ಆಷಾಢದ ಬಿರುಗಾಳಿಯಂತೆ ತೂರಿ ಬಂದವು ನೆನಪುಗಳು
ಹಳೆಯದನು ಮತ್ತೆ ಕೆದಕಿ ಇರಿದು ಕೊಂದವು ನೆನಪುಗಳು

ನೆಮ್ಮದಿಯ ನಿದಿರೆಗೂ ಬಿಡದೆ ಹಿಂಡಿದವು ಕರುಳನು
ಸುಮ್ಮನೆ ಕೂತರೂ ಬೇಗುದಿ ಮಳೆ ತಂದವು ನೆನಪುಗಳು

ನನಗೀಗ ಬೇಕಿರುವುದು ಏಕಾಂತ ಎಂದಷ್ಟೇ ಹೇಳಿದೆ
ಆದರೂ ಹಗಲು ರಾತ್ರಿ ನನ್ನೊಳಗೆ ಬೆಂದವು ನೆನಪುಗಳು

ಕಾಲಚಕ್ರದಲಿ ಎಲ್ಲ ಮರೆಯಬಹುದು ಎಂದರು ಯಾರೋ
ಹಳೆ ಆಲದಮರದಂತೆ ಎದೆಯಾಳ ನಿಂದವು ನೆನಪುಗಳು

ಸಾಕಾಗಿದೆ ಸಾಕಿ ಮತ್ತೆ ಮತ್ತೆ ಈ ಯಾತನೆಗಳ ಸಹವಾಸ
‘ಗಿರಿ’ ನೀ ತೊರೆದರೂ ನಾವು ಬಿಡೆ ಅಂದವು ನೆನಪುಗಳು