಂಡಿದ್ದೇನೆ, ಅದೆಲ್ಲವನ್ನು ತ್ಯಜಿಸಿ ಬರುವೆನು. ಮನದೊಳಗಿನ ಅಭೀಪ್ಸೆಗಳನ್ನೆಲ್ಲಾ ಸುಟ್ಟು ಅಂದರೆ ಕಡಿವಾಣ ಹಾಕಿ ಬುದ್ಧನೊಂದಿಗೆ ಹೋಗಲು ಕವಿ ಬಯಸುತ್ತಾರೆ.
ನೀ ನಡೆವ ಬಯಲಿಗೆ ಅಂದರೆ ನಿನ್ನ ದಾರಿಯಲ್ಲಿ ನಿನ್ನಂತೆ ಎಲ್ಲವನ್ನು ತೊರೆದು ಭಿಕ್ಷಾರ್ಥಿಯಾಗಿ, ನಿನ್ನ ನೆರಳಿನ ಜೊತೆಯಾಗಿ ಬರುವೆ ಎಂದು ಕವಿ ಮನಸ್ಸು ಆಶಿಸುತ್ತದೆ.
೨
“ನಿನಗೆ ದಕ್ಕಿದ ಶಾಂತಿಯನು
ನನಗೂ ಕರುಣಿಸು
ನಿನಗೆ ಪ್ರಾಪ್ತಿಯಾದ ಜ್ಞಾನವನು
ನನಗೂ ಭೋದಿಸು
ಭರವಸೆಯಿಲ್ಲದ ಭವದ ಬದುಕಿದು
ಅನುಭವದಿ ಮಾಗಿಸು
ಬೆರಳ ಹಿಡಿದು ಮುನ್ನಡೆಸು”
ಇಲ್ಲಿ ಕವಿಯು ಬುದ್ಧನನ್ನು ಪರಿಪರಿಯಾಗಿ ಭಿನ್ನವಿಸುತ್ತಾರೆ. ಬುದ್ಧನಿಗೆ ದಕ್ಕಿದ ಶಾಂತಿಯನ್ನು ತನಗೂ ದಯಪಾಲಿಸಲು ವಿನಂತಿಸುತ್ತಾರೆ. ವಾಸ್ತವದಲ್ಲಿ ಇದು ಕಷ್ಟ ಸಾಧ್ಯ ಎಂಬುದು ತಿಳಿದ ವಿಷಯವೆ ಸರಿ. ಶಾಂತಿ ಎಂಬುದು ಸುಖಾಸುಮ್ಮನೆ ಬರುವಂಥದಲ್ಲ. ಅದೊಂದು ದೊಡ್ಡ ಧ್ಯಾನ, ತಪಸ್ಸು, ಮನಸ್ಸು ಶಾಂತವಾಗಿ ಹರಿಯಲು ಅದರೊಳಗಿನ ದುರಾಸೆ, ಮೋಸ, ಹಗೆತನ ಎಂಬ ಅಲೆಗಳ ಆರ್ಭಟವನ್ನು ಹತ್ತಿಕ್ಕಬೇಕು. ರಕ್ತದೋಕುಳಿ ಹರಿಸಲು ಬಯಸುವ ಮನಸ್ಸಿಗೆ, ಹೋಳಿಯ ಓಕುಳಿಯಾಡುವ ಮನಸ್ಥಿತಿ ಬರಬೇಕು. ತಾನು ತನ್ನದೆಂಬ ಭಾವದ ಹೊರತಾಗಿ ನಿರ್ಲಿಪ್ತತೆ ಮೂಡಬೇಕು. ಇದನ್ನೆಲ್ಲಾ ನಿಷ್ಠೆಯಿಂದ ಮಾಡಿ ಬುದ್ಧ ಶಾಂತಿಯನ್ನು ದಕ್ಕಿಸಿಕೊಳ್ಳಲು ದೃಢಸಂಕಲ್ಪ ಮಾಡಬೇಕು.
ಕವಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬುದ್ಧನಿಗೆ ಪ್ರಾಪ್ತವಾದ ಜ್ಞಾನವನ್ನು ತನಗೂ ಬೋಧಿಸುವಂತೆ ಪ್ರಾರ್ಥಿಸುತ್ತಾರೆ. ಹಲವಾರು ವರ್ಷಗಳ ಕಾಲ ಅಲೆಯುತ್ತ ಅನುಭವ ಪಡೆದು ಅಂತಿಮವಾಗಿ ಬೋಧಿವೃಕ್ಷದ ಕೆಳಗೆ ಕೈವಲ್ಯ ಜ್ಞಾನವನ್ನು ಪಡೆದರು. ಅದು ಜಗದ ಬೆಳಕಾಯಿತು. ಜನರ ಉಸಿರಾಯಿತು. ಲೋಕಕೆ ಮಹಾ ಗುರುವಾದರು. ಇಂತಹ ಜ್ಞಾನವನ್ನು ನನಗೂ ಕರುಣಿಸು ಎಂದು ಕವಿ ವಿನಂತಿಸುತ್ತಾರೆ.
ಭರವಸೆಯೇ ಬದುಕಿನ ಜೀವಾಳ. ಅದಿಲ್ಲದ ಈ ಬದುಕಿಗೆ ಅನುಭವಗಳನ್ನು ನೀಡುತ್ತಾ, ಜೀವನವನ್ನು ಪಕ್ವವಾಗಿಸು. ಇದೆಲ್ಲಾ ಆಗಬೇಕಾದರೆ ಮಾರ್ಗದರ್ಶಕನಾಗಿ ಒಳಿತು ಕೆಡುಕು, ಸರಿ ತಪ್ಪುಗಳ ಅರಿವನ್ನು ನನ್ನಲ್ಲಿ ಮೂಡಿಸಿ, ಜೀವನಪೂರ್ತಿ ನನ್ನ ಕೈಹಿಡಿದು ನಡೆಸು ಎಂಬ ಧನ್ಯತೆಯ ಸಾಲುಗಳು ಸುಂದರವಾಗಿ ಸಹಜವಾಗಿ ಮೂಡಿಬಂದಿದ್ದು ಓದುಗರಿಗೆ ಹೆಚ್ಚು ಆಪ್ತವಾಗಿ ಅವರ ಮನಸೂರೆಗೊಳ್ಳುತ್ತವೆ.
೩
“ಇರುವುದೆಲ್ಲವ ಕಳೆದುಕೊಳ್ಳುವುದು
ಕಳೆದು ಎಲ್ಲವ ಖಾಲಿಯಾಗುವುದು
ಸುಲಭವಲ್ಲ ನಿನಗೆ ಗೊತ್ತು
ಬಯಕೆಗಳಿಗೆ ಬೆನ್ನು ಮಾಡಿ
ಹೊರಡುವುದು
ಆಲಯದ ಸುಖ ಭೋಗಾದಿಗಳನ್ನು
ಕ್ಷುಲ್ಲಕ ಎಂದು ಕಡೆಗಣಿಸಿ
ಬರಿಗೈಗಳ ಬೀಸುತಲಿ ನಡೆಯುವುದು
ನಿನ್ನಂತೆ ಎಲ್ಲರಿಂದಾಗದು ನಂಬು
ಮೊದಲು ಅದನ್ನು ಕಲಿಸು”
ಇಲ್ಲಿ ಕವಿಯು ಬುದ್ಧನಿಗೆ ಹೇಳುತ್ತಾರೆ. ನನ್ನಲ್ಲಿ ಇರುವುದೆಲ್ಲವನ್ನೂ ಕಳೆದುಕೊಳ್ಳುವುದು, ಎಲ್ಲವನ್ನೂ ತ್ಯಜಿಸಿ ಖಾಲಿಯಾಗುವುದು, ನನ್ನಂತಹ ಅಲ್ಪನಿಗೆ ದೊಡ್ಡ ಸಾಧನೆಯೆ. ನನ್ನ ಮನದ ತುಂಬಾ ದುರಾಸೆಯಿದೆ, ತೀರದ ದಾಹವಿದೆ, ಮತ್ತಷ್ಟು ಪಡೆಯಲೇಬೇಕೆಂಬ ಹಂಬಲವಿದೆ. ಇದೆಲ್ಲವನ್ನೂ ಬೇಡವೆಂದು ಬಿಟ್ಟು ಬರಿಗೈಯಲ್ಲಿ ನಿನ್ನನರಸಿ ಬರುವುದು ಮಹಾತಪಸ್ಸಿದ್ದಂತೆ ಎಂದು ತನ್ನ ಮನದಾಳವನ್ನು ಬುದ್ಧನೆದುರು ತೆರೆದಿಡುತ್ತಾರೆ.
ಜಬಿವುಲ್ಲಾ ಅಸದ್ ಅವರ ಕವಿತೆಯ ಈ ಸಾಲುಗಳಿಗೆ ಪೂರಕವಾಗಿ “ಗಂಗಾವತಾರಣ” ಕವನ ಸಂಕಲನದಲ್ಲಿನ ಸಾಲುಗಳನ್ನು ಉಲ್ಲೇಖಿಸುವುದಾದರೆ
“ಕಾಮಕ್ರೋಧವ ದಾಟಿ
ಮದ ಮತ್ಸರವಾ ತುಳಿದು
ಮೋಹ ಲಾಭವ ಮೆಟ್ಟಿ
ಅಡಿ ಕಿತ್ತಿ ಇಟ್ಟ
ಇದೊ ತಗ್ಗು ಅದೊ ಗುಡ್ಡ
ಅಗೋ ಮಲೆಯ ಬೆಟ್ಟ
ನೆಲ ಕೆಳಗೆ ಬಿಟ್ಟ”
ಎಂಬ ಬೇಂದ್ರೆ ವಾಣಿಯು ಬುದ್ಧನ ಸರ್ವಸಂಗ ಪರಿತ್ಯಾಗದ ನಡೆಯನ್ನು ಪ್ರತಿಧ್ವನಿಸುತ್ತದೆ.
ನಾವೆಲ್ಲಾ ಐಷಾರಾಮಿ ಬದುಕಿಗೆ ಒಗ್ಗಿ ಹೋಗಿದ್ದೇವೆ. ಅದೆಲ್ಲವನ್ನು ತ್ಯಜಿಸಿ ಸರ್ವವನ್ನು ತ್ಯಾಗ ಮಾಡಿ ಸಂಘರ್ಷದ ಬದುಕು ಸಾಗಿಸುವುದು ಅಸಾಧ್ಯ. ಅದು ಬುದ್ಧ ಒಬ್ಬನಿಂದಲೇ ಸಾಧ್ಯ. ಅದಕ್ಕಾಗಿಯೇ ಜಗಕೊಬ್ಬನೇ ಬುದ್ಧ ಇರುವನು.
ಕಂಗಳ ಮುಂದೆ ಮಾಯಾ ಜಿಂಕೆಯಾಗಿ ಕುಣಿದು ಕುಪ್ಪಳಿಸುತ್ತಿರುವ ಜಗದ ವಿಲಾಸಿ ಬದುಕಿನ ಸುಖಭೋಗಾದಿಗಳನ್ನು, ತೃಣವೆಂದು ಪರಿಗಣಿಸಿ ಲೋಭದ ಅಂಗಳದಲ್ಲಿ ಎಲ್ಲವನ್ನೂ ಕೈಯಿಂದ ಚೆಲ್ಲಿ, ಬರಿಗೈಯಲ್ಲಿ ನಿರಾಳವಾಗಿ, ಶಾಂತವಾಗಿ ಏನೂ ಆಗಿಲ್ಲವೆಂಬಂತೆ, ಇದಾವುದೂ ನನ್ನದಲ್ಲ, ನನಗೆ ಬೇಕಿಲ್ಲ ಎಂದು ಅಷ್ಟೈಶ್ವರ್ಯ ಗಳನ್ನು ಕಾಲಿನಿಂದ ಒದ್ದು ಒಂಟಿಯಾಗಿ ನಡೆದು ಬಿಟ್ಟ. ಆದರೆ ನನ್ನಿಂದ ಇದು ಸಾಧ್ಯವಿಲ್ಲ. ಇದು ಅಕ್ಷರಶಃ ಸತ್ಯವೆಂದು ಪ್ರತಿಪಾದಿಸುವ ಕವಿ ಬುದ್ಧನಂತೆ ಬಯಕೆಗಳಿಂದ ಮನಸ್ಸನ್ನು ಮುಕ್ತಗೊಳಿಸಲು ವಿನಂತಿಸುತ್ತಾರೆ.
೪
“ನೋವನು ಗೆದ್ದು ನಗುವುದನ್ನು ಬಲ್ಲೆ ನೀನು
ನನ್ನ ದುಃಖವನ್ನೊಮ್ಮೆ ಆಲಿಸು
ಮನವನ್ನು ಓಲೈಸಿ ಸಂಸ್ಕರಿಸು
ನನ್ನ ಅಹವಾಲು ಸ್ವೀಕರಿಸು
ಆಹಂಕಾರವನ್ನು ದಮನಿಸು
ನಿನ್ನೊಂದಿಗೆ ನನ್ನ ಸಾಗಿಸು”
ನಗು ಎಂಬುದನ್ನು ದಕ್ಕಿಸಿಕೊಳ್ಳುವುದು ಉಕ್ಕಿ ಹರಿವ ಪ್ರವಾಹದೆದುರು ಈಜುವಷ್ಟೇ ಪ್ರಯಾಸಕರ. ಬಹುತೇಕರು ನಗುಮೊಗದೊಂದಿಗೆ ನಮಗೆ ಎದುರಾಗುವುದನ್ನು ನಾವು ನೋಡುತ್ತೇವೆ. ಆದರೆ ಅವರ ಮನದಲ್ಲಿ ಭೋರ್ಗರೆಯುತ ಆರ್ಭಟಿಸುವ ಜ್ವಾಲಾಮುಖಿ ಅಡಗಿರುತ್ತದೆ. ಮತ್ತೆ ಕೆಲವರ ನಗುವಿನ ಹಿಂದೆ ತನ್ನ ಮನದಾಳ ತಿಳಿಯಬಾರದೆಂಬ ನಾಟಕೀಯ ಮುಖವಾಗಿರುತ್ತದೆ. ಇದು ಸಹಜವಾದ ನಗುವಲ್ಲ, ನಗು ಎಂದರೆ ಬುದ್ಧನ ಮೊಗದಲ್ಲಿ ಕಾಣುವ ಪ್ರಶಾಂತಭಾವ. ಈ ಭಾವವೇ ಜಗವನ್ನು ಗೆಲ್ಲುವ ಅಪಾರ ಶಕ್ತಿಯಿದೆ. ಕಟಕನ ಕೈಯಿಂದಲೂ ಖಡ್ಗ ಜಾರಿಸುವ ಅನನ್ಯತೆ ಇದೆ. ಅಂತಹ ಮಹಾ ಮೊಗದಾವರೆ ನೀನು. ನೀನು ಎಲ್ಲ ನೋವುಗಳನ್ನು ಗೆದ್ದಿರುವೆ. ಹೆಂಡತಿ ಮಕ್ಕಳು ರಾಜ್ಯಕೋಶಾದಿಗಳನ್ನು ಬಿಟ್ಟು ಬಂದಿರುವೆ. ಆದರೂ ನೋವಿನ ತಾಪ ನಿನ್ನೊಡಲಲ್ಲಿಲ್ಲ. ಬಿಟ್ಟು ಬಂದೆನೆಂಬ ಸಣ್ಣ ಕಹಿಯು ನಿನ್ನಲಿಲ್ಲ. ಆ ಪಥ ನಿನಗೆ ಚೆನ್ನಾಗಿ ಗೊತ್ತು ಬುದ್ಧ. ಆದರೆ ನನ್ನ ದುಃಖವನ್ನೊಮ್ಮೆ ಆಲಿಸು ಎಂದು ಕವಿ ಎಂದು ವಿನಂತಿಸುತ್ತಾರೆ.
ಸಮಸ್ತವೂ ನನ್ನ ಅಂಗೈಯಲ್ಲಿದೆ ಬಯಸಿದ ಭಾಗ್ಯ ಕ್ಷಣಮಾತ್ರದಲ್ಲಿ ನನ್ನೆದುರು ಪ್ರತ್ಯಕ್ಷವಾಗುತ್ತದೆ. ವಿಪರ್ಯಾಸ ನೋಡು ದೇವ; ನನ್ನನ್ನು ನಾನು ಗೆಲ್ಲಲಾಗಿಲ್ಲ. ಇರುವುದರಲ್ಲಿ ತೃಪ್ತಿಪಟ್ಟ ಬದುಕು ಸಾಗಿಸುವ ಮಾರ್ಗ ತಿಳಿಯಲಿಲ್ಲ. ನೀನಾದರೂ ನನ್ನ ಮನವನ್ನು ಸಮಾಧಾನಪಡಿಸು. ಅದರೊಳಗಿನ ಅಶುದ್ಧತೆಯನ್ನು ತೊಳೆ, ಮಲಿನತೆಯನ್ನುಹೊರ ಹಾಕು, ಕೊಳಕು ಭಾವವನ್ನು ಸಂಸ್ಕರಿಸಿ ನನ್ನನ್ನು ಶುದ್ಧ ಜಲದಂತೆ ಮಾಡು ಎಂದು ವಿಭಿನ್ನ ರೀತಿಯಲ್ಲಿ ಭಿನ್ನವಿಸುತ್ತಾರೆ.
ಬುದ್ಧ ನಾನ್ನೊಬ್ಬ ಅಹಂಕಾರ ತುಂಬಿದ ನಿರ್ದಯಿ ಮನುಜ. ನನ್ನೊಳಗೆ ನಾನು, ನನ್ನದು, ನನ್ನದೇಯೆಂಬ ಅಹಂ ತುಂಬಿಕೊಂಡಿದೆ. ಇದರಿಂದ ಉಳಿದದ್ದು, ಉಳಿದವರು, ನನ್ನ ಮುಂದೆ ಕ್ಷುಲ್ಲಕವಾಗಿ ಕಾಣುತ್ತಾರೆ. ನಾನೊಬ್ಬನೇ ಶ್ರೇಷ್ಠ, ನನ್ನಿಂದಲೆ ಎಲ್ಲವೂ ಎಂಬ ಮೂರ್ಖ ಆಲೋಚನೆಯಲ್ಲಿ ಮುಳುಗಿ, ಎಲ್ಲರನ್ನೂ, ಎಲ್ಲವನ್ನೂ ಲಘುವಾಗಿ ಪರಿಗಣಿಸುವ ನನ್ನ ನಡೆಗೆ ಜ್ಞಾನ ತುಂಬಿ ನಿರ್ಗರ್ವಿಯಾಗಿಸು, ನಿನ್ನೊಂದಿಗೆ ನನ್ನನ್ನು ಕರೆದೊಯ್ಯೆಂಬ ಪ್ರಾರ್ಥನೆಯನ್ನು ಕಾಣಬಹುದು.
೫
“ನೀ ನಡೆವ ದಾರಿಯಲ್ಲಿ ಲೆಕ್ಕವಿಲ್ಲದಷ್ಟು
ಅನಾಮಿಕ ಹೆಜ್ಜೆ ಗುರುತುಗಳು
ಮುಖವಾಡವಿಲ್ಲದ ಬರೀ ನಗುಮುಖಗಳು
ಜಪಸ್ವರಗಳು
ಚಾಚಿದ ಖಾಲಿ ಕರಗಳು
ಮತ್ತು ಜೋಳಿಗೆಗಳು”
ಬುದ್ಧ ನಡೆದ ದಾರಿಗಳು ಚರಿತ್ರಾರ್ಹ ಹಾಗು ಎಂದೂ ಮಾಸದ ಪಥವದು. ಮನೆಯನ್ನು ತೊರೆದ ನಂತರ ಬುದ್ಧ ಜಗದ ಜನರ ಬಾಳಿಗೆ ಬೆಳಕು ನೀಡಲು ಅದನ್ನು ಹುಡುಕುತ್ತಾ ಹೊರಟನು. ಜ್ಞಾನವನ್ನು ಪಡೆಯಲು ಮಾಡಿದ ಸುತ್ತಾಟ, ಮಾರ್ಗಗಳು ಅಸಂಖ್ಯ. ಮನುಜನ ದುಃಖಕ್ಕೆ ಕಾರಣ ಹುಡುಕ ಹೊರಟ ಬುದ್ಧನು ಸಾಗಿದ ದಾರಿಯಲ್ಲಿ ಸೃಷ್ಟಿಯಾದದ್ದು ಅನಾಮಿಕ ಹೆಜ್ಜೆಗುರುತುಗಳು.
ನಾವು ಈಗಾಗಲೇ ಚರ್ಚಿಸಿದಂತೆ ಬುದ್ಧನ ನಗುಮುಖ ನಿಷ್ಕಲ್ಮಶ ಮತ್ತು ಪರಮಪವಿತ್ರ ಆವಿರ್ಭಾವದ ಅನುಭೂತಿ. ಅದು ಶಾಂತತೆಯ ನಗು, ತೃಪ್ತಿಯ ನಗು ಸಮಾಧಾನದ ನಗು ಅಂತಹ ನಗುಮುಖ ನೆನಪಾಗುತ್ತದೆ ಎನ್ನುತ್ತಾರೆ ಕವಿಗಳು.
“ಸರ್ವಶಕ್ತಿಯೆ ಸರ್ವ ತ್ಯಾಗದ
ಗಂಗೆಯಾಗಿ ಹರಿದಿದೆ
ಮುತ್ತಿನ ಕಿರೀಟ
ಮುಳ್ಳಿನ ಕಿರೀಟ
ಯಾವುದು ಇಲ್ಲ ನಡೆದ”
ಎಂಬ ಕೆ.ಎಸ್. ನರಸಿಂಹ ಸ್ವಾಮಿಯವರ ಕವಿತೆಯು ಬುದ್ಧನ ಹೆಜ್ಜೆಗುರುತುಗಳನ್ನು ಬಿತ್ತರಿಸುತ್ತದೆ.
ಜ್ಞಾನವನ್ನು ಅರಸಿ ಹೊರಟು ಶಾಂತಿ ಪ್ರೀತಿಯ ಜಪ ಸ್ವರಗಳು ಮಾತ್ರ ಬುದ್ಧನ ಬದ್ಧತೆಯಾಗಿದೆ ಎಂಬುದು ಅಂತಃಕರಣ ತುಂಬಿದ ಜೀವವದೆಂಬುದನ್ನು ಸಾದರಪಡಿಸುತ್ತದೆ. ಬುದ್ಧ ಸಕಲೈಶ್ವರ್ಯಗಳ ಒಡೆಯನಾಗಿದ್ದರೂ, ಬೇಡಿ ಬಂದವರಿಗೆ ಮನಸಾರೆ ತುಂಬಿ ಕೊಡುವಂತಹ ಮನೆಯಲ್ಲಿದ್ದರೂ, ಎಲ್ಲವನ್ನೂ ತೊರೆದು ಬರಿಗೈ ಫಕೀರನಾಗಿ ಹೊರನಡೆದನು. ದೇಶದ ಉದ್ದಗಲಕ್ಕೂ ಸಂಚರಿಸುತ್ತಾ ಅನ್ನಕ್ಕಾಗಿ ಕರ ಚಾಚಿ ಬೇಡಿ ತಿನ್ನುವ ಬಿಕ್ಷುವಾಗಿದ್ದಾನೆ. ಈಗ ಖಾಲಿ ಅವನ ಕರಗಳು ಜೋಳಿಗೆ ಎಲ್ಲವೂ ಖಾಲಿಯಾಗಿದೆ. ಆದರೆ ಅವನ ಬಳಿ ಈಗ ಯಾವ ಸಂಪತ್ತು ಐಶ್ವರ್ಯವಿಲ್ಲ. ಅಂತಹ ತ್ಯಾಗದ ನಡೆ ಬುದ್ಧನ ಹೆಜ್ಜೆಗುರುತು ಎನ್ನುತ್ತಾರೆ.
“ನಾನು ಹೇಳಿದೆ ಎಂಬ ಒಂದೇ ಕಾರಣಕ್ಕೆ ನನ್ನ ಮಾತುಗಳನ್ನು ನಂಬಬೇಡಿ. ಒರೆಗೆ ಹಚ್ಚಿ ಚಿನ್ನವೋ ಅಲ್ಲವೋ ಎಂದು ಪರೀಕ್ಷಿಸಿ. ಒಪ್ಪುವಂತೆ ನಿಮ್ಮ ಮತಿಯ ಒರೆಗಲ್ಲಿಗೆ ಉಜ್ಜಿ ನೋಡಿ. ನಿಮಗೆ ಸತ್ಯ ಕಂಡುಬಂದರೆ ಅನುಸರಿಸಿ ಇಲ್ಲ ಎಂದಾದಲ್ಲಿ ನೀವು ನಿಮ್ಮ ಮಾರ್ಗದಲ್ಲಿ ಮುನ್ನಡೆಯಿರಿ” ಎಂದು ಬುದ್ಧ ತನ್ನ ಬಿಕ್ಕುಗಳಿಗೆ ಮಾರ್ಗದರ್ಶನ ಮಾಡಿದ್ದಾನೆ. ಇದೇ ಬುದ್ಧ ಪ್ರಭುವು ಜನತೆಯೆದೆಗೆ ಹರಿಸಿದ ಬೆಳಕು.
೬
“ಇಗೋ…, ನೋಡಿಲ್ಲಿ!
ಈಗಲೇ ಬಯಲಲ್ಲಿ
ಸುರಿದು ಖಾಲಿಯಾಗಿಸುವೆ
ಇಹದ ಆಸೆ, ಹಸಿವು ತುಂಬಿದ
ಈ ನನ್ನ ಮನವೆಂಬ ಜೋಳಿಗೆಯನ್ನ”
ಬುದ್ಧನಿಗೆ ಕವಿ ಹೇಳುತ್ತಾರೆ. ನೋಡು ಬುದ್ಧ ನಾನು ನಿನ್ನಂತೆ ನನ್ನೆಲ್ಲ ಈಗ ಸುಖ ಭೋಗಗಳನ್ನು, ಆಕಾಂಕ್ಷೆಗಳನ್ನು ಬಯಲಲಿ ಸುರಿದು ಖಾಲಿಯಾಗಿರುವೆ. ಅಂದರೆ ಮನಸ್ಸಿನಿಂದ ಅವುಗಳನ್ನು ಹೊರದೂಡುವೆ. ಜಗತ್ತಿನ ಆಡಂಬರಗಳನ್ನು ತೊರೆದು ಸರಳ ಜೀವನ ನಡೆಸುವೆ ಎನ್ನುತ್ತಾರೆ ಕವಿಗಳು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಮನ ಹಸಿರು ತುಂಬಿದ ಹೊಲದಂತೆ. ಇಲ್ಲಿ ಆಸೆಗಳೆಂಬ ಫಸಲು ಕಣ್ಣಿಗೆ ಕುಕ್ಕುವಂತೆ ಸೆಳೆಯುತ್ತದೆ. ಆದರೆ ನೀನು ಅವೆಲ್ಲವನ್ನು ಕಡೆಗಣಿಸಿ ಮನಸ್ಸನ್ನು ಹಗುರ ಮಾಡಿಕೊಳ್ಳುವೆ ಎನ್ನುತ್ತಾರೆ.
ಆದರೆ ಸ್ನೇಹಿತರೆ ವಾಸ್ತವದಲ್ಲಿ ಇದು ಹೇಳಿದಷ್ಟು ಸುಲಭವಲ್ಲ. ಅದನ್ನು ಪಾಲನೆ ಮಾಡುವುದು ಕಷ್ಟ ಸಾಧ್ಯ ಆದರೂ ಈ ಪ್ರಯತ್ನ ಮಾಡುವ ಆಶಾಭಾವನೆ ಎಲ್ಲಕ್ಕಿಂತ ದೊಡ್ಡದು.
೭
“ನಿಲ್ಲು ಬುದ್ಧ…!
ನಾನು ನಿನ್ನೊಂದಿಗೆ ಬರುವೆ
ಅನವರತ ಶುದ್ಧ”
– ಜಬೀವುಲ್ಲಾ ಎಮ್. ಅಸದ್
ಈಗ ಕವಿಯು ಲೋಕದ ಮೇಲಿನ ವ್ಯಾಮೋಹ ಗಳಿಂದ ಸಂಪೂರ್ಣವಾಗಿ ಮುಕ್ತನಾಗಿದ್ದಾರೆ. ತನ್ನನ್ನು ನಿಯಂತ್ರಿಸಿಕೊಳ್ಳುವ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಜ್ಞಾನದ ಜಾಡಿನಲ್ಲಿ ಸಾಗಲು ಸಿದ್ಧರಿದ್ದಾರೆ. ಜಗದ ಒಳಿತಿಗಾಗಿ ಜೀವನವನ್ನು ಮುಡುಪಾಗಿಡಲು ಅಣಿಯಾಗಿದ್ದಾರೆ. ಸಮಾಜದಲ್ಲಿ ಶಾಂತಿ, ಸಹನೆ, ಪ್ರೀತಿ, ವಾತ್ಸಲ್ಯ, ಕರುಣೆಗಳೆಂಬ ಮಾನವೀಯ ಗುಣಗಳನ್ನು ತನ್ನದಾಗಿಸಿಕೊಂಡು, ರಕ್ತಸಿಕ್ತ ಭಾವಗಳಿಂದ ಹೊರಬಂದು ಬುದ್ಧನಂತೆ ಹೋಗಲು ಬಯಸುತ್ತಿದ್ದಾರೆ. ತನ್ನೆಲ್ಲ ಅಶುದ್ಧತೆ ಗಳಿಗೂ ಮಂಗಳ ಹಾಡಿ ಹಾಲಿನಂತೆ ಪರಿಶುದ್ಧವಾಗಿ ಬುದ್ಧನೊಂದಿಗೆ ಹೊರಟು ನಿಂತಿದ್ದಾರೆ.
ಸ್ನೇಹಿತರೆ ಹುಲು ಮಾನವರಾಗಿ ನಾವು ಇಂತಹ ಸಿದ್ಧಿಯನ್ನು ಗಳಿಸಲು ಸಮರ್ಥರಾದರೆ ಭೂಮಿಯ ಮೇಲೆ ಬುದ್ಧನ ಪ್ರತಿರೂಪಗಳು ಮೂಡಿ ಮಾನವೀಯತೆ ಮೈದಳೆದು ನಿಲ್ಲುತ್ತದೆ. ಒಮ್ಮೆ ಯೋಚಿಸಿ ಇದು ಸಾಧ್ಯವೇ ಇಲ್ಲವೆಂದು ಅಲ್ಲಗಳೆಯಲಾಗದು. ಆತ್ಮಸ್ಥೈರ್ಯಕ್ಕಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ.ಧೃಡ ಸಂಕಲ್ಪ ಮಾಡಿ ಅವನಂತೆ ಆಗದಿದ್ದರೂ ಅವನ ಕೋಟ್ಯಾನುಕೋಟಿ ಅಣುವಿನ ಒಂದಂಶವಾದರು ಪ್ರಯತ್ನಿಸೋಣ ಎಂಬುದು ನನ್ನ ಆಶಯ.
ಕವಿತೆಯಲ್ಲಿ ನಾ ಕಂಡ ಕವಿ ಭಾವ
ಇಲ್ಲಿ ಕವಿಯು ಮಾನವನ ಸಹಜ ಗುಣಗಳನ್ನು ಬುದ್ಧನಿಗೆ ಹೋಲಿಸುತ್ತಾ ವಿಡಂಬನಾತ್ಮಕ ರೂಪದಲ್ಲಿ ಈ ಕವಿತೆಗೆ ಜೀವ ತುಂಬಿದ್ದಾರೆ. ಬುದ್ಧನ ನಡೆನುಡಿಗಳೆ ಕವಿತೆಯ ಜೀವಾಳವಾಗಿವೆ. ಇಲ್ಲಿ ವಸ್ತುನಿಷ್ಠೆಗಿಂತ ವ್ಯಕ್ತಿತ್ವದ ಅನಾವರಣಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ರೂಪಕಗಳ ಪ್ರಯೋಗದಲ್ಲಿ ಸಿದ್ಧಹಸ್ತರಾಗಿರುವ ಕವಿ ಅವುಗಳ ಜೊತೆಗೆ ವಾಸ್ತವಿಕತೆಯನ್ನು, ಸಹಜ ಸರಳವಾದ ಸಾಲುಗಳಲ್ಲಿ ಸಶಕ್ತವಾಗಿ ಬಂಧಿಸಿದ್ದಾರೆ. ಇವು ಗಮನ ಸೆಳೆಯುವ ಜೊತೆಗೆ ಚಿಂತನೆಗೆ ಹಚ್ಚಿ ಎಲ್ಲರಿಗೂ ಆಪ್ತವಾಗುತ್ತವೆ. ಶಾಂತಿ ಎಂಬ ವಿಶಾಲ ವೃಕ್ಷದ ಕೆಳಗೆ ನಡೆದಾಡಲೂ ಕವಿ ಬಯಸುತ್ತಾರೆ. ನಾವು ಬುದ್ಧನ ನಡೆಯನ್ನು ಅಪ್ಪಿಕೊಳ್ಳಬೇಕು, ಒಪ್ಪಿಕೊಳ್ಳಬೇಕೆಂಬುದು ಕವಿಯ ಮಹದಾಶಯವಾಗಿದೆ.
ಬುದ್ಧನ ಬದುಕು ಜೀವನದ ಸಾರವಾಗಿದೆ. ಅವುಗಳನ್ನು ತಿಳಿದು, ಅನುಸರಿಸಿ ನಾವು ನಮ್ಮ ಬಾಳನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಕರೆ ಕೊಡುತ್ತಾರೆ. ಇಲ್ಲಿ ಕವಿಯು ಮನಕೆ ನೀಡುವ ಆನಂದ, ಶಾಂತಿ, ಅನುಭೂತಿ ಅವರ್ಣನೀಯ. ವೈಯಕ್ತಿಕ ಹಾಗೂ ಸಾಮಾಜಿಕವಾಗಿ ಅಗಾಧತೆಯನ್ನು ಹೊಂದಿರುವ ಸೂಕ್ಷ್ಮದೃಷ್ಟಿಯ ಸಾಲುಗಳು ಕಾವ್ಯಾತ್ಮಕ ಪರಿಭಾಷೆಯಲ್ಲಿ ಸೊಗಸಾಗಿ ಮೂಡಿಬಂದಿವೆ. ಇಲ್ಲಿ ಭಾವನೆಗಳು ಚಿಂತನಾ ರೂಪದಲ್ಲಿ, ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ, ತಾತ್ವಿಕ ನೆಲೆಯಲ್ಲಿ ಅಭಿವ್ಯಕ್ತಗೊಂಡಿವೆ. ಜೀವನದ ಸತ್ಯದರ್ಶನವನ್ನು ಈ ಕವಿತೆ ಹೊತ್ತು ತಂದಿದೆ.
ಮನುಷ್ಯ ತನ್ನೆಲ್ಲಾ ಜಿಜ್ಞಾಸೆಗಳಿಂದ ಹೊರಬಂದು ಸತ್ಯ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಶಾಂತಿಯ ಪಥದಲ್ಲಿ ಚಲಿಸಿರೆಂಬ ಆಶಾವಾದವನ್ನು ಹೊತ್ತು ತಂದ ಕವಿಗೆ ಶುಭವಾಗಲಿ.
ಅನುಸೂಯ ಯತೀಶ್ ಅವರು ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಕಥೆ ಕವನ ಗಜಲ್ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರೆಯುವ ಇವರ ಮೆಚ್ಚಿನ ಆದ್ಯತೆ ವಿಮರ್ಶೆಯಾಗಿದೆ. ಈಗಾಗಲೆ ಅನುಸೂಯ ಯತೀಶ್ ಅವರು ‘ಕೃತಿ ಮಂಥನ’, ‘ನುಡಿಸಖ್ಯ’, ‘ಕಾವ್ಯ ದರ್ಪಣ’ ಎಂಬ ಮೂರು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಗೌತಮ ಬುದ್ಧನ ಕುರಿತ ಜಬಿವುಲ್ಲಾ ಅವರ ಪದ್ಯದ ಎಲ್ಲ ಮಗ್ಗುಲುಗಳನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಲೇ ಬುದ್ಧನ ಚಿಂತನೆಗಳ ಸಮಗ್ರ ಸ್ವರೂಪವನ್ನು ಬಿಚ್ಚಿಟ್ಟಿದ್ದಾರೆ. ಇದನ್ನ ವಿಮರ್ಶೆ ಎನ್ನುವುದಕ್ಕಿಂತ ಪದ್ಯದ ಪದಶಃ ತಾತ್ಪರ್ಯ ಎಂದರೆ ತಪ್ಪಿಲ್ಲ. ಬುದ್ಧನ ಚಿಂತನೆಗಳ ಬಗೆಗಿನ ಅನಸೂಯಾ ಅವರ ಪ್ರಭುದ್ಧತೆ, ವರ್ತಮಾನದ ಬದುಕಿಗೆ ಅವುಗಳ ಅನ್ವಯ ಅನುಕರಣೆಯ ಅಗತ್ಯತೆಯ ಕಳಕಳಿ ಬದ್ಧನ ಚಿಂತನೆಗಳ ಬುಮುಖ್ಯ ಲಕ್ಷಣವಾದ ಸರಳತೆಯ ಸಾಕಾರ ರೂಪದಲ್ಲಿ ಪ್ರಸ್ತಾಪಗೊಂಡಿದೆ.
ಬುದ್ಧನ ಹಿಂದೆ ಹೋಗುವುದೆಂದರೆ ಮೈಗಂಟಿದ ಮೌಢ್ಯದ ಕೊಳೆತೊಳೆದುಕೊಂಡು ಶದ್ಧನಾಗಹೋದಂತೆ. ವಿಜ್ಞಾನದ ಬೆಳಕಲ್ಲಿ ಆಧ್ಯಾತ್ಮದ ಆಶಯಗಳಿಗೆ ಹೊಳಪು ಕೊಟ್ಟಂತೆ. ನಮ್ಮ ನಮ್ಮಗಳ ನೆಲೆಯಲ್ಲಿಯೇ ದುಃಖವನ್ನು ದೂರಮಾಡಿಕೊಳ್ಳುವ ಜಾಗ್ರುತಕ್ಕೆ ಹೊರಳಿದಂತೆ. ಇದನ್ನ ಪದ್ಯದ ಜಾಡು ಹಿಡಿದು ಮನದ ಕನ್ನಡಿಗೆ ತೋರಿದ್ದಾರೆ.
ಅಸಾದ್ ಮತ್ತು ಅನಸೂಯ ಇಬ್ಬರಿಗೂ ಅಭಿನಂದನೆಗಳು.
– ಡಾ.ಜಿಎನ್ನೆಂ